ಕನ್ನಡ ನಾಡಿನ ಜನಪದ ಸಂಗೀತ ಕ್ಷೇತ್ರಕ್ಕೆ ಕೀರ್ತಿಯನ್ನು ತಂದುಕೊಟ್ಟವರಲ್ಲಿ ಬಾಳಪ್ಪ ಹುಕ್ಕೇರಿಯವರು ಒಬ್ಬರು. ಇವರು ಕರ್ನಾಟಕವಷ್ಟೇ ಅಲ್ಲ, ಭಾರತ ದೇಶ ಕಂಡ ಅಗ್ರಗಣ್ಯ ವ್ಯಕ್ತಿಗಳಲ್ಲಿ ಒಬ್ಬರು. ಅವರು ಕೇವಲ ಜನಪದ ಸಂಗೀತಗಾರರಷ್ಟೇ ಅಲ್ಲ, ಒಳ್ಳೆಯ ಭಾಷಣಕಾರರು, ಆಶುಕವಿಗಳು ಮತ್ತು ಅಪ್ಪಟ ದೇಶಭಕ್ತರಾಗಿದ್ದರು.

ಬಾಲ್ಯದಿಂದಲೂ ಸಂಗೀತದಲ್ಲಿ ಅಪಾರವಾದ ಆಸಕ್ತಿಯನ್ನು ಹೊಂದಿದ ಬಾಳಪ್ಪನವರು ಇದ್ದೂರಾದ ಮುರಗೋಡಿನಲ್ಲಿ ಶಿವಲಿಂಗಯ್ಯನವರ ಹತ್ತಿರ ಹತ್ತು ವರ್ಷಗಳ ಕಾಲ ಸಂಗೀತ ಶಿಕ್ಷಣವನ್ನು ಪಡೆದರು. ನಂತರ ಮರಾಠಿ ರಂಗಭೂಮಿಯ ಹೆಸರಾಂತ ಬಾಲಗಂಧರ್ವ ಪಂಡಿತ ದೀನನಾಥ ಮೊದಲಾದವರ ಜನಪ್ರಿಯ ರಂಗ ಶೈಲಿಯಿಂದ ಪ್ರಭಾವಿತರಾದರು. ಕೆಲಕಾಲ ಮುರಗೋಡದಲ್ಲಿ ಮಹಾತ್ಮಾ ಸೇವಾ ಸಂಗೀತ ನಾಟಕ ಕಂಪನಿಯನ್ನು ಸ್ಥಾಪಿಸಿ ನಡೆಸಿದರು. ಈ ಎಲ್ಲ ಪ್ರಭಾವಗಳಿಂದ ಅವರ ಜನಪದ ಸಂಗೀತದ ಜ್ಞಾನ ಮತ್ತು ಗಾಯನ ಶೈಲಿ ವೈಶಷ್ಟ್ಯಪೂರ್ಣವಾಗಿ ಬೆಳೆದವು.

ಶಿವಲಿಂಗಯ್ಯನವರ ತಾಲೀಮಿನಲ್ಲಿ ಅಭ್ಯಾಸ ಮಾಡಿದ ಬಾಳಪ್ಪನವರಿಗೆ ಹಾಡಿನ ಜಾಡು ಸಿಕ್ಕಿತು. ರಾಗಗಳ ಮೇಲೆ ಹಿಡಿತ ಬಂದಿತು; ಹಾಗೂ ವಿವಿಧ ವಾದ್ಯಗಳ ಪರಿಚಯವಾಯಿತು. ಆದರೆ ಸಂಗೀತದ ಔನ್ಯತ್ಯ ದೊರೆಯಲಿಲ್ಲ. ಶಾಸ್ತ್ರೀಯ ಸಂಗೀತವನ್ನು ಕಲಿಯಬೇಕೆಂದರೂ ಕೌಟುಂಬಿಕ ಸಮಸ್ಯೆಗಳಿಂದಾಗಿ ಅದು ಸಾಧ್ಯವಾಗಲಿಲ್ಲ. ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರ ಪಂಡಿತ ಮಲ್ಲಿಕಾರ್ಜುನ ಮನ್ಸೂರರ ಹಾಗೆ ತಾವೂ ಶಾಸ್ತ್ರೀಯ ಸಂಗೀತಗಾರರಾಗಿ ಬೆಳೆಯಬಹುದಾಗಿತ್ತಲ್ಲ ಎಂಬ ಕೊರಗಿದ್ದರೂ, ಬಾಳಪ್ಪನವರು ಧಾರವಾಡದ ಮುರುಘಾಮಠದ ಮೃತ್ಯುಂಜಯಪ್ಪರವರ ಸಲಹೆಯ ಮೇರೆಗೆ ಜನಪದ ಸಂಗೀತದಲ್ಲಿ ಮುಂದುವರೆದರು.

ಸಂಗೀತದ ಪ್ರಾಥಮಿಕ ಜ್ಞಾನವನ್ನು ಪಡೆದ ಬಾಳಪ್ಪನವರು ಕಾರ್ಯಕ್ರಮ ಕೊಡಲಾರಂಭಿಸಿದರು. ಕರದಲ್ಲೆಲ್ಲ ಹೋಗುವ ಗಾಯಕ ಅವರಾಗಿದ್ದರಿಂದ, ಅವರಿಗೆ ಹಲವಾರು ಕಡೆಗಳಿಂದ ಕಾರ್ಯಕ್ರಮಗಳಿಗೆ ಆಹ್ವಾನ ಬರತೊಡಗಿದವು. ಆಹ್ವಾನ ಬಂದಲ್ಲೆಲ್ಲ ಹೋಗಿ ಖುಷಿಯಿಂದ ಹಾಡಿ ಪ್ರೇಕ್ಷಕರಿಗೆ ರಸದೌತಣ ನೀಡತೊಡಗಿದರು. ಪ್ರಾರಂಭದಲ್ಲಿ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಷ್ಟೆ ಕಾರ್ಯಕ್ರಮ ನೀಡಿದರೂ ನಂತರ ಇಡೀ ಉತ್ತರ ಕರ್ನಾಟಕವೇ ಅವರ ಸಂಗೀತದ ಕಾರ್ಯಕ್ಷೇತ್ರ ವಾಯಿತು. ಒಮ್ಮೆ ಅಥಣಿಯ ಶ್ರೀ ಮುರುಘೇಂದ್ರ ಶಿವಯೋಗಿಗಳ ಮಠದಲ್ಲಿ ಕಾರ್ಯಕ್ರಮವನ್ನು ನೀಡಿದಾಗ ಅವರ ಹಾಡನ್ನು ಕೇಳಿ ಆನಂದಪಟ್ಟ ಜನರು ಅವರನ್ನು ಹೊಗಳತೊಡಗಿದರು. ಅದರಿಂದ ಬಾಳಪ್ಪನವರ ಗಾಯನದ ಮಹತ್ವ ಹಾಗೂ ಅವಶ್ಯಕತೆಯನ್ನರಿತ ಅಂದಿನ ಆ ಭಾಗದ ಕೃಷಿ ಇಲಾಖೆಯ ಅಧಿಕಾರಿಗಳಾದ ವಿ. ಸಿ.ಪಾವಟೆಯವರು ಬಾಳಪ್ಪನವರಿಗೆ ಕೃಷಿ ಇಲಾಖೆಯಲ್ಲಿ ಪ್ರಚಾರಕ ಎಂಬ ಹುದ್ದೆಯನ್ನು ನೀಡಿದರು. ಅಲ್ಲಿಂದ ಬಾಳಪ್ಪನವರಿಗೆ ಕೃಷಿ ವಿಷಯಗಳನ್ನು ಪ್ರಚಾರ ಮಾಡುವುದು ಕೆಲಸವಾಯಿತು.

ಬಾಳಪ್ಪನವರದು ಕಂಚಿನ ಕಂಠ. ಅವರು ಹಾಡಲು ಬರುತ್ತಾರೆಂದರೆ ಸಾವಿರಾರು ಜನರ ನೂಕುನುಗ್ಗಲುವೆ ಸರಿ. ಅವರು ಹಾಡಲು ಆರಂಭಿಸಿದರೆಂದರೆ ಅವರ ಹಾಡಿನ ಜನರು ತಾಳ ಹಾಕಲು ಪ್ರಾರಂಭಿಸುತ್ತಿದ್ದರು. ಪ್ರೇಕ್ಷಕರು ಅವರ ಗಾಯನವನ್ನು ಅನುಭವಿಸುವುದರಲ್ಲಿ ತನ್ಮಯರಾಗುತ್ತಿದ್ದರು, ಪ್ರೇಕ್ಷಕರು ಅವರ ಜನಪ್ರಿಯ ಹಾಡುಗಳಿಗೆ ಉತ್ಸಾಹದಿಂದ ‘ಭೇಷ್’, ‘ಶಹಭಾಷ್’, ‘ವಾರೆವ್ವಾ’, ಹಾಗೂ ‘ಬಲಿಭಪ್ಪರೆ’ ಎಂದು ಉದ್ಗಾರ ತೆಗೆಯುತ್ತಿದ್ದರು. ಇನ್ನೂ ಅನೇಕ ಸಲ ‘ಒನ್ಸಮೋರ್’, ಎನ್ನುವ ಬೇಡಿಕೆಗಳು ಬರುತ್ತಿದ್ದವು. ಬಾಳಪ್ಪನವರು ತಮ್ಮ ಶ್ರೀಮಂತ ಧ್ವನಿಯಿಂದ ಜನರನ್ನು ರಂಜಿಸುವ ಓರ್ವ ಅಪರೂಪದ ಜನಪದ ಗಾಯಕರಾಗಿದ್ದರು. ಅವರ ಹಾಡಿನಿಂದ ಜನರ ಮನಸ್ಸು ಅರಳುತ್ತಿತ್ತು. ಬಾಳಪ್ಪನವರ ಗಾಯನ ಅವರ ಉಸಿರಾಟದಂತೆ ಸಹಜ, ಸಲೀಸು ಮತ್ತು ಧಾರಾಕಾರವಾಗಿತ್ತು. ಯಾರಾದರೂ ‘ಇನ್ನೊಂದು ಹಾಡ್ರಿ ಬಾಳಪ್ಪಣ್ಣನವರೆ’ ಎಂದರೆ ಸಾಕು ಅವರ ಹಾಡು ಪ್ರಾರಂಭವೆ. ಅವರ ಸಂಗೀತ ರಸಗಂಗೆಯಂತಿತ್ತು. ಅದು ಮುರಗೋಡಿನ ಮಾವಿನ ಹಣ್ಣಿನಂತೆ ಬರಿ ಸಿಹಿಯಾಗಿತ್ತು. ಎಂದೂ ಹುಳಿಯಾಗಿರಲಿಲ್ಲ. ಕಪ್ಪು ಕೋಟಿನ ಬಿಳಿಯ ರುಮಾಲಿನ ಅಥವಾ ಟೋಪಿಯ ಘನಾಕೃತಿಯ ಬಾಳಪ್ಪನವರು ತಮ್ಮ ಹಾಡಿನ ಮೋಡಿಯಿಂದ ಕೇಳುಗರನ್ನು ದಂಗುಬಡಿಸುತ್ತಿದ್ದರು. ಅವರು ಎಂಥ ಸಭೆ-ಸಮಾರಂಭಗಳೆ ನಡೆಯಲಿ, ಯಾವ ಪ್ರಕಾರದ ಜನರೇ ಸೇರಲಿ ಎಲ್ಲರನ್ನೂ ತಮ್ಮ ಹಾಡುಗಳಿಂದ ರಂಜಿಸುವ ಗಾಯಕರಾಗಿದ್ದರು. ಬಾಳಪ್ಪನವರು ಸಭೆಗೆ ತಡಮಾಡಿ ಬರುತ್ತಿರಲಿಲ್ಲ. ಜನರಿಗೆ ನೋವಾಗುವಂತೆ ನಡೆದುಕೊಳ್ಳುತ್ತಿರಲಿಲ್ಲ; ಹಾಗೂ ಹಣಕ್ಕಾಗಿ ಕಿರಿಕಿರಿ ಮಾಡಿದವರಲ್ಲ. ಹೀಗಾಗಿ ಅವರು ಸಭೆಯನ್ನಲಂಕರಿಸಿದರೆ ಅವರು ಓರ್ವ ಸಭಾಭೂಷಣರಂತಿರುತ್ತಿದ್ದರು ಎನ್ನುತ್ತಾರೆ ಎಸ್. ಎಂ. ಹರದಗಟ್ಟಿಯವರು.

ಬಾಳಪ್ಪನವರು ಮಲ್ಲಿಕಾರ್ಜುನ ಮನ್ಸೂರರಂತೆ ಶಾಸ್ತ್ರೀಯ ಸಂಗೀತಗಾರರಲ್ಲದಿದ್ದರೂ ಜನಪದ ಸಂಗೀತ ಲೋಕದ ಅಪ್ರತಿಮ ಕಲಾವಿದರಾಗಿದ್ದರು. ಆದ್ದರಿಂದ ಅವರನ್ನು ‘ಉಳವೀಶ’ ಹುಲೆಪ್ಪನವರಮಠರು ‘ಜಾನಪದ ಜಾದೂಗಾರ’, ಶಂ.ಗು. ಬಿರಾದಾರರು ‘ಜಾನಪದ ಗಾರುಡಿಗ’ ಮತ್ತು ಅನ್ನದಾನ ಹಿರೇಮಠರು ‘ಜಾನಪದ ಸಂಗೀತರತ್ನ’ ಎನ್ನುತ್ತಾರೆ. ಸ್ವತಃಆಶುಕವಿಗಳಾದ ಬಾಳಪ್ಪನವರು ತಮ್ಮ ಹಾಡಿನ ಧ್ವನಿತರಂಗಗಳಲ್ಲಿ ಶಬ್ದಗಳಲ್ಲಿ ನಲಿದಾಡಿಸಬಲ್ಲ ಹಿರಿಮೆಯನ್ನು ಗಳಿಸಿದ ಜನಪದಾಚಾರ್ಯರಾಗಿದ್ದರು. ಆದ್ದರಿಂದ ಕೆ. ಆರ್. ಲಿಂಗಪ್ಪನವರು ಬಾಳಪ್ಪನವರನ್ನು “ನಾದಯೋಗಿ” ಎಂದು ಕರೆದಿದ್ದಾರೆ. ಸಂಗೀತದ ಗಂಧ ಅಥವ ಹಿನ್ನಲೆ ಇಲ್ಲದ ಗ್ರಾಮೀಣ ಕುಟುಂಬವೊಂದರಲ್ಲಿ ಜನಿಸಿದರೂ ಬಾಳಪ್ಪನವರು ಜನಪದ ಸಂಗೀತದ ಬಗ್ಗೆ ಅಪಾರವಾದ ಜ್ಞಾನ, ಶ್ರದ್ಧೆ, ಗೌರವ ಮತ್ತು ಆಸಕ್ತಿಯನ್ನು ಬೆಳೆಸಿಕೊಂಡಿದ್ದರು. ಆದ್ದರಿಂದ ಅವರನ್ನು ‘ಜಾನಪದ ಹೆಬ್ಬೊತ್ತಿಗೆ’ ಎಂದು ಎಸ್. ಎಂ. ಹರದಗಟ್ಟಿಯವರು ಕರೆದರೆ, ಅನೇಕರು ‘ಜಾನಪದ ವಿಶ್ವಲೋಕ’ ಎಂದಿದ್ದಾರೆ. ಬಾಳಪ್ಪನವರು ಹಳ್ಳಿಯಲ್ಲಿ ಜನಿಸಿದ್ದರಿಂದ ಹಳ್ಳಿಗರ (ಜನಪದರ) ಜೀವನವನ್ನು ಬಹು ಹತ್ತಿರದಿಂದ ಬಲ್ಲವರಾಗಿದ್ದರು. ಆದ್ದರಿಂದಲೇ ಅವರೊಬ್ಬ ಶುದ್ದ ಹಳ್ಳಿಗರಂತೆ ಕಾಣಿಸುತ್ತಿದ್ದರು. ಈ ದಿಸೆಯಲ್ಲಿ ಸ. ಸ. ಮಾಳವಾಡರು ಬಾಳಪ್ಪನವರು “ಗ್ರಾಮೀಣ ಸಂಪ್ರದಾಯದ ಪ್ರತೀಕವೆಂದು ಕರೆದಿದ್ದು ಅರ್ಥಪೂರ್ಣವೇ ಸರಿ. ಬಾಳಪ್ಪನವರ ಗಾಯನವೆಂದರೆ, ಅದು ಮನರಂಜನೆಯೆ ಸರಿ. ಅದು ಶುದ್ಧ ಜನಪದ ಸಂಗೀತವಾಗಿತ್ತು. ಅದರಲ್ಲಿ ಜನಪದದ ಇತರ ವಿಷಯಗಳಾದ ಗಾದೆ, ಒಡಪು, ದೃಷ್ಟಾಂತ ಮತ್ತು ಲಘು-ಹಾಸ್ಯದಂತಿರುವ ಜೋಕುಗಳ ಮಾತುಗಳು ಸಹಜವಾಗಿ ಎದ್ದು ಕಾಣಿಸುತ್ತಿದ್ದವು. ಅವರ ಗಾಯನ ಕೆಲವೊಮ್ಮೆ ಮಾತಾಗುತ್ತಿತ್ತು. ಮಾತೆ ಕೆಲವೊಮ್ಮೆ ಗಾಯನವೇನೊ ಎಂಬಂತೆ ಭಾಸವಾಗುತ್ತಿತ್ತು. ಆದರೆ ಹಾಡೆ ಇರಲಿ, ಮಾತೆ ನಡುನಡುವೆ ಬರಲಿ, ಬಾಳಪ್ಪನವರನ್ನು ಕೇಳುಗರನ್ನುಮಂತ್ರ-ಮುಗ್ಧರನ್ನಾಗಿಸುವ ಪರಿ ರೋಚಕವಾಗಿತ್ತು. ಅದರಿಂದಾಗಿಯೆ ಬಾಳಪ್ಪನವರನ್ನು ‘ಮಾತಿನ ಮೋಡಿಗಾರ’ ಎಂದು ಕರೆದಿದ್ದಾರೆ. ಶಂಗು ಬಿರಾದರ ಅವರ ಪ್ರಕಾರ:

“ಇವರ ಹಾಡಿನಂತೆಯೆ ಮಾತುಗಳು ಸಕ್ಕರೆಯ ಸಕ್ಕರೆ ಇವರ ಹಾಡಿನ ಮೋಡಿಗೆ ತಲೆತೂಗುವಂಥ ಮಾತಿನ ರೀತಿಗೆ ಮರುಳಾಗದವರಿಲ್ಲ.”

‘ಉಳುವೀಶ’ ಹುಲಿಪ್ಪನವರಮಠರು ಕೆಳಗಿನಂತೆ ಹೇಳಿದ್ದಾರೆ:

“ಜನಪದ ಸಾಹಿತ್ಯದ ಬಗೆಗೆ ಉಪನ್ಯಾಸ ನೀಡುವವರಿದ್ದಾರೆ, ಹಾಡುವವರಿದ್ದಾರೆ, ಇನ್ನೂ ಏನೇನೊ ಮಾಡುವವರಿದ್ದಾರೆ. ಆದರೆ ಬಾಳಪ್ಪನವರೊಬ್ಬರೆ ಇದನ್ನೆಲ್ಲಾ ಮಾಡುತ್ತಾರೆ. ಹಾಡಿ ಮಾತಾಡುತ್ತಾರೆ. ಹಾಡಿ ಮಾತಾಡಿ, ಮಾತಾಡಿ ಹಾಡಿ, ಜನಪದ ಸಾಹಿತ್ಯದ ಸಂಪೂರ್ಣ ಚಿತ್ರಣ ಕೊಡುವ ಮೇಧಾವಿಯಾಗಿದ್ದಾರೆ. ಒಂದು ಮಾತಿನಲ್ಲಿ ಹೇಳಬಹುದಾದರೆ ಜನಪದ ಸಾಹಿತ್ಯದ ಕೋಶವೆ ಅವರು. ಬಾಳಪ್ಪನವರಿಗೆ ಜನಪದ ಸಾಹಿತ್ಯ ಪ್ರಸಾರವೆ ಒಂದು ತಪಸ್ಸಾಗಿದೆ. ಕೂತಲ್ಲಿ, ನಿಂತಲ್ಲಿ, ಉಣುವಲ್ಲಿ, ಕೂಡುವಲ್ಲಿ, ತೊಡುವಲ್ಲಿ, ಕೊಡುವಲ್ಲಿ, ಎಲ್ಲೆಂದರಲ್ಲಿ ಬಾಳಪ್ಪನವರ ಮಾತು ಸಾಗಿರುತ್ತದೆ.”

ಒಂದರ್ಥದಲ್ಲಿಬಾಳಪ್ಪನವರ ಜೀವನವೆ ಜನಪದ ಸಂಗೀತವಾಗಿತ್ತು. ಅವರು ಜನಪದ ಗೀತೆಗಳಾದ ಹಂತಿ, ಲಾವಣಿ, ಕೆಲಸದ ಪದಗಳು, ಗರತಿಯ ಹಾಡು, ಕಥನ ಕಾವ್ಯ, ದಾಸರ ಪದ, ಸರ್ವಜ್ಞನ, ಶರಣರ ಹಾಗೂ ಶಿವಯೋಗಿಗಳ ವಚನಗಳ, ಅನುಭವ ಪದಗಳಲ್ಲದೆ, ಆಧುನಿಕ ಕವಿಗಳಾದ ಕುವೆಂಪು, ಅಂಬಿಕಾತನಯ ದತ್ತ, ಆನಂದಕಂದ ಮುಂತಾದವರ ಭಾವಗೀತೆ ಮತ್ತು ಭಕ್ತಿಗೀತೆಗಳನ್ನು ಜನಪದ ಶೈಲಿಯಲ್ಲಿ ಹಾಡುತ್ತಿದ್ದುದು ವೈಶಿಷ್ಟ್ಯಪೂರ್ಣವಾಗಿತ್ತು. ಅಷ್ಟೇ ಅಲ್ಲದೆ ಹಿಂದಿ, ಉರ್ದು ಹಾಗೂ ಮರಾಠಿ ಭಾಷೆಯ ಭಜನೆ, ದೋಹಾ, ಅಬಂಗ ಮತ್ತು ರಂಗಗೀತೆಗಳನ್ನು ಆಕರ್ಷಕವಾಗಿ ಹಾಡುತ್ತಿದ್ದರು. ಅವರು ಹಾಡುತ್ತಿದ್ದ ಹಾಡುಗಳಲ್ಲಿ ‘ಇನ್ನು ಯಾಕ ಬರಲಿಲ್ಲವ್ವಾ’ ‘ಹಿಂದೂಸ್ಥಾನಕ ಎಂಥವಬೇಕು’ ‘ಮೊದಲು ಮಾನವನಾಗು’ ‘ವಿಶ್ವ ಚೇತನ’, ಬಾರಿಸು ಕನ್ನಡ ಡಿಂಡಿಮವಾ’ ‘ನಾ ಸಂತಿಗಿ ಹೋಗಿದ್ನಿ ಆಕಿ ತಂದಿದ್ದಳೋ ಬೆಣ್ಣೆ’ ಮತ್ತು ‘ಜ್ಯೋತಿ ಬೆಳಗುತಿದೆ’ ಪ್ರಮುಖವಾ ಗಿವೆ. ಅವರು ಕುವೆಂಪು, ಅಂಬಿಕಾತನಯದತ್ತ, ಆನಂದಕಂದ-ಹೀಗೆ ಯಾವುದೇ ಕವಿಗಳ ಹಾಡಿರಲಿ ಅವರು ಹಾಡುಗಳನ್ನು ಹಾಡುವಾಗ ಪ್ರೇಕ್ಷಕರ ಮನಸ್ಸಿನಲ್ಲಿ ತಃಕವಿಗಳೇ ಹಾಡುತ್ತಿದ್ದಾರೇನೊ ಎಂಬಂತೆ ಭಾಸವಾಗುತ್ತಿತ್ತು. ಆದರೆ ಗಾಯಕ ಬಾಳಪ್ಪನವರ ವಿಶಿಷ್ಟ ಶೈಲಿಯ ಛಾಯೆ ಆ ಹಾಡುಗಳಲ್ಲಿ ಇರುತ್ತಿತ್ತು. ಬಾಳಪ್ಪನವರು ಬೇಂದ್ರೆಯವರ “ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಂವಾ ವಾರದಾಗ ಮೂರು ಸರತಿ ಬಂದು ಹೋಗಾಂವ” ಗೀತೆ ಹಾಡಲು ತೊಡಗಿದರೆಂದರೆ, ಅದೆ ಬೇಂದ್ರೆಯವರು ಹಾಡಲು ನಿಂತಿದ್ದಾರೇನೋ ಎಂಬ ಭಾವನೆ ಕೇಳುಗರಲ್ಲಿ ಮೂಡುತ್ತಿತ್ತು.

ಬಾಳಪ್ಪನವರು ಕೇವಲ ಗಾಯಕರಷ್ಟೇ ಆಗಿರಲಿಲ್ಲ, ಅವರು ಸ್ವತಃ: ಕವಿಗಳಾಗಿದ್ದರು. ಅವರು ಹಾಡುಗಳನ್ನು ಸಂದರ್ಭಕ್ಕನುಗುಣವಾಗಿ ರಚಿಸಿ ಸಭೆ-ಸಮಾರಂಭಗಳಲ್ಲಿ ಹಾಡಿ ಜನಮನವನ್ನು ತಣಿಸುತ್ತಿದ್ದರು. ಅವರ ಹಾಡುಗಳು ಕೇವಲ ಮನರಂಜನೆಯ ಹಾಡುಗಳಾಗಿರಲಿಲ್ಲ. ಅವು ಸಮಾಕಾಲೀನ ಬದುಕಿನ ಸಮಸ್ಯೆಗಳಿಗೆ ಕನ್ನಡಿಯನ್ನು ಹಿಡಿದಂತೆ ಇರುತ್ತಿದ್ದವು. ಬಾಳಪ್ಪನವರ ಹಾಡುಗಳು ಮುಖ್ಯವಾಗಿ ಕುಟುಂಬ ಯೋಜನೆ, ಕೃಷಿ, ಶಿಕ್ಷಣ, ಕಲೆ ಮತ್ತು ದೇಶಸೇವೆ ಇತ್ಯಾದಿ ವಿಷಯಗಳ ಮೇಲೆ ಬೆಳಕನ್ನು ಚೆಲ್ಲುತ್ತವೆ. ಅವು ನೀತಿಪಾಠ ಅಥವಾ ಉಪದೇಶಗಳಂತಿದ್ದು ಬಾಳಪ್ಪನವರ ಜೀವನ, ಸಂಗೀತ ಸಾಧನೆ ಮತ್ತು ಸಂದೇಶವನ್ನು ಪ್ರತಿಬಿಂಬಿಸುತ್ತವೆ. ಅವರ ಸ್ವರಚಿತ ಕವನಗಳಲ್ಲಿ ‘ಕಾಂಪೋಸ್ಟ್ ಗೊಬ್ಬರ’ ‘ಹಿಂಗಾರಿ ಪೈರ ನೋಡ’, ರಾಸಾಯನಿಕ ಗೊಬ್ಬರ’, ‘ಅಡುಗೆ ವಿಧಾನ’, ‘ಕಂಬಳಿ’, ‘ಕಲಾಸಾಗರ’, ಆಧುನಿಕತೆ’ ಜನಪ್ರಿಯವಾಗಿದ್ದವು. ಆ ಹಾಡುಗಳನ್ನು ನಾವು ಅವರ ದಿನಚರಿಗಳಲ್ಲಿ ಕಾಣಬಹದಾಗಿದೆಯಲ್ಲದೆ, ಅವರು ತಮ್ಮ ಬಾಳ ದಿನಗಳಲ್ಲಿ ಹೊರತಂದ ‘ವಿಕಾಸ ಗೀತೆಗಳು’ ಮತ್ತು ‘ಭಕ್ತಿ ಗೀತೆಗಳು’ ಎಂಬ ಕವನಸಂಕಲಗಳನ್ನೂ ನೋಡಬಹುದು. ಅವರ ‘ಆಧುನಿಕತೆ’ ಎಂಬ ಹಾಡು ಆಧುನಿಕ ಯುಗದಲ್ಲಿ ಮಾನವನ ಜೀವನ ಎಷ್ಟು ಸಂಕೀರ್ಣಮಯ ಎನ್ನುವುದನ್ನು ಎತ್ತಿತೋರಿಸುತ್ತದೆ.

ಆದರ ಮಂತ್ರಿಯ ಅಳಿಯನಾಗಬೇಕು
ಶಿಕ್ಷಣ ಪಡೆಯಬೇಕೆಂದರೆ ಹಿಂದುಳಿದ
ವರ್ಗಕ್ಕೆ ಸೇರಬೇಕು
ಕಾರಿನ ಪ್ರವಾಸ ಮಾಡಬೇಕೆಂದರೆ
ಖಾದಿ ಧರಿಸಬೇಕು
ಸಾಹಿತಿಯಾಗಬೇಕೆಂದರ
ಜಠಾಧಾರಿಯಾಗಬೇಕು.
ರೊಕ್ಕ ಸಾಲದವನು ವರ್ಗಾ ವರ್ಗಿ
ಆಫೀಸಿನ್ಯಾಗ ನೌಕರನಿರಬೇಕು.
ಮನಿ ಮಂದಿ ಸುಧಾರಣೆಯಾಗಬೇಕಾದರ
ನಗರ ಸಭಾ ಸದಸ್ಯನಾಗಬೇಕು
ಹೆಂಡಿರು ಮಕ್ಕಳ ಸುಖ ಬಯಸುವವ
ವಿಮಾ ಇಳಿಸಬೇಕು

ಬಾಳಪ್ಪನವರು ಈ ಕವನವನ್ನು ದಿನಾಂಕ ೨೯.೯.೨೯೫೫ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ‘ಯುವಜನೋತ್ಸವ’ ದಲ್ಲಿ ತರುಣರಿಗೆ ಹಾಡಲು ಕಲಿಸಿದ್ದಾರೆ. ಹಾಗೂ ಇದನ್ನು ಕೇಳಿದ ಅಂದಿನ ಶ್ರೋತೃಗಳು ಅವರನ್ನು ಬಹಳ ಮೆಚ್ಚಿದರೆಂದು ಅವರು ತಮ್ಮ ದಿನಚರಿಯಲ್ಲಿ ದಾಖಲಿಸಿದ್ದಾರೆ.

ಬಾಳಪ್ಪನವರ ಸ್ವರಚಿತ ಕವನಗಳು ಅವರ ವಾಸ್ತವಿಕ ಜೀವನದ ಸಹಿ-ಕಹಿ ಅನುಭವಗಳನ್ನು ಪ್ರತಿನಿಧಿಸುತ್ತವೆ. ಅವು ಅವರ ಶಿಸ್ತಿನ ಜೀವನವನ್ನು, ಕಷ್ಟದ ದುಡಿಮೆಯನ್ನು, ಕರ್ತವ್ಯ ಶೀಲತೆಯನ್ನು, ಸಂಗೀತ ಸಾಧನೆಯನ್ನು ಮತ್ತು ದೇಶ ಸೇವೆಯನ್ನು ತೋರಿಸುತ್ತವೆ.

ಬಾಳಪ್ಪನವರು ಓರ್ವ ಅಪರೂಪದ ಹಳ್ಳಿಯ ಜನಪದ ಗಾಯಕರು. ಅವರು ಆಂಗ್ಲ ಕವಿ ವಿಲಿಯಂ ವರ್ಡ್ಸವರ್ಥನ ಹಾಗೆ ಹಳ್ಳಿಗರಿಗೆ ತೀರ ಹತ್ತಿರದವರಾಗಿದ್ದರು. ಸರಳರು, ಸಂಪನ್ನರು ಮತ್ತು ಶುದ್ಧ ಚಾರಿತ್ರ್ಯವುಳ್ಳವರಾದ ಬಾಳಪ್ಪನವರು ತಮ್ಮ ಗಾಯನವನ್ನು ಸಮಾಜ ಸೇವೆಗಾಗಿ ಮುಡುಪಾಗಿಟ್ಟವರು. ಜನರ ಮನರಂಜನೆಗಾಗಿಯೆ ಆಗಲಿ ಇಲ್ಲವೆ ಅವರಿಗೆ ಅರಿವನ್ನುಂಟು ಮಾಡಲಿಕ್ಕಾಗಲಿ ಅವರು ತ್ಯಾಗ ಮಾಡಿದ್ದಾರೆ. ಅವರು ಹಾಡ ಹಾಡಲು ಯಾರಾದರೂ ಕರೆದರೆ ಎಂದೂ ವಾಹನ(ಕಾರು) ತರಲಿಕ್ಕೆ ಹೇಳಿದವರಲ್ಲ. ಇಲ್ಲವೆ ಹಾಡಿದ ನಂತರ ‘ಇಷ್ಟೆ ಹಣ ಕೊಡ್ರಿ’ ಎಂದು ಕೇಳಿದವರಲ್ಲ. ಹಾಡಿನ ನಂತರ ‘ಆಡಿನ ಮರಿ ಕೊಟ್ಟರೆ ಬಗಲಲ್ಲಿ, ಆನೆಯನ್ನು ಕೊಟ್ಟರೆ ಅಂಬಾರಯಲ್ಲಿ. ಏನೂ ಕೊಡದಿದ್ದರೆ ಬರಿಗೈಯಲ್ಲಿ ಹೊರಡುವ’ ಉದಾರಿ ಸೇವಾ ಮನೋವೃತ್ತಿಯವರಾಗಿದ್ದರು. ಸಭೆಯಲ್ಲೆಂದೂ ಅಸಂಗತ ವಾತಾವರಣವನ್ನುಂಟು ಮಾಡದ ಅವರು ಯಾವಾಗಲೂ ಸಭೆಯನ್ನು ನೋಡಿ ಹಾಡುತ್ತಿದ್ದರು. ಪ್ರೇಕ್ಷಕರ ಆಸಕ್ತಿ , ವೇಳೆ, ಸ್ಥಳ ಮತ್ತು ಅಭಿರುಚಿಗೆ ತಕ್ಕಂತೆ ಹಾಡುತ್ತಿದ್ದರು. ಹೀಗಾಗಿ ಭಾಳಪ್ಪನವರು ನಮ್ಮ ನಾಡಿನ ಪ್ರತಿಯೊಂದು ಹಳ್ಳಿಗಳಿಂದ ಆಹ್ವಾನಿಸಲ್ಪಟ್ಟಿದ್ದಾರೆ. ಅವರು ಹೋಗದ ಹಳ್ಳಿಯೇ ಇಲ್ಲ.

ಬಾಳಪ್ಪನವರೊಬ್ಬ ಹಳ್ಳಿಯ ಗಾಯಕರೆಂದರೆ ಅವರು ಪೇಟೆ-ಪಟ್ಟಣಗಳಲ್ಲಿ ಹಾಡಿಲ್ಲವೆಂದಲ್ಲ. ಅವರು ಭಾರತ ದೇಶದ ಪ್ರಮುಖ ಪಟ್ಟಣಗಳಲ್ಲಿ ಸಂಗೀತ ಕಛೇರಿಯನ್ನು ನಡೆಸಿದ್ದಾರೆ, ಅವರು ಹಿಂದೂಸ್ಥಾನವನ್ನೆಲ್ಲ ಸುತ್ತಾಡಿ ಅವರ ಕಾಲದ ಪ್ರಮುಖ ವ್ಯಕ್ತಿಗಳಾದ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ, ಝಕೀರ ಹುಸೇನ್ ಮತ್ತು ಬಿ. ಡಿ. ಜತ್ತಿ. ಪ್ರಧಾನಿಗಳಾದ ಜವಹರಲಾಲ ನೆಹರು ಮತ್ತು ಇಂದಿರಾ ಗಾಂಧಿ, ಮುಖ್ಯ ಮಂತ್ರಿಗಳಾಗಿದ್ದ ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ಇನ್ನೂ ಹಲವಾರು ಗಣ್ಯರ ಮುಂದೆ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಬಾಳಪ್ಪನವರಿಗೆ ಹೋದಲ್ಲೆಲ್ಲಾ ತಾವು ಯಾರ ಮುಂದೆ ಕಾರ್ಯಕ್ರಮವನ್ನು ನಡೆಸಿದ್ದಾರೆ ಎಂಬುದನ್ನು ಹೇಳದಿದ್ದರೆ ಅವರೆಗೆ ಸಮಾಧನವೆ ಆಗುತ್ತಿರಲಿಲ್ಲ. ಕರ್ನಾಟಕ ಸುತ್ತಾಡುವಾಗ ಜನರಿಗೆ ಅವರು “ಕರ್ನಾಟಕದ ಇಲ್ಲ ಮುಖ್ಯಮಂತ್ರಿಗಳೂ ನನ್ನ ಗಾಯನ ಕೇಳ್ಯಾರ್ರಿ” ಎಂದು ಹೇಳುತ್ತಿದ್ದರು.

ಬಾಳಪ್ಪನವರು ಕೇವಲ ಕನ್ನಡಜಾನಪದ ಗೀತೆಗಳನ್ನಷ್ಟೆ ಹಾಡುತ್ತಿರಲಿಲ್ಲ. ಅವರು ಮರಾಠಿ ರಂಗಗೀತೆಗಳನ್ನು ಮತ್ತು ಅಭಂಗಗಳನ್ನು ಹಾಡುತ್ತಿದ್ದರು. ಅವರು ಹಿಂದಿ ಭಜನೆಗಳನ್ನೂ ಹಾಡುತ್ತಿದ್ದರು. ಹೀಗೆ ದೇಶದ ತುಂಬೆಲ್ಲ ಅನೇಕ ಭಾಷೆಗಳಲ್ಲಿ ಹಾಡಿದ ಬಾಳಪ್ಪನವರು ಸಂಗೀತಕ್ಕೆ ಬಾಷೆ ಅಡ್ಡ ಬರುವುದಿಲ್ಲ ಎಂಬುದನ್ನು ತೋರಿಸಿದ್ದಾರೆ. ದೇಶದ ತುಂಬೆಲ್ಲ ಹಾಡಿ ಅವರು ಒಂದರ್ಥದಲ್ಲಿ ಭಾವ್ಯೆಕ್ಯದ ಕೊಂಡಿಯಾಗಿದ್ದರು. ಆದ್ದರಿಂದಲೇ ‘ಶ್ರೀ ಶ’ ರವರು, ಬಾಳಪ್ಪನವರು ‘ಹಾಡು ಹರಿಯಲಿ ಮತ್ಸರ ಅಳಿಯಲಿ” ಎಂಬುದನ್ನು ತಮ್ಮ ಆದರ್ಶವನ್ನಾಗಿರಿಸಿಕೊಂಡಿದ್ದರು ಎಂದಿದ್ದಾರೆ. ಬಾಳಪ್ಪನವರು ಭಾಗವಹಿಸಿದ ಸಭೆ-ಸಮಾರಂಭಗಳಿಗೆ ಲೆಕ್ಕವಿಲ್ಲ. ಹಳ್ಳಿಗಳಿಂದ ದಿಲ್ಲಿಯವರೆಗೆ ಹಾಡಿದ ಅವರು ಆಧುನಿಕ ಭಾರತ ಕಂಡ ಜನಪದ ಆಚಾರ್ಯರೆ ಸರಿ. ಅಂತೆಯೆ ಅವರ ಹಾಡುಗಳನ್ನು ಅನೇಕ ಗಣ್ಯ ವ್ಯಕ್ತಿಗಳು, ಆಕಾಶ ವಾಣಿಗಳು ಮತ್ತು ಸಂಘ-ಸಂಸ್ಥೆಗಳು ಧ್ವನಿ ಸುರಳಿ ಮಾಡಿದ್ದಾರೆ.

ಬಾಳಪ್ಪನವರು ಜಾತ್ಯಾತೀತ ವ್ಯಕ್ತಿಗಳಾಗಿದ್ದರು. ಅವರು ಯಾವ ಜಾತಿ ಧರ್ಮ, ವೇಷ-ಭಾಷೆ, ಪಂಗಡ ಇತ್ಯಾದಿಗಳಿಗೆ ಅಂಟಿಕೊಂಡವರಲ್ಲ. ಯಾರೆ ಕರೆಯಲಿ, ಅಲ್ಲಿಗೆ ಹೋಗಿ, ಹಾಡು ಹಾಡಿ, ಜನರ’ ಮನಸ್ಸನ್ನು ರಂಜಿಸಿದರು. ಅವರ ಸಂದೇಶ ಘನವಾಗಿತ್ತು.

“ಹಾಡು ಹರಿಯಲಿ ಮತ್ಸರ ಅಳಿಯಲಿ ನೀತಿ-ಧರ್ಮ ನಾಶವಾಗದಿರಲಿ ಹಾಡನ್ನ ಹರವ್ರಿ ಮದಾ ಬಿಟ್ಟ ಬಿಡ್ರಿ” ಇದು ಅವರ ಬಾಳಿನ ಸಂದೇಶವಾಗಿದೆ.

ಆದ್ದರಿಂದಲೇ ಅವರ ಹಾಡುಗಳು ಎಲ್ಲರಿಗೂ ಹಿಡಿಸುತ್ತಿದ್ದವು. ಅವರ ಹಾಡುಗಳು ಮಾನವನ ಬದುಕಿಗೆ ಬೇಕಾದ ಸಂದೇಶವನ್ನು ತುಂಬಿಕೊಂಡಿದ್ದರಿಂದ ಅವು ಅಜರಾಮರವಾಗಿವೆ. ಅವರ ಅಭಿಮಾನಿ ಡಾ. ಸಂಗಮೇಶ ಸವದತ್ತಿ ಮಠರು ‘ಜೋಳ ಇರುವವರೆಗೂ ಅವರ ಹಾಡು ಉಳಿಯುತ್ತವೆ’ ಎಂದಿದ್ದಾರೆ.

ಬಾಳಪ್ಪನವರ ದೇಶಸೇವೆಯು ಶ್ಲಾಘನೀಯವಾಗಿದೆ. ಅವರು ಮೊದಲು ಕೃಷಿ ಇಲಾಖೆಗೆ ಸೇರಿದಾಗ ಕೃಷಿ ಪ್ರಚಾರಕ ಗೀತೆಗಳನ್ನು ಹಾಡುವುದಲ್ಲದೆ, ಸ್ವಾತಂತ್ರ್ಯ ಚಳುವಳಿಗಾಗಿ ದೇಶಭಕ್ತಿ ಗೀತೆಗಳನ್ನು ಹಾಡಿ ಹೋರಾಟಗಾರರಿಗೆ ಸ್ಫೂರ್ತಿಯನ್ನು ನೀಡಿದ್ದಾರೆ. ಬಂಗಾಲದಲ್ಲಿ ರವೀಂದ್ರರು, ಮಹಾರಾಷ್ಟ್ರದಲ್ಲಿ ತಿಲಕರು ಮಾಡಿದ ಕೆಲಸವನ್ನು ಅವರು ಕರ್ನಾಟಕದಲ್ಲಿ ಮಾಡಿದ್ದಾರೆ. ನಂತರ ಸಮುದಾ ಶಿಕ್ಷಣವನ್ನು ನೀಡಿದ್ದಾರೆ. ೧೯೬೦ ಮತ್ತು ೧೯೭೦ರ ದಶಕಗಳಲ್ಲಿ ಭಾರತದ ಮೇಲೆ ಚೀನಾ ಹಾಗೂ ಪಾಕಿಸ್ಥಾನ ದಾಳಿ ಮಾಡಿದಾಗ ಭಾರತೀಯ ಸೈನಿಕರು ಅವರನ್ನು ಸೋಲಿಸುವಂತೆ ಹಾಡಿ ಸ್ಫೂರ್ತಿ ನೀಡಿದ್ದಾರೆ. ಅಷ್ಟೇ ಅಲ್ಲದೆ, ‘ರಾಷ್ಟ್ರೀಯ ರಕ್ಷಣಾ ನಿಧಿಗೆ’ ತಾವು ಪಡೆದ ರಜತ-ಚಿನ್ನದ ಪದಕಗಳನ್ನು ಅರ್ಪಿಸಿದ್ದಾರೆ.

ಬಾಳಪ್ಪನವರ ಹಾಡೆಂದರೆ ಮಲಗಿದವರೂ ಸಹ ಎದ್ದು ಕೇಳಬೇಕು. ಅವರಿಗೆ ಹಾಡಲು ಬೇಸರವಾಗುತ್ತಿರಲಿಲ್ಲ. ಆದ್ದರಿಂದ ಖ್ಯಾತ ಅಂಕಣಕಾರ ಎಚ್ಚೆಸ್ಕೆಯವರು ಬಾಳಪ್ಪನವರು ಹಾಡುವುದಷ್ಟೇ ಸಂಗೀತವಲ್ಲ, ಅವರ ಜೀವನವೇ ಸಂಗೀತವೆನ್ನುತ್ತಾರೆ. ಬಾಳಪ್ಪನವರಿಗೆ ಮಾತೆಂಬುದು ಜೋತಿರ್ಲಿಂಗ, ಅವರ ಹಾಡು ಆ ಮಾತಿನ ಅಂತರಂಗವನ್ನೆ ತೆಗೆದು ತೋರಿಸಬಲ್ಲದು. ಮಾತಿನ ಕಾ.ಕಾ., ಜಾನಪದ ಜೀವಬಳ್ಳಿ, ಸಭಾಭೂಷಣ, ಜಾನಪದ ಸಂಗೀತ ರತ್ನ, ಸಾವಿರ ಹಾಡಿನ ಸರದಾರವೆಂದೆಲ್ಲ ಕರೆಸಿಕೊಂಡ ಬಾಳಪ್ಪನವರು ನಿಂತಲ್ಲಿ ಮಾತು, ನಡೆದಲ್ಲಿ ಸಂಗೀತ, ನುಡಿಯಲ್ಲಿ ನಗೆ ಮಿಂಚು ಬೀರುತ್ತಿದ್ದರು. ಅವರ ಶರೀರವೆ ಸಂಗೀತದಿಂದ ಸೃಷ್ಟಿಯಾಗಿದೆಯೇನೊ ಎಂಬ ಭ್ರಮೆ ಭರಿಸುವ ಭಾವ ಭಂಗಿ, ನಾದ ತರಂಗ ಸದಾ ಕಾಣಿಸುತ್ತಿತ್ತು.

ಆಕಾಶವಾಣಿಯ ಗಾಯಕರು ಆಗಿದ್ದ ಬಾಳಪ್ಪನವರು ಎತ್ತರದ ನಿಲವು, ಸ್ಥೂಲ ಕಾಯ, ತುಂಬು ಕೆನ್ನೆ, ಎದ್ದು ಕಾಣುವ ಮೂಗು ಮತ್ತು ಮುಖವನ್ನು ಹೊಂದಿದ್ದರು. ಕನಸುಗಾರ ಬಾಳಪ್ಪನವರ ಉಡುಗೆ ತೊಡುಗೆಗಳು ಬಹಳ ಶ್ರೀಮಂತಿಕೆಯವಾಗಿದ್ದವು. ತಲೆಯ ಮೇಲೆ ರುಮಾಲು, ಮೈಮೇಲೆ ನಿಲುವಂಗಿ, ಮೇಲೊಂದು ಕರಿ ಕೋಟು, ಭಳಿ ದೋತರ ಮತ್ತು ಕಾಲದಲ್ಲಿ ಬುರುಕಿ ಚಪ್ಪಲಿಗಳು ಅವರನ್ನು ಅಲಂಕರಿಸುತ್ತಿದ್ದವು. ಅವರ ಆಕಾರ ಜನಪದರಲ್ಲಿ ಅದ್ದಿ ತೆಗೆದ “ಮಣ್ಣಿನ ಮಗ” ನಂತಿತ್ತು. ನಮ್ಮದು, ನಮ್ಮ ನಾಡು, ನಮ್ಮವರು, ನಮ್ಮ ದೇಶ, ನಮ್ಮ ಮಾನವಕುಲ ಎಂಬ ಅವರ ಮಾನವೀಯತೆ, ಮತ್ತು ದೇಶಾಭಿಮಾನ ಮೆಚಗಚುವಂತಹವು. ಅಂಥ ಕಲಾವಿದನಿಗೆ ಧಾರವಾಡದ ಅಭಿಮಾನಿಗಳ ಪ್ರಾರ್ಥನೆ ಕೆಳಗಿನದಾಗಿತ್ತು.

ಬಾಳಪ್ಪ ! ನೂರು ವರುಷ ಬಾಳಪ್ಪ !
ವರುಷ ವರುಷ ಹಾಡಲಿಕ್ಕೆ ಬಾರಪ್ಪ

ಹಳ್ಳಿಯಲ್ಲಿ ಜನಿಸಿ ಹಳ್ಳಿಗರಲ್ಲಿ ಒಂದಾಗಿ ಬಾಳಿ-ಬೆಳೆದು ನಾಡಾಡಿಗಳ ಆಡುನುಡಿಗಳನ್ನೆ ಸಂಗೀತದಲ್ಲಿ ಸಂಯೋಜಿಸಿ ಆಡಿ-ಹಾಡಿ ಬಾಳಪ್ಪನವರು ಜನಮನವನ್ನು ರಂಜಿಸಿದ್ದಾರೆ. ಅವರನ್ನು ನಿಕಟವಾಗಿ ಕಂಡ ಮುರಗೋಡಿನ ಸಹಾಯಕ ನಿರ್ದೇಶಕರಾಗಿದ್ದ ಪ್ರಹ್ಲಾದ ಪಾರ್ವತಿ ಕೆಳಗಿನಂತೆ ಬರೆಯುತ್ತಾರೆ: ಜನಪದ ಬದುಕಿನಿಂದ, ಆ ಬದುಕಿನ ಸಾಹಿತ್ಯದಿಂದ ಸ್ಫೂರ್ತಿ-ಪ್ರೇರಣೆ ಪಡೆದು ೬೦ ವರ್ಷಗಳ ಕಾಲ ಜನಪದ ಹಾಡುಗಳನ್ನೆ ತಮ್ಮ ಉಸಿರಾಗಿಸಿಕೊಂಡಿರುವ ಬಾಳಪ್ಪನವರು ಜನಪದರೊಡನೆ ಬದುಕನ್ನು ಬೆಸೆದುಕೊಂಡಿದ್ದಾರೆ. ಸಂಗೀತದ ಒಡನಾಡಿಗಳಾಗಿದ್ದಾರೆ. ಗ್ರಾಮೀಣ ಜನತೆಯ ಅಂತರಂಗದ ಮುಗ್ಧ ಅಭಿವ್ಯಕ್ತಿಯ ಹಾಡುಗಳನ್ನು ತಮ್ಮ ಕಂಠಸಿರಿಯಲ್ಲಿರಿಸಿಕೊಂಡು ಭಾರತದ ಉದ್ದಗಲಕ್ಕೂ ಸಂಚರಿಸಿ ಗಾನಗಂಗೆ ಹರಿಸಿದ್ದಾರೆ.- ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ”.

ಹಾಡುಗಳ ಅರ್ಥವನ್ನು ಬಿಡಿಬಿಡಿಯಾಗಿಸಿ ಮಧುರರಾಗ ಬೆರೆಸಿ ರಸಿಕರ ಮನದಾಳದಲ್ಲಿ ತೂರಿ ಅವರ ಕಣ್ಮನಕ್ಕೆ ಬಾಳಪ್ಪನವರು ಮಾಯಾಲೋಕ ನಿರ್ಮಿಸುತ್ತಿದ್ದರು. ಪ್ರೀತಿ, ಪ್ರಣಯ, ದುಖಃ-ದುಮ್ಮಾನ ಗಾತೆಗಳನ್ನು ಜನಪದ ಭಾವನೆಗಳೊಂದಿಗೆ ಸೆರೆಹಿಡಿದು ಬಾಳಪ್ಪನವರು ಭಾವುಕರಾಗಿ ಹಾಡುತ್ತಿದ್ದರು. ಜೊತೆಗೆ ಉತ್ತರ ಕರ್ನಾಟಕದ ಗಂಡು ಭಾಷೆ ಅವರ ಗಾಯನದಲ್ಲಿ ನರ್ತನ ಮಾಡುತ್ತಿತ್ತು. ಹಳ್ಳಿಯ ಜನಪದ ಗೀತೆಗಳೊಂದಿಗೆ ಕನ್ನಡ ಕವಿಗಳ ಭಕ್ತಿ-ಭಾವ ಗೀತೆಗಳನ್ನು ತಮ್ಮ ಜ್ಷಾನ ಭಂಡಾರದಲ್ಲಿ ಸಂಗ್ರಹಿಸಿ ಹಳ್ಳಿಗರಿಗೆ ಅವುಗಳ ಮೂಲಧಾಟಿಯಲ್ಲಯೇ ಮುಟ್ಟಸುವುದು ಅವರ ವೈಶಿಷ್ಟ್ಯವಾಗಿತ್ತು. ತಮ್ಮ ಹಾಡಿನ ಮಧ್ಯ, ಪ್ರಾದೇಶಿಕ ಸ್ವರೂಪದ ಹಾಸ್ಯ ಚಟಾಕಿ, ಗಾದೆ, ಒಡಪು, ಒಗಟು ಮತ್ತು ನುಡಿಗಟ್ಟುಗಳನ್ನು ಯಥೇಚ್ಚವಾಗಿ ಬಳಸಿಕೊಂಡು ಹಾಡಿ ಜನಮನವನ್ನು ತಣಿಸುತ್ತಿದ್ದರು.

ಬಾಳಪ್ಪನವರು ಎಂದೂ ಸೋಮಾರಿತನವನ್ನಾಗಲಿ, ಬೇಜವಾಬ್ಧಾರಿತನವನ್ನಾಗಲಿ ಅನುಭವಿಸಿದವರಲ್ಲ. ‘ಆಲಸ್ಯತನವೆ ಮುಪ್ಪು, ಉತ್ಸಾಹವೆ ಯೌವನ’ ಎಂಬ ಮಾತನ್ನು ನಂಬುವುದಾದರೆ ಬಾಳಪ್ಪನವರು ಸದಾ ಯುವಕರಾಗಿದ್ದರು. ಅವರು ತಮ್ಮ ಇಳಿ ವಯಸ್ಸಿನಲ್ಲೂ ಉತ್ಸಾಹದಿಂದ ಹಾಡುತ್ತಿದ್ದರು. ತಮ್ಮ ಅನುಭವ, ಪ್ರತೆಭೆ ಹಾಗೂ ಜ್ಞಾನದಿಂದ ಹಾಡುಗಳಿಗೆ ಜೀವಕಳೆ ತುಂಬುತ್ತಿದ್ದರು. ಜನಪದಗೀತೆಗಳ ಸೌರಭವನ್ನು ಜನರ ಬಳಿಗೆ ಕೊಂಡೊಯ್ಯವಲ್ಲಿ ಅವರ ಸಮರ್ಪಣಾ ಪ್ರಯತ್ನ ಅನನ್ಯ. ಯಾವಾಗಲೂ ನಾದಗುಂಗಿನಲ್ಲಿಯೆ ಮಗ್ನರಾದ ಅವರು ನಾದಯೋಗಿಯಾಗಿದ್ದರು. ಹಾಡಿಗೆ ಹಣ್ಣಾಗಿ, ನಾಡಿಗೆ ಕಣ್ಣಾದ ಬಾಳಪ್ಪನವರು ಜೀವನಾನುಭವದಿಂದ ಕೂಡಿದ ಅದಮ್ಯ ಚೇತನದ ಚಿಲುಮೆಯಾಗಿದ್ದರು. ವರಕವಿ ಅಂಬಿಕಾತನಯ ದತ್ತರು ಅವರ ನಾದ ಮಾಧುರ್ಯದ ಬಗ್ಗೆ ಕೆಳಗಿನಂತೆ ಹೇಳಿದ್ದಾರೆ:

ಹುಕ್ಕೇರಿ ಬಾಳಪ್ಪನವರ ಹಾಡಂದ್ರ
ಜನಪದ ಸಂಗೀತದ ರಸಗಂಗೆಯಿದ್ದಂಗೆ
ನಾ ಬರದದ್ದಕ್ಕಿಂತಲೂ ಅವರ ಹಾಡು
ಛಲೋ ಇರ್ತಾವ.

ರಾಷ್ಟ್ರಕವಿ ಕುವೆಂಪುರವರು ಬಾಳಪ್ಪನವರಿಂದ ತಮ್ಮ “ಬಾರಿಸು ಕನ್ನಡ ಡಿಂಡಿಮವಾ” ಕವನವನ್ನು ಕೇಳಿ ಕೆಳಗಿನಂತೆ ಹೇಳಿದ್ದು ಗಮನಾರ್ಹ:

ಕವಿಯ ಭಾವವನ್ನು ಜನರಿಗೆ ಮುಟ್ಟಿಸುವ ನಿಮ್ಮಂಥ
ಗಾಯಕರ ಕೆಲಸ ಅತ್ಯಂತ ಮಹತ್ವದ್ದು
. ನಿಮ್ಮ ಕಂಠ ಆ
ಕೆಲಸ ನಿರಾಯಾಸವಾಗಿ ಮಾಡುತ್ತಿರುವುದು ಕಂಡು ಪರಮಾನಂದವಾಯ್ತು
.

ಬಾಳಪ್ಪನವರು ಒಂಟಿ ಸಲಗ. ಅವರಿಗೆ ದೊಡ್ಡ ಶಿಷ್ಯ ಬಳಗವಿರಲಿಲ್ಲ. ಯಾವ ಪಲಾಪೇಕ್ಷೆಯಿಲ್ಲದೆ ತಮ್ಮ ಹಾಡಿನ ಮೂಲಕ ನಾಡಿನ ಸೇವೆ ಮಾಡಬೇಕೆಂಬ ಆದರ್ಶ ಹೊಂದಿದ ಅವರ ಜೊತೆಗೆ ಕಷ್ಡಪಟ್ಟು ಕಲಿಯಬೇಕೆಂಬ ಬಳಗ ಬೆಳೆಯಲಿಲ್ಲ. ಆದರೆ ಅವರ ಹಾಡಿನ ಬಂಡವಾಳ ದೊಡ್ಡದು. ಅವರ ಒಡಲಾಳ ಹಾಡುಗಳ ಕಡಲಾಗಿತ್ತು. ಹಾಡು, ಲಾವಣಿ, ಗಾದೆ, ಒಗಟು, ಒಡಪು, ಗೀಗೀಪದ, ಹಂತಿಪದ, ಗರತಿಯ ಹಾಡು, ದಾಸರ ಪದ, ವಚನ, ಭಕ್ತಿ-ಭಾವ ಗೀತೆಗಳು, ರಂಗಗೀತೆಗಳು, ಹಿಂದಿ ದೋಹಾಗಳು ಮತ್ತು ಭಜನೆಗಳು, ನಾಟ್ಯಗೀತೆಗಳು ಇತ್ಯಾದಿ. ಒಂದೇ, ಎರಡೇ…. ನೂರಾರು. ಅವರ ಸಂಗೀತ ಮಾತುಗೀತೆಗಳ ಮಧುರ ಮಿಲನವಾಗಿತ್ತು. ಅವರ ಜನಪದ ಸಂಗೀತ ಸಿರಿಯ ಬಗ್ಗೆ ಗೋ. ರು. ಚೆನ್ನಬಸಪ್ಪ ಹೇಳಿದ ಮಾತು ಹೀಗಿದೆ: “ಲೋಕ ವಿಶ್ವವಿದ್ಯಾಲಯದಲ್ಲಿ ಜೀವನಾನುಭವ ಸ್ನಾತಕೋತ್ತರ ಪದವಿ ಪಡೆದಿರುವ ಪ್ರತಿಭಾವಂತ ಕಲಾಕಾರ ಬಾಳಪ್ಪ ಹುಕ್ಕೇರಿ. ಅವರು ಈ ಶತಮಾನದ ಒಬ್ಬ ಅಪರೂಪದ ವ್ಯಕ್ತಿ. ಅನುಪಮ ಆಸ್ತಿ. ಕನ್ನಡದ ಕಂಪನ್ನು ಹನ್ನೆರಡು ದಿಕ್ಕಿಗೆ ಹರಡಿದ ಈ ಹಾಡಿನ ಹರಿಕಾರ ಯಾವ ನಾಡಿನಲ್ಲಿದ್ದರೂ ಅಭಿಮಾನದ ಆಭರಣವೇ ಸರಿ.”

ಬಾಳಪ್ಪನವರ ಮತ್ತೊಂದು ಸಾಧನೆಯೆಂದರೆ ಕನ್ನಡದ ವಚನ, ಭಕ್ತಿ-ಭಾವಗೀತೆಗಳನ್ನು ಸಂಗೀತಕ್ಕೆ ಅಳವಡಿಸಿದ್ದು. ಅವರ ಹಾಡುಗಾರಿಕೆಯ ವೈಶಿಷ್ಟತೆಯಲ್ಲಿ ಅವರದೆ ಛಾಪು-ಛಾಯೆಗಳಿದ್ದವು. ಅಂತೆಯೆ ಅವು ಅವರಿಗೆ ‘ಜಾನಪದ ಸಂಗೀತ ಸಾಮ್ರಾಟ’ ಎಂಬ ಬಿರುದನ್ನು ದೊರಕಿಸಿಕೊಟ್ಟವು.

ಬಾಳಪ್ಪನವರು ಜನಪದ ಸಂಗೀತಕ್ಕೆ ಒಂದು ಬುನಾದಿ ಹಾಕಿದರು. ಜನಪದ ಸಂಗೀತದ ಪರಂಪರೆಯನ್ನು ಬಲಗೊಳಿಸಿದರು. ಅದರ ನಿಜವಾದ ಮಹತ್ವವನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರು. ನನ್ನ ಅಭಿಪ್ರಾಯದಲ್ಲಿ ಬಾಳಪ್ಪನವರು ಕನ್ನಡ ಜನಪದ ಸಂಗೀತವನ್ನು ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದರು.

ಬಾಳಪ್ಪನವರಿಗೆ ತಮ್ಮ ಜೀವನದಲ್ಲಿ ಸಂಗೀತ ಸಾಧನೆಗಾಗಿ ಸಂದ ಗೌರವ ಅಷ್ಟಿಷ್ಟಲ್ಲ. ಅವರಿಗೆ ಕರ್ನಾಟಕ ನಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (೧೯೬೯), ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (೧೯೮೧), ಕನ್ನಡ ರಾಜ್ಯೋತ್ಸವ ಪ್ರಶಸ್ತಿ (೧೯೮೬), ಮತ್ತು ರಾಷ್ಟ್ರಮಟ್ಟದ ಮಧ್ಯಪ್ರದೇಶದ ‘ತುಳಸಿ ಸಮ್ಮಾನ’ (೧೯೯೧) ದೊರೆತಿವೆ. ಇದಕ್ಕಿಂತಲೂ ಮುಖ್ಯವಾಗಿ ಇಡೀ ರಾಷ್ಟ್ರವೇ ಅವರಿಂದ ಆನಂದ ಪಟ್ಟು ಅವರನ್ನು ಸನ್ಮಾನಿಸಿವೆ. ಅವರಿಗೆ ಸಂದ ಬಿರುದು-ಬಾವಲಿಗಳ ಪಟ್ಟಿ ದೊಡ್ಡದಾಗಿದೆ. ‘ಸಭಾ ಭೂಷಣ’, ‘ಜಾನಪದ ಜಾದೂಗಾರ’, ‘ಮಾತಿನ ಕಾಕಾ’, ‘ಜಾನಪದ ಗಾರುಡಿಗ’, ‘ಜಾನಪದ ಸಂಗೀತ ರತ್ನ’, ‘ನಾದ ಯೋಗಿ’, ‘ಹಳ್ಳಿಯ ಹಮ್ಮೀರ’, ‘ಸಾವಿರ ಹಾಡಿನ ಸರದಾರ’, ‘ಕನ್ನಡ ಜನಪದ ಸಂಗೀತ ಸಾಮ್ರಾಟ’.

ತಮ್ಮ ಹಾಡಿನ ಮೂಲಕ ನಾಡಿಗೆ ಸೇವೆ ನೀಡಿದ ಬಾಳಪ್ಪನವರು ಇಂದು ನಮ್ಮ ಮಧ್ಯೆ ಇಲ್ಲ. ಆದರೆ ಅವರ ಕಂಚಿನ ಕಂಠದಿಂದ ನಮ್ಮ ಮನಸ್ಸಿನಲ್ಲಿ ಅಚ್ಚಾದ ಅವರ ಗಾಯನದ ನಾದತರಂಗ ಅಚ್ಚಳಿಯದೆ ಉಳಿದಿದೆ. ಗೋ. ರು. ಚೆನ್ನ ಬಸಪ್ಪನವರು ಹೇಳಿದಂತೆ ‘ಬಾಳಪ್ಪನವರು ಈ ಶತಮಾನದ ಒಬ್ಬ ‘ಅಪರೂಪದ ವ್ಯಕ್ತಿ, ಅನುಪಮ ಶಕ್ತಿ’. ನಮ್ಮೆಲ್ಲರ ದುರ್ದ್ಯೆವಕ್ಕೆ ಈ ಜನಪದ ಲೋಕದ ಹಾಡಿನ ಹಕ್ಕಿ ದಿನಾಂಕ: ೧೫.೧೧.೧೯೯೨ರಂದು ಮುರಗೋಡಿನಲ್ಲಿ ಮಾಯವಾಯಿತು, ಮುರಗೋಡಿನ ಓರ್ವ ರಾಷ್ಟ್ರೀಯ ಪ್ರಜ್ಞೆಯುಳ್ಳ ಕಿಮ್ಮತ್ತಿನ ಮನುಷ್ಯ ಬಾಳಪ್ಪನವರು. ಸಂಸ್ಕೃತಿ, ಧರ್ಮ, ತತ್ವನೀತಿಗಳ ತ್ರಿವೇಣಿ ಸಂಗಮವಾಗಿದ್ದರು. ಜನಪದ ಸಾಹಿತ್ಯ, ಸಂಸ್ಕ್ರತಿ ಮತ್ತು ಸಂಗೀತದ ಮೀಸಲು ಭಕ್ತರಾಗಿದ್ದ ಅವರು ಜನಮನವನ್ನು ತಿದ್ದಿ, ಹದವಾಗಿ ಮಿದ್ದಿ, ಸುದ್ಧಿ-ಪ್ರಸಿದ್ಧಿ ಪಡೆದ ಪುಣ್ಯಪುರುಷರಾಗಿದ್ದರು.