ಬಾಳಪ್ಪ ಹುಕ್ಕೇರಿಯವರು ಕೇವಲ ಒಬ್ಬ ವೃತ್ತಿಗಾಯಕರಾಗಿರಲಿಲ್ಲ. ಅವರು ಜೀವನದ ಹಲವಾರು ರಂಗಗಳಲ್ಲಿ ಕೃಷಿಗೈದಿದ್ದಾರೆ. “ಆಡು ಮುಟ್ಟದ ಗಿಡವಿಲ್ಲ, ಬಾಳಪ್ಪನವರು ಸೇವೆಗೈಯದ ಕ್ಷೇತ್ರವಿಲ್ಲ.” ಎಂಬ ಮಾತು ಅವರಿಗೆ ಅತಿಶಯೋಕ್ತಿಯೇನಲ್ಲ.

ಬಾಳಪ್ಪನವರು ಕೃಷಿ ಪ್ರಚಾರಕರಾಗಿದ್ದಾಗ ಅನೇಕ ಕೆಲಸಗಳನ್ನು ನಿರ್ವಹಿಸಿದರು. ಗ್ರಾಮೀಣ ಜನರಿಗೆ ಆಧುನಿಕ ಕೃಷಿ ಹಿಡುವಳಿ, ಕೋಳಿ ಸಾಕಾಣಿಕೆ ಮತ್ತು ಇತರ ವಿಷಯಗಳನ್ನು ಮನದಟ್ಟು ಮಾಡಿಕೊಡುವುದಲ್ಲದೆ, ಅವರಿಗೆ ಮಿತಸಂತಾನ, ಶಿಕ್ಷಣ ಹಾಗೂ ಸರಳ ಜೀವನದ ಮಹತ್ವದ ಬಗ್ಗೆ ಹೇಳಿಕೊಡುತ್ತಿದ್ದರು. ಅವರು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆಯನ್ನು ಅವಲೋಕಿಸೋಣ.

೧. ಗಾಯನ : ಬಾಳಪ್ಪನವರು ಮುಖ್ಯವಾಗಿ ಜನಪದ ಗಾಯಕರಾಗಿದ್ದರು. ಜನಪದ ಸಂಗೀತ ಕ್ಷೇತ್ರದಲ್ಲಿ ಅವರು ಮಾಡಿದ ಸಾಧನೆ ಮತ್ತು ನೀಡಿದ ಕೊಡುಗೆ ಅಪಾರವಾಗಿದ್ದರಿಂದ ಅದನ್ನು ಪ್ರತ್ಯೇಕವಾಗಿ ಅವಲೋಕಿಸಲಾಗಿದೆ.

೨. ಕಾವ್ಯ ರಚನೆ: ಬಾಳಪ್ಪನವರು ಸ್ವತಃ ಆಶುಕವಿಗಳಾಗಿದ್ದರು. ಸಂದರ್ಭಕ್ಕನುಗುಣವಾಗಿ ಚುಟುಕು ಇಲ್ಲವೆ ದೊಡ್ಡ ಹಾಡುಗಳನ್ನು ಜಾನಪದ ಶೈಲಿಯಲ್ಲಿ ಪರಿಣಾಮಕಾರಿಯಾಗಿ ಬರೆದು ಹಾಡುತ್ತಿದ್ದರು. ಅವರು ಕೃಷಿ, ಶಿಕ್ಷಣ, ಪ್ರಸಾರ ಮತ್ತು ಕುಟುಂಬ ಯೋಜನೆಯ ಬಗ್ಗೆ ಬರೆದ ಹಾಡುಗಳನ್ನು ‘ಭಕ್ತಿ ಗೀತೆಗಳು’ ಹಾಗೂ ‘ವಿಕಾಸ ಗೀತೆಗಳು’ ಎಂಬ ಕವನ ಸಂಕಲನದಲ್ಲಿ ಪ್ರಕಟಿಸಿದ್ದಾರೆ.

೩. ನಾಟಕ: ಬಾಳಪ್ಪನವರು ಒಬ್ಬ ವೃತ್ತಿ ರಂಗಭೂಮಿಯ ಕಲಾಕಾರರಾಗಿದ್ದರು. ಸುಮಾರು ೧೯೩೨ ರಿಂದ ೧೯೯೦ ರವರೆಗೆ ನಾಟಕ ಕಂಪೆನಿಯೊದನ್ನು ಕಟ್ಟಿ ನಡೆಸಿ ಅನೇಕ ಕಲಾಕಾರರಿಗೆ ಮಾರ್ಗದರ್ಶನ ನೀಡಿದ್ದಾರೆ. ನಾಟಕದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಬಾಳಪ್ಪನವರು ಎಲ್ಲರಿಗೆ ತರಬೇತಿ ನೀಡುತ್ತಿದ್ದರು.

೪. ಕೃಷಿ ಪ್ರಚಾರ: ಬಾಳಪ್ಪನವರು ಕೃಷಿ ಪ್ರಚಾರಕ್ಕೆ ಹೇಳಿ ಮಾಡಿಸಿದಂತಹ ವ್ಯಕ್ತಿಯಾಗಿದ್ದರು. ಅಂದಿನ ಕೃಷಿ ಇಲಾಖೆಯ ಅಧಿಕಾರಿ ವಿ.ಸಿ. ಪಾವಟೆಯವರಿಂದ “ಕೃಷಿ ಪ್ರಚಾರಕ” ಎಂಬ ವಿಶೇಷ ಹುದ್ದೆಯನ್ನು ಪಡೆದು ಅನೇಕ ವರ್ಷಗಳ ಕಾಲ ರೈತರಿಗೆ ಪ್ರೋತ್ಸಾಹ ನೀಡಿದ್ದಾರೆ. ಅವರು ಬಹಳಷ್ಟು ವಿದ್ಯೆ ಕಲಿಯದಿದ್ದರೂ ವಿದ್ಯೆಯಿಲ್ಲದೆಯೆ ಪ್ರಖ್ಯಾತರಾದವರು. ಅರ್ಹ ಕೃಷಿ ವಿಜ್ಞಾನ ಪದವೀಧರರು ಪಡೆವ ಸರಕಾರಿ ನೌಕರಿಯನ್ನು ಮಾಡಿ ನಿವೃತ್ತರಾದರು. ಕೃಷಿ ಇಲಾಖೆಯಲ್ಲಿ ಪ್ರಸಾರಕರು, ಪ್ರಚಾರಕರೂ ಆಗಿ ಊರೂರು ಅಲೆದಾಡಿ ರೈತರಿಗೆ ತಿಳಿ ಹೇಳಿ ಭೇಷ್ ! ಎನಿಸಿಕೊಂಡರು. ಆಶ್ಚರ್ಯವೆಂದರೆ ಕೃಷಿ ಇಲಾಖೆಯಲ್ಲಿ ಪ್ರಚಾರಕ ಎಂಬ ಹುದ್ದೆಯೆ ಇರಲಿಲ್ಲ. ಸರಕಾರ ಅವರಿಗೆ ಈ ಹುದ್ದೆಯನ್ನು ನೀಡಿ ಗೌರವಿಸಿದ್ದು ಸಾರ್ಥಕವೇ ಸರಿ.

ಬಾಳಪ್ಪನವರು ಪರಂಪರಾಗತ ಕೃಷಿ ಪದ್ಧತಿಯನ್ನು ಒಪ್ಪಿದವರಲ್ಲ. ಹಾಗೆಯೇ ಜನರು ಸಾಂಪ್ರದಾಯಿಕ ನಂಬಿಕೆಗಳನ್ನು ಹೊಂದಿ ಕೃಷಿ ಮಾಡಬಾರದು ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು. “ಕೋಟಿ ವಿದ್ಯೆಗಿಂತಲೂ ಮೇಟಿ ವಿದ್ಯೆಯೇ ಮೇಲು” ಎನ್ನುವ ಬಾಳಪ್ಪನವರು ನೇಗಿಲಯೋಗಿಯ ಅಭಿಮಾನಿಯಾಗಿದ್ದರು. ಒಕ್ಕಲುತನ ಮಾಡುವುದು ಕೀಳೆನ್ನುವವರಿಗೆ ಅವರು ಈ ಕೆಳಗಿನಂತೆ ಹೇಳುತ್ತಿದ್ದರು:

“ನೋಡ್ರೆಪ್ಪಾ, ಬೇಸಾಯ ಉತ್ತಮ, ವ್ಯಾಪಾರ ಮಧ್ಯಮ, ನೌಕರಿ ಕನಿಷ್ಟ. ಆದರ ನಿಮಗೇನ ಅನಸ್ತ್ಯೆತಿ ಅಂದರೆ ಕಚೇರ‍್ಯಾಗ ಕಾರಕೂನಕಿ ಮಾಡೋದು ಪಾಡೆಂತ. ಯಾಕೆಂದರೆ ಮಳಿ ಇಲ್ಲದ ಬೆಳಿ ಅಂತ. ಈ ವಿಚಾರ ಶುದ್ಧ ತಪ್ಪು. ರಾಜಾನಂಗ ಸ್ವಂತ ಹೊಲದ ಕೆಲಸ ಮಾಡೋದು ನೆಟ್ಟಗೊ ಅಥವಾ ಗುಲಾಮರಂಗ ಇನ್ನೊಬ್ಬರ ಕೆಳಗ ದುಡಿಯೋದು ನೆಟ್ಟಗೊ. ಇದನ್ನ ವಿಚಾರ ಮಾಡ್ರಿ. ರೈತಾಪಿ ಕೆಲಸ ಕಷ್ಟಖರೆ. ಯಾಕಂದ್ರೆ ಎಲ್ಲಾ ಪ್ರಕೃತಿ ಮ್ಯಾಲ ಅವಲಂಬನ. ಮಳಿ ಕೈಕೊಟ್ಟತಂದ್ರ ರೈತರಿಗೆ ಗೋಳು. ಆದರ ಈಗ ಕಾಲ ಬದ್ಲೀ ಆಗೈತಿ.”

ಅವರು ಹೇಳಿದಂತೆ. ಇಂದಿನ ವೈಜ್ಞಾನಿಕ ಯುಗದಲ್ಲಿ ರೈತರು ಜೀವನಕ್ಕೆ ಶಿಸ್ತನ್ನು ಮತ್ತು ಪರಿಶ್ರಮದ ದುಡಿಮೆಯನ್ನು ರೂಢಿಸಿಕೊಡರೆ ಬಾಳುಬಂಗಾರವಾಗಬಹುದು. ರೈತರು ತಮ್ಮ ಜ್ಞಾನದಿಂದ ಆಧುನಿಕ ಯಂತ್ರೋಪಕರಣ, ಬೀಜ, ಗೊಬ್ಬರ ಮತ್ತು ಔಷಧಗಳನ್ನು ಬಳಸಿಕೊಂಡು ಸುಧಾರಿತ ವ್ಯವಸಾಯವನ್ನು ಮಾಡಬಹುದು.

ಬಾಳಪ್ಪನವರು ರೈತ ವ್ಯವಹಾರವನ್ನಷ್ಟೇ ಮುಖ್ಯವಾಗಿಸಿಕೊಳ್ಳದೆ ಉಪಕಸುಬುಗಳನ್ನು ಮಾಡಬೇಕು ಎನ್ನುತ್ತಾರೆ. ಅವರ ಪ್ರಕಾರ ರೈತ ಎತ್ತು, ಎಮ್ಮೆ, ಆಡು, ಕುರಿ, ಕೋಳಿ, ಹಂದಿ, ಮತ್ತಿತರ ಪ್ರಾಣಿಗಳನ್ನು ಸಾಕಬಹುದು. ಹಣದ ಬೆಳೆಗಳಾದ ಗೋಡಂಬಿ, ಹತ್ತಿ, ಕಬ್ಬು, ಅಡಿಕೆ, ತೆಂಗು ಇತ್ಯಾದಿಗಳ ಸಂಸ್ಕರಣ ಕೆಲಸಗಳನ್ನು ಮಾಡಬಹುದು. ಇಲ್ಲವೆ ಹಿಟ್ಟಿನ ಗಿರಣಿ, ಇಟ್ಟಿಗೆ ತಯಾರಿಕೆ, ಬೆಲ್ಲದ ಗಾಣ ಮತ್ತಿತರ ಗುಡಿ ಕೈಗಾರಿಕೆಗಳನ್ನು ನಡೆಸಬಹುದು. ಒಟ್ಟಾರೆ ಬಾಳಪ್ಪನವರ ದೃಷ್ಟಿಯಲ್ಲಿ “ಕೃಷಿ” ಪ್ರಾಧಾನ್ಯತೆಯನ್ನು ಪಡೆದಿದೆ. ಅವರ ಪ್ರಕಾರ:

“ಒಕ್ಕಲುತನ ಅನ್ನೋದು ಕೀಳು ಉದ್ಯೋಗ ಅಲ್ಲ. ಒಕ್ಕಲುತನ ಮಾಡಾಂವ ನೇಗಿಲಯೋಗಿ, ಲಿಂಗಪೂಜೆ ಮಾಡಾವ ಶಿವಯೋಗಿ, ಋಷಿ ಜೀವನ ಕೃಷಿಕನ ಜೀವನ ಒಂದರಿ. ಅವಂದು ಕಾಡಿನ್ಯಾಗ ತಪಸ್ಸಾದ್ರ ಇವಂದು ಹೊಲ್ದಾಗ ಬೆವರು ಸುರಿಸಿ ರಟ್ಟಿ ಮುರಿಯೋಹಂಗ ದುಡದ್ರ ಹೊಟ್ಟೆ ಹಸೀತೈತಿ, ಹಸಿದ ಹೊಟ್ಯಾಗ ಉಂಡ್ರ ಆಹಾರ ಬರೋಬರ ಪಚನ ಆಗ್ತೈತಿ. ಸದಾ ಹಸಿರನ್ನು ನೋಡುವ ಕಣ್ಣುಗಳ ದೃಷ್ಟಿ ಚುರುಕ ಆಗ್ತ್ಯೆತಿ. ನೀವು ಬಿತ್ತಿದ ಬೀಜ ಮೊಳಿತು ಸಸಿಯಾಗಿ ಏನ ಬೆಳಿತೈತಿ ನೋಡ್ರಿ. ಅದರ ಹಂತ ಹಂತವಾದ ಬೆಳವಣಿಗೆ ನಿಮಗೆ ಸಂತೋಷ ಕೊಡತ್ತ್ಯೆತಿ. ನಿಮ್ಮ ಬೆವರ ಹನಿ ಮುತ್ತಾಗಿ ಕಣಕ್ಕ ಬಂದಾಗ ಆಗೋ ಹಿಗ್ಗು ಅನುಭವಿಸದ್ರ ಮಾತ್ರ ಗೊತ್ತಾಗೋದು. ಹೊಲ, ತೋಟೆ, ಗದ್ದೆ, ದನ, ಕರು ಇವುಗಳ ಮಧ್ಯ ಬೆಳೆಯುವ ರೈತನ ಜೀವನ ಸದಾ ಬೆಳವಣಿಗೆಯ ಜೀವನ. ಹೊಲದಾಗ ಬೆಳೀಬೇಕು, ಬೆಳದಿದ್ದನ್ನು ಉಳಿಸಿಕೊಳ್ಳಬೇಕು “ಒಕ್ಕಲಿಗ ಮಾಡೋದೆಲ್ಲಾ ದಂಡಕ್ಕೆ ಅನ್ನೋ ಮಾತನ್ನ ಅಳಿಸಿ ಹಾಕಬೇಕು.”

ಹೌದು, ಕುರಗುಂದದ ಆನಂದ ಕವಿಗಳು ಬರೆದ “ಹಿಂದೂಸ್ತಾನಕ ಎಂಥವಬೇಕ” ಎನ್ನುವ ಹಾಡನ್ನು ಬಾಳಪ್ಪನವರ ಬಾಯಿಂದ ಕೇಳದರೆ ಒಕ್ಕಲುತನ ಮಾಡಬೇಕು ಎನ್ನಿಸುತ್ತಿತ್ತು.

ನಾಡಿನ ಪ್ರಸಿದ್ಧ ಜಾನಪದ ವಿದ್ವಾಂಸ ಡಾ. ಹಾ.ಮಾ.ನಾಯಕರು ಬಾಳಪ್ಪನವರ ಕೃಷಿ ಸೇವೆಯನ್ನು ತಮ್ಮ ಕೆಳಗಿನ ಮಾತುಗಳಲ್ಲಿ ಹೇಳಿದ್ದಾರೆ:

“ಕಾಲು ಶತಮಾನಕ್ಕೂ ಹೆಚ್ಚು ಕಾಲ ಬಾಳಪ್ಪ ವ್ಯವಸಾಯ ಇಲಾಖೆಯಲ್ಲಿ ಪ್ರಚಾರಕರ ಕಾರ‍್ಯ ನಿರ್ವಹಿಸಿದರು. ಸರಕಾರದ ಸಂದೇಶವನ್ನು ಶ್ರೀ ಸಾಮಾನ್ಯರಿಗೆ ಮುಟ್ಟಿಸುವುದು ಅವರ ಕೆಲಸ. ಅದನ್ನು ಯಶಸ್ವಿಯಾಗಿ ಮಾಡಿದರು. ಹಳ್ಳಿಗಳನ್ನು ಸುತ್ತಿದರು. ಹೆಚ್ಚು ಆಹಾರ ಬೆಳೆಯಿರಿ, ಕಡಿಮೆ ಮಕ್ಕಳನ್ನು ಪಡೆಯಿರಿ. ಈ ಘೋಷಣೆಗಳ ಸುತ್ತ ಮುತ್ತ ಬಾಳಪ್ಪನವರ ಕಾರ‍್ಯಭಾರ. ಹಣ್ಣು ಹೂ ಬೆಳೆಯುವುದು, ಕೋಳಿ, ಕುರಿ ಸಾಕುವುದು, ಮಿತ ಕುಟುಂಬದ ಸುಖಗಳನ್ನು ವರ್ಣಿಸುವುದು ಭಾಳಪ್ಪನವರ ಕಾವ್ಯ. ಸಂಗೀತಗಳ ಕೆಲಸ, ಪಂಚ ವಾರ್ಷಿಕ ಯೋಜನೆಗಳು ಸರಕಾರದ ಮಹತ್ಕಾರ‍್ಯಗಳು ಅವರ ಹಾಡಿಗಾರಿಕೆಗೆ ಸಿಕ್ಕಿ ಹಿಗ್ಗಿದವು. ಕೇಳುವ್ರ ಕಣ್ನೆದುರು ಬಾಳಪ್ಪ ಮಾಯಾ ಪ್ರಪಂಚ ನಿರ್ಮಿಸಿದರು.”

೫. ಕುಟುಂಬ ಯೋಜನೆ: ಬಾಳಪ್ಪನವರು ತಮಗೆ ಕೃಷಿ ಇಲಾಖೆಯಲ್ಲಿ ವಹಿಸಿಕೊಟ್ಟ ಕೃಷಿ ಪ್ರಚಾರವಷ್ಟೇ ಮಾಡದೆ ಅದರ ಜೊತೆಗೆ ಮಿತ ಸಂತಾನದ ಮಹತ್ವವನ್ನು ಗ್ರಾಮೀಣ ಜನರಿಗೆ ಮನದಟ್ಟಾಗುವಂತೆ ಹೇಳುತ್ತಿದ್ದರು. ತಮ್ಮ ಜೀವನಾನುಭವ ಜ್ಞಾನ, ಸಾಂಪ್ರದಾಯಿಕೆ ಗಾದೆ, ಒಗಟು, ಲಾವಣಿ ಇತ್ಯಾದಿಗಳನ್ನು ಬಳಸಿಕೊಂಡು ಹಳ್ಳಿಯ ಜನರಿಗೆ ಮಿತ ಸಂತಾನದ ಪರಿಕಲ್ಪನೆಯನ್ನು ಮಾಡಿ ಕೊಡುತ್ತಿದ್ದರು. ಸ್ವತ: ಆಶು ಕವಿಗಳಾದ ಅವರು ಕುಂತಲ್ಲಿ, ನಿತಲ್ಲಿ, ಹೋದಲ್ಲಿ, ಬಂದಲ್ಲಿ, ಸಂದರ್ಭಕ್ಕನುಗುಣವಾಗಿ ಹಾಡುಗಳನ್ನು ರಚಿಸಿ ಜನ ಕಡಿಮೆ ಹಡೆಯುವಂತೆ, ಮಕ್ಕಳನ್ನು ಸರಿಯಾಗಿ ಬೆಳೆಸುವಂತೆ ಹಾಗೂ ಅವರಿಗೆ ಉತ್ತಮ ಶಿಕ್ಷಣವನ್ನು ಕೊಡುವಂತೆ ಹೇಳುತ್ತಿದ್ದರು.ಅವರಿಗೆ ಜನಸಂಖ್ಯಾ ಬೆಳವಣಿಗೆಯ ದುಷ್ಪರಿಣಾಮ ಗೊತ್ತಿದ್ದರಿಂದ ಅವರು ಜನರಿಗೆ ಮುನ್ನೆಚ್ಚರಿಕೆ ಕೊಡುತ್ತಿದ್ದರು. ಅವರ ಪ್ರಕಾರ:

“ಮಕ್ಕಳಿರಲವ್ವ ಮನೆತುಂಬ ಎನ್ನುವ ಕಾಲವೊಂದಿತ್ತು. ಆಗ ಜನ ಸಂಖ್ಯೆ ಕಡಿಮೆ. ಕಾಳು-ಕಡಿ, ಹಾಲುಹೈನು ವಿಫುಲವಾಗಿ ಸಿಗುತ್ತಿತ್ತು. ಬಹಳ ಅಗ್ಗದ ಕಾಲ. ಹದಿನೆಂಟು ರೂಪಾಯಿಗೆ ಒಂದು ತೊಲಿ ಬಂಗಾರ, ಎಂಟು ರೂಪಾಯಿಗೆ ಒಂದು ಚೀಲ ಅಕ್ಕಿ, ನಾಲ್ಕು ರೂಪಾಯಿಗೆ ಒಂದು ಚೀಲ ಜೋಳ, ಎಂಟಾಣೆಗೆ ಒಂದು ಸೇರು ಬೆಣ್ಣೆ. ಏನ ತಿಂತಿ ಏನ ಬಿಡಿತಿ? ಬಂಜಿ ಎಂಬ ಶಬ್ದ ಕೊಡಬ್ಯಾಡ ದೇವರೆ ಎಂದು ಮಾತ್ರ ಹೆಣ್ಣು ಮಕ್ಕಳು ಪರಿತಪಿಸುವ ಕಾಲ. ಈಗ ಎಲ್ಲಿ ತರ‍್ತೀರಿ? ಬಂಜೀರ‍್ನ ಹುಡುಕಿದರೂ ಸಿಗಾಕಿಲ್ಲ. ಮದವಿ ಆಗೋದ ತಡಾ ತೊಟ್ಟಿಲ ಕಟ್ಟಿ ಬಿಡೋದ. ನಿಮಗೆ ಹೇಳ್ತೀನಿ. ಆಗಿನ ಕಾಲಕ ಒಂದು ಗಂಡ ಹಡಿಯಾಕ ಹತ್ತು ದೇವರಿಗೆ ಹರಿಕಿ ಹೊರಬೇಕಾಗಿತ್ತು. ಈಗ ಪುತು ಪುತು ಅಂತಾವ್ರಿ ಮಕ್ಕಳು. ಹ್ಯಾಗೂ ಇದು ಯಂತ್ರ ಯುಗ. ಹೆಣ್ಣು ಮಕ್ಕಳು ಅನ್ನೋವು ಹಡೆಯೋ ಯಂತ್ರ ಆಗ್ಯಾವ್ರಿ. ಹೀಂಗಾಗಿ ಊರೆಲ್ಲ ತುಂಬಿ ತುಳುಕ್ಯಾಡಾಕ ಹತ್ಯಾವು. ಒಂದು ರೈಲಿಗೆ ಹೋಗ್ಲಿ, ಬಸ್ಸಿಗೆ ಹೋಗ್ಲಿ, ಸಿನೇಮಾಕ್ಕೆ ಹೋಗಲಿ ‘ಕ್ಯೂ’ ಹೋಟೆಲದಾಗ ದ್ವಾಸಿ ತಿನ್ನಾಕೂ ಕ್ಯೂ ಹಚ್ಚೋ ಕಾಲ. ಈ ಪರಿ ಜನ್ರು ಹೆಚ್ಚಾಗಿ ನೀರು, ಗಾಳಿ, ಭೂಮಿ ಎಲ್ಲ ಹೊಲಸಾಗಿ ಬಿಟ್ಟಾವು.”

ವಿಜ್ಞಾನ ಮತ್ತು ತಂತ್ರಜ್ಞಾನದ ಇಂದಿನ ಯುಗದಲ್ಲಿ ಹೆಚ್ಚು ಮಕ್ಕಳನ್ನು ಹಡೆದರೆ ಸಂಸಾರವನ್ನು ನಿರ್ವಹಿಸುವುದು ಕಷ್ಟಕರ. ಆದ್ದರಿಂದ ಜನಸಂಖ್ಯೆಯ ನಿಯಂತ್ರಣವನ್ನು ಮಾಡಬೇಕಾದುದು ನಮ್ಮೆಲ್ಲರ ಕರ್ತವ್ಯ. ಅಂದಿನ ಮೂರು ಮಕ್ಕಳನ್ನು ಹಡೆಯಬೇಕು ಎಂಬ ವಿಚಾರವನ್ನು ಬಾಳಪ್ಪನವರು ತಮ್ಮ ಈ ಕೆಳಗಿನ ಕವನದಲ್ಲಿ ವ್ಯಕ್ತಪಡಿಸಿದ್ದಾರೆ:

ಹರುಷದಿಂದ ಮಕ್ಕಳ ಪಡೆದು ಸಂತಾನ ಹೆಚ್ಚಿತು
ಮುತ್ತಿನಂಥ ಮೂರು ಮಕ್ಕಳ ಹಡೆದರ ಆಗುವುದು ಬಲು ಒಳಿತು
ಮಳೆ ಹುಳದಂಗ ಮನಿತುಂಬ ಹಡೆದರೆ ಯಾತಕ್ಕದು ಬಂತು
ಭೂಮಿಗದು ಭಾರವಾಯಿತು

ಬಾಳಪ್ಪನವರು ತಮ್ಮ ಕಾಲದಲ್ಲಿ ಎರಡು ಮಕ್ಕಳೆನ್ನದೇ ಮೂರು ಆದರೂ ಪರವಾಗಿಲ್ಲ ಎನ್ನುತ್ತಿದ್ದುದು ಈಗಿನವರಿಗೆ ಆಶ್ಚರ್ಯವೆನಿಸಬಹುದು. ಅಂದರೆ ದಿನದಿಂದ ದಿನಕ್ಕೆ ಮತ್ತು ಪೀಳಿಗೆಯಿಂದ ಪೀಳಿಗೆಗೆ ಮೌಲ್ಯಗಳು ಬದಲಾವಣೆಯಾಗುತ್ತವೆ ಎಂಬುದು ಗಮನಾರ್ಹ. ಬಾಳಪ್ಪನವರು ತಾವು ೦೩.೧೨.೧೯೬೯ ರಂದು ಬರೆದ ತಮ್ಮ ‘ಒಂದು ಎರಡು ಬೇಕು, ಮೂರು ಮಕ್ಕಳಾದರೆ ಸಾಕು’ ಎಂಬ ಹಾಡಿನಲ್ಲಿ ಕುಟುಂಬ ಯೋಜನೆಯ ಬಗ್ಗೆ ಮಾರ್ಮಿಕವಾಗಿ ಹೇಳಿದ್ದಾರೆ.

ಅರಿವೆ ಅಂಚಿಗೆ ಕೂಂಚಿಗೆ ಚಿಂತೆ
ಮುರುವು ಬುಗುಡಿ ಮಾಡಸುವ ಚಿಂತೆ
ಪರಕಾರ ಅಂಗಿ ಹೊಲಿಸುವ ಚಿಂತೆ
ಸರಕಾರ ಹೇಳುವುದು ತಿಳಿಕೊಳ್ಳು ಚಿಂತೆ
ತೆಲಿಗೆ ಎಣ್ಣೆ ಬೆಣ್ಣೆ ಚಿಂತೆ
ಉಪ್ಪು ಮೆಣಸಿನಕಾಯಿ ತರುವ ಚಿಂತೆ
ಸೊಪ್ಪು ಪಲ್ಯಾ ತರುವ ಚಿಂತೆ
ತುತ್ತು ಅನ್ನ ಅನಗಾಲದ ಚಿಂತೆ
ಬಟ್ಟೆ ಬರೆ ಹೊಟ್ಟೆಯ ಚಿಂತೆ
ಮೊಟ್ಟ ಮೊದಲ ರೊಟ್ಟಿಯ ಚಿಂತೆ
ಚಿಟ್ಟನೆ ಚಿರುವ ಮಕ್ಕಳ ಚಿಂತೆ
ಹೆಂಡತಿ ಬಂದು ಹಣಿಯುವ ಚಿಂತೆ
ಹಬ್ಬ ಹುಣ್ಣಿವೆ ನಿಬ್ಬಣ ಚಿಂತೆ
ಮದುವೆ ಮುಂಜಿವೆ ಮಾಡುವ ಚಿಂತೆ
ಕುಟುಂಬ ಯೋಜನೆಯ ಸುದ್ಧಿ ಕೇಳು
ಹಾಳಾಗುವ ಮುಂಚೆ
,
ಬಾಳು ಬಂಗಾರವಾಗಿ
,
ನಂದನವನವಾಗಿ
,
ಬಾಳಪ್ಪನ ಹಾಡ ಕೇಳಿ
,
ಕೆಂಪು ತ್ರಿಕೋನದ ಗುರುತಾಹಿಡಿ
,
ಆರತಿಗೊಬ್ಬಳು ಮಕ್ಕಳಿರಬೇಕು
,
ಕೀರುತಿಗೊಬ್ಬ ಮಗನಿರಬೇಕು
,
ಕೊಂಚ ಸಂಶಯ ಮಾಡದೆ ನಿಂತು
ಕುಟುಂಬ ಯೋಜನೆ ಮಾಡು ಇಂತು.

ಬಾಳಪ್ಪನವರು ತಮ್ಮ ಹಾಡಿನಲ್ಲಿ ಮುಂದಿನ ಪೀಳಿಗೆಯ ಜನರು ಬುದ್ಧಿವಂತರಾಗಬೇಕು ಎಂಬುದನ್ನು ಸ್ಫುಟವಾಗಿ ತಿಳಿಸಿದ್ದಾರೆ. ಅಂದರೆ ಅರ್ಥಪೂರ್ಣವಾದ ಜೀವನ ಎಲ್ಲರ ಸೊತ್ತಾಗಬೇಕೆಂದು ಅವರ ಕಳಕಳಿಯಾಗಿತ್ತು. ಈ ದಿಶೆಯಲ್ಲಿ ಅವರು “ಕಾಲ ಬದಲಿ ಆಗೈತಿ ಅದಕ್ಕ ತಕ್ಕಂಗ ಹೆಜ್ಜೆ ಹಾಕಬೇಕು. ಗಂಡರ ಆಗ್ಲಿ, ಹೆಣ್ಣಾರ ಆಗ್ಲಿ ಒಂದೆ. ಭಾಳಾದ್ರ ಎರಡು ಮುತ್ತಿನಂತಹ ಮಕ್ಕಳಾದರೆ ಸಾಕು. ಬಹಳ ಮಕ್ಕಳ್ನ ಹಡಕೊಂಡು ಫೇಚಾಡೊ ಕೆಲಸ ಯಾಕೆಬೇಕು” ಎಂದು ಕೇಳುತ್ತಾರೆ.

೬. ಶಿಕ್ಷಣ : ಈಗಾಗಲೆ ಹೇಳಿದಂತೆ ಬಾಳಪ್ಪನವರು ಒಂದೆ ಕ್ಷೇತ್ರಕ್ಕೆ ಮೀಸಲಾದ ವ್ಯಕ್ತಿಯಲ್ಲ. ಅವರು ಹಲವಾರು ಕ್ಷೇತ್ರದಲ್ಲಿ ತಮ್ಮ ಅನುಪಮ ಸೇವೆಯನ್ನು ಸಲ್ಲಿಸಿದ್ದಾರೆ. ಕೃಷಿ ಮತ್ತು ಕುಟುಂಬ ಯೋಜನೆಯ ಬಗ್ಗೆ ಹಳ್ಳಿಯ ಜನರಿಗೆ ತಿಳುವಳಿಕೆ ನೀಡಿದಂತೆ ಬಾಳಪ್ಪನವರು ಶಿಕ್ಷಣದ ಮಹತ್ವವನ್ನು ಮನದಟ್ಟಾಗುವಂತೆ ಹೇಳಿದ್ದಾರೆ. ‘ವಿದ್ಯೆಯಿಲ್ಲದಿದ್ದರೆ ಬಾಳಿಗೆ ನೆಲೆಯಿಲ್ಲ’ ಎಂಬ ವಿಷಯವನ್ನು ಅನಕ್ಷರಸ್ಥರಿಗೆ ಅವರು ಚಿಕ-ಚಿಕ್ಕ ಕಥೆ, ಗಾದೆ, ಹಾಡು ಮತ್ತು ದೃಷ್ಟಾಂತಗಳ ಮೂಲಕ ಹೇಳುತ್ತಿದ್ದರು. ಬಾಳಪ್ಪನವರು ಶಿಕ್ಷಣದ ಮಹತ್ವವನ್ನು ತಮ್ಮ ಹಾಡುಗಳ ಮೂಲಕವೂ ವ್ಯಕ್ತಪಡಿಸಿದ್ದಾರೆ:

ಕೇವಲ ದುಡ್ಡು ಗಳಿಸಿ
ದೊಡ್ಡ ಮನಿ ಕಟ್ಟಿಸಿ
ಒಡ್ಡಿನ ಹೊಲ ಹಿಡಿದು
ಬಡ್ಡಿ ವ್ಯವಹಾರ ಬೆಳಸಿ ಹೋದರೆ
ಹಿರಿಯರೆ ಕರ್ತವ್ಯ ಮಗಿಯಲಿಲ್ಲ
ಕಿರಿಯರಲ್ಲಿ ಶಿಕ್ಷಣ
, ಶೀಲ-ಸಂಪತ್ತು
ಧಾರ್ಮಿಕ ಭಾವ ಬೆಳೆಸಿ ಹೋಗಬೇಕು

ಬಾಳಪ್ಪನವರು ಇದೇ ವಿಚಾರವನ್ನು ಕೆಳಗಿನ ಮಾತುಗಳಲ್ಲಿ ಸಮರ್ಥಿಸಿಕೊಂಡಿದ್ದಾರೆ. “ಈ ಆಧುನಿಕ ಯುಗದ ಸುಖ ಸೌಕರ್ಯಗಳನ್ನು ಸವಿದು ಬದುಕಲು ಹಣ ಎಷ್ಟು ಮುಖ್ಯವೊ, ಶಿಕ್ಷಣವೂ ಅಷ್ಟೆ ಮುಖ್ಯ. ಒಂದು ರೀತಿಯಲ್ಲಿ ಹಣಕ್ಕೆ ಮೂಲ ಶಿಕ್ಷಣ ಎಂದು ಹೇಳಿದರೆ ತಪ್ಪಾಗಲಾರದು. ಮುನುಷ್ಯನ ಅಗಾಧವಾದ ಬೌದ್ಧಿಕ ಬೆಳವಣಿಗೆಯಿಂದ ಇಂದಿನ ಬೃಹತ್ ಯಂತ್ರಗಳ ನಿರ್ಮಾಣ ಸಾಧ್ಯವಾಗಿದೆ. ಹಾಗೆಯೆ ಅದರಿಂದ ಆರ್ಥಿಕ ಪರಿಸ್ಥಿತಿ ಬೆಳೆದು ಬಂದಿದೆ. ಜ್ಞಾನದಿಂದ ಸುಖ, ಸಜ್ಞಾನದಿಂದ ದುಃಖ, ಸುಜ್ಞಾನದಿಂದ ಪರಮಾನಂದ ಪ್ರಾಪ್ತಿ. ಜ್ಞಾನ, ಸುಜ್ಞಾನ, ವಿಜ್ಞಾನ ಯಾವುದಕ್ಕೂ ಶಿಕ್ಷಣ ಮೂಲ. ಶಿಕ್ಷಣ ಇವುಗಳೆಲ್ಲವುಗಳ ತಾಯಿಬೇರು. ಬೆಳ್ಳಿ, ಬಂಗಾರ, ದುಡ್ಡು, ಆಸ್ತಿ ಎಷ್ಟಿದ್ದರೂ ಶಿಕ್ಷಣವಿಲ್ಲದಿದ್ದರೆ ನಿರುಪಯುಕ್ತ. ಕುರುಡನ ಕೈಗೆ ಕನ್ನಡಿ ಕೊಟ್ಟ ಹಾಗೆ. ಭೌತಿಕ ವಸ್ತುಗಳನ್ನು ಪಡೆಯಲು ಹಣ ಎಷ್ಟು ಮುಖ್ಯವೊ ಮಾನಸಿಕ ತೃಪ್ತಿ, ಸಂತೋಷವನ್ನು ಪಡೆಯಲು ಶಿಕ್ಷಣವೂ ಅಷ್ಟೆ ಮುಖ್ಯ”.

೭. ದೇಶ ಸೇವೆ: ತಾತ್ವಿಕ ಹಿನ್ನಲೆಯಲ್ಲಿ ಬಾಳಪ್ಪನವರ ಜೀವನವನ್ಜು ಅವಲೋಕಿಸಿದರೆ ಅವರೊಬ್ಬ ದೇಶ ಸೇವಕ, ಭಾವ್ಯೆಕ್ಯದ ಕೊಂಡಿ ಹಾಗೂ ಅಪ್ಪಟ ದೇಶಾಭಿಮಾನಿ. ಭಾಳಪ್ಪನವರು ನಾಡು ಅಥವಾ ದೇಶ ಉಳಿದರೆ ನಾವೂ ಉಳಿದೇವೊ ಎಂಬ ವಿಚಾರದವರಾಗಿದ್ದರು. ಅವರು ಒಂದು ಹಳ್ಳಿ ಹೋದರೂ ಚಿಂತೆಯಿಲ್ಲ ಆದರೆ ದೇಶ ಉಳಿಯಬೇಕು, ಸಂಪದ್ಭರಿತವಾಗಿ ಬೆಳೆಯಬೇಕು ಎನ್ನತ್ತಿದ್ದರು. “ಮನುಷ್ಯ ದೇಶ ತನಗೇನು ಕೊಟ್ಟಿತು ಎನ್ನವುದಕ್ಕಿಂತ, ತಾನು ದೇಶಕ್ಕೆ ಏನು ಕೊಟ್ಟೆನು” ಎನ್ನಬೇಕು ಅನ್ನುವ ನಿಲುವು ಹೊಂದಿದ್ದರು.

ಬಾಳಪ್ಪನವರ ಜೀವನ ಸರಳವಾಗಿತ್ತು. ಅವರ ವಿಚಾರ ಕ್ರಾಂತಿಕಾರಕವಾಗಿತ್ತು. ಜನಪದ ಸಂಗೀತಗಾರರಾದ ಅವರು ಹೋದಲ್ಲಿ ಬಂದಲ್ಲಿ, ಸಭೆ-ಸಮಾರಂಭಗಳಲ್ಲಿ ಬ್ರಿಟಿಷರು ಭಾರತೀಯರ ಮೇಲೆ ಎಸಗುತ್ತಿದ್ದ ದೌರ್ಜನ್ಯವನ್ನು ಟೀಕಿಸುತ್ತಿದ್ದರು. ೧೯೩೦ರ ಸುಮಾರಿನಲ್ಲಿ ನಡೆದ ಕಾಯ್ದೆ ಭಂಗ ಚಳುವಳಿ (ಸಿವಿಲ್ ಡಿಸ್‌ಓಬಿಡಿಯನ್ಸ್) ಯಲ್ಲಿ ಬಾಳಪ್ಪನವರು ಭಾಗವಹಿಸಿ ಜನರನ್ನು ಬ್ರಿಟಿಷರ ವಿರುದ್ಧ ಹೋರಾಡಲು ಹುಮ್ಮಿಸಿದರು. ಅವರು ತಮ್ಮ ಲಾವಣಿ, ಭಾಷಣ ಮತ್ತು ಪ್ರಭಾತ ಫೇರಿಗಳ ಮೂಲಕ ಜನರನ್ನು ಹುರಿದುಂಬಿಸಿದರು. ಇದರಿಂದಾಗಿ ಬ್ರಿಟಿಷರ ಕಣ್ಣಿಗೆ ಬಿದ್ದ ಬಾಳಪ್ಪನವರು ಆರು ತಿಂಗಳು ಸೆರೆಮನೆಯನ್ನು ಕಂಡರು.

ಬಾಳಪ್ಪನವರ ಇನ್ನೊಂದು ವ್ಯೆಶಿಷ್ಟ್ಯವೇನೆಂದರೆ ಸಮಾಜದ ಸಮಕಾಲೀನ ಸಮಸ್ಯೆಗಳಗೆ ಸ್ಪಂದಿಸುವುದು. ತಮ್ಮ ಹಾಡುಗಾರಿಕೆಯ ಮೂಲಕ ಬಾಳಪ್ಪನವರು ಹೀಗೆ ಮಾಡಿದ ದೇಶಸೇವೆ ಅವಿಸ್ಮರಣೀಯವಾಗಿದೆ. ಬಾಳಪ್ಪನವರು ಎರಡನೆ ಮಹಾಯುದ್ಧದ ಕಾಲದಲ್ಲಿ ಮಹಾತ್ಮ ಗಾಂಧೀಜಿಯವರ ಆದೇಶದಂತೆ ಭಾರತೀಯ ಸೈನಿಕರು ಜಪಾನ್ ಸೈನ್ಯವನ್ನು ಸೋಲಿಸಲು ತಮ್ಮ ಹಾಡಿನ ಮೂಲಕ ಸ್ಫೂರ್ತಿ ನೀಡಿದರು. ೧೯೪೦ರ ಭಾರತ ಬಿಟ್ಟು ತೊಲಗಿರಿ ಎಂಬ ಚಳುವಳಿಯಲ್ಲಿ ಭಾರತೀಯರನ್ನು ಆಂಗ್ಲರ ವಿರುದ್ಧ ಎತ್ತಿ ಕಟ್ಟಿದರು. ೧೯೬೦ ಮತ್ತು ೧೯೭೦ರ ದಶಕದಲ್ಲಿ ಭಾರತದ ಮೇಲೆ ಪಾಕೀಸ್ತಾನ ಮತ್ತು ಚೀನಾ ದೇಶಗಳು ಆಕ್ರಮಣ ಮಾಡಿದಾಗ ಭಾರತೀಯ ಸೈನಿಕರು ಅವರನ್ನು ಸೋಲಿಸುವಂತೆ ಹುರಿದುಂಬಿಸಿದರು. ಈ ಸಂದರ್ಭದಲ್ಲಿ ಅವರು ಮಾಡಿದ ತ್ಯಾಗ ಅಭಿನಂದನೀಯ. ಅವರು ತಾವು ಪಡೆದ ಎಲ್ಲ ಬೆಳ್ಳಿ ಮತ್ತು ಚಿನ್ನದ ಪದಕಗಳನ್ನು ರಾಷ್ಟ್ರದ ನಿಧಿಗೆ ಸಮರ್ಪಿಸಿ ತಮ್ಮಲ್ಲಿದ್ದ ವಿಶೇಷವಾದ ದೇಶಭಕ್ತಿಯನ್ನು ತೋರಿಸಿದ್ದಾರೆ.

ಬಾಳಪ್ಪನವರ ದೇಶಾಭಿಮಾನ, ಶಿಸ್ತಿನ ಬದುಕು ಹಾಗೂ ಕಷ್ಟದ ದುಡಿಮೆ ಮುಂದಿನ ಪೀಳಿಗೆಗೆ ಮಾದರಿಯಾಗಿದೆ. ಅವರ ಜೀವನ, ಸಂಗೀತ ಸಾಧನೆ ಮತ್ತು ದೇಶ ಸೇವೆಯನ್ನು ಅವರ ಅಭಿಮಾನಿ ಎಸ್.ಎಂ. ಹರದಗಟ್ಟಿಯವರು ಕೆಳಗಿನ ಶಬ್ದಗಳಲ್ಲಿ ವಿವರಿಸಿದ್ದಾರೆ:

“ಸಮಾಜದ ಸಮಕಾಲೀನ ಸಂದರ್ಭಗಳಿಗೆ ಅನುಗುಣವಾಗಿ ಹಾಡುಗಾರಿಕೆಯ ಮೂಲಕ ಬಾಳಪ್ಪನವರು ಸಲ್ಲಿಸಿರುವ ಸೇವೆ ಅವಿಸ್ಮರಣೀಯವಾದುದು. ಎರಡನೆ ಮಹಾಯುದ್ಧದ ಸಮಯ (೧೯೩೫-೪೫)ದಲ್ಲಿ ಸ್ವಾತಂತ್ರ‍್ಯಪೂರ್ವ ಭಾರತದ ಬ್ರಿಟಿಷ್ ಸರಕಾರದ ಪರವಾಗಿ ಮಾಡಿದ ಕಾರ್ಯಕ್ಕಾಗಿ ಅವರಿಗೆ ಆಂಗ್ಲ ಸರಕಾರ ನೀಡಿದ ವಿಶೇಷಗೌರವಾದರಗಳನ್ನು ಈ ಸಂದರ್ಭದಲ್ಲಿ ತಪ್ಪದೆ ಸ್ಮರಿಸಬೇಕು. ಸ್ವಾತಂತ್ರ‍್ಯನಂತರದಲ್ಲಿ ಭಾರತ ಸರಕಾರ ಹಾಗೂ ರಾಜ್ಯ ಸರಕಾರಗಳ ಪರವಾಗಿ ರಾಷ್ಟ್ರೀಯ ಅಭ್ಯುದಯಪರ ವಿಚಾರಗಳನ್ನು ಲಕ್ಷ್ಯದಲ್ಲಿರಿಸಿಕೊಂಡು ಬಾಳಪ್ಪನವರು ಅನುಪಮ ಸೇವೆ ಸಲ್ಲಸಿದರು. ೧೯೪೩ ರಿಂದ ೧೯೫೪ ರ ವರೆಗೆ ವ್ಯಯಸಾಯ ಇಲಾಖೆಯ “ಪ್ರಚಾರ ಕಾರ್ಯ ನಿರ್ವಾಹಕ”ರಾಗಿ ಮಿತಕುಟುಂಬ ಯೋಜನೆ ಮುಂತಾದ ಮಹತ್ವಪೂರ್ಣ ಯೋಜನೆಗಳ ಯಶೋಭಿವೃದ್ಧಿಗಾಗಿ ಹಗಲಿರುಳೂ ಶ್ರಮಿಸಿದ ಅವರ ಪರಿಶ್ರಮ ನಿಜವಾಗಿಯೂ ಅಭಿನಂದನೀಯ. ಭಾರತದ ಸ್ವಾತಂತ್ರ‍್ಯ ಸಾಧನೆ, ಭಾರತದ ಮೇಲೆ ಅನ್ಯದೇಶಗಳ ಆಕ್ರಮಣ ಮುಂತಾದ ಪ್ರಸಂಗಗಳಲ್ಲಿ ಎಲ್ಲರಿಗಂತಲೂ ಮುಂದೆ ನಿಂತು ವೀರೋಚಿತ ವಾಣಿಯಿಂದ ದೇಶಭಕ್ತಿ, ದೇಶಪ್ರೇಮ ಗೀತೆಗಳನ್ನು ಹಾಡಿ ನಾಡಿನ ಯುವಕರಲ್ಲಿ ಹುರುಪು, ಉತ್ಸಾಹ, ಕಾರ್ಯತ‌ತ್ಪರತೆ, ದೇಶಾಭಿಮಾನಗಳನ್ನು ತುಂಬುವಲ್ಲಿ ಅವರು ತೋರಿದ ನಿಷ್ಠೆಯು ಅವರ ಅಚಲ ದೇಶಾಭಿಮಾನ, ದೇಶಭಕ್ತಿಗಳ ದ್ಯೋತಕವಾದದ್ದು, ತಾವು ಗಳಿಸಿದ್ದ ಅದೆಷ್ಟೋ ಬೆಳ್ಳಿಬಂಗಾರದ ಪದಕಗಳನ್ನು ೧೯೬೨ರ ಸುಮಾರಿಗೆ ರಾಷ್ಟ್ರೀಯ ರಕ್ಷಣಾ ನಿಧಿಗೆ ಸಮರ್ಪಿಸಿ ತಮ್ಮಲ್ಲಿದ್ದ ವಿಶೇಷವಾದ ದೇಶಭಕ್ತಿಯನ್ನು ಅವರು ವ್ಯಕ್ತಪಡಿಸಿದ್ದುಂಟು.”

ಹೀಗೆ ಬಾಳಪ್ಪನವರು ತಮ್ಮ ಜನಪದ ಗಾಯನದ ಮೂಲಕ ದೇಶಸೇವೆಯನ್ನು ಮಾಡಿದರು. ಅವರು ತಮ್ಮ ಹಾಡಿನ ಮೂಲಕ ನಾಡಿನ ಜನರಿಗೆ ಕಲೆ, ಸಂಗೀತ, ಜನಪದ ಸಾಹಿತ್ಯ ಮತ್ತು ಸಂಸ್ಕೃತಿ, ಮಿತಸಂತಾನ, ಶಿಕ್ಷಣದ ಮಹತ್ವ ಮತ್ತು ದೇಶಸೇವೆಗಳ ಬಗ್ಗೆ ಅರಿವನ್ನುಂಟು ಮಾಡಿದ್ದರು. ಬಾಳಪ್ಪನವರ ಬದುಕು ಧೀಮಂತವಾಗಿದೆ, ಮಾದರಿಯಾಗಿದೆ ಮತ್ತು ಅರ್ಥಪೂರ್ಣವಾಗಿದೆ.