‘ದೇಶ ತನಗೆ ಏನು ಕೊಟ್ಟಿತು ಎನ್ನವುದಕ್ಕಿಂತ ದೇಶಕ್ಕೆ ತಾನು ಏನು ಸೇವೆ ಮಾಡಿದ್ದೇನೆ’ ಎನ್ನುವುದು ಮುಖ್ಯ. ಸಾಮಾನ್ಯವಾಗಿ ಇಂದಿನ ಜನರಲ್ಲಿ ಸ್ವಾರ್ಥ, ಮತ್ಸರ ಹಾಗೂ ವೈರತ್ವದ ಭಾವನೆಗಳೇ ಜಾಸ್ತಿ. ಜನ ತಮ್ಮ ಏಳಿಗೆಯನ್ನು ತಾವೆ ಹಾಳು ಮಾಡಿಕೊಳ್ಳುವಷ್ಟು ಸ್ವಾರ್ಥಿಗಳಾಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ನಿಸ್ವಾರ್ಥವಾಗಿ ದೇಶ ಸೇವೆಯನ್ನು ಯಾರು ಮಾಡಬೇಕು. ಆತಂಕ ಬೇಡ. ಅಂಥವರು ಇನ್ನೂ ಇದ್ದಾರೆ. ಅವರು ಸದಾ ದೇಶ ಸೇವೆಯನ್ನು ಒಂದಲ್ಲ ಒಂದು ರೂಪದಲ್ಲಿ ಮಾಡುತ್ತಾರೆ.

ಇಂಥ ಕಾಯಕ ಯೋಗಿಗಳ ಪಂಗಡಕ್ಕೆ ಬಾಳಪ್ಪ ಹುಕ್ಕೇರಿಯವರು ಸೇರುತ್ತಾರೆ, ಇದಕ್ಕೆ ಅವರ ದೇಶಾಭಿಮಾನ, ಕಾಯಕ ನಿಷ್ಠೆ ಹಾಗೂ ತನು-ಮನ-ಧನ ಸೇವೆಯನ್ನು ವ್ಯಕ್ತಪಡಿಸುವ ಅವರ ಕವನ ‘ಹಿಂದೂಸ್ಥಾನಕ ಎಂಥವಬೇಕ’ ಸಾಕ್ಷಿಯಾಗಿದೆ:

ಹಿಂದೂಸ್ಥಾನಕ ಎಂಥವ ಬೇಕ | ಬಿ. ಎ. ಜಿ.ಪಾಸಾಗಿರಬೇಕು |
ಮೋಟರ ಕಾರೊಂದ ಎನಗಿರಬೇಕ
|
ಹೆಂಡತಿ ಬಲಗಡೆ ಕುಂತಿರಬೇಕ
|
ಕಾರನು ಕಾಂತೆಯು ನಡೆಸಲುಬೇಕ
|
ಕನ್ನಡ ಬಾವುಟ ಮುಂದಿರಬೇಕ
|
ಹರುಷದಿ ಕನ್ನಡ ಹಾಡಲುಬೇಕ
|
ಹಾಡುವ ಮೋಟಾರ ಓಡಲಿಬೇಕ
|
ಮಮತೆಯ ತೋಟ ಮುಟ್ಟಿರಬೇಕ
|
ತೋಟದಿ ಮೂಡಲ ಎತ್ತಿರಬೇಕ
|
ಕೃಷ್ಣಾ ತೀರದ ಆಕಳಿರಬೇಕ
|
ಬೆಳಗಾಂವ ನಾಡಿನ ಎಮ್ಮಿರಬೇಕ
|
ಹಣೆಚಿಕ್ಕ ಹೂವ ಬಾಲ ಕ್ವಾಣಿರಬೇಕ
|
ಅಯಿಕ್ಕರೊಯಕ್ಕ ಅಂತಿರಬೇಕು
|
ಹೊಳಿದಂಡಿಮ್ಯಾಲ ಹೊಲವಿರಬೇಕ
|
ಎಂಟರರೆಂಟಿ ಹೂಡಿರಬೇಕ
|
ಬಂಟ ಹುಡುಗನ ಹೊಡಿತಿರಬೇಕ
|
ಕರಕಿನಟ್ಟ ಕೀಳತಿರಬೇಕ
|
ಕೆನಿಕೆನಿ ಮೊಸರ ರೊಟ್ಟಿರಭೇಕ
|
ನುಚ್ಚು ಮಜ್ಜಿಗೆ ಹೊಡೆಯಲಿ ಬೇಕ
|
ಮೀಶಿ ಮ್ಯಾಲ ಕ್ಯೆನಾ ಹಾಕಲಿಬೇಕ
|
ಹೆಂಡತಿ ಕುಲುಕುಲು ನಗುತಿರಬೇಕ
|
ಹಳ್ಳಿ ಆಳಿನಾ ಹುರುಪಿರಬೇಕ
|
ಹುಡುಗರು ಕುಣಿಕುಣಿದಾಡಲು ಬೇಕ
|
ಹುರುಪನು ತುಂಬುವ ಪದವಿರಬೇಕ
|
ಹುಕ್ಕೇರಿ ಬಾಳಪ್ಪ ಹಾಡಿರಬೇಕ
|

ಜನರು ಈ ಹಾಡನ್ನು ಬಾಳಪ್ಪನವರೆ ಬರೆದಿದ್ದಾರೆಂದು ನಂಬಿದ್ದಾರೆ. ಆದರೆ ಈ ಹಾಡು ಅವರದಲ್ಲ.

ಸ್ತ್ರೀಯರ ಶೋಷಣೆಯನ್ನು ಕಂಡು ಮನನೊಂದ ಬಾಳಪ್ಪನವರು ಸ್ತ್ರೀಯರು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಮುಂದುವರೆಯಬೇಕು ಎನ್ನುತ್ತಿದ್ದರು. ಸಂಸ್ಕೃತದ ಸುಭಾಷಿತ “ಯತ್ರ ನಾರ್ಯಸ್ತು ಪೂಜ್ಯಂತೆ | ತತ್ರ ರಮಂತೆ ದೇವತಾ” | ಅಂದರೆ ಎಲ್ಲಿ ನಾರಿಯರು ಗೌರವದಿಂದ ಕಾಣಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲಸುತ್ತಾರೆ ಎಂಬ ವಾಣಿಯನ್ನು ಅವರು ತಮ್ಮ ಕೃತಿಯಲ್ಲೂ ಅಳವಡಿಸಿಕೊಂಡಿದ್ದರು.

ಅವರ ಕವನ ‘ಕುಟುಂಬ ಯೋಜನೆ’ಯಲ್ಲಿ ಬಾಳಪ್ಪನವರು ಸ್ತ್ರೀಯರು ಕುಟುಂಯೋಜನೆಯ ಮಹತ್ವ ಅರಿತುಕೊಂಡು ಮಿತ ಸಂತಾನ ಹೊಂದಬೇಕಲ್ಲದೆ, ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು ಎಂದಿದ್ದಾರೆ. ಬಾಳಪ್ಪನವರು ಕಲಿತ ಸಬಲ ನಾರಿಯ ಜೀವನವನ್ನು ಸಮೃದ್ಧವಾಗಿಸಬಲ್ಲಳು ಎನ್ನತ್ತಾರೆ. ಅವರ ಪ್ರಕಾರ

ಸಪಲವಾಗಲಿ ನಮ್ಮ | ವೀರನಾರಿಯರ ಜನ್ಮ ||
ಸಫಲವಾಗಲಿ ನಮ್ಮ
| ಕೈ ಕೊಂಡ ಸ್ತ್ರೀ ಧರ್ಮ ||
ಕಾನನದಿ ತಪಗೈದ
| ವದೂಷಿ ಮೈತ್ರಿಯ ಜನ್ಮ ||
ಮೌನದಲಿ ಮಿಗಿಲಾದ
| ದ್ರೌಪದಿಯ ಜನ್ಮ ||
ಹೀನತೆಯ ಹಿಂಗಿಸುವ
| ನೆಹರೂ ಕಮಲೆಯ ಜನ್ಮ ||
ಜ್ಞಾನವನು ಹಂಬಲಿಪ
| ಈ ನಮ್ಮ ಸ್ತ್ರೀ ಜನ್ಮ ||
ವೀರ ಆಭಿನ್ಯುವಿನ
| ಪಡೆದ ತಾಯಿಯ ಜನ್ಮ ||
ಧೀರ ಲವಕುಶರುಗಳ
| ಹಡೆದವಳ ಜನ್ಮ ||
ಶೂರ ಪುಲಕೇಶಿ ವಿಕ್ರಮೆರ
| ಜನನಿಯ ಜನ್ಮ ||
ಧೀರ ಅನುಜರ
| ಬೇಡುವ ನಮ್ಮ ಸ್ತ್ರೀ ಜನ್ಮ
ಪಡುವಲದ ನಾರಿಯರ
| ಸ್ವಾತಂತ್ರ‍್ಯದಾ ಜನ್ಮ||
ಮೂಡಲ ಮಾತೆಯರ
| ಮೂಢಧರ್ಮ ಜನ್ಮ ||
ನಾಡನೆಲೆಗನುರೂಪವಾಗಿರುವ
| ಧರ್ಮವನು
ಬೇಡುತಿಹ ಅಕ್ಕನ ಬಳಗದ ಜನ್ಮ
ಬೆಳೆಯುತಿಹ ಭಾರತದ
| ಜನಸಂಖ್ಯೆಯ ತಡೆಯುದಕೆ ||
ಹತ್ತು ಹಡೆಯುವದಕ್ಕಿಂತ
| ಒಂದೆ ಮುತ್ತು ಹಡೆದರೆ ಸಾಕು ||
ದೇಶವನು ಬೆಳೆಸುವ
| ದಾಂಪತ್ಯ ಜೀವನ ||
ಲೇಸಾಗಿ ಇರಿಸುವ
| ನಮ್ಮ ನಾರಿಯರ ಜನ್ಮ ||

ಸ್ವತಃ ತಾವೆ ಮಿತಸಂತಾನವನ್ನು ಪಾಲಿಸದಿದ್ದರೂ ಬಾಳಪ್ಪನವರು ಮಿತಸಂತಾನದ ಮಹತ್ವವವನ್ನು ಸಾಮಾನ್ಯ ಜನರಿಗೆ ಮನದಟ್ಟಾಗುವಂತೆ ಮಾಡುವಲ್ಲಿ ಪ್ರಖ್ಯಾತರಾಗಿದ್ದರು. ಅವರ ಈ ಕೆಳಗಿನ ತಲೆಬರಹವಿಲ್ಲದ ಕವನ ಅವರ ಪ್ರಕಾರ ಸಾಮರ್ಥ್ಯವನ್ನು ಮಾರ್ಮಿಕವಾಗಿ ಪ್ರತಿಬಿಂಬಿಸುತ್ತದೆ:

ಒಂದು ಎರಡು ಬೇಕು
ಮೂರು ಮಕ್ಕಳಾದರೆ ಸಾಕು

ಜೀವನವೆಂಬ ಓಟದಲ್ಲಿ ಊಟ (ಆಹಾರ) ಹಾಗೂ ಆಟ (ಸಾಧನೆ) ಬಹಳ ಮಹತ್ವದವು. ಜನ್ಮ ಸಾರ್ಥಕವಾಗಬೇಕಾದರೆ, ಪ್ರತಿಯೊಬ್ಬನು ತಮ್ಮ ಪಾಲಿನ ಊಟ ಮಾಡುವಂತೆ ತಮ್ಮ ಪಾಲಿನ ಕೆಲಸ (ಆಟ)ವನ್ನು ಮಾಡಬೇಕು. ದುಡಿಯದೆ ಉಣ್ಣುವ ಹಕ್ಕು ಯಾರಿಗೂ ಇಲ್ಲ.

ಪ್ರಸ್ತುತ ಕವನ ‘ಕರ್ನಾಟಕದ ಅಡುಗೆಯ ವಿಧಾನ’ ದಲ್ಲಿ ಊಟ ಪ್ರಿಯರಾದ ಬಾಳಪ್ಪನವರು ಕರ್ನಾಟಕದ ಅಡುಗೆಯ ವಿಧಾನ, ವಿವಿಧ ತರಹದ ಅಟುಗೆಗಳು, ಊಟದ ಶುಚಿ-ರುಚಿ ಮತ್ತು ವಿವಿಧ ತರಕಾರಿ ಹಾಗೂ ಹಣ್ಣು ಹಂಪಲುಗಳ ಬಗ್ಗೆ ವರ್ಣನೆ ಮಾಡಿದ್ದಾರೆ:

ಉಪ್ಪಿನಕಾಯಿ ಸೆಂಡಿಗೆಯ ಚಟ್ನಿಯು |
ಲಿಂಬೆಯ ಹೋಳು ತಂಬೂಳಿ
|
ಹಪ್ಪಳಾ ಉಪ್ಪು ಬಪ್ಪುವಳಗಾಯ್ಗಳು
||
ಪಲ್ಲಿಯು ಸಾರು ಮಜ್ಜಗೆ
ಒಪ್ಪುವ ಸಾರು ಗುಗ್ಗರಿ ಕೋಸಂಬರಿ
|
ಜುಣ್ಣಕ ಬೇಳೆ ಪಲ್ಲಿಗಳ
||
ಸಪ್ಪನ ಬ್ಯಾಳಿ ಚಲೋಹುಳಿ ಪಲ್ಲೆಯು
||
ಬಾಡಿಸಿ ಕೊಳ್ಪಕಾಯಿ ರಸಗಳ್
||
ಅವರಿ ಕುಂಬಳ ಹೀರಿ ಹಾಗಲು
|
ತೊಂಡಿಕಾಯಿ ಮುಳ್ಗಾಯಿ
||
ಪಡುವಲ ತೋಟಲ ಬಾಳೆಯತ್ತಿ
|
ಚೊಗಚಿ ಕಾಡ್ಗಾಯಿ ಬೆಳಾಳ್ಗಾಯಿಗಳ್
||
ಸವತಿ ನಿಂಬೆಯು ಪಂಡರಿಹಲಸು
|
ಬೆಂಡಿಕಾಯಿ ಹಾಲ್ಗುಂಬಳ್
||
ಚವಳಿ ನುಗ್ಗಿಯ ಕಾಯಿ ಕಾಯಿಪಲ್ಲೆಗಳ
|
ಬಲಸೀಯಾಗಿ ತಾವಿರ್ಪವು
||
ಉಳ್ಳಿಗಡ್ಡಿಯು ಗಜ್ಜರಿ ಗೆಣಸು
|
ಕ್ಯಾಬೀಜಾ ಸುವರ್ಣಗಳು
||
ಆಲೂಗೆಡ್ಡೆಯು ಕೋಸುಗೆಡ್ಡೆಯೂ
|
ಕೆಳಲಿ ಮುಲಂಗಿ ಬಲೆ ಗಡ್ಡಿಗಳ
||
ಬಾಳೆದಿಂಡು ಕರಂಡಿ ಗಡ್ಡೆಗಳು
||
ಮೂಡ್ಲಿಗಡ್ಡೆ ಪಲ್ಲೆಯು
||
ಬಾಳಾಕ್ಷಿವರ ಮೂಲಗಳು
||
ನವಲಕೋಲ ಸ್ವಾದ ಸಂಪೂರ್ಣವು
||
ಲಿಂಬೇ ಕಾಯಿಯ
| ಕಂಚೀಕಾಯಿಯ ||
ಅಂಬೀ ಹಳದಿಯ
| ನೆಲ್ಲಿ ಕಾಯಿಯ ||
ಹಂಬಲದ ಮಾಗಾಯಿ ಮೆಕ್ಕೆಯ
|
ಮೆಣಸಿನ ಕಾಯಿಗಳ
||
ಲಂಬಮಾಗಣಿ ಬೇರು
| ಮೇಲಾಡಂಬರದ ||
ಖಾರ‍್ಗೆಣಸಗಳಿಂದ
||
ಉಂಬ ಉಪ್ಪಿನಕಾಯ್ಗಿಗಳನು
| ಮನದುಂಬ ತಿನ್ನವುದೂ || “

ಜೀವನ ಅರ್ಥಪೂರ್ಣವಾಗಬೇಕಾದರೆ ಮನುಷ್ಯ ಶಿಸ್ತು, ಶಾಂತಿ, ಸರಳತೆಯನ್ನು ರೂಢಿಸಿಕೊಳ್ಳಬೇಕೆಂಬುದನ್ನು ಬಾಳಪ್ಪನವರ ಕೆಳಗಿನ ಕವನ ‘ಕಟ್ಟೆಯ ಮ್ಯಾಲ ನಡಿಯಿರೋ’ ಪ್ರತಿಬಿಂಬಿಸುತ್ತದೆ:

ಕಟ್ಟಿಮ್ಯಾಲ ನಡೆಯಿರೋ ಅಣ್ಣಾ
ಕಟ್ಟಿಮ್ಯಾಲ ನಡಿಯಿರೋ
ಕಟ್ಟಿಬೆಟ್ಟ ತಳಗ ನಡದರ ನೀವು ಪೆಟ್ಟು ತಿನ್ನವಿರೋ
ಒಟ್ಟಾಗಿ ಹೋಗತಿರಿ ಸಿನಿಮಾಕ ಬಿಟ್ಟ ಕೂಡಲೆ
ಬರ‍್ತಿರಿ ಸಿಟಿ ಮೋಟ್ಯಾರಕ
ಮಟ್ಟಮೊದಲ ನೋಡಿರಿ ಎಡಬಲಕ
ಕಟ್ಟಿ ಹತ್ತಿ ನಡೆಯಿರಿ ಮುಂದೆ ಸಾಗುದಕ
ಸ್ಕೂಟರ್ ಹತ್ತಿ ಹೊಡೀತೀರಿ ಸ್ಪೀಡಿನಲೆ
ಟ್ರಕ್ ಬರತಾವ ಬಲು ದೂರಿನಲಿ

ಮಕ್ಕಳ ಎತಕೊಂಡ ಹೆಂಡತಿ ಕುಂತಿರತಾಳ
ಪಕ್ಕನೆ ಸೈಯಿಡ್ ತಪ್ಪಿ ಬಿದ್ದರ
ಸಿಕ್ಕ ಸಾಯಿಯುವಿರಿ ಎಚ್ಚರಣ್ಣ
ತಳಕ ಬಿದ್ದ ಹೋಗ್ತೀರಿ ರಸ್ತೆಯ ಮೇಲೆ

ಹೆಣ್ನ ಮಕ್ಕಳ ಬಂದರ ಹಾದಿ ಕೊಡಬೇಕ ಅವರಿಗೆ
ಅತ್ತ ಇತ್ತ ನೋಡುವಾಗ ಕಾಲಾಗ
ಹಣ್ಣಿನ ಸಿಪ್ಪ ಸಿಕ್ಕರ ಪೆಟ್ಟ ಹತ್ತಿ ಬೀಳತೀರಿ ನೆಲಕ
ಶಿಸ್ತಿನಿಂದ ನಿಂತ ನಮ್ಮ ಪೋಲಿಸರಾ ಸೀಟಿಹಾಕಿ ತಿಳಿಸತಾರ
ರಸ್ತೆಯಿಂದ ದಾರಿ ನಿಮಗೆ

ಸೂಟು ಹಾಕಿಕೊಂಡು ಮಾಟಾಗಿ ಹೋಗುವಾಗ
ಸಾಯಿಡ್ ತಪ್ಪಿನಡೆದಲ್ಲಿ ಸೊಂಟ ಮುರಿಯುವರು ಅಲ್ಲಿ

ದಿನಾಂಕ ೧೬.೧೦.೧೯೮೬ ರಂದು ಬೆಂಗಳೂರಿನಲ್ಲಿ ನಡೆದ “ದಾಕ್ಷಿಣಿ’ ಸಂಗೀತ-ಸಂಸ್ಕೃತಿ ಕಾರ್ಯಕ್ರಮದಲ್ಲಿ ಬಾಳಪ್ಪನವರು ಹಾಡಿದ ಕೆಳಗಿನ ಈ ಕವನ, ಅವರ ಸಾಹಿತ್ಯ-ಸಂಸ್ಕೃತಿಯ ಅಭಿಮಾನವನ್ನು ಹಾಗೂ ದೇಶಾಭಿಮಾನ ಮತ್ತು ಭಾವೈಕ್ಯತೆಯನ್ನು ಪ್ರತಿಬಿಂಬಿಸುತ್ತದೆ.

ದಕ್ಷಿಣ ಕನ್ನಡ ನಾಡಿನ ರಕ್ಷಣೆ
ಭಾರತ ದೇಶದ ಭವ್ಯ ಪರಂಪರೆ
ಐಕ್ಯತೆ ಮಾಡುವ ರಕ್ಷಣೆ
|| ||
ಎಲ್ಲ ಭಾಷೆಗಳ ಎಲ್ಲ ಪ್ರಾಂತಗಳ
ಬಲ್ಲಿದ ಕಲಾವಿದರು ಬಂದಿಹರಿಲ್ಲಿ
ಚೆಲ್ಲುವರಿದು ಹಾಡಿದರು ಇಲ್ಲಿ
ಮಲ್ಲಿಗೆ ಪರಿಮಳ ಹರಡಿತು ಇಲ್ಲಿ
|| ||
ಸುಂದರವಾದ ಪರಿಸರದಲ್ಲಿ
ಮಂದಾರವಾದ
, ಮಂಜುಳ ಸ್ವರದಿ
ಬಂದೂರವಾದ ಈ ಕಲಾಕೃತಿ
ಬೆಂಗಳೂರಿನ ಈ ಅಂಗಳದಲ್ಲಿ
|| ||
ಲಲಿತ ಕಲೆಗಳ ಸುಲಲಿತವಾಗಿ
ಕುಲುಕುಲು ನಗುವ ನಯನ ಮನೋಹರ
ನೃತ್ಯ ಸಂಗೀತ ವಾದ್ಯಗಾರರು ಇಂದು
ಸಾಕಣ ದೇಶ ಜನರನ್ನು ಸ್ವಾಗತಿಸಿಹರೆಂದು
|| ||
ಶೃಂಗ ಸಭೆಯು ಬೆಂಗಳೂರಿನಲಿ ಇಂದು
ವಿಧಾನ ಸೌಧದಿ ಸಮಾವೇಶಗೊಂಡು
ಬಂಗಾರದಂಥ ಪ್ರಧಾನ ಮಂತ್ರಿ ರಾಜೀವ ಗಾಂಧಿಯವರಿಂದು
ಬಂದಿಹರು ಕರ್ನಾಟಕ ರಾಜ್ಯಕಿಂದು
|| ||
ದಾಕ್ಷಿಣ ಕನ್ನಡ ನಾಡಿನ ರಕ್ಷಣೆ
ಭಾರತ ದೇಶದ ಭವ್ಯ ಪರಂಪರೆ
ಐಕ್ಯತೆ ಮಾಡುವ ರಕ್ಷಣೆ

ತಲೆಬರಹವಿಲ್ಲದ ಅನೇಕ ಕವನಗಳು ಬಾಳಪ್ಪನವರ ದಿನಚರಿಗಳಲ್ಲಿವೆ. ಅಂತಹವುಗಳಲ್ಲಿ ಕೆಳಗಿನ ಅವರ ಕವನ ಪ್ರತಿಯೊಬ್ಬ ನಾಗರಿಕನು ಕಾಯಕಯೋಗಿ, ಸರಳ ಜೀವಿ ಮತ್ತು ದೇಶಸೇವಕನಾಗಬೇಕೆಂಬುದನ್ನು ಒತ್ತಿ ಹೇಳುತ್ತದೆ.

ನವಯುಗ ಶಾಂತಿ ಗಾಂಧಿ ರಚಿಸದಾ
ಭಾರತದಿ ನಿಜಶಾಂತಿ
|| ||
ತೊರೆಯುತ ಚಿಂತಿ ಮಾಡಿದ ಕ್ರಾಂತಿ
ಸತ್ಯಾಗ್ರಹದ ಸಂತಿ
ನೆಹರು ನೇತಾ ಲೋಕ ವಿಖ್ಯಾತ
|
ಭಾರತ ಮನ ಸಂಕ್ರಾಂತಿ
ಏಳಿರಿ ಬೇಗ ದುಡಿಯಿರಿ ಈಗ
ಮಾಡಿರಿ ಸ್ವಾರ್ಥ ತ್ಯಾಗ
ಸ್ವರ್ಗ ಭೋಗ
| ಮುಂದಿಹುದೀಗ
ಬಿಡದಿರಿ ನಾಡನುರಾಗ
ನೆಹರು ನಮ್ಮ ದೇವರು ಎಂದು
ನಡೆದರೆ ಕಾಂಬುದು ಸ್ವರ್ಗ
ಸತ್ಯವಂತ ಮೈಸೂರು ಮಂತ್ರಿಗಳು
ಜತ್ತಿಯವರು ನಮಗೀಗ ಒತ್ತಿ ಹೇಳುವ
|
ಮಾತು ಕೇಳಿದರೆ ಅದುವೆ ಸ್ವರಾಜ್ಯ ಭೋಗ
ನಡೆ ನಡೆ ಮುಂದೆ
| ಗಾಂಧಿ
ಯೋಗವಿದು ಓಡುತಿದೆ ಬಾ ಹಿಂದೆ
ಹೊಸ ಯೋಜನೆ ಗೈದಿದೆ ಸರಕಾರಾ
ಬಿಸಿಯಾಗಿದೆ ಭಾರತ ಉದ್ಧಾರಾ
ಕಾರ್ಯನಿರತಾ ಸಾಗು ಸತತಾ
ದಡಿಮೆಯೊಳಡಿಯಿಡು ನೀ ಮುಂದೆ
||
ಏಳಿರಿ ಬೇಗ ಧ್ಯೆರ್ಯದೊಳಗೆ
ನಾಡಿಗೆ ಮಾಡಿರಿ ಸ್ವಾರ್ಥತ್ಯಾಗ
ಕರ್ಮಯೋಗ ಸ್ವರ್ಗದ ಭೋಗ
ಸೌಖ್ಯವು ಜನ ಒಂದಾದಾಗ
ನೆಹರು ನಮ್ಮ ನಾಯಕನೆಂದು
ದೇಶ ಸೇವೆ ಮಾಡಿರಿ ಬೇಗನೆ ಎಂದು.

ಶಿಶುನಾಳ ಷರೀಫ ಸಾಹೇಬರ, ದಾಸರ ಹಾಗೂ ಶರಣರ ಸಾಹಿತ್ಯ-ಸಂಗೀತದಿಂದ ಪ್ರಭಾವಿತರಾದ ಬಾಳಪ್ಪನವರು ‘ಪ್ರತೀಕ’ (Symbolic) ಕಾವ್ಯದ ಮಾದರಿಯಲ್ಲಿ ‘ಕಂಬಳಿ’ಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹಿಮೆಯನ್ನು ಕೆಳಗಿನ ಕವನದಲ್ಲಿ ವ್ಯಕ್ತಪಡಿಸಿದ್ದಾರೆ:

ಕಂಬಳಿ ಕೊಂಡ ಕೊಂಡೆನೋ ನಾನೊಂದು
ಹಾಲುಮತದೊಳ ಹುಟ್ಟಿದ ಕಂಬಳಿ
|
ಜೇಲಿನೊಳಗೆ ಜಾಕ್ವಿ ಮಾಡಿದ ಕಂಬಳಿ
ಶಾಲು ಸರಿಸಿದ ಕಂಬಳಿ
|
ಕುರುಬರ ಮನೆಯೋಳು ಹುಟ್ಟುವ ಕಂಬಳಿ
ಮರಿಯ ಉಣ್ಣೆಯ ಕರಿಯ ಕಂಬಳಿ
|
ಕುರಿಗಾರ ಹೊಟ್ಟಿಗೆ ಹಾಕುವ ಕಂಬಳಿ
|
ಗುರುವಿನ ಗದ್ದುಗೆ ಮಾಡುವ ಕಂಬಳಿ
|
ಕಾಶಿಗೆ ಹೋಗುವಾಗ ಹಾಸುವ ಕಂಬಳಿ
|
ಮೀಸಲಿದ್ದಂಗೆ ಬಿಳೆ ಕಂಬಳಿ
|
ಕಾಶಿಗೆ ಒಯ್ಯುವ ರೈತನ ಕಂಬಳಿ
|
ದೇಶಿ ಊಣ್ಣಿಯ ಪಾಸ ಕಂಬಳಿ
|
ಶಾರದೊಳಗಿಟ್ಟ ಮಾಡುವ ಕಂಬಳಿ
|
ಶಿವಶರಣರಿಗೆ ಸಲ್ಲುವ ಕಂಬಳಿ
|
ಶೂರ ರಾಯಣ್ಣನು ಹೊತ್ತಿದ್ದ ಕಂಬಳಿ
ನೆಹರೂನ ಜಾಕೀಟು ಆದಂತ ಕಂಬಳಿ

ಬಾಳಪ್ಪನವರು ದಿನಾಂಕ ೧೯.೧೧.೧೯೫೯ ರಂದು ಶೃಂಗಾರ ಶೈಲಿಯಲ್ಲಿ ಬರೆದಿರುವ ತಲೆಬರಹವಿಲ್ಲದ ಈ ಗೀತೆ ಅವರ ಶೃಂಗಾರ ಸ್ವಭಾವವನ್ನು ಪ್ರತಿಬಿಂಬಿಸುತ್ತದೆ.

ಯಾರವ್ವಾ ಇವ ಚೆಲುವಾ | ತನ್ನಷ್ಟಕ ತಾನೆ ನೋಡಿ ನಲಿವಾ
ನಗಿಯೊಂದು ಬಿಗಿಯೂಟ
| ಕಣ್ಣು ಹಿಗ್ಗಿನ ತೋಟ
ಚವತಿ ಚಂದ್ರಮನೊಲವಾ
||
ಚವತಿ ಚಂದ್ರಮನ ಕೆಳಗ
|
ಹೆಣಕಿ ಹಾಕಿದ್ದಂಗ ಹೋಲುವಾ ಹಣೆ
||
ಒಡೆದಿಲ್ಲಾ ಇನ್ನು ಮಕಮಿಸಿ ಒಡದಿಲ್ಲ
|
ತೊಡದಿಲ್ಲ ಇನ್ನು ತುಟಿ ಹಾಲು ತೊಡದಿಲ್ಲ
ಹಿಡಿದಿಲ್ಲ ಕಣ್ಣಿಗೆ ಹೆಣ್ಣಚ್ಚು ಹಿಡಿದಿಲ್ಲ
||
ನಂಬಿ ಕೊಂಡಿರಲಾಕ ತುಪ್ಪಳ ತಲಿದಿಂಬು
|
ಎಂಬೂತೊಳ್ಮಿದು ಬಲವಾ
||
ಕಂಡವರ ಕಣ್ಣನ್ ಸೋತಾಗ ಸೆರೆ ಹಿಡಿದು
|
ಇರವಂಥ ಎದೆ ಹರವಾ ನೋಡವ್ವಾ
||
ಇರುವಾಗಿನ ಕಾಮಣ್ಣ ನೋಲು
ಕಾಣುವ ಯಾರವ್ವಾ ಇಂವ ಚೆಲುವಾ
ತನ್ನಷ್ಟಕ್ಕೆ ತಾನೆ ನೋಡಿ ನಲಿವಾ
||

ದಿನಾಂಕ ೨೯.೦೫.೧೯೫೨ ರಂದು ಮುಂಬೈ ಆಕಾಶವಾಣಿಯಿಂದ ಪ್ರಸಾರಗೊಂಡ ಕೃಷಿ ವಿಷಯದ ಮೇಲಿನ ಕೆಳಗಿನ ಈ ಹಾಡಿನಲ್ಲಿ ಬಾಳಪ್ಪನವರು ಆಧುನಿಕ ಯುಗದಲ್ಲಿ ರೈತರು ಮುಂದುವರೆಯಬೇಕು ಎನ್ನುತ್ತಾರೆ. ಎತ್ತೆಮ್ಮೆಯ ಹೊಲಕಸು ಮಾಡುವ, ಬಿಸಿಯಾದ ಅನ್ನ ಹಾಕುವ, ಮನೆ ಚೆನ್ನ ಮಾಡುವ ಮತ್ತು ಬಡತನವನ್ನು ದೂರ ಮಾಡುವ ಪಶುಗೊಬ್ಬರದ ಮಹತ್ವವನ್ನು ಆಶಿಕ್ಷಿತ ರೈತರಿಗೆ ಮನದಟ್ಟಾಗುವಂತೆ ರಚಿಸಿ ಹಾಡಿದ್ದಾರೆ, ಈ ಕವನವು ಬಾಳಪ್ಪನವರು ರೈತರ ಹಿತೈಷಿಯಾಗಿದ್ದರು ಎಂಬುದನ್ನು ಎತ್ತಿ ತೋರಿಸುತ್ತದೆಯಲ್ಲದೆ, ಭೂಮಿ, ನೀರು, ಗೊಬ್ಬರ ಮತ್ತು ಬೀಜಗಳು ಒಕ್ಕಲುತನಕ್ಕೆ ಚತುರಂಗ ಬಲವಾಗಿದೆ ಎಂಬ ಭಾವನೆಯನ್ನು ಹುಟ್ಟಿಸುತ್ತದೆ.

ಗೊಬ್ಬರ, ಹೊಸ ಗೊಬ್ಬರ, ಎತ್ತಮ್ಮೆ ಆಕಳ ಗೊಬ್ಬರ
ಜನಜೀವನ ಶಾಂತಿಯ ಗೊಬ್ಬರ
,
ಹೊಸದಾದ ಕಾಂಪೋಸ್ಟ ಗೊಬ್ಬರಾ
, ಹೊಲ ಕಸು
ಮಾಡುವಂಥಾ ಗೊಬ್ಬರ
,
ಕಸಕಡ್ಡಿ ಬೂದಿಯ ಮಣ್ಣು ಗೂಡಿಸಿದಂತ ಹೆಸರಾದ
ಬಿಸಿಯಾದ ಗೊಬ್ಬರ
, ಹೊಸ ಗೊಬ್ಬರ.
ಅನ್ನ ಹಾಕುವಂಥ ಗೊಬ್ಬರ
, ಮನ ಚಿನ್ನ ಮಾಡುವಂಥ ಗೊಬ್ಬರ,
ಪುಣ್ಯ ಭಾರತ ನಮ್ಮ ಸರಕಾರ ಸರಿಯೆಂದು
ಮಾಡಿದಂಥ ಗೊಬ್ಬರ
, ಹೊಸಗೊಬ್ಬರ.
ಬಡತನ ದೂಡುವ ಗೊಬ್ಬರಾ
, ಭೂಮಿ ಒಡೆಯಗೆ ಭಾಗ್ಯದ ಗೊಬ್ಬರಾ,
ಕಡಿದ ಬೆಣ್ಣೆ ಹಾಲು ಮೊಸರನು ಎಮ್ಮೆಗೆ
ಕಡಿಮೆ ಮಾಡದ ಪಶುಗೊಬ್ಬರಾ
, ಹೊಸಗೊಬ್ಬರ.
ನಾಡಿಸೈಸಿರಿ ಗೊಬ್ಬರಾ
, ಕೃಷಿನಾಡಿನ ಬೆಳೆಯಲ್ಲಿ ಬರುವ
ಗಿಡಬಳ್ಳಿ
, ದ್ರಾಕ್ಷಿ, ಗೋಡಂಬಿ, ಕಿತ್ತಲಿ ಹಣ್ಣ
ಮಡಿಗದು ಮೇಲಾರ ಗೊಬ್ಬರಾ
, ಮಿತ್ರಗೊಬ್ಬರಾ.
ಭತ್ತ ಬಿತ್ತಿ
, ಬೆಳೆಯ ನೋಡು ಶೃಂಗಾರ.
ಮುತ್ತಿನಂಥ ಹಿಡಿ ಗೊಬ್ಬರಾ
,
ಒತ್ತಿ ಬೆಳೆದ ಕಬ್ಬು ರೈತರ ಎದೆ ಉಬ್ಬು
ಮಡದಿ ಮಕ್ಕಳ ಮೈ ಬಂಗಾರ.
ನೋಡು ರೈತನ ಕೈ ಬೆರಳ ಉಂಗುರ.

ಬಾಳಪ್ಪ ಹುಕ್ಕೇರಿಯವರು ಓರ್ವ ಉತ್ತಮ ಆಶು ಕವಿಯಾಗಿದ್ದರು ಎಂಬುದು ಗಮನಾರ್ಹವಾಗಿದೆ.