ಬಾಳಪ್ಪ ಹುಕ್ಕೇರಿಯವರ ಜೀವನ ಮತ್ತು ಸಂಗೀತ ಸಾಧನೆಯನ್ನು ಸ್ಮರಿಸಿ ಅವರ ಅಭಿಮಾನಿಗಳು ಹಾಡುಗಳನ್ನು ಬರೆದಿದ್ದಾರೆ. ಪ್ರಸಿದ್ಧ ಬರಹಗಾರ ಎನ್.ಬಿ. ಕಾಮತರು ಬಾಳಪ್ಪನವರ ಸಂಗೀತದ ಸಾಧನೆಯನ್ನು ಸ್ಮರಿಸಿ ತಮ್ಮ ಈ ಕೆಳಗಿನ ಕವನ “ಧನ್ಯ ಹೇ ಹುಕ್ಕೇರಿ ಬಾಳಪ್ಪ” ದಲ್ಲಿ ಅವರೊಬ್ಬ “ಜಾನಪದ ಜಾದೂಗಾರ” ಎಂದು ಹೇಳಿದ್ದಾರೆ:

ಆಂ | ತಲೆಯ ಮೆಲಿನ ಬೆಲ್ಲದ ಗಂಟಿನ ಹಿರಿ ಭಾರವ
ತನ್ನ ಸವಿಗಾನದಿ ಇಳಿಸಿದ ಅದ್ಧುತ ಚಮತ್ಕಾರ
|
ಈ ಜಾದುಗಾರ ಕುವರ ಅದನದೋ “ಜಾನಪದ ಗಾನ ಗಂಧರ್ವ”
|
ಸಿಹಿ ಕಂಠದ ಬೆಳೆಯ ಸಿರಿ ಮೊಳಕೆಯಲ್ಲೇ ತೋರಿತದೋ
|

ಅತ್ತ ಮಲಪ್ರಭೆ ಇತ್ತ ಘಟಪ್ರಭೆಗಳ ಮಡಿಲ ನಡುವಣ
ಹೊಂಗಲ ಹೊನ್ನಾಡಿನ ಮುರಗೋಡದಿ ಈ ಬಾಳನ ಜನನ
|
ದೈವದತ್ತ ಪ್ರಭಾವಳಿಯನೆ ಹೊತ್ತು ಉದಿಸಿದ ಸಂಗೀತ ಪ್ರತಿಭೆ
|
ಸರ‍್ರ ಸೇರಿತು ಬಾನೆತ್ತರಕ್ಕೆ
| ಮೆರೆಯತದೋ ಭಳಿರೆ |

ಜನಕೋಟಿ ಸವಿದರು “ಹೊಂಗಲ ನಾಡಿನ ಹೆಜ್ಜೇನನು”
“ಹಾಡಿನ ಕಾಕಾ” ಆದ “ಸಾವರ ಹಾಡಿನ ಸರದಾರ”
|
ಈ “ಸಭಾ ಭೂಷಣ” ಗೆ ಎಲ್ಲೆಲ್ಲೂ ಗೀತ ಪ್ರೇಮಿಗಳ ಕೇಕೆ ಚಪ್ಪಾಳೆ

ಸಂಘ ಸಂಸ್ಥೆಗಳ ಸರಕಾರದ ಪ್ರಶಸ್ತಿ, ಪುರಸ್ಕಾರಗಳ ಸುರಿ ಮಳೆ |
ಭಲೆ ತೊಡಸಿದರು ಅಮೂಲ್ಯ “ಜನಪದ ರತ್ನ” ಕಿರೀಟ
|
ಬೇಷ್
, ಲಭಿಸಿತು ಪ್ರತಿಷ್ಠೆಯ “ತುಳಸಿಯ ಸನ್ಮಾನ” ಮುಕುಟ
ಜಾನಪದವೇ ಜೀವಾಳ
| ದೇಶ ಭಕ್ತಿ ಶರಣರ ಸೂಕ್ತಿಯಲ್ಲೂ ಆಸಕ್ತಿ |
ಅಲ್ಲಲ್ಲಿ ಎಲ್ಲವನೂ ಮೆದ್ದ ಭೂಪ
| ಈ ಬಾಳಪ್ಪ |
ಎಂಭತ್ತರ ಜೀವನದ ಸಂಜೆಯಲಿ ಸಂತಸವುಕ್ಕಿ
ಹಾಡುತಿದೆ ಈ ಧನ್ಯ ಹುಕ್ಕೇರಿಯ ಹಾಡು ಹಕ್ಕಿ
|
ಧನ್ಯ
| ಧನ್ಯ | ಹೇ ಹುಕ್ಕೇರಿ ಬಾಳಪ್ಪ |
ಅನಂತ ನಮನಗಳು
| ಶತ ವರ್ಷ ಬಾಳಪ್ಪ |

ಬಾಳಪ್ಪನವರ ಸರಳ ಜೀವನ, ನಗು, ಸ್ವಭಾವ, ಧಾರ್ಮಿಕ ಪ್ರವೃತ್ತಿ ಮತ್ತು ಕನ್ನಡ ನಾಡಿನ ಮಮತೆಯನ್ನು ಸ್ಮರಿಸಿ, ಅವರೊಬ್ಬ ಕನ್ನಡಾಂಬೆಯ “ಬಹದ್ದೂರ” ಎನ್ನುತ್ತಾರೆ ನಿ.ಪ್ರ. ಬಸವಲಿಂಗ ಸ್ವಾಮಿಗಳು:

ಹುಕ್ಕೇರಿ ಬಾಳಪ್ಪ ಸಕ್ಕರಿ ಜೀನು ತುಪ್ಪ
ಮುಕ್ಕರಿತ್ತು ಜನ ನಿನ್ನ ಸುತ್ತಪ್ಪ
|
ನೀನು ಬಂದರ ಬಳ್ಳಾರಿ ತೇರು ಬಂದಾಂಗ
ಮಾತಾಡಿದರ ಗುಡುಗು ಹೊಡೆದಾಂಗ
|
ಗಗನ ಗರ್ಜಿಸಿದಂಗ ನಿನ್ನ ಪದ
ಸ್ವಾಗಿ ಕುಣಿವಂತೆ ಕುಣಿಸ್ತಿದಿ ಜಗ
ನಕ್ಕು ನಗಿಸುವಂತೆ ನಿನ್ನ ಮೊಗ
||

ಮೈ ನವಿರೇಳುವಂತೆ ನಿನ್ನ ರಾಗ
ಬಿರುದಿಗಿ ತಕ್ಕಬಹದೂರ
ನೀನು ಮುರುಘಾಮಠದ ಮಹಾದ್ವಾರ
ನೀನಿದ್ದರ ಸಭಾ ಭರ್ಪೂರ
ಟಾಳಮ್ಯಾಲ ಟಾಳಿ ಬಲು ಜೋರಾ
ಮುರುಗೋಡ ಮಹಾಂತರ ಕುವರ
ಕರುನಾಡಿನೊಳು ನಿನ್ನ ಹೆಸರ
||

ಬಾಳಪ್ಪನವರ ಸಂಗೀತ ಸೇವೆ ಹಾಗೂ ಸಹೃದಯವನ್ನು ಖ್ಯಾತ ಕವಿ ವಿ.ಸಿ.ಐರಸಂಗರು ಕೆಳಗಿನ ತಮ್ಮ ಕವನ “ಘನ ಕೀರ್ತಿ ಶೃತಿ” ಯಲ್ಲಿ ಒಡಮೂಡಿಸಿದ್ದಾರೆ.

ಜನಪದ ಸಾಹಿತ್ಯದೊಳಗೆ ಜೀವದ ಉಸಿರ
ತುಂಬಲೆಂದು ಭುವಿಗೆ ಬಂದರಿವರು
ಎಂಬ ತೆರ ಮುರಗೋಡ ಗ್ರಾಮಕಲ್ಲಿ ಜನಿಸಿದರು
ಹುಕ್ಕೇರಿ ಮನೆತನದ ಬಾಳಪ್ಪನವರು
||

ಕರ್ನಾಟಕದ ಹಳ್ಳಿ ಪ್ರತಿ ಶಹರದಲ್ಲಿ ಕೂಡಾ
ಇವರನ್ನರಿಯದ ಜನ ಸಿಕ್ಕುವುದು ವಿರಳ
ಇವರ ಗಾನ ಕೇಳಲು ಕಿಕ್ಕರಿದು ತುಂಬುವರು
ಗಾಯನದ ಮಂಟಪದಿ ರಸಿಕ ಜನ ಮೇಳ
||
ಸಂಗೀತ ಸರಸ್ವತಿಯು ವರದ ಹಸ್ತವನಿವರ
ಶಿರದಲ್ಲಿಟ್ಟಳು ಕೊಟ್ಟು ಇಂಪಾದ ಧ್ವನಿಯ
ಸಂಗೀತ ಸಭೆಯಲ್ಲಿ ಆಕಾಶವಾಣಿಯಲ್ಲಿ
ಇವರ ಹಾಡನು ಕೇಳಿ ಮರೆಯುವೆನು ಮನೆಯ
||

ಜನ ಸೇವೆಯೇ ತಮ್ಮ ಜೀವನದ ಗುರಿಯೆಂದು
ಸಾರುತಿರುವರು ಅವರ ಪ್ರತಿಯೊಂದು ಕೃತಿಯು
ಕಲೆಗೆ ಬೆಲೆಯೀಯುವವರು ಸುಜನರಲಿ ಬೆರೆದರು
ಅಮರವಾಗಿರಲವರ ಘನ ಕೀರ್ತಿ ಶ್ರುತಿಯ
||

ಬಾಳಪ್ಪನವರ ಅಭಿಮಾನಿ ಎಸ್.ಬಿ.ಪಾಟೀಲರು ತಮ್ಮ ಕವನ “ಬಣ್ಣಿಸಿ ಹಾಡ ಹಾಡ್ಯಾನ” ದಲ್ಲಿ ಬಾಳಪ್ಪನವರ ಸಂಗೀತ ಮಹಿಮೆಯನ್ನು ಔಚಿತ್ಯಪೂರ್ಣವಾಗಿ ವರ್ಣಿಸಿದ್ದಾರೆ:

ಹುಕ್ಕೇರಿ ಬಾಳಪ್ಪ ನಾಡು ಇಕ್ಕೇರಿವರದ್ಹಾಂಗ
ಚೊಕ್ಕತ ಬಾಳೇ ಸೊಗಬಾಳ – ಇದ್ದರ
ಸಕ್ಕರಿಗಿನ್ನ ಸಲುಬಾಳ

ಸಣ್ಣನ್ನ ಶ್ಯಾವಿಗಿ ಚಿನ್ನಿಯ ಸಕ್ಕರಿ
ದೊಣ್ಣೆಯ ತುಂಬ ತುಪ್ಪವ
| ನೀಡಿದರ
ಬಣ್ಣಿಸಿ ಹಾಡ ಹಾಡ್ಯಾನ

ಜನಪದ ಹಾಡನ್ನ ಜಗಕ್ಕೆಲ್ಲ ಸಾರ‍್ಯಾನ
ಜಗಮೆಚ್ಚಿ ಜಗದ ಶಿವಮೆಚ್ಚಿ
| ಭಾಳಣ್ಣನ
ಜಗವೆಲ್ಲ ನೆನಸಿ ಹರಸೀತ

ಪಂಡಿತರು ಕೂಡ್ಯಾರ ಪಾಮರರು ಕೂಡ್ಯಾರ
ಪಡನುಡಿಯ ಹಾಡ ಕೇಳ್ಯಾರ
| ಬಾಳಣ್ಣಗ
ಪ್ರಶಸ್ತಿ ಕೊಟ್ಟು ಕಳಿಸ್ಯಾರ

ಜಾನಪದ ಜಾಣನ್ನ ಜನರಿಗೆ ಕರುಣಿಸಿ
ಅನುಗಾಲ ಇರುವ ಅರುವಂತೆ
| ಜಾಣಗ
ಕರುಣೆಯ ತೋರೋ ಪರಶಿವನ

ಕನ್ನಡದ ಕುವರನ್ನು ಚೆನ್ನಾಗಿ ತಿಳಕೊಳ್ಳ
ಅಣ್ಣ ಬಾಳಪ್ಪ ಬಂದಾನ
| ಜಾನಪದ
ಮಣ್ಣಾಗಿ ಅರದ ಕುಡದಾನ

ಮುರಗೋಡಿನ ಈ ಹಮ್ಮೀರ. ಬಾಳಪ್ಪನವರ ಜೀವನ ವಿಧಾನ ಹಾಗೂ ಕಾರ್ಯ ವೈಖರಿಯನ್ನು ಮೆಚ್ಚಿ ಅವರ ಅಭಿಮಾನಿ, ಫಕ್ಕಿರೇಶ ಮೆಳ್ಳಳ್ಳಿಯವರು ತಮ್ಮ ಕವನ “ಚಿರಕಾಲ ಬಾಳಪ್ಪ” ದಲ್ಲಿ ಬಾಳಪ್ಪನವರನ್ನು ಬಹುಕಾಲ ಬಾಳಲಿ ಎಂದು ಹಾರೈಸುತ್ತಾರೆ:

ಬಾಳಪ್ಪ ಬಾಳಪ್ಪ ಬಾಳಪ್ಪ
ಚಿರಕಾಲ ಬಾಳಪ್ಪ
ಮುರಗೋಡ ಮಾಣಿಕ ನೀನಪ್ಪ
ತಿರುಗಾಡಿ ಭಾರತ-ಕಂಡೆಪ್ಪ
ಭಾರತ ನಾಡಿನ ಭಾಗ್ಯ ಪುತ್ರನೆ
ಯೋಗ್ಯ ಹೆಸರ ನೀ ಪಡೆದಪ್ಪ
|
ಜನಪದ ಗೀತೆಯ ಸಾರಪ್ಪ
ಜನ ಜೀವನ ವಿಕಾಸಗೊಳಿಸಪ್ಪ
ಜನಪದ ಗೀತೆಯ ಜನಕನು ನೀ
ಜನಪದ ಸಾಹಿತ್ಯ ರತ್ನಪ್ಪ
ಹಾಡುವಾಗ ನಿನ್ನ ಮೊದತಪ್ಪ
ಬೆಡಗಿನ ಮಲ್ಲಗೆ ಹೂವಪ್ಪ
ನಗುತ ಹಾಡಿದ ಹಾಡಿನ ಸಾರವು
ಕರಣಕೆ ಇಂಪನು ತಂತಪ್ಪ
ರೇಡಿಯೋ ಸ್ಟಾರನು ನೀನಪ್ಪ
ನಿನ್ನ ರಾಗದ ರೀಕಾರ್ಡ ಸೊಂಪಪ್ಪ
ಎಲ್ಲೆಲ್ಲಿಯೂ ನಿನ್ನ ಹೆಸರಪ್ಪ
ದಿಲ್ಯಾಗ ನೆಹರುರವರ ಮುಂದೆ ಹಾಡಿದೆಪ್ಪ
ನಕ್ಕು ನಗಿಸುತ ಜಗವಪ್ಪ
ನೀ ಅಕ್ಕರೆಯಲಿ ಚಿರ ಬಾಳಪ್ಪ
ಉಕ್ಕಲಿ ಕೀರ್ತಿಯು ನಾಡಿನೊಳಪ್ಪ
ಫಕ್ಕಿರೇಶನ ಬಯಕೆಪ್ಪ

ಬಾಳಪ್ಪನವರ ಗಾಯನ, ಗಾನ, ಲಹರಿ, ಕಲೆ, ಶರಣ ವಚನಾಮೃತ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಬಸವರಾಜ ಅಂಗಡಿ “ಚೆನ್ನಮ್ಮ ರಾಜ್ಯದ ಕವಿ”ಎಂಬ ಕವನದಲ್ಲಿ ನೆನೆಸುತ್ತಾರೆ:

ಹುಕ್ಕೇರಿ ಬಾಳಪ್ಪ ಹಾಡಿದನೆಂದರೆ
ಉಕ್ಕೇರುವುದು ಕೇಳಲಿಕ್ಕೆ
ಸಕ್ಕರಿಯಾಗುವ ಗಾಯನವೆಂದರೆ
ತಕ್ಕ ಸಮಯವು ದೊರೆಯದಕೆ
ನಮ್ಮ ಊರೆಂಬುವ ಅಭಿಮಾನವನು
ಹೆಮ್ಮೆಯಿಂದಲೆ ಪಡೆದವನು.
ಚಿಮ್ಮನೆ ಗಾನ ಲಹರಿಯಲವನು
ಚಿಮ್ಮಿಸಿ ಹೊಮ್ಮಿಸಿ ಕವನವನು
ಕನ್ನಡ ನಾಡಿನ ಕಲೆಗಾರನಿವನು
ಚನ್ನಮ್ಮ ರಾಜ್ಯದ ಕಲಿಯವನು
ಮುನ್ನಡೆ ಪಂದುತ ಕೀರ್ತಿಯನು
ಮನ್ನಣೆಯಿಂದಲೆ ಹೊಂದುವನು.
ಶರಣ ವಚನಾಮೃತವನು ಸುರಿಸುತಿರುವನು
ನಾಡಿನಲಿ ಅರಿಯಲಿ
ಇವನ ಕಲೆಯನು ಹರಿಸಲಿ
ಸರಸ್ವತಿ ಜನತೆಯಲಿ
ಒಕ್ಕಲಿಗರ ಸೇವೆನಿವನು
ಮಿಕ್ಕಿ ಮಾಡುವ ಧೀರನು ಇವನು.
ಉಕ್ಕಿ ಹಾಡುವ ಭೂದಿಪನಿವನು.
ಒಕ್ಕಲುತನ ವಿಚಾರವನಿವನು
ಯಶವನು ಪಡೆಯಲು ಬಾಳಣ್ಣ
ಜಸದಿಂ ಬರೆವನು ಬಸವಣ್ಣ
ಅಸಮನೇತ್ರನೆ ಪೊರೆಯಣ್ಣ
ಬಸರಾಜರು ಕವಿಯಣ್ಣ

ಜನಪದ ಸಂಗೀತ ಕ್ಷೇತ್ರದಲ್ಲಿ ತಮ್ಮ ಘನವಾದ ಸೇವೆಯನ್ನು ನಾಡಿಗೆ ನೀಡಿದ ಬಾಳಪ್ಪನವರನ್ನು ಖ್ಯಾತ ಮಕ್ಕಳ ಕವಿ ಶಂ.ಗು. ಬಿರಾದಾರರು ಕೆಳಗಿನಂತೆ ಹಾರೈಸುತ್ತಾರೆ:

ತುಂಬು ನಗೆ ಮೊಗದ ಭೀಮಕಾಯದ ಧೀರ
ಜಾನಪದ ಹಾಡಿನಲಿ ನೀ ಮೋಡಿಕಾರ
ಸರಸ ನಗೆ ನುಡಿಯ ಹುಕ್ಕೇರಿ ಬಾಳಪ್ಪ
ರಸಿಕರನು ತಣಿಸಿ ಶತವರ್ಷ ಬಾಳಪ್ಪ
||

ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲಿಷ್ ಹಾಗೂ ಬರಹಗಾರರೂ ಆದ ಡಾ. ಮಲ್ಲಿಕಾರ್ಜುನ ಪಾಟೀಲರು ಕೆಳಗಿನ ತಮ್ಮ ಕವನ “ವಿಷವ ಮರೆಸಿದ ಜೀವಿ” ದಲ್ಲಿ ಬಾಳಪ್ಪನವರ ಅರ್ಥಪೂರ್ಣ ಬದುಕನ್ನು ಪ್ರತಿಬಿಂಬಿಸಿದ್ದಾರೆ:

ಮರೆಯಾದ ಸಾವಿರ ಹಾಡಿನ ಸರದಾರ.
ಜನ-ಮನ ಸೂರೆಗೊಂಡ ಜಾನಪದ ಸಂಗೀತಗಾರ
|
ಜನ ಮನದ ಮಧ್ಯ ಇದ್ದು ಹೃದಯ ತಣಿಸಿದ ಹರಿಕಾರ.
ಮೋಡಿ-ಮಾಟವಿಲ್ಲದೆ ಜನರ ಹರಿಸಿದ ಹಮ್ಮೀರ
|

“ರೈತನೊಲುಮೆ-ಜಗಕೊಲುಮೆ”, ವಿದ್ಯೆಯೆ ಬಾಳಿನ ಬೆಳಕು”
“ಮಿತಸಂತಾನ” ಸಾರಿದ
, ಹಿಂದೂಸ್ತಾನಕ ಇಂಥವನಿರಬೇಕು |
ಶುದ್ಧ ಹಳ್ಳಿಗ
, ರಸಿಕ, ಸರಳ ಸ್ವಭಾವದ ನಿಗರ್ವಿ.
ಕಿರಿದರಲ್ಲೂ ಹಿರಿದನ್ನರಸಿದ ಅಪರೂಪದ ಸ್ನೇಹ ಜೀವಿ
|
ಮಧುರ ಕಂಠದ
, ರಸಿಕ ಭಾವದ ಅಪರೂಪದ ಗಾಯಕ.
ಅರ್ಥ-ಭಾವಗಳಿಗೆ ವೇಷ ತುಂಬಿದ ಸಾವಿರ ಹಾಡಿನ ನಾಯಕ
|
ಭಾವ-ಭಾಷೆ ನೂರು ವೇಷ ” ವಿಷವ ಮರೆಸಿದ ಜೀವಿ”.
ತಾಯಿ ನಾಡಿಗಾಗಿ ದುಡಿದು-ಮಡಿದ ಮಹಾನುಭಾವಿ
|
ಆಜಾನುಬಾಹು ಶರೀರ
, ಅನುಪಮ ವ್ಯಕ್ತಿತ್ವ ಅಪರೂಪದ
ಕಂಠಶ್ರೀಯ ಬಾಳಪ್ಪ,
ಇನ್ನು ಕೆಲವು ದಿನ ಬಾಳಬಹುದಿತ್ತಪ್ಪ
, ಆದರೆ ಯಮಧರ್ಮರಾಯ
ಯಾರ ಮನೆಯವನಪ್ಪ
|

ಬಾಳಪ್ಪನವರು ಜನಪದ ಸಂಗೀತದ ದಿಗ್ಗಜರು. ಅವರು ಜನಪದ ಸಂಗೀತದ ಕಣಜ, ಹಾಡುಗಳ ಹೆಬ್ಬೊತ್ತಿಗೆ, ಅಪ್ಪಟ ದೇಶ ಸೇವಕ ಹಾಗೂ ಮಾತಿನ ಜ್ಯೋತಿರ್ಲಿಂಗವಾಗಿದ್ದರು. ಭಾನಾತ್ಮಕ ಜೀವಿಯಾದ ಬಾಳಪ್ಪನವರ ಸಂಗೀತದ ನಾದತರಂಗ ಎಲ್ಲೆಡೆಯೂ ಹಬ್ಬಿತ್ತು. ಅವರು ಇಪ್ಪತ್ತನೆಯ ಶತಮಾನದ ಭಾರತ ಕಂಡ ಜಾನಪದ ಸಂಗೀತದ ದಿಗ್ಗಜರಾಗಿದ್ದರು.