ತವರು : ಕರ್ನಾಟಕ ವಿಶ್ವವಿದ್ಯಾಲಯ ನನ್ನ ತವರು. ಬರಿಯ ತವರಲ್ಲ ಹಾಲುಂಡ ತವರು. ನಾನು ಆಡಿದ್ದು, ಹಾಡಿದ್ದು, ಓದಿದ್ದು ಬರೆದದ್ದು, ಬೆಳೆದದ್ದು ಇದರ ವ್ಯಾಪ್ತಿಯ ನೆಲದಲ್ಲಿ. ನನ್ನ ವ್ಯಕ್ತಿತ್ವ ವಿಕಾಸನಕ್ಕೆ ಕಾರಣವಾದ, ನನ್ನೆಲ್ಲ ಪದವಿಗಳು ಇದೇ ವಿಶ್ವವಿದ್ಯಾಲಯದ ಅಲಂಕಾರಗಳು. ನನ್ನ ವೃತ್ತಿ ಜೀವನದ ಮೂರರಲ್ಲೊಂದು ಭಾಗವನ್ನು ಸವೆಸಿದ್ದೂ ಇದರ ಅಂಗಳದಲ್ಲೆ. ನನ್ನ ಬಾಲ್ಯ ತಾರುಣ್ಯದ ಭಾವನಾಲೋಕವನ್ನು ಶ್ರೀಮಂತಗೊಳಿಸಿದ್ದೇ ಕರ್ನಾಟಕ ವಿಶ್ವವಿದ್ಯಾಲಯ. ಅದಕ್ಕಾಗಿ ನಾನು ಅನುಗಾಲವೂ ತೆವರೇರಿ ತವರು ನೋಡುತ್ತಲೇ ಇದ್ದೇನೆ. ಕಳಸ ಕಂಡು ಕೈಯ ಮುಗಿಯುತ್ತಲೇ ಇದ್ದೇನೆ. ಈ ತವರು ಬಳ್ಳಿ ‘ಹೊಳೆದಂಡೆಯಲ್ಲಿರುವ ಕರಿಕಿಯ ಕುಡಿಹಂಗ’ ಹಬ್ಬಲಿ ಎಂದು ಹಾರೈಸಿದಷ್ಟೇ ಅಲ್ಲ, ಅದು ಹಬ್ಬಿ ಹರಡಿದ್ದನ್ನು ನೋಡುವ ಭಾಗ್ಯವೂ ನನ್ನದಾಗಿದೆ. ಇಂದು ನನ್ನನ್ನು ಈ ಗೌರವ ಸ್ಥಾನದಲ್ಲಿ ಕೂಡ್ರಿಸಿದ್ದೂ ನನ್ನ ಕರುಳಬಳ್ಳಿಯ ಈ ಬಳಗ. ಇದಕ್ಕೆಲ್ಲ ಕಾರಣ ನನ್ನ ಕರುಳು ಬಳ್ಳಿಯ ಕಕ್ಕುಲಾತಿ, ಅಕ್ಕರೆಗಳಲ್ಲದೆ; ನನ್ನ ಅರ್ಹತೆ ಎಂದು ನಾನಂತೂ ಭಾವಿಸಿಲ್ಲ. ಕನ್ನಡ ಅಧ್ಯಯನ ಪೀಠವೊಂದೇ ಅಲ್ಲ, ಇನ್ನುಳಿದ ಅಧ್ಯಯನದ ಎಲ್ಲ ವಿಭಾಗಗಳಲ್ಲಿ, ಆಡಳಿತದಲ್ಲಿ ನನ್ನ ಸ್ನೇಹಿತರನೇಕರಿದ್ದಾರೆ. ಅದೆಲ್ಲ ನನ್ನ ಬಳಗ. ಅದಕ್ಕಾಗಿಯೇ ಈ ವಿಶ್ವವಿದ್ಯಾಲಯವನ್ನು ನನ್ನ ತವರೂರು ಎಂದು ಹೇಳಿದ್ದು.

ಪೀಠ ಪ್ರತಿಷ್ಠೆ :

ಕನ್ನಡ ಅಧ್ಯಯನ ಪೀಠದ ಮಹತ್ ಸಾಧನೆಗಳಲ್ಲೊಂದು, ಈ ಅಖಿಲ ಕರ್ನಾಟಕ ಮಟ್ಟದ ಜಾನಪದ ಸಮ್ಮೇಳನ ನಡೆಸುವ ಸಂಪ್ರದಾಯ. ೧೯೭೩ರಿಂದ ನಿರಂತರವಾಗಿ ನಡೆಯಿಸಿಕೊಂಡು ಬಂದ ಪ್ರಯೋಜನಾತ್ಮಕ ಸಾಧನೆ ಸಣ್ಣದೇನಲ್ಲ. ಇನ್ನೆರಡು ವರ್ಷಕ್ಕೆ ಈ ಸಮ್ಮೇಳನದ ಬೆಳ್ಳಿ ಹಬ್ಬ! ಪ್ರಥಮ ಸಮ್ಮೇಳನದಲ್ಲೇ ಉತ್ತರ ಕರ್ನಾಟಕದ ‘ಜನಪದ ಸಾಹಿತ್ಯ ಪ್ರಕಾರ’ ಗಳನ್ನು ಕುರಿತು ಪ್ರಬಂಧ ಮಂಡಿಸುವ ಗೌರವ ನನ್ನದಾಗಿತ್ತು. ಅನಂತರದ ಆರೇಳು ಸಮ್ಮೇಳನದಗಳಲ್ಲಿ ಪ್ರಬಂಧಕಾರನಾಗಿ, ಗೋಷ್ಠಿಗಳ ಅಧ್ಯಕ್ಷನಾಗಿ ಭಾಗವಹಿಸುವ ಅವಕಾಶವನ್ನೂ ಕಲ್ಪಿಸಿಕೊಟ್ಟರು. ಈಗ ಮತ್ತೆ ಅವರೇ ನನ್ನನ್ನು ಈ ಸ್ಥಾನವನ್ನು ಕೂಡ್ರಿಸಿದ್ದಾರೆ. ಈ ನಡೆದುಬಂದ ದಾರಿಯ ವೀಕ್ಷಕರಾಗಿ ಡಾ. ಎಂ. ಕಲಬುರ್ಗಿ, ಡಾ. ಇಮ್ರಾಪೂರ ಮೊದಲಾದ ಪ್ರಾಧ್ಯಾಪಕರು ನನ್ನೊಡನಿದ್ದಾರೆ.

ಜಾನಪದ ಹೊಸ ಹೊಸ ಕ್ಷೇತ್ರಗಳನ್ನು ಗುರುತಿಸಿ, ವೈವಿಧ್ಯಮಯ ವಿಷಯಗಳನ್ನು ಆಯ್ಕೆ ಮಾಡುವುದು, ಹಲವಾರು ಕಲಾವಿದರನ್ನು ಕರೆಯಿಸಿ ಅವರ ಕಲೆಗಳನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಲು ಅವಕಾಶ ಕಲ್ಪಿಸುವುದು, ಅವರನ್ನು ಪ್ರೋತ್ಸಾಹಿಸುವುದು, ಪ್ರತಿ ಸಮ್ಮೇಳನಕ್ಕೂ ಹತ್ತು ಹನ್ನೆರಡು ಜನ ಅಧ್ಯಾಪಕರನ್ನು ಜಾನಪದ ಕ್ಷೇತ್ರಕ್ಕೆಳೆದು ಅಧ್ಯಯನ ಮಾಡಿ ಪ್ರಬಂಧ ಮಂಡಿಸುವಂತೆ ಮಾಡುವುದು, ಹೀಗೆ ಕರ್ನಾಟಕ ಜಾನಪದ ಕ್ಷೇತ್ರದ ಹುಲುಸಾದ ಬೆಳೆ ತೆಗೆಯುವಲ್ಲಿ ಇಡೀ ಅಧ್ಯಯನ ಪೀಠದ ಪ್ರಾಧ್ಯಾಪಕ ವರ್ಗ ಕಳೆದ ಇಪ್ಪತ್ತೈದು ವರ್ಷಗಳಿಂದ ಶ್ರಮಿಸುತ್ತದೆ. ಆ ಪ್ರಬಂಧಗಳನ್ನು ‘ಜಾನಪದ ಸಾಹಿತ್ಯ ದರ್ಶನ’ ರೂಪದಲ್ಲಿ ಪ್ರಕಟಿಸಿ ಜಾನಪದ ಅಕ್ಷಯ ನಿಧಿ ಸಂಗ್ರಹಿಸುವ ಕೆಲಸ ಮಾಡಿದ್ದಾರೆ. ಇದಕ್ಕಾಗಿ ಕನ್ನಡ ಅಧ್ಯಯನ ಪೀಠದ ಪ್ರಾಧ್ಯಾಪಕ ವರ್ಗ ಜಾನಪದಾಸಕ್ತರ ಅಭಿನಂದನೆಗೆ ಪಾತ್ರವಾಗಿದೆ.

ಜಾನಪದ ನಂಟು :

ಜಾನಪದಕ್ಕೂ ನನಗೂ ಪಠ್ಯದ ನಂಟಲ್ಲ; ಹುಟ್ಟಿನ ನಂಟು. ಒಕ್ಕಲುತನಕ್ಕೆ ಪ್ರಸಿದ್ಧವಾದ, ಬಬಲೇಶ್ವರದ ದೊಡ್ಡ ಕುಟುಂಬದಲ್ಲಿ, ಸ್ವಾತಂತ್ರ್ಯ ಪೂರ್ವದಲ್ಲಿ ಹುಟ್ಟಿದವನಾನು. ಸ್ವಇಚ್ಛೆಯಿಂದ ಮಾಡದ ಹೊಲಮನೆಯ ಕೆಲಸವಿಲ್ಲ. ನೋಡದ ವೃತ್ತಿ ಇಲ್ಲ. ನೇಗಿಲು ಹಿಡಿದಿದ್ದೇನೆ. ಹರಗಿ, ಬಿತ್ತಿ, ಹಂತೀ ಹೊಡೆದಿದ್ದೇನೆ. ರಾಸೀ ಮಾಡಿ ಚೀಲ ಹೊತ್ತು ಚಕ್ಕಡಿ ಹೇರಿದ್ದೇನೆ. ಹಗೆ, ಬಾವಿ, ಹೊಂಡ ಗುಂಡ ಹಳ್ಳ ಹೊಳೆಗಳಿಗಿಳಿದಿದ್ದೇನೆ, ಚಳಿ-ಮಳೆ ಬಿಸಿಲಲ್ಲಿ ಬಕ್ಕತಲೆ ಬರಿಗಾಲಿನಿಂದ ತಿರುಗಿದ್ದೇನೆ. ಎಮ್ಮೆ, ಕುದುರೆ, ಕಂಟೆಲೆತ್ತುಗಳ ಸವಾರಿಯ ಸುಖ ಅನುಭವಿಸಿದ್ದೇನೆ. ಅಪರೂಪದ ಸಸ್ಯ ಪ್ರಾಣಿ ಲೋಕವನ್ನು ಅರಿತು ಆನಂದಿಸಿದ್ದೇನೆ. ನಿಸರ್ಗದ ಜೊತೆಗೂಡಿ ನಾನು ಆಡದ ಆಟವಿಲ್ಲ. ಹಾಡದ ಹಾಡಿಲ್ಲ, ಬೈಲಾಟಗಳನ್ನು ನೋಡಿ ಲಾವಣಿ-ಗೀಗೀ ಕೇಳಿ, ಗೆಳೆಯರೊಡನೆ ಅನುಕರಣೆ ಮಾಡಿದ್ದೇನೆ. ಹೋಳಿ ಹಂತಿ -ಬಲೋರಿ ಹಾಡುಗಳನ್ನು ವಾದಕ್ಕಿಳಿದು ಹಾಡಿದ್ದೇನೆ. ವಿವಿಧ ಜಾತಿ-ಜನಾಂಗದ ಸರಿಕರೊಡನೆ ನಿರ್ವಂಚನೆಯಿಂದ ಕೂಡಿ, ಬೇಕು ಬೇಡಾದ್ದನ್ನೆಲ್ಲ ಮಾಡಿ ನಮ್ಮ ತಂದೆಯವರಿಂದ ಏಟು, ಬೈಗುಳಗಳ ಪ್ರಸಾದ ಪಡೆದಿದ್ದೇನೆ. ಅದೆಲ್ಲವನ್ನು ನೆನೆಯುವುದೇ ನನಗೊಂದು ಮಧುರ ಗಳಿಗೆ. ಆರು ಜನ ಗಂಡು, ಈರ್ವರು ಹೆಣ್ಣು ಮಕ್ಕಳ ನಮ್ಮ ದೊಡ್ಡ ಕುಟುಂಬಕ್ಕೆಲ್ಲ ಮಾಡಿ ಹಾಕುವವಳು ಒಬ್ಬಳೇ ತಾಯಿ. ಬೀಸುವ ಗಿರಣಿಗಳಿಲ್ಲದ ಆ ಕಾಲದಲ್ಲಿ ಅವಳಿಗೆ ನೆರವಾಗಲು ನಸುಕಿನಲ್ಲೆದ್ದು ಅವಳ ಜೊತೆ ನಿತ್ಯ ಒಮ್ಮನ ಜೋಳ ಬೀಸಿದ ದಿನಗಳನ್ನು ನೆನೆದಾಗ, ನನ್ನ ಮಾಸಿದ ಮುಡಿ ಅಲ್ಲ, ಮೆದುಳು ಮಡಿಯಾಗುತ್ತದೆ. ತಾಯಿಯ ಹಾಡಿಗೆ ದನಿಗೂಡಿಸಿದ್ದೇನೆ. ಅವಳು ತಮ್ಮ-ತಂಗಿಗೆ ಹಾಡಿದ ಜೋಗುಳ ಆಲಿಸಿದ್ದೇನೆ. ಹೀಗೆ ತುಂಬಿದೆ ನನ್ನ ಜಾನಪದ ಜೋಳಿಗೆ. ಈ ಅಧ್ಯಯನ ಪ್ರಮಾಣ ಪತ್ರ ಪಡೆವ, ಪ್ರಶಸ್ತಿಗಿಟ್ಟಿಸುವ ಮೌಲ್ಯದ್ದೆಂದು ಅಂದು ನನಗೆ ಗೊತ್ತಿರಲಿಲ್ಲ. ಇದೊಂದು ಹಣ ಗಳಿಕೆಯ ಹಾದಿ ಎಂದು ಯಾವ ಕಲಾವಿದನೂ ನಂಬಿರಲಿಲ್ಲ. ಆದರೆ ಆನಂದ ಕೊಡುವ ಬದುಕಿನ ಒಂದು ಭಾಗವಾಗಿ ನನ್ನನ್ನು ಸುತ್ತಿಕೊಂಡಿತು. ನನ್ನಲ್ಲಿಯ ಆ ಆಸಕ್ತಿಯನ್ನು ಇಂದು ಈ ಶಕ್ತಿಯಾಗಿ ಗುರುತಿಸಿದ್ದಾರೆ. ಅದರ ಗೌರವ ಈ ನಾಡಿನ ಜಾನಪದ ತಜ್ಞರಿಗೆ ಸಲ್ಲಬೇಕು.

ಹೈಬ್ರಿಡ್ ಬೆಳೆ :

ಇಂದು ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಹೈಬ್ರೀಡ ಬೆಳವಣಿಗೆಯ ಹಾವಳಿ ಹೆಚ್ಚುತ್ತಿದೆ. ಇದು ಜಾನಪದದಲ್ಲಿಯೂ ಹಣಿಕಿಕ್ಕಿದೆ ಎಂದು ನನಗನಿಸುತ್ತಿದೆ. ಸ್ವಾತಂತ್ರ ಪೂರ್ವದ ಬದುಕು ಶುದ್ಧ ಜಾನಪದವಾಗಿತ್ತು. ಆಂಗ್ಲರು ನಮ್ಮನ್ನಾಳಿದರೂ ಅವರ ಸಂಸ್ಕೃತಿಯ ನೆರಳೂ ನಮ್ಮ ಮೇಲೆ ಬಿದ್ದಿರಲಿಲ್ಲ. ಜಾನಪದವನ್ನು ಆದಾಯದ ಹಾದಿಯಾಗಿ ಯಾರೂ ಮಾಡಿಕೊಳ್ಳುವ ಪ್ರಶ್ನೆಯೇ ಇರಲಿಲ್ಲ. ಅಂತೆಯೇ ಹಲಸಂಗಿ ಗೆಳೆಯರು ಸಂಗ್ರಹಿಸಿದ ಮೂರೂ ಗ್ರಂಥಗಳನ್ನು ಇಂದೂ ಅಧಿಕೃತ ಆದರ್ಶವೆಂದು ಪರಿಗಣಿಸಲಾಗುತ್ತಿದೆ. ಅವುಗಳಲ್ಲಿ ಯಾವ ರೀತಿಯ ಕಲಬೆರಿಕೆಯನ್ನು ಕಾಣಲಾಗುತ್ತಿಲ್ಲ. ಈ ಮಾತು ಅಂದು ಪ್ರದರ್ಶಿಸಲ್ಪಡುವ ಬಯಲಾಟ, ಲಾವಣಿ ಮೊದಲಾದ ಕಲೆಗಳಿಗೂ ಅನ್ವಯವಾಗುತ್ತಿತ್ತು.

ಸ್ವಾತಂತ್ರ್ಯಾನಂತರದ ಬದುಕು ಬಹಳಷ್ಟು ಬದಲಾಯ್ತು. ನಾಗರಿಕತೆಯ ಒತ್ತಡದಿಂದಾಗಿ ಜಾನಪದ ಬಡವರ, ಹಿಂದುಳಿದವರ ಸಂಸಾರದ ಸೊತ್ತಾಯ್ತು. ಸ್ವಾತಂತ್ರ್ಯಪೂರ್ವದಲ್ಲಿ ಬ್ರಾಹ್ಮಣರೂ ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಕುಣಿದು ಲಾವಣಿ ಹಾಡಿದ್ದನ್ನು ನೋಡಿದ್ದೇನೆ. ಆದರೆ ಅನಂತರದ ದಿನಗಳಲ್ಲಿ ಮೇಲ್ವರ್ಗದವರು ಈ ಕೆಲಗಳನ್ನು ನೋಡುವುದೂ ಮೈಲಿಗೆ  ಎಂದುಕೊಂಡಂತೆ ದೂರೇ ಉಳಿದರು. ಈ ಕೆಲಗಳೆಲ್ಲ ಕೀಳರಿಮೆಗೆ ಗುರಿಯಾದವು. ವ್ಯಕ್ತಿಯ ಆಶೋತ್ತರಗಳು, ಸಾಮಾಜಿಕ ರೀತಿ-ರಿವಾಜುಗಳು ಒಂದು ರೀತಿಯಲ್ಲಿ ಜನಪಥವೇ ಬದಲಾಯ್ತು. ಇದರಿಂದಾಗಿ ‘ಜನಪದ’ ವೇ ಬದಲಾಗುವುದು ಅನಿವಾರ್ಯವಾಯ್ತು. ಬದಲಾವಣೆ ಅದರ ನಿರಂತ ಕ್ರಿಯೆಯಾದರೂ, ಒಮ್ಮೊಂದೊಮ್ಮೆಲೇ ತೀವ್ರಗತಿಯ ವ್ಯತ್ಯಾಸಗಳು ಒಡೆದು ಕಾಣಹತ್ತಿದವು. ಇನ್ನೊಂದು ಕಡೆ ಆಂಗ್ಲ ಅಧ್ಯಯನದ ಪ್ರಭಾವದಿಂದಾಗಿ, ಅಧ್ಯಯನಾಸಕ್ತರು ಜಾನಪದ ಕಡೆ ಹೊರಳಿದರು. ಅನುಭವದ ಒತ್ತಡದಲ್ಲಿ ಕೆಲವರು ಕಾರ್ಯ ಮಾಡಿದರೆ, ಅಧ್ಯಯನದ ಆಸರೆಯಲ್ಲಿ ಕೆಲವರು ಮುನ್ನಡೆದರು. ಇನ್ನು ಕೆಲವರು ಅನುಭವ ಅಧ್ಯಯನ ಎರಡೂ ಇಲ್ಲದೆ ಜಾನಪದ ಕ್ಷೇತ್ರಕ್ಕೆ ನುಗ್ಗಿದರು. ಇದರಿಂದಾಗಿ ಕಳೆದ ನಲವತ್ತು ವರ್ಷಗಳಲ್ಲಿ ಜನಪದ ಸಾಹಿತ್ಯ ಕೃಷಿ ಗಣನೀಯ ಪ್ರಮಾಣದಲ್ಲಿ ನಡೆದಿದೆ. ಆದರೆ ಬಂದ ಬೆಳೆಯನ್ನಲೋಕಿಸಿದರೆ ಅದು ಸತ್ಯ, ಸ್ವಾದ ಕಳೆದುಕೊಂಡ ಹೈಬೀಡ ಸರಕಾರದಂತೆನಿಸುತ್ತದೆ. ಇದರಲ್ಲಿ ಭೂ ಸತ್ವಕ್ಕಿಂತ ರಾಸಾಯನಿಕ ಬುರುಗು ಅಧಿಕವಾದಂತಿದೆ. ಮಂತ್ರಕ್ಕಿಂತ ಉಗುಳೇ ಹೆಚ್ಚೇನೋ !

ಒಂದು ಮಾತ್ರ ಸತ್ಯ ಈ ನಲವತ್ತು ವರ್ಷಗಳ ಅವಧಿಯಲ್ಲಿ ಜಾನಪದ ಜಾಗ್ರತಿ ಸಾಕಷ್ಟಾಗಿದೆ. ಅದು ಕಷ್ಟ ಸಹ ಆಗಿದೆ. ಜನಪದ ಸಾಹಿತ್ಯ ದೃಷ್ಟಿಯನ್ನಿಟ್ಟುಕೊಂಡು ಹಲವಾರು ಸಂಗ್ರಹಗಳು, ಸಂಪಾದಿತ ಕೃತಿಗಳು ಪ್ರಕಟಗೊಂಡಿವೆ. ಆದರೆ ಅದೇ ಜನಾಪದ ಇನ್ನುಳಿದ ಶಾಖೆಗಳಲ್ಲಿ ಆಗಬೇಕಾದ ಕೆಲಸ ಇನ್ನೂ ಆಗಿಲ್ಲ. ಸಾಹಿತ್ಯಕ್ಕೆ ಸಂಬಂಧ ಪಟ್ಟಂತೆ ವಿಮರ್ಶೆ ವಿಶ್ಲೇಷಣೆ ಸಾಂಸ್ಕೃತಿಕ ಅಧ್ಯಯನಗಳೂ ಸಾಕಷ್ಟು ನಡೆದಿಲ್ಲ. ಸಮರ್ಪಕವಾಗಿಯೂ ನಡೆದಿಲ್ಲ. ಕೇವಲ ಸಂಗ್ರಹಗಳು ವೈಜ್ಞಾನಿಕ ದೃಷ್ಟಿ ಇರದ ಸಂಪಾದನೆಗಳು.

ಮರಬಳ್ಳಿ :

ಜಾನಪದ ಒಂದು ಬದುಕಿನ ವಿಧಾನ. ಅದೊಂದು ಸಂಸ್ಕೃತಿ. ಆದರೆ ಜಾನಪದವೆಂದರೆ ಜನಪದ ಸಾಹಿತ್ಯ ಮಾತ್ರ ಎನ್ನುವ ಕಲ್ಪನೆ ಬಹಳ ಜನರಿಗಿತ್ತು. ಇನ್ನೂ ಇದೆ. ಅಂತೆಯೇ ಸಮಗ್ರ ಜಾನಪದವನ್ನು ಕನ್ನಡ ಸಾಹಿತ್ಯದ ಜೊತೆ ಸಮಾವೇಶಗೊಳಿಸಿದೆವು. ಕೇವಲ ಸಾಹಿತ್ಯ ದೃಷ್ಟಿಯ ಸಾಕಷ್ಟು ಕೃತಿಗಳು ಹೊರ ಬಂದೊಡನೆ, ಇವುಗಳನ್ನು ಅಧ್ಯಯನಕ್ಕೊಳಪಡಿಸುವ ಆತುರದ ಕ್ರಮವಾಗಿ ಕನ್ನಡ ಪಠ್ಯಕ್ರಮದ ಜೊತೆ ಸೇರಿಸಲಾಯಿತು. ಕನ್ನಡ ಮರದ ಆಶ್ರಯದಲ್ಲಿ ಈ ಬಳ್ಳಿಯನ್ನು ಬೆಳೆಸಲಿಚ್ಛಿಸಿದವು. ಅದೂ ವಿಶ್ವವಿದ್ಯಾಲಯ ಮಟ್ಟದಲ್ಲಿ ! ಬುನಾದಿ ಇಲ್ಲದೆ ಶಿಖರ ಕಟ್ಟುವ ಸಾಹಸದಂತೆ ವ್ಯರ್ಥವಾಗಬಹುದೆಂಬುದನ್ನು ಆಗ ಬಹಳಷ್ಟು ಕನ್ನಡ ವಿದ್ವಾಂಸರು ಊಹಿಸಿರಲಿಲ್ಲ.

ಜಾನಪದಾಸಕ್ತ ಕೆಲವು ವಿದ್ವಾಂಸರು ಅಮೇರಿಕಾ, ಫಿನ್‌ಲ್ಯಾಂಡ ಮೊದಲಾದ ದೇಶಗಳ ಜಾನಪದ ವಿದ್ವಾಂಸರನ್ನು ಅಧ್ಯಯನ ಮಾಡುವ ಸಾಹಸ ಮಾಡಿದಂತೆಲ್ಲ, ಜಾನಪದದ ಆಳ-ಅಗಲ, ಎತ್ತರಗಳ ಕಲ್ಪನೆ ಬರಹತ್ತಿತ್ತು. ಕನ್ನಡ ಸಾಹಿತ್ಯದ ಸಹವಿಷಯವಾಗಿ ಪರಿಗಣಿಸಲ್ಪಟ್ಟದ್ದು, ಪ್ರಮುಖ ವಿಷಯವಾಗುವ ಅರ್ಹತೆಗೆ ತನ್ನ ಆಯಾಮಗಳನ್ನು ಹಿಗ್ಗಿಸತೊಡಗಿತು. ಬಳ್ಳಿ ಬೆಳೆದು ಆಶ್ರಯವಿತ್ತ ಮರದ ತುಂಬೆಲ್ಲ ಹಬ್ಬುವ ಲಕ್ಷಣಗಳು ಕಾಣತೊಡಗಿದವು. ಮರದ ಬೆಳವಣಿಗೆ ಕುಂಠಿತವಾಗ ಹತ್ತಿತ್ತು! ಹಳಗನ್ನಡ, ಶಾಸ್ತ್ರ ಸಾಹಿತ್ಯಗಳು ಅಪ್ರಸ್ತುತವೆಂದು ಅವುಗಳನ್ನು ನಿರ್ಲಕ್ಷಿಸುವ ಪ್ರಯತ್ನಗಳೂ ನಡೆಯಹತ್ತಿದವು. ಕನ್ನಡದ ಹೆಸರಿನಲ್ಲಿ ಜಾನಪದವೇ ಜಾಸ್ತಿಯಾಗುವ ಲಕ್ಷಣಗಳು ಕಂಡುಬಂದವು. ಇದರಿಂದಾಗಿ ಪ್ರಾಧ್ಯಾಪಕ ವರ್ಗದಲ್ಲಿ ಮತ-ಭೇದಗಳು ಆರಂಭವಾದವು. ಇದರ ಪರಿಣಾಮ, ಮರದಿಂದ ಬಳ್ಳಿಯನ್ನು ಬೇರ್ಪಡಿಸಲಾಯ್ತು ! ‘ಕನ್ನಡ’, ‘ಜಾನಪದ’ ಬೇರೆ ಬೇರೆ ವಿಭಾಗಗಳಾಗಿ ವಿಭಜನೆಗೊಂಡವು. ಅಣ್ಣ-ತಮ್ಮಂದಿರು ಬೇರೆಯಾದರೂ ಆಸ್ತಿಗಾಗಿ ಅಲ್ಲದಿದ್ದರೂ, ‘ಪದವಿ’ಯ ಪ್ರತಿಷ್ಠೆಗಾಗಿ ವೈಮನಸ್ಸು ಆರಂಭವಾಯ್ತು. ನ್ಯಾಯಯುತವಾಗಿ ‘ಪದವಿ’ ಹಿರಿಯಣ್ಣನಿಗೇ ಸಲ್ಲಬೇಕಾದ್ದು. ಇದೊಂದು ಅಕ್ಯಾಡೆಮಿಕ್ ಸಮಸ್ಯೆಯಾಗಿ ‘ಕನ್ನಡ’ ಮತ್ತು ‘ಜಾನಪದ’ ಪದವಿಗಳನ್ನು ಸಮಾನವೆಂದು ಮಾನ್ಯ ಮಾಡಲಾಗಲಿಲ್ಲ. ಜಾನಪದ ಪದವೀಧರರನ್ನು ಕನ್ನಡ ಉಪನ್ಯಾಸಕರಾಗಿ ನಿಯಮಿಸಿಕೊಳ್ಳಲು ಇದು ಅಡ್ಡಿಯೊಡ್ಡಿತು. ಜಾನಪದ ಉಪನ್ಯಾಸಕರೆಂದು ನೇಮಕ ಮಾಡಲು ಕಾಲೇಜುಗಳಲ್ಲಿ ಜಾನಪದ ವಿಷಯವೇ ಇರಲಿಲ್ಲ. ಹೀಗಾಗಿ ಪ್ರಯೋಜನವಿಲ್ಲದ ಪದವಿ ಪಡೆಯಲು ವಿದ್ಯಾರ್ಥಿಗಳು ಮುಂದೆ ಬರಲಿಲ್ಲ. ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಜಾನಪದವು ವಿದ್ಯಾರ್ಥಿಗಳಿಗೆ ಒಲ್ಲದ ವಿಷಯವಾಯ್ತು. ಜಾನಪದ ವಿಭಾಗಗಳನ್ನು ಮುಚ್ಚಬೇಕಾದ ಸ್ಥಿತಿ ಪ್ರಾಪ್ತವಾಯ್ತು.

ಇಲ್ಲಿ ದೋಷ ‘ಜಾನಪದ’ ವಿಷಯದ್ದಲ್ಲ, ಕನ್ನಡದ್ದೂ ಅಲ್ಲ. ಒಂದು ವಿಷಯ ಮೇಲು, ಇನ್ನೊಂದು ಕೀಳೆಂಬ ಪ್ರಶ್ನೆಯೂ ಇದಲ್ಲ. ಎರಡೂ ವ್ಯಾಪಕವಾದ ವಿಷಯಗಳನ್ನು ಒಂದು ಪಠ್ಯಕ್ರಮದಲ್ಲಿ ಇಡಲಾಗದ ಸ್ಥಿತಿ. ಉಣ್ಣುವ ಎಣ್ಣೆ, ಉರಿಯುವ ಎಣ್ಣೆ ಎರಡೂ ಸಂಸಾರಕ್ಕೆ ಅನಿವಾರ್ಯ. ಆದರೆ ಅವುಗಳನ್ನು ಒಂದೇ ಬಾಟಲಿಯಲ್ಲಿ ಹಾಕಿಡಲಾಗದಲ್ಲವೇ? ಎರಡಕ್ಕೂ ಬೇರೆ ಬೇರೆ ಬಾಟಲಿಗಳೆಬೇಕು.

ಪ್ರತ್ಯೇಕ ಪೀಠ :

ಒಂದು ದೃಷ್ಟಿಯಲ್ಲಿ ಕನ್ನಡ ಜಾನಪದವನ್ನು ಬೆಳೆಸಲು ಬಹಳಷ್ಟು ಶ್ರಮಿಸಿತು ಎನ್ನುವಲ್ಲಿ ಎರಡು ಮಾತಿಲ್ಲ. ಅದು ಜಾನಪದವನ್ನು ಎಷ್ಟು ಬೆಳಸಿತೆಂದರೆ, ಇಂದು ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ವೃತ್ತಿಯಲ್ಲಿದ್ದವರು, ಜಾನಪದ ವಿದ್ವಾಂಸರೆಂದು ಮುದ್ರೆಯೊತ್ತಿಸಿಕೊಂಡವರೇ ಬಹಳ ಜನ !

ಇಲ್ಲಿ ಜಾನಪದ ವಿದ್ವಾಂಸರಿಗೊಂದು ನನ್ನ ಸಲಹೆ, ಜಾನಪದವನ್ನು ತೇಲಿಸಿನೋಡುವ, ಸರಳಗೊಳಿಸುವ ಮನೋಭಾವ ಬದಲಾಗಬೇಕು. ಅದು ಸಂಕೀರ್ಣ ಮತ್ತು ಗಂಭೀರ ವಿಷಯ ಅದರಲ್ಲಿ ಸಾಹಿತ್ಯವಲ್ಲದ, ಮಾನವಶಾಸ್ತ್ರ ಸಮಾಜಶಾಸ್ತ್ರ, ಇತಿಹಾಸ ಮೊದಲಾದ ಹತ್ತು ಹಲವಾರು ವಿಷಯಗಳಿವೆ. ಜಾನಪದಾಸಕ್ತ ತರುಣರಲ್ಲಿ ಈ ವ್ಯಾಪಕ ದೃಷ್ಟಿ ಮೂಡಿಸಬೇಕು. ಅದೊಂದು ಸಾಂಸ್ಕೃತಿಕ ಅಧ್ಯಯನ, ಕಲಾ ಅಧ್ಯಯನ ಕಷ್ಟದ ಅಧ್ಯಯನ ಎಂಬುದನ್ನು ಬಿಂಬಿಸಬೇಕು. ನಾವು ಕನ್ನಡ ಅಧ್ಯಾಪಕರು ಮಾಡಿದ ದೊಡ್ಡ ತಪ್ಪೆಂದರೆ ‘ಜಾನಪದ’ವನ್ನು ಸರಳಗೊಳಿಸಿದ್ದು. ಜಾನಪದ ಅಧ್ಯಯನಕ್ಕೆ ಬೇಕಾದ ವೈಜ್ಞಾನಿಕ ವಿಧಾನಗಳನ್ನುನುಸರಿಸಲು ಆಂಗ್ಲ ಭಾಷಾ ಅಧ್ಯಯನದ ಅವಶ್ಯಕತೆ ಇದೆ. ಅನ್ಯ ಭಾಷಾ ಜಾನಪದ ಅಧ್ಯಯನಕ್ಕೂ ಇದು ಅತ್ಯವಶ್ಯ. ಕೇವಲ ಕನ್ನಡ ಪದವಿ ಜಾನಪದ ಅಧ್ಯಯನಕ್ಕೆ ಅರ್ಹತೆಯಲ್ಲ. (ಪದವೀ ಪರೀಕ್ಷೆಗಳಲ್ಲಿ ಅದನ್ನು ಅಳವಡಿಸಿದ ಹೊರತು) ಯಾವ ಅರ್ಹತೆಯೂ ಇರದವರು ಜಾನಪದ ಅಧ್ಯಯನಕ್ಕೆ ಸಲ್ಲುತ್ತಾರೆಂಬ ತಿಳುವಳಿಕೆ ಖಂಡಿತ ಹೋಗಬೇಕು. ಜನಪದ ಬದುಕಿನ ಅನುಭವ, ಅನ್ಯಶಾಸ್ತ್ರಗಳ ಅಧ್ಯಯನ ಇದ್ದವರು ಜಾನಪದ ಅಧ್ಯಯನಕ್ಕೆ ಮನಸ್ಸು ಮಾಡಬೇಕು.

ಇಷ್ಟೆಲ್ಲ ಬೆಳಸಿ, ತಿಳಿಸಿ ಹೇಳುವುದರ ಉದ್ದೇಶ ನನಗಿರುವ ಜಾನಪದ ಕಳಕಳಿಯಲ್ಲದೆ ಬೇರೇನೂ ಇಲ್ಲ. ನಾವೆಲ್ಲ ಕೇವಲ ಅನುಭವವನ್ನವಲಂಬಿಸಿ ‘ಜಾನಪದ ತಜ್ಞ’ ರೆನಿಸಿಕೊಂಡೆವು. ಈಗ ಅಧ್ಯಯನಕ್ಕೆ ಶಾಸ್ತ್ರೀಯ ವಿಧಾನಗಳಿವೆ. ಬೇಕಾದಷ್ಟು ಸಾಹಿತ್ಯವಿದೆ, ಅವಕಾಶಗಳಿವೆ. ಕ್ಷೇತ್ರಕಾರ್ಯದ ಹಿನ್ನೆಲೆಯಲ್ಲಿ ಹತ್ತಾರು ಶಾಸ್ತ್ರಗಳ ಸಹಾಯದಿಂದ ಕನ್ನಡ ಜಾನಪದವನ್ನು ಶ್ರೀಮಂತಗೊಳಿಸಬಹುದು. ಅದರ ವೈಶಿಷ್ಟ್ಯಗಳನ್ನು, ಉತ್ತಮಾಂಶಗಳನ್ನು ಇಂಗ್ಲೀಷಿಗೆ ಅನುವಾದ ಮಾಡಬಹುದು. ಈ ನಿಟ್ಟಿನಲ್ಲಿ ತರುಣರನ್ನು ಅಣಿಗೊಳಿಸಬೇಕು. ಅದಕ್ಕಂಟಿದ ಕೀಳರಿಮೆ ಕಳೆಯಬೇಕಾದರೆ ಅದಕ್ಕೆ ಘನತೆ, ಗೌರವ ತರುವ ನಿಟ್ಟಿನಲ್ಲಿ ವಿದ್ವಾಂಸರು ಅದಕ್ಕೊಂದು ಪ್ರಯೋಜನಾತ್ಮಕ ಪಠ್ಯಕ್ರಮ ರೂಪಿಸಬೇಕು. ಪದವಿ ಹಂತದಲ್ಲೇ ಐಚ್ಛಿಕ ವಿಷಯವಾಗಿ ಅವಕಾಶ ಕಲ್ಪಿಸಬೇಕು. ವಿಶ್ವವಿದ್ಯಾಲಯ ಅದನ್ನೊಂದು ಸ್ವತಂತ್ರ ಅಧ್ಯಯನ ವಿಭಾಗವಾಗಿ ಆರಂಭಿಸಿ ಅದಕ್ಕೆ ಅಂತರ್ ಶಿಸ್ತೀಯ ಅಧ್ಯಯನದ ಕೇಂದ್ರವಾಗುವ ಸೌಲಭ್ಯ ಕಲ್ಪಿಸಬೇಕು. ಹಾಗಾದಾಗ ಮಾತ್ರ ಪರಭಾಷೀಯರು, ಪರದೇಶಿಯರು ಅದರಿಂದ ಆಕರ್ಷಿತರಾಗುತ್ತಾರೆ. ಕನ್ನಡ ಜಾನಪದ ಹಿರಿಮೆ ಆಗ ಹೆಚ್ಚುತ್ತದೆ. ಕರ್ನಾಟಕ ವಿಶ್ವವಿದ್ಯಾಲಯ ಈ ನಿಟ್ಟಿನಲ್ಲಿ ಕ್ರಮ ಕೈಕೊಳ್ಳುವುದಾಗಿ ನಾನು ಭಾವಿಸುವೆ.

ವಿಶ್ವವಿದ್ಯಾಲಯಗಳಲ್ಲಿ :

ಕರ್ನಾಟಕದ ಏಳೂ ವಿಶ್ವವಿದ್ಯಾಲಯಗಳಲ್ಲಿ ಜಾನಪದ ಕೆಲಸ ಸಾಕಷ್ಟು ನಡೆದಿದೆ. ಕನ್ನಡ ಅಧ್ಯಯನ ಪೀಠ, ಸಂಸ್ಥೆ ವಿಭಾಗಗಳು ಕನ್ನಡದ ಬೆಳವಣಿಗೆಯನ್ನು ಮರತೇ ಜಾನಪದದ ಕೆಲಸ ಮಾಡಿವೆ. ಸಂಗ್ರಹ ಸಂಪಾದನೆ ಪ್ರಕಟನೆಗಳಲ್ಲದೆ ಸಾಕಷ್ಟು ಸಂಶೋಧನಾ ಪ್ರಬಂಧಗಳೂ ಹೊರಬಂದಿವೆ. ಬೇಕಾದಷ್ಟು ಕ್ಷೇತ್ರಕಾರ್ಯ ಮಾಡಿದ ದಾಖಲೆಗಳೂ ಇವೆ. ಆದರೆ ಪ್ರಾಂಜಲ ಮನಸ್ಸಿನಿಂದ ಒಂದು ಮಾತನ್ನು ಒಪ್ಪಿಕೊಳ್ಳಲೇಬೇಕು, ಈ ಪ್ರಬಂಧಗಳಲ್ಲಿ ಗಟ್ಟಿಗಾಳಿಗಿಂತ ಜೊಳ್ಳೇ ಅಧಿಕವಾಗಿದೆ. ಪದವಿಗಾಗಿ ಬರೆದ ಈ ಬಹಳಷ್ಟು ಪ್ರಬಂಧಗಳನ್ನು ಪ್ರಾಮಾಣಿಕ, ಅಧಿಕೃತ ಎಂದು ಹೇಳುವುದು ಕಷ್ಟ. ಬಹಳಷ್ಟು ಪ್ರಬಂಧಗಳು, ವಿಶೇಷವಾಗಿ ಜನಾಂಗಿಕ ಅಧ್ಯಯನದ ಪ್ರಬಂಧಗಳು, ಪರಿಚಯಾತ್ಮಕವಾಗಿವೆಯೇ ಹೊರತು, ಸಂಶೋಧನಾತ್ಮಕವೆನಿಸುವದಿಲ್ಲ. ಇದಕ್ಕೆ ಕಾರಣ ಜಾನಪದ ಸಂಶೋಧಕನ ಸೀಮಿತ ಅರ್ಹತೆ, ಸಂಕುಚಿತ ಜ್ಞಾನ. ಹುಟ್ಟು ಸಾವು ಮದುವೆ ಧಾರ್ಮಿಕ ಆಚರಣೆ ಆಹಾರ ವೃತ್ತಿಗಳ ವಿವರಣೆ ಕೊಡುವಲ್ಲೇ ಪರ್ಯವಸಾನಗೊಂಡಿವೆ. ಬದುಕನ್ನು ವಿಶ್ಲೇಷಿಸುವ ಬೇರಿಗಿಳಿದು ನೀರು ನೋಡುವ ಪ್ರಯತ್ನಗಳು ನಡೆದಿಲ್ಲ. ಜಾನಪದ, ತೋಂಡಿ-ಪರಂಪರೆಗಳನ್ನೆಲ್ಲ ಒಳಗೊಳ್ಳುತ್ತದೆ. ಅವುಗಳ ವಿವರಣೆ, ವಿಶ್ಲೇಷಣೆ, ಕಾರ್ಯನಿರ್ವಹಣೆ ಸಮರ್ಪಕವಾಗಿ ನಡೆಯಬೇಕು. ಆಗ ಮಾತ್ರ ಒಂದು ಜನಾಂಗವನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಆ ರೀತಿಯ ಪರಿಶ್ರಮ ಪ್ರಯತ್ನಗಳು ಜಾನಾಂಗಿಕ ಅಧ್ಯಯನದಲ್ಲಿ ನಡೆದಿಲ್ಲ. ಜನಾಂಗದ ಅಂಧಶ್ರದ್ಧೆ, ಶೋಷಣೆ ಬದುಕಿನ ವಿಧಾನದ ದೋಷಗಳನ್ನು, ಆ ಜನಾಂಗದ ಸಾಂಸ್ಕೃತಿಕ ಗುಣಗಳೆಂದೇ ವೈಭವೀಕರಿಸಿದ್ದಾಗಿದೆ. ಕುಡಿತ ಬಲಿ ಮೊದಲಾದ ಅನಿಷ್ಟಗಳನ್ನೂ ಸಮರ್ಥಿಸಿಕೊಳ್ಳುವ ಪ್ರಯತ್ನಗಳೂ ಪ್ರಬಂಧದಲ್ಲಿ ಕಾಣದೊರೆಯುತ್ತಿವೆ. ಪದವಿ, ಅಧ್ಯಯನಕ್ಕೆ ಪೂರ್ಣವಿರಾಮವಿಲ್ಲ, ಪ್ರಬಂಧ ಪಾಂಡಿತ್ಯದ ಪಾಜಗಟ್ಟಿ ಅಲ್ಲ, ಎಂಬುದನ್ನು ಬಹಳಷ್ಟು ಪ್ರಬಂಧಕಾರರು ಅರಿತಿಲ್ಲ. ಅಂತೆಯೇ ಅವರು ಪದವಿಯ ಅನಂತರ ಆ ಕ್ಷೇತ್ರಗಳಲ್ಲಿ ಕಾರ್ಯ ಮಾಡಿದ್ದೇ ಇಲ್ಲ. ಪ್ರತಿಯೊಬ್ಬರೂ ತಮ್ಮ ಪ್ರದೇಶದ, ಜನಾಂಗದ ಜಾನಪದವೇ ಶ್ರೇಷ್ಠವೆನ್ನುವುದನ್ನು ಸಾಧಿಸಹೊರಟಿದ್ದೇವೆ. ಆಯಾ ಪ್ರದೇಶಗಳ, ಕರ್ನಾಟಕಕ್ಕೆ ಸಂಬಂಧಪಟ್ಟಂತೆ ಸಹ, ಅಂತರ್ ಶಿಸ್ತೀಯ ಅಧ್ಯಯನ ನಡೆದಿಲ್ಲ. ಅದಿರಲಿ ಗುಲಬರ್ಗಾ ಪ್ರದೇಶದ ಒಂದು ಜನಾಂಗ ಮೈಸೂರ ಪ್ರದೇಶದ ಅದೇ ಜನಾಂಗಕ್ಕಿಂತ ಭಿನ್ನಬದುಕನ್ನವಲಂಬಿಸಿರುತ್ತದೆ. ಇದಕ್ಕೆ ಕಾರಣಗಳನ್ನು ಹುಡುಕುವ ತೌಲನಿಕ ಅಧ್ಯಯನಗಳೂ ನಡೆಯುತ್ತಿಲ್ಲ. ಪ್ರಾದೇಶಿಕತೆಯ ಹಿಂದಿರುವ ಬದುಕಿನ ಏಕಸೂತ್ರತೆಯನ್ನಾಗಲೀ, ಮಾನವ ಸಹಜ ಗುಣದೋಷಗಳನ್ನಾಗಲೀ, ಅಧ್ಯಯನ ಮಾಡುವ ಅವಶ್ಯಕತೆ ಇದೆ.

ಕರಾವಳಿಯ ಜನತೆಗೆ ಯಕ್ಷಗಾನ ಶ್ರೇಷ್ಠ ಕಲೆಯಾದರೆ ಬಯಲು ನಾಡಿನ ನಮಗೆ ಸಣ್ಣಾಟ-ದೊಡ್ಡಾಟಗಳು ಶ್ರೇಷ್ಠವೆನಿಸುತ್ತವೆ. ಯಾಕೆಂದರೆ ಅವು ಆಯಾ ಪ್ರಕೃತಿ ಪರಿಸರದ ಅಭಿವ್ಯಕ್ತಿ ಎಂದು ಮಾತ್ರ ಹೇಳುತ್ತೇವೆ. ಆದರೆ ಒಂದು ಉದ್ದೇಶ. ಒಂದೇ ಗುರಿ ಇರುವ ಈ ಕಲೆಗಳ ಸ್ವರೂಪ ವ್ಯತ್ಯಾಸಕ್ಕಿರುವ ಕಾರಣ, ಪರಿಣಾಮಗಳಲ್ಲಿಯೂ ಪ್ರಾದೇಶಿಕವಾಗಿರುವ ಅಂಶಗಳನ್ನು ಗುರುತಿಸಲಾಗಿಲ್ಲ. ಸಣ್ಣಾಟ ಇಡೀ ಉತ್ತರ ಕರ್ನಾಟಕದ ಕಲೆ ಎಂದು ಹೇಳಿಕೊಳ್ಳುತ್ತಿದ್ದರೂ ಕೇವಲ ಬೆಳಗಾಂವ, ವಿಜಾಪುರ ಜಿಲ್ಲೆಯ ನದಿ ತೀರದಲ್ಲಿ ಅದು ಬೆಳೆದು ಬಂದುದರ ಕಾರಣಗಳನ್ನು ನಾವಿನ್ನೂ ಅರಿತಿಲ್ಲ. ಇಂಥ ಅಧ್ಯಯನ ಸೂಕ್ಷ್ಮತೆಯ ಕಡೆಗೆ ನಾವಿನ್ನೂ ಗಮನ ಹರಿಸಿಲ್ಲ.

ಒಂದು ಜನಪದ ಕಲೆಯನ್ನು ಇದ್ದಂತೆಯೇ ಅಧ್ಯಯನ ಮಾಡುವುದರ ಜೊತೆಗೆ ಅದು ಪಡೆದುಕೊಂಡಿರುವ ಪ್ರೇರಣೆ, ಇನ್ನೊಂದು ಕಲೆಯೊಂದಿಗಿರುವ ಸಂಬಂಧ ಕಾಲಕ್ರಮದಲ್ಲಿ ಅದರಲ್ಲಾದ ಬದಲಾವಣೆ, ಅದಕ್ಕೆ ಕಾರಣಗಳನ್ನು ಕುರಿತ ಚಿಂತನೆ ನಮ್ಮಲ್ಲಿನ್ನೂ ಆರಂಭವಾಗಿಲ್ಲ. ಒಂದು ಜನಪದ ಕಥೆ ವಿಶ್ವದ ಎಲ್ಲ ಕಡೆ ಪ್ರಾದೇಶಿಕ ಭಿನ್ನತೆಯೊಂದಿಗೆ ಪ್ರಚಲಿತವಿರುವುದನ್ನು ಅಧ್ಯಯನ ಮಾಡಿದಂತೆ ಇನ್ನುಳಿದ ಸಾಹಿತ್ಯಿಕ ರೂಪ, ಕಲೆಗಳನ್ನು ಕುರಿತ ಅಧ್ಯಯನದ ಸಾಧ್ಯತೆಯನ್ನು ನಾವು ವಿಸ್ತರಿಸುತ್ತಿಲ್ಲ. ಒಟ್ಟಿನಲ್ಲಿ ಜಾನಪದದ ವಿರಾಟ್ ಸ್ವರೂಪ ದರ್ಶನ ಪಡೆಯುವತ್ತ ನಮ್ಮ ಸಾಮರ್ಥ್ಯ ಬೆಳೆಯುತ್ತಿಲ್ಲ. ಪಟ್ಟಣದ ಬಸ್ಸು, ಟ್ರೇನುಗಳಲ್ಲಿ ಬಾವಲಿಗಳಂತೆ ಜೋತುಬಿದ್ದು ತಿರುಗುವ ನಮಗೆ, ಎಮ್ಮೆಯ ತಣ್ಣನೆಯ ಬೆನ್ನೇರಿದ, ಎತ್ತಿನ ಗಾಡಿಯ ತೊಟ್ಟಿನಲ್ಲಿ ನಿಶ್ಚಿಂತರಾಗಿ ತೂಗಾಡಿದ ಅನುಭವಗಳಿಲ್ಲ. ಜಾನಪದ ವಾಸ್ತವ ಬದುಕಿನಿಂದ ವಂಚಿತರಾದ ನಮಗೆ ಅದನ್ನು ಕಲ್ಪಿಸಿಕೊಳ್ಳಲು ಅವಕಾಶವಿಲ್ಲ. ಇಂದಿನ ತರುಣ ಜನಾಂಗಕ್ಕೆ ಜಾನಪದ ಅಂತಾ ತಿಳಿಯುವುದೇ ಕಷ್ಟವಾಗಿದೆ. ಅನುಭವ ಜನ್ಯ ಜಾನಪದಕ್ಕೆ ಇಂದು ಸೈದ್ಧಾಂತಿಕ, ವೈಜ್ಞಾನಿಕ ಅಧ್ಯಯನದ ಅವಶ್ಯಕತೆಯೂ ಇದೆ ಎನ್ನುವುದನ್ನು ನಮ್ಮಂಥ ಹಿರಿಯರೂ ಅರಿಯಬೇಕಾಗಿದೆ. ಆಗ ಅದರ ಸ್ವರೂಪ ದರ್ಶನವಾದೀತು. ಅಧ್ಯಯನವನ್ನು ವೈಜ್ಞಾನಿಕವಾಗಿಸುವ ಪ್ರಯತ್ನದಲ್ಲಿ, ಜಾನಪದವನ್ನು ಜಟಿಲಗೊಳಿಸುವ ವ್ಯರ್ಥ್ಯ ಸಾಹಸವೂ ಸಲ್ಲ. ‘ಸಕಲ ಲಕ್ಷಣರಾಗಿ ಬಿರುಸು ಮಾಡಿದರೆ ಪುಸ್ತಕದ ಬದನೆಕಾಯಹುದು’ ಎನ್ನುವ ರತ್ನಾಕರವರ್ಣಿಯ ಮಾತು ನೆನಪಿರಲಿ.

ನಿರ್ಲಕ್ಷಿತ ತ್ರಿಪದಿ :

ತ್ರಿಪದಿಗಳು ಜಾನಪದ ಜೀವಾಳ. ಇಡೀ ಜನಪದ ಬದುಕಿಗೆ, ವಿಶೇಷವಾಗಿ ಸ್ತ್ರೀ ಜೀವನಕ್ಕೆ ಅವು ಕಿಡಿಕಿಗಳಂತಿವೆ. ಜನಪದ ಅಭಿವ್ಯಕ್ತಿಯ ಆನೆ ಪಾಲು ತ್ರಿಪದಿಗಳಲ್ಲಿದೆ. ಹೀಗಿದ್ದೂ ಅವುಗಳ ವಿಶೇಷಾಧ್ಯಯನ ನಡೆದಿಲ್ಲವೆಂದೇ ಹೇಳಬೇಕು. ಉಪನ್ಯಾಸಗಳಲ್ಲಿ ಉದಾಹರಿಸಿಯೋ, ಹಾಡಿಯೋ ರಂಜಿಸುವುದಕ್ಕೆ ಮಾತ್ರ ನಾವು ಅವುಗಳನ್ನು ಬಳಸಿಕೊಂಡಿದ್ದೇವೆ. ಒಂದು ತ್ರಿಪದಿ ಬಿಂಬಿಸುವ ಹತ್ತು ಹಲವು ಮುಖಗಳನ್ನು ಸೂಕ್ಷ್ಮವಾಗಿ ಅವಲೋಕಿಸುವ ಪರಿಶೀಲಿಸುವ ವಿಧಾನ ನಮ್ಮಲ್ಲಿನ್ನೂ ಬೆಳೆದುಬಂದಿಲ್ಲ.

ತ್ರಿಪದಿ ಶಬ್ದಾರ್ಥಕ್ಕಾಗಿ ಅಧ್ಯಯನ ಮಾಡುವುದಿಲ್ಲ. ಸಾಂಸ್ಕೃತಿಕ ಮೌಲ್ಯಕ್ಕಾಗಿ ಕಾವ್ಯಧರ್ಮಕ್ಕಾಗಿ, ಧ್ವನಿತಾರ್ಥಕ್ಕಾಗಿಯಂತೂ ಸರಿಯೆ. ಅದರ ಸೃಷ್ಟಿಗೆ ಕಾರಣವಾದ ಸನ್ನಿವೇಶ ಅಥವಾ ಪ್ರಸಂಗ, ಅದು ಬಿಂಬಿಸುವ ಮಾನಸಿಕ ಸ್ಥಿತಿ, ಇತಿಹಾಸ, ಕಾಲ, ಪರಿಸರ ಪ್ರದೇಶ ಭಾಷೆ ಸೃಜನಾಂತರಂಗ ಮೊದಲಾದವುಗಳನ್ನು ವಿಶ್ಲೇಷಿಸುವ ವಿಮರ್ಶಿಸುವ ಕ್ರಿಯೆಗೆ ನಾವಿನ್ನೂ ತೊಡಗಿಲ್ಲ.

ಮಟ ಮಟ ಮದ್ಯಾಣ ತಿಟಿತಿಟಿ ಕುಪ್ಪಸ
ಸೇದುವ ಹಗ್ಗ ಬಲಗೈಯ! ಹಿಡಕೊಂಡ
ಸೇದೂತ ಶಿವನ ನೆನದಾಳ

ಇದೊಂದು ಸಾಮಾನ್ಯತ್ರಿಪದಿ. ಬಾವಿಯಿಂದ ನೀರು ಸೇದುವ ತರುಣಿಯ ಚಿತ್ರ ಸ್ಫುಟವಾಗೇ ಇದೆ. ಅತ್ತೆಯ ಮನೆಯ ಸೊಸೆ, ಬರಿಗಾಲು, ಬೇಸಗೆ, ಅಂಥ ಬಿಸಿಲಲ್ಲೂ ನೀರು ತರಬಂದ ಅನಿವಾರ್ಯ ಸ್ಥಿತಿಗೆ ಅತ್ತೆಯ ಒತ್ತಾಯವೂ ತನ್ನ ಪಾಲಿಗೆ ಕರ್ತವ್ಯವೊ ಕಾರಣವಾಗಿರುವ ಸಾಧ್ಯತೆ. ಒಂದು ಕೈಯಲ್ಲಿ ಹಗ್ಗ, ಇನ್ನೊಂದು ಕೈಯಲ್ಲಿ ಕೊಡ. ಬಾವಿ ಬದುಕಿನ ಸಂಕೇತವಾದರೆ, ಕೊಡ ಅವಳಿಗೆ ಸಂಕೇತವಾಗುತ್ತದೆ. ನೀರು ಅವಳ ತೃಷೆ ಹಿಂಗಿಸುವ ಜೀವ ದ್ರವ. ಆ ಕೊಡದ ಕಂಠಕ್ಕೆ ಕಟ್ಟಿದ ಹಗ್ಗ, ನಿರಂತರ ಅವಳ ಕತ್ತು ಹಿಚುಕುವ ಸಂಕಷ್ಟ ಸಂಕೋಲೆ! ಹೆಣ್ಣಿನ ಬದುಕಿಗೇ ಅದೊಂದು ಪಾಶದ ಪ್ರತೀಕ. ಸೇದುವ ಕ್ರಿಯೆ ನಿರಂತರ ದುಡಿಮೆಯನ್ನು ಸೂಚಿಸುತ್ತದೆ. ಅಸಹಾಯಕ ಅನಿವಾರ್ಯ ಬದುಕಿನಲ್ಲಿ ಅವಳು ಶಿವನಿಗೆ ಮೊರೆ ಇಡುವ ಸ್ಥಿತಿ. ನೀರಿನ ಆಶಯಗಳ ಇತಿಹಾಸ, ಬಯಲು ಸೀಮೆಯ ಈ ತ್ರಿಪದಿಯ ಕರ್ತೃ ಹೆಣ್ಣು…… ಹೀಗೇ ಜಗ್ಗಿದಷ್ಟು ಅರ್ಥ ಬಿಚ್ಚಿಕೊಳ್ಳುತ್ತಿದೆ. ಇನ್ನೂ ಇದಕ್ಕೆ ಬೇರೆ ಬೇರೆ ವಿವರಣೆಗಳನ್ನು ನೀಡಬಹುದಾದ ಸಾಧ್ಯತೆಯೂ ಇದೆ. ಇದೊಂದು ಅವಸರದ ಉದಾಹರಣೆಯಷ್ಟೇ. ಹೀಗೆ ಪ್ರತಿಯೊಂದು ತ್ರಿಪದಿಯ ಜೀವಾಳವನ್ನು ಹಿಂಜುವ ಕ್ರಿಯೆ ನಡೆಯಬೇಕಿದೆ.

ತ್ರಿಪದಿಗಳನ್ನು ನಾವು ತೀರ ಹಗುರವಾಗಿ ಕಂಡಿದ್ದೇವೆ. ಅವುಗಳನ್ನು ಚಿಂತನೆಗೊಳಪಡಿಸಿಲ್ಲ. ಒಂದು ಕಥೆ, ಪ್ರದೇಶದಿಂದ ಪ್ರದೇಶಕ್ಕೆ ರೂಪಾಂತರಗೊಂಡರೂ ಮೂಲ ಆಶಯವನ್ನು ಕಳೆದುಕೊಳ್ಳದೆ, ಆಯಾ ಪ್ರದೇಶದ ಸಾಂಸ್ಕೃತಿಕ ಪರಿಸರವನ್ನು ಪುನರ್‌ನಿರ್ಮಿಸಿಕೊಳ್ಳುತ್ತದೆ. ತ್ರಿಪದಿಯಲ್ಲಿಯೂ ಈ ರೂಪಾಂತರ ಕ್ರಿಯೆ ನಡೆಯುತ್ತದೆ. ಅದು ಆಯಾ ಪ್ರದೇಶಗಳ ಪರಿಸರ, ಪರಿಸ್ಥಿತಿ, ಸಂಸ್ಕೃತಿಯ ಧ್ವನಿಯಾಗುತ್ತದೆ. ಅದರ ಭಾಷೆ, ಅದರ ಅಂತರ್ಗತ ಕ್ರಿಯೆಯಿಂದಾಗಿ ಅದರ ಪ್ರಾದೇಶಿಕತೆಯನ್ನು ಗುರುತಿಸಬಹುದಾಗಿದೆ.

ಸಂಸ್ಥೆಗಳ ಸಾಧನೆ :

ಜನಪದ ಕಲೆಗಳನ್ನೇ ಅಧ್ಯಯನದ ಗುರಿಯಾಗಿಸಿಕೊಂಡಿರುವ ಡಾ. ಎಚ್. ಎಲ್. ನಾಗೇಗೌಡರ ‘ಜಾನಪದ ಲೋಕ’ ಮತ್ತು ‘ಡಾ. ಕು. ಶಿ. ಹರಿದಾಸ ಭಟ್ಟರ’ ಪ್ರಾದೇಶಿಕ ಜನಪದ ರಂಗಕಲೆಗಳ ಅಧ್ಯಯನ ಕೇಂದ್ರಗಳ ಸಾಧನೆಯನ್ನು ಸ್ಮರಿಸಲೇಬೇಕು. ಅಂಥ ಯಾವ ಸಂಸ್ಥೆಗಳೂ ಉತ್ತರ ಕರ್ನಾಟಕದಲ್ಲಿ ಇಲ್ಲದಿರುವ ಕೊರತೆಯಿಂದಾಗಿ ಈ ಭಾಗದ ಜನಪದ ಕಲೆಗಳ ವ್ಯವಸ್ಥಿತ ಅಧ್ಯಯನ ಸಾಧ್ಯವಾಗಿಲ್ಲ. ಅಂಥ ಸಂಸ್ಥೆಗಳು ಧಾರವಾಡ, ಗುಲಬರ್ಗಾದಲ್ಲಿ ರೂಪಗೊಳ್ಳುವ ಅವಶಕತೆ ಇದೆ. ರಾಜ್ಯ ಜಾನಪದ ಅಕಾಡಮಿ, ನಾಡಿನ ಹಲವಾರು ಕಲಾಕಾರರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ. ಇನ್ನುಳಿದ ಅಕಾಡಮಿಗಳಿಗೆ ಹೋಲಿಸಿದರೆ, ಇನ್ನೂ ಮೌಲಿಕ, ಶಾಶ್ವತ ಕೆಲಸಗಳನ್ನು ಅಪೇಕ್ಷಿಸಬೇಕಾಗಿದೆ. ಅದರಂತೆ ಕನ್ನಡ ವಿಶ್ವವಿದ್ಯಾಲಯಕ್ಕೆ ಖ್ಯಾತ ಜಾನಪದ ವಿದ್ವಾಂಸರೇ ಕುಲಪತಿಗಳಾಗಿರುವಾಗ ಜಾನಪದ ಸಂರಕ್ಷಣೆಯ ಅಸಾಮಾನ್ಯ ಕೆಲಸ ತೀವ್ರಗತಿಯಲ್ಲಿ ಸಾಗಿರುವ ತೃಪ್ತಿ ವಿಶ್ವವಿದ್ಯಾಲಯ ಸಂದರ್ಶಕರಿಗೆ ಸಿಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ತಕ್ಕ ಮಟ್ಟಿಗೆ ತನ್ನ ಸೇವೆಯಲ್ಲಿ ಹಿಂದೆ ಬಿದ್ದಿಲ್ಲ. ಆದರೂ ಆಗಸದಗಲದ ಜಾನಪದ ಕ್ಷೇತ್ರದಲ್ಲಿ ಸಾಧಿಸಬೇಕಾದ್ದು ಬಹಳವಿದೆ.

ಪ್ರಶಸ್ತಿ :

ಕೆಲಸ ಮಾಡುವವರಿಗೆ ಪ್ರೋತ್ಸಾಹ ಪ್ರಶಸ್ತಿಗಳ ಸಿಕ್ಕುವ ಭರವಸೆ ಅಕಾಡಮಿ, ಸರಕಾರಗಳು ನೀಡುತ್ತಿವೆ. ಸರಕಾರ ಪ್ರತಿಷ್ಠಾಪಿಸಿದ ‘ಜಾನಪದ ಶ್ರೀ’ ಪ್ರಶಸ್ತಿ ಒಂದು ಉದಾತ್ತ ಪ್ರೋತ್ಸಾಹ. ಆದರೆ ಈ ಪ್ರಶಸ್ತಿಗಳು ಆಗ್ಗವಾಗದಂತೆ ನೋಡಿಕೊಳ್ಳುವುದೂ ಅಷ್ಟೇ ಮುಖ್ಯ. ಅರ್ಹತೆಗೆ ಪ್ರಶಸ್ತಿ ಸಲ್ಲಬೇಕಲ್ಲದೆ, ಪ್ರಶಸ್ತಿ ಇದೆ ಎಂದು ಯಾರಿಗಾದರೂ ಕೊಟ್ಟು ಉಪಕಾರ ಮಾಡಲಿಕ್ಕಿಲ್ಲ. ಇಂದು ಬಹಳಷ್ಟು ಕ್ಷೇತ್ರಗಳಲ್ಲಿ ಸಾಮಾಜಿಕ ಪ್ರಯೋಜನಕ್ಕಿಂತ, ಸೇವೆಯ ಹೆಸರಿನಲ್ಲಿ ಪ್ರಶಸ್ತಿಗಿಟ್ಟಿಸುವ ರಾಜಕೀಯ ಹವ್ಯಾಸ ಹೆಚ್ಚುತ್ತಿದೆ. ಪ್ರಶಸ್ತಿ, ಪ್ರಮಾಣ ಪತ್ರಗಳ ವಿದ್ವಾಂಸರ ಸಂಖ್ಯೆ ಹೆಚ್ಚಾಗುತ್ತಿದೆ. ‘ಜಾನಪದ ವಿದ್ವಾಂಸ’ ‘ಜನಪದ ಕಲಾಕಾರ’ ‘ಜನಪದ ಸಾಹಿತಿ’ ಮೊದಲಾದ ಮುದ್ರೆಯೊತ್ತಿ ಈ ಕ್ಷೇತ್ರ ಬೆಳೆಸುವ ಕೆಲಸ ನಿಲ್ಲಬೇಕು. ಅನಾಮಧೇಯರಿಂದ ಸೃಷ್ಟಿಯಾದ ಸಾಹಿತ್ಯವನ್ನು, ಕೇವಲ ಸಂಗ್ರಹಿಸಿದ ಮಾತ್ರದಿಂದ ಅವನು ಜನಪದ ಸಾಹಿತಿಯಾಗಲಾರ. ಕಲಾಕಾರರನ್ನು ಕುಣಿಸಿ, ಹಾಡಿಸಿ ಕ್ಯಾಸೆಟ್ಟು ವಿಡಿಯೋ ಸಿದ್ಧಪಡಿಸಿಕೊಂಡು ಬಂದವರೆಲ್ಲ ಕಲಾಕಾರರಾಗಲಾರರು. ಹಿಂದಿನವರು ಕೋಡಗ ಕವಲೆತ್ತು ಮೊದಲಾದ ಪ್ರಾಣಿಗಳನ್ನಾಡಿಸಿ ಬದುಕು ಸಾಗಿಸಿದಂತೆ, ಇಂದು ತಮ್ಮ ಬದುಕನ್ನು ಬಳಸುವ ವಿಧಾನವಷ್ಟೇ. ವ್ಯಕ್ತಿ ತಾನು ಬೆಳೆಸುವ ಸ್ವಾರ್ಥದ ಜೊತೆಗೆ, ಆ ಕ್ಷೇತ್ರ ಬೆಳೆಸುವ ಕಳಕಳಿಯನ್ನ ಹೊಂದಿರುವುದು ಮುಖ್ಯ.

ಇನ್ನು ವೃತ್ತಿ ನಿರತರನ್ನೆಲ್ಲ ಕಲಾಕಾರರೆಂದು ಪರಿಗಣಿಸುವ ಮನೋಭಾವ ಹೋಗಬೇಕು. ಸನಾದಿ ಊದುವವರೆಲ್ಲ ಕಲಾಕಾರರಲ್ಲ. ಆದರೆ ಅದನ್ನೊಂದು ಕಲೆಯಾಗಿಸಿದ ಶ್ರೀ ಬಿಸ್ಮಿಲಾಖಾನನಂತವರನ್ನು ಕಲಾಕಾರರೆಂದು ಗುರುತಿಸಬೇಕು. ಎಲ್ಲ ಜನಪದ ಹಾಡುಗಾರರನ್ನು ಕಲಾಕಾರರೆನ್ನಲಾಗದು. ಜನಪದದಲ್ಲಿ ವೃತ್ತಿ ಪರಿಣತಿಯೇ ಕಲೆಯಾಗುತ್ತದೆ. ಕಾಯಕ, ಕಲೆ ಎರಡೂ ಆರಾಧನೆಯ ವಿಧಾನಗಳು. ನಮ್ಮೂರಲ್ಲಿ ಹೊಲ ಬಿತ್ತುವ ಪರಿಣತರಿದ್ದರು. ಪ್ರತಿಬೀಜಕ್ಕಿರುವ ಅಂತರವನ್ನು ನಿರ್ಧರಿಸಿ ಸಮಾನಾಂತರದಲ್ಲಿ ಬೀಜ ಬಿಡುವ ಕೈಚಳಕ ಅವರದಾಗಿತ್ತು. ಎಲ್ಲಾದರೂ ಒಂದು ಕಾಳು ತಪ್ಪಿಬಿದ್ದರೆ ಅದನ್ನು ಅಗೆದು ತೆಗೆಯಿಸುತ್ತಿದ್ದರು. ಬೆಳೆ ನಾಟಿದಾಗ ನೋಡಬೇಕು. ಅವರ ಕಲಾವಂತಿಕೆಯನ್ನೂ! ಕಟ್ಟಿಗೆ ಕಲ್ಲು ಲೋಹಗಳಲ್ಲಿ ಕುಸುರಿನ ಕುಸುಮವರಳಿಸುವ ಹಲವಾರು ವೃತ್ತಿ ಕಲಾಕಾರರು ನಮ್ಮಲ್ಲಿ ಹಲವರಿದ್ದಾರೆ. ಅವರಾರೂ ಪ್ರಶಸ್ತಿಗಾಗಿ ಕೆಲಸ ಮಾಡಿದವರಲ್ಲ. ಜನಪದದಲ್ಲಿ ಕಲೆಯನ್ನೇ ವೃತ್ತಿ ಮಾಡಿಕೊಂಡು ಬದುಕಿದವರೇ ಇಲ್ಲ. ಕಲೆ ಒಂದು ರೀತಿಯ ಆರಾಧನೆ, ಆದರೆ ಆರಾಧನೆಯ ವಿಧಾನಗಳನ್ನೆಲ್ಲ ಕಲೆ, ಆರಾಧಕರನ್ನು ಕಲಾಕಾರ ಎನ್ನಲಾಗದು. ಹೇಳುವ ಉದ್ದೇಶ ಕಲೆ, ಕಲಾಕಾರರನ್ನು ಗುರುತಿಸುವ ದೃಷ್ಟಿ ನಮಗಿಂದು ಬೆಳೆಯಬೇಕಾಗಿದೆ. ಕವಿ ಸಮ್ಮೇಳನದಲ್ಲಿ ಭಾಗವಹಿಸಿದವರನ್ನೆಲ್ಲಾ ಕವಿಗಳೆಂದಂತಾಗಬಾರದು.

ಜಾನಪದ ಉಳಿಸಬಹುದೇ ?

ನಮ್ಮ ಇಂದಿನ ಪ್ರಯತ್ನಗಳೆಲ್ಲ ಜಾನಪದ ಬೆಳೆಸುವುದಕ್ಕಿಂತ ಉಳಿಸುವುದಕ್ಕೆ ಎಂದು ತಿಳಿದಿದ್ದೇವೆ. ಜಾನಪದ ಮೂಲ ದ್ರವ್ಯ ಸೃಷ್ಟಿಸುವವರಂತೂ ನಾವಲ್ಲ. ಅದನ್ನು ಉಳಿಸುವುದೆಂದರೆ ಒಂದು ಕಾಲಮಿತಿಯ ಅವಸ್ಥೆಯನ್ನು ಮಾತ್ರ ಒಂದು ವ್ಯಕ್ತಿಯ ಫೋಟೋ ತೆಗೆದಿರಿಸಿದಂತೆ ನಿತ್ಯ ಚಲನಶೀಲವಾದ ಜಾನಪದ ಪ್ರವಾಹವನ್ನು, ಅದರ ಎಲ್ಲಾಕಾಲದ ಸ್ಥಿತಿಯಲ್ಲಿ ಕಾದಿರಿಸಲಾಗದು. ಅದು ನಿತ್ಯ ಸ್ಥಿತ್ಯಂತರಗೊಳ್ಳುತ್ತಲೇ ಇರುತ್ತದೆ. ವೃತ್ತಿಲಯವೇ ಉಸಿರಾದ ಕಲೆ, ಸಾಹಿತ್ಯ, ವೃತ್ತಿಗಳು ಬದಲಾದಂತೆ, ಬದುಕಿನ ವ್ಯವಸ್ಥೆ ಬದಲಾದಂತೆ ಬದಲಾಗುತ್ತಲೇ ಬಂದಿವೆ. ಬಾಯಿಂದ ಬಾಯಿಗೆ ಬದಲಾಗುತ್ತ ಬಂದ ಜಾನಪದಕ್ಕೊಂದು ಶಾಶ್ವತ ಅಂಗಿ ಹೊಲಿಸಿಡಲಾಗದು. ಆದರೆ ಆಸಕ್ತರ, ವಿದ್ವಾಂಸರ ಕೆಲಸ, ಕಾಲಾನುಕಾಲದ ಅದರ ಸ್ವರೂಪ, ಸ್ಥಿತ್ಯಂತರಗಳನ್ನು ಗುರುತಿಸಿ ದಾಖಲಿಸುವುದು ಮಾತ್ರ.

ಇಂದು ಜನಪದ ಕಲೆಗಳ ಹೆಸರಿನಲ್ಲಿ ಜಾನಪದವೂ ಅಲ್ಲದ, ಕಲೆಯೂ ಅಲ್ಲದ ‘ಜನಪದ ಕಲಾ’ ಪ್ರದರ್ಶನಗಳು ನಡೆಯುತ್ತಿವೆ. ಕಲೆಯ ಸ್ವರೂಪವನ್ನರಿಯದ ನಾವು ಜಾನಪದದ ಹೆಸರಿನಲ್ಲಿ ಗ್ರಂಥ, ಕ್ಯಾಸೆಟ್ಟು, ವಿಡಿಯೋಗಳಲ್ಲಿ ಶಬ್ದ, ಧಾಟಿ, ಚಿತ್ರಗಳನ್ನು ಸಂಗ್ರಹಿಸಿಡಬಹುದಾದರೂ, ಮಣ್ಣಿನಿಂದ ಬಂದ ಜಾನಪದ ಮನೋಧರ್ಮವನ್ನು ಸೆರೆಹಿಡಿದಿಡುವುದು ಹೇಗೆ ಸಾಧ್ಯ? ಜನಪದ ಅಭಿರುಚಿ, ಮನೋಭಾವವಿರುವ ತರುಣರು, ನಮ್ಮ ಸಂಗ್ರಹಗಳನ್ನು ಪಾಶ್ಚಾತ್ಯರಿಗೆ ಮಾರಿ ಹಣ ಮಾಡಲೊ, ಇಲ್ಲವೆ ಪ್ರಮಾಣ ಪತ್ರಕ್ಕೆ ಮಾಡುವ ಸಂಶೋಧನೆಗೋ ಬಳಸಿಕೊಳ್ಳಬಹುದಷ್ಟೇ.

ಜನಪದ ಮನೋಧರ್ಮವನ್ನು ಕುರಿತೂ ಒಂದು ಮಾತು ಇಲ್ಲೇ ಹೇಳುವುದು ಉಚಿತ. ಯಾಕೆಂದರೆ ಜನಪದರಿಗೆ ಬದುಕೇ ಒಂದು ಪರಿಶುದ್ಧ ಕಲೆಯಾಗಿತ್ತು. ಅವರ ನ್ಯಾಯ ನೀತಿ ಬಂಧುತ್ವ ಪ್ರಾಮಾಣಿಕತೆ ಸಹಕಾರ ಪ್ರೀತಿ ವಿಶ್ವಾಸಗಳು ಅವರ ಬದುಕಿನ ಸೂತ್ರಗಳಾಗಿದ್ದವು. ಕೊಂಡ ಹೊಲದಲ್ಲಿ ಸಿಕ್ಕ ನಿಧಿಯ ನ್ಯಾಯ, ಮೀಸೆ ಒತ್ತೆ ಇಟ್ಟು ಸಾಲ ತರುವ ಪ್ರಾಮಾಣಿಕತೆ, ಅನ್ಯರನ್ನೂ ಅಣ್ಣ, ತಮ್ಮ, ಅಪ್ಪ, ಅವ್ವ, ಎಂದು ಪ್ರೀತಿಸಿ ಗೌರವಿಸುವುದು, ಹುಟ್ಟು, ಸಾವು ಮದುವೆ ಮೊದಲಾದ ಪ್ರಸಂಗಗಳಲ್ಲಿ ತೋರಿಸುವ ಸಹಕಾರ ಸಹಾನುಭೂತಿ, ನಿತ್ಯದ ಬದುಕಿಗೆ, ಕಡಮುಯ್ಯ. ಇವೆಲ್ಲವುಗಳನ್ನೊಳಗೊಂಡ ಸಹಬಾಳ್ವೆಯ ಮನೋಧರ್ಮವನ್ನು, ಮುಂಬರುವ, ನಾಗರಿಕ ಹೆಸರಿನ ಅನಾಗರಿಕ ಜನಾಂಗಕ್ಕೆ ಆಸ್ತಿಯಾಗಿಸುವುದಾದರೂ ಹೇಗೆ? ದಲಿತ ಸಾಹಿತಿ, ದಲಿತ ಕಲಾಕಾರರು, ಹಿಂದುಳಿದವರ ಕಲೆ, ಅಲ್ಪಸಂಖ್ಯಾತರ ಹಾಡು ಮೊದಲಾಗಿ ಕಲಾ ಲೋಕವನ್ನೇ ವಿಭಜಿಸುವ ಮಾರಕ ಮನೋಧರ್ಮ ಬೆಳೆಸುವ ದುರಂತದ ದಾರಿಯಲ್ಲಿ ನಾವಿದ್ದೇವೆ.

ಸಂಶೋಧನೆ :

ಜನಪದರ ಸಂಶೋಧನೆಗಳು ಮನುಕುಲದ ಕಲ್ಯಾಣಕ್ಕೆಂದು ಮಾಡಿದವುಗಳಲ್ಲದೆ, ಪದವಿ ಪ್ರಶಸ್ತಿಗಾಗಿ ಮಾಡಿದವುಗಳಲ್ಲ, ಹಳ್ಳಿಯ ಬಡಿಗನೊಬ್ಬ ಮಾಡಿರಬಹುದಾದ ‘ಗಾಲಿ’ ಎಂಥ ಅದ್ಭುತ ಸಂಶೋಧನೆ ಎನ್ನಬೇಕು? ಇಂದು ಗಾಲಿ ಇಲ್ಲದ ಯಂತ್ರಗಳೇ ಇಲ್ಲ. ಇಡೀ ವಿಶ್ವ ಗಾಲಿಯ ಮೇಲೆ ಉರುಳುತ್ತದೆ. ಅದನ್ನು ಮಾಡಿದ್ದಕ್ಕಾಗಿಯೇ ಅವರನ್ನು ‘ವಿಶ್ವಕರ್ಮ’ ರು ಎಂದಿರಬೇಕು.! ಇದಕ್ಕೆ ಪ್ರೇರಣೆ ಸದಾ ಚಲಿಸುವ, ಸೂರ್ಯ ಚಂದ್ರರೇ ಆಗರಿಬೇಕು. ಎಮ್ಮೆ, ಆಕಳ ಹಾಲನ್ನೇ ಏಕೆ ಬಳಸಿದರು? ಎತ್ತಿನ ಹೆಗಲು, ಕುದುರೆಯ ಬೆನ್ನು ಆಕಳಿನ ಕೆಚ್ಚಲನ್ನೇ ಏಕೆ ಉಪಯೋಗಿಸಿಕೊಂಡರು? ಅವರ ಅನಂತ ಕಾಲದ ಎಲ್ಲ ಸಂಶೋಧನೆಗಳಿಂದಲೇ ನಮಗೊಂದು ಸಿದ್ಧ, ವ್ಯವಸ್ಥಿತ ಸ್ವರೂಪದ ಪ್ರಪಂಚ ಲಭ್ಯವಾಗಿದೆ. ಬೇವಿನ ಗುಣಧರ್ಮವನ್ನು ಶೋಧಿಸಿದ ಜನಪದರು ಅದನ್ನು ಹತ್ತಾರು ಕಡೆ ಪ್ರಯೋಜನಾತ್ಮಕವಾಗಿ ಬಳಸುತ್ತಿದ್ದಾರೆ. ಅದು ಮೌಲಿಕವೆಂದು ಪೂಜಿಸುತ್ತಲೂ ಇದ್ದಾರೆ. ಆದರೆ ಇಂದು ಅದರ ಬೃಹತ್ ಪ್ರಯೋಜನಕ್ಕೆ ಲಾಭಕ್ಕೆ ಬಹುರಾಷ್ಟ್ರೀಯ ಕಂಪನಿಗಳು ಹೆಣಗುತ್ತಿವೆ. ಮೂಲದ್ರವ್ಯ, ನಮ್ಮದ್ದು. ಸಂಶೋಧನಾ ಬುದ್ಧಿ ನಮ್ಮದು. ಆದರೆ ಅದರ ಲಾಭ ಇನ್ನಾರಿಗೂ! ಹೀಗೆ ಜಾನಪದ ಕ್ಷೇತ್ರದ ಹಲವಾರು ಸಂಶೋಧನೆಗಳು ಪರರ ಪಾಲಾಗಿ ನಮ್ಮ ಸ್ಥಿತಿ ಯಥಾಸ್ಥಿತಿಯಾಗಿದೆ. ಆಯುರ್ವೇದ ಪದ್ಧತಿಯಸಂಶೋಧನಾ ಸಾಮಗ್ರಿ ಜನಪದರಲ್ಲಿ ಹೇರಳವಾಗಿದೆ. ಅವುಗಳ ಅಭಿವೃದ್ಧಿಗೆ ಸರಕಾರ ಕ್ರಮಕೈಕೊಳ್ಳುತ್ತಿಲ್ಲ. ಜನಪದರಿಗೆ ಹಲವಾರು ಅಮೂಲ್ಯ ಔಷಧಗಳ ಪರಿಚಯವಿದೆ. ಪಶುಚಿಕಿತ್ಸಾ ವಿಧಾನಗಳನ್ನು ಬಲ್ಲ ತಜ್ಞರೂ ಅಲ್ಲಿದ್ದಾರೆ. ಅವರಿಗೆ ಗೌರವಧನ ನೀಡಿ ಅವುಗಳನ್ನು ಪಡೆದು, ತಂತ್ರಜ್ಞಾನದ ನೆರವಿನಿಂದ ಅವುಗಳನ್ನು ಅಭಿವೃದ್ಧಿಪಡಿಸಿದರೆ ಮನಕುಲಕ್ಕೇ ಅವುಗಳ ಪ್ರಯೋಜನವಾದೀತು.

ಅದರಂತೆ ಜನಪದ ಸಂಗೀತ, ನೃತ್ಯ ಮತ್ತು ಚಿತ್ರಕಲೆಗಳಲ್ಲಿ ಅಪೇಕ್ಷಿತ ಸಂಶೋಧನೆ ನಡೆದಿಲ್ಲ. ಶಿಷ್ಟ ಪರಿಣತರು, ಈ ಕಡೆಗೆ ವಿಶೇಷ ದೃಷ್ಟಿ ಹಾಯಿಸಬೇಕಿದೆ. ಚಿತ್ರಗಳ ಬಣ್ಣ ತಯಾರಿಕಾ ವಿಧಾನ, ಅವುಗಳ ಮೂಲದ್ರವ್ಯಗಳ ಶೋಧ ನಡೆಯಬೇಕಿದೆ. ಜನಪದ ಸಂಶೋಧನೆಯ ಪ್ರಮುಖ ಉದ್ದೇಶ ಮನುಕುಲದ ಪ್ರಯೋಜನಕ್ಕೆಂಬುದನ್ನು ಮರೆಯಲಾಗದು. ಸಾಹಿತ್ಯಕ್ಕೆ ಸಂಬಂಧಪಟ್ಟಂತೆ, ಕೆಲವು ಸಂಶೋಧನಾ, ಪ್ರಬಂಧಗಳು ಗಮನಾರ್ಹವಾಗಿವೆ. ಜಾನಪದ ಸಂಶೋಧನೆಗಾಗಿ ವೈವಿಧ್ಯಮಯ ಮೂಲದ್ರವ್ಯ ಹೇರಳವಾಗಿದೆ. ಅದನ್ನು ಕುರಿತಿರುವ ಜನಪದರ ತಿಳುವಳಿಕೆಯ ಪ್ರಯೋಜನವನ್ನು ಪಡೆವ ಪ್ರಯತ್ನವನ್ನು ಸರಕಾರದ ನೆರವಿನಿಂದ ಪಂಡಿತರು ಮಾಡಬೇಕು.

ಪತ್ರಿಕೆ :

ಜ್ಞಾನದ ಪರಿಧಿಯನ್ನು ಹಿಗ್ಗಿಸಲು ಅಭಿವ್ಯಕ್ತಿಯ ಮಾಧ್ಯಮಗಳ ಅವಶ್ಯಕತೆ ಇದೆ. ಮಾಧ್ಯಮಗಳು ವ್ಯವಹಾರಿಕ ಮನೋವೃತ್ತಿಯವಾಗಿದ್ದರೆ, ಕಲೆ ಸಾಹಿತ್ಯಗಳ ಸ್ವರೂಪ ಕೆಡುವ ಭಯ ಇದ್ದೇ ಇದೆ. ಅಧಿಕ ಅಪಾಯಕಾರಿಯಲ್ಲದ ಪತ್ರಿಕೆಗಳು ಜಾನಪದ ಅಭಿವ್ಯಕ್ತಿಯನ್ನು ದಾಖಲಿಸಬಲ್ಲವು. ಜಾನಪದಕ್ಕೆ ಮೀಸಲಾದ ಪತ್ರಿಕೆಗಳೇ ಕನ್ನಡದಲ್ಲಿರದಿರುವ ದೊಡ್ಡ ಕೊರತೆಯೊಂದಿದೆ. ಡಾ. ನಾಗೇಗೌಡರ ‘ಜಾನಪದ ಜಗತ್ತು’ ತೀರ ಚಿಕ್ಕದು. ಗಂಭೀರ, ವಿಸ್ತಾರ ವಿಷಯ ಪ್ರತಿಪಾದನೆಗೆ ಅಲ್ಲಿ ಸ್ಥಳಾವಕಾಶವಿಲ್ಲ. ವಾರ್ತಾ ಇಲಾಖೆಯ ‘ಜನಪದ’ದ ಉದ್ದೇಶವೇ ಬೇರೆ. ಇನ್ನು ಅಕ್ಯಾಡೆಮಿಯ ‘ಜಾನಪದ ಗಂಗೋತ್ರಿ’ ಶುಭಾರಂಭ ಮಾಡಿದ್ದರೂ ಅದನ್ನು ನಿಯಮಿತವಾಗಿ ನಡೆಯಿಸಿಕೊಂಡು ಬರುವಲ್ಲಿಯ ತೊಂದರೆ ಅರ್ಥವಾಗದು. ಅಲ್ಲದೆ ಗುಣ ಗೌರವ ಕಾಯ್ದುಕೊಂಡು ಬರುವುದು ಅದಕ್ಕೂ ಸಾಧ್ಯವಾಗಿಲ್ಲ. ಜಾನಪದ ಸಂಶೋಧನೆ, ಹೊಸ ವಿಷಯಗಳ ಪ್ರತಿಪಾದನೆಗೆ ಒಂದಲ್ಲ ಕೆಲವು ಪತ್ರಿಕೆಗಳ ಅವಶ್ಯಕತೆ ಇದೆ. ಕೇವಲ ಕನ್ನಡ ಜಾನಪದಕ್ಕಷ್ಟೇ ಅಲ್ಲ, ಅನ್ಯ ಶಾಸ್ತ್ರಗಳ ಪರಿಣತರ ಲೇಖನಗಳನ್ನು ಅದು ಆಕರ್ಷಿಸಬೇಕು.

ಪ್ರಾದೇಶಿಕ ಪದಕೋಶ :

ಕನ್ನಡ ಜನಪದ ಭಾಷಾಧ್ಯಯನ ಶಾಸ್ತ್ರೀಯವಾಗಿ ನಡೆಯದಿರುವ ಕೊರತೆಯೊಂದಿದೆ. ಅದಕ್ಕೆ ಪೂರಕವಾಗಿ ಜಾನಪದ ಪ್ರಾದೇಶಿಕ ಪದಕೋಶಗಳನ್ನು ಸಿದ್ಧಪಡಿಸಬೇಕು. ಒಂದು ಕನ್ನಡ ಪ್ರದೇಶ, ಇನ್ನೊಂದು ಕನ್ನಡ ಪ್ರದೇಶದ ಜನಪದಕ್ಕೆ ಅರ್ಥವಾಗದ ಪದಗಳನ್ನೂ ಹೊಂದಿದೆ. ಈ ಪ್ರಾದೇಶಿಕ ಭಿನ್ನತೆಗೆ ಕಾರಣ, ಪರಸ್ಪರ ಸಂಬಂಧಗಳನ್ನು ಹುಡುಕುತ್ತ, ಸಮಗ್ರ ಕನ್ನಡದ ಶಬ್ದ ಶ್ರೀಮಂತಿಕೆಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಇದರಿಂದಾಗಿ ಇಡೀ ಕರ್ನಾಟಕಕ್ಕೆ ಒಂದು ಸಮನ್ವಯ ಭಾಷೆಯನ್ನು ಸಿದ್ಧಪಡಿಸಬಹುದೇನೋ ! ಉತ್ತರ ಕರ್ನಾಟಕದ ನಾವು, ಇನ್ನೊಬ್ಬರ ಕನ್ನಡವನ್ನು ಅನುಕರಿಸುತ್ತ ನಮ್ಮ ಜನಪದ ಭಾಷೆಯನ್ನು ನಿರ್ಲಕ್ಷಿಸುತ್ತಿದ್ದೇವೆ. ಒಂದು ಭಾಷೆ ಹಾಳಾದರೆ ಒಂದು ಸಂಸ್ಕೃತಿ ಹಾಳಾಗುತ್ತದೆ. ನಮ್ಮ ಆಡುಮಾತಿನ ಶಬ್ದಗಳು ಚಲಾವಣೆಯ ಹೊರಗುಳಿದು ಜಿಡ್ಡುಗಟ್ಟಿಕೊಂಡು ಅರ್ಥ ಕಳೆದುಕೊಳ್ಳುತ್ತವೆ. ನಮ್ಮ ಸಾಂಸ್ಕೃತಿಕ ಸೊಗಡಿಗೆ ಧಕ್ಕೆಯಾಗುತ್ತದೆ.

ಒಂದು ಜೋಳದ ದಂಟಿನ ವಿವಿಧ ಭಾಗಗಳನ್ನೇ ನೋಡಬಹುದು. ಬುಡುಚಿ, ಗಣಕಿ, ಸಿಬರು, ಬೆಂಡು, ರವದಿ, ಉಣಚಿ ಸುಳಿ ಹೊಡೆ, ತೆನೆ ಗೊಂಡೆ ಗುನಿ ಸುಂಕ ಹೂ, ಹೂಗಾಳು ಹಾಲ್ಗಾಳು ಸೀತನಿ ಹುರಗಾಳು ಜೋಳ ಇಷ್ಟು ಶಬ್ದಗಳಿವೆ. ದಂಟೆಂದರೆ ‘ರಾಜಗಿರಿ ಪಲ್ಯೆ’ ಎಂದು ತಿಳಿಯುವ ಮೈಸೂರಿನವರಿಗೆ ಈ ಎಲ್ಲ ಶಬ್ದಗಳು ಅರ್ಥವಾಗುವುದು ಅಸಾಧ್ಯ. ನಮ್ಮ ತರುಣರಿಗೇ ಈ ಶಬ್ದ ಸಂಪತ್ತಿನ ಅರ್ಥಗೊತ್ತಿಲ್ಲ. ಅದರಂತೆ ಇನ್ನೊಂದು ಪ್ರದೇಶದ ಬೆಳೆ ಸಸ್ಯ ವೃತ್ತಿ ಪದಗಳು ನಮಗೆ ಅರ್ಥವಾಗುವುದಿಲ್ಲ. ಒಂದು ಹಣ್ಣಿನ ಹಲವು ಅವಸ್ಥೆಗಳನ್ನು ಹೆಸರಿಸಲೂ ಬೇಕಾದಷ್ಟು ಶಬ್ದಗಳಿವೆ. ಕಾಯಿ ಹೂ, ಹೂಗಾಯಿ, ಮಿಡಿ ಕಸುಕು (ಕಡ್ಗಾಯಿ) ಪಾಡ್ಗಾಯಿ, ಡ್ವಾರಗಾಯಿ, ಹಣ್ಣು, ಈ ಶಬ್ದ ಸೂಕ್ಷ್ಮಗಳೆಲ್ಲ ನಾಳಿನ ಜನಾಂಗಕ್ಕೆ ಅರ್ಥವಾಗುವುದೇ ಇಲ್ಲ. ಇವುಗಳನ್ನೆಲ್ಲ ಪ್ರಾದೇಶಿಕ ಪದಕೋಶಗಳಲ್ಲಿ ಸೆರೆ ಹಿಡಿದಿಟ್ಟರೆ ಸಾಲದು, ದೈನಂದಿನ ಮಾತು ಬರಹಗಳಲ್ಲಿ ಚಲಾವಣೆಗೆ ತರಬೇಕು.

ನಮ್ಮ ತರುಣ ಸ್ನೇಹಿತರಿಗೊಂದು ಕಿವಿಮಾತು, ಓದಿ ಕೊಂಡವರು, ವಿಶೇಷವಾಗಿ ಕನ್ನಡ ಉಪನ್ಯಾಸಕರು, ಮೈಸೂರ ಕಡೆಯವರ ಮಾತುಗಳನ್ನು ಅನುಕರಣೆ ಮಾಡಲೆತ್ನಿಸುತ್ತಾರೆ. ನಮ್ಮ ಪರಿಸರದ, ನಮ್ಮ ಜನಪದರ ಭಾಷೆ ಬಳಸಲು ಅವರಿಗೆ ನಾಚಿಕೆ. ಕಲಿತವರೆಂದರೆ ಜನಪದರಿಗಿಂತ ಎಲ್ಲ ರೀತಿಯಲ್ಲಿ ಭಿನ್ನವಾಗಿರಬೇಕೆಂಬ ಭ್ರಮೆ ಇದಕ್ಕೆ ಕಾರಣವಿರಬೇಕು. ನಾಗರಿಕತೆಯ ಸೆಳವಿಗೆ ಸಿಕ್ಕು ಆಡುವವರ ಮಾತು, ಇತ್ತ ಕನ್ನಡವೂ ಅಲ್ಲದ, ಅತ್ತ ಇಂಗ್ಲೀಷ ಅಲ್ಲದ ಒಂದು ಹೊಸ ತಳಿ, ಜನಪದ ಸಂಪರ್ಕ ಕಳೆದುಕೊಂಡವರು ಜನಪದ ಭಾಷೆ ಸೊಗಸು, ಸಾಂಸ್ಕೃತಿಕ ಸೌಷ್ಠವದಿಂದಲೂ ವಂಚಿತರಾಗಿದ್ದಾರೆ. ಅಂಥವರು ಜಾನಪದ ಅಧ್ಯಯನ ಕೈಕೊಳ್ಳುವುದು ಹೇಗೆ? ನಾಳಿನ ಅವರ ನೆರವಿಗೆ ಪ್ರಾದೇಶಿಕ ಪದಕೋಶಗಳನ್ನು ವಿದ್ವಾಂಸರು ಸಿದ್ಧಪಡಿಸುವುದು ಅಗತ್ಯವೆನಿಸುತ್ತದೆ. ಅದರಂತೆ ಪಡೆನುಡಿಗಳನ್ನೂ ಸಂಗ್ರಹಿಸಬಹುದಾಗಿದೆ.

ಜಾನಪದಶಿಷ್ಟ :

ಅನುಭವ ಜನ್ಯ ಜಾನಪದ, ಅಧ್ಯಯನ ಜನ್ಯ ಶಿಷ್ಟಗಳ ಸಂಬಂಧ ಕುರಿತು ಚರ್ಚೆ ಈಗ ಹಳೆಯದಾಗಿದೆ. ಆದರೂ ಶಿಷ್ಟ ಸಾಹಿತ್ಯ, ಕಲೆಗಳಲ್ಲಿ ಜಾನಪದೀಯ ಅಂಶಗಳನ್ನು ಹುಡುಕುವ ಹವ್ಯಾಸ ಹೆಚ್ಚುತ್ತಿದೆ. ಜಾನಪದ ಭೂಮಿಕೆ ಇರದೆ ಶಿಷ್ಟ ಸೌಧ ನಿರ್ಮಾಣವಾಗದೆಂಬುದು ಈಗ ಸಂಸ್ಥಾಪಿತ ಸತ್ಯ, ಜಾನಪದ ಬೇರಿನ ಮೇಲೇ ಶಿಷ್ಟದ ಹೂವು ಹಣ್ಣು, ಅವುಗಳ ಗಂಧ ರಸಕ್ಕೆ ಮತ್ತೆ ಜಾನಪದ ರುಚಿ ಅನಿವಾರ್ಯ. ಬರಿಯ ಜಾನಪದ ಬಳಕೆ ಮಾತ್ರದಿಂದ, ಶಿಷ್ಟ ಶ್ರೇಷ್ಠವಾಗುತ್ತದೆಂಬ ಭ್ರಮೆ ಕೆಲವರದು. ಅದೂ ಸತ್ಯವಲ್ಲ. ಜಾನಪದ ದ್ರವ್ಯದ ಸಮರ್ಪಕ, ಸಮರ್ಥ ಬಳಕೆಯಿಂದ ಸಾಯಿತ್ಯ ಕಲೆ ಹೆಚ್ಚು ವಾಸ್ತವವೆನಿಸುತ್ತದೆ. ಆದರೆ ಅವುಗಳ ಶ್ರೇಷ್ಠತೆ ಆ ದ್ರವ್ಯಕ್ಕೆ ಸಂಸ್ಕಾರಕೊಡುವ ಸೃಜನ ಕ್ರಿಯೆಯ ಸಾಮರ್ಥ್ಯವನ್ನವಲಂಬಿಸಿರುತ್ತದೆ.

ಇಂದು ಹಲವಾರು ತರುಣರು ಜನಪದ ಧಾಟಿಗಳನ್ನು ಬಳಸಿಕೊಂಡು ಮಧುರ ಚೆನ್ನ ಬೇಂದ್ರೆಯವರಂತೆ ಕವನ ಬರೆಯಲೆತ್ನಿಸುತ್ತಿದ್ದಾರೆ. ಆದರೆ ಕಾವ್ಯಕ್ಕೆ ಶ್ರೇಷ್ಠತೆ ಕೇವಲ ಛಂದೋವೇಷದಿಂದ ಮಾತ್ರ ಬರುವದಿಲ್ಲ. ಅದು ಅಸಹ್ಯ ಅನುಕರಣ ಮಾತ್ರ ಎನಿಸುತ್ತದೆ. ಜಾನಪದಕ್ಕೊಂದು ಸಂಸ್ಕಾರ ಕೊಟ್ಟು ಅದನ್ನು ಸಮಕಾಲೀನಗೊಳಿಸುವ ಕಲಾವಂತಿಕೆ ಶ್ರೇಷ್ಠತೆಯ ಗುಟ್ಟು, ಎಂಬುದನ್ನರಿಯಬೇಕು.

ಜನಪದ ದ್ರವ್ಯ :

ಜನಪದ ದ್ರವ್ಯವನ್ನು ಬಳಸಿಕೊಂಡು, ನಾಟಕ ಕಾದಂಬರಿಗಳು ಕನ್ನಡದಲ್ಲಿ ಹಲವಾರು ಬಂದಿವೆ. ಅವು ಆಧುನಿಕ ಬದುಕಿನ ದೃಷ್ಟಿಕೋನಕ್ಕನುಗುಣವಾಗಿ, ಜನಪದ ಭಾಷೆ ತಂತ್ರಗಳನ್ನು ಬಳಸಿಕೊಂಡು, ಸೃಜನಶೀಲ ಅಭಿವ್ಯಕ್ತಿಯ ಶಕ್ತಿಯಿಂದಾಗಿ ಸಮಕಾಲೀನ ಸಹೃದಯರಿಗೆ ಆಕರ್ಷಕವೆನ್ನಿಸಿ, ಜನಜನಿತವೂ ಆಗಿವೆ. ಆದರೆ ಅವು ತಮ್ಮ ಸಾಹಿತ್ಯಿಕ ಶ್ರೇಷ್ಠತೆಯನ್ನು ಸಂಸ್ಥಾಪಿಸಲು ಇನ್ನೂ ಕಾಲಾವಕಾಶ ಬೇಕು. ಬಹಳ ಹಳೆಯದು ಮತ್ತೆ ಬಳಕೆಗೆ ಬಂದಾಗ ಹೊಸದೆನಿಸುವುದು ಸ್ವಾಭಾವಿಕ. ಆದರೆ ಅದು ನಿತ್ಯ ನೂತನವಾಗಿಯೇ ಎಷ್ಟು ಕಾಲ ಉಳಿಯಬಲ್ಲದು ಎಂಬುದನ್ನು ಕಾದು ನೋಡಬೇಕು. ಚಿನ್ನವನ್ನು ಯಾರೂ ಕೊಂಡು ತರಬಹುದು. ಅದನ್ನು ರಸಿಕರು ಧರಿಸುವ ಸುಂದರ ಅಲಂಕಾರವಾಗಿಸುವ ಕಲೆ ಡಾ. ಕಂಬಾರ, ಡಾ. ಕಾರ್ನಾಡ, ಡಾ. ಭೈರಪ್ಪರಂಥ ಕೆಲವರಿಗೆ ಮಾತ್ರ ಸಾಧಿಸಿದೆ.

ಇಂದು ನಮ್ಮ ಸಂಗ್ರಹಕ್ಕೆ ಸಿಕ್ಕುವ ಜನಪದ ಸಾಹಿತ್ಯ, ಕೇವಲ ಒಂದೆರಡು ತಲೆಮಾರು ಹಿಂದಿನದು ಮಾತ್ರ. ನೃಪತುಂಗ ಹೇಳಿದ ಕುರಿತೋದದ ಪರಿಣತಮತಿಗಳ ಕಾವ್ಯ ಸ್ವರೂಪವೂ ನಮಗೆ ತಿಳಿದಿಲ್ಲ. ಸಾಮಾನ್ಯರ ಸಮೂಹವಾದ ಜನಪದ ನಿರ್ಮಾಣವಾದಂದೇ ಜಾನಪದ ಸೃಷ್ಟಿಯಾಗಿದೆ. ಅಂದಿನಿಂದ ಈವರೆಗೆ ಅಸಂಖ್ಯಾತ ಘಟನೆಗಳು, ಅಸಾಮಾನ್ಯ ವ್ಯಕ್ತಿಗಳು, ಯುದ್ಧಗಳು, ಪ್ರಾಕೃತಿಕ ಸ್ಥಿತ್ಯಂತರಗಳು ಆಗಿಹೋಗಿವೆ. ಅವನ್ನೆಲ್ಲ ಕುರಿತು ಜನಪದ ಸಾಹಿತ್ಯಕಲೆ ಸಾಕಷ್ಟು ಸೃಷ್ಟಿಯಾಗಿರಬೇಕು. ಆದರೆ ಅದೆಲ್ಲ ಮೌಖಿಕವಾಗಿ ಕೆಲಕಾಲ ಉಳಿದು ಜನಮನದಲ್ಲಿ ಹೆಪ್ಪುಗಟ್ಟಿ ಅನಂತರ ಸಂಸ್ಕೃತಿಯಾಗಿ, ಜೀವದ್ರವದೊಂದಿಗೆ ಸೇರಿಕೊಂಡು, ನಿರಂತರ ನಮ್ಮಲ್ಲಿ ಪ್ರವಹಿಸುತ್ತಲಿದೆ. ಇದನ್ನು ಸಮಕಾಲೀನ ಪ್ರಜ್ಞೆಯೊಂದಿಗೆ ಬೆರೆಸಿಕೊಂಡು, ಆಧುನಿಕ ಸಾಹಿತ್ಯ ರೂಪಿಸಬೇಕು. ಆ ಸಾಹಿತ್ಯ ಸತ್ವಯುತವಾಗುವಲ್ಲಿ ಸಂಶಯವೇ ಇಲ್ಲ.

ಪಂಚಭೂತಗಳು :

ಈ ಸಮ್ಮೇಳನದಲ್ಲಿ ಜನಪದ ನಂಬಿಕೆಗಳನ್ನು ಕುರಿತು ವಿಶ್ಲೇಷಿಸಲು ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ನಂಬಿಕೆ ಜನಪದ ಬದುಕಿನ ಜೀವನಾಡಿ. ಆದರೆ ನಾವಿಂದು ನಂಬಿಕೆಗಳಲ್ಲಿಯೇ ನಂಬಿಕೆ ಕಳೆದುಕೊಂಡಿದ್ದೇವೆ. ನಾವು ನಂಬಿಗಸ್ಥರೇ ಅಲ್ಲವೇನೋ! ಜನಪದರು ಮಾತ್ರ ನಿಸರ್ಗ ಮತ್ತು ಜೀವ ಜಗತ್ತಿನೊಂದಿಗೆ ಆಚಲ ನಂಬಿಕೆ ಇಟ್ಟುಕೊಂಡಿದ್ದಾರೆ. ಮಳೆ, ಬೆಳೆ, ಗಾಳಿ ಮೊದಲಾದ ನಿಸರ್ಗದ ಕ್ರಿಯೆಯಲ್ಲಿ ನಿಸ್ಸಂಶಯ ನಂಬಿಕೆ ಅವರಿಗೆ. ಪಂಚಭೂತಗಳು ಅವರಿಗೆ ದೇವರುಗಳು, ಪಂಚ ಮುಖದ ಪರಮಾತ್ಮ ಈ ಶರೀರ ಪಂಚಭೂತಗಳಿಂದಾದುದೆಂಬ ವೈಜ್ಞಾನಿಕ ಸತ್ಯ ಅವರಿಗೆಂದೋ ಹೊಳೆದಿದೆ.

ಜನಜೀವದಾಯಿ, ನೆಲ ಸಲಹುವತಾಯಿ, ಬೆಂಕಿ ಬಳಸುವ ಹಸಿವೆ, ಗಾಳಿ ಚಲನಶೀಲ ಶಕ್ತಿ, ಆಕಾಶ ಎಲ್ಲವನ್ನು ತನ್ನಲ್ಲಿ ಅರಗಿಸಿಕೊಳ್ಳುವ ಅನಂತ. ಹುಟ್ಟಿನಿಂದ ಸಾವಿನ ವರೆಗಿನ ಪ್ರತಿ ಹೆಜ್ಜೆಯಲ್ಲಿಯೂ ಅವರಿಗೆ ಅಪಾರ ನಂಬಿಕೆ. ಅಂತೆಯೇ ಅವರ ನಿಶ್ಚಿಂತರು, ಪ್ರಶಾಂತರು.

ದೇವರು-ದೆವ್ವ, ಮಾನವ, ಪ್ರಾಣಿ ಮತ್ತು ಸಸ್ಯ ಸಂಬಂಧಿ ನಂಬಿಕೆಗಳನ್ನು ಮಾತ್ರ, ಲೆಕ್ಕಹಾಕಿ ಪ್ರಾಸ್ತಾಪಿಸಿದರೆ ಸಾಲದು. ನಂಬಿಕೆಯ ಕಾರಣ, ಪರಿಣಾಮ ಅವುಗಳ ವೈಜ್ಞಾನಿಕ ವಿಶ್ಲೇಷಣೆ, ಸಾಂಸ್ಕೃತಿಕ ಸಾಮಾಜಿಕ ಪ್ರಾಮುಖ್ಯತೆ, ಪ್ರಯೋಜನ, ಮೌಢ್ಯ ಬದುಕಿಗೆ ಅವು ಆಸರೆಯಾದ ಬಗೆ ಮತ್ತು ನಂಬಿಕೆಯ ಹಿಂದಿರುವ ಮಾನಸಿಕ ಸ್ಥಿತಿ-ಗತಿ. ಹೀಗೆ ಹಲವಾರು ದೃಷ್ಟಿಕೋನದಿಂದಳೆದ ಸತ್ಯಸ್ವರೂಪ ದರ್ಶನವನ್ನು ಪ್ರಬಂಧಕಾರರು ಮಾಡಿಸುತ್ತಾರೆಂಬ ನಂಬಿಕೆ ನನಗಿದೆ.

ಸಮ್ಮೇಳನಗಳ ಸಾಧನೆ :

ಇಂದು ಆವೇಶ ಭರಿತ ಸಮಾವೇಶಗಳು, ವಿಚಾರಗಳೇ ಇಲ್ಲದ ವಿಚಾರ ಸಂಕಿರಣಗಳು, ತಾಳ-ಮೇಳವಿಲ್ಲದ ಸಮ್ಮೇಳನಗಳು ಎಲ್ಲ ಕ್ಷೇತ್ರಗಳಲ್ಲಿ ನಡೆಯುತ್ತಿವೆ. ಆದರೆ ಅವುಗಳಿಂದ ಹೊರಬರುವ ಹೂರಣ ತೀರ ಕಡಿಮೆ, ಅದೂ ಪ್ರಯೋಜನಕ್ಕಲ್ಲದ್ದು ಅನಿಸುತ್ತದೆ. ಪರಿಣತರೆನಿಸಿಕೊಂಡು ಬಂದ ಬಹಳಷ್ಟು ಪ್ರಬಂಧಕಾರರು, ತಮ್ಮ ವಿಷಯ ಕುರಿತು ಆಳ ಅಧ್ಯಯನ, ವ್ಯಾಪಕ ಚಿಂತನ, ಗಂಭೀರ ಆಲೋಚನೆ ಮಾಡದಿರುವ ಸಂದರ್ಭಗಳೇ ಹೆಚ್ಚು. ಬರೆದು ತಂದುದನ್ನೆಲ್ಲ ಓದಿ ಮುಗಿಸಲು ಸಮಯಾಭಾವವಿರುವ ವೇದಿಕೆಯಲ್ಲಿ ಚರ್ಚೆಗೆ ಅವಕಾಶವೇ ಇರುವದಿಲ್ಲವೆಂದಾಗ, ನಿರ್ಣಯಾತ್ಮಕವಾಗಿ ಏನನ್ನೂ ಸ್ವೀಕರಿಸುವ ಪ್ರಶ್ನೆಯೇ ಇರುವದಿಲ್ಲ. ಬಹಳ ಕಡೆಗೆ ಸಾದರಪಡಿಸಿದ ಪ್ರಬಂಧಗಳನ್ನು ಪ್ರಕಟಿಸುವ ವ್ಯವಸ್ಥೆಯೂ ಇರುವದಿಲ್ಲ. ಅವೆಲ್ಲ ಗಾಳಿಗೆ ತೂರಿಬಿಟ್ಟ ಶಬ್ದಗಳಾಗುತ್ತವೆ. ಬರೆದು ತರುವುದೇನು ಬಂತು? ಅಲ್ಲೇ ಕಾಸಿ ಅಲ್ಲೇ ಬಡಿವ ಪ್ರಕಾಂಡ ಪಂಡಿತರೂ ನಮ್ಮಲ್ಲಿದ್ದಾರೆ. ಇಂಥ ಸಮಾವೇಶಗಳಲ್ಲಿ ಜಗಳ, ಮನಸ್ತಾಪಗಳಾದ ಹಲವಾರು ಪ್ರಸಂಗಗಳೂ ಇವೆ. ! ಸಾರ್ವಜನಿಕ ಹಣ, ಸಹೃದಯರ ಸಮಯ ಖರ್ಚು ಮಾಡಿ ಸಾಧಿಸಿದ್ದೇನು? ಎಂಬ ಪ್ರಶ್ನೆ ನಮ್ಮ ಮುಂದಿರಬೇಕು. ಇಲ್ಲವಾದಲ್ಲಿ ಈ ಸಭೆ ಸಮ್ಮೇಳನಗಳಿಗೆ ಅರ್ಥವಿಲ್ಲ. ಇನ್ನೊಬ್ಬರ ವಿಚಾರಗಳನ್ನು ಕೇಳಿ ತಿಳಿದುಕೊಳ್ಳಬೇಕೆನ್ನುವ ಆಸಕ್ತಿ, ಆ ವಿಚಾರಗಳನ್ನು ಸ್ವೀಕರಿಸುವ ಅಥವಾ ನಿರಾಕರಿಸುವ ಪ್ರಾಂಜಲ ಮನಸ್ಸು, ಇಂದಿನ ದೊಡ್ಡ ಕೊರತೆ. ಇದಕ್ಕೆಲ್ಲ ಕಾರಣ, ನಾವು ಪರಸ್ಪರದಲ್ಲಷ್ಟೇ ಅಲ್ಲ, ಎಲ್ಲದರಲ್ಲೂ ನಂಬಿಕೆ ಕಳೆದುಕೊಂಡಿದ್ದೇವೆ. ನಮ್ಮನ್ನು ನಾವೇ ನಂಬುತ್ತಿಲ್ಲ.

ಕರ್ನಾಟಕ ವಿಶ್ವವಿದ್ಯಾಲಯ ವ್ಯವಸ್ಥೆಗೊಳಿಸುತ್ತ ಬಂದ ಈ ಸಮ್ಮೇಳನಗಳದ್ದೊಂದು ಅಳಿಸಲಾಗದ ದಾಖಲೆ. ಇವುಗಳ ಸಾರ್ಥಕ್ಯ ಸಣ್ಣದೇನಲ್ಲ. ಸಮ್ಮೇಳನಗಳ ಕಲಾಪಗಳನ್ನೆಲ್ಲ ‘ಜಾನಪದ ಸಾಹಿತ್ಯ ದರ್ಶನ’ಗಳಲ್ಲಿ ಪ್ರಕಟಿಸಿ ದೊಡ್ಡ ಉಪಕಾರ ಮಾಡಿದ್ದಾರೆ. ಅಧ್ಯಯನಾಸಕ್ತ ಜನಪದರಿಗೆ, ತರುಣ ಸಂಶೋಧಕರಿಗೆ ಇದೊಂದು ಪ್ರಯೋಜನಾತ್ಮಕ, ಅಮೌಲ್ಯ ಅಕ್ಷಯನಿಧಿ.

ಬಯಕೆ :

‘ಅಧ್ಯಕ್ಷ’ ಎಂದರೆ ‘ಸರ್ವಜ್ಞ’ನೆಂದೇನೂ ಅರ್ಥವಲ್ಲ. ನನ್ನ ಅನುಭವದ ಹಿನ್ನೆಲೆಯಲ್ಲಿ ನನಗನಿಸಿದ್ದನ್ನು ಪ್ರಾಮಾಣಿಕವಾಗಿ ಹೇಳಿದ್ದೇನೆ. ನಾನು ಹೇಳಿದ್ದೇ ಸತ್ಯ ಎನ್ನುವ ಹಟ ನನ್ನದಲ್ಲ, ಯಾರ ಮನಸ್ಸು ನೋಯಿಸುವ ಉದ್ದೇಶವೂ ನನಗಿಲ್ಲ. ಜಾನಪದ ಸತ್ವದಿಂದ ಇಂದಿನ ಬದುಕು ಸುಸಂಸ್ಕೃತವಾಗಿ ಬೆಳೆಯಬೇಕು. ಜನಪದ ಸಮಷ್ಠಿ ಸುಖ ಸಮೃದ್ಧಿ ನೆಮ್ಮದಿಯಿಂದ ಬದುಕಬೇಕೆಂಬುದೇ ನಮ್ಮ ಹೆಬ್ಬಯಕೆ.

ಒಟ್ಟಿನಲ್ಲಿ ಮಾನವ ಜನಾಂಗವನ್ನು ಒಂದು ತಾಯಿ ಬೇರಿಗೆ ಒಂದೇ ಹೊಕ್ಕಳು ಹುರಿಗೆ ಸೇರಿಸುವ ಕೆಲಸ ಇಂದು ಪ್ರಪಂಚದ ತುಂಬ ನಡೆಯಬೇಕಿದೆ. ಜನಪದ ಕಲೆ, ಸಾಹಿತ್ಯಗಳು ಈ ನಿಟ್ಟಿನಲ್ಲಿ ಸಹಕಾರಿಯಾಗಬಲ್ಲವು ಎಂಬುದು ನನ್ನ ನಂಬಿಕೆ. ಮನುಷ್ಯ ಆಹಾರ, ಆವಾಸ, ವೇಷ, ಬಣ್ಣಗಳಲ್ಲಿ ಬೇರೆ ಬೇರೆಯಾಗಿಕಂಡರೂ ಅವನ ನಗೆ ಕಣ್ಣಿರಿಗೆ ಒಂದೇ ಅರ್ಥವಿದೆ. ಸ್ವಭಾವ ಸದ್ವರ್ತನೆಯಲ್ಲಿ ಒಂದೇ ಆಗಿದ್ದಾನೆ. ಮನುಕುಲದ ಇಂದಿನ ವಿಚ್ಛಿದ್ರಕಾರಿ ವ್ಯತ್ಯಾಸಗಳಿಗೆಲ್ಲ ಜಾನಪದ ದಿವ್ಯೌಷಧವಾಗಬಲ್ಲುದೇನೋ ! ದೇಶ, ಧರ್ಮ, ಜಾತಿ ಮತ ಪ್ರಾಂತ, ಪಂಥ, ಯಾವುದೇ ಆಗಿರಲಿ ಮನುಷ್ಯ ಜಾತಿ ತಾನೊಂದೆ ವಲಂ ಎಂದು ಸಾರುವ ಮಂತ್ರದ ಜಾನಪದ, ಇಂದಿನ ಬದುಕಿನ ಅನಿವಾರ್ಯಗಳಲ್ಲೊಂದಾಗಿದೆ. ವಿಶ್ವ ಕುಟುಂಬ ಕಟ್ಟುವ ಶಕ್ತಿ ಸಾಮರ್ಥ್ಯದ ಈ ಜಾನಪದ ಕನ್ನಡ ಕುಲವನ್ನು ಒಂದಾಗಿ ಕಟ್ಟಿ, ಒಮ್ಮುಖವಾಗಿ ಪ್ರವಹಿಸುವಂತೆ ಮಾಡಲೆಂದು ಹಾರೈಸೋಣ. ಯಾರ ಕೈಂಕರ್ಯವಿಲ್ಲದೆ ಮುನ್ನಡೆಯೋಣ.

ಮಂದೇನ ಕೊಟ್ಟೀತ ಮನವೇನ ತಣಿದೀತ
ಮಂಜಾಣದಾನ ಗಿರಿಮಲ್ಲ! ಕೊಟ್ಟರ
ಮನೆ ತುಂಬಿ ನಮ್ಮ ಮನತುಂಬಿ

ಎಂಬುದನ್ನು ನಂಬಿ, ಸ್ವಾಭಿಮಾನ ಸಾಹಸಮಯ ಬಾಳನ್ನು ಬಾಳೋಣ. ಅದಕ್ಕೆ ಬೇಕಾದ ಜೀವನ ಮೌಲ್ಯಗಳನ್ನು ಜಾನಪದದಿಂದ ಪಡೆಯೋಣ.