ಪರಮಪೂಜ್ಯ ಶ್ರೀಮಾನ್ ನಿರಂಜನ ಜಗದ್ಗುರು ಶ್ರೀ ಅನ್ನದಾನೀಶ್ವರರ ಪಾದಾರವಿಂದಗಳಲ್ಲಿ ನನ್ನ ಭಕ್ತಿಪೂರ್ವಕ ಪ್ರಣಾಮಗಳು. ಮಾನ್ಯ ಸಚಿವರಾದ ಶ್ರೀ ಎಸ್. ಎಸ್. ಪಾಟೀಲ ಅವರೇ, ಖ್ಯಾತ ಜಾನಪದ ತಜ್ಞರಾದ ಡಾ. ಬಿರಾದಾರ ಅವರೇ, ಪ್ರಾಚಾರ್ಯರಾದ ಎ.ಬಿ. ಹಿರೇಮಠ ಮತ್ತು ಪಾಟೀಲ ಅವರೇ ಶ್ರೀ ಮಾಳಗಿ ಅವರೇ, ಗೋಷ್ಠಿಗಳಲ್ಲಿ ಭಾಗವಹಿಸಲು ಬಂದ ನಾಡಿನ ಗಣ್ಯ ವಿದ್ವಾಂಸರೇ, ಮುಂಡರಗಿಯ ಸಮಸ್ತ ಮಹಾಜನರೇ ಎಲ್ಲ ಅಧಿಕಾರಿ ಬಂಧುಗಳೇ, ಪ್ರಸಾರ ಮಾಧ್ಯಮದ ಪ್ರತಿನಿಧಿಗಳೇ, ಬಂಧುಗಳೇ, ಭಗಿನಿಯರೇ ಮತ್ತೊಮ್ಮೆ ಎಲ್ಲರಿಗೂ ಸ್ವಾಗತ.

ಮುಂಡರಗಿ ಪ್ರದೇಶ ಧಾರವಾಡ ಜಿಲ್ಲೆಯ ತೀರ ದಕ್ಷಿಣಕ್ಕಿದೆ. ತುಂಗಭದ್ರಾ ನದಿ ಅದರ ದಕ್ಷಿಣ (ಕೆಳಗಿನ) ಮೇರೆ, ಯಾವತ್ತೂ ಮಳೆಯ ಅಭಾವದಿಂದ ಕಷ್ಟ ಪಡುವ ಈ ಪ್ರದೇಶ ಕೂಡ ಇತ್ತೀಚೆಗೆ ಕೊಳವೆ ಭಾವಿಗಳು ತುಂಗಭದ್ರೆಯ ಯಾತ ನೀರಾವರಿ ಯೋಜನೆಗಳು ಮುಂತಾದವುಗಳಿಂದಾಗಿ ಅಭಿವೃದ್ಧಿಯ ದಾರಿಯಲ್ಲಿ ಮುನ್ನಡೆಯುತ್ತಿದೆ.

ತುಂಗಭದ್ರೆಯ ಎಡದಂಡೆಯ ಈ ಪ್ರದೇಶ ಹಲವಾರು ಕಾರಣಗಳಿಂದಾಗಿ ಪ್ರಸಿದ್ಧವಾಗಿದೆ. ಈ ಪ್ರದೇಶದಲ್ಲಿ ಬೇರೆ ಕಡೆಗೆ ಅಲಭ್ಯವಾಗಿರುವ ಅಪೂರ್ವ ಗಿಡಮೂಲಿಕೆಗಳು ಇವೆಯೆಂದು ಇಲ್ಲಿನ ಜಾನಪದರು ಹೇಳುತ್ತಾರೆ. ಬೀಜವೇ ಇಲ್ಲದ ಹಣ್ಣುಗಳನ್ನು ವೈಜ್ಞಾನಿಕವಾಗಿ ಬೆಳೆಯಿಸುವ ಕೃತಕ ಪ್ರಯತ್ನಗಳು ಎಲ್ಲೆಡೆ ನಡೆಯುತ್ತಿದ್ದರೆ ಇಲ್ಲಿ ನಿಸರ್ಗವೇ ಬೀಜವಿಲ್ಲದ ಬೋರೆಯ ಹಣ್ಣನ್ನು ಸೃಷ್ಟಿ ಮಾಡಿದೆ. ಈ ತಾಲೂಕಿಗೆ ನಿಸರ್ಗ ಕರುಣಿಸಿರುವ ಇನ್ನೊಂದು ಅಪೂರ್ವ ಜಾಗೆ ಎಂದರೆ ಸಿಂಗ ತಾಲೂಕಿನ ವೀರಭದ್ರ ದೇವಸ್ಥಾನದ ಪರಿಸರ. ಅಲ್ಲಿ ಮುಂಗಾರಿನಲ್ಲಿ ಕಾಣುವ ತುಂಗಭದ್ರೆಯ ರುದ್ರ ರಮಣೀಯ ದೃಶ್ಯವನ್ನು ನೋಡಿಯೇ ಆನಂದಿಸಬೇಕು.

ಮುಂಡರಗಿಯ ಪ್ರದೇಶ ಕರ್ನಾಟಕದ ಚರಿತ್ರೆಯ ದೃಷ್ಟಿಯಿಂದಲೂ ಮಹತ್ವಪೂರ್ಣವಾಗಿದೆ. ಮೇವುಂಡಿ ಮೊದಲಾದೆಡೆಗಳಲ್ಲಿ ಕಂಡು ಬರುವ ಚಾಲುಕ್ಯ ಮತ್ತು ರಾಷ್ಟ್ರಕೂಟದ ಶಾಸನಗಳು, ಡಂಬಳದಲ್ಲಿ ಸಿಕ್ಕಿರುವ ಬೌದ್ಧ ವಿಹಾರದ ಅವಶೇಷಗಳು ಮತ್ತು ಶಾಸನ ಈ ದಿಶೆಯಲ್ಲಿ ಕರ್ನಾಟಕ ಚರಿತ್ರೆಯಲ್ಲಿಯೇ ಅಪೂರ್ವ ದಾಖಲೆ ಎನಿಸಿವೆ. ತೋಂಟದ ಸಿದ್ಧಲಿಂಗೇಶ್ವರರ ಶಿಷ್ಯ ಪರಂಪರೆಯ ಬಹುಮುಖ್ಯವಾದ ಮಠವೊಂದು ಡಂಬಳದಲ್ಲಿದೆ. ಇದರ ಜಗದ್ಗುರುಗಳು ನಾಡಿನ ಸಾಹಿತ್ಯ ಮತ್ತು ಧರ್ಮಗಳ ಕ್ಷೇತ್ರಕ್ಕೆ ಅಪಾರ ಕಾಣಿಕೆ ಸಲ್ಲಿಸುತ್ತಿರುವುದು ನಮಗೆಲ್ಲ ತಿಳಿದಿದೆ.

ಈ ಪ್ರದೇಶ ಸ್ವಾತಂತ್ರ್ಯ  ಹೋರಾಟಗಾರರಿಗೂ ಜನ್ಮವಿತ್ತಿದೆ. ಡಂಬಳದ ದೇಸಾಯಿ ಮತ್ತು ಮುಂಡರಗಿಯ ಭೀಮರಾಯರು, ಹಮ್ಮಿಗೆಯ ಕೆಂಚನಗೌಡರು, ಕೋಗಲೂರ ಬಸವಯ್ಯನವರು ಮೊದಲಾದ ಗಂಡುಗಲಿಗಳು ಈ ನೆಲದಲ್ಲಿ ಜನ್ಮತಳಿದಿದ್ದಾರೆ. ಮರಾಠರ ಕಾಲದಲ್ಲಿ ಕೂಡ ಅವರ ಆಡಳಿತದ ಅತೀ ದಕ್ಷಿಣದ ಕೇಂದ್ರ ಪಟ್ಟಣವಾಗಿ ಮುಂಡರಗಿ ವಿಖ್ಯಾತವಾಗಿತ್ತು.

ಇಂದಿನ ತುರ್ತು ಅವಶ್ಯಕತೆಯಾದ ಶಿಕ್ಷಣ ಕ್ಷೇತ್ರದಲ್ಲಿ ಕೂಡ ಮುಂಡರಗಿ ವಿಶೇಷ ಆಸಕ್ತಿಯನ್ನು ತೋರುತ್ತಿದೆ. ಶ್ರೀ ಅನ್ನದಾನೀಶ್ವರ ಮಠದ ಶ್ರೀಗಳು ಮತ್ತು ಬೆಲ್ಲದ ಬಂಧುಗಳಂತಹ ದಾನಿಗಳು ಇಲ್ಲಿ ಶಾಲೆ ಕಾಲೇಜುಗಳು ರೂಪುಗೊಳ್ಳಲು ಕಾರಣೀಭೂತರಾಗಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅಷ್ಟೇ ಅಲ್ಲದೆ ಸಂಸ್ಕೃತಿಯ ಕ್ಷೇತ್ರದಲ್ಲಿಯೂ ಕೂಡ ಈ ವಿದ್ಯಾಸಂಸ್ಥೆಗಳು ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವುದು ತುಂಬಾ ಸಂತೋಷದ ವಿಷಯ. ಕೆ. ಆರ್. ಬೆಲ್ಲದ ಮಹಾವಿದ್ಯಾಲಯವು ಈಗ ಹತ್ತಾರು ವರ್ಷಗಳಿಂದ ಎಡೆಬಿಡದೆ ಸಾಹಿತ್ಯ, ಧರ್ಮ, ಕಲೆಗಳನ್ನು ಕುರಿತಾದ ವಿಚಾರ ಸಂಕೀರ್ಣಗಳನ್ನು ವಿದ್ವದ್‌ಗೋಷ್ಠಿಗಳು, ಚರ್ಚೆಗಳು ಮೊದಲಾದುವುಗಳನ್ನು ಸಂಘಟಿಸಿ ನಡೆಸುತ್ತಿರುವುದಲ್ಲದೆ ಅವಕ್ಕೆ ಸಂಬಂಧಪಟ್ಟ ಗ್ರಂಥಗಳನ್ನು ಕೂಡ ತಪ್ಪದೆ ಪ್ರಕಟಿಸುತ್ತ ಬಂದಿವೆ. ಮೊನ್ನೆ ಅಷ್ಟೇ ‘ಅಲಕ್ಷಿತ ಶರಣರನ್ನು’ ಕುರಿತಂತೆ ವಿಚಾರ ಗೋಷ್ಠಿಗಳನ್ನು ಈ ಮಹಾವಿದ್ಯಾಲಯ ಸಂಘಟಿಸಿದ್ದು ಶ್ಲಾಘನೀಯವಾದ ಕಾರ್ಯ. ಡಾ. ಹಾ.ಮಾ. ನಾಯಕರು, ಡಾ. ಜಿ.ಎಸ್. ಶಿವರುದ್ರಪ್ಪನವರು, ಶ್ರೀ ಚೆನ್ನವೀರ ಕಣವಿಯವರು ಮೊದಲಾದ ನಾಡಿನ ಹಲವಾರು ಗಣ್ಯ ಸಾಹಿತಿಗಳು, ಬರಹಗಾರರು ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮೆಚ್ಚಬೇಕಾದ ಸಂಗತಿ.

ಜಗತ್ತಿನ ತುಂಬ ಈಗ ಜಾನಪ ಅಧ್ಯಯನ ಬಹು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಈ ವಿಷಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯವೂ ಕೂಡ ಹಿಂದೆ ಬಿದ್ದಿಲ್ಲ. ಕರ್ನಾಟಕ ಜಾನಪದ ಹಲವಾರು ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಇಂಥ ಸಮ್ಮೇಳನಗಳನ್ನು ನಮ್ಮ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನಪೀಠ ನಡೆಸುತ್ತ ಬಂದಿದೆ. ಬಯಲಾಟ, ಲಾವಣಿ, ಗೀಗೀ ಸಂಪ್ರದಾಯ, ಉತ್ತರ ಕರ್ನಾಟಕದ ಜಾನಪದ ವೃತ್ತಿಕಾರರು, ಆಯಗಾರರು, ಗ್ರಾಮದೇವತೆಗಳು, ಜಾನಪದ ಹಬ್ಬಗಳು, ಏಳುಕೊಳ್ಳದ ಎಲ್ಲಮ್ಮ, ಮೈಲಾರಲಿಂಗ, ಐತಿಹ್ಯ-ಪುರಾಣ ತೊಗಲುಗೊಂಬೆಯಾಟ, ಸಸ್ಯ, ಪ್ರಾಣಿ, ಖನಿಜ, ವಸತಿ ಊಟೋಪಚಾರ, ಉಗ್ರಾಚರಣೆ ಹಲವಾರು ಜಾನಪದ ಜೀವನದ ಆಯಾಮಗಳನ್ನು ಅವುಗಳಲ್ಲಿ ಸಾಂಸ್ಕೃತಿಕ ಅಂಶಗಳನ್ನು ಈ ಸಮ್ಮೇಳನಗಳು ಬೆಳಕಿಗೆ ತರುತ್ತವೆ. ನಾಡಿನ ಖ್ಯಾತ ವಿದ್ವಾಂಸರಿಂದ ವಿಚಾರ ಮಂಡನೆ, ಚರ್ಚೆ, ಗೋಷ್ಠಿಗಳನ್ನು ನಡೆಯಿಸಿ ಈ ಕ್ಷೇತ್ರಕ್ಕೆ ಅಪೂರ್ವ ಕಾಣಿಕೆ ಸಲ್ಲಿಸುತ್ತಲಿದೆ. ಇವುಗಳ ಫಲಸ್ವರೂಪವಾಗಿ ಈಗಾಗಲೇ ಪ್ರಕಟಿಸಿರುವ ೧೯ ‘ಜಾನಪದ ಸಾಹಿತ್ಯ ದರ್ಶನ’ ಸಂಪುಟಗಳು ಜಾನಪದ ಸಂಶೋಧಕರಿಗೆ ಜ್ಞಾನದ ಗಣಿಗಳಾಗಿ ನಿಂತಿವೆ.

ಈಗ ಜಾನಪದ ನಂಬಿಕೆಗಳನ್ನು ಕುರಿತಾದ ಈ ಸಮ್ಮೇಲನವು ಕೂಡ ಅಪೂರ್ವವಾಗಿದೆ. ಮಾನವ ಜೀವನವನ್ನು ನಿಜವಾಗಿ ನಂಬಿಕೆಗಳೇ ಆಳುತ್ತವೆ. ವ್ಯಕ್ತಿ, ಕುಟುಂಬ, ಸಮಾಜ, ಗ್ರಾಮ, ನಗರಜೀವನ, ರಾಜಕಾರಣ, ವಿಜ್ಞಾನ ಈ ಎಲ್ಲ ಕ್ಷೇತ್ರಗಳಲ್ಲಿಯೂ ನಮ್ಮ ನಂಬಿಕೆಗಳು, ನಮ್ಮ ಚಟುವಟಿಕೆಗಳನ್ನು ನಿಯಂತ್ರಿಸುತ್ತಾ ಇರುವುದು ನಮಗೆಲ್ಲ ಗೊತ್ತು. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ದಿನ ನಮ್ಮ ಮಹಾನ್ ನಾಯಕರೂ ಕೂಡ ಜೋತಿಷ್ಯದಲ್ಲಿಟ್ಟಿದ್ದ ನಂಬಿಕೆ ಕಾರಣವಾಗಿ ಮಧ್ಯರಾತ್ರಿಯ ತರುವಾಯ ಸ್ವಾತಂತ್ರ್ಯಾಧಿಕಾರ ಪಡೆದುಕೊಂಡಿದ್ದು, ಈಗ ಇತಿಹಾಸ ನಮ್ಮ ವಿಜ್ಞಾನಿಗಳು ರಾಕೇಟ್, ಉಪಗ್ರಹಗಳ ಉಡಾವಣೆಯಂತ ವೈಜ್ಞಾನಿಕ ಕಾರ್ಯಗಳಿಗೆ, ಅನೇಕ ರೋಗಗಳಿಗೆ ಸಾಮಾಜಿಕ ವಿಷಮತೆಗೆ ಕೂಡ ಕೆಲವು ಅನಪೇಕ್ಷಿತ ನಂಬಿಕೆಗಳು ಮೂಲವಾಗಿವೆ. ಇತ್ತೀಚೆಗೆ ನಮ್ಮ ದೇಶದಲ್ಲಿ ಏಡ್ಸ್ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಡಾ. ಗಿಲಾರ್ಡ ಅವರು ಏಡ್ಸನ್ನು ಸಮರ್ಥವಾಗಿ ತಡೆಗಟ್ಟುವಲ್ಲಿ ನಮ್ಮ ಸಮಾಜದಲ್ಲಿರುವ ಕೆಲವು ಕುರುಡು ನಂಬಿಕೆಗಳು ಪ್ರಬಲವಾದ ಅಡ್ಡಿಯಾಗಿವೆಯೆಂದು ಹೇಳಿದ್ದಾರೆ. ಇದರಿಂದ ನಂಬಿಕೆಗಳು ಎಷ್ಟು ಪ್ರಬಲ ಎಂಬುದನ್ನು ನಾವು ಮನಗಾಣಬಹುದು. ಎಂತಲೇ ಇ ಮತ್ತು ಎಂ.ಎ. ರ್ಯಾಡ್‌ಫೋರ್ಡ ಎಂಬ ಪ್ರಖ್ಯಾತ ವಿದ್ವಾಂಸ ನಂಬಿಕೆಗಳ ಒಂದು ವಿಶ್ವಕೋಶವನ್ನೇ ತಯಾರಿಸಿದ್ದಾರೆ. ಆದ್ದರಿಂದ ಇಂಥ ಜಾನಪದಶಾಸ್ತ್ರ ವಿಷಯಗಳು ಎಲ್ಲೋ ಕೆಲವು ವಿದ್ವಾಂಸರ ತೆವಲು ಎಂದಾಗಿರದೇ ನಮ್ಮ ನಿತ್ಯ ಜೀವನವನ್ನು ನಿಯಂತ್ರಿಸುವ ಮತ್ತು ಮುಂದೆ ಅನಂತ ಕಾಲದವರೆಗೆ ನಿರ್ದೇಶಿಸುವ ಮಹಾನ್ ಶಕ್ತಿಗಳು. ನಂಬಿಕೆಗಳಲ್ಲಿ ಪ್ರಚಂಡ ಶಕ್ತಿಯೇ ಅಡಗಿದೆ. ನಮ್ಮ ಧರ್ಮಗಳಲ್ಲಿ ನಿಹಿತವಾಗಿರುವ ತತ್ವಗಳೆಲ್ಲವೂ ನಂಬಿಕೆಗಳೇ, ದಿನನಿತ್ಯದ ವ್ಯವಸಾಯ ಉದ್ಯೋಗ, ಮಾತುಕತೆ, ಹಬ್ಬ-ಹರಿದಿನ, ದೇವರು-ದೆವ್ವ, ಊಟ-ಉಡಿಗೆ, ವಿನೋದ ಎಲ್ಲೆಡೆ ನಂಬಿಕೆಗಳೇ ಮುಖ್ಯ ಪಾತ್ರವಹಿಸುತ್ತವೆ. ಅಥವಾ ನಂಬಿಕೆಗಳ ಒಟ್ಟು ಮೊತ್ತವೇ ನಮ್ಮ ಜೀವನ ಎಂದರೂ ತಪ್ಪಲ್ಲ.

ನಂಬಿಕೆಗಳು ಪರಂಪರೆಯಾಗಿ ಹುಟ್ಟುತ್ತ ಬೆಳೆಯುತ್ತ, ಹಿಗ್ಗುತ್ತ, ತಗ್ಗುತ್ತ ಬಂದುದನ್ನು ನಮ್ಮ ಸಾಹಿತ್ಯ ಮತ್ತು ಚಾರಿತ್ರಿಕ ದಾಖಲೆಗಳಲ್ಲಿ ಕಾಣಬಹುದು. ನಂಬಿಕೆಯಿಂದ ಆಚರಣೆಗಳು ಹುಟ್ಟುತ್ತವೆ. ಆಚರಣೆಗಳನ್ನು ಸಮರ್ಥಿಸಲು ಪುರಾಣ ಸೃಷ್ಟಿಯಾಗುತ್ತದೆ. ಆಚರಣೆ ಮತ್ತು ಪುರಾಣಗಳನ್ನು ವಿಶ್ಲೇಷಿಸಿದರೆ ಕಂಡು ಬರುವ ನಂಬಿಕೆ ಮೂಲಭೂತವಾಗಿ ಎರಡು ಮುಖವುಳ್ಳದ್ದಾಗಿರುತ್ತದೆ. ಒಂದು ನಂಬಿಕೆಯಾದರೆ, ಅದರ ಇನ್ನೊಂದು ಮುಖ ಅಪನಂಬಿಕೆ. ಎರಡರ ಪ್ರಭಾವವೂ ಒಂದೇ. ಅನೇಕ ವೇಳೆ ಇವು ವೈಜ್ಞಾನಿಕವಾಗಿ ವಿವರಿಸಲಾಗದ ಭಾವನಾತ್ಮಕ ಅಂಶವನ್ನೊಳಗೊಂಡಿರುತ್ತವೆ.

ಇಂದು ಹಲವಾರು ಜಾನಪದ ಪ್ರಕಾರಗಳು ಉಳಿದು ಬರುವಲ್ಲಿ ಕೂಡ ಈ ನಂಬಿಕೆಗಳೇ ಬಲವಾದ ಕಾರಣ. ಪರಂಪರೆಯಾಗಿ ನಡೆದುಬಂದಿರುವ ಕಲೆಗಳನ್ನು, ಆಚರಣೆಗಳನ್ನು ಕೆಲವೊಂದು ವರ್ಗದವರು ಸುಧಾರಣಾವಾದಿಗಳ ವಿರೋಧ ಎದುರಾದಾಗಲೂ ಅವನ್ನು ಉಳಿಸಕೊಂಡು ಬರುತ್ತಿದ್ದಾರೆ.

ಇಂದು ನಮ್ಮ ನಾಡಿನ ಹಲವಾರು ಪ್ರದೇಶಗಳಿಂದ ಬರುವ ವಿದ್ವಾಂಸರು ನಂಬಿಕೆಗಳನ್ನು ಕುರಿತಾಗಿ ವೈಜ್ಞಾನಿಕವಾದ ಚರ್ಚೆಯನ್ನು ನಿಮ್ಮ ಮುಂದೆ ನಡೆಸುತ್ತಾರೆ. ಪಂಚಭೂತ ಗಳಾದ ಭೂಮಿ, ನೀರು, ಅಗ್ನಿ, ಗಾಳಿ ಮತ್ತು ಆಕಾಶಗಳನ್ನು ಕುರಿತಂತೆ ಪ್ರಬಂಧಗಳನ್ನು ಸಾದರಪಡಿಸುತ್ತಾರೆ. ಮುಂಡರಗಿ ಪ್ರದೇಶದ ಭೂಮಿ ಮತ್ತು ನೀರುಗಳು ಕರ್ನಾಟಕದಲ್ಲಿಯೇ ಖ್ಯಾತಿಯ ವಿಷಯಗಳಾಗಿವೆ. ಈ ನೆಲದಲ್ಲಿ ‘ಫ್ಲೋಟೈಡ್’ ವಿಶೇಷವಾಗಿದ್ದು ನೀವು ಕುಡಿಯುವ ನೀರಿನಲ್ಲಿ ಅದು ಹೆಚ್ಚಾಗಿದೆ. ನಿಮ್ಮಲ್ಲಿ ಫ್ಲೋರೋಸಿಸ್ ರೋಗದಿಂದ ಬಳಲುವವರು ಅನೇಕರಿದ್ದಾರೆ. ನಿಮ್ಮ ಪ್ರದೇಶದ ನೀರು ಮತ್ತು ಭೂಮಿಯನ್ನು ಕುರಿತಾದ ನಂಬಿಕೆಗಳನ್ನು ಇಲ್ಲಿ ಸೇರಿರುವ ನಮ್ಮ ಜಾನಪದ ವಿದ್ವಾಂಸರ ಗಮನಕ್ಕೆ ತನ್ನಿರಿ. ಅವುಗಳ ಬಗ್ಗೆ ತಾವುಗಳು ಹೊಂದಿರುವ ನಂಬಿಕೆಗಳು ಮತ್ತು ಅವುಗಳ ವೈಜ್ಞಾನಿಕ ವಿಶ್ಲೇಷಣೆ ಕಾರಣವಾಗಿ ‘ಫ್ಲೋರೋಸಿನ್’ ದಂತಹ ವಿಕೃತರೋಗಿಗೆ ಪರಿಹಾರ ತಿಳಿದರೂ ತಿಳಿಯಬಹುದು. ಆದ್ದರಿಂದ ವಿದ್ವಾಂಸರ ಜೊತೆಗೆ ನೀವೆಲ್ಲ ಸೇರಿ ಈ ಎರಡು ದಿನಗಳ ಕಾರ್ಯಕ್ರಮವನ್ನು ತುಂಬಾ ಹುರುಪಿನಿಂದ ನೆರವೇರಿಸುತ್ತಿರೆಂದು ನಾನು ಭಾವಿಸಿದ್ದೇನೆ. ಅದರೊಂದಿಗೆ ತಮ್ಮ ಭಾಗದಲ್ಲಿರುವ ಹಲವಾರು ಜಾನಪದ ಕಲಾ ಪ್ರಕಾರಗಳು ಮತ್ತು ಕಲಾಕಾರರ ಬಗ್ಗೆ ಕೂಡ ಇಲ್ಲಿ ಎಲ್ಲರ ಗಮನ ಕೇಂದ್ರೀಕೃತವಾಗಿರುತ್ತದೆ. ನಾವುಗಳು ಮುಂಡರಗಿಯ ಈ ಭಾಗದಲ್ಲಿ ನಮ್ಮ ಈ ಸಮ್ಮೇಲನ ರೂಪಿಸಲು ಸಂಪರ್ಕಿಸಿದಾಗ ತಾವುಗಳ ಇದರ ಮಾಹಿತಿಯನ್ನು ಗಮನಿಸಿ ನಮಗೆ ಬಹು ಉದಾರ ಮನಸ್ಸಿನಿಂದ ಇಲ್ಲೆ ಅನುಕೂಲಗಳನ್ನು ಕಲ್ಪಿಸಿಕೊಟ್ಟಿದ್ದೀರಿ.

ಪರಮಪೂಜ್ಯ ಶ್ರೀ ನಿ. ಪ್ರ. ಸ್ವ ಅನ್ನದಾನೀಶ್ವರ ಶ್ರೀಗಳು, ಸ್ಥಳೀಯ ಕೆ. ಆರ್. ಬೆಲ್ಲದ ಮಹಾವಿದ್ಯಾಲಯ ಮತ್ತು ಪದವಿಪೂರ್ವ ಮಹಾವಿದ್ಯಾಲಯಗಳ ಪ್ರಾಚಾರ್ಯರು ಮತ್ತು ಅಧ್ಯಾಪಕ ವರ್ಗದವರು ಸ್ಥಳೀಯ ಸಲಹಾ ಸಮಿತಿಯ ಶ್ರೀ ಆರ್. ಟಿ. ದೇಸಾಯಿ, ಶ್ರೀ ಎ. ಎಫ್. ನದಾಫ ಮುಂತಾದ ಮಹನೀಯರು, ಸ್ವಾಗತ ಸಮಿತಿಯ ಅಧ್ಯಕ್ಷರಾದ ಶ್ರೀ ಎಸ್. ಸಿ. ಡಂಬಳ, ಶ್ರೀ ಎ. ಕೆ. ಬೆಲ್ಲದ ಮೊದಲಾದ ಎಲ್ಲ ಸದಸ್ಯರು ಸಮ್ಮೇಳನದ ಯೋಜನೆ ಮತ್ತು ನಿರ್ವಹಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದೀರಿ. ನಾನು ವೈಯಕ್ತಿಕವಾಗಿ ಹಾಗೂ ಕನ್ನಡ ಅಧ್ಯಯನ ಪೀಠ ಮತ್ತು ವಿಶ್ವವಿದ್ಯಾಲಯದ ಪರವಾಗಿ, ಕಾರ್ಯಕ್ರಮಕ್ಕೆ ಈ ಎರಡು ದಿನಗಳ ಕಾಲ ಸಂಪೂರ್ಣ ಸಹಕಾರ ನೀಡಬೇಕೆಂದು ಮತ್ತೊಮ್ಮೆ ವಿನಮ್ರವಾಗಿ ಕೇಳಿಕೊಳ್ಳುತ್ತೇನೆ. ಇಲ್ಲಿ ನೆರೆದಿರುವ ಎಲ್ಲ ವಿದ್ವಾಂಸರಿಗೆ, ಕಲಾಕಾರರಿಗೆ, ತಮಗೆ ಮತ್ತು ಎಲ್ಲ ಮಹನೀಯರಿಗೆ ಪುನಃ ಹಾರ್ದಿಕ ಸ್ವಾಗತ ಬಯಸುತ್ತೇನೆ.