ಜನಪದ ನಂಬಿಕೆಗಳು ಪರಂಪರಾನುಗತವಾಗಿ ಅಂಗೀಕೃತವಾದ ಒಂದು ಪರಿಕಲ್ಪನೆ. ಹೀಗೆ ಅಂಗೀಕೃತವಾಗುವಲ್ಲಿ ಪುನರಾವರ್ತನೆ ಹಾಗೂ ಸಾಮೂಹಿಕ ನಿರೀಕ್ಷಣೆಗಳು ಮುಖ್ಯವಾಗುತ್ತವೆ. ನಂಬಿಕೆಗಳು ಜನಪದರ ಜೀವನಾನುಭವದ ಉತ್ಪನ್ನಗಳು. ಹೀಗಾಗಿ ಮಾನವ ಬದುಕಿಗೂ ನಂಬಿಕೆಗೂ ಬೇರ್ಪಡಿಸಲಾಗದ ಸಂಬಂಧ. ಅದು ಸೂಚನೆ. ನಿಯಮ, ವಿಧಿನಿಷೇಧ, ನಿರ್ದೇಶನ, ಆಗ್ರಹ, ಆದೇಶ ಮತ್ತು ಆಜ್ಞೆಗಳ ರೂಪದಲ್ಲಿ ನಿತ್ಯಬದುಕಿನೊಂದಿಗೆ ಸಂಬಂಧವನ್ನು ಕಂಡುಕೊಂಡಿದೆ. ಜನಪದರ ಕೆಲಸ. ಆಲೋಚನೆ, ರೂಢಿ, ಜೀವನಕ್ರಮ, ಸಂಪ್ರದಾಯ ಆಚರಣೆಗಳೆಲ್ಲವೂ ಮೂಲಭೂತವಾಗಿ ನಂಬಿಕೆಗಳಿಂದ ಪ್ರೇರಿತವಾದವು. ನಂಬಿಕೆ ಸಂಪ್ರದಾಯ, ಆಚರಣೆಗಳೊಂದಿಗೆ ಅಂತರ್ ಸಂಬಂಧವನ್ನು ಹೊಂದಿದ್ದು, ಆ ಮೂಲಕ ಕ್ರಿಯಾರೂಪವನ್ನು ತಾಳುತ್ತದೆ. ಅದು ಜನಪದ ಪ್ರಕಾರಗಳಾದ ಗಾದೆ, ಜನಪದ ವೈದ್ಯ, ಜನಪದ ಕತೆ, ಜನಪದ ಐತಿಹ್ಯ, ಜನಪದ ಪುರಾಣ, ಜನಪದ ಮಂತ್ರವಿದ್ಯೆ, ಜನಪದ ಧರ್ಮ ಇವುಗಳೊಂದಿಗೆ ಒಳಸಂಬಂಧವನ್ನು ಹೊಂದಿದ್ದು ಸಂಕೀರ್ಣ ಸ್ವರೂಪದ್ದಾಗಿದೆ.

ನಿರ್ವಚನ

ಆರ್. ಎಸ್. ಬಾಗ್ಯ್ ಅವರು ಜಾನಪದದ ವರ್ಗೀಕರಣದಲ್ಲಿ ನಂಬಿಕೆಗಳನ್ನು ವೈಜ್ಞಾನಿಕ ಬಗೆಯಾಗಿ ಅರ್ಥೈಸಿದ್ದಾರೆ. ಅವರು “ನಂಬಿಕೆಗಳು ಪುನರಾವೃತವಾಗುವ, ಸಾಮೂಹಿಕ ವೀಕ್ಷಣೆಯ ಫಲವಾಗಿ ಮಾಡುವ ಕಾರ್ಯಕಾರಣ ಸಂಬಂಧ ಉಳ್ಳದ್ದಾಗಿರುವ ಸಾಂಪ್ರದಾಯಿಕ ಭಾವನೆ” ಎಂದಿದ್ದಾರೆ.

ಮರಿಯಾ ಲೀಚ್ ಅವರು “ಪುನರಾವೃತವಾಗುವ, ಸಾಮೂಹಿಕ ವೀಕ್ಷಣೆಯ ಫಲವಾಗಿ ಮಾಡುವ, ಭೂತ, ವರ್ತಮಾನ, ಭವಿಷತ್ತುಗಳೊಂದಿಗೆ ಕಾರ್ಯಕಾರಣ ಸಂಬಂಧ ಹೊಂದಿರುವ ಸಾಂಪ್ರದಾಯಿಕ ಸ್ವೀಕೃತ ಪರಿಕಲ್ಪನೆಯೇ ಜನಪದ ನಂಬಿಕೆ” ಎಂಬುದಾಗಿ ತಮ್ಮ ನಿಘಂಟಿನಲ್ಲಿ ಹೇಳಿದ್ದಾರೆ.

ಪ್ರೊ. ದೇಜಗೌ ಅವರು ನಂಬಿಕೆಯನ್ನು ಕುರಿತು “ದೇಶಕಾಲಗಳ ಹಿನ್ನೆಲೆಯಲ್ಲಿ ಪರಂಪರಾಗತವಾದ ಜ್ಞಾನ, ದೀರ್ಘಾನುಭವ, ಕಾಲ್ಪನಿಕ ಆಲೋಚನೆ ಹಾಗೂ ಅತೀಂದ್ರಿಯ ವ್ಯಾಪಾರದ ಫಲವಾಗಿ ಮೂಡಿದ ಶ್ರದ್ಧೆಯೇ ನಂಬಿಕೆ” ಎಂದಿದ್ದಾರೆ.

ನಂಬಿಕೆಯನ್ನು ಕುರಿತ ಈ ಮೇಲಿನ ಈ ನಿರ್ವಚನಗಳ ಗ್ರಹಿಕೆಯನ್ನು ಒಟ್ಟಾಗಿ ಹೀಗೆ ಹೇಳಬಹುದು.

ಬದುಕಿನಲ್ಲಿ ಆಕಸ್ಮಿಕವಾದ ಒಂದು ಘಟನೆ ಅಥವಾ ವಸ್ತುಸಂಗತಿ ಮತ್ತೆ ಮತ್ತೆ ಪುನರಾವರ್ತನೆಗೊಂಡಾಗ ಅದು ನಂಬಿಕೆಯಾಗಿ ಘನೀಭವಿಸುತ್ತದೆ. ಉದಾಹರಣೆಗೆ: ಯಾವುದೇ ಒಂದು ಬಣ್ಣದ ಹರಳು/ಅಂಕೆ ಅದೃಷ್ಟದ ಸಂಕೇತವಾಗುವುದು, ಬೆಕ್ಕು, ವಿಧವೆ, ಹೆಣ, ಒಂಟಿ ಬ್ರಾಹ್ಮಣ ಎದುರುಬರುವದು ಅಪಶಕುನ ಎನಿಸುವ ನಂಬಿಕೆ. ಮೂಲತಃ ಕಾಲ್ಪನಿಕ ಆಲೋಚನೆಯೊಂದು ವೈಯಕ್ತಿಕ ನೆಲೆಯಲ್ಲಿ ಹುಟ್ಟಿಕೊಂಡು ಸಮೂಹದಲ್ಲಿ ಸಾಮೂಹಿಕ ಮಾನ್ಯತೆಯನ್ನು ಪಡೆದುಕೊಂಡಾಗ ಅದು ನಂಬಿಕೆಯಾಗುತ್ತದೆ.

ಒಂದು ನಂಬಿಕೆಯ ಹಿಂದೆ ಮಾನವನ ಬದುಕಿಗೂ ಮತ್ತು ಪ್ರಕೃತಿ ವ್ಯಾಪಾರ (ಪ್ರಾಣಿ, ಪಕ್ಷಿ, ಕಲ್ಲು, ಗುಡುಗು, ಮಿಂಚು, ಸಸ್ಯ ಇತ್ಯಾದಿ)ಕ್ಕೂ ನಡುವೆ ಇರುವ ಕಾರ್ಯಕಾರಣ ಸಂಬಂಧ ಕೆಲಸ ಮಾಡುತ್ತಿರುತ್ತದೆ. ಉದಾಹರಣೆಗೆ : ನಾಯಿ ಆಕಾಶ ನೋಡುತ್ತಾ ಬಳ್ಳುಕರೆದರೆ ಯಾರಾದರೂ ಸಾಯುತ್ತಾರೆ ಎಂಬ ನಂಬಿಕೆ, ನರಿಯ ಬಾಲ ಕಂಡರೆ ಐಶ್ಚರ್ಯ ಸಿದ್ಧಿ, ಹಲ್ಲಿ ಲೊಚಗುಟ್ಟಿಗರೆ ಶುಭಶಕುನ.

ನಂಬಿಕೆಗಳ ಉಗಮ

ಪ್ರಾಕೃತಿಯ ರಹಸ್ಯವನ್ನು ಭೇದಿಸುವಲ್ಲಿ ಆದಿಮಾನವನ ವಿಫಲತೆ, ಹುಟ್ಟು-ಬದುಕು-ಸಾವಿನ ನಿಗೂಢತೆಯನ್ನು ಅರ್ಥೈಸಲಾಗದ ಆತಂಕ, ಜಾತಿ ಮತ್ತು ಧರ್ಮ ತಮ್ಮ ಅಸ್ತಿತ್ವಕ್ಕಾಗಿ ನಡೆಸಿದ ಹೋರಾಟ-ಈ ಹಿನ್ನೆಲೆಯಲ್ಲಿ ನಂಬಿಕೆಗಳು ಹುಟ್ಟಿಕೊಳ್ಳುತ್ತವೆ.

ಸಂದರ್ಭದಲ್ಲಿ ದೃಷ್ಟಿಯಿಂದ ಜನಪದ ನಂಬಿಕೆಗಳ ಉಗಮವನ್ನು ಮೂರು ವಿಧವಾಗಿ ಗುರುತಿಸಿ ಅಧ್ಯಯನ ನಡೆಸಬಹುದು: ೧. ಧಾರ್ಮಿಕ ನಂಬಿಕೆಗಳು ೨. ಸಾಂಸ್ಕೃತಿಕ ನಂಬಿಕೆಗಳು ೩. ವೈಯಕ್ತಿಕ ನಂಬಿಕೆಗಳು.

. ಧಾರ್ಮಿಕ ನಂಬಿಕೆಗಳು

ಮಾನವ ಮನಸ್ಸಿನ ಭಯ ಮತ್ತು ಆತಂಕಗಳು ಈ ಬಗೆಯ ಧಾರ್ಮಿಕ ನಂಬಿಕೆಗಳಿಗೆ ಮೂಲ. ಇಂತಹ ಸಂದರ್ಭಗಳಲ್ಲಿ ಅವನಿಗೆ ಆಲಂಬನವಾಗಿ ಹುಟ್ಟಿಕೊಂಡವುಗಳು ದೇವರು, ದೈವ್ವಗಳು. ಆಗ ದೇವರ ಸ್ವರೂಪ, ಕಾರ್ಯಗಳಿಗೆ ಸಂಬಂಧಿಸಿದಂತೆ ಅನೇಕ ನಂಬಿಕೆಗಳನ್ನು ಹುಟ್ಟುಹಾಕಿದ ಅಮೂರ್ತ ದೇವರನ್ನು ವಾಸ್ತವ ಜಗತ್ತಿನ ವಸ್ತು ವಿಷಯಗಳೊಂದಿಗೆ ಸಮೀಕರಿಸಿ ಪೂಜಿಸತೊಡಗಿದ. ಉದಾಹರಣೆಗೆ ತೆಂಗಿನಕಾಯಿಯನ್ನು ಕಾಲಿನಿಂದ ತುಳಿಯಬಾರದು. ಅದು ಮುಕ್ಕಣ್ಣ. ಬೀಸುವ ಕಲ್ಲನ್ನು ತುಳಿಯಬಾರದು ಅದು ಲಕ್ಷ್ಮೀ.

ಲೌಕಿಕ ಕ್ರಿಯೆಯೊಂದನ್ನು ಸಮರ್ಪಕವಾಗಿ ಮಾಡಲು ಅಥವಾ ನಿಷೇಧಿಸಲು ಅದಕ್ಕೆ ಧಾರ್ಮಿಕ ಚೌಕಟ್ಟನ್ನು ಒದಗಿಸುವುದುಂಟು. ಉದಾಹರಣೆಗೆ ಕಾಲನ್ನು ತೊಳೆಯುವಾಗ ಹಿಮ್ಮಡ ಪೂರ್ತಿ ನೆನೆಯಬೇಕು. ಇಲ್ಲದಿದ್ದರೆ ಶನಿ ಹಿಡಿದುಕೊಳ್ಳುತ್ತದೆ. ಸಂಜೆ ಹೊತ್ತಲ್ಲಿ ಕಸಗುಡಿಸಿ ಹೊರಹಾಕಬಾರದು. ಲಕ್ಷ್ಮೀ ಹೊರಟು ಹೋಗುತ್ತಾಳೆ. ಮೊದಲನೆಯದರಲ್ಲಿನ ಲೌಕಿಕ ಉದ್ದೇಶ ಕಾಲನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು ಎನ್ನುವುದು. ಎರಡನೆಯದು ಕತ್ತಲೆಯಲ್ಲಿ ಕಸದೊಂದಿಗೆ ಬೆಲೆಬಾಳುವ ವಸ್ತುಗಳೂ ಹೋಗಬಹುದು ಎನ್ನುವುದು.

ಸಾಂಸ್ಕೃತಿಕ ನಂಬಿಕೆಗಳು

ಹುಟ್ಟಿನ ಬಗೆಗಿನ ಕುತೂಹಲ, ಸಾವಿನ ಕುರಿತ ಭಯ, ತನ್ನ ಬದುಕನ್ನು ರೂಪಿಸಿದ ಋತುಮಾನಗಳ ಚಲನೆಗಳು ಅನೇಕ ಜೀವನಾವರ್ತನ ಹಾಗೂ ವಾರ್ಷಿಕಾವರ್ತನಗಳ ನಂಬಿಕೆಗಳನ್ನು ರೂಪಿಸಿವೆ.

ಉದಾ.  ತೆಂಗಿನಕಾಯಿ ತಿಂದರೆ ಮದುವೆಯಲ್ಲಿ ಮಳೆ ಬರುತ್ತದೆ.
ಆರತಿಯ ದೀಪ ಆರಿದರೆ ಅಪಶಕುನ.
ಉತ್ತರಾಯಣದಲ್ಲಿ ಸತ್ತರೆ ಸ್ವರ್ಗ,
ಆಷಾಢದಲ್ಲಿ ಅತ್ತ-ಸೊಸೆ ಒಂದೇ ಬಾಗಿಲಲ್ಲಿ ಓಡಾಡಬಾರದು.
ಭರಣಿ-ಕೃತಿಕಾ ನಕ್ಷತ್ರಗಳಲ್ಲಿ ಯಾವ ಕೆಲಸ ಆರಂಭಿಸಿದರೂ ಪೂರ್ಣ
ಗೊಳ್ಳುವುದಿಲ್ಲ.

ವೈಯಕ್ತಿಕ ನಂಬಿಕೆಗಳು

ವೈಯಕ್ತಿಕ ನಂಬಿಕೆಗಳು ಮೊದಲಿಗೆ ವ್ಯಕ್ತಿಯೊಬ್ಬನ ಉತ್ಪನ್ನವಾಗಿದ್ದು ಮುಂದೆ ಸಾಮಾಜೀಕರಣದ ಫಲವಾಗಿ ಅದು ಸಾಂಸ್ಕೃತಿಕ ರೂಪವನ್ನು ತಾಳುತ್ತವೆ. ಬದುಕಿನ ಘಟನೆಯೊಂದಿಗೆ ಕಾಕತಾಳೀಯ ಸಂಬಂಧವನ್ನು ಕಂಡುಕೊಂಡ ಒಂದು ಸಂಖ್ಯೆ, ದಿನ, ಉಂಗುರ, ಒಂದು ಬಣ್ಣಗಳು ಅವನ ವೈಯಕ್ತಿಕ ನಂಬಿಕೆಯಾಗಿ ಮಾರ್ಪಡುತ್ತವೆ. ಒಬ್ಬನಿಗೆ ಶುಭ ಅಥವಾ ಅದೃಷ್ಟದ ಸೂಚನೆಯಾದ ಇವು ಇನ್ನೊಬ್ಬನಿಗೆ ಅಶುಭ ಅನ್ನಿಸಬಹುದು.

ಉದಾ.  ೧. ಶನಿವಾರ ಹೊಸ ಬಟ್ಟೆ ಉಡಬಾರದು.
೨. ೭ರ ಸಂಖ್ಯೆ ಶುಭ
೩. ಮಂಗಳವಾರ, ಶುಕ್ರವಾರ ಮದುಮಗಳು ತಾಯಿಮನೆಯಿಂದ ಹೊರಡಬಾರದು.

ನಂಬಿಕೆಮೂಢನಂಬಿಕೆ

ನಂಬಿಕೆಗಳನ್ನು ನಂಬಿಕೆ, ಮೂಢನಂಬಿಕೆ ಎಂದು ವರ್ಗೀಕರಿಸಿಕೊಂಡು ಅಧ್ಯಯನ ನಡೆದುಬಂದಿದೆ. ಆದರೆ ವಾಸ್ತವಿಕವಾಗಿ ಈ ವರ್ಗೀಕರಣ ಸಮಂಜಸವಲ್ಲ ಯಾಕೆಂದರೆ ನಂಬಿಕೆಯೊಂದು ದೇಶ, ಕಾಲ, ವ್ಯಕ್ತಿಯೊಂದಿಗೆ ಸಾಪೇಕ್ಷ ಸಂಬಂಧ ಹೊಂದಿರುವಂತಹದು. ಒಂದು ನಂಬಿಕೆ ಒಬ್ಬನಿಗೆ ನಂಬಿಕೆಯಾಗಿದ್ದರೆ, ಇನ್ನೊಬ್ಬನಿಗೆ ಅದು ಮೂಢನಂಬಿಕೆಯಾಗಬಹುದು. ಅಥವಾ ಆ ವ್ಯಕ್ತಿಗೆ ಕೆಲವು ಕಾಲದ ಅನಂತರ ಮೂಢನಂಬಿಕೆ ಎನಿಸಬಹುದು. ಉದಾಹರಣೆಗೆ ವಿಧವೆ ಅಪಶಕುನ ಎನ್ನುವ ಭಾರತದ ನಂಬಿಕೆ ಅಮೇರಿಕನ್‌ರಿಗೆ ಮೂಢ ನಂಬಿಕೆಯಾಗುತ್ತದೆ ಅಥವಾ ಭಾರತದಲ್ಲೂ ವಿಚಾರವಂತರಿಗೆ ಅದು ಮೂಢನಂಬಿಕೆ ಎನಿಸುತ್ತದೆ. ಇದನ್ನು ಬಲವಾಗಿ ನಂಬಿದ್ದ ವ್ಯಕ್ತಿಗೂ ಕಾಲಸರಿದಾಗ ಅದು ಮೂಢನಂಬಿಕೆಯಾಗುವ ಸಾಧ್ಯತೆ ಇದೆ. ಅಂದರೆ ಇಲ್ಲಿರುವ ತರ್ಕವನ್ನು ನಂಬಿಕೆಯ ಪ್ರಮಾಣದಲ್ಲಿರುವ ವ್ಯತ್ಯಾಸವಾಗಿ ಗ್ರಹಿಸಬೇಕಾಗಿದೆ. ಒಂದು ನಂಬಿಕೆ ಕಾರ್ಯಕಾರಣ ಸಂಬಂಧವನ್ನು ಕಳೆದುಕೊಂಡಾಗ ಆಗ ನಂಬಿಕೆಗಳು ಜನಬದುಕಿನಿಂದ ದೂರವಾಗಿ ವಿಸ್ಮೃತಿಯನ್ನು ಸೇರುತ್ತವೆ, ಅಥವಾ ಅದರ ಗರ್ಭಕೋಶದಿಂದ ಇನ್ನೊಂದು ನಂಬಿಕೆಯಾಗಿ ರೂಪಾಂತರಗೊಳ್ಳುತ್ತದೆ. ಉದಾಹರಣೆಗೆ ಸೂರ್ಯ-ಚಂದ್ರರನ್ನು ರಾಹು-ಕೇತುಗಳು ನುಂಗಿದಾಗ ಗ್ರಹಣವಾಗುತ್ತದೆ ಎನ್ನುವ ನಂಬಿಕೆಯನ್ನು ಖಗೋಳಶಾಸ್ತ್ರದ ವೈಜ್ಞಾನಿಕ ಬೆಳವಣಿಗೆ ಸಡಿಲಗೊಳಿಸಿದೆ. ಮನಿಪ್ಲಾಂಟ್ ಗಿಡ ಮನೆಯಲ್ಲಿ ಹುಲುಸಾಗಿ ಹಬ್ಬಿದರೆ ಸಂಪತ್ತು ಹೆಚ್ಚುತ್ತದೆ.

ನಂಬಿಕೆಗಳ ವರ್ಗೀಕರಣ

ನಂಬಿಕೆಗಳ ವರ್ಗೀಕರಣದ ಬಗ್ಗೆ ಖಚಿತವಾದ ಒಂದು ಅಭಿಪ್ರಾಯವಿಲ್ಲ. ಅವುಗಳ ಸಂಕೀರ್ಣ ಸ್ವರೂಪದಿಂದಾಗಿ ವಿಂಗಡಣೆ ತುಂಬ ತೊಡಕಾಗಿದೆ. ನಂಬಿಕೆಗಳ ಸ್ವರೂಪ ಹಾಗೂ ಕಾರ್ಯಕ್ಕನುಸರಿಸಿ ಹಲವು ಬಗೆಯ ವರ್ಗೀಕರಣ ರೂಢಿಯಲ್ಲಿದೆ. ಆರ್. ಎಸ್. ಬಾಗ್ಸ್ ಅವರು ಅವುಗಳನ್ನು ೧. ಪುರಾಣ ೨. ಐತಿಹ್ಯ ೩. ಪದ್ಧತಿ ೪. ಮಾಂತ್ರಿಕತೆ ೫. ವೈದ್ಯ ೬. ಕಾಲಜ್ಞಾನ ಇವುಗಳನ್ನು ಅವರು ಮತ್ತೆ ಹಲವಾರು ಉಪವಿಭಾಗಗಳಾಗಿ ಒಡೆದಿದ್ದಾರೆ. ವೇಲ್ಯಾಂಡ್ ಅವರು ಜನಪದ ನಂಬಿಕೆಗಳನ್ನು ಹೀಗೆ ವರ್ಗೀಕರಿಸಿದ್ದಾರೆ. ೧. ಮನುಷ್ಯ ಶರೀರ ಹಾಗೂ ವೈದ್ಯಕ್ಕೆ ಸಂಬಂಧಿಸಿದವು. ೨. ಜೀವನ ಚಕ್ರಕ್ಕೆ ಸಂಬಂಧಿಸಿದವು. ೩. ಆರ್ಥಿಕ ಮತ್ತು ಸಾಮಾಜಿಕ ಸಂಬಂಧಗಳು. ೪. ಮಾಟ ಮತ್ತು ಮಂತ್ರವಿದ್ಯೆ. ೫. ಭೂತಪ್ರೇತ, ಸಾವು ಮುಂತಾದವುಗಳಿಗೆ ಸಂಬಂಧಿಸಿದವು. ೬. ಸಂಖ್ಯೆಗಳು ಮತ್ತು ಖಗೋಳ ಸಂಗತಿಗಳು ೭. ಬೇಸಾಯಕ್ಕೆ ಸಂಬಂಧಿಸಿದವು. ಇದರೊಳಗೆ ಹವಾಮಾನ, ಪ್ರಾಣಿಸಾಕಣೆ, ಕೃಷಿ, ಬೇಟೆ, ಮೀನುಗಾರಿಕೆ ಇತ್ಯಾದಿ ಒಳಗೊಳ್ಳುತ್ತದೆ.

ಈ ವರ್ಗೀಕರಣದೊಳಗೂ ಸೇರದ ಅನೇಕ ನಂಬಿಕೆಗಳಿವೆ. ಒಂದರ ಒಳಗೆ ಇನ್ನೊಂದು ಮೇಲೆ ಸೇರುವೆಗೆ ಒಳಗಾದವು ಇವೆ. ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಶ್ವಕೋಶದ ವಿಭಜನ ಮಾದರಿ ಸ್ಥೂಲ ವಿಭಾಗ ಕ್ರಮವಾಗಿದೆ. ೧. ಅತಿಮಾನುಷ ೨. ಮಾನುಷ ೩. ಪ್ರಾಣಿ ೪. ಪ್ರಕೃತಿ ೫. ಕೌಟುಂಬಿಕ ೬. ಸಂಕೀರ್ಣ.

ಈ ನಿಟ್ಟಿನಲ್ಲಿ ದೇಜಗೌ ದ. ಭಾರತದ ನಂಬಿಕೆಗಳನ್ನು ಲಕ್ಷ್ಯದಲ್ಲಿರಿಸಿಕೊಂಡು ನಂಬಿಕೆಗಳನ್ನು ಹತ್ತು ಗುಂಪಾಗಿ ವಿಂಗಡಿಸಿದ್ದು ಹೆಚ್ಚುಸೂಕ್ತವಾಗಿದೆ.

(ದೇಜಗೌ ೧೯೮೬ : ೧೦೭)
೧. ಧಾರ್ಮಿಕ ನಂಬಿಕೆಗಳು
೨. ಐತಿಹ್ಯಾತ್ಮಕ ನಂಬಿಕೆಗಳು
೩. ಗೃಹನಂಬಿಕೆಗಳು
೪. ವೈದ್ಯಕೀಯ ನಂಬಿಕೆಗಳು
೫. ಔದ್ಯೋಗಿಕ ನಂಬಿಕೆಗಳು
೬. ನೈಸರ್ಗಿಕ ನಂಬಿಕೆಗಳು
೭. ಪ್ರಾಣಿ ನಂಬಿಕೆಗಳು
೮. ಮಂತ್ರ ಸಂಬಂಧಿ ನಂಬಿಕೆಗಳು
೯. ಜ್ಯೋತಿಷ್ಯಾತ್ಮಕ ನಂಬಿಕೆಗಳು
೧೦. ಸಂಕೀರ್ಣ ನಂಬಿಕೆಗಳು

ಈ ಬಗೆಯ ಸೂಕ್ಷ್ಮ ವರ್ಗೀಕರಣದ ಫಲವಾಗಿ ಅಧ್ಯಯನಕ್ಕೆ ಖಚಿತತೆ ಬರುತ್ತದೆ.

ನಂಬಿಕೆಸಂಪ್ರದಾಯಆಚರಣೆಗಳ ಅಂತರ್ ಸಂಬಂಧ

ನಂಬಿಕೆ, ಸಂಪ್ರದಾಯ, ಆಚರಣೆಗಳು ಪರಸ್ಪರ ಸೋದರ ಸಂಬಂಧಿಯಾದವುಗಳು. ಇವುಗಳ ಸಂಬಂಧವನ್ನು ಯಾವುದು, ಏನು ಮತ್ತು ಹೇಗೆ ಎನ್ನುವ ನೆಲೆಯಲ್ಲಿಟ್ಟು ವಿಶ್ಲೇಷಿಸಬಹುದು. ಕಾಡ್ಯನಾಟ ಆಡಿಸಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎನ್ನುವುದು ದ. ಕನ್ನಡದ ಪರಿಶಿಷ್ಟ ಜನಾಂಗ ಮೇರರಲ್ಲಿರುವ ಒಂದು ನಂಬಿಕೆ. ಜಾತಿ ಬಾಂಧವರು ಕಾಡ್ಯನ ಗುಡಿಯಲ್ಲಿ ಸೇರಿ ಮಂಡಲ ಬರೆದು ಕಾಡ್ಯನಾಟದ ಹಾಡುಗಳನ್ನು ಹಾಡಿ ನಾಲ್ಕು ರಾತ್ರಿ ಮೂರು ಹಗಲುಗಳ ಕಾಡ್ಯನಾಟವನ್ನು ಆಡಬೇಕು ಎನ್ನುವುದು ಸಂಪ್ರದಾಯ. ಮಂಡಲವನ್ನು ಹೇಗೆ ಬರೆಯಬೇಕು, ಕಾಡ್ಯನ ಕಲಶವನ್ನು ಹೇಗೆ ನಿರ್ಮಿಸಬೇಕು. ಹೇಗೆ ಪೂಜೆ ನಡೆಸಬೇಕು ಎನ್ನುವುದು ಆಚರಣೆ. ಕಾಡ್ಯನಾಟ ನಡೆಸುವ ಬೈದ್ಯ, ಪಾತ್ರ, ಕಲಶಗಳನ್ನು ಹೊರುವ ಕುಟುಂಬದ ಹೆಂಗಸರು ಉಪವಾಸ ಇರಬೇಕು ಎನ್ನುವುದು ವಿಧಿ. ಸೂತಕ ಇರುವವರು, ಮುಟ್ಟಾದ / ಬಾಣಂತಿ ಹೆಂಗಸರು ಕಾಡ್ಯನಾಟದ ಆವರಣಕ್ಕೆ ಬರಬಾರದು ಎನ್ನುವುದು ನಿಷೇಧ.

ಸಂಪ್ರದಾಯದ ಬೀಜರೂಪದಲ್ಲಿ ಒಂದು ನಂಬಿಕೆ ಇದ್ದೇ ಇರುತ್ತದೆ. ಅಂದರೆ ಸಂಪ್ರದಾಯಗಳೆಲ್ಲವೂ ನಂಬಿಕೆಗಳಾಗಿರುತ್ತದೆ. ಆದರೆ ಎಲ್ಲ ನಂಬಿಕೆಗಳು ಸಂಪ್ರದಾಯಗಳಲ್ಲ. ನಂಬಿಕೆಯೊಂದು ಐತಿಹ್ಯ, ಪುರಾಣ, ಧರ್ಮಗಳೊಂದಿಗೆ ಸಂಬಂಧವನ್ನು ಪಡೆದುಕೊಂಡು ಸಮುದಾಯದ ಶ್ರದ್ಧೆಯೊಂದಿಗೆ ರೂಢಿಗಿಳಿದಾಗ ಸಂಪ್ರದಾಯವಾಗುತ್ತದೆ. ಇಂತಹ ಸಂಪ್ರದಾಯದ ಪ್ರಾಯೋಗಿಕ ಅಥವಾ ಕ್ರಿಯಾರೂಪಗಳೇ ಆಚರಣೆಗಳು. ನಂಬಿಕೆ ಧರ್ಮದ ಅವಲಂಬನೆಯ ರೂಪ, ಆಚರಣೆ ಅದರ ಕ್ರಿಯಾ ರೂಪ ಎನ್ನುವ ಡಾ. ವಿವೇಕ ರೈಯವರು ಅಭಿಪ್ರಾಯಪಡುತ್ತಾರೆ. (ರೈ : 1985:1) ಹೀಗಾಗಿ ನಂಬಿಕೆಗಿಂತ ಸಂಪ್ರದಾಯ, ಆಚರಣೆಗಳಿಗೆ ಹೆಚ್ಚಿನ ವ್ಯಾಪ್ತಿ ಇದೆ. ವೈಯಕ್ತಿಕ ಅಥವಾ ಕೌಟುಂಬಿಕಕ್ಕೆ ಸೀಮಿತವಾಗಿರುವ ಒಂದು ಆಚರಣೆ ವಾಡಿಕೆ ಅಥವಾ ರೀತಿ ರಿವಾಜು ಎನಿಸುತ್ತದೆ. ಇಂತಹ ವಾಡಿಕೆ ಅಥವಾ ರಿವಾಜುಗಳು ಒಂದು ಸಮಾಜ ಅಥವಾ ಪ್ರದೇಶದೊಳಗೆ ಸ್ವೀಕಾರಗೊಂಡು ಸಾಮೂಹಿಕತೆಯನ್ನು ಪಡೆದುಕೊಂಡಾಗ ಅದು ಸಂಪ್ರದಾಯವಾಗುತ್ತದೆ. ಸಂಪ್ರದಾಯಗಳು ಒಂದು ಸಮಾಜದ ಸಾಮೂಹಿಕತೆಯಲ್ಲಿ ವಿಕಾಸಗೊಳ್ಳುವುದರಿಂದ ಅಲಿಖಿತ ಕಾನೂನುಗಳಾಗಿ, ನೀತಿ ಶಾಸ್ತ್ರಗಳಾಗಿ ಕಾರ್ಯ ನಿರ್ದೇಶಿಸುತ್ತವೆ. ಒಂದು ಸಮಾಜದ ಸಾಂಸ್ಕೃತಿಕ ಮೌಲ್ಯಗಳೇ ಈ ಸಂಪ್ರದಾಯ ಎನ್ನಬಹುದು.

ನಂಬಿಕೆ ಮತ್ತು ಇತರ ಜನಪದ ಪ್ರಕಾರಗಳು

ನಂಬಿಕೆ ಜನಪದ ಪ್ರಕಾರಗಳಾದ ಗಾದೆ, ಜನಪದ ವೈದ್ಯಕತೆ, ಐತಿಹ್ಯ, ಪುರಾಣ ಇವುಗಳೊಂದಿಗೆ ನಿಕಟ ಸಂಬಂಧವನ್ನು ಪಡೆದುಕೊಳ್ಳುತ್ತದೆ. ನಂಬಿಕೆಯೊಂದನ್ನು ಬಿತ್ತಿ ಅದನ್ನು ಊರ್ಜಿತಗೊಳಿಸಲು ಈ ಪ್ರಕಾರಗಳು ದುಡಿಯುತ್ತವೆ ಅಥವಾ ಇದಕ್ಕೆ ಬದಲಾಗಿ ಈ ಜನಪದ ಪ್ರಕಾಗಳನ್ನು ಬದ್ಧಗೊಳಿಸಲು ನಂಬಿಕೆಗಳು ಚಾಲನೆಗೊಳ್ಳುತ್ತವೆ ಉದಾಹರಣೆಗೆ :

ನಂಬಿಕೆ : ತಾಯಿ ದೇವರು

ಗಾದೆ : ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ.

ನಂಬಿಕೆ : ಬಾಳೆ ಮೀನು-ಮೂಗುಡು ಮೀನನ್ನು, ಹರಿವೆ ಬಸಳೆಯನ್ನು ಒಟ್ಟಿಗೆ ಬೇಯಿಸುವುದಿಲ್ಲ, ಬೇಯಿಸಿದರೆ ಪಾತ್ರೆಯಲ್ಲಿ ರಕ್ತಕಾಣುತ್ತದೆ.

ಕತ್ತೆ : ಬಾಳೆ ಮೀನು-ಮುಗುಡು-ಮೀನು ಈ ಜನಪದ ನಂಬಿಕೆಯನ್ನು ಕಥೆಯೊಳಗೆ ಸತ್ವವಾಗಿಸುತ್ತದೆ ವಸ್ತುವೊಂದನ್ನು ಮದುವೆಗೆ ಷರತ್ತಾಗಿ ಒಡ್ಡಿ ಅಣ್ಣ ತಂಗಿಯನ್ನು ಮದುವೆಗೆ ಒತ್ತಾಯಿಸುತ್ತಾನೆ. ತಂಗಿ ನಿರಾಕರಿಸುತ್ತಾಳೆ. ತಂಗಿ ಮನೆಯಿಂದ ಹೊರಹೋಗಿ ಅಡಗಿಕೊಳ್ಳುತ್ತಾಳೆ. ಅಣ್ಣ ಹಿಂಬಾಲಿಸುತ್ತಾನೆ. ತಂಗಿ ಬಾಳೆ ಮೀನಾಗಿ ರೂಪಾಂತರ ಹೊಂದುತ್ತಾಳೆ. ಅಣ್ಣ ಮುಗುಡು ಮೀನಾಗಿ ತಂಗಿಯನ್ನು ಸೇರಲು ಹವಣಿಸುತ್ತಾನೆ. ಅವು ನಲಿಕೆಯವನಿಗೆ ಸಿಗುತ್ತವೆ. ಆತ ಎರಡು ಮೀನನ್ನು ಒಂದೇ ಪಾತ್ರೆಯಲ್ಲಿ ಬೇಯಿಸುತ್ತಾನೆ. ಆಗ ಪಾತ್ರೆಯಲ್ಲಿ ಬಳಿ ಮತ್ತು ಕೆಂಪು ನೊರೆ ಕಾಣಿಸುತ್ತದೆ. ಅಣ್ಣನ ತಂಗಿ ಕುಚು ಕುಚು ಎಂಬ ಶಬ್ದ ಕೇಳಿಸುತ್ತದೆ. ಹೆದರಿದ ಆತ ಅದನ್ನು ಬಸಳೆ ಗಿಡದ ಬುಡಕ್ಕೆ ಚೆಲ್ಲುತ್ತಾನೆ. ಅದು ಹರಿವೆ ಗಿಡವಾಗುತ್ತದೆ. ಬಸಳೆ ಹರಿವೆಯನ್ನು ಒಟ್ಟಾಗಿ ಬೇಯಿಸುತ್ತಾನೆ. ಮತ್ತೆ ಅದೇ ಶಬ್ದ ಬಿಳಿ ಕೆಂಪು ನೊರೆ ಕಾಣಿಸಿತು.

(ಆಕರ : ಪರುಷೋತ್ತಮ ಬಿಳಿಮಲೆ ೧೯೯೦, ‘ಕರಾವಳಿ ಜಾನಪದ’)

ನಂಬಿಕೆ : ಹೊಸಕೆರೆಗೆ ನೀರು ಬರಲು, ಕೋಟೆ ನಿಲ್ಲಲು, ಹೊಸ ಹಡಗು ನೀರಿಗಿಳಿಯಲು ನರಬಲಿ ಕೊಡಬೇಕು.

ಐತಿಹ್ಯ : ಭೂತಾಳ ಪಾಂಡ್ಯನ ಐತಿಹ್ಯ ಬಾರಕೂರಿನ ವ್ಯಾಪಾರಿ ಹೊಸಹಡಗನ್ನು ನೀರಿಗಿಳಿಸುವ ಮುನ್ನ ನರಬಲಿ ಕೊಡಬೇಕೆಂದು ಕುಂಡೋದರ ಭೂತ ಕೇಳುತ್ತದೆ. ಅವನ ಹೆಂಡತಿ ಮಕ್ಕಳನ್ನು ಬಲಿಕೊಡಲು ಸಮ್ಮತಿಸಲಿಲ್ಲ. ಆಗ ತಂಗಿ ತನ್ನ ಮಗನನ್ನು ಬಲಿಕೊಡಲು ಮುಂದೆ ಬರುತ್ತಾಳೆ. ಹಡಗು ನೀರಿಗಿಳಿಯುತ್ತದೆ. ಭೂತ ನರಬಲಿ ಬೇಡವೆಂದು ವಿನಾಯತಿ ನೀಡುತ್ತದೆ. ಮುಂದೆ ತನ್ನ ಕುಟುಂಬದ ಆಸ್ತಿಯಲ್ಲವೂ ಸೋದರಿಯ ಮಗನಿಗೆ ಸಲ್ಲತಕ್ಕದ್ದೆಂಬ ನಿಯಮವನ್ನು ಜಾರಿಗೆ ತರುತ್ತಾನೆ. ಇದುವೇ ಅಳಿಯ ಸಂತಾನ ಕುಟುಂಬ ವ್ಯವಸ್ಥೆಯಾಗಿ ಪರಿವರ್ತಿತವಾಯಿತು ಎನ್ನುವುದು, ಐತಿಹ್ಯ.

ನಂಬಿಕೆ : ಗರ್ಭಿಣಿಯನ್ನು ತವರಿಗೆ ಕರೆತರಲು ಸೋದರರು ಹೋಗಬಾರದು.

ಪುರಾಣ : ಶ್ರೀ ಕೃಷ್ಣ ಗರ್ಭಿಣಿ ತಂಗಿ ಸುಭದ್ರೆಯನ್ನು ಕರೆತರಲು ಹೋಗುತ್ತಾನೆ. ಮಾರ್ಗಾಯಾಸದಿಂದ ಬಳಲಿದ ಸುಭದ್ರೆ ಕತೆ ಹೇಳುವಂತೆ ಅಣ್ಣನನ್ನು ಒತ್ತಾಯಿಸುತ್ತಾಳೆ. ಕೃಷ್ಣ ಕತೆ ಹೇಳುತ್ತಿದ್ದಂತೆ ತಂಗಿ ನಿದ್ರಿಸುತ್ತಾಳೆ. ಕೃಷ್ಣ ಚಕ್ರವ್ಯೂಹದ ರಚನೆ, ಅದನ್ನು ಭೇದಿಸುವ ಬಗೆ ಹೇಳುತ್ತಿದ್ದಾಗ ಶಿಶು ಹೂಂಗುಡುತ್ತದೆ. ಬೆರಗಾದ ಕೃಷ್ಣ ದಿವ್ಯದೃಷ್ಟಿಯಿಂದ ಪರಾಕ್ರಮಿ ಮಗುವನ್ನು ಕಂಡ ಕೃಷ್ಣ ತನಗೆ ಪ್ರತಿಸ್ಪರ್ಧಿಯಾಗಬಹುದೆಂದು ಕತೆಯನ್ನು ಅಲ್ಲಿಗೇ ನಿಲ್ಲಿಸಿದ. ಮಹಾಭಾರತ ಯುದ್ಧದಲ್ಲಿ ಚಕ್ರವ್ಯೂಹ ಭೇದನದ ತಂತ್ರವನ್ನು ತಿಳಿದ ಅಭಿಮನ್ಯು ಒಳಹೊಕ್ಕು ಯುದ್ಧ ಮಾಡುತ್ತಾನೆ. ಆದರೆ ಕೃಷ್ಣ ಹೊರಬರುವ ವಿಧಾನವನ್ನು ಹೇಳದೆ ಇದ್ದುದ್ದರಿಂದ ಚಕ್ರವ್ಯೂಹದಲ್ಲಿ ಸಿಲುಕಿ ಸಾಯುತ್ತಾನೆ.