೩೯೬. ಐಗಂಚೀಲಿಲ್ಲದಿರು = ದೂರವಿರದಿರು

ದೊಡ್ಡ ಕಂಚಿ ಚಿಕ್ಕಕಂಚಿ ಎಂದು ಎರಡು ಕಂಚಿ ಪಟ್ಟಣಗಳಿವೆ ತಮಿಳುನಾಡಿನಲ್ಲಿ. ದೊಡ್ಡ ಕಂಚಿಗೆ ಐಗಂಚಿ ಎಂಬ ಹೆಸರು ಚಾಲ್ತಿಯಲ್ಲಿದೆ. ದೂರ ಎಂಬ ಅರ್ಥ ಅದಕ್ಕೆ ಸಂದಾಯವಾಗಿದೆ.

ಪ್ರ : ಬೇಗ ತರೋಕಾಗಲ್ಲ ಅನ್ನೋಕೆ, ಅದೇನು ಐಗಂಚೀಲಿಲ್ಲ.

೩೯೭. ಐನಾತಿ ಆಸಾಮಿಯಾಗಿರು = ಘಟಿಂಗನಾಗಿರು, ತಂತ್ರಗಾರನಾಗಿರು, ಯುಕ್ತಿವಂತನಾಗಿರು

(ಐನಾತಿ = ಶ್ರೇಷ್ಠ, ಮುಖ್ಯ, ಆಸಾಮಿ = ವ್ಯಕ್ತಿ)

ಪ್ರ : ಅವನು ಐನಾತಿ ಆಸಾಮಿ ಇದ್ದಾನೆ, ಏನೂ ತಿಳಿಯದವನು ಎಂದು ನಂಬಿ ಮೋಸ ಹೋದೀಯ.

೩೯೮. ಐಬಿಲ್ಲದಿರು = ಕುಂದಿಲ್ಲದಿರು

(ಐಬು = ದೋಷ, ಊನ)

ಪ್ರ : ಐಬಿಲ್ಲದೋರಿಗೆ ಹೆದರೋ ಬಾಬ್ತು ಎದುರಾಗೋದೇ ಇಲ್ಲ.

೩೯೯. ಐರಾಣಿ ಹೊರು = ಅರಣೆ ಹೊರು, ಗಡಿಗೆ ಹೊರು

(ಐರಾಣಿ > ಅರಣಿ > ಅರಣೆ = ಗಡಿಗೆ) ಮದುವೆಗಳಲ್ಲಿ ಶಾಸ್ತ್ರದ ನೀರು ತರುವ ಪದ್ಧತಿ ಉಂಟು. ಗಡಿಗೆಗೆ ಅರಿಶಿಣ ಕುಂಕುಮ ಹಚ್ಚಿ, ಕುತ್ತಿಗೆಗೆ ಅಂಗುದಾರ ಹೂವು ಸುತ್ತಿ, ನೀರು ತುಂಬಿದ ಅದನ್ನು ಬಾವಿಯ ಹತ್ತಿರದಿಂದ ಮದುವೆ ಮನೆಗೆ ತರುತ್ತಾರೆ.

ಪ್ರ : ಗಾದೆ-ಅತ್ತೆಗೆ ಅರಣೆ ಹೊರ್ತಾರೆ ಸೊಸೆಗೆ ಸೋಬಾನೆ ಹೇಳ್ತಾರೆ.

೪೦೦. ಐಲಗೋ ಅನ್ನು = ಗಂಟಲು ಹರಿದುಕೊಳ್ಳು, ಕಿರುಚಿಕೊಳ್ಳು

(ಲಗೊ..< ಲಗ್ (ಹಿಂ) = ತೊಡಗು, ಹಿಡಿ)

ಪ್ರ : ನೀವು ಕಾಲ ಮೇಲೆ ಕಾಲು ಹಾಕ್ಕೊಂಡು ಹಾಯವಾಗಿರು. ನಾನು ಬೆಳಗ್ಗೆಯಿಂದ ಸಂಜೆತನಕ ಐಲಗೋ ಅಂತ ಅರಚಿಕೊಂಡು ಒದ್ದಾಡ್ತೀನಿ.

೪೦೧. ಐಲು ಹತ್ತು = ಹುಚ್ಚು ಹಿಡಿ

(ಐಲು = ತಿಕ್ಕಲು, ಹುಚ್ಚು)

ಪ್ರ : ಐಲು ಹತ್ತಿದೋರಿಗೆ ಗಳಿಗ್ಗೆ ಹದಿನಾರು ಗ್ಯಾನ.

೪೦೨. ಐಲು ಪೈಲಂಗಾಡು = ತಿಕ್ಕಲನಂತಾಡು

ಪ್ರ : ಐಲು ಪೈಲಾಗಿ ಆಡೋನ ಹತ್ರ ಗುಟ್ಟು ಹೇಳಿದೋನು ಕೆಟ್ಟ.