೪೦೩. ಒಕ್ಕರಿಸು = ಗಂಟು ಬೀಳು.

ಪ್ರ : ಕುಕ್ಕರಿಸಿಕೊಳ್ಳಾನ ಅನ್ನುವಾಗ್ಗೆ ಇವನೊಬ್ಬ ಒಕ್ಕರಿಸಿದ.

೪೦೪. ಒಗಡು ಮೇವು ಹಾಕಿ ಅಗಡು ಮಾತಾಡು = ಎಂಜಲು ಬಡಿಸಿ ನಿಂದಿಸು, ಒರಟು ಮಾತಾಡು

(ಒಗಡು ಮೇವು = ತಿಂದುಬಿಟ್ಟ ಆಹಾರ, ಎಂಜಲನ್ನ; ಅಗಡು = ಒರಟು, ನಯವಿಹೀನ)

ಪ್ರ : ಒಗಟು ಮೇವು ಹಾಕಿ ಅಗಡು ಮಾತಾಡೋದ್ರಲ್ಲೆ ಅವರಿಗೆ ಆನಂದ.

೪೦೫. ಒಗ್ಗಿಕೊಳ್ಳು = ಹೊಂದಿಕೊಳ್ಳು, ರೂಢಿಯಾಗು

(ಒಗ್ಗು = ಹಿಡಿಸು, ಇಷ್ಟವಾಗು)

ಪ್ರ : ಗಾದೆ – ಒಗ್ಗಿದ್ದಕ್ಕೆ ಹೊಲಕಾಡು ಲೇಸು

೪೦೬. ಒಗ್ಗಿ ಒಗ್ಗಿಸಿಕೊಳ್ಳು = ಹೊಂದಿಕೊಂಡು ಹೊಂದಿಸಿಕೊಳ್ಳು

ಪ್ರ : ನೀನು ಹೆಂಡ್ರು ಜೊತೆ ಒಗ್ಗಿಕೊಳ್ಳದೆ, ಹೆಂಡ್ರನ್ನ ಒಗ್ಗಿಸಿಕೊಳ್ಳೋಕೆ ಆಗಲ್ಲ

೪೦೭. ಒಟ್ಟಕ್ಕೆ ಬರು = ಪ್ರಾಣಕ್ಕೆ ಬರು, ನಷ್ಟಕ್ಕೆ ಗುರಿಯಾಗು

(ಒಟ್ಟ.. < ವಟ್ಟ = ಮುರಿದುಕೊಳ್ಳುವ ಬಡ್ಡಿ ಅಥವಾ ತೆರಿಗೆ)

ಪ್ರ : ನೆಟ್ಟಗಾಗಾನ ಅನ್ನೋದ್ರಲ್ಲಿ ಇದೊಂದು ಬೇರೆ ಬಂತಲ್ಲ ಒಟ್ಟಕ್ಕೆ.

೪೦೮. ಒಡಲಾಗೆ ದೆವ್ವ ಕೂತಿರು = ಹಸಿವು ಎಂದು ಹಾತೊರೆಯುತ್ತಿರು, ಹೆಚ್ಚು ಉಣ್ಣು

(ಒಡಲು = ದೇಹ, ಹೊಟ್ಟೆ) ದೆವ್ವ ಹಿಡಿದವರು ಇಬ್ಬರು ಮೂವರಿಗಾಗುವಷ್ಟು ಅನ್ನವನ್ನು ಗಬಗಬನೆ ತಿನ್ನುತ್ತಾರೆ ಎಂಬ ಪ್ರತ್ಯಕ್ಷಾನುಭವ ಅಥವಾ ನಂಬಿಕೆ ಇದಕ್ಕೆ ಮೂಲ.

ಪ್ರ : ನಿನ್ನ ಒಡಲಾಗೇನು ದೆವ್ವ ಕೂತದ, ಹಿಂಗೆ ತಿಂತೀಯಲ್ಲ?

೪೦೯. ಒಡಾಳೆ ಪಟ್ಟೆ ಕೊಡು = ಊಟಕ್ಕೆ ಎಲೆ ಕೊಡು

(ಒಡಾಳೆ ಪಟ್ಟೆ = ಅಡಿಕೆ ಮರದ ಹೊಂಬಾಳೆಗೆ ಮುಸುಕಾಗಿರುವ ತಿಗುಡು) ಒಡಾಳೆ ಪಟ್ಟೆಗೆ ಕೆಲವು ಕಡೆ ಸುಲಿಪಟ್ಟೆ ಎಲೆ ಎಂದೂ ಹೇಳುತ್ತಾರೆ. ಬಾಳೆ ಎಲೆಗೆ ಬದಲಾಗಿ ಊಟಕ್ಕೆ ಇದನ್ನೂ ಕೊಡುವುದುಂಟು. ಹೊಂಬಾಳೆಯನ್ನು ಪೂಜೆಗೆಂದು ಕಳಶಕ್ಕಿಟ್ಟರೆ, ಒಡಾಳೆಯನ್ನು ಊಟಕ್ಕೆಂದು ಪಂಕ್ತಿಯಲ್ಲಿ ಕೊಡಲಾಗುತ್ತದೆ. ಕಳಶಕ್ಕಿಟ್ಟ ಹೊಂಬಾಳೆ ಹೆಚ್ಚಲ್ಲ, ಊಟಕ್ಕೆ ಹಾಕಿದ ಒಡಾಳೆ ಕಮ್ಮಿ ಅಲ್ಲ ಎರಡಕ್ಕೂ ಬೆಲೆ ಉಂಟು ಎಂಬುದು ಇದರಿಂದ ಗೊತ್ತಾಗುತ್ತದೆ.

ಪ್ರ : ಗಾದೆ – ಕಳಶಕ್ಕಿಕ್ಕೋಕೆ ಹೊಂಬಾಳೆ ಬೇಕು

ಊಟಕ್ಕಿಕ್ಕೋಕೆ ಒಡಾಳೆ ಬೇಕು

೪೧೦. ಒಡೆದು ಹೇಳು = ಬಿಡಿಸಿ ಹೇಳು, ವಿವರಿಸಿ ಹೇಳು

(ಒಡೆ = ಬಿಡಿಸು, ಹಿಂಜು) ಒಗಟಿನ ಸವಾಲು ಹಾಕು ಎನ್ನುವುದಕ್ಕೆ ‘ಒಡ್ಡು’ ಎಂತಲೂ, ಅದನ್ನು ಸೂಕ್ತ ಉತ್ತರದಿಂದ ಬಿಡಿಸು ಎಂಬುದಕ್ಕೆ ಒಡಚು ಎಂತಲೂ ಹೇಳುತ್ತಾರೆ. ಆ ಹಿನ್ನೆಲೆ ಈ ನುಡಿಗಟ್ಟಿನ ಬೆನ್ನಿಗಿದೆ.

ಪ್ರ : ನಿನ್ನ ಬೆಡಗಿನ ಉತ್ತರವನ್ನು ಒಡೆದು ಹೇಳು

೪೧೧. ಒಣಗಿ ಕಗ್ಗಾಗು = ರಸ ಬತ್ತಿ ಹೋಗು

(ಕಗ್ಗು.< ಕರಿಕು = ಸೀದು ಹೋದದ್ದು, ಒಣಗಿ ಹೋದದ್ದು)

ಪ್ರ : ರಸವೊಸರುವ ರಸದಾಳೆ ಕಬ್ಬಿನಂತಿದ್ದವಳು ಈಗ ಒಣಗಿದ ಕಗ್ಗಾಗಿದ್ದಾಳೆ.

೪೧೨. ಒಣಗಿ ಸೀಗೆಕಾಯಾಗು = ಬಡಕಲಾಗು, ಸೀಕಲಾಗು, ರಸಬತ್ತಿ ಕರ್ರಗಾಗು

(ಸೀಗೆಕಾಯಿ < ಚೀಯಕ್ಕಾಯ್ (ತ) = ಎಣ್ಣೆಯ ಜಿಡ್ಡನ್ನು ಹೋಗಲಾಡಿಸುವ ಗುಣವುಳ್ಳ ಒಂದು ಬಗೆಯ ಕಾಯಿ)

ಪ್ರ : ಥಣ ಥಣ ಹೊಳೀತಿದ್ದೋಳು ಈಗ ಒಣಗಿ ಸೀಗೆಕಾಯಾಗಿದ್ದಾಳೆ.

೪೧೩. ಒತ್ತರಿಸಿಕೊಳ್ಳು = ಆಕ್ರಮಿಸಿಕೊಳ್ಳು

ಪ್ರ : ನಮ್ಮ ಜಮೀನನ್ನು ಒತ್ತರಿಸಿಕೊಂಡು ನಮ್ಮ ಮೇಲೇ ಜೂರತ್ತು ತೋರಿಸ್ತಾ ಅವರೆ.

೪೧೪. ಒತ್ತಾಗಿರು = ಸಾಂದ್ರವಾಗಿರು, ದಟ್ಟವಾಗಿರು

ಪ್ರ : ಹರಗುವಾಗ ಪೈರು ತೆಳುವಾಗಿದ್ದ ಕಡೆ ಕುಂಟೆ ತೇಲಿಸಿ ಹಿಡಿ, ಒತ್ತಾಗಿದ್ದ ಕಡೆ ಅದುಮಿ ಹಿಡಿ.

೪೧೫. ಒತ್ತಿಕೊಳ್ಳು = ಸರಿದುಕೊಳ್ಳು, ಪಕ್ಕಕ್ಕೆ ಜರುಗಿಕೊಳ್ಳು

(ಒತ್ತು < ಒಟ್ರು (ತ) = ಪಕ್ಕಕ್ಕೆ ಸರಿ)

ಪ್ರ : ಕೊಂಚ ಆ ಕಡೆ ಒತ್ತಿಕೊಳ್ಳೋ, ನಮಗಿಲ್ಲಿ ಇಕ್ಕಟ್ಟು.

೪೧೬. ಒತ್ತಿಗೆ ಸೇರು = ನಾಟಕದ ರಿಹರ್ಸೆಲ್‌ಗೆ ಕೂಡು

(ಒತ್ತಿಗೆ = ಒಟ್ಟಿಗೆ?)

ಪ್ರ : ಎಲ್ಲರೂ ಚಾವಡಿಯಲ್ಲಿ ಒತ್ತಿಗೆ ಸೇರಿದ್ದಾರೆ, ಮುಖ್ಯಪಾತ್ರಧಾರಿ ಇಲ್ಲೇ ಇದ್ದೀಯಲ್ಲ?

೪೧೭. ಒತ್ತು ಕೊಡು = ಹೂಡು ಕೊಡು.

ರಾಗಿ ಮುದ್ದೆ ಊಟ ಮಾಡುವವರು ತಣಿಗೆಯ ಕೆಳಗೆ ಒಂದು ಕಡೆ ಮರದ ಚಕ್ಕೆಯನ್ನು ಅಥವಾ ಹೂಡನ್ನು ಇಟ್ಟುಕೊಳ್ಳುತ್ತಾರೆ, ತಣಿಗೆಗೆ ಬಿಟ್ಟಸಾರು ಮುದ್ದೆಯ ಕೆಳಗೆ ಬಂದು ಅದು ಗಜಿಬಿಜಿಯಾಗದಿರಲೆಂದು. ಆ ಚಕ್ಕೆಗೆ ಹೂಡು ಎನ್ನುವಂತೆಯೇ ಉಲ್ಟು (<ಉರುಟು?), ಒತ್ತು ಎನ್ನುತ್ತಾರೆ. ನಮ್ಮ ಜನಪದರ ಮುದ್ದೆ ಊಟದ ಸಹಾಯಕ ಸಂಗಾತಿ ಈ ನುಡಿಗಟ್ಟು.

ಪ್ರ : ಅಡ್ಡಕಸುಬಿ ಹೆಂಗಸು ನೀನು, ಮೊದಲು ಒತ್ತು ಕೊಟ್ಟು ಅಲ್ವ, ತಣಿಗೆಗೆ ಸಾರು ಬಿಡೋದು?

೪೧೮. ಒತ್ತೆ ಇಡು = ಅಡವು ಇಡು

(ಒತ್ತೆ < ಒಟ್ರಿ(ತ) = ಅಡವು)

ಪ್ರ : ನನ್ನ ಪ್ರಾಣ ಬೇಕಾದ್ರೆ ಒತ್ತೆ ಇಟ್ಟು, ಅವನನ್ನು ಉಳಿಸ್ತೇನೆ.

೪೧೯. ಒತ್ತೆ ಹಾಕು = ಹಣ್ಣು ಮಾಡು, ಅಡೆ ಹಾಕು.

ಮಾವಿನಕಾಯಿ, ಬಾಳೆಕಾಯಿಗಳನ್ನು ಹುಲ್ಲೊಳಗೆ ಮುಚ್ಚಿ ಶಾಖದಿಂದ ಹಣ್ಣಾಗುವಂತೆ ಮಾಡುವುದಕ್ಕೆ ಒತ್ತೆ ಹಾಕಿದ್ದೇವೆ ಎನ್ನುತ್ತಾರೆ. ಮರದ ಮೇಲಿನ ಸಹಜ ಹಣ್ಣಿಗೂ ಒತ್ತೆ ಹಾಕಿದ ಅಸಹಜ ಹಣ್ಣಿಗೂ ಅಂತರವಿರುತ್ತದೆ ಎಂಬುದು ಅನುಭವಿ ರುಚಿತಜ್ಞರ ಅಭಿಪ್ರಾಯ.

ಪ್ರ : ಹಬ್ಬಕ್ಕೆ ಬೇಕಲ್ಲ ಅಂತ ಎರಡು ಬಾಳೆಗೊನೆ ತಂದು ಒತ್ತೆ ಹಾಕಿದ್ದೇವೆ.

೪೨೦. ಒದರಿ ಕಳಿಸು = ಧೂಳು ಕೊಡವಿ ಕಳಿಸು

ಪ್ರ : ಹಿಂದು ಮುಂದಿನದನ್ನೆಲ್ಲ ಎತ್ಕೊಂಡು ಚೆನ್ನಾಗಿ ಒದರಿ ಕಳಿಸಿದ್ದೀನಿ ಅವನನ್ನು

೪೨೧. ಒದೆ ಕೊಡು = ಏಟು ಕೊಡು

(ಒದೆ < ಉದೈ(ತ) = ಏಟು)

ಪ್ರ : ಗಾದೆ – ಎದೆ ಕೊಡು ಅಂದಿದ್ಕೆ ಒದೆ ಕೊಟ್ಟಳು

೪೨೨. ಒದೆ ಕೊಡು = ಗುಜ್ಜು ಕೊಡು, ಹೂಡುಗಂಬ ಕೊಡು

ಪ್ರ : ಈ ತೊಲೆಗೆ ಒಂದು ಒದೆ ಕೊಡದೇ ಹೋದ್ರೆ ಬಿದ್ದು ಹೋಗೋದಂತೂ ಗ್ಯಾರಂಟಿ.

೪೨೩. ಒದ್ದೆ ಮಾಡಿಕೊಳ್ಳು = ನೆನೆಸಿಕೊಳ್ಳು, ಉಚ್ಚೆಹುಯ್ದುಕೊಳ್ಳು

(ಒದ್ದೆ < ಒದ (ತ) = ತೇವ, ಪಸ್ಮೆ)

ಪ್ರ : ಅಪ್ಪ ಹೂಂಕರಿಸಿದೇಟಿಗೇ ಮಗ ಚೆಡ್ಡೀನೆಲ್ಲ ಒದ್ದೆ ಮಾಡ್ಕೊಂಡ.

೪೨೪. ಒಪ್ಪ ಇಕ್ಕಿಸು = ಮೆರಗು ಕೊಡಿಸು, ಉಜ್ವಲಗೊಳಿಸು

ಒಡವೆಯ ಕೊಳೆಯನ್ನೆಲ್ಲ ಉಜ್ಜಿ ಹೊಳೆಯುವಂತೆ ಮಾಡುವುದಕ್ಕೆ ಒಪ್ಪ ಇಕ್ಕಿಸುವುದು ಎನ್ನುತ್ತಾರೆ. ಇದು ಅಕ್ಕಸಾಲಿಗ ವೃತ್ತಿಯಿಂದ ಚಾಲ್ತಿಗೆ ಬಂದ ನುಡಿಗಟ್ಟು

ಪ್ರ : ಚಿಂತಾಕ ಎಲ್ಲಿ ಅಂದಿದ್ಕೆ ಒಪ್ಪ ಇಕ್ಕಿಸೋದ್ಕೆ ವಾಜರೋನಿಗೆ ಕೊಟ್ಟಿದ್ದೀನಿ ಅಂದ್ಲು

೪೨೫. ಒಪ್ಪ ಮಾಡು = ನೇರ್ಪು ಮಾಡು, ಚೊಕ್ಕಟ ಮಾಡು

(ಒಪ್ಪ = ಶುದ್ಧ, ಅಚ್ಚುಕಟ್ಟು)

ಪ್ರ: ರಾಗಿಯನ್ನು ಕೇರಿ, ಒನೆದು, ಹೆಗ್ಗಲಿಸಿ ಒಪ್ಪ ಮಾಡುವಾಗ್ಗೆ ಹೆಣ ಬಿದ್ದು ಹೋಯ್ತು

೪೨೬. ಒಪ್ಪವಾಗಿರು = ಅನ್ಯೋನ್ಯವಾಗಿರು, ಚೊಕ್ಕಟವಾಗಿರು, ರೇಡುರಂಪ ಇಲ್ಲದಿರು

ಪ್ರ : ಗಾದೆ – ಸೊಪ್ಪುಸೆದ ತಿನ್ನೋರ ಒಪ್ಪ ನೋಡು

ತುಪ್ಪ ಹೊಗೆ ತಿನ್ನೋರ ರಂಪ ನೋಡು

೪೨೭. ಒಪ್ಪಾಗು = ಹೋಳಾಗು, ಎರಡು ಭಾಗವಾಗು

(ಒಪ್ಪು < ಒಪ್ಪಾಲು < ಒರ್‌ಪಾಲು = ಹೋಳು)

ಪ್ರ : ತೆಂಗಿನ ಕಾಯಿ ಒಂದೊಪ್ಪನ್ನು ತುರೀಲೋ, ಎರಡೊಪ್ಪನ್ನೂ ತುರೀಲೋ?

೪೨೮. ಒಪ್ಪೊತ್ತಿಗಿದ್ರೆ ಒಲೆ ಕಿತ್ತು ಹಾಕು = ಹುಮ್ಮಸ್ಸಿನಲ್ಲಿ ಅವಿವೇಕದ ಕೆಲಸ ಮಾಡು

(ಒಪ್ಪೊತ್ತು < ಒರ್ + ಪೊತ್ತು = ಒಂದು ಹೊತ್ತು) ಒಂದು ಹೊತ್ತಿನ ಹೊಟ್ಟೆ ಪಾಡು ತೀರಿತಲ್ಲಾ ಎಂಬ ಸಡಗರದಲ್ಲಿ ಇನ್ನೊಂದು ಹೊತ್ತಿನ ಹೊಟ್ಟೆಪಾಡಿನ ಗೊಡವೆಯನ್ನೇ ಮರೆತು ಮೆರೆದು ಮೆಕ್ಕೇಕಾಯಿ ತಿನ್ನುವ ವಿವೇಕರಹಿತ ಆವೇಶಭರಿತ ವರ್ತನೆಯನ್ನು ಇದು ಸಾದರ ಪಡಿಸುತ್ತದೆ; ಸಂಯಮದ ವಿವೇಚನೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸುತ್ತದೆ.

ಪ್ರ : ಗಾದೆ – ಒಪ್ಪೊತ್ತಿಗಿದ್ರೆ ಒಲೆ ಕಿತ್ತು ಹಾಕ್ತಾರೆ ಸುಗ್ಗಿ ಮಾದಿಗರು

೪೨೯. ಒಬ್ಬಟ್ಟು ತಟ್ಟೋಕೆ ಹೋಗು = ಇಸ್ಪೀಟು ಆಡಲು ಹೋಗು.

ಇಸ್ಪೀಟಿನ ಎಲೆಗಳನ್ನು ಕಲಸಬೇಕಾದರೆ ‘ಚರ್ಕಿ ಹೊಡೆ’ಯುತ್ತಾರೆ. ಚರ್ಕಿ ಹೊಡೆಯಲು ಬರದವರು ಎಡಗೈಯ ಅಂಗೈಯೊಳಗೆ ಎಲ್ಲ ಎಲೆಗಳನ್ನು ಇಟ್ಟುಕೊಂಡು ಬಲಗೈಯಿಂದ ಕೆಳಗಿನ, ನಡುವಿನ ಎಲೆಗಳನ್ನು ತೆಗೆದುಕೊಂಡು ಪರಸ್ಪರ ಮಿಳಿತವಾಗುವಂತೆ ಮಾಡುತ್ತಾರೆ – ಟಪಟಪ ಎಂದು ತಟ್ಟುತ್ತಾ. ಅದು ಹೆಚ್ಚೂ ಕಮ್ಮಿ ಹೆಂಗಸರು ಹೋಳಿಗೆ ತಟ್ಟುವ ಕ್ರಿಯೆಯನ್ನು ಹೋಲುತ್ತದೆ. ನಗರಗಳಲ್ಲಿ ಶಿಷ್ಟರು ಒಬ್ಬಟ್ಟು ಎನ್ನುತ್ತಾರೆ. ಪಾಕ ಕಾರ್ಯದ ರೂಪಕ ಈ ನುಡಿಗಟ್ಟಿನಲ್ಲಿದೆ.

ಪ್ರ : ಕಂಡೂ ಕಂಡೂ ಗಂಡ ಎಲ್ಲಿಗೆ ಹೋಗಿದ್ದಾರೆ ಅಂತ ಕೇಳಿದ್ರೆ ಏನು ಹೇಳಲಿ, ಕ್ಲಬ್ಬಿಗೆ ಹೋಗಿದ್ದಾರೆ ಒಬ್ಬಟ್ಟು ತಟ್ಟೋಕೆ ಅಂದೆ.

೪೩೦. ಒಬ್ಬನಿಗೆ ಹುಟ್ಟಿದಿರು = ಹಾದರಕ್ಕೆ ಹುಟ್ಟು ಬೆರಕ ತಳಿಯಿಂದ ಬೆರಕೆ ಬುದ್ದಿ ಬರು.

ಪ್ರ : ಒಬ್ಬನಿಗೆ ಹುಟ್ಟಿದ್ರೆ ಅವನಿಂಥ ಸುಳ್ಳು ತಗಲೂಪಿ ಹೇಳ್ತಿರಲಿಲ್ಲ.

೪೩೧. ಒಮ್ಮಾಕು ಕೊಡು = ಪೂರ್ತಿ ಕೊಡು, ಅನಾಮತ್ತು ಕೊಡು

(ಒಮ್ಮಾಕು < ಒಮ್ಮಕು <ಒರ್ + ಮುಖ = ಒಟ್ಟು)

ಪ್ರ : ನೀವು ಒಮ್ಮಾಕೆ ಕೊಟ್ರೆ ನಿಮಗೆ ತಿಂಬೋಕೆ ಬೇಡ್ವೆ ಎಂದಳು ದಾವಣಗೆರೆಯ ಹೆಂಡ್ರು.

೪೩೨. ಒರಗಿ ಹೋಗು =ದ ಮರಣ ಹೊಂದು, ಸಾವನ್ನಪ್ಪು

ಪ್ರ : ಇವನು ಒರಗಿ ಹೋದ ದಿವಸವೇ ನನಗೆ ನೆಮ್ಮದಿ

೪೩೩. ಒರಳು ಕಲ್ಲಿಗೆ ತಲೆ ಕೊಡು = ಅಪಾಯಕ್ಕೆ ತಲೆಯೊಡ್ಡು

(ಒರಳ್ < ಒರಲ್ < ಉರಲ್ (ತ) = ಭತ್ತವನ್ನು ಒನಕೆಯಿಂದ ಕುಟ್ಟಲು, ಧನಿಯಾವನ್ನು ಗಡಾರಿಯಿಂದ ಕುಟ್ಟಲು ಮಾಡಿರುವ ಕಲ್ಲಿನ ಗುಳಿ ಒಳಕಲ್ಲು < ಒರಳುಕಲ್ಲು)

ಪ್ರ : ಅವರ ಬೇಳ್ಯದ ಮಾತಿಗೆ ನೀನು ಮರುಳಾದರೆ, ಒರಳುಕಲ್ಲಿಗೆ ತಲೆ ಕೊಟ್ಟಂತೆಯೇ ಲೆಕ್ಕ

೪೩೪. ಒರೆ ಇಕ್ಕು = ಒರೆಗಲ್ಲಿಗೆ ಉಜ್ಜಿ ನೋಡು, ಪರೀಕ್ಷಿಸು

(ಒರೆ < ಉರೈ (ತ) = ಪರೀಕ್ಷಿಸು) ಒಡವೆ ಚಿನ್ನದ್ದೋ ಅಥವಾ ಗಿಲೀಟನದೋ ಎಂದು ಖಾತ್ರಿ ಪಡಿಸಿಕೊಳ್ಳುವ ಅಕ್ಕಸಾಲಿಗರು ತಮ್ಮಲ್ಲಿರುವ ಒರೆಗಲ್ಲಿಗೆ ಉಜ್ಜಿ ಪರೀಕ್ಷಿಸಿ ಸಾಚಾ ಅಥವಾ ಕೋಟಿ ಎಂಬುದನ್ನು ತಿಳಿಸುತ್ತಾರೆ. ಆದ್ದರಿಂದ ಇದು ಚಿನ್ನ ಬೆಳ್ಳಿ ವ್ಯಾಪಾರ ಮಾಡುವ ಅಥವಾ ಚಿನ್ನದ ಒಡವೆ ಮಾಡುವ ಚಿನಿವಾರ ಅಥವಾ ಅಕ್ಕಸಾಲಿಗ ವೃತ್ತಿಯಿಂದ ಬಂದ ನುಡಿಗಟ್ಟು

ಪ್ರ : ಒರೆ ಇಕ್ಕಿದ ಮೇಲೆ ತಬ್ಬುವ ಅಥವಾ ದಬ್ಬುವ ಕೆಲಸ ಸುಲಭವಾಗುತ್ತದೆ.

೪೩೫. ಒಲೆ ಹೂಡು = ಸಂಸಾರ ಮಾಡತೊಡಗು

(ಒಲೆ < ಉಲೈ (ತ))

ಪ್ರ : ದೊಡ್ಡ ಮಗ ಪಾಲು ತಗೊಂಡು ಬೇರೆ ಒಲೆ ಹೂಡಿದ್ದಾನೆ.

೪೩೬. ಒಸಕಾಡು = ಹೇಳಲು ಹಿಂಜರಿ, ಹಿಂದೆ ಮುಂದೆ ನೋಡು.

ಪ್ರ : ಹೊಸಬರ ಎದುರಿಗೆ ಮಾತಾಡೋಕೆ ಯಾಕೆ ಒಸಕಾಡಬೇಕು?

೪೩೭. ಒಸಗೆ ಹಾಕು = ಶುಭಕಾರ್ಯ ಜರುಗಿಸು, ಸಂತೋಷದ ಸಡಗರದ ಆಚರಣೆ ನಡೆಸು

ಪ್ರ : ಮೈನೆರೆದ ಮಗಳಿಗೆ ಇವತ್ತು ಒಸಗೆ ಹಾಕ್ತಾ ಇದ್ದೇವೆ.

೪೩೮. ಒಸಡಿಗೆಟ್ಟು = ಮುಸುಡಿಗೆಟ್ಟು

(ಒಸಡು = ಹಲ್ಲಿನ ಮೇಲ್ಭಾಗದ ಮಾಂಸ ಭಾಗ)

ಪ್ರ : ಒಸಡಿಗೆಟ್ಟಿದರೂ ಮುಸುಡಿಗೆಟ್ಟಿದಂಗೇ ಲೆಕ್ಕ

೪೩೯. ಒಳಕ್ಕೆ ಬರು = ನಷ್ಟವಾಗು, ಕರಗು

ಪ್ರ : ಅಪ್ಪ ಮಾಡಿಟ್ಟಿದ್ದ ಗಂಟು ಮಕ್ಕಳ ಕಾಲಕ್ಕೆ ದಿನೇದಿನೇ ಒಳ್ಳಕ್ಕೆ ಬಂತು.

೪೪೦. ಒಳಗಿಂದೊಳಗೇ ಬತ್ತಿ ಇಡು = ಅನ್ಯೋನ್ಯತೆಯ ಸೋಗಿನಲ್ಲೆ ಅನ್ಯಾಯ ಮಾಡು

ಬಂಡೆಯನ್ನು ಸ್ಪೋಟಿಸಲು ಡೈನಾಮೆಂಟ್ (<ಡೈನಾಮೈಟ್) ಬಳಸಲು ಷುರುವಾದ ಮೇಲೆ ಈ ನುಡಿಗಟ್ಟು ಚಾಲ್ತಿಗೆ ಬಂದಿದೆ ಎಂದು ಊಹಿಸಬಹುದು.

ಪ್ರ : ನನ್ನ ಜೊತೇಲೆ ಇದ್ಕೊಂಡು, ಒಳಗಿಂದೊಳಗೇ ಬತ್ತಿ ಇಟ್ಟುಬಿಟ್ಟನಲ್ಲ, ಹೆತ್ತಾಯಿಗೆ ಲಾಡಿ ಬಿಚ್ಚೊ ಸೂಳೆ ಮಗ

೪೪೧. ಒಳಗೇ ಕುಮುಲಿ ಹೋಗು = ಮೂಗುಬ್ಬಸದಿಂದ ಬೇಯು

(ಕುಮುಲು = ಬಾಡು)

ಪ್ರ : ಅವರು ಕೊಟ್ಟ ಹಿಜ (< ಹಿಂಸೆ)ದಲ್ಲಿ ಒಳಗೇ ಕುಮುಲಿ ಹೋಗ್ಯವಳೆ

೪೪೨. ಒಳಗೆ ಹೆಣ್ಣಾಗಿ ಹೊರಗೆ ಗಂಡಾಗಿ ದುಡಿ = ಎಲ್ಲ ಕೆಲಸಗಳನ್ನು ದಿಟ್ಟತನದಿಂದ ನಿಭಾಯಿಸು

ಪ್ರ : ಒಳಗೆ ಹೆಣ್ಣಾಗಿ ಹೊರಗೆ ಗಂಡಾಗಿ ದುಡಿದು ನಿಮ್ಮನ್ನು ನೆಟ್ಟಗೆ ನೇರಗೆ ಮಾಡಿದ್ದು ಇವತ್ತು ನಿಮ್ಮ ನೆನಪಿಗೆ ಬರ್ತದೇನೋ? ನನಗಿಂತ ನಿಮ್ಮ ಹೆಂಡ್ರದೀರೆ ಹೆಚ್ಚಾದರೇನೋ?

೪೪೩. ಒಳ್ಳು ಎತ್ತು = ಜಾಗಬಿಡು, ತೊಲಗು

(ಒಳ್ಳು < ಒರಳು = ಯೋನಿ)

ಪ್ರ : ಮೊದಲು ಇಲ್ಲಿಂದ ನಿನ್ನ ಒಳ್ಳೆತ್ತು, ನಿನ್ನ ಕರೆಸಿದ್ದೋರು ಯಾರಿಲ್ಲಿ?

೪೪೪. ಒಳ್ಳು ಮುಚ್ಕೊಂಡಿರು = ಇಬ್ಬಾಯಿ ಅದುಮಿಕೊಂಡಿರು

ಪ್ರ : ಒಳ್ಳು ಮುಚ್ಕೊಂಡು ಕೂತ್ಗಂಡೋ ಗೆದ್ದೆ, ಇಲ್ಲದಿದ್ರೆ ಕಳ್ಳು ಈಚೆಗೆ ಬರೋ ಹಂಗೆ ಒದ್ದು ಬಿಡ್ತೀನಿ

೪೪೫. ಒಳ್ಳೆ ಹೊಡೆತ ಹೊಡಿ = ಹೆಚ್ಚು ಲಾಭ ಗಳಿಸು, ಅಧಿಕ ಲಂಚ ಹೊಡಿ

ಪ್ರ : ಬಿ.ಡಿ.ಒ ಆದ ಮೇಲೆ ಒಳ್ಳೆ ಹೊಡೆತ ಹೊಡೆದ, ಮಕ್ಕಳು ಮೊಮ್ಮಕ್ಕಳೂ ತಿಂದರೂ ಸವೆಯಲ್ಲ

೪೪೬. ಒಳ್ಳೆ ಮೇಯ್ತ ಮೇಯಿ = ಹೆಚ್ಚು ಲಂಚ ರುಷುವತ್ತು ಲಪಟಾಯಿಸು

(ಮೇಯ್ತ = ಮೇಯುವಿಕೆ, ಮೇವು)

ಪ್ರ : ಇಲ್ಲಿಗೆ ವರ್ಗವಾಗಿ ಬಂದ ಮೇಲೆ ಒಳ್ಳೆ ಮೇಯ್ತ ಮೇದ.

೪೪೭. ಒಂಟರು ಪಿಂಟರು ಸುಂಟರಗಾಳಿಯಾಗಿ ತಿರುಗು = ಒಬ್ಬಂಟಿಯಾಗಿ ಅಲೆ

(ಒಂಟರು ಪಿಂಟರು < ಒಂಟಿ ಪಿಂಡ?)

ಪ್ರ : ಇನ್ನೇನು ಹೆಂಡ್ರಿಲ್ಲ ಮಕ್ಕಳಿಲ್ಲ, ಒಂಟುರಪಿಂಟರು ಸುಂಟರಗಾಳಿಯಂಗೆ ತಿರುಗೋದೇ ಕೆಲಸ

೪೪೮. ಒಂಟಿ ಕಾಲ ಮೇಲೆ ನಿಲ್ಲು = ಮುಷ್ಕರ ಹೂಡಿ ನಿಲ್ಲು, ಮೊಂಡು ಬಿದ್ದು ನಿಲ್ಲು

ಪ್ರ : ಹಣ ಕೊಡದ ಹೊರತೂ ನಾನು ಹೋಗಲ್ಲ ಅಂತ ಒಂಟಿಕಾಲ ಮೇಲೆ ನಿಂತುಬಿಟ್ಟ, ಪರಚಾಂಡಾಳ

೪೪೯. ಒಂಟಿ ಕಾಲ ಮೇಲೆ ನಿಲ್ಲಿಸು = ಶಿಕ್ಷೆ ವಿಧಿಸು

ಬಹುಶಃ ಪಾಠಶಾಲೆಗಳು ಪ್ರಾರಂಭವಾದ ಮೇಲೆ ಪ್ರಾಥಮಿಕ ಶಾಲೆಯ ಉಪಾಧ್ಯಾಯರು ತಪ್ಪು ಮಾಡಿದ ವಿದ್ಯಾರ್ಥಿಗಳಿಗೆ ಬೆತ್ತದಿಂದ ಹೊಡೆಯುವುದು, ಕಿವಿ ಹಿಡಿದು ನಾಯಿ ಕುನ್ನಿ ಎತ್ತಿದಂತೆ ಎತ್ತುವುದು ಮೊದಲಾದ ಶಿಕ್ಷೆಗಳನ್ನು ಕೊಡುತ್ತಿದ್ದರು. ಅಂಥ ಒಂದು ಶಿಕ್ಷೆ ಈ ನುಡಿಗಟ್ಟಿಗೆ ಮೂಲ.

ಪ್ರ : ಮಗ್ಗಿ ಗಟ್ಟಿ ಮಾಡಿಕೊಂಡು ಬರಲಿಲ್ಲ ಅಂದ್ರೆ, ಪೀರಿಯಡ್ ಪೂರ್ತಿ ಒಂಟಿ ಕಾಲ ಮೇಲೆ ನಿಲ್ಲಿಸ್ತೀವಿ.

೪೫೦. ಒಂಟಿ ಸೀನು ಹಾಕು = ಅಪಶುಕನವೆಂದು ಭಾವಿಸು, ಕುರಿತದ್ದು ಆಗುವುದಿಲ್ಲ ಎಂದು ನಂಬು

ಪ್ರ : ಇವನು ಒಂಟಿ ಸೀನು ಹಾಕಿದ, ನಮ್ಮ ಕೆಲಸ ಆಗಲ್ಲ.

೪೫೧. ಒಂದಕ್ಕೆ ಹೋಗು = ಮೂತ್ರ ವಿಸರ್ಜನೆಗೆ ಹೋಗು

ಪಾಠಶಾಲೆಗಳು ಅಸ್ತಿತ್ವಕ್ಕೆ ಬಂದ ಮೇಲೆ ಬಹುತೇಕ ಉಪಾಧ್ಯಾಯರು ಮಕ್ಕಳಿಗೆ ಮಲಜಲ ಬಾಧೆಗೆ ಅಪ್ಪಣೆ ಕೇಳಲು ಸಂಕೇತಗಳನ್ನು ಸೂಚಿಸದರು ಎಂದು ತೋರುತ್ತದೆ. ಅಂದರೆ ಮಡಿಪ್ರಜ್ಞೆಯ ಜನ ಮೈಲಿಗೆ ವಿಷಯವನ್ನು ತರಗತಿಯಲ್ಲಿ ನೇರವಾಗಿ ಪ್ರಸ್ತಾಪಿಸಬಾರದೆಂದು ಜಪಬಾಧೆಗೆ ಹೋಗುವವರು ಒಂದು ಬೆರಳನ್ನೂ, ಮಲಬಾಧೆಗೆ ಹೋಗುವವರು ಎರಡು ಬೆರಳನ್ನು ತೋರಿಸಿದರೆ ಸಾಕು ಎಂದು ಕಟ್ಟು ಮಾಡಿದ ಪ್ರಯುಕ್ತ ಈ ನುಡಿಗಟ್ಟುಗಳು ಚಾಲ್ತಿಗೆ ಬಂದವು ಎಂದು ಊಹಿಸಬಹುದು.

ಪ್ರ : ಕೊಂಚ ನಿಂತ್ಕೋ, ಒಂದಕ್ಕೆ ಹೋಗಿ ಬರ್ತೀನಿ

೪೫೨. ಒಂದಡಕೆ ಕಡಿಯೋದ್ರಲ್ಲಿ ಬರು = ಬೇಗ ಬರು

ತಾಂಬೂಲ ಹಾಕಿಕೊಳ್ಳುವವರು ಮೊದಲು ಬಾಯಿಗೆ ಅಡಕೆ ಹಾಕಿಕೊಂಡು ಕಡಿದು ಆಮೇಲೆ ಎಲೆಗೆ ಸುಣ್ಣ ಹಚ್ಚಿ ಬಾಯಿಗಿಟ್ಟಿಕೊಂಡು ಅಗಿಯುತ್ತಾರೆ. ಅಡಿಕೆ ಕಡಿದು ನುಣ್ಣಗಾಗಿಸದೆ ಸುಣ್ಣ ಹಚ್ಚಿದ ಎಲೆಯನ್ನು ಬಾಯೊಳಗೆ ಇಟ್ಟುಕೊಂಡು ಅಗಿದರೆ ಬಾಯಿ ಸುಟ್ಟುಕೊಳ್ಳುತ್ತದೆ. ಆದ್ದರಿಂದ ಮೊದಲು ಅಡಕೆಯನ್ನು ಕಟುಮ್ಮನೆ ಕಡಿಯುತ್ತಾರೆ. ಅದು ಹೆಚ್ಚು ಕಾಲ ಹಿಡಿಯುವುದಿಲ್ಲ ಎಂಬ ಅನ್ನಿಸಿಕೆ ಈ ನುಡಿಗಟ್ಟಿಗೆ ಮೂಲ.

ಪ್ರ : ಅಲ್ಲಿಂದ ಇಲ್ಲಿಗೆ ಒಂದಡಕೆ ಕಡಿಯೋದ್ರಲ್ಲಿ ಬಂದು ಬಿಡಬಹುದು.

೪೫೩. ಒಂದನ್ನು ಎರಡು ಮಾಡಲು ಹೋಗು = ಹೆರಿಗೆ ಮಾಡಿಸಲು ಹೋಗು ಜೀವದ ಒಳಗಿರುವ ಮತ್ತೊಂದು ಜೀವವನ್ನು ಹೊರಗೆ ಬರಿಸುವ ಸೂಲಗಿತ್ತಿ ಕಾಯಕ ಈ ನುಡಿಗಟ್ಟಿಗೆ ಮೂಲ.

ಪ್ರ : ನಿಮ್ಮಮ್ಮ ಎಲ್ಲಿ ಎಂದಾಗ, ಒಂದನ್ನು ಎರಡು ಮಾಡಲು ಹೋಗಿದ್ದಾಳೆ ಎಂದಳು ಮಗಳು.

೪೫೪. ಒಂದರಿಯಾಡು = ಗಟ್ಟಿ ಮತ್ತು ನುಚ್ಚನ್ನು ಬೇರೆ ಮಾಡು, ಕಾಳು ಮತ್ತು ಧೂಳನ್ನು ಬೇರ್ಪಡಿಸು

(ಒಂದರಿ < ಒನಲಿ = ಜರಡಿ)

ಪ್ರ : ನುಚ್ಚು ನುರಿಯನ್ನೆಲ್ಲ ಮೊದಲೇ ಒಂದರಿಯಾಡಿದ್ರೆ, ಗಟ್ಟಿಗೆ ಬೆಲೆಗಟ್ಟೋದು ಸುಲಭ ಆಗ್ತದೆ.

೪೫೫. ಒಂದಾಡಿ ಒಂದು ಬಿಡದಿರು = ಬಾಯಿಗೆ ಬಂದದ್ದಾಡು, ಬಯ್ಯಿ.

ಪ್ರ : ನಮ್ಮತ್ತೆ ನಾದಿನಿಯರು ನನ್ನನ್ನು ಒಂದಾಡಿ ಒಂದು ಬಿಟ್ಟಿಲ್ಲ, ನೀರು ಬರೋ ಕಣ್ಣಲ್ಲಿ ರಕ್ತ ಬರಿಸಿದ್ದಾರೆ.

೪೫೬. ಒಂದೂರನ್ನ ಒಂದೂರು ನೀರಾಗಿರು = ಸದಾ ಅಲೆಯುತ್ತಿರು, ಇದ್ದ ಕಡೆ ಇರದಿರು

ಪ್ರ : ಆ ಮಾರಾಯನ ಕಾಲಲ್ಲಿ ಚಕ್ರ ಇದೆಯೇನೋ, ಒಂದೂರನ್ನ ಒಂದೂರು ನೀರು ಅಂತ ಹೇಳಿದ್ರೆ ಹೊಂದಿಕೊಳ್ತದೆ.

೪೫೭. ಒಂದು ಕಾಲು ಒಳಗೆ ಕಾಲು ಹೊರಗೆ ಇರು = ತರಾತುರಿಯಲ್ಲಿರು

ಪ್ರ : ನೀನು ಯಾವಾಗ ಬಂದ್ರೂ ಒಂದು ಕಾಲು ಒಳಗೆ ಒಂದು ಕಾಲು ಹೊರಗೆ, ಬಿಡುಬೀಸಾಗಿ ಬಂದು ಇದ್ದದ್ದೇ ಕಾಣೆ.

೪೫೮. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಇಡು = ಪಕ್ಷಪಾತ ಮಾಡು.

ಪ್ರ : ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಇಡೋದೇ ಲಕ್ಷ್ಮೀದೇವಿ ವಾಗ್ದೇವಿಯರ ಕೆಲಸ.

೪೫೯. ಒಂದು ಕೈ ತೋರಿಸು = ಪಾಠ ಕಲಿಸು, ಶಕ್ತಿ ತೋರಿಸು

ಪ್ರ : ಅವನು ಮಾಡೋದ್ನೆಲ್ಲ ಮಾಡಲಿ, ನಾನೂ ಒಂದು ಕೈ ತೋರಿಸ್ತೀನಿ, ಆಗ ಗೊತ್ತಾಗ್ತದೆ ಅಣ್ಣನಿಗೆ

೪೬೦. ಒಂದು ತೂಕ ಹೆಚ್ಚಾಗು = ಗೌರವ ಜಾಸ್ತಿಯಾಗು

(ತೂಕ = ಗೌರವ, ಮಾನ)

ಪ್ರ : ಇವನು ತಣ್ಣಗಿದ್ದದ್ದರಿಂದ ಒಂದು ತೂಕ ಹೆಚ್ಚಾಯ್ತು ಅಂತ ಜನ ಭಾವಿಸಿದ್ದಾರೆ.

೪೬೧. ಒಂದು ದಮಡಿಯೂ ಇಲ್ಲದಿರು = ಒಂದು ಕಾಸೂ ಇಲ್ಲದಿರು

(ದಮಡಿ < ದಮ್ಮಡಿ = ಬಿಡಿಗಾಸು, ದುಡ್ಡಿನ ಕಾಲು ಭಾಗ ; ದುಡ್ಡು = ನಾಲ್ಕು ಕಾಸು)

ಪ್ರ : ಗಾದೆ : ದುಡ್ಡಿನ ಕಾಲು ದಮಡಿ ಅದೂ ಇಲ್ಲದೆ ಬಂಬಡಿ

೪೬೨. ಒಂದು ನಿಮಿಟ್ಟಿಗೆ ಬರು = ಬೇಗ ಬರು, ನಿಮಿಷದಲ್ಲಿ ಬರು

(ನಿಮಿಟ್ < ಮಿನಿಟ್ = ನಿಮಿಷ)

ಪ್ರ : ಅಲ್ಲಿಂದ ಇಲ್ಲಿಗೆ ಒಂದು ನಿಮಿಟ್ಟಿಗೆ ಬಂದು ಬಿಟ್ಟ

೪೬೩. ಒಂದು ಬಿಗಿತ ಬಿಗಿ = ಒಂದು ಹೊಡೆತ ಹೊಡಿ

(ಬಿಗಿತ = ಹೊಡೆತ, ಏಟು)

ಪ್ರ : ಒಂದು ಬಿಗಿತ ಬಿಗಿದ್ರೆ, ಅಲ್ಲೇ ನಿಗಿತುಕೊಳ್ಳಬೇಕು, ಹುಷಾರಾಗಿರು

೪೬೪. ಒಂದು ಬೀಡು ಬಿಡು = ಒಂದು ಆವೃತ್ತಿ ಫಲ ಬಿಡು

ಮೆಣಸಿಕಾಯಿ ಗಿಡ ಅಥವಾ ಟೊಮ್ಯಾಟೊ ಗಿಡಗಳಲ್ಲಿ ಮೊದಲು ಕಾಯಾದಂಥವು ಹಣ್ಣಾಗುತ್ತವೆ. ಆ ಹಣ್ಣುಗಳನ್ನೆಲ್ಲ ಕಿತ್ತುಕೊಳ್ಳುತ್ತಾರೆ. ಅದಕ್ಕೆ ಮೊದಲನೆಯ ಬೀಡು ಎನ್ನುತ್ತಾರೆ. ಎರಡನೆಯ ಸಾರಿ ಹಣ್ಣಾದುದಕ್ಕೆ ಎರಡನೆಯ ಬೀಡು ಎನ್ನುತ್ತಾರೆ. ಹೀಗೆಯೇ ಮುರು, ನಾಲ್ಕು … ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಮೆಣಸಿನಕಾಯಿ ಹಣ್ಣನ್ನು ಒಂದು ಬೀಡು ಬಿಡಿಸಿದ್ದೇವೆ. ಇನ್ನೊಂದು ಬೀಡು ಬಂದಾಗ ನಿಮಗೆ ಕಳಿಸುತ್ತೇವೆ.

೪೬೫. ಒಂದು ಮುಕ್ಕು ಬೀಸದಿರು ಒಂದೊಬ್ಬೆ ಕುಟ್ಟದಿರು = ಬಿಡುಬೀಸಾಗಿ ತಿರುಗಿಕೊಂಡಿರು, ಯಾವುದೇ ಕೆಲಸ ಮಾಡದಿರು.

(ಮುಕ್ಕು = ರಾಗಿಕಲ್ಲಿನ ಕೊರಳು ತುಂಬುವಷ್ಟಿರುವ ರಾಗಿ; ಒಬ್ಬೆ = ಒರಳುಕಲ್ಲು ತುಂಬುವಷ್ಟಿರುವ ಬತ್ತ)

ಪ್ರ : ಒಂದು ಮುಕ್ಕು ಬೀಸಲಿಲ್ಲ, ಒಂದೊಬ್ಬೆ ಕುಟ್ಟಲಿಲ್ಲ, ಮೇಲುಮೇಲೆ ತಿರುಗಿಕೊಂಡವಳೆ ಸೊಸೆ.

೪೬೬. ಒಂದು ಲಾಜಾಕ್ಕೆ ಬರು = ಬೇಗ ಬರು, ಕಣ್ಣುಮಿಟುಕಿಸುವಷ್ಟರಲ್ಲಿ ಬರು

(ಲಾಜಾ < ಲಹಜ್ (ಉ) = ಕಣ್ಣು ಮಿಟುಕು)

ಪ್ರ : ಅಲ್ಲಿಂದ ಇಲ್ಲಿಗೆ ಒಂದು ಲಾಜಕ್ಕೆ ಬಂದುಬಿಟ್ಟ.

೪೬೭. ಒಂದು ವರಸೆ ಹಾಕು = ಒಂದು ಆವೃತ್ತಿ ಹಾಕು

ಪ್ರ : ಗೊಬ್ಬರದ ಮೇಲೆ ಒಂದು ವರಸೆ ಮಣ್ಣು ಹಾಕು, ಗಾಳಿಬಿಸಿಲಿಗೆ ಗೊಬ್ಬರ ಬೆಂಡಾಗದಿರಲಿ

೪೬೮. ಒಂದು ಹುಲ್ಲುಕಡ್ಡಿ ಹೋಕಾಗದಿರು = ಒಂದು ಚೂರು ಕಳವಾಗದಿರು, ಸ್ಥಳಾಂತರವಾಗದಿರು

(ಹೋಕು = ಮುಕ್ಕು, ಸ್ಥಳಾಂತರ)

ಪ್ರ : ಅವನು ನಂಬಿಕಸ್ಥ, ಒಂದು ಹುಲ್ಲುಕಡ್ಡಿ ಹೋಕಾಗಲ್ಲ

೪೬೯. ಒಂದೇ ಉಸಿರಿಗೆ ಬರು = ವೇಗವಾಗಿ ಬರು, ತಡೆರಹಿತವಾಗಿ ಬರು

ಪ್ರ : ಅಲ್ಲಿಂದಿಲ್ಲಿಗೆ ಒಂದೇ ಉಸಿರಿಗೆ ಬಂದೆ, ಏನಾಯ್ತೋ ಅಂತ.

೪೭೦. ಒಂದೇ ಗರಡಿಯಲ್ಲಿ ಕಲಿತಿರು = ಎಲ್ಲ ಪಟ್ಟುಗಳೂ ಗೊತ್ತಿರು

ಪ್ರ : ಒಂದೇ ಗರುಡಿಯಲ್ಲಿ ಕಲಿತಿರೋವಾಗ, ನಾನು ಅವನ ಗೊಡ್ಡು ಬೆದರಿಕೆಗೆ ಬಗ್ತೀನಾ?

೪೭೧. ಒಂದೇ ಸಮ ದಳೆ = ಒತ್ತಾಗಿ ಸಸಿ ನೆಡು

(ದಳೆ = ಹೊಲಿ) ಬಟ್ಟೆ ಹೊಲಿಯುವ ದರ್ಜಿ ವೃತ್ತಿ ಈ ನುಡಿಗಟ್ಟಿಗೆ ಮೂಲ

ಪ್ರ : ಹಿಂಗೆ ಪೈರನ್ನು ಹತ್ತಿರಹತ್ತಿರಕ್ಕೆ ದಳೆದು ಬಿಟ್ಟರೆ, ಅವು ಮೊಂಟೆ ಹೊಡೆಯೋಕಾಗ್ತದೆ?

೪೭೨. ಒಂದೇ ಸಮ ಪೀಕಿಸು = ಏಕ ಪ್ರಕಾರವಾಗಿ ಒತ್ತಾಯಿಸು

(ಪೀಕು < ಪೆರಕು (ತ) = ಕಕ್ಕು, ಹೊರಕ್ಕೆ ಬರಿಸು)

ಪ್ರ : ಕೊಡು ಕೊಡು ಅಂತ ಒಂದೇ ಸಮ ಪೀಕಿಸಿಬಿಟ್ಟ. ಯಾರದೋ ಕೈಕಾಲು ಹಿಡಿದು ತಂದು ಅವನ ಮಕದ ಮೇಲೆ ಎಸೆದುಬಿಟ್ಟೆ.