೮೩೦. ಕೊಳೆತು ನಾರು = ದುರ್ವಾಸನೆ ಬಡಿ

(ನಾರು < ನರು = ಸುವಾಸನೆ ; (ಆದರೆ ಇಂದು ದುರ್ವಾಸನೆ ಎಂಬ ಅರ್ಥದಲ್ಲಿ ಬಳಕೆಯಾಗುತ್ತಿದೆ)

ಪ್ರ : ಕೊಳೆತು ನಾರುವ ನೀರಿರುವಂತೆಯೇ ಕೊಳೆತು ನಾರುವ ಜನರಿರುತ್ತಾರೆ.

೮೩೧. ಕೊಳೆ ಹಾಕು = ಒಂದೇ ಕಡೆ ನೆನೆ ಹಾಕಿ ಕೊಳೆಯುವಂತೆ ಮಾಡು ; ಹೊರ ಜಗತ್ತಿನ ಸಂಪರ್ಕವಿರುವ ಕತ್ತಲ ಕೋಣೆಯಲ್ಲಿ ಕೂಡಿ ಹಾಕು.

ಕತ್ತಾಳೆಯನ್ನು ಕುಯ್ದು ನೀರಿರುವ ಹೊಂಡದಲ್ಲಿ ಹೂತು ಮೇಲೆ ಕಲ್ಲೇರುತ್ತಾರೆ. ಅದು ಚೆನ್ನಾಗಿ ಕೊಳೆಯುವವರೆಗೂ ಕಾಯುತ್ತಾರೆ. ಕೊಳೆತ ಮೇಲೆ ಈಚೆಗೆ ತೆಗೆದುಕೊಂಡು, ಕಲ್ಲಿನ ಮೇಲೆ ಸೆಣೆದು ಮೇಲಿನ ತಿರುಳಿನ ಭಾಗವನ್ನು ಹೋಗಲಾಡಿಸಿ ಒಳಗಿನ ಸಣಬನ್ನು ಚೆನ್ನಾಗಿ ತೊಳೆದು ಆರಲು ಹಾಕುತ್ತಾರೆ. ಒಣಗಿದ ಮೇಲೆ ಆ ಸಣಬಿನಿಂದ ಹಗ್ಗ, ಹುರಿ ಮೊದಲಾದವುಗಳನ್ನು ಹೊಸೆಯುತ್ತಾರೆ. ಸಣಬಿಗೋಸ್ಕರವಾಗಿ ಕತ್ತಾಳೆಯನ್ನು ಕೊಳೆ ಹಾಕುವ ಕ್ರಿಯೆಯ ಹಿನ್ನೆಲೆಯಿಂದ ಈ ನುಡಿಗಟ್ಟು ಮೂಡಿದೆ.

ಪ್ರ : ಹರೇದ ಹುಡುಗೀನ ಹದ್ದುಬಸ್ತಿನಲ್ಲಿಡಬೇಕೆಂದು ಕತ್ತಲೆ ಕೋಣೆಗೆ ಕೂಡಿ ಬೀಗ ಹಾಕಿ ಕೊಳೆ ಹಾಕಿದರೆ, ಅವಳು ಹುಚ್ಚಿಯಾಗದೆ ಏನು ಮಾಡ್ತಾಳೆ?

೮೩೨. ಕೋಟಿ ಅನ್ನು ಆಡು = ಲೆಕ್ಕವಿಲ್ಲದಷ್ಟು ಬಯ್ಯು, ತೆಗಳು

(ಅನ್ನು ಆಡು = ಬಯ್ಯು, ತೆಗಳು)

ಪ್ರ : ನಮ್ಮತ್ತೆ ನನಗೆ ಒಂದು ಕೋಟಿ ಅಂದ್ಲು ಆಡಿದ್ಲು; ದೇವರು ನೋಡಿಕೊಳ್ಳಲಿ ಅಂತ ನಾನು ತುಟಿಪಿಟಕ್ ಅನ್ನಲಿಲ್ಲ

೮೩೩. ಕೋಡಂಗಿಯಂತಾಡು = ಲಘುವಾಗಿ ವರ್ತಿಸು, ಕೋತಿಯಂತಾಡು.

ಬಯಲುನಾಡಿನ ಬಯಲಾಟಗಳಲ್ಲಿ ಕಾಣಿಸಿಕೊಳ್ಳುವ ಹಾಸ್ಯಪಾತ್ರ ಎಂದರೆ ಕೋಡಂಗಿ. ನಾಟಕದ ಮುಖ್ಯ ಪಾತ್ರಗಳನ್ನು ಪ್ರೇಕ್ಷಕರಿಗೆ ಪರಿಚಯಿಸುವ, ವ್ಯಾಖ್ಯಾನಿಸುವ, ಮುಖ್ಯ ಪಾತ್ರಗಳ ಮಾತುಗಳನ್ನು ಟೀಕಿಸಿ, ಪ್ರೇಕ್ಷಕರಲ್ಲಿ ನಗೆಯನ್ನು ಚಿಮ್ಮಿಸುವ ಒಟ್ಟಿನಲ್ಲಿ ನಾಟಕ ಮತ್ತು ಪ್ರೇಕ್ಷಕರ ಮಧ್ಯೆ ಕೊಂಡಿಯಂತಿರುವ ಪಾತ್ರ, ದಕ್ಷಿಣ ಕನ್ನಡ ಯಕ್ಷಗಾನಗಳಲ್ಲಿ ಈ ಕೋಡಂಗಿ ಪಾತ್ರಕ್ಕೆ ಹನುಮನಾಯಕ ಎಂಬ ಹೆಸರೂ ರೂಢಿಯಲ್ಲಿದೆ. ಈ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಘನತೆ ಇಲ್ಲ, ಗಾಂಭೀರ್ಯ ಇಲ್ಲ, ಒಳ್ಳೆ ಕೋಡಂಗಿ ಹಂಗೆ ಆಡ್ತಾನೆ.

೮೩೪. ಕೋಡಿ ಬೀಳು = ಹೊರಹೊಮ್ಮು, ಉಚ್ಚಳಿಸಿ ಹರಿ

(ಕೋಡಿ = ತುಂಬಿದ ಕೆರೆಯ ಹೆಚ್ಚುವರಿ ನೀರು ಹೊರಹೋಗಲು ಮಾಡಿರುವ ಹೊರದಾರಿ)

ಪ್ರ : ಗಾದೆ – ಕಟ್ಟಿದ ಕೆರೆ ಕೋಡಿ ಬೀಳದೆ ಇರಲ್ಲ

ಹುಟ್ಟಿದ ಮನೆ ಬೇರೆಯಾಗದೆ ಇರಲ್ಲ

೮೩೫. ಕೋಡು ಮೂಡು = ಅಹಂಕಾರ ಅಧಿಕವಾಗು, ತನ್ನ ಸಮಾನರಿಲ್ಲವೆಂದು ಬೀಗು

(ಕೋಡು = ಪ್ರಾಣಿಗಳ ಕೊಂಬು, ಬೆಟ್ಟಗಳ ಶಿಖರ)

ಪ್ರ : ಕೋಡು ಮೂಡಿದಂಗೆ ಎಗರಾಡ್ತಾನೆ, ಕೆಟ್ಟು ಬದುಕಿದೋನು

೮೩೬. ಕೋಣೆ ಗೆದ್ದು ಕೋಟೆ ಗೆಲ್ಲು = ಒಳಗೆ ಗೆದ್ದು ಹೊರಗೆ ಗೆಲ್ಲು, ಕುಟುಂಬವನ್ನು ನೇರಗೊಳಿಸಿ ಸಮಾಜವನ್ನು ನೇರಗೊಳಿಸು

ಪ್ರ: ಗಾದೆ – ಮನೆ ಗೆದ್ದು ಮಾರು ಗೆಲ್ಲು

ಕೋಣೆ ಗೆದ್ದು ಕೋಟೆ ಗೆಲ್ಲು

೮೩೭. ಕೋದಂಡ ಎತ್ತು = ಶಿಕ್ಷಿಸು.

ಪ್ರಾಥಮಿಕ ಶಾಲೆಗಳಲ್ಲಿ ತಪ್ಪು ಮಾಡಿದ ವಿದ್ಯಾರ್ಥಿಗಳಿಗೆ ಹಿಂದೆ ಕೊಡುತ್ತಿದ್ದ ಶಿಕ್ಷೆಗಳಲ್ಲಿ ಇದು ಒಂದು. ಇಳಿಬಿಟ್ಟಿರುವ ಹಗ್ಗಕ್ಕೆ ವಿದ್ಯಾರ್ಥಿಯ ಕೈಗಳೆರಡನ್ನೂ ಕಟ್ಟಿ ಮೇಲಕ್ಕೆ ಸೇದುವುದು. ಬಹುಶಃ ಪೋಲೀಸ್ ಇಲಾಖೆಯಲ್ಲಿ ಚಾಲ್ತಿಯಲ್ಲಿರುವ ಏರೋಪ್ಲೇನ್ ಎತ್ತುವ ಶಿಕ್ಷೆಯನ್ನು ಹೋಲುವಂಥದು.

ಪ್ರ : ಕೋದಂಡ ಎತ್ತಿ, ತಿಂದ ದಂಡದ ಕೂಲನ್ನೆಲ್ಲ ಕಕ್ಕಿಸಿಬಿಡ್ತೀನಿ

೮೩೮. ಕೋರಲು ಕೊಡು = ಬಲಿ ಕೊಡು

(ಕೋರಲು = ಬಲಿ)

ಪ್ರ : ಅವರು ಅಷ್ಟಿಷ್ಟು ಕೋಟಲೆ ಕೊಡಲಿಲ್ಲ, ಹುಡುಗಿ ಬಾಳನ್ನೇ ಕೋರಲು ಕೊಟ್ಟರು.

೮೩೯. ಕೋಲಾಟ ಆಡಿಸು = ಕುಣಿಸು, ಸುಸ್ತು ಮಾಡಿಸು, ಸಾಕು ಸಾಕು ಅನ್ನಿಸು.

ಕೋಲಾಟ ಒಂದು ಜನಪದ ಕ್ರೀಡೆ. ಮೊಳದುದ್ದದ ಕೋಲುಗಳನ್ನು ಎರಡು ಕೈಗಳಲ್ಲಿಯೂ ಪ್ರತಿಯೊಬ್ಬರೂ ಹಿಡಿದು ವೃತ್ತಾಕಾರದಲ್ಲಿ ನಿಂತು, ವಿವಿಧ ಭಾವಭಂಗಿಗಳಲ್ಲಿ, ವಿವಿಧ ಬಾಗು ಬಳುಕುಗಳಲ್ಲಿ ಹಾಡನ್ನು ಹಾಡುತ್ತಾ, ಅದಕ್ಕನುಗುಣವಾಗಿ ಹೆಜ್ಜೆ ಹಾಕುತ್ತಾ, ಪರಸ್ಪರ ಕೋಲುಗಳನ್ನು ಘಟ್ಟಿಸುತ್ತಾ, ವಿವಿಧ ಪಥಗಳಲ್ಲಿ ಚಲಿಸುತ್ತಾ, ಕೊನೆಗೆ ವೃತ್ತಾಕಾರದಲ್ಲಿ ನಿಂತು ಕೋಲುಗಳನ್ನು ತಾಟುಯ್ದು ಮುಗಿಸುವ ಆಟ. ಇದರಲ್ಲಿ ಅನೇಕ ಬಗೆಗಳಿವೆ.

ಪ್ರ : ಇವತ್ತು ಚೆನ್ನಾಗಿ ಕೋಲಾಟ ಆಡಿಸಿದ್ದೀನಿ, ಸಾಕು ಸಾಕು ಅನ್ನಿಸಿದ್ದೀನಿ.

೮೪೦. ಕೋಲು ಬೇಟೆಯಾಗು = ಹಾಹಾಕಾರವಾಗು, ಅಲ್ಲಕಲ್ಲೋಲವಾಗು.

ಕೋಲು ಬೇಟೆ ಎಂಬುದು ಬೇಟೆಯ ಒಂದು ವಿಧಾನ. ಹತ್ತಾರು ಊರುಗಳ ಜನ ಕಾಡಿನ ಒಂದೆಡೆ ಸೇರಿ ಸಾಮೂಹಿಕ ಬೇಟೆಯಾಡುವ ವಿಧಾನ. ಹೊಡೆದ ಮೊಲಗಳನ್ನು ಎಲ್ಲ ಊರುಗಳಿಗೂ ಸಮಾನವಾಗಿ ಹಂಚಿಕೊಂಡು ಸೌಹಾರ್ದತೆಯಿಂದ ಅವರವರ ಊರಿಗೆ ಮರಳುವಂಥದು. ಬೇಟೆಗೆ ಬಂದವರೆಲ್ಲ ತಮ್ಮ ಕೈಯೊಳಗಿರುವ ರುಡ್ಡುಗೋಲುಗಳಿಂದ (ಕೆಳಗೆ ಬೊಡ್ಡೆಯಿದ್ದು ಮೇಲೆ ಹೋಗ್ತಾ ಹೋಗ್ತಾ ಸಣ್ಣಗಿರುವ ಕೋಲು, ಮೊಲಕ್ಕೆ ಬೀಸಿ ಹೊಡೆಯಲು ಅನುಕೂಲವಾಗಿರುವಂಥದು) ಗಿಡಗಳನ್ನು ಬಡಿಯುತ್ತಾ ಅರ್ಥಾತ್ ಸೋಹುತ್ತಾ ಹೋಗುತ್ತಾರೆ. ಯಾವುದೋ ಗಿಡ ಅಥವಾ ಹುಲ್ಲು ಪೊದೆಯಲ್ಲಿದ್ದ ಮೊಲ ಎದ್ದು ಅಂಕುಕೊಂಕಾಗಿ ಓಡತೊಡಗಿದ ತಕ್ಷಣ ಕಾಡಿಗೆ ಕಾಡೇ ಘೋಷ ಮಾಡಿದಂತೆ ಬೇಟೆಗಾರರು ಚೆಲ್ಲಾಪಿಲ್ಲಿಯಾಗಿ ಕೂಗು ಹಾಕುತ್ತಾ ಅದರ ಬೆನ್ನು ಬೀಳುವರು. ಆ ಕೂಗು, ಕೇಕೆ, ಆ ರಭಸ – ಹೆಜ್ಜೇನು ಗೂಡಿಗೆ ಕಲ್ಲೆಸೆದಂತಹ ದೃಶ್ಯ. ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಜಮೀನಿನ ವಿಷಯದಲ್ಲಿ ದಾಯಾದಿಗಳಿಗೆ ಜಗಳವಾಗಿ ದೊಡ್ಡ ಕೋಲುಬೇಟೇನೇ ಜರುಗಿ ಹೋಯ್ತು.

೮೪೧. ಕೋಲೆ ಬಸವನಂತೆ ತಲೆಯಾಡಿಸು = ಏನೂ ಗೊತ್ತಿಲ್ಲದಿರು, ಗಿಳಿಪಾಠ ಒಪ್ಪಿಸು.

(ಕೋಲೆ < ಕವಿಲೆ < ಕವಿಲು = ಗೂಳಿ, ಎತ್ತು) ಕೋಲೆ ಬಸವನನ್ನು ಆಡಿಸುತ್ತಾ ಉದರಪೋಷಣೆ ಮಾಡಿಕೊಳ್ಳುವ ಜನ ಅದನ್ನು ಒಂದು ವೃತ್ತಿಯನ್ನಾಗಿ ಸ್ವೀಕರಿಸಿ ನಡೆಸಿಕೊಂಡು ಹೋಗುವುದನ್ನು ಕಾಣಬಹುದು. ಕೋಲೆ ಬಸವನ ಮೇಲೆ ಕೆಲವು ಬಟ್ಟೆ ಶಾಲುಗಳನ್ನು ಹಾಕಿ ಅಲಂಕರಿಸಿ, ಕೆಲವು ಸಂಜ್ಞೆಗಳನ್ನು ಕಲಿಸಿ, ಕೇಳಿದ್ದಕ್ಕೆ ಹೌದೆಂಬಂತೆ ತಲೆಯನ್ನು ಗುಮುಕು ಹಾಕಿಯೋ, ಅಲ್ಲವೆಂಬಂತೆ ತಲೆಯನ್ನು ಅಲ್ಲಾಡಿಸಿಯೋ ಜನಮನ ರಂಜನೆಗೊಳಿಸಿ, ಜನರಿಂದ ಕಾಸುಕರಿಮಣಿ, ಕಾಳು ಕಡಿ, ದವಸಧಾನ್ಯ ಶೇಖರಿಸಿ ಜೀವಿಸುವ ಅಲೆಮಾರಿ ಜನಗಳಿಗೆ ಈ ಕೋಲೆ ಬಸವ ಸಂಜೀವಿನಿ ಇದ್ದಂತೆ. ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಅವಂದೇನು ಹೇಳ್ತಿ ಬಿಡು, ಎಲ್ಲಕ್ಕೂ ಕೋಲೆ ಬಸವನಂತೆ ತಲೆಯಾಡಿಸ್ತಾನೆ.

೮೪೨. ಕೋವೆಗೆ ಕೈ ಹಾಕು = ಅಪಾಯ ಇದ್ದಲ್ಲಿ ಕೈ ಹಾಕು, ಗಂಡಾಂತರಕ್ಕೆ ಎದೆಯೊಡ್ಡು

(ಕೋವೆ = ಹುತ್ತದ ಕೊಳವೆಯಾಕಾರದ ರಂದ್ರ)

ಪ್ರ : ಗಾದೆ – ಕೋವಿಗೆ ಎದೆಯೊಡ್ಡೋದು, ಕೋವೆಗೆ ಕೈ ಹಾಕೋದು – ಎರಡೂ ಒಂದೆ.

೮೪೩. ಕೋವೆ ನೀರಿಗೆ ಕೊಡಮೆ ಹಾಕು = ದಡ್ಡ ಕೆಲಸ ಮಾಡು, ವ್ಯರ್ಥ ಪ್ರಯತ್ನದಲ್ಲಿ ತೊಡಗು.

(ಕೋವೆ < Cove = ಕೊಲ್ಲಿ, ಖಾರಿ) ಕೊಡಮೆ ಮೀನು ಹಿಡಿಯುವ ಸಾಧನ. ಕೆರೆಗೆ ನೀರು ಬರುವ ಹೊಳೆ ಅಥವಾ ಹಳ್ಳಗಳಿಂದ ಹೊಸ ನೀರು ಕೆರೆಗೆ ಬಂದು ತಕ್ಷಣ, ಕೆರೆಯಲ್ಲಿರುವ ಮೀನುಗಳಿಗೆ ಪುಳಕವುಂಟಾಗಿ, ಹರೆಯದ ಹೆಣ್ಣು ಗಂಡು ಅಪಾಯ ಲೆಕ್ಕಸದೆ ಮುನ್ನುಗ್ಗುವಂತೆ, ಹೊಸ ನೀರಿನ ಎದುರು ಈಜುತ್ತಾ ಹೋಗುತ್ತವೆ.ಇವುಗಳಿಗೆ ‘ಹತ್ತು ಮೀನು’ ಎನ್ನುತ್ತಾರೆ. ಹೊಸ ನೀರಿನ ಗಾತ್ರ ಕಡಮೆಯಾಗಿಯೋ ಅಥವಾ ತವರು ಮನೆ ಬಿಟ್ಟು ಬಂದು ತಪ್ಪು ಮಾಡಿದೆವು ಎಂಬ ಭಯದಿಂದಲೋ ಅವು ಮತ್ತೆ ಕೆರೆಯತ್ತ ಬರತೊಡಗುತ್ತವೆ ಅವುಗಳಿಗೆ ‘ಇಳಿಮೀನು’ ಎನ್ನುತ್ತಾರೆ. ಆಗ ರೈತರು ನೀರು ಕಡಮೆ ಹರಿದು ಬರುವ ಹಳ್ಳಕ್ಕೆ ಅಡ್ಡಗಟ್ಟೆ ಹಾಕಿ ಮಧ್ಯೆ ಕೊಡಮೆಯನ್ನು ನೆಟ್ಟು, ನೀರೆಲ್ಲ ಕೊಡಮೆಯ ಮೂಲಕ ಹಾದು ಹೋಗುವಂತೆ ಮಾಡುವುದರಿಂದ, ನೀರು ಕೊಡಮೆಯಿಂದ ಹಾದು ಹೋದರೂ ಮೀನುಗಳು ಕೊಡಮೆಯಲ್ಲಿ ಬಂಧಿತವಾಗುತ್ತವೆ.

ನೀರು ಬರುವ ಹಳ್ಳ ಕೋವೆ ಎನ್ನಿಸಿಕೊಳ್ಳುವುದಿಲ್ಲ. ಕೆರೆಯ ನೀರು ನಿಲ್ಲಲು ಯಾವ ಯಾವ ದಿಕ್ಕಿಗೆ ಮೂಲೆಗಳಿವೆಯೋ ಅವುಗಳನ್ನು ಕೋವೆ ಎನ್ನುತ್ತಾರೆ. ಆ ಕೋವೆಗಳಲ್ಲಿ ನೀರು ತಂಗಿರುತ್ತದೆ ಅಷ್ಟೆ. ಹರಿಯುವುದಿಲ್ಲ. ಹರಿವ ಹೊಸ ನೀರು ಬರದೆ ಮೀನು ವಿರುದ್ಧ ದಿಕ್ಕಿನಲ್ಲಿ ಹತ್ತಿ ಹೋಗುವುದೂ ಇಲ್ಲ, ಮತ್ತೆ ಇಳಿದು ಬರುವುದೂ ಇಲ್ಲ. ಅಂಥ ತಂಗಿದ ನೀರಿನಲ್ಲಿ ಕಟ್ಟೆ ಹಾಕಿ ಕೊಡಮೆ ಹಾಕಲೂ ಸಾಧ್ಯವಿಲ್ಲ, ನೀರು ಕೊಡಮೆಯ ಮೂಲಕ ಹರಿಯದಿರುವುದರಿಂದ ಮೀನು ಕೊಡಮೆಗೆ ಬೀಳಲೂ ಸಾಧ್ಯವಿಲ್ಲ. ಇದನ್ನು ಈ ನುಡಿಗಟ್ಟು ಹೇಳುತ್ತದೆ. ಅಂದರೆ ಮೀನುಬೇಟೆಯ ಹಿನ್ನೆಲೆಯಲ್ಲಿ ಮೂಡಿ ಬಂದಿದೆ.

ಪ್ರ : ಕೋವೆ ನೀರಿಗೆ ಕೊಡಮೆ ಹಾಕೋ ದಡ್ಡ ಕೆಲಸಾನ ನೀನಲ್ಲದೆ ಬೇರೆ ಯಾರು ಮಾಡ್ತಾರೆ?

೮೪೪. ಕೋಳಿ ಕೆದಕಿದಂತೆ ಮಾಡು = ಅಸ್ತವ್ಯಸ್ತ ಕೆಲಸ ಮಾಡು, ಅಲ್ಲಷ್ಟು ಇಲ್ಲಿಷ್ಟು ಅಪೂರ್ಣ ಕೆಲಸ ಮಾಡು

ತಾಯಿಗೋಳಿ ತನ್ನ ಹೂಮರಿಗಳನ್ನು ‘ಲೊಕ್ ಲೊಕ್’ ಎಂದು ಕರೆದುಕೊಂಡು ತನ್ನ ಕಾಲಿನಿಂದ ತಿಪ್ಪೆಯನ್ನೋ ಅಥವಾ ಮಣ್ಣನ್ನೋ ಕೆರೆದು ಅಲ್ಲಿರುವ ಹುಳುಗಳನ್ನು ತಿನ್ನಲು ಕಲಿಸುತ್ತದೆ; ಅಲ್ಲಿಂದ ಮತ್ತೆ ಇನ್ನೊಂದು ಕಡೆಗೆ ಹೋಗಿ ಕಾಲಲ್ಲಿ ಕೆರೆದು ಲೊಕ್ ಲೊಕ್ ಎಂದು ಮರಿಗಳನ್ನು ಕರೆದು ಹುಳುಗಳನ್ನು ತಿನ್ನಲು ಕಲಿಸುತ್ತದೆ. ಅಂದರೆ ಅಲ್ಲಿಷ್ಟು ಇಲ್ಲಿಷ್ಟು ಕೆದಕುವ ಮತ್ತೆ ಮುಂದಕ್ಕೆ ಹೋಗುವ ಕೋಳಿಯ ವರ್ತನೆ ಈ ನುಡಿಗಟ್ಟಿಗೆ ಮೂಲಸೆಲೆಯಾಗಿದೆ.

ಪ್ರ : ಅವನನ್ನು ತೋಟದ ಕೆಲಸಕ್ಕೆ ಕಳಿಸಿದರೆ ಮುಗೀತು. ಕೋಳಿ ಕೆದಕಿದಂತೆ ಅಲ್ಲಿಷ್ಟು ಇಲ್ಲಿಷ್ಟು ಕೆದಕಿ ಆಯ್ತು ಅಂತ ಮನೆಗೆ ಬರ್ತಾನೆ.

೮೪೫. ಕೋಳಿ ಬಾಯಿಗೆ ನೀರು ಬಿಡು = ಕೋಳಿಯನ್ನು ಕುಯ್ಯಿ; ಕುಯ್ದು ಸಾರು ಮಾಡು.

ಕೋಳಿಯ ಕುತ್ತಿಗೆಯನ್ನು ಕುಯ್ದಾಗ, ಅದರ ತಲೆ ಬಾಯನ್ನು ತೆರೆಯುತ್ತದೆ. ಆಗ ಅದರ ಬಾಯಿಗೆ ನೀರು ಬಿಡುತ್ತಾರೆ. ಸಾಯುವ ಮನುಷ್ಯನ ಬಾಯಿಗೆ ನೀರನ್ನೋ ಹಾಲನ್ನೋ ಕೊನೆಯ ಗುಟುಕಾಗಿ ಕೊಡುವುದು ಅನೂಚಾನವಾಗಿ ಬಂದಿರುವ ಪದ್ಧತಿ. ಅದೇ ರೀತಿ ಸಾಯುವ ಕೋಳಿ ಬಾಯಿಗೂ, ಅದೊಂದು ಪ್ರಾಣಿ ಪಕ್ಷಿ, ಎನ್ನದೆ ನೀರು ಬಿಡುವ ಪದ್ಧತಿ ಗ್ರಾಮೀಣದಲ್ಲಿದೆ. ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಇವತ್ತೇನು ನಿಮ್ಮನೇಲಿ ಸಾರು ಅಂದ್ರೆ, ನಂಟ್ರು ಬಂದಿದ್ರು ಕೋಳಿ ಬಾಯಿಗೆ ನೀರು ಬಿಟ್ಟಿದ್ದೆ ಎಂದಳು ಪಕ್ಕದ ಮನೆಯಾಕೆ.

೮೪೬. ಕೌಟ್ಲೆ ಕುಣಿಸು = ಬೂಸಿ ಹೇಳು, ಸುಳ್ಳು ಹೇಳು

(ಕೌಟ್ಲೆ < ಕೌಟಿಲ್ಯ? = ಸುಳ್ಳು, ಕುತಂತ್ರ)

ಪ್ರ : ಕೌಟ್ಲೆ ಕುಣಿಸೋದ್ರಲ್ಲಿ ಇವನು ಎತ್ತಿದ ಕೈ.

೮೪೭. ಕೌಲು ಆಗು = ಒಪ್ಪಂದವಾಗು, ರಾಜಿಯಾಗು

(ಕೌಲು < ಕಬೂಲು (ಹಿಂ) = ಒಪ್ಪಿಗೆ, ಒಪ್ಪಂದ)

ಪ್ರ : ಕೌಲು ಆಗಿರೋವಾಗ ಪರಸ್ಪರ ಕಾಲೆಳೆಯೋದು ಏನು ಬಂತು?

೮೪೮. ಕಂಗಾಲಾಗು = ಅಸ್ಥಿಪಂಜರವಾಗು, ಮೂಳೆ ಚಕ್ಕಳವಾಗು

(ಕಂಗಾಲು < ಕಂಕಾಲ = ಅಸ್ಥಿಪಂಜರ)

ಪ್ರ : ಗಾದೆ – ಕಂಗಾಳಾದ್ರೂ ಹಂಗಾಳಾಗಬಾರ್ದು

೮೪೯. ಕಂಚಿನ ಮೇಲೆ ಕೈಯೂರದಿರು = ಅನ್ನ ನೀರು ಮುಟ್ಟದಿರು.

ಸಾಮಾನ್ಯವಾಗಿ ಮೊದಲು ಕಂಚಿನ ತಣಿಗೆ, ಚೊಂಬು ಬಹಳ ಬಳಕೆಯಲ್ಲಿದ್ದವು. ಆಮೇಲೆ ಹಿತ್ತಾಳೆಯ ಪಾತ್ರೆಗಳು ಬಂದವು. ಬಹುಶಃ ಇದು ಕಂಚಿನ ಯುಗದ ಹಂತದಲ್ಲಿ ಚಾಲ್ತಿಗೆ ಬಂದ ನುಡಿಗಟ್ಟಾಗಿರಲು ಸಾಧ್ಯ. ಕುಡಿಯಲು ಕೊಡುವ ಉದ್ದನೆಯ ಕುತ್ತಿಗೆಯ ಸಣ್ಣ ಗಾತ್ರದ ಚೊಂಬಿಗೂ ಕಂಚು ಎಂಬ ಹೆಸರಿದೆ. ಆ ಹಿನ್ನೆಲೆಯಿಂದ ಮೂಡಿರಲೂ ಸಾಧ್ಯ.

ಪ್ರ : ನಾನಿದುವರೆಗೂ ಅವರ ಮನೆಯ ಕಂಚಿನ ಮೇಲೆ ಕೈಯೂರಿಲ್ಲ.

೮೫೦. ಕಂಚೀಲಿ ಮಿಂಚಿ ಕಾಳ ಹಸ್ತೀಲಿ ಗುಡುಗು = ಇಲ್ಲಿ ತೋರಿ ಅಲ್ಲಿ ಹಾರು, ಇಲ್ಲಿ

ಮುಖ ತೋರಿಸಿ ಅಲ್ಲಿ ತಿಕವೂರು.

ಕಂಚಿ ಮತ್ತು ಕಾಳಹಸ್ತಿ ಕರ್ನಾಟಕದ ಊರುಗಳಲ್ಲ. ಆದರೆ ಗ್ರಾಮೀಣರ ನಿತ್ಯದ ಮಾತುಕತೆಯಲ್ಲಿ ಈ ನುಡಿಗಟ್ಟು ಚಲಾವಣೆಗೆ ಬರಬೇಕಾದರೆ ಚಾರಿತ್ರಿಕ ಹಿನ್ನೆಲೆ ಕಾರಣವಿರಬೇಕು. ಕರ್ನಾಟಕದ ಅರಸು ಮನೆತನಗಳು ದಂಡೆತ್ತಿ ಹೋಗಿ ಪಕ್ಕದ ರಾಜ್ಯಗಳ ಕಂಚಿ ಕಾಳಹಸ್ತಿಗಳನ್ನು ವಶಪಡಿಸಿಕೊಂಡಿರುವುದಕ್ಕೆ ಆಧಾರಗಳುಂಟು. ಆ ಅರಸುಮನೆತನಗಳ ಅಥವಾ ದಂಡಯಾತ್ರೆಯಲ್ಲಿ ಭಾಗಿಯಾಗಿದ್ದ ಸೈನಿಕರ ಕುಟುಂಬದವರ ಅಜ್ಞಾತಮನಸ್ಸು, ಎಷ್ಟೆ ತಲೆ ಮಾರುಗಳು ಕಳೆದಿದ್ದರೂ, ಮೊಟ್ಟೆಯನ್ನು ಕುಕ್ಕಿ ಮರಿ ಮಾಡಿರಬೇಕು. ಇಲ್ಲದೆ ಇದ್ದರೆ ಗ್ರಾಮೀಣ ಹೆಣ್ಣಿನ ಬಾಯಲ್ಲಿ ಈ ನುಡಿಗಟ್ಟು ಬರಲು ಸಾಧ್ಯವಿಲ್ಲ.

ಇನ್ನೊಂದು ವಿಶೇಷವೆಂದರೆ ಇದರಲ್ಲಿರುವ ವೈಜ್ಞಾನಿಕ ಅಂಶ. ಬೆಳಕಿಗೆ ವೇಗ ಜಾಸ್ತಿ, ಶಬ್ದಕ್ಕೆ ವೇಗ ಕಡಮೆ. ಮಿಂಚುಗುಡುಗು ಏಕಕಾಲದಲ್ಲಿ ಸಂಭವಿಸಿದರೂ, ಮಿಂಚು ಕಂಚಿಯಲ್ಲಿ ಕಾಣಿಸಿಕೊಂಡು ಗುಡುಗು ಕಾಳಹಸ್ತಿಯಲ್ಲಿ ಶಬ್ದ ಮಾಡುತ್ತದೆ ಎಂಬುದು ಸೋಜಿಗವಾದರೂ ವಾಸ್ತವ. ಇತಿಹಾಸಜ್ಞರು ಈ ನುಡಿಗಟ್ಟಿನ ಸಿಕ್ಕನ್ನು ಬಿಡಿಸಿ ಬಾಚಿ ಹೆರಳು ಹಾಕಬೇಕಾಗಿದೆ.

ಪ್ರ : ಇದೇನು ನೀನು ಬಂದು ಹಿಂದು ಮುಂದು ಆಗಿಲ್ಲ, ಆಗಲೇ ಹೊರಡ್ತೀನಿ ಅಂತೀಯ? ಕಂಚೀಲಿ ಮಿಂಚಿ ಕಾಳಹಸ್ತೀಲಿ ಗುಡುಗೋ ಸಂಪತ್ತಿಗೆ ಯಾಕೆ ಬರಬೇಕಾಗಿತ್ತು ಹೇಳು?

೮೫೧. ಕಂಟು ಉಂಟಾಗು = ವೈಮನಸ್ಯ ಮೂಡು

(ಕಂಟು = ಸೀದ ವಾಸನೆ, ತಳಹೊತ್ತಿದ ಕಮುಟು ವಾಸನೆ)

ಪ್ರ : ನಂಟು ಅಂದ್ಮೇಲೆ ಕಂಟು ಉಂಟಾಗೇ ಆಗ್ತದೆ, ಸಹಿಸ್ಕೋ ಬೇಕು

೮೫೨. ಕಂಡಾಟವಾಡು = ಗೊತ್ತಿರುವ ಎಲ್ಲ ತಂತ್ರಗಳನ್ನು ಬಳಸು, ಎಲ್ಲ ವರಸೆಗಳನ್ನೂ ಹಾಕು

(ಕಂಡ = ನೋಡಿದ, ತಿಳಿದ; ಆಟ = ನಾಟಕ, ಕುಣಿತದ ವರಸೆ, ಭಂಗಿ)

ಪ್ರ : ಅವನು ಕಂಡಾಟನೆಲ್ಲ ಆಡಿದ, ನಾನು ಮಾತ್ರ ಜಪ್ಪಯ್ಯ ಅಂದ್ರೂ ಜಗ್ಗಲಿಲ್ಲ.

೮೫೩. ಕಂಡಾಬಟ್ಟೆ ಅನ್ನು = ಸಿಕ್ಕಾಪಟ್ಟೆ ಬಯ್ಯಿ, ಬಾಯಿಗೆ ಬಂದಂತೆ ಹೀಗಳೆ

(ಕಂಡಾಬಟ್ಟೆ = ನಾನಾ ಮಾರ್ಗ; ಅನ್ನು = ತೆಗಳು)

ಪ್ರ : ಕಂಡಾಬಟ್ಟೆ ಅಂದು ಆಡಿದ್ದೂ ಅಲ್ಲದೆ, ಕೊನೆಗೆ ಜುಟ್ಟು ಹಿಡಿದು ಎಳೆದಾಡಿಬಿಟ್ಟ.

೮೫೪. ಕಂತ್ರಿ ಬುದ್ಧಿ ತೋರಿಸು = ಅಸಂಸ್ಕೃತ ನಡೆ ತೋರಿಸು, ಕೆಟ್ಟಸ್ವಭಾವ ತೋರಿಸು

(ಕಂತ್ರಿ < Country = ಅನಾಗರಿಕ, ಕೆಟ್ಟ ತಳಿ)

ಪ್ರ : ಕೊನೆಗೂ ತನ್ನ ಕಂತ್ರಿ ಬುದ್ಧಿ ತೋರಿಸಿಯೇ ಬಿಟ್ಟ

೮೫೫. ಕಂತ್ರಾಟು ತೆಗೆದುಕೊಳ್ಳು = ಗುತ್ತಿಗೆ ತೆಗೆದುಕೊಳ್ಳು

(ಕಂತ್ರಾಟು < Contract = ಗುತ್ತಿಗೆ)

ಪ್ರ : ಕಂತ್ರಾಟು ತಗೊಳ್ಳೋಕೆ ವಿದ್ಯೆ ಇವರಪ್ಪನ ಆಸ್ತಿಯಲ್ಲ

೮೫೬. ಕಂತೆ ಎತ್ತು = ಹೊರಡು, ಜಾಗಬಿಡು

(ಕಂತೆ = ಚಿಂದಿಬಟ್ಟೆಯ ಗಂಟು, ಹೊರೆ)

ಪ್ರ : ಮೊದಲು ನೀನಿಲ್ಲಿಂದ ಕಂತೆ ಎತ್ತು

೮೫೭. ಕಂತೆ ಒಗೆ = ಮರಣ ಹೊಂದು.

(ಕಂತೆ = ಮೀಸಲು ಕಂಬಳಿ) ಹಾಲುಮತ ಕುರುಬ ಜನಾಂಗದವರು ತಮ್ಮ ಕುಲಗುರುವಾದ ರೇವಣ್ಣಸಿದ್ಧೇಶ್ವರ ಹಾಗೂ ಯೋಗಿ ಶ್ರೇಷ್ಠ ಸಿದ್ಧರಾಮೇಶ್ವರರ ಜಾತ್ರೆಯ ಕಾಲದಲ್ಲಿ ಅವರ ಮೂರ್ತಿಗಳ ಕೆಳಗೆ ಹಾಕಿದ್ದ ಹಳೆಯ ಕಂತೆಯನ್ನು ತೆಗೆದು ಹೊಸ ಮೀಸಲು ಕಂತೆಯನ್ನು ಹಾಕುತ್ತಾರೆ. ಕುಲಗುರು ರೇವಣಸಿದ್ಧೇಶ್ವರನ ಅನುಯಾಯಿಗಳಾದ ಕುರುಬ ಜನಾಂಗದ ಒಡೆಯರುಗಳು ಉಪವಾಸ ಮತ್ತು ಮಡಿಯಲ್ಲಿ ಕೈಯಲ್ಲೇ ಕುರಿತುಪ್ಪಟವನ್ನು ಹಿಂಜಿ, ಹೊಸೆದು, ನೇದು, ಮುಮ್ಯೂಲೆಯ ಮೀಸಲು ಕಂತೆ (ಸಣ್ಣಗಂಬಳಿ)ಯನ್ನು ಹಾಕುತ್ತಾರೆ. ಇದಕ್ಕೆ ಮೊದಲು ಹಳೆಯ ಕಂತೆಯನ್ನು ತೆಗೆದು ವಿಧಿವಿಧಾನದ ಪ್ರಕಾರ ಹಳ್ಳಕ್ಕೆ ತೆಗೆದುಕೊಂಡು ಹೋಗಿ, ಗುಂಡಿ ತೆಗೆದು ಮುಚ್ಚಿ ಬರುತ್ತಾರೆ. ಇದಕ್ಕೆ ಕಂತೆ ಒಗೆಯುವುದು ಎನ್ನುತ್ತಾರೆ. ಈ ಆಚರಣಾ ಮೂಲದ ನುಡಿಗಟ್ಟಿದು.

ಪ್ರ : ಹನ್ನೆರಡನೆಯ ಶತಮಾನದಲ್ಲಿ ಸಿದ್ಧರಾಮ ಕಂತೆ ಒಗೆದರೂ, ತನ್ನ ವಚನದಲ್ಲಿ ಕಂತೆ ಬಳಸಿರುವುದನ್ನು ಕಾಣಬಹುದು.

೮೫೮. ಕಂದಾಕು = ಸತ್ತ ಕರುವನ್ನು ಈಯು

(ಕಂದಾಕು < ಕೊಂದು + ಹಾಕು = ಗರ್ಭಪಾತವಾಗು, ಸತ್ತ ಕರು ಹಾಕು; ಕಂದು, ಕಂದಿ=ಕರು. ಉದಾ: ‘ಹಂದಿಯೊಡನಾಡಿನ ಕಂದಿನಂತಾದರು’- ಅಲ್ಲಮ)

ಪ್ರ : ತುಂಬಾದ ಹಸು ಈ ಸಾರಿ ಯಾಕೋ ಏನೋ ಕಂದಾಕಿಬಿಡ್ತು.

೮೫೯. ಕಂದನ್ನ ಕಾಲುದೆಸೆ ಹಾಕು = ಸತ್ತ ಮಗುವನ್ನು ಹೆರು

ಸತ್ತ ಮಗುವನ್ನು ಹೆತ್ತರೆ ಅದನ್ನು ಮೊರದೊಳಕ್ಕೆ ಹಾಕದೆ ಬಾಣಂತಿಯ ಕಾಲುದೆಸೆ ಹಾಕುವ ಪದ್ಧತಿ ಹಿಂದೆ ನಮ್ಮ ಹಳ್ಳಿಗಾಡಿನಲ್ಲಿತ್ತು. ಆ ಪದ್ಧತಿಯ ಪಳೆಯುಳಿಕೆ ಈ ನುಡಿಗಟ್ಟು, ಶಿಕ್ಷಣದಿಂದ ಈಗ ವಿದ್ಯಾಬುದ್ಧಿ ಲಭಿಸಿರುವುದರಿಂದ ಆ ಕಂದಾಚಾರದ ಪದ್ಧತಿ ಮಾಯವಾಗುತ್ತಿದೆ.

ಪ್ರ : ಮಗು ಬಾಣಂತಿ ಚೆನ್ನಾಗವರ ಎಂದು ಮಳ್ಳಿಯೊಬ್ಬಳು ಕೇಳಿದಾಗ, ಕಂದನ್ನ ಕಾಲುದೆಸೆ ಹಾಕಿರೋದು ಗೊತ್ತಾಗಲ್ವ ಎಂದಳು ಕಡಿದುಗಾತಿ ಹೆಣ್ಣೊಬ್ಬಳು/

೮೬೦. ಕಂಬಚ್ಚಿಗೆ ಹಾಕಿ ಈಚು = ಹಿಂಸಿಸು, ಘಾಸಿಗೊಳಿಸು

(ಕಂಬಚ್ಚು < ಕಂಬಿಯಚ್ಚು < ಕಂಬಿ + ಅಚ್ಚು = ಸರಿಗೆ (ಎಳೆ) ತೆಗೆಯುವ ರಂದ್ರವುಳ್ಳ ಲೋಹದ ಅಚ್ಚು; ಈಚು = ಜೀವು) ಸಣ್ಣ ಸಣ್ಣ ಸರಿಗೆ (ಕಂಬಿ) ಗಳನ್ನು ಮಾಡಿಕೊಳ್ಳಬೇಕಾದರೆ ಆ ಗಾತ್ರಕ್ಕೆ ತಕ್ಕ ರಂಧ್ರದಲ್ಲಿ ಕಂಬಿಯನ್ನು ತೂರಿಸಿ ಎಳೆದಾಗ ಅದು ಜೀವಿಕೊಂಡಂತಾಗಿ ಸಣ್ಣಗಾತ್ರಕ್ಕಿಳಿಯುತ್ತದೆ. ಇದು ಅಕ್ಕಸಾಲಿಗ ವೃತ್ತಿಯಿಂದ ಬಂದದ್ದು.

ಪ್ರ : ಆ ಕೆಲಸದಾಳನ್ನು ಕಂಬಚ್ಚಿಗೆ ಹಾಕಿ ಈಚಿಬಿಟ್ಟಿದ್ದಾರೆ, ನೀಚರು.

೮೬೧. ಕಂಬ ಸುತ್ತು = ವ್ಯರ್ಥ ಕೆಲಸದಲ್ಲಿ ತೊಡಗು

ಪ್ರ: ಗೊತ್ತು ಗುರಿ ಇಲ್ಲದ ಕಂಬ ಸುತ್ತುವ ಕೆಲಸದಿಂದ ಪ್ರಗತಿ ಸಾಧ್ಯವೆ?

೮೬೨. ಕಂಬಳಿ ಮೇಲೆ ಕನುಕ ಮಿದಿ = ಅವಿವೇಕದ ಕೆಲಸ ಮಾಡು

(ಕಂಬಳಿ = ಕುರಿಯ ತುಪ್ಪಟದ ನೂಲಿನಿಂದ ನೇದದ್ದು; ಪುಕ್ಕ ಇರುವಂಥದು; ಕನುಕ > ಕಣಕ = ಹೋಳಿಗೆ ಮಾಡಲು ಮಿದಿಯುವ ಮೈದ ಹಿಟ್ಟು)

ಪ್ರ : ಗಾದೆ – ಕಂಬಳೀಲಿ ಕಣಕ ಮಿದಿಯೋದೂ ಒಂದೆ

ಎಣ್ಣೇಲಿ ತಿಕ ತೊಳೆಯೋದೂ ಒಂದೆ

೮೬೩. ಕಂಬಿ ಕೀಳು = ಓಡು

(ಕಂಬಿ = ಆಟದಲ್ಲಿ ನೆಟ್ಟ ಸರಳು) ನೆಟ್ಟ ಕಂಬಿಯನ್ನು ಕಿತ್ತುಕೊಂಡು ಕೈಯಲ್ಲಿ ಹಿಡಿದು ಗಂತವ್ಯದ ಗೆರೆ ಮುಟ್ಟಲು ಓಡುವ ಪಂದ್ಯದಾಟ ಈ ನುಡಿಗಟ್ಟಿಗೆ ಮೂಲ ಎಂದು ತೋರುತ್ತದೆ.

ಪ್ರ : ನಿಜ ಸಂಗತಿ ತಿಳಿದ ತಕ್ಷಣ, ಅರಗಳಿಗೆ ಅಲ್ಲಿದ್ರೆ ಕೇಳು, ಕಂಬಿ ಕಿತ್ತ

೮೬೪. ಕಂಬಿ ಹಾಕಿ ಸ್ಯಾಲೆ ಉಡಿಸು = ಹೊಟ್ಟೆ ಜೋಲು ಬೀಳದಂತೆ ಬಿಗಿಯಾಗಿ ಸೀರೆ ಉಡಿಸು

(ಕಂಬಿ = ಹೊಟ್ಟೆಯ ಸುತ್ತ ಬಿಗಿಯಾಗಿ ಕಟ್ಟುವ ಸೀರೆಯ ಮಡಿಕೆ ; ಸ್ಯಾಲೆ = ಸೀರೆ) ಬಾಣಂತಿಯರ ಹೊಟ್ಟೆ ಹಿಗ್ಗಿರುತ್ತದೆ. ಆದ್ದರಿಂದ ಹೆಚ್ಚು ಉಂಡರೆ ಹೊಟ್ಟೆ ದಪ್ಪವಾಗುತ್ತದೆ ಎಂದು ಹೊಟ್ಟೆ ಜೋಜು ಬೀಳದಂತೆ ಬಿಗಿಯಾಗಿ ಕಟ್ಟಿ ಸೀರೆ ಉಡಿಸುವ ವಿಧಾನಕ್ಕೆ ಕಂಬಿ ಹಾಕುವುದು ಎನ್ನುತ್ತಾರೆ.

ಪ್ರ : ಕಂಬಿ ಹಾಕಿ ಸ್ಯಾಲೆ ಉಡಿಸದಿದ್ರೆ, ಬೊಜ್ಜು ಹೊಟ್ಟೆ ಬಂದು ಅಂದಗೆಟ್ಟು ಹೋಗ್ತೀಯ?

೮೬೫. ಕಾಂಗ್ರೆಸ್ ಮಾಡು = ಕಿತಾಪತಿ ಮಾಡು

ಸ್ವರಾಜ್ಯ ಬಂದ ಮೇಲೆ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಪಕ್ಷ, ಅಧಿಕಾರದ ರುಚಿ ಹಲ್ಲಿಗಿಳಿದು, ನೂರಾರು ಕುತಂತ್ರಗಳನ್ನು ಮಾಡಿ ಅಧಿಕಾರಕ್ಕೆ ಏರಲು ಅಥವಾ ಅಧಿಕಾರದಿಂದ ಕೆಳಗಿಳಿಸಲು ಕಿತಾಪತಿ ಮಾಡುತ್ತಾ ಬಂದಿದೆ. ಅದೆಷ್ಟು ಜನಜನಿತ ವಿಷಯವಾಗಿದೆ ಎಂದರೆ ಕಿತಾಪತಿ ಮಾಡು ಎನ್ನದೆ ಕಾಂಗ್ರೆಸ್ ಮಾಡು ಎಂಬ ನುಡಿಗಟ್ಟು ಬಳಕೆಗೆ ಬಂದಿರುವುದೇ ಸಾಕ್ಷಿ.

ಪ್ರ : ಕಾಂಗ್ರೆಸ್ ಮಾಡಿದಿದ್ರೆ ನಾವು ಪೋಗ್ರೆಸ್ ಆಗೋದು ಹೆಂಗೆ?

೮೬೬. ಕುಂಟ್ತಾ ಬಂದದ್ದು ಕುಪ್ಪಳಿಸ್ತಾ ಹೋಗು = ಐಶ್ವರ್ಯ ಬರುವಾಗ ಇಷ್ಟಿಷ್ಟೇ ಸಣ್ಣ ಪ್ರಮಾಣದಲ್ಲಿ ಬಂದು ಹೋಗುವಾಗ ಒಷ್ಟೂ ದೊಡ್ಡ ಪ್ರಮಾಣದಲ್ಲಿ ಹೋಗು

ಪ್ರ : ಒಗಟು – ಬರುವಾಗ ಕುಂಟ್ತಾ ಬರ್ತಾಳೆ

ಹೋಗುವಾಗ ಕುಪ್ಪಳಿಸ್ತಾ ಹೋಗ್ತಾಳೆ (ಲಕ್ಷ್ಮಿ, ಐಶ್ವರ್ಯ)

೮೬೭. ಕುಂಟೆ ಹೊಡಿ = ಹರಗು, ಹರ್ತನೆ ಹೊಡಿ

ಮೊದಲು ಬಿತ್ತನೆ, ಪೈರು ಬಂದ ಮೇಲೆ ಹರ್ತನೆ, ನಾಲ್ಕು ಚಿಪ್ಪಿನ (ಲೋಹದ ತಾಳು)ಕುಂಟೆ, ಎರಡು ಚಿಪ್ಪಿನ ಕುಂಟೆಗಳನ್ನುಲ ಹರಗಲು ಬಳಸುತ್ತಾರೆ. ಪೈರು ತೆಳುವಾಗಿರುವ ಕಡೆ ತೇಲಿಸಿ ಹಿಡಿಯುತ್ತಾರೆ, ಪೈರು ಮಂದವಾಗಿರುವ ಕಡೆ ಅದುಮಿ ಹಿಡಿಯುತ್ತಾರೆ. ಹಕ್ಕುಗಟ್ಟಿದ ನೆಲವನ್ನು ಕೊತ್ತಿದಂತಾಗಿ ಪೈರು ಮೊಂಟೆ ಹೊಡೆಯಲು ಸಹಕಾರಿಯಾಗುತ್ತದೆ. ಬೇಸಾಯ ಮೂಲದ ನುಡಿಗಟ್ಟಿದು.

ಪ್ರ : ಗಾದೆ – ರೆಂಟೆ ಹೊಡೆದೋನ ಹೊಲವನ್ನು ಕುಂಟೆ ಹೊಡೆದೋನು ಕೆಡಿಸಿದ

೮೬೮. ಕುಂಡಿ ಕೆರಕೊಳ್ಳೋಕೆ ಹೊತ್ತಿರದಿರು = ಪುರಸೊತ್ತಿರದಿರು, ಅಧಿಕ ಕೆಲಸವಿರು

(ಕುಂಡಿ = ನಿತಂಬ, ಹೊತ್ತು = ವೇಳೆ)

ಪ್ರ : ನನಗೆ ಕುಂಡಿ ಕೆರಕೊಳ್ಳೋಕೆ ಹೊತ್ತಿಲ್ಲ, ನೀನು ಮಂಡಿ ಕೂತ್ರೆ, ನಾನು ಏನು ಮಾಡಲಿ?

೮೬೯. ಕುಂಡಿ ತಿರುವಿಕೊಂಡು ಹೋಗು = ಅಲಕ್ಷಿಸಿ ಹೋಗು, ಬೆಲೆ ಕೊಡದೆ ಹೋಗು

ಪ್ರ : ಕೊಂಚ ಮಾತಾಡೋದಿದೆ ಇರಮ್ಮ ಅಂದ್ರೆ ಕುಂಡಿ ತಿರುವಿಕೊಂಡು ಹೋದ್ಲು

೮೭೦. ಕುಂಬಿ ಮೇಲೆ ಕೂಡಿಸು = ಎತ್ತರದಲ್ಲಿ ಕೂಡಿಸು, ತುತ್ತತುದಿಗೇರಿಸು

(ಕುಂಬಿ = ಶಿಖರ, ಬೆಟ್ಟದ ತುದಿ)

ಪ್ರ : ಮಕ್ಕಳನ್ನು ಉಬ್ಬಿಸಿ ಕುಂಬಿ ಮೇಲೆ ಕುಂಡ್ರಿಸಿದರೆ, ಆಮೇಲೆ ಯಾವೂ ಮಾತು ಕೇಳಲ್ಲ.

೮೭೧. ಕುಂಭಕೋಣಂ ಮಾಡು = ಕಿತಾಪತಿ ಮಾಡು

ಕುಂಭ ಕೋಣಂ ತಮಿಳುನಾಡಿನ ಒಂದು ಪಟ್ಟಣ. ಬಹುಶ ಆಳುವ ಕಾಂಗ್ರೆಸ್ ಪಕ್ಷ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಬೇರೆ ಬೇರೆ ಕಡೆ ಮಾಡುವುದುಂಟು. ಅಲ್ಲಿ ಆಗದವರ ಹಲ್ಲು ಮುರಿಯುವ ನಿರ್ಣಯಗಳನ್ನು ಕೈಗೊಳ್ಳುವುದುಂಟು. ಅಂಥ ಒಂದು ಪ್ರಸಂಗ ಈ ನುಡಗಟ್ಟಿಗೆ ಮೂಲವಾಗಿರಬೇಕು ಎಂದು ತೋರುತ್ತದೆ.

ಪ್ರ : ಕುಂಭಕೋಣಂ ಮಾಡಿದಿದ್ರೆ ಜಂಭದ ಕೋಳಿಗಳ ರೆಕ್ಕೆ ಕತ್ತರಿಸೋಕೆ ಆಗಲ್ಲ.

೮೭೨. ಕೆಂಚಿ ತುಂಬು = ಮಡಿಲುದುಂಬು

(ಕೆಂಚಿ < ಚೆಂಚಿ = ಚೀಲ) ಮದುವೆಯಲ್ಲಿ ಹೆಣ್ಣಿಗೆ ಬೆಲ್ಲ, ಕೊಬರಿಗಿಟುಕು, ಎಲೆ ಅಡಿಕೆ, ಅಕ್ಕಿ-ಎಲ್ಲವನ್ನು ಇಕ್ಕಿ ಗಂಟಕ್ಕಿ ಕಳಿಸುವುದಕ್ಕೆ ಕೆಂಚಿ ತುಂಬುವುದು ಎನ್ನುತ್ತಾರೆ. ಇದು ಪರೋಕ್ಷವಾಗಿ ಸಂತಾನಾಪೇಕ್ಷೆಯ ಸೂಚನೆ ಎನ್ನಬೇಕು. ಏಕೆಂದರೆ ಮಡಿಲು ಎಂಬುದಕ್ಕೆ ಉಡಿ ಎಂಬ ಅರ್ಥವಿರುವಂತೆಯೇ ಯೋನಿ ಎಂಬ ಅರ್ಥವೂ ಇದೆ.

ಪ್ರ : ಹೆಣ್ಣಿಗೆ ಕೆಂಚಿ ತುಂಬೋ ಶಾಸ್ತ್ರ ಮಾಡ್ತಾ ಅವರೆ, ಇನ್ನೇನು ಆಯ್ತು

೮೭೩. ಕೆಂಡ ಕಾರು = ದ್ವೇಷಿಸು, ಮಚ್ಚರಿಸು

(ಕಾರು = ಕಕ್ಕು)

ಪ್ರ : ನಮ್ಮನ್ನು ಕಂಡ್ರೆ ಸಾಕು, ಮನೆಯೋರೆಲ್ಲ ಕೆಂಡ ಕಾರ್ತಾರೆ.

೮೭೪. ಕೆಂಡದ ಮೇಲೆ ಕಾಲಿಟ್ಟಂತಾಗು = ಬಿರುಬಿಸಿಲಿನಿಂದ ನೆಲ ಕಾದ ಹೆಂಚಾಗಿರು

ಪ್ರ : ಎಂಥ ಸುಡು ಬೇಸಿಗೆ ಅಂದ್ರೆ, ನೆಲದ ಮೇಲೆ ಕಾಲಿಟ್ರೆ ಕೆಂಡದ ಮೇಲೆ ಕಾಲಿಟ್ಟಂತಾಗ್ತಿತ್ತು.

೮೭೫. ಕೆಂಡದವಲಾಗು = ಕಿಡಿಕಿಡಿಯಾಗು, ಕೋಪಗೊಳ್ಳು

(ಅವಲು = ಉರಿವ ಕೊಳ್ಳಿಯಿಂದ ಅಥವಾ ಕೆಂಡದಿಂದ ಸಿಡಿದ ಕಿಡಿ)

ಪ್ರ : ಸುದ್ಧಿ ಕೇಳಿ, ಕೆರಳಿ ಕೆಂಡದವಲಾಗಿಬಿಟ್ಟ.

೮೭೬. ಕೊಂಕಣ ಸುತ್ತಿ ಮೈಲಾರಕ್ಕೆ ಬರು = ಬಳಸು ದಾರಿಯಲ್ಲಿ ಬರು, ಸುತ್ತು ಬಳಸಿ ಮಾತಾಡು.

ಬಳ್ಳಾರಿ ಜಿಲ್ಲೆಯ ಹಿರೇ ಮೈಲಾರ ಪ್ರಸಿದ್ಧವಾದ ಮೈಲಾರಲಿಂಗನ ಕ್ಷೇತ್ರ ನದಿಯ ದೆಸೆಯಿಂದ ಅರ್ಥಾತ್ ಸೇತುವೆಯ ಸೌಲಭ್ಯ ಇಲ್ಲದ್ದರಿಂದ ಜನ ಸುತ್ತು ಹಾಕಿಕೊಂಡು ಒಂದೇ ಕಡೆಯಿಂದ ಪ್ರವೇಶಿಸಬೇಕಾದ ಅನಿವಾರ್ಯತೆ ಈ ನುಡಿಗಟ್ಟಿಗೆ ಮೂಲ

ಪ್ರ : ನಿನ್ನ ಮಾತು ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ರೀತಿಯದು.

೮೭೭. ಕೊಂಗನಂತಾಡು = ತಮಿಳರಂತೆ ಅಡಪಡ ಎಂದು ಎಗರಾಡು, ಒರಟೊರಟಾಗಿ ವರ್ತಿಸು

(ಕೊಂಗ = ತಮಿಳ) ಕೊಂಗನಾಟ್ಟುಗರ್ ಎಂಬುದರಿಂದ ತಮಿಳರಿಗೆ ಕೊಂಗರು ಎಂಬ ಹೆಸರು ಬಂದಿರಬೇಕು. ಗ್ರಾಮೀಣರಲ್ಲಿ ತಮಿಳರವನು ಎಂಬ ಮಾತಿಗೆ ಬದಲಾಗಿ ಕೊಂಗರವನು ಎಂಬ ಮಾತೇ ಹೆಚ್ಚು ಚಾಲ್ತಿಯಲ್ಲಿದೆ.

ಪ್ರ : ಮೊದಲನೇ ಅಳಿಯ ಸಾಧು, ಎರಡನೆಯ ಅಳಿಯ ಕೊಂಗ ಆಡಿದಂಗಾಡ್ತಾನೆ.

೮೭೮. ಕೊಂಚ ದೇವರಾಗು = ಸ್ವಲ್ಪ ಸುಮ್ಮನಿರು, ಬಾಯಿ ಬಿಡದೆ ಮೌನದಿಂದಿರು

ದೇವರು ಕಲ್ಲಿನದ್ದೋ, ಲೋಹದ್ದೋ ವಿಗ್ರರೂಪದಲ್ಲಿ ಇರುತ್ತದೆ. ಅದಕ್ಕೆ ಮಾತಾಡುವ ಶಕ್ತಿ ಇರುವುದಿಲ್ಲ. ಸುಮ್ಮನೆ ಇರುತ್ತದೆ. ಆ ಹಿನ್ನೆಲೆ ಈ ನುಡಿಗಟ್ಟಿಗೆ ಮೂಲ.

ಪ್ರ : ಈಗ ಕೊಂಚ ಎಲ್ಲ ದೇವರಾಗಿ ಅಂತ ಸಭೇನ ಕೈಮುಗಿದು ಕೇಳಿಕೊಳ್ತೇನೆ.

೮೭೯. ಕೊಂಡ ಹಾಯು = ನಿಷ್ಕಳಂಕತೆಯನ್ನು ರುಜುವಾತು ಪಡಿಸು

(ಕೊಂಡ < ಕುಂಡ = ಅಗ್ನಿ ಇರುವ ಕಂದಕ) ಹಳ್ಳಿಗಳಲ್ಲಿ ಗ್ರಾಮದೇವತೆಯ ಪರಿಷೆಯನ್ನು ಮಾಡಿದಾಗ ಕೊಂಡ ಹಾಯುವ ಕಾರ್ಯಕ್ರಮ ಇರುತ್ತದೆ. ದೇವರ ಮಡೆ ಹೊತ್ತ ಪೂಜಾರಿ, ದೇವರ ಹೆಸರಲ್ಲಿ ಬಾಯಿಬೀಗ ಚುಚ್ಚಿಸಿಕೊಂಡವರು ಹಾಗೂ ಭಕ್ತಿಯುಳ್ಳವರು ಕೊಂಡ ಹಾಯುತ್ತಾರೆ. ಅಂಟು ಮುಂಟು ಇಲ್ಲದವರಿಗೆ, ದೋಷ ಮಾಡದವರಿಗೆ ಕೊಂಡದ ಕೆಂಡ ಕಾಲನ್ನು ಸುಡುವುದಿಲ್ಲ ಎಂಬ ನಂಬಿಕೆ ಜನರಲ್ಲುಂಟು. ಇದಕ್ಕೆ ರಾಮಾಯಣದ ಸೀತೆಯ ಅಗ್ನಿಪ್ರವೇಶ ಹಾಗೂ ಅವಳು ಕೂದಲು ಕೊಂಕದೆ ಹೊರಬರುವ ಪೌರಾಣಿಕ ಘಟನೆ ಮೂಲವಾಗಿರಬೇಕು.

ಪ್ರ : ಇವತ್ತು ಕೊಂಡ ಹಾಯಬೇಕಾಗಿರೋದರಿಂದ ಉಪವಾಸ ಇದ್ದೀನಿ, ಬಾಯಿಗೆ ನೀರೂ ಹುಯ್ದಿಲ್ಲ.

೮೮೦. ಕೊಂಡಾಡಿ ಕ್ವಾಟೆ ಮ್ಯಾಲೆ ಕೂಡಿಸು = ಹೊಗಳಿ ಶಿಖರಕ್ಕೇರಿಸು

(ಕೊಂಡಾಡು = ಹೊಗಳು; ಕ್ವಾಟೆ < ಕೋಟೆ; ಮ್ಯಾಲೆ < ಮೇಲೆ)

ಪ್ರ : ಅವನನ್ನು ಚೆಂಡಾಡೋದನ್ನು ಬಿಟ್ಟು ಕೊಂಡಾಡಿ ಕ್ವಾಟೆ ಮೇಲೆ ಕೂಡಿಸಿಬಿಟ್ಟರು.

೮೮೧. ಕೊಂತದಿಂದ ಒತ್ತು = ಬಲವಂತ ಮಾಡು, ಒತ್ತಾಯ ಮಾಡು

(ಕೊಂತ = ಶ್ಯಾವಿಗೆ ಒರಳಿಗೆ ಇಟ್ಟ ಹಿಟ್ಟನ್ನು ಮೇಲಿನಿಂದ ಒತ್ತುವ ಲಿಂಗಾಕಾರದ ಮರದ ಗೂಟ)

ಪ್ರ : ಕೊಂತದಿಂದ ಒತ್ತದ ಹೊರ್ತು ಮಾರಾಯನ ಬಾಯಿಂದ ಮಾತು ಉದುರಲ್ಲ.