೯೭೬. ಗುದ್ದಲಿ ಗುರ್ತು ಹಾಕು = ರುಜು ಹಾಕು

(ಗುದ್ದಲಿ = ಸನಿಕೆ) ಅವಿದ್ಯಾವಂತ ಗ್ರಾಮೀಣ ಜನತೆ ಹೆಬ್ಬೆಟ್ಟು ಒತ್ತುವುದು ಬೇಡವೆಂದು ಕಷ್ಟಪಟ್ಟು ತಮ್ಮ ಹೆಸರನ್ನು ಬರೆಯುವಷ್ಟು ಕಲಿತುಕೊಂಡಿದ್ದಾರೆ. ಆಧುನಿಕತೆಯ ಗಾಳಿ ಬೀಸಿ. ಬರೀ ಅಕ್ಷರಸ್ಥರಾಗುವುದು ಮುಖ್ಯವಲ್ಲ, ವಿದ್ಯಾವಂತರಾಗುವುದು ಬಹಳ ಮುಖ್ಯ ಎಂಬುದನ್ನು ಅರಿತುಕೊಳ್ಳಬೇಕಾಗಿದೆ, ಸಮಾಜ, ಸರ್ಕಾರ ಅದಕ್ಕೆ ಹೆಣಗಬೇಕಾಗಿದೆ.

ಪ್ರ :ಪತ್ರದ ಸಾರ ಓದಿ ಅರ್ಥ ಮಾಡಿಕೊಳ್ಳದ ಹೊರತೂ, ಗುದ್ದಲಿ ಗುರ್ತು ಹಾಕೋದೂ ಒಂದೆ ಹೆಬ್ಬೆಟ್ಟು ಒತ್ತೋದೂ ಒಂದೆ – ಏನೇನೂ ವ್ಯತ್ಯಾಸವಿಲ್ಲ

೯೭೭. ಗುದ್ದಲಿ ಪೂಜೆ ಮಾಡು = ಶಂಕುಸ್ಥಾಪನೆ ಮಾಡು, ಪ್ರಾರಂಭಿಸು

ಪ್ರ : ಸರ್ಕರ ಎಷ್ಟೋ ಯೋಜನೆಗಳಿಗೆ ಗುದ್ದಲಿ ಪೂಜೆ ಮಾಡಿ, ಜನರಿಗೆ ಮಣ್ಣು ಮುಕ್ಕಿಸಿದೆ, ಹಾದರಗಿತ್ತಿ ಏನೋ ತೋರಿಸಿ ನೆಲ ಗುದ್ದಿಸಿದ ಹಾಗೆ !

೯೭೮. ಗುದಿಗೆ ತೋರಿಸು = ಮೋಸ ಮಾಡು, ತುಣ್ಣೆ ತೋರಿಸು

(ಗುದಿಗೆ < ಗುದ್ದಿಗೆ = ಕಳ್ಳದನಗಳ ಕಾಲಿಗೆ ಲೊಟಲೊಟನೆ ಬಡಿಯುವಂತೆ ಕೊರಳಿಗೆ ಕಟ್ಟುವ ಮರದ ತುಂಡು)

ಪ್ರ : ಕಂಠಪೂರ್ತಿ ತಿಂದು ತೇಗಿ, ಕೊನೆಗೆ ಗುದಿಗೆ ತೋರಿಸಿ ಹೋದ.

೯೭೯. ಗುದಿಮುರಿಗೆ ಬೀಳು = ತೆಕ್ಕೆ ಮುರಿ ಬೀಳು, ಹಾವುಗಳ ಬೆಣ್ಣೆ ಬಿದ್ದಂತೆ ಬೀಳು.

ಪ್ರ : ಮಾತಿಗೆ ಮಾತು ಬೆಳೆದು ಇಬ್ಬರೂ ಗುದಿಮುರಿಗೆ ಬಿದ್ದು ಬಿಟ್ರು, ಇಬ್ಬರನ್ನು ಬೇರ್ಪಡಿಸ ಬೇಕಾದ್ರೆ ಸಾಕು ಸಾಕಾಯ್ತು

೯೮೦. ಗುದ್ದಗೆಯವರ ಗದ್ದುಗೆಯಾಗಿರು = ಲಿಂಗಾಯಿತ ಸ್ವಾಮಿಗಳ ಸಮಾಧಿ ಸ್ಥಳವಾಗಿರು.

(ಗುದ್ದಿಗೆಯವರು = ಕರಡಿಗೆ ಕಟ್ಟಿಕೊಂಡವರು) ಕಳ್ಳ ದನಗಳು ಬೆಳೆ ಮೇಯಲು ನುಗ್ಗುವುದರಿಂದ ಅವುಗಳ ಕಾಲಿಗೆ ಬಡಿಯುವಂತೆ ಒಂದು ಕೊರಡನ್ನು ಕೊರಳಿಗೆ ಕಟ್ಟಿ ಇಳೆಬಿಟ್ಟಿರುತ್ತಾರೆ. ಅದಕ್ಕೆ ಗುದ್ದಿಗೆ ಎಂದು ಹೆಸರು. ಲಿಂಗಾಯಿತರ ಎದೆಯ ಮೇಲಿನ ಕರಡಿಗೆ ಒಡುವಾಗ ಎದೆಗೆ ಬಡಿಯುವುದರಿಂದ, ದನಗಳ ಕೊರಳಿಗೆ ಕಟ್ಟುವ ಗುದ್ದಿಗೆ ರೂಪಕದಲ್ಲಿ ಗ್ರಾಮೀಣರ ಸೃಜನ ಪ್ರತಿಭೆ ಅಭಿವ್ಯಕ್ತಿಸಿದೆ.

ಪ್ರ : ಗುದ್ದಿಗೇನ ಗೂಟಕ್ಕೆ ಗುತ್ತಿಗೆ ಕೊಡು = ಕರಡಿಗೆಯನ್ನು ಗೂಟಕ್ಕೆ ನೇತು ಹಾಕು.

ಪ್ರ : ಓಡುವಾಗ ಎದೆಗೆ ಬಡಿಯುತ್ತದೆ ಕಾಣೋ, ನಿನ್ನ ಗುದ್ದಿಗೇನಾ ಗೂಟಕ್ಕೆ ಗುತ್ತಿಗೆ ಕೊಟ್ಟು, ಓಟಕ್ಕೆ ಬಾ.

೯೮೨. ಗುನಿ – ಹಾರುಹುಯ್ಯಿ = ಚೆನ್ನಾಗಿ ಬಡಿ, ಬೆಂಡೆತ್ತು

(ಗುನಿ < ಕುನಿ = ಧಾನ್ಯದ ಮೇಲಿನ ಸಿಪ್ಪೆ, ಉಮ್ಮಿ: ಹಾರು ಹುಯ್ಯಿ = ಹಾರುವಂತೆ ಚಚ್ಚು)

ಪ್ರ :ಸುಮ್ಮನೆ ಮನಗದಿದ್ರೆ ಗುನಿ ಹಾರು ಹುಯ್ದುಬಿಡ್ತೀನಿ, ತಿಳಕೋ

೯೮೩. ಗುನ್ನ ಬೀಳು = ಕಚ್ಚು ಬೀಳು, ತೂತು ಬೀಳು, ಏಟು ಬೀಳು

ಬುಗುರಿಯಾಟ ಆಡುವಾಗ, ಒಬ್ಬರ ಬುಗುರಿಯ ಮೊಳೆಯಿಂದ ಇನ್ನೊಬ್ಬರ ಬುಗುರಿಗೆ ಕಚ್ಚು ಬೀಳುತ್ತಾರೆ. ಅದಕ್ಕೆ ಗುನ್ನ ಬಿತ್ತು ಎನ್ನುತ್ತಾರೆ. ಜನಪದ ಕ್ರೀಡೆ ಬುಗುರಿಯಾಟ ಈ ನುಡಗಟ್ಟಿಗೆ ಮೂಲ.

ಪ್ರ : ಅತ್ಲಿಂದ ಇತ್ಲಿಂದ ಗುನ್ನದ ಮೇಲೆ ಗುನ್ನಬಿದ್ರೆ, ಅಣ್ಣ ತಣ್ಣಗಾಗ್ತಾನೆ ಗಾಂಡ್ಮುಚ್ಕೊಂಡು.

೯೮೪. ಗುಬುರು ಹಾಕಿಕೊಳ್ಳು = ಮುಸುಕು ಹಾಕಿಕೊಳ್ಳು, ಬಟ್ಟೆ ಕವುಚಿಕೊಳ್ಳು

ಪ್ರ : ದುಬಟಿ ಗುಬುರು ಹಾಕ್ಕೊಂಡು ಮಲಗಿದ್ದಾನೆ.

೯೮೫. ಗುಮ್ಮನಗುಸುಕನಂತಿರು = ಮಳ್ಳಿಯಂತಿರು, ಗೊತ್ತಿಲ್ಲದವನಂತೆ ಗುಮ್ಮಾಗಿರು

ಪ್ರ : ಗುಮ್ಮನಗುಸುಕನಂತಿರೋರ್ನ ಎಂದೂ ನಂಬಾರ್ದು.

೯೮೬. ಗುಮ್ಮಕೊಂಡು ಹೋಗು = ಲಪಟಾಯಿಸು, ಸಂಭೋಗಿಸು.

ಕರು ಹಸುವಿನ ಕೆಚ್ಚಲಿಗೆ ಮುಸುಡಿಯಿಂದ ಗುದ್ದಿ ಗುದ್ದಿ ಹಾಲು ಕುಡಿಯುವುದಕ್ಕೆ ಗುಮ್ಮುತ್ತದೆ ಎನ್ನುತ್ತಾರೆ. ಹಾಗೆಯೇ ದನಗಳು, ಹೋರಿಗಳು ಕೊಂಬಿನಿಂದ ತಿವಿಯುವುದಕ್ಕೆ ಗುಮ್ಮುತ್ತದೆ ಎನ್ನುತ್ತಾರೆ. ಆ ಕ್ರಿಯೆಗಳಿಂದ ಮೂಡಿದ್ದು ಈ ನುಡಿಗಟ್ಟು

ಪ್ರ : ಒಂಟಿಯಾಗಿ ಬಿಮ್ಮಗೆ ಸಿಕ್ಕಿದ್ಲು ಅಂತ ಗುಮ್ಮಿಕೊಂಡು ಹೋದ ಹಲ್ಕಾ ನನ್ಮಗ.

೯೮೭. ಗುಯ್‌ಗುಟ್ಟು = ಗೊಣಗುಟ್ಟು

(ಗುಯ್‌ಗುಟ್ಟು < ಕುಯ್‌ಗುಟ್ಟು = (ನಾಯಿಗಳು) ಕುಯ್‌ಕುಯ್ ಎಂದು ಸದ್ದು ಮಾಡು)

ಪ್ರ : ನಾಯಿಗಳು ಗುಯ್ ಗುಟ್ಟಿದ್ಹಂಗೆ, ಪ್ರತಿಯೊಂದಕ್ಕೂ ಗುಯ್‌ಗುಟ್ತಾನೆ ಈ ಮುದಿಯ

೯೮೮. ಗುರುಗುಟ್ಟು = ಮೇಲ ಬೀಳಲು ಹವಣಿಸು

ಈದ ನಾಯಿ ತಮ್ಮ ಮರಿಗಳನ್ನು ಯಾರಾದರೂ ಅಪಹರಿಸಿಯಾರೆಂದು, ಹತ್ತಿರ ಹೆಜ್ಜೆ ಸಪ್ಪಳವಾದರೆ ಸಾಕು, ಗುರ್ ಎಂದು ಸದ್ದು ಮಾಡುತ್ತದೆ. ಆ ಹಿನ್ನೆಲೆಯಿಂದ ಈ ನುಡಿಗಟ್ಟು ಮೂಡಿದೆ

ಪ್ರ : ಹತ್ತರಕ್ಕೆ ಹೋದ್ರೆ ಸಾಕು, ಎಲ್ಲರ ಮೇಲೂ ಗುರುಗುಟ್ತಾನೆ.

೯೮೯. ಗುಲ್ಲಿಸಿಕೊಂಡು ಬರು = ಅಲ್ಲಾಡಿಸಿಕೊಂಡು ಬರು, ಹೆಟ್ಟಲು ಬರು

(ಗುಲ್ಲಿಸು = ಹೆಟ್ಟು, ತಿವಿ, ಅಲ್ಲಾಡಿಸು)

ಪ್ರ : ಗಾದೆ – ಅಲ್ಲಿ ಬಾ ಇಲ್ಲಿ ಬಾ ಅಂದ್ರೆ, ಗುಲ್ಲಿಸಿಕೊಂಡು ಬಂದ ಬುಲ್ಲಿ ಹತ್ರಕೆ

೯೯೦. ಗುಲ್ಲೋಗುಲ್ಲಾಗು = ಬಿಸಿ ಬಿಸಿ ಸುದ್ದಿಯಾಗು, ದೊಡ್ಡ ಪುಕಾರಾಗು

ಪ್ರ : ಹೆಂಡ್ರನ್ನ ಕೊಲೆ ಮಾಡಿದೋನು ಗಂಡನೇ ಅಂತ ಊರೊಳಗೆಲ್ಲ ಗುಲ್ಲೋಗುಲ್ಲಾಗಿದೆ.

೯೯೧. ಗುಸುಗುಸ ಎನ್ನು = ಪಿಸಪಿಸಗುಟ್ಟು, ಪಿತೂರಿ ನಡೆಸು

(ಗುಸ ಗುಸ < ಕುಸಕುಸ)

ಪ್ರ : ಹುಟ್ಟಿದ ಹುಳ ಹುಪ್ಪಟೆ ಎಲ್ಲ ಗುಸು ಗುಸ ಪಿಸುಪಿಸ ಅಂತ ಅವೆ.

೯೯೨. ಗುಳ ತೊಡಿಸು = ಸಂಭೋಗಿಸು

(ಗುಳ < ಕುಳ < ಕುಡ = ನೇಗಿಲ ತುದಿಗೆ ಲಗತ್ತಿಸುವ ಮೊಳದುದ್ದದ ಕಬ್ಬಿಣದ ಪಟ್ಟಿ) ನೇಗಿಲಿನ ಮಧ್ಯೆ ಹೊಡೆದಿರುವ ಇಂಗ್ಲಿಷಿನ ತಲೆಕೆಳಗಾದ (< U) ಅಕ್ಷರದಾಕಾರದಲ್ಲಿರುವ ಜಿಗಣೆಯ ತೂತಿಗೆ ಗುಳದ ತೊಟ್ಟನ್ನಿಟ್ಟು ಬಿಗಿಯಾಗಿ ಜಟಿಯಲಾಗುತ್ತದೆ, ಸುತ್ತಿಗೆಯಿಂದ, ಬೇಸಾಯದ ಉಪಕರಣ ಸಿದ್ಧತೆಯ ಆ ಕ್ರಿಯೆಯನ್ನು ಬೇರೊಂದು ಅರ್ಥ ಹೊಮ್ಮುವಂತೆ ಜನಪದ ಸೃಜನ ಪ್ರತಿಭೆ ಈ ನುಡಿಗಟ್ಟಿನಲ್ಲಿ ಮಡುಗಟ್ಟಿಸಿ ಬಳಸಿದೆ.

ಪ್ರ : ಗುಳ ತೊಡಿಸಿ ಬರುವಾಗ್ಗೆ ತಡವಾಯ್ತು ಅಷ್ಟೆ. ಬರಲು ಮನಸ್ಸಿಲ್ಲ ಎಂದರ್ಥವಲ್ಲ.

೯೯೩. ಗುಳೇ ಹೋಗು = ವಲಸೆ ಹೋಗು

(ಗುಳೇ < ಕುಳಿ (ತ) = ವಲಸೆ)

ಪ್ರ : ಬರಗಾಲದಲ್ಲಿ ಅವರೆಲ್ಲ ಊರುಬಿಟ್ಟು ಗುಳೇ ಹೋದರು

೯೯೪. ಗೂಟ ಹೊಡೆಸಿಕೊಂಡಿರು = ಶಾಶ್ವತವಾಗಿರು, ಅಲ್ಲಾಡದಂತಿರು

ಪ್ರ : ಯಾರೂ ಇಲ್ಲಿ ಗೂಟ ಹೊಡಿಸಿಕೊಂಡಿರಲ್ಲ, ಗಾಡಿ ಬಿಡೋರೆ ಎಲ್ಲ

೯೯೫. ಗೂಟಿ ತಿನ್ನು = ಹಂದಿ ಮಾಂಸವನ್ನು ತಿನ್ನು

(ಗೂಟಿ < ಘೃಟಿ < ಘೃಷ್ಟಿ (ಸಂ) = ಹಂದಿ, ಸೂಕರ)

ಪ್ರ : ಗಾದೆ – ಕೋಟಿ ತಿನ್ನೋ ಕಡೆ ಒಂದು ಗೂಟಿ ತಿನ್ನು

೯೯೬. ಗೂಡ್ರ ಹಿಡಿ = ಜಡಿ ಮಳೆ ಹಿಡಿ, ಹೊಗೆಯ ಗುಡಾರದಂತೆ ಕವಿದುಕೊಳ್ಳು

ಪ್ರ : ಉಡ್ರು ಗಾಳಿ, ಗೂಡ್ರ ಮಳೆ – ಗಡಗಡ ನಡುಗಬೇಕಾಯ್ತು

೯೯೭. ಗೂಡುಗಟ್ಟು = ಪರಿವೇಷ ಕಟ್ಟು, ಸುತ್ತುಗಟ್ಟು

ಪ್ರ : ಚಂದ್ರನ ಸುತ್ತ ಗೂಡುಗಟ್ಟಿದೆ, ಕಾಣ್ತದ?

೯೯೮. ಗೂಡು ಸೇರಿಕೊಳ್ಳು = ನೆಲೆಸೇರು, ಮನೆಯನ್ನು ತಲುಪು

(ಗೂಡು = ಮನೆ, ನೆಲೆ)

ಪ್ರ : ಹೊತ್ತಿಗೆ ಮುಂಚೆ ಗೂಡು ಸೇರಿಕೊಳ್ಳೋದು ನೋಡ್ಕೊ.

೯೯೯. ಗೂದೆ ಹೊರಟುಕೊಳ್ಳೋ ಹಂಗೆ ಹಣಿ = ಚೆನ್ನಾಗಿ ತದಕು, ಹಣ್ಗಾಯಿ ನೀರ್ಗಾಯಿ ಮಾಡು

(ಗೂದೆ <ಗೂದ < ಗೂಥ = ಅಮೇದ್ಯ; ಅಥವಾ ಗೂದೆ – ಗರ್ಭಕೋಶ, ಮಲದ್ವಾರದಲ್ಲಿ ಹಣಿಕಿಕ್ಕುವ ದೊಡ್ಡಕರುಳು)

ಪ್ರ : ಅವಳಿಗೆ ಗೂದೆ ಹೊರಟುಕೊಳ್ಳೋ ಹಂಗೆ ಹಣಿದು ಬಂದಿದ್ದೀನಿ

೧೦೦೦. ಗೂದೆ ಹೊರಡಿಸು = ತಿಣುಕುವಷ್ಟು ಕೆಲಸ ಮಾಡಿಸು

ಪ್ರ : ಕುಂತ್ಕೊಳ್ಳೋಕೂ ಬಿಡದೆ. ನಿಂತ್ಕೊಳ್ಳೋಕೂ ಬಿಡದೆ, ಕೆಲಸದಾಳುಗಳಿಗೆ ಇವತ್ತು ಗೂದೆ ಹೊರಡಿಸಿ ಬಿಟ್ಟಿದ್ದೀನಿ

೧೦೦೧. ಗೂಸ ಕೊಡು = ಏಟು ಕೊಡು

(ಗೂಸ < ಗುಸ < ಘುಸ್ಸಾ (ಹಿಂ) = ಏಟು)

ಪ್ರ : ಸರಿಯಾಗಿ ಗೂಸ ಕೊಡೋತನಕ, ಅವನು ದಾರಿಗೆ ಬರಲ್ಲ

೧೦೦೨. ಗೂಳಿಯಂತೆ ತಿರುಗು = ಯಾವ ಭಯವೂ ಇಲ್ಲದೆ ಸ್ವೇಚ್ಛಾಚಾರಿಯಾಗಿ ತಿರುಗು

(ಗೂಳಿ = ದೇವರಿಗೆ ಬಿಟ್ಟ ಹೋರಿ. ಅದು ಯಾರ ಬೆಳೆ ಮೇದರೂ ಪ್ರಶ್ನಿಸುವಂತಿಲ್ಲ)

ಪ್ರ : ಹೇಳೋರು ಕೇಳೋರು ಇಲ್ಲದೆ ಗೂಳಿಯಂತೆ ತಿರುಗ್ತಾನೆ.

೧೦೦೩. ಗೆಜ್ಜಲು ಹತ್ತು = ಉಡದೆ ತೊಡದೆ ಹಾಳಾಗು, ಮರಣ ಹೊಂದಿ ಗೆಜ್ಜಲಿಗೆ ಉಣಿಸಾಗು

ಪ್ರ : ಗೆಜ್ಜೆ ಡಾಬಿಗೆ ಕೈ ಹಾಕ್ತಾನಲ್ಲ, ಇವನ ಮುಸುಡಿಗೆ ಗೆಜ್ಜಲು ಹತ್ತ !

೧೦೦೪. ಗೆಜ್ಜೆ ಪೂಜೆ ಮಾಡು = ಬಸವಿ ಬಿಡು

ವೇಶ್ಯಾವೃತ್ತಿಗೆ ಅಥವಾ ಬಸವಿ ಬಿಡುವುದಕ್ಕೆ ಮುನ್ನ ಮಾಡುವ ಶಾಸ್ತ್ರೋಕ್ತ ಆಚರಣೆ; ನಾಂದಿಕ್ರಿಯೆ. ಬಸವಿ ಬಿಡುವ ಪದ್ಧತಿಯನ್ನು ಜಾರಿಗೆ ತಂದು ಸುಖಪಡುತ್ತಿದ್ದ ಪಟ್ಟಭದ್ರರ ಕಿತಾಪತಿಯನ್ನು ಈಗೀಗ ಅರ್ಥಮಾಡಿಕೊಳ್ಳುತ್ತಿರುವ ಸಮಾಜ ಅದಕ್ಕೆ ಬೆನ್ನು ತಿರುಗಿಸುತ್ತಿರುವುದು ಸಂತೋಷದ ಸಂಗತಿ.

ಪ್ರ : ಹದಿಮೂರು ವರ್ಷದ ಹಾಲು ಕಂದಮ್ಮನಿಗೆ ಆಗಲೇ ಗೆಜ್ಜೆಪೂಜೆ ಮಾಡಿಸಿಬಿಟ್ಟನಲ್ಲ ಆ ಕಚ್ಚೆಹರುಕ ಜಮೀನ್ದಾರ, ಅವನ ಮುಸುಡಿಗೆ ಇಸವು ಹತ್ತ !

೧೦೦೫. ಗೆಣಸು ಕೆತ್ತು = ಅಮುಖ್ಯ ಕೆಲಸದಲ್ಲಿ ತೊಡಗು, ಬಾಲಿಶ ಕಾರ್ಯದಲ್ಲಿ ಮುಳುಗು

ಗೆಣಸಿನಲ್ಲಿ ಮರಗೆಣಸು ಮತ್ತು ಬಳ್ಳಿಗೆಣಸು ಅಥವಾ ಹಬ್ಬುಗೆಣಸು ಎಂದು ಎರಡು ವಿಧ. ಮಕ್ಕಳು ಬಳ್ಳಿಗೆಣಸವನ್ನು ಕೆತ್ತಿ, ಕಿತ್ತು, ಮಣ್ಣನ್ನು ತೊಳೆದು, ಹಸಿಯದನ್ನೇ ಕಟುಮ್ಮನೆ ಕಡಿದು ತಿನ್ನಬೇಕೆಂಬ ಆಸೆಯಲ್ಲಿ ದೊಡ್ಡವರು ತಮಗೆ ವಹಿಸಿದ ದನ ಮೇಯಿಸುವುದನ್ನೇ ಮರೆತುಬಿಡುವುದುಂಟು. ಆ ಹಿನ್ನೆಲೆಯಿಂದ ಮೂಡಿದ್ದು ಈ ನುಡಿಗಟ್ಟು.

ಪ್ರ : ಇಲ್ಲಿದ್ದೇನು ಗೆಣಸು ಕೆತ್ತುತ್ತೀಯಾ ? ಸುಮ್ಮನೆ ಹೊರಟು ಬಾ.

೧೦೦೬. ಗೆಣ್ಣಿಕ್ಕು = ವಯಸ್ಸಿಗೆ ಬರು

(ಗೆಣ್ಣು = ಕಬ್ಬು, ಬಿದಿರುಗಳಿಗೆ ಸಮಾನ ಅಂತರದಲ್ಲಿರುವ ಗಂಟುಬಳೆ; ಅದೇ ರೀತಿ ಪ್ರಾಯ ಬಂದವರಿಗೆ ಗೋಮಾಳೆ ಮುರಿದು ಮೂಡುವ ಗಂಟಲಬಳೆ)

ಪ್ರ : ಗೆಣ್ಣಿಕ್ಕಿದ ಮೇಲೆ ಅಮ್ಮಣ್ಣಿ ಹತ್ರಕೆ ಕುಮ್ಮಣ್ಣಿ ನಿಗುರಿಸಿಕೊಂಡು ಬಂದ.

೧೦೦೭. ಗೆರೆ ದಾಟು = ಮಿತಿ ಮೀರು, ಹದ್ದು ಮೀರು

ರಾಮಾಯಣದಲ್ಲಿ ಚಿನ್ನದ ಜಿಂಕೆಯ ಬೆನ್ನಾಡಿ ಹೋದ ರಾಮ ಬಹಳ ಹೊತ್ತು ಬಾರದೆ ಕಳವಳಗೊಂಡ ಸೀತೆ ‘ಓ ಲಕ್ಷ್ಮಣಾ’ ಎಂಬ ಕೂಗಿಗೆ ವಿಹ್ವಲಗೊಂಡು ನೋಡಕೊಂಡು ಬರಲು ಬಲವಂತವಾಗಿ ಲಕ್ಷ್ಮಣನನ್ನು ಕಳಿಸುತ್ತಾಳೆ. ಆಗ ಲಕ್ಷ್ಮಣ ಒಂದು ಗೆರೆ ಹಾಕಿ, ಇದನ್ನು ದಾಟಿ ಹೊರಹೋಗಬೇಡ ಎಂದು ಹೇಳಿದ್ದುದನ್ನೂ ಆದರೆ ರಾವಣ ಸಂನ್ಯಾಸಿ ವೇಷ ಧರಿಸಿ ಭಿಕ್ಷೆಬೇಡಿದಾಗ, ಆ ವೇಷವನ್ನು ನಂಬಿ ಗೆರೆ ದಾಟಿ ಅಪಹರಣಗೊಂಡದ್ದನ್ನೂ ಕೇಳಿದ್ದೇವೆ. ಆದ್ದರಿಂದ ಈ ನುಡಿಗಟ್ಟು ಆ ಪೌರಾಣಿಕ ಕಥೆಯ ಹಿನ್ನೆಲೆಯನ್ನು ಒಳಗೊಂಡಿದೆ.

ಪ್ರ : ನಾನು ಹಾಕಿದ ಗೆರೆ ದಾಟಿದ ಮೇಲೆ, ಅವನಿಷ್ಟ, ಅನುಭವಿಸಲಿ

೧೦೦೮. ಗೆಲುವಾಗಿರು = ಲವಲವಕೆಯಿಂದಿರು, ನಗುಮುಖದಿಂದಿರು

ಪ್ರ :ನಿನ್ನೆಯಿಂದ ಕೊಂಚ ಗೆಲುವಾಗಿದ್ದಾನೆ, ಪೂರ್ಣವಾಸಿಯಾದ್ರೆ ಸಾಕು

೧೦೦೯. ಗೇಣು ಹಾಕು = ಸೇವೆ ಮಾಡು, ಬೆಣ್ಣೆ ಹಚ್ಚು

ಹೆಬ್ಬೆರಳು ಮತ್ತು ನಡುಬೆರಳುಗಳನ್ನು ವಿರುದ್ಧ ದಿಕ್ಕಿನಲ್ಲಿ ನಿಗುರಿಸಿದರೆ ಎಷ್ಟು ಉದ್ದವಿದೆಯೋ ಅದನ್ನು ಗೇಣುದ್ಧ ಎನ್ನುತ್ತಾರೆ, ಗೇಣು ಎನ್ನುತ್ತಾರೆ. ಹಾಗೆ ಎಷ್ಟು ಗೇಣು ಇದೆ ಎಂದು ಜಮೀನ್ದಾರರ, ಶ್ರೀಮಂತರ ಅಂಗಾಂಗಗಳನ್ನು ಅಳೆಯುವ ಗುಲಾಮಗಿರಿಯ ದ್ಯೋತಕವಾಗಿದೆ ಈ ನುಡಿಗಟ್ಟು

ಪ್ರ : ಈ ಯಜಮೋಣನಿಗೆ ಗೇಣು ಹಾಕಿದಾಗಲೇ ಸಂತೋಷ, ತೆರಕೊಂಡವನೆ

೧೦೧೦. ಗೇದುಣ್ಣು = ದುಡಿದುಣ್ಣು, ಕಾಯಕ ಮಾಡಿ ಕವಳ ತಿನ್ನು

(ಗೇಯು = ಕೆಲಸ ಮಾಡು)

ಪ್ರ : ಗಾದೆ – ಗೇದುಣ್ಣೋರವ್ವನ್ನ ಕೇದುಣ್ಣೋ ಜನ ಜಾಸ್ತಿ

೧೦೧೧. ಗೇರು ಹಾಕು = ಶಿಕ್ಷೆ ವಿಧಿಸು, ತಕ್ಕ ಶಾಸ್ತಿ ಮಾಡು

ಗೇರುಬೀಜದ ಎಣ್ಣೆ ಮೈಗೆ ತಾಕಿದರೆ ಅನೇಕರಿಗೆ ಅಲರ್ಜಿ ಆಗುತ್ತದೆ. ಮೈ ಚರ್ಮ ಸುಲಿದು ಬಿಡುತ್ತದೆ. ಹಾಗಾಗದಿರಲಿ ಎಂದು, ಹಿಗ್ಗಲಿ ಎಂದು, ಎಳೆಯ ಮಕ್ಕಳಲ್ಲೇ ಗೇರುದುಪ್ಪ ಹಾಕಿಬಿಡುತ್ತಾರೆ. ದೊಡ್ಡವರಾದ ಮೇಲೆ ಗೇರುದುಪ್ಪ ತಾಕಿದರೂ ಅಲರ್ಜಿ ಆಗುವುದಿಲ್ಲ ಎಂಬ ನಂಬಿಕೆ ಜನರಲ್ಲಿದೆ. ಗೇರಿನಿಂದಾದ ಅಲರ್ಜಿ ಮಾಯಬೇಕಾದರೆ ತೂಬರೆ ಚಕ್ಕೆಯನ್ನು ಅರೆದು ಹಚ್ಚುತ್ತಾರೆ. ಗಾಯ ಮಾದ ಮೇಲೆ ಜನ ಗೇರಕ್ಕನ ಆಟವನ್ನು ಗೇಲಿ ಮಾಡುತ್ತಾರೆ – ‘ಗೇರಕ್ಕ, ಗೇರಕ್ಕ, ತೂಬರಕ್ಕ ಮಾಡಿದ ಮಾಟ ನೋಡಿದ?’ ಎಂದು.

ಪ್ರ: ನನ್ನ ಕಳ್ಳು ಬಳ್ಳಿ ಅಂತ ಸಾಕಿ ಸಲವಿ ನೆಟ್ಟಗೆ ಮಾಡಿದ್ದಕ್ಕೆ, ಆ ಕ್ರಿಯಾಭ್ರಷ್ಟ ನನ್ನ ತಿಕ್ಕೆ ಗೇರು ಹಾಕಿದನಲ್ಲ !

೧೦೧೨. ಗೊಚ್ಚು ಹೊಡಿ = ದುರ್ವಾಸನೆ ಬಡಿ

(ಗೊಚ್ಚು.< ಕೊಚ್ಚು = ಕೆಟ್ಟ ವಾಸನೆ)

ಪ್ರ : ಮೂಗು ಮುಚ್ಚಕೊಂಡರೂ ಈ ಉಚ್ಚೆಗೊಚ್ಚನ್ನು ಸಹಿಸೋದಕ್ಕೆ ಸಾಧ್ಯವಿಲ್ಲ.

೧೦೧೩. ಗೊಜ್ಜಿಗನಂತಾಡು = ಸಂಗನಂತಾಡು, ಶಿಖಂಡಿಯಂತಾಡು

(ಗೊಜ್ಜಿಗ < ಕೊಜ್ಜಿಗ < ಖೋಜಾ (ಹಿಂ.ಉ) = ನಪುಂಸಕ)

ಪ್ರ : ಗೊಜ್ಜಿಗನಂತಾಡೋನ ಜೊತೆ ಗೋಲಿ ಗೆಜ್ಜುಗ ಆಡೋಕೆ ನಾಚಿಕ ಆಗಲ್ವ?

೧೦೧೪. ಗೊಟಕ್ ಅನ್ನು = ಪ್ರಾಣ ಬಿಡು

ಕೊನೆಯ ಗುಟುಕನ್ನು (ಹಾಲು ಅಥವಾ ನೀರು) ಗುಟುಕರಿಸಿದ ಜೀವ ತನ್ನ ಕೊನೆಯ ಉಸಿರು ಹಾರಿ ಹೋಗುವಾಗ ಸದ್ದು ಮಾಡುತ್ತದೆ. ಆ ಸದ್ದಿನ ಅನುಕರಣದಿಂದಲೇ ಈ ನುಡಿಗಟ್ಟು ಮೂಡಿದೆ.

ಪ್ರ : ಎಲ್ಲರೂ ಒಂದಲ್ಲ ಒಂದಿವಸ ಗೊಟಕ್ ಅನ್ನೋರೇ, ಯಾರೂ ಇಲ್ಲಿ ಗೂಟ ಹುಯ್ಸಿಕೊಂಡಿರಲ್ಲ.

೧೦೧೫. ಗೊಟರು ಮೂಸಿ ಗುಟುರು ಹಾಕು = ಮಡಿಲನ್ನು ಮೂಸಿ ಮುದಗೊಳ್ಳು, ಹಾರಲು ಹವಣಿಸು

(ಗೊಟರು < ಕೋಟರ = ತೂತು, ಮಡಿಲು (ಹಸುವಿನ ಯೋನಿಗೆ ಮಡಿಲು ಎಂದೇ ಕರೆಯಲಾಗುವುದು)

ಪ್ರ : ಗೊಟರು ಮೂಸಿದ ಹೋರಿ ಗುಟುರು ಹಾಕದೆ ಇರ್ತದ?

೧೦೧೬. ಗೊಟ್ಟ ಎತ್ತು = ಬಲವಂತನಾಗು ಕುಡಿಸು

(ಗೊಟ್ಟ < ಕೊಟ್ಟ = ದನಗಳಿಗೆ ಔಷಧಿ ಕುಡಿಸುವ ಬಿದರೆ ಅಂಡೆ)

ಪ್ರ : ಗೊಟ್ಟ ಎತ್ತುವ ಶಿಕ್ಷಣ ಕ್ರಮದಿಂದ ಏನೂ ಪ್ರಯೋಜನವಾಗುವುದಿಲ್ಲ.

೧೦೧೭. ಗೊಟ್ಟಿಗೆರೆ ಸೇರು = ನರ್ತನ ಸಂಗೀತಗಳ ಸೂಳೆಗೇರಿ ಸೇರು

(ಗೊಟ್ಟಿಗೆರೆ < ಗೋಷ್ಠಿಗೇರಿ; ಗೊಟ್ಟಿ < ಗೋಷ್ಠಿ = ಸರಸಲ್ಲಾಪದ ತಾಣ)

ಗೊಟ್ಟಿಗೆರೆ ಊರ ಬಳಿಯೇ ಅವ್ವೇರಳ್ಳಿ ಎಂಬ ಊರಿದೆ. ಅವ್ವೆಯರು ಎಂದರೆ ಅಂತಃಪುರದ ಸ್ತ್ರೀಯರು. ಅರಸರಿಗೆ ಅರಸಿ ತಂದು ಬಯಕೆ ತೀರಿಸುವ ಬಂಗಾರದವರು

ಪ್ರ : ಗಾದೆ – ಕೆಟ್ಟು ಬಿಟ್ಟೋರಿಗೆಲ್ಲ ಗೊಟ್ಟಿಗೆರೆ ತೌರುಮನೆ

೧೦೧೮. ಗೊಟ್ಟು ಬರು = ಬರ ಬರು, ಕ್ಷಾಮ ಬರು.

ಪ್ರ : ಗಾದೆ – ಬಂದಿರೋದು ಗೊಟ್ಟುಗಾಲ

ನೆಟ್ಟಗೆ ಹಾಕು ನಿನ್ನ ಸೊಟ್ಟಗಾಲ

೧೦೧೯. ಗೊಡ್ಡು ಬೀಳು = ಬಂಜೆಯಾಗು, ಸೃಜನ ಶಕ್ತಿ ಇಲ್ಲವಾಗು

ಪ್ರ : ಗೊಡ್ಡು ಬಿದ್ದ ಹಸು ಕಟ್ಕೊಂಡು ಕರಾವಿನ ಕನಸು ಕಾಣ್ತಿಯಲ್ಲ !

೧೦೨೦. ಗೊಡ್ಡೇಟು ಹಾಕು = ಸಪ್ಪೆ ಹೊಡೆತ ಹೊಡಿ

(ಗೊಡ್ಡು = ಬಂಜೆ)

ಪ್ರ : ಗಾದೆ – ಅಡ್ಡೇಟಿಗೊಂದು ಗೊಡ್ಡೇಟು

೧೦೨೧. ಗೊಣಗೊಣ ಎನ್ನು = ಮೂಗಿನಲ್ಲೇ ಗೊಣಗು

(ಗೊಣಗೊಣ < ಕೊಣ ಕೊಣ = ಅರ್ಥವಾಗದ ಸದ್ದಿನ ಅನುಕರಣ)

ಪ್ರ : ಮೂಗಿನಲ್ಲೇ ಗೊಣ ಗೊಣ ಅನ್ನೋ ನಿನಗೂ, ಬಾಯಲ್ಲಿ ಮಣಮಣ ಮಂತ್ರ ಹೇಳುವ ಪುರೋಹಿತರಿಗೂ ವ್ಯತ್ಯಾಸವೇ ಇಲ್ಲ.

೧೦೨೨. ಗೋಚದೆ ಸಿಕ್ಕುಗಟ್ಟು = ಬಾಚದೆ ಗಂಟು ಕಟ್ಟು

(ಗೋಚು = ಬಾಚು; ಸಿಕ್ಕು = ಗೋಜಲು)

ಪ್ರ: ಗೋಚದೆ ಸಿಕ್ಕುಗಟ್ಟಿದ್ರೆ, ಅವನ ಕೂದಲು ಜಡೆಗಟ್ಟಿದೆ ಅಂತಾರೆ.

೧೦೨೩. ಗೋಜಲು ಗೋಜಲಾಗು = ಸಿಕ್ಕು ಸಿಕ್ಕಾಗು, ಗಂಟುಗಂಟಾಗು

ಪ್ರ : ಸುಲಭವಾಗಿ ಬಗೆ ಹರಿಯೋದನ್ನ ಇವನು ಬಂದು ಎಲ್ಲ ಗೋಜಲು ಗೋಜಲು ಮಾಡಿಟ್ಟಬಿಟ್ಟ.

೧೦೨೪. ಗೋಟಾಯಿಸು = ತಿರುವು, ನಾದು

ರಾಗಿ ಮುದ್ದೆ ಮಾಡಲು ಹಿಟ್ಟಿನ ದೊಣ್ಣೆಯಿಂದ ಬೆಂದ ಹಿಟ್ಟಿನ ಗಂಟೆಲ್ಲ ಒಡೆದು ನುಣ್ಣಗಾಗುವಂತೆ ತಿರುವಿ ನಾದುತ್ತಾರೆ. ಆ ಹಿನ್ನೆಲೆ ಈ ನುಡಿಗಟ್ಟಿಗಿದೆ.

ಪ್ರ : ಚೆನ್ನಾಗಿ ಗೋಟಾಯಿಸಿದರೆ ಮುದ್ದೇಲಿ ಗಂಟುಳಿಯಲ್ಲ, ಉಣ್ಣೋಕೆ ಚೆನ್ನಾಗಿರ್ತದೆ

೧೦೨೫. ಗೋಡಿ ಮಕ್ಕೆ ನಿಲ್ಲಿಸು = ಗೋಡೆಯಂತೆ ನಿಲ್ಲಿಸು, ಮೇಲುಮುಖವಾಗಿ ನಿಲ್ಲಿಸು

(ಮಕ್ಕೆ < ಮುಖಕ್ಕೆ)

ಪ್ರ :ಚಪ್ಪಡಿಯನ್ನು ಹಾಸಬೇಡ, ಗೋಡಿ ಮಕ್ಕೆ ನಿಲ್ಲಿಸು

೧೦೨೬. ಗೋಣು ಹಾಕು = ಹೂಗುಟ್ಟು, ತಲೆಯಾಡಿಸು

(ಗೋಣು = ಕುತ್ತಿಗೆ)

ಪ್ರ : ಮೋಣನಿಗೆ ಗೋಣು ಆಡಿಸೋದು ಒಂದು ಗೊತ್ತು

೧೦೨೭. ಗೋತಾ ಹೊಡಿ = ಮರಣ ಹೊಂದು, ಪಲ್ಟಿ ಹೊಡಿ

ಗಾಳಿಪಟ ಹಾರಾಡದೆ ತಲೆಕೆಳಗಾಗಿ ನೆಲಕ್ಕೆ ಬೀಳುವುದಕ್ಕೆ ‘ಗೋತಾ ಹೊಡೀತು’ ಎನ್ನುತ್ತಾರೆ. ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಅವನು ಗೋತಾ ಹೊಡೆದು ಆಗಲೇ ಒಂದು ವರ್ಷಕ್ಕೆ ಬಂತು.

೧೦೨೮. ಗೋಮ ಇಕ್ಕು = ಊಟ ಮಾಡಿದ ಸ್ಥಳದ ಎಂಜಲೆತ್ತಿ ಸಗಣಿ ನೀರಿನಿಂದ ಶುದ್ಧಗೊಳಿಸು

(ಗೋಮ < ಗೋಮಯ = ಸಗಣಿ)

ಪ್ರ : ಗೋಮ ಇಕ್ಕಿದ ಮೇಲೆ ಎರಡನೆ ಪಂಕ್ತಿ ಕೂಡಿಸಿ.

೧೦೨೯. ಗೋರ್ಗಂಬಕ್ಕೆತ್ತು = ಬಲಿಗಂಬಕ್ಕೆ ಕಟ್ಟು

(ಗೋರ್ಗಂಬ < ಘೋರಸ್ತಂಭ) ಗ್ರಾಮದೇವತೆ ಜಾತ್ರೆಯಲ್ಲಿ ಕೋಣನನ್ನು ಬಲಿಕೊಡುವ ಪದ್ಧತಿ ಇತ್ತು. ಪ್ರತಿಭಟನೆಯ ದೆಸೆಯಿಂದ ಅದು ಕೆಲವು ಕಡೆ ಇಲ್ಲವಾಗುತ್ತಿದೆ. ಮರಿಯನ್ನು ನಿಲ್ಲಿಸಕೊಂಡೇ ಸುಲಭವಾಗಿ ಕತ್ತರಿಸುವಂತೆ ಕೋಣನನ್ನು ಕತ್ತರಿಸಲು ಸಾಧ್ಯವಿಲ್ಲೆಂದು ಅದರ ಕೊರಳನ್ನು ಕವಡಿನೋಪಾದಿಯಲ್ಲಿರುವ ಗೋರ್ಗಂಬಕ್ಕೆ ಕಟ್ಟಿ ಕತ್ತರಿಸುತ್ತಾರೆ ಕೊಸರಾಡಿ ಕಿತ್ತುಕೊಂಡು ಕೈಕೊಡದಂತೆ.

ಪ್ರ : ಗೋರ್ಗಂಬಕ್ಕೆತ್ತಿದ ಹೊರ್ತೂ ಅವನು ಬಾಯಿಬಿಡಲಿಲ್ಲ.

೧೦೩೦. ಗೋಲನ್ನು ಮಾಡು = ಉಪಾಯ ಮಾಡು, ಯುಕ್ತಿ ಮಾಡು

(ಗೋಲನ್ನು < ಗೋಲ್‌ಮಾಲ್ (ಹಿಂ) = ಯುಕ್ತಿ, ತಂತ್ರ)

ಪ್ರ : ಅಂತೂ ಇಂತೂ ಗೋಲನ್ ಮಾಡಿ ಒಳ್ಳೆ ಮಾಲನ್ನೇ ಹೊಡೆದುಬಿಟ್ಟ

೧೦೩೧. ಗೋಲು ಹೊಡಿ = ಸುತ್ತು ಹಾಕು, ಪಹರೆ ತಿರುಗು

(ಗೋಲು < ಗೋಲ)

ಪ್ರ :ಹೊಸ ಬಂಟ ಬೆಳಿಗ್ಗೆ ಎದ್ದವನೆ ಅರಮನೆ ಸುತ್ತ ಗೋಲು ಹೊಡೆಯುತ್ತಿದ್ದ.

೧೦೩೨. ಗೋವಿಂದ ಅನ್ನು = ಮರಣ ಹೊಂದು, ಆಯಸ್ಸು ಮುಗಿ

ವೈಷ್ಣವ ಧರ್ಮ ಪ್ರವರ್ಧಮಾನಕ್ಕೆ ಬಂದಾಗ ಮೂಡಿ ಬಂದಿರುವ ನುಡಿಗಟ್ಟು ಇದು. ಕೊನೆ ಉಸಿರು ಎಳೆವಾಗ ದೈವಸ್ಮರಣೆ ಮಾಡುವುದುಂಟು

ಪ್ರ : ಅರವಿಂದ ಎಲ್ಲಿದ್ದಾನೆ, ಅವನು ಎಂದೋ ಗೋವಿಂದ ಅಂದ

೧೦೩೩. ಗೋವಿಂದ ಆಗು = ಇಲ್ಲವಾಗು, ಖಾಲಿಯಾಗು

ಪ್ರ : ಅಪ್ಪ ಕೂಡಿಟ್ಟದ್ದೆಲ್ಲ ಮಗನಿಂದ ಗೋವಿಂದ ಆಗಿ ಹೋಯ್ತು

೧೦೩೪. ಗೌಡಸಾನಿಯಾಗು = ಯಜಮಾನಿಯಾಗು

(ಸಾನಿ < ಸ್ವಾಮಿನಿ = ಒಡತಿ)

ಪ್ರ : ನನ್ನ ಕಿರುಮಗಳೇ ಈ ಮನೆಯ ನಿಜವಾದ ಗೌಡಸಾನಿಯಾಗಿದ್ದಾಳೆ

೧೦೩೫. ಗಂಟಲಲ್ಲಿ ಅನ್ನ ನೀರು ಇಳಿಯದಿರು = ಸಾವು ಸಮೀಪಿಸು

ಪ್ರ : ನಾನು ಹೆಚ್ಚು ದಿವಸ ಇರಲ್ಲ, ಆಗಲೇ ಗಂಟ್ಲಲ್ಲಿ ಅನ್ನ ನೀರು ಇಳಿಯಲ್ಲ

೧೦೩೬. ಗಂಟಲಿಗೆ ಗಾಳ ಎದೆಗೆ ಶೂಲ ಹಾಕು = ಚಿತ್ರ ಹಿಂಸೆ ಕೊಡು

ಪ್ರ : ಅತ್ತೆ ನಾದಿನಿಯರು ಗಂಟಲಿಗೆ ಗಾಳ ಎದೆಗೆ ಶೂಲ ಹಾಕುವಾಗ ಸೊಸೆ ಹೇಗೆ ಸಹಿಸಿಯಾಳು?

೧೦೩೭. ಗಂಟಲಿಗೆ ಗಂಡಾಮಾಲೆ ಏಳು = ಕೆಟ್ಟದಾಗು

(ಗಂಡಾಮಾಲೆ = ಕೊರಳಲ್ಲಿ ಬೆಳೆಯುವ ದುರ್ಮಾಂಸದ ಗಂಟು)

ಪ್ರ : ಹಿಂಗೆ ಕಂಡೋರ ಮಕ್ಕಳ್ನ ಹುರಬಡ್ಕೊಂಡು ತಿಂದ್ರೆ, ಗಂಟಲಿಗೆ ಗಂಡಾಮಾಲೆ ಏಳದೆ ಇರ್ತದ?

೧೦೩೮. ಗಂಟಲ ನರ ಹರಿದುಕೊಳ್ಳು = ಕಿರುಚಿಕೊಳ್ಳು, ಚೀರಿಕೊಳ್ಳು

ಪ್ರ : ಎಲ್ಲರೂ ನೋಡಲಿ ಅಂತ, ಏನು ಒಂದೇ ಸಮ ಗಂಟಲ ನರ ಹರಿದುಕೊಳ್ತಾನೆ.

೧೦೩೯. ಗಂಟಲ ಮಟ್ಟ ಗದುಕು = ಗಂಟಲವರೆಗೂ ಮುಕ್ಕು

(ಗದುಕು < ಕರ್ದುಕು < ಕರ್ದುಂಕು = ಕುಕ್ಕು, ತಿನ್ನು)

ಪ್ರ : ಗಂಡ ಗಂಟಲು ಮಟ ಗದುಕಿ ಬಂದವನೆ, ನೀನು ಉಣ್ಣು ಹೋಗು

೧೦೪೦. ಗಂಟಲು ಒಣಗಿಸಿಕೊಳ್ಳು = ಕಂಠಶೋಷಣೆ ಮಾಡಿಕೊಳ್ಳು

ಪ್ರ : ಆಗದ್ದು ಹೋಗದ್ದಕ್ಕೆಲ್ಲಾ ಸುಮ್ನೆ ಯಾಕೆ ಗಂಟಲು ಒಣಗಿಸಿಕೊಳ್ತೀಯ?

೧೦೪೧. ಗಂಟಲು ಕಟ್ಟು = ದುಃಖ ಉಕ್ಕು, ಗದ್ಗದಗೊಳ್ಳು

ಪ್ರ : ಮಗಳ ಸ್ಥಿತಿ ನೋಡಿ ತಾಯಿಗೆ ಗಂಟಲು ಕಟ್ಟಿ ಬಂತು

೧೦೪೨. ಗಂಟಲು ಕಟ್ಟಿಕೊಳ್ಳು = ಆಹಾರ ವ್ಯತ್ಯಾಸದಿಂದ ಧ್ವನಿಕೀರಲಾಗು, ಧ್ವನಿ ಹೊರಡದಿರು

ಪ್ರ : ನಾಟಕದ ದಿವಸವೇ ಪಾತ್ರ ಧಾರಿಯ ಗಂಟಲು ಕಟ್ಟಿಕೊಳ್ಳಬೇಕೆ?

೧೦೪೩. ಗಂಟಲು ಕಟ್ಟಿ ಹೋಗು = ಮಾತು ನಿಲ್ಲು, ಸಾವುಂಟಾಗು

ಪ್ರ : ಇವನ ಗಂಟಲು ಕಟ್ಟಿ ಹೋಗೋದನ್ನೇ ಕಾಯ್ತಾ ಇದ್ದೀನಿ, ದೇವರಿಗೆ ಹರಕೆ ಹೊತ್ತು

೧೦೪೪. ಗಂಟಲು ಕಿತ್ತುಕೊಳ್ಳು = ಚೀರಾಡು

ಪ್ರ : ಹಿಂಗೆ ಗಂಟ್ಲು ಕಿತ್ಕೊಂಡರೆ ಗಂಟು ಕೊಟ್ಟು ಬಿಡ್ತಾರೆ ಅಂದ್ಕೊಂಡ?

೧೦೪೫. ಗಂಟಲು ದೊಡ್ಡದು ಮಾಡು = ಜೋರು ಮಾಡು

ಪ್ರ : ಈಚೀಚೆಗೆ ಇವಳು ಗಂಟಲು ದೊಡ್ಡದು ಮಾಡ್ತಾ ಇದ್ದಾಳೆ, ನೀವೇ ಬುದ್ಧಿ ಹೇಳಿ. ಇಲ್ಲ, ನಾನು ಕಲಿಸ್ತೇನೆ

೧೦೪೬. ಗಂಟಿಕ್ಕು = ಕೂಡಿಡು, ಗಂಟು ಮಾಡು

ಪ್ರ : ಅವನು ಗಂಟಿಕ್ಕಿರೋದು ಎಂಟು ತಲೆಮಾರಿಗೂ ಕರಗಲ್ಲ

೧೦೪೭. ಗಂಟು ಬೀಳು = ಬೆನ್ನು ಹತ್ತು, ಒಕ್ಕರಿಸು

ಪ್ರ : ಈಗಿರೋ ತೊಂದರೆ ಸಾಲ್ದೂ ಅಂತ, ಇವನೊಬ್ಬ ಬಂದು ನನಗೆ ಗಂಟುಬಿದ್ದ.

೧೦೪೮. ಗಂಟು ಮಾಡಿಕ್ಕು = ಗೋಜಲು ಮಾಡು, ಸಿಕ್ಕು ಮಾಡು

ಪ್ರ : ಬಗೆ ಹರಸ್ತೀನಿ ಅಂತ ಬಂದೋನು, ಇನ್ನೂ ಕಗ್ಗಂಟು ಮಾಡಿ ಹೋಗಿಬಿಟ್ಟ

೧೦೪೯. ಗಂಟು, ಮುಳುಗಿಸು = ದೋಚು, ಹಾಳು ಮಾಡು

ಪ್ರ : ಅವನು ಗಂಟು ಮುಳುಗಿಸೋದ್ರಲ್ಲಿ ಎತ್ತಿದ ಕೈ

೧೦೫೦. ಗಂಟು ಮೂಟೆ ಕಟ್ಟು = ಹೊರಡಲು ಸಿದ್ಧವಾಗು

ಪ್ರ : ಇಲ್ಲೊಂದು ಅರಗಳಿಗೆ ಇರಕೂಡದು, ಮೊದಲು ಗಂಟು ಮೂಟೆ ಕಟ್ಟು

೧೦೫೧. ಗಂಟು ಹಾಕು = ಮದುವೆ ಮಾಡು

ಪ್ರ : ಪೋಲಿತನ ತಾನಾಗಿಯೇ ನಿಲ್ತದೆ, ಮೊದಲು ಒಂದು ಹೆಣ್ಣು ತಂದು ಗಂಟು ಹಾಕು

೧೦೫೨. ಗಂಟು ಹಾಕಿಕೊಳ್ಳು = ಸಂಭೋಗದಲ್ಲಿ ನಿರತವಾಗು

ಪ್ರ : ಗಂಟು ಹಾಕಿಕೊಂಡ ನಾಯಿಗಳ ಹಾಗೆ ಗಂಡನ ಮುಖ ಅತ್ತ ಹೆಂಡ್ರು ಮುಖ ಇತ್ತ !

೧೦೫೩. ಗಂಟೆ ನಿಲ್ಲಿಸು = ಮಾತು ನಿಲ್ಲಿಸು

ಗಂಟೆಯ ಒಳಗೆ ಲೋಹದ ನಾಲಗೆ ಇರುತ್ತದೆ. ಅದು ಗಂಟೆಯ ಕಂಠಕ್ಕೆ ತಾಕಿದಾಗಲೇ ಸದ್ದಾಗುವುದು. ಆ ಹಿನ್ನೆಲೆ ಈ ನುಡಿಗಟ್ಟಿಗೆ ಮೂಲ

ಪ್ರ : ಮೊದಲು ಗಂಟೆ ನಿಲ್ಲಿಸಿದ್ರೆ, ತಂಟೆ ಬೇಗ ಬಗೆ ಹರೀತದೆ

೧೦೫೪. ಗಂಟೆ ಬಾರಿಸು = ಕೂಗಾಡು, ಹಲಾಬಿ ಕಟ್ಟು

ಪ್ರ: ಹಿಂಗೆ ಗಂಟೆ ಬಾರಿಸ್ತಾ ಇದ್ರೆ, ನಂಟೇ ಕಿತ್ತು ಹೋಗ್ತದೆ, ಮರೀಬೇಡ

೧೦೫೫. ಗಂಡನ್ನ ತಿಂದುಕೊಳ್ಳು = ಮುಂಡೆಯಾಗು

ಪ್ರ : ನಿನ್ನ ಗಂಡನ್ನ ತಿಂದ್ಕೊಂಡು ಗಡಿಗೇಲಿ ನೀರು ಹೊರ ಅಂತ ಬಯ್ತಾಳಲ್ಲ ಆ ಗಯ್ಯಾಳಿ

೧೦೫೬. ಗಂಡುಗಾರೆಗೂಟ ಜಡಿ = ಮೋಸ ಮಾಡು, ಅಪಕಾರವೆಸಗು

ಪ್ರ: ನೀನೇ ನನ್ನ ಭಾಗದ ದೇವರು ಅಂತಿದ್ದೋನು, ನನಗೇ ಗಂಡುಗಾರೆಗೂಟ ಜಡಿದ

೧೦೫೭. ಗಂಡುಗತ್ರಿ ಹಾಯು = ನೆಟ್ಟ ಕತ್ತಿಯ ಮೇಲೆ ಬಿದ್ದು ಪ್ರಾಣ ಕಳೆದುಕೊಳ್ಳು ಹಿಂದೆ ರಾಜನ ಸೇವಕರು, ವೇಳೆವಾಳಿಗಳು ನಾನಾ ಬಗೆಯಲ್ಲಿ ಪ್ರಾಣವನ್ನು ಸಮರ್ಪಿಸುತ್ತಿದ್ದರು. ವಿವೇಕಕ್ಕಿಂತ ಭಕ್ತಿಯ ಉತ್ಸಾಹ, ಭಾವೋದ್ರೇಕ ಇಂಥ ಅಂಧಾಚರಣೆಗಳಿಗೆ ಮೂಲ. ಈ ನುಡಿಗಟ್ಟು ಅಂಥ ಅಂಧಾಚರಣೆಯ ಪಳೆಯುಳಿಕೆ ಎನ್ನಬಹುದು.

ಪ್ರ : ಗಂಡುಗತ್ರಿ ಹಾದು ಘಟ ಒಗೆಯೋಕೂ ಅವನು ಹಿಂದೇಟು ಹಾಕಲ್ಲ

೧೦೫೮. ಗಂಡುಗೊಡಲಿ ಮಸೆ = ದ್ವೇಷ ಸಾಧಿಸು

(ಮಸೆ = ಉಜ್ಜು, ಹರಿತಗೊಳಿಸು) ಕೊಡಲಿಗೂ ಗಂಡು ಗೊಡಲಿಗೂ ವ್ಯತ್ಯಾಸ ಉಂಟು. ಎರಡಕ್ಕೂ ಕಾವುಗಳಿರುತ್ತವೆ. ಆದರೆ ಕೊಡಲಿಯ ಬಾಯಲ್ಲಿ ವ್ಯತ್ಯಾಸವಿರುತ್ತದೆ. ಸೌದೆ ಒಡೆಯುವ, ಅಥವಾ ಮರ ಕಡಿಯುವ ಕೊಡಲಿಗೆ ನಾಲ್ಕು ಬೆಟ್ಟಗಲ ಬಾಯಿದ್ದರೆ, ಗಂಡುಗೊಡಲಿಗೆ ರೇಖಾಚಂದ್ರನಾಕಾರದಲ್ಲಿ ಗೇಣುದ್ದ ಬಾಯಿರುತ್ತದೆ. ಇದಕ್ಕೆ ಪರಶು ಎನ್ನುತ್ತಾರೆ. ಪರಶುರಾಮ ಬಳಸಿದ್ದು ಇದನ್ನೇ. ಕ್ಷತ್ರಿಯರನ್ನು ಧ್ವಂಸ ಮಾಡಿದ ಪರಶುರಾಮನ ದ್ವೇಷವನ್ನು ಗರ್ಭದಲ್ಲಿ ಅಡಗಿಸಿಕೊಂಡೇ ಈ ನುಡಿಗಟ್ಟು ಉಸಿರಾಡುತ್ತಿದೆ ಎಂದರೂ ತಪ್ಪಲ್ಲ

ಪ್ರ : ಅವನು ಗಂಡುಗೊಡಲಿ ಮಸೆದರೆ, ನಾನು ಬಂಡಗುಡಲು ಮಸೆಯಲು ಸಿದ್ದ

೧೦೫೯. ಗಂತಲು ಮಾಡು = ಜಗಳ ತೆಗೆ, ಕಿತಾಪತಿ ಮಾಡು

(ಗಂತಲು < ಗಂತ್ಲು < ಗಂಟ್ಲು< ಗಂಟು = ಸಿಕ್ಕು, ಗೋಜಲು)

ಪ್ರ : ಗಂತಲು ಜನರ ನಂಟಸ್ತನ ನಮಗೆ ಬೇಡ

೧೦೬೦. ಗಂದೊಗಲು ಇಳೇ ಬೀಳು = ಕೌತ ಜೋಲು ಬೀಳು

(ಗಂದೊಗಲು < ಗಂಗೆದೊವಲು < ಗಂಗೆ + ತೊವಲು = ಗೂಳಿಯ ಕೊರಳ ಕೆಳಗೆ ಜೋಲಾಡುವ ತೊಗಲು) ಸುಖಸಮೃದ್ಧಿಯಲ್ಲಿ ಬದುಕಿದವರ ಶ್ರೀಮಂತ ಕೌತ (ಕೆನ್ನೆಯ ಕೆಳಭಾಗದ ಉಬ್ಬಿದ ಮಾಂಸಭರಿತ ಚರ್ಮ) ಕುತ್ತಿಗೆಯ ಮೇಲೆ ಜೋಡು ಬಿದ್ದಿರುವುದನ್ನು ಈ ನುಡಿಗಟ್ಟು ಸೂಚಿಸುತ್ತದೆ.

ಪ್ರ : ಹಸಿವಿನ ಗಂಧವೇ ಗೊತ್ತಿರದ ಶ್ರೀಮಂತರು ಎನ್ನುವುದಕ್ಕೆ ಇಳಿಬಿದ್ದಿರುವ ಗಂದೊಗಲೇ ಸಾಕ್ಷಿ

೧೦೬೧. ಗುಂಜು ಗುಂಜಿಕೊಳ್ಳು = ಶ್ಯಪ್ಪ ಕಿತ್ತುಕೊಳ್ಳು

(ಗುಂಜು = ಶ್ಯಪ್ಪ, ತೆಂಗಿನ ನಾರು ; ಗುಂಜಿಕೊಳ್ಳು = ಕಿತ್ತುಕೊಳ್ಳು)

ಪ್ರ : ಏನು ನೀನು ಗುಂಜಿಕೊಳ್ಳೋದು ನನ್ನ ಗುಂಜ್ನ?ಹೋಗೋ ಕಂಡಿದ್ದೀನಿ.

೧೦೬೨. ಗುಂಡಿಗೆಯಿರು = ಧೈರ್ಯವಿರು

(ಗುಂಡಿಗೆ = ಎದೆ, ಹೃದಯ)

ಪ್ರ : ಗುಂಡಿಗೆ ಇದ್ರೆ ನನ್ನ ಮೇಲೆ ಕೈ ಮಾಡೋ ನೋಡ್ತೀನಿ

೧೦೬೩. ಗುಂಡುಗುಂಡಾಗಿರು = ದುಂಡುದುಂಡಾಗಿರು

ಪ್ರ : ಮೈನೆರದ ಮೇಲೆ ಗುಂಡುಗುಂಡಾಗಿಬಿಟ್ಟಿದ್ದಾಳೆ ಅಲ್ವ?

೧೦೬೪. ಗುಂಡು ಹಾಕು = ಮದ್ಯ ಸೇವಿಸು

ಪ್ರ : ಗುಂಡು ಹಾಕೋದು ಕಲಿತ ಮೇಲೆ ಗಂಡ ಮನೆಗೆ ಬರೋದೆ ಸರ್ಹೋತ್ತಿಗೆ, ಅಲ್ಲಿವರೆಗೆ ಇಲ್ಲೇ ಮಲಕ್ಕೋ ನನ್ನೊತ್ತಿಗೆ.

೧೦೬೫. ಗುಂಡು ಹೊಡೆದಂತೆ ಮಾತಾಡು = ಎದೆಗೆ ನಾಟುವಂತೆ ನೇರವಾಗಿ ಮಾತಾಡು

ಪ್ರ : ಯಾರ ದಾಕ್ಷಿಣ್ಯಕ್ಕೂ ಒಳಗಾಗದೆ, ಇದ್ದದ್ದನ್ನು ಇದ್ದ ಹಾಗೆ ಗುಂಡು ಹೊಡೆದಂತೆ ಮಾತಾಡೋ ಆಸಾಮಿ ಅವನು

೧೦೬೬. ಗೊಂಗಡಿ ಎತ್ತು = ಜಾಗಬಿಡು, ಇಲ್ಲಿಂದ ಹೊರಡು

(ಗೊಂಗಡಿ = ಕಂಬಳಿ, ಜಾಡಿ)

ಪ್ರ : ಮೊದಲು ಇಲ್ಲಿಂದ ನಿನ್ನ ಗೊಂಗಡಿ ಎತ್ತು

೧೦೬೭. ಗೊಂಜಾಯಿ ಮಾತಾಡು = ಕ್ಷುಲ್ಲಕ ಮಾತಾಡು, ಕೆಲಸಕ್ಕೆ ಬರದ ಮಾತಾಡು

(ಗೊಂಜಾಯಿ < ಗೋಸಾಯಿ (ಸನ್ಯಾಸಿ) ಅಥವಾ ಗುಂಜು + ಆಯು = (ಕೂದಲನ್ನು ಅಥವಾ ನಾರನ್ನೂ ಆರಿಸುವವನು) ಎಂಬ ಶಬ್ದಗಳು ಮೂಲವಾಗಿರಬಹುದೆ?)

ಪ್ರ : ಅವನ ಗೊಂಜಾಯಿ ಮಾತಿಗೆಲ್ಲ ತಲೆ ಯಾಕೆ ಕೆಡಿಸಿಕೊಳ್ತಿ?