೧೨೬೦. ಡಬ್ಬಿಲ್ಲದಿದ್ರೂ ಡಂಬವಿರು = ಹಣವಿಲ್ಲದಿದ್ದರೂ ನೆಣವಿರು, ಒಣ ಹೆಮ್ಮೆ ಇರು

(ಡಬ್ಬು (ತೆ) = ಹಣ; ಡಂಬ, ಡಂಬು = ಡಂಭಾಚಾರ, ಬೂಟಾಟಿಕೆ)

ಪ್ರ : ಗಾದೆ – ಡಂಬು ನನ್ನ ಕೇಳು

ಡಬ್ಬು ನನ್ನ ಹೆಂಡ್ರನ್ನ ಕೇಳು

೧೨೬೧. ಡರ್ರೆ‍ನ್ನು = ಜೋರಾಗಿ ಹೂಸು

ಪ್ರ : ತುಂಬಿದ ಸಭೇಲಿ ಡರ್ರೆ‍ಂದವನಿಗೆ ಛೀಮಾರಿ ಮಾಡಿದಾಗ, ಅವನು ಹೇಳಿದ: “ಡರ್ರ‍ಂಬರ್ರ‍ಂ ಭಯಂ ನಾಸ್ತಿ, ಕೊಯ್ಯಂ ಪಿಯ್ಯಂ ಮಧ್ಯಮಂ, ಡಿಸ್ಸೇಣ ಪ್ರಾಣಸಂಕಟಂ” ಆಗ ಛೀಮಾರಿ ಮಾಡಿದ ಜನ ಬಿದ್ದು ಬಿದ್ದು ನಕ್ಕರು; ಹೂಸು ವಾಸನೆ ಮರೆತು ನಗೆ ಹೂ ಸುವಾಸನೆ ಅನುಭವಿಸಿದರು.

೧೨೬೨. ಡಲ್ಲಾಗು = ಇಳಿದು ಹೋಗು, ಖದರ್ ಇಲ್ಲದಂತಾಗು

(ಡಲ್ಲು < Dull = ಇಳಿಮುಖ, ಸಪ್ಪೆ)

ಪ್ರ : ಈರುಳ್ಳಿ ಬೆಲೆ ಇದ್ದಕ್ಕಿದ್ದಂತೆ ಡಲ್ಲಾಗಿ ಹೋಯ್ತು

೧೨೬೩. ಡವಾಲಿ ಸೇವೆಯಾಗು = ಹೊಡೆತ ಬೀಳು

(ಡವಾಲಿ = ಪೇದೆಗಳು ಸೊಂಟಕ್ಕೆ ಹಾಕಿಕೊಳ್ಳುವ ಅಗಲವಾದ ಸೊಂಟಪಟ್ಟಿ ಅಥವಾ ಸೇವಕರು ಹೆಗಲ ಮೇಲಿಂದ ಎದೆಯ ಮೇಲೆ ಇಳೇ ಬೀಳುವಂತೆ ಹಾಕಿಕೊಳ್ಳುವ ಅಗಲವಾದ ದಪ್ಪ ಬಟ್ಟೆಯ ಪಟ್ಟಿ)

ಪ್ರ :ಡವಾಲಿ ಸೇವೆಗಿಂತ ಉರುಳುಸೇವೆ ಮೇಲು

೧೨೬೪. ಡಾಣಾಡಂಗುರವಾಗು = ಗುಲ್ಲೋಗುಲ್ಲಾಗು, ಹಾದಿಬೀದಿಯ ಮಾತಾಗು

(ಡಾಣಾಡಂಗುರ < ಢಣ್ + ಡಂಗುರ = ಢಣ್ ಎಂದು ಸದ್ದು ಮಾಡುವ ಡಂಗುರ)

ಪ್ರ : ಹೆಂಡ್ರು ಓಡಿ ಹೋದ ಸುದ್ದಿ ಊರೊಳಗೆಲ್ಲ ಆಗಲೆ ಡಾಣಾಡಂಗುರವಾಗಿದೆ.

೧೨೬೫. ಡಾವರವಾಗು = ಬಾಯಾರಿಕೆಯಾಗು

(ಡಾವರ = ಧಗೆ, ಝಳ)

ಪ್ರ : ಡಾವರವಾಗಿ ಎಳನೀರು ಕಿತ್ಕೊಂಡು ಕುಡಿದೆ.

೧೨೬೬. ಡಿಕಾವಾಗಿ ಕಾಣು = ಅಂದವಾಗಿ ಕಾಣು, ಎದ್ದು ಕಾಣು

(ಡಿಕಾವು < Decorative)

ಪ್ರ : ಮನೆ ಒಳ್ಳೆ ಡಿಕಾವಾಗಿ ಕಾಣ್ತದೆ.

೧೨೬೭. ಡೀಲ ಮಾಡು = ತಡ ಮಾಡು, ನಿಧಾನ ಮಾಡು

(ಡೀಲ < Delay = ನಿಧಾನ)

ಪ್ರ : ಯಾವುದೇ ಯವಾರದಲ್ಲಿ ಡೀಲ ಮಾಡೋದು ಒಳ್ಳೇದಲ್ಲ.

೧೨೬೮. ಡೇರೆ ಕೀಳು = ಜಾಗಬಿಡು, ಹೊರಡು

(ಡೇರೆ = ಗುಡಾರ, ಟೆಂಟು)

ಪ್ರ : ಈಗಿಂದೀಗಲೇ ಡೇರೆ ಕಿತ್ಕೊಂಡು ಹೋಗದಿದ್ರೆ, ನಿನ್ನ ಮೀಸೆ ಕಿತ್ತು ಕೈಗೆ ಕೊಡ್ತೀನಿ

೧೨೬೯. ಡೈನಮೆಂಟಿಕ್ಕು = ಬತ್ತಿ ಇಕ್ಕು

(ಡೈನಮೆಂಟ್ .< Dynamite = ಬಂಡೆ ಸಿಡಿಸುವ ಮದ್ದು)

ಪ್ರ : ಆ ಮನೆಗೇ ಡೈನಮೆಂಟಿಕ್ಕಿಬಿಟ್ಟ, ಮನೆಹಾಳ.

೧೨೭೦. ಡೌಲು ತೋರಿಸು = ಬಡಿದಾರ ದೊಡ್ಡಸ್ತಿಕೆ ತೋರಿಸು

(ಡೌಲು < ಡವಲು = ಒಣ ಶ್ರೀಮಂತಿಕೆ)

ಪ್ರ : ಇವನ ಡೌಲು ತೋರಿಸಿದಾಕ್ಷಣ ಜನ ಮರುಳಾಗಿಬಿಡ್ತಾರ?

೧೨೭೧. ಡಂಗಾಗು = ಸೋಜಿಗಗೊಳ್ಳು, ಸ್ತಂಭೀಭೂತನಾಗು

ಪ್ರ : ಅವನ ಉತ್ತರ ಕೇಳಿ ಡಂಗಾಗಿ ಹೋದೆ

೧೨೭೨. ಡೋಂಗಿ ಬಿಡು = ಬೂಸಿ ಬಿಡು, ಸುಳ್ಳು ಹೇಳು

ಪ್ರ : ಇವನು ಡೋಂಗಿ ಬಿಡ್ತಾನೆ ಅಂತ ಊರ್ಗೇ ಗೊತ್ತು