೧೨೭೩. ತಕ್ಕಡಿ ತೂಗು = ತೂಗಡಿಸು

ಪ್ರ : ಮುಂದೆ ಕೂತ್ಕೊಂಡು ತಕ್ಕಡಿ ತೂಗಬೇಡ, ಮನೆಗೆ ಹೋಗಿ ಮಲಕ್ಕೋ

೧೨೭೪. ತಗರಾಲೆತ್ತು = ಸಮಸ್ಯೆ ಒಡ್ಡು, ಮೊಕದ್ದಮೆ ಹೂಡು

(ತಗರಾಲು < ತಕರಾರು = ಮೊಕದ್ದಮೆ)

ಪ್ರ : ತಗರಾಲೆತ್ತಿದರೂ ಅದು ಊರ್ಜಿತ ಆಗಲ್ಲ

೧೨೭೫. ತಗಲು ಬೀಳು = ಗಂಟು ಬೀಳು, ಜೋತು ಬೀಳು

(ತಗಲು = ಸೋಕು, ಮುಟ್ಟು)

ಪ್ರ : ಅವನೊಬ್ಬ ಸಾಲದೂ ಅಂತ ಇವನೊಬ್ಬ ತಗಲು ಬಿದ್ದ

೧೨೭೬. ತಗಲೂಪಿ ಮಾಡು = ಮೋಸ ಮಾಡು

ಪ್ರ : ನೀನು ತಗಲೂಪಿ ಮಾಡಿದ್ರೆ ಅಂಗುಲಂಗುಲಕ್ಕೆ ಹುಗಲು ಹುಯ್ದುಬಿಡ್ತೀನಿ

೧೨೭೭. ತಗಾದೆ ಮಾಡು = ವರಾತ್ ಮಾಡು, ಅವಸರಿಸು, ಒತ್ತಾಯಿಸು

ಪ್ರ : ಉಗಾದಿ ಹಬ್ಬಕ್ಕೆ ಸೀರೆ ಕೊಡಿಸು ಅಂತ ಹೆಂಡ್ರು ತಗಾದೆ ಮಾಡ್ತಾ ಅವಳೆ.

೧೨೭೮. ತಟ ತಟ ಅನ್ನು = ಜಿವ್ ಜಿವ್ ಎಂದು ದುಡಿಯತೊಡಗು

ಪ್ರ : ಗಾಯ ಕೀವು ತುಂಬಿಕೊಂಡು ತಟ ತಟ ಅಂತಾ ಅದೆ.

೧೨೭೯. ತಟವಟ ಮಾಡು = ವಂಚನೆ ಮಾಡು

(ತಟವಟ < ಅಟ ಮಟ = ಮೋಸ)

ಪ್ರ : ತಟ ತಟ ತಗಲೂಪಿ ಮಾಡೋದ್ರಲ್ಲಿ ಅವನು ಎತ್ತಿದ ಕೈ.

೧೨೮೦. ತಣವಾಣಿ ಗಟವಾಣಿ ಜಟಾಪಟಿಗೆ ಬೀಳು = ಸುಳ್ಳು ಬುರುಕಿ ಬಾಯಿಬಡಿಕಿ ಜಗಳಕ್ಕೆ ಬೀಳು

(ತಟವಾಣಿ = ಸುಳ್ಳು ಬುರುಕಿ ; ಗಟವಾಣಿ = ಬಾಯ್ಬಡಿಕೆ, ಬಜಾರಿ ; ಜಟಾಪಟಿ = ಜಗಳ)

ಪ್ರ : ತಟವಾಣಿ ಗಟವಾಣಿ ಜಟಾಪಟಿಗೆ ಬಿದ್ರೆ ಗಂಡಸರಿಗೆ ಗಟಾರವೇ ಗತಿ

೧೨೮೧. ತಟಾಯಿಸು = ದಡ ಸೇರಿಸು, ಗುರಿ ಮುಟ್ಟಿಸು

(ತಟಾಯಿಸು < ತಟ + ಹಾಯಿಸು = ದಡಕ್ಕೆ ಸೇರಿಸು)

ಪ್ರ : ಏನೋ ಆ ನಮ್ಮಪ್ಪ ದೇವರಾಗಿ ಬಂದು ನಮ್ಮನ್ನು ತಟಾಯಿಸಿದ

೧೨೮೨. ತಟ್ಟಾಗು = ನಿಶ್ಯಕ್ತಿಯಿಂದ ಸಮತೂಕ ತಪ್ಪಿ ನಡೆ, ಕೃಶವಾಗಿ ತಪ್ಪು ಹೆಜ್ಜೆ ಇಡು

ಪ್ರ : ಗಾದೆ – ತಟ್ಟಾಡೋನ್ನ ಅಟ್ಟಾಡಿಸಿಕೊಂಡು ಹೊಡೆದ

೧೨೮೩. ತಟ್ಟ ಕಳಿಸು = ಹೊಡೆದು ಕಳಿಸು

(ತಟ್ಟು = ತಾಡಿಸು, ಹೊಡೆ)

ಪ್ರ : ತಕರಾರು ಎತ್ತಿದಾಗ ಕಪ್ಪಾಳಕ್ಕೆ ತಟ್ಟಿ ಕಳಿಸಬೇಕಾಗಿತ್ತು

೧೨೮೪. ತಟ್ಟಿಸು = ಸಾಗು ಹುಯ್ಯಿ, ಹರಿತಗೊಳಿಸು

ವ್ಯವಸಾಯದ ಉಪಕರಣಗಳಾದ ಸನಿಕೆ, ಕುಡುಗೋಲು, ಹಾರೆ, ಪಿಕಾಸಿ ಮೊದಲಾದವುಗಳನ್ನು ಮೊಂಡದಾಗ ಕಮ್ಮಾರನ ಬಳಿಗೆ ಕೊಂಡು ಹೋಗಿ ತಟ್ಟಿಸುತ್ತಾರೆ. ಅಂದರೆ ಕುಲುಮೆ ಒಲೆಯಲ್ಲಿ ಕೆಂಪಾಳ ಕಾಯಿಸಿ ಸುತ್ತಿಗೆಯಿಂದ ಬಡಿದು ಗುಂಪು ಗೊಳಿಸುತ್ತಾರೆ. ಆ ಹಿನ್ನೆಲೆಯಿಂದ ಮೂಡಿದ ನುಡಿಗಟ್ಟಿದು

ಪ್ರ : ವ್ಯವಸಾಯದ ಉಪಕರಣಗಳನ್ನು ಇವತ್ತು ತಟ್ಟಿಸದಿದ್ದರೆ ನಾಳೆಯ ಕೆಲಸ ಕೆಡ್ತದೆ.

೧೨೮೫. ತಡಕು = ಹುಡುಕು,

ತಡಕುವುದಕ್ಕೆ ಕಣ್ಣ ನೋಟ ಬೇಕಿಲ್ಲ ಕೈ ಆಟ ಸಾಕು

ಪ್ರ : ಗಾದೆ – ಬದುಕಿದ ಮನೇಲಿ ತಡಕಿದರೆ ಇರಲ್ವ ?

೧೨೮೬. ತಡಕಾಟವಾಗು = ಹೊಟ್ಟೆ ಪಾಡಿಗಾಗಿ ಪರದಾಡುವಂತಾಗು, ಬಡತನ ಆವರಿಸು

ಪ್ರ : ನನಗೇ ತಡಕಾಟವಾಗಿರುವಾಗ ಇವನ ಹುಡುಕಾಟ ಬೇರೆ.

೧೨೮೭. ತಡಕಾಡು = ಕಣ್ಣು ಕಾಣದಿರು, ವೃದ್ಧಾಪ್ಯ ಆವರಿಸು

ಪ್ರ : ನಾನೇ ತಡಕಾಡುವಾಗ ಹೊಲಕಾಡು ಕಟ್ಕೊಂಡೇನಾಗಬೇಕು?

೧೨೮೮. ತಡಕಿ ನೋಡಿಕೊಳ್ಳೋಂಗೆ ಗಡಿಸು = ಮುಟ್ಟಿ ನೋಡಿಕೊಳ್ಳುವಂತೆ ಹೊಡಿ

(ತಡಕಿ = ಮುಟ್ಟಿ ; ಗಡಿಸು < ಗಟ್ಟಿಸು < ಘಟ್ಟಿಸು = ಹೊಡಿ)

ಪ್ರ : ತುಡುಗು ಮುಂಡೇವಕ್ಕೆ ತಡಕಿ ನೋಡಿಕೊಳ್ಳೋಂಗೆ ಗಡಿಸಿದರೆ ಬುದ್ಧಿ ಬರೋದು

೧೨೮೯. ತಡಕೊಳ್ಳು = ಸಹಿಸಿಕೊಳ್ಳು

(ತಡಕೊಳ್ಳು < ತಡೆದುಕೊಳ್ಳು = ಸಹಿಸಿಕೊಳ್ಳು)

ಪ್ರ : ಗಾದೆ – ಬಡ್ಕೊಂಡು ಬಾರುದೆಗೆಯೋದ್ಕಿಂತ ತಡ್ಕೊಂಡು ತಲೆದಡವೋದು ಮೇಲು

೧೨೯೦. ತಡಬಡಾಯಿಸು = ತಬ್ಬಿಬ್ಬುಗೊಳ್ಳು, ಬೆಬ್ಬೆಬ್ಬು ಎನ್ನು

ಪ್ರ : ನಾವು ವಾಸ್ತವ ಸಂಗತಿಯನ್ನು ಕುರಿತಂತೆ ಪ್ರಶ್ನೆಯ ಮೇಲೆ ಪ್ರಶ್ನೆ ಹಾಕಿದಾಗ ಅವನು ತಡಬಡಾಯಿಸಿದ.

೧೨೯೧. ತಡಿ ಇಲ್ಲದಿರು = ಶಕ್ತಿ ಇಲ್ಲದಿರು, ಹೋರಾಡುವ ತಾಕತ್ತಿಲ್ಲದಿರು

(ತಡಿ = ಜೀನು, ಕುದುರೆಯ ಮೇಲೆ ಹಾಕುವ ಹಲ್ಲಣ) ಕುದುರೆಯ ಮೇಲೆ ಹಾಕುವ ತಡಿಯೇ ಇಲ್ಲದಿದ್ದಾಗ, ಕಣಕ್ಕಿಳಿದು ಕದನ ಮಾಡುವುದು ಹೇಗೆ? ಎಂಬುದೇ ಸಜ್ಜು, ಶಕ್ತಿ ಇಲ್ಲದಿರುವುದನ್ನು ಸೂಚಿಸುತ್ತದೆ.

ಪ್ರ : ಗಾದೆ – ತಡಿ ಇಲ್ಲದೋನು ಏನು ಕಡಿದಾನು ?

೧೨೯೨. ತಡೆತ ಬರು = ಬಾಳಿಕೆ ಬರು

ಪ್ರ : ಈ ಬಟ್ಟೆ ಹೆಚ್ಚು ದಿನ ತಡೆತ ಬರಲ್ಲ

೧೨೯೩. ತಡೆ ಮಾಡು = ಮಾಟಮಂತ್ರದಿಂದ ಆಗುವ ಕೆಲಸ ಆಗದಂತೆ ಮಾಡು.

ವಾಮಾಚಾರದ ಮಾಟಮಂತ್ರಗಾರರು ‘ತಡೆ’ ಮಾಡುವ ಹಾಗೂ ‘ತಡೆ’ ಒಡೆಯುವ ಆಚರಣೆಗಳ ಉಪದೇಶವನ್ನು ಜನಜೀವನದಲ್ಲಿ ತುಂಬಿ, ಅದರಿಂದ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾ, ಜನರನ್ನು ಮೌಢ್ಯಾನುಯಾಯಿಗಳನ್ನಾಗಿ ಮಾಡಿದ್ದಾರೆ. ಅಂಥ ಮೌಢ್ಯಾಚರಣೆಯ ಪಳೆಯುಳಿಕೆ ಈ ನುಡಿಗಟ್ಟು.

ಪ್ರ : ತಡೆ ಮಾಡಿಸಿದರೆ ಅವನ ಆಟ ಏನೂ ನಡೆಯಲ್ಲ ಎಂದು ಕಿವಿಯೂದಿದ ತಡೆಗಾರ

೧೨೯೪. ತಡೆ ಹಾಕು = ಅಡ್ಡಗಟ್ಟೆ ಹಾಕು, ಮುಂದುವರಿಯುವಂತೆ ಮಾಡು

(ತಡೆ = ಅಡ್ಡಗಟ್ಟೆ)

ಪ್ರ : ಪ್ರತಿಯೊಂದಕ್ಕೂ ಹಿಂಗೆ ತಡೆ ಹಾಕ್ತಾ ಹೋದ್ರೆ, ಅಡೆ ಹಾಕಿದ ಹಣ್ಣಾಗ್ತೀವಿ ಅಷ್ಟೆ.

೧೨೯೫. ತಣ್ಣಗಾಗು = ಜೋರು ನಿಲ್ಲು, ಅಬ್ಬರ ಅಡಗು

ಪ್ರ : ಹತ್ತಾರು ಕಡೆಯಿಂದ ಬಿಸಿ ಮುಟ್ಟಿ ಈಗ ತಣ್ಣಗಾಗಿದ್ದಾನೆ

೧೨೯೬. ತಣ್ಣಗಿರು = ಸುಖಶಾಂತಿಯಿಂದಿರು, ನೆಮ್ಮದಿಯಿಂದಿರು

ಪ್ರ : ನಿಮ್ಮ ಮಕ್ಳು ಮರಿ ತಣ್ಣಗಿರಲಿ ಅಂತ ಆ ಭಗವಂತನ್ನ ಬೇಡಿಕೊಳ್ತೀನಿ.

೧೨೯೭. ತಣಿ ಇಲ್ಲದಿರು = ಶಕ್ತಿಯಿಲ್ಲದಿರು

(ತಣಿ < ತಡಿ = ದಡ, ತಡೆದುಕೊಳ್ಳುವ ಶಕ್ತಿ)

ಪ್ರ : ತಣಿ ಇಲ್ಲದೋರು ದಣಿ ಸೇವೇನ ದನಿ ಎತ್ತದೆ ಮಾಡ್ತಾರೆ.

೧೨೯೮. ತಣ್ಣೀರೆರಚು = ನಿರುತ್ಸಾಹ ಗೊಳಿಸು, ಹುಮ್ಸಸ್ಸು ಕೆಡಿಸು

ಪ್ರ : ಆಗೋ ಕೆಲಸಕ್ಕೆಲ್ಲ ತಣ್ಣೀರೆರಚಿ, ಕಣ್ಣೀರು ಬರಿಸ್ತಾನೆ ಕಟುಕ

೧೨೯೯. ತತಾತೂತಾಗು = ರಂದ್ರಮಯವಾಗು

(ತತಾತೂತಾಗು < ತೂತೋತೂತಾಗು = ತೂತುಗಳ ಸರಮಾಲೆಯಾಗು)

ಪ್ರ : ಮಳೆ ಬರುವಾಗ ತತಾತೂತಾದ ಕೊಡೇನ ಹಿಡಕೊಂಡ್ರೆಷ್ಟು ಹಿಡಕೊಳ್ಳದಿದ್ರೆಷ್ಟು?

೧೩೦೦. ತದಕಿ ಕಳಿಸು = ಹೊಡೆದು ಕಳಿಸು

(ತದುಕು = ಹೊಡೆ)

ಪ್ರ : ಬಾಯಿ ಬಾಯಿ ಬಿಡೋ ಹಂಗೆ ತದಕಿ ಕಳಿಸಿದ್ದೀನಿ ಇವತ್ತವನಿಗೆ.

೧೩೦೧. ತನ್ನ ಕಾಲ ಮೇಲೆ ನಿಲ್ಲು = ಸ್ವಾವಲಂಬಿಯಾಗಿ ಬದುಕು

ಪ್ರ :ಅನ್ಯರ ಹಂಗಿಲ್ಲದೆ ತನ್ನ ಕಾಲ ಮೇಲೆ ತಾನು ನಿಂತಾಗಲೇ ಮುನುಷ್ಯನಿಗೆ ನೆಮ್ಮದಿ

೧೩೦೨. ತನ್ನ ಕಾಲ ಮೇಲೆ ತಾನೇ ಕಲ್ಲು ಎತ್ತಿ ಹಾಕಿಕೊಳ್ಳು = ತನ್ನ ಹಿತಕ್ಕೆ ತಾನೇ ಕಂಟಕ ತಂದ್ಕೊಳ್ಳು.

ಪ್ರ : ಅಪ್ಪಂಥೋನು ಅಂತ ಅವನ್ನ ನಂಬಿ, ತನ್ನ ಕಾಲ ಮೇಲೆ ತಾನೇ ಕಲ್ಲು ಎತ್ತಿ ಹಾಕಿಕೊಂಡ

೧೩೦೩. ತನ್ನ ಕಲ್ಲು ತನ್ನ ತಿನ್ನು = ತನ್ನ ಹೊಟ್ಟೆಕಿಚ್ಚು ತನ್ನನ್ನೇ ಬಲಿ ತೆಗೆದುಕೊಳ್ಳು

(ಕುಲ್ಲು = ಹೊ‌ಟ್ಟೆ ಉರಿಯಿಂದ ಒಳಗೇ ಕುದಿಯುವುದು, ಬೇಯುವುದು)

ಪ್ರ : ಗಾದೆ – ಅರಗು ಬಂಗಾರ ತಿಂತು

ತನ್ನ ಕುಲ್ಲು ತನ್ನ ತಿಂತು

೧೩೦೪. ತನ್ನ ಬೆನ್ನು ತಾನೇ ತಟ್ಟಿಕೊಳ್ಳು = ಸ್ವಪ್ರಶಂಸೆ ಮಾಡಿಕೊಳ್ಳು

ಪ್ರ : ಅನ್ಯರು ಬೆನ್ನು ತಟ್ಟೋ ಹಾಗೇ ನಡೆದುಕೊಳ್ಳಬೇಕೇ ವಿನಾ ತನ್ನ ಬೆನ್ನು ತಾನೇ ತಟ್ಟಿಕೊಳ್ಳೋಕೆ ಹೋಗಬಾರ್ದು

೧೩೦೫. ತನ್ನ ಬೆನ್ನು ತನಗೆ ಕಾಣದಿರು = ತನ್ನ ತಪ್ಪು ತನಗೆ ಕಾಣದಿರು

ಪ್ರ : ಗಾದೆ – ತನ್ನ ಬೆನ್ನು ತನಗೆ ಕಾಣಲ್ಲ

೧೩೦೬. ತನ್ನ ಹೆಜ್ಜೆ ತನಗೆ ಕಾಣದಿರು = ಡೊಳ್ಳು ಹೊಟ್ಟೆ ಬಂದಿರು

ಪ್ರ : ಕಂಡೋರ ಗಂಟು ನುಂಗಿ ನುಂಗಿ ಹೊಟ್ಟೆ ಗುಡಾಣ ಆಗಿ ತನ್ನ ಹೆಜ್ಜೆ ತನಗೆ ಕಾಣಲ್ಲ.

೧೩೦೭. ತನಿ ಎರೆ = ನಾಗರಿಗೆ ಹಾಲೆರೆ, ನಾಗರ ಪೂಜೆ ಮಾಡು

ಪ್ರ : ಹುತ್ತಕ್ಕೆ ತನಿ ಎರೆದರೆ, ಹಾಲು ನಾಗರ ಪಾಲಾಗುವುದೆ, ಹುತ್ತದ ಪಾಲಾಗುವುದೆ?

೧೩೦೮. ತನುವಾಗಿರು = ಅನುಕೂಲವಾಗಿರು, ಶ್ರೀಮಂತವಾಗಿರು

(ತನುವು = ತಂಪು, ಶ್ರೀಮಂತಿಕೆ)

ಪ್ರ : ಕುಳ ತನುವಾಗಿದ್ದಾನೆ, ನಂಟಸ್ತನ ಬೆಳೆಸಬಹುದು.

೧೩೦೯. ತಪ್ಪಿಸಿ ಬರು = ಬಿಟ್ಟು ಬರು, ಗೊತ್ತಾಗದಂತೆ ಬರು

ಪ್ರ : ನಾನೂ ಬರ್ತೀನಿ ಅಂತ ಮಗು ಪಟ್ಟು ಹಿಡಿದಿತ್ತು, ತಪ್ಪಿಸಿ ಬಂದೆ

೧೩೧೦. ತಬ್ಬು ಗಾತರವಿರು = ದಪ್ಪವಾಗಿರು, ಧಡೂತಿಯಾಗಿರು

(ತಬ್ಬು = ತೆಕ್ಕೆ, ಎರಡು ತೋಳುಗಳಿಂದ ಬಳಸಿ ಹಿಡಿಯುವಷ್ಟು; ಗಾತರ < ಗಾತ್ರ = ದಪ್ಪ)

ಪ್ರ : ತಬ್ಬುಗಾತ್ರ ಇರೋಳ್ನ ತಂದು ಈ ತಟ್ಟಾಡೋ ತಬ್ಬಲಿಗೆ ಕಟ್ತೀಯ?

೧೩೧೧. ತಬ್ಬು, ಇಲ್ಲ, ದಬ್ಬು = ಸಾಕು, ಇಲ್ಲ, ನೂಕು

ಪ್ರ : ಈ ಪರದೇಸಿಯಾ ತಬ್ಬು, ಇಲ್ಲ, ದಬ್ಬು – ಅದು ನಿನಗೆ ಬಿಟ್ಟದ್ದು

೧೩೧೨. ತಮಟೆ ಕಾಯಿಸು = ಬೆತ್ತದಿಂದ ಕುಂಡಿಯ ಮೇಲೆ ಪಟಪಟನೆ ಹೊಡಿ.

ತಮಟೆಯ ನಾದ ಚೆನ್ನಾಗಿ ಬರಬೇಕಾದರೆ, ಬೆಂಕಿ ಹಚ್ಚಿ, ಅದರ ಕಾವಿನಲ್ಲಿ ತಮಟೆಯನ್ನು ಕಾಯಿಸುತ್ತಾರೆ. ಹದಕ್ಕೆ ಬಂದಿದೆಯೋ ಇಲ್ಲವೋ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು ತಮಟೆಗೆ ತಮ್ಮ ಕೈಯಲ್ಲಿರುವ ಬಡಿಯುವ ಕಡ್ಡಿಯಿಂದ ಟಣಟಣ ಎಂದು ಬಡಿದು ನೋಡುತ್ತಾರೆ. ಶಾಲೆಗಳಲ್ಲಿ ಉಪಾಧ್ಯಾಯರು ವಿದ್ಯಾರ್ಥಿಗಳ ತಪ್ಪಿಗಾಗಿ ಬೆತ್ತದಿಂದ ಕುಂಡಿಯ ಮೇಲೆ ಹೊಡೆಯಬೇಕಾದಾಗ ತಮಟೆಕಾಯಿಸುವಾಗಿನ ಕ್ರಿಯೆಯನ್ನು ಸಾಭಿನಯಗೊಳಿಸುವಂತೆ ಈ ನುಡಿಗಟ್ಟನ್ನು ಬಳಸುತ್ತಾರೆ.

ಪ್ರ : ನಿಮಗೆ ತಮಟೆ ಕಾಯಿಸದಿದ್ರೆ, ಓದಿಕೊಂಡು ಬರೋದು ಮರೆತು ಹೋಗ್ತದೆ.

೧೩೧೩. ತಮ್ಮನಿಸಿಕೊಳ್ಳು = ಸುಖವಾಗಿರು, ಧರ್ಮಿಗಳಾಗಿ ಬದುಕು

(ತಮ್ಮನಿಸಿಕೊಳ್ಳು < ದಮ್ಮನಿಸಿಕೊಳ್ಳು < ಧರ್ಮ + ಅನ್ನಿಸಿಕೊಳ್ಳು = ಧರ್ಮ ಪಾಲಕರು ಎನ್ನಿಸಿಕೊಳ್ಳು)

ಪ್ರ : ಯಾಸೆಟ್ಟಗೋ ಬಿಡು, ತಮ್ಮನಿಸಿಕೊಳ್ಳಲಿ

೧೩೧೪. ತಮ್ಮ ತಮ್ಮ ತಿಗ ತೊಳಕೊಳ್ಳು = ಬೇರೆಯವರ ವಿಷಯಕ್ಕೆ ಬಾಯಿ ಹಾಕದಿರು.

ಪ್ರ : ತಮ್ಮ ತಮ್ಮ ತಿಗ ತಾವು ತೊಳಕೊಳ್ಳೋದು ಬಿಟ್ಟು, ಬೇರೆಯವರದನ್ನು ತೊಳೆಯೋಕೆ ಬರ್ತಾರೆ !

೧೩೧೫. ತಮಾಸೆ ಅಮಾಸೆಯಾಗು = ಸರಸ ವಿರಸವಾಗು, ಹಾಸ್ಯ ವೈಮನಸ್ಯವಾಗು

(ತಮಾಸೆ < ತಮಾಷೆ = ನಗಸಾರ, ಹಾಸ್ಯ; ಅಮಾಸೆ < ಅಮಾವಾಸ್ಯೆ = ಕತ್ತಲು)

ಪ್ರ : ತಮಾಸೆ ಅಮಾಸೆ ಆಗ್ತದೆ, ತಾವೆಲ್ಲ ದಯವಿಟ್ಟು ದೇವರಾಗಿ

೧೩೧೬. ತರಕಟಾಲ್ ಕಟ್ಟಿಕೊಳ್ಳು = ಅಶಕ್ತವನ್ನು ಮದುವೆಯಾಗು

(ತರಕಟಾಲ್ < ತರ + ಕೆಟ್ಟ + ಆಳು ? = ಸರಿ ತಪ್ಪಿನ ಮನುಷ್ಯ, ಅಯೋಗ್ಯ)

ಪ್ರ : ಇಂಥ ತರಕಟಾಲ್ ಕಟ್ಕೊಂಡು ಪಡಿಪಾಟ್ಲು ಬೀಳೋ ಗತಿ ಬಂತು ಆ ಹುಡುಗಿಗೆ

೧೩೧೭. ತರಗಿನ ಗಾಡಿ ಬಿಡು = ಬೊಗಳೆ ಬಿಡು

(ತರಗು = ಒಣಗಿದ ಎಲೆ ಸೊಪ್ಪುಸೆದೆ; ಗಾಡಿ = ರೈಲು)

ಪ್ರ : ಇಂಥ ತರಗಿನ ಗಾಡಿ ಬಿಡೋದ್ರಲ್ಲಿ ಎಲ್ಲರ್ನೂ ಹಿಂದಕ್ಕೆ ಹಾಕ್ತಾನೆ.

೧೩೧೮. ತರಗೆಲೆಗೂ ಗೋಟಡಿಕೆಗೂ ಹೊಂದಿಕೆಯಾಗು = ಇಬ್ಬರ ಸ್ವಭಾವಕ್ಕೂ ಹೊಂದಾಣಿಕೆಯಾಗು

ಪ್ರ : ಚಿಗುರೆಲೆಗೆ ಕಳಿಯಡಕೆ ಹೊಂದಿಕೆಯಾದ್ರೆ, ತರಗೆಲೆಗೆ ಗೋಟಡಿಕೆ ಹೊಂದಿಕೆಯಾಗ್ತದೆ

೧೩೧೯. ತರದೂದು ಮಾಡು = ಅವಸರ ಮಾಡು, ತರಾತುರಿ ಮಾಡು

ಪ್ರ : ತರದೂದು ಮಾಡಿ ಕೆಲಸ ಮುಗುಸಿದ್ದರಿಂದ ಎಲ್ಲರಿಗೂ ನಿರುಮ್ಮಳ

೧೩೨೦. ತರವಲ್ಲದಿರು = ಯೋಗ್ಯವಲ್ಲದಿರು, ಸರಿಯಲ್ಲದಿರು

ಪ್ರ : ನಾಲ್ಕು ಜನಕ್ಕೆ ಹೇಳೋನಾಗಿ ನೀನಿಂಥ ಕೆಲಸ ಮಾಡಿದ್ದು ತರವಲ್ಲ

೧೩೨೧. ತರಾಟೆಗೆ ತೆಗೆದುಕೊಳ್ಳು = ಪ್ರಶ್ನೆಗೆ ಮೇಲೆ ಪ್ರಶ್ನೆ ಹಾಕಿ ಮುಖದಲ್ಲಿ ನೀರಿಳಿಸು

ಪ್ರ : ನಾನು ತರಾಟೆಗೆ ತೆಗೆದುಕೊಂಡಾಗ, ಅವನ ಮಾತಿನ ಭರಾಟೆ ತಣ್ಣಗಾಯ್ತು

೧೩೨೨. ತರಾಣ ಇಲ್ಲದಿರು = ಶಕ್ತಿಯಿಲ್ಲದಿರು

(ತರಾಣ < ತ್ರಾಣ = ಶಕ್ತಿ)

ಪ್ರ : ತರಾಣ ಇಲ್ಲದಿರೋವಾಗ, ಹೆಂಡ್ರು ಮಕ್ಕಳ ಸಿಂಡ್ರಿಸಿಕೊಂಡ ಮುಖ ನೋಡೋದ್ಕಿಂತ ಪರಾಣ ಬಿಡೋದೇ ವಾಸಿ.

೧೩೨೩. ತರಾವರಿ ರಖಂ ತೋರಿಸು = ಬಗೆಬಗೆಯ ಮಾದರಿ ತೋರಿಸು

(ತರಾವರಿ = ಬಗೆಬಗೆಯ ; ರಖಂ = ಮಾದರಿ)

ಪ್ರ : ಮಾರ್ವಾಡಿ ತರಾವರಿ ರಖಂ ತೋರಿಸ್ತಾ, ದೇಶಾವರಿ ನಗೆ ನಗ್ತಾ ಬರೋಬರಿ ಬೆಲೇನೇ ತಗೊಳ್ತಾನೆ

೧೩೨೪. ತರಿತರಿಯಾಗಿರು = ಒಡೊಕೊಡಕಾಗಿರು, ಪೂರ್ತಿ ನುಣ್ಣಗಿರದಿರು

ಪ್ರ : ಗಾದೆ : ತರಿತರಿಯಾಗಿದ್ರೆ ರೊಟ್ಟಿಗೆ ಚೆಂದ

ನುಣ್ಣುನುಣ್ಣಗಿದ್ರೆ ದೋಸೆಗೆ ಚೆಂದ

೧೩೨೫. ತರುಮಿಕೊಂಡು ಹೋಗು = ಒಗ್ಗೂಡಿಸಿ ಓಡಿಸಿಕೊಂಡು ಹೋಗು, ದೂಡಿಕೊಂಡು ಹೋಗು

(ತರುಮು < ತರುಬು < ತರುಂಬು = ದೂಡು, ಓಡಿಸು)

ಪ್ರ : ಹೊಲದಲ್ಲಿದ್ದ ದನಗಳನ್ನೆಲ್ಲ ತರುಮಿಕೊಂಡು ಹೋಗಿ ಗೋಮಾಳದತ್ತ ಅಟ್ಟಿದ.

೧೩೨೬. ತರೆದು ಗುಡ್ಡೆ ಹಾಕು = ಕಿತ್ತು ರಾಶಿ ಹಾಕು

(ತರೆ = ಕೀಳು, ಗುಡ್ಡೆ = ರಾಶಿ)

ಪ್ರ : ನೀನು ತರೆದು ಗುಡ್ಡೆ ಹಾಕಿರೋದು, ಕಡಿದು ಕಟ್ಟೆ ಹಾಕಿರೋದು ಕಾಣಲ್ವ ? ನಮ್ಮ ಕೆಲಸ ಬಿಟ್ಟು ಯಾರದ್ದನ್ನು ತರೆಯೋಕೆ ಹೋಗಿದ್ದೆ, ಬೊಗಳು

೧೩೨೭. ತಲಾತಟ್ಟಿಗೆ ಮಾತಾಡು = ಮನೆಯವರೆಲ್ಲ ನಾಲಗೆ ಅಲ್ಲಾಡಿಸು

(ತಲಾತಟ್ಟಿಗೆ = ಪ್ರತಿಯೊಬ್ಬರೂ)

ಪ್ರ : ಮನೇಲಿ ಹುಟ್ಟಿದ ಹುಳಹುಪ್ಪಟೆ ಎಲ್ಲ ತಲಾತಟ್ಟಿಗೆ ಮಾತಾಡಿದ್ರೆ ಸಮಸ್ಯೆ ಬಗೆ ಹರೀತದ?

೧೩೨೮. ತಲಾಸು ಮಾಡು = ಪತ್ತೆ ಹಚ್ಚು

(ತಲಾಸು < ತಲಾಷು (ಹಿಂ) = ಶೋಧನೆ)

ಪ್ರ : ಅವನಿರೋ ಜಾಗ ತಲಾಸು ಮಾಡಿ, ಅವನೊಂದಿಗೆ ಮಾತಾಡಿ, ಆಮೇಲೆ ನಿಮ್ಮಿಬ್ಬರ ಜಗಳ ಖುಲಾಸ್ ಮಾಡಿದ್ರೆ ಆಯ್ತು ತಾನೆ?

೧೩೨೯. ತಲುಪಿದ್ದಕ್ಕೆ ರಶೀತಿ ಬರು = ತೇಗು ಬರು, ಊಟ ಹೊಟ್ಟೆ ಸೇರಿದ್ದಕ್ಕೆ ಉತ್ತರ ಬರು

ಪ್ರ : ನೀವು ಹಾಕಿದ ಊಟ ತಲುಪಿದ್ದಕ್ಕೆ ರಶೀದಿ ಬಂತು.

೧೩೩೦. ತಲೆ ಅಲ್ಲಾಡಿಸು = ಉಹ್ಞುಂ ಎನ್ನು, ಇಲ್ಲವೆನ್ನು

ಪ್ರ : ಸನ್ನೆಯಲ್ಲಿ ಕೆಲಸ ಆಯ್ತ ಅಂದಾಗ, ತಲೆ ಅಲ್ಲಾಡಿಸಿದ

೧೩೩೧. ತಲೆ ಅಣ್ಣೆಕಲ್ಲಾಡು = ಚೆಂಡಾಡು

ಸಣ್ಣ ಕಲ್ಲುಗಳನ್ನು ಅಂಗೈಯಲ್ಲಿ ಹಿಡಿದುಕೊಂಡು ಮೇಲಕ್ಕೆಸೆದು, ಮುಂಗೈ ಒಡ್ಡಿ, ಅದರ ಮೇಲೆ ನಿಂತವುಗಳನ್ನು ಮತ್ತೆ ಮೇಲಕ್ಕೆ ಚಿಮ್ಮಿ ಆತುಕೊಳ್ಳುವ ಜನಪದ ಆಟಕ್ಕೆ ಅಣ್ಣೆಕಲ್ಲಾಟ ಎನ್ನುತ್ತಾರೆ.

ಪ್ರ : ಊರ ಜನರ ತಲೆಗಳನ್ನು ಅಣ್ಣೆಕಲ್ಲು ಮಾಡಿಕೊಂಡು ಆಟ ಆಡಿಬಿಟ್ರು ರೌಡಿಗಳು.

೧೩೩೨. ತಲೆ ಈಡುಗಾಯಾಗು = ಚುಪ್ಪಾನೂಚೂರಾಗು, ಹೋಳಾಗು

(ಈಡುಗಾಯಿ < ಇಡುಗಾಯಿ = ಹೊಡೆದ, ಕುಕ್ಕಿದ ಕಾಯಿ ; ಇಡು < ಇಕ್ಕು = ಕುಕ್ಕು, ಹೊಡಿ) ಸಾಮಾನ್ಯವಾಗಿ ದೇವರ ಉತ್ಸವದಲ್ಲಿ, ಮದುವೆಯ ಹೆಣ್ಣುಗಂಡುಗಳ ಮೆರವಣಿಗೆಯಲ್ಲಿ ತೆಂಗಿನ ಕಾಯನ್ನು ಮುಖದಿಂದ ಕೆಳಕ್ಕೆ ನೀವಳಿಸಿ, ಕಲ್ಲಿನ ಮೇಲೆ ಈಡುಗಾಯಿ (< ಇಡುಗಾಯಿ) ಹೊಡೆಯುತ್ತಾರೆ. ಕಾಯಿ ಅಡ್ಡಡ್ಡ ಬೀಳುವಂತೆ ಸೆಣೆದರೆ ಅದು ಕೇವಲ ಎರಡು ಹೋಳಾಗುತ್ತದೆ. ಅದು ನಿಜವಾದ ಅರ್ಥದಲ್ಲಿ ಈಡುಗಾಯಿ ಎನ್ನಿಸಿಕೊಳ್ಳುವುದಿಲ್ಲ. ತೆಂಗಿನಕಾಯಿಯ ತಳಭಾಗದ ಅಂಡನ್ನು ಕೆಳಮುಖ ಮಾಡಿಕೊಂಡು ಸೆಣೆದರೆ ಕಾಯಿ ಚುಪ್ಪಾನುಚೂರಾಗುತ್ತದೆ. ಆಗ ಜನರು, ಹುಡುಗರು ಆ ಕಾಯಿಚೂರುಗಳಿಗೆ ಮುಗಿ ಬೀಳುತ್ತಾರೆ. ಅದು ನಿಜವಾದ ಈಡುಗಾಯಿ ಒಡೆಯುವ ರೀತಿ. ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಜನರ ತಲೆಗಳೇ ಈಡುಗಾಯಾದಾಗ ದೇಶದ ಗತಿ ಏನು?

೧೩೩೩. ತಲೆ ತಲೆ ಉರುಳಿ ಹೋಗು = ಸಾಲು ಹೆಣ ಬೀಳು

ಪ್ರ : ಎರಡು ಕೋಮುಗಳ ಘರ್ಷಣೆಯಲ್ಲಿ ತಲೆತಲೆ ಉರುಳಿ ಹೋದವು

೧೩೩೪. ತಲೆ ಉಳಿಸಿಕೊಳ್ಳು = ಪ್ರಾಣ ಉಳಿಸಿಕೊಳ್ಳು, ಗಂಡಾಂತರದಿಂದ ಪಾರಾಗು

ಪ್ರ : ಕೊಲೆಗಡುಕರಿಂದ ತಲೆ ಉಳಿಸಿಕೊಂಡದ್ದೇ ನನ್ನ ಪುಣ್ಯ

೧೩೩೫. ತಲೆ ಎತ್ತದಂತೆ ಮಾಡು = ಬಲಿ ಹಾಕು, ನೆಲ ಕಚ್ಚುವಂತೆ ಮಾಡು

ಪ್ರ : ಅವನು ತಲೆ ಎತ್ತದಂತೆ ಮಾಡದಿದ್ರೆ ನಾನು ನಮ್ಮಪ್ಪನಿಗೆ ಹುಟ್ಟಿದೋನೇ ಅಲ್ಲ

೧೩೩೬. ತಲೆ ಒಗೆ = ತಿರಸ್ಕರಿಸು, ಅಸಮ್ಮತಿಸು

ಪ್ರ : ನಮ್ಮ ಗುಂಪಿಗೆ ಸೇರಕೋ ಅಂದಿದ್ಕೆ ತಲೆ ಒಗೆದುಬಿಟ್ಟ

೧೩೩೭. ತಲೆ ಒಡ್ಡು = ಹೊಣೆ ಹೊರು, ಬಲಿಯಾಗು

(ಒಡ್ಡು = ಚಾಚು)

ಪ್ರ : ಎಲ್ಲಕ್ಕೂ ಅವನೊಬ್ಬನೇ ತಲೆ ಒಡ್ಡೋದು ಅನ್ಯಾಯ

೧೩೩೮. ತಲೆ ಒಡೆತ ತಡೆಯಲಾಗದಿರು = ತಲೆ ನೋವು ಸಹಿಸಲಾಗದಿರು

(ಒಡೆತ = ನೋವು, ಪೋಟು)

ಪ್ರ : ತಲೆ ಒಡೆತ ತಡೀಲಾರದೆ ಸಾಯ್ತಾ ಇರುವಾಗ, ಇವನು ಕಡತ ಬಿಚ್ಚೋಕೆ ಬಂದ

೧೩೩೯. ತಲೆ ಓಡಿಸು = ಬುದ್ಧಿ ಉಪಯೋಗಿಸು

(ತಲೆ = ಮಿದುಳು, ಬುದ್ಧಿ)

ಪ್ರ : ಅಂತೂ ತಲೆ ಓಡಿಸಿ, ಒಳ್ಳೆ ಕ್ರಮಾನೇ ತಗೊಂಡಿದ್ದೀಯಾ

೧೩೪೦. ತಲೆ ಕಟಾವು ಮಾಡಿಸು = ಕ್ಷೌರ ಮಾಡಿಸು

(ಕಟಾವು = ಕೊಯ್ಲು)

ಪ್ರ : ಎಲ್ಲಿಗೆ ಹೋಗಿದ್ದೆ ಅಂತ ಕೇಳಬೇಕ? ತಲೆ ಕಟಾವು ಮಾಡಿಸೋಕೆ ಅಂತ ಗೊತ್ತಾಗಲ್ವ?

೧೩೪೧. ತಲೆ ಕಾದ ಹೆಂಚಾಗು = ಸಿಟ್ಟಿನಿಂದ ತಲೆ ಸಿಡಿಯುವಂತಾಗು

(ಹೆಂಚು = ರೊಟ್ಟಿ ಸುಡಲು ಬಳಸುವ ಲೋಹದ ಸಾಧನ)

ಪ್ರ : ಮನೆಯಲ್ಲಾದ ಹೈರಾಣ ಕಂಡು ನನ್ನ ತಲೆ ಕಾದ ಹೆಂಚಾಗಿದೆ.

೧೩೪೨. ತಲೆ ಕುಕ್ಕಲು ತಪ್ಪದಿರು = ಸಮಸ್ಯೆ ಬಗೆ ಹರಿಯದಿರು

(ತಲೆಕುಕ್ಕಲು = ತಲೆನೋವು)

ಪ್ರ : ಮನುಷ್ಯ ಸಾಯೋ ತನಕ ಒಂದಲ್ಲ ಒಂದು ತಲೆಕುಕ್ಕಲು ಇದ್ದೇ ಇರ್ತದೆ.

೧೩೪೩. ತಲೆ ಕುತ್ತಿಕೊಂಡು ತಿರುಗು = ತಲೆ ಬಗ್ಗಿಸಿಕೊಂಡು ಅಡ್ಡಾಡು, ಅವಮಾನ ಅದುಮುತ್ತಿರು

(ಕುತ್ತಿಕೊಂಡು = ಬಗ್ಗಿಸಿಕೊಂಡು, ತಗ್ಗಿಸಿಕೊಂಡು)

ಪ್ರ : ಮನೆ ಮರ್ಯಾದೆ ಹರಾಜು ಆದದ್ದರಿಂದ ತಲೆ ಕುತ್ಗೊಂಡು ತಿರುಗುವಂತಾಯ್ತು

೧೩೪೪. ತಲೆ ಕೆರೆದುಕೊಳ್ಳು = ಉತ್ತರ ಹೊಳೆಯದಿರು, ಸಮಸ್ಯೆ ಅರ್ಥವಾಗದಿರು, ಯೋಚಿಸು

ಪ್ರ : ಎಷ್ಟು ತಲೆ ಕೆರಕೊಂಡ್ರೂ ಉತ್ತರ ಹೊಳೀಲಿಲ್ಲ.

೧೩೪೫. ತಲೆಕೆಳಗಾಗು = ಲೆಕ್ಕಾಚಾರ ಬುಡಮೇಲಾಗು

ಪ್ರ : ನಾವು ಅಂದ್ಕೊಂಡಿದ್ದೇ ಒಂದು, ಆದದ್ದೇ ಒಂದು – ಎಲ್ಲ ತಲೆಕೆಳಗಾಯ್ತು

೧೩೪೬. ತಲೆಕೆಳಗಾಗಿ ನಿಂತ್ರೂ, ಕೊಡದಿರು = ಏನೇ ಕಸರತ್ತು ಮಾಡಿದರೂ ಕೊಡದಿರು.

ತಲೆ ಕೆಳಗೆ ಮಾಡಿ ಕಾಲು ಮೇಲೆ ಮಾಡಿ ನಿಲ್ಲುವ ಯೋಗಾಭ್ಯಾಸದ ‘ಶಿರಸಾಸನ’ದ ಹಿನ್ನೆಲೆ ಈ ನುಡಿಗಟ್ಟಿಗೆ ಇದೆ.

ಪ್ರ : ಅವನು ತಲೆಕೆಳಗಾಗಿ ನಿಂತರೂ, ಅವನ ಕೈಗೆ ಹಣ ಕೊಟ್ಟೇನಾ?

೧೩೪೭. ತಲೆ ಗಿರ್ರೆ‍ನ್ನು = ತಲೆ ತಿರುಗು, ತಲೆಸುತ್ತು ಬರು

ಪ್ರ : ಈ ಮನೆಯ ರಾಣಾರಂಪ ನೋಡಿ ನನ್ನ ತಲೆ ಗಿರ್ ಅಂತಾ ಅದೆ.

೧೩೪೮. ತಲೆಗೆ ಕೈಕೊಡು = ಮಲಗು

ಮಲಗಬೇಕಾದರೆ ತಲೆಗೆ ದಿಂಬಿರಬೇಕು. ಆದರೆ ಗ್ರಾಮೀಣ ಜನರ ಬಡತನ ಎಷ್ಟು ಎಂದರೆ ಎರಡು ಹೊತ್ತಿನ ಗಂಜಿಗೆ ಪರದಾಡಬೇಕಾದ ಪರಿಸ್ಥಿತಿ ಇರುವಾಗ ದಿಂಬಿನ ಕನಸು ಕಾಣಲು ಸಾಧ್ಯವೇ ಇಲ್ಲ. ಆದ್ದರಿಂದ ತಮ್ಮ ಕೈಯನ್ನೇ ತಲೆಗೆ ದಿಂಬಾಗಿ ಬಳಸುತ್ತಿದ್ದರು ಎಂಬುದನ್ನು ಈ ನುಡಿಗಟ್ಟು ಧ್ವನಿಸುತ್ತದೆ. ಆರ್ಥಿಕ ದುಸ್ಥಿತಿಯನ್ನು ನುಡಿಗಟ್ಟುಗಳು ಹೇಗೆ ಗರ್ಭೀಕರಿಸಿಕೊಂಡಿವೆ ಎಂಬುದಕ್ಕೆ ಇದು ನಿದರ್ಶನ.

ಪ್ರ : ಗಾದೆ – ಅವರವರ ತಲೆಗೆ ಅವರವರದೇ ಕೈ.

೧೩೪೯. ತಲೆಗೆಲ್ಲ ಒಂದೇ ಮಂತ್ರ ಹೇಳು = ಒಂದೇ ಮಾನದಂಡವನ್ನು ಎಲ್ಲಕ್ಕೂ ಅನ್ವಯಿಸಿ ಅನ್ಯಾಯ ಮಾಡು

ಪ್ರ : ಸಮಸ್ಯೆ ಬೇರೆ ಬೇರೆ ಆಗಿರುವಾಗ, ನೀವು ಒಂದೇ ಮಂತ್ರ ಹೇಳಿಬಿಟ್ರೆ ಹೆಂಗೆ?

೧೩೫೦. ತಲೆಗೆ ಕಟ್ಟು = ಬಲವಂತವಾಗಿ ಹೊಣೆ ಹೊರಿಸು

ಹಿಂದೆ ರಣರಂಗದಲ್ಲಿಲ ಸೈನ್ಯ ನಡೆಸುವ ಜವಾಬ್ದಾರಿ ಹೊತ್ತವನನ್ನು ಸೇನಾಪತಿ ಎಂದು ಕರೆದು, ಅವನ ಹಣೆಗೆ ಸೇನಾಪತಿ ಪಟ್ಟವನ್ನು ಕಟ್ಟುತ್ತಿದ್ದರು. ಅದರ ಹಿನ್ನೆಲೆ ಈ ನುಡಿಗಟ್ಟಿಗಿದೆ.

ಪ್ರ : ಅವನ ಸಾಲ ತೀರಿಸುವುದನ್ನು ನನ್ನ ತಲೆಗೇ ಕಟ್ಟಿದರು

೧೩೫೧. ತಲೆ ಗುಮುಕು ಹಾಕು = ಹೌದೆನ್ನು, ಸಮ್ಮತಿ ಸೂಚಿಸು.

(ಗುಮುಕು ಹಾಕು = ತಲೆಯನ್ನು ಮೇಲಿನಿಂದ ಕೆಳಕ್ಕೆ ಅಲುಗಿಸುವುದು, ಇದಕ್ಕೆ ಹೌದು ಎಂದರ್ಥ)

ಪ್ರ : ದಿಟವಾ ಎಂದು ಕೇಳಿದಾಗ, ಅವನು ತಲೆ ಗುಮುಕು ಹಾಕಿದ.

೧೩೫೨. ತಲೆ ಚೆಂಡಾಡು = ತಲೆಯನ್ನೇ ಚೆಂಡಾಗಿ ಮಾಡಿಕೊಂಡು ಆಟವಾಡು

ಚೂರು ಬಟ್ಟೆಗಳನ್ನು ಸುತ್ತಿ ಸುತ್ತಿ ಉಂಡೆ ಮಾಡಿ, ಅದರ ಮೇಲೆ ಹುರಿಬಿಗಿದು, ಬಟ್ಟೆ ಚೆಂಡನ್ನು ತಯಾರು ಮಾಡಿ ಆಡುವ ಜನಪದ ಆಟಕ್ಕೆ ಚೆಂಡಾಟ ಎನ್ನುತ್ತಾರೆ. ಪೂಜಿಸುವ ಫಣಿ (ಗೋಡಿ ಮುಖವಾಗಿ ನಿಲ್ಲಿಸಿದ ಕಲ್ಲು) ಗೆ ಬಟ್ಟೆ ಚೆಂಡಿನಿಂದ ಹೊಡೆಯಲಾಗುತ್ತದೆ. ಈ ಆಟದಲ್ಲಿ ಎರಡು ಗುಂಪುಗಳಿರುತ್ತವೆ – ಆಧುನಿಕ ಕಾಲದ ಕ್ರಿಕೆಟ್ ಆಟದಲ್ಲಿ ಎರಡು ಗುಂಪುಗಳಿರುವ ಹಾಗೆ. ಜನಪದ ಆಟದ ಫಣಿ ಇಂದಿನ ಕ್ರಿಕೆಟ್ ಆಟದ ಬೇಲ್ಸ್ ಎನ್ನಬಹುದು.

ಪ್ರ : ನಿನ್ನ ತಲೆ ಚೆಂಡಾಡಿ ಬಿಟ್ಟೇನು, ಹುಷಾರು