೧೪೩೧. ತಿಣುಕಾಟವಾಗು = ಕಷ್ಟವಾಗು, ಬೇನೆಯಿಂದ ನರಳು

ಪ್ರ : ಗಾದೆ – ಸೊಸೇದು ತಿಣುಕಾಟದ ಹೆರಿಗೆ

ಅತ್ತೇದು ಗೊಣಗಾಟದ ಬೈರಿಗೆ

೧೪೩೨. ತಿಥಿ ಮಾಡು = ಸಾಯಿಸು, ಶ್ರಾದ್ಧ ಮಾಡು

ಪ್ರ : ಇವತ್ತು ಅವನ ತಿಥಿ ಮಾಡ್ತೀನಿ, ಇಲ್ಲ, ನನ್ನ ತಿಥಿ ಮಾಡಿಸ್ಕೊಂತೀನಿ

೧೪೩೩. ತಿದಿಯೊತ್ತು = ಗಾಳಿಯೂದು, ಒತ್ತಾಯ ಮಾಡು

(ತಿದಿ < ತಿತ್ತಿ = ಅಕ್ಕಸಾಲಿಗರು ಅಥವಾ ಕಮ್ಮಾರರು ಲೋಹವನ್ನು ಕೆಂಪಾಳ ಕಾಯಿಸಲು, ಅಗ್ಗಿಷ್ಟಿಕೆಯ ಬೆಂಕಿಯುರಿ ಪ್ರಜ್ವಲಿಸುವಂತೆ ಗಾಳಿಯೂದಲು ಬಳಸುವ ಚರ್ಮದ ಚೀಲ)

ಪ್ರ : ತಿದಿ ಒತ್ತದಿದ್ರೆ ಮೇಲೇಳೋದಿಲ್ಲ ಈ ಮುದಿಯ

೧೪೩೪. ತಿನ್ನೋ ಅನ್ನ ಬೆಲ್ಲವಾಗು = ಮುಗ್ಗಟ್ಟು ಬರು, ಅನ್ನದ ಅಭಾವವಾಗು

ಪ್ರ : ಹೆಂಗೆ ಬದುಕು ಬೇಕೋ ಏನೋ, ತಿನ್ನೋ ಅನ್ನ ಬೆಲ್ಲವಾಗಿ ಕುಂತದೆ

೧೪೩೫. ತಿನ್ನೋ ಅನ್ನಕ್ಕೆ ಮಣ್ಣು ಬೀಳು = ಹೊಟ್ಟೆಪಾಡಿನ ಮಾರ್ಗ ತಪ್ಪಿ ಹೋಗು, ಹಾಳಾಗು

ಪ್ರ : ತಿನ್ನೊ ಅನ್ನಕ್ಕೆ ಮಣ್ಣು ಬೀಳಿಸಿದರು, ಮನೆಹಾಳರು

೧೪೩೬. ತಿನ್ನೋನಂತೆ ನೋಡು = ಆಸೆಗಣ್ಣಿನಿಂದ ನೋಡು, ಮೋಹಪರವಶನಾಗಿ ನೋಡು

(ತಿನ್ನೋನಂತೆ < ತಿನ್ನುವವನಂತೆ)

ಪ್ರ : ಚೆಂದುಳ್ಳಿ ಹೆಣ್ಣು ಅಂತ ಒಂದೇ ಸಮ ನೋಡಿದ, ತಿನ್ನೋನಂತೆ

೧೪೩೭. ತಿಪ್ಪರ ಲಾಗ ಹಾಕಿದರೂ ಕೊಡದಿರು = ಏನೇ ಕಸರತ್ತು ಮಾಡಿದರೂ ನೀಡದಿರು

(ತಿಪ್ಪರಲಾಗ = ಅಂತರ್ಲಾಗ)

ಪ್ರ : ಅವನು ತಿಪ್ಪರ ಲಾಗ ಹಾಕಿದರೂ ಕೊಡೋದಿಲ್ಲ, ನೀನು ನಿಶ್ಚಿಂತೆಯಿಂದ ಹೋಗು

೧೪೩೮. ತಿಪ್ಪುಳ ಕಿತ್ತ ಹಕ್ಕಿಯಾಗು = ಅರೆ ಜೀವವಾಗು

(ತಿಪ್ಪುಳ = ಪುಕ್ಕ)

ಪ್ರ : ತಿಪ್ಪುಳ ಕಿತ್ತ ಹಕ್ಕಿಯಾದ ಮೇಲೆ ಇನ್ನು ಇದ್ರೇನು ಸತ್ರೇನು?

೧೪೩೯. ತಿಪ್ಪೆ ಮೇಲೆಳೆ = ಮನೆಮಠ ಇಲ್ಲದಂತೆ ಮಾಡು

ಪ್ರ : ದಾಯಾದಿಗಳು ನಮ್ಮನ್ನು ತಿಪ್ಪೆ ಮೇಲೆಳೆದರು

೧೪೪೦. ತಿಪ್ಪೆ ಸಾರಿಸು = ರಬ್ಬಳಿಸು, ಗಲೀಜು ಮಾಡು

ಪ್ರ : ನ್ಯಾಯಸ್ಥರು ನೆಲ ಸಾರಿಸಿದಂತೆ ಚೊಕ್ಕಟ ಮಾಡಲಿಲ್ಲ, ತಿಪ್ಪೆ ಸಾರಿಸಿದಂತೆ ಗಲೀಜು ಮಾಡಿದರು

೧೪೪೧. ತಿಬ್ಬಳವಿಲ್ಲದಿರು = ಸೂಕ್ಷ್ಮತೆ ಇಲ್ಲದಿರು, ತಿಳಿವಳಿಕೆ ಇಲ್ಲದಿರು

(ತಿಬ್ಬಳ < ತಿವ್ವಳ < ತಿಳಿವಳಿಕೆ = ಅರಿವು, ಸೂಕ್ಷ್ಮ ಜ್ಞಾನ)

ಪ್ರ : ತಿಬ್ಬಳ ಇಲ್ಲದೋನಿಗೆ ದಬ್ಬಳ ಹಾಕಿ ಹೆಟ್ಟಿದರೂ ಮಿಸುಕಾಡಲ್ಲ

೧೪೪೨. ತಿಮರ ಹತ್ತು = ನವೆ ಹತ್ತು, ಸಂಭೋಗಕ್ಕೆ ತಳಮಳಿಸು

(ತಿಮರ = ಕಡಿತ, ನವೆ)

ಪ್ರ : ತಿಮರ ಹತ್ತಿದಾಗ ಬಂದು ನನಗೆ ಅಮರಿಕೊಳ್ತಾನೆ.

೧೪೪೩. ತಿರುಗುಮುರುಗಾ ಮಾಡು = ಹಿಂದುಮುಂದು ಮಾಡು

(ತಿರುಗಾಮುರುಗಾ < ತಿರುಗುಮುರುಗು)

ಪ್ರ : ಕನಕನನ್ನು ತಿರುಗಾಮುರುಗಾ ಮಾಡಿದರೂ ಕನಕನೇ, ಕಿಟಿಕಿಯನ್ನು ತಿರುಗಾಮುರುಗಾ ಮಾಡಿದರೂ ಕಿಟಕೀನೆ, ಆದ್ದರಿಂದ ಕನಕನ ಕಿಟಕಿ (ಕಿಂಡಿ) ಜನಮನದಿಂದ ಕಾಲವಾಗುವುದಿಲ್ಲ.

೧೪೪೪. ತಿರುಗಿ ಸಾಕಾಗು = ಸುತ್ತಾಡಿ ಸುಸ್ತಾಗು

(ತಿರು-ಗಿ = ಅಲೆ-ದಾ-ಡಿ)

ಪ್ರ : ನಿತ್ಯಹ ನಿನ್ನ ಹತ್ರಕ್ಕೆ ತಿರುಗಿ ಸಾಕಾಯ್ತು, ಇವತ್ತು ಸಾಲದ ಹಣ ಕೊಡದ ಹೊರ್ತೂ ಹೋಗಲ್ಲ.

೧೪೪೫. ತಿರುಗುಗಾಲ ತಿಪ್ಪನಾಗು = ನಿಂತಕಡೆ ನಿಲ್ಲದಿರು, ಅಲೆಮಾರಿಯಾಗಿ ತಿರುಗುತ್ತಿರು

(ತಿರುಗು = ಚಕ್ರದಂತೆ ಉರುಳು ; ತಿಪ್ಪ < ತಿರುಪ = Screw)

ಪ್ರ : ಆ ತಿರುಗುಗಾಲ ತಿಪ್ಪನಿಗೆ ಮಗಳ್ನ ಕೊಟ್ರೆ ಎರಡು ಕೈಲೂ ಉಣ್ತಾಳೆ.

೧೪೪೬. ತಿರುನಾಮ ಹಾಕು = ಮೋಸ ಮಾಡು, ಪಂಗನಾಮ ಹಾಕು.

(ತಿರು < ತ್ರಿ < ತ್ರಯ = ಮೂರು) ಹನ್ನೆರಡನೆಯ ಶತಮಾನದಲ್ಲಿ ರಾಮಾನುಜಾಚಾರ್ಯರು ಪ್ರಾಣಭಯದಿಂದ ತಮಿಳುನಾಡನ್ನು ಬಿಟ್ಟು ಕರ್ನಾಟಕದ ಮೇಲುಕೋಟೆಗೆ ಬಂದು ನೆಲಸಿದರು. ಶ್ರೀವೈಷ್ಣವ ಧರ್ಮ ಪ್ರಚಾರ ಮಾಡಿದರು. ಗ್ರಾಮೀಣ ಪ್ರದೇಶದ ಶೂದ್ರರ ಹಣೆಯ ಮೇಲೂ ವಿಭೂತಿಗೆ ಬದಲಾಗಿ ನಾನು ರಾರಾಜಿಸತೊಡಗಿತು. ನಾಮ ಹಾಕಿಸಕೊಂಡವರು ಕಾಲ ಕ್ರಮೇಣ ಮೋಸ ಮಾಡು ಎನ್ನುವ ಅರ್ಥದಲ್ಲಿ ‘ತಿರುನಾಮ ಹಾಕು’ ‘ಪಂಗನಾಮ ಹಾಕು’ ಎನ್ನುವ ನುಡಿಗಟ್ಟುಗಳನ್ನು ಮತಾಂತರದ ಚೌಕಟ್ಟಿನಲ್ಲಿ ಬಳಕೆಗೆ ತಂದರು ಎಂದು ಕಾಣುತ್ತದೆ.

ಪ್ರ : ಇವನು ಆಗಲೇ ಹೊರಟ, ಇವತ್ತು ಯಾರಿಗೆ ತಿರುನಾಮ ಹಾಕ್ತಾನೋ

೧೪೪೭. ತಿರುಪ ತಿರುವು = ಬಿಗಿ ಮಾಡು

(ತಿರುಪ = Screw; ತಿರುವು = ತಿರುಗಿಸು)

ಪ್ರ : ನೀನು ತಿರುಪ ತಿರುವೋ ಕಡೆ ತಿರುವು, ಅವನಾಗಿಯೇ ದಾರಿಗೆ ಬರ್ತಾನೆ.

೧೪೪೮. ತಿರುಪತಿ ಕ್ಷೌರ ಮಾಡು = ಅರ್ಧಂಬರ್ಧ ಕೆಲಸ ಮಾಡು.

ಹಿಂದೆ ತಿರುಪತಿಗೆ ಮುಡಿ ಕೊಡಲು ಹೋಗುತ್ತಿದ್ದ ಭಕ್ತರು ಕ್ಷೌರಿಕರಿಗೆ ಇಂತಿಷ್ಟು ಹಣ ಎಂದು ಕೊಡಬೇಕಾಗಿತ್ತು. ದುರಾಸೆಯ ಕ್ಷೌರಿಕರು ಎಲ್ಲ ಹಣವನ್ನು ತಾವು ಲಪಟಾಯಿಸಬೇಕೆಂದು, ಒಬ್ಬೊಬ್ಬ ಭಕ್ತನ ತಲೆಯನ್ನು ಪೂರ್ಣ ಬೋಳಿಸಬೇಕಾದರೆ ತಡವಾಗುತ್ತದೆಂದು, ಆಗ ಭಕ್ತರು ಬೇರೆ ಕ್ಷೌರಿಕರ ಹತ್ತಿರ ಹೋಗುತ್ತಾರೆಂದು ಹೋಚಿಸಿ, ಪ್ರತಿಯೊಬ್ಬ ಭಕ್ತನ ತಲೆಯ ಮಧ್ಯಭಾಗದಲ್ಲಿ ಕತ್ತಿಯಿಂದ ರಸ್ತೆಯಂತೆ ಒಂದು ಪಟ್ಟೆ ಬೀಳುವಂತೆ ಕೆರೆದು, ಪಕ್ಕಕ್ಕೆ ಕೂಡಿಸುತ್ತಿದ್ದರಂತೆ. ಅಂಥವರ ಮೇಲೆ ಬೇರೆ ಕ್ಷೌರಿಕರಿಗೆ ಅಧಿಕಾರ ಇರುವುದಿಲ್ಲ. ಮೊದಲ ಸರದಿಯಲ್ಲಿ ಪಟ್ಟೆ ಎಳೆಸಿಕೊಂಡ ಭಕ್ತರು ಎರಡನೆಯ ಸರದಿಯಲ್ಲಿ ಅವನಿಂದಲೇ ಪೂರ್ಣ ಬೋಳು ಮಾಡಿಸಿಕೊಳ್ಳಬೇಕಾಗಿತ್ತು. ಅಲ್ಲಿಯವರೆಗೆ ಆ ಭಕ್ತರು ಅಂತರ ಪಿಶಾಚಿಗಳಾಗಿ ಕಾಯಬೇಕಾಗಿತ್ತು. ಆ ಹಿನ್ನೆಲೆಯಲ್ಲಿ ಮೂಡಿದ ನುಡಿಗಟ್ಟು ಇದು ಆ ಪದ್ಧತಿ ಇಂದು ಇಲ್ಲ.

ಪ್ರ : ನೇರುಪ್ಪಾಗಿ ಕೆಲಸ ಮಾಡೋ ಹಂಗಿದ್ರೆ ಬಾ, ತಿರುಪತಿ ಕ್ಷೌರದಂತೆ ಮಾಡೋ ಹಂಗಿದ್ರೇ, ನೀನು ಬರಲೇ ಬೇಡ.

೧೪೪೯. ತಿರುಪೆ ಎತ್ತು = ಭಿಕ್ಷೆ ಬೇಡು

ಪ್ರ : ಈ ತಿರುಬೋಕಿ ನನ್ಮಗನಿಂದ ಹೆಂಡ್ರು ಮಕ್ಕಳು ತಿರುಪೆ ಎತ್ತೋ ಹಂಗಾಯ್ತು

೧೪೫೦. ತಿರುಮಂತ್ರ ಹಾಕು = ಪ್ರತಿ ಮಂತ್ರ ಹಾಕಿ ಪ್ರತಿಕೂಲ ಮಾಡು

(ತಿರುಮಂತ್ರ < ತಿರುಗುಮಂತ್ರ = ಪ್ರತಿ ಮಂತ್ರ)

ಪ್ರ : ತಿರುನಾಮ ಹಾಕಿದೋನಿಗೆ ಪ್ರತಿಯಾಗಿ ತಿರುಮಂತ್ರ ಹಾಕೋದು ನನಗೆ ಗೊತ್ತು.

೧೪೫೧. ತಿರುವಿಕೊಳ್ಳು = ಕಿತ್ತುಕೊಳ್ಳು, ವಶಪಡಿಸಿಕೊಳ್ಳು

ಪ್ರ : ನನ್ನ ಹೊಲಮನೆ ತಿರುವಿಕೊಳ್ತೀಯಾ ? ತಿರುವಿಕೋ ಹೋಗು, ನಾನು ಒಂದು ಕೈ ನೋಡ್ತೀನಿ

೧೪೫೨. ತಿರುವಿ ಹಾಕು = ಮಗುಚಿ ಹಾಕು, ಬೇಗ ಕಲಿತು ಹೇಳು

(ತಿರುವು = ತಿರುಗಿಸು, ಮಗುಚು)

ಪ್ರ : ಹೇಳಿಕೊಟ್ಟದ್ದನ್ನು ಅರಗಳಿಗೇಲಿ ತಿರುವಿ ಹಾಕಿಬಿಟ್ಟ.

೧೪೫೩. ತಿರುವಿ ಹಾಕು = ಬೋರಲು ಹಾಕು, ದಬ್ಬಾಕು

(ತಿರುವು = ತಲೆ ಕೆಳಗಾಗಿಸು)

ಪ್ರ : ಬೆಳಗ್ಗೆಯಿಂದ ನೀನು ತಿರುವಿ ಹಾಕಿರೋದು ಕಾಣಲ್ವ ? ಬಾಯ್ಮುಚ್ಕೊಂಡು ಸುಮ್ನಿರು.

೧೪೫೪. ತಿರುವೆ ಹಕ್ಕಿಯಂತಾಡು = ಜಂಭದ ಕೋಳಿಯಂತಾಡು, ಎಲ್ಲಾ ಕಡೆಯೂ ಸುಳಿದಾಡು

(ತಿರುವೆ ಹಕ್ಕಿ < ತಿರುಬೋಕಿ = ಭಿಕ್ಷೆಗಾಗಿ ಬಳಸುವ ಮಡಕೆ, ಮಣ್ಣಿನ ಭಿಕ್ಷಾಪಾತ್ರೆ) ತಿರುವೆ ಹಕ್ಕಿ ಎಂಬ ಪಕ್ಷಿ ವಿಶೇಷ ಇತ್ತೆ ? ಎಂಬುದು ಚಿಂತನಾರ್ಹ. ಒಂದು ಕಡೆ ಇರದೆ ಕುಪ್ಪಳಿಸುತ್ತಾ ಮಿಣುಕುತನ ತೋರಲು ಬರುವ ಪ್ರದರ್ಶನ ಪ್ರಿಯ ಸ್ವಭಾವದ ‘ತಿರುವೆ ಹಕ್ಕಿ’ ಎಂಬುದೊಂದು ಇರಬೇಕು. ಇವತ್ತು ಎಷ್ಟೋ ಗಿಡಗೆಂಟೆಗಳ, ಹೂವುಗಳ, ಪಶುಪಕ್ಷಿಗಳ ಹೆಸರೇ ನಮಗೆ ಗೊತ್ತಿಲ್ಲ. ಅವಿದ್ಯಾವಂತ ಜನಪದರ ಬಾಯಲ್ಲೇ ಅವುಗಳ ಸುಳಿವು ಅಲ್ಲಿ ಇಲ್ಲಿ ಸಿಕ್ಕುವುದುಂಟು.

ಪ್ರ : ಅಲ್ಲೂ ಅವನೆ, ಇಲ್ಲೂ ಅವನೆ, ಎಲ್ಲೆಲ್ಲೂ ಅವನೆ – ಒಳ್ಳೆ ತಿರುವೆ ಹಕ್ಕಿಯಂಗಾಡ್ತಾನೆ.

೧೪೫೫. ತಿವಿಸಿಕೊಳ್ಳು = ಹೆಟ್ಟಿಸಿಕೊಳ್ಳು.

ಪ್ರ : ಅತ್ತೆಯಿಂದ ಸೋಟೆಗೆ ತಿವಿಸಿಕೊಳ್ಳಲೊ ? ಗಂಡನಿಂದ ಕಿಬ್ಬೊಟ್ಟೆಗೆ ತಿವಿಸಿಕೊಳ್ಳಲೊ?

೧೪೫೬. ತಿಳ್ಳು ತಿಂದು ಸಿಪ್ಪೆ ಕೊಡು = ರಸವಿರುವುದನ್ನು ಸವಿದು, ನೀರಸವಾದುದನ್ನು ದಾನ ಮಾಡು

(ತಿಳ್ಳು < ತಿರುಳು = ರಸವತ್ತಾದ ಭಾಗ)

ಪ್ರ : ತಿಳ್ಳು ತಿಂದು ಸಿಪ್ಪೆ ಕೊಡೋ ದಾನಶೂರ ಕರ್ಣರೇ ಇವತ್ತು ಎಲ್ಲೆಲ್ಲು ಕಾಣ್ತಾರೆ.

೧೪೫೭. ತೀಟೆ ಕೈ = ತಂಟೆ ಮಾಡುವ ಕೈ, ಲೈಂಗಿಕ ಆಸೆಯನ್ನು ಪ್ರಚೋದಿಸುವ ಕೈ.

(ತೀಟೆ = ನವೆ, ಕಡಿತ)

ಪ್ರ : ಗಾದೆ – ತೀಟೆ ಕೈ, ನಾಟಿ ಹಾಕು

೧೪೫೮. ತೀಟೆ ತೀರು = ಕೆಲಸ ಆಗು, ದೈಹಿಕ ಸುಖ ಒದಗು

(ತೀಟೆ = ನವೆ, ತಿಮರ)

ಪ್ರ : ಗಾದೆ – ತೀಟೆ ತೀರಿದ ಮೇಲೆ ಸೋಟೆ ತಿವಿದ

೧೪೫೯. ತೀಟೆ ಮಾಡು = ತಂಟೆ ಮಾಡು, ಚೇಷ್ಟೆ ಮಾಡು

(ತೀಟೆ = ತಂಟೆ)

ಪ್ರ : ತೀಟೆ ಮಾಡಿ ಚ್ವಾಟೆಗೆ ತಿವಿಸ್ಕೊಂಡ

೧೪೬೦. ತೀಟೆಯಾಗು = ದರ್ದಾಗು

(ತೀಟೆ = ನೋವು, ಜರೂರು, ದರ್ದು)

ಪ್ರ : ಗಾದೆ – ಹುಣ್ಣಿಗೆ ತೀಟೇನೋ ? ಮದ್ದಿಗೆ ತೀಟೇನೋ?

೧೪೬೧. ತೀರ ಕೆಡು = ಪೂರ್ತಿ ಕೆಡು

(ತೀರ = ಸಂಪೂರ್ಣ)

ಪ್ರ : ತೀರ ಕೆಡೋಕೆ ಮುಂಚೆ ಕುತ್ಗೇಗೊಂದು ಗುದ್ಗೆ ಕಟ್ಟೋಕಿಲ್ವ?

೧೪೬೨. ತೀರಗೆಟ್ಟ ಮಾತಾಡು = ಚೆಲ್ಲು ಮಾತಾಡು

(ತೀರಗೆಟ್ಟ < ತೀರ + ಕೆಟ್ಟ = ಪೂರ್ತಿ ಕೆಟ್ಟ, ಚೆಲ್ಲು ಬಿದ್ದ)

ಪ್ರ : ತೀರಗೆಟ್ಟ ಮಾತಾಡೋರ ಜೊತೆ ವಾರಾಸರದಿ ಯಾಕೆ?

೧೪೬೩. ತೀರ್ತಯಾತ್ರೆಗೆ ಹೋಗು = ಮರಣ ಹೊಂದು

(ತೀರ್ತ < ತೀರ್ಥ)

ಪ್ರ : ಅವನು ಒಂದು ವರ್ಷದ ಹಿಂದೆಯೇ ತೀರ್ತಯಾತ್ರೆಗೆ ಹೋದ

೧೪೬೪. ತೀರ್ತ ಪರಸಾದ ಸೇವಿಸು = ಕುಡಿತ ಮತ್ತು ಕಡಿತಗಳಲ್ಲಿ ಪಾಲುಗೊಳ್ಳು

(ತೀರ್ತ < ತೀರ್ಥ; ಪರಸಾದ < ಪ್ರಸಾದ) ದೇವಸ್ಥಾನದ ಆವರಣದಲ್ಲಿ, ದೇವರ ಸನ್ನಿಧಿಯಲ್ಲಿ ಪವಿತ್ರ ಎಂದು ಭಾವಿಸಲಾದ ತೀರ್ಥಪ್ರಸಾದಗಳನ್ನು ಕಣ್ಣಿಗೊತ್ತಿಕೊಂಡು ಸೇವಿಸುವುದು ಎಲ್ಲರಿಗೂ ಗೊತ್ತು. ಅದನ್ನು ಆಧುನಿಕ ಕಾಲದ ಬೇರೊಂದು ಹವ್ಯಾಸದ ಅನಾವರಣಕ್ಕೆ ಬಳಸಿರುವುದು ಕಂಡು ಬರುತ್ತದೆ.

ಪ್ರ : ತೀರ್ತಪರಸಾದ ಸೇವಿಸೋಕೆ ಸ್ವಾಗತ ಬೇರೆ ಬೇಕೆ? ನಾವೇ ಬರ್ತೇವೆ

೧೪೬೫. ತೀರುಪಾಟು ಮಾಡಿಕೊಂಡು ಬರು = ಬಿಡುವು ಮಾಡಿಕೊಂಡು ಬಿಡುಬೀಸಾಗಿ ಬರು

ಪ್ರ : ನೀನೊಂದು ದಿವಸ ತೀರ್ಪಾಟು ಮಾಡಿಕೊಂಡು ಬಂದ್ರೆ ನಿಧಾನವಾಗಿ ಮಾತಾಡಬಹುದು.

೧೪೬೬. ತೀರ್ಪಾಟಾಗು = ತೀರ್ಮಾನವಾಗು

(ತೀರ್ಪಾಟು < ತೀರ್‌ಪಾಟ್ಟು(ತ) = ತೀರ್ಮಾನ)

ಪ್ರ : ಈಗಾಗಲೇ ತೀರ್ಪಾಟಾಗಿರುವಾಗ ನೀನು ಹೊಸದಾಗಿ ಮಾರ್ಪಾಟು ಮಾಡೋದೇನಿದೆ?

೧೪೬೭. ತೀರಾ ಸೋಸಿ ಹೋಗಿರು = ಪೂರಾ ನಶಿಸು, ಸವೆದು ಹೋಗು

(ಸೋಸು < ಶೋಧಿಸು = ಕಸಕಡ್ಡಿ ಬೇರ್ಪಡಿಸು, ಚಿವುಟಿ ಹಾಕುವುದಲ್ಲದೆ ಹುಳುಕುಪಳಕು ಎಲೆಗಳನ್ನೂ ಕಿತ್ತೆಸೆಯಲಾಗುತ್ತದೆ. ಹಾಗೆ ಮಾಡಿದಾಗ ಮೊದಲಿದ್ದದ್ದಕ್ಕಿಂತ ಅದು ಅರ್ಧಕ್ಕಿಳಿಯುತ್ತದೆ. ಆ ಹಿನ್ನೆಲೆಯಲ್ಲಿ ವ್ಯಕ್ತಿ ಮೊದಲಿಗಿಂತ ಈಗ ತುಂಬ ಬಡವಾಗಿದ್ದಾನೆ, ಸವೆದು ಹೋಗಿದ್ದಾನೆ ಎಂಬುದನ್ನು ಸೊಪ್ಪು ‘ಸೋಸುವ’ ಕ್ರಿಯೆಯಿಂದ ದಾಖಲಿಸಲಾಗಿದೆ.

ಪ್ರ : ಹೋದ ಸಾರಿ ನೋಡಿದ್ದಕ್ಕೂ ಈಗ ನೋಡೋದಕ್ಕೂ ನಂಬೋಕೆ ಆಗಲ್ಲ, ತೀರ ಸೋಸಿ ಹೋಗಿದ್ದಾನೆ.

೧೪೬೮. ತೀರಿ ಕುಂತಿರು = ಎಲ್ಲ ಬಿಟ್ಟು ಕುಂತಿರು

(ತೀ-ರಿ = ಎಲ್ಲ ಅವತಾರವೂ ಮುಗಿದು)

ಪ್ರ : ತೀರಿ ಕುಂತೋರು ಯಾರಿಗೆ ಹೆದರ್ತಾರೆ?

೧೪೬೯. ತೀರಿಸಿ ಬಿಡು = ಮುಗಿಸಿಬಿಡು, ಕೊಂದು ಬಿಡು

(ತೀರಿ-ಸು = ಚುಕ್ತಾ ಮಾಡು)

ಪ್ರ : ಜೈಲಿಗೆ ಹೋದ್ರೂ ಚಿಂತೆ ಇಲ್ಲ, ಅವನ್ನ ತೀರಿಸೇ ಬಿಡ್ತೀನಿ

೧೪೭೦. ತೀರಿಸದಿರು ಆರಿಸದಿರು = ಕಷ್ಟ ಪರಿಹರಿಸದಿರು, ನೆರವಿಗೆ ಬರದಿರು

(ತೀರಿಸು = ಸಾಲ ಚುಕ್ತಾ ಮಾಡು; ಆರಿಸು = ಬಿಸಿಯನ್ನು ತಣ್ಣಾಗಾಗಿಸು)

ಪ್ರ : ತೀರಿಸಲಿಲ್ಲ ಆರಿಸಲಿಲ್ಲ, ಬರೀ ಬಾಯುಪಚಾರ ಊರಿಗಾಗಿ ಮಿಗ್ತದೆ

೧೪೭೧. ತೀರಿ ಹೋಗು = ಕಾಲವಾಗು, ಮರಣ ಹೊಂದು

ಪ್ರ : ಅವನು ತೀರಿ ಹೋಗಿ ಆಗಲೇ ಒಂದು ವರ್ಷ ಆಯ್ತು

೧೪೭೨. ತೀರ್ವೆ ತೀರಿಸು = ಸಾಲ ತೀರಿಸು, ಬಡ್ಡಿ ಕಟ್ಟು

(ತೀರ್ವೆ = ಸುಂಕ, ತೆರಿಗೆ)

ಪ್ರ : ಬೇವಾರ್ಸಿಗಳ ತೀರ್ವೆನೆಲ್ಲ ನಾನು ತೀರಿಸಬೇಕಾ?

೧೪೭೩. ತುಕ್ಕು ಹಿಡಿ = ಕಿಲುಬು ಹಿಡಿ, ಜೀವಂತಿಕೆ ಕಳೆದುಕೊಳ್ಳು

(ತುಕ್ಕು = ಕಿಲುಬು, ಕಲ್ಬಿಷ)

ಪ್ರ : ತುಕ್ಕು ಹಿಡಿದ ಲೋಹ, ತುಕ್ಕು ಹಿಡಿದ ಮನಸ್ಸು – ಎರಡೂ ಒಂದು

೧೪೭೪. ತುಟಾಗ್ರಕ್ಕೆ ಬರು = ತುತ್ತ ತುದಿಗೆ ಬರು, ಕಟ್ಟಕಡೆಯ ಅಂಚಿಗೆ ಬರು

(ತುಟಾಗ್ರ < ತುಟಿ + ಅಗ್ರ = ತುಟಿಯು ತುದಿ)

ಪ್ರ : ತೀರಾ ತುಟಾಗ್ರಕ್ಕೆ ಬಂದಾಗ, ಏನಾದರೂ ಸಹಾಯ ಮಾಡಿ ಅಂತ ಬಂದಿದ್ದೀಯಲ್ಲ. ಮೊದಲೇ ಬರೋಕೆ ನಿನಗೆ ಏನಾಗಿತ್ತು?

೧೪೭೫. ತುಟಾರ ಅಂಡಿಕೊಳ್ಳು = ಮುಖತಃ ದಬಾಯಿಸು, ಮೊಕ್ತಾ ತರಾಟೆಗೆ ತೆಗೆದುಕೊಳ್ಳು

(ತುಟಾರ < ತುಟಿ + ಆರ < ಆಹರ = ತುಟಿಯ ಮಟ್ಟದಲ್ಲಿ; ಅಂಡಿಕೊಳ್ಳು = ಅಮರಿಕೊಳ್ಳು)

ಪ್ರ : ನಾನು ತುಟಾರ ಅಂಡಿಕೊಂಡ ಮೇಲೆ ತುಟಿಪಿಟಕ್ ಅನ್ನದೆ ಜಾಗಬಿಟ್ಟ

೧೪೭೬. ತುಟಾರಕ್ಕೆ ಬರು = ಸಾವು ಬದುಕಿನ ಹಂತಕ್ಕೆ ಬರು

(ತುಟಾರ < ತುಟಿ + ಆರ < ತುಟಿ + ಆಹರ(ಸಂ) = ತುಟುಮಟ್ಟಕ್ಕೆ ಬರು)

ನದಿಯಲ್ಲಿ ಪ್ರವಾಹ ಸೊಂಟಮಟ್ಟಕ್ಕೆ, ಎದೆ ಮಟ್ಟಕ್ಕೆ, ಕುತ್ತಿಗೆ ಮಟ್ಟಕ್ಕೆ, ತುಟಿಮಟ್ಟಕ್ಕೆ ಬಂತು ಎಂದರೆ ಸಾವು ಖಾತ್ರಿ ಎಂದರ್ಥ. ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ತುಟಾರಕ್ಕೆ ಬಂದಿದೆ, ಕೊಠಾರ ಇಟ್ಕೊಂಡು ಏನಾಗಬೇಕು? ಮಾರಿ ಸಾಲ ತೀರಿಸ್ತೀನಿ

೧೪೭೭. ತುಟಿ ಎರಡು ಮಾಡದಿರು = ಮಾತಾಡದಿರು, ಮೌನದಿಂದಿರು

ಪ್ರ : ಅಪ್ಪ ಹಾರಾಡ್ತಾರೆ ಅಂತ ನಾನು ತುಟಿ ಎರಡು ಮಾಡಲಿಲ್ಲ.

೧೪೭೮. ತುಟಿ ಕಚ್ಚಿಕೊಂಡಿರು = ಸಹಿಸಿಕೊಂಡಿರು, ತಡೆದುಕೊಂಡಿರು

ಪ್ರ : ಅವರು ಏನಾದರೂ ಅಂದ್ಕೊಳ್ಳಲಿ ಅಂತ ನಷ್ಟಕ್ಕೆ ನಾನು ತುಟಿ ಕಚ್ಕೊಂಡಿದ್ದೆ.

೧೪೭೯. ತುಟಿ ಪಿಟಕ್ಕನ್ನದಿರು = ಮಾತಾಡದಿರು

(ಪಿಟಕ್ಕನ್ನದಿರು = ಪಿಟಕ್ ಎಂದು ತೆರೆಯದಿರು)

ಪ್ರ : ಹೆಂಡ್ರು ಬೈಗುಳದ ಬತ್ತಳಿಕೆ ಬರಿದು ಮಾಡೋವರೆಗೂ ಗಂಡ ತುಟಿಪಿಟಕ್ಕನ್ನಲಿಲ್ಲ

೧೪೮೦. ತುಟಿ ಮೀರು = ಮಿತಿ ಮೀರು, ಗೆರೆದಾಟು

ಪ್ರ : ಗಾದೆ – ತುಟಿ ಮೀರಿದ ಹಲ್ಲು, ಮಿತಿ ಮೀರಿದ ನಡೆ ಮುಚ್ಚಿಡೋಕೆ ಆಗಲ್ಲ

೧೪೮೧. ತುಟಿ ಮೇಲೆ ದೀಪ ಹಚ್ಕೊಂಡು ಬರು = ತರಾತುರಿಯಲ್ಲಿ ಬರು, ಆವೇಶದಲ್ಲಿ ಬರು

ತುಟಿ ಮೇಲೆ ದೀಪ ಹಚ್ಚಿಕೊಳ್ಳುವ ಆಚರಣೆ ಹಿಂದೆ ಇದ್ದಿರಬೇಕು. ಇಂದಿಗೂ ಹಿರೇಮೈಲಾರ ಮೊದಲಾದ ಕಡೆಗಳಲ್ಲಿ ಭಕ್ತರ ಕೆಲವು ಆಚರಣೆಗಳು ನೋಡುವವರಿಗೆ ದಿಗಿಲು ಮೂಡಿಸುತ್ತವೆ. ಅಂಥ ಆಚರಣಾ ಮೂಲದ ನುಡಿಗಟ್ಟಿದು.

ಪ್ರ : ನೀನು ಯಾವಾಗ ಬಂದ್ರೂ ತುಟಿ ಮೇಲೆ ದೀಪ ಹಚ್ಕೊಂಡೇ ಬರ್ತೀಯಲ್ಲ

೧೪೮೨. ತುಟಿ ರಕ್ತ ಮುಕ್ಕುಳಿಸುವಂತಿರು = ಕೆಂಪಗಿರು

(ಮುಕ್ಕಳಿಸು = ಬಾಯಲ್ಲಿ ನೀರು ತುಂಬಿಕೊಂಡು ಹಲ್ಲಿನ ಸಂದಿಯ ಆಹಾರಪದಾರ್ಥಗಳ ಚೂರುಪಾರು ಈಚೆಗೆ ಬರುವಂತೆ ಚರ್‌ಚರ್ ಎಂದು ಮಥಿಸು)

ಪ್ರ : ವಧುವಿನ ತುಟಿಗಳು ರಕ್ತ ಮುಕ್ಕಳಿಸುವಂತಿದ್ದರೆ, ವರನ ತುಟಿಗಳು, ಸಿಗರೇಟು ಸೇದಿಯೋ ಏನೋ, ಒಣಗಿದ ಸೀಗೆಕಾಯಿಯಂತಿವೆ.

೧೪೮೩. ತುಟಿ ಹೊಲಿದುಕೊಂಡಿರು = ಮಾತಾಡದಿರು

ಪ್ರ : ಗಂಡ ಗಂಟ್ಲು ಹರಿದು ಹಾಕ್ಕೊಳ್ಳಲಿ ಅಂತ ಹೆಂಡ್ರು ತುಟಿ ಹೊಲಿದುಕೊಂಡು ಕುಂತಿದ್ಲು

೧೪೮೪. ತುಟ್ಟಿಯಾಗು = ದುಬಾರಿಯಾಗು

ಪ್ರ : ಎಲ್ಲ ಪದಾರ್ಥಗಳ ಬೆಲೆ ತುಟ್ಟಿಯಾಗಿ, ಬಾಳ್ವೆ ಮಾಡೋದೇ ಕಷ್ಟವಾಗಿದೆ.

೧೪೮೫. ತುಣ್ಣೆ ಉಣ್ಣಿಸಿ ತಣ್ಣೀರು ಕುಡಿಸು = ಮೋಸ ಮಾಡು, ಮಣ್ಣು ಮುಕ್ಕಿಸು

ಪ್ರ : ನಂಬಿಕಸ್ಥ ಅಂತ ಹಣ ಕೊಟ್ಟರೆ, ಅವನು ತುಣ್ಣೆ ಉಣ್ಣಿಸಿ ತಣ್ಣೀರು ಕುಡಿಸಿದ.

೧೪೮೬. ತುಣ್ಣೆಗೆ ಎಣ್ಣೆ ಹಾಕಿ ನೀವು = ಸೇವೆ ಮಾಡು

ಪ್ರ : ಇವನ ತುಣ್ಣೆಗೆ ಎಣ್ಣೆ ಹಾಕಿ ನೀವೋರು ಒಳ್ಳೇರು ಉಳಿದೋರು ಕೆಟ್ಟೋರು

೧೪೮೭. ತುಣ್ಣೆಗೆ ಬೆಣ್ಣೆ ಹಚ್ಚು = ಪೂಸಿ ಮಾಡು, ತಾಜಾ ಮಾಡು

ಪ್ರ : ಮಗಳ ಮೇಲೆ ಕಣ್ಣಿಟ್ಟು ಅವನ ತುಣ್ಣೆಗೆ ಬೆಣ್ಣೆ ಹಚ್ತಾ ಅವನೆ.

೧೪೮೮. ತುಣ್ಣೆ ಕೇದು ತಣ್ಣಗೆ ಮಾಡು = ಗಂಡಸುತನ ಗೈರತ್ತನ್ನು ಸುಸ್ತುಗೊಳಿಸಲು ; ಆರ್ಭಟ ಅಡಗಿಸು.

ಪುರುಷಪ್ರಧಾನ ಪ್ರವೃತ್ತಿಯ ವಿರುದ್ಧ ತಿರುಗಿ ಬಿದ್ದ ಸ್ತ್ರೀಪ್ರಧಾನ ಪ್ರವೃತ್ತಿ ಈ ನುಡಿಗಟ್ಟಿನಲ್ಲಿದೆ. ಪುರುಷ ಪ್ರಧಾನ ಪ್ರವೃತ್ತಿಯ ಸಂಕೇತವಾಗಿ ‘ನಿನ್ನ -ಲ್ಲ ನಾ ಕೆಯ್ಯ’ ಎಂಬ ಬೈಗಳು ಚಾಲ್ತಿಯಲ್ಲಿರುವಂತೆಯೇ ವಿರಳವಾಗಿ ಸ್ತ್ರೀ ಪ್ರಧಾನ ಪ್ರವೃತ್ತಿಯ ಸಂಕೇತವಾಗಿ ‘ನಿನ್ನ -ಣ್ಣೆ ನಾ ಕೆಯ್ಯ’ ಎಂಬ ಬೈಗಳೂ ಚಾಲ್ತಿಯಲ್ಲಿದೆ. ಹನ್ನೆರಡನೆಯ ಶತಮಾನದ ಕದಿರ ರೆಮ್ಮವ್ವೆ ಎಂಬ ವಚನಕಾರ್ತಿ ಭಕ್ತಿನಿಂದಲೇ ಭಗವಂತನಿಗೆ ಬೆಲೆ ಅಥವಾ ಭಗವಂತನಿಗಿಂತ ಭಕ್ತ ಹೆಚ್ಚು ಎಂಬುದನ್ನು ಹೇಳುವಾಗ ‘ನಿನ್ನ ಗಂಡ ಕೆಳಗೆ, ನಾನು ಮೇಲೆ’ ಎಂಬ ಸಂಭೋಗ ಭಂಗಿಯ ರೂಪಕದಲ್ಲಿ ಹೇಳಿದ್ದಾಳೆ. ಈ ನುಡಿಗಟ್ಟು ಸಹ ಅದೇ ಸಂಭೋಗ ಭಂಗಿಯ ರೂಪಕದಲ್ಲಿ ಪುರುಷನನ್ನು ಮೆಟ್ಟುವ ಸ್ತ್ರೀ ಮೇಲ್ಮೆಯನ್ನು ಸಾರುವಂತಿದೆ.

ಪ್ರ :ನಿನ್ನ ತುಣ್ಣೆ ಕೇದು ತಣ್ಣಗೆ ಮಾಡದಿದ್ರೆ ನಾನು ಹೆಣ್ಣೇ ಅಲ್ಲ.

೧೪೮೯. ತುಣ್ಣೆ ತೋರಿಸು = ಕೈಕೊಡು, ಕೊಡುವುದಿಲ್ಲ ಎಂದು ಕೈ ಎತ್ತು

ಪ್ರ : ದುಡ್ಡು ಈಸಿಕೊಂಡು ಹೋಗಿ ತುಣ್ಣೆ ತೋರಿಸಿದ

೧೪೯೦. ತುತ್ತು ತೂಕ ಕೆಡಿಸು = ಅನ್ನದ ಆಸೆ ಮಾನವನ್ನು ಮಣ್ಣುಗೂಡಿಸು

(ತುತ್ತು = ಅನ್ನ; ತೂಕ = ಗೌರವ, ಮಾನ)

ಪ್ರ : ಗಾದೆ – ತುತ್ತು ತೂಕ ಕೆಡಿಸಿತು

ಕುತ್ತು ಜೀವ ಕೆಡಿಸಿತು

೧೪೯೧. ತುತ್ತೂರಿ ಊದು = ಹೊಗಳು

(ತುತ್ತೂರಿ = ವಾದ್ಯ ವಿಶೇಷ)

ಪ್ರ : ತಮ್ಮೋರಿಗೆ ತುತ್ತೂರಿ ಊದುತ್ತಾರೆ, ಅನ್ನಿಗರಿಗೆ ದತ್ತೂರಿ ಅರೀತಾರೆ

೧೪೯೨. ತುತ್ತೂರಿ ಊದು = ಅಳು, ರಚ್ಚೆ ಮಾಡು

ಪ್ರ : ಈ ಮಕ್ಕಳ ತುತ್ತೂರಿ ನಿಂತ ಮೇಲೆ ನನ್ನ ನಿದ್ದೆ.

೧೪೯೩. ತುತ್ತೆತ್ತದಿರು = ಉಣ್ಣದಿರು, ಅನ್ನ ಬಾಯಿಗಿಡದಿರು

ಪ್ರ : ಅಗಲಿಗನ್ನ ಇಕ್ಕಿ ಕಳ್ಳಿರಿಯೋ ಮಾತಾಡಿದಾಗ ನಾನು ತುತ್ತೆತ್ತಿ ಬಾಯಿಗಿಡಲಿಲ್ಲ.

೧೪೯೪. ತುದಿಗಾಲ ಮೇಲೆ ನಿಲ್ಲು = ಹೊರಟು ನಿಲ್ಲು

ಪ್ರ : ತುದಿಗಾಲ ಮೇಲೆ ನಿಂತಿರೋದು, ಒಂದಿನ ಇದ್ದು ಹೋಗು ಅಂದ್ರೆ ಕೇಳ್ತಾನ?

೧೪೯೫. ತುದಿಬೆರಳ ಮೇಲೆ ನಿಂತಿರು = ಕುತೂಹಲದಿಂದ ತಳಮಳಿಸು, ನೋಡಲು ಕಾತರಿಸು

ಪ್ರ : ಪ್ರೀತಿಸಿದ ಹುಡುಗಿ ಮನೆಗೆ ಹೋಗೋಕೆ ತುದಿಬೆರಳ ಮೇಲೆ ನಿಂತಿದ್ದಾನೆ.

೧೪೯೬. ತುಪ್ಪದ ತೊಗೆತೊಗೇನ ಹಾಕಿ ಬೆಳಸು = ಸುಖವಾಗಿ ಬೆಳೆಸು, ಸಮೃದ್ಧಿಯಲ್ಲಿ ಸಾಕು

(ತೊಗೆ = ಗರಣೆ)

ಪ್ರ : ನಾವು ಹಂಗಿಂಗೆ ಸಾಕಿಲ್ಲ ಇವನ್ನ, ತುಪ್ಪದ ತೊಗೆ ತೊಗೇನೆ ಹಾಕಿ ಸಾಕಿದ್ದೀವಿ

೧೪೯೭. ತುಪ್ಪದಲ್ಲೆ ಕೈ ತೊಳೆದು ಬೆಳೆ = ಶ್ರೀಮಂತಿಕೆಯ ಸುಖಸಂಪತ್ತಿನಲ್ಲಿ ಬೆಳೆ

ಪ್ರ : ತುಪ್ಪದಲ್ಲೇ ಕೈ ತೊಳೆದು ಬೆಳೆದೋರಿಗೂ, ತುಪ್ಪದ ಮುಖ ಕಾಣದೋರಿಗೂ ಬೀಗತನ ಸಾಧ್ಯವೆ?

೧೪೯೮. ತುರಚನ ಸಾವಾಸ ಮಾಡು = ಮೈಕೈ ಪರಚಿಕೊಳ್ಳುವ ತೆರನಾಗು

(ತುರಚ = ಕಂಬಳಿ ಹುಳ; ಮೈಮೇಲೆ ಹರಿದರೆ ಕಡಿತ, ಗಂದೆ ಏಳತೊಡಗುವಂಥದು; ಸಾವಾಸ < ಸಹವಾಸ = ಸ್ನೇಹ)

ಪ್ರ : ಗಾದೆ – ತುರಚನ ಸಾವಾಸವೂ ಒಂದೆ

ತುರಚನ ಸೊಪ್ಪಿನ ಸಾವಾಸವೂ ಒಂದೆ

೧೪೯೯. ತುರಬೆಡಗು ಮಾಡು = ಶೋಕಿ ಮಾಡು, ದೌಲತ್ತು ಮಾಡು

(ತುರಬೆಡಗು < ತುರುಕಬೆಡಗು = ಸಾಬರ ದೌಲತ್ತು ; ಹೈ ಬ್ರೀಡ್ ತಳಿಯಾದ ತೊಗರಿಕಾಯಿಗೆ ತುಕ್ಕತೊಗರಿ < ತುರುಕ ತೊಗರಿ ಎಂದು ಕರೆಯುವುದನ್ನು ನೆನಸಿಕೊಳ್ಳಬಹುದು)

ಪ್ರ : ಅವರಿಗೇನಪ್ಪ ಕಡಮೆ, ತುರಬೆಡಗು ಮಾಡ್ಕೊಂಡು ತಿರುಗ್ತಾ ಅವರೆ

೧೫೦೦. ತುಲ್ಲು ತೋರಿಸಿ ನೆಲ ಗುದ್ದಿಸು = ಆಸೆ ಹುಟ್ಟಿಸಿ ಮೋಸಗೊಳಿಸು, ಮರುಳು ಮಾಡಿ ಮಣ್ಣು ಮುಕ್ಕಿಸು

ಪ್ರ : ಆ ಚಿನಾಲಿ, ತುಲ್ಲು ತೋರಿಸಿ ನೆಲ ಗುದ್ದಿಸಿದಳು

೧೫೦೧. ತೂಕ ತಪ್ಪು = ಸಮತೋಲನ ಕಳೆದುಕೊಳ್ಳು

ಪ್ರ : ಯಾವತ್ತೂ ಸಂಸಾರದಲ್ಲಿ ತೂಕ ತಪ್ಪಬಾರದು

೧೫೦೨. ತೂಕ ಕೆಡಿಸಿಕೊಳ್ಳು = ಗೌರವ ಕಳೆದುಕೊಳ್ಳು

ಪ್ರ : ಕೆಟ್ಟವರ ಸಂಗ ಮಾಡಿ ತನ್ನ ತೂಕ ಕೆಡಿಸಿಕೊಂಡ

೧೫೦೩. ತೂಗಿ ನೋಡು = ವಿವೇಚಿಸು

ಪ್ರ : ಗಾದೆ – ಹೋಗಿ ನೋಡಿದಿದ್ದರೂ ತೂಗಿ ನೋಡು

೧೫೦೪. ತೂಗೋ ತೊಟ್ಟಿಲು ಏಳು = ಮಳೆ ಬರುವ ಸಂಭವವಿರು

(ತೂಗೋ ತೊಟ್ಟಿಲು = ಈಚಲು ಹುಳ) ತೂಗೋತೊಟ್ಟಿಲು ಅಥವಾ ಈಚಲು ಬಹಳ ಎದ್ದರೆ ಮಳೆ ಬರುತ್ತದೆ ಎಂಬುದು ರೈತಾಪಿ ಜನರ ನಂಬಿಕೆ. ಹವಾಮಾನ ವೈಪರೀತ್ಯದ ಅರಿವು ಕ್ರಿಮಿಕೀಟಗಳಿಗೆ ಬೇಗ ಗೊತ್ತಾಗುವುದೇನೋ. ಮಳೆ ಬರುವುದರ ಮುನ್ಸೂಚನೆಯನ್ನು ಅರಿತೋ ಏನೋ ಇರುವೆಗಳು ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಧಾನ್ಯಗಳನ್ನು ಸಾಲಾಗಿ ಕೊಂಡೊಯ್ಯುವ ದೃಶ್ಯ ಒತ್ತಾಸೆ ನೀಡುತ್ತದೆ.

ಪ್ರ : ತೂಗೋ ತೊಟ್ಟಿಲು ಎದ್ದಿವೆ, ಮಳೆ ಗ್ಯಾರಂಟಿ ಬರ್ತದೆ.