೧೭೨೮. ನಕಲಿ ಮಾಡು = ತಮಾಷೆ ಮಾಡು

(ನಕಲಿ = ಹಾಸ್ಯ)

ಪ್ರ : ನಾಟಕದಲ್ಲಿ ನಕಲಿ ಪಾರ್ಟು ಮಾಡೋದ್ರಲ್ಲಿ ಇವನು ನಿಸ್ಸೀಮ.

೧೭೨೯. ನಕಲಿ ಮಾಲಾಗಿರು = ಕೋಟಾ ವಸ್ತುವಾಗಿರು, ಅಸಲಿವಸ್ತು ಅಲ್ಲದಿರು

(ನಕಲಿ = ಕೋಟಾ)

ಪ್ರ : ಅಸಲಿ ಮಾಲು ಬಿಟ್ಟು ನಕಲಿ ಮಾಲು ಕೊಳ್ಳೋಕೆ ನಿನಗೆ ಬುದ್ಧಿ ಇಲ್ವ?

೧೭೩೦. ನಕ್ಕು ನದರು ಕೊಡು = ನಗುನಗುತ ಪ್ರೀತಿಯ ಕಾನಿಕೆ ಕೊಡು

(ನಗದು = ಕಾಣಿಕೆ, ಕೊಡುಗೆ)

ಪ್ರ : ಅವನು ನಕ್ಕು ನದರು ಕೊಟ್ಟಾಗ ನನಗೆ ಮುಗಿಲು ಮೂರೇ ಗೇಣು ಅನ್ನಿಸಿತು

೧೭೩೧. ನಗಸಾರ ಆಡು = ಸರಸವಾಡು, ತಮಾಷೆಯ ಮಾತಾಡು

(ನಗಸಾರ = ಸರಸ ಸಲ್ಲಾಪ, ತಮಾಷೆ)

ಪ್ರ : ಗಾದೆ – ಬಾಯಿಸುದ್ದ ಇಲ್ಲದೋರ ಜೊತೆ ನಗಸಾರ ಬೇಡ

ಕೈ ಸುದ್ದ ಇಲ್ಲದೋರ ಜೊತೆ ಯಾವಾರ ಬೇಡ

೧೭೩೨. ನಗ್ಗಿ ಹೋಗು = ಪೆಟ್ಟನಿಂದ ತಗ್ಗು ಬೀಳು

ಪ್ರ : ಬಿಂದಿಗೆ ಎತ್ತ ಹಾಕಿ ನಗ್ಗಿ ಹೋಗ್ಯದೆ.

೧೭೩೩. ನಗೆಗೀಡಾಗು = ಅಪಹಾಸ್ಯಕ್ಕೆ ಗುರಿಯಾಗು

(ನಗೆಗೀಡಾಗು < ನನಗೆ + ಈಡಾಗು)

ಪ್ರ : ಅವನ ಅವಿವೇಕದಿಂದ ನಾನು ನಗೆಗೀಡಾಗಬೇಕಾಯ್ತು

೧೭೩೪. ನಗೆಗೇಡಾಗು = ಹಾಸ್ಯಾಸ್ಪದವಾಗು

(ನಗೆಗೇಡು < ನಗೆ + ಕೇಡು)

ಪ್ರ : ನಗೆಗೇಡಾಗುವ ಮಾತನ್ನು ತುಂಬಿದ ಸಭೇಲಿ ಆಡಿಬಿಟ್ಟ.

೧೭೩೫. ನಗೆಪಾಟಲಾಗು = ಅಪಹಾಸ್ಯಕ್ಕೆ ಗುರಿಯಾಗು

ಪ್ರ : ಅವನ ವರ್ತನೆ ಎಲ್ಲರ ನಗೆ ಪಾಟಲಿಗೆ ಕಾರಣವಾಯ್ತು.

೧೭೩೬. ನಗೋರ ಮುಂದೆ ಎಡವಿ ಬೀಳು = ಆಡಿಕೊಳ್ಳುವವರ ಮುಂದೆ ಮುಗ್ಗರಿಸು

ಪ್ರ : ನಗೋರ ಮುಂದೆ ಎಡವಿಬಿದ್ದಂಗಾಯ್ತಲ್ಲ ಅನ್ನೋದೇ ನನ್ನ ಚಿಂತೆ

೧೭೩೮. ನಚ್ಚಗಾಗು = ಹಿತವಾಗು

(ನಚ್ಚಗೆ < ನೊಚ್ಚಗೆ = ತೃಪ್ತಿ, ಹಿತ)

ಪ್ರ : ಮಳೇಲಿ ನೆನೆದು ಬಂದು ಒಲೆ ಮುಂದೆ ಕುಳಿತು, ಬೆಂಕಿ ಕಾವಿಗೆ ಕೈಯೊಡ್ಡಿ, ಎರಡೂ ಅಂಗೈಗಳನ್ನು ಉಜ್ಜಿದರೆ ನಚ್ಚಗಾಗ್ತದೆ, ಬೆಚ್ಚಗಾಗ್ತದೆ.

೧೭೩೯. ನಜ್ಜುಗುಜ್ಜಾಗು = ಪುಡಿಪುಡಿಯಾಗು, ನಗ್ಗಿ ಹೋಗು

(ನಜ್ಜು < ನಜಗು < ನಜುಕ್ಕು(ತ) = ನುರುಕು)

ಪ್ರ : ಅಟ್ಟದ ಮೇಲಿಂದ ತಪ್ಪಲೆ ಕೆಳಕ್ಕೆ ಬಿದ್ದು ನಜ್ಜುಗುಜ್ಜಾಗಿದೆ.

೧೭೪೦. ನಟಿಗೆ ತೆಗೆ = ದೃಷ್ಟಿ ತೆಗೆ

(ನಟಿಕೆ = ಚಿಟುಕು, ಬೆರಳುಗಳ ಗೆಣ್ಣನ್ನು ಒತ್ತಿದಾಗ ಬರುವ ಲಟಲಟ ಸದ್ದು)

ಮುದ್ದಾದ ಮಕ್ಕಳನ್ನು ಕಣ್ತುಂಬ ನೋಡಿ, ಅವುಗಳಿಗೆ ದೃಷ್ಟಿಯಾಗುತ್ತದೆಂದು ಮಕ್ಕಳ ಮುಖವನ್ನು ಹಿಡಿದು ಮುದ್ದಾಡಿ, ಬಳಿಕ ತಮ್ಮ ಎರಡೂ ಕೈಗಳ ಬೆರಳುಗಳನ್ನು ತಮ್ಮ ಕೆನ್ನೆಯ ಮೇಲಿಟ್ಟುಕೊಂಡು ಅದುಮಿ ಲಟಲಟ ನಟಿಕೆ ತೆಗೆಯುತ್ತಾರೆ. ಆ ಮೂಲದ ನುಡಿಗಟ್ಟು ಇದು.

ಪ್ರ : ದೃಷ್ಟಿಯಾಗ್ತದೆ ಅಂತ ನಟಗೆ ತೆಗೆದೆ, ಪಾಚ್ಕೊಳ್ಳೋ ತುಂಟ.

೧೭೪೧. ನಟಿಕೆ ಮುರಿ = ಶಾಪ ಹಾಕು.

ದೃಷ್ಟಿ ತೆಗೆಯುವಾಗ ತಮ್ಮ ಕೆನ್ನೆಯ ಮೇಲೆ ಕೈಯಿಟ್ಟು ಬೆರಳುಗಳನ್ನು ಮಡಿಸಿ ನಟಿಗೆ ತೆಗೆದರೆ, ನಿನ್ನ ಮನೆ ಹಾಳಾಗಲಿ ಅಂತ ಶಾಪ ಹಾಕುವಾಗ ತಮ್ಮ ಎರಡೂ ಕೈಗಳ ಬೆರಳುಗಳನ್ನು ಪರಸ್ಪರ ಹೆಣೆದು ನಟಿಗೆ ಮುರಿಯುತ್ತಾರೆ.

ಪ್ರ : ಹೊತ್ತು ಹುಟ್ಟುತ್ಲೆ, ಹೊತ್ತು ಮುಳುಗುತ್ಲೆ ಇವರ ಮನೆ ಗುಡಿಸಿ ಗುಂಡಾಂತರ ಆಗಲಿ ಅಂತ ನಟಿಗೆ ಮುರೀತಾಳೆ, ಮನೆಹಾಳಿ.

೧೭೪೨. ನಟ ಕಟ್ಟಿ ನಿಲ್ಲು = ಸಿದ್ಧವಾಗಿ ನಿಲ್ಲು, ಸನ್ನದ್ಧವಾಗಿರು

(ನಡ < ನಡು = ಸೊಂಟ) ಸಾಮಾನ್ಯವಾಗಿ ಅರ್ಚಕರು, ಮಹಾಭಕ್ತರು ದೇವರ ಸೇವೆಗೆ ಮೀಸಲಾಗಿದ್ದೇವೆ ಎಂಬುದನ್ನು ಸೂಚಿಸುವಂತೆ ಸೊಂಟದ ಸುತ್ತ ಒಂದು ವಸ್ತ್ರವನ್ನು ಬಿಗಿದುಕೊಂಡಿರುತ್ತಾರೆ. ಆ ಮೂಲದ ನುಡಿಗಟ್ಟಿದು.

ಪ್ರ : ನಿಮಗಾಗಿ ನಾವು ನಡಕಟ್ಟಿ ನಿಂತಿದ್ದೇವೆ, ಏನೇ ಮಾಡಲಿಕ್ಕೂ ನಾವು ತಯಾರು.

೧೭೪೩. ನಡುಕಟ್ಟು ಕಿತ್ತೆಸೆ = ಸೊಂಟ ಪಟ್ಟಿಯನ್ನು ಕಿತ್ತು ಬಿಸಾಡು

(ನಡುಕಟ್ಟು = ಪಟ್ಟಣಿ, Belt)

ಪ್ರ : ನಡ ಗಟ್ಟಿಗಿದ್ರೆ ನಡುಕಟ್ಟು ಯಾಕೆ?

೧೭೪೪. ನಡತೆಗೆಡು = ಕೆಟ್ಟ ಚಾಳಿಗಿಳಿ

ಪ್ರ : ಗಾದೆ – ನಡತೆ ಕಲಿಯೋದು ಏರುಬಂಡೆ

ನಡತೆ ಕೆಡೋದು ಜಾರುಬಂಡೆ

೧೭೪೫. ನಡು ನೀರಿನಲ್ಲಿ ಕೈ ಬಿಡು = ಅಪಾಯದ ಹೊತ್ತಿನಲ್ಲಿ ದೂರು ಸರಿ. ವಂಚಿಸು

ಪ್ರ : ಅನ್ನಿಗರನ್ನು ಅಂದೇನು ಫಲ. ಒಡಹುಟ್ಟಿದೋರೇ ನಡುನೀರಿನಲ್ಲಿ ಕೈಬಿಟ್ಟರು.

೧೭೪೬. ನಡು ಭದ್ರವಿಲ್ಲದಿರು = ಶಕ್ತಿ ಇಲ್ಲದಿರು

ಪ್ರ : ನಡುಭದ್ರ ಇಲ್ಲದೋನಿಗೆ ಇಬ್ಬರು ಹೆಂಡ್ರು, ಮೇಲೊಬ್ಬಳು ಸೂಳೆ

೧೭೪೭. ನಡೆದಾಡುವ ಹೆಣದಂತಿರು = ನಿಷ್ಕ್ರಿಯನಾಗಿರು, ಜೀವಶ್ರವವಾಗಿರು

ಪ್ರ : ಅವನು ಜೀವಂತ ಮನುಷ್ಯನಾಗಿಲ್ಲ, ನಡೆದಾಡುವ ಹೆಣವಾಗಿದ್ದಾನೆ.

೧೭೪೮. ನಡೆಮಡಿ ಮೇಲೆ ಹೋಗು = ವಿಶೇಷ ಸೌಲಭ್ಯದೊಡನೆ ಸಾಗು, ಮಡಿಯಲ್ಲಿ ಅಡಿ ಇಡು.

ದೇವರ ಉತ್ಸವಗಳು ಆಗುವಾಗ, ಮಡೆಗಡಿಗೆ ಹೊರುವ ಪೂಜಾರಿ, ಕೊಂಡ ಹಾಯಲು ಬಾಯಿಬೀಗ ಚುಚ್ಚಿಸಿಕೊಂಡವರು ಹಾದು ಹೋಗಲು ಅಗಸರವನು ಮಡಿ ಬಟ್ಟೆಯನ್ನು ಹಾಸುತ್ತಾ ಹೋಗುತ್ತಾನೆ. ಅದಕ್ಕೆ ನಡೆಮಡಿ ಎಂದು ಹೆಸರು. ನಡೆಮಡಿಯನ್ನು ಹಾಸದಿದ್ದರೆ ಅವರು ಬರಿ ನೆಲದ ಮೇಲೆ ಕಾಲಿಡುವುದಿಲ್ಲ. ಆ ಆಚರಣೆಯ ಮೂಲದ್ದು ಈ ನುಡಿಗಟ್ಟು.

ಪ್ರ : ಅಮ್ಮನೋರು ನಡೆಮಡಿ ಮೇಲೆ ಹೋಗಬೇಕೆನೋ, ಎಲ್ಲರ ಜೊತೆ ಹೊರಟಿಲ್ಲ.

೧೭೪೯. ನಡೊಲೇಲಿಕ್ಕಿ ಕೋಡೊಲೇಲಿ ತೆಗಿ = ಚಿತ್ರಹಿಂಸೆ ಕೊಡು

(ನೊಡಲೆ < ನಡು + ಒಲೆ = ಮಧ್ಯದ ಒಲೆ ; ಕೋಡೊಲೆ < ಕೂಡೊಲೆ < ಕೂಡು + ಒಲೆ = ನಡೊಲೆಗೆ ಕೂಡಿಕೊಂಡಂತಿರುವ ಪಕ್ಕದ ಒಲೆ. ನಡೊಲೆಯ ಉರಿ ಪಕ್ಕದ ಕೂಡೊಲೆಯ ರಂದ್ರದಲ್ಲಿ ಬರುವ ಹಾಗೆ ಮಾಡಿರುವಂಥದು.)

ಪ್ರ : ಇವಳು ಸೂಸೇನ ನಡೊಲೇಲಿಕ್ಕಿ ಕೋಡೊಲೇಲಿ ತೆಗಿಯೋದು ಯಾರಿಗೆ ಗೊತ್ತಿಲ್ಲ?

೧೭೫೦. ನಮನಮಗುಟ್ಟು = ಆತಂಕಪಟು, ದಿಗಿಲುಗೊಳ್ಳು

(ನಮನಮ < ನಮಃ + ನಮಃ < ಓಂ ನಮಃ + ಓಂ ನಮಃ = ಓಂಕಾರ ಸ್ವರೂಪಿಯಾದ ಪರಮಾತ್ಮನಿಗೆ ನಮನ ಸಲ್ಲಿಸುತ್ತಾ ಸ್ಮರಿಸುವ ರೀತಿ)

ಪ್ರ : ನೀರಿನಲ್ಲಿ ಕುಂತಿದ್ದೀಯ, ಅಲ್ಲಿ ನಿಮ್ಮಪ್ಪ ಬೆಳಿಗ್ಗೆ ಹೋದೋನು ರಾತ್ರಿಯಾದರೂ ಮನೆಗೆ ಬಂದಿಲ್ಲ ಅಂತ ನಮನಮಗುಟ್ತಾ ಅವನೆ

೧೭೫೧. ನರ ಕಿತ್ತುಕೊಳ್ಳು = ಜೋರಾಗಿ ಅರಚಿಕೊಳ್ಳು

ಪ್ರ : ಯಾಕೆ ಹಿಂಗೆ ನರ ಕಿತ್ಕೊಳ್ಳಿ, ಸುಮ್ನೆ ಬಿದ್ದಿರು

೧೭೫೨. ನರ ಸೇದು = ಸಾಯು, ಮರಣ ಹೊಂದು

ಪ್ರ : ಗಾದೆ – ದೇವರ ಪರಸಾದ, ಕಣ್ಣಿಗೊತ್ತಿಕೊಳ್ಳೋ ನಿನ್ನ ನರ ಸೇದ.

೧೭೫೩. ನರಿಬುದ್ಧಿ ತೋರಿಸು = ನುಣುಚಿಕೊಳ್ಳು, ಕೈಕೊಡು, ಕುತಂತ್ರ ಮಾಡು

ಪ್ರ : ನಿಮ್ಮ ಕಡೇನೇ ಇರ್ತೀನಿ ಅಂದೋನು ಕೊನೇ ಗಳಿಗೇಲಿ ನರಿಬುದ್ಧಿ ತೋರಿಸಿಬಿಟ್ಕ.

೧೭೫೪. ನರಿ ಮುಖ ನೋಡು = ಒಳ್ಳೆಯದಾಗು, ಅದೃಷ್ಟ ಕುಲಾಯಿಸು.

ನರಿಮುಖ ನೋಡಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಜನಪದರಲ್ಲಿ ಜನಜನಿತ. ನಂಬಿಕೆ ಜನಮನದಲ್ಲಿ ಬೇರೂರುವುದು ಅಂಥ ಹಲವಾರು ಸಾಲನುಭವಗಳು ಸತ್ಯ ಎಂದು ಖಾತ್ರಿಯಾದಾಗ. ಆದ್ದರಿಂದ ಎಲ್ಲ ಜನಪದ ಅನುಭವಗಳನ್ನು ಸಾರಾಸಗಟಾಗಿ ಕುರುಡು ನಂಬಿಕೆಗಳೆಂದು ಗುಡಿಸಿ ಮೂಲೆಗೆ ತಳ್ಳಲಾಗುವುದಿಲ್ಲ.

ಪ್ರ : ಎದ್ದೋನೆ ಎಲ್ಲೋ ನರಿಮುಖ ನೋಡಿದ್ದೆ ಹೋಗು, ಇಲ್ಲದಿದ್ರೆ ಇದೆಲ್ಲಿ ಸಿಕ್ಕೋದು?

೧೭೫೫. ನಲುಗಿ ಹೋಗು = ಸೊರಗಿ ಹೋಗು, ಕಷ್ಟದಿಂದ ಹಣ್ಣಾಗು

(ನಲುಗು = ಸೊರಗು, ಕೃಶವಾಗು)

ಪ್ರ : ಕುಟುಂಬದ ತಾಪತ್ರಯಗಳಿಂದ ಇತ್ತೀಚೆಗೆ ತುಂಬ ನಲುಗಿ ಹೋಗಿದ್ದಾನೆ.

೧೭೫೬. ನವಿರೇಳು = ರೋಮಾಂಚನವಾಗು

(ನವಿರು = ಕೂದಲು ; ಏಳು = ನೆಟ್ಟಗಾಗು)

ಪ್ರ : ಸವಿಮುತ್ತಿಗೆ ನವಿರೇಳದವರಾರು?

೧೭೫೭. ನವೆಯಾಗು = ಕಾಮೋದ್ದೀಪನವಾಗು, ಏಟು ಹೊಡೆಯಲು ಅಥವಾ ಏಟು

ತಿನ್ನಲು ತವಕಿಸು

(ನವೆ = ಕಡಿತ)

ಪ್ರ : ಸುಮ್ನಿರೋಕಾಗಲ್ವ ? ಯಾಕೆ ನವೆಯಾಗ್ತದ?

೧೭೫೮. ನವೆದು ನೂಲಾಗು = ಕ್ಷೀಣಿಸು, ಕ್ಷಯಿಸು

(ನವೆಯುವುದು = ಸವೆಯುವುದು)

ಪ್ರ : ಅವನ್ನ ನೋಡೋಕಾಗಲ್ಲ, ನವೆದು ನೂಲಾಗಿಬಿಟ್ಟಿದ್ದಾನೆ.

೧೭೫೯. ನಸನಸ ಎನ್ನು = ಕಾಮೋದ್ದೀಪನದಿಂದ ತಳಮಳಿಸು, ಚುಮಚುಮ ಎಂದು ನವೆಯಾಗು

ಪ್ರ : ನಸನಸ ಅಂತಿರೋದ್ಕೆ ಮುಸಮುಸ ಅಂತ ಬುಸುಗರೀತಿರೋದು.

೧೭೬೦. ನಸುಕಾಗು = ಬೆಳಗಿನ ಜಾವವಾಗು, ಬೆಳಗಾಗುವ ಹೊತ್ತಾಗು

ಪ್ರ : ಅವನು ಊರಿಗೆ ಬಂದಾಗ ಆಗಲೆ ನಸುಕಾಗಿತ್ತು

೧೭೬೧. ನಸುಗುನ್ನಿಕಾಯಿ ವಿದ್ಯೆ ತೋರಿಸು = ತಂದಿಕ್ಕಿ ತಮಾಷೆ ನೋಡುವ ನಾರದ ವಿದೆಯ ತೋರಿಸು.

(ನಸುಗುನ್ನಿಕಾಯಿ = ಸೋಕಿದರೆ ಗಂದೆ ಏಳುವ, ಮೈಯೆಲ್ಲ ನವೆಯಾಗುವ ಒಂದು ಬಗೆಯ ಸಸ್ಯದ ಕಾಯಿ)

ಪ್ರ : ಅವನ ನುಸಗುನ್ನಿಕಾಯಿ ವಿದ್ಯೆ ಊರೊಳಗೆ ಯಾರಿಗೆ ಗೊತ್ತಿಲ್ಲ?

೧೭೬೨. ನಸೆ ಹತ್ತು = ಬೆದೆಗೊಳ್ಳು

(ನಸೆ = ನವೆ, ಸಂಭೋಗಕಾತರ)

ಪ್ರ : ನಸೆ ಹತ್ತಿದ ಕಡಸಿನಂಗೆ ಹೋರಿ ಹಿಂದೆ ಪಾರು. (< ಹಾರು = -ಓ-ಡಿ ಹೋಗು)

೧೭೬೩. ನಾಗರಾಗು = ಮೈಮೇಲೆ ಗುಳ್ಳೆಗಳೇಳು, ಸಣ್ಣ ಸಣ್ಣ ಗಾಯಗಳಾಗು.

ಜನಪದರು ‘ನಾಗರಾಗಿದೆ’ ಎಂದು ನಾಗರಪೂಜೆ ಮಾಡಿ, ಹುತ್ತದ ಮಣ್ಣನ್ನು ತಂದು ಗಾಯಗಳಿಗೆ ಹಚ್ಚುತ್ತಾರೆ. ಅದು ವಾಸಿಯಾಗುತ್ತದೆ. ಬಹುಶಹ ಗಾಯವನ್ನು ವಾಸಿ ಮಾಡುವ ಹಣ ಹುತ್ತದ ಮಣ್ಣಿನಲ್ಲಿರಬೇಕು. ಏಕೆಂದರೆ ಗೆದ್ದಲು ಹುಳ ಎಂಜಲಿನಿಂದ ಮಣ್ಣನ್ನು ನೆನಸಿ ಹುತ್ತಗಟ್ಟಿರುತ್ತದೆ. ಆದ್ದರಿಂದ ಆಧುನಿಕ ಕಾಲದ ಪಾಶ್ಚಾತ್ಯ ವೈದ್ಯ ಪದ್ಧತಿಯಲ್ಲಿ ನುರಿತವರು ಹುತ್ತದ ಮಣ್ಣಲ್ಲಿರುವ ಗಾಯವನ್ನು ಮಾಯಿಸುವ ಮದ್ದಿನ ಗುಣದ ಸತ್ಯಾಸತ್ಯತೆಯನ್ನು ಬಹಿರಂಗಗೊಳಿಸುವುದು ಸೂಕ್ತ.

ಪ್ರ :ಇದು ಬೇರೇನಲ್ಲ, ನಾಗರಾಗಿದೆ. ನಾಗರಿಗೆ ತನಿ ಎರೆದು, ಹುತ್ತದ ಮಣ್ಣನ್ನು ತಂದು ಹಚ್ಚಿ ವಾಸಿಯಾಗ್ತದೆ.

೧೭೬೪. ನಾಗವಳಿ ಮೇಲೆ ಆಣೆ ಮಾಡಿ ಹೇಳು = ಪ್ರಾಮಾಣಿಕವಾಗಿ ಹೇಳು, ಶಪಥ

ಮಾಡಿ ಹೇಳು

(ನಾಗವಳಿ < ನಾಗವಲ್ಲಿ = ವೀಳ್ಯದ ಎಲೆ) ದೇವರ ಮೇಲೆ, ತಂದೆತಾಯಿಗಳ ಮೇಲೆ, ಭೂಮಿತಾಯಿ ಮೇಲೆ, ಮಗುವಿನ ಮೇಲೆ ಆಣೆ ಇಟ್ಟು ಹೇಳುವಂತೆಯೇ ನಾಗವಳಿ ಮೇಲೆ ಆಣೆ ಇಟ್ಟು ಹೇಳುವ ಪದ್ಧತಿ ಸಮಾಜದಲ್ಲಿ ಚಾಲ್ತಿಯಲ್ಲಿದೆ. ವಿಳ್ಯದೆಲೆಗೆ ಸಿಕ್ಕಿದ ಈ ಗೌರವ ಚಿಂತನಾರ್ಹ.

ಪ್ರ : ಈ ನಾಗವಳಿ ಮೇಲೆ ಆಣೆ ಇಟ್ಟು ಹೇಳ್ತೀನಿ. ಆ ಬಗ್ಗೆ ನನಗೆ ಏನೇನೂ ಗೊತ್ತಿಲ್ಲ.

೧೭೬೫. ನಾಗಾಲೋಟ ಓಡು. = ವೇಗವಾಗಿ ಓಡು, ದೌಡು ಹೋಗು

(ನಾಗಾಲೋಟ < ನಾಲ್ಕು ಕಾಲ ಓಟ) ಪ್ರಾಣಿಗಳು ತಮ್ಮ ಮುಂದಿನ ಕಾಲುಗಳನ್ನು ಹಿಂದಿನ ಕಾಲುಗಳನ್ನು ಎತ್ತಿ ಮುಂದಕ್ಕೆಸೆಯುತ್ತಾ ಓಡುವ ರೀತಿಗೆ ನಾಗಾಲೋಟ ಎನ್ನುತ್ತಾರೆ.

ಪ್ರ : ನಾಗಾಲೋಟದಲ್ಲಿ ಹೋಗಿ, ಇದನ್ನು ಅವನಿಗೆ ತಲುಪಿಸಿ ಬರಬೇಕು.

೧೭೬೬. ನಾಚಾರಾಗು = ಬಡವಾಗು

(ನಾಚಾರು < ಲಾಚಾರ್ (ಹಿಂ) = ಕೃಶ)

ಪ್ರ : ತಿನ್ನೋಕೆ ಹುಲ್ಲಿಲ್ಲದೆ ದನಗಳೆಲ್ಲ ನಾಚಾರಾಗಿವೆ.

೧೭೬೭. ನಾಚಿ ನೀರಾಗು = ನಾಚಿಕೆಯಿಂದ ದ್ರವಿಸಿ ಹೋಗು, ಹೆಚ್ಚು ಲಜ್ಜಾಭಾವ ಉಂಟಾಗು

ಪ್ರ : ಬಚ್ಚಲ ಮನೆಗೆ ಬಂದೋನು, ಬೆತ್ತಲೆ ಇದ್ದ ನನ್ನ ಕಂಡು ನಾಚಿನೀರಾಗಿಬಿಟ್ಟ.

೧೭೬೮. ನಾಡಾಗಾಡೋ ಮಾತ್ನೆಲ್ಲ ಓಡಾಗ್ಹುರಿ = ಚಟಪಟನೆ ಮಾತನಾಡು. ಶಬ್ದ ದಾರಿದ್ರ ಇಲ್ಲದಿರು.

(ಓಡು = ಬಾಣಲಿಯಾಕಾರದ ಒಡೆದ ಮಡಕೆಯ ತಳಭಾಗ. ಕಾಳನ್ನು ಹುರಿಯಲು ಗ್ರಾಮಾಂತರ ಪ್ರದೇಶದಲ್ಲಿ ಹಿಂದೆ ಬಳಸುತ್ತಿದ್ದಂಥ ಸಾಧನ) ಕಾಯಿಗಳು ಒಣಗಿ ತಳ್ಳಾದ ಮೇಲೆ, ಅವುಗಳೆನ್ನೆಲ್ಲ ಕಿತ್ತು ತಂದು ಕಣದಲ್ಲಿ ಚಚ್ಚಿ, ಉಜ್ಜಿ, ಕಾಳನ್ನು ಬೇರ್ಪಡಿಸಿ, ಒಟ್ಟುಗೂಡಿಸಿ ಮನೆಗೆ ತರುತ್ತಾರೆ. ತಮಗೆ ಬೇಕಾದಷ್ಟನ್ನು ಓಡಿನಲ್ಲಿ ಹಾಕಿ ಹುರಿಯುವಾಗ, ಕಾಳುಗಳು ಚಟಪಟಗುಟ್ಟುತ್ತಾ ಅವಲಾಗಿ ಸಿಡಿಯುತ್ತವೆ. ಆ ಕ್ರಿಯೆಗೆ ಈ ನುಡಿಗಟ್ಟಿನ ಬೆನ್ನಿಗಿದೆ. ಆದರೆ ಇಲ್ಲಿ ಹೆಚ್ಚು ಗಮನಿಸುವಂಥದು ತಮ್ಮ ಜಮೀನಿನಲ್ಲಿರುವ ತಳ್ಳುಗಳನ್ನು ಬಿಡಿಸಿ ತಂದು, ಕಾಳುಗಳನ್ನು ಹೊರತೆಗೆದು, ಅವುಗಳನ್ನು ಪುಟ್ಟಿ ತುಂಬಿಕೊಳ್ಳುವಂತೆ, ಇಲ್ಲಿ ಇಡೀ ನಾಡಲ್ಲಿರುವ ಶಬ್ದ (ಮಾತು)ಗಳನ್ನು ಒಟ್ಟುಗೂಡಿಸಿ ತಂದು ನಾಲಗೆ ಓಡಲ್ಲಿ ಹುರಿಯುವುದು ಎಂದರೆ, ಆ ಎಲ್ಲ ಶಬ್ದಭಂಡಾರ ಕರಗತವಾಗಿರುವುದನ್ನು ತುಂಬ ಶಕ್ತಿಯುತವಾಗಿ ಕಟ್ಟಿಕೊಡುತ್ತಿದೆ ಎಂಬುದನ್ನು.

ಪ್ರ : ಕುಲ ಯಾವುದಾದ್ರೇನು, ನಾಡಗಾಡೋ ಮಾತ್ನೆಲ್ಲ ಓಡಾಗ್ಹುರೀತಾನೆ, ಅದಕ್ಕೆ ಬೆಲೆ ಕೊಡಿ

೧೭೬೯. ನಾಡಿ ನಿಲ್ಲು = ಮರಣ ಹೊಂದು

(ನಾಡಿ = ರಕ್ತ ಸಂಚರಿಸುವ ನಾಳ)

ಪ್ರ : ಗಾದೆ – ನಾಡಿ ನಿಂತ ಮೇಲೆ ನಾಡಾದ್ರೇನು, ಕಾಡಾದ್ರೇನು?

೧೭೭೦. ನಾಡಿ ಹಿಡಿದು ನೋಡು = ಸಮಸ್ಯೆಯ ಮೂಲ ಹಿಡಿದು ಚಿಂತಿಸು

ಪ್ರ : ನಾಡಿ ಹಿಡಿದು ನೋಡಿದಾಗ ಅದರ ಜಾಡು ಸಿಗ್ತದೆ.

೧೭೭೧. ನಾಣ್ಯವಾಗಿರು = ನಯನಾಜೂಕಿನಿಂದ ಕೂಡಿರು, ಅಂದವಾಗಿರು

ಪ್ರ : ಹುಡುಗಿ ತುಂಬ ನಾಣ್ಯವಾಗಿದ್ದಾಳೆ, ಮದುವೆ ಮಾಡಿಕೊಳ್ಳಬಹುದು.

೧೭೭೨. ನಾಣ್ಯದ ಗತಿಯಾಗು = ಸವೆಯುವ ತನಕ ಚಲಾವಣೆಯಲ್ಲಿದ್ದು, ಸವೆದ ಮೇಲೆ ಮೂಲೆ ಸೇರು.

ಪ್ರ : ನಡೆಯೋತನಕ ನಾಣ್ಯ ಎಂಬ ಗಾದೆ ನಮ್ಮ ಸಮಾಜದಲ್ಲಿ ಹೆಣ್ಣಿನ ಹಣೆಬರೆಹಕ್ಕೆ ಬರೆದ ಭಾಷ್ಯದಂತಿದೆ.

೧೭೭೩. ನಾದಾರಾಗು = ದಿವಾಳಿಯಾಗು

(ನಾದಾರು < ನಾದಾರ್ (ಹಿ) = ಪಾಪರ್)

ಪ್ರ : ಅವನಿಗೆ ಯಾವ ಆಧಾರ ಇದೆ, ನಾದಾರಾಗಿ ನೆಲ ಕಚ್ಚಿದ್ದಾನೆ.

೧೭೭೪. ನಾನು ಮುಂದು ತಾನು ಮುಂದು ಎಂದು ಬರು = ಒಬ್ಬರ ಮೇಲೊಬ್ಬರು ಬಿದ್ದು ಬರು, ವಸ್ತು ಅಂದವಾಗಿರು.

ಪ್ರ : ಗೊಂಬೆ ಅಂತ ಹೆಣ್ಣು ನೋಡಿ, ಮದುವೆ ಆಗಬೇಕೂಂತ ನಾನು ಮುಂದು ತಾನು ಮುಂದು ಅಂತ ಜನ ಮುಗಿಬಿದ್ದು ಬರ್ತಾರೆ.

೧೭೭೫. ನಾಮ ಹಾಕು = ಮೋಸ ಮಾಡು.

ವಿಭೂತಿ ವೀರಶೈವ ಮತಸೂಚಕವಾದರೆ ನಾಮ ವೈಷ್ಣವಮತ ಸೂಚಕ. ರಾಮಾನುಜಾಚಾರ್ಯರು ಹಾಗೂ ಅವರ ಅನುಯಾಯಿಗಳು ತಮಿಳುನಾಡಿನಿಂದ ಕರ್ನಾಟಕಕ್ಕೆ ಓಡಿ ಬಂದ ಮೇಲೆ ಮೂಡಿದ ನುಡಿಗಟ್ಟಿದು. ಮೋಸ ಮಾಡು ಎಂಬ ಅರ್ಥದಲ್ಲಿ ವಿಭೂತಿ ಹಾಕು ಎಂಬ ನುಡಿಗಟ್ಟು ಚಾಲ್ತಿಗೆ ಬರದೆ ನಾಮ ಹಾಕು ಎಂಬ ನುಡಿಗಟ್ಟು ಚಾಲ್ತಿಗೆ ಬಂದಿರುವುದು ನಿಗೂಢವಾಗಿದೆ. ಬಹುಶಃ ವೈಷ್ಣವ ಮತಕ್ಕೆ ಜನರನ್ನು ಮತಾಂತರಿಸಿದರು ಎಂಬ ಅರ್ಥದಲ್ಲಿ ಮೊದಲು ಬಳಕೆಯಾಗಿ, ಕ್ರಮೇಣ ಮೋಸ ಮಾಡು ಎಂಬ ಪ್ರಸ್ತುತಾರ್ಥಕ್ಕೆ ಪದಾರ್ಪನ ಮಾಡಿರಬಹುದೆ? ಎಂಬುದು ಮನನಾರ್ಹ.

ಪ್ರ : ಅವನು ಯಾರಿಗೆ ನಾಮ ಹಾಕಿಲ್ಲ, ಹೇಳು?

೧೭೭೬. ನಾಮರ್ಧ ಕೆಲಸ ಮಾಡು = ಷಂಡ ಕೆಲಸ ಮಾಡು

(ನಾಮರ್ದ < ನ + ಮರ್ದ = ಗಂಡಸಲ್ಲದವನು, ಷಂಡ; ಮರ್ದ = ಗಂಡಸು)

ಪ್ರ : ಇಂಥ ನಾಮರ್ದ ಕೆಲಸ ಮಾಡೋದ್ಕಿಂತ ಸುಮ್ಮನೆ ಇದ್ದಿದ್ರೆ ಎಷ್ಟೊ ಚೆನ್ನಾಗಿರ್ತಿತ್ತು.

೧೭೭೭. ನಾಯಡಿದಂತಾಡು = ಒಂದೇ ಸಮನೆ ಬೊಗಳು, ಘನತೆ ಬಿಟ್ಟು ವರ್ತಿಸು

ಪ್ರ : ಅವನ ಹೆಂಡ್ರು, ಮನೆಗೆ ಯಾರಾದರೂ ಹೋದ್ರೆ, ಒಳ್ಳೆ ನಾಯಾಡಿದಂಗಾಡ್ತಾಳೆ.

೧೭೭೮. ನಾಯಿಪಾಡಾಗು = ಅನ್ನಕ್ಕೆ ಅಲೆದಾಡುವ ಪರಿಸ್ಥಿತಿಯೊದಗು.

ಪ್ರ : ನನಗೆ ಬಂದ ನಾಯಿಪಾಡು ಊರ್ಗೇ ಗೊತ್ತಿದೆ, ಗುಟ್ಟೇನು ಬಂತು?

೧೭೭೯. ನಾಯಿಬೆಕ್ಕಿನ ಸಂಬಂಧವಾಗು = ಕಚ್ಚಾಡು, ಜಗಳವಾಡು

ಪ್ರ : ಗಂಡ ಹೆಂಡ್ರು ಸಂಬಂಧ ನಾಯಿಬೆಕ್ಕಿನ ಸಂಬಂಧ ಆಗಬಾರ್ದು

೧೭೮೦. ನಾಯಿ ಕೆಮ್ಮು ಬಂದು ನೆಗೆದು ಬೀಳು = ಗೂರಲು ಬಂದು ಮರಣ ಹೊಂದು

(ನೆಗೆದು ಬೀಳು = ಸಾಯು)

ಪ್ರ : ಹೆಂಗೆ ಸತ್ತ ಅಂದ್ರೆ, ನಾಯಿಕೆಮ್ಮು ಬಂದು ನೆಗೆದು ಬಿದ್ದ.

೧೭೮೧. ನಾಯಿ ನರಿ ತಿನ್ನು = ದಿಕ್ಕಿಲ್ಲದಂತಾಗು, ಹಾಳಾಗು

ಪ್ರ : ಗಾದೆ – ನಂದರಾಜನ ಬದುಕು ನಾಯಿನರಿ ತಿಂದು ಹೋಯ್ತು. (ಕರ್ನಾಟಕವನ್ನು ಆಳಿದವರಲ್ಲಿ ನಂದವಂಶವೂ ಒಂದು. ಅವರ ಕಾಲದಲ್ಲಿ ಚರ್ಮದ ನಾಣ್ಯಗಳಿದ್ದುವೆಂದೂ, ಅವುಗಳನ್ನು ನಾಯಿಗಳು ಕಚ್ಚಿಕೊಂಡು ಹೋಗಿ ತಿನ್ನುತ್ತಿದ್ದವೆಂದೂ ಆ ಗಾದೆಗೆ ಐತಿಹ್ಯ ಉಂಟು. ನಂದರ ಕಾಲದಲ್ಲಿ ಚರ್ಮದ ನಾಣ್ಯಗಳು ಇದ್ದವೆ ಅಥವಾ ಇಲ್ಲವೆ ಎಂಬುದನ್ನು ಇತಿಹಾಸಕಾರರು ನಿರ್ಧರಿಸಬೇಕಾಗುತ್ತದೆ._

೧೭೮೨. ನಾಯಿ ನಾಲಗೆಯಂತಿರು = ತುಂಬ ತೆಳ್ಳಗಿರು

ಪ್ರ : ನಾಯಿ ನಾಲಗೆಯಂತಿರುವ ಇದು, ಅಷ್ಟೊಂದು ಭಾರ ತಡೆಯುತ್ತ?

೧೭೮೩. ನಾಯಿ ಬಾಳಾಗು = ಅಲೆದಾಟವಾಗು, ಸದಾ ಓಡಾ-ಟ-ವಾ-ಗು

ಪ್ರ : ಗಾದೆ – ನಾಯಿಗೆ ಕೆಲಸವಿಲ್ಲ, ನಿಲ್ಲೋಕೆ ಹೊತ್ತಿಲ್ಲ

೧೭೮೪. ನಾಯಿ ಹೊಡಿಯೋ ಕೋಲಿನಂತಿರು = ತೆಳ್ಳಗಿರು, ಸಣ್ಣಗಿರು

ಪ್ರ : ಹೆಂಡ್ರು ಗಟ್ಟಿಸಿದ ಮುಡೆ ಇದ್ದಂಗವಳೆ, ಗಂಡ ನಾಯಿ ಹೊಡಿಯೋ ಕೋಲಿದ್ದಂಗವನೆ.

೧೭೮೫. ನಾರೆತ್ತು = ಚರ್ಮ ಸುಲಿ, ಹಿಂಸಿಸು

(ನಾರು = ಮರದ ತಿಗುಡು, ತೆಂಗನಕಾಯಿ ಜುಂಜು)

ಪ್ರ : ಇವತ್ತು ಅವನಿಗೆ ಚೆನ್ನಾಗಿ ನಾರೆತ್ತಿದ್ದೀನಿ.

೧೭೮೬. ನಾಲಗೆ ಇರಿದುಕೊಳ್ಳು = ಅರಚಿಕೊಳ್ಳು, ಕಿರುಚಿಕೊಳ್ಳು

ನಾಲಗೆ ಇರಿದುಕೊಂಡು ಸಾಯುವ ಪದ್ಧತಿ ಹಿಂದೆ ಇತ್ತೆಂದು ಕಾಣುತ್ತದೆ. ಇಂದಿಗೂ ಹಳ್ಳಿಗಾಡಿನಲ್ಲಿ ‘ನೀನು ಹಂಗೆ ಮಾಡಿದ್ರೆ, ನಾನು ನಾಲಗೆ ಇರಿದುಕೊಂಡು ಸಾಯ್ತೇನೆ’ ಎಂದು ಹೇಳುವುದು, ಹಿಂದಿನ ಆ ಪದ್ಧತಿಯ ಪಳೆಯುಳಿಕೆ ಎನ್ನಿಸುತ್ತದೆ. ಆದರೆ ಈಗ ಅದು ಹೆಚ್ಚಾಗಿ ಅರಚಿಕೊಳ್ಳು ಎನ್ನುವ ಅರ್ಥದಲ್ಲಿ ಬಳಕೆಯಲ್ಲಿದೆ.

ಪ್ರ : ಮಕ್ಕಳು ಹಂಗೆ ನಾಲಗೆ ಇರಿದುಕೊಂಡ್ರೂ, ಮಕ್ಕಳ ಕೈಗೆ ತಿನ್ನೋಕೆ ಏನೂ ಕೊಡಲಿಲ್ಲವಲ್ಲ, ಜೀನಿ.

೧೭೮೭. ನಾಲಗೆ ಉದ್ದ ಮಾಡು = ಹದ್ದು ಮೀರು, ಬಾಯಿಗೆ ಬಂದಂತೆ ಮಾತಾಡು

ಪ್ರ : ನೀನು ಇತ್ತೀಚೆಗೆ ನಾಲಗೆ ತುಂಬ ಉದ್ದ ಮಾಡ್ತಾ ಇದ್ದೀಯಾ, ಇದು ಒಳ್ಳೇದಲ್ಲ

೧೭೮೮. ನಾಲಗೆ ಉಳಿಸಿಕೊಳ್ಳು = ಕೊಟ್ಟ ಮಾತನ್ನು ನಡೆಸು, ಮಾತಿಗೆ ತಪ್ಪದಿರು

ಪ್ರ : ನಾಲಗೆ ಉಳಿಸಿಕೊಂಡ್ರೆ ನಾಡನ್ನೇ ಉಳಿಸಿಕೊಂಡಂತೆ

೧೭೮೯. ನಾಲಗೆ ಒಣಗಿ ಹೋಗು = ಭಯವಾಗು, ಆಘಾತವಾಗು

ಪ್ರ : ಆ ಸುದ್ಧಿ ಕೇಳಿದೇಟಿಗೇ ನನಗೆ ನಾಲಗೆ ಒಣಗಿ ಹೋಯ್ತು.

೧೭೯೦. ನಾಲಗೆ ಕಚ್ಚಿಕೊಳ್ಳು = ಮಾತನ್ನು ತಡೆಹಿಡಿ, ತಪ್ಪಿನ ಅರಿವಾಗಿ ಮಾತನ್ನು ಅಂತರಿಸು

ಪ್ರ : ತಪ್ಪಿಲ್ಲದೆ ಒಬ್ಬರನ್ನು ದಬಾಯಿಸಬಾರದು ಅಂತ ನಾಲಗೆ ಕಚ್ಚಿಕೊಂಡೆ.

೧೭೯೧. ನಾಲಗೆ ಕಿತ್ಕೊಳ್ಳು = ಅಳು, ಆಲ್ವರಿ, ರಚ್ಚೆ ಮಾಡು

ಪ್ರ : ನಾಲಗೆ ಕಿತ್ಕೊಂಡ್ರೂ ಮಕ್ಕಳ ಕೈಗೆ ಏನೂ ಹಚ್ಚಲಿಲ್ಲವಲ್ಲ, ಜೀನಿ

೧೭೯೨. ನಾಲಗೆ ಕೆಟ್ಟು ಹೋಗು = ರುಚಿ ಶಕ್ತಿ ಕ್ಷೀಣವಾಗು

ಪ್ರ : ಜ್ವರ ಬಂದು ನಾಲಗೆ ಕೆಟ್ಟು ಹೋಗಿದೆ, ಕೋಳಿ ಬಾಯಿಗೆ ನೀರಾದ್ರೂ ಬಿಡಿ.

೧೭೯೩. ನಾಲಗೆ ಕೆಡಿಸಿಕೊಳ್ಳು = ಮಾತಿಗೆ ತಪ್ಪು, ನಂಬಿಕೆ ಕೆಡಿಸಿಕೊಳ್ಳು

(ನಾಲಗೆ < ನಾಲುಕೆ (ತ) = ಜಿಹ್ವೆ)

ಪ್ರ : ನಾಲಗೆ ಕೆಡಿಸಿಕೊಂಡ ಮೇಲೆ ಮನುಷ್ಯ ಇದ್ದೇನು ಫಲ?

೧೭೯೪. ನಾಲಗೆ ಚಪ್ಪರಿಸು = ಲೊಟಿಗೆ ಹೊಡಿ, ರುಚಿಯನ್ನು ಸವಿ

ಪ್ರ : ನಾಲಗೆ ಚಪ್ಪರಿಸಿಕೊಂಡು ಉಂಡು, ಕಾಲು ಚಾಚಿಕೊಂಡು ಮಲಗಿದ್ರೆ ಮನೆಗೆಲಸ ಮಾಡೋರ್ಯಾರು ?

೧೭೯೫. ನಾಲಗೆ ಚಾಚು = ಮಧ್ಯೆ ಬಾಯಿ ಹಾಕು, ಅನ್ಯರ ವಿಷಯದಲ್ಲಿ ಮೂಗು ತೂರಿಸು

ಪ್ರ : ನಿನಗೆ ಸಂಬಂಧ ಪಡದ ವಿಷಯದಲ್ಲಿ ಯಾಕೆ ನಾಲಗೆ ಚಾಚ್ತಿ?

೧೭೯೬. ನಾಲಗೆ ದೊಡ್ಡದು ಮಾಡು = ಜೋರು ಮಾಡು, ಆವುಟ ಮಾಡು

ಪ್ರ : ನಾಲಗೆ ದೊಡ್ಡದು ಮಾಡಬೇಡ, ಹೇಳಿದ್ದೀನಿ. ಹೆಂಗಸಿಗೆ ಸಹನೆ ಅನ್ನೋದು ಇರಬೇಕು.

೧೭೯೮. ನಾಲಗೆಗೆ ನಚ್ಚಿರುವು ಮುಚ್ಚು = ಮರಣ ಹೊಂದು

(ನಚ್ಚಿರುವು = ಸಣ್ಣ ಸಣ್ಣ ಕೆಂಚಿರುವೆ; ಮುಚ್ಚು = ಮುತ್ತಿಕೊಳ್ಳು)

ಪ್ರ : ಕಚ್ಚ ಬಾರದ ಕಡೆ ಕಚ್ಚಿಬಿಟ್ಟನಲ್ಲೆ, ಇವನ ನಾಲಗ್ಗೆ ನಚ್ಚಿರುವು ಮುಚ್ಚ!

೧೭೯೯. ನಾಲಗೆ ಬಿಗಿ ಹಿಡಿ = ಹಿಡಿತವಾಗಿ ಮಾತಾಡು, ಬಾಯಿ ಹೋದಂತೆ ಮಾತಾಡದಿರು.

ಪ್ರ : ನಾಲಗೆ ಬಿಗಿ ಹಿಡಿದು ಮಾತಾಡೋ ಅಮ್ಮಣ್ಣಿ ಮಗನೆ, ಕಪ್ಪಾಳಕ್ಕೆ ಹೊಡೆದು ಬಿಟ್ಟೇನು

೧೮೦೦. ನಾಲಗೆ ಬೀಳು = ಮಾತು ನಿಲ್ಲು, ಮರಣ ಹೊಂದು

ಪ್ರ : ಚೆಂಬೇಲಿ ಅಂತಾನಲ್ಲ, ಇವನ ನಾಲಗೆ ಬೀಳ!

೧೮೦೧. ನಾಲಗೆ ಮೇಲೆ ಬರೆ ಹಾಕು = ಶಿಕ್ಷೆ ಕೊಡು.

(ಬರೆ ಹಾಕು = ಕಾದ ಸಲಾಖೆಯಿಂದ ಸುಡಿಗೆ ಹಾಕು) ಪ್ರಾಚೀನ ಸಮಾಜದಲ್ಲಿ ಅನಾಚಾರ ಮಾಡಿದವರನ್ನು ಕುಲಕ್ಕೆ ಸೇರಸಿಕೊಳ್ಳಬೇಕಾದರೆ ಶುದ್ಧೀಕರಣ ಆಚರಣೆ ಎಂದು ನಾಲಗೆಯ ಮೇಲೆ ಬರೆ ಹಾಕುವ ವಾಡಿಕೆ ಇತ್ತು. ಇಂದೂ ಕೂಡ ಮಡಿವಂತರಲ್ಲಿ ಆ ಆಚರಣೆ ಇದೆ. ಈ ನುಡಿಗಟ್ಟಿಗೆ ಅಂಥ ಆಚರಣೆ ಮೂಲ

ಪ್ರ : ನೀನು ಇನ್ನೊಂಣದು ಸಾರಿ ಅಂದ್ರೆ, ನಾಲಗೆ ಮೇಲೆ ಬರೆ ಹಾಕಿಬಿಡ್ತೀನಿ.

೧೮೦೨. ನಾಲಗೆಗೆ ಮುಳ್ಳು ಚುಚ್ಚಿ ಕೂಡಿಸು = ಮಾತಾಡದಂತೆ ಕ್ರಮ ಕೈಗೊಳ್ಳು

ಪ್ರ : ಗಾದೆ – ನಾಲಗೆಗೆ ಮುಳ್ಳು ಚುಚ್ಚಿ ಅಟ್ಟದ ಮೇಲೆ ಕೂಡಿಸಿದ್ರೂ

ಮಳೆಗಾಳಿ ಬಂದಾಗ ಎಲ್ಲಿದ್ರಿ ಅಂದ್ಲಂತೆ ಬಾಯಿಹರಕಿ

೧೮೦೩. ನಾಲಗೆಗೆ ಹುಳ ಬೀಳು = ಸಾಯು

ಪ್ರ : ಬಾಯಿಗೆ ಬಂದ ಹಾಗೇ ಬಯ್ತಾನೆ, ಇವನ ನಾಲಗ್ಗೆ ಹುಳ ಬೀಳ!

೧೮೦೪. ನಾಲಗೇಲಿ ನೀರು ಸುರಿಸು = ಆಸೆ ಪಡು

ಊಟ ಮಾಡುವಾಗ ನಾಯಿ ನನಗೂ ಒಂದು ತುತ್ತು ಹಾಕಲಿ ಎಂದು ಆಸೆಯಿಂದ ನಾಲಗೆಯಿಂದ ನೀರು ಸುರಿಸುತ್ತಾ ನಿಂತಿರುತ್ತದೆ. ಆ ವರ್ತನೆ ಈ ನುಡಿಗಟ್ಟಿಗೆ ಮೂಲ.

ಪ್ರ : ಊಟ ಮಾಡುವಾಗ್ಗೆ ಸರಿಯಾಗಿ, ಇವಳೊಬ್ಬಳು ಬಂದು ನಾಲಗೇರಿ ನೀರು ಸುರಿಸ್ಕೊಂಡು ನಿಂತ್ಕೊಂಡು ಬಿಡ್ತಾಳೆ.

೧೮೦೫. ನಾಲಗೆ ಸವರು = ಹೊಸ್ತಿಲು ದಾಟಲು ತವಕಿಸು, ಹೊರಕ್ಕೆ ದುಮ್ಮಿಕ್ಕಲು ಹವಣಿಸು

ಪ್ರ : ತುಂಬಿದ ಕರೆ ಈಗಲೋ ಆಗಲೋ ಕೋಡಿ ಬೀಳ್ತೀನಿ ಅಂತ ನಾಲಗೆ ಸವರ್ತಾ ಅದೆ.

೧೮೦೬. ನಾಲಗೆ ಸೇದಿ ಹೋಗು = ಮರಣ ಹೊಂದು

(ಸೇದು = ನೆಟ್ಟಗಾಗು, ಸೆಟೆದುಕೊಳ್ಳು)

ಪ್ರ : ವಾಲಗ ಊದಿಸಾನ ಅಂದ್ರೆ ಇನ್ನೂ ಇವನ ನಾಲಗೆ ಸೇದಿ ಹೋಗಲಿಲ್ವಲ್ಲ

೧೮೦೭. ನಾಲ್ಕು ಗಡಿಸು = ಹೊಡಿ, ಏಟು ಕೊಡು

(ಗಡಿಸು < ಗಟ್ಟಿಸು < ಘಟ್ಟಿಸು = ಹೊಡಿ)

ಪ್ರ : ನಾಲ್ಕು ಗಡಿಸಿದ ಮೇಲೆ ಗಡರಗಬ್ಬೆಲ್ಲ ಇಳಿದು ಹೋಯ್ತು

೧೮೦೮. ನಾಲ್ಕು ಮೂಲೆ ಸಮನಾಗಿರು = ಅನುಕೂಲವಾಗಿರು, ಯಾವ ಕಷ್ಟಕಾರ್ಪಣ್ಯವೂ ಇಲ್ಲದೆ ಇರು.

ಪ್ರ : ನಾಲ್ಕು ಮೂಲೆ ಸಮನಾಗಿದ್ದೋರಿಗೆ ನಿರ್ಗತಿಕರ ಗೋಳು ಹೇಗೆ ಗೊತ್ತಾಗಬೇಕು?

೧೮೦೯. ನಾಲ್ಕು ಸೆಣೆ = ನಾಲ್ಕು ಏಟು ಹೊಡಿ

(ಸೆಣೆ = ಚಚ್ಚು, ಹೊಡಿ)

ಪ್ರ : ಬಟ್ಟೆ ಸೆಣೆದಂತೆ ನಾಲ್ಕು ಸೆಣೆದ ಮೇಲೆ ನೆಣನೆಲ್ಲ ಇಳೀತು

೧೮೧೦. ನಾಲೋರ ಹೆಗಲ ಮೇಲೆ ನಗನಗ್ತಾ ಹೋಗು = ಮರಣ ಹೊಂದು, ದುಷ್ಟನ ಸಾವು ಸಂತೋಷ ತರು.

ಸತ್ತ ವ್ಯಕ್ತಿ ಒಳ್ಳೆಯವನಾಗಿದ್ದರೆ ನಾಲ್ವರ ಹೆಗಲ ಮೇಲಿನ ಚಟ್ಟದಲ್ಲಿ ಹೋಗುತ್ತಿದ್ದರೂ ಎಲ್ಲರ ಕಣ್ಣಲ್ಲೂ ನೀರು, ಅವನ ಗುಣಗಾನ. ಆದರೆ ಸತ್ತ ವ್ಯಕ್ತಿ ಕೆಟ್ಟವನಾಗಿದ್ದರೆ ಎಲ್ಲರ ಮುಖದಲ್ಲೂ ನಗು, ನೆಮ್ಮದಿ – ಕೇಡು ನನ್ಮಗ ಹೋದನಲ್ಲ ಎಂದು ! ಈ ಬೈಗುಳದ ನುಡಿಗಟ್ಟಿನಲ್ಲಿ, ಕೇಡಿಗರು ಸತ್ತಾಗ ಜೀವಂತವಿದ್ದವರಲ್ಲಿ ಮೂಡುವ ನಿರಾಳ ನೆಮ್ಮದಿಯ ನಗು ಕಂಡರಣೆಗೊಂಡಿದೆ.

ಪ್ರ : ಎಂದು ನಾಲೋರ ಹೆಗಲ ಮೇಲೆ ನಗನಗ್ತಾ ಹೋಗ್ತಾನೋ ಅಂತ ಕಾದಿದ್ದೆ.