೧೯೦೩. ಪಕ್ಕಾಗು = ಈಡಾಗು, ಗುರಿಯಾಗು
ಪ್ರ: ಆವರಪಕ್ಷಪಾತದಿಂದನಾನಿಂಥಪರದಾಟಕ್ಕೆಪಕ್ಕಾಗಬೇಕಾಯ್ತು.
೧೯೦೪. ಪಕ್ಕಾಇರು = ಐನಾತಿಆಸಾಮಿಯಾಗಿರು, ಖದೀಮನಾಗಿರು (ಪಕ್ಕಾ < ಪಕ್ವ? = ನುರಿತ, ಅನುಭವವುಳ್ಳ)
ಪ್ರ: ಅವನುಪಕ್ಕಾಇದ್ದಾನೆ, ಹುಷಾರಾಗಿವರ್ತಿಸು.
೧೯೦೫. ಪಕ್ಕಾಏಟುಕೊಡು = ಸರಿಯಾಗಿಕೈಕೊಡು, ಐನಾತಿಪೆಟ್ಟುಕೊಡು (ಏಟು = ಪೆಟ್ಟು)
ಪ್ರ: ಫಟಿಂಗ, ಮದುವೆಸಮಯದಲ್ಲಿನನಗೆಪಕ್ಕಾಏಟುಕೊಟ್ಟೊ.
೧೯೦೬. ಪಕ್ಕೆಗಿರಿ = ಅಳ್ಳೆಗೆತಿವಿ (ಪಕ್ಕೆಗಿರಿ < ಪಕ್ಕೆಗೆ + ಇರಿ = ಅಳ್ಳೆಗೆಹೆಟ್ಟು)
ಪ್ರ: ಪಕ್ಕೆಗಿರಿದೇಟಿಗೆಕೊಕ್ಕರಿಸಿಕೊಂಡುಬಿದ್ದ.
೧೯೦೭. ಪಕ್ಷಮಾಡು= ಹಿರಿಯರಿಗೆಎಡೆಹಾಕುವ, ಧೂಪಹಾಕುವಹಬ್ಬಮಾಡು.
ಪ್ರ: ಪಕ್ಷಮಾಡದಿದ್ರೆನಮ್ಮಹೆತ್ತರುಮುತ್ತರಪಾಲಿಗೆನಾವಿದ್ದೂಸತ್ತಂತೆ.
೧೯೦೮. ಪಕೋಡಆಯ್ದುಕೊಳ್ಳು = ಹೊಡೆತಬೀಳು, ಹೊಡೆತದಭಯಕ್ಕೆಹೇತುಕೊಳ್ಳು (ಪಕೋಡ = ಎಣ್ಣೆಯಲ್ಲಿಕರಿದಉಂಡೆಯಾಕಾರದತಿಂಡಿ)
ಪ್ರ: ಪೊಗರುತೋರಿಸೋಕೆಬಂದುಪಕೋಡಆಯ್ಕೊಂಡ.
೧೯೦೯. ಪಚಡಿಮಾಡು = ಚೂರುಚೂರುಮಾಡು.
ಪ್ರ: ಅವನಮುಸುಡಿನೋಡಿದ್ರೆಪಚಡಿಮಾಡಿಬಿಡೋವಷ್ಟುಸಿಟ್ಟುಬರ್ತದೆ.
೧೯೧೦. ಪಚ್ಚಪಸಿಯಾಗಿರು = ಹಚ್ಚಹಸಿಯಾಗಿರು, ಅನುರೂಪವಾಗಿರು.
ಪ್ರ : ನೀನು ಈ ಪೈಜಾಮ ಹಾಕ್ಕೊಂಡ್ರೆ ಪಚ್ಚಪಸಿಯ ತುರುಕನೇ ಸೈ.
೧೯೧೧. ಪಚ್ಚಿಯಾಗು = ಅರೆದಂತಾಗು, ಅಪ್ಪಚ್ಚಿಯಾಗು
ಪ್ರ : ಬಸ್ಸಿಗೆ ಸಿಕ್ಕಿ ಕೋಳಿ ಪಚ್ಚಿ ಆಗೋಯ್ತು
೧೯೧೨. ಪಟ್ ಅನ್ನು = ತುಂಡಾಗು, ಮುರಿದು ಹೋಗು
ಪ್ರ : ಸ್ವಲ್ಪ ಬಗ್ಗಿಸಿದೇಟಿಗೇ ಪಟ್ ಅಂತು, ನಾನೇನು ಮಾಡಲಿ?
೧೯೧೩. ಪಟ ಆಡಿಸು = ತನ್ನ ಇಚ್ಛೆಗನುಗುಣವಾಗಿ ಕುಣಿಸು, ಸೂತ್ರ ತನ್ನ ಕೈಯೊಳಗಿರು.
ಪ್ರ : ಲಗಾಡಿ ಹೆಂಡ್ರು ಹಸುಮಗುವಿನಂಥ ಗಂಡನ್ನ ಪಟ ಆಡಿಸ್ತಾಳೆ.
೧೯೧೪. ಪಟಾಲಮ್ಮಿಗೆ ಪಟಾಲಮ್ಮೇ ಬರು = ಹಿಂಡಿಗೆ ಹಿಂಡೇ ಬರು, ದಂಡಿಗೆ ದಂಡೇ ಬರು
(ಪಟಾಲಂ = ದಂಡು, ಸೈನ್ಯದ ತುಕಡಿ)
ಪ್ರ : ಬೀಗರೂಟಕ್ಕೆ ಪಟಾಲಮ್ಮಿಗೆ ಪಟಾಲಮ್ಮೇ ಬಂದುಬಿಡ್ತು.
೧೯೧೫. ಪಟ್ಟಕ್ಕೆ ಕೂರು = ಮುಟ್ಟಾಗು
ಮುಟ್ಟಾದವರು ಮೂರು ದಿನ ಆಚೆ ಇರಬೇಕಾಗಿತ್ತು. ಇಂಥ ಸಂಪ್ರದಾಯ ಸಮಾಜದಲ್ಲಿತ್ತು. ಒಂದು ರೀತಿಯಲ್ಲಿ ಅಸ್ಪೃಶ್ಯತೆಯ ಪ್ರತಿರೂಪವಾಗಿತ್ತು ಎಂದರೂ ಒಪ್ಪುತ್ತದೆ. ಏಕೆಂದರೆ ಏನನ್ನೂ ಮುಟ್ಟುವಂತಿಲ್ಲ. ಅಡುಗೆ ಮಾಡುವಂತಿಲ್ಲ, ಒಳಗೆ ಬರುವಂತಿಲ್ಲ. ಆ ಅವಧಿ ಮುಗಿದ ಮೇಲೆ ಸ್ನಾನ ಮಾಡಿ ಒಳಗೆ ಕಾಲಿಡಬೇಕು. ಅಲ್ಲಿಯವರೆಗೂ ಅವಳು ದೇವರು ಪಟ್ಟಕ್ಕೆ ಕೂತಂತೆ ಕೂತಿರಬೇಕು. ಆ ಹಿನ್ನೆಲೆ ಈ ನುಡಿಗಟ್ಟಿಗಿದೆ.
ಪ್ರ : ಸೊಸೆ ಕಳಿಸದೆ ನೀನ್ಯಾಕೆ ಬಂದೆ ಅಂದಿದ್ಕೆ, ಅವಳು ಪಟ್ಟಕ್ಕೆ ಕುಂತವಳೆ ಕಣವ್ವ, ಅದ್ಕೆ ನಾನೇ ಬಂದೆ ಎಂದಳು ಅತ್ತೆ.
೧೯೧೬. ಪಟ್ಟಕ್ಕೆ ಬರು = ದೊಡ್ಡವಳಾಗು, ಋತುಮತಿಯಾಗು.
ಋತುಮತಿಯಾಗುವ ಪಟ್ಟಕ್ಕೆ ಬಂದ ಮೇಲೇ ತಾನೇ ಪಟ್ಟಕ್ಕೆ ಕೂರುವುದು. ಪಟ್ಟಕ್ಕೆ ಬಂದಾಗ ಅತ್ತಿಕೊಂಬೆ ಹಲಸಿನ ಕೊಂಬೆ ತಂದು ಮನೆಯೊಳಗೆ ‘ಗುಡ್ಲು’ ಅಂತ ಹಾಕ್ತಾರೆ. ಪ್ರಾಚೀನ ಕಾಲದಲ್ಲಿ ಮನೆಯ ಆಚೆಯೇ ಈ ‘ಗುಡ್ಲು’ ಹಾಕುತ್ತಿದ್ದಿರಬೇಕು. ಮೈನೆರೆದ ಹಣ್ಣು ಆ ‘ಗುಡ್ಲು’ ಒಳಗೇ ಕೂತಿರಬೇಕು. ಚಿಗಳಿ ಉಂಡೆ (ಎಳ್ಳುಂಡೆ) ಕೊಬರಿ ಇತ್ಯಾದಿಗಳನ್ನು ತಿನ್ನಬೇಕು. ಮುತ್ತೈದೆಯರು ಹಾಡು ಹೇಳುತ್ತಾ ಇಡೀ ರಾತ್ರಿ ಒಂದಲ್ಲ ಒಂದು ಶಾಸ್ತ್ರ ಮಾಡುತ್ತಾ ಹೆಣ್ಣನ್ನು ಎಬ್ಬಿಸಿಕೊಂಡೇ ಇರುತ್ತಾರೆ. ‘ಗುಡ್ಲು ಹಾಕುವುದು’ ಬುಡಕಟ್ಟು ಜನಾಂಗದ ಒಂದು ಆಚರಣೆಯ ಪಳೆಯುಳಿಕೆ ಎನ್ನಬಹುದು. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಗಾದೆ – ಅಮ್ಮ ಪಟ್ಟಕ್ಕೆ ಬರುವಾಗ್ಗೆ ಅಪ್ಪ ಚಟ್ಟಕ್ಕೆ
೧೯೧೭. ಪಟ್ಟ ಬರು = ಪದವಿ ಬರು, ಧಿಮಾಕು ಬರು
ಪ್ರ : ಆವಮ್ಮನಿಗೆ ಏನು ಪಟ್ಟ ಬಂದಿದೆ ಅಂದ್ರೆ ಬಡಬಗ್ಗರನ್ನು ಬಡನಾಯಿಗಿಂತ ಕಡೆಯಾಗಿ ಕಾಣ್ತಾಳೆ.
೧೯೧೮. ಪಟ್ಲದಮ್ಮನ ಜಾತ್ರೆಗೆ ಪಟಾಲಮ್ಮೇ ಸೇರು = ಗ್ರಾಮದೇವತೆ ಹಬ್ಬಕ್ಕೆ ಅಧಿಕ ಜನ ಸೇರು.
(ಪಟ್ಲದಮ್ಮ < ಪಟ್ಟಣದ + ಅಮ್ಮ = ಗ್ರಾಮದೇವತೆ)
ಪ್ರ : ಪಟ್ಲದಮ್ಮನ ಜಾತ್ರೆಗೆ ನಮ್ಮ ವಂಶದ ಪಟಾಲಮ್ಮೇ ಬಂದು ಜಮಾಯಿಸಿಬಿಡ್ತದೆ.
೧೯೧೯. ಪಟ್ಟಾ ಬಿಡಿಸು = ಸೊಂಟ ಟಿಪ್ಪಣಿ (Belt) ಹಾಕು.
ಮದುವೆಯ ಗಂಡು ಧಾರೆಗೆ ಹೋಗಬೇಕಾದರೆ ಕಚ್ಚೆಪಂಚೆ ಹಾಕಿ, ಪೇಟ ಧರಿಸಿ, ಹೆಗಲ ಮೇಲೆ ಶಲ್ಯ ಹಾಕಿಕೊಂಡೇ ಹೋಗಬೇಕೆಂಬ ನಿಯಮ ಹಳ್ಳಿಗಾಡಿನಲ್ಲಿತ್ತು. ಹಳೇ ಮೈಸೂರು ಕಡೆಯ ಎಷ್ಟೋ ಜನಕ್ಕೆ, ಅಂದರೆ ಪ್ರಾಯಸ್ಥ ತರುಣರಿಗೆ, ಕಚ್ಚೆ ಹಾಕಲು ಬರುವುದಿಲ್ಲ. ಆಗ ಪರಿಣತರೊಬ್ಬರು ಕಚ್ಚೆಪಂಚೆ ಕಟ್ಟುತ್ತಾರೆ. ಅದು ಮದುವೆ ಮನೆಯಲ್ಲಿ ಬಿಚ್ಚಿಕೊಂಡೀತೆಂದು ಸೊಂಟದ ಪಂಚೆಯ ಮೇಲೆ ಪಟ್ಟಣಿ (Belt) ಹಾಕುತ್ತಾರೆ. ಜನಪದರು ಅದನ್ನು ವ್ಯಕ್ತಪಡಿಸಿರುವುದು ‘ಪಟ್ಟಾಬಿಡಿಸು’ ಎಂಬ ನುಡಿಗಟ್ಟಿನ ಮೂಲಕ. ಗಾಡಿಯ ಚಕ್ರದ ಹೊಟ್ಟೆಮರದ ಸುತ್ತಲೂ ಮರ ಸವೆಯುತ್ತದೆ ಎಂದು ಕಬ್ಬಿಣದ ಪಟ್ಟಿಯನ್ನು ತೊಡಿಸುತ್ತಾರೆ – ಕಮ್ಮಾರನಿಂದ. ಅದಕ್ಕೆ ‘ಪಟ್ಟಾ ಬಿಡಿಸುವುದು’ ಎನ್ನುತ್ತಾರೆ. ಆ ಹಿನ್ನೆಲೆಯಿಂದ ಬಂದದ್ದು ಈ ನುಡಿಗಟ್ಟು.
ಪ್ರ : ಪಟ್ಟಾ ಬಿಡಿಸದಿದ್ರೆ ಕಚ್ಚೆ ಉದುರಿ ಹೋಗ್ತದೆ ಅಂತ ಬೀಗರು ಹಾಸ್ಯ ಮಾಡಿದರು.
೧೯೨೦. ಪಟ್ಟಾಂಗ ಹೊಡಿ = ಹರಟೆ ಕೊಚ್ಚು, ವ್ಯರ್ಥ ಮಾತುಕತೆಯಲ್ಲಿ ಮುಳುಗು
(ಪಟ್ಟಾಂಗ < ಪಟ್ಟಂಗ (ತುಳು) = ಹರಟೆ)
ಪ್ರ : ಪಟ್ಟಾಗಿ ಕೆಲಸ ಮಾಡದೆ, ಪಟ್ಟಾಂಗ ಹೊಡೀತಾ ಕೂತಿದ್ರೆ, ಹೊಟ್ಟೆ ತುಂಬಲ್ಲ
೧೯೨೧. ಪಟ್ಟು ಹಿಡಿ = ಹಠ ಹಿಡಿ, ಸೆಣಸು, ಬಡಪೆಟ್ಟಿಗೆ ಹಿಡಿತ ಬಿಡದಿರು.
(ಪಟ್ಟು = ಹಿಡಿತ, ವರಸೆ; ಕುಸ್ತಿಪಟ್ಟು ಉಡದಪಟ್ಟು ಎಂಬ ಮಾತುಗಳನ್ನು ನೆನೆಸಿಕೊಳ್ಳಬಹುದು)
ಪ್ರ : ಪಟ್ಟು ಹಿಡಿದು ಕೂತೋರಿಗೆ ಪೆಟ್ಟೊಂದೇ ಸರಿಯಾದ ಮದ್ದು
೧೯೨೨. ಪಟ್ಟು ಹಾಕು = ಲೇಪಿಸು, ಸವರು
(ಪಟ್ಟು = ಲೇಪನ)
ಪ್ರ : ನಾನು ಹೇಳಿದ ಗಿಡಮೂಲಿಕೆ ತಂದು, ಅರೆದು, ಅದರ ರಸಾನ ಹಣೆಗೆ ಪಟ್ಟು ಹಾಕಿದರೆ ಅರೆದಲೆ ನೋವು ಹೋಗ್ತದೆ.
೧೯೨೩. ಪಟೇಲ ಇಲ್ಲದಿರು = ಜನನೇಂದ್ರಿಯ ಇಲ್ಲದಿರು, ಇದ್ದರೂ ಕೆಲಸಕ್ಕೆ ಬಾರದಿರು
(ಪಟೇಲ = ಶಿಷ್ನ, ಮಾನೆ)
ಪ್ರ : ಪಟೇಲ ಇಲ್ಲದೋನಿಗೆ ಮದುವೆ ಮಾಡಿದರೆ ಹೆಂಡ್ರು ಪಡುವಲಕಾಯಿ ಯಾಪಾರಕ್ಕಿಳೀಬೇಕು.
೧೯೨೪. ಪಡಚ ಆಗು = ನಾಶವಾಗು, ಗೋತಾ ಹೊಡಿ
ಪ್ರ : ಪಡ್ಡೆ ಹುಡುಗಿಯರನ್ನೆಲ್ಲ ಕೆಡಿಸುತಿದ್ದೋನು ಪಡಚ ಆದ
೧೯೨೫. ಪಡಪೋಸಿ ಮಾತಾಡು = ಕೆಲಸಕ್ಕೆ ಬರದ ಮಾತಾಡು
ಪ್ರ : ಇವನ ಪಡಪೋಸಿ ಮಾತಿಗೆಲ್ಲ ಹೆದರಿಕೊಳ್ಳೋರು ಯಾರು?
೧೯೨೬. ಪಡಿ ಅಳೆ = ದವಸ ಅಳತೆ ಮಾಡಿ ಕೊಡು
(ಪಡಿ = ಒಂದು ಅಳತೆ, ಎರಡು ಸೇರು)
ಪ್ರ : ಪಡಿ ಅಳೆದರೇನೇ ಪಡೆ ಸುಮ್ಮನಾಗೋದು
೧೯೨೭. ಪಡಿ ಕೊಡು = ಊಟಕ್ಕಾಗುವ ಲವಾಜಮೆ ಕೊಡು
ಊಟ ಮಾಡದ ಮೇಲ್ವರ್ಗದ ಮಡಿಜನರಿಗೆ ಪಾತ್ರೆ ಪಲಾಸು, ಅಡುಗೆಗೆ ಬೇಕಾದ ಪದಾರ್ಥಗಳನ್ನು ಸರಬರಾಜು ಮಾಡುವುದಕ್ಕೆ ಪಡಿಕೊಡುವುದು ಎಂದು ಹೇಳಲಾಗುತ್ತದೆ. ಮೇಲ್ವರ್ಗದವರು ಕೆಳವರ್ಗದವರ ಮನೆಯಲ್ಲಿ ಉಣ್ಣದ ಜಾತಿ ಭೇದದ ಅವಶೇಷ ಈ ನುಡಿಗಟ್ಟು ಎನ್ನಬಹುದು.
ಪ್ರ : ಪಡಿ ಕೊಟ್ಟು ಪಾವುಣ (< ಪಾವನ) ರಾದಂತೆ ಬೀಳ್ಕೊಟ್ಟರು.
೧೯೨೮. ಪಡಿಯಕ್ಕಿ ಇಕ್ಕಿ ಪಡೆಗೆಲ್ಲ ಸವರಿಸು = ಎರಡುಸೇರು ಅಕ್ಕಿ ಅನ್ನ ಮಾಡಿ ಗುಂಪಿಗೆಲ್ಲ ಬಡಿಸು
(ಪಡಿ = ಎರಡು ಸೇರು ; ಪಡೆ = ಸೈನ್ಯ, ಗುಂಪು ; ಸವರಿಸು = ನಿಭಾಯಿಸು)
ಪ್ರ : ಪಡಿಯಕ್ಕಿ ಇಕ್ಕಿ ಪಡೆಗೆಲ್ಲ ಸವರಿಸೋಕೆ ಹೆಂಗಾಗ್ತದೆ, ನೀನೇ ಹೇಳತ್ತೆ.
೧೯೨೯. ಪಡಿಪಾಟಲು ಬೀಳು = ತೊಂದರೆ ಪಡು
(ಪಡಿಪಾಟಲು = ಕಷ್ಟ)
ಪ್ರ : ಪಡಿಪಾಟಲು ಬಿದ್ದಾದರೂ ಈ ಮನೆ ಉಳಿಸಿಕೊಳ್ಳದೇ ಹೋದರೆ ನಗೆಪಾಟಲಾಗೋದು ಖಂಡಿತ.
೧೯೩೦. ಪಡಿಯಚ್ಚಾಗಿರು = ಸದೃಶವಾಗಿರು, ಅನುರೂಪವಾಗಿರು
ಪ್ರ : ಮಗಳು ಅವ್ವನ ಪಡಿಯಚ್ಚು, ಮಗ ಅಪ್ಪನ ಪಡಿಯಚ್ಚು
೧೯೩೧. ಪಡಿಯಾಡು = ದವ-ಸ ಧಾನ್ಯ ಕದ್ದು ಮಾರಾಟ ಮಾಡು.
ಹಳ್ಳಿಗಾಡಿನ ಕೂಡುಕುಟುಂಬದಲ್ಲಿ ಸೊಸೆಯರ ಖರ್ಚುವೆಚ್ಚಕ್ಕೆ ಅಂದರೆ ಅವರ ಎಲೆ ಅಡಕೆ ಹೊಗೇಸೊಪ್ಪು ಅಥವಾ ಕಡ್ಡಿಪುಡಿಗೆ ಪ್ರತ್ಯೇಕವಾಗಿ ದುಡ್ಡು ಕೊಡುವುದಿಲ್ಲ. ಊಟವಾದ ಮೇಲೆ ಯಜಮಾನರೇ ಎಲ್ಲರಿಗೂ ಆ ತೆವಲಿನ ಪದಾರ್ಥಗಳನ್ನು ಹಂಚಿಬಿಡುತ್ತಾರೆ. ಆದರೆ ಯಜಮಾನರು ಹಂಚಿದ್ದು ಸಾಲದೆ ಕಿಲಾಡಿ ಸೊಸೆಯರು ಬಿಂದಿಗೆ ಗಡಿಗೆ ತೆಗೆದುಕೊಂಡು ಬಾವಿಯಿಂದ ನೀರು ಸೇದಿಕೊಂಡು ಬರಲು ಹೊರಟಾಗ ಅವುಗಳಲ್ಲಿ ದವಸ ಹಾಕಿಕೊಂಡು ಹೋಗಿ, ಅಂಗಡಿಯಲ್ಲಿ ಏನೋ ತೆಗೆದುಕೊಳ್ಳುವವರಂತೆ ಹೋಗಿ, ಅಲ್ಲಿ ಸುರಿದು, ಬಾವಿಯ ಬಳಿಗೆ ಹೋಗುತ್ತಾಳೆ. ಅಥವಾ ಗಂಡಸರಿಲ್ಲದಾಗ ಮನೆಯಲ್ಲೆ ಮಾರಾಟ ಮಾಡಿ ಗಂಟು ಮಾಡುತ್ತಾರೆ. ಆ ಹಿನ್ನೆಲೆಯಲ್ಲಿ ಮೂಡಿದ್ದು ಈ ನುಡಿಗಟ್ಟು.
ಪ್ರ : ಗಾದೆ – ಪಡಿಯಾಡಿದ ಮನೆ ಪಡೆ ಅಡಗಿತು.
೧೯೩೨. ಪತ್ತಲ ಉಡಿಸು = ಸಣ್ಣಸೀರೆ ಉಡಿಸು
ಪ್ರ : ಪಡ್ಡೆ ಹುಡುಗೀರಿಗೆ ಪತ್ತಲ ಉಡಿಸಿದರೆ ಸಾಕು
೧೯೩೩. ಪತ್ರೆ ಸೇದು= ಗಾಂಜಾ ಸೇದು
ಪ್ರ : ‘ತಾಪತ್ರೆ’ ಮರೆಯೋಕೆ, ಈ ಪತ್ರೆ ಸೇದೋಕೆ ಸುರು ಮಾಡಿದೆ.
೧೯೩೪. ಪದರುಗುಟ್ಟು = ಅಲುಗಾಡು, ರೆಕ್ಕೆ ಬಡಿ, ವಿಲಿವಿಲಿ ಒದ್ದಾಡು
ಪ್ರ : ಪೊದೆಯೊಳಗೆ ಪದರುಗುಟ್ಟೋದು ಏನೂ ಅಂತ ನೋಡಿದ್ರೆ ಹುಂಜ ಹ್ಯಾಟೆಯನ್ನು ಮೆಟ್ತಾ ಇತ್ತು.
೧೯೩೫. ಪದ ಹೇಳಿಸು = ಹಿಂಸಿಸು, ಅಯ್ಯೋ ಎನ್ನಿಸು, ಆಲಾಪ ತೆಗೆಯುವಂತೆ ಮಾಡು
(ಪದ = ಹಾಡು, ರಾಗ)
ಪ್ರ : ಮದ ಬಂದು ಮಲೀತಿದ್ದೋನಿಗೆ ಚೆನ್ನಾಗಿ ತದಕಿ ಪದ ಹೇಳಿಸಿದ್ದೀನಿ.
೧೯೩೬. ಪದೇ ಪದೇ ಅದೇ ಅದೇ ರಾಗ ಹಾಡು = ಮತ್ತೆ ಮತ್ತೆ ಹೇಳಿದ್ದೇ ಹೇಳು
ಪ್ರ : ಪದೇ ಪದೇ ಅದೇ ಅದೇ ರಾಗ ಹಾಡಬೇಡ ಅಂತ ಹೇಳಿದ ಮೇಲೂ, ನಾನು ‘ಹಾಡಿದ್ದು ಹಾಡೋ ಕಿಸಬಾಯಿ ದಾಸ’ ಅನ್ನೋದನ್ನ ರುಜುವಾತುಪಡಿಸ್ತಾ ಇದ್ದೀಯಲ್ಲ
೧೯೩೭. ಪನ್ನಂಗ ಮಾಡು = ನಿಧಾನ ಮಾಡು, ಓಲೈಸು, ಅಲಂಕರಿಸು
(ಪನ್ನಂಗ < ಪನ್ನಾಂಗು (ತ) = ಪಲ್ಲಕ್ಕಿಯ ಮೇಲು ಹೊದಿಕೆ)
ಪ್ರ : ನೀನು ಪನ್ನಂಗ ಮಾಡ್ತಾ ಕೂರಬೇಡ, ಹೊತ್ತಾಯ್ತು, ಬೇಗ ಹೊರಡು
೧೯೩೮. ಪನಿವಾರ ಹಂಚು = ಪ್ರಸಾದ ವಿನಿಯೋಗ ಮಾಡು
(ಪನಿವಾರ = ಪ್ರಸಾದ, ಚರುಪು)
ಪ್ರ : ಜನಿವಾರದೋರು ಅಥವಾ ಶಿವದಾರದೋರು ಮಾತ್ರ ಪನಿವಾರ ಹಂಚೋದು, ಉಡಿದಾರದೋರು ಹಂಚಿದರೆ ಜಗತ್ತು ಮುಳುಗಿ ಹೋಗ್ತದ?
೧೯೩೯. ಪಪ್ಪು ಮಾಡು = ಹೋಳು ಮಾಡು, ಬೇಳೆ ಮಾಡು
(ಪಪ್ಪು = ಹೋಳು, ಬೇಳೆ)
ಪ್ರ : ಪಪ್ಪು ಮಾಡು ಅಂತ ಕಡ್ಲೆಕಾಯಿ ಬೀಜ ಅವನ ಕೈಗೆ ಕೊಟ್ಟು ತಪ್ಪು ಮಾಡಿದೆ. ಏಕೆ ಅಂದ್ರೆ ಅರ್ಧಕರ್ಧ ಹೊಟ್ಟೆಗಿಳಿಸಿದ್ದ.
೧೯೪೦. ಪರಕ್ ಕೊಡದಿರು = ಸುಳಿವು ಕೊಡದಿರು
ಪ್ರ : ಪರಕ್ ಕೊಡದಂಗೆ ಸರಕ್ಕನೆ ಹಾಜರಾಗಿಬಿಟ್ಟ, ಆದರೂ ಅವರ ಆಸೆ ಈಡೇರಲಿಲ್ಲ.
೧೯೪೧. ಪರಕ್ ಅನ್ನಿಸು = ಹರಿ, ಸೀಳು
ಪ್ರ : ಒಗಟು – ಹರಕುಸೀರೆ ಪರಕ್ಕಂತು
ಅಮ್ಮನೋರ ಗುಡಿ ಮಿಣಕ್ಕಂತು (ಬೆಂಕಿ ಪೊಟ್ಟಣ ಮತ್ತು ಕಡ್ಡಿಗೀಚುವಿಕೆ)
೧೯೪೨. ಪರ್ಜಾಪತಿ ತೋರಿಸು = ಮೋಸ ಮಾಡು, ತುಣ್ಣೆ ತೋರಿಸು
(ಪರ್ಜಾಪತಿ < ಪ್ರಜಾಪತಿ = ಬ್ರಹ್ಮ, ಶಿಷ್ನ)
ಪ್ರ : ಮಿರ್ಜಾ ಮೀಸೆಯೋನು ನಮ್ಮನೇಲೆ ಉಂಡು ತಿಂದು ಕೊನೆಗೆ ಪರ್ಜಾಪತಿ ತೋರಿಸಿ ಹೋದ.
೧೯೪೩. ಪರದಾಡು = ಅಲೆದಾಡು, ಕಷ್ಟಪಡು
ಪ್ರ : ಗಾದೆ – ಹಿಟ್ಟಿಲ್ಲದೋರು ಪರದಾಡ್ತಾರೆ
ಜುಟ್ಟಿರೋರು ತರದಾಡ್ತಾರೆ
೧೯೪೪. ಪರಪಂಚ ಮಾಡು = ಪಕ್ಷಪಾತ ಮಾಡು, ವಂಚನೆ ಮಾಡು
(ಪರಪಂಚ < ಪ್ರಪಂಚ = ಪಕ್ಷಪಾತ)
ಪ್ರ: ಗಾದೆ – ಪಂತೀಲಿ ಪರಪಂಚ ಮಾಡಬಾರ್ದು.
೧೯೪೫. ಪರಮಾಣ ಮಾಡಿ ಹೇಳು = ಆಣೆ ಮಾಡಿ ಹೇಳು
(ಪರಮಾಣ < ಪ್ರಮಾಣ = ಆಣೆ)
ಪ್ರ : ಪರಮಾಣ ಮಾಡಿ ಹೇಳು ಅಂತ ಪುರಾಣ ತೆಗೆದ, ಏನ್ಮಾಡಲಿ?
೧೯೪೬. ಪರಮಾತ್ಮ ಹೊಟ್ಟೆ ಸೇರು = ಮದ್ಯ ಉದರ ಪ್ರವೇಶಿಸು
ಪ್ರ : ಪರಮಾತ್ಮ ಹೊಟ್ಟೆ ಸೇರಿದ ಮೇಲೆ ‘ನರಮಾತ್ಮೆ’ ನೋಡಬೇಕು !
೧೯೪೭. ಪರಸಾದ ಇಟ್ಟಾಡು = ಹೆಚ್ಚು ಶ್ರಮವಾಗು, ಮೇಲಿನ ಬಾಯಿಂದ ತಿಂದದ್ದು ಕೆಳಗಿನ ಬಾಯಿಂದ ಬೀಳು
(ಪರಸಾದ < ಪ್ರಸಾದ = ಊಟ, ಇಂದಿಗೂ ಲಿಂಗಾಯಿತ ಮಠಗಳಲ್ಲಿ ಭಕ್ತಾದಿಗಳಿಗೆ ಊಟ ಮಾಡಿಕೊಂಡು ಹೋಗಿ ಎಂದು ಹೇಳುವುದಿಲ್ಲ, ಪ್ರಸಾದ ಮಾಡಿಕೊಂಡು ಹೋಗಿ ಎನ್ನುತ್ತಾರೆ; ಇಟ್ಟಾಡು = ಚೆಲ್ಲಾಡು)
ಪ್ರ : ಪರಸಾದ ಇಟ್ಟಾಡೋ ಹಂಗೆ ಅಟ್ಟಾಡಿಸಿಕೊಂಡು ಹೊಡೆದ, ಇವನ ನರಸೇದ!
೧೯೪೮. ಪರಂಗಿ ರೋಗ ಬರು = ವಿಲಾಯಿತಿ ಕಾಯಿಲೆ ಬರು
(ಪರಂಗಿ = ಕೆಂಪು ಮೂತಿಯ ಆಂಗ್ಲ, ವಿದೇಶಿ)
ಪ್ರ : ಪಿರಂಗಿ ಪರಾಣದ ಪೈಸಲ್ ಮಾಡಿದಂಗೆ, ಪರಂಗಿ ರೋಗ ಬಂದ್ರೆ ಪರಾಣ ಪೈಸಲ್ ಆಗ್ತದೆ.
೧೯೪೯. ಪರಂಧಾಮ ಸೇರು = ಮರಣ ಹೊಂದು
(ಪರಂಧಾಮ = ವೈಕುಂಠ)
ಪ್ರ : ಪರಂಧಾಮ ಸೇರಿದೋನಿಗೆ ಪಂಗನಾಮ ಹಾಕೋರು ಯಾರು?
೧೯೫೦. ಪರಾಣ ಪಾವುಣವಾಗು = ಪ್ರಾಣ ಪವಿತ್ರವಾಗು
(ಪರಾಣ < ಪ್ರಾಣ ; ಪಾವುಣ < ಪಾವನ = ಪವಿತ್ರ)
ಪ್ರ : ಜೀವುಣ ಪಾವುಣವಾಗಿದ್ರೆ ಪರಾಣ ಪಾವುಣ ಆದಂಗೇ ಲೆಕ್ಕ.
೧೯೫೧. ಪಲಾತನ ಮಗ ಬಂದ್ರೂ ಬಗ್ಗದಿರು = ಯಾರಿಗೂ ಶರಣಾಗದಿರು
(ಪಲಾತ < ಫಾಲಾಕ್ಷ = ಈಶ್ವರ ; ಅವನ ಮಗ ವೀರಭದ್ರ ಅಥವಾ ಬೀರೇಶ್ವರ) ವೀರಭದ್ರ ಅಥವ ಬೀರೇಶ್ವರ ಶೌರ್ಯ ಪರಾಕ್ರಮಗಳ ಪ್ರತಿರೂಪ. ದಕ್ಷಬ್ರಹ್ಮನನ್ನು ಹತ ಮಾಡಿದವನು. ಅಂಥ ರೌದ್ರಾವತಾರಿ ಬಂದರೂ ಶರಣಾಗುವುದಿಲ್ಲ ಎಂಬಲ್ಲಿ ಪೌರಾಣಿಕ ಕಥೆಯ ಹಿನ್ನೆಲೆ ಈ ನುಡಿಗಟ್ಟಿಗಿರುವುದನ್ನು ಗಮನಿಸಬಹುದು.
ಪ್ರ : ಪಲಾತನ ಮಗ ಬಂದ್ರೂ ಬಗ್ಗಲ್ಲ ಅನ್ನೋನು, ಈ ಪಡಪೋಸಿಗೆ ಬಗ್ತೀನಾ?
೧೯೫೨. ಪಲಾನ್ ಪಿಸ್ತಾನ್ ಅನ್ನು = ಬಾಯಿಜೋರು ಮಾಡು, ಆವುಟ ಮಾಡು
(ಪಲಾನ್ < ಪಲಾಂಡು (ತುಳು) = ಈರುಳ್ಳಿ; ಐತಿಹ್ಯವೊಂದು ಇದರ ಹಿನ್ನೆಲೆಗಿರಬೇಕು)
ಪ್ರ : ಅವನು ಪಲಾನ್ ಪಿಸ್ತಾನ್ ಅಂದು ಬಿಟ್ರೆ, ನಮ್ಮ ‘ಪಳಾನ್’ಗೆ ಪಳೇಕ್ ಬಂದುಬಿಡಲ್ಲ.
೧೯೫೩. ಪರ್ಲು ಹರಿದು ಹೋಗು = ಸಂಬಂಧ ಕಿತ್ತು ಹೋಗು
(ಪರ್ಲು = ಋಣಾನುಸಂಬಂಧ)
ಪ್ರ : ಪರ್ಲು ಹರಿದರು ಹೋದ ಮೇಲೆ ಒರಲೋದು ಯಾಕೆ ?
೧೯೫೪. ಪಲ್ಲ ಕಟ್ಟು = ಮಾತಿನ ಅಣಿ ಹಾಕು, ಕೊಕ್ಕೆಗೆ ಪ್ರತಿ ಕೊಕ್ಕೆ ಹಾಕು
(ಪಲ್ಲ < ಪಲ್ಲವಿ) ಭಾಗವಂತಿಕೆ ಮೇಳದವರು ಈ ಪಲ್ಲಕಟ್ಟುವ ಹಾಡುಗಳನ್ನು ಹಾಡುತ್ತಾರೆ. ಒಗಟಿನ ರೂಪದ ಹಾಡುಗಳಿಗೆ ಹಾಡುಗಳ ರೂಪದಲ್ಲೇ ಉತ್ತರ ಕೊಡಲಾಗುವುದು. ಸವಾಲು ಜವಾಬು ರೂಪದ ಈ ಸರಣಿಯನ್ನು ಪಲ್ಲ ಕಟ್ಟುವುದು ಎನ್ನುತ್ತಾರೆ. ಒಟ್ಟಿನಲ್ಲಿ ಜಾನಪದದ ಹಿನ್ನೆಲೆ ಈ ನುಡಿಗಟ್ಟಿಗಿದೆ.
ಪ್ರ : ಪಲ್ಲ ಕಟ್ಟೋದ್ರಲ್ಲಿ ಎಲ್ಲ ಪಟ್ಟೂ ಬಳಸ್ತಾನೆ.
೧೯೫೫. ಪಲ್ಟಿ ಹೊಡಿ = ಲಾಗ ಹಾಕು, ಕಸರತ್ತು ಮಾಡು
ಪ್ರ : ಅವನೆಷ್ಟೇ ಪಲ್ಟಿ ಹೊಡೆದರೂ ನಾನು ಮಾತ್ರ ಒಂದು ಚಿಕ್ಕಾಸು ಕೊಡಲಿಲ್ಲ
೧೯೫೬. ಪಲ್ಟಿ ಹೊಡಿ = ಅಪಜಯ ಹೊಂದು, ಅನುತ್ತೀರ್ಣನಾಗು
ಪ್ರ : ಈ ಸಾರೀನೂ ಪರೀಕ್ಷೆಯಲ್ಲಿ ಪಲ್ಟಿ ಹೊಡೆದ.
೧೯೫೭. ಪಲ್ಟು ಗುದ್ದಲಿಯಂತಿರು = ಗಟ್ಟಿಮುಟ್ಟಾಗಿರು, ಬಗ್ಗದಿರು
(ಪಲ್ಟು < ಪರಟು = ಒರಟು, ಬಿರುಸು) ಹೊಸ ಎಲೆಗುದ್ದಲಿ (ಸನಿಕೆ) ಯಿಂದ ಭೂಮಿಗೆ ಕಚ್ಚು ಹಾಕಿ ಮಿಣುಗಿದರೆ ಅದರ ಅಲಗು ತೆಳುವಾಗಿರುವುದರಿಂದ ಬಗ್ಗಿ ಬಿಡುತ್ತದೆ. ಆದರೆ ಅದು ಸವೆದು ಚಿಕ್ಕದಾದ ಮೇಲೆ ಕಚ್ಚು ಹಾಕಿ ಮಿಣುಗಿದರೂ ಅದು ಬಗ್ಗುವುದಿಲ್ಲ. ಆ ಹಿನ್ನೆಲೆಯಿಂದ ಈ ನುಡಿಗಟ್ಟಿಗೆ ಗಟ್ಟಿಮುಟ್ಟು ಎಂಬ ಅರ್ಥ ಬಂದಿದೆ.
ಪ್ರ : ಗಂಡು ಪಲ್ಟು ಗುದ್ದಲಿ ಇದ್ದಂಗವನೆ, ಹೆಣ್ಣು ಬಳ್ಳೆದಂಟು ಇದ್ದಂಗವಳೆ.
೧೯೫೮. ಪಸಂದಾಗಿರು = ಚೆನ್ನಾಗಿರು, ಅಂದವಾಗಿರು
(ಪಸಂದು < ಪಸಂದ್(ಹಿಂ) = ಸುಂದರ, ಸುಭದ್ರ)
ಪ್ರ : ಬಲು ಪಸಂದಾಗಿದ್ದಾಳೆ ಅಂತ ಆ ಕಾಮಾಲೆ ಬುರ್ರೀನ ಒಪ್ಕೊಂಡು ಬಂದುಬಿಟ್ಟ?
೧೯೫೯. ಪಸ್ಕೆ ಹೊಡಿ = ಕುಳಿತೇಳುವ ಅಂಗ ಸಾಧನೆ ಮಾಡು
(ಪಸ್ಕೆ < ಬೈಸಿಕೆ)
ಪ್ರ : ನೀನು ನನ್ಮುಂದೆ ಎಷ್ಟು ಪಸ್ಕೆ ಹೊಡೆದರೂ ಒಂದು ಪೈಸೇನೂ ಕೊಡಲ್ಲ
೧೯೬೦. ಪಸ್ಮೆ ಆರು = ತೇವ ಆರು, ಒಣಗು
(ಪಸ್ಮೆ < ಪಸಿಮೈ = ಮೇಲಿನ ಹಸಿ, ತೇವ)
ಪ್ರ : ಧಾನ್ಯವನ್ನು ಪಸ್ಮೆ ಇರುವಾಗ ಕಣಜ ತುಂಬಿದರೆ ಮುಗ್ಗಿ ಹೋಗ್ತವೆ.
೧೯೬೧. ಪಳಾನ್ ಮಾಡು = ಉಪಾಯ ಮಾಡು
(ಪಳಾನ್ < Plan = ತಂತ್ರ, ಉಪಾಯ)
ಪ್ರ : ನನ್ನ ಆಸ್ತಿ ಹೊಡೆಯೋಕೆ ಪಳಾನ್ ಮಾಡಿದ್ದು ಗೊತ್ತಾಗಿ, ಆ ಮನೆ ಮುರುಕನಿಗೆ ಸರಿಯಾಗಿ ಚಳ್ಳೆ ಹಣ್ಣು ತಿನ್ನಿಸಿದೆ.
೧೯೬೨. ಪಳಾರ ಮಾಡು = ಉಪಾಹಾರ ಮಾಡು
(ಪಳಾರ < ಫಲಾಹಾರ = ಉಪಾಹಾರ)
ಪ್ರ : ಗಾದೆ – ಖಂಡುಗ ಪಳಾರ ಮಾಡಿದ್ರೂ ಉಂಡಂಗಾಗಲ್ಲ
ಹಿಂಡು ಬಳಗ ಇದ್ರೂ ಗಂಡ ಇದ್ದಂಗಾಗಲ್ಲ
೧೯೬೩. ಪಳೇಕು ಬಂದು ಒರಗಿ ಹೋಗು = ಮರಣ ಹೊಂದು
(ಪಳೇಕು < plague ; ಒರಗಿ ಹೋಗು = ಸಾಯು)
ಪ್ರ : ಹಾದರ ಮಾಡ್ತಿದ್ದ ಹಲಾಲ್ಕೋರ ಪಳೇಕ್ ಬಂದು ಒರಗಿ ಹೋದ.
೧೯೬೪. ಪಾಕಗೊಳ್ಳು = ಹದಗೊಳ್ಳು
ಪ್ರ : ಪಾಕಗೊಳ್ಳದ ಚಿಂತನೆ ಅವಾಂತರಕಾರಿಯೇ ಹೊರತು ಫಲಕಾರಿಯಲ್ಲ
೧೯೬೫. ಪಾಕಡ ಕೆಲಸ ಮಾಡು = ಖದೀಮ ಕೆಲಸ ಮಾಡು
ಪ್ರ : ಪಾಕಡ ಕೆಲಸ ಮಾಡಿ ಶೇಕಡಾವಾರು ಹಂಚಿಕೊಳ್ತಿದ್ದರು.
೧೯೬೬. ಪಾಚಿಕೊಳ್ಳು = ಮಲಗಿಕೊಳ್ಳು
(ಪಾಚು < ಪಡುಚು = ಮಲಗು) ಇದು ಬಾಲ ಭಾಷೆ, ಸಾಮಾನ್ಯವಾಗಿ ಮಕ್ಕಳಿಗೆ ಹೇಳುವಂಥದು.
ಪ್ರ : ಚಾಚಿ ಕುಡೀತಾ ಹಂಗೆ ಪಾಚಿಕೊಂಡು ಬಿಡು ಚಿನ್ನ ಎಂದು ತಾಯಿ ಮಗುವಿನ ತಲೆ ಸವರತೊಡಗಿದಳು.
೧೯೬೭. ಪಾಚಿಗಟ್ಟು = ಹಾವಸೆ ಕಟ್ಟು, ಕೊಳಕು ಮಡುಗಟ್ಟು
(ಪಾಚಿ < ಪಾವುಚಿ < ಪಾವುಚೆ < ಪಾವಸೆ = ಹಾವಸೆ)
ಪ್ರ : ಪಾಚಿಗಟ್ಟಿದ ಹಲ್ಲು, ಗೀಜುಗಟ್ಟಿದ ಕಣ್ಣು – ಇಂಥ ಕಸಮಾರಿ ಕೈಹಿಡೀಲ?
೧೯೬೮. ಪಾಟವಾಗು = ಅಭ್ಯಾಸವಾಗು, ರೂಢಿಯಾಗು
(ಪಾಟ < ಪಾಠ)
ಪ್ರ : ಪಾಟವಾದ ಮೇಲೆ ನಾಟಿ ಹಾಕೋದು ಸುಲಭ
೧೯೬೯. ಪಾಟ ಮಾಡು = ರೂಢಿ ಮಾಡು
ಪ್ರ : ಅವನು ಮನೆಗೆ ಬರೋಕೆ ಪಾಟ ಮಾಡಿದೋಳೂ ನಾನೆ, ಕಾಟ ಅನುಭವಿಸೋಳೂ ನಾನೆ.
೧೯೭೦. ಪಾಠ ಕಲಿಸು = ಬುದ್ಧಿ ಕಲಿಸು
ಪ್ರ : ಆಪಾಟಿ ಎಗರಾಡೋನಿಗೆ ತಕ್ಕ ಪಾಠ ಕಲಿಸಲೇ ಬೇಕು.
೧೯೭೧. ಪಾಡಾಗಿರು = ಭದ್ರವಾಗಿರು
(ಪಾಡು = ಸುಭದ್ರ, ಸುರಕ್ಷಿತ)
ಪ್ರ : ಕುರ್ಚಿ ಪಾಡಾಗಿದೆ, ಕುಳಿತುಕೋ, ಏನೂ ಭಯ ಪಡಬೇಡ
೧೯೭೨. ಪಾಡುಪಡು = ತೊಂದರೆ ಪಡು
(ಪಾಡು = ಕಷ್ಟ)
ಪ್ರ : ನಾನು ಪಟ್ಟ ಪಾಡು ದೇವರೊಬ್ಬನಿಗೇ ಗೊತ್ತು.
೧೯೭೩. ಪಾತಾಳಕ್ಕಿಳಿದು ಹೋಗು = ನಾಚಿಕೆ ಸಂಕೋಚದಿಂದ ಕುಗ್ಗು, ಅವಮಾನದಿಂದ
ಭೂಮಿಗಿಳಿದು ಹೋದಂತಾಗು
ಪ್ರ : ಭೇತಾಳನಂಥೋನು ನನ್ನ ವಿರುದ್ಧ ಸಲ್ಲದ ದೂರು ಹೊರಿಸಿದಾಗ ಪಾತಾಳಕ್ಕಿಳಿದು ಹೋದೆ.
೧೯೭೪. ಪಾತಾಳಕ್ಕೆ ತುಳಿದು ಬಿಡು = ತಲೆ ಎತ್ತದಂತೆ ನಾಶ ಮಾಡು.
ವಿಷ್ಣು ವಾಮನಾವತಾರ ತಾಳಿ, ಬಲಿ ಚಕ್ರವರ್ತಿಯ ಬಳಿ ಮೂರು ಹೆಜ್ಜೆ ಭೂಮಿಯನ್ನು ಬೇಡಿ, ತ್ರಿವಿಕ್ರಮನಾಗಿ ಬೆಳೆದು ಒಂದು ಹೆಜ್ಜೆಯಿಂದ ಇಡೀ ಭೂಮಿಯನ್ನು ಅಳೆದು, ಮತ್ತೊಂದು ಹೆಜ್ಜೆಯಿಂದ ಆಕಾಶವನ್ನು ಅಳೆದು, ಮೂರನೆಯ ಹೆಜ್ಜೆಯನ್ನು ಬಲಿ ಚಕ್ರವರ್ತಿಯ ಅಭಿಪ್ರಾಯದಂತೆ ಅವನ ತಲೆಯ ಮೇಲಿಟ್ಟು ಪಾತಾಳಕ್ಕೆ ತುಳಿದನೆಂದೂ ಕಥೆ. ವಿಷ್ಣುವಿನ ದಶಾವತಾರದ ಹಿನ್ನೆಲೆ ಈ ನುಡಿಗಟ್ಟಿಗಿದೆ.
ಪ್ರ : ಆ ಚಾಂಡಾಳ ನನ್ನನ್ನು ಪಾತಾಳಕ್ಕೆ ತುಳಿದುಬಿಟ್ಟ.
೧೯೭೫. ಪಾತಿಗೆ ನೀರು ಕಟ್ಟು = ಗಿಡದ ಮಡಿಗೆ ನೀರು ಹಾಯಿಸು, ಸಂಭೋಗಿಸು
(ಪಾತಿ = ನೀರು ನಿಲ್ಲಲು ಗಿಡ ಸುತ್ತಲೂ ಮಾಡಿರುವ ತಗ್ಗು)
ಪ್ರ : ಯಾಕೆ ಬರೋದು ತಡವಾಯ್ತು ಅಂದಾಗ, ಗಿಡದ ಪಾತಿಗೆ ನೀರು ಕಟ್ಟಿ ಬರುವಾಗ್ಗೆ ತಡವಾಯ್ತು ಎಂದು ಉತ್ತರಿಸಿದಾಗ ಸಂಗಡಿಗರೆಲ್ಲ ಗೊಳ್ಳೆಂದರು.
೧೯೭೬. ಪಾದನೆ ಮಾಡು = ಮನವೊಲಿಸು, ಓಲೈಸು, ದಮ್ಮಯ್ಯಗುಡ್ಡೆ ಹಾಕು
(ಪಾದನೆ < ಪಾರ್ತನೆ < ಪ್ರಾರ್ಥನೆ = ವಿನಂತಿ, ಬೇಡಿಕೆ)
ಪ್ರ : ಬೆಳಿಗ್ಗೆಯಿಂದ ಇನಕಿಲ್ಲದಂಗೆ (< ಹಿಂದಕ್ಕಿಲ್ಲದಂಗೆ) ಪಾದನೆ ಮಾಡಿದರೂ ಎದ್ದು ಊಟ ಮಾಡಿಲ್ಲ.
೧೯೭೭. ಪಾದ ಬೆಳೆಸು = ಆಗಮಿಸು
ಪ್ರ : ಇಷ್ಟು ದೂರ ಪಾದ ಬೆಳೆಸಿದ್ದರ ಉದ್ದೇಶ ಅರ್ಥವಾಗಲಿಲ್ಲ.
೧೯೭೮. ಪಾದರಸದಂತಿರು = ಚೂಟಿಯಾಗಿರು.
ಪ್ರ : ಮೊದಲನೆಯ ಮಗ ‘ಎಮ್ಮೆ ಮೇಲೆ ಮಳೆ ಹುಯ್ದಂಗೆ’ ಇದ್ದರೆ ಎರಡನೆಯ ಮಗ ಪಾದರಸದಂಗಿದ್ದಾನೆ
೧೯೭೯. ಪಾನಗೋಷ್ಠಿ ಜರುಗು = ಮಧ್ಯಸೇವನೆ ನಡೆಯುತ್ತಿರು
ಪ್ರ : ಗಾನಗೋಷ್ಠಿ ಜರುಗ್ತಾ ಇಲ್ಲ. ಪಾನಗೋಷ್ಠಿ ಇದೆ ಎಂದ ಜವಾನ
೧೯೮೦. ಪಾಪಾಸಿನಲ್ಲಿ ಹೊಡಿ = ಕೆರದಲ್ಲಿ ಹೊಡಿ
(ಪಾಪಾಸು = ಚಪ್ಪಲಿ)
ಪ್ರ : ಪಾಪಾಸಿನಲ್ಲಿ ಹೊಡೆದೋನಿಗೆ ಪಾಪೋಸು (ಪಾಪವೆಲ್ಲ) ಮುತ್ತಿಕೊಳ್ತವೆ.
೧೯೮೧. ಪಾಪಿಲ್ಲದ ಮನೆಯಾಗು = ಹಾಳು ಸುರಿ, ಬಿಕೋ ಎನ್ನು
(ಪಾಪ = ಹಸುಗೂಸು)
ಪ್ರ : ಗಾದೆ – ಪಾಪಿಲ್ಲದ ಮನೆ ದೇವರಿಲ್ಲದ ಗುಡಿ – ಎರಡೂ ಒಂದು
೧೯೮೨. ಪಾಯ ಹೇಳು = ಗುಟ್ಟು ಹೇಳು
(ಪಾಯ < ಉಪಾಯ = ತಂತ್ರ, ಯುಕ್ತಿ)
ಪ್ರ : ನಿನಗೊಂದು ಪಾಯ ಹೇಳ್ತೀನಿ ಬಾ ಅಂತ ನನ್ನ ಕಿವಿ ಹತ್ರಕ್ಕೆ ಬಾಯಿ ತಂದ.
೧೯೮೩. ಪಾರಾಗು = ಬಚಾವಾಗು, ಅಪಾಯದಿಂದ ತಪ್ಪಿಸಿಕೊಳ್ಳು
ಪ್ರ : ಇವತ್ತು ದೊಡ್ಡ ಗಂಡಾಂತರದಿಂದ ಪಾರಾದೆ.
೧೯೮೪. ಪಾರಗಾಣಿಸು = ದಡ ಸೇರಿಸು
(ಪಾರ = ತೀರ, ದಡ)
ಪ್ರ : ನಮ್ಮನ್ನು ಕಷ್ಟದಿಂದ ಪಾರಗಾಣಿಸಿದ ನಿನ್ನನ್ನು ನಮ್ಮ ಪರಾಣ ಇರೋವರೆಗೂ ಮರೆಯಲ್ಲ
೧೯೮೫. ಪಾರುಪತ್ಯ ಕೊಡು = ಅಧಿಕಾರ ಕೊಡು, ಯಜಮಾನಿಕೆ ಕೊಡು
ಪ್ರ : ಗಾದೆ – ಅಡುಟ್ಟನಿಗೆ ಪಾರುಪತ್ಯ ಕೊಟ್ಟಿದ್ಕೆ
ಹೊಡೆಗದ್ದೆ ಕುಯ್ಸಿ ಮೆದೆ ಹಾಕಿಸಿದ
೧೯೮೬. ಪಾರೊಡೆ = ಹಾರಿ ಹೋಗು
(ಪಾರೊಡೆ < ಪಾರೋಡು < ಪಾರು + ಓಡು = ಬಿದ್ದಂಬೀಳಾ ಓಡು, ಹಾರಿ ಓಡು; ಪಂಪ ಭಾರತದಲ್ಲಿ ಬರುವ ಪಾರೇಳ್ (ಚಿಮ್ಮಿ ಹೋಗು) ಎಂಬ ರೂಪವನ್ನೂ ಇಲ್ಲಿ ಮೆಲುಕು ಹಾಕಬಹುದು)
ಪ್ರ : ಪೋಲಿಸರನ್ನು ಕಂಡ ತಕ್ಷಣವೇ ಅಲ್ಲಿಂದ ಪಾರೊಡೆದ.
೧೯೮೭. ಪಾಲುಮಾರು = ಅಜಾಗರೂಕನಾಗಿರು, ಆಲಸ್ಯದಿಂದಿರು
ಪ್ರ : ಕೊಂಚ ಪಾಲುಮಾರಿದ್ರೆ, ಉಟ್ಟಬಟ್ಟೇನೂ ಕಿತ್ಕೊಂಡು ಹೋಗುವ ಖದೀಮರಿದ್ದಾರೆ.
೧೯೮೮. ಪಾಲು ಹಾಕು = ಕತ್ತರಿಸಿ ಗುಡ್ಡೆ ಹಾಕು, ಭಾಗ ಹಾಕು.
ಹಳ್ಳಿಯಲ್ಲಿ ಹತ್ತಾರು ಜನ ಸೇರಿ ದುಡ್ಡು ಹಾಕಿ ಒಂದು ಕುರಿಯನ್ನೋ ಮರಿಯನ್ನೋ ತರುತ್ತಾರೆ. ಅದನ್ನು ಕುಯ್ದು ಎಷ್ಟು ಜನ ದುಡ್ಡು ಹಾಕಿರುತ್ತಾರೋ ಅಷ್ಟು ಮಾಂಸದ ಗುಡ್ಡೆಗಳನ್ನು ಸಮಪ್ರಮಾಣದಲ್ಲಿ ಹಾಕುತ್ತಾರೆ. ಒಬ್ಬೊಬ್ಬರು ಒಂದು ಗುಡ್ಡೆಯನ್ನು ಎತ್ತಿಕೊಂಡು ಹೋಗುತ್ತಾರೆ. ಅದಕ್ಕೆ ‘ಪಾಲು ಹಾಕುವುದು’ ಎನ್ನುತ್ತಾರೆ. ಆ ಹಿನ್ನೆಲೆಯ ನಡಿಗಟ್ಟಿದು.
ಪ್ರ : ನೀನು ಗರ್ಮಿರ್ ಅಂದ್ರೆ ಕುಯ್ದು ಪಾಲು ಹಾಕಿಬಿಡ್ತೀನಿ ಅಷ್ಟೆ.
೧೯೮೯. ಪಾಶಿ ಶಿಕ್ಷೆ ಆಗು = ನೇಣೆತ್ತು
(ಪಾಶಿ < ಪಾಶ = ಹಗ್ಗ)
ಪ್ರ : ಅವನಿಗೆ ಪಾಶಿ ಶಿಕ್ಷೆ ಆಯಿತು
೧೯೯೦. ಪಾಳಿಸು = ಸೀಳು, ಹೋಳು ಮಾಡು
ಪ್ರ : ಗಾದೆ – ಉಳಿ ಸಣ್ಣದಾದರೂ ಬಂಡೆ ಪಾಳಿಸ್ತದೆ.
೧೯೯೧. ಪ್ರಾಣಬಿಟ್ಟುಕೊಳ್ಳು = ಹೆಚ್ಚು ಪ್ರೀತಿಸು, ಮನಸ್ಸಿಗೆ ಹೆಚ್ಚು ಹಚ್ಚಿಕೊಳ್ಳು
ಪ್ರ : ನೀನು ಅಂದ್ರೆ ಸಾಕು, ಪ್ರಾಣ ಬಿಟ್ಕೊಳ್ತಾನೆ.
೧೯೯೨. ಪ್ರಾಣ ಹಿಂಡು = ಹಿಂಸಿಸು, ಒತ್ತಾಯಿಸು
ಪ್ರ : ಹಸುವಿನ ಕೆಚ್ಚಲಲ್ಲಿ ಹಾಲು ಹಿಂಡಿದಂತೆ, ನಿತ್ಯ ನನ್ನ ಪ್ರಾಣ ಹಿಂಡ್ತಾನೆ
Leave A Comment