೧೩೫೩. ತಲೆ ಜೀರುದುಂಬಿಯಾಗು = ತಲೆ ದಿಮ್ಮೆನ್ನು, ಜುಯ್ ಎನ್ನು
(ಜೀರುದುಂಬಿ = ಜುಯ್ಯೆಂದು ಸದ್ದು ಮಾಡಿ ಸುತ್ತುವ ಜೀರುಂಡೆ)
ಪ್ರ : ಇವರ ಕಚ್ಚಾಟದಿಂದ ನನ್ನ ತಲೆ ಜೀರುದುಂಬಿಯಂತೆ ಜುಯ್ ಅಂತಾ ಅದೆ.
೧೩೫೪. ತಲೆಗೆ ತರು = ಅಪಾಯ ಉಂಟು ಮಾಡು, ಪ್ರಾಣಕ್ಕೆ ಸಂಚಕಾರ ತರು.
ಪ್ರ : ಅವನು ಮಣ್ಣು ತಿನ್ನೋ ಕೆಲಸ ಮಾಡಿ, ನನ್ನ ತಲೆಗೆ ತಂದ
೧೩೫೫. ತಲೆ ತುರಿಸಿಕೊಳ್ಳಲಾಗದಿರು = ಕೈತುಂಬ ಕೆಲಸವಿರು, ಪುರಸೊತ್ತು ಸಿಗದಿರು
(ತುರಿಸಿಕೊಳ್ಳು = ಕೆರೆದುಕೊಳ್ಳು)
ಪ್ರ : ತಲೆ ತುರಿಸಿಕೊಳ್ಳಲಾಗದಷ್ಟು ಕೆಲಸ ಇರುವಾಗ, ನೀನು ಇನ್ನೊಂದು ಹಚ್ಚೋಕೆ ಬರಬ್ಯಾಡ.
೧೩೫೬. ತಲೆಗೊಳ್ಳಿ ತಿವಿ = ಉತ್ತರ ಕ್ರಿಯೆ ಮಾಡು
(ತಲೆಗೊಳ್ಳಿ = ಹೆಣದ ತಲೆಯ ಹತ್ತಿರ ಮಡಕೆಯಲ್ಲಿ ಹಾಕಿಟ್ಟ ಬೆಂಕಿ, ಅದನ್ನು ಸಮಾಧಿಯವರೆಗೂ ಮಗ ಕೈಯಲ್ಲಿ ಹಿಡಿದು ಕೊಂಡೊಯ್ಯುವಂಥದು)
ಪ್ರ : ಸತ್ತಾಗ ತಲೆಗೊಳ್ಳಿ ತಿವಿಯೋಕೆ ಇರೋ ಮಗರಾಮ ಇವನೆ
೧೩೫೭. ತಲೆ ಚಚ್ಚಿಕೊಳ್ಳು = ಒತ್ತಿ ಒತ್ತಿ ಹೇಳು, ಮತ್ತೆ ಮತ್ತೆ ಹೇಳು,
ಪ್ರ : ಲಾಗಾಯ್ತಿನಿಂದ ನಾನು ತಲೆ ತಲೆ ಚಚ್ಕೊಂಡೆ, ನೀವು ನನ್ನ ಮಾತ್ನ ಕೇಳಿದ್ರಾ ?
೧೩೫೮. ತಲೆ ತರೆದು ಉಪ್ಪು ಹುಯ್ಯಿ = ತಕ್ಕ ಶಾಸ್ತಿ ಮಾಡು, ಶಿಕ್ಷಿಸು
ತಲೆ ತರೆದಾಗ ಅಂದರೆ ಕೂದಲು ಕಿತ್ತಾಗ ತಲೆ ಉರಿಯತೊಡಗುತ್ತದೆ. ಅದರ ಮೇಲೆ ಉಪ್ಪು ಸುರಿದಾಗ ಇನ್ನೂ ಉರಿಯತೊಡಗುತ್ತದೆ. ಉರಿಯೋದರ ಮೇಲೆ ಉಪ್ಪು ಸುರಿದಂಗೆ ಎಂಬ ಗಾದೆ ಮಾತು ಉರಿ ಹೆಚ್ಚಾಗುವುದನ್ನು ಸೂಚಿಸುತ್ತದೆ.
ಪ್ರ : ಆ ಮುಂಡೆಗೆ ತಲೆ ತರೆದು ಉಪ್ಪು ಹುಯ್ಯದಿದ್ರೆ ನಾನು ಉಪ್ಪುರಗುಲದಲ್ಲಿ ಹುಟ್ಟಿದೋಳೆ ಅಲ್ಲ.
೧೩೫೯. ತಲೆ ತೊಳೆದುಕೊಳ್ಳು = ಮುಕ್ತವಾಗು, ಬಿಡುಗಡೆ ಹೊಂದು
(ತೊಳೆದುಕೊಳ್ಳು = ಸ್ನಾನ ಮಾಡು)
ಪ್ರ : ಅವರ ಎಲ್ಲ ತಲರೆತಂಟೆ ಇವತ್ತು ಪೈಸಲ್ ಆದದ್ದರಿಂದ, ತಲೆ ತೊಳೆದುಕೊಂಡಂತಾಯ್ತು
೧೩೬೦. ತಲೆದಡವು = ತಲೆ ಸವರು, ನೇವರಿಸು
(ತಲೆದಡವು.< ತಲೆ + ತಡವು)
ಪ್ರ : ತಲೆದಡವಿ ಬುದ್ಧಿ ಹೇಳೋಕೆ ಇನ್ನೂ ಎಳೆಹುಡುಗನಾ?
೧೩೬೧. ತಲೆ ನುಣ್ಣಗೆ ಮಾಡು = ಬೋಳಿಸು
ಪ್ರ : ಕ್ರಾಪ್ ಮಾಡಯ್ಯ ಅಂದರೆ ಅವನು ತಲೆ ನುಣ್ಣಗೆ ಮಾಡಿಬಿಟ್ಟ
೧೩೬೨. ತಲೆ ನೆಲಕ್ಕೆ ಹಾಕು = ಮಲಗು
ಪ್ರ : ನಿನ್ನೆಯಿಂದ ತಲೆ ನೆಲಕ್ಕೆ ಹಾಕೋಕೆ ಆಗಿಲ್ಲ.
೧೩೬೩. ತಲೆ ಪೋಟು ಬರು = ತಲೆ ನೋವು ಬರು
(ಪೋಟು = ನೋವು, ಸಿಡಿತ)
ಪ್ರ : ತಲೆ ಪೋಟು ಬಂದು ಬಾಯಿ ಬಾಯಿ ಬಡ್ಕೊಳ್ಳೋಂಗೆ ಆಗಿದೆ.
೧೩೬೪. ತಲೆಬಾಲ ಗೊತ್ತಿಲ್ಲದೆ ಮಾತಾಡು = ಹಿಂದು ಮುಂದು ತಿಳಿಯದೆ ಮಾತಾಡು
ಪ್ರ : ಎಂದೂ ತಲೆಬಾಲ ಗೊತ್ತಿಲ್ಲದೆ ಮಧ್ಯಸ್ತಿಕೆ ಮಾತಾಡೋಕೆ ಹೋಗಬಾರ್ದು
೧೩೬೫. ತಲೆ ಬುಡ ಗೊತ್ತಿಲ್ಲದಿರು = ಸಮಸ್ಯೆಯ ಪೂರ್ಣ ಅರಿವಿಲ್ಲದಿರು
ಪ್ರ : ತಲೆಬುಡ ಗೊತ್ತಿಲ್ಲದೆ ಬಡಬಡ ಮಾತಾಡಿದ್ರೆ ಪ್ರಯೋಜನವೇನು?
೧೩೬೬. ತಲೆ ಮೇಲೆ ಹೊತ್ಕೊಂಡು ಮೆರೆಸು = ಉತ್ಸವ ಮೂರ್ತಿಯನ್ನಾಗಿ ಮಾಡಿ ಮೆರೆಸು, ಪ್ರಶಂಸಿಸು, ಅತಿ ಮುದ್ದು ಮಾಡು
ಪ್ರ : ತಲೆ ಮೇಲೆ ಹೊತ್ಕೊಂಡು ಮೆರೆಸಿ ಮೆರೆಸಿ, ಮಗ ಕೆಟ್ಟು ಕೆರ ಹಿಡಿದು ಹೋದ
೧೩೬೭. ತಲೆ ಮೇಲೆ ಅಕ್ಕಿ ಕಾಳು ಹಾಕು = ಮದುವೆ ಮಾಡು
(ಅಕ್ಕಿಕಾಳು = ಅಕ್ಷತೆ)
ಪ್ರ : ಮಗನ ತಲೆ ಮೇಲೆ ಅಕ್ಕಿ ಕಾಳು ಹಾಕೋ ಭಾಗ್ಯ ಹೋಗಿ, ಬಾಯಿಗೆ ಅಕ್ಕಿ ಕಾಳು ಹಾಕೋ ದೌರ್ಭಾಗ್ಯ ದೇವರು ಕೊಟ್ಟ.
೧೩೬೮. ತಲೆ ಮೇಲೆ ಕೈ ಇಡು = ಭಸ್ಮ ಮಾಡು, ಹಾಳು ಮಾಡು
ಭಸ್ಮಾಸುರನ ಕಥಾ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಇನ್ನೊಬ್ಬರ ತಲೆ ಮೇಲೆ ಕೈ ಇಡೋಕೆ ಹೋಗಬಾರ್ದು, ಅದು ನಮಗೇ ತಿರುಗುಬಾಣವಾಗ್ತದೆ.
೧೩೬೯. ತಲೆ ಮೇಲೆ ಕೈ ಹೊತ್ಕೊಂಡು ಕೂರು = ನಿರಾಶನಾಗಿ ಕೂಡು, ನಿಷ್ಕ್ರಿಯನಾಗಿ ಕೂಡು
ಪ್ರ : ಏನು ಮಾಡಬೇಕು ಅಂತ ತೋಚದೆ, ತಲೆ ಮೇಲೆ ಕೈ ಹೊತ್ಕೊಂಡು ಕೂತವ್ನೆ
೧೩೭೦. ತಲೆ ಮೇಲೆ ಗೂಬೆ ಕೂಡಿಸು = ಅಪವಾದ ಹೊರಿಸು
ಗೂಬೆ ಅಪಶುಕುನದ ಪಕ್ಷಿ ಎಂದು ಜನಪದರ ನಂಬಿಕೆ. ಅದು ‘ಗುಗ್ಗೂಗು’ ಎಂದು ಕೂಗಿದರೆ ‘ಗುದ್ದಲಿ ಮಂಕರಿ ತತ್ತ’ ಎಂದು ಅದರ ಅರ್ಥ ಎನ್ನುತ್ತಾರೆ. ಅಂದರೆ ಸಾವು ನಿಶ್ಚಿತ, ಸಮಾಧಿ ತೋಡಲು ಗುದ್ದಲಿ ಮಂಕರಿ ಸಿದ್ಧಪಡಿಸಿಕೊಳ್ಳಿ ಎಂದು ಆ ಮಾತಿನ ಧ್ವನಿ ಎಂದು ಅವರ ನಿಲುವು.
ಪ್ರ : ವಿನಾಕಾರಣ ಒಬ್ಬರ ತಲೆ ಮೇಲೆ ಗೂಬೆ ಕೂರಿಸಬಾರದು, ಅದು ಸದಭಿರುಚಿಯಲ್ಲ
೧೩೭೧. ತಲೆ ಮೇಲೆ ಚಪ್ಪಡಿ ಎಳೆ = ಕೆಡಕು ಮಾಡು, ಸಾಯಿಸು
ಪ್ರ : ಇನ್ನೊಬ್ಬರ ತಲೆ ಮೇಲೆ ಚಪ್ಪಡಿ ಎಳೆದು, ಇವನು ಗೂಟ ಹುಯ್ಸಿಕೊಂಡು ಇಲ್ಲೇ ಇರ್ತಾನ?
೧೩೭೨. ತಲೆ ಮೇಲೆ ಜೀರಿಗೆ ಬೆಲ್ಲ ಹಾಕು = ಶುಭ ಕೋರು, ಮದುವೆ ಮಾಡು
ಪ್ರ : ಚೆನ್ನಾಗಿ ಬದುಕಿ ಅಂತ ತಲೆ ಮೇಲೆ ಜೀರಿಗೆ ಬೆಲ್ಲ ಹಾಕೋದು ಬಿಟ್ಟು, ಹಿಂಗೆ ಜೀವಕ್ಕೆ ಜೀರಿಗೆ ಅರೆಯಬಾರ್ದು
೧೩೭೩. ತಲೆ ಮೇಲೆ ತಲೆ ಬೀಳು = ಸಾಲು ಹೆಣ ಮಗಲು
ಪ್ರ : ಇದರಿಂದ ತಲೆ ಮೇಲೆ ತಲೆ ಬಿದ್ರೂ, ನಾನಂತು ಹಿಂದಕ್ಕೆ ಸರಿಯಲ್ಲ
೧೩೭೪. ತಲೆ ಮೇಲೆ ದೀಪ ಹಚ್ಚು = ಆಳಾಗಿಸು, ತೊತ್ತಾಗಿಸು
ಹಿಂದೆ ದೇವರ ಮೆರವಣಿಗೆಗೆ, ಮದುವೆಯಾದ ಹೆಣ್ಣುಗಂಡುಗಳ ಮೆರವಣಿಗೆಗೆ ಆಳು ಮಕ್ಕಳ ತಲೆ ಮೇಲೆ ದೀಪ ಹಚ್ಚಿ ದುಡಿಸಿಕೊಳ್ಳುವ ದುಷ್ಟಪದ್ಧತಿ ಇದ್ದಿರಬೇಕು, ಈಗ ನಿರ್ಗತಿಕರ ತಲೆ ಮೇಲೆ ಪೆಟ್ರೋಮ್ಯಾಕ್ಸ್ ಹೊರಿಸುವಂತೆ. ಅಂಥ ಪದ್ಧತಿಯ ಪಳೆಯುಳಿಕೆ ಈ ನುಡಿಗಟ್ಟು.
ಪ್ರ : ನಿನ್ನ ತಲೆ ಮೇಲೆ ದೀಪ ಹಚ್ಚಿ ನಿಲ್ಲಿಸ್ತೀನಿ, ತಿಳಕೋ
೧೩೭೫. ತಲೆ ಮೇಲೆ ಮೆಣಸು ಅರೆ = ಹಿಂಸಿಸು.
ಹಸೆಕಲ್ಲಿನ (< ಹಾಸುಗಲ್ಲು) ಮೇಲೆ ಮೆಣಸಿಟ್ಟು ಗುಂಡುಕಲ್ಲಿನಿಂದ ಜಜ್ಜಿ ಅರೆಯುವ ವಾಡಿಕೆಯುಂಟು. ಆ ಹಿನ್ನೆಲೆಯ ನುಡಗಟ್ಟಿದು.
ಪ್ರ : ಸೊಸೆಯರ ತಲೆ ಮೇಲೆ ಮೆಣಸು ಅರೆಯೋ ಅತ್ತೆಯರೇ ಜಾಸ್ತಿ
೧೩೭೬. ತಲೆ ಮೇಲೆ ಮೆಟ್ಟಿ ಹೋಗುವಂಥದನ್ನು ತರು = ಇನ್ನೂ ಉತ್ತಮವಾದುದನ್ನು ತರು
ಪ್ರ : ಅವನ ಹೋರಿ ತಲೆ ಮೇಲೆ ಮೆಟ್ಟಿ ಹೋಗುವಂಥ ಹೋರಿಯನ್ನು ನಾನು ತರ್ತೇನೆ
೧೩೭೭. ತಲೆ ಮೇಲೆ ಮೊಟ್ಟು = ತಲೆ ಮೇಲೆ ಕುಕ್ಕು, ಹೊಡಿ
(ಮೊಟ್ಟು = ಮಡಿಸಿದ ಬೆರುಳುಗಳ ಗಣ್ಣಿನಿಂದ ಬಡಿ)
ಪ್ರ : ತಲೆ ಮೇಲೆ ನಾಲ್ಕು ಮೊಟ್ಟು, ಸುಮ್ಮನಾಗ್ತಾನೆ.
೧೩೭೮. ತಲೆ ಮೇಲೆ ಮೊಳೆ ಹೊಡಿಸಿಕೊಂಡಿರು = ಶಾಶ್ವತವಾಗಿರು
ಪ್ರ : ಎಲ್ಲರೂ ಸಾಯೋರೆ, ನೀನೇನು ತಲೆ ಮೇಲೆ ಮೊಳೆ ಹೊಡೆಸಿಕೊಂಡು ಇರ್ತೀಯಾ?
೧೩೭೯. ತಲೆ ಮೇಲೆ ಸಾಸೇವು ಹಾಕು = ಮದುವೆ ಮಾಡು
(ಸಾಸೇವು < ಸೇಸೇವು < ಸೇಸೆ < ಶೇಷೆ = ಅಕ್ಷತೆ, ಅಕ್ಕಿಕಾಳು)
ಪ್ರ : ನನ್ನ ಬಾಳೇವು ಬರಿದಾದ್ರೂ ಚಿಂತೆ ಇಲ್ಲ, ಆ ಹುಡುಗಿ ತಲೆ ಮೇಲೆ ಸಾಸೇವು ಹಾಕಿಬಿಟ್ರೆ ಸಾಕು
೧೩೮೦. ತಲೆ ಮೇಲೆ ಹಾಕು = ಜವಾಬ್ದಾರಿ ಹೊರಿಸು
ಪ್ರ : ಅವನ ಮದುವೆ ಮಾಡೋದನ್ನೂ ನನ್ನ ತಲೆ ಮೇಲೆ ಹಾಕಿದರು
೧೩೮೧. ತಲೆ ಮೇಲೆ ಹೊಡೆಯುವಂತಿರು = ಉತ್ತಮವಾಗಿರು
ಪ್ರ : ಆ ಊರಿನಲ್ಲಿ ನೋಡಿದ ಹೆಣ್ಣಿನ ತಲೆ ಮೇಲೆ ಹೊಡಿಯೋ ಹಂಗಿದೆ ಈ ಊರಿನ ಹೆಣ್ಣು
೧೩೮೨. ತಲೆಗೆ ಪಾಪೋಸು ಕೇಳು = ಬುದ್ಧಿ ಬಾರೀಕು ಇಲ್ಲದೆ ಮನಸೇಚ್ಛೆ ಮೆರೆ
(ಪಾಪೋಸು < ಪಾಪಾಸು = ಚಪ್ಪಲಿ)
ಪ್ರ : ಎಲ್ಲರೂ ಕಾಲಿಗೆ ಕೇಳಿದರೆ, ಇವನು ತಲೆಗೆ ಪಾಪೋಸು ಕೇಳ್ತಾನೆ.
೧೩೮೩. ತಲೆಯೊಳಗಿನ ಹುಳ ಸತ್ತು ಹೋಗು = ಸಾಕುಸಾಕಾಗು, ಹೆಣಗಿ ಸುಸ್ತಾಗು
ಪ್ರ : ಎದ್ದರೆ ಬಿದ್ದರೆ ಇವರ ಜಗಳ ತೀರಿಸೋದ್ರಲ್ಲೇ ನನ್ನ ತಲೆಯೊಳಗಿನ ಹುಳ ಸತ್ತು ಹೋದವು
೧೩೮೪. ತಲೆಯೊಳಗಿನ ಹುಳ ಕೆರಳಿಕೊಳ್ಳು = ರೋಷ ಉಕ್ಕು
ಟಗರುಗಳ ತಲೆಯಲ್ಲಿ ಹುಳ ಕೆರಳಿಕೊಂಡರೆ ರಕ್ತ ಸೋರುವುದನ್ನೂ ಲೆಕ್ಕಿಸದೆ ಡಿಕ್ಕಿ ಹೊಡೆಯುತ್ತವೆ ಎಂಬ ನಂಬಿಕೆಯುಂಟು. ಆ ಹಿನ್ನೆಲೆ ಈ ನುಡಿಗಟ್ಟಿಗೆ ಮೂಲ.
ಪ್ರ : ನನ್ನ ತಲೆಯೊಳಗಿನ ಹುಳ ಕೆರಳಿಕೊಂಡ್ರೆ, ಯಾರಿಗೆ ಏನು ಮಾಡ್ತೀನಿ ಅಂತ ಗೊತ್ತಿಲ್ಲ.
೧೩೮೫. ತಲೆ ಸವರು = ಹುನ್ನಾರು ಮಾಡು, ಪೂಸಿ ಮಾಡು
ಪ್ರ : ಹೆಂಗೋ ಅವನ ತಲೆ ಸವರಿ ಸವರೀ, ಮನೇನ ತನ್ನ ಹೆಸರಿಗೆ ಬರೆಸಿಕೊಂಡು ಬಿಟ್ಟ ನೋಡು.
೧೩೮೬. ತಲೆ ಸೀಯು = ಕೊಲ್ಲು, ಸಾಯಿಸು
(ಸೀಯು = ಒಣಗು, ಕರಿಕಾಗು, ಸುಡು) ಮಾಂಸಾಹಾರಿಗಳು ಕಡಿದ ಕುರಿ ಅಥವಾ ಮೇಕೆಯ ಮಾಂಸವನ್ನು ಅಂದೇ ಬೇಯಿಸಕೊಂಡು ತಿಂದರೂ ತಲೆ ಮತ್ತು ಕಾಲುಗಳನ್ನು ಬೆಂಕಿಯಲ್ಲಿ ಸೀದು ಇಟ್ಟುಕೊಳ್ಳುತ್ತಾರೆ. ಹಾಗೆ ಬೆಂಕಿಯಲ್ಲಿ ಸೀಯುವುದರಿಂದ ಅದು ಅನೇಕ ದಿನ ಮಡಗಿದರೂ ಕೆಡುವುದಿಲ್ಲ. ಆದರೆ ಮಾಂಸವನ್ನು ಹಾಗೆ ಮಡಗಲು ಸಾಧ್ಯವಿಲ್ಲ, ಅದು ಬೇಗ ಕೆಡುತ್ತದೆ. ಅನ್ನ ಸೀದು ಹೋಗಿದೆ ಎಂಬಲ್ಲಿ ಸೀದು ಶಬ್ದದ ಧಾತು ಸೀಯು ಎಂಬುದೇ ಆಗಿದೆ ಎಂಬುದನ್ನು ಗಮನಿಸಬೇಕಾಗುತ್ತದೆ.
ಪ್ರ : ಇಷ್ಟು ದಿನ ಎಲ್ಲಿ ಹಾಳಾಗಿ ಹೋಗಿದ್ದೋ, ನಿನ್ನ ತಲೆ ಸೀಯ !
೧೩೮೭. ತಲೆ ಹಾಕು = ಪ್ರವೇಶಿಸು, ನಡುವೆ ಬಾಯಿ ಹಾಕು
ಪ್ರ : ಸಂಬಂಧಪಡದ ವಿಷಯಕ್ಕೆ ಎಂದೂ ತಲೆ ಹಾಕಬಾರ್ದು
೧೩೮೮. ತಲೆ ಹಿಡಿ = ಸಿರ್ಪಕಡು ಕೆಲಸ ಮಾಡು
ಪ್ರ : ನನ್ನ ಪ್ರಾಣ ಹೋದರೂ ಇಂಥ ತಲೆ ಹಿಡಿಯೋ ಕೆಲಸ ಮಾಡಲ್ಲ
೧೩೮೯. ತಲೆ ಹುಯ್ಯಿ = ಪ್ರಾಣ ತೆಗೆ, ತಲೆ ಒಡೆ
ಪ್ರ : ಮೊಲೆಗೆ ಕೈ ಹಾಕ್ತಾನಲ್ಲ, ಇವನ ತಲೆ ಹುಯ್ಯಾ !
೧೩೯೦. ತಳ ಊರು = ತಂಗು, ಬೇರು ಬಿಡು
(ತಳ < ಸ್ಥಳ = ನೆಲೆ)
ಪ್ರ : ನೀರು ನೆಳ್ಳು ಇರೋಕಡೆ ತಳ ಊರೋರು ಯಾರು ಅಂದ್ರೆ ಹಾರುವರು.
೧೩೯೧. ತಳ ಬುಡ ಕೇಳು = ಮೂಲವನ್ನು ವಿಚಾರಿಸು
(ತಳ = ಸ್ಥಳ, ಬುಡ = ವಂಶ, ಕುಲ)
ಪ್ರ : ನೀನು ತಳಬುಡನೆಲ್ಲ ಕೇಳಬೇಡ, ಆ ಎಲ್ಲ ಕಣಿ ಹೇಳೋಕೆ ನಾನು ತಯಾರಿಲ್ಲ
೧೩೯೨. ತಳಕಳಕು ಮಾಡು = ಮೋಸ ಮಾಡು
(ತಳಕಳಕು < ಥಳುಕುಪಳಕು = ವಂಚನೆ)
ಪ್ರ : ಅಂತೂ ತಳಕಳಕು ಮಾಡಿ ತಮಾಮ್ ಆಸ್ತಿ ಹೊಡೆದುಬಿಟ್ಟ
೧೩೯೩. ತಳ ಕಾಣಿಸು = ಮೂಲ ಶೋಧಿಸು
(ತಳ = ಮೂಲ, ಉಗಮಸ್ಥಾನ)
ಪ್ರ : ಸಮಸ್ಯೆಯ ತಳ ಕಾಣಿಸಿದಾಗಲೇ ಅದರ ಕೊನೆಗಾಣಿಸಲು ಸಾಧ್ಯ
೧೩೯೪. ತಳ್ಳಾಗು = ಒಣಗಿ ಹೋಗು, ವಯಸ್ಸಾಗು
(ತಳ್ಳು.< ತಳಲ್ = ಒಣಗಿದ ಕಾಯಿ)
ಪ್ರ : ಆ ತಳ್ಳಾದ ಹುಡುಗೀನ ತಂದು ಈ ಎಳೆ ಹುಡುಗನಿಗೆ ಕಟ್ತೀರಾ?
೧೩೯೫. ತಾಟಿಪೋಟಿ ಮಾಡು = ತೇಪೆ ಹಾಕು, ಬಂಗಬಡತನದಲ್ಲಿ ಕಾಲ ಹಾಕು
ಪ್ರ : ಹೆಂಗೋ ತಾಟಿಪೋಟಿ ಮಾಡಿ ನಿಭಾಯಿಸ್ತಾ ಇದ್ದೀನಿ
೧೩೯೬. ತಾಟುಯ್ಯು = ಇತ್ತಿಂದತ್ತ ಅತ್ತಿಂದಿತ್ತ ತಿರುಗು, ಹೊಯ್ದಾಡು, ತುಳಿದಾಡು
ಪ್ರ : ದನಗಳು ಹೊಟ್ಟೆಗಿಲ್ಲದೆ ತಾಟುಯ್ತಾ ಅವೆ
೧೩೯೭. ತಾಬಂದಿಗೆ ತರು = ಹಿಡಿತಕ್ಕೆ ತರು
(ತಾಬಂದು < ತಹಬಂದು = ಅಂಕೆ, ಹಿಡಿತ)
ಪ್ರ : ದೇವರ ದಯದಿಂದ ಎಲ್ಲ ತಾಬಂದಿಗೆ ತಂದೆ
೧೩೯೮. ತಾರಮ್ಮಯ್ಯನ್ನ ಹೇಳು = ಈಗ ಬಾ, ಆಗ ಬಾ, ಹೋಗಿ ಬಾ ಎನ್ನು
ಪ್ರ : ಅವನು ತಾರಮ್ಮಯ್ಯನ್ನ ಹೇಳ್ತಾನೆ ಅಂತ ಮೊದಲೇ ನನಗೆ ಗೊತ್ತಿತ್ತು
೧೩೯೯. ತಾರಾತಿಗಡಿ ಮಾಡು = ಏರುಪೇರು ಮಾಡು, ಮೋಸ ಮಾಡು
(ತಾರಾತಿಗಡಿ < ತಾರಾ + ತಿಕ್ಕಡಿ < ತಾರಾ + ತಕ್ಕಡಿ) ತಕ್ಕಡಿಯನ್ನು ಏರುಪೇರು ಮಾಡಿ ವಂಚಿಸುವ ವ್ಯಾಪಾರ ವೃತ್ತಿಯ ಹಿನ್ನೆಲೆಯಲ್ಲಿ ಮೂಡಿದ್ದು ಈ ನುಡಿಗಟ್ಟು.
ಪ್ರ : ತಾರಾತಿಗಡಿ ಮಾಡೋದು ಬಿಟ್ಟು ನೇರವಾಗಿ ಅಳತೆ ಮಾಡಿಕೊಡಿ, ಇಲ್ಲ, ಬಿಡಿ.
೧೪೦೦. ತಾರಿಗೆ ಬಾರಿಗೆ ಅಡಕು = ಅಡ್ಡದಿಡ್ಡಿ ಎಸೆ, ಅಸ್ತವ್ಯಸ್ತವಾಗಿ ಹಾಕು
ಪ್ರ : ನೇರವಾಗಿ ಹಾಕದೆ ಹಿಂಗೆ ತಾರಿಗೆ ಬಾರಿಗೆ ಹಾಕಿದರೆ ಮನೆ ನೇರುಪ್ಪಾಗಿರ್ತದ?
೧೪೦೧. ತಾರಿ ಹೋಗು = ಒಣಗಿ ಹೋಗು, ಬಾಡಿ ಹೋಗು
(ತಾರು = ಒಣಗು)
ಪ್ರ : ಬಿಸಿಲ ಝಳಕ್ಕೆ ಎಳೆ ಮಗುರು ತಾರಿ ಹೋದುವು.
೧೪೦೨. ತಾವಿಗೆ ಬರು = ತೆಳ್ಳಗಾಗು, ನಿರ್ಗತಿಕರಾಗು
(ತಾವು < ಠಾವು = ವಾಸಸ್ಥಳ) ವ್ಯವಸಾಯ ಕ್ಷೇತ್ರವನ್ನೆಲ್ಲ ಮಾರಿಕೊಂಡು ತಿಂದು ಈಗ ವಾಸಸ್ಥಳ (ಮನೆ) ಕ್ಷೇತ್ರಕ್ಕೆ ಮಾತ್ರ ಸೀಮಿತರಾಗಿದ್ದಾರೆ ಎಂಬ ಭಾವ ಅಡಕವಾಗಿದೆ.
ಪ್ರ : ಹೊಲಗದ್ದೆ ಎಲ್ಲ ಮಾರ್ಕೊಂಡು ಕೇರ್ಕೊಂಡು ದರ್ಬಾರು ಮಾಡೋಕೆ ಹತ್ತಿದಾಗಲೇ ನಾನು ಅಂದ್ಕೊಂಡೆ, ಇವರು ಇಷ್ಟ್ರಲ್ಲೇ ವಾಲಾಡಿ ವಾಲೆ ಪಾಲಾಗಿ ತಾವಿಗೆ ಬರ್ತಾರೆ ಅಂತ
೧೪೦೩. ತಾಳ ತಪ್ಪು = ಹೊಂದಾಣಿಕೆ ತಪ್ಪು, ವಿರಸ ಉಂಟಾಗು
ಪ್ರ : ಗಾದೆ – ತಾಳ ತಪ್ಪಿದ ಬಾಳು, ತಾಳಲಾರದ ಗೋಳು
೧೪೦೪. ತಾಳ ಹಾಕು = ರೊಟ್ಟಿ ಹಾಕು
(ತಾಳ = ರೊಟ್ಟಿ)
ಪ್ರ : ಗಾದೆ – ತಾಳ ಹಾಕಿ ತಾವಿಗೆ ಬಂದರು
೧೪೦೫. ತಾಳಕ್ಕೆ ತಕ್ಕಂತೆ ಕುಣಿ = ಹೇಳಿದಂತೆ ಕೇಳು, ಕೈಗೊಂಬೆಯಾಗು
ಪ್ರ : ತಾಳಕ್ಕೆ ತಕ್ಕಂತೆ ಕುಣೀದಿದ್ರೆ, ಈ ಮನೇಲಿ ಯಾರನ್ನೂ ಬಾಳಗೊಡಲ್ಲ
೧೪೦೬. ತಾಳಿಕೆ ಬರು = ಬಾಳಿಕೆ ಬರು
(ತಾಳಿಕೆ = ತಡೆತ, ಹೆಚ್ಚು ಕಾಲ ಬಾಳುವ ಸತ್ತ್ವ)
ಪ್ರ : ಬಟ್ಟೆ ಗಟ್ಟಿಯಾಗಿದೆ, ಚೆನ್ನಾಗಿ ತಾಳಿಕೆ ಬರ್ತದೆ
೧೪೦೭. ತಾಳು ಹಿಡಿದು ಮಾತನಾಡು = ಸಮಸ್ಯೆಯ ಮೂಲ ತಿಳಿದು ಮಾತನಾಡು
(ತಾಳು = ಬುಡ, ಮೂಲ)
ಪ್ರ : ವ್ಯಾಜ್ಯ ತೀರ್ಮಾನ ಆಗೋದು ತಾಳು ಹಿಡಿದು ಮಾತಾಡಿದಾಗಲೇ
೧೪೦೮. ತಾಳೆ ಹಾಕು = ಹೋಲಿಕೆ ಮಾಡು
ಪ್ರ : ಅದ್ಕೂ ಇದ್ಕೂ ತಾಳೆ ಹಾಕಿ ನೋಡಿದಾಗ, ಇದು ಅದಕ್ಕಿಂತ ಮೇಳು ಅನ್ನಿಸ್ತದೆ.
೧೪೦೯. ತ್ವಾಕೆ ಮುರಿ = ಬಾಲ ನುಲಿಚು, ಬಾಲ ಕತ್ತರಿಸು
(ತ್ವಾಕೆ < ತೋಕೆ = ಬಾಲ)
ಪ್ರ : ಅವನ್ನ ಸುಮ್ನೆ ಬಿಡಲ್ಲ, ತ್ವಾಕೆ ಮುರಿದು ಗ್ವಾಕೆ ಹಿಸಕ್ತೀನಿ
೧೪೧೦. ತ್ಯಾಪೆ ಬಾಳು ನಡೆಸು = ಭಂಗದ ಬದುಕು ನಡೆಸು
(ತ್ಯಾಪೆ , ತೇಪೆ)
ಪ್ರ :ತ್ಯಾಪೆ ಬಾಳು ನಡೆಸಿ ನಮಗೂ ಸಾಕು ಸಾಕಾಗಿದೆ.
೧೪೧೧. ತ್ಯಾಪೆ ಹಚ್ಚು = ಚಾಡಿ ಹೇಳು
ಪ್ರ :ತ್ಯಾಪೆ ಹಚ್ಚೋ ಜನ ಮನೆ ದೀಪ ಹಚ್ತಾರ ? ಆರಿಸ್ತಾರೆ.
೧೪೧೨. ತ್ಯಾಪೆ ಹತ್ತಿ ಬರು = ಚೆಲ್ಲು ಬಿದ್ದು ಬರು
(ತ್ಯಾಪೆ < ತಾಪೆ < ತಾಪು = ಹಾಡು ಕುಣಿ-ತ-ಗ-ಳ ಕೂಟ-ದ ವೇಶ್ಯಾ – ವಾ-ಟಿ-ಕೆ)
ಪ್ರ : ತ್ಯಾಪೆ ಹತ್ತಿ ಬಂದೋಳು ಯಾತಕ್ಕೆ ಹೇಸ್ತಾಳೆ?
೧೪೧೩. ತ್ಯಾರಕಾರನಂಗೆ ಬರು = ಕೆಲಸಕಾರ್ಯ ಮಾಡದೆ ಉಣ್ಣಲು ಜರ್ಬಿನಿಂದ ಬರು
(ತ್ಯಾರಕಾರ < ತೆರಕಾರ = ಬಾಕಿ ವಸೂಲಿಗಾರ)
ಪ್ರ : ಕೆಲಸ ಕಾರ್ಯ ಮಾಡದೆ, ಇರೋದು ಇಲ್ಲದ್ದು ನೋಡದೆ, ತ್ಯಾರಕಾರನಂಗೆ ಊಟದ ಹೊತ್ತಿಗೆ ಬಂದು ಬಿಟ್ರೆ ಎಲ್ಲಿಂದ ತಂದಿಕ್ಕಲಿ ನಾನು ?
೧೪೧೪. ತ್ಯಾವೆ ತೆರು = ದರ್ದು ಪೂರೈಸು, ತೆರಿಗೆ ಪಾವತಿ ಮಾಡು
(ತ್ಯಾವೆ < ತೀರ್ವೆ = ಸುಂಕ)
ಪ್ರ : ನಾನಿರೋದು ಎಲ್ಲರ ತ್ಯಾವೆ ತೆರೋಕಲ್ಲ
೧೪೧೫. ತ್ಯಾವೆ ತಳ್ಳು = ಅರೆಕೊರೆ ತುಂಬು, ನಷ್ಟ ಭರಿಸು
(ತ್ಯಾವೆ < ತ್ಯಾಮೆ < ತೇಮೆ < ತೇಮಾನ < ತೇಯ್ಮಾನ (ತ) =ನಷ್ಟ) ಚಿನ್ನದ ಅಂಗಡಿಯ ವ್ಯಾಪಾರಿಗಳು, ಚಿನ್ನಾಭರಣ ಮಾಡುವವರು ಚಿನ್ನವನ್ನು ಒರೆಗಲ್ಲಿಗೆ ಉಜ್ಜಿ ನೋಡುವಾಗ, ಒಡವೆಗಳನ್ನು ಮಾಡುವಾಗ ಸಂಭವಿಸುವ ಅರೆಕೊರೆಗಳಿಗಾಗಿ ‘ತೇಮಾನದ ಖರ್ಚು’ ಎಂದು ಹಾಕುತ್ತಾರೆ. ಆ ಹಿನ್ನೆಲೆಯಲ್ಲಿ ಮೂಡಿದ ನುಡಿಗಟ್ಟು ಇದು
ಪ್ರ : ಎಲ್ಲರ ತ್ಯಾವೆ ತಳ್ಳಿ ತಳ್ಳೀ ನಾನು ತೆಳ್ಳಗಾದೆ.
೧೪೧೬. ತ್ಯಾವೆ ಮಾಡು = ಸೇವೆ ಮಾಡು
(ತ್ಯಾವೆ < ತೇವೆ < ಸೇವೆ = ಕೈಂಕರ್ಯ)
ಪ್ರ : ಕಂಡೋರ ತ್ಯಾವೆ ಮಾಡಿ ಮಾಡಿ, ಕುಂಡೀಲಿ ತೆವಳೋ ಗತಿ ಬಂತು.
೧೪೧೭. ತಿಕ ಜನಿ = ಭೇದಿಯಾಗು
(ಜನಿ < ಜಿನಿ < ಜಿನುಗು = ಸ್ರವಿಸು)
ಪ್ರ : ಮಕದ ಮ್ಯಾಲೆ ಹೊಡೆದರೆ ತಿಕದಾಗ ಜನೀಬೇಕು, ಹಂಗೆ ಹೊಡೀತಿನಿ.
೧೪೧೮. ತಿಕ ಮಕ ತಿಳೀದೆ ಮಾತಾಡು = ತಲೆಬಾಲ ಗೊತ್ತಿಲ್ಲದೆ ಮಾತಾಡು, ವಿವೇ-ಚ-ನೆ- ಇಲ್ಲ-ದೆ ಮಾತಾ-ಡು
ಪ್ರ : ತಿಕಮಕ ತಿಳೀದೆ ಮಾತಾಡೋನ್ನ ಮಧ್ಯಸ್ಥಗಾರನನ್ನಾಗಿ ಕರೆಯೋದುಂಟ?
೧೪೧೯. ತಿಕ ಮೇಲಕ್ಕೆ ಹೋಗು = ಅಹಂಕಾರ ಹೆಚ್ಚಾಗು, ಪ್ರತಿಷ್ಠೆ ಅಧಿಕವಾಗು
ಪ್ರ : ಹೋಗಲಿ ಪಾಪ ಅಂತ ನಾವು ಸುಮ್ಮನೆ ಇದ್ರೆ, ಅಣ್ಣನ ತಿಕ ಮೇಲಕ್ಕೆ ಹೋಯ್ತು
೧೪೨೦. ತಿಕ್ಕತಿಕ್ಕಲಾಗಿ ಮಾತಾಡು = ಹುಚ್ಚು ಹುಚ್ಚು ಮಾತಾಡು
(ತಿಕ್ಕತಿಕ್ಕಲು < ತಿಕ್ಕಲು + ತಿಕ್ಕಲು = ಐಲುಪೈಲು, ಹುಚ್ಚು)
ಪ್ರ : ಏನೇನೋ ತಿಕ್ಕತಿಕ್ಕಲಾಗಿ ಮಾತಾಡಿದಾಗ, ಸುತ್ತಮುತ್ತ ಇದ್ದ ಜನ ಸರಿಯಾಗಿ ಇಕ್ಕಿದರು.
೧೪೨೧. ತಿಕ್ಕಾಟವಾಗು = ಘರ್ಷಣೆಯಾಗು ಜಗಳವಾಗು
ಪ್ರ : ತಿಕ್ಕಾಟ ಕಿತ್ತಾಟ ಮನೆ ಹೊರಗೂ ಇದ್ದದ್ದೆ, ಮನೆ ಒಳಗೂ ಇದ್ದದ್ದೆ.
೧೪೨೨. ತಿಗ ನೆಕ್ಕೊಂಡಿರು = ನಾಯಿಯಂತೆ ಮೂಸಿಕೊಂಡಿರು, ಹೇಳಿದಂತೆ ಕೇಳಿಕೊಂಡಿರು
ಪ್ರ : ಗಾದೆ – ಗತಿಗೆಟ್ಟೆನಲ್ಲೊ ಭಾವ ಅಂದಿದ್ಕೆ
ತಿಗನೆಕ್ಕೆ ನಾದಿನಿ ಅಂದ್ನಂತೆ
೧೪೨೩. ತಿಗ ಬಡಿದುಕೊಳ್ಳು = ಅಪಹಾಸ್ಯ ಮಾಡು
ಪ್ರ : ಗಾದೆ – ಬದುಕಿದರೆ ಬಾಯಿ ಬಡ್ಕೊಂತಾರೆ
ಕೆಟ್ಟರೆ ತಿಗ ಬಡ್ಕೊಂತಾರೆ
೧೪೨೪. ತಿಗವೆಲ್ಲ ಬಾಯ್ಮಾಡು = ಹೆಚ್ಚು ಮಾತಾಡು, ತಲೆಹುಳಕ ನಾಯಂತೆ ಬೊಗಳುತ್ತಿರು
ಪ್ರ : ಅವನು ನನ್ನ ಬಿಟ್ರೆ ಇನ್ನಿಲ್ಲ ಅನ್ನೋಂಗೆ, ತಿಗವೆಲ್ಲ ಬಾಯ್ಮಾಡ್ತಾನೆ.
೧೪೨೫. ತಿಗ ಹರಿದು ಊರು ಬಾಗ್ಲಾಗು = ತಡೆದುಕೊಳ್ಳಲಾರದಷ್ಟು ತಾಪತ್ರಯಕ್ಕೆ ಸಿಕ್ಕು
ಪ್ರ : ನಂದೇ ನಂಗೆ ತಿಗ ಹರಿದು ಊರು ಬಾಗ್ಲಾಗಿದೆ, ಬೇರೆಯವರದು ಕಟ್ಕೊಂಡೇನು?
೧೪೨೬. ತಿಗೀಟು ಕೊಡು = ಎತ್ತಂಗಡಿ ಮಾಡು, ಜಾಗ ಬಿಡಿಸು
(ತಿಗೀಟು < ತಿಕೀಟು < Ticket = ಪರವಾನಿಗೆಯ ಚೀಟಿ)
ಪ್ರ : ಇಲ್ಲಿಂದ ಅವನಿಗೆ ತಿಗೀಟು ಕೊಟ್ಟಾಯ್ತು
೧೪೨೭. ತಿಗೀಟು ತಗೊಳ್ಳು = ಮರಣ ಹೊಂದು
(ತಗೊಳ್ಳು < ತೆಗೆದುಕೊಳ್ಳು)
ಪ್ರ : ತಿಗೀಟು ತಗೊಂಡವನ ಹೆಸರು ಓಟುದಾರರ ಪಟ್ಟಿಯಲ್ಲಿದೆ, ಹೇಗಿದೆ ತಮಾಷೆ !
೧೪೨೮. ತಿಗುಡೆಬ್ಬು = ಚರ್ಮ ಸುಲಿ, -ಶಿ-ಕ್ಷಿ-ಸು,
(ತಿಗುಡು = ಮರದ ಸಿಪ್ಪೆ, ತೊಗಟೆ)
ಪ್ರ : ಅಗಡು ದನಾನೂ ಅಷ್ಟೆ, ಅಗಡು ಜನಾನೂ ಅಷ್ಟೆ, ತಿಗುಡೆಬ್ಬಿದಾಗಲೇ ಸುಮ್ಮನಾಗೋದು
೧೪೨೯. ತಿಗುಳ ಮಾತಾಡು = ಅರ್ಥವಾಗದ ಅರ-ವು(ತಮಿ-ಳು) ಮಾತಾಡು, ಅಡಪಡ ಎಂದು ಆವುಟ ಮಾಡು
ಪ್ರ : ನೀನು ತಿಂಗಳು ಮಾತಾಡಿದ್ರೆ ನಾವು ತಲೆ ಕೆಡಿಸಿಕೊಳ್ಳಲ್ಲ, ‘ತಿಗುಳನ ಬಾಯಿ ಬಗಳೋನಾಯಿ’ ಅನ್ನೋ ಗಾದೆ ನಮಗೆ ಗೊತ್ತಿದೆ.
೧೪೩೦. ತಿಟ್ಟಿನ ತುಟ್ಟ ತುದಿ ತಗ್ಗಿನ ಮೊತ್ತ ಮೊದಲಾಗು = ಅಹಂಕಾರದ ತುಟ್ಟ ತುದಿ
ಅಧಃಪತನದ ಮೊತ್ತ ಮೊಬಲಗು, ಏರು ಬಂಡೆಯೇ ಜಾರುಂಬಡೆಯಾಗು.
(ತಿಟ್ಟು = ದಿಣ್ಣೆ)
ಪ್ರ : ತಿಟ್ಟಿನ ತುಟ್ಟ ತುದಿಯೇ ತಗ್ಗಿನ ಮೊತ್ತಮೊದಲು ಎಂಬುದನ್ನು ಹೊಟ್ಟೆತುಂಬಿದವರು ಮರೆಯಬಾರದು.
Leave A Comment