೧೫೦೫. ತೂತುಗೈ = ದುಂದು ವೆಚ್ಚ ಮಾಡುವ ಕೈ.
ಪ್ರ : ಗಾದೆ – ತೂತುಗೈಲಿ ಕಾಸು ನಿಲ್ಲಲ್ಲ
೧೫೦೬. ತೂತುಬಾಯಿಗೆ ನೀತ ಹೇಳು = ಬಾಯಿ ಹರುಕರಿಗೆ ಗುಟ್ಟು ಹೇಳು, ಹರುಕುಬಾಯಿಗೆ ರಹಸ್ಯ ತುರುಕು
(ನೀತ < ನಿಯತ = ಕಟ್ಟುಪಾಡು, ಗುಟ್ಟು)
ಪ್ರ : ಗಾದೆ – ಕುಡುಕನಿಗೆ ಕಿವಿಮಾತು ಹೇಳೋದು, ತೂತುಬಾಯಿಗೆ ನೀತ ಹೇಳೋದು – ಎರಡೂ ಒಂದೆ.
೧೫೦೭. ತೂತೂ ಮುಚ್ಚಿಕೊಳ್ಳು = ತಪ್ಪು ತಿದ್ದಿಕೊಳ್ಳು, ದೌರ್ಬಲ್ಯ ಸರಿಪಡಿಸಿಕೊಳ್ಳು
ಪ್ರ : ಅನ್ಯರ ಮನೆ ತೂತಿನ ಸುದ್ದಿ ಯಾಕೆ, ನಮ್ಮನೆ ತೂತು ನಾವು ಮುಚ್ಚಿಕೊಳ್ಳೋಣ
೧೫೦೮. ತೂತುಗತ್ತಲೆಯಾಗು = ಕಗ್ಗತ್ತಲೆಯಾಗು, ಕತ್ತಲ ಸಮುದ್ರವಾಗು
ಪ್ರ : ಗಾದೆ – ತೂತುಗತ್ತಲೇಲಿ ತಾತನ ಮದುವೆ
೧೫೦೯. ತೂಪರವಾಗು = ತುಂತುರು ಮಳೆಯಾಗು
(ತೂಪರ = ಹೊಗೆ ತುಂಬಿದ ಜೊಲ್ಲು ಮಳೆ)
ಪ್ರ : ಹೊಗೆಯಂಥ ತೂಪರದಲ್ಲಿ ಕಂಬಳಿ ಕೂಡ ತೇವ ಆಗೋದಿಲ್ಲ
೧೫೧೦. ತೂಬರೆ ಕೊಳ್ಳಿಯಾಗು = ಕೋಪಗೊಳ್ಳು, ಕಿಡಿಗಳ ಪಟಾಕಿ ಚಟಚಟಿಸು
(ಕೊಳ್ಳಿ = ಉರಿಯುವ ಸೌದೆ) ತೂಬರೆ ಮರದ ಸೌದಯನ್ನು ಒಲೆಗಿಟ್ಟರೆ ಚಟ್ಪಟ್ ಎಂದು ಕಿಡಿಗಳು ಹಾರತೊಡಗುತ್ತವೆ – ಬೇರೆಯವರ ಮನೆಗೆ ಹೋದ್ರೆ ಮೂರು ಮಾತು, ಕುಲುಮೆ ಮನೆಗೆ ಹೋದ್ರೆ ಮೂರು ತೂರು ಎಂಬ ಗಾದೆಯನ್ನು ಒಲೆ ಮುಂದೆ ಕುಳಿತ ಹೆಂಗಸರು ನೆನೆಸಿಕೊಳ್ಳುವಂತೆ ಮಾಡಿ.
ಪ್ರ : ಡೊಳ್ಳು ಹೊಟ್ಟೆಯವರ ಧಿಮಾಕು ನೋಡಿ, ಟೊಳ್ಳು ಹೊಟ್ಟೆಯವರು ತೂಬರೆಕೊಳ್ಳಿಯಾದರು
೧೫೧೧. ತೂಬೆತ್ತಲು ಹೋಗು = ಮಲಮೂತ್ರ ವಿಸರ್ಜನೆಗೆ ಹೋಗು
(ತೂಬು = ಕೆರೆಯಿಂದ ಗದ್ದೆಗಳಿಗೆ ನೀರು ಹಾಯಿಸಲು ಏರಿಯೊಳಗೆ ಮಾಡಿರುವ ಬಾಗಿಲು, ಕಿಂಡಿ)
ಪ್ರ : ಎದ್ದೋನೆ ಬಿದ್ದಂಬೀಳ ತನ್ನ ಹೊಲದ ಹತ್ರಕ್ಕೆ ಓಡಿದ, ತೂಬೆತ್ತೋಕೆ.
೧೫೧೨. ತೆಕ್ಕೆ ಬೀಳು = ಆಲಿಂಗಿಸಿಕೊಳ್ಳು, ಪರಸ್ಪರ ಅಪ್ಪಿಕೊಳ್ಳು
(ತೆಕ್ಕೆ = ಅಪ್ಪುಗೆ)
ಪ್ರ : ಇಬ್ಬರೂ ಪೊದೆ ಮರೆಯಲ್ಲಿ ಬೆದೆ ಬಂದವರಂತೆ ತೆಕ್ಕೆ ಬಿದ್ದಿದ್ದರು
೧೫೧೩. ತೆಕ್ಕೆ ಹುಯ್ಕೊಂಡು ಮಲಗು = ಸಮೃದ್ಧವಾಗಿರು, ಐಶ್ವರ್ಯ ಕಾಲುಮುರಿದುಕೊಂಡು ಬಿದ್ದಿರು.
(ತೆಕ್ಕೆ = ಇಲ್ಕೆ : ಬಿದಿರ ದೆಬ್ಬೆಯಿಂದ ಚಕ್ರಾಕಾರವಾಗಿ ಹೆಣೆದು, ಸಿಂಬೆಯಂತೆ ಮಡಕೆಗಳ ಕೆಳಗೆ ಹಾಕುವಂಥದು) ನಿಧಿನಿಕ್ಷೇಪದ ರಕ್ಷಣೆ ಆದಿಶೇಷನವೆಂದೂ, ಅವನು ಅಲ್ಲಿ ಸುರುಳಿ ಸುತ್ತಿಕೊಂಡು ಮಲಗಿ ಕಾಯುತ್ತಿರುತ್ತಾನೆಂದೂ ನಂಬಿಕೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಈ ಸಾರಿ ಬೆಳೆ ತೆಕ್ಕೆ ಹುಯ್ಕೊಂಡು ಮಲಗಿದೆ.
೧೫೧೪. ತೆಕ್ಕೆಗೊಗ್ಗದಿರು = ಹಿಡಿತಕ್ಕೆ ಸಿಕ್ಕದಿರು, ತಬ್ಬಿಗೆ ಅಮರದಿರು
(ತೆಕ್ಕೆ = ತಬ್ಬು : ಎರಡು ತೋಳುಗಳಿಂದಲೂ ತಬ್ಬಿ ಹಿಡಿಯುವಷ್ಟು)
ಪ್ರ : ತೆಕ್ಕೆಗೊಗ್ಗದಿದ್ದಾಗ ನಾನು ನಾನೇ ಏನ್ಮಾಡಲಿ? ನಿನ್ನ ಹಣೆಪಾಡು ಅಂತ ಬಿಟ್ಟುಬಿಟ್ಟೆ.
೧೫೧೫. ತೆಗೆದು ಹೋಗು = ಬಡವಾಗು, ಕೃಶವಾಗು
ಪದಾರ್ಥಗಳನ್ನು ಒಂದರ ಮೇಲೆ ಒಂದು ತೆಗೆಯುತ್ತಾ ಹೋದರೆ ಕ್ರಮೇಣ ಉಗ್ರಾಣ ಬಡವಾಗುತ್ತದೆ, ನೀರನ್ನು ತೋಡಿ ತೋಡಿ ತೆಗೆಯುತ್ತಾ ಹೋದರೆ ನೀರಿನ ಮಡು ಬಡವಾಗುತ್ತದೆ. ಪುರುಷ ವೀರ್ಯ ಹೊರದೆಗೆಯುತ್ತಾ ಹೋದಂತೆ ದೇಹ ಕೃಶವಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಈ ನುಡಿಗಟ್ಟು ಮೂಡಿದೆ.
ಪ್ರ : ಆಗ್ಯೂ ಈಗ್ಯೂ ಬಾಳ ತೆಗೆದು ಹೋಗ್ಯವನೆ.
೧೫೧೬. ತೆನೆಯಾಗು = ಗಬ್ಬವಾಗು
(ತೆನೆ = ಹೊಡೆ = ಗರ್ಭ)
ಪ್ರ : ಹಸು ತೆನೆಯಾಗಿದೆ ಅಂತ ಬಿಮ್ಮನಸೆ ಹೆಂಡ್ರಿಗೆ ಹೇಳಿದ.
೧೫೧೭. ತೆರೆ. ತೆರು = ಸುಂಕ ಸಲ್ಲಿಸು, ತೆರಿಗೆ ಕೊಡು
(ತೆರ = ಶುಲ್ಕ, ಸುಂಕ; ತೆರು = ಸಲ್ಲಿಸು)
ಪ್ರ : ತೆರ ತೆತ್ತು ತೆತ್ತು ನರ ಸತ್ತು -ಕೂ-ತೆ
೧೫೧೮. ತೆರವಾಗಿರು = ಖಾಲಿಯಾಗಿರು
(ತೆರವು < ತೆರಪು = ಖಾಲಿ)
ಪ್ರ : ತೆರವಾಗಿರೋ ಜಾಗಕ್ಕೆ ವರ್ಗ ಮಾಡಿದರೆ ಹೋಗೋದು
೧೫೧೯. ತೆರೆ ಏಳು = ನಾಟಕ ಸುರುವಾಗು
(ತೆರೆ < ತಿರೈ(ತ) = ಪರದೆ)
ಪ್ರ : ತೆರೆ ಎದ್ದ ತಕ್ಷಣ ಜನರ ಕಣ್ಣುಕಿವಿ ರಂಗಸ್ಥಳದತ್ತ ವಾಲಿದವು.
೧೫೨೦. ತೆರೆ ಬೀಳು = ನಾಟಕ ಮುಕ್ತಾಯವಾಗು
ಪ್ರ : ತೆರೆ ಬಿದ್ದ ತಕ್ಷಣ ಜನ ಜೇನುಗೂಡಿಗೆ ಕಲ್ಲುಬಿದ್ದಂತೆದ್ದರು
೧೫೨೧. ತೆರೆ ಹಿಡಿ = ಮದುವೆಯ ಮುಹೂರ್ತಕ್ಕಾಗಿ ಎದುರು ಬದುರು ನಿಲ್ಲುವ ಹೆಣ್ಣು ಗಂಡುಗಳ ಮಧ್ಯೆ ಜವನಿಗೆ ಹಿಡಿ.
ಪ್ರ : ತೆರೆ ಹಿಡಿದಾಗ ಹೆಣ್ಣುಗಂಡುಗಳು ಒಬ್ಬರ ತಲೆಯ ಮೇಲೊಬ್ಬರು ಅಕ್ಷತೆ ಹಾಕುತ್ತಾರೆ ತೆರೆ ತೆಗೆದಾಗ ಒಬ್ಬರ ಬೊಗಸೆಯ ಮೇಲೆ ಒಬ್ಬರ ಬೊಗಸೆಯಿಟ್ಟು ಧಾರೆಗೆ ಅಣಿಯಾಗುತ್ತಾರೆ.
೧೫೨೨. ತೆವಕೆ ಹತ್ತಿ ತೆವಕೊಂಡು ಬರು = ಸಂಭೋಗ ಕಾತರದಿಂದ ಹತ್ತಿರಕ್ಕೆ ಬರು
(ತೆವಕೆ = ನವೆ, ಕಡಿತ ; ತೆವಕೊಂಡು < ತೆವಳಿಕೊಂಡು = ನುಸುಳಿಕೊಂಡು)
ಪ್ರ : ಗಾದೆ – ಬವಕೆ ತಿನ್ನೋ ಬಸುರಿ ಹತ್ರಕೆ
ತೆವಕೆ ಹತ್ತಿ ತೆವಳಿಕೊಂಡು ಬಂದ
೧೫೨೩. ತೆವಲು ತೀರಿಸಿಕೊಳ್ಳು = ಚಟ ಪೂರೈಸಿಕೊಳ್ಳು
(ತೆವಲು = ಚಟ, ಗೀಳು)
ಪ್ರ : ಗಾದೆ – ಬಾಯಿ ತೆವಲು ತೀರಿಸಿಕೊಳ್ಳೋಕೆ ಎಲೆ ಅಡಿಕೆ ಬೇಕು
ಮೈ ತೆವಲು ತೀರಿಸಿಕೊಳ್ಳೋಕೆ ಒಡಂಬಡಿಕೆ ಬೇಕು
೧೫೨೪. ತೆಳ್ಳಗೆ ಮಾಡು = ಬರಿಗೈ ಮಾಡು, ನಿರ್ಗತಿಕರನ್ನಾಗಿ ಮಾಡು
(ತೆಳ್ಳಗೆ = ತೆಳುವಾಗಿ, ಸತ್ತ್ವರಹಿತ ತಿಳಿಯಾಗಿ)
ಪ್ರ : ತುಂಬಿದ ಮನೇನ ತೆಳ್ಳಗೆ ಮಾಡಿಬಿಟ್ಟ, ಮನೆಹಾಳ
೧೫೨೫. ತೇದಿಕ್ಕಿದೋಳಿಗಿಂತ ಸಾದಿಕ್ಕಿದೋಳು ಹೆಚ್ಚಾಗು = ಶ್ರಮಪಟ್ಟಣವರಿಗಿಂತ ಸೋಗಲಾಡಿಗಳು ಪ್ರಿಯವಾಗು
(ತೇಯು = ಅರೆ: ಸಾಣೆ ಕಲ್ಲಿನ ಮೇಲೆ ಗಂಧದ ಕೊರಡನ್ನಿಟ್ಟು ಉಜ್ಜುವುದು, ಸವೆಸುವುದು, ಸಾದು = ಹಣೆಗಿಟ್ಟುಕೊಳ್ಳುವ ಕಪ್ಪು ಬೊಟ್ಟು, ತಿಲಕ)
ಪ್ರ : ಗಾದೆ – ತೇದಿಕ್ಕಿದೋಳಿಗಿಂತ ಸಾದಿಕ್ಕಿದೋಳು ಹೆಚ್ಚು
೧೫೨೬. ತೇದು ಕುಡಿ = ಪರಿಣತಿ ಪಡೆ, ಸಂಪೂರ್ಣ ರಕ್ತಗತ ಮಾಡಿಕೊಳ್ಳು
ಪ್ರ : ವೇದಗಳನ್ನೆಲ್ಲ ತೇದು ಕುಡಿದವನೆ
೧೫೨೭. ತೇದು ಹಣೆಗಿಟ್ಟುಕೊಳ್ಳು = ನಿರ್ನಾಮ ಮಾಡು
ಪ್ರ : ಆ ಕುಟುಂಬವನ್ನೇ ತೇದು ಹಣೆಗಿಟ್ಕೊಂಡು ಬಿಟ್ಟ.
೧೫೨೮. ತೇಪೆ ಹಾಕು = ಸಂಬಂಧ ಕೂಡಿಸು, ಕಿತ್ತು ಹೋದದ್ದನ್ನು ಸರಿಪಡಿಸು
ಪ್ರ : ಇಬ್ಬರಿಗೂ ತಿಳಿ ಹೇಳಿ ತೇಪೆ ಹಾಕಿದ್ದೀನಿ, ಉಳಿದದ್ದು ಅವರಿಗೆ ಬಿಟ್ಟದ್ದು
೧೫೨೯. ತೇರಾಗು = ರಥೋತ್ಸವ ಜರುಗು
(ತೇರು = ರಥ)
ಪ್ರ : ಗಾದೆ – ತೇರಾದ ಮೇಲೆ ಜಾತ್ರೆಗೆ ಹೋಗಬಾರ್ದು
ಧಾರೆಯಾದ ಮೇಲೆ ಮದುವೆಗೆ ಹೋಗಬಾರ್ದು
೧೫೩೦. ತೇಲಿಸು ಇಲ್ಲ ಮುಳುಗಿಸು = ಉಳಿಸು ಇಲ್ಲ ಕೆಡಿಸು
ಪ್ರ : ನಿನಗೆ ಬಿಟ್ಟದ್ದು, ತೇಲಿಸಿಯಾದರೂ ತೇಲಿಸು, ಮುಳುಗಿಸಿಯಾದರೂ ಮುಳುಗಿಸು
೧೫೩೧. ತೇಲಿ ಹೋಗು = ಹಾಳಾಗು, ನಾಶವಾಗು
ಪ್ರ : ಕುಂಡಿ ಹಿಂಡ್ತಾನಲ್ಲ, ಇವನ ತೆಂಡೆ ತೇಲಿ ಹೋಗ!
೧೫೩೨. ತೇಲುಗಣ್ಣು ಮೇಲುಗಣ್ಣು ಆಗು = ಜೀವ ಹೋಗುವ ಹಂತದಲ್ಲಿರು
ಪ್ರ : ಆಗಲೇ ತೇಲ್ಗಣ್ಣು ಮೇಲ್ಗಣ್ಣು ಆಗಿವೆ, ಇನ್ನು ಅವನ ಆಸೆ ಬಿಡಿ.
೧೫೩೩. ತೊಕ್ ಅನ್ನಿಸದಿರು = ಯಾರನ್ನೂ ಸೇರಿಸದಿರು, ಏನನ್ನೂ ಅಲಾಕ್ ಮಾಡದಿರು
(ತೊಕ್ < ಠಕ್ = ಹಾರೆಗುದ್ದಲಿಯ ಅಥವಾ ಹೆಜ್ಜೆಯ ಸದ್ದು)
ಪ್ರ : ಅವನಂಥ ಆಳು ಸಿಕ್ತಾರ, ತೋಟದೊಳಕ್ಕೆ ಯಾರನ್ನೂ ತೊಕ್ ಅನ್ನಿಸುತ್ತಿರಲಿಲ್ಲ.
೧೫೩೪. ತೊಕ್ಕು ತೆಗೆ = ಚರ್ಮ ಸುಲಿ, ಹೆಚ್ಚು ದುಡಿಸು
(ತೊಕ್ಕು < ತ್ವಕ್ಕು(ಸಂ) = ಚರ್ಮ)
ಪ್ರ : ಹೊತ್ತಾರೆಯಿಂದ ಬೈಸಾರೆವರೆಗೆ ಎತ್ತುಗಳಿಗೆ ತೊಕ್ಕು ತೆಗೆದು ಬಿಟ್ಟಿದ್ದೀನಿ.
೧೫೩೫. ತೊಕ್ಕು ನಂಚಿಕೊಳ್ಳು = ಹುಣಿಸೆಕಾಯಿ ಚಟ್ನಿಯನ್ನು ಊಟದ ಮಧ್ಯೆ ರುಚಿ
ಬದಲಾವಣೆಗಾಗಿ ಬಾಡಿಸಿಕೊಳ್ಳು
(ತೊಕ್ಕು = ಹುಣಿಸೆಕಾಯಿಂದ ಮಾಡಿದ ಕಾರ, ಚಟ್ನಿ; ನಂಚಿಕೊಳ್ಳು < ನಂಜಿಕೊಳ್ಳು = ಬಾಡಿಸಿಕೊಳ್ಳು)
ಪ್ರ : ಹುಣಿಸೆಕಾಯಿ ತೊಕ್ಕು ನಂಜಿಕೊಳ್ಳೋಕೆ ಬಸುರಿಯರಿಗೆ ಬಹಳ ಇಷ್ಟ.
೧೫೩೬. ತೊಗಟೆ ತೆಗಿ = ಚರ್ಮ ಸುಲಿ, ಹೆಚ್ಚು ದುಡಿಸಿ ಸುಸ್ತುಗೊಳಿಸು
(ತೊಗಟೆ = ಮರದ ತಿಗುಡು, ಸಿಪ್ಪೆ)
ಪ್ರ : ಬೇಗ ಬೇಗ ಕೆಲಸ ಮಾಡಿ ಮುಗಿಸದಿದ್ರೆ ಒಬ್ಬೊಬ್ಬರ ತೊಗಟೆ ತೆಗೆದುಬಿಡ್ತೀನಿ
೧೫೩೭. ತೊಗಲಿನ ಯಾಪರಕ್ಕಿಳಿ = ಚರ್ಮದ ವ್ಯಾಪಾರಕ್ಕಿಳಿ , ತಲೆಹಿಡುಕ ವೃತ್ತಿಗಿಳಿ
(ತೊಗಲು < ತೊವಲು = ಚರ್ಮ; ಯಾಪಾರ < ವ್ಯಾಪಾರ)
ಪ್ರ : ಈಗ ಮೊದಲಿನ ದಂಧೆ ಬಿಟ್ಟು ತೊಗಲಿನ ಯಾಪಾರಕ್ಕಿಳಿದಿದ್ದಾನೆ.
೧೫೩೮. ತೊಟ್ಟಿಕ್ಕಿಸಿ ಬರು = ಸಂಭೋಗಿಸಿ ಬರು
(ತೊಟ್ಟು = ಹನಿ, ಬಿಂದು; ಇಕ್ಕಿಸು = ಬೀಳಿಸು, ಉದುರಿಸು)
ಪ್ರ : ಗಾದೆ – ಕೆಟ್ಟು ಕೂತರೂ ತೊಟ್ಟಿ ಮುಂಡೆ ಹತ್ರ ಹೋಗಿ
ತೊಟ್ಟಿಕ್ಕಿಸಿ ಬರೋದು ಬಿಡ, ಕಚ್ಚೆಹರುಕ
೧೫೩೯. ತೊಟ್ಟಿಲ ಕಾಲಿಗೆ ತಾಲಿ ಕಟ್ಟು = ಬಾಲ್ಯವಿವಾಹ ಮಾಡು.
ಮಗು ತೊಟ್ಟಿಲಲ್ಲಿರುವಾಗಲೇ ಮದುವೆ ಸಂಬಂಧವನ್ನು ಕುದುರಿಸುವ ಪದ್ಧತಿ ಪ್ರಾಚೀನ ಸಮಾಜದಲ್ಲಿತ್ತು. ಅದು ಅಮಾನುಷ ಪದ್ಧತಿ ಎಂಬ ಅರಿವು ಅವರಿಗಿರಲಿಲ್ಲ. ವಾವೆವರಸೆ ಅವರಿಗೆ ಮುಖ್ಯವಾಗಿತ್ತು. ತಮ್ಮ ಕಳ್ಳು ಬಳ್ಳಿಯಲ್ಲೇ ಹೆಣ್ಣುಕೊಟ್ಟು ತಂದರೆ ನಂಟಸ್ತನ ಸುಭದ್ರ ಎಂದು ನಂಬಿದ್ದರು. ಮಗು ಮಲಗಿರುವ ತೊಟ್ಟಿಲ ಕಾಲಿಗೇ ತಾಲಿ ಕಟ್ಟಿ ‘ನಿಶ್ಚಿತಾರ್ಥ’ ಮಾಡಿಕೊಳ್ಳುವ ಪ್ರವೃತ್ತಿ ನಮಗಿಂದು ಊಹಿಸಲು ಸಾಧ್ಯವಾಗುವುದಿಲ್ಲ. ಒಟ್ಟಿನಲ್ಲಿ ಬಾಲ್ಯವಿವಾಹ ಪದ್ಧತಿ ಸಮಾಜದಲ್ಲಿ ತನ್ನ ರೆಂಬೆಕೊಂಬೆಗಳನ್ನು ಚಾಚಿ ವಟವೃಕ್ಷವಾಗಿ ಬೆಳೆದಿತ್ತು ಎಂಬುದಕ್ಕೆ ಈ ನುಡಿಗಟ್ಟು ನಿದರ್ಶನ.
ಪ್ರ : ತೊಟ್ಟಿಲ ಕಾಲಿಗೇ ತಾಲಿ ಕಟ್ಟಿರುವಾಗ, ಈಗ ಅವರಿಗೆ ಹೆಣ್ಣು ಕೊಡೋಕಾಗಲ್ಲ ಅಂತ ಹೇಳೋದು ಹೇಗೆ?
೧೫೪೦. ತೊಟ್ಟು ಮಾಗು = ತೊಟ್ಟು ಕಳಿತು ಹೋಗು, ತೊಟ್ಟು ತುಂಡಾಗಿ ಹಣ್ಣು ಕೆಳಕ್ಕೆ ಬೀಳು.
(ಮಾಗು = ಬತ್ತು, ಕಳಿತು ಹೋಗು) ತೊಟ್ಟು ಮಾಗುವ ಹಂತಕ್ಕೆ ಬರುವ ಮುನ್ನವೇ ಹಣ್ಣನ್ನು ಕಿತ್ತು ಮನೆ ತುಂಬಿಕೊಳ್ಳಬೇಕು. ಇಲ್ಲದಿದ್ದರೆ ಗಾಳಿ ಬೀಸಿದಾಗ ದುರ್ಬಲ ತೊಟ್ಟು ಕಿತ್ತು ಹೋಗಿ, ಹಣ್ಣು ಕೆಳಗೆ ಕೊಚ್ಚೆ ಇರಲಿ, ತಿಪ್ಪೆ ಇರಲಿ ತೊಪ್ಪನೆ ಬಿದ್ದು ಹಾಳಾಗಿ ಹೋಗುತ್ತದೆ. ಆದ್ದರಿಂದ ಪ್ರಾಪ್ತ ವಯಸ್ಸಿಗೆ ಪ್ರಾಪ್ತ ಕರ್ತವ್ಯ ಅಗತ್ಯ.
ಪ್ರ : ಗಾದೆ – ತೊಟ್ಟು ಮಾಗಿದ ಹಣ್ಣೂ ಒಂದೆ ಕಟ್ಟರೆಯದ ಹೆಣ್ಣೂ ಒಂದೆ
೧೫೪೧. ತೊಟ್ಟು ಹಿಡಿದು ಮಾತಾಡು = ಸಮಸ್ಯೆಯ ಮೂಲ ತಿಳಿದು ಮಾತಾಡು
(ತೊಟ್ಟು = ಮೂಲ, ಬುಡ)
ಪ್ರ : ನ್ಯಾಯಸ್ಥರಲ್ಲಿ ಅವನೊಬ್ಬ ತೊಟ್ಟು ಹಿಡಿದು ಮಾತಾಡಿದ ಎಲ್ಲರೂ ತಲೆದೂಗುವಂತೆ.
೧೫೪೨. ತೊಡರಿಕೊಳ್ಳು = ಗಂಟು ಬೀಳು
(ತೊಡರು = ಅಂಟಿಕೊಳ್ಳು, ಕಚ್ಚಿಕೊಳ್ಳು)
ಪ್ರ : ಯಾವಾಗಲೂ ಪ್ರತಿಯೊಂದಕ್ಕೂ ಅಡರಿಕೊಂಡು ಬರೋ ಹೆಂಡ್ರಿರುವಾಗ ಇವನೊಬ್ಬ ನನಗೆ ತೊಡರಿಕೊಂಡ.
೧೫೪೩. ತೊಣಚಿ ಹೊಕ್ಕಂತಾಡು = ನೆಗೆದಾಡು, ಇದ್ದಕಡೆ ಇರದಿರು
(ತೊಣಚಿ = ಚಿಗಟ : ದನಕರುಗಳ ಕಿವಿಯೊಳಕ್ಕೆ ಚಿಗಟ ಹೊಕ್ಕರೆ, ಇದ್ದಕಡೆ ಇರದೆ ನೆಗೆದಾಡುತ್ತವೆ)
ಪ್ರ : ಇವನ್ಯಾಕೆ ಮದುವೆ ಮನೇಲಿ ಹಿಂಗೆ ತೊಣಚಿ ಹೊಕ್ಕಂತಾಡ್ತಾನೆ.
೧೫೪೪. ತೊತ್ತಾಗು = ಸೇವಕಿಯಾಗು, ಧನಿಕರಿಗೆ ಆಳಾಗು
ಪ್ರ : ಗಾದೆ – ತೊತ್ತಾಗೋದು ಅಂದ್ರೆ ಧನಿಕರ ಬಾಯಿಗೆ ತುತ್ತಾಗೋದು
೧೫೪೫. ತೊನ್ನು ಮುಚ್ಚಿಕೊಳ್ಳು = ಐಬು ಮರೆ ಮಾಡಿಕೊಳ್ಳು
(ತೊನ್ನು = ಒಂದು ಬಗೆಯ ಚರ್ಮರೋಗ. ಚರ್ಮ ಬೆಳ್ಳಗಾಗುವಂಥದು)
ಪ್ರ : ಗಾದೆ – ಚಿನ್ನಿದ್ದೋರ ತೊನ್ನು ಮುಚ್ಚೊಳ್ತದೆ
೧೫೪೬. ತೊಪ್ಪೆ ಹಾಕು = ಮಲವಿಸರ್ಜಿಸು
(ತೊಪ್ಪೆ = ಸಗಣಿ)
ಪ್ರ : ಮುದಿಯ ಹಾಕಿರೋ ತೊಪ್ಪೇನ ಬಳಿಯೋರ್ಯರು?
೧೫೪೭. ತೊಯ್ಯ ತೊಯ್ಯ ಅನ್ನು = ಕೆಮ್ಮು, ದಮ್ಮಿನಿಂದ ನರಳು
ಪ್ರ : ಗಾದೆ – ಮುದುಕ ತೊಯ್ಯ ತೊಯ್ಯ ಅಂತಾನೆ
ಮುದುಕಿ ಕಯ್ಯ ಕಯ್ಯ ಅಂತಾಳೆ
೧೫೪೮. ತೊಯ್ದು ತೊಪ್ಪೆಯಾಗು = ಮಳೆಯಲ್ಲಿ ನೆನೆದು ಮುದ್ದೆಯಾಗು
ಪ್ರ : ತೊಯ್ದು ತೊಪ್ಪೆಯಾದಾಗ ಬೆಂಕಿ ಕಾಯಿಸೋದು ತುಪ್ಪ ಅನ್ನ ಉಂಡಷ್ಟು ಹೆಚ್ಚಳ
೧೫೪೯. ತೊರ ಬಿಡು = ಸೊರ ಬಿಡು
(ತೊರ < ಸೊರ = ಕೆಚ್ಚಲಿಗೆ, ಮೊಲೆಗೆ ಹಾಲಿಳಿದುಕೊಳ್ಳುವುದು)
ಪ್ರ : ಕರು ಕೆಚ್ಚಲಿಗೆ ಗುದ್ದುತಾ ಇದ್ರೇನೇ ಹಸು ತೊರ ಬಿಡೋದು.
೧೫೫೦. ತೊರೆದು ಹೋಗು = ಮುಗಿದು ಹೋಗು
(ತೊರೆ = ಬಿಡು, ತ್ಯಜಿ-ಸು)
ಪ್ರ : ನಮ್ಮ ಅವರ ಸಂಬಂಧ ಎಂದೋ ತೊರೆದು ಹೋಯ್ತು
೧೫೫೧. ತೊಲಂಭಾರ ಬರು = ಧಿಮಾಕು ಬರು, ಠೇಂಕಾರ ಬರು
(ತೊಲಂಭಾರ < ತುಲಾಭಾರ = ತಕ್ಕಡಿಯಲ್ಲಿ ಕುಳಿತು ತನ್ನ ತೂಕದಷ್ಟೇ ಚಿನ್ನ ಬೆಳ್ಳಿಯನ್ನು ತೂಗಿಸಿ ಪಡೆದುಕೊಳ್ಳುವಂಥದು)
ಪ್ರ : ಅವಳಿಗೆ ಬಂದಿರೋ ತೊಲಂಭಾರ ಈ ಜಗತ್ತಿಗಾಗಿ ಮಿಗ್ತದೆ.
೧೫೫೨. ತೊವಲಿನ ತೆವಲು ಹತ್ತು = ಸಂಭೋಗದ ಚಟ ಹತ್ತು
(ತೊವಲು > ತೊಗಲು = ಚರ್ಮ ; ತೆವಲು = ಚಟ, ಗೀಳು)
ಪ್ರ : ಗಾದೆ – ತೊವಲಿನ ತೆವಲು ಹತ್ತೋದು, ಹೊಸ ನೀರಿಗೆ ಮೀನು ಹತ್ತೋದು – ಎರಡೂ ಒಂದು.
೧೫೫೩. ತೊಸಕ್ ಎನ್ನು = ಹೂಸು
ಪ್ರ : ಗಾದೆ – ಹಸೆಮಣೆ ಮೇಲೆ ಕೂತ್ಗೊಂಡು ತೊಸಕ್ ಅಂದ್ಲು
೧೫೫೪. ತೊಳೆದ ಕೆಂಡದಂತಿರು = ಕರ್ರಗಿರು, ಇಜ್ಜಲಿನಂತಿರು
ಪ್ರ : ಅವನು ಮದುವೆಯಾಗಿರೋಳು ಒಳ್ಳೆ ತೊಳೆದ ಕೆಂಡ ಇದ್ದಂಗವಳೆ
೧೫೫೫. ತೊಳೆದು ಬಿಡು = ಬರಿದು ಮಾಡು, ಹಾಳು ಮಾಡು
ಪ್ರ : ಅಂಥ ಬದುಕಿದ ಮನೇನ ಅಳಿಯ ಅಳುಚ್ಚಗೆ ತೊಳೆದುಬಿಟ್ಟ
೧೫೫೬. ತೊಳ್ಳೆ ಒಡೆ ಹಾಕು = ಹೆಚ್ಚು ಶ್ರಮ ಕೊಡು, ನಜ್ಜುಗುಜ್ಜು ಮಾಡು
(ತೊಳ್ಳೆ < ತೊರಳೆ = ಗುಲ್ಮ, ಪ್ಲೀಹ; ಒಡೆ = ಹೋಳು ಮಾಡು)
ಪ್ರ : ಬೆಳಗ್ಗೆಯಿಂದ ಸಂಜೆವರೆಗೆ ಆಳುಗಳ ತೊಳ್ಳೆ ಒಡೆದು ಹಾಕಿಬಿಟ್ಟಿದ್ದೇನೆ.
೧೫೫೭. ತೊಳ್ಳೆ ನಡುಗು = ಭಯವಾಗು
(ತೊಳ್ಳೆ < ತೊರಳೆ = ಪಿತ್ತಜನಕಾಂಗ)
ಪ್ರ : ತೊಳ್ಳೆ ನಡುಗದ ಮಾಸಾಳಿನ ಮುಂದೆ ತೊಳ್ಳೆ ನಡುಗುವ ಏಸಾಳು ಯಾವ ಲೆಕ್ಕ?
೧೫೫೮. ತೋಕೆ ಮುರಿ = ಜೋರು ಇಳಿಸು, ಬಾಲ ಕತ್ತರಿಸು
(ತೋಕೆ = ಬಾಲ)
ಪ್ರ : ಈಗಲೇ ಅವನ ತೋಕೆ ಮುರೀದಿದ್ರೆ ಮುಂದೆ ಬಹಳ ಕಷ್ಟವಾಗ್ತದೆ.
೧೫೫೯. ತೋಟಕ್ಕೂ ಮನೆಗೂ ದೂರವಿರು = ಕಿವುಡಾಗಿರು
ಪ್ರ : ಅವನ ತೋಟಕ್ಕೂ ಮನೆಗೂ ದೂರ, ಹತ್ತಿರಕ್ಕೆ ಹೋಗಿ ಗಟ್ಟಿಯಾಗಿ ಹೇಳು
೧೫೬೦. ತೋಡನ ಕೆಲಸ ಮಾಡು = ಕತ್ತರಿಸು, ಕದ್ದು ಬಿಲದಲ್ಲಿ ಬಚ್ಚಿಡು
(ತೋಡ = ಹೊಲ ಗದ್ದೆಗಳಲ್ಲಿ ಇರುವ ಇಲಿ, ಬೆಳ್ಳಿಲಿ) ರಾಗಿ ತೆನೆ ಒಣಗಿದಾಗ, ಭತ್ತದ ತೆನೆ ಹಣ್ಣಾದಾಗ ಈ ತೋಡಗಳು ರಾಗಿ ಭತ್ತಗಳ ತೆನೆಗಳನ್ನು ಕತ್ತರಿಸಿ ಬದುಗಳಲ್ಲಿ ಮಾಡಿಕೊಂಡಿರುವ ಬಿಲಗಳಲ್ಲಿ ಶೇಖರಿಸಿಕೊಳ್ಳುತ್ತವೆ. ರೈತರು ಬಿಲಗಳನ್ನು ಅಗೆದು, ಅದರಲ್ಲಿ ದಾಸ್ತಾನಾಗಿರುವ ತೆನೆಗಳನ್ನೆಲ್ಲ ತಂದು, ಒಕ್ಕಿ, ರಾಶಿಗೆ ಸೇರಿಸುವುದುಂಟು.
ಪ್ರ : ತೋಡನ ಕೆಲಸ ಮಾಡೋದ್ರಲ್ಲಿ ಅವನು ಎತ್ತಿದ ಕೈ
೧೫೬೧. ತೋಡಿಕೊಳ್ಳು = ಕಷ್ಟವನ್ನು ಹೇಳಿಕೊಳ್ಳು, ಅನುಭವಿಸಿದ ವ್ಯಥೆಯನ್ನು ಹೊರ ಹಾಕು
(ತೋಡು = ಅಗೆ, ಅಗೆದು ಹೊರ ಹಾಕು)
ಪ್ರ : ಆಯಮ್ಮ ತಾನು ಅನುಭವಿಸಿದ್ದನ್ನೆಲ್ಲ ತೋಡಿಕೊಂಡು ಕಣ್ಣೀರು ಸುರಿಸಿದಳು.
೧೫೬೨. ತೋಪು ಹಾರಿಸು = ಗುಂಡು ಹೊಡೆ
(ತೋಪು = ತುಪಾಕಿ, ಬಂದೂಕು)
ಪ್ರ : ಜನರು ದಾಂಧಲೆಗಿಳಿದಾಗ ಪೋಲಿಸರು ತೋಪು ಹಾರಿಸಿದರು
೧೫೬೩. ತೋಬಡ ಹೊಡಿ = ನುಣ್ಣಗೆ ಮಾಡು, ತೆಳ್ಳಗೆ ಮಾಡು
(ತೋಬಡ < ತೋಪಡು(ತೆ) = ಹತ್ತರಿ, ಕೀಸುಳಿ, ಉಜ್ಜುಗೊರಡು)
ಪ್ರ : ಆ ತಲೆತಾಟಕ, ಏನೂ ತಿಳಿಯದ ಮೊದ್ದನಿಗೆ ಚೆನ್ನಾಗಿ ತೋಬಡ ಹೊಡೆದುಬಿಟ್ಟ.
೧೫೬೪. ತೋರ ಬಾರಾಗಿರು = ಸೂಕ್ಷ್ಮತೆಯಿಲ್ಲದಿರು, ದಪ್ಪಚರ್ಮವಾಗಿರು
(ತೋರ = ದಪ್ಪ, ಬಾರು = ಚರ್ಮ)
ಪ್ರ : ತೋರ ಬಾರಾಗಿರೋದ್ರಿಂದ ಜೋರಾ-ಗಿ ಬಾರಿ-ಸದಿದ್ರೆ ಚುರುಕು ಮುಟ್ಟಲ್ಲ.
೧೫೬೫. ತೌಡು ಕುಟ್ಟು = ವ್ಯರ್ಥ ಕಾರ್ಯದಲ್ಲಿ ತೊಡಗು, ವ್ಯರ್ಥ ಪ್ರಯತ್ನ ಮಾಡು
ಪ್ರ : ಭತ್ತ ಕುಟ್ಟಿದರೆ ಅಕ್ಕಿ ಸಿಗ್ತದೆ, ತೌಡು ಕುಟ್ಟಿದರೆ ಏನು ಸಿಗ್ತದೆ?
೧೫೬೬. ತಂಟೆ ಮಾಡು = ಚೇಷ್ಟೆ ಮಾಡು, ತಕರಾರು ಮಾಡು
ಪ್ರ : ಗಾದೆ – ತಂಟೆ ಮಾಡಿದರೆ ಗಂಟೆ ಕಿತ್ತು ಕೈಗೆ ಕೊಡು
೧೫೬೭. ತಂಟೆ ಪೈಸಲ್ಲಾಗು = ಸಮಸ್ಯೆ ಬಗೆಹರಿ, ತೊಂದರೆ ಕೊನೆಗಾಣು
(ತಂಟೆ = ತಕರಾರು, ಸಮಸ್ಯೆ; ಪೈಸಲ್ = ಮುಕ್ತಾಯ, ತೀರ್ಮಾನ)
ಪ್ರ : ಅವನು ಸತ್ತ ಅಂದ್ರೆ, ತಂಟೇನೇ ಪೈಸಲ್ಲಾಯ್ತು ಬಿಡು.
೧೫೬೮. ತಂಡಿಯಾಗು = ಶೀತವಾಗು, ಚಳಿಯಾಗು
(ತಂಡಿ < ಥಂಡಿ = ಶೀತ, ಚಳಿ)
ಪ್ರ : ಮಗೀಗೆ ತಂಡಿಯಾಗ್ತದೆ, ಕಿವಿ ಮುಚ್ಚೋಂಗೆ ಕುಲಾವಿ ಹಾಕು.
೧೫೬೯. ತಂತಿ ಮೇಲಿನ ನಡಗೆಯಾಗು = ಕಷ್ಟದ ಬಾಳುವೆಯಾಗು
ಪ್ರ : ಅತ್ತೆ ಮನೇಲಿ ಸೊಸೇದು ತಂತಿ ಮೇಲಿನ ನಡಿಗೆಯಾಗಿದೆ.
೧೫೭೦. ತಂತು ಮಾಡು = ಯುಕ್ತಿ ಮಾಡು, ಉಪಾಯ ಮಾಡು
(ತಂತು < ತಂತ್ರ = ಉಪಾಯ)
ಪ್ರ : ಅಂತೂ ಏನೇನೋ ತಂತು ಮಾಡಿ, ತಹಬಂದಿಗೆ ತಂದದ್ದಾಯಿತು.
೧೫೭೧. ತಂದಿಕ್ಕಿ ತಮಾಷೆ ನೋಡು = ಒಡಕು ಮೂಡಿಸಿ ಸಂತೋಷಪಡು
ಪ್ರ : ತಂದಿಕ್ಕಿ ತಮಾಷೆ ನೋಡೋ ಜನ ಇರುವಾಗ, ನಾವು ಒಗ್ಗಟ್ಟಾಗಿರಬೇಕು. ಚಾಡಿ ಮಾತು ಕೇಳಬಾರ್ದು
೧೫೭೨. ತಂಪು ಹೊತ್ತಿನಲ್ಲಿ ನೆನಸಿಕೊಳ್ಳು = ಕೃತಜ್ಞತೆಯಿಂದ ಸ್ಮರಿಸಿಕೊಳ್ಳು
(ತಂಪು ಹೊತ್ತು = ತಣ್ಣನೆಯ ಹೊತ್ತು, ಬಿಸಿಲ ಹೊತ್ತಿನಲ್ಲಿ ಸಹಾಯ ಮಾಡಿದವರನ್ನು ಸ್ಮರಿಸುವುದು, ಉಚಿತವಲ್ಲ ಎಂಬ ಭಾವ)
ಪ್ರ : ಸಹಾಯ ಮಾಡಿದೋರ್ನ ಸುಡುಬಿಸಿಲಲ್ಲಲ್ಲ ನೆನೆಯೋದು, ಸಂಜೆಮುಂಜಾನೆಯ ತಂಪು ಹೊತ್ತಿನಲ್ಲಿ ನೆನಸಿಕೊಳ್ಳಬೇಕು.
೧೫೭೩. ತಿಂಗಳು ದಾಟು = ತಿಂಗಳು ಕಳೆದು ಹೋಗು
ಪ್ರ : ಗಾದೆ – ತಿಂಗಳು ದಾಟಿದರೂ ಸಂಬಳ ಇಲ್ಲ
ಇಂಬಳ ಸೀಟಿದರೂ ನಿಂಬಳ ಇಲ್ಲ
೧೫೭೪. ತಿಂಗಳು ಮೂಡು = ಚಂದ್ರ ಹುಟ್ಟು
(ತಿಂಗಳು = ಚಂದ್ರ, ತಿಂಗಳಬೆಳಕು = ಬೆಳದಿಂಗಳು, ಜೋತ್ಸ್ನಾ)
ಪ್ರ : ತಿಂಗಳು ಮೂಡಿದಾಗ ನಾವು ಆ ಊರು ಬಿಟ್ಟು ಹೊರಟದ್ದು.
೧೫೭೫. ತಿಂದನ್ನ ಮೈಗೆ ಹತ್ತದಿರು = ರಕ್ತಗತವಾಗದಿರು
ಪ್ರ : ನಿತ್ಯದ ಈ ಕಿರಿಕಿರಿಯಲ್ಲಿ ತಿಂದನ್ನ ಮೈಗೆ ಹತ್ತಲ್ಲ
೧೫೭೬. ತಿಂದದ್ನೆಲ್ಲ ಕಕ್ಕಿಸು = ಅನ್ಯಾಯವಾಗು ದಕ್ಕಿಸಿಕೊಂಡಿದ್ದನ್ನು ವಸೂಲು ಮಾಡು.
(ಕಕ್ಕಿ-ಸು = ವಾಂ-ತಿ ಮಾಡಿ-ಸು)
ಪ್ರ : ನಾನು ಅವನ್ನ ಸುಮ್ನೆ ಬಿಟ್ನೇನು, ತಿಂದದ್ನೆಲ್ಲ ಕಕ್ಕಿಸಿದೆ.
೧೫೭೭. ತಿಂದು ಕುಕ್ಕು = ಅನ್ನ ಮದದಿಂದ ನೆಗೆದಾಡು, ಪುಟ ಹಾರು
(ಕುಕ್ಕು = ಎತ್ತಿ ಹಾಕು, ನೆಗೆದಾಡಿಸು)
ಪ್ರ : ನಿಮಗೆ ತಿಂದು ಕುಕ್ತದೆ, ಹಾರಾಡದೆ ಏನ್ಮಾಡ್ತೀರಿ?
೧೫೭೮. ತಿಂದು ತೇಗು = ಬರಿದು ಮಾಡು, ನುಂಗಿ ನೀರು ಕುಡಿ
ಪ್ರ : ತಿಂದು ತೇಗಿರೋದು ಆರಾಮವಾಗಿ ಇದ್ದಾರೆ, ಏನೂ ಇಲ್ಲದೋರ ಮೇಲೆ ಆಪಾದನೆ.
೧೯೭೯. ತುಂಡವಾಗು = ಚಿಕ್ಕದಾಗು, ಉದ್ದ ಕಡಮೆಯಾಗು
(ತುಂಡ = ಚಿಕ್ಕದು, ಮೋಟು)
ಪ್ರ : ಅಂಗಿ ತುಂಡ ಆಯ್ತು, ಇನ್ನು ಸ್ವಲ್ಪ ಉದ್ದಕ್ಕೆ ಇರಬೇಕಾಗಿತ್ತು
೧೫೮೦. ತುಂಡು ತೊಲೆಯಂತಿರು = ಗಟ್ಟಿಮುಟ್ಟಾಗಿರು
(ತುಂಡು ತೊಲೆ = ದಪ್ಪ ಮರದ ದಿಮ್ಮಿ)
ಪ್ರ : ಗಂಡ ತುಂಡು ತೊಲೆಯಂಗವನೆ, ಹೆಂಡ್ರು ಹಳ್ಳು ಕಡ್ಡಿ-ಯಂ-ಗ-ವ-ಳೆ
೧೫೮೧. ತುಂಬ ಬೆಂಡಾಗು = ಹೆಚ್ಚು ಒಣಗಿ ಹೋಗು, ಕೃಶವಾಗು
(ಬೆಂಡು = ಒಣಗಿದ್ದು, ರಸ ಬತ್ತಿದ್ದು)
ಪ್ರ : ಮೊದಲಿಗೂ ಈಗಿಗೂ ತುಂಬಾ ಬೆಂಡಾಗಿದ್ದಾನೆ.
೧೫೮೨. ತುಂಬ ಹಣ್ಣಾಗು = ಹೆಚ್ಚು ವಯಸ್ಸಾಗು,
ಪ್ರ : ತುಂಬಾ ಹಣ್ಣಾದ ಜೀವಕ್ಕೆ ಮಕ್ಕಳಿಂದ ನೆಮ್ಮದಿ ಸಿಗ್ತಾ ಇಲ್ಲ
೧೫೮೩. ತುಂಬಾಗು = ಈಲಾಗು, ಗಬ್ಬವಾಗು
(ತುಂಬಾಗು < ತುಂಬು + ಆಗು = ಗರ್ಭತಾಳು)
ಪ್ರ : ಹಸು ತುಂಬಾಗಿದೆ, ನೇಗಿಲಿಗೆ ಕಟ್ಟ ಬೇಡ
೧೫೮೪. ತುಂಬಿದ ತೊರೆಯಂತಿರು = ಗಂಭೀರವಾಗಿರು, ಸದ್ದುಗದ್ದಲ ಮಾಡದೆ ಘನತೆಯಿಂದಿರು
ತುಂಬಿದ ತೊರೆ (ನದಿ) ದಡದ ಎರಡು ಏಣು (ಅಂಚು) ಗಳಿಗೂ ಚಾಚಿಕೊಂಡು ಪಾಚಿ-ಕೊಂ-ಡಂತೆ (ಮಲ-ಗಿ-ದಂ-ತೆ) ಇರುವುದರಿಂದ, ನೀರು ಮೊರೆ-ಯು-ತ್ತಾ ಹರಿಯುತ್ತಿದೆ ಎಂಬ ಭಾವನೆಯೇ ಬರದಂತೆ, ಘನತೆ ಗಾಂಭೀರ್ಯವನ್ನು ಎತ್ತಿ ಹಿಡಿಯುತ್ತದೆ.
ಪ್ರ : ಶ್ಯಾನುಭೋಗ ಆವುಟದ ಮನುಷ್ಯ, ಪಟೇಲ ತುಂಬಿದ ತೊರೆಯಂಥ ಮನುಷ್ಯ
೧೫೮೫. ತುಂಬಿ ತೇಕಾಡು = ಸಮೃದ್ಧವಾಗಿರು, ಕೋಡಿ ಬೀಳುವ ಹಂತದಲ್ಲಿರು
(ತೇಕಾಡು < ತೇಂಕಾಡು = ತುಳುಕುತ್ತಿರು, ಕೋಡಿಬೀಳಲು ತವಕಿಸುತ್ತಿರು)
ಪ್ರ : ಕೆರೆ ತುಂಬಿ ತೇಕಾಡ್ತಾ ಅದೆ, ಯಾವ ಗಳಿಗೆಯಲ್ಲಾದರೂ ಕೋಡಿ ಬೀಳಬಹುದು.
೧೫೮೬. ತೆಂಡೆ ತೇಲಿ ಹೋಗು = ವಂಶ ಹಾಳಾಗು, ಬುಡ ನಾಶವಾಗು
(ತೆಂಡೆ = ಬುಡ, ವಂಶ)
ಪ್ರ : ಇವನ ತೆಂಡೆ ತೇಲಿ ಹೋದಾಗಲೇ, ಊರಿಗೆ ನೆಮ್ಮದಿ.
೧೫೮೭. ಕೊಂಡೆಯಿಂದ ತೆಂಡೆಯಾಗು = ಒಂಟಿ ಪೈರಿನಿಂದ ಮೊಂಟೆ ಪೈರಾಗು, ಒಂಟಿ
ಮೊಳಕೆ ಕವಲು ಹೊಡೆದು ವೃದ್ಧಿಯಾಗು
(ತೊಂಡೆ = ಬಿತ್ತನೆ ಮಾಡುವ ಕಬ್ಬಿನ ಸುಳಿಯ ಭಾಗ; ತೆಂಡೆ = ಮೊಂಟೆ, ಕವಲುಗಳ ಕುಟುಂಬ)
ಪ್ರ : ಗಾದೆ – ತೊಂಡೆಯಿಂದ ತೆಂಡೆಯಾಗ್ತದೆ
ಒಂದಡಕೆಯಿಂದ ಹಿಂಡಡಕೆಯಾಗ್ತವೆ
Leave A Comment