೧೬೬೦. ದೀಪ ತುಂಬು = ದೀಪವನ್ನು ಆರಿಸು

ಜನಪದರು ದೀಪವನ್ನು ಆರಿಸು ಎಂದು ಹೇಳುವುದಿಲ್ಲ. ಆರಿಸು ಅಂದವರನ್ನು ಬೈಯುತ್ತಾರೆ. ಅವರ ದೃಷ್ಟಿಯಲ್ಲಿ ಈ ಖಂಡ ಜ್ಯೋತಿ ಆ ಅಖಂಡಜ್ಯೋತಿಯ ಅಂಶ. ಆದ್ದರಿಂದ ಈ ಖಂಡ ಜ್ಯೋತಿಯನ್ನು ಆ ಅಖಂಡ ಜ್ಯೋತಿಯೊಡನೆ ಸೇರಿಸು ಎಂಬ ಅರ್ಥದಲ್ಲಿ ‘ತುಂಬು’ ಶಬ್ದವನ್ನು ಬಳಸುತ್ತಾರೆ. ಅರ್ಥಾತ್ ಮನುಷ್ಯನ ಆತ್ಮ ಅಥವಾ ಚೈತನ್ಯ ನಾಶವಾಗುವುದಿಲ್ಲ, ಅಖಂಡ ಚೈತನ್ಯದೊಡನೆ ಒಂದಾಗುತ್ತದೆ ಎಂಬ ಅನುಭಾವ ದೃಷ್ಟಿಯೂ ಕಲ್ಯಾಣ ದೃಷ್ಟಿಯೂ ಈ ನುಡಿಗಟ್ಟಿನಲ್ಲಿ ಮಡುಗಟ್ಟಿದೆ.

ಪ್ರ : ಬೆಳಕಿದ್ರೆ ನಿದ್ರೆ ಬರಲ್ಲ, ದೀಪ ತುಂಬು.

೧೬೬೧. ದೀಪ ದೊಡ್ಡದು ಮಾಡು = ದೀಪವನ್ನು ನಂದಿಸು

ಈ ಮನೆಯ ಸಣ್ಣ ಜ್ಯೋತಿಯನ್ನು ಸೃಷ್ಟಿಮೂಲವಾದ ದೊಡ್ಡ ಜ್ಯೋತಿಯೊಡನೆ ಒಂದು ಮಾಡು ಎಂಬ ಆಶಯದ ಈ ನುಡಿಗಟ್ಟೂ ಸಹ ಮೇಲಿನ ನುಡಿಗಟ್ಟಿನ ಅನುಭಾವ ದೃಷ್ಟಿ ಹಾಗೂ ಕಲ್ಯಾಣ ದೃಷ್ಟಿಗಳನ್ನೇ ಒಳಗೊಂಡಿದೆ. ಇದು ಗ್ರಾಮೀಣ ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುತ್ತದೆ.

ಪ್ರ : ಮಲಗೋಕೆ ಮುಂಚೆ ದೀಪ ದೊಡ್ಡದು ಮಾಡೋದನ್ನು ಮರೆತು ಬಿಟ್ಟೀಯ?

೧೬೬೨. ದೀಪ ಪುಕಪುಕ ಎನ್ನು = ಎಣ್ಣೆ ಮುಗಿದು ದೀಪ ನಂದುವ ಸ್ಥಿತಿಯಲ್ಲಿರು

ಪ್ರ : ದೀಪ ಪುಕಪುಕ ಅಂತಾ ಇದೆ, ಬೇಗ ಎಣ್ಣೆ ತಂದು ಬಿಡು

೧೬೬೩. ದುಕ್ಕ ಉಕ್ಕಳಿಸು = ಅಳು ಕೋಡಿ ಬೀಳು

(ದುಕ್ಕ < ದುಃಖ = ಅಳು ; ಉಕ್ಕಳಿಸು = ಹೊರಚೆಲ್ಲು)

ಪ್ರ : ದುಕ್ಕ ಉಕ್ಕಳಿಸಿಕೊಂಡು ಬಂದ್ರೂ ತಡಕೊಂಡು ಸಹಕರಿಸಿದೆ

೧೬೬೪. ದುಗ್ಗಾಣಿ ಇಲ್ಲದಿರು = ಎರಡು ಬಿಡಿಗಾಸಿಲ್ಲದಿರು

(ದುಗ್ಗಾಣಿ < ದುಗ + ಕಾಣಿ ; ದುಗ = ಎರಡು, ಕಾಣಿ = ಕಾಸು)

ಪ್ರ : ದುಗ್ಗಾಣಿಗೆ ಗತಿಯಿಲ್ಲದೋಳ ಹತ್ರ ದುಡ್ಡು ಕೇಳ್ತೀಯಲ್ಲ?

೧೬೬೫. ದುಡ್ಡಿಗೆ ಪಂಚೇರಾಗು = ಅಗ್ಗವಾಗು, ಮಾನ ಹರಾಜಾಗು

(ದುಡ್ಡು = ನಾಲ್ಕು ಕಾಸು ; ಪಂಚೇರು < ಪಂಚ + ಸೇರು = ಐದು ಸೇರು)

ಪ್ರ: ಮಗ ಹುಟ್ಟಿ ಮನೆತನದ ಮಾನಾನ ದುಡ್ಡಿಗೆ ಪಂಚೇರು ಮಾಡಿಬಿಟ್ಟ.

೧೬೬೬. ದುಪ್ತಿಯಾಗು = ಮುನಿಸುಂಟಾಗು, ಎರಡುಪಟ್ಟು ಊದಿಕೊಂಡು ಕುಂತಿರು.

(ದುಪ್ತಿ < ದುಪ್ಪಟಿ < ದ್ವಿಪಟ < ದ್ವಿಪಟೀ = ಎರಡು ಪದದ ದಪ್ಪ ಹೊದಿಕೆ, ಹಚ್ಚಡ)

ಪ್ರ : ತೃಪ್ತಿ ಇರದ ಸಣ್ಣ ಸ್ವಭಾವದೋಳು ದುಪ್ತಿ ಬಂದು ದೆವ್ವದಂಗೆ ಕುಂತವಳೆ.

೧೬೬೭. ದುಬಾರಿಯಾಗು = ಬೆಲೆ ಜಾಸ್ತಿಯಾಗು

(ದುಬಾರಿ < ದುಬಾರ < ದೋ + ಬಾರ್ = ಎರಡು ಪಟ್ಟು)

ಪ್ರ : ನೀನು ಹೇಳೋ ಬೆಲೆ ತುಂಬ ದುಬಾರಿ, ಯಾರು ಕೊಡೋಕೆ ತಯಾರಿಲ್ಲ.

೧೬೬೮. ದುಮುದುಮುಗುಟ್ಟು =ಮುನಿಸಿನಿಂದ ಸಿಡಿಮಿಡಿಗೊಳ್ಳು, ಕೊತಕೊತನೆ ಕುದಿ

ಪ್ರ : ತನ್ನನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ ಅಂತ ದುಮುದುಮುಗುಟ್ತಾ ಅವನೆ.

೧೬೬೯. ದುಮ್ಮ ಸಾಲಿಕ್ಕು = ಮೆರೆ, ಇತ್ತಲಿಂದ ಅತ್ತ, ಅತ್ತಲಿಂದ ಇತ್ತ ಗಸ್ತು ತಿರುಗು.

ದುಮ್ಮಸಾಲಿಕ್ಕುವುದು ಒಂದು ಜನಪದ ಆಟ. ಮುಸ್ಲಿಮರ ಮೊಹರಂ ಹಬ್ಬದ ಆಚರಣೆ ಎಂದೂ ಪ್ರತೀತಿ

ಪ್ರ : ವಯಸ್ಸಿಗೆ ಬಂದ ಹೆಣ್ಮಕ್ಕಳು ಹಿಂಗೆ ದುಮ್ಮಸಾಲಿಕ್ಕಿದರೆ ಯಾರು ಏನು ಅನ್ನಲ್ಲ?

೧೬೭೦. ದುರುಗುಟ್ಟಿಕೊಂಡು ನೋಡು = ಬಿರುಗಣ್ಣಲ್ಲಿ ನೋಡು, ಕೋಪದಿಂದ ಕೆಕ್ಕರಿಸು

ಪ್ರ : ಏನು ನನ್ನ ತಿನ್ನೋನಂಗೆ ದುರುಗುಟ್ಟಿಸಿಕೊಂಡು ನೋಡಿದ್ದೂ ನೋಡಿದ್ದೆ.

೧೬೭೧. ದೂರಿ ಹಾಡು = ಜೋಗುಳ ಹಾಡು, ಲಾಲಿ ಪದ ಹೇಳು.

ಪ್ರ : ‘ದೂರಿ ದೂರಿ, ದುಮ್ಮಣ್ಣದುರುಗ, ನಿಮ್ಮಣ್ಣ ಹೊಲೆಯ’ ಅಂತ ದೂರಿ ಹಾಡು ಹೇಳ್ತಾ ತೊಟ್ಲು ತೂಗೋದನ್ನು ನಗರದೋರು ಎಲ್ಲಿ ನೋಡಿರ್ತಾರೆ, ಕೇಳಿರ್ತಾರೆ?

೧೬೭೨. ದೂರಿ ದೂರಿ ಉಡುಗೂರಿ ಹೋಗು = ಎದೆಗುದಿಯಿಂದ ಅನ್ಯರ ಮೇಲೆ ಗೊಂಬೆ ಕೂರಿಸಿ ಕೂರಿಸಿ ಒಣಗಿ ಕಗ್ಗಾಗು.

(ದೂರು = ದೂರನ್ನು ಹೊರಿಸು ಉಡುಗೂರು = ಒಣಗು)

ಪ್ರ : ಬೇರೆಯವರನ್ನು ದೂರಿ ದೂರಿ, ಆ ಹೊಟ್ಟೆ ಉರಿಯಲ್ಲೇ ಉಡುಗೂರಿ ಹೋದ.

೧೬೭೩. ದೆವ್ವ ಹಿಡಿ = ಮೈಮರೆತು ಕೂಡು, ಸೆಟೆದುಕೊಂಡು ಕೂತುಕೊಳ್ಳು

ಪ್ರ : ನನಗೇನು ದೆವ್ವ ಹಿಡೀತೋ, ಅಲ್ಲಿಗೆ ಹೋಗೋದನ್ನೆ ಮರೆತುಬಿಟ್ಟೆ

೧೬೭೪. ದೆವಿಗೆ ಹಾಕಿ ಹೊರು = ತೂಕವಾಗಿರು, ಮಜಭೂತಾಗಿರು

(ದೆವಿಗೆ < ಡವಿಗೆ < ಡವುಗೆ = ಬಿದಿರ ಬೊಂಬು ; ದೆವಿಗೆ ಹಾಕು = ಅಡ್ಡ ಹಾಕು)

ಪ್ರ : ದೆವ್ವದಂಥ ಹಂದೀನ ದೆವಿಗೆ ಹಾಕಿ ಹೊರಬೇಕಾಯ್ತು

೧೬೭೫. ದೆಸೆ ಕುಲಾಯಿಸು = ಅದೃಷ್ಟ ಒದಗು, ಶುಕ್ರದೆಶೆ ಮೂಡು.

ಪ್ರ : ಅವನಿಗೇನು ದೆಸೆ ಕುಲಾಯಿಸಿತೋ, ಎಲ್ಲ ಕಡೆಯಿಂದಲೂ ಲಾಭ

೧೬೭೬. ದೇಕಿಬಿಡು = ಗುರಿಮುಟ್ಟು, ಸಾಗಿ ಬರು

(ದೇಕು = ಹೊಟ್ಟೆ ಮಕಾಡೆ ಮಲಗಿ ಕೈಯೂರಿ ತೆವಳು)

ಪ್ರ : ಹಂಗೂ ಹಿಂಗೂ ಮಾಡಿ ಇಲ್ಲೀವರೆಗೆ ದೇಕಿಬಿಟ್ಟೆ, ಇನ್ನು ಅವರಪ್ಪರಾಣೆ,

ಏನ್ನ ಮಾಡಿಕೊಳ್ಳಲಿ.

೧೬೭೭. ದೇಕಿ ದೇಕಿ ಸಾಕಾಗು = ತೆವಳಿ ತೆವಳಿ ಸುಸ್ತಾಗು.

ಪ್ರ : ತಗ್ಗಿದ್ದ ಕಡೆ ಕೋಲೂರಿಕೊಂಡು, ದಿಣ್ಣೆ ಇದ್ದ ಕಡೆ ಕೈಯೂರಿಕೊಂಡು ದೇಕಿ ದೇಕಿ ಸಾಕಾಯ್ತು ಅಂದ ರಸಿಕ ಮುದಿಗಂಡ.

೧೬೭೮. ದೇಗುಲದಿಂದ ಬರು = ದೂರದಿಂದ ಬರು

(ದೇಗುಲ < ದೇವಕುಲ = ದೇವಸ್ಥಾನ, ಸ್ವರ್ಗ?)

ಪ್ರ : ಅವನು ಆ ದೇಗುಲದಿಂದ ಬರಬೇಕಾದರೆ ಸಾಕಷ್ಟು ಸಮಯವಾಗ್ತದೆ.

೧೬೭೯. ದೇಟಿಗೆ ಸರಿಯಾಗಿ ಮುಟ್ಟಿಸು = ಸಮಯಕ್ಕೆ ಸರಿಯಾಗಿ ಪಾವತಿಸು

(ದೇಟು < Date = ತಾರೀಖು; ಮುಟ್ಟಿಸು = ತಲುಪಿಸು)

ಪ್ರ : ಅವನು ತಗೊಂಡ ಸಾಲವನ್ನು ದೇಟಿಗೆ ಸರಿಯಾಗಿ ಮುಟ್ಟಿಸಿಬಿಡ್ತಾನೆ.

೧೬೮೦. ದೇವದಾಸಿ ಬಿಡು = ಸೂಳೆ ಬಿಡು

ದೇವದಾಸಿ ಪದ್ಧತಿ ಚಾಲ್ತಿಗೆ ಬಂದದ್ದು ಶ್ರೀಮಂತರ, ಹೊಟ್ಟೆ ತುಂಬಿದವರ ಭೋಗಕ್ಕೆ ಮಾಡಿಕೊಂಡ ತಂತ್ರ. ದೇವರ ಹೆಸರಿನಲ್ಲಿ ದಾಸಿಯಾಗಿಸಿ, ಭೋಗಿಸುವ ದೇವರುಗಳು ಭೂದೇವರುಗಳೇ, ಪಟ್ಟಭದ್ರ ಹಿತಾಸಕ್ತಿಗಳೇ ಎಂಬುದು ಸತ್ಯಕ್ಕೆ ದೂರವಾದುದಲ್ಲ.

ಪ್ರ : ವಯಸ್ಸಿಗೆ ಬಂದ ಹೆಣ್ಣನ್ನು ದೇವದಾಸಿ ಬಿಟ್ಟು, ಉಳ್ಳವರ ದೇಹದ ದಾಹಕ್ಕೆ ಅನುವು ಮಾಡಿಕೊಡುವುದು ಮೌಢ್ಯತೆಯ ಪರಮಾವಧಿ.

೧೬೮೧. ದೇವರಾಗು = ಮಾತಾಡದಿರು, ಮೌನದಿಂದ ಕುಳಿತಿರು

ಪ್ರ : ಎಲ್ಲರೂ ಕೊಂಚ ದೇವರಾಗಿ, ಗೌಡರೊಬ್ಬರು ಮಾತಾಡಲಿ

೧೬೮೨. ದೇವರು ಕಣ್ಣು ಬಿಡು = ಅನುಗ್ರಹಿಸು, ಕೃಪೆ ತೋರು.

ಪ್ರ : ದೇವರು ಕಣ್ಣು ಬಿಟ್ಟ, ಎಲ್ಲ ಸರಿ ಹೋಯ್ತು.

೧೬೮೩. ದೇವರು ಕೊಟ್ಟದ್ದನ್ನು ತಿನ್ನು = ಏನಿದೆಯೋ ಅದನ್ನು ತಿನ್ನು, ಎಟುಕದ್ದನ್ನು ಬಯಸದಿರು

ಪ್ರ : ದೇವರು ಕೊಟ್ಟದ್ದನ್ನು ತಿಂದು, ನೆಮ್ಮದಿಯಿಂದ ಇರೋದನ್ನ ಕಲಿ

೧೬೮೪. ದೇವರು ಬಂದಂತಾಗು = ಅನುಗ್ರಹವಾಗು, ಕಷ್ಟಪರಿಹಾರವಾಗು

ಪ್ರ : ನೀವು ಬಂದದ್ದು ದೇವರು ಬಂದಂತಾಯ್ತು, ಬದುಕಿಕೊಂಡೆ

೧೬೮೫. ದೇವರೇ ಶಿವನೇ ಎನ್ನು = ಸಂಕಟದಿಂದ ನರಳು.

ಪ್ರ : ನಾನೇ ದೇವರೇ ಶಿವನೇ ಅನ್ನುವಾಗ, ಇನ್ನೊಬ್ಬರ್ನ ಸಾಕೋ ಹಂಗಿದ್ದೀನಾ?

೧೬೮೬. ದೇವಿ ಹಾಕು = ತೋಡಿ ಹಾಕು, ಬಾಚಿ ಹಾಕು

(ದೇವು = ತೋಡು, ಬಾಚು) ಎತ್ತುಡಿ ( ಎತ್ತುವ ಬಲೆ) ಯಲ್ಲಿ ನೀರಿನಲ್ಲಿರುವ ಮೀನನ್ನು ಬಾಚಿಕೊಳ್ಳುವುದಕ್ಕೆ ದೇವು ಎನ್ನುತ್ತಾರೆ. ಹಾಗೆಯೇ ಎಸರಿನಲ್ಲಿರುವ ಕಾಯಿಪಲ್ಲೆ, ಕಾಳು ಅಥವಾ ಮಾಂಸದ ತುಂಡುಗಳನ್ನು ಸೌಟಿನಲ್ಲಿ ದೋಚಿಕೊಳ್ಳುವುದಕ್ಕೆ ದೇವು ಎನ್ನುತ್ತಾರೆ. ಈ ನುಡಿಗಟ್ಟಿಗೆ ಅದು ಮೂಲ.

ಪ್ರ : ಮುಂದುಣ್ಣೋರ್ಗೆಲ್ಲ ಹಿಂಗೆ ದೇವಿ ದೇವಿ ಹಾಕಿಬಿಟ್ರೆ, ಹಿಂದುಣ್ಣೋರ ಗತಿ ಏನು?

೧೬೮೭. ದೊಗರು ತೋರಿಸಿ ಎಗರು = ಕೈಕೊಡು, ವಂಚಿಸು

(ದೊಗರು < ಡೊಗರು = ಗುಂಡಿ, ಯೋನಿ ; ಎಗರು = ಹಾರು, ಮಾಯವಾಗು)

ಪ್ರ : ನಮ್ಮನೇಲೆ ಉಂಡು ತಿಂದು, ಕೊನೆಗೆ ನಮಗೇ ದೊಗರು ತೋರಿಸಿ ಎಗರಿದ್ಲು

೧೬೮೮. ದೊಗೆದಿಕ್ಕು = ತೋಡಿ ಬಡಿಸು,

(ದೊಗೆ = ತೋಡು, ಬಗೆ)

ಪ್ರ : ಗಾದೆ – ಒಳಗಿಲ್ಲ ಅಂದ್ರೆ, ದೊಗೆದಿಕ್ಕು ಅಂದ.

೧೬೮೯. ದೊಡ್ಡ ಜೀವ ಹಾರಿ ಹೋಗು = ಅತಿ ಭಯವಾಗು

ಮನುಷ್ಯ ಸಾಯುವಾಗ ಮೊದಲು ದೊಡ್ಡ ಜೀವ (ಪ್ರಾಣ, ಉಸಿರು) ಹೋದ ಮೇಲೂ ಸಣ್ಣ ಜೀವ ಅಥವಾ ಗುಟುಕು ಜೀವ ಇನ್ನೂ ಇರುತ್ತದೆಂದೂ ಆಮೇಲೆ ಅದು ಹೋಗುತ್ತದೆ ಎಂದೂ ನಂಬಿಕೆ.

ಪ್ರ : ದೆವ್ವದಂಥೋನು ದುತ್ತನೆ ಎದುರು ನಿಂತಾಗ, ನನಗೆ ದೊಡ್ಡ ಜೀವ ಹಾರಿ ಹೋಯ್ತು.

೧೬೯೦. ದೊಡ್ಡದಾಗಿ ಬರು = ಆಡಂಬರದಿಂದ ಬರು, ಗೌರವಸ್ಥರಂತೆ ಆಗಮಿಸು

ಪ್ರ : ದೊಡ್ಡದಾಗಿ ಬರ್ತಾರೆ, ಸಣ್ಣದಾಗಿ ನಡ್ಕೋತಾರೆ

೧೬೯೧. ದೊಡ್ಡ ಮಾರ್ಗದಲ್ಲಿ ಹೋಗು = ಘನತೆಯಿಂದ ಬಾಳು, ಅಡ್ಡದಾರಿಗಳಿಂದ ಹೆದ್ದಾರಿಯಲ್ಲಿ ನಡೆ

ಪ್ರ : ನಿಮ್ಮ ಹೆತ್ತರು ಮುತ್ತರು ಬಾಳಿದಂತೆ ದೊಡ್ಡ ಮಾರ್ಗದಲ್ಲಿ ಹೋಗು, ಗೊತ್ತಾಯಿತಾ?

೧೬೯೨. ದೊಡ್ಡ ಲಜ್ಜೆಯಾಗು = ರಂಪವಾಗು, ಹೈರಾಣವಾಗು

(ಲಜ್ಜೆ = ನಾಚಿಕೆ, ರಾಡಿ)

ಪ್ರ : ಮದುವೆ ಮನೇಲಿ ಹೆಣ್ಣುಗಂಡುಗಳ ಕಡೆಯ ಹೆಂಗಸರಿಗೆ ಪರಸ್ಪರ ಮಾತು ಬೆಳೆದು ದೊಡ್ಡ ಲಜ್ಜೆ ಆಗಿ ಹೋಯ್ತು.

೧೬೯೩. ದೊಡ್ಡವಳಾಗು = ಋತುಮತಿಯಾಗು, ನೆರೆ.

ಪ್ರ : ನನ್ನ ಮಗಳು ದೊಡ್ಡೋಳಾದ್ಲು, ಗುಡ್ಲು ಹಾಕ್ತಾ ಇದ್ದೀವಿ, ತಪ್ಪದೆ ಬನ್ನಿ.

೧೬೯೪. ದೊಡ್ಡಿಯಾಗು = ಪೋಲಿಪಕಾಳಿಗಳ ತಂಗುದಾಣವಾಗು, ಹೇಳುವವರು ಕೇಳುವವರು ಇಲ್ಲದ ಕೊಂಪೆಯಾಗು

(ದೊಡ್ಡಿ = ಕೊಟ್ಟಿಗೆ) ಹಿಂದೆ ಕುರಿ ಕೂಡುವ, ದನ ಕಟ್ಟುವ ಜಾಗಕ್ಕೆ ದೊಡ್ಡಿ ಎಂಬ ಹೆಸರಿತ್ತು. ಕಾಳುಮುದ್ದನ ದೊಡ್ಡಿ ಮೊದಲಾದ ಊರ ಹೆಸರುಗಳಲ್ಲಿ ಅದು ಮೂಲಾರ್ಥವನ್ನು ಉಳಿಸಿಕೊಂಡಿದೆ. ಆದರೆ ಇಂದು ಪೋಲಿದನಗಳನ್ನು ಕೂಡುವ ಜಾಗ ಎಂಬ ಅರ್ಥ ಬಂದಿದೆ.

ಪ್ರ : ಕಾಡು ಸಿದ್ಧೇಶ್ವರನ ಗುಡಿ ಇವತ್ತು ದೊಡ್ಡಿಗಿಂತ ಅತ್ತತ್ತವಾಗಿದೆ.

೧೬೯೫. ದೊಡ್ಡು ನುಗ್ಗಿದಂತೆ ನುಗ್ಗು = ರೂಕ್ಷ ಕಾಡು ಕೋಣನಂತೆ ನುಗ್ಗು

ದೊಡ್ಡು ಒಂದು ಬಲಿಷ್ಠ ಪ್ರಾಣಿ ವಿಶೇಷ. ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಎಂಬ ಕಾದಂಬರಿಯಲ್ಲಿ ಆ ಹೆಸರಿನ ಪ್ರಾಣಿಯ ಪ್ರಸ್ತಾಪ ಬರುತ್ತದೆ. ಕುರುಬರಲ್ಲಿ ‘ದುಡ್ಡಿನ ಕುರುಬರು’ ಎಂಬ ಬೆಡಗು ಅಥವಾ ಕುಲವುಂಟು. ಕುಲದೇವತಾ ಪದ್ಧತಿಯ ಪ್ರಕಾರ ಪ್ರಾಣಿಗಳನ್ನು, ವೃಕ್ಷಗಳನ್ನು ಆರಾಧಿಸುವ ಪರಿಪಾಠ ಬುಡಕಟ್ಟು ಜನಾಂಗಗಳಲ್ಲಿತ್ತು. ಉದಾಹರಣೆಗೆ ಕುರುಬರಲ್ಲಿ ಬೇಲದ ಕುರುಬರು, ಬನ್ನಿ ಕುರುಬರು, ಬಸರಿ ಕುರುಬರು – ಇತ್ಯಾದಿಯಾಗಿ ವೃಕ್ಷಾರಾಧಕ ಕುಲಗಳು ಉಂಟು. ಹಾಗೆಯೇ ಆನೆ ಕುರುಬರು, ಕುದುರೆ ಕುರುಬರು (ಶಾತವಾಹನರು) – ಇತ್ಯಾದಿಯಾಗಿ ಪ್ರಾಣಿಯಾರಾಧಕ ಕುಲಗಳೂ ಉಂಟು. ‘ದುಡ್ಡಿನ ಕುರುಬರು’ ಎಂಬುದು ‘ದೊಡ್ಡಿನ ಕುರುಬರು’ ಎಂಬ ಪ್ರಾಣಿ ಮೂಲ ಬೆಡಗಾಗಿರಬಹುದೆ ಎಂಬ ಅನುಮಾನ ಕಾಡುತ್ತದೆ.

ಪ್ರ : ಅವನು ದೊಡ್ಟಡು ನುಗ್ಗಿದಂತೆ ನುಗ್ಗಿ ಬಂದಾಗ, ಲಡ್ಡು ಜನವೆಲ್ಲ ದಿಕ್ಕಾಪಾಲಾದರು.

೧೬೯೬. ದೊಣ್ಣೆ ಸೇವೆ ಮಾಡು = ಲಾಠಿ ಚಾರ್ಜ್‌ಮಾಡು, ಲೊಟ್ಟದಿಂದ ಹೊಡಿ

ಪ್ರ : ಪೋಲೀಸರಿಂದ ದೊಣ್ಣೆ ಸೇವೆ ಮಾಡಿಸಿಕೊಂಡು ಮಣ್ಣು ಮುಕ್ಕಿ ಬಂದ

೧೬೯೭. ದೊಮ್ಮೆ ಒಣಗಿ ಹೋಗು = ಭಯವಾಗು

(ದೊಮ್ಮೆ = ಶ್ವಾಸಕೋಶ)

ಪ್ರ : ಸುತ್ತ ಮುತ್ತ ಆನೆಗಳು ಘೀಳಿಟ್ಟಾಗ, ನನಗೆ ದೊಮ್ಮೆ ಒಣಗಿ ಹೋಯ್ತು.

೧೬೯೮. ದೊಮ್ಮೆ ಇಲ್ಲದಿರು = ಶಕ್ತಿ ಇಲ್ಲದಿರು, ಪ್ರಾಣದ ತ್ರಾಣ ಇಲ್ಲದಿರು

ದಮ್ಮಿನ (ಉಸಿರಿನ) ತಿದಿಯೇ ದೊಮ್ಮೆ. ದೊಮ್ಮೆ ಭಗ್ನವಾದರೆ ಪ್ರಾಣವೂ ಇರುವುದಿಲ್ಲ. ತ್ರಾಣವೂ ಇರುವುದಿಲ್ಲ ಎಂಬುದನ್ನು ಸೂಚಿಸುತ್ತದೆ.

ಪ್ರ : ದೊಮ್ಮೆ ಇದ್ದರೆ ಎದ್ದು ಬಂದು ಕೈ ಮಾಡು, ಇಲ್ಲದಿದ್ರೆ ಬಿದ್ದಿರು.

೧೬೯೯. ದೊರೆಯಂತಿರು = ಗಂಭೀರವಾಗಿರು

ಪ್ರ : ದೊಡ್ಡ ಮಗ ದೊರೆಯಂಗಿದ್ರೆ, ಚಿಕ್ಕಮಗ ನರಿಯಂಗೆ ಊಳಿಡ್ತಾನೆ.

೧೭೦೦. ದೊಳ್ಳು ಒಡೆ ಹಾಕು = ಹೊಟ್ಟೆ ಸೀಳು ಹೊಟ್ಟೆಯನ್ನು ಹೋಳು ಮಾಡು.

(ದೊಳ್ಳು < ಡೊಳ್ಳು < ಡೋಲು = ಒಂದು ವಾದ್ಯ ವಿಶೇಷ) ದೇಹದಲ್ಲಿ ಹೊಟ್ಟೆ ಡೊಳ್ಳು ವಾದ್ಯದಂತೆ ಇದೆ ಎಂಬ ಕಲ್ಪನೆಯಿಂದ ಮೂಡಿದ್ದು ಈ ನುಡಿಗಟ್ಟು.

ಪ್ರ : ಕಳ್ಳು ಬಾಯಿಗೆ ಬರೋ ಹಂಗೆ ದೊಳ್ಳು ಒಡೆ ಹಾಕಿದ್ದೀನಿ.

೧೭೦೧. ದೋಣು ಬರಿದಾಗು = ಹೊಟ್ಟೆ ಖಾಲಿಯಾಗು, ಹಸಿವೆಯಾಗು

(ದೋಣು < ದ್ರೋಣ = ಕುಂಭ ಅಥವಾ ದೋಣು < ಡೋಣು < ಡೋಲು = ವಾದ್ಯ ವಿಶೇಷ)

ಪ್ರ : ಗಾದೆ – ಆಳು ಮೇಲೆ ಆಳು ಬಿದ್ದು ದೋಣು ಬರಿದಾಯ್ತು

೧೭೦೨. ದಂಗು ಬಡಿದು ಹೋಗು = ವಿಸ್ಮಯವಾಗು, ಆಘಾತವಾಗು

ಪ್ರ : ಕ್ರಿಯಾಭ್ರಷ್ಟನ ಮಾತು ಕೇಳಿ ದಂಗು ಬಡಿದು ಹೋದೆ.

೧೭೦೩. ದಂಟಾಗು = ದುಂಡಗಾಗು, ಚೆನ್ನಾಗಿ ಆಗು

ಪ್ರ : ಗಾದೆ – ಎಂಟು ವರ್ಷಕ್ಕೆ ನನ್ನ ಮಗ ದಂಟಾದ.

೧೭೦೪. ದಂಡಯಾತ್ರೆ ಮಾಡು = ಅನುತ್ತೀರ್ಣನಾಗು, ದಂಡೆತ್ತಿ ಹೋಗು.

ಪ್ರ : ಬಿ.ಎ ಪಾಸು ಮಾಡೋಕೆ ಹತ್ತು ಸಾರಿ ದಂಡಯಾತ್ರೆ ಮಾಡಿದ.

೧೭೦೫. ದಂಡವಾಗಿ ಮೀಸೆ ಹೊತ್ಕೊಂಡಿರು = ಗಂಡಸುತನದ ಗೈರತ್ತಿಲ್ಲದಿರು

(ದಂಡವಾಗಿ = ವ್ಯರ್ಥವಾಗಿ)

ಪ್ರ : ಯಾಕೆ ದಂಡವಾಗಿ ಮೀಸೆ ಹೊತ್ಕೊಂಡಿದ್ದೀಯಾ, ಹೋಗಿ ಬೋಳಿಸಿ ಹಾಕು

೧೭೦೬. ದಂಡೆಯಾಗು = ಮಸ್ತಾಗು, ಬೇಕಾದಷ್ಟಾಗು, ಆಗಿ ಮಿಗು

(ದಂಡೆ = ಮಸ್ತು, ಹೆಚ್ಚು)

ಪ್ರ : ಇನ್ನೂ ಎರಡು ಪಂಕ್ತಿ ಜನ ಬಂದರೂ, ಮಾಡಿದ ಅನ್ನ ಸಾರು ದಂಡೆಯಾಗ್ತದೆ.

೧೭೦೭. ದಂಡೆ ಒತ್ತು = ಸಾಮು ಮಾಡು, ವ್ಯಾಯಾಮ ಮಾಡು.

ತಮ್ಮೆರಡು ಅಂಗೈಗಳನ್ನು ನೆಲದ ಮೇಲೆ ಊರಿ, ಕಾಲುಗಳನ್ನು ಹಿಂದಕ್ಕೆ ಬಾಚಿ ಬೆರಳ ಮೇಲೆ ನಿಲ್ಲಿಸಿ. ಶರೀರವನ್ನು ಹಿಂದಕ್ಕೆ ತಂದು, ನೆಲಕ್ಕೆ ಸೋಕುವ ಹಾಗೆ ಮುಂದಕ್ಕೆ ಕೊಂಡೊಯ್ದು, ನಾಗರ ಹಾವಿನ ಹೆಡೆಯಂತೆ ಮೇಲಕ್ಕೆ ತಲೆ ಎತ್ತುವ ವ್ಯಾಯಾಮಕ್ಕೆ ದಂಡೆ ಒತ್ತುವುದು ಎಂದು ಹೇಳಲಾಗುತ್ತದೆ.

ಪ್ರ : ಗಾದೆ – ದಂಡೆ ಒತ್ತೋಕೆ ಬರದೋನು ಗಂಡೇ ಅಲ್ಲ.

೧೭೦೮. ದಂಡೆ ಹಾಕು = ಗೌರವಿಸು

(ದಂಡೆ = ಮಾಲೆ, ಹೂವಿನ ಹಾರ)

ಪ್ರ : ನನ್ನನ್ನು ಗೆಲ್ಲಿಸಿದ್ದೂ ಅಲ್ಲದೆ ಕೊರಳಿಗೆ ದಂಡೆ ಹಾಕಿ, ಮಂಡೆ ಎತ್ಕೊಂಡು ತಿರುಗೋ ಹಂಗೆ ಮೆರವಣಿಗೆಯನ್ನೂ ಮಾಡಿಬಿಟ್ರು.

೧೭೦೯. ದಾಂಡದಡಿಗನಾಗಿರು = ಸೀದ ಹಂದಿಯಂತಿರು, ಸಿಗಿದರೆ ಎರಡಾಳಾಗುವಂತಿರು

(ದಾಂಡದಡಿಗ < ದಾಂಡಿಗ + ದಡಿಗ = ಮರದ ದಿಮ್ಮಿಯಂತಿರುವವನು)

ಪ್ರ : ಪಂಚ ಪಾಂಡವರು ದಾಂಡದಡಿಗರಂಗಿದ್ರೂ ಸಭೇಲಿ ಹೆಂಡ್ರು ಮಾನ ಕಾಪಾಡಲಿಲ್ಲ.

೧೭೧೦. ದಿಂಡಾಗಿರು = ಗಟ್ಟಿಮುಟ್ಟಾಗಿರು

(ದಿಂಡು = ಮರದ ತುಂಡು, ದಿಮ್ಮಿ)

ಪ್ರ : ಗಾದೆ – ದಿಂಡಾಗಿರೋ ಮಿಂಡ ಸಿಕ್ಕಿದ್ರೆ ಬೆಂಡಾಗಿರೋ ಗಂಡ ಯಾಕೆ ಬೇಕು?

೧೭೧೧. ದಿಂಡುಗಟ್ಟು = ಹೊರೆಗಟ್ಟು, ಕಂತೆಗಟ್ಟು

(ದಿಂಡು = ಕಂತೆ, ಹೊರೆ)

ಪ್ರ :ಎಲ್ಲವನ್ನೂ ದಿಂಡುಗಟ್ಟಿ, ಮನೆಗೆ ಹೊತ್ಕೊಂಡು ಹೋಗು, ಒಲೆಗೆ ಸೌದೆ ಆಗ್ತವೆ.

೧೭೧೨. ದಿಂಡುರುಳು ಸೇವೆ ಮಾಡು = ನೆಲದಲ್ಲಿ ಉರುಳಾಡಿ ಬೇಡು, ಅಂಗಲಾಚು

ಪ್ರ : ದಿಂಡುರುಳು ಸೇವೆ ಮಾಡಿದ್ರೂ, ಅಲುಗಾಡದೆ ಮೊಂಡ ಕುಂತಂಗೆ ಕುಂತಿದ್ದ.

೧೭೧೩. ದಿಂಡು ಹಾಕು = ಈಡು ಹಾಕು, ಹುದಿ ಹಾಕು

(ದಿಂಡು = ಬದು, ಹುದಿ, ಈಡು)

ಪ್ರ : ಇಲ್ಲಿಗೊಂದು ದಿಂಡು ಹಾಕು, ನೀರು ನಿಂತ್ಕೊಳ್ಳೋಕೆ, ಅನುಕೂಲವಾಗ್ತದೆ.

೧೭೧೪. ದುಂಡುದುಂಡಗಾಗು = ಮೈಕೈ ತುಂಬಿಕೊಳ್ಳು. ಕೈ ಇಟ್ಟರೆ ಜಾರುವಂತಾಗು

ಪ್ರ : ಪರವಾ ಇಲ್ಲ, ಗಂಡನ ಮನೆಗೆ ಹೋದ ಮೇಲೆ ದುಂಡು ದುಂಡಗೆ ಆಗಿದ್ಧೀಯ

೧೭೧೫. ದುಂಬಾಲು ಬೀಳು = ಅಂಗಲಾಚು

(ದುಂಬಾಲು < ದುಂಬುಗಾಲು < ತುಂಬುಕಾಲು = ಎರಡು ಕಾಲು)

ಪ್ರ : ಅವನು ಬಂದು ದುಂಬಾಲು ಬಿದ್ದ, ನಾನು ಹರಿಶಿವಾ ಅನ್ನಲಿಲ್ಲ.

೧೭೧೬. ದುಂಬುದೆಗೆ = ಧೂಳು ಹೊಡಿ

(ದುಂಬು < ತುಂಬು (ತ) = ಧೂಳು)

ಪ್ರ : ಮೊದಲು ರಾಶಿ ಮೇಲಿನ ದುಂಬು ತೆಗೀರಿ

೧೭೧೭. ದೆಂಗಿ ದೇವರು ಮಾಡು = ನುಂಗಿ ನೀರು ಕುಡಿ, ತಿಂದು ತೇಗು

(ದೆಂಗು = ಸಂಭೋಗಿಸು; ದೇವರು ಮಾಡು = ಹಬ್ಬ ಮಾಡು, ಹಬ್ಬದ ಸಡಗರದಲ್ಲಿ ಮುಳುಗು)

ಪ್ರ : ಅವರ ಆಸ್ತೀನೆಲ್ಲ ದೆಂಗಿ ದೇವರು ಮಾಡಿಬಿಟ್ಟ.

೧೭೧೮. ದೊಂಬರಾಟವಾಡು = ಇಲ್ಲದ ಕಸರತ್ತು ಮಾಡು, ಜನಮನ ಗೆಲ್ಲುವ ಪ್ರಯತ್ನ ಮಾಡು

ದೊಂಬರು ಒಂದು ಅಲೆಮಾರಿ ಜನಾಂಗ. ಊರೂರಿಗೆ ಹೋಗಿ ಊರ ಮುಂದೆ ಗಣೆ ನೆಟ್ಟು, ತುದಿಗೆ ಹತ್ತಿ ಹೋಗಿ, ತುದಿಯ ಮೇಲೆ ಹೊಟ್ಟೆ ಹಾಕಿ, ಕೈಕಾಲುಗಳನ್ನು ಚಾಚಿ ಸುತ್ತಲೂ ಗರಗರನೆ ತಿರುಗುವ ಹತ್ತಾರು ಸಾಹಸ ಕಾರ್ಯ ಪ್ರದರ್ಶಿಸಿ, ಜನರಿಂದ ಹಣ, ಧಾನ್ಯ ಸ್ವೀಕರಿಸಿ ಹೊಟ್ಟೆ ಹೊರೆಯುವಂಥವರು.

ಪ್ರ : ಅವನು ಎಷ್ಟೇ ದೊಂಬರಾಟ ಆಡಿದರೂ, ನಾನು ಒಂದು ಪೈಸೆ ಕೂಡ ಕೊಡಲಿಲ್ಲ.

೧೭೧೯. ದೊಂಬಿದಾಸರಾಟವಾಡು = ಸಂಗೀತಮಯವಾದ ನಾಟಕವಾಡು.

(ಆಟ = ನಾಟಕ) ದೊಂಬಿದಾಸರು ಕೂಡ ಒಂದು ಅಲೆಮಾರಿ ಜನಾಂಗವೇ ಆದರೆ ಸಂಗೀತ ಸಾಹಿತ್ಯಕಲೆಗಳಲ್ಲಿ ನಿಷ್ಣಾತರಾದವರು. ಗಂಧರ್ವ ವಿದ್ಯೆಯಲ್ಲಿ ನುರಿತ ಜನ ಅವರು. ಅವರಾಡುವ ನಾಟಕಗಳಲ್ಲಿ ಹಾಡಿನ ಮೋಡಿ ಜನರನ್ನು ಮರುಳು ಮಾಡಿ ಬಿಡುತ್ತದೆ. ಅಷ್ಟು ಮಂಜುಳಗಾಯನವಿರುತ್ತದೆ. ನಾಗರೀಕತೆ ಬಂದಂತೆಲ್ಲ ಆ ಜನ ಊರೂರ ಮೇಲೆ ಹೋಗಿ ನಾಟಕವಾಡುವ ವೃತ್ತಿಯನ್ನು ಬಿಟ್ಟು ಒಂದು ಕಡೆ ತಂಗಿ ವ್ಯವಸಾಯದಲ್ಲೋ ವ್ಯಾಪಾರದಲ್ಲೋ ವಿದ್ಯಾರ್ಜನೆಯಲ್ಲೋ ತೊಡಗಿಕೊಂಡಿರುವುದು ಸಂತೋಷವಾದರೂ, ಆ ನಾಟಕ ಕಲೆಯನ್ನು ಬಿಟ್ಟದ್ದು ದುಃಖಕರ.

ಪ್ರ : ಇವತ್ತು ದೊಂಬಿದಾಸರಾಟಕ್ಕೆ ತಪ್ಪಿಸಿಕೊಂಡೋರುಂಟ ? ನಾನು ಹೋದೇ ಹೋಗ್ತೀನಿ.