೨೩೭೧. ಮಕಮಕ ಎನ್ನು = ಮಂಕಾಗು, ಗುಟುಕು ಜೀವವಾಗು

ಪ್ರ : ದೀಪ ಎಣ್ಣೆ ತೀರಿ ಮಕಮಕ ಅಂತಾ ಇದೆ, ಮೊದಲು ಎಣ್ಣೆ ಹಾಕು

೨೩೭೨. ಮಕಮಲ್ ಟೋಪಿ ಹಾಕು = ನಯವಂಚನೆ ಮಾಡು

(ಮಕಮಲ್ = ನಯವಾದ ಬಟ್ಟೆ)

ಪ್ರ : ಶೇಟುಗಳ ಹತ್ರ ಹುಷಾರಾಗಿರು, ಅವರು ಮಕಮಲ್ ಟೋಪಿ ಹಾಕೋದ್ರಲ್ಲಿ ಎತ್ತಿದ ಕೈ.

೨೩೭೩. ಮಕ ಇಲ್ಲದಿರು = ನೈತಿಕ ಧೈರ್ಯ ಇಲ್ಲದಿರು

(ಮಕ < ಮುಖ)

ಪ್ರ : ನನ್ನ ಎದುರು ಬರೋಕೆ ಅವನಿಗೆ ಮಕ ಇದ್ರೆ ತಾನೇ?

೨೩೭೪. ಮಕ ಇಕ್ಕು = ಪ್ರವೇಶಿಸು, ಆಗಮಿಸು

ಪ್ರ : ಆ ಲಾಗಾಯ್ತಿನಿಂದ ಈ ಕಡೆಗೆ ಮಕಾನೇ ಇಕ್ಕಿಲ್ಲ ಅವನು

೨೩೭೫. ಮಕ ಸ್ಯಾರೆ-ಯಷ್ಟಾಗು = ಅವಮಾನದಿಂದ ಮುಖ ಚಿಕ್ಕದಾಗು

(ಸ್ಯಾರೆ = ಬೊಗ-ಸೆ-ಯ ಅರ್ಧ-ಭಾ-ಗ, ಒಂದು ಅಂಗೈ ಅಗ-ಲ)

ಪ್ರ : ನಿಜಸಂಗತಿ ಹೇಳಿದಾಗ ಅವನ ಮಕ ಸ್ಯಾರೆ-ಯ ಇಷ್ಟಾಯಿತು.

೨೩೭೬. ಮಕ ಊರಗಲವಾಗು = ಹೆಚ್ಚು ಸಂತೋಷವಾಗು, ಹಿಗ್ಗಿ ಹೀರೆಕಾಯಿಯಾಗು

ಪ್ರ : ಮಗ ಕ್ಳಾಸಿಗೇ ಪಸ್ಟ್ ಅಂದಾಗ ಅಪ್ಪನ ಮುಖ ಊರಗಲವಾಯಿತು

೨೩೭೭. ಮಕ ಎಣ್ಣೆ ಕುಡಿದಂತಾಗು = ಮುಖ ಕಿವುಚಿಕೊಳ್ಳು

ಪ್ರ : ಕಹಿ ಸುದ್ದಿ ಕೇಳಿ ಅವನ ಮುಖ ಎಣ್ಣೆ ಕುಡಿದಂತಾಯ್ತು.

೨೩೭೮. ಮಕ ಎತ್ಕೊಂಡು ತಿರುಗದಂತಾಗು = ಅವಮಾನದಿಂದ ತಲೆ ಬಗ್ಗಿಸುವಂತಾಗು

(ತಿರುಗು = ಅಡ್ಡಾಡು)

ಪ್ರ : ಮಕ ಎತ್ಕೊಂಡು ತಿರುಗದಂಥ ಹೀನ ಕೆಲಸ ಮಾಡಿದರು ಮಕ್ಕಳು.

೨೩೭೯. ಮಕ ಒಳ್ಳೆಯಷ್ಟಾಗು = ಅವಮಾನದಿಂದ ಮುಖ ಚಿಕ್ಕದಾಗು

(ಒಳ್ಳೆ < ಒಳಲೆ = ತಾಯಿಗೆ ಎದೆಹಾಲು ಇಲ್ಲದಾಗ, ಮಗುವನ್ನು ಕಾಲ ಮೇಲೆ ಹಾಕಿಕೊಂಡು, ‘ಹುಯ್ ಹಾಲು’ ಕುಡಿಸುವ ಸಾಧನಕ್ಕೆ ಒಳ್ಳೆ, ಒಳಲೆ ಎಂದು ಹೆಸರು)

ಪ್ರ : ತನ್ನ ಮಕ್ಕಳ ದೌರ್ಜನ್ಯವನ್ನು ಕೇಳಿ ಅಪ್ಪನ ಮಕ ಒಳ್ಳೆಯಷ್ಟಾಯ್ತು.

೨೩೮೦. ಮಕ ಕೆತ್ತಿ ಕಳಿಸು = ತೇಜೋ ವಧೆ ಮಾಡು

(ಕೆತ್ತು = ಹೆರೆ, ಕೊಚ್ಚು, ಕತ್ತರಿಸು)

ಪ್ರ : ಇಂಥ ಕೆಲಸಾನ ಮಾಡೋದು ? ಅಂತ ಅವನ ಮಕ ಕೆತ್ತಿ ಕಳಿಸಿದ

೨೩೮೧. ಮಕದಲ್ಲಿ ಕೇಡು ಇಳೇಲಿಕ್ಕು = ಕೇಡು ಸುರಿಯುತ್ತಿರು, ಕೆಟ್ಟತನ ತೊಟ್ಟಿಕ್ಕುತ್ತಿರು

(ಇಳೇಲಿಕ್ಕು < ಇಳಿಯಲು + ಇಕ್ಕು = ಇಳಿಯತೊಡಗು, ಸುರಿಯತೊಡಗು)

ಪ್ರ : ಮಕದಲ್ಲಿ ಕೇಡು ಇಳೇಲಿಕ್ಕೋನು ಮನುಷ್ಯರಾ ? ರಾಕ್ಷಸ !

೨೩೮೨. ಮಕ ಕೊಟ್ಟು ಮಾತಾಡದಿರು = ಮುನಿಸಿಕೊಳ್ಳು, ಅಲಕ್ಷಿಸು

ಪ್ರ : ಮಕ ಕೊಟ್ಟು ಮಾತಾಡದೋನ ಹತ್ರ ನಾನ್ಯಾಕೆ ನೇತಾಡಲಿ?

೨೩೮೩. ಮಕದಾಗೆ ನೀರಿಳಿಸು = ಅವಮಾನ ಮಾಡು

(ಮಕದಾಗೆ = ಮುಖದಲ್ಲಿ; ನೀರಿಳಿಸು = ಬೆವರು ಕಿತ್ತುಕೊಳ್ಳುವಂತೆ ಮಾಡು)

ಪ್ರ : ಸಂತೇಲಿ ಸಿಕ್ಕಿದ್ದ, ಮಕದಾಗೆ ನೀರಿಳಿಸಿ ಕಳಿಸಿದ್ದೀನಿ.

೨೩೮೪. ಮಕ ಬೂದುಗುಂಬಳಕಾಯಾಗು = ಮುನಿಸಿಕೊಳ್ಳು, ಊದಿಕೊಳ್ಳು

ಪ್ರ : ಗೌರಿ ಹಬ್ಬಕೆ ಸ್ಯಾಲೆ ತರಲಿಲ್ಲ ಅಂತ ಸೊಸೆ ಮಕ ಬೂದುಗುಂಬಳಕಾಯಾಯ್ತು.

೨೩೮೫. ಮಕಕ್ಕೆ ಮಂಗಳಾರತಿ ಎತ್ತು = ಅವಮಾನ ಮಾಡು

ಪ್ರ : ನಿನ್ನೆ ನನ್ನ ಹತ್ರ ಬಂದಿದ್ದ, ಸರಿಯಾಗಿ ಮಕಕ್ಕೆ ಮಂಗಳಾರತಿ ಎತ್ತಿ ಕಳಿಸಿದ್ದೀನಿ.

೨೩೮೬. ಮಕಕ್ಕೆ ಮಣ್ಣು ಹಾಕು = ಸಮಾಧಿ ಮಾಡು, ಹೆಣದ ಮೇಲೆ ಮಣ್ಣು ಎಳೆ

ಪ್ರ : ಅವನ ಮಕಕ್ಕೆ ಮಣ್ಣು ಹಾಕಿದ ದಿನ ನಾನು ತಣ್ಣಗಿದ್ದೇನು.

೨೩೮೭. ಮಕಾಡ ಹಾಕು = ಹಿಡಿತಕ್ಕೊಳಪಡಿಸು

(ಮಕಾಡ < ಮುಖವಾಡ) ಸಣ್ಣ ಕರುಗಳಿಗೆ ಮೂಗುಚುಚ್ಚಿ ಮೂಗುದಾರ ಹಾಕುರುವುದಿಲ್ಲ. ಆದ್ದರಿಂದ ಹಗ್ಗ ಹಾಕಿ ಕಟ್ಟಲು ಮುಸುಡಿಗೆ ಮಕಾಡ ಹಾಕಿರುತ್ತಾರೆ.

ಪ್ರ : ಮಕಾಡ ಹಾಕದಿದ್ರೆ ಕರುವನ್ನು ಹಿಡಿಯೋದೆಂಗೆ ? ಕಟ್ಟೋದೆಂಗೆ ?

೨೩೮೮. ಮಕಾಡೆ ಮಲಗು = ದುಃಖದಿಂದ ನೆಲಕಚ್ಚು

(ಮಕಾಡೆ < ಮುಖ + ಅಡಿ = ನೆಲಕ್ಕೆ ಮುಖ ಹಾಕಿಕೊಂಡು)

ಪ್ರ : ಮಕಾಡೆ ಮಲಗಿಕೊಂಡ್ರೆ ಸಮಸ್ಯೆ ನಿಕಾಲಾಗಿಬಿಡ್ತದ?

೨೩೮೯. ಮಕಾರ ಅಂಡಿಕೊಳ್ಳು = ಮಕ್ತಾ (< ಮುಖತಃ) ತರಾಟೆಗೆ ತೆಗೆದುಕೊಳ್ಳು (ಮಕಾರ < ಮುಖ + ಆರ = ಮುಖತಃ, ಮುಖದ ಮಟ್ಟದಲ್ಲಿ, ಮುಖದ ಅಳತೆಯಲ್ಲಿ)

ಪ್ರ : ಮಕಾರ ಅಂಡಿಕೊಂಡಿದ್ದಕ್ಕೆ ಮಕ ಸಿಂಡ್ರಿಸಿಕೊಂಡು ಹೋದ.

೨೩೯೦. ಮಕ್ಕಿಕಾ ಮಕ್ಕಿ ಮಾಡು = ಯಥಾವತ್ ನಕಲು ಮಾಡು, ಯದ್ವತ್ ಅನುಕರಿಸು

(ಮಕ್ಕಿ < ಮಕ್ಷಿಕ = ನೊಣ) ಓಲೆಗರಿಯ ಕಟ್ಟಿನಲ್ಲಿ ಒಂದು ನೊಣ ಸತ್ತು ಅಪ್ಪಚ್ಚಿಯಾಗಿರುವುದನ್ನು ಕಂಡು, ಅದನ್ನು ನಕಲು ಮಾಡುತ್ತಿದ್ದ ಲೆಕ್ಕಿಗ ತನ್ನ ಪ್ರತಿಯಲ್ಲೂ ಆ ಜಾಗದಲ್ಲಿ ಒಂದು ನೊಣ ಹೊಡೆದು ಅಂಡಿಸಿದನೆಂದು ಕಥೆ. ಆ ಹಿನ್ನೆಲೆಯಲ್ಲಿ ಈ ನುಡಿಗಟ್ಟು ಮೂಡಿದೆ.

ಪ್ರ : ಮಕ್ಕಿಕಾ ಮಕ್ಕಿ ಮಾಡಿ, ಹೆಂಗೋ ಪಾಸಂತೂ ಆದೆ.

೨೩೯೧. ಮಗ್ಗ ಹಾಕಿ ಕೂಡು = ಪಟ್ಟು ಹಿಡಿದು ಕೂಡು, ಪೂರ್ವಾಭಿಪ್ರಾಯದಿಂದ ಅಲುಗಾಡದಿರು.

ಕಂಬಳಿ ನೇಯಲು ಮಗ್ಗ ಹಾಕಿ ಕೂತವನ್ನು, ನೇಯ್ಗೆ ಮುಗಿಯುವವರೆಗೂ ಅತ್ತಿತ್ತ ಅಲ್ಲಾಡುವುದಿಲ್ಲ, ಮೇಲೆದ್ದು ಹೋಗುವುದಿಲ್ಲ. ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಮಗ್ಗ ಹಾಕಿ ಕೂತಿದ್ದಾನೆ, ಅವನ್ನ ಬಗ್ಗಿಸೋರು ಯಾರು ? ಒಗ್ಗಿಸೋರು ಯಾರು?

೨೩೯೨. ಮಗ್ಗಿ ಹೋಗು = ಬಾಡಿ ಹೋಗು, ಸುಡರಿಕೊಳ್ಳು

ಪ್ರ : ಹೂವೆಲ್ಲ ಮಗ್ಗಿ ಹೋಗ್ಯವೆ, ಬೇರೆ ಹೂವು ತನ್ನಿ.

೨೩೯೩. ಮಗ್ಗುಲಾಗು = ಮಲಗು

(ಮಗ್ಗುಲು = ಪಕ್ಕ, ಬಗಲು)

ಪ್ರ : ಅತ್ತತ್ತ ಸರಕೋ, ಕೊಂಚ ಹೊತ್ತು ಮಗ್ಗುಲಾಗ್ತೀನಿ.

೨೩೯೪. ಮಗ್ಗುಲಿಗೆ ನಗ್ಗಲು ಮುಳ್ಳಾಗು = ಕಂಟಕ ಪ್ರಾಯವಾಗು, ಬಗಲಲ್ಲೆ ಬದ್ಮಾಷ್ ಇರು.

ಮುಳ್ಳಿನ ಗಿಡಗೆಂಟೆಯಂತಿರದೆ, ನೆಲದ ಮೇಲೆ ನೆಲಕ್ಕೆ ಅಂಟಿದಂತೆ ಹಬ್ಬುವ ಸಣ್ಣ ಸಸ್ಯ ವಿಶೇಷ ಈ ನಗ್ಗಲು ಬಳ್ಳಿ ಹಾಗೂ ನಗ್ಗಲು ಮುಳ್ಳು. ಇದರ ಮೇಲೆ ಕಾಲಿಡುವುದಕ್ಕೆ ಆನೆಗಳಂಥವೂ ಅಂಜಿಕೊಳ್ಳುತ್ತವೆ. ಹಿಂದೆ ಯುದ್ಧಗಳಲ್ಲಿ ಆನೆಗಳನ್ನು ಬಳಸುತ್ತಿದ್ದುದರಿಂದ, ಆನೆಗಳು ಮುಂದುವರಿಯಲಾಗದಂತೆ ಶತ್ರುರಾಜರು ರಕ್ಷಣಾತಂತ್ರವಾಗಿ ಇವುಗಳನ್ನು ಬೆಳಸುತ್ತಿದ್ದರು ಎಂದು ಪ್ರತೀತಿ.

ಪ್ರ : ಕೆಟ್ಟ ಬಾವು ಹುಟ್ಟಿದಂಗೆ ಹುಟ್ಟಿ, ನನ್ನ ಮಗ ನನ್ನ ಮಗ್ಗುಲಿಗೇ ನಗ್ಗಲು ಮುಳ್ಳಾದ.

೨೩೯೫. ಮಗ್ಗಲು ಬದಲಾಯಿಸು = ನಿದ್ದೆ ಬರದೆ ಒದ್ದಾಡು

ಅಂಗಾತ ಮಲಗಿದ್ದವನು ಎಡಮಗ್ಗುಲಿಗೆ ಹೊರಳುವುದು, ಆಮೇಲೆ ಹೊಟ್ಟೆ ಮಕಾಡೆ ಮಲಗುವುದು – ಇದು ನಿದ್ರೆ ಇಲ್ಲದಿದ್ದಾಗಿನ ಒದ್ದಾಟ.

ಪ್ರ : ನೀನು ಹಿಂಗೆ ಮಗ್ಗುಲು ಬದಲಾಯಿಸ್ತಾ ಒದ್ದಾಡುತಿದ್ರೆ, ಪಕ್ಕದೋರು ನಿದ್ದೆ ಮಾಡೋದು ಹೆಂಗೆ?

೨೩೯೬. ಮಚ್ಚನಾಲಗೆ ಇರು = ಆಡಿದ್ದು ಆಗು, ಮಾತು ಹುಸಿಯಾಗದಿರು

(ಮಚ್ಚ < ಮಚ್ಚೆ = ಕಪ್ಪು ಕಲೆ) ನಾಲಗೆಯ ಮೇಲೆ ಮಚ್ಚೆ (ಕಪ್ಪು ಕಲೆ) ಇದ್ದವರು ಆಡಿದ ಮಾತು ಹುಸಿಯಾಗುವುದಿಲ್ಲ ಎಂಬ ಜನಪದ ನಂಬಿಕೆಯ ಹಿನ್ನೆಲೆಯುಳ್ಳ ನುಡಿಗಟ್ಟಿದು.

ಪ್ರ : ನೀನು ಹೇಳಿದಂಗೇ ಆಯ್ತು, ನಿನಗೆ ಮಚ್ಚನಾಲಗೆ ಇರಬೇಕು.

೨೩೯೭. ಮಟಕ್ಕೆ ಹೋಗು = ಶಾಲೆಗೆ ಹೋಗು

(ಮಟ < ಮಠ = ಶಾಲೆ, ವಿದ್ಯಾಕೇಂದ್ರ) ಹಿಂದಿನ ಕಾಲದಲ್ಲಿ ಮಠಗಳು ವಿದ್ಯೆ ಹೇಳಿಕೊಡುವ ಗುರುತರ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದವು. ಆದ್ದರಿಂದಲೇ ಹಳ್ಳಿಗಾಡಿನಲ್ಲಿ ಇಂದಿಗೂ ಜನಪದರು ಮಗ ಸ್ಕೂಲಿಗೆ ಹೋಗಿದ್ದಾನೆ ಎಂದು ಹೇಳುವುದಿಲ್ಲ, ಮಟಕ್ಕೆ ಹೋಗಿದ್ದಾನೆ ಎನ್ನುತ್ತಾರೆ. ಅಂದರೆ ಹಿಂದೆ ಧಾರ್ಮಿಕ ಮಠಗಳು ವಿದ್ಯಾಕೇಂದ್ರಗಳಾಗಿದ್ದವು ಎಂಬುದರ ಪಳೆಯುಳಿಕೆಯಾಗಿ ಇಂದಿಗೂ ಶಾಲೆ ಎಂಬ ಅರ್ಥದಲ್ಲಿ ಮಟ ಎಂಬ ಶಬ್ದ ಬಳಕೆಯಲ್ಲಿದೆ. ಆದರೆ ಆಧುನಿಕ ಕಾಲದಲ್ಲಿ ಅನೇಕ ಮಠಗಳು ಜಾತೀಯತೆಯ, ರಾಜಕೀಯದ ಉಗ್ರಾಣಗಳಾಗುವ ಚಿಹ್ನೆ ಕಂಡು ಬರುತ್ತಿರುವುದು ಆತಂಕಕ್ಕೆಡೆ ಮಾಡಿದೆ.

ಪ್ರ : ಹೊತಾರೆ ಮಟಕ್ಕೆ ಹೋದೋನು, ಬೈಸಾರೆ ಆದ್ರೂ ಹುಡುಗ ಮನೆಗೆ ಬಂದಿಲ್ಲ, ಹೋಗಿ ನೋಡ್ಕೊಂಡು ಬನ್ನಿ.

೨೩೯೮. ಮಟಕ್ಕೆ ಮಣ್ಣು ಹೊರು = ವಿದ್ಯೆ ಕಲಿಯಲು ಮಟಕ್ಕೆ ಹೋಗು

ಹಿಂದೆ ಸಿಲೇಟು ಬಳಪಗಳಾಗಲೀ, ಕಾಗದ ಸೀಸದ ಕಡ್ಡಿ, ಮಸಿ ಲೆಕ್ಕಣಿಕೆಗಳಾಗಲೀ ಇರಲಿಲ್ಲ. ಆಗ ಅಕ್ಷರಗಳನ್ನು ಕಲಿಯಲು ಇದ್ದ ಏಕೈಕ ಸಾಧನ ಮಣ್ಣು ಅಥವಾ ಮರಳು. ವಿದ್ಯಾರ್ಥಿಗಳು ಮರಳನ್ನು ತಾವೇ ಹೊತ್ತುಕೊಂಡು ಹೋಗಿ, ಅದರಲ್ಲಿ ಬೆರಳಿನಿಂದ ಅಕ್ಷರಗಳನ್ನು ತಿದ್ದಿ ಕಲಿತುಕೊಳ್ಳಬೇಕಾಗಿತ್ತು. ಮತ್ತೆ ಮನೆಗೆ ಬರುವಾಗ ಆ ಮರಳನ್ನು ಅವರವರು ಅವರವರ ಮನೆಗೆ ಕೊಂಡೊಯ್ಯುತ್ತಿದ್ದರು. “ಮಳ್ಳಲ್ಲಿ ಬರೆದು ಮಡಿಲಲ್ಲಿ ಕಟ್ಟಿಕೊಂಡ ಹಾಗೆ” ಎಂಬ ಜನಪದ ಗಾದೆ, ಮತ್ತೆ ಮರಳನ್ನು ತುಂಬಿಕೊಂಡು ಹಿಂದಕ್ಕೆ ಕೊಂಡೊಯ್ಯುತ್ತಿದ್ದರು ಎಂಬುದನ್ನು ಸೂಚಿಸುತ್ತದೆ. ಆ ಹಿನ್ನೆಲೆಯಿಂದ ಒಡಮೂಡಿದ ನುಡಿಗಟ್ಟಿದು.

ಪ್ರ : ಹುಡುಗನಿಗೆ ಏನೂ ಬರುವುದಿಲ್ಲವೆಂದು ಸಿಟ್ಟುಗೊಂಡ ಮೇಷ್ಟ್ರು “ಯಾವ ಮಟಕ್ಕೆ ಮಣ್ಣು ಹೊತ್ತಿದ್ದೊ?” ಎಂದು ಧಟ್ಟಿಸಿ ಕೇಳಿದರು.

೨೩೯೯. ಮಟ್ಟ ತೆಗಿ = ತಗ್ಗು ಮಾಡು

ಪ್ರ : ಮಟ್ಟ ತೆಗಿ, ಆಗ ನೀರು ಇತ್ತ ಕಡೆ ಬರ್ತದೆ.

೨೪೦೦. ಮಟ್ಟವಾಗಿರು = ತೂಕವಾಗಿರು, ಗೌರವದಿಂದಿರು

ಪ್ರ : ಐಶ್ವರ್ಯ ದಟ್ಟವಾಗಿದ್ರೂ ಮನುಷ್ಯ ಮಟ್ಟವಾಗಿರಬೇಕು

೨೪೦೧. ಮಟ್ಟ ಹಾಕು = ಹತ್ತಿಕ್ಕು, ತುಳಿ, ಮೇಲೇಳದಂತೆ ಮಾಡು

ಪ್ರ : ಅವರ ಅಬ್ಬರ ಅಡಗೋ ಹಂಗೆ ಸರಿಯಾಗಿ ಮಟ್ಟ ಹಾಕಿದ್ದೀನಿ.

೨೪೦೨. ಮಟ್ಟನಾಯಂತಿರು = ಗಟ್ಟಿಮುಟ್ಟಾಗಿರು

(ಮಟ್ಟನಾಯಿ = ಲುಟ್ಟ, ಚಿರತೆ)

ಪ್ರ : ಮಟ್ಟನಾಯಂತಿರೋದಕ್ಕೆ ಸಿಕ್ಕಿಸಿಕ್ಕಿದೋರ ಮೇಲೆ ಎಗರಿ ಬೀಳೋದು.

೨೪೦೩. ಮಟಾಮಾಯ ಬಟಾಬಯಲಾಗು = ಅದೃಶ್ಯವಾಗು, ಇಲ್ಲ-ವಾ-ಗು

(ಮಟಾ < ಮಾಟ ; ಬಟಾ < ಬಟುವು = ಪೂರ್ಣ)

ಪ್ರ : ಇಷ್ಟು ಬೇಗ ಮಟಾಮಾಯ ಬಟಾ ಬಯಲಾಯ್ತು ಅಂದ್ರೆ ನಂಬೋಕೇ ಆಗಲ್ಲ.

೨೪೦೪. ಮಟ್ಟಿಗಿಳಿ = ಕುಸ್ತಿಗಿಳಿ, ಅಖಾಡಕ್ಕಿಳಿ

(ಮಟ್ಟಿ = ಕುಸ್ತಿಯಾಡಲು ಹಾಕಿರುವ ಕೆಮ್ಮಣ್ಣಿನ ಅಖಾಡ)

ಪ್ರ : ಕಾಚಾ ಹಾಕ್ಕೊಂಡು ಬಂದ್ರೆ ಮಟ್ಟಿಗಿಳೀಬಹುದು, ಬಿಚ್ಚಿ ಹಾಕ್ಕೊಂಡು ಬಂದ್ರೆ ಇಳೀತಾರ?

೨೪೦೫. ಮಟ್ಟು ತಿಳಿ = ಮರ್ಮ ತಿಳಿ, ಧೋರಣೆ ಉದ್ದೇಶ ಗ್ರಹಿಸು

(ಮಟ್ಟು = ರಾಗ)

ಪ್ರ : ಎದುರಾಳಿಗಳ ಮಟ್ಟನ್ನು ತಿಳಿಯದೆ ಗುಟ್ಟನ್ನು ರಟ್ಟು ಮಾಡಬಾರದು

೨೪೦೬. ಮಡಕೆ ಕಟ್ಟು = ನೇಗಿಲು ಕಟ್ಟು, ಆರುಕಟ್ಟು

(ಮಡಕೆ = ನೇಗಿಲು) ಕರ್ನಾಟಕ ಆಂಧ್ರ ಗಡಿಭಾಗದಲ್ಲಿ ನೇಗಿಲು ಕಟ್ಟುವುದಕ್ಕೆ ಮಡಕೆ ಕಟ್ಟುವುದು ಎನ್ನುತ್ತಾರೆ. ನಾವು ಮಡಕೆ ಎಂದು ಹೇಳುವ ಮಣ್ಣಿನ ಪಾತ್ರೆಗೆ ಅವರು ಸೋರೆ ಎನ್ನುತ್ತಾರೆ. ಕನ್ನಡದ ‘ಅಂಬಲಿ ಕುಡಿದೋನು ಮಡಕೆ ಹೊತ್ತಾನ?’ ಎಂಬ ಜನಪದ ಗಾದೆಯಲ್ಲಿ ಬರುವ ಮಡಕೆ ಶಬ್ದಕ್ಕೆ ನೇಗಿಲು ಎಂದರ್ಥ. ಶ್ರಮಿಕನಿಗೆ ಮುದ್ದೆ ನೀಡುವ ಬಲ ಹಾಗೂ ಬಾಳಿಕೆ ಅಂಬಲಿಗಿರುವುದಿಲ್ಲ ಎಂಬುದು ಅದರಿಂದ ತಿಳಿದು ಬರುತ್ತದೆ. ತೆಲುಗಿನಲ್ಲಿ ಮಡಕಾ ಎಂದರೆ ನೇಗಿಲು. ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಮಡಕೆ ಕಟ್ಟದೆ, ಇನ್ನೂ ಒಳಕ್ಕೆ ಹೊರಕ್ಕೆ ತಿರುಗ್ತಾ ಇದ್ದೀಯಲ್ಲ ?

೨೪೦೭. ಮಡಕೇಲಿ ಉಂಡು ಮೊಗೇಲಿ ಕೈತೊಳೆಯದಿರು = ಅಚ್ಚುಕಟ್ಟು ಕಲಿ, ಕಸಮಾರಿಯಾಗದಿರು.

ಮುದ್ದೆ, ಅನ್ನ, ಸಾರು ಮಾಡುವ ಮಣ್ಣಿನ ಪಾತ್ರೆಗೆ ಮಡಕೆ ಎನ್ನುತ್ತಾರೆ. ನೀರು ಕುಡಿಯಲು ಬಳಸುವ ಚೊಂಬಿನಾಕಾರದ ಮಣ್ಣಿನ ಪಾತ್ರೆಗೆ ಮೊಗೆ ಎನ್ನುತ್ತಾರೆ. ಮಡಕೆಯಲ್ಲಿರುವ ಅಡುಗೆಯನ್ನು ಗಂಗಳಕ್ಕೆ ಬಡಿಸಿಕೊಂಡು ಉಂಡು, ಹೊರಗೆ ಹೋಗಿ ಗಂಗಳ ತೊಳೆಯಬೇಕು. ಆದರೆ ಸೋಮಾರಿ ಮೈಗಳ್ಳ ಹೆಂಗಸು ಹೊರಗೆ ಹೋಗೋರ್ಯಾರು, ಗಂಗಳ ತೊಳೆಯೋರು ಯಾರು ಎಂದು ಮಡಕೆಯಲ್ಲೇ ಉಂಡು, ಮೊಗೆಯಲ್ಲಿ ಕೈ ತೊಳೆಯುವುದನ್ನು ಈ ನುಡಿಗಟ್ಟು ಲೇವಡಿ ಮಾಡುತ್ತದೆ.

ಪ್ರ : ಮಡಕೇಲಿ ಉಂಡು ಮೊಗೇಲಿ ಕೈ ತೊಳೆಯೋದು ಗ್ರಾಸ್ತೆ ಮಾಡೋ ಕೆಲಸಾನ ? ಮನೆಗೆ ಇಲ್ಲದ ದರಿದ್ರ ಬಂದುಬಿಡ್ತದೆ ಎಂದು ಅತ್ತೆ ಸೊಸೆಗೆ ಛೀಮಾರಿ ಮಾಡಿದಳು.

೨೪೦೮. ಮಡಬಾಯಿ ಕಟ್ಟು = ನೀರು ಹೋಗುವ ಕಂಡಿಯನ್ನು ಮುಚ್ಚು

(ಮಡ < ಮಡು = ಕಾಲುವೆ, ಮಡಬಾಯಿ = ಕಾಲುವೆಯ ಕಂಡಿ) ಕೆರೆಯ ಏರಿಯಲ್ಲಿರುವ ತೂಬನ್ನೆತ್ತಿ ಕಾಲುವೆಯ ಮೂಲಕ ಕೆರೆಯ ಹಿಂದಿನ ಗದ್ದೆಗಳಿಗೆ ನೀರು ಹಾಯಿಸಲಾಗುತ್ತದೆ. ಏರಿಯ ಬೆನ್ನಿಗಿರುವ ಗದ್ದೆಗಳಿಗೆ ನೀರುಣ್ಣಿಸಿದ ಮೇಲೆ, ಇನ್ನೂ ದೂರದಲ್ಲಿರುವ ಗದ್ದೆಗಳಿಗೆ ನೀರು ಕೊಂಡೊಯ್ಯಬೇಕಾದರೆ, ಮೊದಲ ಗದ್ದೆಗಳಿಗೆ ನೀರು ಬಿಡಲು ಮಾಡಿದ್ದ ಮಡಬಾಯನ್ನು ಮುಚ್ಚಬೇಕಾಗುತ್ತದೆ. ಇಲ್ಲದಿದ್ದರೆ ಕಾಲುವೆಯಲ್ಲಿ ಮುಂದಕ್ಕೆ ನೀರು ಹೋಗುವುದಿಲ್ಲ. ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಮೇಲಿನ ಗದ್ದೆಗಳ ಮಡಬಾಯನ್ನು ಕಟ್ಟದೆ, ಕಾಲುವೆಯಲ್ಲಿ ಮುಂದಿನ ಗದ್ದೆಗಳಿಗೆ ನೀರು ಹೋಗಲು ಹೇಗೆ ಸಾಧ್ಯ? ಅಷ್ಟೂ ಅರ್ಥವಾಗಲ್ವ?

೨೪೦೯. ಮಡಿಗಟ್ಟು = ಪಾತಿ ಮಾಡು

ಪ್ರ : ಸೊಪ್ಪಿನ ಬೀಜ ಚೆಲ್ಲೋದಕ್ಕೆ ಸುತ್ತಲೂ ದಿಂಡಿರುವಂತೆ ಸಣ್ಣಸಣ್ಣ ಮಡಿ ಕಟ್ಟು

೨೪೧೦. ಮಡಿಕೆ ಬಿಚ್ಚು = ಪದರ ಬಿಚ್ಚು

ಪ್ರ : ಸೀರೆ ಮಡಿಕೆ ಬಿಚ್ಚು, ಅದರೊಳಗೆ ನೂರು ರೂಪಾಯಿ ನೋಟಿಕ್ಕಿದ್ದೇನೆ, ತಗೊಂಡು ಬಾ.

೨೪೧೧. ಮಡಿ ಹೆಂಗ್ಸಿಗಿಂತ ಅತ್ತತ್ತವಾಗು = ಬೋಡಮ್ಮನಿಗಿಂತ ಮಡಿಯಲ್ಲಿ ಎತ್ತಿದ ಕೈಯಾಗು.

ಪ್ರ : ಬಾಯಿಬೀಗ ಚುಚ್ಚಿಸಿಕೊಂಡು ಕೊಂಡ ಹಾಯಬೇಕು ಅಂತ ಈವಮ್ಮ ಮಡಿ ಹೆಂಗ್ಸಿಗಿಂತ ಅತ್ತತ್ತವಾಗಿ ಹಾರಾಡ್ತಾಳೆ.

೨೪೧೨. ಮಡಿಲಕ್ಕಿ ಹುಯ್ಯಿ = ಗೌರವದಿಂದ ಹೆಣ್ಣನ್ನು ಬೀಳ್ಕೊಡು.

ಮನೆಗೆ ಬಂದ ಮುತ್ತೈದೆಯರಿಗೆ ಕೂಡಿಸಿ ಮಡಿಲಿಗೆ ಅಕ್ಕಿ, ಬೆಲ್ಲ, ಕೊಬರಿ ಅಡಿಕೆ ವೀಳ್ಯದೆಲೆ ಇಟ್ಟು, ಹಣೆಗೆ ಕುಂಕುಮವಿಟ್ಟು ಗೌರವದಿಂದ ಕಳಿಸುವ ಪದ್ಧತಿ ಇದೆ. ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಮಡಿಲಕ್ಕಿ ಹುಯ್ದು ಮುತ್ತೈದೆಯರನ್ನು ಕಳಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ, ಬೇಡ ಅನ್ನಬಾರ್ದು, ಹುಯ್ಯಿಸಿಕೋ ತಾಯಿ.

೨೪೧೩. ಮಡಿಲುದುಂಬು = ಶುಭ ಕೋರು

(ಮಡಿಲು = ಉಡಿ) ಮದುವೆಯಲ್ಲಿ ಮದುವಣಗಿತ್ತಿಯನ್ನು ಕೂಡಿಸಿ ಮಡಿಲುದುಂಬುವ ಶಾಸ್ತ್ರ ಮಾಡುತ್ತಾರೆ. ಮಡಿಲಿಗೆ ಅಕ್ಕಿ ಬೆಲ್ಲ ಕೊಬರಿ ಅಡಿಕೆ ವೀಳ್ಯದೆಲೆ ಇಟ್ಟು ತಲೆಯ ಮೇಲೆ ಅಕ್ಷತೆ ಹಾಕುತ್ತಾರೆ. ಮಡಿಲಿಗೆ ಉಡಿ ಎಂಬ ಅರ್ಥ ಇರುವಂತೆಯೇ ಕಿಬ್ಬೊಟ್ಟೆ ಯೋನಿ ಎಂಬ ಅರ್ಥವೂ ಇದೆ. ಎರಡನೆಯ ಅರ್ಥವೇ ಇಲ್ಲಿ ಪ್ರಮುಖ. ಅಂದರೆ ಬೇಗ ಗರ್ಭವತಿಯಾಗಲಿ ಎಂಬ ಸಾಂಕೇತಿಕತೆ ಈ ಶಾಸ್ತ್ರದಲ್ಲಿದೆ.

ಪ್ರ : ಮದುವೆ ಹೆಣ್ಣಿಗೆ ಮೊದಲು ಮಡಿಲುದುಂಬಿ, ಉಳಿದ ಶಾಸ್ತ್ರ ಆಮೇಲೆ.

೨೪೧೪. ಮಡಿಲಲ್ಲಿ ಹಾಕು = ಸ್ವಾಧೀನಕ್ಕೆ ಕೊಡು, ಆಶ್ರಯದಲ್ಲಿರಿಸು

(ಮಡಿಲು = ಉಡಿ, ಕಿಬ್ಬೊಟ್ಟೆ, ಆಶ್ರಯ)

ಪ್ರ : ಈ ಹುಡುಗನನ್ನು ನಿಮ್ಮ ಮಡಿಲಿಗೆ ಹಾಕಿದ್ದೀವಿ, ಅವನ ಆರಭಾರ ಎಲ್ಲ ನಿಮ್ಮದು.

೨೪೧೫. ಮಡಿ ವಲ್ಲಿ ಕೊಡು = ಒಗೆದ, ಶುಭ್ರಗೊಳಿಸಿದ ವಸ್ತ್ರ ಕೊಡು

(ಮಡಿ = ಒಗೆದು ಶುಭ್ರಗೊಳಿಸಿದ ಬಟ್ಟೆ ; ವಲ್ಲಿ = ಗಿಂಟ, ಟವೆಲ್)

ಪ್ರ : ಸ್ನಾನ ಮಾಡಿದಾಗ ಮೈ ಒರಸಿಕೊಳ್ಳೋದಕ್ಕೆ ಮಾಸಿದ ವಲ್ಲಿ ಕೊಡ್ತಾ ಇದ್ದೀಯಲ್ಲ, ಮಡಿ ವಲ್ಲಿ ಕೊಡು.

೨೪೧೬. ಮಡುಗಟ್ಟು = ಕೊಳಗೊಳ್ಳು

(ಮಡು = ಕೊಳ, ಆಳವಾದ ನೀರಿರುವ ಜಾಗ)

ಪ್ರ : ಮಡುಗಟ್ಟಿದ ಗರ್ವ ಇಳಿಯೋವರೆಗೂ ಹುಡುಗ ನೆಟ್ಟಗಾಗಲ್ಲ (ಸೋರ್ದುದು ಕೊಳಗೊಂಡ ಗರ್ವರಸಮಾ ಭರತೇಶ ಚಕ್ರವರ್ತಿಯ – ಪಂಪ)

೨೪೧೭. ಮಡ್ಡು ಉಣ್ಣಿಸು = ಮೋಸ ಮಾಡು, ಇಲ್ಲವೆಂದು ಕೈ ಎತ್ತು

(ಮಡ್ಡು < ಮೆಡ್ಡು < ಮೇಢ್ರಾ = ಶಿಘ್ನ, ಟಗರು)

ಪ್ರ : ಅವನಿಗ್ಯಾಕೆ ಸಾಲ ಕೊಟ್ಟೆ, ಮಡ್ಡು ಉಣ್ಣಿಸ್ತಾನೆ ತಗೋ

೨೪೧೮. ಮಡ್ಡು ತೋರಿಸು = ತರಡು ತೋರಿಸು, ಇಲ್ಲವೆನ್ನು

(ಮಡ್ಡು = ಒಂದು ವಾದ್ಯ ವಿಶೇಷ, ತರಡು)

ಪ್ರ : ಕೊಟ್ಟ ಸಾಲ ಕೇಳಿದ್ದಕ್ಕೆ ಮಡ್ಡು ತೋರಿಸಿ ಸೆಡ್ಡು ಹೊಡೆದು ನಿಂತ

೨೧೧೯. ಮಣ ಹೇಳು = ಸಿಕ್ಕಾಪಟ್ಟೆ ಏನೇನೊ ಹೇಳು

(ಮಣ = ಒಂದು ಅಳತೆ, ತೂಕದ ಒಂದು ಪ್ರಮಾಣ)

ಪ್ರ : ನಿನ್ನ ಬಗ್ಗೆ ಏನೇನೋ ಒಂದು ಮಣ ಹೇಳಿದ, ನಾನು ಈ ಕಿವೀಲಿ ಕೇಳಿ ಆ ಕಿವೀಲಿ ಬಿಟ್ಟೆ.

೨೪೨೦. ಮಣಕ ಕೊಡು = ಮರಿ ಕೊಡು, ಹೆಣ್ಣು ಕೊಡು

(ಮಣಕ = ಆಡು, ಕುರಿಗಳ ಪಡ್ಡೆ ಮರಿ)

ಪ್ರ : ನಾವು ನಿಮ್ಮನೆಗೆ ಹೆಮಕ (ಹೆಣ್ಣುಮಗಳು) ಕೊಟ್ಟಿದ್ದೇವೆ, ಪ್ರತಿಯಾಗಿ ನಾವೊಂದು ಮಣಕ ಕೇಳ್ತಿದ್ದೇವೆ, ಕೊಡಿ. ಕುರಿ ಕೊಟ್ಟೋರಿಗೆ ಮರಿ ಕೊಡಬೇಕಾದ್ದು ಧರ್ಮ ಅಲ್ಲವೇನು?

೨೪೨೧. ಮಣಿ ಪೋಣಿಸಿದಂತಿರು = ಅಂದವಾಗಿರು, ಕ್ರಮಬದ್ಧವಾಗಿರು

ಪ್ರ : ಇವನ ಕೈಬರಹ ಬಹಳ ಮುದ್ದಾಗಿದೆ, ಅಕ್ಷರಗಳು ಮಣಿ ಪೋಣಿಸಿದಂತಿವೆ.

೨೪೨೨. ಮಣಿಯಷ್ಟನ್ನು ಗಣಿಯಷ್ಟು ಮಾಡಿ ಹೇಳು = ಕಡ್ಡಿಯನ್ನು ಗುಡ್ಡವನ್ನಾಗಿ ಮಾಡಿ ಹೇಳು.

ಪ್ರ : ಮಣಿಯಷ್ಟನ್ನು ಗಣಿಯಷ್ಟು ಮಾಡಿ ಹೇಳೋದ್ರಲ್ಲಿ ಇವನ್ನ ಬಿಟ್ರೆ ಮತ್ತೊಬ್ಬರಿಲ್ಲ.

೨೪೨೩. ಮಣ್ಣಿಗೆ ಮಣ್ಣು ತಿನ್ನಿಸು = ಹೆಣಗಿಸು, ಯಮಹಿಂಸೆ ಕೊಡು

ಪ್ರ : ಆ ಮನೆಹಾಳ ನಾನು ತಣ್ಣಗಿರೋದಕ್ಕೆ ಬಿಡಲಿಲ್ಲ, ಮಣ್ಣಿಗೆ ಮಣ್ಣು ತಿನ್ನಿಸಿಬಿಟ್ಟ.

೨೪೨೪. ಮಣ್ಣಿಗೆ ಹೋಗು = ಉತ್ತರ ಕ್ರಿಯೆಗೆ ಹೋಗು, ಹೆಣವನ್ನು ಮಣ್ಣು ಮಾಡಲು ಹೋಗು

ಪ್ರ : ಗೌಡರ ಮಣ್ಣಿಗೆ ಹೋಗಿ, ಈಗ ತಾನೇ ಮನೆಗೆ ಬಂದೆ.

೨೪೨೫. ಮಣ್ಣುಗೂಡಿಸು = ಹಾಳು ಮಾಡು

ಪ್ರ : ಅಪ್ಪ ಸಂಪಾದಿಸಿದ್ದನ್ನೆಲ್ಲ ಮಗ ಮಣ್ಣುಗೂಡಿಸಿ ಬಿಟ್ಟ.

೨೪೨೬. ಮಣ್ಣು ತಿಂದು ಬಾಯಿ ತೊಳೆದುಕೊಳ್ಳು = ತಪ್ಪು ಮಾಡಿ ತಿದ್ದಿಕೊಳ್ಳು

ಪ್ರ : ಮಣ್ಣು ತಿಂದು ಬಾಯಿ ತೊಳೆದುಕೊಂಡಿದ್ದೇನೆ, ಇನ್ನು ಅಂಥವನ್ನು ಮಾಡೋದಿಲ್ಲ.

೨೪೨೭. ಮಣ್ಣು ಮಾಡು = ಸತ್ತವರನ್ನು ಹೂಳು

ಪ್ರ : ಮಣ್ಣು ಮಾಡಿದ ಮೇಲೆ ಮನೆಗೆ ಬಂದು ದೀಪ ನೋಡಿ ಅವರವರ ಊರಿಗೆ ಹೋಗಬೇಕು, ದೀಪ ನೋಡದೆ ಹೋಗಬಾರ್ದು.

೨೪೨೮. ಮಣ್ಣು ಮುಕ್ಕು = ಮೋಸ ಹೋಗು

(ಮುಕ್ಕು = ಬುಕ್ಕು, ತಿನ್ನು)

ಪ್ರ : ಅಪ್ಪಂಥೋನು ಅಂತ ಅವನ ಜೊತೆ ಜಂಟಿ ವ್ಯವಹಾರ ಮಾಡಿ ಮಣ್ಣು ಮುಕ್ಕಿದೆ.

೨೪೨೯. ಮಣ್ಣುಮುಕ್ಕಂಗೆ ಹೆದರಿಕೊಳ್ಳು = ಎರೆಹುಳವನ್ನು ಹಾವಿನ ಮರಿ ಎಂದು ಭಯಪಡು

(ಮಣ್ಣುಮುಕ್ಕ = ಎರೆಹುಳ) ಎರೆಹುಳ ಸಾಮಾನ್ಯವಾಗಿ ಶ್ಯಾವಿಗೆ ಎಳೆಯ ಗಾತ್ರವಿದ್ದು ಕಂದ ಬಣ್ಣ ಹೊಂದಿರುತ್ತದೆ. ಸದಾ ಮಣ್ಣಿನೊಳಗೆ ಇರುತ್ತದೆ. ಆದ್ದರಿಂದಲೇ ಇದಕ್ಕೆ ಮಣ್ಣುಮುಕ್ಕ ಎಂಬ ಹೆಸರು ಬಂದಿದೆ. ಪಂಡಿತಕವಿಗಳು ಅಚ್ಚಕನ್ನಡ ಶಬ್ದ ಬಳಸಿದರೆ ಮುಕ್ಕಾಗಿ ಬಿಡುತ್ತದೆಂದು ಅದನ್ನು ‘ಭೂನಾಗ’ ಎಂದು ಕರೆದಿದ್ದಾರೆ, ನಾಯಿಯನ್ನು ‘ಗ್ರಾಮಸಿಂಹ’ ಎಂದು ಕರೆದಂತೆ. ಗಾಳ ಹಾಕಿ ಮೀನು ಹಿಡಿಯುವವರು ಗಾಳದ ಕೊಕ್ಕೆಗೆ ಮಣ್ಣುಮುಕ್ಕನನ್ನು ಸಿಕ್ಕಿಸುತ್ತಾರೆ, ಮೀನುಗಳನ್ನು ಸೆಳೆಯುವ ದೀಹದ ಜೀವಿಯಾಗಿ.

ಪ್ರ : ಮಣ್ಣುಮುಕ್ಕನಿಗೆ ಹೆದರಿಕೊಳ್ತೀಯಲ್ಲ, ಎಂಥ ಪುಕ್ಕಲೆದೆಯ ಮುಕ್ಕ (< ಮೂರ್ಖ)ನೋ ನೀನು ?

೨೪೩೦. ಮಣೆ ಹಾಕು = ಶ್ರದ್ಧೆ ಪ್ರೀತಿ ತೋರಿಸು

(ಮಣೆ = ಮನೆಗೆ ಬಂದವರಿಗೆ ಗೌರವದ ಸಂಕೇತವಾಗಿ ಕುಳಿತುಕೊಳ್ಳಲು ಕೊಡುತ್ತಿದ್ದ ಮೊಳದುದ್ದದ ನಯವಾದ ಹಲಗೆ)

ಪ್ರ : ಮೊದಲ ಸಲ ಅಳಿಯ ಮನೆಗೆ ಬಂದಿದ್ದಾರೆ, ಕುಂತುಕೊಳ್ಳೋಕೆ ಮಣೆ ಹಾಕು.

೨೪೩೧. ಮಣೆ ನೂಕು = ಕಾಟಾಚಾರದ ಪ್ರೀತಿ ತೋರಿಸು

ಪ್ರ : ಅಳಿಯ ಏನೂ ಹೊಸದಾಗಿ ಬರ್ತಾ ಅವರ ? ಮಣೆ ನೂಕು, ಸಾಕು

೨೪೩೨. ಮಣೇವು ಹಾಕು = ದೇವರ ಸೇವೆ ಮಾಡು.

(ಮಣೇವು < ಮಣಿಹ = ನಮಸ್ಕಾರ) ಸಾಮಾನ್ಯವಾಗಿ ವಿಷ್ಣುಭಕ್ತರಾದ ‘ದಾಸಯ್ಯಗಳು’, ಶಿವಭಕ್ತರಾದ ‘ಗೊರವಯ್ಯಗಳು’ ಹಾಸಿದ ಬಟ್ಟೆಯ ಮೇಲೆ ಜನರು ತಂದು ಸುರಿದಿರುವ ಬಾಳೇಹಣ್ಣು ಹಲಸಿನ ತೊಳೆ ಬೆಲ್ಲದಿಂದೊಡಗುಡಿದ ರಸಾಯನವನ್ನು ಕೈಯಲ್ಲಿ ತಿನ್ನದೆ ಬಾಯಿ ಹಾಕಿ ಬಕಬಕನೆ ತಿನ್ನುತ್ತಾರೆ, ಮೈದುಂಬಿದವರಂತೆ. ದೇವರಿಗೆ ಪರಾಕು ಹೇಳುತ್ತಾ ಮಂಡಿಯೂರಿ, ದೇವರಪ್ರಸಾದವಾದ ಆ ರಸಾಯನವನ್ನು ತಿನ್ನುವುದಕ್ಕೆ ಮಣೇವು ಹಾಕುವುದು ಎನ್ನುತ್ತಾರೆ.

ಪ್ರ : ಮಣೇವು ಹಾಕಿದಾಗ ರಾಶಿ ರಸಾಯನವನ್ನು ಬರಿದು ಮಾಡ್ತಾರಲ್ಲ, ಅವರ ಹೊಟ್ಟೇಲಿ ಏನು ದೆವ್ವ ಕೂತದ?

೨೪೩೩. ಮಣ್ಣೆ ಕೊಡು = ಮಾನ್ಯತೆ ಕೊಡು

(ಮಣ್ಣೆ < ಮನ್ನಣೆ = ಮಾನ್ಯತೆ, ಗೌರವ)

ಪ್ರ : ಮಣ್ಣೆ ಕೊಟ್ಟೋರಿಗೇ ತುಣ್ಣೆ ತೋರಿಸಿ ಹೋದ ಕ್ರಿಯಾಭ್ರಷ್ಟ.

೨೪೩೪. ಮತನ ಉಂಟಾಗು = ಸಂಘರ್ಷ ಉಂಟಾಗು, ಜಗಳವಾಗು

(ಮತನ < ಮಥನ < ಮಂಥನ = ಕಡೆತ ; ಸಮುದ್ರ ಮಥನದ ಪೌರಾಣಿಕ ಹಿನ್ನೆಲೆಯದು)

ಪ್ರ : ನಮಗೂ ದಾಯಾದಿಗಳಿಗೂ ದೊಡ್ಡ ಮತನವೇ ಆಗಿ ಹೋಯ್ತು.

೨೪೩೫. ಮತ್ತು ಬರು = ನಿಶೆ ಏರು

(ಮತ್ತು = ಅಮಲು)

ಪ್ರ : ಗಂಟಲಮಟ್ಟ ಕುಡಿದು ಮತ್ತು ಬಂದು ಮಲಗ್ಯವನೆ

೨೪೩೬. ಮದ ಬಂದು ಮಲೆಯುತ್ತಿರು = ಅಹಂಕಾರದಿಂದ ಬೀಗುತ್ತಿರು, ಎಮ್ಮೆಯಂತೆ ತೆಮಲುತ್ತಿರು (< ತೆವಳು -ತ್ತಿ-ರು)

(ಮಲೆ = ಸೇಗಿನಿಂದ ಬೀಗು, ಕೊಬ್ಬಿನಿಂದ ಉಬ್ಬು; ಮದ = ನೆಣ, ಅಹಂಕಾರ)

ಪ್ರ : ಮುಖ್ಯಮಂತ್ರಿ ಮಗ ಮದ ಬಂದು ಮಲೀತಾ ಇದ್ದಾನೆ.

೨೪೩೭. ಮದುಕದ ಮರವಾಗಿರು = ಇಬ್ಬರಿಗೂ ಸೇರಿದ ವೃಕ್ಷವಾಗಿರು

(ಮದುಕದ = ಎರಡು ಜಮೀನುಗಳ ಮಧ್ಯದ)

ಪ್ರ : ಮದುಕದ ಮರವಾದ್ದರಿಂದ ಅದರ ಫಲವನ್ನು ಇಬ್ಬರೂ ಸಮಾನವಾಗಿ ಹಂಚಿಕೊಳ್ಳಬೇಕು.

೨೪೩೮. ಮನಸ್ಸು ಪಿಚ್ಚೆನ್ನಿಸು = ಬಿಕೋ ಎನ್ನು, ಹಾಳು ಸುರಿದಂತಾಗು

(ಪಿಚ್ < ಪಿಚ್ಚೆ = ಸಣ್ಣದು, ಜೊಳ್ಳು)

ಪ್ರ : ಹೆಂಡ್ತಿ ತೌರಿಗಟ್ಟಿದ ಮೇಲೆ ಮನಸ್ಸೂ ಪಿಚ್ಚೆನ್ನಿಸ್ತಾ ಇದೆ, ಮನೆಯೂ ಪಿಚ್ಚೆನ್ನಿಸ್ತಾ ಇದೆ.

೨೪೩೯. ಮನೆ ಎಕ್ಕುಟ್ಟಿ ಹೋಗು = ಹಾಳಾಗು, ಹಾಳು ಬೀಳು

(ಎಕ್ಕುಟ್ಟಿ < ಎಕ್ಕ + ಹುಟ್ಟಿ = ಎಕ್ಕದ ಗಿಡ ಹುಟ್ಟಿ, ಅಂದರೆ ಮನೆ ಪಾಳು ಬಿದ್ದು ಅಲ್ಲಿ ಎಕ್ಕದ ಗಿಡ ಹುಟ್ಟಲಿ ಎಂಬ ಆಶಯ)

ಪ್ರ : ಅಳಿಯನಿಂದಾಗಿ ಮಾವನ ಮನೆ ಎಕ್ಕುಟ್ಟಿ ಹೋಯ್ತು.

೨೪೪೦. ಮನೆ ಕಾಯವಾಗಿ ಹೋಗು = ಮನೆ ಹಾಳಾಗು, ನೆಲಸಮವಾಗು

(ಕಾಯವಾಗು < ಕಾಲವಾಗು = ನಾಶವಾಗು, ಹಾಳಾಗು) ಕಾಲವಾಗು ಎಂದರೆ ಮರಣ ಹೊಂದು, ಇಲ್ಲವಾಗು ಎಂದರ್ಥ. ಕಾಲವಾಗು ಎಂಬುದೇ ಜನರ ಉಚ್ಚಾರಣೆಯಲ್ಲಿ ಕಾಯವಾಗು ಎಂದಾಗಿದೆ. ಕೆಲವು ಮಕ್ಕಳು ಖಾರ ಎನ್ನುವುದಕ್ಕೆ ಖಾಯ ಎಂದೂ, ಸಾರು ಎನ್ನುವುದಕ್ಕೆ ಸಾಯು ಎಂದೂ ಗಾಳಿ-ಪ-ಟ-ದ ಬಾಲಂ-ಗೋ-ಚಿ-ಯ-ನ್ನು ‘ಬಾಯಂ-ಗೋ-ಚಿ’ ಎಂದೂ ಉಚ್ಚರಿಸುತ್ತವೆ. ರಕಾರಕ್ಕೆ ಯಕಾರ ಬಂದಂತೆ ಜನರ ಬಾಯಲ್ಲಿ ಲಕಾರ ಯಕಾರವಾಗಿದೆ ಅಷ್ಟೆ.

ಪ್ರ : ಅಯ್ಯೋ ನಿನ್ನ ಮನೆ ಕಾಯವಾಗಿ ಹೋಗ ! ಇಷ್ಟು ಗಾತ್ರ ಹೊರೇನ ಹೊತ್ಕೊಂಡು ಬರೋದು?

೨೪೪೧. ಮನೆಕೂಲಿಸು = ಮನೆಕುಸಿಯುವಂತೆಮಾಡು, ನೆಲಸಮಮಾಡು (ಕೂಲ = ದಡ; ಕೂಲಿಸು = ದಡಕುಸಿಯುವಂತೆಮಾಡು)

ಪ್ರ: ಮನೆಪಾಲಿಸ್ತೀನಿಅಂತಯಜಮಾನಿಕೆವಹಿಸಿಕೊಂಡೋನು, ಮನೆಕೂಲಿಸಿಬಿಟ್ಟ.

೨೪೪೨. ಮನೆಗುಡಿಸಿಗುಂಡಾಂತರಮಾಡು = ಬರಿ-ದುಮಾಡು, ಹಾಳುಮಾಡು.

ಪ್ರ: ಹೊಟ್ಟೆಕಿಚ್ಚಿನಜನಅವನಮನೇನಗುಡಿಸಿಗುಂಡಾಂತರಮಾಡಿಬಿಟ್ರು.

೨೪೪೩. ಮನೆತೊಳೆ = ಬರಿದುಮಾಡು, ಎಲ್ಲವನ್ನೂಖಾಲಿಮಾಡಿತೊಳೆದುಬಿಡು.

ಪ್ರ: ಅಳಿಯಮನೆತೊಳೆಯಅನ್ನೋಗಾದೆಯಂತೆಅಳಿಯಮಾವನಮನೆತೊಳೆದುಬಿಟ್ಟ.

೨೪೪೪. ಮನೆಚೊಕ್ಕಟಮಾಡು = ಏನೂಇಲ್ಲದಂತೆಮಾಡು, ಗುಡಿಸಿಹಾಕು

ಪ್ರ: ಅಪ್ಪಸಂಪಾದಿಸಿದ್ದನ್ನೆಲ್ಲಮಗಅನಾಮತ್ತುಚೊಕ್ಕಟಮಾಡಿಬಿಟ್ಟ.

೨೪೪೫. ಮನೆದೀಪಹಚ್ಚು = ವಂಮುಂದುವರಿ, ಸಂತಾನಭಾಗ್ಯಸಭಿಸು

ಮನೆಗೆದೀಪಹಚ್ಚುವುದುವಂಶದಸಾತತ್ಯವನ್ನುಸೂಚಿಸುತ್ತದೆ. ನಮ್ಮವಂಶಇಲ್ಲಿಗೆನಿಲ್ಲಬಾರದು, ಸಾರೋದ್ಧಾರವಾಗಿಮುಂದುವರಿಯಬೇಕುಎಂಬಆಸೆದೀಪಹಚ್ಚುವಶುಭಕಾಮನೆಯಿಂದಕಂಡರಣೆಗೊಂಡಿದೆ.

ಪ್ರ: ಮನೆದೀಪಹಚ್ಚೋಕೆಒಂದುವಂಶದಕುಡಿಹುಟ್ಟಿತು, ದೇವರದಯ.