೨೬೯೦. ಯಕ್ಷಿಣಿ ಎತ್ತು = ವೇಷ ತಾಳು, ನಟನೆ ಮಾಡು

ಪ್ರ : ಯಕ್ಷಿಣಿ ಎತ್ತೋದ್ರಲ್ಲಿ ಅವಳು ಎತ್ತಿದ ಕೈ.

೨೬೯೧. ಯಜಮಾನನಾಗು = ಗಂಡನಾಗು

(ಯಜಮಾನ = ಯಾಗಾಧಿಪತಿ, ಒಡೆಯ)

ಪ್ರ : ಗಂಡ ಯಜಮಾನ ಆದರೆ ಹೆಂಡ್ರು ಯಜಮಾನಿ ಆಗಲ್ವ?

೨೬೯೨. ಯತ್ನದಪ್ಪು = ಅಸಂದರ್ಪಾಗು, ಅನಾನುಕೂಲವಾಗು

ಪ್ರ : ಎಂಥವರಿಗೂ ಯತ್ನದಪ್ತದೆ, ಸಹಿಸಿಕೊಂಡು ಹೋಗಬೇಕು.

೨೬೯೩. ಯಾಕ್ಮಣೆ ಎನ್ನು = ಪೂರ್ಣ ಅಸಡ್ಡೆ ತೋರಿಸು

ಅತ್ತೆಯ ಮನೆಗೆ ಅಳಿಯ ಮೊದಲ ಸಲ ಬಂದಾಗ ಮುತುವರ್ಜಿಯಿಂದ ಮಣೆ ಹಾಕುತ್ತಾರೆ, ಎರಡನೆಯ ಸಲ ಬಂದಾಗ ಕಾಟಾಚಾರದ ಗೌರವ ತೋರಿಸುವಂತೆ ಮಣೆ ನೂಕುತ್ತಾರೆ. ಮೂರನೆಯ ಸಲ ಬಂದಾಗ ಮಣೆ ಯಾಕೆ ಎಂದು ಸುಮ್ಮನಿದ್ದು ಬಿಡುತ್ತಾರೆ. ಸ್ನೇಹ ಅಥವಾ ಪ್ರೇಮ ಅಥವಾ ಸಂಬಂಧದ ಹೊಸದರಲ್ಲಿ ತೋರುವ ಶ್ರದ್ಧೆ ಆಸಕ್ತಿಯನ್ನೂ, ಸ್ವಲ್ಪ ಹಳತಾದ ಮೇಲೆ ತೋರುವ ಕಾಟಾಚಾರದ ಆಸಕ್ತಿಯನ್ನೂ, ಪೂರ್ಣ ಹಳತಾದ ಮೇಲೆ ತೋರುವ ಪೂರ್ಣ ಅಸಡ್ಡೆಯನ್ನೂ ಸೂಚಿಸುವ ನುಡಿಗಟ್ಟಾಗಿದೆ.

ಪ್ರ : ಗಾದೆ – ಹಾಕ್ಮಣೆ, ನೂಕ್ಮಣೆ, ಯಾಕ್ಮಣೆ.

೨೬೯೪. ಯಾಕಾಸಿಯಾಗು = ಉಪವಾಸವಾಗು

(ಯಾಕಾಸಿ < ಏಕಾದಶಿ = ಉಪವಾಸವ್ರತದ ದಿನ)

ಪ್ರ : ಇವತ್ತು ಯಾಕಾಸಿಯಾದ್ರಿಂದ ನನ್ನ ಭವನಾಸಿ ಖಾಲಿ

೨೬೯೫. ಯಾತ ಎತ್ತೋಕೆ ಹೋಗು = ಮಲವಿಸರ್ಜನೆಗೆ ಹೋಗು

(ಯಾತ < ಏತ = ನೀರೆತ್ತುವ ಸಾಧನ)

ಪ್ರ : ಇಲ್ಲೇ ಯಾತ ಎತ್ತೋಕೆ ಹೋಗ್ಯವನೆ, ಬರ್ತಾನೆ ಕೂತ್ಕೋ

೨೬೯೬. ಯಾಜ್ಯ ತೆಗಿ = ಕಾಲು ಬೆರೆದು ಕ್ಯಾತೆ ತೆಗಿ

(ಯಾಜ್ಯ < ವ್ಯಾಜ್ಯ = ಜಗಳ)

ಪ್ರ : ಯಾಜ್ಯ ತೆಗೀದಿದ್ರೆ ಅವನ ಗಂಟ್ಲಲ್ಲಿ ಅನ್ನ ಇಳಿಯಲ್ಲ.

೨೬೯೭. ಯಾದಿಯಿಂದ ನರಳು = ಕಾಯಿಲೆಯಿಂದ ನಲುಗು

(ಯಾದಿ < ವ್ಯಾಧಿ = ಕಾಯಿಲೆ, ಕಸಾಲೆ)

ಪ್ರ : ಗಾದೆ – ದಾದೀನೋ ಮೈಮೇಲಿನ ಯಾದೀನೋ ? (ದಾದಿ < ದಾಯಾದಿ)

೨೬೯೮. ಯಾಪಾರ ಕುದುರು = ಒಗ್ಗು, ಏಳ್ಗೆ ಹೊಂದು

(ಯಾಪಾರ < ವ್ಯಾಪಾರ ; ಕುದುರು = ಅಭಿವೃದ್ಧಿಗೊಳ್ಳು)

ಪ್ರ : ಯಾಪಾರವೇನೋ ಕುದುರಿತು, ಆದರೆ ಇದ್ದಕ್ಕಿದಂತೆ ಬೆಲೆ ಇಳೀತು

೨೬೯೯. ಯಾಮಾರ = ಎಚ್ಚರದಪ್ಪು, ಮೈಮರೆ

(ಯಾಮಾರು < ಏಮಾರು < ಏಮಾರ್ (ತ) > ವೇಮಾರು (ಪಂಪ) = ಎಚ್ಚರದಪ್ಪು)

ಪ್ರ : ನಾನು ಯಾಮಾರಿದ್ದರಿಂದ ಇಷ್ಟೆಲ್ಲ ರಾದ್ಧಾಂತವಾಯ್ತು.

೨೭೦೦. ಯಾವಾರ ಆಗು = ವ್ಯವ-ಹಾ-ರ ಜರು-ಗು, ಜಗಳವಾಗು

(ಯಾವಾರ < ವ್ಯವಹಾರ = ವ್ಯವಹಾರ ಸಂಬಂಧದಲ್ಲಿ ಜಗಳವಾಗು)

ಪ್ರ : ಗಾದೆ – ಯಾವಾರಕ್ಕೆ ಯಾ ವಾರಾದ್ರೇನು? (ವಾರ = ದಿನ)

ಯಾಪಾರಕ್ಕೆ ಯಾ ಪಾರಾದ್ರೇನು? (ಪಾರ = ತೀರ)

೨೭೦೧. ಯಾವೂರ ದಾಸಯ್ಯ ಎನ್ನದಿರು = ವಿಚಾರಿಸದಿರು, ಮಾತಾಡಿಸದಿರು

ವೈಷ್ಣವ ಭಕ್ತಿಯ ದಾಸ ಪರಂಪರೆಯಿಂದಾಗಿ ‘ದಾಸ’ ‘ದಾಸಯ್ಯ’ ಶಬ್ದಗಳು ಸಮಾಜದಲ್ಲಿ ಚಾಲ್ತಿಗೆ ಬಂದವು. ಇದಕ್ಕೆ ಮೊದಲು ಶೈವ ಭಕ್ತಿಯ ವಗ್ಗಯ್ಯ, ಗೊಗ್ಗಯ್ಯ, ಗೊರವಯ್ಯ ಶಬ್ದಗಳು ಚಾಲ್ತಿಯಲ್ಲಿದ್ದವು. ‘ಗಂಡ ಗೊರವಯ್ಯನಿಗೆ ಇಕ್ಕಿಸಿದರೆ ಹೆಂಡ್ರು ದಾಸಯ್ಯನಿಗೆ ಇಕ್ಕಿಸ್ತಾಳೆ’ ಎಂಬ ಗಾದೆ ಮಾತು ಶೈವ ವೈಷ್ಣವದ ತಿಕ್ಕಾಟವನ್ನು ಸೂಚಿಸುತ್ತದೆ. ಗೊರವಯ್ಯನನ್ನು ವಿಚಾರಿಸಿಕೊಳ್ಳುವ ಹಾಗೂ ದಾಸಯ್ಯನನ್ನು ವಿಚಾರಿಸಿಕೊಳ್ಳುವ ಜನಸಮುದಾಯ ಇದ್ದೇ ಇರುತ್ತದೆ. ಆ ನಿಟ್ಟಿನಲ್ಲಿ ಮೂಡಿರುವ ನುಡಿಗಟ್ಟಿದು.

ಪ್ರ : ಅವರ ಮನೆ ಮದುವೆಗೆ ಹೋದ್ರೆ, ಯಾವೂರ ದಾಸಯ್ಯ ಅಂದೋರಿಲ್ಲ.

೨೭೦೨. ಯಾಸ್ ಮಾತಾಡು = ಅರ್ಥವಾಗದ ಮಾತಾಡು

(ಯಾಸ < ವೇಷ = ಸಹಜವಲ್ಲದ್ದು)

ಪ್ರ : ಗಾದೆ – ಯಾಸ್ಮಾತು ಏಸಾಡಿದ್ರೇನು?

ಯಾಸ್ಮುಂಡೆ ಈಸಾಡಿದ್ರೇನು?

೨೭೦೩. ಯಾಸೆಟ್ಟೆಗೋ ಬಿಡು = ಹೋಗಲಿ ಬಿಡು, ಮನ್ನಿಸು.

(ಯಾಸೆಟ್ಟೆಗೂ < ಯಾವ + ಸಿಟ್ಟಿಗೊ ಅಥವಾ ಯಾವ + ಸೆಟ್ಟಿಗೊ)

ಪ್ರ : ಪಾಪ ಬಡವ, ಮಕ್ಕಳೊಂದಿಗ, ಯಾಸೆಟ್ಟೆಗೋ ಬಿಡು.

೨೭೦೪. ಯಾಳ್ಯಕ್ಕಾಗು = ಸಮಯಕ್ಕಾಗು, ಕಷ್ಟಕಾಲದಲ್ಲಿ ನೆರವಾಗು

(ಯಾಳ್ಯ < ವ್ಯಾಳ್ಯ < ವೇಳೆ = ಸಮಯ, ಹೊತ್ತು)

ಪ್ರ : ಗಾದೆ – ಯಾಳ್ಯಕ್ಕಾದೋನು ನೆಂಟ

ಯಾಜ್ಯಕ್ಕಾದೋನು ಬಂಟ

೨೭೦೫. ಯೋಗವಿರು = ಅದೃಷ್ಟವಿರು

ಪ್ರ : ಗಾದೆ – ಯೋಗವಿದ್ದಷ್ಟೇ ಭೋಗ