೨೧೪೯. ಬ್ರಹ್ಮ ರಂದ್ರಕ್ಕೇರು = ನೆತ್ತಿಸುಳಿಗೇರು

(ಬ್ರಹ್ಮರಂದ್ರ = ಯೋಗದಲ್ಲಿ ಇದನ್ನು ಸಹಸ್ರಾರ ಚಕ್ರ ಎನ್ನುತ್ತಾರೆ)

ಪ್ರ : ಅವನ ಮುಖ ನೋಡಿದರೆ ಅಷ್ಟೇ ಅಲ್ಲ, ಅವನ ಹೆಸರು ಕೇಳಿದರೂ ನನ್ನ ಸಿಟ್ಟು ಬ್ರಹ್ಮರಂದ್ರಕ್ಕೇರಿಬಿಡ್ತದೆ.

೨೧೫೦. ಬಾಗಿಲು ಹಿಡಿಸದಿರು = ಧಡೂತಿಯಾಗಿರು

ಪ್ರ : ಬಾಗಿಲು ಹಿಡಿಸದಂಥ ಹೆಬ್ಬಾರುವರು ಭೋಜನ ಮುಗಿಸಿಕೊಂಡು ಗುಜ್ಜಾನೆಗಳಂತೆ ಹೆಜ್ಜೆ ಹಾಕುತ್ತಾ ಹೊರಬಂದರು.

೨೧೫೧. ಬಾಚಿಕೊಳ್ಳು = ದೋಚಿಕೊಳ್ಳು

ಪ್ರ : ಗಾದೆ – ಬಾಚ್ಕೊಂಡೋನು ಬಲಾಢ್ಯನಾದ

ನೀಚ್ಕೊಂಡೋನು ನಿರ್ಗತಿಕನಾದ

೨೧೫೨. ಬಾಜಲು ಬಾಜಲಾಗಿರು = ಜಾಳು ಜಾಳಾಗಿರು, ಮುಟ್ಟಿದರೆ ಜಿಬಜಿಬ ಎನ್ನು

(ಬಾಜಲು < ಜಾಬಲು < ಜಬ್ಬಲು = ನಿಸ್ಸಾರ ತೊಸಗಲು ನೆಲ, ಗಟ್ಟಿಯಿಲ್ಲದೆ ಮುಟ್ಟಿದರೆ ಸಿಂಬಳದಂತೆ ಕೈಗೆ ಮೆತ್ತಿಕೊಳ್ಳುವ ಪದಾರ್ಥ)

ಪ್ರ : ಬಡಗುರಿ ಬಾಡು ಬಾಜಲು ಬಾಜಲಾಗಿರ್ತದೆ, ಅದನ್ನು ತರೋದು ಬೇಡ.

೨೧೫೩. ಬಾಜಿ ಕಟ್ಟು = ಪಂಥ ಕಟ್ಟು, ಪಂದ್ಯಕ್ಕೆ ಹಣ ಕಟ್ಟು

ಪ್ರ : ಮೊದಲು ಬಾಜಿ ಕಟ್ಟಿ, ಆಮೇಲೆ ಎಲೆಗೆ ಕೈ ಹಾಕು

೨೧೫೪. ಬಾಡಿಸಿಕೊಳ್ಳು = ರುಚಿ ಬದಲಾವಣೆಗೆ ನಂಚಿಕೊಳ್ಳು

ಪ್ರ : ಕೈಮಾ ಉಂಡೆ ಬಾಡಿಸಿಕೊಂಡು ಮದ್ಯಪಾನ ಮಾಡತೊಡಗಿದರು.

೨೧೫೫. ಬಾಣಲಿಯಿಂದ ಬೆಂಕಿಗೆ ಬೀಳು = ಸಣ್ಣ ತೊಂದರೆಯಿಂದ ಪಾರಾಗಲು ಹೋಗಿ ದೊಡ್ಡ ತೊಂದರೆಗೆ ಒಳಗಾಗು.

ಬಾಣಲಿಯಲ್ಲಿ ಹುರಿಯುವ ಕಾಳು, ಕಾವನ್ನು ಸಹಿಸಿಕೊಳ್ಳಲಾಗದೆ ಬಾಯ್ಬಿಟ್ಟು ಅವಲಾಗಿ ಸಿಡಿದು ಒಲೆಯ ಬೆಂಕಿಗೆ ಬಿದ್ದರೆ ಸೀದು ಕರಕಲಾಗುತ್ತದೆ, ಬೂದಿಯಾಗುತ್ತದೆ. ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಯೋಚನೆ ಮಾಡಿ ಮುಂದಕ್ಕೆ ಹೆಜ್ಜೆ ಇಡು, ಬಾಣಲಿಯಿಂದ ಬೆಂಕಿಗೆ ಬೀಳಬೇಡ.

೨೧೫೬. ಬಾತುಕೊಳ್ಳು = ಊದಿಕೊಳ್ಳು, ಕೀವು ತುಂಬಿ ಬಾಧೆ ಕೊಡು

ಪ್ರ : ಮುಳ್ಳು ಚುಚ್ಚಿಕೊಂಡಿತ್ತಲ್ಲ, ಅಲ್ಲಿ ಬಾತುಕೊಂಡು ತಟತಟ ಅಂತಾ ಇದೆ.

೨೧೫೭. ಬಾನ ಇಕ್ಕಿ ಬಣ್ಣ ಕಳಿ = ಊಟಕ್ಕಿಟ್ಟು ಮಾನ ಕಳಿ

(ಬಾನ < ಬೋನ < ಭೋಜನ = ಅನ್ನ, ಊಟ; ಬಣ್ಣ ಗೌರವ)

ಪ್ರ : ಬಾನ ಇಕ್ಕಿ ಬಣ್ಣ ಕಳಿಯಾಕೆ ಪಳಾನು ಮಾಡ್ಯವರೆ, ಅವರ ಮನೆಗೆ ಹೋದುಗೀದಿಯ.

೨೧೫೮. ಬಾನಿ ತುಂಬು = ಹೊಟ್ಟೆಗೆ ತುಂಬು, ಉಣ್ಣು

(ಬಾನಿ = ದೊಡ್ಡ ಮಣ್ಣಿನ ಪಾತ್ರೆ ; ಇಲ್ಲಿ ಹೊಟ್ಟೆ ಎಂಬ ಅರ್ಥದಲ್ಲಿ ಬಳಕೆಯಾಗಿದೆ) ಮಣ್ಣಿನ ಪಾತ್ರೆಗಳ ಏರಿಕೆ ಕ್ರಮವನ್ನು ಗಮನಿಸಿದರೆ ‘ಬಾನಿ’ ಯಾವ ಪ್ರಮಾಣದ್ದು ಅಥವಾ ಗಾತ್ರದ್ದು ಎಂಬುದು ಅರ್ಥವಾಗುತ್ತದೆ : ಮೊಗೆ, ಕರಗಡಿಗೆ, ಗಡಿಗೆ, ಹರವಿ, ಬಾನಿ, ಕೂನಿ, ಗುಡಾಣ, ವಾಡೆ.

ಪ್ರ : ನಿನ್ನ ಬಾನಿ ತುಂಬಿಬಿಟ್ರೆ ಸಾಕು, ಉಳಿದೋರ ಪಾಡು ಏನಾದ್ರೂ ನಿನಗೆ ಚಿಂತೆ ಇಲ್ಲ.

೨೧೫೯. ಬಾಯಾಡಿಸು = ತಿನ್ನು, ಕುರುಕುತೀನಿ ಕುರುಕು

ಪ್ರ : ನನಗೆ ಕೊಡದೆ, ನೀನೊಬ್ಬನೇ ಬಾಯಾಡಿಸ್ತಿದ್ದೀಯಲ್ಲ

೨೧೬೦. ಬಾಯಿ ಕಿಸಿ = ನಗು

(ಕಿಸಿ = ಅಗಲಿಸು)

ಪ್ರ : ಮನಸ್ಸನ್ನೆಲ್ಲ ಕಸಿವಿಸಿ ಮಾಡಿ, ಕೊನೆಗೀಗ ಬಾಯಿ ಕಿಸೀತಾಳೆ, ಸಾಬಸ್ತೆ ಅನ್ನೋ ಹಂಗೆ.

೨೧೬೧. ಬಾಯಿ ಕಿಸಿದು ಉಗಿ = ಬಾಯಿ ಹಿಸಿ-ದು ಗಂಟಲಿಗೆ ಉಗಿ, ಛೀಮಾರಿ ಮಾಡು

ಪ್ರ : ಅವನ ಛೀಕುನ್ನಿ ಬುದ್ಧಿ ಕಂಡು, ಬಾಯಿ ಕಿಸಿದು ಉಗಿದು ಬಂದಿದ್ದೀನಿ.

೨೧೬೨. ಬಾಯಿಗಿಕ್ಕು = ಅನ್ಯಾಯವಾಗಿ ತೆರು, ದಂಡವಾಗಿ ಕೊಡು

ಸತ್ತ ಹೆಣದ ಬಾಯಿಗೆ ಅಕ್ಕಿ ತುಂಬುತ್ತಾರೆ ಅಥವಾ ಬಾಯತಂಬುಲವನ್ನು ಇಕ್ಕುತ್ತಾರೆ – ಉಸಿರು ಹೋಗುವಾಗ ಬಾಯಿ ವಿಕೃತಗೊಂಡಿರಬಹುದು, ಅದನ್ನು ನೋಡಿ ಮಕ್ಕಳು ಹೆದರಿ ಚೀರಿಕೊಳ್ಳಬಹುದು ಎಂದು. ಆ ಆಚರಣೆ ಈ ನುಡಿಗಟ್ಟಿಗೆ ಮೂಲ.

ಪ್ರ : ಅವೊತ್ತಿನಿಂದ ಹೊಟ್ಟೆ ಬಟ್ಟೆ ಕಟ್ಟಿ ಕೂಡಿಟ್ಟಿದ್ದನ್ನೆಲ್ಲ ತಗೊಂಡು ಹೋಗಿ ಅವನ ಬಾಯಿಗೆ ಇಕ್ಕಿದೆನಲ್ಲ!

೨೧೬೩. ಬಾಯಿಗೆ ಗಿಡಿಯದಿರು = ಬಾಯಿಗೆ ತುರುಕದಿರು

(ಗಿಡಿ = ತುರುಕು)

ಪ್ರ : ತಾವಾಗಿಯೇ ತಿನ್ನಬೇಕು, ಬಲವಂತವಾಗಿ ಬಾಯಿಗೆ ಗಿಡಿಯಬಾರದು, ಹಾಗೆ ಗಿಡಿದದ್ದು ರಕ್ತಗತವಾಗುವುದಿಲ್ಲ.

೨೧೬೪. ಬಾಯಿಗೂಡು = ವಯಸ್ಸಾಗು, ಮುದಿಯಾಗು

(ಬಾಯಿಗೂಡು < ಬಾಯಿ + ಕೂಡು = ಹಲ್ಲು ಹಾಕುವುದು ನಿಲ್ಲು ) ಜಾನುವಾರುಗಳ ವಯಸ್ಸನ್ನು ಹಲ್ಲುಗಳ ಮುಖಾಂತರ ರೈತಾಪಿ ಜನರು ಪರಿಗಣಿಸುತ್ತಾರೆ. ಎರಡು ಹಲ್ಲು, ನಾಲ್ಕು ಹಲ್ಲು ಕೌಮಾರ್ಯ ತಾರುಣ್ಯವನ್ನು ಸೂಚಿಸಿದರೆ ಆರು ಹಲ್ಲು ವೃದ್ದಾಪ್ಯಕ್ಕೆ ಅಡಿಯಿಡುವುದನ್ನು ಸೂಚಿಸುತ್ತದೆ. ಜಾನುವಾರು ಆರು ಹಲ್ಲು ಹಾಕಿದಾಗ ‘ಬಾಯಿಗೂಡಿದೆ’ ಎನ್ನುತ್ತಾರೆ.

ಪ್ರ : ಬಾಯಿಗೂಡಿದ ಎತ್ತುಗಳಿಗೆ ನೀನು ಈಪಾಟಿ ಬೆಲೆ ಹೇಳಿದರೆ ಹೆಂಗೆ?

೨೧೬೫. ಬಾಯಿ ಜೋರು ಮಾಡು = ದಬಾವಣೆ ಮಾಡು

ಪ್ರ : ಬಾಯಿಜೋರು ಮಾಡಿದ್ರೆ, ಕೈಗೆ ಜೋಡು ತಗೊಳ್ತೀನಿ, ತಿಳ್ಕೋ.

೨೧೬೬. ಬಾಯಿ ತಂಬುಲ ಹುಡಿಯಾಗು = ಬಿಸಿಲ ಝಳ ಅಧಿಕವಾಗು, ಬಾಯಿ ಒಣಗಿ ಹೋಗು

(ತಂಬುಲ < ತಾಂಬೂಲ = ಎಲೆ ಅಡಿಕೆ ಜಗಿತ)

ಪ್ರ : ಎಷ್ಟು ಬಿಸಿಲು ಅಂದ್ರೆ ಬಾಯ ತಂಬುಲ ಹುಡಿಯಾಯ್ತು, ಅಂಗಾಲು ಹೊಪ್ಪಳೆ ಹೊಡೆದವು.

೨೧೬೭. ಬಾಯಿಗೆ ಅಕ್ಕಿ ಕಾಳು ಹಾಕು = ಮರಣ ಹೊಂದು

ಉಸಿರು ಹೋಗುವಾಗ ಬಾಯಿ ವಿಕಾರಗೊಂಡಿರಬಹುದು. ಅದನ್ನು ನೋಡಿ ಮಕ್ಕಳು ಹೆದರಿಕೊಳ್ಳಬಹುದೆಂದು ಬಾಯಿಗೆ ಅಕ್ಕಿಕಾಳು ತುಂಬುತ್ತಾರೆ ಅಥವಾ ಅಗಿದ ಬಾಯ ತಂಬುಲವನ್ನು ಹೆಣದ ಬಾಯಿಗೆ ಇಕ್ಕುತ್ತಾರೆ. ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಮಗನ ತಲೆ ಮೇಲೆ ಅಕ್ಕಿ ಕಾಳು ಹಾಕಿ ಸಾಯಬೇಕು ಅಂತ ಪರದಾಡ್ತಿದ್ದ ತಾಯಿಯ ಬಾಯಿಗೆ ಮಗನೇ ಅಕ್ಕಿ ಕಾಳು ಹಾಕುವಂಥ ದುರಾದೃಷ್ಟ ವಕ್ಕರಿಸಿತು.

೨೧೬೮. ಬಾಯಿಗೆ ಕುಕ್ಕೆ ಇಕ್ಕು = ತಿನ್ನಲು ಆಗದಂತೆ ಮಾಡು, ಬಾಯಾಡಿಸದಂತೆ ಬಂಧಿಸು

(ಕುಕ್ಕೆ = ಬೆಳೆಯನ್ನು ಹರಗುವಾಗ ಎತ್ತುಗಳು ಪೈರನ್ನು ಮೇಯದಂತೆ ಅವುಗಳ ಬಾಯಿಗೆ ಇಕ್ಕುವ ಬಿದಿರ ದೆಬ್ಬೆಯಿಂದ ಹೆಣೆದ ಬುಟ್ಟಿಯಂಥ ಸಾಧನ)

ಪ್ರ : ನನ್ನ ಬಾಯಿಗೆ ಕುಕ್ಕೆ ಇಕ್ಕಿರೋರು, ಒಂದಲ್ಲ ಒಂದು ದಿವಸ ಇನ್ನೊಬ್ಬರು ಹಾಕಿದ ಗಾಳದ ಕೊಕ್ಕೆಗೆ ಸಿಕ್ಕಿಬಿದ್ದು ಸಾಯ್ತಾರೆ.

೨೧೬೯. ಬಾಯಿಕೆ ಕೊಡು = ತಾಂಬೂಲಕೊಡು.

ಪ್ರ : ಊಟವಾದ ಮೇಲೆ ಆಳುಗಳಿಗೂ ಬಾಯಿಗೆ ಕೊಡೋದು ಹಳ್ಳಿಗಾಡಿನಲ್ಲಿ ನಡೆದುಕೊಂಡು ಬಂದ ಪದ್ಧತಿ.

೨೧೭೦. ಬಾಯಿಗೆ ತಂಬುಲ ಹಾಕು = ಮರಣ ಹೊಂದು

ಪ್ರ : ಯಾವಾಗ ಅವನ ಬಾಯಿಗೆ ತಂಬುಲ ಹಾಕ್ತೀನೋ ಅಂತ ಕಕ್ಕರ ಕಾದಂಗೆ ಕಾದಿದ್ದೀನಿ.

೨೧೭೧. ಬಾಯಿಗೆ ನೀರು ಬಿಡು = ಮರಣ ಹೊಂದು

ಮನುಷ್ಯನಾಗಲಿ ಪ್ರಾಣಿ ಪಕ್ಷಿಗಳಾಗಲೀ ಸಾಯುವಾಗ ಬಾಯಿಬಾಯಿ ಬಿಡುತ್ತವೆ. ಆಗ ಹಾಲನ್ನೋ ನೀರನ್ನೋ ಬಾಯಿಗೆ ಬಿಡುತ್ತಾರೆ. ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ನಿನ್ನ ಬಾಯಿಗೆ ನೀರು ಯಾವಾಗ ಬಿಟ್ಟೇನೋ, ನನ್ನ ಹಾಟುಗಾಳ

೨೧೭೨. ಬಾಯಿಗೆ ನೀರು ಹುಯ್ಯದಿರು = ಏನನ್ನೂ ತಿನ್ನದಿರು, ಊಟ ಮಾಡಿದರು.

ಊಟ ಮಾಡುವ ಮುನ್ನ ಕೈಕಾಲು ಮುಖ ತೊಳೆದುಕೊಳ್ಳುವುದು, ಬಾಯಿಗೆ ನೀರು ಹುಯ್ದುಕೊಂಡು ಮುಕ್ಕಳಿಸಿ ಉಗಿಯುವುದು ಪದ್ಧತಿ. ಆ ಹಿನ್ನೆಲೆಯಲ್ಲಿ ಮೂಡಿರುವ ನುಡಿಗಟ್ಟು ಇದು.

ಪ್ರ : ಹೊತ್ತಾರೆ ಎದ್ದೋನು ಬೈಸಾರೆ ಆದ್ರೂ ಬಾಯಿಗೆ ನೀರು ಹುಯ್ದಿಲ್ಲ, ಹಾಳು ರೇಡಿನಲ್ಲಿ.

೨೧೭೩. ಬಾಯಿ ನೀರು ಬಕಬಕನೆ ಬರು = ಹೊಟ್ಟೆ ತೊಳಸಿದಂತಾಗು, ವಮನವಾಗು

ಪ್ರ : ಬಾಯಿ ನೀರು ಬಕಬಕನೆ ಬಂದು, ತಿಂದದ್ದನ್ನೆಲ್ಲ ವಮನ ಮಾಡಿಬಿಟ್ಟೆ.

೨೧೭೪. ಬಾಯಿಪಾಟವಾಗು = ಕಂಠಪಾಠವಾಗು

(ಪಾಟ < ಪಾಠ)

ಪ್ರ : ಪುಟ್ಟು ಭಟ್ಟರಿಗೆ ಇಡೀ ಜೈಮಿನಿ ಭಾರತ ಬಾಯಿಪಾಟವಾಗಿದೆ. ಇಷ್ಟನೇ ಸಂಧಿಯ ಇಷ್ಟನೇ ಪದ್ಯ, ಹೇಳಿ ಅಂದರೆ ಅಲಕ್ಕನೆ ಅದನ್ನು ಹೇಳಬಲ್ಲರು.

೨೧೭೫. ಬಾಯಿಗೆ ಬಿರಿ ಹಾಕು = ನಾಲಗೆ ನಿಗ್ರಹಿಸು, ನಾಲಗೆ ಹಿಡಿದು ಮಾತಾಡು

(ಬಿರಿ = ರಥದ ವೇಗವನ್ನು ಕಡಮೆ ಮಾಡಲು ಚಕ್ರಕ್ಕೆ ಹಾಕುವ ಅಡ್ಡ ಮರ)

ಪ್ರ : ಬಾಯಿ ಹೋದ ಹಂಗೇ ಮಾತಾಡಬೇಡ, ಕೊಂಚ ಬಾಯಿಗೆ ಬಿರಿ ಹಾಕು.

೨೧೭೬. ಬಾಯಿಗೆ ಬೀಗ ಹಾಕಿಕೊಳ್ಳು = ಮೌನ ವಹಿಸು, ದೇವರಂತೆ ಕೂತುಕೊಳ್ಳು

ಪ್ರ : ಮಕ್ಕಳು ಜಟಾಪಟಿಗೆ ಬಿದ್ದಾಗ, ನಾನು ಬಾಯಿಗೆ ಬೀಗ ಹಾಕ್ಕೊಂಡು ಕೂತುಕೊಳ್ಳಬೇಕಾಯ್ತು.

೨೧೭೭. ಬಾಯಿಗೆ ಬೀಳು = ಟೀಕೆ ಟಿಪ್ಪಣಿಗೆ ಗುರಿಯಾಗು

ಪ್ರ : ಗಾದೆ – ೧. ಹಾಳು ಬಾವಿಗೆ ಬಿದ್ದರೂ ಆಳಬಾಯಿಗೆ ಬೀಳಬಾರದು

೨. ಊರು ಬಾವಿಗೆ ಬಿದ್ದರೂ ಊರಬಾಯಿಗೆ ಬೀಳಬಾರದು

೨೧೭೮. ಬಾಯಿಬಿಡು = ಗುಟ್ಟನ್ನು ಹೇಳು

ಪ್ರ : ಸಾಯಿಬೀಳ ಹೊಡೆದಾಗ ಬಾಯಿಬಿಟ್ಟ

೨೧೭೯. ಬಾಯಾ-ಗೆ ಬಿದ್ದಂ-ಗಿ-ರು = ತದ್ರೂ-ಪ-ವಾ-ಗಿ-ರು, ಸದೃ-ಶ-ವಾ-ಗಿ-ರುಮ ಪಡಿ-ಯ-ಚ್ಚಾ-ಗಿ-ರು

ಪ್ರ : ನಿನ್ನ ಮಗ-ಳು ಥೇಟ್ ನಿನ್ನ ಬಾಯಾ-ಗೆ ಬಿದ್ದಂ-ಗಿ-ದ್ದಾ-ಳೆ.

ಸಾಮಾ-ನ್ಯ-ವಾ-ಗಿ ಮಕ್ಕ-ಳು ತಾಯಿ-ಯ ಯೋನಿ-ಯಿಂ-ದ ನೆಲ-ಕ್ಕೆ ಬೀಳು-ತ್ತವೆ. ಇಲ್ಲಿ ಅಪ್ಪ-ನಂ-ತೆ-ಯೇ ಇರು-ವ ಮಗ-ಳ-ನ್ನು ಕಂಡು, ತಾಯಿ-ಯ ಯೋನಿ-ಯ ಮೂಲ-ಕ ಬಿದ್ದಿ-ರ-ದೆ ಅಪ್ಪ-ನ ಬಾಯಿ-ಯ ಮೂಲ-ಕ ಬಿದ್ದಂ-ತಿ-ದೆ ಎಂಬ ಭಾವ-ಕ್ಕೆ ಒತ್ತು ಕೊಟ್ಟಂ-ತಿ-ದೆ.

೨೧೮೦. ಬಾಯ್ಮಾಡು = ಜೋರು ಮಾಡು

ಪ್ರ : ಬಾಯ್ಮಾಡೋಳು ಬಗ್ಗೋದು ಕೈ ಮಾಡಿದಾಗಲೇ

೨೧೮೧. ಬಾಯಿಗೆ ಬೆಳ್ಳಿಕ್ಕಿದ್ರೆ ಕಚ್ಚೋಕೆ ಬರದಿರು = ಅತಿ ಮುಗ್ಧತೆ ಇರು

ಪ್ರ : ಬಾಯಿಗೆ ಬೆಳ್ಳಿಕ್ಕಿದರೂ ಕಚ್ಚೋಕೆ ಬರದಂಥವನನ್ನು ತಂದು ಬಲಿಪಶು ಮಾಡಿದರು.

೨೧೮೨. ಬಾಯಿಗೆ ಮಣ್ಣು ಬೀಳು = ಅನ್ನಕ್ಕೆ ಕಲ್ಲು ಬೀಳು, ಅನ್ನದಮಾರ್ಗ ತಪ್ಪಿ ಹೋಗು

ಪ್ರ : ಆಸ್ತಿ ಕಳಕೊಂಡ್ರೆ ಮಕ್ಕಳ ಬಾಯಿಗೆ ಮಣ್ಣು ಬೀಳ್ತದಲ್ಲ.

೨೧೮೩. ಬಾಯಿಗೆ ಮಣ್ಣು ಹಾಕು = ಉತ್ತರ ಕ್ರಿಯೆ ಮಾಡು

ಸತ್ತ ಹೆಣವನ್ನು ಕೆಲವರು ಸುಡುವುದುಂಟು, ಕೆಲವರು ಹೂಳುವುದುಂಟು. ಹಾಗೆ ಸಮಾಧಿಯಲ್ಲಿ ಮಲಗಿಸಿದಾಗ, ಮಣ್ಣಿಗೆ ಬಂದ ನೆಂಟರಿಷ್ಟರೆಲ್ಲ ಒಂದೊಂದು ಹಿಡಿ ಮಣ್ಣನ್ನು ಹೆಣದ ಮೇಲೆ ಹಾಕುವುದುಂಟು. ಆ ಹಿನ್ನೆಲೆಯಲ್ಲಿ ಮೂಡಿದ ನುಡಿಗಟ್ಟಿದು.

ಪ್ರ : ನಿನ್ನ ಬಾಯಿಗೆ ಮಣ್ಣು ಹಾಕಿದ ದಿನವೇ ನಾನು ನಿರುಂಬಳವಾಗಿರೋದು

೨೧೮೪. ಬಾಯಿಗೆ ಹಾಲು ಬಿಡು = ಸಾಯುವ ಜೀವಕ್ಕೆ ಕೊನೆಯ ಗುಟುಕು ನೀಡು

ಪ್ರ : ಬಾಯಿಗೆ ಹಾಲುಬಿಡೋಕೂ ಪುಣ್ಯ ಇರಬೇಕು. ಸ್ವಂತ ಮಗನೇ ಸಾಯೋ ಕಾಲದಲ್ಲಿ ಹತ್ತಿರ ಇರದಂತೆ ವಿಧಿ ಸಂಚು ಮಾಡಿರ್ತದೆ.

೨೧೮೫. ಬಾಯ್ತುಂಬ ಮಾತಾಡಿಸು = ಪ್ರೀತಿಯಿಂದ ನಡೆದುಕೊಳ್ಳು, ಆದರದಿಂದ ಉಪಚರಿಸು

ಪ್ರ : ಬಾಯ್ತುಂಬ ಮಾತಾಡಿಸೋರ ಹತ್ರ ನಾವೂ ಪ್ರೀತಿಯಿಂದ ನಡ್ಕೋಬೇಕು.

೨೧೮೬. ಬಾಯಿತೂಪರ ತೀರಿಸಿಕೊಳ್ಳು = ಕೃತಕ ಸಹಾನುಭೂತಿ ತೋರು

(ತೂಪರ = ತುಂತುರು ಮಳೆ)

ಪ್ರ : ಅವರು ಬಾಯಿತೂಪರ ತೀರಿಸಿಕೊಳ್ಳೋ ಜನರೇ ಹೊರ್ತು ಪ್ರಾಣಕ್ಕೆ ಪ್ರಾಣ ಕೊಡೋರಲ್ಲ.

೨೧೮೭. ಬಾಯಿ ಬಡಿದುಕೊಳ್ಳು = ಹೊಟ್ಟೆ ಉರಿದುಕೊಳ್ಳು, ಸಹಿಸದಿರು

ಪ್ರ : ಗಾದೆ – ಬದುಕಿದರೆ ಬಾಯಿ ಬಡ್ಕೊಳ್ತಾರೆ

ಕೆಟ್ಟರೆ ತಿಕ ಬಡ್ಕೊಳ್ತಾರೆ.

೨೧೮೮. ಬಾಯಿ ಬರದಿರು = ಮಾತು ಹೊರಡದಿರು

ಪ್ರ : ಅವನ ಸ್ಥಿತಿ ನೋಡಿದ ಮೇಲೆ, ಏನು ಹೇಳೋಕೂ ನನಗೆ ಬಾಯಿ ಬರಲಿಲ್ಲ.

೨೧೮೯. ಬಾಯಿಬಾಯಿ ಬಿಡು = ಆಸೆ ಪಡು

ಪ್ರ : ಅವಳ್ನ ಕಂಡ್ರೆ ಇವನು ಬಾಯಿ ಬಾಯಿ ಬಿಡ್ತಾನೆ, ಅವಳು ಇವನ್ನ ಕಂಡ್ರೆ ಮೂತಿ ತಿರುವುತಾಳೆ.

೨೧೯೦. ಬಾಯಿ ಬಿದ್ದು ಹೋಗು = ಮಾತು ನಿಂತು ಹೋಗು, ನಾಲಗೆ ಸೇದಿ ಹೋಗು

ಪ್ರ : ನಾಯಿಗೆ ಒದ್ದ ಹಂಗೆ ಒದ್ದನಲ್ಲೇ, ಇವನ ಬಾಯಿ ಬಿದ್ದು ಹೋಗ!

೨೧೯೧. ಬಾಯಿಬಿಡಿಸು = ಮಾತಾಡುವಂತೆ ಮಾಡು

ಪ್ರ : ಸೇದುಕುಟ್ಟು ರೋಗದೋಳ್ನ ನೀನು ಬಾಯಿಬಿಡಿಸಿದರೆ ಗಂಡೇ ಸರಿ

೨೧೯೨. ಬಾಯಿ ಬೀಗ ಚುಚ್ಚಿಸಿಕೊಳ್ಳು = ದೇವರ ಹರಕೆ ಸಲ್ಲಿಸು

ಗ್ರಾಮದೇವತೆಯ ಜಾತ್ರೆಯಲ್ಲಿ ಬಾಯಿ ಬೀಗ ಚುಚ್ಚಿಸಿಕೊಂಡು ಕೊಂಡ ಹಾಯುವ ಭಕ್ತಾದಿಗಳುಂಟು. ದವಡೆಯ ಒಂದು ಕಡೆಯಿಂದ ದಬ್ಬಳ ಗಾತ್ರದ ತಂತಿಯಿಂದ ಚುಚ್ಚಿ, ದವಡೆಯ ಇನ್ನೊಂದು ಕಡೆಯಿಂದ ಹೊರಕ್ಕೆ ಎಳೆದು, ಎರಡು ತುದಿಗಳನ್ನು ಗಂಟು ಹಾಕಿದಂತೆ ಮಡಿಚುತ್ತಾರೆ. ಚುಚ್ಚುವ ಕಡೆ ದೇವರ ಭಂಡಾರವನ್ನು ಹಚ್ಚಿ ಚುಚ್ಚುತ್ತಾರೆ. ಕೊಂಡ ಹಾದ ಮೇಲೆ ದೇವಸ್ಥಾನಕ್ಕೆ ಬಂದು ಪೂಜಾರಿ ಅವರ ಬಾಯಿಬೀಗಗಳನ್ನು ತೆಗೆಯುತ್ತಾನೆ. ಚುಚ್ಚಿದ ಕಡೆ ರಕ್ತವಾಗಲೀ ಗಾಯವಾಗಲೀ ಆಗಿರುವುದಿಲ್ಲ. ಚುಚ್ಚಿದ್ದ ಕಡೆ ಭಂಡಾರ ಹಚ್ಚುತ್ತಾರೆ. ಅಲ್ಲಿ ತೂತೇ ಇಲ್ಲದಂತೆ ಮಾದುಕೊಳ್ಳುತ್ತದೆ.

ಪ್ರ : ಬಾಯಿ ಬೀಗ ಚುಚ್ಚಿಸಿಕೊಂಡವರ ಮಾತುಕತೆಯೆಲ್ಲ ಕೈಸನ್ನೆ ಮೂಲಕವೇ.

೨೧೯೩. ಬಾಯಿ ಹಾಕು = ಮಧ್ಯೆ ಪ್ರವೇಶಿಸು

ಪ್ರ : ಗಂಡ ಹೆಂಡಿರ ಜಗಳದಲ್ಲಿ ನಡುವೆ ಬಾಯಿ ಹಾಕೋಕೆ ನೀನು ಯಾರು?

೨೧೯೪. ಬಾಯಿ ಮೇಲೆ ಕೈ ಇಡು = ಸೋಜಿಗಗೊಳ್ಳು

ಪ್ರ : ಆ ಮಗುವಿನ ವಯಸ್ಸಿಗೆ ಮೀರಿದ ಮಾತು ಕೇಳಿ ಬಾಯಿ ಮೇಲೆ ಕೈಯಿಟ್ಕೊಂಡೆ.

೨೧೯೫. ಬಾಯಲ್ಲಿ ನೀರೂರು = ಆಸೆಯುಂಟಾಗು

ಪ್ರ : ಪಕಾತಿ ಹಣ್ಣಿನಂಥ ಹೆಣ್ಣು ಕಂಡಾಗ ಬಾಯಲ್ಲಿ ನೀರೂರುವುದು ಸಹಜ

೨೧೯೬. ಬಾಯಿಗೆ ಬಟ್ಟೆ ತುರುಕಿಕೊಳ್ಳು = ಅಳುವನ್ನು ತಡೆಯಲು ಯತ್ನಿಸು

ಪ್ರ : ಅತ್ತೆ ನಾದಿನಿಯರ ಕಿರುಕುಳವನ್ನು ಹೇಳ್ತಾ ಹೇಳ್ತಾ ಅಳು ತಡೆಯಲಾರದೆ ಬಾಯಿಗೆ ಬಟ್ಟೆ ತುರುಕಿಕೊಂಡಳು.

೨೧೯೭. ಬಾಯಿ ಮೇಲೆ ಸೆರಗು = ಮುಚ್ಚಿಕೊಳ್ಳು = ನಗುವನ್ನು ಮರೆಮಾಜು, ತಡೆಹಿಡಿ.

ಪ್ರ : ಉಕ್ಕಿ ಬರುವ ನಗುವನ್ನು ತಡೆಯಲಾಗದೆ, ಬಾಯಿ ಮೇಲೆ ಸೆರಗು ಮುಚ್ಚಿಕೊಂಡಳು.

೨೧೯೮. ಬಾಯಿ ಹಸನಾಗಿ ಬರು = ಕೆಟ್ಟ ಮಾತು ಬರು

(ಹಸನು = ಚೆನ್ನ, ಸುಂದರ, ಶುದ್ಧ) ಈ ನುಡಿಗಟ್ಟಿನಲ್ಲಿ ಹಸನು ಎಂಬುದು ನಿಷೇದಾರ್ಥದಲ್ಲಿ ಅಂದರೆ ಕೆಟ್ಟ ಎಂಬ ಅರ್ಥದಲ್ಲಿ ಬಳಕೆಯಾಗಿದೆ.

ಪ್ರ : ಅವನ ಹೆಸರೆತ್ತ ಬೇಡ, ಎತ್ತಿದರೆ ನನ್ನ ಬಾಯಿ ಹಸನಾಗಿ ಬರ್ತದೆ.

೨೧೯೯. ಬಾಯಿ ಹೋದಂಗೆ ಮಾತಾಡು = ನಾಲಗೆ ನಿಗ್ರಹ ಇಲ್ಲದಿರು, ಹದ್ದುಮೀರಿ ಮಾತಾಡು.

ಪ್ರ : ಗಾದೆ – ಬಾಯಿ ಹೋದಂಗೆ ಮಾತು

ತಿಗ ಹೋದಂಗೆ ಹೂಸು

೨೨೦೦. ಬಾರಾ ಬಂಗಾಳಿ ಬೀಳು = ತುಂಬ ತೊಂದರೆ ಅನುಭವಿಸು

(ಬಾರಾ < ಬಾರಹ್ (ಹಿಂ) = ಹನ್ನೆಡು ; ಬಂಗಾಳಿ < ಭಂಗ + ಆಳಿ = ಕಷ್ಟ ಸಮೂಹ)

ಪ್ರ : ಈ ಮನೆ ಯಜಮಾನಿಕೆ ಯಾರಾದರೂ ವಹಿಸಿಕೊಳ್ಳಿ, ನನಗೆ ಬಾರಾ ಬಂಗಾಳಿ ಬಿದ್ದು ಸಾಕಾಗಿದೆ, ಜನ್ಮ ರೋಸಿ ಹೋಗಿದೆ.

೨೨೦೧. ಬಾರಾ ಬಂಗಾಳಿ ಮಾಡು = ಮೋಸ ಮಾಡು, ವಂಚನೆ ಮಾಡು

ಬಹುಶಃ ‘ಕುಂಬಕೋಣಂ ಮಾಡು’ ಎಂಬುದಕ್ಕೆ ಕಿತಾಪತಿ ಮಾಡು ಎಂಬ ಅರ್ಥವಿರುವಂತೆ ‘ಬಂಗಾಳಿ ಮಾಡು’ ಎಂಬುದಕ್ಕೆ ಮೋಸ ಮಾಡು ಎಂಬ ಅರ್ಥ ಇದ್ದಿರಬೇಕು. ಮೋಸ ಮಾಡುವ ಬಂಗಾಳದ ಹನ್ನೆರಡು (ಬಾರಾ < ಬಾರಹ್) ಮಂದಿಯ ತಂಡವಿದ್ದಿತೋ ಏನೋ, ಖಚಿತವಾಗಿ ಏನು ಹೇಳಲೂ ಸಾಧ್ಯವಿಲ್ಲ. ಬಹುಶಃ ನಾಥಪಂಥದ ಮೂಲದಿಂದ ಈ ನುಡಿಗಟ್ಟು ಮೂಡಿರಬೇಕು ಎನ್ನಿಸುತ್ತದೆ.

ಪ್ರ : ಬಾರಾ ಬಂಗಾಳಿ ಮಾಡಿ ಅತ್ಯುನ್ನತ ಸ್ಥಾನಕ್ಕೇರಿದ; ಏರುಬಂಡೆಯ ಮತ್ತೊಂದು ಮುಖ ಜಾರುಬಂಡೆಯಾಗಿರಬಹುದು, ಯಾರಿಗೆ ಗೊತ್ತು

೨೨೦೨. ಬಾರಿಗೆ ಬರು = ಬೆದೆಗೆ ಬರು

(ಬಾರಿ = ಸೂಳ್, ಸರದಿ; ಗರ್ಭತಾಳುವ ಸೂಳ್)

ಪ್ರ : ಹಸು ಬಾರಿಗೆ ಬಂದಿದೆ, ಹೋರಿ ಕೊಡಿಸಿಕೊಂಡು ಬಾ.

೨೨೦೩. ಬಾರೀಕು ಇಲ್ಲದಿರು = ಘನತೆ ಗಾಂಭೀರ್ಯ ಇಲ್ಲದಿರು

(ಬಾರೀಕು = ಬುದ್ಧಿ)

ಪ್ರ : ಬಾರೀಕು ಇಲ್ಲದೋರ್ನ ಯಾರೂ ತಾರೀಪು ಮಾಡೋದಿಲ್ಲ

೨೨೦೪. ಬಾರುದೆಗೆ = ಚೆನ್ನಾಗಿ ಹೊಡಿ, ಚರ್ಮ ಸುಲಿ

(ಬಾರು = ಚರ್ಮ)

ಪ್ರ : ಜೋರು ಎಲ್ಲ ಸೋರಿ ಹೋಗೋ ಹಂಗೆ ಬಾರುದೆಗಿದಿದ್ದೀನಿ

೨೨೦೫. ಬಾರು ಮಾಡಿಕೊಂಡಿರು = ಸನ್ನದ್ಧವಾಗಿರು, ಬಂದೂಕಿಗೆ ಮದ್ದುಗುಂಡು ತುಂಬಿ ಕಾಯುತ್ತಿರು.

ಪ್ರ : ಯಾರು ಬರ್ತಾರೋ ಬರಲಿ, ನಾನು ಬಾರು ಮಾಡಿಕೊಂಡು ಕುಂತಿದ್ದೀನಿ.

೨೨೦೬. ಬಾಲಂಗಚ್ಚೆಯಾಗು = ಬಾಲಬಡುಕನಾಗು, ಇನ್ನೊಬ್ಬರ ಬಾಲ ಹಿಡಿದುಕೊಂಡು ಸಾಗು

ಗಾಳಿಪಟ ಆಡಿಸುವುದಕ್ಕೆ ಸೂತ್ರದಂತೆಯೇ ಬಾಲಂಗಚ್ಚೆಯಾಗೋದಕ್ಕೆ ಇಚ್ಛೆ ಪಡೋದಿಲ್ಲ.

೨೨೦೭. ಬಾಲ ನುಲುಚು = ವೇಗಗೊಳಿಸು, ಪ್ರಚೋದಿಸು

(ನುಲುಚು = ಮುರಿ, ಹುರಿ ಮಾಡು) ಗಾಡಿಗೆ ಕಟ್ಟಿದ ಎತ್ತುಗಳನ್ನು ವೇಗವಾಗು ಸಾಗುವಂತೆ ಮಾಡಲು ಮೂಕಿ ಮರದ ಮೇಲೆ ಕೂತು ಗಾಡಿ ಹೊಡೆಯುವವನು ಎತ್ತುಗಳನ್ನು ಚಾವುಟಿಯಿಂದ ಹೊಡೆಯುತ್ತಾನೆ ಅಥವಾ ಅವುಗಳ್ ಬಾಲವನ್ನು ನುಲುಚುತ್ತಾನೆ. ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಬಾಲ ನುಲುಚೋದ್ರಲ್ಲಿ ಭಾರಿ ಗಟ್ಟಿಗ.

೨೨೦೮. ಬಾಲ ಬಿಚ್ಚು = ಪ್ರತಿಷ್ಠೆ ತೋರಿಸು, ಎಲ್ಲದರಲ್ಲೂ ಮೂಗು ತೂರಿಸಿ ಎಗರಾಡು

ಪ್ರ : ನೀನು ಹಿಂಗೆ ಬಾಲ ಬಿಚ್ಚಿದರೆ, ಮುಚ್ಚಿಸೋದು ಹೆಂಗೆ ಅಂತ ನನಗೆ ಗೊತ್ತು.

೨೨೦೯. ಬಾಲ ಮುದುರಿಕೊಳ್ಳು = ಹೆದರಿಕೊಳ್ಳು

ನಾಯಿ ಇನ್ನೊಂದು ನಾಯಿಯೊಡನೆ ಜಗಳಕ್ಕೆ ಬಿದ್ದಾಗ ತನ್ನ ಬಾಲವನ್ನು ಎತ್ತಿಕೊಂಡಿರುತ್ತದೆ. ಆದರೆ ಎದುರಾಳಿ ನಾಯಿ ಧಡೂತಿಯಾಗಿದ್ದು ತನಗೆ ಎದುರಿಸಲು ಸಾಧ್ಯವಾಗದಿದ್ದರೆ ತನ್ನ ಬಾಲವನ್ನು ಕಾಲುಗಳ ಸಂಧಿ ಮುದುರಿಕೊಂಡು ಸುಮ್ಮನಾಗುತ್ತದೆ. ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ನಾನು ಯಾವುದಕ್ಕೂ ಬಗ್ಗಲ್ಲ ಅನ್ನೋದು ತಿಳ್ಕೊಂಡ ಮೇಲೆ ಬಾಲ ಮುದುರಿಕೊಂಡ

೨೨೧೦. ಬಾವಿಗೆ ಬಿದ್ದಂತಾಡು = ಎದೆ ಬಾಯಿ ಗುದ್ದಿಕೊಳ್ಳು, ಗಾಬರಿಕೊಳ್ಳು

ಪ್ರ : ಏನೂ ಆಗದೆ ಇರುವಾಗ ಯಾಕೆ ಹಿಂಗೆ ಬಾವಿಗೆ ಬಿದ್ದಂತಾಡ್ತೀಯ?

೨೨೧೧. ಬಾವುಣಿಸು = ಆದರಿಸು, ಪ್ರೀತಿಯಿಂದ ಉಪಚರಿಸು

(ಬಾವುಣಿಸು < ಭಾವನಿಸು < ಭಾವನೆ + ಇಸು = ಆದರಿಸು) ಭಾವನೆಗೆ ‘ಇಸು’ ಪ್ರತ್ಯಯ ಸೇರಿಸಿ ಬಾವುಣಿಸು (= ಪ್ರೀತ್ಯಾದರಗಳಿಂದ ಉಪಚರಿಸು) ಎಂಬ ಕ್ರಿಯಾಪದವನ್ನು ರಚಿಸಿದಂತೆಯೇ ‘ಇಕೆ’ ಪ್ರತ್ಯಯ ಸೇರಿಸಿ ಬಾವುಣಿಕೆ (=ಪ್ರೀತ್ಯಾದರದ ಸತ್ಕಾರ) ಎಂಬ ನಾಮಪದವನ್ನೂ ಸೃಷ್ಟಿಸಿರುವುದು ಅಭಿವ್ಯಕ್ತಿ ವೈವಿಧ್ಯಕ್ಕೆ ಸಾಕ್ಷಿ.

ಪ್ರ : ಬಡವರಾದರೂ ಬಂದವರನ್ನು ಚೆನ್ನಾಗಿ ಬಾವುಣಿಸ್ತಾರೆ

೨೨೧೨. ಬಾಸಿಂಗ ಕಟ್ಟು = ಮದುವೆ ಮಾಡು

(ಬಾಸಿಂಗ = ಮದುಮಕ್ಕಳ ಹಣೆಗೆ ಕಟ್ಟುವ ಬೆಂಡಿನಿಂದ ಮಾಡಿದ ಒಂದು ತೊಡಿಗೆ)

ಪ್ರ : ಬಾಸಿಂಗ ಕಟ್ಟಿಸಿಕೊಂಡ ಮದುಮಕ್ಕಳು ಕೈನೀರು ಎರೆಸಿಕೊಂಡರು.

೨೨೧೩. ಬಾಸುಂಡೆ ಬರಿಸು = ಚೆನ್ನಾಗಿ ಹೊಡಿ

(ಬಾಸುಂಡೆ < ಬಾಸುಳು = ಮೈಮೇಲೆ ಮೂಡುವ ಹೊಡೆತಗಳ ಬರೆ)

ಪ್ರ : ಹೇಳಿಕೆ ಮಾತು ಕೇಳ್ಕೊಂಡು, ಮೂಸಂಡಿಯಂಥ ಗಂಡ ಹೆಂಡ್ರ ಮೈಮೇಲೆ ಬಾಸುಂಡೆ ಬರಿಸಿದ.

೨೨೧೪. ಬಾಳ ರಾಗಿ ಬೀಸು = ಹೆಚ್ಚು ಶ್ರಮ ಪಡು, ಸಾಧನೆ ಮಾಡು

(ಬಾಳ < ಬಹಳ = ಹೆಚ್ಚು)

ಪ್ರ : ಅವನಿಗೆ ಬುದ್ಧಿ ಬರಬೇಕಾದರೆ ಇನ್ನೂ ಬಾಳ ರಾಗಿ ಬಿಸಬೇಕು.

೨೨೧೫. ಬಾಳಿಕೆ ಬರು = ಹೆಚ್ಚು ಕಾಲ ಇರು, ತಡೆತ ಬರು.

ಪ್ರ : ಈ ನೇತ್ರದಂಥ ಬಟ್ಟೆ ಹೆಚ್ಚು ಕಾಲ ಬಾಳಿಕೆ ಬರಲ್ಲ.

೨೨೧೬. ಬಾಳಿ ಬಕರೆ ಹೋಗು = ಭಿಕ್ಷೆಗೆ ಹೋಗು

(ಬಕರೆ < ಬಕ್ಕರೆ < ಪಕ್ಕರೆ = ಮಡಕೆಯ ಹೋಳು, ಭಿಕ್ಷಾಪಾತ್ರೆ)

ಪ್ರ : ನೀವು ಬಾಳಿ ಬಕರೆ ಹೋಗೋದ್ನ ನಾನು ಕಾಣ್ನ?

೨೨೧೭. ಬಾಳುಗೆಡು = ಹಾಳಾಗು, ಕೆಟ್ಟು ಹೋಗು

ಪ್ರ : ಬಾಳುಗೆಟ್ಟೋರಿಗೆ ಮಾನವೂ ಒಂದೆ ಅವಮಾನವೂ ಒಂದೆ.

೨೨೧೮. ಬಾಳೆ ಎಲೆಯಂತೆ ಬಳುಕಾಡು = ಅಂದವಾಗಿರು, ಅಬಳುತ್ತಿರು, ತೆಳ್ಳಗಿರು

ಪ್ರ : ಬಾಳೆ ಎಲೆಯಂತೆ ಬಳುಕಾಡೋ ಅಂದವಾದ ಹೆಣ್ಣು ಸೊಸೆಯಾಗಿ ಬಂದದ್ದು ಪುಣ್ಯ.

೨೨೧೯. ಬಾಳೆ ಎಲೆ ಮೇಲೆ ಬೆಣ್ಣೆ ಹಾಕಿ ನೂಲೆಳೇಲಿ ಕೊಳ್ಳು ಕುಯ್ಯಿ = ಉಪಚಾರದ ನೆವದಲ್ಲಿ

ಅಪಚಾರ ಮಾಡು, ಲೇಸು ಮಾಡುವ ನೆಪದಲ್ಲಿ ಕೇಡೆಸಗು

(ಕೊಳ್ಳು < ಕೊರಳು = ಕುತ್ತಿಗೆ)

ಪ್ರ : ಬಾಳೆ ಎಲೆ ಮೇಲೆ ಬೆಣ್ಣೆ ಹಾಕಿ ನೂಲೆಳೇಲಿ ಕೊಳ್ಳು ಕುಯ್ಯೋ ಮೇಲ್ವರ್ಗದ ಜನರ ಬಗೆಗೆ ಕೆಳವರ್ಗದವರು ಮೈಯೆಲ್ಲ ಕಣ್ಣಾಗಿರಬೇಕು.

೨೨೨೦. ಬಾಳೆಕಾಯಿಗೆ ಕೈ ಹಾಕು = ಶೀಲ ಹರಣಕ್ಕೆ ಪ್ರಯತ್ನಿಸು, ಸೀರೆ ಸೆಳೆಯಲು ಯತ್ನಿಸು.

(ಬಾಳೆಕಾಯಿ = ಸೀರೆಯ ನೆರಿಗೆ ಜಾರದಂತೆ ಸೊಂಟದ ಬಳಿ ಮಡಿಸಿ ಸಿಗಿಸಿದ ಬಾಳೆಕಾಯಿ ಆಕಾರದ ನೆರಿಗೆಯ ದಿಂಡು)

ಪ್ರ : ಬಾಳೆ ಕಾಯಿಗೆ ಕೈ ಹಾಕೋಕೆ ಬಂದಾಗ, ಅವನ ಗೋಮಾಳೆಗೆ ಕೈ ಹಾಕಿ, ಕೆಳಗೆ ನೇತಾಡೊ ಎರಡು ಕರ-ಡಿ-ಗೆ- ಕಿತ್ತು ನಿನ್ನ ಕೈಗೆ ಕೊಡ್ತೀನಿ ಅಂದೆ ನೋಡು, ಅಲ್ಲಿಂದ ಕಂಬಿ ಕಿತ್ತ.

೨೨೨೧. ಬಾಳೆ ಹಣ್ಣಿನ ಗುಡಾಣದಲ್ಲಿ ಬೆಳೆದಿಲ್ಲದಿರು = ವಿಶೇಷ ಇಲ್ಲದಿರು, ಎಲ್ಲರಂತೆ ಬೆಳೆದಿರು.

(ಗುಡಾನ = ಮಣ್ಣಿನ ದೊಡ್ಡ ಬಾನಿ, ಬಾಳೆಕಾಯಿಯನ್ನು ಹಣ್ಣು ಮಾಡಲು ಅದರಲ್ಲಿಟ್ಟು ಮೆತ್ತೆ ಹಾಕುತ್ತಾರೆ)

ಪ್ರ: ನೀನೇನು ಬಾಳೆ ಹಣ್ಣಿನ ಗುಡಾನದಲ್ಲಿ ಬೆಳೆದಿದ್ದೀಯ? ಎಲ್ಲರಂತೆ ಬಿದ್ದಿರು.

೨೨೨೨. ಬ್ಯಾನೆ ಬೀಳು = ಅಸೂಯೆ ಪಡು, ಅಸಹನೆಯಿಂದ ಕುದಿ

(ಬ್ಯಾನೆ < ಬೇನೆ = ಅಸೂಯೆ, ಸಂಕಟ)

ಪ್ರ : ಗಾದೆ – ಬ್ಯಾನೆ ಗಂಡನಿಗೆ ಗೋಣಿ ಕಚ್ಚೇರವೆ.

(ಮೊದಲೇ ಗಂಡ ಬ್ಯಾನೆ ಬೀಳುವ ಸ್ವಭಾವದವನು. ಅಂಥವನಿಗೆ ಬಟ್ಟೆ ಕಚ್ಚೇರಿವೆಗೆ (ಲಂಗೋಟಿಗೆ) ಬದಲಾಗಿ ಗೋಣಿ ಕಚ್ಚೇರಿವೆ ಇದ್ದರೆ, ಸೆಕೆಗೆ ಕಡಿತ ಬಂದು ಪರಪರನೆ ಕೆರೆದುಕೊಳ್ಳುತ್ತಾನೆ, ಪರಚಿಕೊಳ್ಳುತ್ತಾನೆ. ಅವನ ಬ್ಯಾನೆ, ಅಸಹನೆ ಇನ್ನೂ ಮುಗಿಲು ಮುಟ್ಟುತ್ತದೆ ಎಂಬ ಭಾವ ಗಾದೆಯಲ್ಲಿದೆ)