೨೨೨೩. ಬ್ಯಾನೆಯಾಗ = ಹೆರಿಗೆಯ ನೋವು ಕಾನಿಸಿಕೊಳ್ಳು

(ಬ್ಯಾನೆ < ಬೇನೆ = ನೋವು)

ಪ್ರ : ಬಸುರಿಗೆ ಬ್ಯಾನೆಯಾದಾಗ, ಬಂಜೆಗೆ ಅದರ ಅರಿವಾಗುವುದಿಲ್ಲ.

೨೨೨೪. ಬಿಕನಾಸಿಯಂತಾಡು = ತಿರುಕನಂತಾಡು, ಕಯ್ಯಕಯ್ಯ ಎನ್ನು

(ಬಿಕನಾಸಿ = ಭಿಕ್ಷುಕ, ಕ್ಷುದ್ರ ಜೀವಿ)

ಪ್ರ : ಬಿಕನಾಸಿಯಂತಾಡೋಳು ದಸಯ್ಯನ ಬವನಾಸಿಗೆ ಅಕ್ಕಿಕಾಳು ಹಾಕ್ತಾಳ?

೨೨೨೫. ಬಿಕ್ಕಲ ಪದ ಹೇಳಿದಂತಾಗು = ನಗೆ ಪಾಟಲಾಗು, ಅಧ್ವಾನವಾಗು

(ಬಿಕ್ಕಲ = ತೊದಲ, ಪದ = ಹಾಡು)

ಪ್ರ : ಗಾದೆ – ಬಿಕ್ಕಲನ ಯಾಲಪದಕ್ಕೂ ತಿಕ್ಕಲನ ಲೋಲುಪದಕ್ಕೂ ಸರಿಹೋಯ್ತು.

೨೨೨೬. ಬಿಕೋ ಎನ್ನು = ಹಾಳು ಸುರಿ, ಅಬೋ ಎನ್ನು

ಪ್ರ : ಯಾವಾಗಲೂ ಗಿಜುಗುಡುತ್ತಿದ್ದ ತುಂಬಿದ ಮನೆ ಈಗ ಬಿಕೋ ಅಂತಾ ಇದೆ.

೨೨೨೭. ಬಿಗಿತ ಬಿಗಿ = ಹೊಡೆತ ಹೊಡಿ

(ಬಿಗಿತ = ಹೊಡೆತ, ಏಟು)

ಪ್ರ : ನಾಲ್ಕು ಬಿಗಿತ ಬಿಗಿದರೆ, ಉಗಿತ ಊಗಿದರೆ, ತಾನೇ ಸರಿ ಹೋಗ್ತಾನೆ.

೨೨೨೮. ಬಿಗಿದುಕೊಳ್ಳು = ಮುನಿಸಿಕೊಳ್ಳು, ಊದಿಕೊಳ್ಳು

ಪ್ರ : ಹೊತಾರೆಯಿಂದ ಸೇದುಕೊಟ್ಟು ರೋಗ ಬಂದೋಳಂಗೆ ಬಿಕ್ಕೊಂಡು ಕೂತವಳೆ.

೨೨೨೯. ಬಿಚ್ಚೋಲೆ ಗೌರಮ್ಮನಂತಿರು = ಬೆಡಗು ಬಿನ್ನಾಣ ಇಲ್ಲದಿರು, ಮುಗ್ಧೆಯಾಗಿರು

(ಬಿಚ್ಚೋಲೆ = ತಾಳೆಗರಿಯ ಓಲೆ) ತಾಳೆಗರಿಯನ್ನುಸುರುಳಿ ಸುತ್ತಿ ಕಿವಿಯಹಾಲೆಗೆ ಓಲೆಯಂತೆ ಇಟ್ಟುಕೊಳ್ಳುವುದು. ಮತ್ತೆ ತೆಗೆದು ಸುರುಳಿ ಬಿಚ್ಚಬಹುದು. ಆದ್ದರಿಂದಲೇ ಅದಕ್ಕೆ ಬಿಚ್ಚೋಲೆ ಎಂಬ ಹೆಸರು ಬಂದಿರುವುದು. ಹಿಂದೆ ಗ್ರಾಮೀಣರ ಅರ್ಥಿಕ ಸ್ಥಿತಿಗತಿಯ ಮೇಲೆ ಈ ಒಡವೆಗಳು ಬೆಳಕು ಚಿಲ್ಲುತ್ತವೆ. ಚಿನ್ನದ ಓಲೆ ಪಚ್ಚೆಯೋಲೆಗೆ ಅವರು ಬದುಕಿಲ್ಲ ಎಂಬುದು ಬಿಚ್ಚೋಲೆ ಬಿಚ್ಚಿ ಹೇಳುತ್ತದೆ. ಹಾಗೆಯೇ ‘ಅವರವರ ತಲೆಗೆ ಅವರವರದೇ ಕೈ’ ಎಂಬ ಗಾದೆಯೂ ದಿಂಬಿಗೆ ಗತಿಯಿಲ್ಲದ ಗ್ರಾಮೀಣರ ಆರ್ಥಿಕ ದುಸ್ಥಿತಿಗೆ ದುರ್ಬೀನು ಹಿಡಿಯುವಂತಿದೆ.

ಪ್ರ : ಬಿಚ್ಚೋಲೆ ಗೌರಮ್ಮನಂಥವರು ಇಂದು ವಿರಳ, ಕಣ್ಣುಮುಚ್ಚಾಲೆ ಆಡುವವರು ಹೇರಳ.

೨೨೩೦. ಬಿಡಾಲಿ ಕಟ್ಕೊಂಡು ಬೇಡೋಲಾಗು = ಕದ್ದು ಮುಚ್ಚಿ ವ್ಯವಹರಿಸುವ, ಹತ್ತಾರು ಮನೆ

ಹೊಕ್ಕು ಹೊರಬರುವ ಹೆಣ್ಣನ್ನು ಕಟ್ಟಿಕೊಂಡು ಮನೆ ಬಿಕೋ ಎನ್ನು, ಹಾಳು ಸುರಿ.

(ಬಿಡಾಲ = ಬೆಕ್ಕು; ಬೇಡೋಲು < ಬೇಡೌಲ್ = ಕಾಂತಿವೈಭವವಿರದ ಹಾಳು ಸುರಿಯುವಿಕೆ)

ಪ್ರ : ಬಿಡಾಲಿ ಕಟ್ಕೊಂಡು ನಾನು ಬೇಡೋಲಾದೆ, ನಗಾಡೋರ ಮುಂದೆ ಎಡವಿಬಿದ್ದೆ.

೨೨೩೧. ಬಿಡುಗೆಟ್ಟ ಮಾತಾಡು = ಅಂಕೆದಪ್ಪಿದ ಮಾತಾಡು

(ಬಿಡುಗೆಟ್ಟ < ಬಿಟ್ಟುಕೆಟ್ಟ = ಕಟ್ಟದೆ ಕೆಟ್ಟ)

ಪ್ರ : ಬಿಡುಗೆಟ್ಟೋಳ ಮಾತಿಗೆ ನುಡಿಗೊಟ್ಟೋನು ಕೆಟ್ಟ.

೨೨೩೨. ಬಿಡುಗೆಟ್ಟು ಬಂದಿಲ್ಲದಿರು = ಗಂಡ ಬಿಟ್ಟು ಕೆಟ್ಟು ಬಂದಿಲ್ಲದಿರು

ಪ್ರ : ನಾನು ಗಂಡುಳ್ಳ ಗರತಿ, ಬಿಡುಗೆಟ್ಟು ಬಂದಿಲ್ಲ, ನಾಲಗೆ ಹಿಡಿದು ಮಾತಾಡು. ಇನ್ನೊಂ-ದ್ಸಾ-ರಿ ಬಿಡು-ಗೆ-ಟ್ಟೋ-ಳು ಅಂದ್ರೆ-ಗಿಂ-ದ್ರೆ ನಿನ್ನ ಜೋಡಿ ಕರಡಿಗೆ ಕಿತ್ತು ಕೈಗೆ ಕೊಡ್ತೀನಿ.

೨೨೩೩. ಬಿಡ್ತು ಅನ್ನು = ಅಶುಭ ಪರಿಹಾರವಾಯಿತು ಎನ್ನು, ಶಾಂತಂ ಪಾಪಂ ಎನ್ನು

(ಬಿಡ್ತು < ಬಿಟ್ಟಿತು)

ಪ್ರ : ಹಂಗೆ ಹೇಳ್ತಾರ ? ಬಿಡ್ತು ಅನ್ನು.

೨೨೩೪. ಬಿಡಿಬೀಸಾಗಿ ಬರು = ಪುರಸೊತ್ತು ಮಾಡಿಕೊಂಡು ಬರು

(ಬಿಡುಬೀಸು < ಬಿಡುವು + ಬೀಸು = ಹೆಚ್ಚು ಪುರಸೊತ್ತು)

ಪ್ರ : ಎಂದಾದರೂ ಬಿಡುಬೀಸಾಗಿ ಬಾ, ಕುಂತು ಮಾತಾಡೋಣ

೨೨೩೫. ಬಿದ್ದಗೋಡೆ ಹಾಕದಿರು = ಬದುಕು ಬಾಳಿನ ಬಗ್ಗೆ ಆಸ್ಥೆ ಇಲ್ಲದಿರು, ಮನೆಮಠದ

ಬಗ್ಗೆ ಕಾಳಜಿ ಇಲ್ಲದಿರು

ಪ್ರ : ಗಾದೆ – ಇದ್ದ ಕಡೆ ಇರೋದೂ ಇಲ್ಲ

ಬಿದ್ದ ಗೋಡೆ ಹಾಕೋದೂ ಇಲ್ಲ.

೨೨೩೬. ಬಿದ್ದಂಬೀಳಾ ಓಡು = ಬಿದ್ದು ಎದ್ದು ಓಡು, ಬೀಳುವುದನ್ನೂ ಲೆಕ್ಕಿಸದೆ ಓಡು

ಪ್ರ : ಕರಡಿ ಅಟ್ಟಿಸಿಕೊಂಡು ಬರ್ತಾ ಇದೆ ಅಂತ ಬಿದ್ದಂಬೀಳಾ ಓಡಿದ.

೨೨೩೭. ಬಿದಿರ ಬೊಡ್ಡೆಯಂತಿರು = ಗಟ್ಟಿಮುಟ್ಟಾಗಿರು

(ಬೊಡ್ಡೆ = ಬುಡ, ತೆಂಡೆ)

ಪ್ರ : ಹುಡುಗ ಒಳ್ಳೆ ಬಿದಿರ ಬೊಡ್ಡೆಯಂತೆ ಇದ್ದಾನೆ, ಇರಿಸಿಕೊಳ್ಳಬಹುದು ಧಾರಾಳವಾಗಿ.

೨೨೩೮. ಬಿದ್ದು ಸಾಯು = ಹೆಚ್ಚು ಆಸೆ ಪಡು

ಪ್ರ : ಹಣ ಅಂದ್ರೆ ಸಾಕು, ಬಿದ್ದು ಸಾಯ್ತಾನೆ.

೨೨೩೯. ಬಿನ್ನಕ್ಕೆ ಹೋಗು = ಇನ್ನೊಬ್ಬರ ಕರೆಯನ್ನು ಪೂರೈಸಲು ಹೋಗು

(ಬಿನ್ನ < ಬಿನ್ನಹ < ಬಿನ್ನಪ = ವಿಜ್ಞಾಪನೆ)

ಪ್ರ : ಸ್ವಾಮಿಗಳು ಭಕ್ತರ ಮನೆಗೆ ಬಿನ್ನಕ್ಕೆ ಹೊರಟಿದ್ದಾರೆ, ಸಂಜೆ ಮೇಲೆ ಬನ್ನಿ

೨೨೪೦. ಬಿನ್ನವಾಗು = ಒಡೆದು ಹೋಗು, ಮುಕ್ಕಾಗು

(ಬಿನ್ನ < ಭಿನ್ನ = ಒಡಕು, ಬಿರುಕು)

ಪ್ರ : ವಿಗ್ರಹ ಬಿನ್ನವಾದ್ದರಿಂದ ಹೊಸದನ್ನು ಪ್ರತಿಷ್ಠಾಪಿಸಬೇಕು.

೨೨೪೧. ಬಿನ್ನಾಣದ ಮಾತಾಡದಿರು = ಮರುಳು ಮಾಡುವ ಬಣ್ಣದ ಮಾತಾಡದಿರು, ವೈಯಾರದ ನಯ ವಂಚನೆಯ ಮಾತಾಡದಿರು.

(ಬಿನ್ನಾಣ < ಬಿನ್ನಣ < ವಿಜ್ಞಾನ = ವಿಶೇಷವಾದ ಜ್ಞಾನ, ಯುಕ್ತಿ)

ಪ್ರ : ಚಿನಾಲಿಯ ಬಿನ್ನಾಣದ ಮಾತಿಗೆ ನನ್ನಾಣೆ ಕಿವಿಗೊಡಬೇಡ.

೨೨೪೨. ಬಿಮ್ಮಗಿರು = ಕಟ್ಟುಮಸ್ತಾಗಿರು, ಗಟ್ಟಿಮುಟ್ಟಾಗಿರು

ಪ್ರ : ಗಾದೆ – ಬಿಮ್ಮಗಿದ್ದಾಗ ಹಮ್ಮು

ಬಿಮ್ಮು ತಪ್ಪಿದಾಗ ದಮ್ಮು

೨೨೪೩. ಬಿಮ್ಮನಸೆಯಾಗಿರು = ತುಂಬು ಗರ್ಭಿಣಿಯಾಗಿರು

(ಬಿಮ್ಮನಸೆ < ಬಿಣ್ಪು + ಮನುಷ್ಯೆ; ಬಿಣ್ಪು = ದಪ್ಪ, ಸ್ಥೂಲ)

ಪ್ರ : ಬಿಮ್ಮನಸೆಗೆ ಮನೆಯವರ ಒಮ್ಮನಸ್ಸಿನ ಆದರ ಆರೋಗ್ಯದಾಯಕ

೨೨೪೪. ಬಿರುಕು ಹುಟ್ಟಿಸು = ವಿರಸ ಮೂಡಿಸು

ಪ್ರ : ಅಣ್ಣತಮ್ಮಂದಿರಿಗೆ ಚಾಡಿ ಹೇಳಿ ಬಿರುಕು ಹುಟ್ಟಿಸುವ ಬಾಯಿಹರುಕರಿಗೆ ಬರವಿಲ್ಲ,.

೨೨೪೫. ಬಿರುಸಾಗು = ಒರಟಾಗು, ವೇಗ ಜಾಸ್ತಿಯಾಗು

ಪ್ರ : ಗಾದೆ – ಕನ್ನಡ ಸರಸು

ಮರಾಠಿ ಬಿರುಸು

೨೨೪೬. ಬಿಸಾಡಿದಂಗೆ ಮಾತಾಡು = ಪೆಗ್ಗೆಯಿಂದ ಮಾತಾಡು, ಕತ್ತೆ ಒದ್ದಂತೆ ಮಾತಾಡು

(ಬಿಸಾಡು < ಬಿಸುಡು = ಎಸೆ, ಒಗೆ)

ಪ್ರ : ದೊಡ್ಡೋರು ಚಿಕ್ಕೋರು ಅನ್ನೋ ಗಣನೆಯೇ ಇಲ್ಲದೆ ಬಿಸಾಡಿದಂಗೆ ಮಾತಾಡ್ತಾನೆ.

೨೨೪೭. ಬಿಸಿ ತಾಕು = ಚುರುಕು ಮುಟ್ಟು, ಆಗಾಮಿ ಅನಾಹುತದ ಅರಿವಾಗು

ಪ್ರ : ಈಗಾಗಲೇ ಅಣ್ಣನಿಗೆ ಬಿಸಿ ತಾಕಿದೆ, ಮತ್ತೆ ಕೈ ಹಾಕೋಕೆ ಹೋಗಲ್ಲ.

೨೨೪೮. ಬಿಳೀ ಕಾಜಗದ ಮೇಲೆ ಕರೀ ಗೀಟು ಹಾಕು = ವಿದ್ಯಾವಂತನಾಗಿ ಅಧಿಕಾರ ನಿರ್ವಹಿಸು.

(ಕಾಜಗ < ಕಾದಗ < ಕಾಗದ; ಕರಿಗೀಟು = ಶಾಹಿಯಿಂದ ಬರೆದ ಬರಹ)

ಪ್ರ : ನಾವು ಮಳೆಬಿಸಿಲು ಅನ್ನದೆ ದುಡಿದ್ರೂ ಹೊಟ್ಟೆಗಿದ್ರೆ ಬಟ್ಟೆಗಿಲ್ಲ ಬಟ್ಟೆಗಿದ್ರೆ ಹೊಟ್ಟೆಗಿಲ್ಲ. ಆದರೆ ನೀವು ಬಿಳೀ ಕಾಜಗದ ಮೇಲೆ ಕರೀ ಗೀಟು ಹಾಕಿ, ತಿಂಗಳಾಯ್ತು ಅನ್ನೋದೇ ತಡ ಝಣ್ ಝಣ್ ಅಂತ ಎಣಿಸ್ಕೊಂಡು ಕಾಲಮೇಲೆ ಕಾಲು ಹಾಕ್ಕೊಂಡು ಹಾಯ್ವಾಗಿರ್ತೀರಿ.

೨೨೪೯. ಬಿಳೀ ಹೋರಿ ಕಣ್ಣಿ ಹಾಕಿಕೊಂಡಿರು = ಅನ್ನ ಇಲ್ಲದಿರು

(ಬಿಳೀ ಹೋರಿ = ಅಕ್ಕಿ, ಅನ್ನ; ಕರಿ ಹೋರಿ = ರಾಗಿ ಮುದ್ದೆ; ಕಣ್ಣಿ ಹಾಕಿಕೊಳ್ಳು = ಎಳೆಯಲಾರೆನೆಂದು ನೊಗ ಕೆಳಕ್ಕೆ ಹಾಕಿ ನಿಂತು ಬಿಡು)

ಪ್ರ : ಈ ಸಾರಿ ಬಿಳೀ ಹೋರಿ ಕಣ್ಣಿ ಹಾಕ್ಕೊಂಡಿದೆ, ಆದ್ದರಿಂದ ಕರಿ ಹೋರಿ ಕಡೆಗಣಿಸಬೇಡಿ ಒಂದು ಪಂಕ್ತಿಯ ಮೇಲೆ ಹೇಳಿಕೊಂಡು ಹೋದ ಯಜಮಾನ.

೨೨೫೦. ಬೀಗದೆಸಲು ಕೈಯಲ್ಲಿರು = ಜುಟ್ಟು ವಶದಲ್ಲಿರು

(ಬೀಗದೆಸಲು = ಬೀಗದ ಕೈ)

ಪ್ರ : ಬೀಗದೆಸಲು ನನ್ನ ಕೈಯಲ್ಲಿರುವಾಗ, ಅವನಾಟ ಏನೇನೂ ನಡೆಯಲ್ಲ.

೨೨೫೧. ಬೀಜ ಬಿತ್ತು = ತಂದು ಹಾಕು, ನಾರದನ ಕೆಲಸ ಮಾಡು, ವೈಮನಸ್ಯ ಮೂಡಿಸು

ಪ್ರ : ಬೀಜ ಬಿತ್ತಿಬಿಟ್ಟು, ಏನೂ ಕಾಣದ ಮಳ್ಳಿ ಹಂಗೆ ತಿರುಗಾಡ್ತಾನೆ.

೨೨೫೨. ಬೀಜ ಹೊಡೆಸು = ಹಿಡ ಮಾಡಿಸು, ನಿರ್ವೀರ್ಯಗೊಳಿಸು

ಪ್ರ : ಬೇರೆಯವರ ಕುರಿ ಮಂದೆಗೆ ನುಗ್ಗಿ ದಾಂಧಲೆ ಮಾಡ್ತದೆ ಅಂತ ಟಗರಿನ ಬೀಜ ಹೊಡಿಸಿದೆ.

೨೨೫೩. ಬೀಟೆ ಹೊಡಿ = ಸೀಳು ಬಿಡು

(ಬೀಟೆ = ಬಿರುಕು)

ಪ್ರ : ಭತ್ತದ ಗದ್ದೆ ನೀರಿಲ್ಲದೆ ಬೀಟೆ ಹೊಡಿದಿರೋದು ಕಾಣಲ್ವ?

೨೨೫೪. ಬೀಯಾ ಉಣ್ಣಿಸು = ಅನ್ನ ಉಣ್ಣಿಸು

(ಬೀಯಾ < ಬೀಯ = ಅಕ್ಕಿ, ಅದರಿಂದ ಮಾಡಿದ ಅನ್ನ) ಸಾಮಾನ್ಯವಾಗಿ ತಾಯಂದಿರು ಮಕ್ಕಳಿಗೆ ‘ಬೀಯಾ ಉಣ್ಣಿಸ್ತೀನಿ ಬಾ’ ಎಂದೇ ಕರೆಯುವುದು. ಬಿಯ, ಬುಯ, ಬುವ ಎಂಬ ರೂಪಗಳೂ ಉಂಟು. ಮದುವೆಗಳಲ್ಲಿ ಮದುಮಕ್ಕಳಿಗೆ ಬುವ ಇಕ್ಕುವ ಶಾಸ್ತ್ರವೂ ಉಂಟು.

ಪ್ರ : ಬೀಯಾ ಉಣಿಸ್ತೀನಿ ಬಾ ಅಂತ ಕರೆದೇಟಿಗೇ ಮಗು ಓಡಿತು, ತಾಯಿ ಬಂದು ಹಿಡಿಯಲಿ ಎಂದು.

೨೨೫೫. ಬೀಲು ಬಿಡು = ಸೀಳು ಬಿಡು

(ಬೀಲು = ಬಿರುಕು)

ಪ್ರ : ಕದಕ್ಕೆ ಆಗ್ತದೆ ಅಂತ ಮಡಗಿದ್ದ ಹಲಸಿನ ಹಲಗೆ ಬೀಲು ಬಿಟ್ಟುಬಿಟ್ಟಿದೆ.

೨೨೫೬. ಬೀಳಾಗು = ಕೀಳಾಗು, ನಿಷ್ಪ್ರಯೋಜಕವಾಗು

(ಬೀಳು = ಬಂಜರು, ಪಾಳು)

ಪ್ರ : ಬೀಳಾದ್ರೂ ಗೋಡು ಗೊಬ್ಬರ ಹೊಡೆದು ಫಲವತ್ತಾಗಿಸಬಹುದು.

೨೨೫೭. ಬೀಳುಕೊಡು = ಕಳಿಸು, ಕಳಿಸಿಕೊಡು

ಪ್ರ : ಬೀಳುಕೊಡೋಕೆ ಊರ ಜನ ಎಲ್ಲ ಬಂದಿದ್ರು.

೨೨೫೮. ಬೀಳುಗಳೆ = ಕೀಳಾಗಿ ಕಾಣು, ಕಳಪೆ ಮಾಡು

ಪ್ರ : ಕೆಳವರ್ಗದವರನ್ನು ಬೀಳುಗಳೆಯೋದು ಮೇಲ್ವರ್ಗದವರ ಪರಂಪರಾಗತ ಚಾಳಿ

೨೨೫೯. ಬುಕ್ಕಲು ಆತುಕೊಳ್ಳು = ಮೈಕೈ ಮುಖ ಊದಿಕೊಳ್ಳು

(ಬುಕ್ಕಲು = ಕಾಮಾಲೆ ರೋಗ)

ಪ್ರ : ಬುಕ್ಕಲು ಆತ್ಕೊಂಡ ಬುರ್ರೀ‍ನ ಸೊಸೆಯಾಗಿ ತರ್ತೀರಾ?

೨೨೬೦. ಬುಗರಿ ಆಡಿಸು = ತನ್ನ ಇಷ್ಟದಂತೆ ಕುಣಿಸು

ಪ್ರ : ಹೆಂಡ್ರು ಗಂಡನ್ನ ಬುಗುರಿ ಮಾಡ್ಕೊಂಡು ಆಡಿಸ್ತಾಳೆ.

೨೨೬೧. ಬುಟ್ಟಿಗೆ ಹಾಕಿಕೊಳ್ಳು = ತನ್ನ ವಶವರ್ತಿ ಮಾಡಿಕೊಳ್ಳು

ಪ್ರ : ಹೊಟ್ಟೆ ಮುಂದಕ್ಕೆ ಬಂದಿತ್ತು, ಬೆಪ್ಪು ನನ್ಮಗನ್ನ ಬುಟ್ಟಿಗೆ ಹಾಕ್ಕೊಂಡ್ಲು.

೨೨೬೨. ಬುಡಕ್ಕೆ ನೀರಿಕ್ಕು = ದ್ರೋಹ ಬಗೆ, ಬುಡ ಮೇಲಾಗುವಂತೆ ಮಾಡು

ಪ್ರ : ಬಡಪಾಯಿ ಬೆಳೀಲಿ ಅಂತ ಸಹಾಯ ಮಾಡಿದ್ದಕ್ಕೆ, ನನ್ನ ಬುಡಕ್ಕೆ ನೀರಿಕ್ಕಿದ.

೨೨೬೩. ಬುಡುಬುಡಿಕೆ ಅಲ್ಲಾಡಿಸು = ಬೂಸಿ ಹೇಳು, ಸುಳ್ಳು ಹೇಳು

(ಬುಡುಬುಡಿಕೆ = ಸಣ್ಣ ಡಮರುಗದ ಆಕಾರದಲ್ಲಿರುವ ಶಕುನ ಹೇಳುವ ಸಾಧನ) ಬುಡುಬುಡಕರು ಎಂಬ ಜನಾಂಗ ಶಕುನ ಹೇಳುತ್ತಾ ಬದುಕು ಸಾಗಿಸುವ ನಿರ್ಗತಿಕ-ರು. ಬುಡುಬುಡಿಕೆಯನ್ನು ಕೈಯಲ್ಲಿ ಹಿಡಿದು ‘ಬುಡಬುಡ’ ಎಂದು ಅಲ್ಲಾಡಿಸುತ್ತಾ ಶಕುನ ಹೇಳುವುದರಿಂದ ಅವರಿಗೆ ಬುಡುಬುಡಿಕೆಯವರು ಎಂದೇ ಹೆಸರು ಬಂದಿದೆ. ಬೆಳಗಿನ ಜಾವ ಹಾಲಕ್ಕಿಯ ಸದ್ದು ಕೇಳಿ ಅದರ ಆಧಾರದ ಮೇಲೆ ಶಕುನ ಹೇಳುತ್ತಾರೆ. ಹಕ್ಕಿಯ ಸದ್ದನ್ನು ಅರ್ಥ ಮಾಡಿಕೊಳ್ಳುವ, ಅದರ ಭಾಷೆಯನ್ನು ಗ್ರಹಿಸುವ ಶಕ್ತಿ ಈ ಅಲೆಮಾರಿ ಜನಾಂಗಕ್ಕಿದೆ ಎಂದು ಹೇಳಲಾಗುತ್ತದೆ. ಒಬ್ಬ ಪೋಲಿಸ್ ವರಿಷ್ಠಾಧಿಕಾರಿಯ ಮನೆಯ ಮುಂದೆ ಮಸುವಿಗೇ ನಿಂತು ಬುಡುಬುಡಿಕೆ ಅಲ್ಲಾಡಿಸುತ್ತಾ ‘ಸಾಹೇಬರೇ ನಿಮಗೆ ಜೈಲುವಾಸ ಕಾದೈತಿ’ ಎಂದು ಶಕುನ ಹೇಳಿದಾಗ, ಆ ಅಧಿಕಾರಿ ಅವನನ್ನು ಅಟ್ಟಿಸಿಕೊಂಡು ಹೋದದ್ದು, ಅವನು ಬಿದ್ದಂಬೀಳಾ ಓಡಿ ಬಚಾವಾದದ್ದು, ಬುಡುಬುಡುಕೆಯವನ ಶಕುನದಂತೆ ಆ ಅಧಿಕಾರಿ ಕೆಲವೇ ದಿನಗಳಲ್ಲಿ ಜೈಲು ಸೇರಿದ್ದು ಇತ್ತೀಚಿನ ಸತ್ಯಘಟನೆ. ಆದದ್ದರಿಂದ, ಹಾಲಕ್ಕಿಯ ಸದ್ದು (ಭಾಷೆ) ಕೇಳಿ ಶಕುನ ಹೇಳುವ ಆ ಜನರಲ್ಲಿ ಒಂದು ಅತೀಂದ್ರಿಯ ಶಕ್ತಿ ಅಡಗಿದೆ ಎನ್ನಿಸುತ್ತದೆ. ಆದರೆ ಆ ವೃತ್ತಿಯವರು ಇತ್ತೀಚೆಗೆ ಕಡಮೆಯಾಗುತ್ತಿದ್ದಾರೆ, ಆ ಅಂತಃಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾರೆ.

ಪ್ರ : ಬುಡುಬುಡಿಕೆ ಅಲ್ಲಾಡಿಸಿ ಹೇಳಿಬಿಟ್ರೆ ಎಲ್ಲ ನಿಜವಾಗುತ್ತ ? ಸುಳ್ಳು ಬೂಸಿ ಇರಲ್ವ?

೨೨೬೪. ಬುತ್ತಿ ಬಿಚ್ಚು = ಊಟ ಮಾಡಲು ಅಣಿಯಾಗು

(ಬುತ್ತಿ = ಕಟ್ಟಿಕೊಂಡು ಬಂದ ಆಹಾರ)

ಪ್ರ : ಗಾದೆ – ಬೀಗರ ಮುಂದೆ ಬುತ್ತಿ ಬಿಚ್ಚೊಂದೂ ಒಂದೆ

ಸಂತೇಲಿ ಸೀರೆ ಬಿಚ್ಚೊದೂ ಒಂದೆ

೨೨೬೫. ಬುಯ ಇಕ್ಕುವ ಸ್ಯಾಸ್ತ್ರ ಮಾಡು = ಮದುಮಕ್ಕಳಿಗೆ ಅನ್ನ ಉಣ್ಣಿಸುವ ಆಚರಣೆ ಮಾಡು.

(ಬುಯ < ಬಿಯಾ < ಬೀಯ = ಅಕ್ಕಿ ಅನ್ನ ; ಸ್ಯಾಸ್ತ್ರ < ಶಾಸ್ತ್ರ = ಆಚರಣೆ)

ಪ್ರ : ಹೆಣ್ಣುಗಂಡಿಗೆ ಬುಯ ಇಕ್ಕುವ ಸ್ಯಾಸ್ತ್ರ ಮಾಡಿ, ಹೊತ್ತಾಗಿ ಹೋಯ್ತು.

೨೨೬೬. ಬುರುಡೆ ಹೊಡಿ = ಬಡಾಯಿ ಕೊಚ್ಚು

ಪ್ರ : ಅವನ ಬಾಯಿಗೆ ಬಿರಡೆ ಹಾಕಿದರೂ, ಬುರುಡೆ ಹೊಡೆಯೋದು ಬಿಡಲ್ಲ.

೨೨೬೭. ಬುರುಡೇಲಿ ಬಿಸಿನೀರು ಕಾಯಿಸು = ಸಾಯಿಸು, ತಲೆತೆಗಿ

(ಬುರುಡೆ = ತಲೆಯ ಚಿಪ್ಪು) ಸ್ನಾನ ಮಾಡಲು ಹಂಡೆಯಲ್ಲಿ ನೀರು ಕಾಯಿಸಿದಂತೆ ಮನುಷ್ಯನ ಬುರುಡೆಯಲ್ಲಿ ನೀರು ಕಾಯಿಸುತ್ತೇನೆ ಎಂಬಲ್ಲಿರುವ ದ್ವೇಷ ರೋಷ ಆತ್ಯಂತಿಕ ಅವಸ್ಥೆಯಲ್ಲಿ ಅಭಿವ್ಯಕ್ತಗೊಂಡಿದೆ.

ಪ್ರ : ಇಷ್ಟರಲ್ಲೇ ಅವನ ಬುರುಡೇಲಿ ಬಿಸಿನೀರು ಕಾಯಿಸದಿದ್ರೆ, ನನ್ನ ಹೆಸರು ಹಿಡಿದು ಕರೀಬೇಡಿ, ಕುರೋ ಕುರೋ ಅಂತ ಕರೀರಿ.

೨೨೬೮. ಬುಲ್ಲಿ ಮೇಲೆ ಕೈ ಹಾಕು = ಸ್ತ್ರೀ ಜನನೇಂದ್ರಿಯ ಮುಟ್ಟು

(ಬುಲ್ಲಿ = ಯೋನಿ; ಕೆಲವು ಸಾರಿ ಶಿಷ್ನಕ್ಕೂ ಬುಲ್ಲಿ ಎನ್ನಲಾಗುತ್ತದೆ)

ಪ್ರ : ಗಾದೆ – ಬೂವಮ್ಮ ಸೈ

ಬುಲ್ಲಿ ಮೇಲೆ ಕೈ

೨೨೬೯. ಬುಲ್ಲಿ ಹತ್ರಕೆ ಬರು = ಸಂಭೋಗಕ್ಕೆ ತವಕಿಸಿ ಬರು

(ಬುಲ್ಲಿ = ಗೊಲ್ಲಿ, ಯೋನಿ)

ಪ್ರ : ಗಾದೆ – ಅಲ್ಲಿ ಬಾ ಇಲ್ಲಿ ಬಾ ಅಂದದ್ಕೆ ಬುಲ್ಲಿ ಹತ್ರಕ್ಕೆ ಬಂದ, ಗುಲ್ಲಿಸಿಕೊಂಡು.

೨೨೭೦. ಬುಳ್ಳಗೆ ಇರು = ಬೆತ್ತಲೆಯಿರು

(ಬುಳ್ಳಗೆ = ಬೆತ್ತಲೆ, ನಗ್ನ)

ಪ್ರ : ಬುಳ್ಳಗಿರೋ ಹೆಂಗ್ಸನ್ನು ಕಂಡು ಹುಡುಗ ಹುಳ್ಳಗೆ ಆಗಿಬಿಟ್ಟ.

೨೨೭೧. ಬುಳ್ಳಿ ಕೈಯಲ್ಲಿ ಹಳ್ಳು ಮಾಡಿಸಿದಂತಾಗು = ಬೇಗ ಆಗುವುದು ನಿಧಾನವಾಗು

(ಬುಳ್ಳಿ = ಕುಳ್ಳಿ, ಬುಡ್ಡಿ, ಗಿಡ್ಡಿ; ಹಳ್ಳು = ಹರಳು; ಮಾಡಿಸು = ಮೊರದಲ್ಲಿ ಕೇರಿ ಶುದ್ಧಗೊಳಿಸು) ಹರಳನ್ನು ಮೊರದಲ್ಲಿ ಹಾಕಿಕೊಂಡು ‘ಮಾಡಿ’, ‘ಕೇರಿ’ ಕೆಳಕ್ಕೆ ‘ಕೊಚ್ಚಿ’ ದಾಗ ಹರಳುಗಳು ಚೆಲ್ಲಾಪಿಲ್ಲಿಯಾಗಿ ದೂರದೂರಕ್ಕೆ ಉರುಳಿಕೊಂಡು ಹೋಗುತ್ತವೆ. ಬುಳ್ಳಿಯ ಕೈಗಳು ಕುಳ್ಳಗಿರುವುದರಿಂದ ಆ ಹರಳುಗಳನ್ನು ಕೂತಕಡೆಯಿಂದಲೇ ಬಳಿದು ಬಾಚಿ ಮೊರಕ್ಕೆ ಹಾಕಿಕೊಂಡು ಮತ್ತೆ ಒನೆಯಲು, ಕೊಚ್ಚಲು ಆಗುವುದಿಲ್ಲ. ಅವಳು ಮೇಲೆದ್ದೇ ಚೆಲ್ಲಾಡಿರುವ ಹರಳುಗಳನ್ನು ಹೆಕ್ಕಿಕೊಂಡು ತರಬೇಕು. ಹೀಗಾಗಿ ಕೆಲಸ ಬೇಗ ಆಗುವುದು ವಿಳಂಬವಾಗುತ್ತದೆ. ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಸುದ್ದಿ ಮುಟ್ಟಿಸೋದಕ್ಕೆ ಕುಂಟನ್ನ ನೆಂಟರ ಮನೆಗೆ ಕಳಿಸಿದ್ದು, ಬುಳ್ಳಿ ಕೈಲಿ ಹಳ್ಳು ಮಾಡಿಸಿದಂತಾಗ್ತದೆ, ಗ್ಯಾರಂಟಿ.

೨೨೭೨. ಬೂದಿ ಗಂಡೀಲಿ ಹೇಲೋ ಕೆಲಸ ಮಾಡು = ಹೆಡ್ಡ ಕೆಲಸ ಮಾಡು

ಬೂದಿಗುಂಡಿಯ ಅಂಚಿನಲ್ಲಿ ಕುಳಿತು ಹೇಲತೊಡಗಿದರೆ ಹೇಲಿನ ತುಂಡು ಬೂದಿಗುಂಡಿಯೊಳಕ್ಕೆ ಬಿದ್ದ ತಕ್ಷಣ ಬೂದಿ ಹಾರಿ ಬಂದು ಅವನ ಮೈಕೈ ತಲೆಗೆ ತುಂಬಿಕೊಳ್ಳುತ್ತದೆ.

ಪ್ರ : ಬೂದಿ ಗುಂಡೀಲಿ ಹೇಲೋ ಕೆಲಸ ಮಾಡೋದು ಕೋಣಗೆಲಸವೇ ವಿನಾ ಜಾಣಗೆಲಸವಲ್ಲ.

೨೨೭೩. ಬೂದಿ ಬಡುಕನಾಗು = ಮೈಕೈ ಎಲ್ಲ ಧೂಳು ಮಾಡಿಕೊಳ್ಳು

ಪ್ರ : ಈ ಬೂದಿಬಡುಕ ಬೂದೂರ (< ಬಹದ್ದೂರ) ನನ್ನು ಕಂಡು ಆ ಬೂದಿಬಡುಕ (ಶಿವ) ನಗಬಹುದು !

೨೨೭೪. ಬೂಪ ಕೆಲಸ ಮಾಡು = ನಿರ್ವೀರ್ಯ ಕೆಲಸ ಮಾಡು

(ಬೂಪ < ಭೂಪ = ರಾಜ; ಭೂಪ > ಹೂಪ = ಷಂಡ, ಹೆಳವ)

ಪ್ರ : ನೀನು ಮಾಡಿದ ಬೂಪ ಕೆಲಸಕ್ಕೆ ಹೂಪಮರಿ ಬೋಮಾನವಾಗಿ ಕೊಡ್ತೀನಿ.

೨೨೭೫. ಬೂರುಗದ ಸೌದೆ ಒಲೆಗಿಕ್ಕಿದಂತಾಗು = ತನ್ನ ಮೇಲೇ ಕಿಡಿ ಸಿಡಿಸು, ಅವಾಂತರ ಎಬ್ಬಿಸು.

ಬೂರುಗದ ಮರದ ಸೌದೆಯನ್ನು ಮರೆತುಗಿರಿತು ಒಲೆಗಿಟ್ಟರೆ ಚಿಟಿಲ್ ಚಿಟಿಲ್ ಎಂದು ಪಟಾಕಿಗಳು ಸಿಡಿಯತೊಡಗುತ್ತವೆ. ಒಲೆ ಉರಿಸುವ ಹೆಂಗಸರ ಬಟ್ಟೆಗಳನ್ನು ತತಾತೂತು ಮಾಡುತ್ತವೆ. ಆದ್ದರಿಂದಲೇ ಆ ಮರದ ಸೌದೆಯನ್ನು ಒಲೆಗಿಕ್ಕುವುದಿಲ್ಲ. ಅಪ್ಪಿತಪ್ಪಿ ಒಂದು ಸೀಳೇನಾದರೂ ಉಳಿದ ಸೌದೆಗಳ ಜೊತೆ ಸೇರಿಕೊಂಡಿದ್ದರೆ ತತಾತೂತೇ ಗತಿ!

ಪ್ರ : ಗಾದೆ – ಕೂರಗದ ಮನೆಗೆ ಹೋದ್ರೆ ಮೂರು ಮಾತು

ಬೂರುಗದ ಸೌದೆ ಒಲೆಗಿಕ್ಕಿದ್ರೆ ನೂರು ತೂತು

೨೨೭೬. ಬೂಸಿ ಬಿಡು = ಸುಳ್ಳು ಹೇಳು

(ಬೂಸಿ < ಪೂಸಿ < ಪುಸಿ = ಸುಳ್ಳು)

ಪ್ರ : ಅವನು ಬೂಸಿ ಬಿಡೋದ್ರಿಂದ್ಲೇ ಅವನಿಗೆ ‘ಬೂಸಿಚಿಕ್ಕ’ ಅಂತ ಹೆಸರು ಬಂದಿರೋದು

೨೨೭೭. ಬೂಸ್ಟು ಹಿಡಿ = ಮುಗ್ಗಲು ಹಿಡಿ, ಹಾವಸೆ ಹಿಡಿ

ಪ್ರ : ಬೂಸ್ಟು ಹಿಡಿದ ಹಣ್ಣನ್ನಾಗಲೀ ಆಹಾರವನ್ನಾಗಲೀ ತಿನ್ನಬಾರ್ದು, ಆರೋಗ್ಯಕ್ಕೆ ಹಾನಿ.

೨೨೭೮. ಬೆಕ್ಕಿಗೆ ಜ್ವರ ಬರೋ ಮಾತಾಡು = ಅಸಂಭಾವ್ಯವನ್ನು ಸಂಭಾವ್ಯ ಎನ್ನುವಂತೆ ಹೇಳು.

ಬೆಕ್ಕಿನ ಮೈ ಯಾವಾಗಲೂ ಬೆಚ್ಚಗೆ ಇರಬೇಕು. ಅದನ್ನು ಜ್ವರ ಎಂದು ಭಾವಿಸಿದರೆ ತಪ್ಪಾಗುತ್ತದೆ ಎನ್ನುವ ಆಶಯವಿದೆ.

ಪ್ರ : ಬೆಕ್ಕಿನ ಜ್ವರ ಬರೋ ಮಾತಾಡಬೇಡ, ಕೇಳಿ ಕೇಳಿ ಸಾಕಾಗಿದೆ.

೨೨೭೯. ಬೆಕ್ಕಿನ ಹೆಜ್ಜೆಯಲ್ಲಿ ಬರು = ಸದ್ದು ಮಾಡದಂತೆ ಮೆಟ್ಟುಗಾಲಲ್ಲಿ ಬರು

ಬೆಕ್ಕಿನ ಅಂಗಾಲುಗಳಲ್ಲಿ ಮೆತ್ತನೆಯ ಮಾಂಸಲ ಭಾಗ ಇರುವುದರಿಂದ ಸದ್ದಾಗುವುದಿಲ್ಲ. ಮನುಷ್ಯರು ಸದ್ದು ಮಾಡದಂತೆ ಹೋಗಬೇಕಾದರೆ ಹಿಮ್ಮಡಿಯನ್ನು ಮೇಲೆತ್ತಿ ಮುಂದಿನ ಕಾಲುಬೆರಳುಗಳ ಮೇಲೆ ಭಾರ ಬಿಟ್ಟು ಮೆಟ್ಟುಗಾಲಲ್ಲಿ ಹೋಗಬೇಕು.

ಪ್ರ : ಏನೋ ಗುಟ್ಟು ಮಾತಾಡ್ತಾರೆ ಅಂತ ಬೆಕ್ಕಿನ ಹೆಜ್ಜೇಲಿ ಬಂದವಳೆ ಬೇತೂರಿ (< ಬಿತ್ತಾರಿ)!

೨೨೮೦. ಬೆಕ್ಕು ಅಡ್ಡ ಬರು = ಅಪಶಕುನವಾಗು

ಬೆಕ್ಕು ಅಡ್ಡ ಬಂದರೆ ಹೊರಟ ಕೆಲಸ ಆಗುವುದಿಲ್ಲ ಎಂಬುದು ಜನಪದ ನಂಬಿಕೆ

ಪ್ರ : ಬೆಕ್ಕು ಅಡ್ಡ ಬಂತು, ಪಯಣ ಮಾಡೋದು ಬೇಡ.

೨೨೮೧. ಬೆಟ್ಟ ಒರಗು = ಅಲುಗಾಡದಂಥ ಭದ್ರವಾದ ಆಧಾರ ಹೊಂದು, ರಕ್ಷಕರು ಬೆನ್ನಿಗಿರು.

ಪ್ರ : ಮೈಮೇಲೆ ಬೀಳೋ ಗೋಡೆ ಒರಗಬಾರ್ದು, ಬೆಟ್ಟ ಒರಗಬೇಕು.

೨೨೮೨. ಬೆಟ್ಟಕ್ಕೆ ಬಟ್ಟೆ ಹೊಚ್ಚಲು ಹೋಗು = ವ್ಯರ್ಥ ಪ್ರಯತ್ನದಲ್ಲಿ ತೊಡಗು

ಪ್ರ : ಗಾದೆ – ಬೆಟ್ಟಕ್ಕೆ ಬಟ್ಟೆ ಹೊಚ್ಚೋದು, ಮುಗಿಲಿಗೆ ಇಚ್ಚಣಿಗೆ ಹಾಕೋದು – ಎರಡೂ ಒಂದು.

೨೨೮೩. ಬೆಣಚುಕಲ್ಲಿನಂತಿರು = ಬೆಳ್ಳಗೆ ಗಟ್ಟಿಗೆ ಇರು.

ಪ್ರ : ನಾನು ಅಣಚಿ (ಮಾಂಗಲ್ಯ) ಕಟ್ಟಿದ ಹೆಣ್ಣು ಬೆಣಚುಕಲ್ಲಿನಂತೆ ಬೆಳ್ಳಗೂ ಇದ್ದಾಳೆ ಗಟ್ಟಿಗೂ ಇದ್ದಾಳೆ.

೨೨೮೪. ಬೆಣ್ಣಿ ತಟ್ಟು = ಸಗಣಿಯನ್ನು ಸದುಪಯೋಗ ಪಡಿಸಿಕೊಳ್ಳಿ

(ಬೆಣ್ಣಿ < ಬೆರಣಿ = ಒಣಗಿದ ಮೇಲೆ ಒಲೆಗೆ ಉರುವಲು ಮಾಡಿಕೊಳ್ಳುವಂಥದು)

ಪ್ರ : ಬೆಣ್ಣಿ ತಟ್ಟೋದು ನೋಡಿ ನಗೋರು ನಗಲಿ, ನಾವು ಕಸದಿಂದ ರಸ ತೆಗೆಯೋ ಜನ

೨೨೮೫. ಬೆಣೆ ಹೊಡಿ = ತೊಂದರೆ ಮಾಡು, ಪ್ರತಿಕೂಲ ಮಾಡು

(ಬೆಣೆ = ಆಪು, ಗೂಟ, ಬಿರಿ)

ಪ್ರ : ಏನೋ ಬಡವ ಬದುಕಿಕೊಳ್ಳಲಿ ಅಂದ್ರೆ, ನನ್ನ ತಿಕ್ಕೆ ಬೆಣೆ ಹೊಡೆಯೋಕೆ ಬಂದನಲ್ಲ.

೨೨೮೬. ಬೆಣ್ಣೇಲಿ ಕೂದಲು ತೆಗೆದಂತೆ ಮಾತಾಡು = ನಯವಾಗಿ ನವುರಾಗಿ ಮಾತಾಡು

(ಬೆಣ್ಣೆ < ವೆಣ್ಣೈ (ತ) = ನವನೀತ)

ಪ್ರ : ಗಾದೆ – ಬೆಣ್ಣೆಯಂಥ ಮಾತು

ತುಣ್ಣೆಯಂಥ ಕೆಲಸ

೨೨೮೭. ಬೆಣ್ಣೆ ಹಚ್ಚು = ಪೂಸಿ ಹೊಡಿ, ತಾಜಾ ಮಾಡು

ಪ್ರ : ಕೆಲಸ ಆಗಲಿ ಅಂತ ಅವನಿಗೆ ಬೆಣ್ಣೆ ಹಚ್ತಾ ಅವನೆ, ಆಮೇಲೆ ತುಣ್ಣೆ ತೋರಿಸ್ತಾನೆ.

೨೨೮೮. ಬೆತ್ತ ಹಿಡಿ = ಓಚಯ್ಯನ ಕೆಲಸ ಮಾಡು

ಪ್ರ : ಗಾದೆ – ಲಾಠಿ ಹಿಡಿಯೋ ಕೆಲಸಕ್ಕೆ ಹೋಗೋ ಅಂದ್ರೆ,

ಬೆತ್ತ ಹಿಡಿಯೋ ಕೆಲಸಕ್ಕೆ ಬಂದ.

೨೨೮೯. ಬೆನ್ನ ಮೇಲೆ ನೆಲ್ಲು ಕಟ್ಟು = ಗುದ್ದು, ಹೊಡಿ

ಪ್ರ : ಅವಳ ಜುಟ್ಟು ಹಿಡಿದು ರಾಗಿ ಬೀಸಿ, ಬೆನ್ನ ಮೇಲೆ ನೆಲ್ಲು ಕುಟ್ಟಿ ತವರಿಗೆ ಕಳಿಸ್ಯವನೆ, ಕಚ್ಚೆ ಹರುಕ

೨೨೯೦. ಬೆನ್ನ ಹಿಂದೆ ಬಿದ್ದವರನ್ನು ಬಿಡದಿರು = ಒಡಹುಟ್ಟಿದವರನ್ನು ದೂರ ಮಾಡದಿರು.

(ಬಿದ್ದವರು = ಹುಟ್ಟಿದವರು (ಗರ್ಭದಿಂದ ಕೆಳಕ್ಕೆ ಬಿದ್ದವರು) )

ಪ್ರ : ಬೆನ್ನ ಹಿಂದೆ ಬಿದ್ದೋರ್ನ ಬಿಟ್ಟೋರುಂಟ ? ದೇವರು ಮೆಚ್ತಾನ?

೨೨೯೧. ಬೆನ್ನಾಡಿ ಹೋಗು = ಅಟ್ಟಿಸಿಕೊಂಡು ಹೋಗು

(ಬೆನ್ನಾಡು = ಹಿಂಬಾಲಿಸು)

ಪ್ರ : ಕಳ್ಳನ ಬೆನ್ನಾಡಿ ಹೋದ್ರೂ ಬರಿಗೈಲಿ ಹಿನ್ನಡೆದು ಬರಬೇಕಾಯ್ತು.

೨೨೯೨. ಬೆನ್ನಿಗಿರು = ಸಹಾಯಕವಾಗಿರು, ಕುಮ್ಮಕ್ಕಾಗಿರು.

ಪ್ರ : ಗಾದೆ – ಬೆನ್ನಿಗಿರಬೇಕೋ

ಬೆನ್ನಿಗಿರೀಬೇಕೋ?