೨೨೯೩. ಬೆನ್ನಿಗೆ ಹಾಳೆ ಕಟ್ಕೊಳ್ಳು = ಶಿಕ್ಷೆ ಅನುಭವಿಸಲು ಪೂರ್ವಭಾವಿ ಸಿದ್ಧತೆ ಮಾಡಿಕೊಳ್ಳು.

(ಹಾಳೆ = ಒಡಾಳೆ ಪಟ್ಟೆ, ಸುಲಿಪಟ್ಟೆ ಎಲೆ, ಅಡಿಕೆಯ ಹೊಂಬಾಳೆಗೆ ಮುಸುಕಾಗಿದ್ದ ತಿಗುಡು) ಮಲೆನಾಡು ಸಾಗರ ಹಾಗೂ ಕರಾವಳಿ ಪ್ರದೇಶದಲ್ಲಿ ತೆಂಗು, ಅಡಕೆ ತೋಟ ಅಧಿಕ. ನೀರಾವರಿ ಸೌಲಭ್ಯ ಆ ಬೆಳೆಗೆ ಸಹಕಾರಿಯಾಗಿದೆ. ಆದ್ದರಿಂದ ಆ ಪ್ರದೇಶದಲ್ಲಿ ಹಾಳೆ (ಒಡಾಳೆ ಪಟ್ಟೆ)ಯನ್ನು ತಲೆಗೆ ಟೋಪಿಯಾಗಿ, ಕೊಡೆಯಾಗಿ ಬಳಸುವಂತೆಯೇ ಬೆನ್ನಿಗೆ ರಕ್ಷಾಕವಚವಾಗಿಯೂ ಬಳಸುತ್ತಾರೆ. ಬಾಸುಂಡೆ ಬರುವ ಹಾಗೆ ಏಟು ಬೀಳುತ್ತವೆ ಎಂಬುದನ್ನು ಬೆನ್ನಿಗೆ ಹಾಳೆ ಕಟ್ಕೊಂಡು ಬಾ ಎಂಬ ನುಡಿಗಟ್ಟು ಸೂಚಿಸುತ್ತದೆ – ಬಯಲು ಸೀಮೆಯ ಕಡೆ ‘ಮೈಗೆ ಎಣ್ಣೆ ಸವರಿಕೊಂಡು ಬಾ’ ಎಂಬ ನುಡಿಗಟ್ಟು ಸೂಚಿಸುವಂತೆ. ಈ ಎರಡು ನುಡಿಗಟ್ಟುಗಳ ಮುಖೇನ ಪ್ರಾದೇಶಿಕ ಭಿನ್ನತೆಯನ್ನು, ಭೌಗೋಳಿಕ ಸೌಲಭ್ಯ ಸಮೃದ್ಧಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಬಯಲು ನಾಡಿನಲ್ಲಿ ಸಾಕಷ್ಟು ಮಳೆಯಾಗಿದಿರುವುದರಿಂದ ಅಡಿಕೆ ತೋಟ ಮಾಡಲು ಅನಾನುಕೂಲ. ಆದರೆ ಅಲ್ಪ ಸ್ವಲ್ಪ ಮಳೆಯಲ್ಲೆ ಹರಳು ಗಿಡಗಳು ಬೆಳೆಯುತ್ತವೆ. ಹರಳು ಕಾಯನ್ನು ಬಿಡಿಸಿ, ಹರಳು ಬೀಜವನ್ನು ಬೇಯಿಸಿ ಹರಳೆಣ್ಣೆಯನ್ನು ತೆಗೆದು ತಲೆಗೆ ಹಚ್ಚಿಕೊಳ್ಳುತ್ತಾರೆ ಗುಂಪು ಎಂದು. ನಿರ್ಗತಿಕರ ಮನೆಯಲ್ಲೂ ಹರಳೆಣ್ಣೆಗೆ ಅಭಾವ ಇಲ್ಲದ್ದರಿಂದ ಸಹಜವಾಗಿಯೇ ‘ಬಾಸುಂಡೆ ಉರಿ ತಾಳಲಾರದೆ ಹರಳೆಣ್ಣೆ ಹಚ್ಚಿಕೊಳ್ಳುವ ಅಪರ ಸಿದ್ಧತೆಗೆ ಬದಲಾಗಿ, ಏಟು ತಿನ್ನುವ ಮೊದಲೇ ಮೈಗೆ ಎಣ್ಣೆ ಹಚ್ಚಿಕೊಂಡು ಪೂರ್ವಸಿದ್ಧತೆ ಮಾಡಿಕೊಂಡು ಬಾ’ ಎಂಬ ನುಡಿಗಟ್ಟು ಬಯಲುನಾಡಿನಲ್ಲಿ ಚಾಲ್ತಿಗೆ ಬಂದಿದೆ. ಆದ್ದರಿಂದ ಇಂಥ ನುಡಿಗಟ್ಟುಗಳು ಪ್ರಾದೇಶಿಕ ಭಿನ್ನ ಪರಿಸರ, ಮಳೆಬೆಳೆಗೆ ಜಾಡು ತೋರಿಸುವ ಕೈಮರಗಳು ಎನ್ನಬಹುದು; ಆಯಾ ಪ್ರದೇಶದ ಮಿಡಿತ – ತುಡಿತವನ್ನು ತಿಳಿಸುವ ನಾಡಿಗಳು ಎನ್ನಬಹುದು.

ಪ್ರ : ನಾಳೆ ಬೆನ್ನಿಗೆ ಹಾಳೆ ಕಟ್ಕೊಂಡು ಬಾ ಎಂದು ಆಳಿಗೆ ಬೆದರಿಕೆ ಹಾಕಿದರು, ಗೌಡರು.

೨೨೯೪. ಬೆನ್ನಿಗೆ ಹೊಟ್ಟೆ ಅಂಟು ಹಾಕು = ಜಿಪುಣತನದಿಂದ ತಿನ್ನದೆ ಉಣ್ಣದೆ ಒಣಗಿ ಬತ್ತಿ ಹೋಗು.

ಪ್ರ : ಗಾದೆ – ಕಾಸಿಗೆ ಕಾಸು ಗಂಟು ಹಾಕಿದೋ?

ಬೆನ್ನಿಗೆ ಹೊಟ್ಟೆ ಅಂಟು ಹಾಕಿದೋ?

೨೨೯೫. ಬೆನ್ನು ಚಪ್ಪರಿಸು = ಹುರಿದುಂಬಿಸು, ಪ್ರಚೋದಿಸು

ಎತ್ತುಗಳ ಬೆನ್ನ ಮೇಲೆ ಕೈಯಾಡಿಸಿ, ಅಂಗೈಯಿಂದ ತೀಡಿ ವೇಗವಾಗಿ ಹೆಜ್ಜೆ ಹಾಕುವಂತೆ ಹುರಿದುಂಬಿಸುವ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಹಗ್ಗ ಆತು ಹಿಡಿದು ಮಪ್ಪರಿಯೋರೇ ಜಾಸ್ತಿ, ಬೆನ್ನು ಚಪ್ಪರಿಸಿ ಚುರುಕುಗೊಳಿಸೋರು ಕಡಮೆ.

೨೨೯೬. ಬೆನ್ನು ತಟ್ಟು = ಭೇಷ್ ಎಂದು ಹೊಗಳು, ಸಂತೋಷ ವ್ಯಕ್ತ ಪಡಿಸು.

ಪ್ರ : ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದದ್ದಕ್ಕೆ ಮೇಷ್ಟ್ರು ಬೆನ್ನು ತಟ್ಟಿದರು.

೨೨೯೭. ಬೆನ್ನ ಮೇಲೆ ಬಳ್ಳ ರಾಗಿ ಹರಡುವಂತಿರು = ಅಡ್ಡಗಲ ವಿಶಾಲವಾಗಿರು.

ಪ್ರ : ಎಂಥ ಮೈಕಟ್ಟು ಗಂಡಿಂದು, ಅವನ ಬೆನ್ನ ಮೇಲೆ ಒಂದು ಬಳ್ಳ ರಾಗಿ ಸಲೀಸಾಗಿ ಹರಡಬಹುದು.

೨೨೯೮. ಬೆನ್ನು ಬೀಳು = ಆಶ್ರಯ ಬಯಸಿ ಬರು, ಹಿಂಬಾಲಿಸಿ ಬರು

ಪ್ರ : ಬೆನ್ನು ಬಿದ್ದವರ ಕೈ ಬಿಡಬಾರದು

೨೨೯೯. ಬೆನ್ನು ಸವರು = ಸಾಂತ್ವನ ಮಾಡು, ಸಮಾಧಾನ ಮಾಡು

ಪ್ರ : ಬದುಕು ಹಸನಾಗಬೇಕಾದ್ರೆ, ಬೆನ್ನು ಸವರಿ ಬುದ್ಧಿ ಹೇಳೋರು ಬೇಕು.

೨೩೦೦. ಬೆನ್ನು ಹತ್ತಿದ ಚರ್ಮವಾಗು = ಜೊತೆ ಬಿಟ್ಟಿರದಿರು, ನೆರಳಿನಂತಿರು

ಪ್ರ : ಎಲ್ಲಿಗೆ ಹೊರಟರೂ ನನ್ನ ಹೆಂಡ್ತಿ ಬೆನ್ನು ಹತ್ತಿದ ಚರ್ಮವಾಗ್ತಾಳೆ.

೨೩೦೧. ಬೆಪ್ಪುತಕ್ಕಡಿ ಅಪ್ಪುಗೈಯಾಗಿ ನಿಲ್ಲು = ದೈನ್ಯದಿಂದ ಕೈಕಟ್ಟಿ ನಿಲ್ಲು

(ಬೆಪ್ಪು < ಬೆಳ್ಪು = ದಡ್ಡ; ಅಪ್ಪುಗೈ = ಎದೆಯ ಮೇಲೆ ಕಟ್ಟಿಕೊಂಡ ಕೈ)

ಪ್ರ : ತಪ್ಪು ಮಾಡದಿದ್ರೂ, ಬೆಪ್ಪು ತಕ್ಕಡಿ ಅವನ ಮುಂದೆ ಅಪ್ಪುಗೈಯಾಗಿ ನಿಂತ್ಕೊಂಡ್ನಲ್ಲ?

೨೩೦೨. ಬೆಪ್ಪು ಬೆರಗಾಗು = ಮೂಕವಿಸ್ಮಿತನಾಗು

(ಬೆರಗು = ವಿಸ್ಮಯ, ಸೋಜಿಗ)

ಪ್ರ : ಆ ಸೌಂದರ್ಯ ರಾಶಿಯನ್ನು ಕಂಡು ಬೆಪ್ಪುಬೆರಗಾಗಿ ನಿಂತ

೨೩೦೩. ಬೆಬ್ಬಳಿಸತೊಡಗು = ಹೆದರಿಕೆಯಿಂದ ತೊದಲತೊಡಗು, ತಡವರಿಸತೊಡಗು

(ಬೆಬ್ಬಳಿಸು < ಪೆಪ್ಪಳಿಸು < ಪೆಳ್ಪಳಿಸು = ಭಯಪಡು)

ಪ್ರ : ಅನ್ನ ತಿನ್ನೋಕೆ ಅಬ್ಬಳಿಸೋ ಮಗೀಗೂ, ಮಾತಾಡೋಕೆ ಬೆಬ್ಬಳಿಸೋ ಇವನಿಗೂ ಏನೂ ವ್ಯತ್ಯಾಸವಿಲ್ಲ.

೨೩೦೪. ಬೆರಕೆ ಬೀಳು = ಹಾದರಕ್ಕೆ ಹುಟ್ಟು

ಪ್ರ : ಗಾದೆ – ಬೆರಕೆ ಸೊಪ್ಪಿನೆರಸು ಚೆಂದ

ಬೆರಕೆ ಬಿದ್ದ ಮಕ್ಕಳು ಚೆಂದ

೨೩೦೫. ಬೆರಸಿಕೊಳ್ಳು = ಮಿಶ್ರಣಗೊಳ್ಳು, ರೇತಸ್ಸು ರಜಸ್ಸು ಒಂದಾಗು

ಪ್ರ : ಗಾದೆ – ಸರಸ ಬೆರಸ್ಕೊಂಡು

ಹೊ‌ಟ್ಟೆ ಮುಂದಕ್ಕೆ ಬಂತು

೨೩೦೬. ಬೆರಳಲ್ಲಿ ಎಣಿಸುವಷ್ಟಿರು = ಕೊಂಚ ಜನರು ಹಾಜರಿರು

ಪ್ರ : ಸಭೇಲಿ ಬೆರಳಲ್ಲಿ ಎಣಿಸೋವಷ್ಟು ಜನರಿದ್ದರು ಅಷ್ಟೆ.

೨೩೦೭. ಬೆರಳು ತೋರಿಸದಂತೆ ಬದುಕು = ಇನ್ನೊಬ್ಬರು ತಪ್ಪು ಎತ್ತಿ ಆಡದಂತೆ ಬಾಳು

ಪ್ರ : ಯಾರೂ ಬೆರಳು ತೋರಿಸದಂತೆ ನೇರವಾಗಿ ಬದುಕಿದ್ದೀನಿ, ನಿರುಂಬಳವಾಗಿ ಸಾಯ್ತೀನಿ.

೨೩೦೮. ಬೆರಳು ಮಡಿಸು = ತಪ್ಪಿದ್ದರೆ, ದೋಷವಿದ್ದರೆ ಲೆಕ್ಕ ಹಾಕಿ ಹೇಳು.

ಪ್ರ : ಅವನಲ್ಲಿ ಒಂದು ದೋಷ ಇದ್ರೆ, ಬೆರಳು ಮಡಿಸು, ಒಪ್ಕೋತೀನಿ.

೨೩೦೯. ಬೆಲ್ಲದ ಅಚ್ಚಿನಂತಿರು = ಸುಂದರವಾಗಿರು, ಸಮಪ್ರಮಾಣಬದ್ಧ ಮೈಕಟ್ಟಿರು.

ಪ್ರ : ಬೆಲ್ಲದ ಅಚ್ಚಿನಂತಿರೋ ಹೆಣ್ಣನ್ನು ಬೇಡ ಅಂದ್ರೆ ನಿನ್ನಂಥ ದಡ್ಡ ಬೇರೊಬ್ಬ ಇಲ್ಲ

೨೩೧೦. ಬೆಲೆ ಹೋಗು = ಮಾನ ಹೋಗು

ಪ್ರ : ಬೆಲೆ ಹೋದ ಊರ-ಲ್ಲಿ ನೆಲೆ ನಿಲ್ಲಬಾ-ರ-ದು.

೨೩೧೧. ಬೆವರು ಸುರಿಸು = ಶ್ರಮಿಸು, ದುಡಿ

ಪ್ರ : ಪ್ರತಿಯೊಬ್ಬರೂ ಬೆವರು ಸುರಿಸಿ ಉಣ್ಣುವ ಸಮಾಜ ಸೃಷ್ಟಿಯಾಗಬೇಕು.

೨೩೧೨. ಬೆವರಿಳಿಸು = ಅವಮಾನ ಮಾಡು, ತೇಜೋವಧೆ ಮಾಡು.

ಪ್ರ : ಇವತ್ತು ಅವನ ಮುಖದಲ್ಲಿ ಬೆವರಿಳಿಸಿ ಕಳಿಸಿದ್ದೀನಿ.

೨೩೧೩. ಬೆಸಲಾಗು = ಹೆರಿಗೆಯಾಗು

ಪ್ರ :ಬೆಸಲಾಗುವಾಗಲೇ ಜನ್ಮ ಕೊಟ್ಟ ತಾಯಿ ಪೈಸಲ್ಲಾದಳು

೨೩೧೪. ಬೆಸುಗೆ ಬಿಡು = ಒಡುಕುಂಟಾಗು.

ಪ್ರ : ಅಣ್ಣತಮ್ಮಂದಿರ ಮಧ್ಯೆ ಬೆಸುಗೆ ಬಿಟ್ಕೊಂಡಿದೆ.

೨೩೧೫. ಬೆಳಗೂ ಬೈಗೂ ದುಡಿ = ಅವಿಶ್ರಾಂತವಾಗಿ ಶ್ರಮಿಸು.

ಪ್ರ : ಬೆಳಗೂ ಬೈಗೂ ದುಡಿದರೂ ಕೆಳಗೂ ಮೇಗೂ ಏನೂ ಇಲ್ಲ – ಕ್ಯಾಬಿನೈ ಬರೀ ಬೆತ್ತಲೆ!

೨೩೧೬. ಬೆಳ್ಳಂದು ಹೆಚ್ಚಾಗು = ಅಹಂಕಾರ ಅಧಿಕವಾಗು

(ಬೆಳ್ಳಂದು = ಕೊಬ್ಬು, ನೆಣ, ಚರ್ಬಿ)

ಪ್ರ : ಬೆಳ್ಳಂದು ಹೆಚ್ಚಾದರೆ ಕಣ್ಣೇ ಕಾಣಲ್ಲ, ಆದ್ದರಿಂದ ಒದ್ಕೊಂಡು ಹೋಗ್ತಾರೆ.

೨೩೧೭. ಬೆಳ್ಳು ತೋರಿಸಿದರೆ ಅಂಗೈ ನುಂಗು = ತುಂಬ ಚೂಟಿಯಾಗಿರು, ಖದೀಮನಾಗಿರು

(ಬೆಳ್ಳು = ಬೆರಳು, ಅಂಗೈ = ಹಸ್ತ)

ಪ್ರ : ಆಸಾಮಿ ಬೆಳ್ಳು ತೋರಿಸಿದರೆ ಅಂಗಯ ನುಂಗ್ತಾನೆ, ಹುಷಾರಾಗಿರು.

೨೩೧೮. ಬೇಗೇಲಿ ಬೆಂದು ಒಣಗಿದ ಸೀಗೆಕಾಯಾಗು = ಕಷ್ಟದಲ್ಲಿ ಬೆಂದು ಕರುಕಲಾಗು

(ಬೇಗೆ = ಬೆಂಕಿ)

ಪ್ರ : ಬೇಗೇಲಿ ಬೆಂದು ಒಣಗಿದ ಸೀಗೆಕಾಯಾಗಿರೋದನ್ನು ನೋಡಿ ಕರುಳು ಚುರಕ್ಕಂತು.

೨೩೧೯. ಬೇರಿಂಗಡ ಮಾಡು = ಪಕ್ಷಪಾತ ಮಾಡು, ಭೇದ ಭಾವ ಮಾಡು

(ಬೇರಿಂಗಡ < ಬೇರೆ + ಇಂಗಡ < ಬೇರೆ + ವಿಂಗಡ = ಬೇರೆ ಎಂದು ವಿಂಗಡಿಸುವುದು)

ಪ್ರ : ಬೇರಿಂಗಡ ಮಾಡೋರು ತಾವೂ ಸುಖವಾಗಿರಲ್ಲ, ಬೇರೆಯವರನ್ನೂ ಸುಖವಾಗಿರಲು ಬಿಡಲ್ಲ.

೨೩೨೦. ಬೇರು ಬಿಡು = ನೆಲೆಯೂರು, ಸುಸ್ಥಿರಗೊಳ್ಳು

ಪ್ರ : ಇಲ್ಲಿಗೆ ಬಂದ ಮೇಲೆ ಚೆನ್ನಾಗಿ ಬೇರು ಬಿಟ್ಕೊಂಡ

೨೩೨೧. ಬೇರೆಯಾಗು = ಪಾಲಾಗು, ಭಾಗವಾಗು

ಪ್ರ : ಗಾದೆ – ಕಟ್ಟಿದ ಕೆರೆಗೆ ಕೋಡಿ ತಪ್ಪಲ್ಲ

ಹುಟ್ಟಿದ ಮನೆಗೆ ‘ಬೇರೆ’ ತಪ್ಪಲ್ಲ

೨೩೨೨. ಬೇಲಿ ಹಾಕು = ಬಹಿಷ್ಕಾರ ಹಾಕು, ಒಳಗೆ ಬರದಂತೆ ಕಟ್ಟು ಪಾಡು ಮಾಡು.

ಬಿಜ್ಜಳನ ಕಾಲದಲ್ಲಿ, ಕುರುಬರು ಹಾಲು ಹರವಿಗಳ ಮೇಲೆ ಮಾಂಸ ತಂದು ಮಾರುತ್ತಾರೆಂಬ ನೆಪ ಒಡ್ಡಿ, ಕಲ್ಯಾಣಪಟ್ಟಣಕ್ಕೆ ಪ್ರವೇಶಿಸಕೂಡದೆಂದು ಕುರುಬರಿಗೆ ಬಹಿಷ್ಕಾರ ಹಾಕಿದ್ದರೆಂದೂ, ಆಗ ಕುರುಬರ ಕುಲಗುರು ರೇವಣಸಿದ್ಧೇಶ್ವರ ಹಾಗೂ ಯೋಗಿವರೇಣ್ಯ ಸಿದ್ಧರಾಮೇಶ್ವರರ ನೇತೃತ್ವದಲ್ಲಿ ಕುರುಬ ಜನಾಂಗ ಬಹಿಷ್ಕಾರವನ್ನು ತಿರಸ್ಕರಿಸಿ ಕಲ್ಯಾಣ ಪಟ್ಟಣಕ್ಕೆ ನುಗ್ಗಿದ ವಿಷಯವನ್ನು “ಸತ್ತ ಟಗರನ್ನು ಬದುಕಿಸಿ ಕಲ್ಯಾಣ ಪಟ್ಟಣಕ್ಕೆ ನುಗ್ಗಿಸಿದರು” ಎಂಬ ಪ್ರತಿಮೆಯ ಮೂಲಕ ದಾಖಲಾಗಿರುವುದನ್ನು ‘ಹಾಲು ಮತ ಪುರಾಣ’ ಹಾಗೂ ‘ಸಿದ್ಧರಾಮ ಸಾಂಗತ್ಯ’ ಎಂಬ ಕೃತಿಗಳಲ್ಲಿ ಕಾಣಬಹುದು. ಕಲ್ಯಾಣ ಪಟ್ಟಣದ ಸುತ್ತಲೂ ಬೇಲಿ ಹಾಕಿ, ಬೇಲಿಯಾಚೆಯೇ ಇರಬೇಕೆಂದು ಕಟ್ಟುಪಾಡು ಮಾಡಿದ್ದರೆಂದು ಆ ಗ್ರಂಥಗಳಿಂದ ತಿಳಿದು ಬರುತ್ತದೆ. ಆದ್ದರಿಂದ ‘ಬೇಲಿ ಹಾಕು’ ಎಂಬ ನುಡಿಗಟ್ಟಿಗೆ ಬಹಿಷ್ಕಾರ ಹಾಕು ಎಂಬ ಅರ್ಥ ಅಂದೇ ಚಾಲ್ತಿಯಲ್ಲಿತ್ತು ಎಂಬುದನ್ನು ಕಾಣುತ್ತೇವೆ. ಆದರೆ ಕಾಲಾನುಕ್ರಮದಲ್ಲಿ ತಪ್ಪು ಮಾಡಿದವರನ್ನು ಕುಲದಿಂದ ಹೊರಗೆ ಹಾಕುವ ಪದ್ಧತಿ ಎಲ್ಲ ಜನಾಂಗಗಳಲ್ಲಿ ಬಂದಂತೆ ಕುರುಬ ಜನಾಂಗದಲ್ಲೂ ಬಂತು. ಯಾರು ಶತಮಾನಗಳ ಹಿಂದೆ ‘ಬೇಲಿ ಹಾಕಿಸಿ’ ಕೊಂಡಿದ್ದರೋ ಅವರೇ ತಪ್ಪು ಮಾಡಿದವರನ್ನು ಕುಲದಿಂದ ‘ಬೇಲಿ ಹಾಕಿ’ ಹೊರಗಿಟ್ಟದ್ದು ಇತಿಹಾಸದ ವ್ಯಂಗ್ಯ. ಅಂಥವರನ್ನು ‘ಬೇಲಿ ಸಾಲಿನವರು’ (ಬಹಿಷ್ಕೃತ ವಂಶದವರು) ಎಂದು ಕಡೆಗಣ್ಣಿನಿಂದ ನೋಡುತ್ತಿದ್ದ ಸಂಪ್ರದಾಯಸ್ಥರ ವರ್ತನೆ ಅಮಾನವೀಯ. ವಿದ್ಯೆ ಬುದ್ಧಿ ಬೆಳೆದಂತೆ ಆ ಕೀಳು ಅಭಿರುಚಿ ಮಾಯವಾಗುತ್ತಿರುವುದು ಸಂತೋಷದ ಸಂಗತಿ.

ಪ್ರ : ತಪ್ಪು ಮಾಡಿದವರಿಗೆ ಕುಲದಿಂದ ಬೇಲಿ ಹಾಕುವ ಪದ್ಧತಿ ಈಗ ಉಳಿದಿಲ್ಲ.

೨೩೨೩. ಬೇಸ್ತು ಬೀಳು = ಮೋಸ ಹೋಗು, ಸೋಲುಂಟಾಗು

ಇಪ್ಪತ್ತೆಂಟು ಎಂಬ ಇಸ್ಪೀಟಾಟದಲ್ಲಿ ಬಾಜಿ ಕಟ್ಟಿದವರು ಅಷ್ಟು ಅಂಶಗಳನ್ನು (points) ಗಳಿಸದಿದ್ದರೆ, ಅದನ್ನು ಬೇಸ್ತು ಎಂದು ಹೇಳುತ್ತಾರೆ. ಆ ಬೇಸ್ತಿನ ಬಾಬ್ತು ಮರು ಹಣ ಕಟ್ಟಿ ಮುಂದಿನ ಆಟ ಗೆದ್ದರೆ ಆ ಹಣವೆಲ್ಲ ಬಾಜಿದಾರನಿಗೆ ದಕ್ಕುತ್ತದೆ; ಇಲ್ಲದಿದ್ದರೆ ಇನ್ನೊಬ್ಬರ ಪಾಲಾಗುತ್ತದೆ. ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ನಾನು ಯಾಮಾರಿದ್ದರಿಂದ ಬೇಸ್ತು ಬಿದ್ದೆ.

೨೩೨೪. ಬೇಳೆ ಬೇಯದಿರು = ಪ್ರಯತ್ನ ಸಫಲವಾಗದಿರು, ಆಟ ನಡೆಯದಿರು.

ಪ್ರ : ಅಲ್ಲಿ ಅವನ ಬೇಳೆ ಬೇಯಲಿಲ್ಲ, ಹಳೇ ಹೆಂಡ್ರು ಪಾದವೇ ಗತಿ ಅಂತ ವಾಪಸ್ಸು ಬಂದ.

೨೩೨೫. ಬೇಳ್ಯದ ಮಾತಾಡು = ಬಣ್ಣದ ಮಾತಾಡು, ಮರುಳು ಮಾಡು

(ಬೇಳ್ಯ < ಬೇಳುವೆ = ಮರುಳು, ಮಾಯೆ)

ಪ್ರ : ಬೇಳ್ಯದ ಮಾತಾಡಿ ಇಡೀ ಪಾಳ್ಯವನ್ನೇ ಹಾಳು ಮಾಡಿದಳು.

೨೩೨೬. ಬೈರಿಗೆ ಹಿಡಿ = ಕೊರಿ, ಮಾತಾಡಿ ತಲೆಚಿಟ್ಟು ಬರಿಸು

(ಬೈರಿಗೆ = ಮರಕ್ಕೆ ಹುಗಲು ಕೊರೆಯುವ ಉಪಕರಣ)

ಪ್ರ : ಅವನು ಒಂದೇ ಸಮ ಬೈರಿಗೆ ಹಿಡಿಯೋಕೆ ಸುರು ಮಾಡಿದಾಗ ಜನ ಎಲ್ಲ ಎದ್ದು ಹೋದರು.

೨೩೨೭. ಬೈಸಿಕೆ ಹೊಡಿ = ಎದ್ದು ಕೂಡುವ ಅಂಗಸಾಧನೆ ಮಾಡು

(ಬೈಸಿಕೆ = ಪಸ್ಕೆ, ಉಟ್‌ಬೈಟ್ (ಹಿಂ) )

ಪ್ರ : ಯಜಮಾನರ ಮನಸ್ಸನ್ನು ರಮಿಸಲು ಎಷ್ಟು ಬೈಸಿಕೆ ಹೊಡೆದರೂ ಪ್ರಯೋಜನವಾಗಲಿಲ್ಲ.

೨೩೨೮. ಬೊಕ್ಕಣಕ್ಕೆ ಸೇರಿಸು = ಹೊಟ್ಟೆಗೆ ತುಂಬು

(ಬೊಕ್ಕಣ < ಪೊ‌ಕ್ಕಣ (ತ) = ಚೀಲ)

ಪ್ರ : ಎಷ್ಟು ಸೇರಿಸಿದರೂ ಅವನ ಬೊಕ್ಕಣ ತುಂಬಲ್ಲ.

೨೩೨೯. ಬೊಕ್ಕೆ ಬೀಳು = ಗುಂಡಿಬೀಳು, ತೂತಾಗು

(ಬೊಕ್ಕೆ = ರಂದ್ರ, ಗುಂಡಿ)

ಪ್ರ : ಪಕ್ಕೆ ಒಳಗೆ ಬೊಕ್ಕೆ ಬಿದ್ದಿದೆ.

೨೩೩೦. ಬೊಮ್ಮಡಿ ಬಾರಿಸು = ಬೊಬ್ಬೆ ಹಾಕು

(ಬೊಮ್ಮಡಿ < ದಮ್ಮಡಿ = ಒಂದು ವಾದ್ಯ ವಿಶೇಷ)

ಪ್ರ : ಎಷ್ಟೇ ಬೊಮ್ಮಡಿ ಬಾರಿಸಿದರೂ ಅವರ ಕೈಗೆ ಒಂದು ದಮ್ಮಡಿ (ಬಿಡಿಗಾಸು) ಸಿಕ್ಕಲಿಲ್ಲ.

೨೩೩೧. ಬೋಕಿ ಹುಟ್ಟು = ಹೆಣ್ಣು ಮಗು ಜನನವಾಗು

(ಬೋಕಿ = ಒಡೆದ ಮಡಕೆಯ ಚೂರು, ಮಣ್ಣಿನ ಪಾತ್ರೆ) ಹೆಣ್ಣಿನ ಬಗ್ಗೆ ಸಮಾಜದಲ್ಲಿದ್ದ ಕೆಟ್ಟ ಧೋರಣೆ ಇದರಲ್ಲಿ ಪಡಿಮೂಡಿದೆ. ಹೆಣ್ಣು ಎಂದು ತಕ್ಷಣ ಕೋಣೆಯಲ್ಲಿ ಅಡುಗೆ ಮಾಡುವ ಸೀಮಿತ ಸ್ವಾತಂತ್ಯ್ರಕ್ಕೆ ದೂಡಿರುವುದು ಕಂಡು ಬರುತ್ತದೆ. ಗಂಡು ಹೊರಗೆ ವ್ಯವಹರಿಸಬಹುದು. ಆದರೆ ಕಂಡು ಬರುತ್ತದೆ. ಗಂಡು ಹೊರಗೆ ವ್ಯವಹರಿಸಬಹುದು. ಆದರೆ ಹೆಣ್ಣಿಗೆ ಆ ಸ್ವಾತಂತ್ಯ್ರವಿಲ್ಲ. ಅವಳದೇನಿದ್ದರೂ ಅಡುಗೆ ಮನೆಯ ಬೋಕಿ (ಮಣ್ಣಿನ ಪಾತ್ರೆ) ತೊಳೆದು, ಅಡುಗೆ ಮಾಡುವ, ಅವುಗಳೊಡನೆ ಒಡನಾಡುವ ಕೆಲಸ ಅಷ್ಟೆ ಎಂಬುದರ ಪಡಿಯಚ್ಚು ಈ ನುಡಿಗಟ್ಟು. ಆದರೆ ಕಾಲ ಬದಲಾದಂತೆ ಹೆಣ್ಣಿನ ಬಗೆಗಿನ ಧೋರಣೆ ಕೂಡ ಬದಲಾಗಿರುವುದು ಸಂತೋಷದ ವಿಷಯ.

ಪ್ರ : ಎಂಥ ಮಗು ಹುಟ್ಟಿತು ಎಂದದ್ದಕ್ಕೆ ಅಪ್ಪ ಎನ್ನಿಸಿಕೊಂಡವನು ‘ಬೋಕಿ’ ಎಂದ.

೨೩೩೨. ಬೋಚಿ ಕುಡಿಸು = ಮೊಲೆಯುಣ್ಣಿಸು

(ಬೋಚಿ < ಬಾಚಿ < ಬಾಚು = ರವಕೆ, ಕುಪ್ಪುಸ; ಅದರೊಳಗಿನ ಸ್ತನ)

ಪ್ರ : ಮಗು ಒಂದು ಬೋಚಿಗೆ ಬಾಯಿ ಹಾಕಿ ಚೂಪುತ್ತಾ ಇನ್ನೊಂದು ಬೋಚಿಯ ಮೇಲೆ ಕೈಯಾಡಿಸುತ್ತಿರುತ್ತದೆ.

೨೩೩೩. ಬೋಟಿ ಕಿತ್ತು ಕೈಗೆ ಕೊಡು = ತಕ್ಕ ಮೋಕ್ಷ ಮಾಡು, ಶಿಕ್ಷಿಸು

(ಬೋಟಿ = ಜಠರ ಕರುಳು ಇತ್ಯಾದಿ)

ಪ್ರ : ಜೋರು ಮಾಡಿದರೆ ಬೋಟಿ ಕಿತ್ತು ಕೈಗೆ ಕೊಡ್ತೀನಿ, ಹುಷಾರ್.

೨೩೩೪. ಬೋಡಿ ಎದುರಾಗು = ಅಪಶಕುನವಾಗು

(ಬೋಡಿ = ಬೋಳಿ, ಬ್ರಾಹ್ಮಣ ವಿಧವೆ) ವೇದೋಪನಿಷತ್ತುಗಳನ್ನು ಓದಿದ ಜನ ಗಂಡ ತೀರಿಕೊಂಡ ತಕ್ಷಣ ಕಿರಿಯ ವಯಸ್ಸಿನ ಹೆಂಡತಿಯ ತಲೆ ಬೋಳಿಸುವ ಪದ್ಧತಿ ಅಮಾನವೀಯ. ಗಂಡ ಸತ್ತ ಹೆಣ್ಣಿಗೆ ಮರುಮದುವೆಯಾಗುವ ಸ್ವಾತಂತ್ಯ್ರವಿಲ್ಲ ಎಂಬುದನ್ನು ಸಾದರಪಡಿಸಲು ಇಂಥ ಅಮಾನುಷ ಕ್ರಮವನ್ನು ಜಾರಿಗೆ ತಂದರು. ಆದರೆ ಓದು ಬರಹ ಬಾರದ ಹಿಂದುಳಿದ ವರ್ಗ ಹೆಣ್ಣಿಗೆ ಮರುಮದುವೆಯಾಗುವ ಅವಕಾಶ ನೀಡಿದ್ದು ಅವರ ಮಾನವೀಯತೆಯನ್ನು ಸಾರುತ್ತದೆ. ಬ್ರಾಹ್ಮಣರಲ್ಲೂ ಕರ್ಮಠರಿಗೆ ಸೊಪ್ಪು ಹಾಕದೆ, ತಲೆ ಬೋಳಿಸುವ ಅಮಾನವೀಯ ಕೃತ್ಯವನ್ನು ನಿಲ್ಲಿಸಿರುವುದು ಆರೋಗ್ಯಕರ ಬೆಳವಣಿಗೆ. ಸಾಮಾನ್ಯವಾಗಿ ಬ್ರಾಹ್ಮಣ ವಿಧವೆಯನ್ನು ಬೋಳಿ, ಬೋಡಿ ಎಂದು ಕರೆಯುವ ವಾಡಿಕೆ ಇತ್ತು. ಬೋಡಿ ಎದುರು ಬಂದರೆ ಹೊರಟ ಕೆಲಸ ಆಗುವುದಿಲ್ಲ ಎಂಬ ನಂಬಿಕೆ ಸಮಾಜದಲ್ಲಿದೆ.

ಪ್ರ : ಬೋಡಿ ಎದುರು ಬಂದ್ಲು, ಹೋಗೋದು ಬ್ಯಾಡ, ಹಿಂದಿರುಗಿ.

೨೩೩೫. ಬೋಣಿ ಮಾಡು = ಮೊದಲ ವ್ಯಾಪಾರಕ್ಕೆ ನಗದು ಹಣ ಕೊಡು

(ಬೋಣಿ < ಬೋಹಣಿ (ಹಿಂ) = ನಗದು ಹಣ)

ಪ್ರ : ಕುರುಬರು ಮೊದಲು ಬೋಣಿ ಮಾಡಿದರೆ ವ್ಯಾಪಾರ ಚೆನ್ನಾಗಾಗ್ತದೆ ಎಂಬ ನಂಬಿಕೆ ಇದೆ.

೨೩೩೬. ಬೋದನೆ ತುಂಬು = ಚಾಡಿ ಹೇಳು

(ಬೋದನೆ < ಬೋಧನೆ = ಉಪದೇಶ)

ಪ್ರ : ಅವರು ಇವರ ಮಗನಿಗೆ ಬೋಧನೆ ತುಂಬಿ, ಈ ಮನೆ ಒಡೆಯೋ ಹಂಗೆ ಮಾಡಿದರು.

೨೩೩೭. ಬೋನಿಗೆ ಬೀಳು = ಒಳಸಂಚಿಗೆ ಸಿಕ್ಕಿ ಬೀಳು

(ಬೋನು = ಪ್ರಾಣಿಗಳನ್ನು ಸೆರೆಗೊಳಿಸುವ ಉಪಕರಣ, ಸಿಡಿ)

ಪ್ರ : ಅವರು ಒಡ್ಡಿದ ಬೋನಿಗೆ ಹೆಡ್ಡನಂತೆ ಬಿದ್ದೆ.

೨೩೩೮. ಬೋಮಾನಕ್ಕೆ ಬಳಿದಿಕ್ಕು = ದೊಡ್ಡತನ ತೋರಿಸೋದಕ್ಕೆ ಎಲ್ಲವನ್ನೂ ಗೋರಿ ಬಡಿಸು

(ಬೋಮಾನ < ಬಹುಮಾನ = ಹೆಚ್ಚಗಾರಿಕೆ)

ಪ್ರ : ಅವರ ಜಾಯಮಾನ ನನಗೆ ಗೊತ್ತಿಲ್ವ, ಬರೀ ಬೋಮಾನಕ್ಕೆ ಬಳಿದಿಕ್ತಾರೆ ಅಷ್ಟೆ.

೨೩೩೯. ಬೋರಲು ಹಾಕು = ದಬ್ಬಾಕು, ತಲೆ ಕೆಳಗು ಮಾಡಿ ಹಾಕು

(ಬೋರಲು = ತಲೆಕೆಳಗು, ತಿರುಗ ಮುರುಗ)

ಪ್ರ : ಬೋರಲು ಹಾಕಿದರೆ ಬೇಗ ನೀರು ಸೋರಿಕೊಳ್ತದೆ.

೨೩೪೦. ಬೋಳು ಹಣೆಯಾಗು = ವಿಧವೆಯಾಗು

ಬ್ರಾಹ್ಮಣರು ವಿಧವೆಯ ತಲೆ ಬೋಳಿಸುವ ಪದ್ಧತಿಯನ್ನು ಜಾರಿಗೆ ತಂದಂತೆ ಶೂದ್ರರು ವಿಧವೆಯ ಕೈಬಳೆಗಳನ್ನು ಹೆಣದ ಎದೆಯ ಮೇಲೆ ನಗ್ಗುವ, ಕುಂಕುಮವನ್ನು ಅಳಿಸುವ ಪದ್ಧತಿಯನ್ನು ಜಾರಿಗೆ ತಂದರು. ಆದರೆ ಇತ್ತೀಚೆಗೆ ಗಂಡನ ಎದೆಯ ಮೇಲೆ ಕೈ ಬಳೆಗಳನ್ನು ನೆಗ್ಗುವುದಾಗಲೀ, ಹಣೆಯ ಕುಂಕುಮವನ್ನು ಅಳಿಸುವುದಾಗಲೀ ಮಾಡದ ಉದಾರ ದೃಷ್ಟಿ ಸಮಾಜದಲ್ಲಿ ವಿರಳವಾಗಿ ಕಂಡು ಬರುತ್ತಿರುವುದು ಹರ್ಷದ ವಿಷಯ. ಉದಾಹರಣೆಗೆ ಗೊಲ್ಲ ಕುರುಬರಲ್ಲಿ ಕುಂಕುಮ ಅಳಿಸುವ, ಬಳೆ ಕುಕ್ಕುವ ಆಚರಣೆ ಇಲ್ಲ. ಏಕೆಂದರೆ ಕೃಷ್ಣನೇ ನಿಜವಾದ ಪತಿ ಎಂದು ಭಾವಿಸಿರುವುದರಿಂದ ಹಾಗೆ ಮಾಡುವುದಿಲ್ಲ ಎಂಬುದು ಅವರ ಅಂಬೋಣ.

ಪ್ರ : ಬೋಳು ಹಣೆಯಿಂದಾಗಿ ಮುಖ ಬಿಕೋ ಎನ್ನಿಸುತ್ತದೆ.

೨೩೪೧. ಬಂಗಾರವಾಗು = ದುರ್ಲಭವಾಗು, ದುಬಾರಿಯಾಗು

(ಬಂಗಾರ = ಚಿನ್ನ)

ಪ್ರ : ಈಗ ತಿನ್ನೋ ಅನ್ನ, ನಿಲ್ಲೋ ನೆಲ ಬಂಗಾರವಾಗಿ ಕೂತದೆ.

೨೩೪೧. ಬಂಗು ಬಂದು ಭಂಗ ತರು = ಬಡತನದ ಕಷ್ಟದ ಕಾಲ ಬರು

(ಬಂಗು = ಮುಖದ ಚರ್ಮದ ಮೇಲೆ ಮೂಡುವ ಕಪ್ಪು ಕಲೆ, ಮಚ್ಚೆ)

ಪ್ರ : ಗಾದೆ – ಬಂಗು, ಭಂಗ

ಅಗರು ಹಗರಣ

೨೩೪೨. ಬಂಜೆ ಬೇನೆಗೆ ಕೊನೆಯಿಲ್ಲದಿರು = ಮಕ್ಕಳಿಲ್ಲದವಳ ನೋವು ಅನಂತವಾಗಿರು

ಪ್ರ : ಗಾದೆ – ಹೆರಿಗೆ ಬೇನೆ ಕೆಲಗಂಟೆಗಂಟ

ಬಂಜೆ ಬೇನೆ ಬದುಕಿನಗಂಟ.

೨೩೪೩. ಬಂಡ ಒಡಚು = ಕುರಿ ತುಪ್ಪಟದ ಗಂಟನ್ನು ಒಡೆದು ಬಿಡಿಬಿಡಿಯಾಗಿಸು

(ಬಂಡ = ಕುರಿತುಪ್ಪಟ, ಉಣ್ಣೆ; ಒಡಚು = ಬಿಡಿಬಿಡಿಯಾಗಿ ಬಿಡಿಸು) ಕುರಿ ತುಪ್ಪಟವನ್ನು ಗುಡ್ಡೆ ಹಾಕಿಕೊಂಡು, ಒಡಚುವುದಕ್ಕೆಂದೇ ಇರುವ ದೊಡ್ಡ ಬಿಲ್ಲಿನ ದಾರವನ್ನು ಎಳೆದೆಳೆದು ಗುಡ್ಡೆಯೊಳಕ್ಕೆ ಬಿಟ್ಟಾಗ ಅದು ಎಳೆಳೆಯಾಗುತ್ತದೆ. ಹೀಗೆ ಮಾಡುವುದಕ್ಕೆ ಬಂಡ ಒಡಚುವುದು ಎನ್ನುತ್ತಾರೆ.

ಪ್ರ : ಬಂಡ ಒಡಚಿದ ಮೇಲೇ ಹಂಜಿ ಮಾಡೋದು, ಹಂಜಿಯಾದ ಮೇಲೇ ನೂತು ಕುಕ್ಕಡಿ ಮಾಡುವುದು

೨೩೪೪. ಬಂಡೇಳು = ದಂಗೆ ಏಳು, ರೊಚ್ಚಿಗೇಳು

ಪ್ರ : ಅನ್ಯಾಯದ ವಿರುದ್ಧ ಜನ ಬಂಡೆದ್ದರು

೨೩೪೫. ಬಂದು ಹಿಂದುಮುಂದಾಗದಿರು = ಆಗತಾನೇ ಬಂದಿರು

ಪ್ರ : ಬಂದು ಹಿಂದು ಮುಂದಾಗಿಲ್ಲ, ಆಗಲೇ ಹೊರಡ್ತೀನಿ, ಅಂತೀಯಲ್ಲ.

೨೩೪೬. ಬಂಧಾನ ಮಾಡು = ಒತ್ತಾಯ ಮಾಡು

(ಬಂಧಾನ < ಬಂಧನ = ಒತ್ತಾಯ)

ಪ್ರ : ತುಂಬ ಬಂಧಾನ ಮಾಡಿದ್ದರಿಂದ ಬಂದೆ, ಇಲ್ಲದಿದ್ರೆ ಬರ್ತಾನೇ ಇರಲಿಲ್ಲ.

೨೩೪೭. ಬಂಬಡ ಬಜಾಯಿಸು = ಚೀರಿಕೊಳ್ಳು, ಕಿರುಚಿಕೊಳ್ಳು

(ಬಂಡಡ < ಬೊಮ್ಮಡಿ < ದಮ್ಮಡಿ = ವಾದ್ಯ ವಿಶೇಷ; ಬಜಾಯಿಸು = ಬಾರಿಸು, ನುಡಿಸು)

ಪ್ರ : ಜನ ಬಂಬಡ ಬಜಾಯಿಸಿದ್ದರಿಂದ, ಆ ಲಂಗಡ ಏನು ಮಾತಾಡಿದನೋ ದೇವರಿಗೇ ಗೊತ್ತು.

೨೩೪೮. ಬಂಬಲಾಗು = ಹೆಚ್ಚು ತೆಳುವಾಗು, ಪಾಯಸದಂತಾಗು

ಪ್ರ :ಬಂಬಲಾದರೆ ಬನಿ ಬರಲ್ಲ, ಗಟ್ಟಿಯಾಗಿ ಕಲಸು

೨೩೪೯. ಬಿಂಗಿಯಂತಾಡು = ರೇಗಾಡು, ಮುಂಗೋಪಿಯಾಗಿ ವರ್ತಿಸು

(ಬಿಂಗಿ < ಭೃಂಗಿ)

ಪ್ರ : ಹಿಂಗೆ ಬಿಂಗಿಯಂತಾಡಿದರೆ ಸಂಸಾರ ಮಾಡೋದು ಹೆಂಗೆ?

೨೩೫೦. ಬಿಂದಿಗೆ ತಂಬಿಗೆ ಅತ್ತಿಕ್ಕು = ತಿಥಿ ಮಾರ ನಕ್ಷತ್ರಗಳ ಕಗ್ಗ ಕಟ್ಟಿಡು

(ಬಿಂದಿಗೆ ತಂಬಿಗೆ < ಬಿದಿಗೆ ತದಿಗೆ = ಪಕ್ಷದ ದ್ವಿತೀಯೆ ತೃತೀಯೆ ದಿನಗಳು ಅಥವಾ ತಿಥಿಗಳು)

ಪ್ರ : ನಿನ್ನ ಬಿಂದಿಗೆ ತಂಬಿಗೆ ಅತ್ತಿಕ್ಕು, ಎದ್ದು ನಮ್ಮೊಂದಿಗೆ ಬಾ

೨೩೫೧. ಬುಂಡೆ ಮತ್ತು = ಹೆಂಡ ಕುಡಿ

(ಬುಂಡೆ = ಹೆಂಡ ತುಂಬಿದ ಸೋರೆ ಬುರುಡೆ)

ಪ್ರ : ಬುಂಡೆ ಎತ್ತಿದ, ಮಂಡೆ ನೆಲಕ್ಕೆ ಹಾಕಿ ಮಲಗಿದ.

೨೩೫೨. ಬುಂಡೆ ಬಿಡು = ಬೂಸಿ ಬಿಡು, ಸುಳ್ಳು ಹೇಳು

(ಬುಂಡೆ < ಬುರುಡೆ = ಒಣಗಿದ ನಿಸ್ಸಾರ ಕರಟ)

ಪ್ರ : ನನ್ನ ಮುಂದೆ ನೀನು ಬುಂಡೆ ಬಿಡಬೇಡ, ಚೆಂಡಾಡಿಬಿಟ್ಟೇನು ಎದ್ದು ಹೋಗು.

೨೩೫೩. ಬೆಂಕಿ ಇಕ್ಕು = ವಿರಸ ಮೂಡಿಸು, ಇಬ್ಬರ ಮಧ್ಯೆ ತಂದು ಹಾಕು

ಪ್ರ : ಬೆಂಕಿ ಇಕ್ಕಿದೋನೇ ಬೆಂಕಿ ಆರಿಸೋ ನಾಟಕ ಆಡ್ತಿದ್ದಾನೆ.

೨೩೫೪. ಬೆಂಕಿ ಬಿಸಿನೀರು ಕೊಡದಿರು = ಬಹಿಷ್ಕರಿಸು, ಹತ್ತಿರಕ್ಕೆ ಸೇರಿಸದಿರು.

(ಬೆಂಕಿ < ವೆಕ್ಕೈ -(ತ) = ಅಗ್ನಿ)

ಹಳ್ಳಿ-ಗಾ-ಡಿ-ನ-ಲ್ಲಿ ಬಡ-ಜ-ನ-ರು ಅಧಿ-ಕ. ಒಲೆ ಹಚ್ಚ-ಲು ಒಂದು ಬೆಂಕಿ ಪೊಟ್ಟ-ಣ ತರ-ಲೂ ತಾಕ-ತ್ತಿ-ಲ್ಲ-ದ-ವ-ರು ಅಕ್ಕ-ಪ-ಕ್ಕ-ದ ಶ್ರೀಮಂ-ತ-ರ ಮನೆ-ಗೆ ಹೋಗಿ, ತಮ್ಮ ಕೈಲಿ-ರು-ವ ಒಣ-ಗಿ-ದ ಹುಲ್ಲಿ-ನೊ-ಳ-ಕ್ಕೆ ಒಂದು ಬೆಂಕಿ ಕೆಂಡ ಹಾಕಿ-ಸಿ-ಕೊಂ-ಡು ಬಂದು, ತಮ್ಮ ಒಲೆ-ಯ-ಲ್ಲಿ-ಟ್ಟು ಊದಿ, ಹೊತ್ತಿ-ಕೊಂ-ಡ ಮೇಲೆ ಪುಳ್ಳೆ ಇಕ್ಕಿ ಬೆಂಕಿ ವೃದ್ಧಿ-ಸು-ವಂ-ತೆ ಮಾಡಿ-ಕೊ-ಳ್ಳು-ತ್ತಿ-ದ್ದ-ರು. ಈಗ ಒಲೆ ಹೊತ್ತಿ-ಸಿ-ಕೊ-ಳ್ಳ-ಲು ನಿರ್ಗ-ತಿ-ಕ-ರಿ-ಗೆ ಬೆಂಕಿ ಕೊಡ-ದಂ-ತೆ ನಿರ್ಬಂ-ಧ ಹೇರಿ-ಕೆ.

ಪ್ರ : ಅವರಿಗೆ ಬೆಂಕಿ ಬಿಸಿನೀರು ಕೊಡಬಾರದು ಅಂತ ಬಹಿಷ್ಕಾರ ಹಾಕಿದ್ದಾರೆ ಊರಜನ.

೨೩೫೫. ಬೆಂಡಾಗು = ಒಣಗಿ ಹಗುರವಾಗು

(ಬೆಂಡು < ವೆಂಡು(ತ) = ನಿಸ್ಸಾರ)

ಪ್ರ : ಬಿದಿರ ಬೊಡ್ಡೆ ಹಂಗಿದ್ದೋನು ಹೆಂಡ್ರು ಸತ್ತ ಮೇಲೆ ಒಣಗಿ ಬೆಂಡಾಗಿದ್ದಾನೆ.

೨೩೫೬. ಬೊಂತೆ ಬಿಸಾಡು = ಪ್ರಾಣ ಬಿಡು, ದೇಹ ತ್ಯಾಗ ಮಾಡು

(ಬೊಂತೆ = ಚಿಂದಿ ಬಟ್ಟೆಯಿಂದ ಮಾಡಿದ ಕೌದಿ, ಚಿಂದಿ ಬಟ್ಟೆಯ ಗಂಟು)

ಪ್ರ : ಸಂತೆ ಯಾಪಾರ ಮುಗಿದ ಮೇಲೆ ಬೊಂತೆ ಬಿಸಾಡಲೇಬೇಕು

೨೩೫೭. ಬೊಂಬಾಟಾಗಿರು = ಅದ್ಧೂರಿಯಾಗಿರು, ವೈಭವದಿಂದ ಕೂಡಿರು

(ಬೊಂಬಾಟ.<Bombast =ಅದ್ಧೂರಿ)

ಪ್ರ : ಆರತಕ್ಷತೆಯ ಸಮಾರಂಭ ತುಂಬಾ ಬೊಂಬಾಟಾಗಿತ್ತು.

೨೩೫೮. ಬೊಂಬೂ ಸವಾರಿ ಹೋಗು = ಚಟ್ಟದ ಮೇಲೆ ಹೋಗು, ಮರಣ ಹೊಂದು

(ಬೊಂಬು = ಬಿದಿರು, ಬಿದಿರಿನಿಂದ ಕಟ್ಟಿದ ಚಟ್ಟ) ನವರಾತ್ರಿಯಲ್ಲಿ ಬನ್ನಿಮರದ ಪೂಜೆಗೆ ಸಾಗುವ ಮೆರವಣಿಗೆಗೆ ‘ಜಂಬೂ ಸವಾರಿ’ ಎನ್ನುತ್ತಾರೆ. ಜಂಬು ಎಂದರೆ ನೇರಿಲೆ ಮರ ಎಂಬ ಅರ್ಥವುಂಟು. ಬನ್ನಿಮರಕ್ಕೆ ಸಂಸ್ಕೃತದಲ್ಲಿ ಶಮೀ ವೃಕ್ಷ ಎನ್ನುತ್ತಾರೆ. ಆ ಶಮೀ ಶಬ್ದವೇ ಜಂಬಿ ಆಗಿ ಜಂಬೂ ಆಗಿರಬಹುದು. ಜಂಬೂ ಸವಾರಿ ಆಧಾರದ ಮೇಲೆ ಬೊಂಬು ಸವಾರಿ ನುಡಿಗಟ್ಟು ಮೂಡಿದೆ.

ಪ್ರ : ಜಂಬೂ ಸವಾರಿ ಮಾಡಿದೋರು ಒಂದಲ್ಲ ಒಂದು ದಿವಸ ಬೊಂಬೂಸವಾರೀನೂ ಮಾಡಬೇಕಾಗ್ತದೆ.