೨೩೫೯. ಭಣಗುಡು = ಬಿಕೋ ಎನ್ನು, ಶೂನ್ಯ ತಾಂಡವವಾಡು

ಪ್ರ : ಗೀಜಗನ ಗೂಡಿನಂತಿದ್ದ ಮನೆ ಭಣಗುಡ್ತಾ ಇದೆ.

೨೩೬೦. ಭದ್ರ ಮಾಡಿಕೊಳ್ಳು = ಗಟ್ಟಿ ಮಾಡಿಕೊಳ್ಳು, ಗ್ಯಾರಂಟಿ ಮಾಡಿಕೊಳ್ಳು

ಪ್ರ : ಎಲ್ಲ ಭದ್ರ ಮಾಡಿಕೊಳ್ಳದೆ ಮುಂದಕ್ಕೆ ಹೆಜ್ಜೆ ಇಡಬೇಡ.

೨೩೬೧. ಭಾರ ಹೊರಿಸು = ಜವಾಬ್ದಾರಿ ವಹಿಸು, ಹೊಣೆಗಾರಿಕೆ ವಹಿಸು

ಪ್ರ : ಹಲವು ಭಾರಗಳ ಜೊತೆಗೆ ಇದರ ಭಾರವನ್ನೂ ಹೊರಿಸಿದರೆ, ನಾನು ನಿಭಾಯಿಸೋದು ಹೇಗೆ?

೨೩೬೨. ಭಾಷೆ ಕೊಡು = ಮಾತು ಕೊಡು, ಕೈ ಮೇಲೆ ಕೈ ಹಾಕಿ ಆಣೆ ಮಾಡಿ ಹೇಳು

ಪ್ರ : ಭಾಷೆ ಕೊಟ್ಟ ಮೇಲೆ ತಪ್ಪದೆ ನಡೆಸಬೇಕು.

೨೩೬೩. ಭಾಷೆಗೆ ತಪ್ಪು = ಮಾತಿಗೆ ತಪ್ಪು, ವಚನಭ್ರಷ್ಟನಾಗು

ಪ್ರ : ಭಾಷೆಗೆ ತಪ್ಪಿದೋನಿಗೆ ಕಿಲುಬುಕಾಸಿನ ಕಿಮ್ಮತ್ತು ಸಿಗೋದಿಲ್ಲ.

೨೩೬೪. ಭುಗ್ ಎನ್ನು = ಉರಿ ಏಳು, ಬೆಂಕಿ ಹೊತ್ತಿಕೊಳ್ಳು

ಪ್ರ : ಭುಗ್ ಎಂದಾಗ ಎದೆ ಧಗ್ ಅಂತು

೨೩೬೫. ಭೂಗತ ಮಾಡು = ನಾಶ ಮಾಡು, ನೆಲಸಮ ಮಾಡು

ಪ್ರ : ಸ್ವಾಗತ ಮಾಡೋಕೆ ಬಂದೋನ್ನ ಭೂಗತ ಮಾಡಿದ ಬದ್ಮಾಷ್

೨೩೬೬. ಭೂತ ಬಿಡಿಸು = ದೆವ್ವ ಬಿಡಿಸು, ಚೆನ್ನಾಗಿ ಹೊಡಿ

(ಭೂತ = ದೆವ್ವ) ದೆವ್ವ ಹಿಡಿದವರಿಗೆ ಹುಣಿಸೆ ಬರಚಲಿನಿಂದ ಚೆನ್ನಾಗಿ ಹೊಡೆಯುವ ಪದ್ಧತಿ ಇದೆ. ಹಾಗೆ ಹೊಡೆದರೆ ದೆವ್ವ ಬಿಡುತ್ತದೆ ಎಂಬ ಕುರುಡು ನಂಬಿಕೆ ಈ ನುಡಿಗಟ್ಟಿಗೆ ಮೂಲ.

ಪ್ರ : ನನ್ನ ವಿರುದ್ಧ ಸಾಕ್ಷಿ ಹೇಳಿದರೆ, ಅವನಿಗೆ ಭೂತ ಬಿಡಿಸ್ತೀನಿ.

೨೩೬೭. ಭೂಮಿಗೆ ಇಳಿದು ಹೋಗು = ಅವಮಾನದಿಂದ ಕುಗ್ಗಿ ಹೋಗು, ಮಾರುದ್ದ ದೇಹ ಗೇಣುದ್ದವಾಗು.

ರಾಮನಿಂದ ವರ್ಜಿತಳಾದ ಸೀತೆಗೆ ಕೊನೆಯಲ್ಲಿ ಭೂಮಿ ಬಾಯಿ ತೆರೆಯಿತೆಂದೂ, ಸೀತೆ ಅದರಲ್ಲಿ ಐಕ್ಯಳಾದಳೆಂದೂ ಕತೆ. ಬಹುಶಃ ಈ ನುಡಿಗಟ್ಟಿಗೆ ಅದು ಮೂಲ.

ಪ್ರ : ನನ್ನ ತಲೆ ಮೇಲೆ ಇಲ್ಲಸಲ್ಲದ ಗೂಬೆ ಕೂರಿಸಿದಾಗ, ಭೂಮಿಗೆ ಇಳಿದು ಹೋದೆ.

೨೩೬೮. ಭೂಮಿ ತೂಕದ ಮನುಷ್ಯವಾಗಿರು = ಗಂಭೀರ ವ್ಯಕ್ತಿಯಾಗಿರು, ಸಹನಶೀಲನಾಗಿರು

(ತೂಕ = ಗೌರವ, ಗುರುತ್ವಶಕ್ತಿ) ಭೂಮಿ ಒಳಿತನ್ನು ಕೆಡುಕನ್ನು ಸಮಾನವಾಗಿ ಹೊತ್ತು ತುಂಬಿದ ತೊರೆಯಂತೆ ಸಾಗುತ್ತದೆ. ಅದರ ಧಾರಣಾಶಕ್ತಿ, ಸಹನಾ ಶಕ್ತಿ ಅಪ್ರತಿಮ.

ಪ್ರ : ಈ ಗೊಂಜಾಯಿ, ಆ ಭೂಮಿತೂಕದ ಮನುಷ್ಯನ ಗುಂಜಿಗೂ ಸಮನಲ್ಲ.

೨೯೬೯. ಭೂಮಿಗೆ ಭಾರವಾಗಿ ಕೂಳಿಗೆ ದಂಡವಾಗಿ ಬದುಕು = ವ್ಯರ್ಥವಾಗಿ ಜೀವಿಸು

ಪ್ರ : ಭೂಮಿಗೆ ಭಾರವಾಗಿ ಕೂಳಿಗೆ ದಂಡವಾಗಿ ಬದುಕೋದ್ಕಿಂತ ಸಾಯೋದು ಲೇಸು

೨೩೭೦. ಭೋಗಾದಿ ಹಾಕು = ಒತ್ತೆ ಇಡು, ಇನ್ನೊಬ್ಬರಿಗೆ ಭೋಗ್ಯ ಮಾಡು

(ಭೋಗಾದಿ = ಒತ್ತೆ, ಅಡವು)

ಪ್ರ : ಮನೆ ಕಟ್ಟಿಸೋದಕ್ಕೆ ಊರಿನ ಜಮೀನು ಭೋಗಾದಿ ಹಾಕಿ ಸಾಲ ತಗೊಂಡಿದ್ದೇನೆ.