೩೦೫೮. ಹಕ್ಕಲು ಆಯು = ಎಂಜಲೆತ್ತು, ಅವರಿವರ ಮನೆಯ ಎಂಜಲೂಟಕ್ಕೆ ಕಾದು ಕೂತಿರು.

(ಹಕ್ಕಲು = ಕುಯ್ಲು ಆದ ಮೇಲೆ ಕೆಳಗುದುರಿದ ತೆನೆ, ಕಾಯಿ, ಕಾಳುಕಡ್ಡಿ)

ಪ್ರ : ಹಕ್ಕಲು ಆಯ್ಕೊಂಡು ತಿನ್ನೋನಿಗೆ ತಕ್ಕಲು ಕಟ್ಕೊಂಡು ಏನಾಗಬೇಕು?

೩೦೫೯. ಹಕ್ಕಲು ಹಿಟ್ಟಿಗೆ ಬರು = ಅಳಿದುಳಿದ ತಿರುಪೆ ಹಿಟ್ಟಿಗೆ ಬರು

ಪ್ರ : ಯಾವ ಕೆಲಸ ಕಾರ್ಯಕ್ಕೆ ಬರದಿದ್ರೂ ಹಕ್ಕಲ ಹಿಟ್ಟಿಗೆ ಬರ್ತಾನೆ.

೩೦೬೦. ಹಕ್ಕಿ ಅಳಕವಾಗು = ಮೂಳೆಗಳು ಮೆದುವಾಗುವ, ಮೂಳೆಗಳು ಬಿಟ್ಟುಕೊಂಡು ಬಿಳಿಚಿಕೊಳ್ಳುವ ಕಾಯಿಲೆಯಾಗು

ಈ ಕಾಯಿಲೆಗೆ ಸಾಮಾನ್ಯವಾಗಿ ಹಾಳು ಬಿದ್ದ ದೇವಸ್ಥಾನಗಳಲ್ಲಿ ಹಾಳು ಮಂಟಪಗಳ ಕತ್ತಲಲ್ಲಿ ವಾಸ ಮಾಡುವ ‘ಕಣ್ಕಪ್ಪಟ’ ಹಕ್ಕಿಯನ್ನು ತಂದು, ಬೇಸಿ, ಅದರ ಸಾರನ್ನು ಕುಡಿಯುತ್ತಾರೆ, ಮಾಂಸವನ್ನು ತಿನ್ನಿಸುತ್ತಾರೆ. ಆಗ ಆ ಕಾಯಿಲೆ ವಾಸಿಯಾಗುತ್ತದೆ ಎಂಬ ನಂಬಿಕೆ ಜನಪದರಲ್ಲಿದೆ. ಇದು ವೈಜ್ಞಾನಿಕ ಪರೀಕ್ಷೆಗೆ ಒಳಗಾಗಬೇಕು.

ಪ್ರ : ಮಗೀಗೆ ಹಕ್ಕಿ ಅಳಕ ಆಗಿದೆ, ಕಣ್ಕಪಟ ಹಕ್ಕಿಯನ್ನು ಹಿಡ್ಕೊಂಡು ಬನ್ನಿ.

೩೦೬೧. ಹಕ್ಕಿಗೆ ಏಟು ಹಾಕು = ಹೆಣ್ಣಿಗೆ ಅಂದಾಜು ಹಾಕು

(ಏಟು ಹಾಕು = ಗುರಿಯಿಡು)

ಪ್ರ : ಹಕ್ಕಿಗೆ ಏಟು ಹಾಕಿದ್ದೆ, ಆದ್ರೆ ಅದು ಸಿಕ್ಕದೆ ಹಾರಿಹೋಯ್ತು.

೩೦೬೨. ಹಕ್ಕಿಪಿಕ್ಕರಿಗಿಂತ ಅತ್ತತ್ತವಾಗು = ಕೊಳಕಾಗಿರು, ಅನಾಗರಿಕವಾಗಿರು

(ಹಕ್ಕಿಪಿಕ್ಕರು = ಪಕ್ಷಿಗಳ ಬೇಟೆಯಾಡುವ ಅಲೆಮಾರಿ ಜನಾಂಗ ; ಅತ್ತತ್ತ = ಕೊನೆ, ಕಟ್ಟೆಕಡೆ)

ಪ್ರ : ಹಕ್ಕಿಪಿಕ್ಕಿರಿಗಿಂತ ಅತ್ತತ್ತವಾಗಿ ಬಾಳ್ತಾರೆ, ಅವರೊಂದಿಗೆ ಬೀಗತನ ಮಾಡ್ತೀರಾ?

೨೦೬೩. ಹಗರಣವಾಗು = ರಂಪರಗಳೆಯಾಗು, ಹೈರಾಣ ಬೈರೂಪವಾಗು

(ಹಗರಣ < ಪ್ರಕರಣ = ನಾಟಕದ ಒಂದು ಪ್ರಭೇದ)

ಪ್ರ : ಆಸ್ತಿ ಹಂಚಿಕೆಯ ವಿಷಯ ದೊಡ್ಡ ಹಗರಣವಾಯ್ತು.

೩೦೬೪. ಹಗ್ಗದ ಕಾಸು ಕೊಡು = ಕೊಡುವವರು ತೆಗೆದುಕೊಳ್ಳುವವರು ಸಮ್ಮತಿಸು, ಒಪ್ಪಂದವಾಗು.

ದನಗಳ ಜಾತ್ರೆಯಲ್ಲಿ ಎತ್ತುಗಳನ್ನೋ ಹೋರಿಗಳನ್ನೋ ಕೊಳ್ಳುವವರು ಸಂಬಂಧಪಟ್ಟ ಮಾಲಿಕರೊಡನೆ ಮಾತುಕತೆಯಾಡಿ ಯಾವುದೋ ಒಂದು ಬೆಲೆಗೆ ಇಬ್ಬರೂ ಒಪ್ಪಿಗೆ ನೀಡುತ್ತಾರೆ. ಕೊಳ್ಳುವವರ ಬಳಿ ಅಷ್ಟು ಹಣವಿರದೆ, ಬೇರೆಯವರ ಹತ್ತಿರ ಹೋಗಿ ಹಣ ತರಲು, ಅವಧಿ ನಿಗದಿ ಮಾಡಿ, ದಳ್ಳಾಳಿ ಸಾಕ್ಷಿಗಳ ಸಮಕ್ಷಮ ‘ಹಗ್ಗದಕಾಸು’ ಕೊಟ್ಟು ಬಿಡುತ್ತಾರೆ. ಅದು ಗಂಡು ಹೆಣ್ಣಿನ ಕೊರಳಿಗೆ ತಾಳಿ ಕಟ್ಟಿದ ಹಾಗೆ. ಅದು ಮತ್ತೆ ಬೇರೊಬ್ಬರ ಪಾಲಾಗಲು ಸಾಧ್ಯವಿಲ್ಲ. ಇಬ್ಬರೂ ಮಾತಿಗೆ ತಪ್ಪುವಂತಿಲ್ಲ. ಆ ‘ಹಗ್ಗದಕಾಸು’ ಯಮಧರ್ಮನ ಪಾಶದಷ್ಟೆ ಬಲಿಷ್ಠವಾದದ್ದು, ಬಂಧನ ಶಕ್ತಿಯುಳ್ಳದ್ದು. ಆ ಹಿನ್ನೆಲೆಯ ನುಡಿಗಟ್ಟಿದು

ಪ್ರ : ಹಗ್ಗದ ಕಾಸು ಕೊಟ್ಟ ಮೇಲೆ ಮುಗೀತು, ದೇವರೇ ಬಂದ್ರೂ ಬದಲಾಯಿಸೋಕಾಗಲ್ಲ.

೩೦೬೫. ಹಗ್ಗ ಹಾಕಿ ಹಿಡಿ = ಹಾರಾಡು, ತಿವಿಯಲು ‘ಸಿರ್’ ಎಂದು ಬರು

ಸಾಮಾನ್ಯವಾಗಿ ಬೀಜದ ಹೋರಿಗೆ ಕುವತ್ತು ಜಾಸ್ತಿ, ಸಿಟ್ಟು ಜಾಸ್ತಿ. ಕಂಡವರ ಮೇಲೆ ‘ಸಿರ್’ ಎಂದು ಹೋಗುತ್ತದೆ. ಅದನ್ನು ಒಂದು ಹಗ್ಗದಲ್ಲಿ ಬಗ್ಗಿಸಲು ಸಾಧ್ಯವಿಲ್ಲ. ಹಗ್ಗ ಹಿಡಿದವನನ್ನೇ ತಿವಿಯಬಹುದು. ಅಷ್ಟು ಆರ್ಭಟ ಅದರದು. ಅದಕ್ಕೋಸ್ಕರ ಮೂಗುದಾರದ ಎರಡೂ ಕಡೆಗೆ ಹಗ್ಗ ಹಾಕಿ ಆಕಡೆ ಈಕಡೆ ಇಬ್ಬರು ಹಿಡಿದುಕೊಂಡಿರುತ್ತಾರೆ. ಒಂದು ಪಕ್ಕದವನನ್ನು ತಿವಿಯಲು ಹೋದರೆ ಇನ್ನೊಂದು ಪಕ್ಕದವನು ಹಗ್ಗವನ್ನು ಜಗ್ಗಿ ಎಳೆಯುತ್ತಾನೆ. ಆದ್ದರಿಂದ ಅದರ ಹಾರಾಟ ಸಾಗದು. ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಆಲುಗಡ್ಡೇಲಿ ಸಕತ್ ಹಣ ಬಂದುಬಿಡ್ತು, ಈಗ ಅವನ್ನ ಹಗ್ಗ ಹಾಕಿ ಹಿಡೀಬೇಕು.

೩೦೬೬. ಹಗ್ಗ ಮೂಗುದಾರ ಒಂದೂ ಇಲ್ಲದಿರು = ಲಂಗುಲಗಾಮಿಲ್ಲದಿರು, ಅಂಕೆ ಆಜ್ಞೆ ಇಲ್ಲದಿರು.

ಪ್ರ : ಹಗ್ಗ ಮೂಗುದಾರ ಒಂದೂ ಇಲ್ಲದೋರು ತಗ್ಗಿ ಬಗ್ಗಿ ನಡೀತಾರ?

೨೦೬೭. ಹಗೇವಿಗಿಳಿದಂತಾಗು = ಉಸಿರು ಕಟ್ಟು.

ಧಾನ್ಯ ತುಂಬಲು ಭೂಮಿಯ ಮೇಲೆ ಕಟ್ಟಿದ ಮಂಟಪಕ್ಕೆ ಕಣಜ ಎನ್ನುತ್ತಾರೆ. ಭೂಮಿಯೊಳಗೆ ಕೊರೆದ ಕಣಜಕ್ಕೆ ಹಗಹ ಎನ್ನುತ್ತಾರೆ. ಹಗಹ ಎನ್ನುವುದೇ ಜನರ ಬಾಯಲ್ಲಿ ಹಗೇವು ಆಗಿದೆ, ಪುಣ್ಯ ಎಂಬುದು ಪುಣ್ಣೇವು ಆದಂತೆ. ಧಾನ್ಯ ತೆಗೆದುಕೊಳ್ಳಲು ಹಗೇವಿನ ಬಾಯಿ ಕಿತ್ತು ಕೂಡಲೇ ಒಳಗಿಳಿದರೆ ಉಸಿರುಕಟ್ಟಿ ಸಾಯುವ ಸಂಭವ ಉಂಟು. ಆದ್ದರಿಂದ ಸ್ವಲ್ಪ ಹೊತ್ತು ಕಂಬಳಿಯನ್ನು ಅದರೊಳಕ್ಕೆ ಇಳಿಬಿಟ್ಟು, ಸುತ್ತಲೂ ತಿರುಗಿಸುತ್ತಾ ಧೂಳು ವಗೈರೆ ಅಡಗುವಂತೆ ಮಾಡಿ, ಗಾಳಿ ನುಸುಳುವಂತಾದಾಗ ಒಳಗೆ ಇಳಿಯುತ್ತಾರೆ. ಆದರೂ ಉಸಿರು ಕಟ್ಟಿದ ಅನುಭವವಾಗುತ್ತದೆ.

ಪ್ರ : ನೆಲ ಮಾಳಿಗೆ ಮನೆಗೆ ಹೋದಾಗ ಹಗೇವಿಗಿಳಿದಂತಾಯ್ತು.

೩೦೬೮. ಹಚ್ಚಗಿದ್ದ ಕಡೆ ಮೇದು ಬೆಚ್ಚಿಗಿದ್ದ ಕಡೆ ಮಲಗು = ನಿರ್ಯೋಚನೆಯಿಂದ ಆರಾಮವಾಗಿರು.

(ಹಚ್ಚಗೆ = ಹಸಿರಾಗಿ ; ಬೆಚ್ಚಗೆ = ಬಿಸಿಯಾಗಿ)

ಪ್ರ : ಹಚ್ಚಗಿದ್ದ ಕಡೆ ಮೇದು ಬೆಚ್ಚಗಿದ್ದ ಕಡೆ ಮಲಗೋನಿಗೆ ಹೆಂಡ್ರು ಮಕ್ಕಳು ಯಾಕೆ?

೩೦೬೯. ಹಚ್ಚೆ ಹುಯ್ದಂತಿರು = ಶಾಶ್ವತವಾಗಿರು, ಎಂದೂ ಅಳಿಸಿ ಹೋಗದಿರು.

(ಹಚ್ಚೆ = ಹಸುರು) ಹಸುರು ಅಥವಾ ಹಚ್ಚೆ ಹುಯ್ಯಿಸಿಕೊಳ್ಳುವುದು ನಮ್ಮ ಜನಪದ ಸಂಸ್ಕೃತಿಯ ಒಂದು ಅಂಗ. ತಮ್ಮ ತಮ್ಮ ಮೊಣಕೈಗಳ ಮೇಲೆ ಪ್ರಿಯತಮ ಅಥವಾ ಪ್ರಿಯತಮೆಯ ಹೆಸರಿನ ಹಚ್ಚೆ ಹುಯ್ಯಿಸಿಕೊಳ್ಳುತ್ತಾರೆ. ಹಣೆಗೆ ಹಣೆಬಟ್ಟು ಹುಯ್ಯಿಸಿಕೊಳ್ಳುತ್ತಾರೆ. ಮೈಮೇಲೆ ಕೃಷ್ಣನ ಆಕೃತಿಯನ್ನು ಹುಯ್ಯಿಸಿಕೊಳ್ಳುತ್ತಾರೆ. ಸ್ತನಗಳ ಮೇಲೂ ಸಹ ಹುಯ್ಯಿಸಿಕೊಳ್ಳುತ್ತಾರೆ. ಇದು ಪ್ರಪಂಚದಾದ್ಯಂತ ಪ್ರಚಲಿತವಾಗಿದ್ದಂತಹ ಪ್ರಾಚೀನ ಕಲೆ. “ಉತ್ರಾಸದ ಮೇಲೆ ಒಂದು ಉತ್ರಾಣಿಕೆ ಗಿಡ ಹುಟ್ಟಿ ಉತ್ತರೂ ಬರದು ಕಿತ್ತರೂ ಬರದು” ಎಂಬ ಒಗಟಿಗೆ ಉತ್ತರ ಹಣೆಬಟ್ಟಿನ ಹಚ್ಚೆ ಎಂದು. ಉತ್ರಾಸ ಎಂದರೆ ಬಾಗಿಲು ಮೇಲ್ಭಾಗದ ಮರದ ಪಟ್ಟಿ ಅಂದರೆ ಮನುಷ್ಯನ ಹಣೆ; ಉತ್ರಾಣಿಕೆ ಗಿಡ ಎಂದರೆ ಹಣೆಬಟ್ಟಿನ ಹಚ್ಚೆ; ಉತ್ತರೂ ಬರದು ಕಿತ್ತರೂ ಬರದು ಎಂದರೆ ಅದು ಶಾಶ್ವತ ಎಂದು.

ಪ್ರ : ತರಗತಿಯಲ್ಲಿ ಗುರು ಹೇಳುವುದನ್ನು ನೀವು ಚಿತ್ತೈಕಾಗ್ರತೆಯಿಂದ ಮೈಯೆಲ್ಲ ಕಿವಿಯಾಗಿ ಕೇಳಿದರೆ, ಅದು ನಿಮ್ಮ ಹೃದಯದಲ್ಲಿ ಹಚ್ಚೆ ಹುಯ್ದಂತೆ ಉಳಿದುಬಿಡುತ್ತದೆ.

೩೦೭೦. ಹಟ್ಟಿಗಿಡಿ = ಸಾವು ಸನ್ನಿಹಿತವಾಗು

(ಹಟ್ಟಿಗಿಡಿ < ಹಟ್ಟಿಗೆ + ಹಿಡಿ = ಅಂಗಳಕ್ಕೆ ಸಾಗಿಸು) ಹಟ್ಟಿ ಎಂಬುದಕ್ಕೆ ಮನೆ ಎಂಬ ಮೂಲಾರ್ಥವಿದ್ದು, ಅದು ಕಾಲಕ್ರಮೇಣ ಬೇರೆ ಬೇರೆ ಅರ್ಥದಲ್ಲಿ ಬಳಕೆಯಾಗುತ್ತಾ ಬಂದಿದೆ. ಮೇಗಳ ಹಟ್ಟಿ ಎಂದರೆ ಮೇಲಿನ ಮನೆ ಎಂದರ್ಥ. ಅದು ಕ್ರಮೇಣ ಊರು ಎಂಬ ಅರ್ಥದಲ್ಲೂ ಬಳಕೆಯಾಗಿದೆ. ಉದಾಹರಣೆಗೆ ಗೊಲ್ಲರಹಟ್ಟಿ. ಆಧುನಿಕ ಕಾಲದಲ್ಲಿ ಹಟ್ಟಿ ಎಂದರೆ ಮನೆಯ ಮುಂದಿನ ಅಂಗಳ ಎಂಬ ಅರ್ಥವನ್ನು ಪಡೆದುಕೊಂಡಿದೆ. ಉದಾಹರಣೆಗೆ “ಇನ್ನು ಹಟ್ಟಿಗೆ ಸಗಣ್ನೀರು ಹಾಕಿ ಗುಡಿಸಿಲ್ಲ” ಎಂದು ಹೇಳುತ್ತಾರೆ. ಅಂದರೆ ಮನೆಯ ಗರತಿ ಬೆಳಗಾಗುತ್ತಲೇ ಬಾಗಿಲು ತೆಗೆದು, ಹಟ್ಟಿಗೆ ಸಗಣಿನೀರು ಚಿಮುಕಿಸಿ ಕಸಗುಡಿಸುವ ಪರಿಪಾಠ ಇಂದಿಗೂ ನಮ್ಮ ಹಳ್ಳಿಗಾಡಿನಲ್ಲಿದೆ. ಸಾಯುವ ಮನುಷ್ಯ ಪ್ರಾಣವನ್ನು ಒಳಗೆ ಬಿಡಬಾರದು ಎಂದು ಅವನನ್ನು ಎತ್ತಿ ತಂದು ಅಂಗಳದಲ್ಲಿ ಮಲಗಿಸುತ್ತಾರೆ. ಆ ನಂಬಿಕೆಯ ಹಿನ್ನೆಲೆಯಲ್ಲಿ ಈ ನುಡಿಗಟ್ಟು ಮೂಡಿದೆ.

ಪ್ರ : ಗಾದೆ – ಆಪಾಟಿ ತಿಂದೋಳು ಅವಳೆಲ್ಲಿ ಬದುಕ್ಯಾಳು

ತಟ್ಟಿ ಹಾಸಿ ಹಟ್ಟಿಗಿಡೀರಿ

೩೦೭೧. ಹಟ್ಟಲಾಗು = ಕೆಸರಾಗು

(ಅಟ್ಲು = ತೊಸಗಲು ನೆಲ)

ಪ್ರ : ಕಣ್ಣು ಕಾಣಲ್ವ, ಗಂಜಳ ಹುಯ್ದು ಕೊಟ್ಟಿಗೆ ಎಲ್ಲ ಹಟ್ಲು ಆದಂಗೆ ಆಗ್ಯದೆ.

೩೦೭೨. ಹಡಗು ಹಡಗನ್ನೇ ಮುಳುಗಿಸು = ಭಾರಿ ಪ್ರಮಾಣದ ಮೋಸ ಮಾಡು, ಕೊಳ್ಳೆ ಹೊಡಿ.

ಪ್ರ : ಇವನು ಹೆಡಗೆ ಮುಳುಗಿಸಿದರೆ, ಅವನು ಹಡಗು ಹಡಗನ್ನೇ ಮುಳುಗಿಸ್ತಾನೆ.

೩೦೭೩. ಹಡದಿ ಕೊಡು = ಆಯ ಕೊಡು.

ಹಳ್ಳಿಗಳಲ್ಲಿ ಹಿಂದೆ ಅಗಸರು, ನಾಯಿಂದರು, ಕಮ್ಮಾರರು ಮೊದಲಾದವರಿಗೆ ವರ್ಷದ ಕೊನೆಯಲ್ಲಿ ಕೊಡುತ್ತಿದ್ದ ಧಾನ್ಯರೂಪದ ಆಯಕ್ಕೆ ಹಡದಿ ಎನ್ನುತ್ತಿದ್ದರು. ಈಗಿನಂತೆ ಇಷ್ಟು ಬಟ್ಟೆ ಒಗೆದದ್ದಕ್ಕೆ ಇಷ್ಟು ದುಡ್ಡು, ಇಷ್ಟು ಜನರಿಗೆ ಕ್ಷೌರ ಮಾಡಿದ್ದಕ್ಕೆ ಇಷ್ಟು ದುಡ್ಡು, ಇಷ್ಟು ಉಪಕರಣಗಳನ್ನು ತಟ್ಟಿಕೊಟ್ಟಿದ್ದಕ್ಕಾಗಿ ಮಾಡಿಕೊಟ್ಟಿದ್ದಕ್ಕಾಗಿ ಇಷ್ಟು ದುಡ್ಡು ಎಂದು ಅಂದಂದೇ ಕೈ ಮೇಲೆ ಕೊಡುವ ಪದ್ಧತಿ ಇರಲಿಲ್ಲ. ಆ ಪದ್ಧತಿಯ ಪಳೆಯುಳಿಕೆ ಈ ನುಡಿಗಟ್ಟು.

ಪ್ರ : ನಿನಗೆ ಹಡದೆ, ಹಡದಿ ಹೆಂಗೆ ಕೊಡಲಿ ಅಂತ ಕಣ್ಣು ಮಿಟುಕಿಸಿದ ಊರಗೌಡ.

೩೦೭೪. ಹಡಪ ಎತ್ತು = ಜಾಗ ಬಿಡು

(ಹಡಪ = ಕ್ಷೌರಿಕನ ಪೆಟ್ಟಿಗೆ)

ಪ್ರ : ಮೊದಲು ಇಲ್ಲಿಂದ ನಿನ್ನ ಹಡಪ ಎತ್ತು, ಕತ್ತೆ ಬಡವಾ.

೩೦೭೫. ಹಡು = ಸಂಭೋಗಿಸು

(ಹಡು < ಹೆಡು < ಹೆಟ್ಟು = ರತಿಕ್ರೀಡೆಯಾಡು)

ಪ್ರ : ಅವನು ‘ನಿನ್ನಮ್ಮನ್ನ ಹಡ’ ಅಂತ ಬಯ್ದ, ನಾನು ನಿನ್ನಮ್ಮನಿಗೇ ಹಡ್ತೀನಿ ಅಂದೆ.

೩೦೭೬. ಹಣದ ಬಣವೆ ಹಾಕು = ಹಣ ಗುಡ್ಡೆ ಹಾಕು

(ಬಣವೆ < ಬಣಬೆ < ಬಣಂಬೆ < ಬಳಂಬೆ = ಮೆದೆ)

ಪ್ರ : ಇಂಜಿನಿಯರ್ ಕೆಲಸ ಸಿಕ್ಕಿದ ಮೇಲೆ ಹಣದ ಬಣವೆ ಹಾಕಿಬಿಟ್ಟ.

೩೦೭೭. ಹಣಾಹಣಿ ಜಗಳವಾಗು = ಉಗ್ರವಾದ ಹೊಡೆದಾಟವಾಗು

(ಹಣಾಹಣಿ = ಹಣೆ ಹಣೆ ತಾಕಲಾಡುವ ಜಗಳ)

ಪ್ರ : ಇಬ್ಬರಿಗೂ ಹಣಾಹಣಿ ಜಗಳ ಆಯ್ತು.

೩೦೭೮. ಹಣ್ಣಾಗು = ಮೆತ್ತಗಾಗು, ವಯಸ್ಸಾಗು

ಪ್ರ : ಮಗ ಸತ್ತ ಕೊರಗಿನಲ್ಲೇ ಅಪ್ಪ ತೀರ ಹಣ್ಣಾಗಿಬಿಟ್ಟ.

೩೦೭೯. ಹಣ್ಣುಗಾಯಿ ನೀರುಗಾಯಿ ಮಾಡು = ಚೆನ್ನಾಗಿ ಜಜ್ಜು, ಜಜ್ಜು ಮೂಲಂಗಿ ಮಾಡು

ಪ್ರ : ಅವರ ಮೇಲೆ ಇವನು ನಿಗುರಿಕೊಂಡ ಹೋದ, ಅವರು ಹಣ್ಗಾಯಿ ನೀರ್ಗಾಯಿ ಮಾಡಿ ಕಳಿಸಿದರು.

೩೦೮೦ ಹಣ್ಣುಕಾಯಿ ಮಾಡಿಸು = ಪೂಜೆ ಮಾಡಿಸು

ಪ್ರ : ಇವತ್ತು ಹನುಮಂತರಾಯನಿಗೆ ಹಣ್ಣುಕಾಯಿ ಮಾಡಿಸಿಕೊಂಡು ಬಂದೆ.

೩೦೮೧. ಹಣ್ಣು ಹಾಕೋ ತಿಮ್ಮಣ್ಣ ಅಂತ ಕಾಯು = ಕೈಯೊಡ್ಡಿ ನಿಲ್ಲು

(ತಿಮ್ಮಣ್ಣ = ಕೋತಿ) ಮನುಷ್ಯ ಏನೇನು ಅಂಗಭಂಗಿ ಮಾಡುತ್ತಾನೋ ಮಂಗನೂ ಹಾಗೇ ಮಾಡುತ್ತದೆ. ಅಣಕಿಸಿದರೆ ಅಣಕಿಸುತ್ತದೆ, ಹಲ್ಲು ಕಿರಿದರೆ ಹಲ್ಲು ಕಿರಿಯುತ್ತದೆ. ಏನನ್ನಾದರೂ ಎಸೆಯುವಂತೆ ಕೈ ಬೀಸಿದರೆ ಅದೂ ಹಾಗೆಯೇ ಕಯ ಬೀಸುತ್ತದೆ. ಅದರಿಂದ ಉತ್ತೇಜಿತಗೊಂಡ ಹುಡುಗ ತನ್ನ ಕೈಲಿದ್ದ ಹಣ್ಣನ್ನು ಎಸೆದು, ಅದು ಮತ್ತೆ ನನ್ನತ್ತ ಎಸೆಯುತ್ತದೆ ಎಂದು ಕೈಯೊಡ್ಡಿ ಕಾಯುತ್ತಾ ನಿಂತ. ಅದು ಎಸೆಯಲಿಲ್ಲ. ಏಕೆಂದರೆ ಹೆಣ್ಣನ್ನು ಎಸೆಯುವಷ್ಟು ಅವಿವೇಕತನ ಕೋತಿಗಿರಲಿಲ್ಲ. ಆ ವರ್ತನೆಯನ್ನೊಳಗೊಂಡ ನುಡಿಗಟ್ಟಿದು.

ಪ್ರ : ಹಣ್ಣು ಹಾಕೋ ತಿಮ್ಮಣ್ಣ ಅಂತ ಕಾಯೋದ್ರಲ್ಲಿ ಅರ್ಥವಿಲ್ಲ, ಹೋಗೋಣ ಬನ್ನಿ.

೩೦೮೨. ಹಣೆ ಚಚ್ಚಿಕೊಳ್ಳು = ಸಾವಿರ ಸಾರಿ ಹೇಳಿರು, ಎಚ್ಚರಿಕೆ ನೀಡಿರು

ಪ್ರ : ನಾನು ಮೊದಲಿನಿಂದಲೂ ಹಣೆಹಣೆ ಚಚ್ಕೊಂಡೆ, ನನ್ನ ಮಾತ್ನ ನೀನು ಕೇಳಿದ?

೩೦೮೩. ಹಣ್ಣೋ ಕಾಯೋ ಎನ್ನು = ಕೆಲಸ ಆಯಿತೋ ಆಗಲಿಲ್ಲವೋ ಎಂದು ಕೇಳು

ಪ್ರ : ಹೋದ ಕೆಲಸ ಹಣ್ಣೋ ಕಾಯೋ ಎಂದಾಗ, ಆಳು ಹಣ್ಣು ಎಂದ.

೩೦೮೪. ಹತ್ತದಿರು ಹರಿಯದಿರು = ಸಮಸ್ಯೆ ಬಗೆಹರಿಯದಿರು, ಎಳೆದಾಟವಾಗು

ಪ್ರ : ಹಾವೂ ಸಾಯಲ್ಲ ಕೋಲೂ ಮುರಿಯಲ್ಲ ಅನ್ನೋ ಹಂಗೆ ಇವನು ಮಾತು ಹತ್ತಲ್ಲ ಹರಿಯಲ್ಲ.

೩೦೮೫. ಹತ್ತರಿ ಹೊಡಿ = ನುಣ್ಣಗೆ ಮಾಡು

(ಹತ್ತರಿ = ತೋಬಡ, ಮರವನ್ನು ನಯನುಣುಪುಗೊಳಿಸುವ ಉಪಕರಣ)

ಪ್ರ : ಅತ್ತೆ ಮನೆ ಸಂಪತ್ತನ್ನೆಲ್ಲ ಹತ್ತರಿ ಹೊಡೆದಂಗೆ ಮಾಡಿಬಿಟ್ಟ.

೩೦೮೫. ಹತ್ತಾರು ಹಲ್ಲಂಡೆ ನೂರಾರು ಲೋಲಾಯಿ ಆಗು = ಕಷ್ಟಕಾರ್ಪಣ್ಯಗಳು ಮುತ್ತಿಗೆ ಹಾಕು.

(ಹಲ್ಲಂಡೆ < ಪಲ್ಲಂಡೆ = ಚಿದರು ಚಿದರಾದ (< ಛಿದ್ರಛಿದ್ರ) ಬಾಳೆ ಎಲೆ; ಲೋಲಾಯಿ < ಲುಲಾಯ(ಕೋಣ) ಲುಲಾಯಿ (ಎಮ್ಮೆ) = ಕೋಣ ವಾಹನನ ಬಾಧೆ)

ಪ್ರ : ಹತ್ತಾರು ಹಲ್ಲಂಡೆ ನೂರಾರು ಲೋಲಾಯಿ ಆದ್ರೂ ಬದುಕಬೇಕಲ್ಲ? ಸಾಯೋಕಾಗ್ತದ?

೩೦೮೬. ಹತ್ತಿರಕ್ಕೆ ಹೋಗು = ವ್ಯಭಿಚಾರದಲ್ಲಿ ತೊಡಗು

ಪ್ರ : ಇವನು ಆ ಹಲಾಲ್‌ಕೋರಿ ಹತ್ರಕ್ಕೆ ಹೋಗಿದ್ದಕ್ಕೆ ತಾನೇ, ಇಷ್ಟೆಲ್ಲ ರಾದ್ಧಾಂತ ಆಗಿದ್ದು?

೩೦೮೭. ಹದಗಳ್ಳೆ ಕಟ್ಟು = ತೊಡೆ ಸಂದಿಯಲ್ಲಿ ಗಂಟಾಗಿ ಬಾಧಿಸು

(ಹದಗಳ್ಳೆ < ಹದಗಡಲೆ = ಒಳದೊಡೆಯ ಗಂಟು)

ಪ್ರ : ಹದಗಳ್ಳೆ ಕಟ್ಟಿ ಮುಂದಕ್ಕೆ ಕಾಲಿಕ್ಕೋಕಾಗಲ್ಲ.

೩೦೮೮. ಹದಗೊಳಿಸು = ಸಿದ್ಧಪಡಿಸು, ಸರಿಪಡಿಸು

ಪ್ರ : ಎಲ್ಲ ಹದಗೊಳಿಸಿ ಇಕ್ಕಿರುವಾಗ ಅಡೋದು ಎಷ್ಟೊತ್ತು?

೩೦೮೯. ಹದಕ್ಕೆ ತರು = ಪಾಕಗೊಳಿಸು, ತೀರ್ಮಾನ ಮಾಡಿಕೊಳ್ಳುವ ಹಂತಕ್ಕೆ ತರು

ಪ್ರ : ಇಬ್ಬರನ್ನೂ ಒಂದು ಹದಕ್ಕೆ ತಂದಿದ್ದೀವಿ, ಇವತ್ತು ತೀರ್ಮಾನ ಆಗಬಹುದು.

೩೦೯೦. ಹದಗೆಟ್ಟು ಹೋಗು = ಹಾಳಾಗು, ವಿಕೋಪಕ್ಕಿಟ್ಟು ಕೊಳ್ಳು

ಪ್ರ : ಇವನ ಅವಿವೇಕದಿಂದ ವ್ಯವಹಾರವೇ ಹದಗೆಟ್ಟು ಹೋಯ್ತು.

೩೦೯೧. ಹದವಾಗು ನಡೆದುಕೊಳ್ಳು = ತೂಕವಾಗಿ, ಗಂಭೀರವಾಗಿ ವರ್ತಿಸು

ಪ್ರ : ತುಂಬಿದೂರದಲ್ಲಿ ಹದವಾಗಿ ನಡೆದುಕೊಳ್ಳೋದನ್ನು ಬಿಟ್ಟು ಬೆದೆ ಬಂದ ದನದ ಹಂಗೆ ತಿರುಗ್ತಿದ್ರೆ ಮನೆತನದ ಮಾನ ಉಳೀತದ?

೩೦೯೨. ಹದರಾಟ ಆಡದಿರು = ಹಾದರಗಿತ್ತಿಯಾಟ ಆಡದಿರು

(ಹದರ < ಹಾದರ = ವ್ಯಭಿಚಾರ)

ಪ್ರ : ನನ್ನ ಹತ್ರ ನಿನ್ನ ಹದರಾಟ ಆಡಬೇಡ, ಹುಷಾರಾಗಿರು

೩೦೯೩. ಹದ್ದಿನ ಕಣ್ಣಲ್ಲಿ ಕಾದಿರು = ಮೈಯೆಲ್ಲ ಕಣ್ಣಾಗಿ ಚುರುಕು ನೋಟದಿಂದಿರು

ಪ್ರ : ಇಷ್ಟು ದಿನ ಹದ್ದಿನ ಕಣ್ಣಲ್ಲಿ ಕಾದು, ಇವತ್ತು ಯಾಮಾರಿಬಿಟ್ಟೆ.

೩೦೯೪. ಹನುಮಂತನ ಬಾಲವಾಗು = ತುಂಬ ಉದ್ದವಾಗು, ಕೊನೆಯಿಲ್ಲದಿರು

ಪ್ರ : ನೋಡ್ತಾ ನೋಡ್ತಾ ಕೀವು (<ಕ್ಯೂ) ಹನುಮಂತನ ಬಾಲವಾಯ್ತು.

೩೦೯೫. ಹನ್ನೆರಡು ಹೊಡೆದುಕೊಳ್ಳು = ಭಯವಾಗು, ಎದೆ ಡವಡವಗುಟ್ಟು

ಗೋಡೆಗಡಿಯಾರ ಬಂದ ಮೇಲೆ ಮೂಡಿದ ನುಡಿಗಟ್ಟಿತು. ಏಕೆಂದರೆ ಅದ ಹನ್ನೆರಡು ಗಂಟೆಯಾದರೆ ಹನ್ನೆರಡು ಸಾರಿ, ಗಂಟೆ ಬಡಿದಂತೆ, ಸದ್ದು ಮಾಡುತ್ತದೆ. ಕೈಗಡಿಯಾರ ಹಾಗೆ ಮಾಡುವುದಿಲ್ಲ. ಹೃದಯ ಲೋಲಕವುಳ್ಳ ಗೋಡೆ ಗಡಿಯಾರದಂತೆ ಹೊಡೆದುಕೊಂಡಿತು ಎಂದು ಹೇಳುವ ಮೂಲಕ ಭಯವನ್ನು ಭಟ್ಟಿ ಇಳಿಸಿದೆ.

ಪ್ರ : ಮೌಖಿಕ ಪರೀಕ್ಷೆಗೆ ಒಳ ಹೋಗುವ ಮುನ್ನ ನನಗೆ ಹನ್ನೆರಡು ಹೊಡೆದುಕೊಳ್ತು.

೩೦೯೬. ಹಬ್ಬ ಮಾಡು = ಸಾಕು ಸಾಕು ಅನ್ನಿಸು

ಪ್ರ : ಅಮ್ಮಣ್ಣಿ ಬಂದಿದ್ಲು, ಸರಿಯಾಗಿ ಹಬ್ಬ ಮಾಡಿ ಕಳಿಸಿದ್ದೀನಿ.

೩೦೯೭. ಹಮ್ಮಿಳಿಸು = ಗರ್ವ ಅಡಗಿಸು

(ಹಮ್ಮು = ಅಹಂಕಾರ)

ಪ್ರ : ಹಮ್ಮಿಳಿಯೋಂಗೆ ಚೆನ್ನಾಗಿ ಗುಮ್ಮಿ ಕಳಿಸಿದ್ದೀನಿ.

೩೦೯೮. ಹರಾಜು ಎತ್ತು = ಅಡ್ಡಾದುಡ್ಡಿಗೆ ಮಾರು, ಹೋದಷ್ಟಕ್ಕೆ ವಿಕ್ರಯಿಸು.

ಪ್ರ : ಇನ್ನೊಂದು ದಿವಸ ಇಂಥ ಹಲ್ಕಾ ಕೆಲಸ ಮ ಮಾಡಿದ್ರೆ ನಿನ್ನ ಮಾನಾನ ನಡುಬೀದೀಲಿ ಹರಾಜು ಎತ್ತಿ ಬಿಡ್ತೀನಿ, ಜೋಕೆ.

೩೦೯೯. ಹರಿದು ಬಗಾಲಾಗು = ಚಿಂದಿ ಚಿಂದಿಯಾಗು, ರಂದ್ರರಂದ್ರವಾಗು

(ಬಗಾಲ್ < ಬಗಾರ = ತೂತು)

ಪ್ರ : ಕವಚ ಹರಿದು ಬಗಾಲಾಗಿದೆ, ಬೀಗರ ಮನೆಗೆ ಅದನ್ನು ಹಾಕ್ಕೊಂಡು ಹೋಗೋದು ಹೆಂಗೆ?

೩೧೦೦. ಹರಿದು ಪಲ್ಲಂಡೆಯಾಗು = ಛಿದ್ರಛಿದ್ರವಾಗು

(ಪಲ್ಲಂಡೆ = ಚಿದರು ಚಿದರಾದ ಬಾಳೆ ಎಲೆ)

ಪ್ರ : ಸ್ಯಾಲೆ ಹರಿದು ಪಲ್ಲಂಡೆ ಆಗಿದೆ, ಅದನ್ನೇ ಉಟ್ಕೊಂಡು ಹೋಗ್ಲ?

೩೧೦೧. ಹರಿಕೊಳ್ಳು = ಕಿತ್ತುಕೊಳ್ಳು

(ಹರಿಕೊಳ್ಳು < ಹರಿದುಕೊಳ್ಳು = ಕಿತ್ತುಕೊಳ್ಳು)

ಪ್ರ : ನನ್ನ ಹತ್ರ ಏನು ಹರಿಕೊಳ್ತಾನೆ, ನನ್ನ ಜುಬ್ಬರಾನ?

೩೧೦೨. ಹರಿಶಿವ ಎನ್ನು = ಮರಣ ಹೊಂದು

ಪ್ರ : ಅವನು ಎಂದೋ ಹರಿಶಿವ ಅಂದ, ಈಗಿರೋನು ಮಗ ಮಾತ್ರ.

೩೧೦೩. ಹರಿಶಿವ ಎನ್ನದಿರು = ಮಾತಾಡದಿರು, ಬಾಯಿ ತೆರೆಯದಿರು.

ಯಾವುದೇ ಪಕ್ಷದ ಪರವಾಗಿ ಮಾತಾಡದೆ ಬಾಯಿ ಹೊಲಿದುಕೊಂಡಿರುವುದು. ಹಿಂದೊಮ್ಮೆ ನಮ್ಮ ಸಮಾಜದಲ್ಲಿ ಪ್ರಬಲವಾಗಿದ್ದ ಹರಿಹರ ಹಗರಣದ ಹಿನ್ನೆಲೆಯ ವಾಸನೆಯನ್ನುಳ್ಳ ನುಡಿಗಟ್ಟಿದು ಎನ್ನಬಹುದು.

ಪ್ರ : ಅವರೆಲ್ಲ ಅಷ್ಟು ಅಂದ್ರೂ ಆಡಿದ್ರೂ, ಇವರು ಹರಿಶಿವ ಅನ್ನಲಿಲ್ಲ.

೩೧೦೪. ಹರಿಯೋ ನೀರಲ್ಲಿ ಹುಣಿಸೆ ಹಣ್ಣು ಕಿವುಚಿದಂತಾಗು = ವ್ಯರ್ಥವಾಗು

ಸಾರಿಗೆ ಹುಳಿ ಬಿಡಲು, ಒಂದು ಬಟ್ಟಲಲ್ಲಿ ನೀರಿಟ್ಟುಕೊಂಡು, ಹುಣಿಸೆ ಹಣ್ಣನ್ನು ಅದರೊಳಗೆ ಕಿವುಚಿ, ಹಿಪ್ಪೆಯನ್ನು ಹೊರಕ್ಕೆ ಎಸೆದು, ಸಾರಿಗೆ ಹುಳಿ ಬಿಡುತ್ತಾರೆ. ಆದರೆ ಹರಿಯೋ ನೀರಲ್ಲ ಕಿವುಚಿದರೆ, ಹುಳಿಯನ್ನು ಸಾರಿಗೆ ಬಿಡುವುದು ಹೇಗೆ? ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಅವನಿಗೆ ಮಾಡಿದ ಉಪಕಾರ, ಹರಿಯೋ ನೀರಲ್ಲಿ ಹುಣಿಸೆಹಣ್ಣು ಕಿವುಚಿದಂತಾಯ್ತು.

೩೧೦೫. ಹರೆ ಕಡಿದು ಬಿರಿ ಬಿಚ್ಚಿ ಹಾಕು = ಶ್ರಮಿಸು, ಕೆಲಸ ಮಾಡು

(ಹರೆ = ಕೊಂಬೆ; ಬಿರಿ = ರಂದ್ರಕ್ಕೆ ತೊಡಿಸಿದ ಕಾವು ಸಡಿಲವಾಗಿದ್ದರೆ ಬಿಗಿಗೊಳಿಸಲು ಹೊಡೆಯುವ ಆಪು ಅಥವಾ ರಥದ ವೇಗವನ್ನು ನಿಯಂತ್ರಿಸಲು ಚಕ್ರಕ್ಕೆ ಹಾಕುವ ಅಡ್ಡಮರ)

ಪ್ರ : ಹೊತ್ತಾರೆಯಿಂದ ನೀನು ಹರೆ ಕಡಿದು ಬಿರಿ ಬಿಚ್ಚಿ ಹಾಕಿರೋದು ಕಾಣಲ್ವ?

೩೧೦೬. ಹರೇದ ಉಮೇದಿರು = ಪ್ರಾಯದ ಹುಮ್ಮಸ್ಸಿರು

(ಹರೇದ < ಹರೆಯದ = ಯೌವನದ; ಉಮೇದು = ಹುರುಪು)

ಪ್ರ : ಹರೇದ ಉಮೇದಿನಲ್ಲಿ ಮಕ್ಕಳು ತಪ್ಪು ಮಾಡ್ತಾರೆ, ಅದನ್ನೇ ದೊಡ್ಡದು ಮಾಡಬಾರ್ದು.

೩೧೦೭. ಹಲ್ಲಂಡೆ ಬೀಳಿಸು = ಪರದಾಡಿಸು

(ಹಲ್ಲಂಡೆ < ಪಲ್ಲಂಡೆ = ಸೀಳು ಸೀಳಾದ ಬಾಳ ಎಲೆ)

ಪ್ರ : ಮಗರಾಮ ನನ್ನನ್ನು ಅಷ್ಟಿಷ್ಟು ಹಲ್ಲಂಡೆ ಬೀಳಿಸಿಲ್ಲ.

೩೧೦೮. ಹಲ್ಲಂಡೆ ಮಾಡು = ಚುಪ್ಪಾನಚೂರು ಮಾಡು, ರಣ-ರಂ-ಪ ಮಾಡು

ಪ್ರ : ಮಗ ಮಾಡಿದ ಹಲ್ಲಂಡೇಲಿ ನಾನೆಲ್ಲುಂಡೆ?

೩೧೦೯. ಹಲಾಬಿ ಕಟ್ಟು = ನೆಗೆದಾಡು

(ಹಲಾಬಿ = ಮುಸ್ಲಿಮರ ಮೊಹರಂ ಹಬ್ಬದ ಒಂದು ಆಚರಣೆ)

ಪ್ರ : ಬೇಡ ಬೇಡ ಅಂದ್ರೂ ಊರೆಲ್ಲ ನೋಡೋಂಗೆ ಹಲಾಬಿ ಕಟ್ಟಿಬಿಟ್ಟ, ಮಾರಾಯ

೩೧೧೦. ಹಲ್ಲಾಗೆ ಹಾಕಿ ಸೊಲ್ಲಾಗೆ ತೆಗಿ = ಹಿಂಸಿಸಿ ಹೀಯಾಳಿಸು, ಹಲ್ಲೊಳಗೆ ಲಲುವಿ ನಾಲಗೆಯೊಳಗೆ ಜಾಯ-ಮಾ-ನ ಜಾಲಾಡು

(ಹಲ್ಲಾಗೆ = ಹಲ್ಲೊಳಗೆ ; ಸೊಲ್ಲಾಗೆ = ಸೊಲ್ಲೊಳಗೆ) ಹಲ್ಲೊಳಗೆ ತೂರಿಸಿ ಜಗಿದು, ಸೊಲ್ಲೊಳಗೆ ಜಾಲಾಡಿ ಈಚೆಗೆ ತೆಗೆದರು ಎಂಬಲ್ಲಿ ಹಿಂಸೆ ಮತ್ತು ಹೀಯಾಳಿಕೆ ಎರಡೂ ಕಂಡರಣೆಗೊಂಡಿವೆ – ನಡೊಲೇಲಿಕ್ಕಿ ಕೋಡೊಲೇಲಿ ತೆಗೆದಳು ಎಂಬ ನುಡಿಗಟ್ಟಿನಂತೆ. ನಮ್ಮ ಜನಪದರು ಬಳಸುವ ನುಡಿಗಟ್ಟುಗಳಿಗಿರುವ ಚಿತ್ರಕಶಕ್ತಿ ಸದಾಕಾಲ ಮೆಲುಕು ಹಾಕುವಂಥದ್ದು.

ಪ್ರ : ನಮ್ಮತ್ತೆ ನನ್ನನ್ನು ಹಲ್ಲಾಗೆ ಹಾಕಿ ಸೊಲ್ಲಾಗೆ ತೆಗೆದಿರೋದನ್ನ ಎಲ್ಲರ ಮುಂದೆ ಹೇಳಿಕೊಳ್ಳಲಾರೆ.

೩೧೧೧. ಹಲ್ಲಿಕ್ಕದಿರು = ಅನುಭವ ಇಲ್ಲದಿರು

(ಹಲ್ಲಿಕ್ಕು < ಹಲ್ಲು + ಇಕ್ಕು = ಹಲ್ಲು ಹುಟ್ಟು) ಕೌಮಾರ್ಯದಿಂದ ತಾರುಣ್ಯಕ್ಕೆ ಬರುವ ಅವಧಿಯಲ್ಲಿ ಮನುಷ್ಯರಿಗೆ ಹಲ್ಲು ಬಿದ್ದು ಬೇರೆ ಹೊಸ ಹಲ್ಲು ಹುಟ್ಟುತ್ತವೆ. ಆದರೆ ಪ್ರಾಣಿಗಳಿಗೆ ತಾರುಣ್ಯ ಬಂದಾಗ ಎರಡು ಹಲ್ಲು, ಏರು ಹರೆಯವಾದಾಗ ನಾಲ್ಕು ಹಲ್ಲು, ಹರೆಯದ ಗಡಿದಾಟಿದಾಗ ಆರು ಹಲ್ಲು ಹುಟ್ಟುತ್ತದೆ. ಆರು ಹಲ್ಲು ಹುಟ್ಟಿದಾಗ ‘ಬಾಯ್ಗೂಡಿವೆ’ ಎನ್ನುತ್ತಾರೆ. ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಹಲ್ಲಿಕ್ಕದ ಚಿಳ್ಳೆಪುಳ್ಳೆಗಳೆಲ್ಲ ನನಗೆ ಬುದ್ಧಿ ಹೇಳೋಕೆ ಬಂದ್ರೆ ಸಿಟ್ಟು ಬರಲ್ವ?

೩೧೧೨. ಹಲ್ಲಿಗಿಳಿ = ರುಚಿ ಹತ್ತು

(ಹಲ್ಲಿಗಿಳಿ < ಹಲ್ಲಿಗೆ + ಇಳಿ = ಹಲ್ಲಿಗೆ ಸ್ವಾದರಸ ಇಳಿದುಕೊಳ್ಳು)

ಪ್ರ : ಹಲ್ಲಿಗಿಳಿದ ಮೇಲೆ, ಅನ್ಯರ ವಸ್ತುವಾದರೂ ಅದು ತಮ್ಮದೇ ಎಂದು ವಾದಿಸುತ್ತಾರೆ.

೩೧೧೩. ಹಲ್ಲಿ ನುಡಿದಂತಾಡು = ಕರಾರುವಾಕ್ಕಾಗಿ ಹೇಳು

ಹಲ್ಲಿ ನುಡಿದರೆ ಅದು ವಿಫಲವಾಗುವುದಿಲ್ಲ ಎಂಬ ನಂಬಿಕೆ ಜನಪದರಲ್ಲಿದೆ. ಕೆಲಸ ಹಾಗಲ್ಲ ಅಥವಾ ಆಗುತ್ತದೆ ಎಂಬುದನ್ನು ತನ್ನ ಲೊಚಗುಟ್ಟುವ ಧ್ವನಿಯಲ್ಲಿ ಅದು ಹೇಳುತ್ತದೆ, ಅದನ್ನು ಗ್ರಹಸುವ ಶಕ್ತಿ ಮನುಷ್ಯರಿಗೆ ಬರಬೇಕು ಎಂಬುದು ಅವರ ವಾದ. ಸಾಮಾನ್ಯವಾಗಿ ಹಲ್ಲಿ ಫಲವಾದಾಗ ಜನಪದರು “ಕೃಷ್ಣ ಕೃಷ್ಣ” ಎಂದು ಹೇಳುವುದು ರೂಢಿ. ಅಂದರೆ ಕೃಷ್ಣನೇ ಹೇಳುವ ಸತ್ಯವಾಣಿ ಎಂಬುದು ಅವರ ಗ್ರಹಿಕೆ. ಆ ನಂಬಿಕೆಯ ಪ್ರತಿರೂಪ ಈ ನುಡಿಗಟ್ಟು.

ಪ್ರ : ನೀನು ಹಲ್ಲಿನುಡಿದಂತಾಡಿದ್ದು ಸುಳ್ಳಾಗಲಿಲ್ಲ, ನಿನಗೆ ಮಚ್ಚೆನಾಲಗೆ ಇರಬೇಕು.

೩೧೧೪. ಹಲ್ಲಿಗೆ ಸಾಲದಿರು = ಕಮ್ಮಿ ಇರು

(ಸಾಲದಿರು = ಸಾಕಾಗದಿರು)

ಪ್ರ : ಹಲ್ಲಿಗೇ ಸಾಲದೆ ಇರುವಾಗ ಗಲ್ಲೆಬಾನಿ ತುಂಬೋದು ಹೆಂಗೆ?

೩೧೧೫. ಹಲ್ಲಿಗೆ ಹಲ್ಲು ಹುಟ್ಟಿದಂಗೆ ಮಾತಾಡು = ಮಾತಿಗೆ ಪ್ರತಿಮಾಡು ಹೇಳು.

ಬಿದ್ದ ಹಲ್ಲಿನ ಜಾಗದಲ್ಲಿ ಮತ್ತೊಂದು ಹೊಸ ಹಲ್ಲು ಹುಟ್ಟುತ್ತದೆ. ಅದೇ ರೀತಿ ಆಡಿದ ಮಾತಿಗೆ ಪ್ರತಿಯಾಗಿ ಮತ್ತೊಂದು ಪ್ರತಿಮಾತು ಎದುರಾಗುತ್ತದೆ ಎಂಬುದು ಈ ನುಡಿಗಟ್ಟಿನ ಭಾವಾರ್ಥ.

ಪ್ರ : ಮನೆ ಹೆಂಗಸು ಹಲ್ಲಿಗೆ ಹಲ್ಲು ಹುಟ್ಟಿದಂಗೆ ಮಾತಾಡೋದ್ನ ಮೊದಲು ನಿಲ್ಲಿಸಬೇಕು.

೩೧೧೬. ಹಲ್ಲುದುರಿಸು = ಚೆನ್ನಾಗಿ ಥಳಿಸು

ಪ್ರ : ಗರ‍್ಮಿರ್ ಅಂದ್ರೆ ಹಲ್ಲುದುರಿಸಿಬಿಡ್ತೀನಿ, ಅದುಮಿಕೊಂಡು ಕುಂತಿರು.

೩೧೧೭. ಹಲ್ಲು ಕಚ್ಚೋರ ಮುಂದೆ ಹುಲ್ಲು ಕಚ್ಚಿ ಬದುಕು = ದರ್ಪ ಚಲಾಯಿಸುವವರ ಮುಂದೆ ದೈನ್ಯದಿಂದ ಬಾಳು

(ಹಲ್ಲು ಕಚ್ಚೋರು = ದರ್ಪ ತೋರಿಸುವ ದಣಿಗಳು, ಹುಲ್ಲು ಕಚ್ಚು = ಶರಣಾಗತರ ಅಸಾಹಾಯಕತನ)

ಪ್ರ : ಗಾದೆ – ಹಲ್ಲು ಕಚ್ಚೋ ಅರಸರ ಕಂಡು

ಹುಲ್ಲು ಕಚ್ಚೋ ಆಳುಗಳ ದಂಡು.

೩೧೧೮. ಹಲ್ಲು ಕಿತ್ತ ಹಾವಾಗು = ಶಕ್ತಿ ಹೀನವಾಗು

ಪ್ರ : ಮೆಲುಕು ಅಲ್ಲಾಡೋ ಹಂಗೆ ತದಕಿದ್ದರಿಂದ ಈಗ ಹಲ್ಲುಕಿತ್ತ ಹಾವಾಗಿದ್ದಾನೆ.

೩೧೧೯. ಹಲ್ಲು ಕಚ್ಚಿಕೊಂಡಿರು = ತಾಳಿಕೊಂಡಿರು

ಪ್ರ : ನಿನ್ನ ಮುಖ ನೋಡ್ಕೊಂಡು ಹಲ್ಲುಕಚ್ಕೊಂಡಿದ್ದೀನಿ, ಇಲ್ಲದಿದ್ರೆ ಅವನಿಗೆ ಹುಟ್ಟಿದ ದಿನ ಕಾಣಿಸ್ತಿದ್ದೆ.

೩೧೨೦. ಹಲ್ಲು ಕೀಚುಗಟ್ಟು = ಹಲ್ಲುಜ್ಜದೆ ಹಾವಸೆಗಟ್ಟು

(ಕೀಚು = ಪಾಚಿ)

ಪ್ರ : ಹಲ್ಲು ಕೀಚುಗಟ್ಟಿ ಬಾಯಿ ತೆರೆದರೆ ಗಬ್ಬುವಾಸನೆ ಬರ್ತದೆ.

೩೧೨೧. ಹಲ್ಲು ಹಲ್ಲು ಗಿರಗು = ನೋವಿನಿಂದ ನರಳು, ಗೋಗರೆ

(ಗಿರಗು = ಗಿಂಜು)

ಪ್ರ : ಅಷ್ಟು ಹಲ್ಲು ಹಲ್ಲು ಗಿರಗಿದರೂ, ಕಾರ್ಕೋಟಕನ ಮನಸ್ಸು ಕರಗಲಿಲ್ಲ.

೩೧೨೨. ಹಲ್ಲು ಗಿಂಜು = ಆಲ್ವರಿ, ಅಸಹಾಯಕನಾಗಿ ಬೇಡು

ಪ್ರ : ಅನ್ನ ಇಲ್ಲದೆ ಸತ್ರೂ ಚಿಂತಿಲ್ಲ, ಒಬ್ಬರ ಮುಂದೆ ಹೋಗಿ ನಾನು ಹಲ್ಲುಗಿಂಜಲ್ಲ.

೩೧೨೩. ಹಲ್ಲು ಬಾಯಿ ಉಳಿ = ಏನೂ ಉಳಿಯದಿರು

ಪ್ರ : ಗಾದೆ – ಹಂಚಿದೋರಿಗೆ ಹಲ್ಲು ಬಾಯಿ

೩೧೨೪. ಹಲ್ಲು ಮುಡಿ ಕಚ್ಚು = ಸಿಟ್ಟು ದೋರು

(ಹಲ್ಲು ಮುಡಿ = ಅವುಡು)

ಪ್ರ : ನೀನು ಹಲ್ಲು ಮುಡಿ ಕಚ್ಚಿಬಿಟ್ರೆ ನಡುಗೋ ಅಸಾಮಿ ನಾನಲ್ಲ.

೩೧೨೫. ಹಲ್ಲು ಮುರಿದು ಕೈಗೆ ಕೊಡು = ಶಾಸ್ತಿ ಮಾಡು.

ಪ್ರ : ಜರ್ಬುಗಿರ್ಬು ತೋರಿಸಿದರೆ ಹಲ್ಲು ಮುರಿದು ಕೈಗೆ ಕೊಡ್ತೀನಿ.

೩೧೨೬. ಹಲ್ಲಾಗೆ ಹ ರೆ ಬಾರಿಸು = ಸಿಟ್ಟಿನಿಂದ ಹಲ್ಲನ್ನು ನೊರನೊರಗುಟ್ಟಿಸು

(ಹಲ್ಲಾಗೆ = ಹಲ್ಲೊಳಗೆ; ಹರೆ < ಪರೆ = ವಾದ್ಯವಿಶೇಷ)

ಪ್ರ : ಹಲ್ಲಾಗೆ ಹರೆ ಬಾರಿಸಿಬಿಟ್ರೆ ಇಲ್ಲಿ ಯಾರೂ ವಾಲಗ ಊದೋಕೆ ತಯಾರಿಲ್ಲ.

೩೧೨೭. ಹಲ್ಲಿಗೆ ಹಲ್ಲು ತಾಟು ಹುಯ್ = ಚಳಿಗೆ ಹಲ್ಲು ಕರಕರಗುಟ್ಟು

(ತಾಟು ಹುಯ್ = ಒಂದಕ್ಕೊಂದು ತಾಡನಗೊಳ್ಳು)

ಪ್ರ : ಎಂಥ ಚಳಿ ಅಂದ್ರೆ, ಹಲ್ಲಿಗೆ ಹಲ್ಲು ತಾಟು ಹುಯ್ದುಬಿಟ್ಟವು.

೩೧೨೮. ಹಲ್ಲು ಹಲ್ಲು ಕಡಿ = ರುದ್ರಾವತಾರ ತಾಳು

ಪ್ರ : ನಾವೆಲ್ಲ ಒಟ್ಟಿಗಿದ್ದದ್ದು ನೋಡಿ ಅಣ್ಣ ಹಲ್ಲು ಹಲ್ಲು ಕಡಿದ, ಅದರ ಕಥೆ ಯಾಕೆ ಕೇಳ್ತಿ?

೩೧೨೯. ಹಲ್ಲು ಹಾವಸೆಗಟ್ಟು = ಕೊಳಕಾಗಿರು

(ಹಾವಸೆ < ಪಾವಸೆ < ಪಾಸಿ < ಪಾಚಿ(ತ) = ಕೊಳೆ)

ಪ್ರ : ಹಲ್ಲು ಹಾವಸೆಗಟ್ಟಿದ್ರೂ ನಿನ್ನ ಮನಸ್ಸಿಗೆ ಏನೂ ಅನ್ನಿಸಲ್ವ?

೩೧೩೦. ಹಲ್ಲು ಹಿಡಿದು ನೋಡು = ಪರೀಕ್ಷಿಸು

ದನಗಳ ಜಾತ್ರೆಯಲ್ಲಿ ಕೊಳ್ಳುವವರು ಎತ್ತು ಅಥವಾ ಹೋರಿಗಳ ಹಲ್ಲು ಹಿಡಿದು ನೋಡುವುದು ರೂಢಿ. ಎರಡು ಹಲ್ಲು ಹಾಕಿದೆಯೋ, ನಾಲ್ಕು ಹಲ್ಲು ಹಾಕಿದೆಯೋ ಅಥವಾ ಆರು ಹಲ್ಲು ಹಾಕಿ ಬಾಯ್ಗೂಡಿದೆಯೋ ಎಂದು ನೋಡಿ ಅವುಗಳ ವಯಸ್ಸಿಗನುಗುಣವಾಗಿ ಬೆಲೆಗಟ್ಟುತ್ತಿದ್ದರು. ಮಾನವರ ಜಾತಿಮತ ಪರೀಕ್ಷಿಸುವವರನ್ನು ಈ ನುಡಿಗಟ್ಟಿನ ಮೂಲಕವೇ ತರಾಟೆಗೆ ತೆಗೆದುಕೊಳ್ಳುವುದನ್ನು ಕಾಣುತ್ತೇವೆ.

ಪ್ರ : ಕನಕದಾಸರು ಬದುಕಿದ್ದದ್ದು, ಜಾತಿಯ ಹಲ್ಲು ಹಿಡಿದು ನೋಡಿ ವ್ಯಕ್ತಿಯ ಬೆಲೆ ಕಟ್ಟುತ್ತಿದ್ದ ಕಾಲದಲ್ಲಿ

೩೧೩೧. ಹಲ್ಲು ಹಿಡಿದು ಮಾತಾಡು = ನಿಗ್ರಹದಿಂದ ಮಾತಾಡು

ಪ್ರ : ನಾಲಗೆ ಹೋದ ಹಾಗೆ ಮಾತಾಡಬೇಡ, ಕೊಂಚ ಹಲ್ಲು ಹಿಡಿದು ಮಾತಾಡೋದನ್ನ ಕಲಿ

೩೧೩೨. ಹಸಗೆಟ್ಟು ಹೋಗು = ಹಾಳಾಗು, ರೀತಿನೀತಿ ಇಲ್ಲವಾಗು

(ಹಸ < ಹಸನು = ಶುದ್ಧ, ಅಂದಚೆಂದ)

ಪ್ರ : ಗಾದೆ – ಹಸಗೆಟ್ಟೋಳಿಗೆ ಅರಿಶಿಣ ಇಕ್ಕಿದ್ಕೆ

ಹೊಸಲ ಮೇಲೆ ಹೋಗಿ ತೊಸಕ್ ಅಂದ್ಲಂತೆ.