೨೫೩೧. ಮುಟ್ಟಿ ನೋಡಿಕೊಳ್ಳುವಂತೆ ಕೊಡು = ಚುರುಗುಗುಟ್ಟುವಂತೆ ಥಳಿಸು

(ಕೊಡು = ಏಟು ಕೊಡು, ಹೊಡಿ)

ಪ್ರ : ಅಡ್ಡನಾಡಿಗೆ ಮುಟ್ಟಿ ನೋಡಿಕೊಳ್ಳುವಂತೆ ಕೊಟ್ಟಿದ್ದೀನಿ ಇವತ್ತು.

೨೫೩೨. ಮುಟ್ಟಿದರೆ ಮುಸುಗನಂತಿರು = ಮುದುಡಿಕೊಳ್ಳುವ ಸಂಕೋಚಸ್ವಭಾವವಾಗಿರು

(ಮುಟ್ಟಿದರೆ ಮುಸುಗ = ಒಂದು ಸಸ್ಯ ವಿಶೇಷ, ಮುಟ್ಟಿದ ತಕ್ಷಣ ಅದರ ಎಲೆಗಳೆಲ್ಲ ಮುದುಡಿಕೊಂಡು ಕಾಂತಿಹೀನವಾಗುವಂಥದು)

ಪ್ರ : ಮುಟ್ಟಿದರೆ ಮುಸುಗುನಂತಿರೋನ ಜೊತೆ ಏಗೋದು ಹೆಂಗೆ?

೨೫೩೩. ಮುಟ್ಟಿದ್ದೆಲ್ಲ ಮಣ್ಣಾಗು = ಹಿಡಿದದ್ದೆಲ್ಲ ಹಾಳಾಗು

ಪ್ರ : ನನ್ನ ದುರಾದೃಷ್ಟ, ನಾನು ಮುಟ್ಟಿದ್ದೆಲ್ಲ ಮಣ್ಣಾಗ್ತದೆ.

೨೫೩೪. ಮುಟ್ಟಿದ್ದೆಲ್ಲ ಚಿನ್ನವಾಗು = ಹಿಡಿದದ್ದೆಲ್ಲ ಊರ್ಜಿತವಾಗು

ಪ್ರ : ಅವನ ಅದೃಷ್ಟ ನೋಡಿ, ಮುಟ್ಟಿದ್ದೆಲ್ಲ ಚಿನ್ನವಾಗ್ತದೆ.

೨೫೩೫. ಮುಡಿಪಿಡು = ದೇವರ ಹೆಸರಲ್ಲಿ ಕಾದಿರಿಸು

(ಮುಡುಪು = ಮೀಸಲು)

ಪ್ರ : ದೇವರಿಗೆ ಮುಡುಪಿಟ್ಟದ್ದನ್ನೆಲ್ಲ, ಆ ದೇವಸ್ಥಾನಕ್ಕೇ ಕೊಡಬೇಕು

೨೫೩೬. ಮುದುರಿಕೊಳ್ಳು= ಸುಮ್ಮನೆ ಮಲಗು, ಹೊಟ್ಟೆಗೆ ಮಂಡಿ ತಾಕುವಂತೆ ಮಡಿಸಿಕೊಂಡು ಮಲಗು

ಪ್ರ : ಗದರಿಸಿದೇಟಿಗೇ ಮಗ ಮುದುರಿಕೊಂಡು ಬಿದ್ಕೊಂಡ

೨೫೩೭. ಮುದ್ರೆ ಒತ್ತು = ಮುತ್ತಿ-ಕ್ಕೂ, ಕೆನ್ನೆ ಕಚ್ಚು

(ಮುದ್ರೆ = ಠಸ್ಸೆ, ಶೀಲು)

ಪ್ರ : ಮುದ್ರೆ ಒತ್ತದಿದ್ರೆ, ನಿನ-ಗೆ ನಿದ್ರೆ ಬರ-ಲ್ವ?

೨೫೩೮. ಮುಪ್ಪುರಿಗೊಳ್ಳು = ಹೆಚ್ಚುಗಟ್ಟಿಯಾಗು

(ಮುಪ್ಪುರಿ < ಮೂರು + ಹುರಿ = ಮೂರು ಹುರಿ ಹೆಣೆದುಕೊಳ್ಳು)

ಪ್ರ : ಆ ಮೂವರ ಪ್ರವೇಶದಿಂದಾಗಿ ಸಮಸ್ಯೆ ಇನ್ನೂ ಮುಪ್ಪುರಿಗೊಂಡಿತು.

೨೫೩೯. ಮುಬ್ಬೈ ಮಾಡು = ಕೈ ಬದಲಾಯಿಸು

(ಮುಬ್ಬೈ < ಮೂಬದಲು = ವಿನಿಮಯ)

ಪ್ರ : ಎತ್ತು ಮತ್ತು ಹಸುವನ್ನು ಪರಸ್ಪರ ಮುಬ್ಬೈ ಮಾಡಿಕೊಂಡರು.

೨೫೪೦. ಮುಯ್ಯಾಳು ಕಳಿಸು = ಆಳಿಗೆ ಪ್ರತಿಯಾಗಿ ಆಳು ಕಳಿಸು

ಪ್ರ : ಬೇಸಾಯದಲ್ಲಿ ಮುಯ್ಯಾಳು ಅನಿವಾರ್ಯ

೨೫೪೧. ಮುಯ್ಯೋದಿಸು = ಉಡುಗೊರೆ ಸಲ್ಲಿಸು

(ಮುಯ್ಯಿ = ಉಡುಗೊರೆ, ಕೊಡುಗೆ ; ಓದಿಸು = ಸಲ್ಲಿಸು, ಅರ್ಪಿಸು)

ಪ್ರ : ಮುಯ್ಯೋದಿಸಿದ್ದು ಮುಗೀತಿದ್ದಂತೆಯೇ ಜನರನ್ನು ಊಟಕ್ಕೆ ಕೂಡಿಸಿ.

೨೫೪೨. ಮುಯ್ಯಿ ತೀರಿಸಿಕೊಳ್ಳು = ಸೇಡು ತೀರಿಸಿಕೊಳ್ಳು

ಪ್ರ : ಮುಯ್ಯಿ ತೀರಿಸಿಕೊಳ್ಳದೇ ಇದ್ರೆ ನಮ್ಮಪ್ಪನಿಗೆ ನಾನು ಹುಟ್ಟಿದೋನೇ ಅಲ್ಲ.

೨೪೪೩. ಮುಯ್ ಮಾಡು = ಕೊಟ್ಟದ್ದನ್ನು ವಾಪಸ್ಸು ಕೊಡುವುದು

ಮದುವೆಗಳಲ್ಲಿ ನೆಂಟರಿಷ್ಟರು ತಮ್ಮ ಹೆಣ್ಣಿಗೋ ಗಂಡಿಗೋ ಏನಾದರೂ ಉಡುಗೊರೆ ಕೊಟ್ಟಿದ್ದರೆ, ಅವರ ಮನೆಯ ಮದುವೆಗೆ ಹೋಗಿ ಏನಾದರೂ ಉಡುಗೊರೆ ಕೊಟ್ಟು ಬರುತ್ತಾರೆ. ಅದಕ್ಕೆ ಮುಯ್ಯಿಕ್ಕುವುದು, ಮುಯ್ ಮಾಡುವುದು ಎನ್ನುತ್ತಾರೆ.

ಪ್ರ : ನಮ್ಮನೆ ಮದುವೇಲಿ ಮುಯ್ಯಿ ಮಾಡಿದ್ದಾರೆ, ಈಗ ಅವರ ಮನೆ ಮದುವೇಲಿ ಮುಯ್ ಮಾಡಬೇಡ್ವ?

೨೫೪೪. ಮುರುಕು ಹಿಟ್ಟು ಗುಕ್ಕು ನೀರು ಕೊಡದಿರು = ಕನಿಷ್ಠ ಸಹಾಯ ಮಾಡದಿರು, ಕ್ರೂರವಾಗಿ ನಡೆದುಕೊಳ್ಳು

(ಮುರುಕು = ಮುರಿದ ಅರ್ಧ; ಗುಕ್ಕು = ಒಂದು ಗುಟುಕು)

ಪ್ರ : ಮುರುಕು ಹಿಟ್ಟು ಗುಕ್ಕು ನೀರು ಕೊಡದೋನಿಗೆ ಮರುಕ ಬೇರೆ ಇದೆಯಾ?

೨೫೪೫. ಮುರು ಹಾಕು = ಕಲಗಚ್ಚನ್ನಿಡು, ಕರೆಯುವ ಹಸುಗಳಿಗೆ, ಗೇಯುವ ಎತ್ತುಗಳಿಗೆ

ಒಲೆಯ ಮೇಲೆ ಬೇಯಿಸಿದ ಆಹಾರ ಕೊಡು. ಇದು ಮಲೆನಾಡಿನಲ್ಲಿ ಚಾಲ್ತಿಯಲ್ಲಿದೆ.

ಪ್ರ : ಮುರುವಿನ ಒಲೆ ಬೂದಿಯಲ್ಲಿ ನಾಯಿಗಳು ಮಗಲಿವೆ, ಹೊಡೆದೋಡಿಸು.

೨೫೪೬. ಮುಲಮುಲಗುಟ್ಟು = ಚಡಪಡಿಸು, ಇದ್ದಕಡೆ ಇರದಿರು

ಪ್ರ : ಹುಳಹುಪ್ಪಟೆ ಮುಲುಮುಲುಗುಟ್ಟಿದಂಗೆ ನೀನೂ ಮುಲುಮುಲುಗುಟ್ತಾ ಇದ್ದೀಯಲ್ಲ.

೨೫೪೭. ಮುಲಾಜು ಇಲ್ಲದಿರು = ದಾಕ್ಷಿಣ್ಯ ಇಲ್ಲದಿರು

ಪ್ರ : ಎಲ್ಲರ ಹತ್ರಾನೂ ಮುಲಾಜಿಲ್ಲದೆ ವಸೂಲ್ ಮಾಡು

೨೫೪೮. ಮುಲಾಮು ಹಚ್ಚು = ಓಲೈಸು

(ಮುಲಾಮು = ಲೇಪನದ ಮದ್ದು)

ಪ್ರ : ಇನ್ನೊಬ್ಬರಿಗೆ ಮುಲಾಮು ಹಚ್ಚೋ ಗುಲಾಮ ಕೆಲಸ ನಿಲ್ಲಿಸು

೨೫೪೯. ಮುಲುಕುತ್ತಿರು = ತಿಣುಕುತ್ತಿರು, ಕೈಲಾಗದೆ ಒದ್ದಾಡುತ್ತಿರು

ಪ್ರ : ಅವನು ಹಾಕಿದ ಮಲುಕಿನಿಂದ ಬಿಡಿಸಿಕೊಳ್ಳೋದಕ್ಕೆ ನಾನೇ ಮುಲುಕ್ತಾ ಇದ್ದೀನಿ, ಹೋಗು.

೨೫೫೦. ಮುಸುಕಿನ ಗುದ್ದು ಕೊಡು = ಗೊತ್ತಾಗದ ಹಾಗೆ ಪೆಟ್ಟೆ ಕೊಡು

ಪ್ರ : ನಸುಗುನ್ನಿಕಾಯಿ ಅಂಥೋನಿಗೆ ನಾನು ಸರಿಯಾಗಿ ಮುಸುಕಿನ ಗುದ್ದು ಕೊಟ್ಟಿದ್ದೀನಿ.

೧೫೫೧. ಮುಸುಕು ಹೊಡೆ = ಪುಷ್ಪವತಿಯಾಗು

(ಮುಸುಕು ಹೊಡೆ = ಬಾಯ್ಬಿಡು, ಅರಳು)

ಪ್ರ : ನೋಡಿದೋರ ಬಾಯಲ್ಲಿ ನೀರೂರುವ ಹಾಗೆ ಹೊಂಬಾಳೆ ಮುಸುಕು ಹೊಡಿದಿದೆ.

೨೫೫೨. ಮುಸುರು = ಮುತ್ತಿಕೊಳ್ಳು, ಲಗ್ಗೆ ಹಾಕು

ಪ್ರ : ಸೊಳ್ಳೆ ಮುಸುರಿದಂಗೆ ಜನ ಮುಸುರಿಕೊಂಡರು

೨೫೫೩. ಮುಸುರೆ ತೆಗಿ – ಎಂಜಲೆತ್ತಿ ಒರಸಿ ಅಚ್ಚುಕಟ್ಟು ಮಾಡು

ಪ್ರ : ದುಸರ ಮಾತಾಡಬೇಡ, ಮೊದಲು ಮುಸುರೆ ತೆಗಿ, ಆಮೇಲೆ ನಿನ್ನ ಮುಸುರೆ ಮಾರೆ ತೊಳಿ.

೨೫೫೪. ಮುಸುಲಿಗೆ ಇಸವು ಹತ್ತು = ರೋಗ ಬರು

(ಮುಸುಲಿ < ಮುಸುಡಿ = ಮುಖ; ಇಸವು < ಇಸಬು = ಚರ್ಮರೋಗ)

ಪ್ರ : ನಮ್ಮನ್ನು ಬೀದಿಪಾಲು ಮಾಡಿದನಲ್ಲೆ, ಇವನ ಮುಸಲಿಗೆ ಇಸವು ಹತ್ತ!

೨೫೫೫. ಮುಸುಮುಸು ಎ‌ನ್ನು = ಮದವೇರು, ಮತ್ತಿನಿಂದ ಮಲೆಯುತ್ತಿರು

ಪ್ರ : ನಸನಸ ಎನ್ನುವ ಕಡಸು, ಮುಸು ಮುಸು ಎನ್ನುವ ಹೋರಿ, ತಡೆಯೋರ್ಯಾರು?

೨೫೫೭. ಮುಳುಗಡ್ಡೀಲಿ ಚುಚ್ಚು = ವೇಗ ಚುರುಕುಗೊಳಿಸು

(ಮುಳುಗಡ್ಡಿ < ಮುಳ್ಳುಗಡ್ಡಿ = ಬಿದಿರ ಕಡ್ಡಿಯ ತುದಿಗೆ ಸೂಜಿ ಹಾಕಿರುವಂಥದು) ಉಳುಮೆ ಮಾಡುವಾಗ ಬಾರುಗೋಲಿನ ಚಾವುಟಿಯಿಂದ ಹೊಡೆದು ಸರಿದಾರಿಗೆ ತರುತ್ತಾರೆ. ಆದರೆ ಹರಗುವಾಗ ಪೈರು ಕುಂಟೆಯ ಚಿಪ್ಪಿಗೆ ಸಿಕ್ತಿ ಕಿತ್ತು ಹೋದಾವೆಂದು ಮೇಣಿಯ ಮೇಲಿನ ಎರಡೂ ಕೈಗಳನ್ನು ತೆಗೆಯದೆ, ಅಲ್ಲಿಂದಲೇ ಕೈಯಲ್ಲಿರುವ ಉದ್ದನೆಯ ಮುಳ್ಳುಗಡ್ಡಿಯಿಂದ ಎತ್ತಿನ ಚೊಪ್ಪೆಗೆ ತಿವಿದು ಸರಿದಾರಿಗೆ ತರುತ್ತಾರೆ. ಬಲಗಡೆಗೆ ತಿರುಗಿಸಿಕೊಳ್ಳಬೇಕಾದರೆ ಎಡಗೋಲಿನ ಎತ್ತಿನ ಚೊಪ್ಪೆಗೆ ಚುಚ್ಚುತ್ತಾರೆ. ಎಡಗಡೆಗೆ ತಿರುಗಿಸಿಕೊಳ್ಳಬೇಕಾದರೆ ಬಲಗೋಲಿ ಎತ್ತಿನ ಚೊಪ್ಪೆಗೆ ಚುಚ್ಚುತ್ತಾರೆ. ಆ ಹಿನ್ನೆಲೆಯ ನುಡಿಗಟ್ಟಿದು. ಆ ಮುಳುಗಡ್ಡಿಯಿಂದಲೇ ಪ್ರಾರಂಭವಾಗುವ ಜನಪದ ಒಗಟೊಂದಿದೆ: “ಮುಳುಗಡ್ಡಿ ಮೇಲೆ ಮುಳುಗಡ್ಡಿ, ಅದರ ಮೇಲೆ ತೊಂಬೈನೂರು ಪೊಟ್ಟಣ ಆ ಊರ ತಳವಾರನ ಹೆಂಡ್ರು ತಳವಿಲ್ಲದ ಹರವಿ ತಕ್ಕೊಂಡು ಜಲವಿಲ್ಲದ ಬಾವಿಗೆ ನೀರಿಗೆ ಹೋದಳು” ಇದಕ್ಕೆ ಉತ್ತರ : ಮುಳುಗಡ್ಡಿ = ಬತ್ತದ ಪೈರು, ಪೊಟ್ಟಣ = ನೆಲ್ಲು ಗೊನೆ, ತಳವಿಲ್ಲದ ಹರವಿ = ಕಡಿವಾಡು, ಕುಂದಲಿಗೆ, ಜಲವಿಲ್ಲದ ಭಾವಿ = ಒರಳುಕಲ್ಲು.

ಪ್ರ : ಗಾದೆ – ಉಳುವಾಗ ಬಾರುಗೋಲು ಸಾಕು

ಹರಗುವಾಗ ಮುಳುಗಡ್ಡಿ ಬೇಕು

೨೫೫೭. ಮುಳ್ಳಿಂದ ಮುಳ್ಳು ತೆಗೆ = ಹಗೆಯನ್ನು ಹಗೆಯಿಂದಲೇ ಹತ ಮಾಡು, ಅವರ ಹತಾರದಿಂದ ಅವರೇ ಹತರಾಗುವಂತೆ ಮಾಡು

(ತೆಗೆ = ಹೊರಕ್ಕೆ ಬರಿಸು, ಮೂಲೋತ್ಪಾಟನ ಮಾಡು) ಮುಳ್ಳನ್ನು ತುಳಿದರೆ ಬಗೆಯಲು ಪಿನ್ನು ಅಥವಾ ಸೂಜಿ ಬೇಕು, ಮುಳ್ಳನ್ನು ಕೀಳಲು ಚಿಮಟ ಬೇಕು. ಆದರೆ ಬಟಾಬಯಲಲ್ಲಿ ಅಂಗಾಲಿಗೆ ಮುಳ್ಳು ಚುಚ್ಚಿ ಮುರಿದುಕೊಂಡರೆ, ಪಿನ್ನು, ಸೂಜಿ, ಚಿಮ್ಮಟಗಳೊಂದೂ ಇಲ್ಲದಿದ್ದಾಗ, ಇನ್ನೊಂದು ಮುಳ್ಳನ್ನೇ ಕಿತ್ತುಕೊಂಡು ಮುರಿದ ಮುಳ್ಳಿನ ಸುತ್ತ ಬಗೆದು, ನಂತರ ಅದನ್ನು ಆ ಕಡೆಯಿಂದ ಈ ಕಡೆಗೆ, ಈ ಕಡೆಯಿಂದ ಆ ಕಡೆಗೆ ಚಿಟುಕುಮುಳ್ಳಾಡಿಸುತ್ತಾ, ಚುಚ್ಚಿಕೊಂಡ ಮುಳ್ಳು ಸಡಿಲಗೊಂಡು ತಾನೇ ಹೊರಕ್ಕೆ ಬರುವಂತೆ ಮಾಡಲಾಗುತ್ತದೆ. ಆ ಹಿನ್ನೆಲೆಯಿಂದ ಬಂದದ್ದು ಈ ನುಡಿಗಟ್ಟು.

ಪ್ರ : ಗಾದೆ – ಮುಳ್ಳಿನಿಂದ ಮುಳ್ಳು ತೆಗೆ

ಹಗೆಯಿಂದ ಹಗೆ ತೆಗೆ

೨೫೫೮. ಮುಳ್ಳು ಮುರಿದಂತಾಗು = ಚುರಕ್ ಎನ್ನು, ನೋವಾಗು

ಪ್ರ : ಕಳ್ಳು ಬಳ್ಳಿ ಅನ್ನೋದೇತಕ್ಕೆ, ಅವನಿಗೆ ಆದ ಅನಾಹುತ ಕೇಳಿ ಕಳ್ಳಿಗೆ ಮುಳ್ಳು ಮುರಿದಂತಾಯ್ತು.

೨೫೫೯. ಮುಳ್ಳಿನ ಮೇಲೆ ತ್ರವಸು ಮಾಡು = ಆತಂಕದಲ್ಲಿ ಕಾಲ ಕಳೆ

(ತ್ರವಸು < ತಪಸ್ಸು = ಧ್ಯಾನ)

ಪ್ರ : ಈ ಸೂರಿನ ನೆಳ್ಳು ಉಳಿಸಿಕೋಬೇಕಾದ್ರೆ, ಮುಳ್ಳಿನ ಮೇಲೆ ತ್ರವಸು ಮಾಡಿದಂಗಾಯ್ತು.

೨೫೬೦. ಮೂಕೆತ್ತು = ಮಲವಿಸರ್ಜನೆ ಮಾಡು

(ಮೂಕೆತ್ತು < ಮೂಕು + ಎತ್ತು; ಮೂಕು = ಗಾಡಿಯ ಕೆಳಗೆ ಹಿಂಭಾಗದಿಂದ ಮುಂಭಾಗದ ನೊಗದವರೆಊ ಇರುವ ಮರದ ತೊಲೆ) ರೈತ ಗಾಡಿಗೆ ಗೊಬ್ಬರ ತುಂಬಿ ತನ್ನ ಹೊಲಕ್ಕೆ ಹೋಗಿ ಗಾಡಿ ನಿಲ್ಲಿಸಿ ಗುದ್ದಲಿಯಿಂದ ಗಾಡಿಯ ಗೊಬ್ಬರವನ್ನು ಕೆಳಕ್ಕೆ ದಬ್ಬುತ್ತಾನೆ ಅಥವಾ ಎತ್ತುಗಳ ಕಣ್ಣಿಅಗಡನ್ನು ಬಿಚ್ಚಿ, ಮೂಕಿನ ಮರವನ್ನು ಮೇಲೆತ್ತಿ, ಗಾಡಿಯಲ್ಲಿರುವ ಗೊಬ್ಬರ ತಾನೇ ಕೆಳಕ್ಕೆ ಸುರಿದುಕೊಳ್ಳುವಂತೆ ಮಾಡುತ್ತಾನೆ. ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಜೀನ, ಮೂಕೆತ್ತೋಕೆ ತನ್ನ ಹೊಲದ ಹತ್ರಕೆ ಓಡ್ತಾನೆ.

೨೫೬೧. ಮೂಗನ ಮುಂದೆ ಮೂಗು ಕೆರೆ = ರೇಗಿಸು, ಇರಸುಮುರುಸು ಮಾಡು

ಮೂಗನ ಮುಂದೆ ಮೂಗು ಕೆರೆದರೆ ಮೂಗ ಎಂದು ಅಣಕಿಸುತ್ತಿದ್ದಾರೆ ಎಂದು ಭಾವಿಸಿದ ಮೂಗ ರೇಗುತ್ತಾನೆ. ಆ ಕೀಟಲೆಯ ಹಿನ್ನೆಲೆಯುಳ್ಳ ನುಡಿಗಟ್ಟಿದು

ಪ್ರ : ಮೂಗೆನ ಮುಂದೆ ಮೂಗು ಕೆರೆಯೋ ಕೆಲಸ ಬಿಟ್ಟು, ಹೊಲ ಕೆರೆಯೋ (ಉಳೋ) ಕೆಲಸ ಮಾಡು.

೨೫೬೨. ಮೂಗಳ ಗೊಣ್ಣೆ ಮೂಗಿನಲ್ಲಿರು = ಕೊಳಕಿನ ಕೊಳವಾಗಿರು

(ಮೂಗಳ > ಮೂಗೊಳಗ < ಮೂರುಕೊಳಗ) ಇಬ್ಬಳ ಹಾಗೂ ಕೊಳಗಗಳನ್ನು ಧಾನ್ಯದ ರಾಶಿಯನ್ನು ಅಳೆಯುವಾಗ ಬಳಸುತ್ತಾರೆ. ಇಬ್ಬಳ< ಇಬ್ಬಳ್ಳ< ಎರಡು < ಬಳ್ಳ; ಬಳ್ಳಕ್ಕೆ ನಾಲ್ಕು ಸೇರು ಇಬ್ಬಳಕ್ಕೆ ಎಂಟು ಸೇರು. ಎರಡು ಇಬ್ಬಳ ಹಾಕಿದರೆ ಒಂದು ಕೊಳಗ. ಅಂದರೆ ಹದಿನಾರು ಸೇರು. ಆದ್ದರಿಂದ ಮೂಗಳ ಎಂದರೆ ನಲವತ್ತೆಂಟು ಸೇರು. ಆದರೆ ಕೆಲವು ಕಡೆ ಕೊಳಗಕ್ಕೆ ಎಂಟು ಸೇರು ಎನ್ನುತ್ತಾರೆ. ಅಂದರೆ ಇಬ್ಬಳ ಹಾಗೂ ಕೊಳಗದ ಅಳತೆ ಆಯಾ ಪ್ರದೇಶದವರು ನಿಗದಿಪಡಿಸಿದಷ್ಟು ಸೇರುಗಳನ್ನು ಒಳಗೊಂಡಿರುತ್ತದೆ. ‘ತಾಯಿ ಮಾಡಿದ ಹೊಟ್ಟೆ, ಊರು ಮಾಡಿದ ಕೊಳಗ’ ಎಂಬ ಜನಪದ ಗಾದೆ ಆ ಸತ್ಯವನ್ನು ಸಾರುತ್ತದೆ.

ಪ್ರ : ಮೂಗಳ ಗೊಣ್ಣೆ ಮೂಗಿನಲ್ಲಿರೋಳ್ನ ಕಂಡೂ ಕಂಡೂ ಹೆಂಗೆ ಒಪ್ಪಿದೆ?

೨೫೬೩. ಮೂಗಿಗೆ ಕವಡೆ ಕಟ್ಕೊಂಡು ದುಡಿ = ಜೀತದಾಳಾಗಿ ದುಡಿ ಪ್ರಾಚೀನ ಸಮಾಜದಲ್ಲಿ ಬಗೆಬಗೆಯ ಜೀತದಾಳುಗಳು ಇದ್ದರು ಎನ್ನುವುದಕ್ಕೆ ಅಟ್ಟುಗೌಡಿ (ಅಡುಗೆಯ ಆಳು) ಮುಟ್ಟುಗೌಡಿ (ಪಾತ್ರೆ ಉಜ್ಜುವ ಆಳು) ಕಸಗೌಡಿ(ಕಸ ಗುಡಿಸಲು ಆಳು) ನೀರುಗೌಡಿ (ನೀರು ತರುವ ಆಳು) ಮೊದಲಾದ ಹೆಸರುಗಳು ಸಾಕ್ಷ್ಯಾಧಾರಗಳಾಗಿ ನಿಂತಿವೆ. ಬೇರೆ ಜೀತದಾಳುಗಳಿಗೆ ಮೂಗಿಗೆ ಕವಡೆ ಕಟ್ಟದಿದ್ದರೂ, ನೀರು ಹೊತ್ತು ತರುವ ಆಳುಗಳಿಗೆ ಮೂಗಿಗೆ ಕವಡೆ ಕಟ್ಟುವ ಪದ್ಧತಿ ಇತ್ತು ಎಂಬುದಕ್ಕೆ ಹದಿನಾರನೆಯ ಶತಮಾನದ ಕನಕದಾಸರ ಮೋಹನ ತರಂಗಿಣಿಯಲ್ಲಿ ನಮಗೆ ಆಧಾರ ದೊರಕುತ್ತದೆ – ‘ವೀರರ ಮೂಗಿಗೆ ಕವಡೆಯಕ್ಟಿ ನೀರ್ತರಿಸಿ’ ಎಂಬ ವರ್ಣನೆ ಪದ್ಯವೊಂದರಲ್ಲಿ ದೊರಕುತ್ತದೆ.

ಪ್ರ : ಮೂಗಿಗೆ ಕವಡೆ ಕಟ್ಕೊಂಡು ದುಡಿದು ಮಕ್ಕಳು ಮರಿ ಸಾಕಿದೆ.

೨೫೬೪. ಮೂಗಿನಲ್ಲಿ ತೊಟ್ಟಿಕ್ಕು = ನೆಗಡಿಯಾಗು

(ತೊಟ್ಟಿಕ್ಕು = ಸೋರು, ಸುರಿ)

ಪ್ರ : ಮೂಗಿನಲ್ಲಿ ತೊಟ್ಟಿಕ್ತಾ ಸೊರ್ರ‍ಬುಸ್ಸ ಅನ್ನುವಾಗ, ನಾನೆಲ್ಲಿ ಇವರಿಗೆ ಅಟ್ಟಿಕ್ಕಲಿ?

೨೫೬೫. ಮೂಗಿಗೆ ತುಪ್ಪ ಹಚ್ಚು = ನಯವಂಚನೆ ಮಾಡು, ಕೊಟ್ಟಂತೆ ತೋರಿಸಿದ ಸಿಕ್ಕದಂತೆ ಮಾಡು

ಪ್ರ : ಮೂಗಿಗೆ ತುಪ್ಪ ಹಚ್ಚೋ ಮೇಲ್ವರ್ಗದ ಜನರಿಂದ ಕೆಳವರ್ಗದ ಜನ ಕೊಳೀತಾ ಬಂದ್ರು.

೨೫೬೬. ಮೂಗಿನ ನೇರಕ್ಕೆ ಯೋಚಿಸು = ಬೇರೆ ಮಗ್ಗುಲನ್ನು ತೂಗಿ ನೋಡದಿರು

ಪ್ರ : ತನ್ನ ಮೂಗಿನ ನೇರಕ್ಕೆ ಯೋಚಿಸ್ತಾನೆಯೇ ಹೊರತು, ಬೇರೆ ದಿಕ್ಕಿನಿಂದ ಯೋಚಿಸಲ್ಲ.

೨೫೬೭. ಮೂಗಿನಲ್ಲಿ ಮಾತಾಡು = ಗೊಣಗು, ಗುಯ್ಗುಟ್ಟು

ಪ್ರ : ನೀನು ಮೂಗಿನಲ್ಲಿ ಮಾತಾಡಿದರೆ ಯಾರಿಗೆ ಅರ್ಥವಾಗ್ತದೆ?

೨೫೬೮. ಮೂಗಿನ ಮೇಲೆ ಸುಣ್ಣ ಹಚ್ಚು = ಅವಮಾನಗೊಳಿಸು

ಪ್ರಾಚೀನ ಸಮಾಜದಲ್ಲಿ ಅವಮಾನಗೊಳಿಸಲು ಮೂಗಿನ ಮೇಲೆ ಸುಣ್ಣದ ಪಟ್ಟೆಯನ್ನು ಎಳೆಯುವ ಪದ್ಧತಿ ಜಾರಿಯಲ್ಲಿತ್ತು. ದಕ್ಷ ಬುಕ್ಕರಾಯನನ್ನು ತನ್ನ ಅಧೀನ ರಾಜ ಎಂಬುದನ್ನು ಪರೋಕ್ಷವಾಗಿ ಸಾಬೀತು ಮಾಡಲು ಬಹಮನಿ ಸುಲ್ತಾನ ತನ್ನ ಆ ಸ್ಥಾನದಲ್ಲಿ ಸಂಗೀತವನ್ನು ಹಾಡಿದ ಸಂಗೀತಗಾರನಿಗೆ ಗೌರವಧನವನ್ನು ಕೊಡದೆ, ಒಂದು ಪತ್ರವನ್ನು ಬರೆದು ಕೊಟ್ಟು, ಇದನ್ನು ಬುಕ್ಕರಾಯನಿಗೆ ತೋರಿಸು, ನಿನಗೆ ಗೌರವಧನ ಕೊಡುತ್ತಾನೆ ಎಂದು ಹೇಳಿ ಕಳಿಸುತ್ತಾನೆ. ಆತ ಪತ್ರ ತಂದು ಬುಕ್ಕರಾಯನಿಗೆ ತೋರಿಸಿದಾಗ, ಸುಲ್ತಾನನ ಹಿಕ್‌ಮತ್ತನ್ನು ಸುಲಭವಾಗಿ ಗ್ರಹಿಸಿದ ಬುಕ್ಕರಾಯ ಆ ಸಂಗೀತಗಾರನ ಮೂಗಿನ ಮೇಲೆ ಸುಣ್ಣದ ಪಟ್ಟೆ ಎಳೆದು ಸುಲ್ತಾನನ ಬಳಿಗೆ ಕಳಿಸಿದ ಘಟನೆಗೆ ಇತಿಹಾಸದ ಆಧಾರವಿದೆ. ಇದೇ ಘಟನೆಯನ್ನು ಜನಪದ ಮನಸ್ಸು ಬೇರೊಂದು ರೀತಿಯಲ್ಲಿ ಅಭಿವ್ಯಕ್ತಿಸಿದೆ – ‘ಬುಕ್ಕರಾಯ ಮೆಚ್ಚು ಬೆಕ್ಕಿನ ಮರಿ ಕೊಟ್ಟ’ ಎಂಬ ಗಾದೆಯ ಮೂಲಕ. ಕನಕದಾಸರ ಮೋಹನ ತರಂಗಿಣಿಯಲ್ಲಿಯೂ ರತಿ ಪ್ರದ್ಯುಮ್ನನಿಗೆ ತಾಂಬೂಲ ಸೇವನೆ ಮಾಡಿಸಲೋಸುಗ ಎಲೆಗೆ ಸುಣ್ಣ ಹಚ್ಚುವುದನ್ನು ಹೀಗೆ ವರ್ಣಿಸಲಾಗಿದೆ – “ತನ್ನ ಕಣ್ಣಾರೆ ಕಂಡು ಮಚ್ಚರಿಪ ಹೆಣ್ಣಾವಳವನ ಮೂಗಿನ ಮೇಲೆ ಬರೆವಂತೆ” ಆದ್ದರಿಂದ ಮೂಗಿನ ಮೇಲೆ ಸುಣ್ಣದ ಪಟ್ಟೆ ಎಳೆಯುವುದು ಅವಮಾನದ ಪ್ರತೀಕ ಎಂಬ ಭಾವನೆ ಬಲವಾಗಿತ್ತು. ಅದರ ಪಳೆಯುಳಿಕೆ ಈ ನುಡಿಗಟ್ಟು

ಪ್ರ : ಅವರು ಮೂಗಿನ ಮೇಲೆ ಸುಣ್ಣ ಹಚ್ಚಿ ಕಳಿಸಿದರೆ, ನಾವು ಮೂಗು ಕೆತ್ತಿ ಕಳಿಸಿದರೆ ಆಯ್ತಲ್ಲ.

೨೫೬೯. ಮೂಗು ಕತ್ತರಿಸು = ಮುಖಭಂಗ ಮಾಡು

ವನವಾಸದಲ್ಲಿದ್ದಾಗ ರಾಮನನ್ನು ಮೋಹಿಸಿ ಬಂದ ಶೂರ್ಪನಖಿಯ ಮೂಗನ್ನು ಲಕ್ಷ್ಮಣ ಕತ್ತರಿಸುವ ಪೌರಾಣಿಕ ಹಿನ್ನೆಲೆ ಈ ನುಡಿಗಟ್ಟಿನ ಬೆನ್ನಿಗಿದೆ.

ಪ್ರ : ಪಕ್ಕದ ಮನೆಗೆ ಹೋಗಿ ಮಜ್ಜಿಗೆ ಕೇಳಿದರೆ, ಅವರು ನಿನ್ನ ಮೂಗು ಕತ್ತರಿಸಿಬಿಡ್ತಾರ?

೨೫೭೦. ಮೂಗು ತೂರಿಸು = ಇನ್ನೊಬ್ಬರ ವಿಷಯದಲ್ಲಿ ಬಾಯಿ ಹಾಕು

ಪ್ರ : ನಮ್ಮನೆ ವಿಷಯದಲ್ಲಿ ಮೂಗು ತೂರಿಸೋಕೆ ಅವನ್ಯಾರು?

೨೫೭೧. ಮೂಗುದಾರ ಹಾಕು = ನಿಯಂತ್ರಿಸು, ತಹಬಂದಿಗೆ ತರು

ಎತ್ತು ದನಗಳಿಗೆ ಮೂಗು ಚುಚ್ಚಿ, ಮೂಗುದಾರ ಹಾಕಿ, ಅದನ್ನು ಕೊಂಬಿನ ಹಿಂಭಾಗಕ್ಕೆ ಗಂಟು ಹಾಕಿ, ಆ ಮೂಗುದಾರಕ್ಕೆ ಹಗ್ಗ ಹಾಕಿ ಗೊಂತಿಗೆ ಕಟ್ಟುತ್ತಾರೆ. ಮೂಗಿಗೆ ನೋವಾಗುವುದರಿಂದ ಅದು ಹೆಚ್ಚು ಜಗ್ಗುವುದಿಲ್ಲ, ಗುಂಜುವುದಿಲ್ಲ. ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಇಷ್ಟ್ರಲ್ಲೇ ಅವನಿಗೆ ಮೂಗುದಾರ ಹಾಕ್ತೀನಿ, ನೀನು ಸುಮ್ಮನಿರು.

೨೫೭೨. ಮೂಗು ಬೆದರು = ಮೂಗಿನಿಂದ ರಕ್ತಸ್ರವಿಸು

(ಬೆದ-ರು < ಬಿದು-ರು = ಕೊಡ-ಹು, ಝಲ್ ಎಂದು ಅದು-ರು)

ಪ್ರ : ಮೂಗಿಗೆ ಯಾರೂ ಗುದ್ದಿಲ್ಲ, ಮೂಗು ಬೆದರಿ ಹಿಂಗಾಗಿದೆ.

೨೫೭೩. ಮೂಗು ಮುರಿ = ಹಿಯ್ಯಾಳಿಸು, ಅವಮಾನಿಸು

ಪ್ರ : ಮೊನ್ನೆ ಸಿಕ್ಕಿದ್ದ, ಚೆನ್ನಾಗಿ ಮೂಗು ಮುರಿದು ಕಳಿಸಿದ್ದೀನಿ.

೨೫೭೪. ಮೂಗು ಮೂರು ತುಂಡಿಗೆ ಕುಯ್ಸಿಕೊಳ್ಳು = ಶಿಕ್ಷೆ ಅನುಭವಿಸು

ಪ್ರ : ಅವನು ಒಂದೇ ಸಾರಿಗೆ ಪಾಸು ಮಾಡಿದರೆ, ನನ್ನ ಮೂಗು ಮೂರು ತುಂಡಿಗೆ ಕುಯ್ಸಿಕೊಳ್ತೀನಿ.

೨೫೭೫. ಮೂಗುವಳಿ ಕೊಡು = ಸಂಚಕಾರ ಕೊಡು

ಪ್ರ : ಇನ್ನು ಎಂಟು ದಿನಕ್ಕೆ ಬಾಕಿ ಹಣ ಕೊಟ್ಟು ಎತ್ತುಗಳನ್ನು ಹೊಡ್ಕೊಂಡು ಹೋಗ್ತೇನೆ ಅಂತ ಸಾವಿರ ರೂಪಾಯಿ ಮೂಗುವಳಿ ಕೊಟ್ಟು ಬಂದಿದ್ದೀನಿ.

೨೫೭೬. ಮೂಗೆತ್ತಿನಂತಿರು = ಮಾತುಕತೆಯಾಡದಿರು

(ಮೂಗೆತ್ತು < ಮೂಕ + ಎತ್ತು = ಮೂಕಜಂತು)

ಪ್ರ : ಹಿಂಗೆ ಮೂಗೆತ್ತಿನಂತೆ ಇದ್ರೆ, ಸಂಸಾರ ಸಾಗಿಸೋದು ಹೆಂಗೆ?

೨೫೭೭. ಮೂಗು ಹಿಡಿ = ಬಾಯಿ ತೆರೆಯುವಂತೆ ಮಾಡು, ಆಯಕಟ್ಟಿನ ಜಾಗ ಹಿಡಿದು ಮಾತು ಕೇಳುವಂತೆ ಮಾಡು

ಚೊಚ್ಚಿಲು ಬಾಣಂತಿಗೆ ಎದೆ ಹಾಲು ಬತ್ತಿದರೆ, ಮಗುವನ್ನು ನೀಡಿಸಿದ ಕಾಲ ಮೇಲೆ ಮಲಗಿಸಿಕೊಂಡು, ಹಸುವಿನ ಹಾಲನ್ನು ಒಳಲೆಗೆ ಬಿಟ್ಟುಕೊಂಡು, ಒಳಲೆಯ ಬಾಯನ್ನು ಮಗುವಿನ ಬಾಯಿಗಿಟ್ಟು ಕೊಂಚಕೊಂಚ ಹಾಲನ್ನು ಬಗ್ಗಿಸುತ್ತಾ ಕುಡಿಸತೊಡಗುತ್ತಾರೆ. ಮಗು ಏನಾದರೂ ಬಾಯಿ ಮುಚ್ಚಿಕೊಂಡು, ಅಥವಾ ಹಲ್ಲು ಬಂದಿದ್ದರೆ ಹಲ್ಲು ಗಿಟಕಾಯಿಸಿಕೊಂಡು ಹಾಲನ್ನು ಕಟಬಾಯಿಂದ ಹೊರಹೋಗುವಂತೆ ಮಾಡಿದರೆ ಅದನ್ನು ನೋಡುತ್ತಿದ್ದ ಮನೆಯ ಮುದುಕಿ ಕೂಡಲೇ ಹೇಳುತ್ತಾಳೆ – “ಮೂಗು ಹಿಡಿಯೇ, ಮೂಗು ಹಿಡಿದರೆ ಬಾಯಿಬಿಡ್ತದೆ ಹಾಲು ಒಳ ಹೋಗ್ತದೆ” ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಮೂಗು ಹಿಡಿದರೆ ಅವನೇ ಬಾಯಿಬಿಡ್ತಾನೆ, ಸುಮ್ನಿರು.

೨೫೭೮. ಮೂಗೇಟಾಗು = ರಕ್ತ ಬರದಿದ್ದರೂ ಒಳಗೊಳಗೇ ನೋವಾಗುವ ಏಟು ಬೀಳು

ಪ್ರ : ರಕ್ತ ಏನೂ ಬರಲಿಲ್ಲ, ಬರೀ ಮೂಗೇಟಾಯ್ತು ಅಷ್ಟೆ.

೨೫೭೯. ಮೂಡುಮುಂತಾಗಿ ಕೂಡಿಸು = ಪೂರ್ವ ದಿಕ್ಕಿಗೆ ಮಾಡಿ ಕೂಡಿಸು

ಪ್ರ : ಮೂಡು ಮುಂತಾಗಿ ಕೂಡಿಸಿ, ಶಾಸ್ತ್ರ ಮಾಡಿಸಿ ಎಂದರು ಯಜಮಾನರು.

೨೫೮೦. ಮೂಡೆ ಗಟ್ಟಿಸಿದಂತೆ ಗಟ್ಟಿಸು = ದೊಣ್ಣೆಯಿಂದ ಚೆನ್ನಾಗಿ ಚಚ್ಚು

(ಗಟ್ಟಿಸು < ಘಟ್ಟಿಸು = ಹೊಡಿ)

ಪ್ರ : ಮೂಡೆ ಗಟ್ಟಿಸಿದಂತೆ ಗಟ್ಟಿಸಿ ಮೂಲೇಲಿ ಕೂಡಿಸಿದೆ.

೨೫೮೧. ಮೂಡೆ ಗಾತ್ರ ಮುಖ ಮಾಡು = ಮುನಿಸಿಕೊಳ್ಳು, ಊದಿಕೊಳ್ಳು

ಪ್ರ : ಗೌರಿ ಹಬ್ಬಕ್ಕೆ ಸ್ಯಾಲೆ ತರಲಿಲ್ಲ ಅಂತ ವಾಡೆಗಾತ್ರದ ನಿನ್ನ ಹೆಂಡ್ರು ಮೂಡೆಗಾತ್ರ ಮುಖ ಮಾಡ್ಕೊಂಡು ಕುಂತವಳೆ.

೨೫೮೨. ಮೂತಿಗೆಟ್ಟು = ಮುಸು-ಡಿ-ಗೆ ತಿವಿ

(ಮೂತಿ = ಮುಸುಡಿ, ಮುಖ)

ಪ್ರ : ಗಾದೆ – ಕೋತಿಯಂಥೋನು ಕೆಣಕಿದ

ಮೂತಿಗೆಟ್ಟಿಸಿಕೊಂಡು ತಿಣಕಿದ

೨೫೮೩. ಮೂತಿ ತಿರುವಿಕೊಂಡು ಹೋಗು = ಅಲಕ್ಷಿಸಿ ಹೋಗು, ಅಣಕಿಸುತ್ತಾ ಹೋಗು

ಪ್ರ : ನನ್ನ ಕಂಡು ಮೂತಿ ತಿರುವಿಕೊಂಡು ಹೋದೋಳ ಮನೆಗೆ ನಾನ್ಯಾಕೆ ಹೋಗಲಿ?

೨೫೮೪. ಮೂಬದಲು ಮಾಡು = ಕೈ ಬದಲು ಮಾಡು, ವಿನಿಮಯ ಮಾಡಿಕೊಳ್ಳು

(ಮೂಬದಲು < ಮೋಬದಲಾ(ಹಿಂ) = ವಿನಿಮಯ)

ಪ್ರ : ಮೂಬದಲು ಮಾಡ್ಕೊಂಡು ಈ ಎತ್ತುಗಳನ್ನು ತಂದೆ.

೨೫೮೫. ಮೂರ್ತ ಆಗು = ಧಾರೆಯಾಗು

(ಮೂರ್ತ < ಮುಹೂರ್ತ = ಮದುವೆಯಲ್ಲಿ ಹೆಣ್ಣುಗಂಡುಗಳ ಕೈ ಮೇಲೆ ಹಾಲೆರೆಯುವ ಶುಭಗಳಿಗೆ)

ಪ್ರ : ಮೂರ್ತ ಆದ ಮೇಲೆ ಒಂದು ಸಣ್ಣ ವಿಷಯಕ್ಕೆ ದೊಡ್ಡ ವಾರ್ತೆ ಹತ್ತಿ ಬಿಟ್ಟರು.

೨೫೮೬. ಮೂರಾಬಟ್ಟೆಯಾಗು = ಹಾಳಾಗು, ದಿಕ್ಕಾಪಾಲಾಗು

(ಮುರಾ ಬಟ್ಟೆ = ಮೂರು ದಾರಿಗಳು ಕೂಡುವ ಸ್ಥಳ. ಮಂತ್ರಿಸಿದ ವಸ್ತುವನ್ನು ಮೂರುದಾರಿ ಕೂಡುವ ಸ್ಥಳದಲ್ಲಿ ಚೆಲ್ಲುವ ರೂಢಿ ಇದೆ)

ಪ್ರ : ಇಡೀ ಆ ಮನೆತನ ಮೂರಾಬಟ್ಟೆಯಾಗಿ ಹೋಯ್ತು.

೨೫೮೭. ಮೂರು ನಾಮಹಾಕು = ಮೋಸ ಮಾಡು

ಪ್ರ : ತಿರುಪತಿ ಕಾಣಿಕೇನ ತಲುಪಿಸ್ತೀನಿ ಅಂತ ಹೇಳಿದ ದಾಸಯ್ಯ ನನಗೆ ಮೂರು ನಾಮ ಹಾಕಿಬಿಟ್ಟ.

೨೫೮೮. ಮೂರು ಹೊತ್ತೂ ತುಳಿ = ಸದಾ ಪೀಡಿಸು

(ಮೂರು ಹೊತ್ತು = ಪೂರ್ವಾಹ್ನ, ಮಧ್ಯಾಹ್ನ, ಅಪರಾಹ್ನ)

ಪ್ರ : ಸಾಲಗಾರರು ಮೂರು ಹೊತ್ತೂ ತುಳಿತಾರೆ, ತಲೆ ಮೇಲೆ ಬಟ್ಟೆ ಹಾಕ್ಕೊಂಡು ಎಲ್ಲಾದರು ಹೊರಟು ಹೋಗೋಣ ಅನ್ನಿಸ್ತದೆ.

೨೫೮೯. ಮೂರೂ ಬಿಡು = ಘನತೆ ಗಾಂಭಿರ್ಯ ಮಾನ ಮರ್ಯಾದೆ ಎಲ್ಲ ಬಿಡು

ಪ್ರ : ಗಾದೆ – ಮೂರೂ ಬಿಟ್ಟೋಳು ಊರಿಗೆ ದೊಡ್ಡೋಳು.

೨೫೯೦. ಮೂಲೆ ಮುಡುಕೆಲ್ಲ ಹುಡುಕು = ಸಂದಿಗೊಂದಿಯೆಲ್ಲ ಸಿದುಗು

ಪ್ರ : ಮೂಲೆ ಮುಡುಕೆಲ್ಲ ಹುಡುಕಿದರೂ ಕಳೆದು ಹೋದ ವಸ್ತು ಸಿಗಲಿಲ್ಲ.

೨೫೯೧. ಮೂಲೆ ಹಿಡಿ = ಮುಪ್ಪಾಗು, ಮೆತ್ತಗಾಗು

ಪ್ರ : ಒಳ್ಳೆ ಕಟ್ಗಲ್ಲು ಇದ್ದಂಗೆ ಇದ್ದೋನು ಇವತ್ತು ತಟ್ಟಾಡೋನಂಗಾಗಿ ಮೂಲೆ ಹಿಡಿದು ಕುಂತವನೆ.

೨೫೯೨. ಮೂಸದಿರು = ಯಾರೂ ಹತ್ತಿರ ಸುಳಿಯದಿರು.

ಗಂಡುನಾಯಿಗಳು ಹೆಣ್ಣುನಾಯಿಗಳ ಹಿಂಭಾಗವನ್ನು ಮೂಸುತ್ತಾ ಬೆನ್ನು ಬೀಳುತ್ತವೆ. ಹಾಗೆಯೇ ಹೆಣ್ಣಿಗೆ ಪ್ರಾಯವಿದ್ದಾಗ ಗಂಡುಗಳು ಮುಗಿಬೀಳುತ್ತಾರೆ. ಪ್ರಾಯ ಕಳೆದ ಮೇಲೆ ಯಾರೂ ಹತ್ತಿರ ಸುಳಿಯುವುದಿಲ್ಲ. ನಾಯಿಗಳ ವರ್ತನೆಯಿಂದ ಈ ನುಡಿಗಟ್ಟು ಮೂಡಿದೆ.

ಪ್ರ : ಯಾರೂ ಮೂಸೋಕೆ ಬರದೆ ಇರೋದರಿಂದ ಮುಪ್ಪಿನಲ್ಲಿ ಹಾದರಗಿತ್ತಿ ಪತಿವ್ರತೆಯಾಗಿಬಿಡ್ತಾಳೆ.

೨೫೯೩. ಮೂಳೆ ಚಕ್ಕಳವಾಗು = ಬಡವಾಗು, ಅಸ್ಥಿಪಂಜರವಾಗು

(ಚಕ್ಕಳ = ಚರ್ಮ)

ಪ್ರ : ಹಕ್ಕಿ ಅಳಕನಂತೆ ಮೂಳೆ ಚಕ್ಕಳವಾಗಿ ಕುಂತವನೆ

೨೫೯೪. ಮೂಳೆ ಮುರಿದು ಮೂಟೆ ಕಟ್ಟು = ತದುಕು

ಪ್ರ : ನಾಲಗೆ ಬಿಗಿ ಹಿಡಿದು ಮಾತಾಡು, ಮೂಳೆ ಮುರಿದು ಮೂಟೆ ಕಟ್ಟಿಬಿಟ್ಟೇನು.

೨೫೯೫. ಮೆಕ್ಕನಂತಿರು = ಮಳ್ಳಿಯಂತಿರು

ಪ್ರ : ಮೆಕ್ಕನಂಗಿದ್ದೋನು ಎಕ್ಕನಾತಿ ಕೆಲಸ ಮಾಡಿಬಿಟ್ಟ.

೨೫೯೬. ಮೆಟ್ಟಲು ಅಟ್ಟಾಡಿಸು = ಸಂಭೋಗಿಸಲು ಓಡಾಡಿಸು

(ಮೆಟ್ಟು = ಸಂಭೋಗಿಸು) ಹುಂಜ ಹ್ಯಾಟೆಯನ್ನು ಮೆಟ್ಟಿತು ಎಂದರೆ ಸಂಭೋಗಿಸಿತು ಎಂದರ್ಥ. ಮೆಟ್ಟು ಎಂದರೆ ತುಳಿ ಎಂಬ ಅರ್ಥವಿದ್ದರೂ ಹುಂಜ ಮೆಟ್ಟಿತು ಎಂದರೆ ಸಂಭೋಗಿಸಿತು ಎಂದೇ ಅರ್ಥ.

ಪ್ರ : ಹ್ಯಾಟೆ ಕೊಕ್ಕೊಕ್ಕೊ ಎಂದು ಓಡಾಡುತ್ತಿರುವುದು ಏಕೆಂದರೆ ಹುಂಜ ಅದನ್ನು ಮೆಟ್ಟಲು ಅಟ್ಟಾಡಿಸುತ್ತಿದೆ.

೨೫೯೭. ಮೆಟ್ಟಲ್ಲಿ ಹೊಡಿ = ಅವಮಾನ ಮಾಡು

(ಮೆಟ್ಟು = ಪಾದರಕ್ಷೆ)

ಪ್ರ : ಅವನಿಗೆ ಬುದ್ದಿ ಬರೋದು ಮೆಟ್ಟಲ್ಲಿ ಹೊಡೆದಾಗಲೇ

೨೫೯೮. ಮೆಟ್ಟಲು ಕೊಡು = ಸಹಾಯ ಮಾಡು

ಸಾಮಾನ್ಯವಾಗಿ ಮರ ಹತ್ತುವವರಿಗೆ ಅವರ ಕಾಲು ಜಾರದಂತೆ ಬೇರೊಬ್ಬರು ತಮ್ಮ ಕೈಗಳ ಒತ್ತು ಕೊಡುತ್ತಾರೆ. ಅದಕ್ಕೆ ಮೆಟ್ಟಲು ಕೊಡುವುದು ಎಂದು ಕರೆಯುತ್ತಾರೆ.

ಪ್ರ : ಮೆಟ್ಟಲು ಕೊಡದಿದ್ರೂ ಚಿಂತೆ ಇಲ್ಲ, ಕಾಲು ಹಿಡಿದು ಕೆಳಕ್ಕೆ ಎಳೀದಿದ್ರೆ ಸಾಕು.

೨೫೯೯. ಮೆಟ್ಟಿ ಬೀಳು = ಬೆಚ್ಚಿ ಬೀಳು

ಪ್ರ : ನನಗೆ ಗೊತ್ತಾಗದ ಹಾಗೆ ಮೆಟ್ಟುಗಾಲಲ್ಲಿ ಬಂದು ಬೆನ್ನಿಗೆ ಹೊಡೆದಾಗ ಮೆಟ್ಟಿಬಿದ್ದೆ.

೨೬೦೦. ಮೆಟ್ಟುಗಾಲೋರು ಮುಳುವಾಗು = ಅಪಾಯಕಾರಿಗಳಾಗು

(ಮುಳು < ಮುಳ್ಳು = ಕಂಟಕ) ಮೆಟ್ಟುಗಾಲೋರು ಎಂದರೆ ಪಾದವನ್ನು ಅನಾಮತ್ತು ಊರಿ ನಡೆಯದೆ ತುದಿಬೆರಳ ಮೇಲೆ ಸದ್ದು ಮಾಡದಂತೆ ಬೆಕ್ಕಿನ ಹೆಜ್ಜೆಯಲ್ಲಿ ತಿರುಗಾಡುವವರು ಎಂದರ್ಥ. ಅಂಥ ಸೊಸೆಯರಿಂದ ಮನೆಗೆ ಅಪಾಯ. ಏಕೆಂದರೆ ಕೌಟುಂಬಿಕ ವಿಷಯಗಳ ಬಗ್ಗೆ ಹಿರಿಯರು ಮಾತಾಡಿಕೊಳ್ಳುವ ಮಾತುಗಳನ್ನು ಗುಟ್ಟಾಗಿ ಕೇಳಿ, ಉಳಿದವರ ಕಿವಿಯಲ್ಲಿ ಊದಿ ಮನೆಯ ಒಡಕಿಗೆ ಕಾರಣವಾಗಬಹುದು. ಆ ಹಿನ್ನೆಲೆಯಲ್ಲಿ ಮೂಡಿದ್ದು ಈ ನುಡಿಗಟ್ಟು ಮೆಟ್ಟುಗಾಲಿನವರು ಇದ್ದಂತೆ ಸೀಟುಗಾಲಿನವರು ಇರುತ್ತಾರೆ. ಅವರು ಹೆಜ್ಜೆಯನ್ನು ಎತ್ತಿ ಇಡುವುದಿಲ್ಲ, ಬದಲಾಗಿ ನೆಲವನ್ನು ಸವರುವಂತೆ ಹೆಜ್ಜೆಯನ್ನು ಉಜ್ಜಿಕೊಂಡು ನಡೆಯುತ್ತಾರೆ. ಆ ರೀತಿ ನೆಲವನ್ನು ಸೀಟುತ್ತಾ ನಡೆದರೆ ಮನೆಗೆ ದರಿದ್ರ ಬರುತ್ತದೆ ಎಂಬ ನಂಬಿಕೆ ಉಂಟು.

ಪ್ರ : ಗಾದೆ – ಮೆಟ್ಟುಗಾಲೋರಿಂದ ಮನೆಗೆ ಅಭದ್ರ

ಸೀಟುಗಾಲೋರಿಂದ ಮನೆಗೆ ದರಿದ್ರ

೨೬೦೧. ಮೆಟ್ಟರೆ ಹಿಸುಕು = ಗಂಟಲು ಹಿಸು-ಕು

(ಮೆಟ್ಟರೆ < ಮಿಡರು (ತ) ಮೆಡೆ (ತೆ) = ಗಂಟಲು)

ಪ್ರ : ಅವನೇನಾದರೂ ಗರ್‌ಮಿರ್ ಅಂದ್ರೆ ಅಲ್ಲೆ ಮೆಟ್ರೆ ಹಿಸುಕಿಬಿಡ್ತೀನಿ.

೨೬೦೨. ಮೆತ್ತು ಹಾಕು = ಹಣ್ಣು ಮಾಡುಲು ಒತ್ತೆ ಹಾಕು

ಮಣ್ಣಿನ ವಾಡೆ ಗುಡಾಣಗಳಲ್ಲಿ ಬಾಳೇಕಾಯಿ ಮಾವಿನಕಾಯಿ ತುಂಬಿ ಮುಚ್ಚಳದಿಂದ ಬಾಯಿ ಮುಚ್ಚಿ ಮಣ್ಣಿನಿಂದಲೋ ಸಗಣಯಿಂದಲೋ ಒರೆಯುವುದಕ್ಕೆ ಮೆತ್ತು ಹಾಕುವುದು ಎನ್ನುತ್ತಾರೆ. ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಗುಡಾಣದಲ್ಲಿಕ್ಕಿ ಮೆತ್ತು ಹಾಕಿದ್ದೀನಿ, ಹಣ್ಣಾದ ಮೇಲೆ ಕೊಡ್ತೀನಿ.

೨೬೦೩. ಮೆತ್ತಿ ಕಳಿಸು = ಹೊಡೆದು ಕಳಿಸು

(ಮೆತ್ತು < ಮೆಟ್ಟು < ಮೊಟ್ಟು = ತಲೆಯ ಮೇಲೆ ಕುಕ್ಕು)

ಪ್ರ : ಮತ್ತೆ ಇತ್ತ ತಲೆ ಇಕ್ಕಬಾರ್ದು, ಹಂಗೆ ಮೆತ್ತಿ ಕಳಿಸಿದ್ದೀನಿ.

೨೬೦೪. ಮೆರೆಗೋಲಾಡಿಸು = ತಿರುವಿ ಹಾಕು, ಗುಡ್ಡೆ ಮಾಡು

(ಮೆರೆಗೋಲು = ಉದ್ದನೆಯ ಬಿದಿರ ಗಳುವಿನ ತುದಿಯಲ್ಲಿ ಬಾಗಿದ ಕೊಕ್ಕೆ ಇರುವಂಥದು) ಮೆರೆಗೋಲನ್ನು ಹಿಡಿದು ತುದಿಯ ಕೊಕ್ಕೆಯಿಂದ ಧಾನ್ಯ ಒಕ್ಕಿದ ಕಣದಲ್ಲಿರುವ ಹುಲ್ಲನ್ನು ಒಂದು ಕಡೆಗೆ ಎಳೆಯುವುದಕ್ಕೆ ಮೆರೆಗೋಲಾಡಿಸುವುದು ಎನ್ನಲಾಗುತ್ತದೆ.

ಪ್ರ : ಹರಿಗೋಲು ಜನರನ್ನು ನದಿಯ ದಡಕ್ಕೆ ಕೊಂಡೊಯ್ದರೆ, ಮೆರೆಗೋಲು ಹುಲ್ಲನ್ನು ಕಣದ ಅಂಚಿಗೆ ಕೊಂಡೊಯ್ಯುತ್ತದೆ.

೨೬೦೫. ಮೆರೆದು ಮೆಕ್ಕೆಕಾಯಿ ತಿನ್ನು = ಅಹಂಕಾರದಿಂದ ಬೀಗು, ಸ್ವೇಚ್ಛೆಯಾಗಿ ಮೆರೆದಾಡು

ಪ್ರ : ಕಂಡೋರ ಗಂಟು ತಿಂದು ನನ್ನ ಸಮ ಯಾರೂ ಇಲ್ಲ ಅಂತ ಮೆರೆದು ಮೆಕ್ಕೆಕಾಯಿ ತಿಂತಾನೆ.

೨೬೦೬. ಮೆಲುಕು ಹಾಕು = ಮನನ ಮಾಡು.

ದನಗಳು ತಾವು ತಿಂದ ಆಹಾರವನ್ನು ಮತ್ತೆ ಬಾಯಿಗೆ ತಂದುಕೊಂಡು ಮೆಲುಕು ಆಡಿಸುತ್ತಾ ನುಣ್ಣಗೆ ಅಗಿಯುತ್ತವೆ. ಆಗ ಆ ಮೇವು ರಕ್ತಗತವಾಗುತ್ತದೆ. ಹಾಗೆಯೇ ಮನುಷ್ಯರು ಒಮ್ಮೆ ಕೇಳಿದ ವಿಷಯವನ್ನು ಮತ್ತೆ ಮನಸ್ಸಿಗೆ ತಂದಕೊಂಡು ಮನನ ಮಾಡಿದರೆ ಚೆನ್ನಾಗಿ ನಾಟುತ್ತದೆ ಎಂಬ ಭಾವ ಈ ನುಡಿಗಟ್ಟಿನಲ್ಲಿದೆ.

ಪ್ರ : ತಿಂದದ್ದನ್ನು ಮತ್ತೆ ಮೆಲುಕು ಹಾಕಿ ಅರಗಿಸಿಕೊಳ್ಳುವ ಪಶುಗಳಂತೆ, ಮನುಷ್ಯರು ವಿಚಾರವನ್ನು ಮತ್ತೆ ಮೆಲುಕು ಹಾಕಿ ಅರಗಿಸಿಕೊಳ್ಳುವುದು ಒಳ್ಳೆಯದು.