೨೭೦೬. ರಕ್ತ ಬಸಿ = ಶ್ರಮಿಸು, ನಿರಂತರವಾಗಿ ದುಡಿ
ಪ್ರ : ನಾಲೋರಂತೆ ನಾವೂ ಬದುಕಬೇಕೂಂತ ನನ್ನೆದೆ ರಕ್ತಾನ ಭೂಮಿತಾಯಿಗೆ ಬಸಿದಿದ್ದೀನಿ.
೨೭೦೭. ರಕ್ತ ಹಂಚಿಕೊಂಡು ಬರು = ಒಬ್ಬ ತಾಯಿಯಲ್ಲಿ ಹುಟ್ಟು
ಪ್ರ : ಒಬ್ಬ ತಾಯಿ ರಕ್ತ ಹಂಚ್ಕೊಂಡು ಬಂದಿದ್ದೀನಿ, ನಾವು ಪರಸ್ಪರ ಯಾಕೆ ಹೊಡೆದಾಡಬೇಕು?
೨೮೦೮. ರಕ್ತ ಹೀರು = ಶೋಷಣೆ ಮಾಡು
ಪ್ರ : ಬಲಗಾರರು ಬಡವರ ರಕ್ತ ಹೀರುವ ರಾಕ್ಷಸರಾಗಿದ್ದಾರೆ.
೨೭೦೯. ರಗಳೆ ಮಾಡು = ರಂಪ ಮಾಡು
ಪ್ರ : ಮನೆ ಅಂದ್ಮೇಲೆ ಏನಾದರೂ ರಗಳೆ ಮಾಡಿ ಬೊಗಳೋ ಜನ ಇದ್ದೇ ಇರ್ತಾರೆ.
೨೭೧೦. ರಗಳೆಗಿಟ್ಟುಕೊಳ್ಳು = ಮುಗಿಯದ ಕಿರಿಕಿರಿಯ ಸಮಸ್ಯೆಯಾಗು
(ರಗಳೆ < ರಘಟ = ಅನಿಯತ ಸಾಲುಗಳ ಛಂದೋಜಾತಿ)
ಪ್ರ : ಇದೇನು ಹರಿಯೋದಿಲ್ಲ ಹತ್ತೋದಿಲ್ಲ, ಒಳ್ಳೆ ಮುಗಿಯದ ರಗಳೆಗಿಟ್ಟುಕೊಂಡಿತಲ್ಲ?
೨೭೧೧. ರಚ್ಚೆ ಮಾಡು = ಹಟ ಮಾಡು, ಅಳು
ಪ್ರ : ಮಗು ಎದ್ದಾಗಳಿಂದ ಒಂದೇ ಸಮನೆ ರಚ್ಚೆ ಮಾಡ್ತಾ ಇದೆ
೨೭೧೨. ರಜಗೊಳಿಸು = ಹೆಚ್ಚು ಪ್ರಕಾಶಗೊಳಿಸು
(ರಜ = ಪ್ರಕಾಶ, ಕಾಂತಿ)
ಪ್ರ : ಕಡ್ಡಿಯಿಂದ ಬತ್ತಿಯ ಕಿಟ್ಟವನ್ನು ಕೆಡವಿ, ದೀಪವನ್ನು ರಜಗೊಳಿಸು
೨೭೧೩. ರಜವನ್ನು ರಾಶಿ ಮಾಡು = ಕಣದಲ್ಲಿ ಒಕ್ಕ ರಾಗಿಯನ್ನು ಮೇಟಿಯ ಸುತ್ತ ಗುಡ್ಡೆ ಹಾಕು.
(ರಜ = ರಾಗಿ; ರಾಜಾನ್ನ ರಾಜುಣ ಎಂದರೂ ರಾಗಿ, ಬೀಸುವ ಕಲ್ಲಿನ ಹಾಡುಗಳಲ್ಲಿ ರಾಜುಣ ಬರುತ್ತದೆ) ಧಾನ್ಯ ಒಕ್ಕುವ ಕಣದಲ್ಲಿ ಎಲ್ಲ ವಸ್ತುಗಳ ದಿನ ನಿತ್ಯದ ಹೆಸರನ್ನು ಹೇಳದೆ, ಅವುಗಳಿಗೆ ಬೇರೊಂದು ಹೆಸರನ್ನು ಹೇಳಲಾಗುತ್ತದೆ. ಒಂದು ಬಗೆಯ ಕಲ್ಯಾಣ ದೃಷ್ಟಿಯನ್ನು ಕಾಣುತ್ತೇವೆ. ಉದಾಹರಣೆಗೆ ರಾಗಿಯನ್ನು ‘ರಜ’ ಎಂದು, ಮೊರವನ್ನು ‘ಕೊಂಗು’ ಎಂದು, ಕಸಬರಲನ್ನು ‘ಹಿಡುಗಲು’ ಎಂದು, ಧಾನ್ಯತೂರಲು ಬಳಸುವ ಎತ್ತರವಾದ ಉದ್ದಿಗೆಯನ್ನು ‘ಕುದುರೆ’ ಎಂದು, ಜರಡಿಯನ್ನು ‘ವಂದರಿ’ ಎಂದು, ರಾಗಿ ಹುಲ್ಲಿನ ಗರಿಯನ್ನು ‘ಪತ್ರೆ’ ಎಂದು, ಗಾಳಿಯನ್ನು ‘ವಾಯುದೇವರು’ ಎಂದು – ಹೀಗೆ ಪ್ರತಿಯೊಂದಕ್ಕೂ ಬೇರೆ ಹೆಸರು ನೀಡಲಾಗುತ್ತದೆ – ಬಹುಶಃ ಅನ್ನದೇವರ ಆವಾಸಸ್ಥಾನವಾದ ಕಣದಲ್ಲಿ ‘ಮಡಿನುಡಿ’ ಯನ್ನು ಬಳಸಬೇಕೆಂಬ ಪೂಜ್ಯಭಕ್ತಿಭಾವನೆ ಕಾರಣವಾಗಿರಬೇಕೆಂದು ಕಾಣುತ್ತದೆ.
ಪ್ರ : ಮೇಟಿ ಸುತ್ತ ರಜವನ್ನು ರಾಶಿ ಮಾಡಿ, ರಾಶಿ ಪೂಜೆ ಮಾಡಿದ ಮೇಲೇನೆ, ಮನೆಗೆ ತಗೊಂಡು ಹೋಗೋದು.
೨೭೧೪. ರಜ ಹಾಕು = ಹೊರಗಾಗು, ಮುಟ್ಟಾಗು.
ನೌಕರಿಯಲ್ಲಿರುವವರು ಅನಿವಾರ್ಯ ಕೆಲಸವಿದ್ದಾಗ ಸಾಂದರ್ಭಿಕ ರಜೆಯನ್ನು ಹಾಕುವಂತೆ, ತಿಂಗಳು ತಿಂಗಳಿಗೆ ಹೊರಗಾಗುವ ಹೆಂಗಸರು ಅಡುಗೆ ಕೆಲಸಕ್ಕೆ ಹಾಜರಾಗುವುದಿಲ್ಲವೆಂದು ರಜ ಹಾಕುತ್ತಾರೆ. ಬಹುಶಃ ಸರ್ಕಾರಿ, ಅರೆ ಸರ್ಕಾರಿ ಮೊದಲಾದ ಸಂಸ್ಥೆಗಳಲ್ಲಿ ನೌಕರಿ ಮಾಡುವವರಿಗೆ ಇರುವ ರಜೆಯ ಸೌಲಭ್ಯವನ್ನು, ಈ ನುಡಿಗಟ್ಟು ಬೇರೊಂದರ ಅನಾವರಣಕ್ಕೆ ಬಳಸಿಕೊಂಡಿದೆ.
ಪ್ರ : ನಮ್ಮ ಮನೆಯೋರು ಇವತ್ತು ಸಾಂದರ್ಭಿಕ ರಜೆ ಹಾಕಿರೋದ್ರಿಂದ, ಇವತ್ತು ನಾನು ಊಟಕ್ಕೆ ಉಡುಪಿ ಮಾವನ ಮನೆಗೇ ಹೋಗಬೇಕು.
೨೭೧೫. ರತನೀರು ಮಾಡಿ ನೀವಳಿಸು = ಕೆಟ್ಟ ದೃಷ್ಟಿ ಪರಿಹಾರಕ್ಕೆ ಕ್ರಮ ಜರುಗಿಸು
(ರತ < ರಕ್ತ = ನೆತ್ತರು ; ರತನೀರು = ಕೆಂಪುನೀರು (ನೀರಿಗೆ ಅರಿಶಿಣ ಸುಣ್ಣ ಹಾಕಿ ಕದಡಿ ಕೆಂಪಾದದ್ದು); ನೀವಳಿಸು < ನಿವ್ವಾಳಿಸು = ಮುಖದಿಂದ ಕೆಳಕ್ಕೆ ಇಳಿದೆಗೆ)
ಪ್ರ : ರತನೀರು ಮಾಡಿ ನೀವಳಿಸಿ, ಅದನ್ನು ಅಡ್ಡಲಾಗಿ ಹೆಣ್ಣುಗಂಡುಗಳ ಕಾಲು ಮುಂದೆ ಸುರಿದು, ಒಳಕ್ಕೆ ಬರಮಾಡಿಕೊಳ್ಳಬೇಕು ಅನ್ನೋದು ಗೊತ್ತಿಲ್ವ?
೨೭೧೬. ರತೀಪು ನೀಚು = ಅವಶ್ಯಕತೆಗಳನ್ನು ಪೂರೈಸು
(ರತೀಪು < ರಾತೀಪು = ಪುಷ್ಟಿಯುತವಾದ ಆಹಾರ ; ರತೀಪು < ರತಿಪ = ರತಿಯ ಗಂಡ ಕಾಮ ; ಕಾಮ ಎಂದರೆ ಆಸೆ. ಆದ್ದರಿಂದ ಸಂಸಾರದ ರತೀಪು ಎಂದರೆ ಆಸೆ ಆಕಾಂಕ್ಷೆ ಆವಶ್ಯಕತೆಗಳು ಎಂದೂ ಅರ್ಥವಾಗುತ್ತದೆ)
ಪ್ರ : ಸಂಸಾರದ ರತೀಪು ನೀಚೋದು ಅಷ್ಟೊಂದು ಸುಲಭಾನ, ನೀನೇ ಹೇಳು?
೨೭೧೭. ರಫ್ತು ಮಾಡಲು ಹೋಗು = ಮಲಮೂತ್ರ ವಿಸರ್ಜನೆಗೆ ಹೋಗು
ಪ್ರ : ಈಗಲೋ ಆಗಲೋ ಬರ್ತಾರೆ ಕೂತ್ಗೊಳ್ಳಿ, ರಫ್ತು ಮಾಡೋಕೆ ಹೋಗಿದ್ದಾರೆ.
೨೭೧೮. ರಬ್ಬಳಿಸು = ಒರೆದುಕೊಳ್ಳುವಂತೆ ಮಾಡು, ಎಣ್ಣೆಯಲ್ಲಿ ತಿಕ ತೊಳೆದಂತೆ ಮಾಡು
ಪ್ರ : ವೈಮನಸ್ಯ ಹೋಗಲಾಡಿಸ್ತೀನಿ ಅಂತ ಬಂದೋನು, ಇನ್ನೂ ರಬ್ಬಳಿಸಿ ಗಲೀಜು ಮಾಡಿಬಿಟ್ಟ.
೨೭೧೯. ರವೆರವೆ ಆಗದಿರು = ಪರಸ್ಪರ ದ್ವೇಷವಿರು
(ರವೆ = ಚರೆ, ಬಂದೂಕಿಗೆ ಹಾಕುವ ಮದ್ದು)
ಪ್ರ : ದಾಯಾದಿ ಮಾತ್ಸರ್ಯ, ಇಬ್ಬರಿಗೂ ರವೆರವೆ ಆಗಲ್ಲ
೨೭೨೦. ರವೋಟು ಕೊಡು = ಕೊಂಚ ಕೊಡು
(ರವೋಟ < ರವೆ + ಓಟು < ರವೆಯಷ್ಟು = ಕಿಂಚಿತ್, ಚಿಂತರ)
ಪ್ರ : ರವೋಟಾದ್ರೂ ಕೊಡಬೇಕಾಗ್ತದೆ ಅಂತ ಕಪಾಟಿನ ಕೀಲೀನೆ ಕಳೆದು ಹೋಗ್ಯದೆ ಎಂದ.
೨೭೨೧. ರಹ ಇಲ್ಲದಿರು = ಮಾರ್ಗವಿಲ್ಲದಿರು
(ರಹ < ರಾಹ್ = ದಾರಿ)
ಪ್ರ : ರಹ ಇಲ್ಲದಿರೋದ್ಕೆ ತಾನೇ ತಹತಹ ಪಡ್ತಿರೋದು?
೨೭೨೨. ರಾಗ ಎಳಿ = ಕೊರಗು, ಕೊಸರಾಡು
ಪ್ರ : ನನ್ನ ಹತ್ರ ನೀನು ರಾಗ ಎಳೀಬೇಡ, ಕಡ್ಡಿ ಮುರಿದಂಗೆ ಹೇಳು.
೨೭೨೩. ರಾಗ ತೆಗೆ = ಅಳು, ಆಲಾಪಿಸು
ಪ್ರ : ಕಡ್ಡೀನ ಗುಡ್ಡ ಮಾಡ್ಕೊಂಡು ರಾಗ ತೆಗೆಯೋದು ನಿನಗೊಂದು ರೋಗ
೨೭೨೪. ರಾಗ ಬದಲಾಯಿಸು = ಮಾತು ಬದಲಾಯಿಸು, ನಿಲುವು ಬದಲಾಯಿಸು
ಪ್ರ : ಅವನು ರಾಗ ಬದಲಾಯಿಸೋದ್ರಲ್ಲಿ ನಿಸ್ಸೀಮ, ನಂಬಿದ್ರೆ ಮಣ್ಣು ಮುಕ್ತೀಯ.
೨೭೨೫. ರಾಜಾರೋಷಾಗಿ ಮಾಡು = ಮುಚ್ಚುಮರೆಯಿಲ್ಲದೆ ಸಾರ್ವಜನಿಕವಾಗಿ ಮಾಡು
ಪ್ರ : ಮೂರೂ ಬಿಟ್ಟೋನು ರಾಜಾರೋಷಾಗಿ ಮಾಡ್ತಾನೆ, ಕೇಳೋಕೆ ಯಾರಿಗೂ ದಮ್ಮಿಲ್ಲ.
೨೭೨೬. ರಾಟವಾಳ ಆಡಿಸು = ಹತ್ತಿಸು ಇಳಿಸು, ಸುಸ್ತು ಮಾಡಿಸು
(ರಾಟವಾಳ < ರಾಟ್ಟು (ಮಲೆ) ಇರಾಟ್ಟಿನ(ತ) = ನೀರೆತ್ತುವ ಸಾಧನ)
ಪ್ರ : ಹೊತ್ತಾರೆಯಿಂದ ಬೈಸಾರೆವರೆಗೂ ರಾಟವಾಳ ಆಡಿಸಿಬಿಟ್ಟ
೨೭೨೭. ರಾಟಾಳ ಆಡಿಸು = ಗರಗರನೆ ತಿರುಗಿಸು, ಸಾಕು ಸಾಕು ಮಾಡು
(ರಾಟಾಳ < ರಾಟಳ < ರಾಟಣ = ಗರಗರನೆ ತಿರುಗಿಸುವ ಚಕ್ರಾಕಾರದ ಸಾಧನ, ಗಿರಿಗಟ್ಲೆ)
ಪ್ರ : ತಲೆ ತಿರುಗಿ ಬೀಳೋ ಹಂಗೆ ಗರಗರನೆ ರಾಟಾಳ ಆಡಿಸಿಬಿಟ್ಟ.
೨೭೨೮. ರಾಣಾರಂಪವಾಗು = ಯುದ್ಧ ಕೋಲಾಹಲವಾಗು, ಪರಿಸ್ಥಿತಿ ಹದಗೆಡು
(ರಾಣಾರಂಪ < ರಣರಂಪ = ಯುದ್ಧದ ರಾಡಿ)
ಪ್ರ : ಅದು ಹಾದಿರಂಪ ಬೀದಿ ರಂಪ ಮಾತ್ರ ಆಗಲಿಲ್ಲ, ರಾಣಾರಂಪ ಆಗಿ ಹೋಯ್ತು.
೨೭೨೯. ರಾದ್ಧಾಂತವಾಗು = ಗಲಾಟೆಯಾಗು, ಕೋಲಾ-ಹ-ಲ-ವಾ-ಗು
ಪ್ರ : ಮತಸ್ಥಾಪಕರು ಸಿದ್ಧಾಂತಗಳ ರಾದ್ಧಾಂತಗಳಲ್ಲೇ ದೇಹಾಂತವಾದರು.
೨೭೩೦. ರಾಮಾಣ್ಯವಾಗು = ಮುಗಿಯದ ಕಥೆಯಾಗು, ವ್ಯಥೆಯ ಕಥೆಯಾಗು
(ರಾಮಾಣ್ಯ < ರಾಮಾಯಣ < ರಾಮನ + ಅಯನ = ರಾಮನ ಸಂಚಾರದ ಸಂಕಷ್ಟದ ಕಥೆ)
ಪ್ರ : ಇದು ಮುಗಿಯದ ರಾಮಾನ್ಯವಾಯ್ತು, ಏಳಿ, ಹೋಗಾನ.
೨೭೩೧. ರಾವು ಬಡಿ – ಗರ ಬಡಿ
(ರಾವು < ರಾಹು = ಗ್ರಹ)
ಪ್ರ : ಕಾವು ಹಿಡಕೋ ಅಂತಾನೆ, ಇವನಿಗೆ ರಾವು ಬಡಿದು ರಕ್ತ ಕಾರ !
೨೭೩೨. ರ್ವಾತೆ ಸುರುವಾಗು = ಅಳು ಪ್ರಾರಂಭವಾಗು, ಗಲಾಟೆಯಾಗು
(ರ್ವಾತೆ < ರೋತೆ = ಅಧ್ವಾನ, ಹೇಸಿಗೆಯ ವರ್ತನೆ)
ಪ್ರ : ಏಳುವಾಗ್ಲೇ ಈ ಮನೇಲಿ ರ್ವಾತೆ ಸುರುವಾಗ್ತದೆ, ಇದಕ್ಕೆ ಕೊನೆ ಅನ್ನೋದೇ ಇಲ್ಲ
೨೭೩೩. ರಿಕಾಟ್ ತೆಗಿ = ದಾಖಲೆ ತೋರಿಸು
(ರಿಕಾಟ್ < Record = ದಾಖಲೆ)
ಪ್ರ : ರಿಕಾಟ್ ತೆಗೆಸಿದರೆ ಜಮೀನಿನ ಚಕ್ಬಂದು ಗೊತ್ತಾಗ್ತದೆ.
೨೭೩೪. ರೀಲು ಬೀಡು = ಉಡಾಫೆ ಹೊಡಿ, ಬೂಸಿ ಬಿಡು
(ರೀಲು < Reel = ಸುರುಳಿ)
ಪ್ರ : ಅವನು ರೀಲು ಬಿಡ್ತಾನೆ ಅಂತ ಎಲ್ಲರೂ ಹೇಳ್ತಾರೆ, ನಂಬಿ ನಾಮ ಹಾಕಿಸಿಕೊಳ್ಳಬೇಡ
೨೭೩೫. ರುದ್ರಾವತಾರ ತಾಳು = ಕಿಡಿಕಿಡಿಯಾಗು, ಭಯಂಕರವಾಗು
ಪ್ರ : ಈ ವಿಷಯ ಹೇಳಿದರೆ ಭದ್ರವತಾರ ಬಿಟ್ಟು ರುದ್ರಾವತಾರ ತಾಳ್ತಾನೆ
೨೭೩೬. ರುಸ್ತುಂ ಕೆಲಸ ಮಾಡು = ಮೆಚ್ಚುವ ಸಾಹಸ ಕೆಲಸ ಮಾಡು
ಪ್ರ : ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಹುಡುಗನನ್ನು ಉಳಿಸಿದ್ದಕ್ಕಾಗಿ ಎಲ್ಲರೂ ಅವನಿಗೆ ‘ಒಳ್ಳೆ ರುಸ್ತುಂ ಕೆಲಸ ಮಾಡಿದೆ’ ಎಂದು ಬೆನ್ನು ತಟ್ಟಿ ಹೊಗಳಿದರು.
೨೭೩೭. ರೂಢಿ ಮಾಡು = ಕಲಿಸಿಕೊಡು, ಪಾಟ ಮಾಡು
ಪ್ರ : ರೂಢಿ ಮಾಡಿದೋನು ಕುಡಿಯೋದು ಬಿಟ್ಟುಬಿಟ್ಟು, ಆದರೆ ನಾನು ಬಿಡೋಕಾಗಿಲ್ಲ
೨೭೩೮. ರೂಬು ರೂಬು ಮಾತಾಡು = ಮುಖತಃ ಮಾತಾಡು
(ರೂಬು ರೂಬು < ರೂಪು ರೂಪು < ರೂಬ್ ರೂಬ್ (ಹಿಂ) = ಪ್ರತ್ಯಕ್ಷ, ಮುಖಾಮುಖಿ)
ಪ್ರ : ರೂಬು ರೂಬು ಮಾತಾಡಿ ಬಗೆಹರಿಸಿಕೊಳ್ಳಿ, ಮಧ್ಯಸ್ಥಗಾರರಿಂದ ಕೆಲಸ ಕೆಡ್ತದೆ
೨೭೩೯. ರೆಕ್ಕೆಗೆ ನೀರು ಚಿಮುಕಿಸಿದಂತಾಗು = ರೆಕ್ಕೆ ಬಡಿಯಲು ಅವಕಾಶವಾಗು, ಪ್ರಚೋದಿಸಿದಂತಾಗು
ಸೂರ್ಯ ಹುಟ್ಟುವ ಮೊದಲು ನಾರಾಯಣ ಅಂಗೈಯೊಳಗೆ ನಾಮದ ಪುಡಿ ಹಾಕಿಕೊಂಡು, ನೀರು ಹಾಕಿ ತೇದು, ಹಣೆಗೆ ನಾನು ಇಟ್ಟುಕೊಂಡ ಬಳಿಕ ತನ್ನ ಅಂಗೈಯನ್ನು ತೊಳೆದು ಕೊಡವುತ್ತಾನೆಂದೂ, ನೀರ ಹನಿ ಕೋಳಿಗಳ ರೆಕ್ಕೆಗಳ ಮೇಲೆ ಬಿದ್ದು ಅವು ಪಟಪಟ ಬಡಿದು ಕೂಗುತ್ತವೆ ಎಂದೂ ಐತಿಹ್ಯ ಉಂಟು. ವೈಷ್ಣವ ಮತದ ಪ್ರಚಾರದ ಹಿನ್ನೆಲೆ ಈ ನುಡಿಗಟ್ಟಿನಲ್ಲಿ ಮಡುಗಟ್ಟಿದೆ.
ಪ್ರ : ಅವರನ್ನು ತನ್ನ ತೆಕ್ಕೆಗೆ ತಗೊಂಡದ್ದು ಒಂದು ರೀತಿಯಲ್ಲಿ ರೆಕ್ಕೆಗೆ ನೀರು ಚಿಮುಕಿಸಿದಂತಾಯ್ತು.
೨೭೪೦. ರೆಕ್ಕೆ ಪುಕ್ಕ ಕತ್ತರಿಸು = ಶಕ್ತಿ ಕುಂದಿಸು, ಹಾರಾಟ ನಿಲ್ಲಿಸು
ಹಾರುವ ಪಕ್ಷಿಗಳಿಗೆ, ಕೋಳಿಗಳಿಗೆ ರೆಕ್ಕೆಪುಕ್ಕ ಕತ್ತರಿಸಿದರೆ ಹಾರುವುದಕ್ಕೆ ಆಗುವುದಿಲ್ಲ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಅವನ ಹಾರಾಟ ಮುಗೀತು, ರೆಕ್ಕೆ ಪುಕ್ಕ ಎಲ್ಲ ಕತ್ತರಿಸಿದ್ದೀನಿ.
೨೭೪೧. ರೆಪ್ಪೆ ಎರಡು ಮಾಡು = ಕಣ್ಣು ಬಿಡು
ಪ್ರ : ರಾತ್ರಿ ಮಲಗಿದೋನು ಮಟಮಟ ಮಧ್ಯಾಹ್ನದಲ್ಲಿ ರೆಪ್ಪೆ ಎರಡು ಮಾಡಿದ.
೨೭೪೨. ರೆಪ್ಪೆ ಮುಚ್ಚದಿರು = ನಿದ್ರಿಸದಿರು.
ಪ್ರ : ಹಾಳು ಹೈರಾಣದೊಳಗೆ, ಇಡೀ ರಾತ್ರಿ ರೆಪ್ಪೆ ಮುಚ್ಚಲಿಲ್ಲ.
೨೭೪೩. ರೆಪ್ಪೆ ಹೊಡಿ = ಕಣ್ಣು ಮಿಟುಕಿಸು, ಇಂಗಿತ ಸೂಚಿಸು.
ಪ್ರ : ಹುಡುಗ ರೆಪ್ಪೆ ಹೊಡೆದದ್ದನ್ನು ಕಂಡು ಹುಡುಗಿ ಕೆಪ್ಪರೆಗೆ ಹೊಡೆದಳು.
೨೭೪೪. ರೇಗಿ ರವಾಲಾಗು = ಕಿಡಿಕಿಡಿಯಾಗು
(ರೇಗು = ಸಿಟ್ಟಾಗು, ರವಾಲಾಗು , ರವೆ + ಅವಲಾಗು; ರವೆ = ಚರೆ (ಬಂದೂಕಿಗೆ ಹಾಕುವ ಮದ್ದು) ಅವಲು = ಕಿಡಿ, ಬೆಂಕಿ ಕಾವಿಗೆ ಟಪ್ಪನೆ ಬಾಯಿಬಿಟ್ಟು ಸಿಡಿವ ಕಾಳು)
ಪ್ರ: ನಾನು ಆ ವಿಷಯ ಹೇಳಿದ್ದೇ ತಡ, ರೇಗಿ ರವಾಲು ಆಗಿಬಿಟ್ಟ.
೨೭೪೫. ರೇಜಿಗೆ ಮಾಡು = ರಗಳೆ ಮಾಡು
ಪ್ರ : ಕುಡಿದು ಬಂದು ನಿತ್ಯ ರೇಜಿಗೆ ಮಾಡ್ತಿದ್ದರೆ ಏಗೋದು ಬಲು ಕಷ್ಟ.
೨೭೪೬. ರೇಡು ಮಾಡು = ರಂಪ ಮಾಡು
ಪ್ರ : ರೇಡು ಮಾಡದಿದ್ರೆ ಕೇಡಿಗರಿಗೆ ಗಂಟ್ಲಲ್ಲಿ ಅನ್ನ ಇಳಿಯಲ್ಲ.
೨೭೪೭. ರೈಲು ಬಿಡು = ಉಡಾಫೆ ಹೊಡಿ, ಸುಳ್ಳು ಹೇಳು
ಪ್ರ : ನೀನು ರೈಲು ಬಿಡ್ತಿದ್ದೀಯ ಅಂತ ನಿನ್ನ ಮಾತಿನ ದಾಟೀಲೇ ಗೊತ್ತಾಗ್ತದೆ.
೨೭೪೮. ರೈಲು ಹತ್ತಿಸು = ಉಬ್ಬಿಸು, ಮರುಳು ಮಾಡು
ಪ್ರ : ರೈಲು ಹತ್ತಿಸ್ತಾ ಇದ್ದಾನೆ, ಅವನ ಮಾತು ನಂಬಬ್ಯಾಡ
೨೭೪೯. ರೊಚ್ಚು ಮಾಡು = ಬಗ್ಗಡ ಮಾಡು
(ರೊಚ್ಚು = ಕೆಸರು)
ಪ್ರ : ದನಗಳು ಗಂಜಳ ಹುಯ್ದು ಕೊಟ್ಟಿಗೆಯನ್ನೆಲ್ಲ ರೊಚ್ಚು ಮಾಡಿ ಇಕ್ಕಿವೆ.
೨೭೫೦. ರೊಟ್ಟಿ ಜಾರಿ ತುಪ್ಪಕ್ಕೆ ಬೀಳು = ಆಸೆ ಈಡೇರು
ಪ್ರ : ತಾನಾಗಿಯೇ ರೊಟ್ಟಿ ಜಾರಿ ತುಪ್ಪಕ್ಕೆ ಬೀಳ್ತು, ಅದೃಷ್ಟವಂತ ನೀನು
೨೭೫೧. ರೊಟ್ಟಿ ತೊಳೆದ ನೀರು ಕುಡಿದು ಕಾಲ ಹಾಕು = ಕಡುಬಡತನದ ಜೀವನ ಸಾಗಿಸು
ಪ್ರ : ಎಷ್ಟೋ ದಿವಸ ರೊಟ್ಟಿ ತೊಳೆದ ನೀರು ಕುಡಿದು ಕಾಲ ಹಾಕಿದೆ ಆ ದಿನಗಳನ್ನು ನೆನಸಿಕೊಂಡ್ರೆ ಈಗಲೂ ಕಣ್ಣು ಮಂಜಾಗ್ತವೆ.
೨೭೫೨. ರೊಡ್ಡಗೈಲಿ ಕೊಡು = ಎಡಗೈಲಿ ನೀಡು
(ರೊಡ್ಡ = ಎಡ)
ಪ್ರ : ರೊಡ್ಡಗೈಲಿ ಕೊಡೋದು ಸಭ್ಯತೆ ಇಲ್ಲ ಸದಾಚಾರ ಅಲ್ಲ.
೨೭೫೩. ರೊಪ್ಪಕ್ಕೆ ಕೂಡು = ದೊಡ್ಡಿಗೆ ಕೂಡು
(ರೊಪ್ಪ = ಕುರಿಗಳನ್ನು ಕೂಡುವ ಕೊಟ್ಟಿಗೆ)
ಪ್ರ : ರೊಪ್ಪಕ್ಕೆ ಕೂಡು, ಕಳಕೊಂಡೋರು ಹುಡುಕ್ಕೊಂಡು ಬರ್ತಾರೆ.
೧೭೫೪. ರೋಷ್ಟ ಸಾಕಾಗು = ರಂಪ ಸಾಕಾಗು
(ರೋಷ್ಟ < ರುಷ್ಟ = ಕೋಪತಾಪ)
ಪ್ರ : ನಿತ್ಯ ಮನೇಲಿ ನಡೆಯೋ ರೋಷ್ಟ ನೋಡಿದರೆ, ಸಾಕಪ್ಪ ಸಾಕು ಅನ್ನಿಸ್ತದೆ.
೨೭೫೫. ರೋಸಿ ಹೋಗು = ಸಾಕು ಸಾಕು ಎನ್ನಿಸು
(ರೋಸು = ಅಸಹ್ಯಪಡು)
ಪ್ರ : ಇವರ ಕಚ್ಚಾಟ ನೋಡಿ ನೋಡಿ ರೋಸಿ ಹೋಗಿದ್ದೀನಿ.
೨೭೫೬. ರಂ ಆಗು = ಉದ್ರೇಕಗೊಳ್ಳು
(ರಂ = ಮದ್ಯವಿಶೇಷ)
ಪ್ರ : ತೀರ್ಥದಿಂದ ರಂ ಆದನೋ ಅಥವಾ ಸ್ವಾರ್ಥದಿಂದ ರಂ ಆದನೋ?
೨೭೫೭. ರಂಕ್ಲು ಆಗು = ರಂಪ ಆಗು, ಹೈರಾಣವಾಗು
ಪ್ರ : ಗಾದೆ – ರಂಕ್ಲು ಮುಂಡೆ ಕಿವಿಗೆ ಬಿದ್ದರೆ ಟುಂಕೀನೆ ಬೇಡ.
೨೭೫೮. ರಂಗಳಿಸು = ತೇಯು, ಗೋಟಾಯಿಸು
ಪ್ರ : ಗಿಡಮೂಲಿಕೆ ರಸವನ್ನು ಚೆನ್ನಾಗಿ ರಂಗಳಿಸಿ ಗಾಯಕ್ಕೆ ಹಚ್ಚಿ
೨೭೫೯. ರಂಗಳಿಸು = ನಾಲಗೆ ಸವರು, ಮೇಲೆ ಬೀಳಲು ಹವಣಿಸು
ಪ್ರ : ನಮ್ಮನ್ನು ಕಂಡ್ರೆ ಸಾಕು, ಹಂಗೇ ರಂಗಳಿಸ್ತಾನೆ.
೨೭೬೦. ರಂಗನಾಟ ಆಡಿಸು = ಕುಣಿಸು, ಸುಸ್ತು ಮಾಡು
(ರಂಗ = ಕೃಷ್ಣ)
ಪ್ರ : ಇವನು ಹಿಂಗಿದ್ದಾನೆ ಅಂತ್ಲ? ಪಟೇಲನಿಗೆ ರಂಗನಾಟ ಆಡಿಸಿಬಿಟ್ಟ.
೨೭೬೧. ರಂಗಾಗು = ಆರ್ಭಟ ಹೆಚ್ಚಾಗು, ಜೋರಾಗು
ಪ್ರ : ಇವನು ರಂಗಾದಂತೆಲ್ಲ ಅವನು ಕಂಗಾಲಾದ
೨೭೬೨. ರಂಗಾಗೀರಂಗಾಗು = ಜೋರು ಮಾತುಕತೆಯಾಗು, ವಾದಪ್ರತಿವಾದವಾಗು
(ರಂಗಾಗೀರಂಗಾಗು < ರಂಗಾಗಿ + ಈರಂಗು + ಆಗು; ಈರಂಗು < Hearing)
ಪ್ರ : ಇವತ್ತು ನ್ಯಾಯಾಲಯದಲ್ಲಿ ಒಳ್ಳೆ ರಂಗಾಗೀರಂಗಾಯ್ತಂತೆ.
೨೭೬೩. ರಂಗೇರು = ಬಣ್ಣವೇರು, ಕಾಂತಿ ಮೂಡು
(ರಂಗು = ಬಣ್ಣ)
ಪ್ರ : ಮುಖ್ಯ ಅತಿಥಿಗಳ ಆಗಮನದಿಂದ ಸಭೆಗೆ ರಂಗೇರಿತು
೨೭೬೪. ರಂಗೋಲಿ ಕೆಳಗೆ ತೂರು = ನರಿಬುದ್ಧಿ ತೋರು, ಮಹಾ ಕುಯುಕ್ತಿ ಮಾಡು
ಪ್ರ : ಅವರು ಚಾಪರೆ ಕೆಳಗೆ ತೂರಿದರೆ, ಇವರು ರಂಗೋಲಿ ಕೆಳಗೆ ತೂರ್ತಾರೆ
೨೭೬೪. ರಾಂಗಾಗು = ಹೆಚ್ಚು ಕೆರಳು, ಆಕ್ರಮಣ ಮಾರ್ಗ ಹಿಡಿ
(ರಾಂಗು < Wrong) ಪ್ರ : ಸುಮ್ಮನಿರಿಸಿದಷ್ಟೂ ರಾಂಗಾಗಿಬಿಟ್ಟ, ಏನ್ನ ಮಾಡಿಕೊ ಅಂತ ನಾವೇ ಸುಮ್ಮನಾಗಿಬಿಟ್ಟೆವು.
೨೭೬೫. ರೆಂಟೆ ಹೊಡಿ = ನೇಗಿಲಿನಿಂದ ಉಳು
(ರೆಂಟೆ = ನೇಗಿಲು)
ಪ್ರ : ಗಾದೆ – ರೆಂಟೆ ಹೊಡೆದೋನ ಹೊಲಾನ
ಕುಂಟೆ ಹೊಡೆದೋನು ಕೆಡಿಸಿದ
೨೭೬೬. ರೆಂಬೆಯಂತಿರು = ಸುಂದರವಾಗಿರು
(ರೆಂಬೆ < ರಂಭೆ = ಅಪ್ಸರೆ)
ಪ್ರ : ರೆಂಬೆಯಂತಿರೋ ಈ ಹೆಣ್ಣನ್ನು ಮದುವೆಯಾಗೋಕೆ ಪುಣ್ಯ ಮಾಡಿರಬೇಕು.
೨೭೬೭. ರೊಂಡಿ ಮುರಿ = ಶಿಕ್ಷಿಸು
(ರೊಂಡಿ = ಚೊಪ್ಪೆ, ತೊಡೆಯ ಹಿಂಭಾಗ, ಕುಂಡಿಯ ಕೆಳಭಾಗ)
ಪ್ರ : ಗಾದೆ – ರೊಂಡಿಗೆ ಏಟು ಬಿದ್ರೆ ಮೊಂಡಿಗೆ ಮುಲಾಮು ಹಚ್ಚಿದರು
೨೭೬೮. ರೊಂಪಗುಯ್ತ ತಾಳು = ಎರಡೂ ಕಡೆಯ ನೋವು ಸಹಿಸು
(ರೊಂಪಗುಯ್ತ < ರೊಂಪ + ಕುಯ್ತ ; ರೊಂಪ = ಗರಗಸ < ಕ್ರಕಚ ; ಕುಯ್ತ = ಕುಯ್ಯುವಿಕೆ)
ಪ್ರ : ಒಂದ್ಕಡೆ ಅತ್ತೆ ಕಾಟ ಮತ್ತೊಂದು ಕಡೆ ಗಂಡನ ಕಾಟ – ಈ ರೊಂಪಗುಯ್ತ ತಾಳೋಕೆ ನನ್ನಿಂದಾಗಲ್ಲ.
Leave A Comment