೨೮೩೯. ಶನಿಕಾಟ ಸುರುವಾಗು = ತೊಂದರೆ ಪ್ರಾರಂಭವಾಗು

ಶನಿಯ ವಕ್ರದೃಷ್ಟಿ ಬಿದ್ದರೆ ಜೀವನದಲ್ಲಿ ತುಂಬ ಕಷ್ಟ ಬರುತ್ತದೆ ಎಂಬ ನಂಬಿಕೆ ಜನಪದರಲ್ಲಿದೆ, ಶನಿಯ ವಾಹನವಾದ ಕಾಗೆ ತಲೆಗೆ ಬಡಿದರೆ ಅಥವಾ ಹೆಗಲ ಮೇಲೆ ಕೂತರೆ ಶನಿಕಾಟ ಸುರುವಾಗುವುದರ ಸೂಚನೆ ಎಂದು ನಂಬುತ್ತಾರೆ. ಕಷ್ಟ ಕೊಟ್ಟು ನಲುಗಿಸಿದ ಶನಿಯೇ ಕೊನೆಯಲ್ಲಿ ಸುಖದಲ್ಲಿ ನಲಿಸುತ್ತಾನೆ ಎಂಬ ನಂಬಿಕೆಯೂ ಜನರಲ್ಲಿದೆ.

ಪ್ರ : ಶನಿಕಾಟ ಸುರುವಾದ ಮೇಲೆ ತಿಣುಕಾಟ ಇದ್ದದ್ದೇ, ಸಹಿಸ್ಕೋಬೇಕು ಅಷ್ಟೆ.

೨೮೪೦. ಶಸ್ತ್ರ ನೆಲಕ್ಕೆ ಹಾಕು = ನೆಲ ಕಚ್ಚಿ ಕೂರು

(ಶಸ್ತ್ರ = ಆಯುಧ ; ಇಲ್ಲಿ ದೇಹ, ತಲೆ ಎಂದರ್ಥ) ಕುರುಕ್ಷೇತ್ರ ಯುದ್ಧದಲ್ಲಿ ಶಸ್ತ್ರಗಳನ್ನು ನೆಲಕ್ಕೆಸೆದು ನಾನು ಯುದ್ಧ ಮಾಡುವುದಿಲ್ಲ ಎಂದು ಅರ್ಜುನ ಹೇಳಿದಾಗ, ಕೃಷ್ಣ ಅವನಿಗೆ ಬೋಧಸುವ ಪ್ರಸಂಗ ಎಲ್ಲರಿಗೂ ತಿಳಿದಿದೆ. ಆ ಪೌರಾಣಿಕ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಮಗಳು ಬೇರೆಯವನ ಹಿಂದೆ ಓಡಿ ಹೋದಾಗಿನಿಂದ ಶಸ್ತ್ರಾನೆ ನೆಲಕ್ಕೆ ಹಾಕಿಬಿಟ್ಟವನೆ.

೨೮೪೧. ಶ್ಯಾಟ ಕಿತ್ತು ಪೋಟಿ ಹಾಕು = ವ್ಯರ್ಥ ಕೆಲಸದಲ್ಲಿ ತೊಡ-ಗು

(ಶ್ಯಾಟ = ಶ್ಯಪ್ಟ; ಪೋಟಿ = ಗಂಟು)

ಪ್ರ : ಅವರು ಕೆಲಸಕ್ಕೆ ಹೋದ್ರೆ, ನೀನೇನು ಮಾಡ್ತಾ ಇದ್ದೀಯಾ? ಶಾಟ ಕಿತ್ತು ಪೋಟಿ ಹಾಕ್ತಿದ್ದೀಯ?

೨೮೪೨. ಶಿಖರ ಕಟ್ಟಿಸು = ಗೋಪುರ ಕಟ್ಟಿಸು

ಪ್ರ : ಬಡಜನರ ತಲೆ ಹೊಡೆದು ತನ್ನ ಮನೆ ಮೇಲೆ ಶಿಖರ ಕಟ್ಟಿಸಿರೋದು ಕಾಣಲ್ವ?

೨೮೪೩. ಶಿವನ ಮೊಲೆ ಚೀಪಿದಂತಾಗು = ಬಾಯಿಚಟ ತೀರಿದರೂ ಹಸಿವಿನ ಚಡಪಡಿಕೆ ನಿಲ್ಲದಿರು.

ಕೆಲವು ಮೇಕೆಗಳಿಗೆ ಕೊರಳಿನಲ್ಲಿ ಮೊಲೆಯಾಕಾರದ ಬೆಟ್ಟುದ್ದದ ನರಗಳು ಇಳೆಬಿದ್ದಿರುತ್ತವೆ. ಅವಕ್ಕೆ ‘ಶಿವನಮೊಲೆ’ ಎಂದು ಕರೆಯುತ್ತಾರೆ. ಕೆಲವು ಮೇಕೆಗಳು ಎರಡು ಮೂರು ಮರಿಗಳನ್ನು ಈದುಬಿಡುತ್ತವೆ. ಕಾಡಲ್ಲಿ ಮೇದು ಮನೆಗೆ ಬಂದ ಮೇಕೆಗೆ ಮೂರು ಮರಿಗಳು ಹಾಲು ಕುಡಿಯಲು ದುಂಬಾಲು ಬೀಳುತ್ತವೆ. ಅವುಗಳಲ್ಲಿ ಬಲವಾದ ಎರಡು ಮರಿಗಳು ತಾಯಿಯ ಎರಡು ಮೊಲೆಗಳಿಗೆ ಬಾಯಿ ಹಾಕಿ ಹಾಲು ಕುಡಿಯತೊಡಗಿದಾಗ, ಮೂರನೆಯ ಅಶಕ್ತ ಮರಿ ಬೆಳೋ ಎಂದು ಅರಚಿಕೊಳ್ಳುತ್ತದೆ. ಆಗ ಮನೆಯವರು ಅದರ ಬಾಯಿ-ಗೆ ಮೇಕೆಯ ಕೊರಳಲ್ಲಿರುವ ಶಿವನ ಮೊಲೆಯನ್ನು ಇಡುತ್ತಾರೆ. ಬಾಯಿ ಚಪಲ ತೀರಿದರೂ ಹಾಲು ಬರದೇ ಇರುವುದರಿಂದ ಹೊಟ್ಟೆ ಹಸಿವಿನ ಚಡಪಡಿಕೆ ತೀರುವುದಿಲ್ಲ. ಶಿವನ ಮೊಲೆ ಎಂದು ಹೆಸರು ಬರಲು ಶಿವನ ಅರ್ಧನಾರೀಶ್ವರಾಕೃತಿ ಕಾರಣವೆನ್ನಿಸುತ್ತದೆ. ಏಕೆಂದರೆ ದೇಹದ ಅರ್ಧ ಭಾಗ ಪಾರ್ವತಿಯದು. ಇನ್ನರ್ಧ ಭಾಗ ಶಿವನದು. ಪಾರ್ವತಿಯ ಎದೆಯಲ್ಲಿ ಹಾಲು ಬಂದರೆ ಶಿವನ ಎದೆಯಲ್ಲಿ ಹಾಲು ಬರುವುದಿಲ್ಲ. ಕೆಚ್ಚಲಿನ ಮೊಲೆಗಳಿಗೆ ಶಿವನಮೊಲೆ ಎಂದು ಕರೆಯದೆ ಕೊರಳ ಮೊಲೆಗಳಿಗೆ ಶಿವನ ಮೊಲೆ ಎಂದು ಕರೆಯುವಲ್ಲಿ ಜನಪದರ ಸೃಜನಶಕ್ತಿ ಎದ್ದು ಕಾಣುತ್ತದೆ.

ಪ್ರ : ಮಗು ಹಾಲು ಬತ್ತಿದ ಎದೆಯನ್ನು ಚೀಪೋದು, ಮೇಕೆಮರಿ ‘ಶಿವನಮೊಲೆ’ ಚೀಪೋದು ಎರಡೂ ಒಂದು.

೨೮೪೪. ಶ್ಯಪ್ಯ ತೋರಿಸು = ಇಲ್ಲವೆನ್ನು, ಕೈಯೆತ್ತು.

(ಶ್ಯಪ್ಪ = ಮರ್ಮಾಂಗದ ಕೂದಲು)

ಪ್ರ : ಕೊಟ್ಟ ಹಣ ಕೇಳಿದ್ಕೆ ಶ್ಯಪ್ಪ ತೋರಿಸಿದ.

೨೮೪೫. ಶುಕ್ರದೆಸೆಯೊದಗು = ಅದೃಷ್ಟ ಕುಲಾಯಿಸು.

ಪ್ರ : ನನಗೆ ಶನಿದೆಸೆ, ನಿನಗೆ ಶುಕ್ರದೆಸೆ; ನನಗೆ ಕಷ್ಟ ನಿನಗೆ ಸುಖ ಅಷ್ಟೆ.

೨೮೪೬. ಶಂಖ ಊದು = ಅಳು, ಒಂದೇ ಸಮ ಅರಚಿಕೊಳ್ಳು

ವೈಷ್ಣವ ಸಂಪ್ರದಾಯದ ಹಿನ್ನೆಲೆಯಲ್ಲಿ ಮೂಡಿದ ನುಡಿಗಟ್ಟು ಇದು. ದಾಸಯ್ಯಗಳು ಜಾಗಟೆ ಬಡಿಯುತ್ತ ಶಂಖ ಊದುವುದು ವಾಡಿಕೆ. ಶೈವರಲ್ಲಿ ಬೇರೆ ವಾದ್ಯಗಳ ಬಳಕೆಯಿದ್ದು ಶಂಖ ಜಾಗಟೆಗಳ ಬಳಕೆಯಿಲ್ಲ.

ಪ್ರ : ಶಂಖ ಊದೋದು ನಿಲ್ಲಿಸ್ತೀಯೋ, ಇಲ್ಲ ನಾಲ್ಕು ಬಿಗೀಲೊ ? ಎಂದು ಗದರಿಸಿದ ಗಂಡ.