೨೮೪೭. ಸಕ್ಕಟ್ಟೆ ಸರೊತ್ತಾಗು = ನಟ್ಟುನಡುರಾತ್ರಿಯಾಗು

(ಸಕ್ಕಟ್ಟೆ < ಸಕತ್ = ಪೂರ್ಣ ; ಸರೊತ್ತು < ಸರಿ + ಹೊತ್ತು = ಮಧ್ಯರಾತ್ರಿ)

ಪ್ರ : ಸಕ್ಕಟ್ಟೆ ಸರೋತ್ತಾಯ್ತು ಮಲಗುವಾಗ್ಗೆ, ಕೂಡಲೇ ಶಾಸ್ತ್ರ ಮಾಡೋಕೆ ಎಬ್ಬಿಸಿದರು

೨೮೪೮. ಸಗಣಿ ನೀರು ಹಾಕು = ಶುದ್ಧಿ ಮಾಡು, ಅಪವಿತ್ರವಾದುದನ್ನು ಪವಿತ್ರಗೊಳಿಸು

ಪ್ರ : ನೀನು ಕುಂತ ಜಾಗಕ್ಕೆ ಸಗಣಿ ನೀರು ಹಾಕಿ ಸಾರಿಸಬೇಕು.

೨೮೪೯. ಸಟ್ಟುಗ ಹಿಡ್ಕೊಂಡು ಹೋಗು = ಕೆಟ್ಟು ನಿರ್ಗತಿಕನಾಗಿ ಅಡುಗೆ ಕೆಲಸ ಅವಲಂಬಿಸು

ಕಲಿಯ ಪ್ರವೇಶದಿಂದಾಗಿ ನಳ ಸೌಟು ಹಿಡಿಯುತ್ತಾನೆ. ಭೀಮ ಸೌಟು ಹಿಡಿಯುತ್ತಾನೆ. ಪೌರಾಣಿಕ ಹಿನ್ನೆಲೆ ಈ ನುಡಿಗಟ್ಟಿಗಿದೆ.

ಪ್ರ : ಕಟುಕ ದಾಯಾದಿಗಳ ದೆಸೆಯಿಂದ ಅವನು ಸಟ್ಟುಗ ಹಿಡ್ಕೊಂಡು ಹೋದ.

೨೮೫೦. ಸಣ್ಣ ಕಸುಬು ಸರಿಬೀಳದಿರು = ನೀಚ ಸ್ವಭಾವ ಹಿಡಿಸದಿರು

(ಸಣ್ಣ =ನೀಚ, ಕೀಳು ; ಕಸುಬು = ವೃತ್ತಿ, ಸ್ವಭಾವ)

ಪ್ರ : ಅವನ ಸಣ್ಣ ಕಸುಬು ಸರಿಬೀಳದೆ ಅವನ ಸಂಗ ಬಿಟ್ಟುಬಿಟ್ಟೆ ಮೊದಲೇ ಗಾದೆ ಇಲ್ವಾ, ಸಣ್ಣನ ಸಂಗಕ್ಕಿಂತ ಸೊಣಗನ ಸಂಗ ಲೇಸು ಅಂತ.

೨೮೫೧. ಸಣ್ಣ ಪುಟ್ಟ ಮಾತಾಡು = ಕೀಳುದರ್ಜೆಯ ಮಾತಾಡು, ಕೆಟ್ಟಕೆಟ್ಟ ಮಾತಾಡು.

ಪ್ರ : ಸಣ್ಣ ಪುಟ್ಟ ಮಾತಾಡೋಳ ಸಂಗವೇ ಬೇಡ.

೨೮೫೨. ಸಣ್ಣು ಮಾಡು = ನಮಸ್ಕರಿಸು

(ಸಣ್ಣು < ಶರಣು = ನಮಸ್ಕಾರ)

ಪ್ರ : ಹಸೆಮಣೆ ಏರೋಕೆ ಮುನ್ನ ಅಪ್ಪ ಅಮ್ಮನಿಗೆ ಸಣ್ಣು ಮಾಡು.

೨೮೫೩. ಸತ್ತಷ್ಟು ಸಾವಾಗು = ನಾಚಿಕೆಯಾಗು, ಅಧಿಕ ಅವಮಾನವಾಗು

ಪ್ರ : ತುಂಬಿದ ಸಭೇಲಿ ಅಂಥ ಮಾತಾಡಿದಾಗ ನನಗೆ ಸತ್ತಷ್ಟು ಸಾವಾಯ್ತು.

೨೮೫೪. ಸತುವಿಲ್ಲದಿರು = ಶಕ್ತಿ ಇಲ್ಲದಿರು, ಗಟ್ಟಿ ಇಲ್ಲದಿರು

(ಸತುವು < ಸತ್ತ್ವ = ಬನಿ, ಶಕ್ತಿ)

ಪ್ರ : ಸತುವಿಲ್ಲದ ಹೆಳವನನ್ನು ಕಟ್ಕೊಂಡು ಮೇವು ನೀರಿಲ್ಲದೆ ಬೆಳೋ ಅನ್ನೋ ಕಡಸಿನಂಗೆ ಬಾಯಿಬಾಯಿ ಬಿಡ್ತಾಳೆ.

೨೮೫೫. ಸತ್‌ಸತ್ತು ಹುಟ್ಟು = ಅಧಿಕ ಯಾತನೆ ಪಡು, ಪುನರ್ಜನ್ಮ ಪಡೆದಂತಾಗು

ಪ್ರ : ಕಷ್ಟ ಕಾರ್ಪಣ್ಯಗಳಲ್ಲಿ ಸಂಸಾರ ಸಾಕೋಕೆ ಸತ್‌ಸತ್ತು ಹುಟ್ಟಿದ್ದೀನಿ.

೨೮೫೬. ಸತ್ತು ಸುಣ್ಣವಾಗು = ಸುಸ್ತಾಗು, ತುಂಬ ದಣಿವಾಗು

ಪ್ರ : ಸತ್ತು ಸುಣ್ಣವಾಗಿ ಈಗಿಲ್ಲಿ ಬಂದು ಕುತಿದ್ದೀನಿ, ನಾನೆಲ್ಲಿಗೂ ಎದ್ದು ಬರಲ್ಲ.

೨೮೫೭. ಸದರ ಕೊಡು = ಸಲಿಗೆ ಕೊಡು

(ಸದರ = ಸಲಿಗೆ, ಹೆಚ್ಚು ಒಡನಾಡ)

ಪ್ರ : ಗಾದೆ – ಸದರ ಕೊಟ್ಟರೆ ಅದರಾಗೆ ಕೈಯಿಕ್ಕಿದ.

೨೮೫೮. ಸದ್ದಡಗು = ಮಾತು ನಿಲ್ಲು, ಮರಣ ಹೊಂದು

ಪ್ರ : ನಿನ್ನ ಸದ್ದಡಗಿದಾಗಲೇ ಈ ಮನೇಲಿ ನಿಸೂರಾಗಿ ಬಾಳ್ವೆ ಮಾಡೋಕಾಗೋದು.

೨೮೫೯. ಸನ್ನಿಯಾಗು = ಉನ್ಮಾದವಾಗು, ಬುದ್ಧಿಭ್ರಮಣೆಯಾಗು

ಪ್ರ : ಸನ್ನಿಯಾದಾಗ ವಾದಕ್ಕಿಳಿಯಬಾರದು, ಅದು ಇನ್ನೂ ಪುಳ್ಳೆ ಇಕ್ಕಿದಂತಾಗ್ತದೆ.

೨೮೬೦. ಸನ್ನೆ ಮಾಡು = ಮಿಸುಕು, ಸೂಚನೆ ಕೊಡು

(ಸನ್ನೆ < ಸಂಜ್ಞಾ = ಸೂಚನೆ)

ಪ್ರ : ಸನ್ನೆ ಮಾಡಿದ್ರೂ ಬರದಿದ್ರೆ ದೊಣ್ಣೆಸೇವೆ ಮಾಡಿದರೆ ಬರ್ತಾಳೆ.

೨೮೬೧. ಸನ್ನೆ ಹಾಕು = ಮೀಟು, ಮುನ್ನೂಂಕು

(ಸನ್ನೆ = ಮೀಟುಗೋಲು, ಹಾರೆ, ಗಳು)

ಪ್ರ : ಗಾದೆ – ಸನ್ನೆ ಹಾಕಿದರೂ ಬರ್ದೋಳು ಸನ್ನೆ ಮಾಡಿದರೆ ಬರ್ತಾಳ?

೨೮೬೨. ಸಮಯದಪ್ಪು = ಅಸಂದರ್ಭವಾಗು, ಅನಾನುಕೂಲವಾಗು

ಪ್ರ : ಎಂಥವರಿಗೂ ಸಮಯದಪ್ತದೆ, ಕಟ್ಟುನಿಟ್ಟನ್ನು ಸಡಿಲಿಸಿ ಬಗೆಹರಿಸಿ.

೨೮೬೩. ಸರ ಇಕ್ಕು = ಧ್ವನಿಗೂಡಿಸು, ಶ್ರುತಿ ಇಕ್ಕು

(ಸರ < ಸ್ವರ = ಧ್ವನಿ)

ಪ್ರ : ನಾನು ಹಾಡಬೇಕಾದರೆ, ನನ್ನ ಜೊತೆಗೆ ಸರ ಇಕ್ಕೋರು ಒಬ್ಬರು ಬೇಕಲ್ಲ.

೨೮೬೪. ಸರಕು ಇರು = ಸತ್ತ್ವ ಇರು, ತಾಕತ್ತಿರು

ಪ್ರ : ಕಣ್ಣಿಗೆ ಪರಕಲನಂತೆ ಕಂಡ್ರೂ ಸರಕು ಸರಿಯಾಗಿದೆ.

೨೮೬೫. ಸರಂಪಳೆ ಮಾಡು = ಏಕೆ ಚೆಲ್ಲಾಡು, ಒಂದೇ ಸಮ ಇಟ್ಟಾಡು

(ಸರಂಪಳೆ < ಸರಂಪಳಿ < ಸರಪಳಿ = ಕೊಂಡಿಗೊಂಡಿರುವ ಉದ್ದನೆಯ ಚೈನು)

ಪ್ರ : ದನಗಳಿಗೆ ಹುಲ್ಲು ಹಾಕು ಅಂದ್ರೆ, ಏಕ ಸರಂಪಳೆ ಮಾಡ್ಕೊಂಡು ಹೋದ.

೨೮೬೬. ಸರ್ಕಸ್ ಮಾಡು = ಕಸರತ್ತು ಮಾಡು; ಮನ-ಸ್ಸ-ನ್ನು ಪ್ರಸ-ನ್ನ-ಗೊ-ಳಿ-ಸ-ಲು ಯತ್ನಿ-ಸು

ಪ್ರ : ನೀನು ಎಷ್ಟೇ ಸರ್ಕಸ್ ಮಾಡಿದರೂ, ನಾನು ಒಂದು ಚಿಕ್ಕಾಸು ಕೊಡಲ್ಲ.

೨೮೬೭. ಸರಾಪು ಕುಡಿ = ಸಾರಾಯಿ ಕುಡಿ

ಪ್ರ : ಗಾದೆ – ದೀಪ ಇಲ್ಲ ಧೂಪ ಇಲ್ಲ ಬಂದೆ ನಿನ್ನ ಗುಡಿಗೆ
ಅರಾಪಿಲ್ಲ ಸರಾಪಿಲ್ಲ ಹೋಗು ನಿನ್ನ ಮನೆಗೆ

೨೮೬೮. ಸರಿಗಟ್ಟು = ಸಾಯಿಸು, ಕೊಲ್ಲು

ಪ್ರ : ಒಂದಲ್ಲ ಒಂದಿನ ನಾನೇ ಅವನ್ನ ಸರಿಗಟ್ತೀನಿ ನೋಡು

೨೮೬೯. ಸರಿಗಟ್ಟಿಕೊಳ್ಳು = ತನ್ನಂತೆ ಮಾಡಿಕೊಳ್ಳು, ರಾಜಿಯಾಗು

ಪ್ರ : ಆ ಪಕ್ಷದೋರು ಇವನನ್ನು ಸರಿಗಟ್ಟಿಕೊಂಡಿದ್ದಾರೆ ಅಂತ ಪುಕಾರು.

೨೮೭೦. ಸರಿದುಕೊಳ್ಳು = ಏರಿಕೊಳ್ಳು, ನೆಟ್ಟುಕೊಳ್ಳು

ಪ್ರ : ಮೀನಿನ ಮುಳ್ಳು ಗಂಟ್ಲಿಗೆ ಸರಿದುಕೊಂಡು ಬಿಟ್ಟು ವಿಲಿವಿಲಿ ಒದ್ದಾಡಿದೆ.

೨೮೭೧. ಸರಿದೂಗಿಸು = ನಿಭಾಯಿಸು, ಎಟುಕುವಂತೆ ಮಾಡು

ಪ್ರ :ಪಂಕ್ತಿಗೆಲ್ಲ ಅನ್ನ ಸಾರನ್ನು ಸರಿದೂಗಿಸಿದೆ.

೨೮೭೨. ಸರಿಬೆಸ ಗರಗಸ ಕೇಳದಿರು = ಇಲ್ಲಸಲ್ಲದ್ದನ್ನು ಪ್ರಶ್ನಿಸದಿರು.

(ಸರಿ = ಸಮ ಸಂಖ್ಯೆ; ಬೆಸ = ಅಸಮ ಸಂಖ್ಯೆ; ಗರ = ಗ್ರಹ. ಗರಗತಿ ಎಂಬುದು ಹಿಂದಿನ ಸರಿಬೆಸದ ಸಾದೃಶ್ಯದ ಮೇಲೆ ಗರಗಸ ಆಗಿದೆ)

ಪ್ರ : ನೀನು ಸರಿಬೆಸ ಗರಗಸ ಎಲ್ಲ ಕೇಳಿದ್ರೆ, ನನಗೆ ಹೇಳೋಕೆ ಪುರಸತ್ತಿಲ್ಲ.

೨೮೭೩. ಸರೀಕರ ಮುಂದೆ ಅಗ್ಗವಾಗು = ನೆರೆಹೊರೆಯವರ ಮುಂದೆ ಮಾನ ಹೋಗು.

(ಸರೀಕರು = ನೆರೆಹೊರೆಯವರು ; ಅಗ್ಗವಾಗು = ಹಗುರವಾಗು, ಕೀಳಾಗು)

ಪ್ರ : ಸರೀಕರ ಮುಂದೆ ಅಗ್ಗವಾಗೋ ಕೆಲಸ ಮಾಡೋಕೆ ನಾನು ತಯಾರಿಲ್ಲ.

೨೮೭೪. ಸಲಕ್ಕೆ ಬರು= ಪ್ರಯೋಜನಕ್ಕೆ ಬರು, ಸಾರ್ಥಕವಾಗು

(ಸಲ < ಸೂಲು ? = ಫಲ ; ಸಲ < ಸೂಳ್ = ಸರ -ದಿ)

ಪ್ರ : ಗಾದೆ – ಸಲಕ್ಕೆ ಬರದೋರು ಸಾವಿರಾಳಿದ್ದೇನು ಫಲ?

೨೮೭೫. ಸಲಸಲಕ್ಕೂ ಬರು = ಮತ್ತೆ ಮತ್ತೆ ಬರು

(ಸಲ < ಸಾಲು = ವರ್ಷ, ಬಾರಿ, ಸರದಿ)

ಪ್ರ : ಸಲಸಲಕ್ಕೂ ಬಂದು ಸಾಲ ಕೇಳಿದರೆ ನಾನೆಲ್ಲಿಂದ ತರಲಿ?

೨೮೭೬. ಸಲಿಗೆ ಕೊಡು = ಸದರ ಕೊಡು, ಹೆಚ್ಚು ಪ್ರೀತಿ ತೋರಿಸು

ಪ್ರ : ಗಾದೆ – ಸಲಿಗೆ ಕೊಟ್ಟಿದ್ಕೆ ಮೊಲೆಗೆ ಕೈ ಹಾಕಿದ.

೨೮೭೭. ಸವಕಲು ನಾಣ್ಯವಾಗು = ಬೆಲೆ ಕಳೆದುಕೊಳ್ಳು, ಚಲಾವಣೆಯಾಗದಿರು

ಪ್ರ : ಅವನು ಸವಕಲು ನಾಣ್ಯವಾಗಿದ್ದಾನೆ, ಅವನ ಮಾತು ನಡೆಯಲ್ಲ.

೨೮೭೮. ಸವರಿ ಹಾಕು = ಕೊಚ್ಚಿ ಹಾಕು, ತುಂಡರಿಸು

(ಸವರು = ಕೊಚ್ಚು)

ಪ್ರ : ಮೊದಲು ಗಿಡಗೆಂಟೆ ಎಲ್ಲ ಸವರಿ ಹಾಕು, ಆಮೇಲೆ ನೇಗಿಲು ಕಟ್ಟಿ ಉಳು.

೨೮೭೯. ಸವರಿಸಿಕೊಂಡು ಹೋಗು = ಸರಿದೂಗಿಸಿಕೊಂಡು ಹೋಗು, ಎಲ್ಲವನ್ನು ಸಹಿಸಿಕೊಂಡು ಹೋಗು

(ಸವ-ರಿ-ಸು <ಸಂವ-ರಿ-ಸು = ಒಟ್ಟು-ಗೂ-ಡಿ-ಸು, ಹಿಂ-ಡಾ-ಗಿ ಕರೆ-ದೊ-ಯ್ಯಿ)

ಪ್ರ : ಎತ್ತು ಏರಿಗೆ ಕೋಣ ನೀರಿಗೆ ಅಂತ ಒಬ್ಬೊಬ್ಬರೂ ಒಂದೊಂದು ದಿಕ್ಕಿಗೆ ಮುಖ ಮಾಡಿದರೆ ಇವರನ್ನೆಲ್ಲ ಸವರಿಸಿಕೊಂಡು ಹೋಗೋಕೆ ನನ್ನ ಕೈಯಿಂದ ಆಗಲ್ಲ.

೨೮೮೦. ಸವೆದು ಹೋಗು = ಬಡವಾಗು

(ಸವೆ < ಸಮೆ = ನವೆ, ಕ್ಷೀಣಿಸು)

ಪ್ರ : ಸವೆದು ಹೋಗಿ ತಟ್ಟಾಡ್ತಾ ಇದ್ದಾನೆ, ನೀನೇ ಅನ್ನೋರು ಇಲ್ಲ.

೨೮೮೧. ಸವೆದು ಸಣಬಾಗು = ನವೆದು ನೂಲಾಗು, ಜೂಲುಜುಲಾಗು

(ಸಣಬು = ಹಗ್ಗ ಹೊಸೆಯಲು ಬಳಸುವ ಕತ್ತಾಳೆ, ಪುಂಡಿಕಡ್ಡಿ, ತೆಂಗಿನಕಾಯಿಯ ನಾರು, ಜುಂಜು)

ಪ್ರ : ಸವೆದು ಸಣಬಾಗಿ ಮಸಾಣಕ್ಕೆ ಹೋಗೋ ಹೆಣವಾಗಿದ್ದಾನೆ.

೨೮೮೨. ಸವಾರಿ ಮಾಡು = ಯಜಮಾನಿಕೆ ನಡೆಸು, ಹುಕುಂ ಚಲಾಯಿಸು

ವಾಹನ ಸೌಕರ್ಯಕ್ಕಿಂತ ಮೊದಲು ಪ್ರಾಣಿಗಳ ಮೇಲೆ ಕುಳಿತು ಪಯಣಿಸುವ ರೂಢಿ ಸಮಾದಲ್ಲಿತ್ತು. ಕತ್ತೆ, ಕುದುರೆ, ಎಮ್ಮೆ, ಎತ್ತುಗಳ ಮೇಲೆ ಸಾಮಾನುಗಳ ಹೇರನ್ನು ಹಾಕಿ ಸಾಗಿಸುತ್ತಿದ್ದುದೇ ಅಲ್ಲದೆ, ಮನುಷ್ಯರು ಸವಾರಿ ಮಾಡುವುದಕ್ಕೂ ಬಳಸುತ್ತಿದ್ದರು. ದೇವಾನುದೇವತೆಗಳ ವಾಹನಗಳು ಪ್ರಾಣಿ ಪಕ್ಷಿಗಳೇ ಎಂಬುದನ್ನು ಇಲ್ಲಿ ನೆನೆದುಕೊಳ್ಳಬಹುದು. ಸವಾರಿ ಮಾಡುವವರ ಕೈಯಲ್ಲಿ ಹಗ್ಗ, ಲಗಾಮು ಇರುವುದರಿಂದ ಅವರು ಹೇಳಿದಂತೆ ಪ್ರಾಣಿಗಳು ಕೇಳಬೇಕು. ಹಾಗೆಯೇ ಧನಿಕರು ಬಡವರ ಮೇಲೆ ಸವಾರಿ ಮಾಡುತ್ತಾ ತಮ್ಮ ಅಂಕೆಯಲ್ಲಿಟ್ಟುಕೊಂಡು ಬರುತ್ತಿರುವ ಸಾಮಾಜಿಕ ಸ್ಥಿತಿಯನ್ನೂ ಇದು ಸೂಚಿಸುತ್ತದೆ.

ಪ್ರ : ಇದುವರೆಗೂ ಬೇರೆಯವರಿಂದ ಸವಾರಿ ಮಾಡಿಸಿಕೊಂಡು ಸಾಕಾಗಿದೆ, ಈಗ ನಾವು ಅವರ ಮೇಲೆ ಸವಾರಿ ಮಾಡಬೇಕು, ತಪ್ಪಿದರೆ ಅವರು ನಮ್ಮ ಮೇಲೆ ಸವಾರಿ ಮಾಡೋಕೆ ಬೆನ್ನು ಕೊಡಬಾರ್ದು.

೨೮೮೩. ಸಸಾರ ಮಾಡು = ಅಲಕ್ಷ್ಯ ಮಾಡು

(ಸಸಾರ < ತಾತ್ಸಾರ = ಅಲಕ್ಷ್ಯ, ಅಸಡ್ಡೆ)

ಪ್ರ : ಗಾದೆ – ಹೆಂಡ್ರನ್ನ ಸಸಾರ ಮಾಡಿದ್ರೆ ಸಂಸಾರ ನಿಸ್ಸಾರವಾಗ್ತದೆ.

೨೮೮೪. ಸಾಕಿ ಗ್ವಾಕೆ ಮುರಿದದ್ದು ಸಾಕು = ಬೆಳೆಸಿ ಉದ್ಧಾರ ಮಾಡಿದ್ದು ಸಾಕು

(ಗ್ವಾಕೆ < ಗ್ವಾಂಕೆ < ಗೊಂಕೆ = ಗಂಟಲು, ಧ್ವನಿಪೆಟ್ಟಿಗೆ; ಗ್ವಾಕೆ ಮುರಿ = ಗೋಮಾಳೆ ಮುರಿ, ಧ್ವನಿ ಬದಲಾಗು ) ಮಕ್ಕಳು ಹರೆಯಕ್ಕೆ ಬಂದಾಗ ಅವರ ಗೋಮಾಳೆ ಮುರಿಯುತ್ತದೆ ಅಂದರೆ ಧ್ವನಿ ಬದಲಾಗುತ್ತದೆ. ಗೋಮಾಳೆಗೆ ಧ್ವನಿ ಪೆಟ್ಟಿಗೆ ಎಂದೂ ಕರೆಯುತ್ತಾರೆ. ಗೋಮಾಳೆ ಮುರಿದು ಧ್ವನಿ ಬದಲಾಗುವವರೆಗೂ ಸಾಕಿದವರನ್ನು, ಮಕ್ಕಳು ‘ಕತ್ತು ಮುರಿದದ್ದು, ಹಿಸುಕಿದ್ದು ಸಾಕು’ ಎಂದು ಧಟ್ಟಿಸಿ ಕೇಳುವಲ್ಲಿ ಕೃತಘ್ನತೆಯ ಧ್ವನಿ ಇರುವುದನ್ನು ಕಾಣುತ್ತೇವೆ.

ಪ್ರ : ನೀನು ಸಾಕಿ ಗ್ವಾಕೆ ಮುರಿದದ್ದು ಸಾಕು, ನನ್ನ ಪಾಲು ನನಗೆ ಬಿಸಾಕು, ನಾನು ಬೇರೆ ಇರ್ತೀನಿ ಎಂದ ಮಗ.

೨೮೮೫. ಸಾಕಿದ ನಾಯಿ ಕಾಲು ಕಚ್ಚು = ಸಲಹಿದವರಿಗೇ ಬೆನ್ನಿಗೆ ಇರಿ, ಎರಡೂ ಬಗೆ

ಮುದ್ದಿನಿಂದ ಸಾಕಿದ ನಾಯಿಯೇ ಒಡೆಯನ ಕಾಲು ಕಚ್ಚುವಂತೆ ಪೋಷಣೆ ಪಾಲನೆ ಮಾಡಿಸಿಕೊಂಡ ಮಕ್ಕಳೇ ವ್ಯಕ್ತಿಗಳೇ ಸಾಕಿ ಸಲಹಿದ ಹಿರಿಯರಿಗೆ ಎರಡು ಬಗೆಯುವುದನ್ನು ಈ ನುಡಿಗಟ್ಟು ಸೂಚಿಸುತ್ತದೆ.

ಪ್ರ : ಸಾಕಿದ ನಾಯಿ ಕಾಲು ಕಚ್ಚಿತು ಅನ್ನೋಂಗೆ ಮಾಡಿದೆಯಲ್ಲೋ ಚಂಡಾಲ.

೨೮೮೬. ಸಾಕು ಅನ್ನಿಸು = ತೃಪ್ತಿಯಾಗಿಸು

ಪ್ರ : ಗಾದೆ – ಅನ್ನ ಇಕ್ಕಿ ಸಾಕು ಅನ್ನಿಸಬಹುದು

ಹಣ ಕೊಟ್ಟು ಸಾಕು ಅನ್ನಿಸೋಕಾಗಲ್ಲ

೨೮೮೭. ಸಾಕು ಸಾಕು ಅನ್ನಿಸು = ಹೆಣಗಿಸು, ಬೇಸರ ತರಿಸು

ಪ್ರ : ಬೆಳಿಗ್ಗೆಯಿಂದ ಬೈರಿಗೆ ಕೊರೆದು ಸಾಕು ಸಾಕು ಇವನ ಸಾವಾಸ ಅನ್ನಿಸಿಬಿಟ್ಟ.

೨೮೮೮. ಸಾಕು ತೆಗೆದುಕೊಳ್ಳು = ದತ್ತು ತೆಗೆದುಕೊಳ್ಳು

ಮಕ್ಕಳಿಲ್ಲದವರು ಸಂಬಂಧಿಕರ ಮಕ್ಕಳನ್ನೋ ಅಥವಾ ಬೇರೆಯವರ ಮಕ್ಕಳನ್ನೋ ದತ್ತು ತೆಗೆದುಕೊಳ್ಳುವ ಪದ್ಧತಿ ನಮ್ಮ ಜನಪದರು ‘ಸಾಕುತಗೊಂಡಿದ್ದೇವೆ’ ಎನ್ನುತ್ತಾರೆ. ಇದರಿಂದಲೇ ಸಾಕು ತಾಯಿ, ಸಾಕು ತಂದೆ ಎಂಬ ಪದಗಳ ಆವಿರ್ಭಾವ ಆಗಿರುವುದು. ಉದಾಹರಣೆಗೆ ಕೃಷ್ಣನ ಹೆತ್ತತಾಯಿ ದೇವಕಿಯಾದರೆ, ಸಾಕುತಾಯಿ ಯಶೋಧೆಯಾಗಿದ್ದಾಳೆ.

ಪ್ರ : ನಮಗೆ ಮಕ್ಕಳಿಲ್ಲದ್ದಕ್ಕೆ ನಮ್ಮ ಭಾವನ ಮಗನ್ನ ಸಾಕು ತಗೊಂಡಿದ್ದೇವೆ.

೨೮೮೯. ಸಾಕು ಮಾಡು = ಕೊನೆ ಮಾಡು, ನಿಲ್ಲಿಸು

ಪ್ರ : ನಿನ್ನ ಮೇಕು ತೋರಿಸಬ್ಯಾಡ, ಸಾಕು ಮಾಡು.

೨೯೦೦. ಸಾಗಿ ಹೋಗು = ತೆಳ್ಳಗಾಗು, ಕೃಶವಾಗು

ಪ್ರ : ಅವನ ತೀರ ಸಾಗಿ ಹೋಗಿದ್ದಾನೆ, ಸಾಯೋರ ಹಾಗೆ.

೨೯೦೧. ಸಾಗು ಹಾಕು = ಕಳಿಸಿಕೊಡು

ಮನೆಗೆ ಬಂದ ನೆಂಟರನ್ನು, ಅತಿಥಿ ಅಭ್ಯಾಗತರನ್ನು ಜನಪದರು ಮನೆಯಲ್ಲಿ ಇದ್ದುಕೊಂಡೇ ಹೋಗಿ ಬನ್ನಿ ಎಂದು ಹೇಳವುದಿಲ್ಲ. ಅವರ ಜೊತೆ ಸಾಕಷ್ಟ ದೂರ ಹೋಗಿ, ಅಂದರೆ ನೀನು ಅಥವಾ ನೆರಳು ಇರುವ ಸ್ಥಳದವ-ರೆ-ಗೂ ಹೋಗಿ ‘ಹೋಗಿ ಬನ್ನಿ’ ಎಂದು ಕಳಿಸಿಕೊಟ್ಟು ಬರುತ್ತಾರೆ. ಇದು ಜನಪದ ಸಂಸ್ಕೃತಿಯ ಪ್ರತೀಕ. ಆದರೆ ಇಂದು ನಾಗರಿಕತೆಯ ನಾಗಾಲೋಟದಲ್ಲಿ ಮೈಮರೆತ ವಿದ್ಯಾವಂತ ಜನರು ಅತಿಥಿ ಅಭ್ಯಾಗತರು ಹೊರಟು ನಿಂತಾಗ, ಬಾಗಿಲವರೆಗಾದರೂ ಎದ್ದು ಬರದೆ ಕುಳಿತ ಕುರ್ಚಿಯಲ್ಲೇ ಹೋಗಿ ಬನ್ನಿ ಎಂಬಂತೆ ತಲೆಯಾಡಿಸಿಬಿಡುತ್ತಾರೆ. ಆದರೆ ‘ಸಾಕು ಹಾಕು’ ಎಂಬ ನುಡಿಗಟ್ಟು ನಂಟರಿಷ್ಟರು ಅತಿಥಿ ಅಭ್ಯಾಗತರನ್ನು ಮರ್ಯಾದೆಯಿಂದ ನಡೆಸಿಕೊಳ್ಳುವ ನಮ್ಮ ಜನಪದ ಸಂಸ್ಕೃತಿಗೆ ತೋರ್ಬೆರಳಾಗಿದೆ.

ಪ್ರ : ಈಗ ತಾನೇ ಅವರ್ನ ಕೆರೆಕೋಡಿವರೆಗೂ ಸಾಗು ಹಾಕ್ಕೊಂಡು ಹೋಗಿ ಕಳಿಸಿ ಬಂದೆವು.

೨೯೦೨. ಸಾಗು ಹುಯ್ = ಉದ್ದ ಮಾಡು, ಚಮ್ಮಟಿಗೆಯಿಂದ ಚಚ್ಚಿ ತೆಳುವಾಗಿಸು.

ಕಮ್ಮಾರರು ದಪ್ಪ ಕಬ್ಬಿಣದ ತುಂಡನ್ನು ಕುಲಮೆಯ ಒಲೆಯಲ್ಲಿಟ್ಟು ತಿದಿಯೊತ್ತಿ ಕೆಂಪಾಳ ಕಾಯಿಸಿ, ಅದನ್ನು ಇಕ್ಕುಳದಿಂದ ಹಿಡಿದೆತ್ತಿ ಅಡಿಗಲ್ಲಿನ ಮೇಲಿಟ್ಟು ಚಮ್ಮಟಿಗೆಯಿಂದ ಚಚ್ಚುತ್ತಾ ಅದನ್ನು ತೆಳುವಾಗಿಸುತ್ತಾನೆ. ಅದು ತೆಳುವಾಗಬೇಕಾದ ದೆಸೆಯಿಂದ ಉದ್ದವಾಗಿ ಸಾಗಿ ಹೋಗುತ್ತದೆ. ಮೇಲೆ ಬಂದಿರುವ “ಸಾಗಿ ಹೋಗು = ತೆಳ್ಳಗಾಗು” ಎಂಬ ನುಡಿಗಟ್ಟಿಗೆ ಕಮ್ಮಾರಸಾಲೆಯ ಕರ್ಮಾಚರಣೆಯ ಹಿನ್ನೆಲೆಯಿದೆ ಎನ್ನಬಹುದು.

ಪ್ರ : ಸೀದ ಹಂದಿಯಂತಿದ್ದ ಹುಡುಗ ಸಾಗು ಹುಯ್ದಂತಾಗಿದ್ದಾನೆ, ಸವೆದು ಹೋಗಿದ್ದಾನೆ.

೨೯೦೩. ಸಾಟಿ ಯಾಪಾರ ಮಾಡು = ವಸ್ತು ಅಥವಾ ಪ್ರಾಣಿಗಳ ವಿನಿಮಯದ ವ್ಯವಹಾರ ಮಾಡು.

(ಸಾಟಿ = ವಿನಿಮಯ ; ಯಾಪಾರ < ವ್ಯಾಪಾರ = ವ್ಯವಹಾರ)

ಪ್ರ : ಸಾಟಿ ಯಾಪಾರ ಮಾಡಿ ಕೋಟಿಗಟ್ಟಲೆ ಗಳಿಸಿದ.

೨೯೦೪. ಸಾಡೇಸಾತಾಗು = ಏಳುವರೆ ತಿಂಗಳಿಗೆ ಹುಟ್ಟಿದ ಅಶಕ್ತನಾಗು

(ಸಾಡೇ ಸಾತ್ = ಏಳುವರೆ (ತಿಂಗಳು) )

ಪ್ರ : ಸಾಡೇಸಾತ್ ಗಂಡನನ್ನು ಕಟ್ಕೊಂಡು ಪಡಬಾರದ ಪಾಡು ಪಡ್ತಾ ಅವಳೆ.

೨೯೦೫. ಸಾಣೆ ಹಿಡಿ = ಹರಿತಗೊಳಿಸು, ಚೂಪುಗೊಳಿಸು

(ಸಾಣೆ < ಶಾಣ = ಸಾಣೆ ಕಲ್ಲು ) ತಿರುಗುವ ಸಾಣೆ ಕಲ್ಲಿಗೆ ಚಾಕುವಿನ, ಚೂರಿಯ ಬಾಯನ್ನು ಹಿಡಿದು ಚೂಪುಗೊಳಿಸುವ ವಿಧಾನ ಈ ನುಡಿಗಟ್ಟಿಗೆ ಹಿನ್ನೆಲೆ

ಪ್ರ : ಚಾಕು ಚೂರಿಗಳಿಗೆ ಸಾಣೆ ಹಿಡಿದು ಚೂಪು ಮಾಡುವ ಹಾಗೆಯೇ ಅನೇಕರ ಬುದ್ಧಿಗೂ ಸಾಣೆ ಹಿಡಿದು ಚೂಪುಗೊಳಿಸಬೇಕಾಗಿದೆ.

೨೯೦೬. ಸಾಧುಗೊಳಿಸು = ಪಳಗಿಸು, ಅಗಡುತನವನ್ನು ಹೋಗಲಾಡಿಸು

ಪ್ರ : ಪ್ರೀತಿಯಿಂದ ಒಬ್ಬರನ್ನು ಸಾಧುಗೊಳಿಸಬಹುದೇ ವಿನಾ ದ್ವೇಷದಿಂದ ಸಾಧ್ಯವಿಲ್ಲ.

೨೯೦೭. ಸಾನನ್ನ ಕಟ್ಕೊಂಡು ಸಾಯು = ನಾಯಿಯಂಥ ಗಂಡನನ್ನು ಕಟ್ಕೊಂಡು ಕಷ್ಟಪಡು

(ಸಾನ < ಶ್ವಾನ = ನಾಯಿ) ಸಿಕ್ಕಿದ ಹೆಣ್ಣು ನಾಯಿಗಳ ಬೆನ್ನು ಹತ್ತಿ ಮೂಸುತ್ತಾ ಹೋಗುವ ಗಂಡುನಾಯಿಗಳ ಹಾಗೆ ಸಿಕ್ಕಿದ ಹೆಂಗಸರ ಬೆನ್ನು ಹತ್ತುವ ಗಂಡನ ವರ್ತನೆಯಿಂದ ಹೆಂಡತಿಗಾಗುವ ನೋವು ಈ ನುಡಿಗಟ್ಟಿಗೆ ಮೂಲ.

ಪ್ರ : ಸಾನನ್ನ ಕಟ್ಕೊಂಡು ಸಾಯೋದು ಹಣೇಲಿ ಬರೆದಿರುವಾಗ, ನನ್ನ ಅನ್ನ ಹುಟ್ಟಿ-ಸಿ-ಕೊಂ-ಡು ತಿಂತೇ-ನೆ.

೨೯೦೮. ಸಾಮೀಲಾಗು = ಭಾಗಿಯಾಗು

(ಸಾಮೀಲು < ಶಾಮೀಲು (ಹಿಂ) = ಭಾಗಿ)

ಪ್ರ : ಬೇರೆಯವರು ಸಾಮೀಲಾಗದೆ ಅವನೊಬ್ಬನೇ ಇಂಥ ಕೆಲಸಕ್ಕೆ ಕೈ ಹಾಕ್ತಿರಲಿಲ್ಲ.

೨೯೦೯. ಸಾಯಿಸಿ ಬಿಡು = ಹಿಂಸಿಸು, ಹೆಚ್ಚು ಸತಾಯಿಸು

ಪ್ರ : ಹೊತಾರೆಯಿಂದ ಕೊಡು ಕೊಡು ಅಂತ ಸಾಯಿಸಿಬಿಟ್ಟ.

೨೯೧೦. ಸಾಯಬೀಳ ಹೊಡಿ = ಸಕತ್ತು ಹೊಡಿ, ಹಣ್ಗಾಯಿ ನೀರ್ಗಾಯಿ ಮಾಡು

ಪ್ರ : ಸಾಯ ಬೀಳ ಹೊಡೆದು ಕಳಿಸಿದ್ದೀನಿ, ಇನ್ನು ಆ ಬಗ್ಗೆ ಬಾಯಿಬಿಟ್ಟರೆ ಕೇಳು

೨೯೧೧. ಸಾರವೇಸಾಗು = ಪಳಗು, ರೂಢಿಯಾಗು

(ಸಾರವೇಸು < Service = ಅನುಭವದಿಂದ ಪಳಗಿರು)

ಪ್ರ : ಕದ್ದು ಮೇದು ಸಾರ್ವೇಸಾಗಿರುವಾಗ ಒದ್ದರೆ ಸುಮ್ನಿರ್ತದ?

೨೯೧೨. ಸಾರಾಸಗಟು ನೀರಸ ತಿಗಟು ಎನ್ನದಿರು = ಅನಾಮತ್ತು ಅಪ್ರಯೋಜಕ ಎನ್ನದಿರು

(ಸಾರಾಸಗಟು = ಅನಾಮತ್ತು, ಪೂರ್ಣ; ತಿಗಟು > ತಿಗುಡು = ಸಿಪ್ಪೆ, ತೊಗಟೆ)

ಪ್ರ : ಯಾವುದನ್ನೇ ಆಗಲಿ ಸಾರಾಸಗಟು ನೀರಸ ತಿಗುಟು ಅನ್ನೋದು ಸ್ವಸ್ಥ ನಿಲುವಲ್ಲ.

೨೯೧೩. ಸಾರಿಸಿ ರಂಗೋಲೆ ಇಡು = ಏನೂ ಇಲ್ಲದಂತೆ ಮಾಡು, ನುಂಗಿ ನುಣ್ಣಗೆ ಮಾಡು

ಪ್ರ : ಗಯ್ಯಾಳಿ ಸೊಸೆ ಅತ್ತೆ ಮನೇನ ಸಾರಿಸಿ ರಂಗೋಲಿ ಇಕ್ಕಿಬಿಟ್ಳು.

೨೯೧೪. ಸಾರುತ್ತಾ ಹೋಗು = ಡಂಗುರ ಹೊಡೆಯುತ್ತಾ ಹೋಗು

ಪ್ರ : ಕುಟುಂಬದ ಮರ್ಯಾದೆ ಏನಾಗ್ತದೆ ಅಂತ ಯೋಚಿಸದೆ, ಲಗಾಡಿ ಹೆಂಗ್ಸು ಊರು ತುಂಬ ಸಾರುತ್ತಾ ಹೋದಳು

೨೯೧೫. ಸಾರೋಟು ಹೋಗು = ನಾಗಾಲೋಟದಲ್ಲಿ ಹೋಗು

(ಸಾರೋಟು < Chariot?)

ಪ್ರ : ನಾನೇನೂ ಮೆಲ್ಲಮೆಲ್ಲನೆ ಹೋಗಲಿಲ್ಲ, ಒಂದೇ ಉಸುರಿಗೆ ಸಾರೋಟು ಹೋದ್ಹಂಗೆ ಹೋದೆ.

೨೯೧೬. ಸಾಲಸೋಲ ಮಾಡಿ ಸಾಕು = ಭಂಗಬಡತನದಲ್ಲಿ ಕಷ್ಟಪಟ್ಟು ಬೆಳಸು

(ಸಾಲಸೋಲ < ಸಾಲಶೂಲ ಅಥವಾ ಸಾಲಸೋಲಹ್ = ಹಲವು ಹತ್ತು ಹದಿ-ನಾ-ರು ಸಾಲ ಮಾಡಿ)

ಪ್ರ : ಸಾಲಸೋಲ ಮಾಡಿ ಸಾಕಿದ್ದಕ್ಕೆ ನನ್ಮ-ಗ ಇಕ್ಕಿದ ನನಗೆ ಕೋಲ!

೨೯೧೭. ಸಾಲುಗಟ್ಟಿ ನಿಲ್ಲು = ಅಧಿಕಸಂಖ್ಯೆಯ ಜನ ನೆರೆದಿರು.

ಪ್ರ : ನನಗೆ ಬೇಕು ತನಗೆ ಬೇಕು ಅಂತ ಜನ ಸಾಲುಗಟ್ಟಿ ನಿಂತಿದ್ದರು

೨೯೧೮. ಸಾಲು ನೆಟ್ಟಗಿಲ್ಲದಿರು = ವಂಶ ಸರಿಯಿಲ್ಲದಿರು

(ಸಾಲು = ವಂಶ, ತಳಿ)

ಪ್ರ : ಗಾದೆ – ಸಾಲು ನೆಟ್ಟಗಿದ್ರೆ ಸೊಲ್ಲು ನೆಟ್ಟಗಿರ್ತದೆ.

೨೯೧೯. ಸಾಸ ಮಾಡು = ಶಕ್ತಿ ಮೀರಿ ಪ್ರಯತ್ನಿಸು

(ಸಾಸ < ಸಾಹಸ = ಹೋರಾಟ)

ಪ್ರ : ಮಗಳ ಮದುವೆ ನೀಸಬೇಕಾದ್ರೆ ಅಷ್ಟಿಷ್ಟು ಸಾಸ ಮಾಡಲಿಲ್ಲ.

೨೯೨೦. ಸಾಸೇವಿಕ್ಕು = ಆಶೀರ್ವದಿಸು, ತಲೆಯ ಮೇಲೆ ಅಕ್ಷತೆ ಹಾಕು

(ಸಾಸೇವು < ಸೇಸೇವು < ಸೇಸೆ < ಶೇಷ = ಅಕ್ಷತೆ (ಅರಿಶಿನ ಬೆರಸಿದ್ದು) ಸಾಮಾನ್ಯವಾಗಿ ಮದುವೆಯಲ್ಲಿ ಮುತ್ತೈದೆಯರು ಹೆಣ್ಣು ಗಂಡುಗಳಿಗೆ ಸಾಸೇವು ಇಕ್ಕುವ ಶಾಸ್ತ್ರ ಉಂಟು. ಎರಡು ಕೈಗಳಲ್ಲೂ ಅಕ್ಷತೆಯನ್ನು ತೆಗೆದುಕೊಂಡು ಮಂಡಿಯ ಮೇಲೆ, ಭುಜದ ಮೇಲೆ, ಕೊನೆಗೆ ತಲೆಯ ಮೇಲೆ ಅಕ್ಷತೆ ಹಾಕಿದಾಗ ಸಾಸೇವು ಇಕ್ಕುವ ಶಾಸ್ತ್ರ ಪೂರ್ಣವಾದಂತೆ. ತಲೆಯನ್ನು ಬಿಟ್ಟರೆ ಅದು ಸಾಸೇವಿಕ್ಕುವ ಶಾಸ್ತ್ರ ಎನ್ನಿಸಿಕೊಳ್ಳುವುದಿಲ್ಲ.

ಪ್ರ : ಗಾದೆ – ತಲೆ ಬಿಟ್ಟು ಸಾಸೇವಿಕ್ತಾರ?

೨೯೨೧. ಸ್ಯಾಟಸಿಂಗ್ರಿ ತೋರಿಸು = ಇಲ್ಲವೆನ್ನು, ಕೈಯೆತ್ತು

(ಸ್ಯಾಟ = ಶಪ್ಪ, ಮರ್ಮಾಂಗದ ಕೂದಲು ; ಸಿಂಗ್ರಿ < ಸಿಂಗರಿ < ಸಿಂಗಾರ = ಅಡಕೆಮರದ ಹೊಂಬಾಳೆ ; ಹೊಂಬಾಳೆ ಮರ್ಮಾಂಗದ ಕೂದಲ ಮುಸುಕಿಗೆ ಸಂಕೇತವಾಗಿದೆ)

ಪ್ರ : ಸಾಲದ ಹಣ ಕೇಳಿದ್ರೆ ಸ್ಯಾಟ ಸಿಂಗ್ರಿ ತೋರಿಸಿದ.

೨೯೨೨. ಸ್ಯಾನೆ ಹೆಚ್ಚಿಕೊಳ್ಳು = ಹೆಚ್ಚು ಅಹಂಕಾರ ಪಡು, ತನಗೆ ಎದುರಿಲ್ಲವೆಂಬ ಠೇಂಕಾರ ತೋರು

(ಸ್ಯಾನೆ < ಶ್ಯಾನೆ = ಬಹಳ; ಹೆಚ್ಚಿಕೊಳ್ಳು = ಮಿತಿಮೀರು)

ಪ್ರ : ಸ್ಯಾನೆ ಹೆಚ್ಚಿಕೊಂಡ್ರೆ ಅದಕ್ಕೆ ತಕ್ಕ ಬ್ಯಾನೆ ಅನುಭವಿಸ್ತಾನೆ.

೨೯೨೩. ಸ್ಯಾಪೇಲಿ ಸುತ್ಕೊಂಡು ಹೋಗು = ಮರಣ ಹೊಂದು

(ಸ್ಯಾಪೆ < ಚಾಪೆ = ಈಚಲುಗರಿಯಿಂದ ಹೆಣೆದ ದೊಡ್ಡದಾದ ಮಂದಲಿಕೆ)

ಮದುವೆಯಾದವರು ಸತ್ತರೆ ಚಟ್ಟದ ಮೇಲೆ ಕೊಂಡು ಹೋಗಿ ಹೂಳುತ್ತಾರೆ, ಇಲ್ಲವೆ ಸುಡುತ್ತಾರೆ. ಆದರೆ ಮದುವೆಯಾಗದವರು ಸತ್ತರೆ ಅಂಥವರನ್ನು ಚಟ್ಟದ ಮೇಲೆ ಕೊಂಡೊಯ್ಯುವುದಿಲ್ಲ. ಚಾಪೆಯಲ್ಲಿ ಸುತ್ತಿಕೊಂಡು ಹೋಗಿ ಮಣ್ಣುಮಾಡಿ ಬರುತ್ತಾರೆ. ಆದ್ದರಿಂದ ಈ ನುಡಿಗಟ್ಟು ಮದುವೆಯಾಗುವ ಮೊದಲೇ ನಿನ್ನ ಮಕ್ಕಳು ಸಾಯಲಿ ಎಂಬ ಶಾಪರೂಪದಲ್ಲಿದೆ.

ಪ್ರ : ನಿನ್ನ ಮಕ್ಕಳಿಗೆ ಆಪತ್ತು ಬಂದ ಸ್ಯಾಪೇಲಿ ಸುತ್ಕೊಂಡು ಹೋಗದಿದ್ರೆ ಕೇಳೆ, ನನ್ನದು ಮಚ್ಚನಾಲಗೆ.

೨೯೨೪. ಸ್ಯಾರೆಗಣ್ಣಲ್ಲಿ ಹೀರು = ಕಾಮತೃಷೆಯಿಂದ ನೆಟ್ಟಕಣ್ಣಲ್ಲಿ ನೋಡು

(ಸ್ಯಾರೆ < ಸೇರೆ = ಬೊಗಸೆಯಲ್ಲಿ ಅರ್ಧ, ಅಂಗೈಯಗಲ)

ಪ್ರ : ಸ್ಯಾರೆಗಣ್ಣಲ್ಲಿ ಹೀರೋ ಹಂಗೆ ಒಂದೇ ಸಮ ನೋಡಿದ, ನಾನು ಕ್ಯಾರೆ ಅನ್ನದಂಗೆ ಕ್ಯಾಕರಿಸಿ ಉಗಿದೆ.

೨೯೨೫. ಸ್ವಾಟೆ ತಿವಿ = ಮೂತಿಗೆಟ್ಟು

(ಸ್ವಾಟೆ < ಸೋಟೆ = ಕಟವಾಯಿ, ಕೆನ್ನೆ)

ಪ್ರ : ಗಾದೆ – ತೀಟೆ ತೀರಿದ ಮೇಲೆ ಸ್ವಾಟೆ ತಿವಿದ.

೨೯೨೬. ಸಿಕ್ಕಾಪಟ್ಟೆ ರೇಗು = ಹೆಚ್ಚು ಸಿಟ್ಟುಗೊಳ್ಳು, ಹಲವಾರು ನೆಪಗಳನ್ನೆತ್ತಿ ಕೋಪಕಾರು

(ಸಿಕ್ಕಾಪಟ್ಟೆ < ಸಿಕ್ಕಾಬಟ್ಟೆ = ಯಾವ ದಾರಿ ಸಿಕ್ಕಿದರೆ ಆ ದಾರಿಯಲ್ಲಿ ಅಥವಾ ಯಾವ ನೆಪ ಸಿಕ್ಕಿದರೆ ಆ ಮೂಲಕ ಎಂದರ್ಥ. ‘ಕಂಡಾಬಟ್ಟೆ ರೇಗು’ ಎಂಬ ನುಗಿಗಟ್ಟೂ ಇದೇ ಅರ್ಥವನ್ನೊಳಗೊಂಡಿದೆ)

ಪ್ರ :ಮೈದುಂಬಿದವನ ಹಾಗೆ ಸಿಕ್ಕಾಪಟ್ಟೆ ರೇಗಾಡಿ, ಕಂಡಾಬಟ್ಟೆ ಕೂಗಾಡಿ ಬುಸುಗರೀತಾ ಕೂತವ್ನೆ, ಈಗ ಹಂಗಲ್ಲ ಹಿಂಗೆ ಅಂತ ಹೇಳೋಕೆ ಹೋಗಬ್ಯಾಡ.

೨೯೨೭. ಸಿಕ್ಕಿಗೆ ಸಿಕ್ಕು = ಕಷ್ಟಕ್ಕೆ ತುತ್ತಾಗಿ ಒದ್ದಾಡು

(ಸಿಕ್ಕು = ಗೋಜಲು)

ಪ್ರ : ನಾನೇ ಸಿಕ್ಕಿಗೆ ಸಿಕ್ಕೊಂಡು ಒದ್ದಾಡ್ತಾ ಇದ್ದೀನಿ, ಬೇರೆಯವರ ಸಿಕ್ಕು ಏನು ಬಿಡಿಸಲಿ?

೨೯೨೮. ಸಿಕ್ಕಿದೋರಿಗೆ ಸೀರುಂಡೆಯಾಗು = ಬಲಾಢ್ಯರ ವಶವಾಗು, ಬಡಬಗ್ಗರಿಗೆ ಅನ್ಯಾಯವಾಗು

(ಸೀರುಂಡೆ = ಸಿಹಿ ತಿಂಡಿ) ದೇವಸ್ಥಾನಗಳಲ್ಲಿ ಅಥವಾ ಜಾತ್ರೆಗಳಲ್ಲಿ ಪ್ರಸಾದ ವಿನಿಯೋಗ ಆಗುವ ಸಂದರ್ಭದಲ್ಲಿ ಬಲಶಾಲಿಗಳು ನುಗ್ಗಿ ಪ್ರಸಾದವನ್ನು ಮೂರುನಾಲ್ಕು ಸಾರಿ ಈಸಿಕೊಂಡು ತಿಂದು ತೇಗುತ್ತಾರೆ. ಆದರೆ ಅಶಕ್ತರು ಹಾಗೆ ಆಕ್ರಮಣದಿಂದ ಮುನ್ನುಗ್ಗಿ ಈಸಿಕೊಳ್ಳಲಾಗದೆ ವಂಚಿತರಾಗುತ್ತಾರೆ. ಆದ್ದರಿಂದ ದೇವರ ಪ್ರಸಾದವಾದ ‘ಸೀರುಂಡೆ’ ಎಲ್ಲರಿಗೂ ದಕ್ಕುವುದಿಲ್ಲ. ‘ಬಲಾಢ್ಯೋ ಪೃಥಿವಿ’ ಎಂಬುದರ ಅರ್ಥವನ್ನು ಈ ನುಡಿಗಟ್ಟು ಒಳಗೊಂಡಿದೆ.

ಪ್ರ : ಬಡವನ ಆಸ್ತಿ ಸಿಕ್ಕಿದೋರಿಗೆ ಸೀರುಂಡೆ ಆಯ್ತು.