೩೨೨೦. ಹುನ್ನಾರು ಮಾಡು = ಉಪಾಯ ಮಾಡು, ತಂತ್ರ ಮಾಡು

(ಹುನ್ನಾರು = ಕುತಂತ್ರ, ಉಪಾಯ)

ಪ್ರ : ಹೊನ್ನಾರು ಹೂಡುವುದನ್ನು ತಪ್ಪಿಸುವುದಕ್ಕೆ ಹಗೆಗಳು ಹುನ್ನಾರು ಮಾಡಿದರು.

೩೨೨೧. ಹುಬ್ಬು ಗಂಟಿಕ್ಕು = ಸಿಟ್ಟುಗೊಳ್ಳು, ಅಸಮಾಧಾನಗೊಳ್ಳು

ಪ್ರ : ಗಾದೆ – ಹಬ್ಬದ ದಿವಸವೂ ಹುಬ್ಬುಗಂಟಿಕ್ಕಬೇಕ?

೩೨೨೨. ಹುಬ್ಬುಗೈಯಾಗು = ನಿರೀಕ್ಷಿಸು, ಎದುರು ನೋಡು

ಪ್ರ : ಮಗನ ಬರವಿಗಾಗಿ ಹುಬ್ಬುಗೈಯಾಗಿ ಕುಂತಿದ್ದೀನಿ

೩೨೨೩. ಹುಬ್ಬು ಹಾರಿಸು = ಕಣ್ಣು ಹೊಡೆ

ಪ್ರ : ಬೀದೀಲಿ ಹುಬ್ಬು ಹಾರಿಸಿದಾಗ ಹೋಗಿ ತಬ್ಬಿಕೊಳ್ಳೋಕಾಗ್ತದೇನು?

೩೨೨೪. ಹುಯ್ದಕ್ಕಿ ಬೇಯದಿರು = ಪರಸ್ಪರ ಆಗದಿರು

(ಹುಯ್ದಕ್ಕಿ = ಕುದಿಯುವ ಎಸರಿಗೆ ಸುರಿದ ಅಕ್ಕಿ)

ಪ್ರ : ವಾರಗಿತ್ತಿಯರಿಗೆ ಹುಯ್ದಕ್ಕಿ ಬೇಯಲ್ಲ, ಅತ್ತೆ ಏನ್ಮಾಡ್ತಾಳೆ?

೩೨೨೫. ಹುಯ್ದಾಡು = ಹೊಡೆದಾಡು

(ಹುಯ್ < ಪುಯ್ = ಹೊಡೆ)

ಪ್ರ : ಊರ ಮುಂದೆ ಇಬ್ಬರೂ ಹುಯ್ದಾಡಿದರು, ಮನೇಲಿ ಒಂದಾಗ್ತಾರ?

೩೨೨೬. ಹುಯ್ಯಲಿಕ್ಕು = ಗೋಳಾಡು

(ಹುಯ್ಯಲಿಕ್ಕು < ಪುಯ್ಯಲಿಕ್ಕು = ರೋದಿಸು, ಚೀರಿಕೊಳ್ಳು)

ಪ್ರ : ಕುಡಿದು ಬಂದ ಗಂಡ ಹೆಂಡ್ರನ್ನ ದನ ಚಚ್ಚಿದಂಗೆ ಚಚ್ಚಿದಾಗ ಮಕ್ಕಳು ಮರಿ ಹುಯ್ಯಲಿಕ್ಕಿದವು.

೩೨೨೭. ಹುಯ್ಯಲು ಸಹಿಸು = ಒತ್ತಡ ತಾಳು, ದಾಳಿ ಸಹಿಸು

(ಹುಯ್ಯಲು = ದಾಳಿ)

ಪ್ರ : ಹತ್ತಿರ ಇದ್ರೆ ನೆಂಟರಿಷ್ಟರ ಹುಯ್ಯಲು ಸಹಿಸೋಕಾಗಲ್ಲ.

೩೨೨೮. ಹುಯ್ಯಲಲ್ಲಿ ಹೋಗು = ಜಗಳದಲ್ಲಿ ಹೋಗು

(ಹುಯ್ಯಲು = ಯುದ್ಧ, ಜಗಳ)

ಪ್ರ : ಗಾದೆ – ಹಾದರದಲ್ಲಿ ಬಂದದ್ದು ಹುಯ್ಯಲಲ್ಲಿ ಹೋಯ್ತು

೩೨೨೯. ಹುಯಲೆಬ್ಬಿಸು = ಬೊಬ್ಬೆ ಹಾಕು, ಕಿರುಚಿಕೊಳ್ಳು

ಪ್ರ : ಮನೆಗೆ ಬೆಂಕಿ ಬಿತ್ತೇನೋ ಎಂಬಂತೆ ಮದುವೆ ಮನೇಲಿ ಹುಯಿಲೆಬ್ಬಿಸಿದರು

೩೨೩೦. ಹುರಿಗೊಳ್ಳು = ಶಕ್ತಿ ಹೊಂದು, ಗಟ್ಟಿಕೊಳ್ಳು

(ಹುರಿ = ಹಗ್ಗ, ಎರಡು ಸೀಳುಗಳ ಹೊಸೆತದಿಂದ ಹುರಿ ಬನಿಗೊಳ್ಳುತ್ತದೆ)

ಪ್ರ : ಅವನು ಉತ್ಸಾಹ ಹುರಿಗೊಂಡಿತು

೩೨೩೨. ಹುರ್ಬಡಕೊಂಡು ತಿನ್ನು = ಚಿತ್ರ ಹಿಂಸೆ ಕೊಡು, ಕಣ್ಣೀರಿನಲ್ಲಿ ಕೈ ತೊಳೆಸು

(ಹುರ್ಬಡಕೊಂಡು < ಹುರಿದು ಬಡಿಸಿಕೊಂಡು = ಬಾಣಲಿಯಲ್ಲಿ ಅವಲಾಗುವಂತೆ ಹುರಿದು ಅಗಲಿಗೆ ಸುರಿದುಕೊಂಡು ತಿನ್ನು)

ಪ್ರ : ಕಂಡೋರ ಮನೆ ಹೆಣ್ಣನ್ನು ಹಂಗೆ ಹುರ್ಬಡ್ಕೊಂಡು ತಿನ್ನಬಾರ್ದು

೩೨೩೩. ಹುರಿಯೋಡಿನಿಂದ ಒಲೆಗೆ ಬಿದ್ದಂತಾಗು = ಸಣ್ಣ ತೊಂದರೆ ತಪ್ಪಿಸಿಕೊಳ್ಳಲು ಹೋಗಿ ದೊಡ್ಡ ತೊಂದರೆಗೆ ಸಿಕ್ಕಿಕೊಳ್ಳು

ಲೋಹದ ಹುರಿಯುವ ಬಾಣಲಿ ಬರುವುದಕ್ಕಿಂತ ಮುಂಚೆ ಹರವಿ ಅಥವಾ ಗಡಿಗೆಯ ತಳಭಾಗವನ್ನೇ ಕಾಳುಕಡಿ ಹುರಿಯಲು ಬಳಸುತ್ತಿದ್ದರು. ಅದಕ್ಕೆ ಓಡು, ಹುರಿಯೋಡು ಎಂದು ಕರೆಯುತ್ತಾರೆ.

ಪ್ರ : ನನ್ನ ಕತೆ ಹುರಿಯೋಡಿನಿಂದ ಒಲೆಗೆ ಬಿದ್ದಂತಾಯ್ತು, ಅವನು ಬೇಕು ಇವನು ಬೇಡ.

೩೨೩೪. ಹುರಿದ ಹುಳ್ಳಿಕಾಳಿನಂತಿರು = ದುಂಡುದುಂಡಗಿರು, ಮೈಕೈ ತುಂಬಿಕೊಂಡಿರು

ಪ್ರ : ಅವರ ಹುಡುಗ ಒಳ್ಳೆ ಹುರಿದ ಹುಳ್ಳಿಕಾಳಿನಂತೆ ದುಂಡುದುಂಡುಗವನೆ.

೩೨೩೫. ಹುರುಕು ಹತ್ತಿದಂತಾಡು = ನವೆ ಬಂದವನಂತಾಡು

(ಹುರುಕು = ನವೆ, ತೀಟೆ, ಚರ್ಮರೋಗ)

ಪ್ರ : ಹುರುಕು ಹತ್ತಿದೋನಂತೆ ಮೈಕೈ ಯಾಕೆ ಪರಚಿಕೊಳ್ತಿ?

೩೨೩೬. ಹುರುಳಿರು = ಸತ್ತ್ವ ಇರು

(ಹುರುಳು = ತಿರುಳು, ಸಾರ)

ಪ್ರ : ಹುರುಳಿಲ್ಲದ ಮುರುವನನ್ನು ಕಟ್ಕೊಂಡು ನಾನೇನ್ಮಾಡಲಿ?

೩೨೩೭. ಹುಲಿಮೀಸೆ ಹಿಡಿದು ಉಯ್ಯಾಲೆಯಾಡು = ಸಾವಿನೊಂದಿಗೆ ಸರಸವಾಡು

ಪ್ರ : ಕೊಂಚ ತಿಳಿವಳಿಕೆ ಇದ್ದೋರಾದರೂ ಹುಲಿ ಮೀಸೆ ಹಿಡ್ಕೊಂಡು ಉಯ್ಯಾಲೆಯಾಡ್ತಾರ?

೩೨೩೮. ಹುಲಿವೇಷ ಹಾಕು = ಹಾರಾಡು, ನೆಗೆದಾಡು

ಪ್ರ : ನಿನ್ನ ಹುಲಿವೇಷ ಹೆಂಗಸರ ಮುಂದೆ ಹಾಕು, ನಮ್ಮುಂದೆ ಬೇಡ

೩೨೩೯. ಹುಲಿ ಹುಲ್ಲು ಮೇಯದಿರು = ಶೂರ ಶರಣಾಗದಿರು

ಪ್ರ : ಗಾದೆ – ಹುಲಿ ಬಡವಾದರೆ ಹುಲ್ಲು ಮೇಯಲ್ಲ

೩೨೪೦. ಹುಲ್ಲು ಕಡ್ಡಿ ಅಲಾಕ್ ಆಗದಿರು = ಕೊಂಚವೂ ಪೋಲಾಗದಿರು

(ಅಲಾಕ್ ಆಗು = ಪೋಲಾಗು, ಇಲ್ಲವಾಗು)

ಪ್ರ : ಅವನು ಕಾವಲಿಗಿದ್ರೆ ಒಂದು ಹುಲ್ಲುಕಡ್ಡಿ ಅಲಾಕ್ ಆಗಲ್ಲ

೩೨೪೧. ಹುಲ್ಲು ಕಡ್ಡಿಗೆ ಕಡೆಯಾಗು = ಕೀಳಾಗು, ಅಲ್ಯಕ್ಷ್ಯಕ್ಕೀಡಾಗು

ಪ್ರ : ಬೀಗರ ಕಣ್ಣಲ್ಲಿ ಒಂದು ಹುಲ್ಲು ಕಡ್ಡಿಗೆ ಕಡೆಯಾಗುವಂತೆ ಮಾಡಿಬಿಟ್ಟ

೩೨೪೨. ಹುಲ್ಲು ಕಚ್ಚಿ ನಿಲ್ಲು = ಶರಣಾಗಿ ನಿಲ್ಲು

ಪ್ರ : ಹಗೆಯಾದರೂ ಹುಲ್ಲು ಕಚ್ಚಿ ನಿಂತರೆ ಕೊಲ್ಲಬಾರದು

೩೨೪೩. ಹುಲ್ಲುಬೆಂಕಿ ನೆಚ್ಚಿ ಹುಯ್ಯಲೆಬ್ಬಿಸದಿರು = ಬೇಗ ತಣ್ಣಗಾಗುವವರನ್ನು ನಂಬಿ

ಹೋರಾಟಕ್ಕಿಳಿಯದಿರು

ಪ್ರ : ಹುಲ್ಲು ಬೆಂಕಿ ನೆಚ್ಚಿ ಹುಯ್ಯಲೆಬ್ಬಿಸೋಕೆ ಹೋದ್ರೆ ನೀನು ಕೆಡ್ತೀಯ

೩೨೪೪. ಹುಷಾರಾಗು = ಎಚ್ಚರವಾಗು

ಪ್ರ : ಮೋಸಗಾರ ಅನ್ನೋದು ಗೊತ್ತಾಗಿ ನಾನು ಹುಷಾರಾಗಿಬಿಟ್ಟೆ

೩೨೪೫. ಹುಷಾರಾದ ಮೇಲೆ ಕರೆತರು = ಗುಣವಾದ ಮೇಲೆ ಕರೆತರು

(ಹುಷಾರು = ವಾಸಿ, ಗುಣ)ಪ್ರ : ಕಾಯಿಲೆ ಹುಷಾರಾದ ಮೇಲೆ, ಆಸ್ಪತ್ರೆಯಿಂದ ಮನೆಗೆ ಕರೆತರ್ತೇವೆ.

೩೨೪೬. ಹುಳ ಬೀಳು = ಹಾಳಾಗು, ಮರಣ ಹೊಂದು

ಪ್ರ : ಎಂಥೆಂಥ ಮಾತಾಡಿದ, ಅವನ ನಾಲಗೆಗೆ ಹುಳ ಬೀಳ!

೩೨೪೭. ಹುಳ ಮುಟ್ಟು = ಹಾವು ಕಚ್ಚು

(ಹುಳ = ಹಾವು) ಜನಪದ ಜೀವನದಲ್ಲಿ ಅಮಂಗಳವಾದುದನ್ನು ಮಂಗಳದ ರೂಪದಲ್ಲಿ ಭಾವಿಸುವುದನ್ನು ಕಾಣುತ್ತೇವೆ. ಹಾವು ಕಚ್ಚಿತು ಎಂದು ಹೇಳದೆ ಹುಳ ಮು‌ಟ್ಟಿತು ಎಂದು ಹೇಳುವಲ್ಲಿ ಅದನ್ನು ಕಾಣುತ್ತೇವೆ. ಅಂದರೆ ಕೇಳಿದವರು ಗಾಬರಿಯಾಗೋದು ಬೇಡ ಎಂಬ ಆಶಯ ಇದ್ದಂತಿದೆ.

ಪ್ರ : ಹುಳ ಮುಟ್ಟಿತು ಅಂತ ಏನಾದ್ರೂ ಅಂತ್ರ ತಂತ್ರ ಕಟ್ಟಿಕೊಳ್ಳಿ, ಮೊದಲು ಮದ್ದು ಕೊಡಿಸಿ

೩೨೪೮. ಹುಳ್ಳಗಿರು = ಸಪ್ಪಗೆ ಇರು

ಪ್ರ : ಗಾದೆ – ಕಳ್ಳನ ಮನಸ್ಸು ಹುಳ್ಳಗೆ

೩೨೪೯. ಹುಳಿ ಹಿಂಡು = ವಿರಸ ಮೂಡಿಸು

ಪ್ರ : ಅಣ್ಣ ತಮ್ಮಂದಿರ ನಡುವೆ ಹುಳಿ ಹಿಂಡಿ ಆ ಮನೇನ ಹಾಳು ಮಾಡಿಬಿಟ್ಟ.

೩೨೫೦. ಹುಳಿ ಹುಯ್ದುಕೊಳ್ಳು = ಕೊಳೆ ಹಾಕು, ಶೇಖರಿಸು

(ಹುಳಿ < ಪುಳಿ = ಸಾರಿನ ಒಂದು ಬಗೆ, ಪದಾತ)

ಪ್ರ : ಇಷ್ಟೆಲ್ಲ ನೀನೇ ಇಕ್ಕೊಂಡು ಹುಳಿ ಹುಯ್ಕೊಂತೀಯ? ಬೇರೆಯವರಿಗೂ ಕೊಡು

೩೨೫೧. ಹುಳ್ಳಿ ಸಿಬರಿನಂತಿರು = ತೆಳ್ಳಗಿರು

(ಹುಳ್ಳಿ < ಹುರುಳಿ = ಒಂದು ಧಾನ್ಯವಿಶೇಷ; ಸಿಬರು = ಮರದ ಅಥವಾ ಕಡ್ಡಿಯ ಸಣ್ಣ ಸೂಜಿಯಂಥ ಚೂರು ಅಥವಾ ಹುರುಳಿಕಾಳಿನ ಮೇಲಿನ ತೆಳುವಾದ ಸಿಪ್ಪೆ)

ಪ್ರ : ಗಂಡ ಹುಳ್ಳಿ ಸಿಬರಿನಂಗವನೆ, ಹೆಂಡ್ರು ಪುಳ್ಳಿ ಮೂಟೆ ಇದ್ದಂಗವಳೆ

೩೨೫೨. ಹುಳು ಹುಪ್ಪಟೆ ಎಲ್ಲ ಮಾತಾಡು = ಚಿಳ್ಳೆಪುಳ್ಳೆಗಳೆಲ್ಲ ಮೂಗು ತೂರಿಸು

ಪ್ರ : ಸಂಬಂಧ ಪಟ್ಟ ವಿಷಯದಲ್ಲಿ ದೊಡ್ಡೋರು ಮಾತಾಡಬೇಕು, ಆದರೆ ಆ ಮನೇಲಿ ಹುಳ ಹುಪ್ಪಟೆ ಎಲ್ಲ ಮಾತಾಡ್ತಾರೆ.)

೩೨೫೩. ಹೂಗು ದಳೆದುಕೊಳ್ಳು = ಮುಳ್ಳು ಚುಚ್ಚಿಕೊಂಡು ಮುಳ್ಳು ಹಂದಿಯಂತಾಗು

(ಹೂಗು < ಊಬು = ಬಟ್ಟೆಗೆ ಚುಚ್ಚಿಕೊಳ್ಳುವ ಹಂಚಿಕಡ್ಡಿಯ ಅಥವಾ ಕರಡದ ಊಬು ; ದಳೆದುಕೊಳ್ಳು = ಹೊಲಿಗೆಯಂತೆ ಸಾಲಾಗಿ ಪೋಣಿಸಿಕೊಳ್ಳು)

ಪ್ರ : ಮಾರಾಯ, ಮೊದಲು ಬಟ್ಟೆಗೆ ದಳಕೊಂಡಿರೋ ಹೂಗು ಕಿತ್ತು ಹಾಕು

೩೨೫೪. ಹ್ಞೂಗುಟ್ಟು = ಹ್ಞುಂ ಎನ್ನು, ಗಮನವಿಟ್ಟು ಕೇಳುತ್ತಿರುವುದಕ್ಕೆ ಸಾಕ್ಷಿಯೊದಗಿಸು

ಪ್ರ : ಗಾದೆ – ಕತೆ ಹೇಳೋಕೆ ಹೂಗುಟ್ಟೋರಿರಬೇಕು

ನೆಟ್ಟಗೆ ಬಾಳೋಕೆ ಛೀಗುಟ್ಟೋರಿರಬೇಕು

೩೨೫೫. ಹೂಟ ಹೂಡು = ತಂತ್ರ ಮಾಡು

(ಹೂಟ = ಹುನ್ನಾರು, ತಂತ್ರ)

ಪ್ರ : ಅವರು ಹೂಡಿದ ಹೂಟವನ್ನು ಹುಡಿ ಮಾಡಿ, ದಾಟಿ ನಿಲ್ಲೋ ಶಕ್ತಿ ನನಗಿದೆ

೩೨೫೬. ಹೂಡಾಗಿರು = ಒತ್ತಾಸೆಯಾಗಿರು

(ಹೂಡು = ತಣಿಗೆಯ ಕೆಳಗೆ ಇಟ್ಟುಕೊಳ್ಳುವ ಒತ್ತಿನ ಚಕ್ಕೆ, ಕುಮ್ಮಕ್ಕಾಗಿ ನಿಲ್ಲುವ ವಸ್ತು)

ಪ್ರ : ಕಷ್ಟಕಾಲದಲ್ಲಿ ನೀವು ಹೂಡಾಗಿ ನಿಲ್ಲದಿದ್ರೆ ನಾವು ಕಾಡುಪಾಲಾಗ್ತಿ‌ದ್ದೆವು.

೩೨೫೭. ಹೂಣಿಸಿಕೊಂಡಿರು = ನೆಟ್ಟಕಲ್ಲಿನಂತೆ ಇದ್ದುಕೊಂಡಿರು

(ಹೂಣು < ಹೂಳು < ಪೂಳು = ನೆಡು, ಮಣ್ಣು ಮಾಡು)

ಪ್ರ : ಹುಟ್ಟಿದ ಜೀವ ಈ ಲೋಕದಲ್ಲೇ ಶಾಶ್ವತವಾಗಿ ಹೂಣಿಸಿಕೊಂಡಿರ್ತದ?

೩೨೫೮. ಹೂತು ಬಿಡು = ಸಾಯಿಸಿ ಸಮಾಧಿ ಮಾಡು, ಮಣ್ಣಿನಲ್ಲಿ ಮುಚ್ಚು

ಪ್ರ : ಇನ್ನೊಂದು ಮಾತು ಆಡಿದರೆ, ಇಲ್ಲೇ ಹೂತುಬಿಡ್ತೇನೆ, ತಿಳ್ಕೊಂಡಿರು

೩೨೫೯. ಹೂಪನಾಗಿರು = ಷಂಡನಾಗಿರು

(ಹೂಪ < ಭೂಪ < ಬರಪ = ಹೆಣ್ಣಿಗೆ)

ಪ್ರ : ಕೊಂಡುಕೊಂಡು ಬಂದ ಬನ್ನೂರು ಟಗರಿ ಮರಿ ಹೂಪ ; ಬನ್ನೂರು ಕುರಿ ತಳಿ ಬೆಳೀಬೇಕಾದರೆ, ಇನ್ನೊಂದು ಬನ್ನೂರು ಕುರಿಟಗರನ್ನೇ ತಂದು ಕುರಿ ಒಳಗೆ ಬಿಡಬೇಕು

೩೨೬೦. ಹೂಮರಿ ಆಗಿರು = ಬೊಮ್ಮಟೆಯಾಗಿರು, ಹಸುಗಂದನಾಗಿರು

(ಹೂಮರಿ = ಆಗತಾನೇ ಮೊಟ್ಟೆಯಿಂದ ಹೊರ ಬಂದ ಕೋಳಿಮರಿ)

ಪ್ರ : ಹೂಮರಿಯಂಗಿರೋ ಹುಡುಗಿ ಕೆಣಕಿದ್ದಾನಲ್ಲ ಆ ಮುದಿಯ?

೩೨೬೧. ಹೂಳೆತ್ತು = ಅನ-ವ-ಶ್ಯ-ಕ-ವಾ-ಗಿ ತುಂಬಿ-ಕೊಂ-ಡ ಮಣ್ಣೆತ್ತಯ

ಆಳವಾದ ಕೆರೆಗೆ ಮೇಲಿನಿಂದ ಹರಿದು ಬರುವ ಮೆಕ್ಕಲು ಮಣ್ಣು ತುಂಬಿಕೊಂಡು ಆಳ ಕಡಮೆಯಾದಾಗ ಹೂಳು ತುಂಬಿಕೊಂಡಿದೆ ಎಂದು ಅದನ್ನು ಅಗೆದು ಗಾಡಿ ತುಂಬಿ ಹೊಲಗದ್ದೆಗಳಿಗೆ ಹೊಡೆದು, ಕೆರೆಯನ್ನು ಆಳಗೊಳಿಸುತ್ತಾರೆ. ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಕೆರೆಯ ಹೂಳೆತ್ತಿದ ಹಾಗೆ ಸಮಾಜದಲ್ಲಿ ಸೇರಿಕೊಂಡ ಹೂಳನ್ನು ಆಗಾಗ್ಗೆ ಎತ್ತಿ ಸ್ವಚ್ಛಗೊಳಿಸಬೇಕು, ಇಲ್ಲದಿದ್ದರೆ ಸಮಾಜ ಹೂಳು ತುಂಬಿದ ಕೆರೆಯಂತಾಗುತ್ತದೆ.

೩೨೬೨. ಹೆಕ್ಕತ್ತಿನ ಮೇಲೆ ನಾಲ್ಕಿಕ್ಕು = ಕುತ್ತಿಗೆಯ ಮೇಲೆ ತದುಕು, ಹೊಡಿ

(ಹೆಕ್ಕತ್ತು = ಕತ್ತಿನ ಹಿಂಭಾಗ; ಇಕ್ಕು = ಹೊಡಿ)

ಪ್ರ : ಹೆಕ್ಕತ್ತಿನ ಮೇಲೆ ನಾಲ್ಕಿಕ್ಕು, ಹೊಟ್ಟೇಲಿರೋದನ್ನೆಲ್ಲ ಕಕ್ಕಿ ಸೊರಗಿ ಬೀಳೋ ಹಂಗೆ

೩೨೬೩. ಹೆಗಲಾಗು = ನೊಗ ಉಜ್ಜಿ ಎತ್ತುಗಳ ಕುತ್ತಿಗೆಯ ಮೇಲ್ಭಾಗ ಕಿತ್ತು ಹೋಗು, ಗಾಯವಾಗು

ಪ್ರ : ಎತ್ತಿನ ಹೆಗಲಾಗಿದೆ, ಇವತ್ತು ಗಾಡಿಗೆ ಕಟ್ಟಲ್ಲ

೩೨೬೪. ಹೆಗಲು ಕೊಡು = ಸಹಾಯ ಮಾಡು, ಬೇರೆಯವರಿಗೆ ಬಿಡುವು ಕೊಟ್ಟು ತಾನು ಭಾರ ಹೊರು

ಚಟ್ಟದ ಮೇಲೆ ಹಣ ಕೊಂಡೊಯ್ಯುವಾಗ ಹಿಂದೆ ಇಬ್ಬರು ಮುಂದೆ ಇಬ್ಬರು ಚಟ್ಟದ ಬೊಂಬುಗಳಿಗೆ ಹೆಗಲು ಕೊಟ್ಟಿರುತ್ತಾರೆ. ಆಗ ಬಂಧುಗಳಲ್ಲಿ ಕೆಲವರು ಬಂದು ತಾವು ಹೆಗಲು ಕೊಡುತ್ತಾರೆ. ಅದು ಸತ್ತವರಿಗೆ ತಮ್ಮ ಸೇವೆ ಎಂಬ ಭಾವನೆಯನ್ನೊಳಗೊಂಡಿದೆ. ಹಾಗೆಯೇ ಉತ್ಸವದ ದೇವರ ದೇವಿಗೆಗೆ ಭಕ್ತರು ಒಬ್ಬರಾದ ಮೇಲೆ ಒಬ್ಬರು ಹೆಗಲುಕೊಡುತ್ತಾರೆ, ದೇವರಿಗೆ ಸೇವೆ ಸಲ್ಲಿಸಿದೆ ಎಂಬ ತೃಪ್ತಿಗಾಗಿ. ಆದರೆ ಹೆಣಕ್ಕೆ ಹೆಗಲು ಕೊ‌ಟ್ಟವರಿಗೆಲ್ಲ ತಿಥಿ ದಿವಸ ಹೆಗಲು ತೊಳೆಯುವ ಶಾಸ್ತ್ರ ಮಾಡಿಸುತ್ತಾರೆ.

ಪ್ರ : ಹೆಣ ಹೊರೋಕೆ ಅಥವಾ ದೇವರು ಹೊರೋಕೆ ಹೆಗಲು ಕೊಡೋದು ಇನ್ನೊಬ್ಬರ ಒತ್ತಾಯದಿಂದ ಅಲ್ಲ, ತಮ್ಮ ಭಕ್ತಿ ಪ್ರೀತಿಗಳಿಂದ

೩೨೬೫. ಹೆಗಲೇರು = ಸವಾರಿ ಮಾಡು

ಪ್ರ : ಮುಂದುವರಿದವರು ಹೆಗಲೇರೋರೇ ಹೊರತು ಹೆಗಲಿಗೇರಿಸಿಕೊಳ್ಳೋರಲ್ಲ

೩೨೬೬. ಹೆಗಲು ಕಳಚು = ನೊಗದಿಂದ ಎತ್ತುಗಳನ್ನು ಬಿಚ್ಚು

ಗಾಡಿಗೆ ಅಥವಾ ಆರಿಗೆ (ನೇಗಿಲಿಗೆ) ಕಟ್ಟಿದ ಎತ್ತುಗಳ ಕುತ್ತಿಗೆಯನ್ನು ಕಣ್ಣಿ ಅಗಡಿನಿಂದ ಚಿಮರ ಹಾಕಿ ನೊಗದ ಗೂಟಕ್ಕೆ ಕಟ್ಟಿರುತ್ತಾರೆ. ಕಣ್ಣಿ ಅಗಡನ್ನು ಬಿಚ್ಚಿ ನೊಗದಿಂದ ಅವುಗಳನ್ನು ಬೇರ್ಪಡಿಸುತ್ತಾರೆ. ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಮೊದಲು ಎತ್ತುಗಳ ಹೆಗಲು ಕಳಚಿ, ನೀರು ಕುಡಿಸಿಕೊಂಡು ಬಾ.

೩೨೬೭. ಹೆಗಲು ಕೊಡುವ ಎತ್ತಾಗಿಸು = ಭಾರ ಹೊರಲು ತಾನಾಗಿಯೇ ಮುಂದೆ ಬರುವಂತೆ ಅಣಿಗೊಳಿಸು.

ಗಾಡಿಗೆ ಹೂಡುವ ಎತ್ತುಗಳಿಗೆ ಎಷ್ಟು ಅಭ್ಯಾಸವಾಗಿರುತ್ತದೆಂದರೆ ಒಡೆಯ ಗಾಡಿಯ ಮೂಕು ಎತ್ತಿದಾಕ್ಷಣ ತಾವು ಬಂದು ನೊಗಕ್ಕೆ ಹೆಗಲಾನಿಸುತ್ತವೆ. ಏಕೆಂದರೆ ಮೊದಲು ಹೆಗಲು ಕೊಡದಿದ್ದಾಗ ಚಾವುಟಿಯಿಂದ ಹೊಡೆದು ಬಡಿದು ದಿಗಿಲುಗೊಳಿಸಿರುವುದರಿಂದ ನಾವಿರುವುದೇ ನೊಗಕ್ಕೆ ಹೆಗಲು ಕೊಡುವುದಕ್ಕಾಗಿ ಎಂಬ ಭಾವನೆಯನ್ನುಂಟು ಮಾಡಿ, ವಶೀಕರಣ ವಿದ್ಯೆಗೊಳಗಾಗುವಂತೆ ಮಾಡಿರುತ್ತಾರೆ. ಹಾಗೆಯೇ ಮೇಲ್ವರ್ಗದವರು ಕೆಳ ವರ್ಗದವರಿಗೆ ಹೇಳಿದ ಕೆಲಸ ಮಾಡುವುದಕ್ಕಾಗಿ ಮಾತ್ರ ಇರುವಂಥವರು ಎಂಬುದನ್ನು ಅವರೊಳಗೆ ಬಿತ್ತಿ, ಅದು ಅಭ್ಯಾಸವಾಗಿಬಿಡುವಂತೆ ಮಾಡಿದ್ದಾರೆ. ಆದ್ದರಿಂದ ಮೇಲ್ವರ್ಗದವರು ಯಾವುದೇ ಕೆಲಸ ಕಾರ್ಯದ ಗಾಡಿಯ ಮೂಕನ್ನು ಎತ್ತಿದಾಕ್ಷಣ, ಕೆಳವರ್ಗದವರು ಮೂಗೆತ್ತಿನಂತೆ ಹೆಗಲಾನಿಸುತ್ತಾರೆ. ಆ ಹಿನ್ನೆಲೆಯ ನುಡಿಗಟ್ಟಿದು.

ಪ್ರ : ಊರಿನಲ್ಲಿರೋ ಮೇಲ್ಜಾತಿಯ ಒಬ್ಬ ದಣಿ, ಕೆಳಜಾತಿಯ ಶೇಕಡ ತೊಂಬತ್ತೊಂಬತ್ತು ಜನರನ್ನು ಹೆಗಲು ಕೊಡುವ ಎತ್ತಾಗಿಸಿ ತನ್ನ ಬೇಳೆ ಬೇಯಿಸಿಕೊಳ್ತಾ ಇದ್ದಾನೆ ಎಂಬುದನ್ನು ಇನ್ನಾದರೂ ಅರ್ಥ ಮಾಡಿಕೊಳ್ಳದಿದ್ದರೆ ಹೇಗೆ?

೩೨೬೮. ಹೆಗಲ ಮೇಲೆ ಕೈ ಹಾಕು = ಸಲಿಗೆಯ ಸ್ನೇಹವಿರು, ಸರಿಸಮಾನ ಎಂಬ ಆತ್ಮವಿಶ್ವಾಸವಿರು

ಪ್ರ : ಹೆಗಲ ಮೇಲೆ ಕೈಹಾಕೋವಷ್ಟು ಸಲಿಗೆ

ಇದೆ, ಸರಿಸಮಾನ ಅನ್ನೋ ಆತ್ಮವಿಶ್ವಾಸವಿದೆ.

೩೨೬೯. ಹೆಚ್ಚಲಿ ಎನ್ನು = ವೃದ್ಧಿಯಾಗಲಿ ಎಂಬ ಶುಭ ಹಾರೈಕೆಯಿಂದ ಪ್ರಾರಂಭಿಸು.

ರೈತ ಕಣದಲ್ಲಿ ತಾಣು ಬೆಳೆದ ಧಾನ್ಯದ ರಾಶಿಯನ್ನು ಇಬ್ಬಳದಿಂದ (ಇಬ್ಬಳ < ಎರಡು ಬಳ್ಳ ; ಬಳ್ಳ = ನಾಲ್ಕು ಸೇರು, ಇಬ್ಬಳ = ಎಂಟು ಸೇರು) ಅಥವಾ ಕೊಳಗದಿಂದ ( ಎರಡು ಇಬ್ಬಳದ ಪರಿಮಾಣ ಉಳ್ಳದ್ದು ಅಂದರೆ ಹದಿನಾರು ಸೇರಿನ ಅಳತೆಯ ಸಾಧನ) ಅಳೆಯುವಾಗ ಬೆಸ ಸಂಖ್ಯೆ ಬಂದಾಗ ‘ಹೆಚ್ಚಲಿ’ ಎನ್ನುತ್ತಾನೆ. ಸರಿ ಸಂಖ್ಯೆ ಬಂದಾಗ ಆ ಸಂಖ್ಯೆಯನ್ನೇ ಹೇಳುತ್ತಾನೆ. ಅದರಲ್ಲೂ ಬೆಸ ಸಂಖ್ಯೆಗಳಾದ ಒಂದು ಮತ್ತು ಏಳು ಬಂದಾಗ ತಪ್ಪದೆ ‘ಹೆಚ್ಚಲಿ’ ಎಂಬ ಶಬ್ದದಿಂದಲೇ ಹೆಸರಿಸುತ್ತಾನೆ. ಆ ಹಿನ್ನೆಲೆಯ ನುಡಿಗಟ್ಟಿದು, ನಂಬಿಕೆ ಮೂಲದ್ದು.

ಪ್ರ : ಒಂದು, ಏಳು ಬಂದಾಗ ‘ಹೆಚ್ಚಲಿ’ ಎಂದು ಹೇಳಿ ಅಳೆಯಬೇಕೇ ವಿನಾ ಒಂದು, ಏಳು ಎಂದು ಬಾಯಲ್ಲಿ ಹೇಳಬಾರದು.

೩೨೭೦. ಹೆಚ್ಚಳವಾಗು = ಸಂತೋಷವಾಗು

ಪ್ರ : ಮನೆಯ ಅಚ್ಚುಕಟ್ಟುತನ ನೋಡಿ ನನಗೆ ಹೆಚ್ಚಳವಾಯ್ತು

೩೨೭೧. ಹೆಚ್ಚಿ ಬಿಡು = ಪಚಡಿ ಮಾಡು

(ಹೆಚ್ಚು = ಚೂರಾಗಿಸು, ಕತ್ತರಿಸು)

ಪ್ರ : ಇನ್ನು ಹೆಚ್ಚಿಗೆ ಮಾತಾಡಿದ್ರೆ, ಸೌತೇಕಾಯಿ ಹೆಚ್ಚಿದಂಗೆ ಹೆಚ್ಚಿಬಿಡ್ತೀನಿ, ಹುಷಾರ್!

೩೧೭೨. ಹೆಚ್ಚಿ ಹೋಗು = ಅಹಂಕಾರದಿಂದ ಮೆರೆ

ಪ್ರ : ಇತ್ತೀಚೆಗಂತೂ ಅವನು ತುಂಬ ಹೆಚ್ಚಿ ಹೋಗಿದ್ದಾನೆ, ಯಾರ ಮಾತ್ನೂ ಕೇಳಲ್ಲ

೩೨೭೩. ಹೆಚ್ಚುಗಟ್ಲೆ ಮಾಡು = ವಿಶೇಷ ಅಡುಗೆ ಮಾಡು

(ಹೆಚ್ಚುಗಟ್ಲೆ = ವಿಶೇಷ, ಪೆಸಲ್ (< ಸ್ಪೆಷಲ್))

ಪ್ರ : ದಿನಗಟ್ಲೆ (ಸಾಮಾನ್ಯ) ಊಟವನ್ನೇ ನಾನು ಹೆಚ್ಚುಗಟ್ಲೆ ಊಟ ಅಂತ ಭಾವಿಸ್ತೀನಿ.

೩೨೭೪. ಹೆಚ್ಚೂ ಕಮ್ಮಿ ಮಾತಾಡು = ಬಾಯಿ ಹೋದಂತೆ ಮಾತಾಡು

(ಹೆಚ್ಚೂ ಕಮ್ಮಿ = ಒಬ್ಬ ಹೆಚ್ಚು ಮತ್ತೊಬ್ಬ ಕಮ್ಮಿ ಅಥವಾ ಒಂದು ಜಾತಿ ಮೇಲು ಮತ್ತೊಂದು ಜಾತಿ ಕೀಳು ಎಂಬ ರೀತಿಯ ಮಾತು)

ಪ್ರ : ಹೆಚ್ಚೂ ಕಮ್ಮಿ ಮಾತಾಡಿದ್ರೆ ನಿನ್ನ ಗತಿ ಕಾಣಿಸ್ತೀನಿ, ಹುಷಾರಾಗಿರು

೩೨೭೫. ಹೆಜ್ಜೆ ಗುರುತು ಹಿಡಿ = ಸುಳಿವು ಹಿಡಿ, ಮರ್ಮ ತಿಳಿ

ಪ್ರ : ಅವರ ಹಿಕ್ಮತ್ತಿನ ಹೆಜ್ಜೆ ಗುರುತು ತಿಳಿದಿದ್ದೀನಿ, ಅವರಿಗೆ ಸರಿಯಾಗಿ ಬುದ್ಧಿಗಲಿಸ್ತೀನಿ.

೩೨೭೬. ಹೆಜ್ಜೆಯೂರು = ನಿಲ್ಲು, ಸುಧಾರಿಸಿಕೊಳ್ಳು

ಪ್ರ : ಎದ್ದಾಗಳಿಂದ ಇಲ್ಲೀವರೆಗೆ ಒಂದು ಕಡೆ ಹೆಜ್ಜೆ ಊರಿಲ್ಲ, ಅಲೆದದ್ದೂ ಅಲೆದದ್ದೆ.

೩೧೭೭. ಹೆಜ್ಜೇನು ಹುಟ್ಟಿಗೆ ಕಲ್ಲೆಸೆದಂತಾಗು = ಅಪಾಯಕ್ಕೆ ಸಿಕ್ಕಿಕೊಳ್ಳು

ಪ್ರ : ಹೆಜ್ಜೇನು ಹುಟ್ಟಿಗೆ ಕಲ್ಲೆಸೆದು ಇಲ್ಲದ ಅವಾಂತರಕ್ಕೆ ಸಿಕ್ಕೊಂಡೆ.

೩೨೭೮. ಹೆಟ್ಟೋಕೆ ಬರು = ತಿವಿಯಲು ಬರು, ಹಾಯುವುದಕ್ಕೆ ಬರು

ಪ್ರ : ದನ ಅಟ್ಟೋಕೆ ಬರಲಿಲ್ಲ, ನಿನಗೆ ಹೆಟ್ಟೋಕೆ ಬಂದೆ ಅಂತ ತಿಳಕೊಂಡ ?

೩೨೭೯. ಹೆಡಮುರಿ ಕಟ್ಟು = ಕೈಗಳನ್ನು ಬೆನ್ನ ಹಿಂದಕ್ಕೆ ಸೆಳೆದು ಕಟ್ಟು

ಪ್ರ : ಜೋರು ಮಾಡಿದ್ರೆ ಹೆಡಮುರಿ ಕಟ್ಟಿ ಉರುಳು ಹಾಕಿಬಿಡ್ತೀನಿ.

೩೨೮೦. ಹೆಣ ಎತ್ತು = ಹೊಡೆದು ಹಣ್ಣು ಮಾಡು, ಕೆಲಸ ಮಾಡಿಸಿ ಸುಸ್ತಾಗಿಸು

ಪ್ರ : ಹೊತ್ತಾರೆಯಿಂದ ಬೈಸಾರವರೆಗೆ ಅವನ ಹೆಣ ಎತ್ತಿ ಬಿಟ್ಟಿದ್ದೀನಿ

೩೨೮೧. ಹೆಣ ಕಾಯು = ಬೇಸರದಿಂದ ನಿಮಿಷ ನಿಮಿಷವನ್ನೂ ಎಣಿಸು

ಪ್ರ : ಗಾದೆ – ಕಣ ಕಾಯಬಹುದು

ಹೆಣ ಕಾಯಕ್ಕಾಗಲ್ಲ

೩೨೮೨. ಹೆಣ ಹಿಂಡೆಕೂಳು ಹಾಕು = ಶ್ರಾದ್ಧ ಮಾಡು, ಪಿಂಡ ಹಾಕು

(ಹಿಂಡೆ < ಹಿಂಡ < ಪಿಂಡ ; ಕೂಳು = ಅನ್ನ)

ಪ್ರ : ನನಗೆ ಕೊಡಬೇಕಾದ ಹಣಾನ ನಿನ್ನ ಮಗನ ಹೆಣ ಹಿಂಡೆಕೂಳಿಗೆ ಅಂತ ಇಟ್ಟೊಂಡಿದ್ದೀಯ?

೩೨೮೩. ಹೆಣ ಹೊರೋ ಕೆಲಸ ಮಾಡು = ಶ್ರಮದ ಆದರೆ ಫಾಯಿದೆ ಇಲ್ಲದ ಕೆಲಸ ಮಾಡು

ಪ್ರ : ಇಂಥ ಹೆಣ ಹೊರೋ ಕೆಲಸ ಮಾಡೋಕೆ ನನಗಿಷ್ಟವಿಲ್ಲ

೩೨೮೪. ಹೆಣಗಿ ಹೆಣಗಿ ಹೆಣವಾಗು = ಪರದಾಡಿ ಸುಸ್ತಾಗು

(ಹೆಣಗು = ಏಗು)

ಪ್ರ : ಕುಡುಕ ಗಂಡನ ಜೊತೆ ಹೆಣಗಿ ಹೆಣಗಿ ಹೆಣವಾಗಿಬಿಟ್ಟೆ

೩೨೮೫. ಹೆತ್ತಾಯಿಗೆ ಲಾಡಿ ಬಿಚ್ಚೋ ಕೆಲಸ ಮಾಡು = ದುಷ್ಟ ಕೆಲಸ ಮಾಡು

(ಹೆತ್ತಾಯಿ < ಹೆತ್ತ + ತಾಯಿ = ಹಡೆದ ತಾಯಿ ; ಲಾಡಿ = ನಿಕ್ಕರ್ ಪೈಜಾಮಕ್ಕಿರುವ ಸೊಂಟಕ್ಕೆ ಕಟ್ಟುವ ದಾರ)

ಪ್ರ : ಹೆತ್ತಾಯಿಗೆ ಲಾಡಿ ಬಿಚ್ಚೋ ಕೆಲಸ ಮಾಡಿದೋನು ಇನ್ನಾವುದಕ್ಕೆ ಹೇಸ್ತಾನೆ?

೩೨೮೬. ಹೆತ್ತುಕೊಂಡ ತು‌ಪ್ಪದಂತಿರು = ಗಂಭೀರವಾಗಿರು, ಚೆಲ್ಲುಚೆಲ್ಲಾಗಿ ಆಡದಿರು

ಪ್ರ : ಗರಣೆಗೊಂಡ ಮೊಸರಂತೆ, ಹೆತ್ತುಕೊಂಡ ತುಪ್ಪದಂತೆ ಬದುಕಬೇಕು

೩೨೮೭. ಹೆದರಿ ಹೆಪ್ಪಾಗು ಬೆದರಿ ಬೆಪ್ಪಾಗು = ಭಯದಿಂದ ರಕ್ತಚಲನೆ ನಿಂತಂತಾಗಿ ಕಂಬದಂತೆ ನಿಲ್ಲು

(ಹೆಪ್ಪಾಗು = ಭಯದಿಂದ ರಕ್ತಚಲನೆ ನಿಂತು ಗರಣೆಗೊಳ್ಳು; ಬೆಪ್ಪಾಗು = ಆಶ್ಚಾರ್ಯಾಘಾತದಿಂದ ಸ್ತಂಭೀಭೂತನಾಗಿ ನಿಲ್ಲು)

ಪ್ರ : ಎದುರಲ್ಲಿ ಏಳೆಡೆ ಸರ್ಪ ಕಂಡು ಹೆದರಿ ಹೆಪ್ಪಾದೆ ಬೆದರಿ ಬೆಪ್ಪಾದೆ.

೩೨೮೮. ಹೆದ್ದಾರೀಲಿ ಹೋಗು = ರಾಜಮಾರ್ಗದಲ್ಲಿ ನಡೆ

ಪ್ರ : ಅಡ್ಡ ದಾರೀಲಿ ಹೋಗಬೇಡ, ಹೆದ್ದಾರೀಲಿ ಹೋಗೋದನ್ನ ಕಲಿ

೩೨೮೯. ಹೆಪ್ಪು ಒಡೆ = ಬಿರುಕು ಹುಟ್ಟಿಸು

ಪ್ರ : ಸಂಸಾರದ ಹೆಪ್ಪು ಒಡೆಯೋ ಕೆಲಸ ಮಾಡಬೇಡ

೩೨೯೦. ಹೆಪ್ಪು ಹಾಕು = ಒಂದು ಮಾಡು, ಗರಣೆಗೊಳಿಸು

(ಹೆಪ್ಪು = ಮೊಸರಾಗಲು ಹಾಲಿಗೆ ಬಿಡುವ ಮಜ್ಜಿಗೆ)

ಪ್ರ : ಗಾದೆ – ಓಡಿ ಹೋಗೋಳು ಹಾಲಿಗೆ ಹೆಪ್ಪು ಹಾಕ್ತಾಳ?

೩೨೯೧. ಹೆಬ್ಬೂರ ಗಬ್ಬೆಬ್ಬಿಸೋಕೆ ಹೆಬ್ಬಾರೊಬ್ಬ ಸಾಕು = ಇ-ಡೀ ಹಿರಿ-ಯೂ-ರ- ನ್ನು ಹಾಳ ಮಾಡ-ಲು

ಒಬ್ಬ ಹಿರಿ-ಹಾ-ರು-ವ ಸಾಕು

(ಹೆಬ್ಬಾರ.< ಹೆಬ್ಬಾರುವ < ಹಿರಿಯ + ಹಾರುವ = ದೊಡ್ಡ ಅಥವಾ ಶ್ರೇಷ್ಠ ಬ್ರಾಹ್ಮಣ; ಹೆಬ್ಬೂರು < ಹಿರಿಯ + ಊರು = ಹಿರಿಯೂರು, ದೊಡ್ಡೂರು ; ಗಬ್ಬೆಬ್ಬಿಸು = ಹಾಳು ಮಾಡು)

ಪ್ರ : ಹೆಬ್ಬೂರ ಗಬ್ಬೆಬ್ಬಿಸೋಕೆ ಹೆಬ್ಬಾರೊಬ್ಬ ಸಾಕು, ಕೇಳಿಲ್ವೇನು ಗಾದೇನ, ಹಾವು ಕಚ್ಚಿದರೆ ಒಬ್ಬ ಸಾಯ್ತಾನೆ ಹಾರುವ ಕಚ್ಚಿದರೆ ಊರೇ ಸಾಯ್ತದೆ ಅಂತ?

೩೨೯೨. ಹೆಬ್ಬಾರೇಲಿ ಎತ್ತು ಕಣ್ಣಿ ಹಾಕು = ಐನಾತಿ ಅಪಾಯದ ಹೊತ್ತಿನಲ್ಲೇ ಕೈಕೊಡು

(ಹೆಬ್ಬಾರೆ < ಹಿರಿಯ + ಬಾರೆ < ಹಿರಿಯ + ಬೋರೆ = ದೊಡ್ಡ ದಿಣ್ಣೆ, ದಿಬ್ಬ)

ಪ್ರ : ಹೆಬ್ಬಾರೇಲಿ ಎತ್ತು ಕಣ್ಣಿ ಹಾಕಿದಂಗೆ ಮಾಡಿಬಿಟ್ಟ, ನಂಬಿಕೆ ದ್ರೋಹದ ಮನೆಹಾಳ

೩೨೯೩. ಹೆಮ್ಮರ ಬಿದ್ದಂತಾಗು = ದೊಡ್ಡಮರ ಉರುಳಿದಂತಾಗು, ಸ್ಥಳ ಬಿಕೋ ಎನ್ನು

ಪ್ರ : ಕುಟುಂಬದ ಹೆಮ್ಮರ ಬಿದ್ದ ಮೇಲೆ, ಹಾಳು ಸುರಿಯದೆ ಇನ್ನೇನು?

೩೨೯೪. ಹೆಮ್ಮಾರಿಯಾಗು = ಮ್ಯತ್ಯುದೇವತೆಯಾಗು, ಕುಲಕಂಟಕಿಯಾಗು

ಪ್ರ : ಮನೆಗೆ ಬಂದ ಸೊಸೆ ಲಕ್ಷ್ಮಿಯಾಗಲಿಲ್ಲ, ಹೆಮ್ಮಾರಿಯಾದ್ಲು

೩೨೯೫. ಹೆಸರಿಕ್ಕು = ನಾಮಕರಣ ಮಾಡು

ಪ್ರ : ಗಾದೆ – ಹೆತ್ತವರು ಹೆಸರಿಕ್ಕಬೇಕು

೩೨೯೬. ಹೆಸರಿಲ್ಲದಂತಾಗು = ನಿರ್ನಾಮವಾಗು

ಪ್ರ : ಎಸರು ಕುದಿದಂತೆ ಕುದಿದೂ ಕುದಿದೂ ಹೆಸರಿಲ್ಲದಂತಾದರು

೩೨೯೭. ಹೆಸರು ಉಳಿಸು = ಮಾನ ಉಳಿಸು, ಕೀರ್ತಿ ಉಳಿಸು

ಪ್ರ : ಈ ಮನೆಯ ಹೆಸರನ್ನು ಉಳಿಸೋದು ಅಳಿಸೋದು ನಿನ್ನ ಕೈಯಲ್ಲಿದೆ

೩೨೯೮. ಹೆಸರೆತ್ತು = ಕೀರ್ತಿ ಹೊಂದು

ಪ್ರ : ಈ ಸುತ್ತ ಮುತ್ತ ಸೀಮೆಗೆಲ್ಲ ಹೆಸರೆತ್ತಿಬಿಟ್ಟ.

೩೨೯೯. ಹೆಸರು ಕೆಡಿಸು = ಅಪಕೀರ್ತಿ ತರು

ಪ್ರ : ಮಗ ಹುಟ್ಟಿ ಅಪ್ಪನ ಹೆಸರು ಕೆಡಿಸಿಬಿಟ್ಟ

೩೩೦೦. ಹೆಸರಿಗೆ ಮಸಿ ಬಳಿ = ಕಳಂಕ ಹೊರಿಸು

ಪ್ರ : ನನ್ನ ಹೆಸರಿಗೆ ಮಸಿ ಬಳಿಯೋಕೆ ಇಷ್ಟೆಲ್ಲ ಹುಯ್ಯಲೆಬ್ಬಿಸ್ತಾ ಅವರೆ

೩೩೦೧. ಹೆಸರು ಹೇಳಿಕೊಂಡು ಬದುಕು = ಸಹಾಯ ಮಾಡಿದವರನ್ನು ನೆನೆಯುತ್ತಾ ಜೀವಿಸು

ಪ್ರ : ಆ ನಮ್ಮಪ್ಪನ ಹೆಸರು ಹೇಳ್ಕೊಂಡು ಇವತ್ತು ನಾಲೋರ್ಹಂಗೆ ಬದುಕ್ತಾ ಇದ್ದೀವಿ.

೩೩೦೨. ಹೆಸರು ಹೇಳಿದರೆ ಅನ್ನ ಹುಟ್ಟದಿರು = ಎಲ್ಲರ ಕಣ್ಣಲ್ಲೂ ಕೆಟ್ಟವನಾಗಿರು

ಪ್ರ : ನಿನ್ನ ಹೆಸರು ಹೇಳಿದರೆ ಅನ್ನ ಹುಟ್ಟಲ್ಲ ಅನ್ನೋದು ನಮಗೆ ಗೊತ್ತಿದೆ

೩೩೦೩. ಹೇತು ಎಡೆ ಇಕ್ಕು = ಅಪವಿತ್ರಗೊಳಿಸು, ಗಲೀಜು ಮಾಡು

(ಎಡೆ ಇಕ್ಕು = ನೈವೇದ್ಯ ಅರ್ಪಿಸು)

ಪ್ರ : ಹೇಗೋ ಸರಿ ಹೋಗೋದು, ಆದರೆ ಇವನು ನಾನು ಸರಿ-ಮಾ-ಡ್ತೀ-ನಿ ಅಂ-ತ ಬಂದು ನಟ್ಟ ನಡುವೆ ಕುಂತು ಹೇತು ಎಡೆ ಇಕ್ಕಿಬಿಟ್ಟ.

೩೩೦೪. ಹೇತುಕೊಳ್ಳುವಂತೆ ಹೇರು = ಪ್ರಸಾದ ಇಟ್ಟಾಡುವಂತೆ ಹೊಡಿ

(ಹೇರು = ಹೊಡಿ, ಚಚ್ಚು)

ಪ್ರ : ಹೇತುಕೊಳ್ಳುವಂತೆ ಹೇರಿದ ಮೇಲೆ,ಲ ಮಾತಿಲ್ಲದೆ ಮನೆಕಡೆ ಹೋದ

೩೩೦೫. ಹೇರು ಹಾಕು = ಭಾರ ಹೊರಿಸು

(ಹೇರು = ಹೊರೆ)

ಪ್ರ : ಗಾದೆ – ಸಾದೆತ್ತಿಗೆ ಎರಡು ಹೇರು

೩೩೦೬. ಹೇಲಾಗಳ ಹುಳ ಉಬ್ಬಿದಂತೆ ಉಬ್ಬು = ಹೆಚ್ಚು ಕೊಬ್ಬು, ಉಬ್ಬು

(ಹೇಲಾಗಳ ಹುಳ = ಹೇಲೊಳಗಿನ ಹುಳ. ಇವು ಮಣ್ಮುಕ್ಕಗಳ ಗಾತ್ರವಿದ್ದು ಬೆಳ್ಳಗಿರುತ್ತವೆ. ಇವು ಮುಂದಕ್ಕೆ ಹೋಗಬೇಕಾದರೆ ದೇಹವನ್ನು ಕಮಾನಿನಂತೆ ಉಬ್ಬಿಸಿ ಮುನ್ನಡೆಯುತ್ತವೆ. ಅವುಗಳ ಕಮಾನಿನಂತೆ ಉಬ್ಬುವ ನಡಿಗೆಯ ದಾಟಿ ಈ ನುಡಿಗಟ್ಟಿಗೆ ಮೂಲವಾಗಿದೆ.)

ಪ್ರ : ಮನೇಲಿ ಹುಟ್ಟಿದ ಹುಳಹುಪ್ಪಟೆಯೆಲ್ಲ ಹೇಲಾಗಳ ಹುಳ ಉಬ್ಬಿದಂತೆ ಉಬ್ಬಿ ಮಾತಾಡ್ತಾವೆ.

೩೩೦೭. ಹೇಲಿಗೆ ಹೇಲು ತಿನ್ನಿಸು = ಹೆಚ್ಚು ಹೆಣಗಿಸು, ಸಹವಾಸ ಬೇಡವೆನ್ನಿಸು

ಪ್ರ : ಅವನ್ನ ನಂಬಿ ಹೋಗಿದ್ದಕ್ಕೆ ಹೇಲಿಗೆ ಹೇಲು ತಿನ್ನಿಸಿಬಿಟ್ಟ