೨೯೮೭. ಸೂಜಿ ಬಿದ್ದು ಸದ್ದು ಕೇಳಿಸು = ನಿಶ್ಯಬ್ದವಾಗಿರು, ಸದ್ದಿಲಿಯಾಗಿರು

ಪ್ರ : ಸಭೆ ಎಷ್ಟು ನಿಶ್ಯಬ್ದವಾಗಿತ್ತು ಎಂದರೆ ಸೂಜಿ ಬಿದ್ದ ಸದ್ದೂ ಸಹ ಕೇಳಿಸುವ ಹಾಗಿತ್ತು.

೨೯೮೮. ಸೂಜಿ ಮದ್ದು ಕೊಡು = ಸಂಭೋಗಿಸು

(ಸೂಜಿ ಮದ್ದು = ಚುಚ್ಚು ಮದ್ದು)

ಪ್ರ : ಬಾಯಿಗೆ ಗುಳಿಗೆ ಕೊಡೋದ್ಕಿಂತ ಕುಂಡಿಗೆ ಸೂಜಿಮದ್ದು ಕೊಡೋದೇ ಸರಿ.

೨೯೮೯. ಸೂಜಿ ಹಾಕಿ ದಬ್ಬಳ ತೆಗಿ = ಒಂದಕ್ಕೆ ಎರಡುಪಟ್ಟು ಕೀಳು

ಸಮಾಜದಲ್ಲಿದ ಹೊಲಿಗೆ ಕಾಲಿಕ್ಕಿದಾಗ – ತೊಂಗಲು ತೊಡುವ, ಕಂಬಳಿ ಉಡುವ ಕಾಲ ಹೋಗಿ ಬಟ್ಟೆ ಅಸ್ತಿತ್ವಕ್ಕೆ ಬಂದಾಗ = ಮೂಡಿದ ನುಡಿಗಟ್ಟಿದು. ಹರಿದು ಹೋದ ಬಟ್ಟೆಯನ್ನು ಹೊಲಿಯುವಾಗ ಈ ಕಡೆಯಿಂದ ಸೂಜಿಯನ್ನು ತೂರಿಸಿ, ಆ ಕಡೆಯಿಂದ ಅದನ್ನು ಎಳೆಯುತ್ತೇವೆ. ಆದರೆ ಇಲ್ಲಿ ತೂರಿಸುವುದು ಸೂಜಿ, ಎಳೆಯುವುದು ದಬ್ಬಳ – ಅಂದರೆ ಒಬ್ಬರಿಗೆ ಹತ್ತು ರೂಪಾಯಿ ಕೊಟ್ಟು ಅವರಿಂದ ನೂರು ರೂಪಾಯಿ ಕೀಳುವ ದುರಾಶೆಯ ಪ್ರವೃತ್ತಿಯನ್ನು ಇದು ಬಯಲು ಮಾಡುತ್ತದೆ.

ಪ್ರ : ಸೂಜಿ ಹಾಕಿ ದಬ್ಬಳ ತೆಗಿಯೋ ಬಿನ್ನಾಣಗಿತ್ತಿ, ನನ್ನ ಮುಂದೆ ನಿನ್ನಾಟ ನಡೆಯಲ್ಲ.

೨೯೯೦. ಸೂಡು ಹಾಕು = ಬರೆ ಹಾಕು

(ಸೂಡು < ಸುಡು = ಬರೆ)

ಪ್ರ : ಹಿಂಗೇ ಕಾಡಿಸಿದರೆ, ಹಿಡಿದು ಸೂಡು ಹಾಕೋದು ಒಂದೇ ದಾರಿ

೨೯೯೧. ಸೂತರದ ಗೊಂಬೆಯಾಗು = ಸ್ವಂತ ವ್ಯಕ್ತಿತ್ವ ಇಲ್ಲದಿರು, ಅನ್ಯರು ಕುಣಿಸಿದಂತೆ ಕುಣಿ

(ಸೂತರದ < ಸೂತ್ರದ = ದಾರದ, ಹುರಿಯು) ಕಿಳ್ಳೆಕ್ಯಾತರು ಗೊಂಬೆಗಳ ಕೈಕಾಲುಗಳಿಗೆ ಸೂತ್ರಗಳನ್ನು ಹಾಕಿ ತಮ್ಮ ಬೆರಳಲ್ಲಿ ಹೇಗೆಂದರೆ ಹಾಗೆ ಕುಣಿಸುತ್ತಾ ಕಥೆಯನ್ನು ಹೇಳುವ ಅಥವಾ ನಾಟಕವನ್ನು ಜರುಗಿಸುವ ಜನಪದ ‘ಸೂತ್ರದಗೊಂಬೆಯಾಟ’ ಈ ನುಡಿಗಟ್ಟಿಗೆ ಮೂಲ.

ಪ್ರ : ಹೆಂಡ್ರ ಕೈಯಾಗಳ ಸೂತರದ ಗೊಂಬೆಯಾಗಿದ್ದಾನೆ ಗಂಡ.

೨೯೯೨. ಸೂನಂಗಿಯಂತಿರು = ಕೆಲಸಕ್ಕೆ ಬಾರದ ನಿಷ್ಪ್ರಯೋಜಕ ವಸ್ತುವಾಗಿರು

(ಸೂನಂಗಿ = ಕಬ್ಬಿನ ಹೂವು, ತೆನೆ) ಸಾಮಾನ್ಯವಾಗಿ ತೆನೆ ಎಂದಾಕ್ಷನ ಅದರಲ್ಲಿ ಕಾಳಿರುತ್ತವೆ. ಹೂವು ಎಂದಾಕ್ಷಣ ಅದು ಸುವಾಸನಾಯುಕ್ತವಾಗಿ ಮುಡಿಯಲು ಅರ್ಹವಾಗಿರುತ್ತದೆ ಎಂಬ ಗ್ರಹಿಕೆ ಇದೆ. ಆದರೆ ಈ ಸೂನಂಗಿ ಯಾವ ಗುಣವನ್ನು ಹೊಂದಿಲ್ಲ, ನಿರುಪಯುಕ್ತ.

ಪ್ರ : ಗಾದೆ – ಆನೆ ಹೊಟ್ಟೇಲಿ ಸೂನಂಗಿ ಹುಟ್ಟಿದಂಗೆ.

೨೯೯೩. ಸೂಪರ್ಲಕ್ಕಿಯಂತಾಡು = ಹೆಮ್ಮಾರಿಯಂತಾಡು, ರಾಕ್ಷಸಿಯಂತಾಡು

(ಸೂಪರ್ಲಕ್ಕಿ < ಶೂರ್ಪನಖಿ = ರಾವಣನ ತಂಗಿ; ಶೂರ್ಪ = ಮೊರ ಅಥವಾ ಗೆರಸೆ, ನಖ = ಉಗುರು) ಮೊರದಗಲ ಕಿವಿಯುಳ್ಳ ಗಣಪನನ್ನು ಶೂರ್ಪಕರ್ಣ ಎಂದು ಕರೆಯುವಂತೆ ಮೊರದಗಲ ಉಗುರುಳ್ಳ ರಾವಣನ ತಂಗಿಯನ್ನು ಶೂರ್ಪನಖಿ ಎಂದು ಕರೆಯಲಾಗಿದೆ. (ಆದರೆ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ಸೀತೆಯ ಸಾಹಚರ್ಯದಿಂದ ಸಂಸ್ಕಾರ ಹೊಂದಿ ಚಂದ್ರನಖಿಯಾಗುವುದನ್ನು ಕಾಣುತ್ತೇವೆ.) ಅದು ಜನರ ಬಾಯಲ್ಲಿ ಸೂಪರ್ಲಕ್ಕಿಯಾಗಿದೆ.

ಪ್ರ : ನೀನು ಸೂಪರ್ಲಕ್ಕಿಯಂತಾಡಿದರೆ ಕಿವಿ ಮೂಗು ಕುಯ್ಸಿಕೊಳ್ತಿ ಅಷ್ಟೆ.

೨೯೯೪. ಸೂರ್ಜ ಉರುದ್ಹಂಗುರಿ = ಸೂರ್ಯ ಹೊಳೆಯುವಂತೆ ಹೊಳೆ, ಥಳಥಳಿಸು, ಪಳಪಳ ಬೆಳಕು ನೀಡು

(ಸೂರ್ಜ < ಸೂರ್ಯ = ಹೊತ್ತು)

ಪ್ರ : ಹೆಣ್ಣು ಅಂದ್ರೆ ಅಂಥಿಂಥ ಹೆಣ್ಣಲ್ಲ, ಸೂರ್ಜ ಉರಿದಂಗೆ ಉರೀತಾಳೆ.

೨೯೯೫. ಸೂಲುದಪ್ಪು = ಕ್ರಮ ತಪ್ಪು, ಹೆರಿಗೆಯ ಸರದಿ ತಪ್ಪು

(ಸೂಲು = ಹೆರಿಗೆ, ಅವಧಿ, ವೇಳೆ)

ಪ್ರ : ಗಾದೆ – ಸೂಲುದಪ್ಪಿದರೆ ಗೊಡ್ಡ ?

೨೯೯೬. ಸೂಸ್ತ್ರದಂತಿರು = ತೆಳುವಾಗಿರು, ಜಾಳುಜಾಳಾಗಿರು

(ಸೂಸ್ತ್ರ < ಸೂತ್ರ = ದಾರ, ಎಳೆ)

ಪ್ರ : ಸೂಸ್ತ್ರದಂಥ ಬಟ್ಟೆ ತಡೆಯಲ್ಲ, ಗಟ್ಟಿಯಾದದ್ದು ಬೇಕು.

೨೯೯೭. ಸೆಡ್ಡೆ ಇಲ್ಲದೆ ಬಿತ್ತು = ನಿಷ್ಕಾರಣವಾಗಿ ವಿರಸ ಮೂಡಿಸು

(ಸೆಡ್ಡೆ = ಕಾಳು ಸಾಲಿಕ್ಕಲು ಬಳಸುವ ಬಿದಿರುಕೊಳ-ವೆ-ಯ ಉಪ-ಕ-ರ-ಣ)

ಪ್ರ : ಅವನು ಬಿಡಪ್ಪ, ಸೆಡ್ಡೆ ಇಲ್ಲದೆ ಬಿತ್ತಿ, ಗೆಡ್ಡೆ ಸಹಿತ ನಾಶ ಮಾಡಿಬಿಡ್ತಾನೆ.

೨೯೯೮. ಸೆಣೆದು ಅಣಿಸು = ಹೊಡೆದು ಒಪ್ಪಿಸು

(ಸೆಣೆ = ಹೊಡೆ, ಚಚ್ಚು ; ಅಣಿ = ಒಪ್ಪು, ಹದಿ)

ಪ್ರ : ಸೆಣೆದು ಅಣಿಸೋಕಾಗಲ್ಲ, ಮಣಿದು ಅಣಿಸಬಹುದು

೨೯೯೯. ಸೆತ್ತೆ ಕೀಳು = ಕಳೆ ಕೀಳು

(ಸೆತ್ತೆ = ಕಳೆ, ಅನುಪಯೋಗಿ ವಸ್ತು)

ಪ್ರ : ಸೆತ್ತೆ ಕೀಳದಿದ್ರೆ ನಿನ್ನ ಸ್ವತ್ತೆ ಹಾಳಾಗ್ತದೆ.

೩೦೦೦. ಸೆತ್ತೆ ಬೀಳು = ಮಾಸು ಬೀಳು, ಗರ್ಭದ ಪೊರೆ ಕಸ ಬೀಳು

ಪ್ರ : ಹೆರಿಗೆಯಾದಾಗ ಬೀಳುವ ಸೆತ್ತೆಯನ್ನು ಗುಂಡಿ ತೆಗೆದು ಹೂಳಬೇಕು, ತುಳೀಬಾರ್ದು. ಅದಕ್ಕೇ ಸೆತ್ತೆ ಬೀಳೋದನ್ನೇ ಕಾಯ್ತಾ ಇದ್ದೀನಿ.

೩೦೦೧. ಸೆಬೆ ಒಡ್ಡು = ಸಿಡಿ ಒಡ್ಡು

(ಸೆಬೆ = ಸಿಡಿ, ಬೋನು)

ಪ್ರ : ಸೆಬೆ ಒಡ್ಡೋದು ಒಡ್ಡು, ಬಿದ್ದರೆ ಬೀಳಲಿ ಬೀಳದಿದ್ರೆ ಹೋಗಲಿ.

೩೦೦೨. ಸೆಬ್ಬೆಗೆ ಬರು = ಹದಕ್ಕೆ ಬರು

(ಸೆಬ್ಬೆ = ಹದ) ಬಿತ್ತನೆಗಾಗಲೀ ಹರ್ತನೆಗಾಗಲೀ ಹೆಚ್ಚು ಒಣಗಲೂ ಆಗಬಾರದು, ಹೆಚ್ಚು ತೇವವೂ ಆಗಬಾರದು. ಅಂತಹ ಹದವಾದ ಸ್ಥಿತಿಗೆ ಸೆಬ್ಬೆ ಎಂದು ಕರೆಯುತ್ತಾರೆ.

ಪ್ರ : ಸೆಬ್ಬೆಗೆ ಬಂದಾಗ ಬಿತ್ತದಿದ್ರೆ ದಡ್ಡ ಅಂತಾರೆ.

೩೦೦೩. ಸೆಮೆ ಬೀಳು = ಕಷ್ಟ ಬೀಳು

(ಸೆಮೆ < ಶೆಮ < ಶ್ರಮ = ಆಯಾಸ, ಕಷ್ಟ)

ಪ್ರ : ಮನೆಯನ್ನು ಈ ಮಟ್ಟಕ್ಕೆ ತರಬೇಕಾದರೆ ಎಷ್ಟು ಸೆಮೆ ಬಿದ್ದಿದ್ದೀನಿ ಅನ್ನೋದ ಶಿವನಿಗೆ ಒಬ್ಬನಿಗೇ ಗೊತ್ತು.

೩೦೦೪. ಸೆರಗೊಡ್ಡು = ಬೇಡು, ಅಂಗಲಾಚು

ಪ್ರ : ಇನ್ನೊಬ್ಬರ ಮುಂದೆ ಸೆರಗೊಡ್ಡುವ ಸ್ಥಿತಿ ಬರೋದು ಬೇಡ, ಕಷ್ಟಪಟ್ಟು ದುಡಿ

೩೦೦೫. ಸೆರಗನ್ನು ಬಾಯಿಗೆ ತುರುಕಿಕೊಳ್ಳು = ನಗು ತಡೆಹಿಡಿಯಲು ಯತ್ನಿಸು

ಪ್ರ : ತುಂಬಿದ ಸಭೇಲಿ ಅವನಾಡಿದ ಮಾತನ್ನು ಕೇಳಿ, ಆಕೆ ಸೆರಗನ್ನು ಬಾಯಿಗೆ ತುರುಕಿಕೊಂಡಳು.

೩೦೦೬. ಸೆರಗನ್ನು ಹರಿ = ಸಂಬಂಧ ಕಡಿದುಕೊಳ್ಳು

(ಸೆರಗು = ಸೀರೆಯ ಕೊನೆ, ಹೆಗಲ ಮೇಲೆ ಇಳಿಬಿಡುವ ಭಾಗ)

ಪ್ರ : ಸೆರಗನ್ನು ಹರಿದದ್ದೂ ಆಯ್ತು, ಹೊರಕ್ಕೆ ಬಂದದ್ದೂ ಆಯ್ತು.

೩೦೦೭. ಸೆರಗು ಹಾಸು = ದೇಹ ಒಪ್ಪಿಸು, ಸುರತಕ್ರೀಡೆಯಲ್ಲಿ ತೊಡಗು

ಪ್ರ : ಬಂದು ಬಂದೋರಿಗೆಲ್ಲ ಸೆರಗು ಹಾಸೋ ಸೂಳೆ ಅಂತ ತಿಳ್ಕೊಂಡ ನನ್ನನ್ನು?

೩೦೦೮. ಸೆಲೆ ಅಡಗು = ಮರಣ ಹೊಂದು, ಮಾತು ನಿಲ್ಲು

(ಸೆಲೆ < ಸೊಲ್ಲು = ಮಾತು)

ಪ್ರ : ಅವನ ಸೆಲೆ ಅಡಗಿದಾಗ, ನಾನು ಸಲೀಸಾಗಿದ್ದೇನು.

೩೦೦೯. ಸೆಲೆ ಹೊಡಿ = ಪ್ರತಿಧ್ವನಿಗೊಳ್ಳು

(ಸೆಲೆ < ಚಿಲೈ (ತ) = ಪ್ರತಿಧ್ವನಿ)

ಪ್ರ : ಮನೆಯಾದ ಮನೆಯೇ ಸೆಲೆ ಹೊಡಿಯೋ ಹಾಗೆ ಆಕರಿಸಬೇಡ, ಮೆಲ್ಲಗೆ ಮಾತಾಡು.

೩೦೧೦. ಸೆಲೆತುಕೊಳ್ಳು = ಊದಿಕೊಳ್ಳು, ಗುಳ್ಳೆಗಳೇಳು

(ಸೆಲೆ < ಶೆಲೆ = ನೀರಲ್ಲಾಡುವುದರಿಂದ ಚರ್ಮ ಬಿಳಿಚಿಕೊಂಡು ಸಣ್ಣ ಸಣ್ಣ ಗುಳ್ಳೆಗಳಾಗುವುದು)

ಪ್ರ : ಕಾಲು ಸೆಲೆತುಕೊಂಡರೂ ವೈದ್ಯರಿಗೆ ತೋರಿಸದೆ ಸುಮ್ಮನೆ ಇದ್ದೀಯಲ್ಲ?

೩೦೧೧. ಸೇದಿಕೊಳ್ಳು = ಮುನಿಸಿಕೊಳ್ಳು, ಸೆಟೆ-ದು-ಕೊ-ಳ್ಳು, ಮಾತಾಡದಿರು

ಪ್ರ : ಹಬ್ಬಕ್ಕೆ ಸ್ಯಾಲೆ ತರಲಿಲ್ಲ ಅಂತ ಸೊಸೆ ಸೇದಿಕೊಂಡು ಕುಂತವಳೆ.

೩೦೧೨. ಸೇದಿ ಹೋಗು = ಸೆಟೆದುಕೊಳ್ಳು, ಮರಣ ಹೊಂದು

(ಸೇದು = ನೆಟ್ಟಗಾಗು) ಪ್ರಾಣ ಹೋದ ಮೇಲೆ ಕೈಕಾಲು ಸೇದಿಕೊಳ್ಳುತ್ತವೆ, ನಾಲಗೆ ಸೇದಿಕೊಳ್ಳುತ್ತದೆ. ಅವುಗಳನ್ನು ಮಡಿಚಲಾಗುವುದಿಲ್ಲ. ಗೂಟದಂತೆ ನೆಟ್ಟಗೆ ಇರುತ್ತವೆ.

ಪ್ರ : ಕೋಲಿಗೆ ಜಾಗ ಕೊಡು ಅಂತಾನಲ್ಲೆ, ಇವನ ನಾಲಗೆ ಸೇದಿ ಹೋಗ!

೩೦೧೩. ಸೇಪು ತೆಗೆ = ಛೀಮಾರಿ ಮಾಡು, ಮುಖದಲ್ಲಿ ನೀರಿಳಿಸು

(ಸೇಪು < Shape = ರೂಪ, ವ್ಯಕ್ತಿತ್ವ)

ಪ್ರ : ಅವನಿಗೆ ಇವುತ್ತ ಚೆನ್ನಾಗಿ ಸೇಪು ತೆಗೆದು ಕಳಿಸಿದ್ದೀನಿ.

೩೦೧೪. ಸೇರಿಗೆ ಸವಾಸೇರಾಗು = ಸೆಣಸಿ ನಿಲ್ಲು, ನೀನು ಅಂದ್ರೆ ನಿಮ್ಮಪ್ಪ ಎನ್ನು

(ಸವಾಸೇರು = ಒಂದೂಕಾಲು ಸೇರು)

ಪ್ರ : ಆಳು ದಣೀಗೆ ಸೇರಿಗೆ ಸವಾಸೇರು ಉತ್ತರಕೊಟ್ಟಾಗ, ದಣಿ ದಣಿದಂತೆ ಕಂಡರು

೨೦೧೫. ಸೈ ಅನ್ನಿಸಿಕೊಳ್ಳು = ಮೆಚ್ಚುಗೆಗೆ ಪಾತ್ರವಾಗು, ಕೊಂಡಾಡಿಸಿಕೊಳ್ಳು

(ಸೈ < ಸಯಿ(ಹಿಂ) = ಸರಿ)

ಪ್ರ : ಗಾದೆ – ಅಪ್ಪನ ಮನೇಲಿ ಸೈ ಅನ್ನಿಸಿಕೊಂಡೋಳು
ಗಂಡನ ಮನೇಲೂ ಸೈ ಅನ್ನಿಸಿಕೊಳ್ತಾಳೆ.

೨೦೧೬. ಸೊಕ್ಕ ಸೊರಗ ನಿದ್ದೆ ಹೋಗು = ಗಾಢ ನಿದ್ರೆ ಮಾಡು

(ಸೊಕ್ಕಸೊರಗ = ಸೊಕ್ಕಿ ಹೋದಂತೆ ಸೊರಗಿ ಹೋದಂತೆ)

ಪ್ರ : ಸೊಕ್ಕ ಸೊರಗ ನಿದ್ದೆ ಹೋಗಿದ್ದೋನಿಗೆ, ನಾನು ಬಂದು ಹೋಗಿದ್ದು ಹೆಂಗೆ ಗೊತ್ತಾಗಬೇಕು?

೩೦೧೭. ಸೊಕ್ಕಿ ಸೊಲಗೆ ನೀರು ಕುಡಿ = ಅಹಂಕಾರದಿಂದ ಮೆರೆ

(ಸೊಲಗೆ = ಒಂದು ಚಿಕ್ಕ ಅಳತೆಯ ಪ್ರಮಾಣ; ಸೇರು, ಅಚ್ಚೇರು, ಪಾವು, ಅರೆಪಾವು, ಚಟಾಕು ಇದ್ದ ಹಾಗೆ ಇದೂ ಒಂದು ಅಳತೆಯ ಉಪಕರಣ)

ಪ್ರ : ಸಿಕ್ಕಿ ಸಿಕ್ಕಿದ್ದನ್ನು ಮುಕ್ಕಿ, ಸೊಕ್ಕಿ ಸೊಲಗೆ ನೀರು ಕುಡೀತಾಳೆ

೩೦೧೮. ಸೊಕ್ಕಿ ಹೋಗು = ಸುಸ್ತಾಗು, ಜೀವ ದಿಳ್ಳಿಸಿದಂತಾಗು

ಪ್ರ : ಓಡಿ ಓಡಿ ಸೊಕ್ಕಿದಂತಾಗಿ ಕೆಳಕ್ಕೆ ಬಿದ್ದುಬಿಟ್ಟ.

೩೦೧೯. ಸೊಕ್ಕು ಮದ್ದು ಹಾಕು = ಪ್ರಜ್ಞೆ ತಪ್ಪಿಸುವ ಮದ್ದನ್ನು ಕೊಡು

ಹೊಂಡದಲ್ಲಿರುವ ಮೀನುಗಳನ್ನು ಹಿಡಿಯಲು ಒಂದು ಬಗೆಯ ಸೊಕ್ಕು ಬರುವ ಸೊಪ್ಪನ್ನು ಅರೆದು ನೀರಿಗೆ ಹಾಕಿದರೆ, ಮೀನುಗಳು ಪ್ರಜ್ಞೆ ತಪ್ಪಿ ಹೊಟ್ಟೆ ಮೇಲಾಗಿ ನೀರಿನ ಮೇಲೆ ತೇಲುತ್ತವೆ. ಆಗ ಮೀನು ಬೇಟೆಗಾರ ಅವುಗಳನ್ನು ಹಿಡಿದು ಬುಟ್ಟಿಗೆ ಹಾಕಿಕೊಳ್ಳುತ್ತಾನೆ. ಆ ಹಿನ್ನೆಲೆಯಿಂದ ಮೂಡಿರುವ ನುಡಿಗಟ್ಟು ಇದು.

ಪ್ರ : ಸೊಕ್ಕು ಮದ್ದು ಹಾಕಿದೇಟಿಗೇ ಮೀನುಗಳೆಲ್ಲ ಹೊಟ್ಟೆ ಮೇಲಾಗಿ ತೇಲತೊಡಗಿದವು.

೩೦೨೦. ಸೊಕ್ಕು ಮುರಿ = ಅಹಂಕಾರ ಧ್ವಂಸ ಮಾಡು

(ಸೊಕ್ಕು = ನೆಣ, ಗರ್ವ)

ಪ್ರ : ಸೊಕ್ಕು ಮುರಿದ ಮೇಲೆ ಹಲ್ಲು ಕಿತ್ತು ಹಾವಿನಂತಾದ.

೩೦೨೧. ಸೊಟ್ಟಗ ಇದ್ದೂ ಕೈ ಸುಟ್ಟುಕೊಳ್ಳು = ಉಪಾಯ ಇದ್ದೂ ಅಪಾಯ ತಂದುಕೊಳ್ಳು

(ಸೊಟ್ಟಗ < ಸಟ್ಟುಗ = ಸೌಟು)

ಪ್ರ : ಸೊಟ್ಟಗ ಇದ್ದೂ ಕೈ ಸುಟ್ಟುಕೊಳ್ಳೋದು ಹೆಡ್ಡತನ

೩೦೨೨. ಸೊಣಮಣ ಎನ್ನು = ಕೆಲಸಕ್ಕೆ ಬರದ ಮಾತಾಡು, ವಿನಾಕಾರಣ ತಡಮಾಡು

ಪ್ರ : ಗಾದೆ – ಸೊಣಮಣ ಅನ್ನುವಾಗ್ಗೆ ಸರೊತ್ತಾಯ್ತು

ಗಣಗಣ ಕಾದ ಗುಳಾನ ನೀರಿಗದ್ದೋದು ಯಾವಾಗ?

೩೦೨೩. ಸೊಣಗ ಬುದ್ಧಿ ತೋರಿಸು = ಸಾಕಿದವರ ಕಾಲು ಕಚ್ಚುವ ಕೆಲಸ ಮಾಡು

(ಸೊಣಗ < ಶುನಕ = ನಾಯಿ)

ಪ್ರ : ಸಾಕಿದವರ ಕಾಲು ಕಚ್ಚೋ ಸೊಣಗ ಬುದ್ಧಿ ತನ್ನದು ಅಂತ ತೋರಿಸ್ಕೊಂಡ, ಕ್ರಿಯಾಭ್ರಷ್ಟ!

೩೦೨೪. ಸೊಣೆ ತೊಣಕು = ಹೊಂಡದ ನೀರು ಎರಚಿ ಮೀನು ಹಿಡಿ

(ಸೊಣೆ < ದೊಣೆ = ಕೊಳ, ಹೊಂಡ; ತೊಣಕು = ನೀರು ಬತ್ತಿಸಿ ಮೀನು ಹಿಡಿ)

ಪ್ರ : ಜಾನಪದದ ಸೊಣೆ ತೊಣಕಿದವನು, ಎಂದೂ ಭಾವಾಭಿವ್ಯಕ್ತಿಗಾಗಿ ತಿಣುಕುವುದಿಲ್ಲ.

೩೦೨೫. ಸೊನ್ನೆ ಬೀಳು = ಏನೂ ಸಿಗದಂತಾಗು, ಏನೂ ಇಲ್ಲದಂತಾಗು

(ಸೊನ್ನೆ < ಶೂನ್ಯ = ಬಯಲು, ಖಾಲಿ)

ಪ್ರ : ನಿನ್ನ ಜೊತೆ ಆಡ್ಕೊಂಡು ರಾತ್ರಿ ಊಟಕ್ಕೆ ಸೊನ್ನೆ ಬೀಳ್ತು.

೩೦೨೬. ಸೊಪ್ಪು ಹಾಕದಿರು = ಲಕ್ಷ್ಯ ಕೊಡದಿರು, ಕಿವಿ ಮೇಲೆ ಹಾಕಿಕೊಳ್ಳದಿರು

ರೇಷ್ಮೆ ಬೇಸಾಯ ಬೇಸಾಯ ಈ ನುಡಿಗಟ್ಟಿಗೆ ಮೂಲ ರೇಷ್ಮೆ ಹುಳುಗಳನ್ನು ಸಾಕಣೆ ಮಾಡುವವರು ನಿಗದಿತ ವೇಳೆಗೆ ಸರಿಯಾಗಿ ಅವುಗಳಿಗೆ ಸೊಪ್ಪನ್ನು ಉತ್ತರಿಸಿ ಹಾಕಿ, ಅವು ಮೇಯಲು ಅನುವು ಮಾಡಿಕೊಡಬೇಕು. ಹಾಗೆ ಮೈಯೆಲ್ಲ ಎಚ್ಚರವಾಗಿ ಸಾಕಿದರೆ ಉತ್ತಮ ಬೆಳೆ ಬರುತ್ತದೆ. ಅಂದರೆ ಲಕ್ಷ್ಯವಿಲ್ಲದಿದ್ದರೆ ಆ ಬೆಳೆ ನಾಶವಾಗುತ್ತದೆ ಎಂಬ ಭಾವ ಅನುಕ್ತ.

ಪ್ರ : ಸೊಪ್ಪು ಹಾಕದಿದ್ದರೆ, ಅವನೇ ಸಪ್ಪೆ ಮೋರೆ ಹಾಕ್ಕೊಂಡು ಬಂದು ಅಂಗಲಾಚ್ತಾನೆ.

೩೦೨೭. ಸೊಬಾವ ಸರಿಬೀಳದಿರು = ವರ್ತನೆ ಹಿಡಿಸದಿರು

(ಸೊಬಾವ < ಸ್ವಭಾವ = ವರ್ತನೆ)

ಪ್ರ : ಗಾದೆ – ಸೊಬಾವ ಸರಿಬೀಳದೆ ಸೊರೂಪ ಹುಳಿ ಹುಯ್ಕೊಂತೀಯ?

೩೦೨೮. ಸೊರಗಿ ಸೊಪ್ಪಾಗು = ಬಾಡಿ ಬತ್ತಿ ಹೋಗು

(ಸೊರಗು = ಬಾಡು, ಶಕ್ತಿಗುಂದು)

ಪ್ರ : ಸೊರಗಿ ಸೊಪ್ಪಾಗಿ ಕುಳಿತಿರೋನ ಮೇಲೆ ಎರಗಿ ಬೀಳ್ತಿಯಲ್ಲ?

೩೦೨೯. ಸೊರ ಇರುಕಿಸಿಕೊಳ್ಳು = ಮೇಲೆ ತೊಟ್ಟಿನಿಂದ ಹಾಲು ಜಿನುಗದಂತೆ ತಡೆಹಿಡಿದುಕೊಳ್ಳು

(ಸೊರ < ಸೊರೆ < ತೊರೆ = ಹಾಲು ಸುರಿಯುವಿಕೆ, ಜಿನುಗುವಿಕೆ) ದನಗಳಿಗೂ ತಾಯ್ತನ ಅನ್ನುವ ಪ್ರೀತಿ ಇರುತ್ತದೆ. ಕರುವನ್ನು ಮೊದಲು ಕುಡಿಯಲು ಬಿಡದೆ ದುರಾಸೆಯ ಜನ ತಾವು ಮೊದಲು ಕರೆದುಕೊಳ್ಳಲು ಹೋದರೆ ಹಸು ಹಾಲನ್ನು ಇರುಕಿಸಿಕೊಳ್ಳುತ್ತದೆ. ಅದರ ವತ್ಸ ಪ್ರೇಮ ನಿಸರ್ಗಸಹಜವಾದದ್ದು.

ಪ್ರ : ಕರೆದರೆ ಹಾಲು ಬರಲ್ಲ, ಲಗಾಡಿ ಹಸ ಸೊರ ಇರುಕಿಸಿಕೊಂಡಿದೆ.

೩೦೩೦. ಸೊರ ಬಿಡು = ಹಾಲಿಳಿದ ಕೆಚ್ಚಲು ತುಂಬಿದ ಕೊಡವಾಗು

ಪ್ರ : ಹಸು ಸೊರ ಬಿಡಬೇಕಾದರೆ ಮೊದಲು ಕುಡಿಯೋಕೆ ಕರು ಬಿಡಬೇಕು.

೩೦೩೧. ಸೊರ್ರ‍ಬುಸ್ಸ ಎನ್ನು = ಅಳು, ದುಃಖಿಸು

ಜನಪದ ನುಡಿಗಟ್ಟುಗಳು ಚಿತ್ರಕ ಶಕ್ತಿಯನ್ನು ಒಳಗೊಂಡಿವೆ. ಅಳುವಾಗ ಮೂಗಿನಿಂದ ಗೊಣ್ಣೆ ತೊಟ್ಟಿಕ್ಕುತ್ತದೆ. ಅದನ್ನು ಮೇಲಕ್ಕೆ ‘ಸೊರ್’ ಎಂದು ಎಳೆದುಕೊಳ್ಳುತ್ತಾರೆ. ದುಃಖದ ಆವೇಗದಿಂದ ಭುಸ್ ಭುಸ್ ಎಂದು ಉಸಿರು ಬಿಡುತ್ತಾರೆ, ತಿದಿ ಒತ್ತಿದಂತೆ. ಅಳುವಾಗಿನ ಆ ಕ್ರಿಯೆಗಳ ಪಡಿಯಚ್ಚಿನಿಂದಲೇ ಎರಕಗೊಂಡಿದೆ ಈ ನುಡಿಗಟ್ಟು.

ಪ್ರ : ಹೆಣದ ಸುತ್ತ ಕುಳಿತವರೆಲ್ಲ ಸೊರ್ರ‍ಬುಸ್ಸ ಎನ್ನುವವರೇ.

೩೦೩೨. ಸೊಲ್ಲಡಗು = ಮಾತು ನಿಲ್ಲು, ಸಾಯು

(ಸೊಲ್ಲು < ಶೊಲ್ (ತ) = ಮಾತು, ಶಬ್ದ)

ಪ್ರ : ನನ್ನ ಮೇಲೆ ಇಲ್ಲದ ಗುಲ್ಲೆಬ್ಬಿಸಿದ ಅವನ ಸೊಲ್ಲಡಗುವಂತೆ ಮಾಡಪ್ಪ ದೇವರೇ ಅಂತ ನಿತ್ಯ ಮೊರೆ ಇಡ್ತೀನಿ.

೩೦೩೩. ಸೋಕಿದರೆ ಸುಂಕ ತೆಗೆದುಕೊಳ್ಳು = ಸುಲಿದು ತಿನ್ನು

(ಸೋಕು = ಸ್ಪರ್ಶಿಸು; ಸುಂಕ = ತೆರಿಗೆ) ಸಂಭೋಗಿಸಿದರೆ ಸುಂಕ ತೆಗೆದುಕೊಳ್ಳುವುದಿರಲಿ, ಮೈ ಸೋಕಿದರೂ ಸುಂಕ ವಸೂಲ್ ಮಾಡುವ ವೇಶ್ಯಾವಾಟಿಕೆಗಳ ವ್ಯವಹಾರದ ಹಿನ್ನೆಲೆಯಲ್ಲಿ ಮೂಡಿದ ನುಡಿಗಟ್ಟಿದು.

ಪ್ರ : ಅವಳ್ನ ಸಾಮಾನ್ಯ ಅಂತ ತಿಳ್ಕೋಬೇಡ, ಸೋಕಿದರೆ ಸುಂಕ ತಗೊಳ್ತಾಳೆ.

೩೦೩೪. ಸೋಗು ಹಾಕು = ವೇಷ ಕಟ್ಟು, ನಟನೆ ಮಾಡು

(ಸೋಗು = ವೇಷ)

ಪ್ರ : ಸೋಗು ಹಾಕಿ ಹೊಟ್ಟೆ ಹೊರೆಯೋದ್ಕಿಂತ ದೇವರು ಕೊಟ್ಟ ರೆಟ್ಟೇಲಿ ದುಡಿದುಣ್ಣೋರು ವಾಸಿ.

೩೦೩೫. ಸೋಜಿಗವಾಗು = ವಿಸ್ಮಯವಾಗು

ಪ್ರ : ಸೂಜೀಲಿ ಹೊಡೆದದ್ದಕ್ಕೆ ಸೊರಗಿ ಬಿದ್ದ ಮಾಯಾಂಗನೆ ಕಂಡು ಸೋಜಿಗವಾಯ್ತು.

೩೦೩೬. ಸೋಟೆಗೆಟ್ಟು = ಕಟಬಾಯಿಗೆ ತಿವಿ

(ಸೋಟೆ = ಕಟವಾಯಿ, ಕೆನ್ನೆ ; ಹೆಟ್ಟು = ತಿವಿ)

ಪ್ರ : ಗಾದೆ – ತೀಟೆ ತೀರಿದ ಮೇಲೆ ಸೋಟೆಗೆಟ್ಟಿದ.

೩೦೩೭. ಸೋಡಾಚೀಟಿ ಕೊಡು = ವಿವಾಹ ವಿಚ್ಛೇದನವಾಗು

ಪ್ರ : ಮೊದಲನೆ ಹೆಂಡ್ರಿಗೆ ಸೋಡಾ ಚೀಟಿ ಕೊಟ್ಟು, ಇವಳ್ನ ಮದುವೆಯಾದ.

೩೦೩೮. ಸೋಬನ ಮಾಡು = ತಕ್ಕ ಶಾಸ್ತಿ ಮಾಡು

(ಸೋಬನ < ಶೋಭನ = ಪ್ರಸ್ತ, ನಿಷೇಕ)

ಪ್ರ : ನಾಳೆ ಬರಲಿ, ಅವನಿಗೆ ಸೋಬನ ಮಾಡಿ ಕಳಿಸ್ತೀನಿ.

೩೦೩೯. ಸೋರಿ ಹೋಗು = ನಷ್ಟವಾಗು

ಪ್ರ : ಬಂದ ಆದಾಯವೆ‌ಲ್ಲ ಸೋರಿ ಹೋಗಿ ತಲೆ ಮೇಲೆ ಕೈಹೊತ್ಕೊಂಡು ಕೂತವನೆ.

೩೦೪೦. ಸೋಸಿ ಹಾಕಿದಂತಿರು = ಕೃಶವಾಗು, ಬತ್ತಿ ಹೋಗು

(ಸೋಸು < ಶೋಧಿಸು = ಕಲ್ಲು ಮಣ್ಣು ಕಸ ಕಡ್ಡಿ ತೆಗೆದು ಶುದ್ಧಗೊಳಿಸು)

ಪ್ರ : ಅಷ್ಟು ದೊಡ್ಡಾಳು ಈಗ ಸೋಸಿ ಹಾಕಿದಂಗಾಗಿದ್ದಾನೆ.

೩೦೪೧. ಸೋಸಿ ನೋಡು = ಮೂಲ ಚೂಲವನ್ನೆಲ್ಲ ಸಮಗ್ರವಾಗಿ ಪರಿಶೀಲಿಸಿ ನೋಡು

ಪ್ರ : ಅವನ ಜಾಯಮಾನವನ್ನೆಲ್ಲ ಜಾಲಾಡಿದ್ದೇ ಅಲ್ಲದೆ ಸೋಸಿಯೂ ನೋಡಿದ್ದೇನೆ.

೩೦೪೨. ಸೌರಣೆ ಮಾಡು = ಸರಿದೂಗಿಸು

(ಸೌರಣೆ < ಸವರಣೆ < ಸಂವರಣೆ < ಸಂವರಣ < ಸಂಭರಣ = ಸರಿದೂಗಿಸುವಿಕೆ)

ಪ್ರ : ಈ ಮನೆಯ ಎಲ್ಲವನ್ನೂ ಎಲ್ಲರನ್ನೂ ಸೌರಣೆ ಮಾಡೋಕೆ ನನ್ನಿಂದಾಗಲ್ಲ.

೩೦೪೩. ಸಂಗನಂತಾಡು = ನಪುಂಸಕನಂತಾಡು

(ಸಂಗ = ಷಂಡ ; ನಪುಂಸಕ)

ಪ್ರ : ಸಂಗನಂತಾಡೋನ್ನ ಕೈಹಿಡಿಯೋ ಬದಲು ಮಂಗನಂತಾಡೋನ್ನ ಕೈಹಿಡಿಯೋದು ಮೇಲು.

೩೦೪೪. ಸಂಚಕಾರವಾಗು = ಕೇಡಾಗು, ಮೋಸವಾಗು

ಪ್ರ : ಸಂಚುಗಾರರ ಮಾತಿಗೆ ಒಪ್ಪಿದರೆ ಮುಂದೆ ನಿನಗೇ ಸಂಚಕಾರವಾಗ್ತದೆ.

೩೦೪೫. ಸಂಚಿ ತುಂಬು = ಮಡಿಲುದುಂಬು

(ಸಂಚಿ = ಚೀಲ, ಎಲೆಅಡಿಕೆ ಚೀಲ)

ಪ್ರ : ಸಂಚಿ ತುಂಬುವ ಶಾಸ್ತ್ರ ಆದ ಮೇಲೆ, ಉಳಿದದ್ದು ಮಾಡಿಕೊಂಡರಾಯ್ತು.

೩೦೪೬. ಸಂಜೇಲಿ ಬಂದ ನಂಟನಾಗು = ಉಳಿದುಕೊಳ್ಳು, ಠಿಕಾಣಿ ಹೂಡು

ಪ್ರ : ಗಾದೆ – ಸಂಜೇಲಿ ಬಂದ ಮಳೆ, ಸಂಜೇಲಿ ಬಂದ ನಂಟ ಬೇಗ ಹೋಗಲ್ಲ.

೩೦೪೭. ಸಂತೆ ಮಾತು ಕಟ್ಟಿಕೊಳ್ಳು = ಗಾಳಿ ಸುದ್ದಿ ನಂಬಿಕೊಳ್ಳು

ಪ್ರ : ಸಂತೆ ಮಾಡು ನಂಬ್ಕೊಂಡು ಸಂಸಾರದಲ್ಲಿ ಕಂಟು ಮಾಡ್ಕೊಂತೀಯ?

೩೦೪೮. ಸಂತೆ ಯಾಪಾರ ಮುಗಿಸು = ಮರಣ ಹೊಂದು.

(ಯಾಪಾರ < ವ್ಯಾಪಾರ = ಖರೀದಿ, ಮಾರಾಟ) ಸಂತೆ ಮುಂಜೇಲಿ ಕೂಡಿ ಸಂಜೇಲಿ ಖಾಲಿಯಾಗುವಂಥದು. ಮೊದಲು ಬಂದವರು ಸಂತೆ ಮುಗಿಸಿ ವಾಪಸ್ಸು ಹೋಗುತ್ತಿದ್ದರೆ, ಇನ್ನೂ ಕೆಲವರು ತಡವಾಗಿ ಸಂತೆಗೆ ಬರುತ್ತಿರುತ್ತಾರೆ. ಹಾಗೆಯೇ ಮನುಷ್ಯ ಜೀವನವೂ ಸಹ. ಬರುವವರು ಬರುತ್ತಿರುತ್ತಾರೆ ಹೋಗುವವರು ಹೋಗುತ್ತಿರುತ್ತಾರೆ, ಸಂತೆ ವ್ಯಾಪಾರ ಮುಗಿಸಿಕೊಂಡು.

ಪ್ರ : ಅವನು ಸಂತೆ ಯಾಪಾರ ಮುಗಿಸಿ ವಾಪಸ್ಸು ಹೋದದ್ದೇ ಗೊತ್ತಾಗಲಿಲ್ಲ.

೩೦೪೯. ಸಂತೆ ಸೇರು = ಗುಂಪು ಕೂಡು

(ಸಂತೆ < ಸಂಸ್ಥೆ < ಸಂಸ್ಥಾ = ಕೂಟ)

ಪ್ರ : ಗಾದೆ – ಸಂತೆ ಸೇರೋಕೆ ಮೊದಲು ಗಂಟುಕಳ್ಳರು ಸೇರಿದರು.

೩೦೫೦. ಸಂದಿಗೊಂದಿಯೆಲ್ಲ ಸಿದುಗು = ಮೂಲೆ ಮುಡುಕನ್ನೆಲ್ಲ ಹುಡುಕು

(ಸಿದುಗು = ಹುಡುಕು)

ಪ್ರ : ಸಂದಿಗೊಂದಿನೆಲ್ಲ ಸಿದುಗಿದೆ, ಆದರೂ ಸಿಗಲಿಲ್ಲ.

೩೦೫೧. ಸಂಧೀಲಿ ಸಮಾರಾಧನೆ ಮಾಡು = ಇಕ್ಕಟ್ಟಿನಲ್ಲಿ ಸ್ವಾರ್ಥವನ್ನು ಸಾಧಿಸಿಕೊಳ್ಳು

(ಸಮಾರಾಧನೆ = ಸಂತರ್ಪಣೆ)

ಪ್ರ : ಈ ಕಾಲದಲ್ಲಿ ಸಂಧೀಲಿ ಸಮಾರಾಧನೆ ಮಾಡೋರೆ ತುಂಬಿ ತುಳುಕ್ತಾರೆ.

೩೦೫೨. ಸಂದು ಆಗು = ಮಂದವಾಗು

(ಸಂದು = ಮಕ್ಕಳಿಗೆ ಅಜೀರ್ಣದಿಂದ ಕಿವಿಯೆಲ್ಲ ತಣ್ಣಗಾಗಿ ಭೇದಿಯಾಗುವುದು)

ಪ್ರ : ಮಗುವಿಗೆ ಸಂದು ಆಗಿದೆ, ಸಂದು ಹಾಕಿ.

೩೦೫೩. ಸಂದು ಹಾಕು = ಸುಟಿಗೆ ಹಾಕು

ಮಕ್ಕಳಿಗೆ ಮಂದವಾಗಿ, ಅಜೀರ್ಣವಾಗಿ ಭೇದಿಯಾಗತೊಡಗಿದರೆ ಸಂದು ಆಗಿದೆಯೆಂದು ಹಳ್ಳಿಯ ಜನ ಬಳೆಯ ಓಡನ್ನು ಕಾಯಿಸಿ ಕಳಗುಣಿಗೆ (ಹೆಕ್‌ಶಿರದಲ್ಲಿರುವ ಕೆಳಗುಣಿಗೆ) ಸುಡಿಗೆ ಹಾಕುವುದಕ್ಕೆ ಸಂದು ಹಾಕವುದು ಎನ್ನುತ್ತಾರೆ. ಇದು ಅವೈಜ್ಞಾನಿಕ. ಇತ್ತೀಚೆಗೆ ಈ ಮೌಢ್ಯಾಚರಣೆ ಮಾಯವಾಗುತ್ತಿರುವುದು ಸಂತೋಷದ ವಿಷಯ.

ಪ್ರ : ಮೊದಲು ನೀನು ಸಂದು ಹಾಕು, ಮಗು ಹುಷಾರಾಗ್ತದೆ.

೩೦೫೪. ಸುಂಕು ಮುರಿಯದಿರು = ಗರಿಗರಿಯಾಗಿರು, ಬಳಸಿ ಸವಕಲಾಗದಿರು

(ಸುಂಕು = ತಾಜಾತನ, ಮೇಲುಗಡೆಯ ಉರುಕು)

ಪ್ರ : ಜನಪದರ ನುಡಿಗಟ್ಟುಗಳೂ ಒಂದೇ, ಸುಂಕು ಮುರಿಯದ ನಾಣ್ಯಗಳೂ ಒಂದೆ.

೩೦೫೫. ಸುಂಟರಗಾಳಿ ಏಳು = ಮಣ್ಣ ಕಣಕ್ಕೂ, ಹುಲ್ಲಿನ ಗರಿಗೂ ಮೇಲೇರುವ ಭಾಗ್ಯ ಬರು.

ಪ್ರ : ಸುಂಟರಗಾಳಿ ಎದ್ದರೆ, ಹುಲ್ಲುಕಡ್ಡೀನೂ ಮುಗಿಲಿಗೇರ್ತದೆ, ಮರೀಬೇಡ.

೩೦೫೬. ಸೊಂಟದ ಕೆಳಗಿನ ಮಾತಾಡು = ಮರ್ಮಾಂಗಗಳ ಮಾತಾಡು, ಅಶ್ಲೀಲ ಮಾತಾಡು.

ಪ್ರ : ದಯವಿಟ್ಟು ನೀನು ಸೊಂಟದ ಕೆಳಗಿನ ಮಾತಾಡಬೇಡ.

೩೦೫೭. ಸೊಂಟ ಮುರಿಯ ಗೇಯು = ನಡುಮುರಿಯುವಂತೆ ಕೆಲಸ ಮಾಡು, ಶ್ರಮಿಸು

ಪ್ರ : ಗಾದೆ – ಸೊಂಟ ಮುರಿಯ ಗೇಯೋಳಿಗಿಂತ
ಸೊಂಟವೇರಿ ಕೇಯೋಳೆ ಹೆಚ್ಚು