೩೧೩೩. ಹಸವಲ್ಲದೋರ ಹತ್ರ ಪಿಸುಮಾತಾಡದಿರು = ಕೆಟ್ಟವರ ಬಳಿ ಗುಟ್ಟು ಹೇಳದಿರು
(ಹಸವಲ್ಲದೋರು < ಹಸವಲ್ಲದವರು = ಒಳ್ಳೆಯವರಲ್ಲದವರು ಅಂದರೆ ಕೆಟ್ಟವರು)
ಪ್ರ : ಹಸವಲ್ಲದೋರ ಹತ್ರ ಪಿಸುಮಾತಾಡಿ, ತಾನೂ ಹಾಳಾದ ಅನುಯಾಯಿಗಳನ್ನೂ ಹಾಳು ಮಾಡಿದ.
೩೧೩೪. ಹಸಿ ಮೈಯಾಗಿರು = ಒಂದು ಮನಃಸ್ಥಿತಿಯಿಂದ ಮತ್ತೊಂದು ಮನಃಸ್ಥಿತಿಗೆ
ಪಕ್ಕಾ-ದ-ವ-ರಾಗಿರು
(ಹಸಿ ಮೈಯವರು = ಬಾಣಂತಿ, ನೆರೆದ ಹೆಣ್ಣು ಮದುವೆಯಾದ ಹೆಣ್ಣು ಗಂಡುಗಳು)
ಪ್ರ : ಹಸಿ ಮೈ ಆಗಿರೋರು ಹುಣಿಸೆಮರದ ಕೆಳಗೆ ಹೋಗಬಾರದು.
೩೧೩೫. ಹಸಿ ಸೂಳೆಯಂತಿರು = ಅಪ್ಪಟ ವೇಶ್ಯೆಯಂತಿರು
(ಹಸಿ = ಅಪ್ಪಟ, ಥೇಟ್; ಪಂಪನ ‘ಪಚ್ಚ ಪಸಿಯ ಗೋವಳ’ ಎಂಬ ಅಭಿವ್ಯಕ್ತಿ ಗಮನಿಸಿ)
ಪ್ರ : ಹಸಿ ಸೂಳೆಯಂಗೆ ವರ್ತಿಸ್ತಾಳೆಯೇ ವಿನಾ ಹಸನಾದ ಗರತಿಯಂಗೆ ವರ್ತಿಸಲ್ಲ.
೩೧೩೬. ಹಸಿ ತುರುಕನಂತಿರು = ಥೇಟ್ ಸಾಬರಂತೆ ಕಾಣು
ಪ್ರ : ನೀನು ಪೈಜಾಮ ಹಾಕ್ಕೊಂಡ್ರೆ ಒಳ್ಳೆ ಹಸಿ ತುರುಕನಂಗೆ ಕಾಣಿಸ್ತಿ.
೩೧೩೭. ಹಸಿ ಸುಳ್ಳು ಹೇಳು = ಅಪ್ಪಟ ಬೂಸಿ ಹೇಳು
ಪ್ರ : ಹಸಿ ಸುಳ್ಳು ಹೇಳೋದ್ರಲ್ಲಿ ನಿನ್ನ ಬಿಟ್ರೆ ಇನ್ನಿಲ್ಲ.
೩೧೩೮. ಹಸು ತಿರುಗಿರು = ಬಾರಿಗೆ ಬಂದಿರು
(ತಿರುಗು = ಬೆದೆಗೊಳ್ಳು)
ಪ್ರ : ಹಸು ತಿರುಗಿದೆ, ಹೋರಿ ಕೊಡಿಸಿಕೊಂಡು ಬಾ ಹೋಗು
೩೧೩೯. ಹಸುಗೆ ಮಾಡು = ಹಂಚಿಕೆ ಮಾಡು, ಭಾಗ ಮಾಡು
(ಹಸುಗೆ < ಪಸುಗೆ = ಹಂಚಿಕೆ)
ಪ್ರ : ತನ್ನ ಹಸುಗೇಲಿ ಕಬ್ಬು ಮುರಿದಿಲ್ಲ, ನನ್ನ ಹಸುಗೇಲಿ ಮುರಿದು ತಿಂದಿದ್ದಾನೆ.
೩೧೪೦. ಹಸುಬೆ ಚೀಲಕ್ಕೆ ತುಂಬು = ಹೊಟ್ಟೆಗೆ ತುಂಬು, ಉಣ್ಣು
(ಹಸುಬೆ < ಪಸುಂಬೆ = ಮಧ್ಯೆ ಬಾಯುಳ್ಳ ಉದ್ದವಾದ ಬಟ್ಟೆಯ ಚೀಲ) ಹಸುಬೆ ಚೀಲದ ಎರಡು ಕಡೆಗೂ ಧಾನ್ಯ ಅಥವಾ ಕಾಯಿಗಳನ್ನು ತುಂಬಿಕೊಂಡು, ಮಧ್ಯೆ ಬಾಯಿ ಇರುವ ಭಾಗವನ್ನು ಹೆಗಲ ಮೇಲೆ ಹಾಕಿಕೊಂಡು ಹೋಗುತ್ತಾರೆ. ‘ಒಂದು ಬಾಯಿ ಎರಡು ಹೊಟ್ಟೆ’ ಎಂಬ ಒಗಟಿಗೆ ಉತ್ತರ ಹಸುದೆ ಚೀಲವೆಂದು. ಏಕೆಂದರೆ ಅದರ ಬಾಯಿ ಭಾಗವನ್ನು ಹೆಗಲ ಮೇಲೆ ಹಾಕಿಕೊಂಡಿರುವುದರಿಂದ, ಧಾನ್ಯ ಅಥವಾ ಕಾಯಿ ತುಂಬಿದ ಅದರ ಉಬ್ಬಿದ ಹೊಟ್ಟೆಗಳು ಹಿಂದೊಂದು ಮುಂದೊಂದು ಜೋತುಬಿದ್ದಿರುತ್ತವೆ. ಮನೆಗೆ ತಂದು ಸುರಿದಾಗ ಎರಡೂ ಕಡೆಯ ಹೊಟ್ಟೆಗಳು ಖಾಲಿಯಾಗಿ ಹಸುಬೆಚೀಲದ ಎರಡು ಪದರಗಳೂ ಅಪ್ಪಚ್ಚಿಯಾಗಿ ಕಚ್ಚಿಕೊಳ್ಳುತ್ತವೆ. ಭೀಮ ಕೀಚಕನ ಮೂಳೆ ಮುಡುಕು ಕಳ್ಳು ಪಚ್ಚಿ ಎಲ್ಲ ಹೊರೆ ಬರುವಂತೆ ಮಾಡಿದಾಗ ಅವನ ಕೈಯಲ್ಲಿ ಬರಿಯ ಚರ್ಮ ಉಳಿಯಿತು ಎಂದು ಹೇಳುವಾಗ ಪಂಪ ‘ಪಸುಂಬೆ’ ರೂಪಕವನ್ನು ಸಾರ್ಥಕವಾಗಿ ಬಳಸಿಕೊಂಡಿದ್ದಾನೆ.
ಪ್ರ : ಕೊಂಚಕ್ಕೆಲ್ಲ ನಿನ್ನ ಹಸುಬೆ ಚೀಲ ತುಂಬಲ್ಲ, ‘ತಾಯಿ ಮಾಡಿದ ಹೊಟ್ಟೆ ಊರು ಮಾಡಿದ ಕೊಳಗ’ ಎಂಬ ಗಾದೆ ಮಾತು ಸುಳ್ಳಲ್ಲ.
೩೧೪೧. ಹಸೆ ಏರು = ಮದುವೆಯಾಗು
(ಹಸೆ = ಶುಭಕಾರ್ಯದಲ್ಲಿ ಬಳಸುವ ಕುಸುರಿ ಕೆಲಸ ಕಲಾತ್ಮಕ ಹಸೆಮಣೆ)
ಪ್ರ : ಇಬ್ಬರೂ ಇಷ್ಟರಲ್ಲೆ ಹಸೆ ಏರಲಿದ್ದಾರೆ.
೩೧೪೨. ಹಳಸಿಕೊಳ್ಳು = ವಿರಸ ಉಂಟಾಗು, ವೈಮನಸ್ಯಮೂಡು
(ಹಳಸು = ಹುಳಿ ಬರು, ಕೆಟ್ಟವಾಸನೆ ಬರು)
ಪ್ರ : ಅವರಿಬ್ಬರ ಸಂಬಂಧ ಈಗ ಹಳಸಿಕೊಂಡಿದೆ.
೩೧೪೩.ಹಳಿದಪ್ಪು = ಜಾಡು ಬಿಡು
(ಹಳಿ = ರೈಲು ಕಂಬಿ)
ಪ್ರ : ಹಳಿದಪ್ಪಿದೋರ್ನ ಕರ್ಕೊಂಡು ಬಂದು ಹುಳಿ ಹುಯ್ಕೊಂತೀಯ?
೩೧೪೪. ಹಳ್ಳಿ ಕೂಸು ಹತ್ತಿ ಕೂಸು ಆಡಿಸು = ಉಯ್ಯಾಲೆ ಆಡಿಸು, ಮೇಲಕ್ಕೇರಿಸಿ ಕೆಳಕ್ಕಿಳಿಸು
ಹಳ್ಳಿಯಲ್ಲಿ ಗಾಡಿಯ ಎತ್ತುಗಳನ್ನು ಬಿಚ್ಚಿಕೊಂಡು, ಗಾಡಿಯ ಮೂಕನ್ನು ಕೆಳಕ್ಕಿಳಿಸಿ ಮನೆಗೆ ಹೋಗುತ್ತಾರೆ. ಮೂಕಿಗೆ ಕಟ್ಟಿರುವ ನೊಗವನ್ನು ಬಿಚ್ಚಿರುವುದಿಲ್ಲ. ಆಗ ಹುಡುಗರು ನೊಗದ ಒಂದುಕಡೆಗೆ ಒಬ್ಬರೋ ಇಬ್ಬರೋ ಇನ್ನೊಂದು ಕಡೆಗೆ ಒಬ್ಬರೋ ಇಬ್ಬರೋ ಕುಳಿತುಕೊಂಡು ಆಟ ಆಡುತ್ತಾರೆ. ಒಂದು ಕಡೆಯ ತುದಿಯವರು ಭಾರಬಿಟ್ಟು ಅದುಮಿದಾಗ ಇನ್ನೊಂದು ತುದಿಯವರು ಮೇಲಕ್ಕೆ ಹೋಗುತ್ತಾರೆ. ಇವರು ಭಾರ ಬಿಟ್ಟು ಕೆಳಕ್ಕೆ ಅದುಮಿದಾಗ ಅವರು ಮೇಲಕ್ಕೆ ಹೋಗುತ್ತಾರೆ. ಈ ಆಟಕ್ಕೆ ‘ಹಳ್ಳಿ ಕೂಸು ಹತ್ತಿ ಕೂಸು’ಆಟ ಎಂದು ಹೇಳುತ್ತಾರೆ. ಬಹುಶಃ ಅದು ‘ಇಳಿ ಕೂಸು ಹತ್ತಿ ಕೂಸು’ ಎಂದು ಇರಬೇಕು. ಮುಂದಿನ ‘ಹತ್ತಿ’ ಶಬ್ದದ ಸಾದೃಶ್ಯದಿಂದ ಹಿಂದಿನ ‘ಇಳಿ’ ಶಬ್ದ ‘ಹಳ್ಳಿ’ ಎಂದಾಗಿರಬೇಕು – ಬಿತ್ತನೆ ಶಬ್ದದ ಸಾದೃಶ್ಯದಿಂದ ಹರಗಣೆ ಎಂಬುದು ಹರ್ತನೆ ಎಂದು ಆಗಿರುವಂತೆ.
ಪ್ರ : ಹಳ್ಳಿ ಕೂಸು ಹತ್ತಿ ಕೂಸು ಆಡೋದಕ್ಕೆ ಮಕ್ಕಳು ಮುಗಿಬಿದ್ದವು.
೩೧೪೫. ಹಳ್ಳುಕಾಯಿ ಮುಟ್ಟಿದಂತಾಗು = ತಲೆಯ ತುಂಬ ಗಾಯವಾಗಿರು
(ಹಳ್ಳು < ಹರಳು)
ಪ್ರ : ತಲೆಯಾದ ತಲೆಯೆಲ್ಲ ಹಳ್ಳುಕಾಯಿ ಮುಟ್ಟಿದಂತಾಗ್ತದೆ.
೩೧೪೬. ಹಳ್ಳು ಹಾಕಿದರೆ ಹಳ್ಳು ಸಿಡಿಯೋವಷ್ಟು ಬಿಸಿಲಿರು = ಉರಿಬಿಸಿಲು ಧಗಧಗಿಸುತ್ತಿರು.
ಪ್ರ : ಹಳ್ಳು ಹಾಕಿದರೆ ಹಳ್ಳು ಸಿಡಿಯೋವಷ್ಟು ಬಿಸಿಲಿರುವಾಗ, ಮಕ್ಕಳ್ನ ಆಡೋಕೆ ಕಳಿಸಿದ್ದೀಯಲ್ಲ?
೩೧೪೭. ಹಳ್ಳು ಹುರಿದಂತೆ ಮಾತಾಡು = ನಿರರ್ಗಳವಾಗಿ ಮಾತಾಡು, ಚಟಪಟ ನುಡಿಗಳನ್ನು ಸಿಡಿಸು
ಓಡಿನಲ್ಲಿ ಅಥವಾ ಬಾಣಲಿಯಲ್ಲಿ ಹರಳನ್ನು ಹುರಿಯುವಾಗ ಬಿಸಿಗೆ ಹರಳುಗಳು ಚಟಪಟನೆ ಸಿಡಿಯುತ್ತವೆ. ಹಾಗೆ ಬಾಯಿಂದ ಶಬ್ದಗಳು ಸಿಡಿಯುತ್ತವೆ ಎಂಬ ಭಾವ ಈ ನುಡಿಗಟ್ಟಿನಲ್ಲಿದೆ.
ಪ್ರ : ದೊಡ್ಡೋನು ಬಿಕ್ಕಲ, ಚಿಕ್ಕೋನು ಹಳ್ಳು ಹುರಿದಂತೆ ಮಾತಾಡ್ತಾನೆ.
೩೧೪೮. ಹಳೆ ರಾಗಿ ತರೋಕೆ ಹೋಗು = ಮರಣ ಹೊಂದು
ಹಿಂದೆ ರಾಗಿಯನ್ನು ನೆಲದಲ್ಲಿ ಗುಂಡಿ ಕೊರೆದು ಅದರಲ್ಲಿ ತುಂಬಿ ಬಾಯಿಗೆ ಒಂದು ಮುಚ್ಚಳದಂಥ ಕಲ್ಲು ಚಪ್ಪಡಿ ಹಾಕಿ ಮುಚ್ಚುತ್ತಿದ್ದರು. ಅದಕ್ಕೆ ಹಗಹ, ಹಗೇವು ಎಂದು ಕರೆಯುತ್ತಿದ್ದರು. ರಾಗಿ ಬೇಕಾದಾಗ ಹಗೇವಿನ ಬಾಯಿ ತೆಗೆದು ರಾಗಿ ತೆಗೆದುಕೊಂಡು ಮತ್ತೆ ಬಾಯಿ ಮುಚ್ಚುತ್ತಿದ್ದರು. ಹೆಣ ಹೂಳಲಿಕ್ಕೂ ಹಗೇವಿನ ಹಾಗೆ ಗುಂಡಿ ತೆಗೆಯುತ್ತಾರೆ. ಆದ್ದರಿಂದ ಈ ನುಡಿಗಟ್ಟು ಸಾವನ್ನು ಸೂಚಿಸುತ್ತದೆ.
ಪ್ರ : ಅವನು ಹಳೇ ರಾಗಿ ತರೋಕೆ ಹೋಗಿ ವರ್ಷದ ಮೇಲಾಯ್ತು
೩೧೪೯. ಹಾಕಿದ ಗೆರೆ ದಾಟದಿರು = ಹದ್ದು ಮೀರದಿರು, ಮಾತು ಮೀರಿಸಲು
ಮಾಯದ ಜಿಂಕೆ ‘ಓ ಲಕ್ಷ್ಮಣಾ’ ಎಂದು ಕೂಗಿಕೊಂಡಾಗ, ಅದು ರಾಕ್ಷಸ ಮಾಯೆ ಎಂದು ಎಷ್ಟು ಹೇಳಿದರೂ ಕೇಳದೆ ಸೀತೆ ಬಲವಂತವಾಗಿ ಲಕ್ಷ್ಣಣನನ್ನು ಕಳಿಸುತ್ತಾಳೆ. ಆಗ ಲಕ್ಷ್ಮಣ ಒಂದು ಗೆರೆ ಹಾಕಿ, ಇದನ್ನು ದಾಟಿ ಹೊರ ಹೋಗಬಾರದು ಎಂದು ಹೇಳಿ ಹೋದ ಎಂಬ, ಆದರೆ ಮಾರು ವೇಷದ ರಾವಣನಿಗೆ ಭಿಕ್ಷ ಹಾಕಲು ಗೆರೆ ದಾಟಿದ ಪ್ರಯುಕ್ತ ರಾವಣನು ಅಪಹರಿಸುವುದಕ್ಕೆ ಸಾಧ್ಯವಾಯಿತು ಎಂಬ ಪೌರಾಣಿಕ ಹಿನ್ನೆಲೆ ಈ ನುರಿಗಟ್ಟಿಗೆ ಮೂಲ.
ಪ್ರ : ಹಿರಿಯರು ಹಾಕಿದ ಗೆರೆ ದಾಟದ ಹಾಗೆ ಬಾಳುವೆ ಮಾಡು, ಒಳ್ಳೇದಾಗುತ್ತದೆ
೩೧೫೦. ಹಾಟು ಕುಡಿ = ರಕ್ತ ಕುಡಿ
(ಹಾಟು = ಯೋನಿ-ಯ ರಕ್ತ)
ಪ್ರ : ಏಟು ನಿಗು-ರ್ತಿ, ಅವ-ಳ ಹಾಟೇ ಕುಡಿ ಹೋಗು
೩೧೫೧. ಹಾಡು ಇರಿಸಿರು = ನೋವು ಇರಿಸಿರು
(ಹಾಡು < ಪಾಡು = ತೊಂದರೆ, ನೋವು)
ಪ್ರ : ನನ್ನ ಹಾಡು ಅವರಿಗೂ ಇರಿಸಿರಲಿ !
೩೧೫೨. ಹಾದಿ ಕಾಯು = ಎದುರು ನೋಡು, ನಿರೀಕ್ಷಿಸು
ಪ್ರ : ಬೆಳಗ್ಗೆಯಿಂದಲೂ ನಿನ್ನ ಹಾದೀನೇ ಕಾಯ್ತಾ ಇದ್ದೆ.
೩೧೫೩. ಹಾದಿ ತಪ್ಪು = ಕೆಟ್ಟ ನಡತೆಗಿಳಿ
ಪ್ರ : ಹಾದಿ ತಪ್ಪಿದ ಮಗನಿಂದ ಅಮ್ಮ ಅಪ್ಪ ಕಂಗಾಲಾಗಿದ್ದಾರೆ.
೩೧೫೪. ಹಾದಿ ಬೀದಿ ಪಾಲು ಮಾಡು = ಅನಾಥರನ್ನಾಗಿ ಮಾಡು
ಪ್ರ : ಅಪ್ಪ ಕುಡ್ತ ಕಲ್ತು, ಮಕ್ಕಳ್ನ ಹಾದಿ ಬೀದಿ ಪಾಲು ಮಾಡಿದ.
೩೧೫೫. ಹಾದಿರಂಪ ಬೀದಿರಂಪ ಮಾಡು = ಗುಲ್ಲೋಗುಲ್ಲಾಗುವಂತೆ ಮಾಡು
ಪ್ರ : ಕುಟುಂಬದ ವಿಷಯವನ್ನು ಹಾದಿರಂಪ ಬೀದಿರಂಪ ಮಾಡಿದರು
೩೧೫೬. ಹಾದಿಗೆ ಮುಳ್ಳು ಹಾಕು = ಸಂಬಂಧ ಕಡಿದುಕೊಳ್ಳು
ಪ್ರ : ಬೀಗರೂರಿನ ಹಾದಿಗೆ ಎಂದೋ ಮುಳ್ಳು ಹಾಕಿಬಿಟ್ಟೆ.
೩೧೫೭. ಹಾದಿ ಹಿಡಿ = ಹೊರಡು, ಮುಂದೆ ಸಾಗು
ಪ್ರ : ಇಲ್ಲಿರಬೇಡ, ಇನ್ನು ನಿನ್ನ ಹಾದಿ ಹಿಡಿ.
೩೧೫೮. ಹಾರಿ ಬೀಳುವಂತೆ ಆಲು = ಬೆಚ್ಚಿ ಬೀಳುವಂತೆ ಕಿರಿಚು
(ಹಾರಿಬೀಳು = ಮೆಟ್ಟಿ ಬೀಳು; ಆಲು = ಕಿರಿಚು)
ಪ್ರ : ಮಕ್ಕಳು ಮರಿ ಎಲ್ಲ ಹಾರಿಬೀಳುವಂತೆ ಆಲಿಬಿಟ್ಟ.
೩೧೫೯. ಹಾರಿಸಿಕೊಂಡು ಹೋಗು = ಅಪಹರಿಸಿಕೊಂಡು ಹೋಗು
ಪ್ರ : ಹೊಲೇರೋನು ಲಿಂಗಾಯಿತರೋಳ್ನ ಹಾರಿಸಿಕೊಂಡು ಹೋದ
೩೧೬೦. ಹಾರಿಸಿಕೊಂಡು ಹೋಗುವಂತಿರು = ತುಂಬ ಸುಂದರವಾಗಿರು
ಪ್ರ : ಕಂಡೋರು ಹಾರಿಸಿಕೊಂಡು ಹೋಗೋವಷ್ಟು ಸುಂದರವಾಗಿದ್ದಾಳೆ ಹುಡುಗಿ.
೩೧೬೧. ಹಾರು ಹಾಕು = ರಾಶಿ ಹಾಕು, ಕಡಿದು ಗುಡ್ಡೆ ಹಾಕು
(ಹಾರು ಹಾಕು < ಏರು ಹಾಕು = ಕಡಿದು ರಾಶಿ ಮೂಡುವಂತೆ ಮೇಲಕ್ಕೆ ಹಾಕು)
ಪ್ರ : ನೀನು ಬೆಳಗ್ಗೆಯಿಂದ ಕಡಿದು ಹಾರು ಹಾಕಿರೋದು ಕಾಣಲ್ವ?
೩೧೬೨. ಹಾರೆ ಹಾಕಿ ಮೀಟು = ಒತ್ತಾಯ ಮಾಡಿ ಹೊರಡಿಸು
ಪ್ರ : ಅಯ್ಯೋ ಅವನ್ನ ಹೊರಡಿಸಬೇಕಾದ್ರೆ, ಹಾರೆ ಹಾಕಿ ಮೀಟಬೇಕಾಯ್ತು
೩೧೬೩. ಹಾಲಲ್ಲಾದ್ರೂ ಹಾಕು ನೀರಲ್ಲಾದ್ರೂ ಹಾಕು = ಕೆಡಿಸಿಯಾದ್ರೂ ಕೆಡಿಸು ಬದುಕಿಸಿಯಾದ್ರೂ ಬದುಕಿಸು
ಪ್ರ : ನಿನ್ನ ನಂಬಿ ಬಂದಿದ್ದೀನಿ, ಹಾಲಲ್ಲಾದ್ರೂ ಹಾಕು, ನೀರಲ್ಲಾದ್ರೂ ಹಾಕು
೩೧೬೪. ಹಾಲಿಗೆ ಹುಳಿ ಹಿಂಡು = ವಿರಸ ಮೂಡಿಸು
ಪ್ರ : ಮನೆಗೆ ಬಂದ ಕಿರಿಸೊಸೆ, ಕುಟುಂಬದ ಹಾಲಿಗೆ ಹುಳಿ ಹಿಂಡಿಬಿಟ್ಟಳು
೩೧೬೫. ಹಾಲು ಅನ್ನ ಉಂಡಂತಾಗು = ಸಂತೋಷವಾಗು
ಪ್ರ : ಅಣ್ಣತಮ್ಮಂದಿರು = ಒಂದಾದದ್ದು ನೋಡಿ ನನಗೆ ಹಾಲು ಅನ್ನ ಉಂಡಂತಾಯ್ತು.
೩೧೬೬. ಹಾಲು ತುಪ್ಪ ಬಿಡು = ಉತ್ತರ ಕ್ರಿಯೆ ಮಾಡು, ಮೃತದ ಆತ್ಮಕ್ಕೆ ಶಾಂತಿ ಕೋರು
ಪ್ರ : ಸೋಮವಾರ ಹಾಲು ತುಪ್ಪ ಬಿಡ್ತೀವಿ, ತಪ್ಪದ ಹಂಗೆ ಬನ್ನಿ
೩೧೬೭. ಹಾಲು ತುಪ್ಪದಲ್ಲಿ ಕೈ ತೊಳೆದು ಬೆಳೆ = ಸುಖ ಸಮೃದ್ಧಿಯಲ್ಲಿ ಬೆಳೆ
ಪ್ರ : ನೀನು ಹಾಲುತುಪ್ಪದಲ್ಲಿ ಕೈ ತೊಳೆದು ಬೆಳೆದ ಬಂದೋನು, ನಾವು ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕ್ಕೊಂಡು ಬೆಳೆದು ಬಂದೋರು.
೩೧೬೮. ಹಾವಿಗೆ ಹಾಲೆರೆದಂತಾಗು = ಉಪಕಾರ ಮರೆತು ಅಪಕಾರ ಮಾಡು
ಪ್ರ : ಭಾವಮೈದುನ ಅಂತ ಸಾಕಿದ್ದು ಹಾವಿಗೆ ಹಾಲೆರದಂತಾಯ್ತು.
೩೧೬೯. ಹಾವು ಮುಂಗುಸಿಯಂತಾಡು = ಪರಸ್ಪರ ಕಚ್ಚಾಡು
ಪ್ರ : ಅತ್ತೆ ಸೊಸೆಯರು ಹಾವು ಮುಂಗಸಿಗಿಂತ ಅತ್ತತ್ತ ಆಡ್ತಾರೆ.
೩೧೭೦. ಹಾವು ಹೊಡೆದು ಹದ್ದಿಗೆ ಹಾಕಿದಂತಾಗು = ಕೆಟ್ಟದ್ದನ್ನು ಮಟ್ಟ ಹಾಕಿ ಮತ್ತೊಂದು ಕೆಟ್ಟದ್ದನ್ನು ಪೋಷಿಸಿದಂತಾಗು.
ಪ್ರ : ನಾವು ಮಾಡಿದ್ದು ಹಾವು ಹೊಡೆದು ಹದ್ದಿಗೆ ಹಾಕಿದಂತಾಯ್ತು.
೩೧೭೧. ಹಾಸಿಕ್ಕು = ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಓಡಾಡು
(ಹಾಸು = ನೇಯ್ಗೆಯಲ್ಲಿನ ಉದ್ದ ಎಳೆ) ಕಂಬಳಿ ನೇಯುವವರು ಮೊದಲು ಹಾಸುದಾರವನ್ನು ಅಣಿ ಮಾಡುತ್ತಾರೆ. ಅಣಿ ಮಾಡಬೇಕಾದಾಗ ಒಂದು ತುದಿಯಿಂದ ಮತ್ತೊಂದು ತುದಿಗೆ ಬಿಗಿ ಮಾಡಲು ಓಡಾಡಬೇಕಾಗುತ್ತದೆ. ಹಾಗೆಯೇ ಹುಣಿಸೆ ಅಂಬಲಿ ಬಳಿಯಲೂ ಓಡಾಡಬೇಕಾಗುತ್ತದೆ. ಆ ಹಿನ್ನೆಲೆಯ ನುಡಿಗಟ್ಟಿದು.
ಪ್ರ : ಗಾದೆ – ಹಾಲು ಅನ್ನ ಉಂಡು ಹಾಸಿಕ್ಕೆ ಮಗಳೆ ಅಂದ್ರೆ ಹೋಗಿ ಬರೋರ್ನ ನೋಡ್ಕೊಂಡು ಮೂರು ಸಲ ನೀರು ತತ್ತೀನಿ ಅಂದ್ಲು.
೩೧೭೨. ಹಾಸಿಗೆ ಹಿಡಿ = ಕಾಯಿಲೆ ಬೀಳು
ಪ್ರ : ಅವನು ಹಾಸಿಗೆ ಹಿಡಿದು ಇಲ್ಲಿಗೆ ಒಂದು ವರ್ಷ ಆಯ್ತು.
೩೧೭೩. ಹಾಸಿ ಹೊದ್ದುಕೊಳ್ಳುವಷ್ಟಿರು = ಸಾಕಷ್ಟಿರು, ಯಥೇಚ್ಛವಾಗಿರು
ಪ್ರ : ನಮ್ಮದೇ ನಮಗೆ ಹಾಸಿ ಹೊದ್ದುಕೊಳ್ಳೋವಷ್ಟಿದೆ, ಬೇರೆಯವರ ಉಸಾಬರಿ ನಮಗ್ಯಾಕೆ?
೩೧೭೪. ಹಾಳತವಾಗಿರು = ಮಿತಿಯಲ್ಲಿರು, ಅತಿ-ರೆ-ಕ-ಕ್ಕೆ ಹೋಗ-ದಿ-ರು
ಪ್ರ : ಚೆನ್ನಾಗಿ ಬಾಳತಕ್ಕವನು ಹಾಳತವಾಗಿರ್ತಾನೆ.
೩೧೭೫. ಹಾಳು ಮಾಡಿಕೊಳ್ಳು = ಕಳೆದುಕೊಳ್ಳು
ಪ್ರ : ಕಿವಿ ವಾಲೇನ ಹಾಳು ಮಾಡ್ಕೊಂಡು ಹುಡುಕ್ತಾ ಇದ್ದಾಳೆ.
೩೧೭೬. ಹಾಳು ಸುರಿ = ಬಿಕೋ ಎನ್ನು, ಶೂನ್ಯ ಮುಸುಗು
ಪ್ರ : ದೇವರಿಲ್ಲದ ಗುಡಿಯಂತೆ, ಯಜಮಾನನಿಲ್ಲದ ಮನೆ ಹಾಳು ಸುರೀತಾ ಅದೆ.
೩೧೭೭. ಹಾಳು ಹೊಟ್ಟೇಲೇ ಹೋಗು = ಏನೂ ತಿನ್ನದೆ ಖಾಲಿ ಹೊಟ್ಟೆಯಲ್ಲೇ ಹೋಗು
(ಹಾಳು ಹೊಟ್ಟೆ < ಅಳ್ಳು + ಹೊಟ್ಟೆ = ಮೆದು ಹೊಟ್ಟೆ, ಖಾಲಿ ಹೊಟ್ಟೆ)
ಪ್ರ : ಹಾಳು ಹೊಟ್ಟೇಲೇ ಹೋಗಿ ಹೊಲದಲ್ಲೆಲ್ಲ ಅಲೆದಾಡಿ ಹುಲ್ಲು ಕಿತ್ತು ವಾಡೆ ಗಾತ್ರ ಹೊರೆ ತಂದೂ ಇವರ ಬೈಗುಳ ತಪ್ಪಲ್ಲ.
೩೧೭೮. ಹಾಳೆ ಮೇಗಳ ಅನ್ನ ಬೇಳೆ ಮೇಗಳ ನೀರು ಬಿಡು = ಕಾಟಾಚಾರದ ಉಪಚಾರ ಮಾಡು
(ಹಾಳೆ = ಊಟಕ್ಕೆ ಬಳಸುವ ಸುಲಿಪಟ್ಟೆ ಎಲೆ, ಬೇಳೆ ಮೇಗಳ ನೀರು = ಕಾಳಿಲ್ಲದ ತಿಳಿ, ಮೇಗಳ = ಮೇಲಿನ ) ಊಟಕ್ಕೆ ತಣಿಗೆಯನ್ನು ಕೊಡದೆ, ಆಳಿಗೆ ಕೊಡುವಂತೆ ಹಾಳೆಕೊಟ್ಟು, ಸಾರನ್ನಿ ತಿರುವಿ ಬಿಡದೆ ಮೇಲಿನ ತಿಳಿ ಬಿಟ್ಟ ಕಾಟಾಚಾರದ ಆದರೋಪಚಾರವನ್ನು ಈ ನುಡಿಗಟ್ಟು ಲೇವಡಿ ಮಾಡುತ್ತದೆ.
ಪ್ರ : ಅವರ ಮನೆಗೆ ಹೋದಾಗ ಹಾಳೆ ಮೇಗಳ ಅನ್ನ ಬೇಳೆ ಮೇಗಳ ನೀರು ಬಿಟ್ಟು ಕಳಿಸಿದ್ದನ್ನು ತಿಳಿದೂ ತಿಳಿದೂ ಮತ್ತೆ ಅವರ ಮನೆಗೆ ಹೋಗಲ?
೩೧೭೯. ಹಿಕ್ಮತ್ತು ಮಾಡು = ಸಂಚು ಮಾಡು, ತಂತ್ರ ಮಾಡು
ಪ್ರ : ಮುಂದುವರೆದವರು ಮಾಡುವ ಹಿಕ್ಮತ್ತನ್ನು ಅರ್ಥ ಮಾಡಿಕೊಂಡ ಹೊರತೂ ಹಿಂದುಳಿದವರ ಉದ್ಧಾರ ಆಗದು.
೩೧೮೦. ಹಿಗ್ಗಾ ಮುಗ್ಗಾ ಜಗ್ಗು = ಎರ್ರಾಬಿರ್ರಿಎಳಿ
ಪ್ರ : ಎರಡೂ ಕಡೆ ಹಿಡ್ಕೊಂಡು ಹಿಗ್ಗಾಮುಗ್ಗಾ ಜಗ್ಗಾಡಿದರು.
೩೧೮೧. ಹಿಟ್ಟಾಗಿ ಹಿಸುಕು = ಚೆನ್ನಾಗಿ ಹುಡುಕು
ಪ್ರ : ಮನೇನೆಲ್ಲ ಹಿಟ್ಟಾಗಿ ಹಿಸುಕಿದ್ದೀನಿ, ಸಿಗಲಿಲ್ಲ ಯಾರು ಕದ್ದಿಟ್ಟಿದ್ದೀರೋ ತಂದಿಡಿ.
೩೧೮೨. ಹಿಡಾ ಮಾಡು = ಬೀಜ ಹೊಡಿ, ತರಡು ಚಚ್ಚು
(ಹಿಡಾ < ಹಿಡಿಕು < ಪಿಡುಕ್ಕು(ತ) = ಬೀಜ, ತರಡು)
ಪ್ರ : ಹಿಂದುಳಿದವರ ಹಿಡ ಮಾಡೋದೇ ಮುಂದುವರಿದವರ ಕಸುಬು
೩೧೮೩. ಹಿಡಿಗರ ಹೇಳು = ಹೆಚ್ಚುಗಾರಿಕೆ ಹೇಳು
(ಹಿಡಿಗರ = ಅದ್ಧೂರಿ, ವೈಭವ)
ಪ್ರ : ಗಾದೆ – ಹಿಡಿಗರ ಹೇಳೆ ಹಿರೇಸೊಸೆ, ಅಂದ್ರೆ
ಹುಲ್ಲು ಮಾರಿದ ದುಡ್ಡು ಎಲ್ಲಿಕ್ಕಲತ್ತೆ ? ಅಂದ್ಲು.
೩೧೮೪. ಹಿಡಿದು ನಿಗುರಿಸು = ತರಾಟೆಗೆ ತೆಗೆದುಕೊಳ್ಳು, ಎರಡು ಕಡೆಯೂ ಎಳೆದು ಉದ್ದಗೊಳಿಸು
ಪ್ರ : ಮತ್ತೆ ಇತ್ತ ತಲೆ ಇಕ್ಕದ ಹಂಗೆ. ಚೆನ್ನಾಗಿ ಹಿಡಿದು ನಿಗುರಿಸಿ ಕಳಿಸಿದ್ದೀನಿ.
೩೧೮೫. ಹಿಡಿದು ನಿಲೆ ಹಾಕು = ಅತ್ತಿತ್ತ ಹೋಗದಂತೆ, ಕುಳಿತುಕೊಳ್ಳದಂತೆ ನಿಲ್ಲಿಸು
(ನಿಲೆ ಹಾಕು = ನಿಂತ ಹೆಜ್ಜೆಯಲ್ಲೇ ನಿಲ್ಲುವಂತೆ ಮಾಡು)
ಪ್ರ : ಬೆಳಗ್ಗೆಯಿಂದಲೂ ಹಿಡಿದು ನಿಲೆ ಹಾಕಿದ್ದೆ, ಕೊನೆಗೆ ನಾನೇ ಹೋಗಲಿ ಅಂತ ಬಿಟ್ಟೆ.
೩೧೮೬. ಹಿತ್ಲ ಕಡೆ ಹೋಗು = ಮಲಮೂತ್ರ ವಿಸರ್ಜನೆಗೆ ಹೋಗು
(ಹಿತ್ಲು < ಹಿತ್ತಿಲು < ಹಿತ್ತಿಲ್ < ಪಿಂತಿಲ್ = ಮನೆಯ ಹಿಂಭಾಗ (ಇಲ್ = ಮನೆ)
ಪ್ರ : ಅಮ್ಮ ಹಿತ್ಲ ಕಡೆ ಹೋಗ್ಯವಳೆ, ಬತ್ತಾಳೆ ಬನ್ನಿ.
೩೧೮೭. ಹಿತ್ಲ ಬಾಗಲ ಯಾಪಾರ ಮಾಡು = ಹಾದರ ಮಾಡು, ಕಳ್ಳ ವ್ಯಾಪಾರ ಮಾಡು
ಪ್ರ : ಮನೆ ಹೆಂಗಸರು ಹಿತ್ತಲು ಬಾಗಲ ಯಾಪಾರ ಮಾಡಿದರೆ, ಆ ಮನೆ ಏಲ್ಗೆ ಆಗಲ್ಲ.
೩೧೮೮. ಹಿತ್ತಾಳೆ ಕಿವಿಯಾಗು = ಚಾಡಿ ಮಾತಿಗೆ ಕಿವಿಗೊಡುವ ಸ್ವಭಾವವಾಗು
ಪ್ರ : ಇತ್ತೀಚೆಗಂತೂ ಅತ್ತೆ ಅನ್ನಿಸಿಕೊಂಡೋಳು ಹಿತ್ತಾಳೆ ಕಿವಿಯಾಗಿಬಿಟ್ಟಿದ್ದಾಳೆ.
೩೧೮೯. ಹಿಮ್ಮೇಳ ಸುರುವಾಗು = ಗೋಳಾಟ ಪ್ರಾರಂಭವಾಗು
ಬಯಲಾಟಗಳಲ್ಲಿ ಕಥೆಯನ್ನು ಮುನ್ನಡೆಸುವ ಭಾಗವತರು ಯಾವುದೋ ಹಾಡನ್ನು ಹಾಡಿದಾಗ, ಆ ಸೊಲ್ಲನ್ನು ಹಿಡಿದು ಹಿಮ್ಮೇಳದವರು ಮತ್ತೆ ಹಾಡುತ್ತಾರೆ. ಆ ಹಿನ್ನೆಲೆಯಲ್ಲಿ ಮೂಡಿದ ನುಡಿಗಟ್ಟಿದು.
ಪ್ರ : ಹೆಣದ ಮುಂದೆ ವಾಲಗದೋರ ಮೇಳ ಆದ್ರೆ ಹೆಣದ ಹಿಂದೆ ಹೆಂಗಸರ ಹಿಮ್ಮೇಳ ಸುರುವಾಯ್ತು.
೩೧೯೦. ಹಿಸುಕಿ ಹಿಪ್ಪೆ ಮಾಡು = ಒಂದು ತೊಟ್ಟು ರಸವೂ ಉಳಿಯದಂತೆ ಹಿಂಡು
(ಹಿಸುಕು < ಪಿಸುಕು < ಪಿಸುಂಕು < ಪಿಶುಕ್ಕು (ಮಲೆ) = ಹಿಂಡು)
ಪ್ರ : ಹಿಸುಕಿ ಹಿಪ್ಪೆ ಮಾಡಿ ಬಿಸಾಕಿದ, ಸದ್ಯ ಕಾಲದಲ್ಲಿ ಹೊಸಕಲಿಲ್ಲ.
೩೧೯೧. ಹಿಸ್ಸೆ ಮಾಡು = ಪಾಲು ಮಾಡು
(ಹಿಸ್ಸೆ = ಭಾಗ)
ಪ್ರ : ಪಿತ್ರಾರ್ಜಿ ಆಸ್ತಿಯನ್ನು ಅಣ್ಣತಮ್ಮಂದಿರಿಗೆ ಸಮನಾಗಿ ಹಿಸ್ಸೆ ಮಾಡಬೇಕು ತಾನೇ?
೩೧೯೨. ಹೀಕರಿಸಿಕೊಳ್ಳು = ಹೆದರಿಕೊಳ್ಳು, ಚೀರಿಕೊಳ್ಳು
ಪ್ರ : ಅಯ್ಯೋ ನಮ್ಮಪ್ಪ, ನಿನ್ನ ಕಂಡು ದೆವ್ವ ಅಂತ ಹೀಕರಿಸಿಕೊಂಡುಬಿಟ್ಟೆ.
೩೧೯೩. ಹೀನಾಮಾನಾ ಬಯ್ಯಿ = ಬಾಯಿಗೆ ಬಂದಂತೆ ಬಯ್ಯಿ.
ಪ್ರ : ಅವನು ಒಂದಾದಿದವನ, ಒಂದು ಬಿಟ್ನ ? ಹೀನಾಮಾನವಾಗಿ ಬೈದ
೩೧೯೪. ಹುಗಲು ಹುಯ್ಯಿ = ಎಜ್ಜ ಮಾಡು
(ಹುಗಲು = ಪ್ರವೇಶ ದ್ವಾರ, ರಂದ್ರ)
ಪ್ರ : ನೇಗಿಲಿಗೆ ಇನ್ನೂ ಹುಗಲೇ ಹುಯ್ದಿಲ್ಲ, ಈಚ ತೊಡಿಸೋದು ಹೆಂಗೆ?
೩೧೯೫. ಹುಗ್ಯೋ ಎನ್ನು = ಕೇಕೆ ಹಾಕು
(ಹುಗ್ಯೋ < ಉಘೇ (ಎಂಬ ಘೋಷಣೆ) ಮಹಾನವಮಿ ಕಾಲದಲ್ಲಿ ಸುತ್ತಮುತ್ತ ತಲೆದೂಗುವ ಬೆಳೆಯಲ್ಲಿ ಹಸಿರು ಮಡುಗಟ್ಟಿರುತ್ತದೆ. ಉಬ್ಬೆ ಮಳೆ ಹುಯ್ದು ರೋಗ ತಗಲುತ್ತದೆಂದೋ ಅಥವಾ ಹಸಿರು ಬೆಳೆಗೆ ದೃಷ್ಟಿದೋಷ ತಾಕುವುದೆಂದೋ ‘ಬಲಿ ಚೆಲ್ಲುವ’ ಸಂಪ್ರದಾಯ ಹಳ್ಳಿಗಾಡಿನಲ್ಲಿ ಉಂಟು. ಇದರಲ್ಲಿ ‘ಹಸಿರು ಬಲಿ’ ‘ರಕ್ತ ಬಲಿ’ ಎಂದು ಎರಡು ವಿಧ. ‘ಹಸಿರು ಬಲಿ’ ಎಂದರೆ ಕರಿಮೀನು ಸಾರಿನಲ್ಲಿ ಸ್ಯಾವೆ ಅಕ್ಕಿ ಅನ್ನವನ್ನು ಕಲಸಿ, ಕಬ್ಬಿಣದ ಕಡ್ಡಿಯಿಂದ ಎಲೆಗುದ್ದಲಿಯ ತಗಡನ್ನು ಬಡಿಯುತ್ತಾ ಊರ ಸುತ್ತಿನ ಬೆಳೆಗೆಲ್ಲಾ ಅನ್ನದುಂಡೆಯನ್ನು ಎಸೆಯುತ್ತಾ ಬರುತ್ತಾನೆ ತೋಟಿ. ‘ರಕ್ತಬಲಿ’ ಎಂದರೆ ಮರಿ ಅಥವಾ ಹಂದಿಯನ್ನು ಕುಯ್ದು, ಅದರ ರಕ್ತದಲ್ಲಿ ನೆಲ್ಲಕ್ಕಿ ಅನ್ನವನ್ನು ಕಲಸಿ, ಆ ಉಂಡೆಯನ್ನು ಬೆಳೆಗೆಲ್ಲ ಎಸೆದುಕೊಂಡು ಬರುತ್ತಾನೆ. ಗ್ರಹಣವಾದಾಗಲೂ ರೋಗ ಬಡಿಯುತ್ತದೆಂದು ಹೀಗೆ ಮಾಡುವುದುಂಟು. ಹೀಗೆ ರಕ್ತದಲ್ಲಿ ಕಲಿಸಿದ ಅನ್ನವನ್ನು ಊರ ಸುತ್ತಿನ ಬೆಳೆಗೆಲ್ಲ ಎಸೆದುಕೊಂಡಿರು ಬರುವಾಗ ತೋಟಿ ಒಂದೇ ಸಮನೆ ಓಡುತ್ತಾ “ಹುಗ್ಯೋ… ಬಲಿಯೋ ಬಲಿ” ಎಂದು ಹೇಳುತ್ತಾ ಹೋಗುತ್ತಾನೆ. ಆ ಹಿನ್ನೆಲೆಯಲ್ಲಿ ಮೂಡಿರುವ ನುಡಿಗಟ್ಟಿದು.
ಪ್ರ : ಗಾದೆ – ಊರೊಳಗೆಲ್ಲ ಹುಗ್ಯೋ ಅಂತಾಳೆ
ಗಾಣಿಗರ ಮನೆ ಕಾಣೆ ಅಂತಾಳೆ
೩೧೯೬. ಹುಚ್ಚನ ಕೈಯ ದೊಣ್ಣೆಯಾಗು = ಗುರಿ ಒಬ್ಬರಿಗಿದ್ದು ಏಟು ಮತ್ತೊಬ್ಬರಿಗೆ ಬೀಳು.
ಪ್ರ : ಗಾದೆ – ಹುಚ್ಚನ ಕೈಯ ದೊಣ್ಣೆ, ಕೆಸರಾಗಿನ ಕಂಬ ಎತ್ತ ಬೀಳ್ತವೋ ಕಂಡೋರ್ಯಾರು?
೩೧೯೭. ಹುಟ್ಟಡಗಿಸು = ನಿರ್ಮೂಲನ ಮಾಡು
ಪ್ರ : ನೀನೆಲ್ಲಿದ್ದೀಯ, ಆ ಕಿರಾತರ ಹುಟ್ಟಡಗಿಸಿದೋನೇ ಇವನು
೩೧೯೮. ಹುಟ್ಟಲಿಲ್ಲ ಅನ್ನಿಸು = ಸಾಯಿಸು
ಪ್ರ : ಏನಾದರೂ ಉಸಿರುಬಿಟ್ರೆ, ನಿನ್ನ ಹುಟ್ಟಲಿಲ್ಲ ಅನ್ನಿಸಿಬಿಡ್ತೀನಿ.
೩೧೯೯. ಹುಟ್ಟು ಉರಿದು ಹೋಗು = ರೂಪು ಹಾಳಾಗು
ಪ್ರ : ನಿನ್ನ ಹುಟ್ಟು ಉರಿದು ಹೋಗ, ನನ್ನ ಕಣ್ಮುಂದೆ ಇರಬೇಡ, ಹೊರಟು ಹೋಗು.
೩೨೦೦. ಹುಟ್ಟಿದ ದಿನ ಕಾಣಿಸು = ಸಂಕಟಪಡಿಸು, ಒದ್ದಾಡಿಸು
ಪ್ರ : ಅವನಿಗೆ ಹುಟ್ಟಿದ ದಿನ ಕಾಣಿಸ್ತಿದ್ದೆ, ಆದರೆ ಅವ್ವನ ಮುಖ ನೋಡಿ ಬಿಟ್ಟಿದ್ದೀನಿ.
೩೨೦೧. ಹುಟ್ಟಿದ ನಿರ್ವಾಣದಲ್ಲಿರು = ಬೆತ್ತಲೆಯಾಗಿರು
(ನಿರ್ವಾಣ = ಬೆತ್ತಲೆ)
ಪ್ರ : ಆ ಹೆಣ್ಣನ್ನು ಹುಟ್ಟಿದ ನಿರ್ವಾಣದಲ್ಲಿ ಮೆರವಣಿಗೆ ಮಾಡಿದರು, ಊರಿನ ಸಾಬಸ್ತರು !
೩೨೦೨. ಹುಟ್ಟಿದ ಹುಳ ಹುಪ್ಪಟೆ ಎಲ್ಲ ಬಾಯ್ಮಾಡು = ದೊಡ್ಡವರು ಚಿಕ್ಕವರು ಎಲ್ಲ ಜೋರು ಮಾಡು
(ಹುಳ ಹುಪ್ಪಟೆ = ಚಿಳ್ಳೆಪಿಳ್ಳೆ, ಕ್ರಿಮಿಕೀಟ, ಬಾಯ್ಮಾಡು = ಜೋರು ಮಾಡು)
ಪ್ರ : ಹುಟ್ಟಿದ ಹುಳ ಹುಪ್ಪಟೆ ಎಲ್ಲ ಬಾಯ್ಮಾಡಿಬಿಟ್ರೆ ಹೆದರಿಕೊಳ್ತಾನೆ ಅಂದ್ಕೊಂಡಿರಬಹುದು, ಹೆದರಿಕೊಳ್ಳೋ ಪಿಂಡ ನಾನಲ್ಲ.
೩೨೦೩. ಹುಟ್ಟಿದ ಹುಳ ಎಲ್ಲ ಗಳ್ಳು ಹಾಕು = ಚಿಳ್ಳೆ ಪಿಳ್ಳೆಗಳೆಲ್ಲ ಬೊಗಳ ತೊಡಗು
(ಗಳ್ಳು ಹಾಕು = ಬೊಗಳು)
ಪ್ರ : ಹುಟ್ಟಿದ ಹುಳ ಎಲ್ಲ ಗಳ್ಳು ಹಾಕೋದು ನಾಯಿ ಸ್ವಭಾವ, ಹಾಕ್ಕೊಳ್ಳಲಿ ನನಗೇನು?
೩೨೦೪. ಹುಟ್ಟದಿರು = ದೊರಕದಿರು, ಸಿಕ್ಕದಿರು
ಪ್ರ : ಒಬ್ಬರ ಹತ್ರಾನೂ ಒಂದು ಚಿಕ್ಕಾಸು ಹುಟ್ಟಲಿಲ್ಲ.
೩೨೦೫. ಹುಟ್ಟಿಸಿಕೊಂಡು ಬರು = ಸಂಪಾದಿಸಿಕೊಂಡು ಬರು
ಪ್ರ : ನಾನು ಎಲ್ಲೆಲ್ಲೊ ಹುಟ್ಟಿಸಿಕೊಂಡು ಬಂದು, ಅವನ ಸಾಲು ತೀರಿಸಿದೆ
೩೨೦೬. ಹುಟ್ಟಿಸಿಕೊಂಡು ತಿನ್ನೋರ್ನ ಅಟ್ಟಿಸಿಕೊಂಡು ಹೋಗು = ದುಡಿ-ದು-ತಿನ್ನೋ-ರ್ನ ಹೊಡೆ-ದು
ತಿನ್ನೋ-ಕೆ ಬೆನ್ನು ಹತ್ತು
(ಹುಟ್ಟಿಸಿಕೊಂಡು = ಗಳಿಸಿಕೊಂಡು, ಅಟ್ಟಿಸಿಕೊಂಡು = ಓಡಿಸಿಕೊಂಡು)
ಪ್ರ : ಹುಟ್ಟಿಸಿಕೊಂಡು ತಿನ್ನೋರ್ನ ಅಟ್ಟಿಸಿಕೊಂಡು ಹೋಗೋ ಪಾಪಿಗಳ ಪಡೆ ದಿನೇ ದಿನೇ ಜಾಸ್ತಿಯಾಗ್ತಿದೆ.
೩೨೦೭. ಹುಟ್ಟಿಗೆ ಬೆಂಕಿ ಹಾಕು = ವೇಷ ನಾಶವಾಗು, ರೂಪ ಹಾಳಾಗು
ಪ್ರ : ಅಯ್ಯೋ ನಿನ್ನ ಹುಟ್ಟಿಗೆ ಬೆಂಕಿ ಹಾಕ, ಮೊದಲು ಹೋಗಿ ಬಟ್ಟೆ ಬದಲಾಯಿಸು
೩೨೦೮. ಹುಟ್ಟು ಕ್ಯಾತೆಯ ಮೊಟ್ಟೆಯಾಗಿರು = ಜನ್ಮ-ತಃ ಜಗಳಗಂಟರಾಗಿರು
(ಕ್ಯಾತೆ = ಜಗಳ, ಮೊಟ್ಟೆ = ಹುಟ್ಟಿದ ಮೂಲ)
ಪ್ರ : ಆ ಪೈಕಾನೇ ಅಷ್ಟು, ಹುಟ್ಟು ಕ್ಯಾತೆಯ ಮೊಟ್ಟೆ
೩೨೦೯. ಹುಟ್ಟು ನೋಡು = ಅವತಾರ ನೋಡು, ರೂಪು ನೋಡು
ಪ್ರ : ನಿನ್ನ ಹುಟ್ಟು ನೋಡೋಕೆ ನನ್ನಿಂದ ಆಗಲ್ಲಪ್ಪ
೩೨೧೦. ಹುಟ್ಟುವಳಿ ಮಾಡಿಕೊಂಡು = ಸಂಪಾದಿಸಿಕೊಡು
ಪ್ರ : ಜಮೀನು ನನ್ನ ವಶಕ್ಕೆ ಕೊಡು, ನಾನು ಹುಟ್ಟುವಳಿ ಮಾಡಿ ಕೊಡ್ತೀನಿ
೩೨೧೧. ಹುಟ್ಟು ಹಾಕು = ನೆಡು, ನಾಟಿ ಹಾಕು
ಪ್ರ : ಮೊದಲು ಸಸಿ ಹುಟ್ಟು ಹಾಕಿದರೆ ತಾನೇ ಬೆಳೆದು ಫಲ ಕೊಡೋದು?
೩೨೧೨. ಹುಟ್ಟು ಹಾಕ್ಕೊಂಡು ಹೇಳು= ಸ್ವಂತ ಸೃಷ್ಟಿಸಿಕೊಂಡು ಹೇಳು
ಪ್ರ : ಅವರು ಹುಟ್ಟು ಹಾಕ್ಕೊಂಡು ಹೇಳಿದ ಮಾತನ್ನ ನಂಬ್ತೀರೇ ಹೊರತು, ವಾಸ್ತವ ಸತ್ಯ ಏನೂ ಅಂತ ಸ್ಥಳ ಪರೀಕ್ಷೆ ಮಾಡಿ ನೋಡಲ್ಲ.
೩೨೧೩. ಹುಡುಕೆಗೆ ಹಾಕಿದ ಸೀಗಡಿಯಂತಾಡು = ಎಗರಾಡು, ನೆಗೆದಾಡು
(ಹುಡುಕೆ < ಪುಡುಕೆ = ಬಿದಿರ ದೆಬ್ಬೆಯಿಂದ ಹೆಣೆದ ಬಾಯಿ ಕಿರಿದಾದ ಬುಟ್ಟಿ)
ಪ್ರ : ಆ ಮನೆ ಮಕ್ಕಳು ಹುಡುಕೆಗೆ ಹಾಕಿದ ಸೀಗಡಿಯಂತಾಡ್ತವೆ, ಘನತೆ ಗಾಂಭೀರ್ಯವೇ ಇಲ್ಲ.
೩೨೧೪. ಹುಡುಕು ನೀರಲ್ಲದ್ದು = ಕುದಿಯುವ ನೀರಿನಲ್ಲಿ ಮುಳುಗಿಸು
(ಹುಡುಕು < ಪುಡುಂಕು = ಕುದಿ, ಮರಳು)
ಪ್ರ : ಹುಡುಕು ನೀರೊಳಗೆ ಕೋಳಿ ಅದ್ದಿದರೆ, ಪುಕ್ಕ ತರೆಯೋಕೆ ಸುಲಭವಾಗ್ತದೆ.
೩೨೧೫. ಹುಡಿ ಹಾರಿಸು = ಧೂಳೀ ಪಟ ಮಾಡು, ದುಂದು ವ್ಯಯ ಮಾಡು
(ಹುಡಿ < ಪುಡಿ = ಧೂಳು)
ಪ್ರ : ಅಪ್ಪ ಸಂಪಾದಿಸಿದ್ದನ್ನೆಲ್ಲ ಮಗ ಹುಡಿ ಹಾರಿಸಿಬಿಟ್ಟ
೩೬೧೬. ಹುಣಿಸೆ ಕಾಯಿ ತೊಟ್ಟು ಮಾಡು = ಏನೂ ಮಾಡಲಾಗದಿರು
ಹವ್ಯಕ ಬ್ರಾಹ್ಮಣರು ಹುಣಿಸೆಕಾಯಿಯಿಂದ ಮಾಡುವ ಗೊಜ್ಜು ಅಥವಾ ಚಟ್ನಿಗೆ “ತೊಕ್ಕು” ಎನ್ನುತ್ತಾರೆ. ಅದೇ ಜನರ ಬಾಯಲ್ಲಿ ಕಾಲಕ್ರಮೇಣ ತೊಟ್ಟು ಆಗಿರಬಹುದೆಂದು ತೋರುತ್ತದೆ.
ಪ್ರ : ಏನು ಮಾಡ್ತಿ ನೀನು, ಹುಣಿಸೆಕಾಯಿ ತೊಟ್ನ?
೩೨೧೭. ಹುಣಿಸೆ ಹಣ್ಣು ತೂಗು = ತೂಗಡಿಸು
ಪ್ರ : ನೀವು ಹುಣಿಸೆ ಹಣ್ಣು ತೂಗ ತೊಡಗಿದರೆ, ನಾವು ಮೆಣಸಿನಕಾಯ್ನ ಎಲ್ಲಿಡಬೇಕೋ ಅಲ್ಲಿಡಬೇಕಾಗ್ತದೆ ಅಷ್ಟೆ.
೩೨೧೮. ಹುದ್ದರಿ ಹೇಳು = ಸಾಲ ಹೇಳು
(ಹುದ್ದರಿ < ಉದ್ದರಿ = ಕಡ)ಪ್ರ : ದುಡ್ಡಿಲ್ಲದಿದ್ರೆ ಹುದ್ಗರಿ ಹೇಳಿ ಉಂಡು ಬರೋಣ ಬಾ
೩೨೧೯. ಹುದ್ದರಿ ಸರಿ ಹೋಗದಿರು = ಇಜ್ಜೋಡಾಗು
(ಹುದ್ದರಿ = ಜೊತೆ)
ಪ್ರ: ಹುದ್ದರಿ ಹಾಕಿದರೆ ಕರೆ ಎಳೆ ಬಿಳೆ ಎಳೆ ಕಟ್ಟೋ ಹಂಗಿರಬೇಕು, ಈ ಹುದ್ದರಿ ಸರಿ ಹೋಗಲಿಲ್ಲ.
Leave A Comment