ಪ್ರಸ್ತಾವನೆ:

ಈ ವಿಷಯಕ್ಕೆ ಸಂಬಂಧಿಸಿದ ಹಾಗೆ ಯಾವುದೇ ಚರ್ಚೆ ನಡೆಸುವ ಮುನ್ನ ಎರಡು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕಾಗುತ್ತದೆ ಅವುಗಳೆಂದರೆ;

೧. ‘ಜನಪದ ಪ್ರಜ್ಞೆ’ ಎಂದರೇನೆಂಬುದನ್ನು ಖಚಿತಪಡಿಸಿಕೊಳ್ಳುವುದು.

೨. ‘ಭೌತಿಕ ಪರಿಸರ’ದ ಗಡಿರೇಖೆಗಳನ್ನು ಗುರುತಿಸಿಕೊಳ್ಳುವುದು.

ಮೇಲ್ನೋಟಕ್ಕೆ ತುಂಬ ಸರಳವೆಂದು ತೋರುವ ಮೇಲಿನ ಎರಡೂ ಪ್ರಶ್ನೆಗಳು ಆಳದಲ್ಲಿ ತುಂಬ ಸಂಕೀರ್ಣವಾದ ಸ್ಥಿತಿಯನ್ನು ಹೊಂದಿವೆ. ಮೊಸಲನಎಯ ಪ್ರಶ್ನೆಯಲ್ಲಿ ಕೇಳಿಕೊಳ್ಳಲಾದ ‘ಜನಪದ ಪ್ರಜ್ಞೆ’ ಎಂಬುದು ನಿಜವಾಗಲೂ ಎಲ್ಲಿ? ಯಾರಲ್ಲಿ? ಹೇಗೆ? ಅಸ್ತಿತ್ವದಲ್ಲಿದೆ ಎಂದು ವಿವರಿಸುವುದು ಕಷ್ಟ. ನಮ್ಮ ಸಾಮಾಜಿಕ ಬದುಕಿನ ಸಂದರ್ಭದಲ್ಲಿ ಶಿಷ್ಟ ಪ್ರಜ್ಞೆ ಅಲ್ಲದೆ ಇರುವ ಮತ್ತು ಖಚಿತವಾದ ಅರ್ಥದಲ್ಲಿ ಜನಪದ ಪ್ರಜ್ಞೆ ಎಂದು ಹೇಳಬಹುದಾದ ವಿವರಗಳು ಏನಾದರೂ ಇದೆಯೇ? ಸಾಮಾನ್ಯವಾಗಿ ತುಂಬ ಸರಳವಾದ ಅರ್ಥದಲ್ಲಿ ವಿದ್ವಾಂಸರು ಬ್ರಾಹ್ಮಣರ ಪ್ರಜ್ಞೆಯನ್ನು ಶಿಷ್ಟವೆಂತಲೂ ಬ್ರಾಹಮಣೇತರ ಪ್ರಜ್ಞೆಯನ್ನು ಜನಪದ ಎಂತಲೂ ಹೇಳುವ ಪ್ರಯತ್ನ ಮಾಡಿದ್ದಾರೆ. ಈ ಬಗೆಯ ವ್ಯಾಖ್ಯಾನಗಳು ನಮಗೆ ಹೆಚ್ಚು ಉಪಯುಕ್ತವಲ್ಲ. ಏಕೆಂದರೆ ಲಿಖಿತ ಗ್ರಂಥಗಳನ್ನು ಆಧರಿಸಿ ತಮ್ಮ ಚಿಂತನಾ ಕ್ರಮವನ್ನು ಬೆಳೆಯಿಸಿಕೊಂಡ ವೈದಿಕರೂ ಕೂಡಾ ಸಮಾಜ ಬದುಕಿನ ಒಂದು ಅಂಗವಾಗಿ ಕಾರ್ಯನಿರ್ವಹಿಸುತ್ತಿರುವಾಗ ಲಿಖಿತ ಗ್ರಂಥಗಳ ಸಂದೇಶಗಳಿಗಿಂತ ತುಂಬ ದೂರ ಹೋಗಿರುತ್ತಾರೆ. ಎಷ್ಟೋ ಬಾರಿ ಮೌಖಿಕ ರೂಪದ ಆದೇಶಗಳನ್ನು ಪಾಲಿಸುತ್ತಾ ಮೌಖಿಕ ಪರಂಪರೆಯ ಭಾಗವಾಗುತ್ತಾರೆ. ಈ ಅರ್ಥದಲ್ಲಿ ನಾಲ್ಕು ವರ್ಣಗಳ ಮತ್ತು ನೂರಾರು ಜಾತಿಗಳ ಜನರ ನಡುವೆ ಜನಪ್ದ ಪ್ರಜ್ಞೆಯು ಕ್ರಿಯಾಶೀಲವಾಗುತ್ತಿರುತ್ತದೆ. ಇದರಿಂದಾಗಿ ಉಂಟಾದ ಹಲವು ಬಗೆಯ ಪ್ರಜ್ಞಾವಲಯಗಳನ್ನು ಒಂದು ಚೌಕಟ್ಟಿಗೆ ಸೇರಿಸಿ ವಿವರಿಸಲು ಸಾಧ್ಯವಿಲ್ಲ. ಬದಲು ಭಿನ್ನ ಭಿನ್ನ ಸಮುದಾಯ, ಸಮಾಜ, ಜಾತಿ, ಪ್ರದೇಶ, ಬುಡಕಟ್ಟು, ಕಾಲ ಮತ್ತಿತರ ಅಂಶಗಳ ನಡುವೆ ಹಂಚಿಹೋಗಿರುವ ಬಗೆಬಗೆಯ ಜನಪದ ಪ್ರಜ್ಞೆಗಳನ್ನು ನಾವು ಗಮನಿಸಿಕೊಳ್ಳಬೇಕಾಗುತ್ತದೆ. ಹೀಗೆ ನೋಡಿದಾಗ ಜನಪದ ಪ್ರಜ್ಞೆ ಎಂಬುದು ಏಕಾಕೃತಿ ಮಾದರಿಯಲ್ಲಿ ನಮಗೆ ಲಭಿಸಲು ಸಾಧ್ಯವಿಲ್ಲ. ಬದಲು ಅದು ಬಹುಸಂಸ್ಕೃತಿಕ ನಡುವೆ ಹಾಸು ಹೊಕ್ಕಾಗಿರುತ್ತದೆ. ಕನ್ನಡ ಭಾಷೆಯೊಂದರಲ್ಲಿಯೇ ನೂರಾರು ಬಗೆಯ್ ಜನಪದ ಪ್ರಜ್ಞೆಗಳು ಕಂಡುಬರುತ್ತಿದ್ದು ಅವೆಲ್ಲವನ್ನು ಇಲ್ಲಿ ವಿವರಿಸಲು ಸಾಧ್ಯವಿಲ್ಲ.

‘ಭೌತಿಕ ಪರಿಸರ’ ಎಂಬ ಪದವೂ ವಿಸ್ತಾರವದ ಅರ್ಥವುಳ್ಳದ್ದು. ಕಾಲ, ದೇಶ ಮತ್ತು ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಅದರ ಅರ್ಥ ವ್ಯಾಪ್ತಿಯು ಬದಲಾಗುತ್ತ ಹೋಗುತ್ತದೆ. ಇಲ್ಲಿ ಯಾವುದೇ ಒಂದು ಭಾಗದ ಭೌತಿಕ ಪರಿಸರವನ್ನು ಆಧರಿಸಿ ನಾವು ಸಾಮಾನ್ಯೀಕೃತ ಹೇಳಿಕೆಗಳನ್ನು ನೀಡಿದರೆ ಅದರಿಂದ ತೊಂದರೆಯೇ ಹೆಚ್ಚು. ಹಾಗಂತ ಭೌತಿಕ ಪರಿಸರ ಗ್ರಹಿಕೆಯ ಬಹು ಆಕೃತಿಗಳನ್ನು ಸಮಗ್ರವಾಗಿ ಮಂಡಿಸುವುದು ಕೂಡ ಇಲ್ಲಿ ಅಸಾಧ್ಯ. ಹಾಗೆ ನೋಡಿದರೆ ಭೌತಿಕ ಅಲ್ಲದ್ದರ ಗ್ರಹಿಕೆ ಇಲ್ಲದೆ ಭೌತಿಕ ಪರಿಸರವನ್ನು ಗ್ರಹಿಸಲು ಸಾಧ್ಯವೇ ಇಲ್ಲ. ಭೌತಿಕವನ್ನು ಅಭೌತಿಕದ ನೆರವಿನಿಂದಲೂ, ಅಭೌತಿಕವನ್ನು ಭೌತಿಕದ ನೆರವಿನಿಂದಲೂ ವಿವರಿಸಲಾಗುತ್ತದೆ. ತುಳು ಪಾಡ್ಡನಗಳಲ್ಲಿ ‘ಮಾಯ’ ಮತ್ತು ‘ಜೋಗ’ ಎಂಬೆರಡು ಪರಿಕಲ್ಪನೆಗಳಿವೆ. ಸ್ತೂಲವಾಗಿ ಜೋಗವು ಲೌಖಿಕ ಜಗತ್ತನ್ನು, ಮಾಯವು ಅಲೌಖಿಕ ಜಗತ್ತನ್ನು ಸಂಕೇತಿಸುತ್ತದೆ. ವ್ಯಕ್ತಿಯೊಬ್ಬ ಜೋಗದಿಂದ ಮಾಯಕ್ಕೇರುತ್ತಾನೆ. ಮತ್ತು ಕೆಲವು ಬಗೆಯ ಆಚರಣೆಗಳಲ್ಲಿ ಮಾಯದಿಂದ ಜೋಗಕ್ಕೆ ಇಳಿದು ಬರುತ್ತಾನೆ. ಮಾಯ ಮತ್ತು ಜೋಗಗಳು ‘ಮಧ್ಯಂತರ ಜಗತ್ತಿನ’ ವಿಧಿಕ್ರಿಯೆಗಳಲ್ಲಿ ಪರಸ್ಪರ ಸಂಧಿಸುತ್ತವೆ. ಈ ಮಧ್ಯಂತರ ಜಗತ್ತು ಕೂಡ ಜನಪದರ ಭೌತಿಕ ಪರಿಸರದ ಗ್ರಹಿಕೆಯೇ ಆಗಿದೆ. ವ್ಯಕ್ತಿಯೊಬ್ಬನು ಸತ್ತ ಅನಂತರ ಭೌತಿಕ ಪರಿಸರವನ್ನು ಬಿಟ್ಟು ಅಭೌತದ ಕಡೆಗೆ ಚಲಿಸುತ್ತಾನೆ. ಇದನ್ನು ತಿಳಿದೂ ಕೂಡ ಜನಪದರು ಸಾವಿಗೆ ಸಂಬಂಧಿಸಿದಂತೆ ನಡೆಸುವ ಆಚರಣೆಗಳಲ್ಲಿ ಸತ್ತ ವ್ಯಕ್ತಿಯನ್ನು ಅಭೌತಿಕದಿಂದ ಭೌತಿಕ ಲೋಕಕ್ಕೆ ಎಳೆದು ತರುವ ಸಾಹಸವನ್ನು ಮಾಡುತ್ತಾರೆ. ಸಾವಿನ ಆಚರಣೆಗಳು ಭೌತಿಕ ಪರಿಸರ ಮತ್ತು ಅಭೌತಿಕ ಪರಿಸರಗಳು ಸಂಧಿಸುವ ಮಧ್ಯಂತರ ಜಗತ್ತನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡುತ್ತವೆ. ಇವೆಲ್ಲವನ್ನು ಗಮನಿಸುವಾಗ ಜನಪದರ ಭೌತಿಕ ಪರಿಸರದ ಗ್ರಹಿಕೆಯು ಅಭೌತಿಕ ಪರಿಸರ ಮತ್ತು ಮಧ್ಯಂತರ ಜಗತ್ತಿನ ಪರಿಸರದ ಗ್ರಹಿಕೆಯೊಂದಿಗೆ ತಳುಕು ಹಾಕಿಕೊಂಡಿರುವುದು ಸ್ಪಷ್ಟವಾಗುತ್ತದೆ. ಹೀಗಾಗಿ ಜನಪದ ಪ್ರಜ್ಞೆಯ ಬಹುಮುಖೀ ಸ್ತರಗಳ ವಿಶ್ಲೇಷಣೆ ಮತ್ತು ಭೌತಿಕ ಪರಿಸರ ಗ್ರಹಿಕೆಯ ಸಂಕೀರ್ಣ ಅಯಾಮಗಳ ಅರಿವಿಲ್ಲದೆ ನಡೆಸುವ ಚರ್ಚೆ ಹೆಚ್ಚು ಉಪಯುಕ್ತ ಆಗಲಾರದು.

ಪರಿಸರ ಗ್ರಹಿಕೆಯ ವಿಧಾನ:

ಕನ್ನಡ ಜಾನಪದದಲ್ಲಿ ಜನಪ್ರಿಯವಾಗಿರುವ ಒಂದು ಹಾಡು ಈ ಕೆಳಗಿನಂತಿದೆ.

ಮುದ್ದು ನಮ್ಮಗುವನುಹದ್ದು ಕೊಂಡೊಯ್ದಿತು
ಉದ್ದಿನ ಹೊಲದಲ್ಲಿ ಬಿದ್ದಿತು ಮಗುವನು
ಎತ್ತಿ ತರಲಿಕ್ಕು ನಗೆಬಿಡ

ಈ ತ್ರಿಪದಿಯಲ್ಲಿ ಒಂದು ಮಗುವಿದೆ. ಆ ಮಗು ಉದ್ದಿನ ಹೊಲದಲಿ ಬಿದ್ದಿದೆ. ಮತ್ತು ಅದರ ರಕ್ಷಕರು ಮಗುವನ್ನು ಮನೆಗೆ ಎತ್ತಿ ತರುತ್ತಿದ್ದಾರೆ. ಸೂಕ್ಷ್ಮವಾಗಿ ನೋಡಿದರೆ ಮನುಷ್ಯ ಪ್ರಾಣಿವರ್ಗ ಮತ್ತು ಸಸ್ಯವರ್ಗದ ತ್ರಿವೇಣಿ ಸಂಗಮವನ್ನು ಇಲ್ಲಿ ನಾವು ಕಾಣಬಬುದು. ಇದನ್ನು ಆಧರಿಸಿ ಸ್ಥೂಲವಾಗಿ ಹೇಳುವುದಾದರೆ ಜನಪದರ ಭೌತಿಕ ಗ್ರಹಿಕೆಯಲ್ಲಿ ಪ್ರಾಣಿ ಸಸ್ಯ ಮತ್ತು ಮಾನವ ವರ್ಗದ ಸಂಗಮವಿದೆ.ಕ್ರಿ. ಪೂ. ಮೂರು ಸಾವಿರ ವರ್ಷಗಳ ಹಿಂದಿನದ್ದು ಎನ್ನಲಾದ ಸೂಕ್ತಿಯೂಂದು ಇಂತಿದೆ.

“ನಮ್ಮ ಭೂತ – ಭವಿಷ್ಯಗಳ ಸ್ವಾಮಿನಿಯಾದ ಭೂಮಾತೆ ನಮಗೆ ಅವಕಾಶ ನೀಡಲಿ ನಮ್ಮ ಭೂಮಿಯ ಸಂಪತ್ತು ವಿಸ್ತಾರವಾಗಲಿ, ಯಾವ ಭೂಮಿಯ ಮೇಲೆ ಹಿಂದಿನ ಜನರು ನಡೆದಾಡಿದ್ದರೋ, ಯಾವ ಪೃಥ್ವಿಯು ಎಲ್ಲ ಪಶು, ಪಕ್ಷಿ, ಪ್ರಾಣಿಗಳ ಮನೆಯಾಗಿದೆಯೋ ಆ ಭೂಮಿ ನಮ್ಮನ್ನು ರಕ್ಷಿಸಲಿ, ಪರ್ವತಗಳು, ಅರಣ್ಯಗಳು ನಮಗೆ ಕಲ್ಯಾಣಕರವಾಗಲಿ, ಯಾರಿಂದಲೂ ಪರಾಜಿತಳಾಗದೆ ಫಲವತಿಯಾದ ನಾನಾ ವನಸ್ಪತಿಗಳಿಂದ ಸಂಪನ್ನಳಾದ ಎಲ್ಲರನ್ನು ಸಲುಹುವ ನಿನ್ನನ್ನು ಪ್ರಾರ್ಥಿಸಿ ನಿನ್ನ ಮಡಿಲಲ್ಲಿ ನಾನು ಸುಖದಿಂದ ಜೀವಿಸುವೆ. ಎಲೇ ಪೃಥ್ವಿಯೇ, ಆಕಾಶ, ವಾಯು, ಬೇಂಕಿ, ನೀರು, ಪಶು, ಪಕ್ಷಿ, ಪುರುಷ ಸ್ತ್ರೀ ಮುಂತಾದ ಸಮಗ್ರ ವಿಶ್ವದೊಳಗೆ ಅಂತರ್ಗತಳಾಗಿರುವ ನೀನು ನಿನ ಸತ್ವ ಹಾಗೂ ತೇಜಸ್ಸನ್ನು ನನಗೆ ಕರುಣಿಸಿ ನಾನಗೆ ಪ್ರಾಣ ಮತ್ತು ಆಯಸ್ಸನ್ನು ಕೊಡು. ಎಲೈ ಭೂಮಿಯೇ ನಿನ್ನಿಂದ ಅಗದೆ ಔಷಧಿಗಳು, ವೃಕ್ಷಗಳು ಪುನಃ ಹುಟ್ಟಲಿ, ನಮ್ಮನ್ನು ಶುದ್ಧಗೊಳಿಸುವ ತಾಯೇ ನಾನು ನಿನ್ನ ಮರ್ಮಸ್ಥಾನ ಹಾಗೂ ಹೃದಯಕ್ಕೆ ಗಾಯ ಉಂಟು ಮಾಡದಂತೆ ನೋಡಿಕೊ..”

ಈ ಸೂಕ್ತಿಯಲ್ಲಿ ಭೂತ ಭವಿಷ್ಯತ್ ಮತ್ತು ವರ್ತಮಾನಗಳ ಸಂಯೋಜನೆ ಇರುವಂತೆ ಮಾನವ ಪ್ರಾಣಿವರ್ಗ ಮತ್ತು ಸಸ್ಯವರ್ಗಗಳ ಅಪೂರ್ವ ಸಂಲಗ್ನವಿದೆ. ಇದೇ ನಿಲುವನ್ನು ಪ್ರಕಟಪಡಿಸುವ ಜನಪದಹಾಡೊಂದು ಇಂತಿದೆ.

ಬೆಳಗಾಗ ನಾನೆದ್ದು ಯಾರ್ಯರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯೋಳ ಭೂಮ್ತಾಯ
ಎದ್ದೊಂದು ಗಳಿಗೆ ನೆನೆದೇನ

ಎಳ್ಳು ಮತ್ತು ಜೀರಿಗೆ ಹುಟ್ಟು ಮತ್ತು ಸಾವನ್ನು ಪ್ರಾತಿನಿಧಿಸುವುದಾದರೆ ಅದನ್ನು ಧರಿಸುವ ಭೂಮಿತಾಯಿ ಭೌತಿಕ ಜಗತ್ತಿನ ಆಧಾರ ಶಕ್ತಿಯೆಂಬುದು ಸ್ಪಷ್ಟವಾಗುತ್ತದೆ. ಕೆಳಗಿನ ಹಾಡನ್ನು ಗಮನಿಸಿ.

ಮನೆ ಸುತ್ತ ಮಲ್ಲಿಗೆ ಕೆರೆಸುತ್ತ ಕೇದಿಗೆ
ಅರಮನೆ ಸುತ್ತ ಅರಗಿಣಿ ನಮ್ಮಗುವಿನ
ತೊಟ್ಟಿಲ ಸುತ್ತ ಮರಿಯಾನೆ

ಈ ಹಾಡಿನಲ್ಲಿಯೂ ಮಲ್ಲಿಗೆ ಗಿಣಿ ಮತ್ತು ಮಗು ಅಂದರೆ ಸಸ್ಯವರ್ಗ ಪ್ರಾಣಿವರ್ಗ ಮತ್ತು ಮಾನವ ವರ್ಗಗಳು ಒಟ್ಟು ಸೇರಿವೆ. ಇವೆಲ್ಲವನ್ನು ಗಮನಿಸಿದರೆ ಜನಪದರ ಭೌತಿಕ ಪರಿಸರದ ಗ್ರಹಿಕೆಯಲ್ಲಿ ಈ ಮೂರೂ ಶಕ್ತಿಗಳು ನಿರ್ಣಾಯಕವಾದ ಸ್ಥಾನ ವಹಿಸಿರುವುದು ಸ್ಪಷ್ಟವಾಗುತ್ತದೆ.

ನಮ್ಮ ಸಂಪ್ರದಾಯಕ ಚಿಂತನ ಕ್ರಮದಲ್ಲಿ ಭೌತಿಕ ಪರಿಸರವನ್ನು ಭೂಮಿ, ಆಕಾಶ, ಅಗ್ನಿ, ನೀರು ಮತ್ತು ಗಾಳಿಗಳೆಂಬ ಪಂಚಭೂತಗಳನ್ನು ಆಧರಿಸಿ ವಿವರಿಸಲಾಗಿದೆ. ಸಾಂಖ್ಯರು, ಚಾರ್ವಾಕರು, ನ್ಯಾಯಿಕರು ಮತ್ತು ವ್ಯೆಶೇಷಿಕರು ಪಂಚಭೂತಗಳನ್ನು ಆಧರಿಸಿಯೇ ತಮ್ಮ ದರ್ಶನಗಳನ್ನು ಪ್ರಸ್ತುತಪಡಿಸಿದರು. ಕಣ್ಣು, ನಾಲಿಗೆ, ಕಿವಿ, ಮೂಗು ಮತ್ತು ಚರ್ಮಗಳಲ್ಲಿ ಯಾವುದಾದರೂ ಒಂದರ ಸಹಾಯದಿಂದ ತಿಳಿಯಲು ಸಾಧ್ಯವಿರುವುದನ್ನು ಮಾತ್ರ ಅವರು ಪಂಚಭೂತಗಳಲ್ಲಿ ಸೇರಿಸಿದರು. ಅಂದರೆ ಭೌತಿಕ ಪರಿಸರದ ಗ್ರಹಿಕೆಯು ಮೇಲೆ ಹೇಳಿದ ಐದು ಅಂಗಗಳ ಮೂಲಕ ಮಾತ್ರ ಸಾಧ್ಯ ಎಂದು ಅವರು ನಂಬಿದ್ದರು. ಕಟ್ಟಾ ಭೌತವಾದಿಗಳಾಗಿದ್ದ ಲೋಕಾಯತಿಕರು ಪೃಥ್ವಿ, ನೀರು, ಬೆಂಕಿ, ಗಾಳಿ, ಆಕಾಶಗಳನ್ನು ಅಂತಿಮವೆಂದು ಹೇಳಿದ್ದರು. ಪೃಥ್ವಿಯಲ್ಲಿ ವಾಸನೆ, ರುಚಿ, ವರ್ನ ಮತ್ತು ಸ್ಪರ್ಶಗಳು ಐಕ್ಯವಾಗುತ್ತವೆ ಎಂದು ಅವರು ವಾದಿಸಿದ್ದರು. ಇದನ್ನು ನೋಡಿದರೆ ಜನಪದ ಪ್ರಜ್ಞೆಯಲ್ಲಿನ ಭೌತಿಕ ಪರಿಸರದ ಗ್ರಹಿಕೆ ಮತ್ತು ಅಭಿವ್ಯಕ್ತಿಯು ಲೋಕಾಯತಿಕರ ಚಿಂತನಾ ಕ್ರಮಕ್ಕೆ ಹತ್ತಿರವಿರುವಂತೆ ಭಾಸವಾಗುತ್ತದೆ. ನಮ್ಮ ಜಾನಪದದಲ್ಲಿ ಲಭ್ಯವಿರುವ ಮಾಹಿತಿಗಳನ್ನು ಲೋಕಾಯುಕ್ತರ ಸಿದ್ಧಾಂತಗಳೊಂದಿಗೆ ಹೋಲಿಸಿ ನೋಡುವ ಕೆಲಸವನ್ನು ನಾವು ಇನ್ನಷ್ಟೇ ಮಾಡಬೇಕಾಗಿದೆ.

ಕೊಡಗಿನ ಫಣಿಯರವ ಎಂಬ ಬುಡಕಟ್ಟು ಸಮುದಾಯದಲ್ಲಿ ಲಭ್ಯವಿರುವ ‘ಚತ್ತವಂಡಪಾಟ್’ ಎಂಬ ಕಥನ ಕಾವ್ಯದ ಆರಂಭದಲ್ಲಿ ಭೌತಿಕ ಜಗತ್ತಿನ ಉಗಮದ ಬಗೆಗೆ ಈ ಕೆಳಗಿನ ವಿವರಗಳು ಸಿಗುತ್ತವೆ.

“ಬಾ, ಬಾ ಬಲನಾಡಿಗೆ ಬಾ, ಆಕಾಶ ಗಂಡಾಗಿ ಭೂಮಿ ಹೆಣ್ಣಾಗಿ ಬಿದ್ದಿದೆ, ಇದನ್ನು ನೋಡಿ ನೂರನಾಲ್ಕು ದೆಯ್ಯೆಗಳು, ಬೈನಾಡಪ್ಪ ಏನು ಮಾಡುವುದೆಂದು ಯೋಚಿಸಿದರು. ಚಿನ್ನದ ಹಾಕಿ ಮಾಡಿಕೊಂಡು ಗುಂಪುಗೂಡಿಸಿ ಜೋರಾಗಿ ಹೊಡೆದು ಭೂಮಿ ಆಕಾಶಗಳನ್ನು ಬೇರ್ಪಡಿಸಿದರು. ಆಕಾಶ ಅರ್ಧಗಾವುದ ಮೇಲೇರಿ ನಿಂತಿತು. ಎರಡನೇ ಬಾರಿ ಗುದ್ದಿದಾಗ ಆಕಾಶ ಹಾರಿ ಹೋಯಿತು. ಭೂಮಿ ಅದುರತೊಡಗಿತು. ಆಕಾಶಕ್ಕೆ ಹಾರಿ ಹೋಗದೆ ಇರಲು, ಭೂಮಿಗೆ ಅದುರದೇ ಇರಲು ಅಪ್ಪಣೆ ಮಾಡಬೇಕು. ಕೆಲವು ಕಲ್ಲುಗಳನ್ನು ನೋಡಿದರು, ಅವು ಹುಳುಕು, ಒಡಕು, ಉಮ್ಮರ ಮಿಚ್ಚ ಎಂಬಲ್ಲಿ ಹಾಸುಗಲ್ಲು ಕಂಡು ಒಪ್ಪಿಗೆಯಾಯಿತು. ಅಲ್ಲಿಗೆ ನೂರೊಂದು ಕಲ್ಲು ಕುಟಿಗರನ್ನು ಕೂಡಿಸಿದರು. ಹೂವು, ಹಣ್ಣು, ವೀಳ್ಯದೆಲೆ, ಕಾಯಿ, ಅಕ್ಕಿಹಿಟ್ಟು, ಪೂಜಿಸಿ ದೀಪ ಬೆಳಗಿಸಿದರು. ಆಯಿಶ್, ತೋಯಿಶ್ ನೀಡಿದರು. ಸುರಂಗಿ ಹೊಡೆದು, ಮದ್ದು ಇಟ್ಟು ಕಲ್ಲು ಸಿಡಿಸಿದರು. ಭೂಮಿ ಆಕಾಶಗಳು ತತ್ತರಿಸುವಂತೆ ಕಲ್ಲುಗಳು ಒಡೆದುಕೊಂಡವು.

ಆಕಾಶಕ್ಕೆ ಆರು ಶಾಸನ, ಭೂಮಿಗೆ ಮೂರು ಶಾಸನ, ಒಟ್ಟು ಒಂಭತ್ತು ಶಾಸನ ಕೆತ್ತುವ ಕಾರ್ಯ ಕೈಕೊಂಡರು. ಆಗಲೂ ಪೂಜೆ ಸಲ್ಲಿಸಿ ಹಾರಿ ಹೋಗಬೇಡವೆಂದು ಆಕಾಶಕ್ಕೂ, ಅದುರಬೇಡವೆಂದು ಭೂಮಿಗೂ ಅಪ್ಪಣೆ ಮಾಡಿದ ಶಾಸನ ಕೆತ್ತಿದರು. ಆದರೆ ಆಕಾಶ ಹಾರಿಹೋಗುವುದು ನಿಲ್ಲಲ್ಲಿಲ್ಲ. ಭೂಮಿ ಅದುರುವುದೂ ನಿಲ್ಲಲ್ಲಿಲ್ಲ.

ಆಗ ನೂರು ನಾಲ್ಕುದೆಯ್ಯಗಳು, ಬೈನಾಡಪ್ಪ ಯೋಚಿಸಿ, ಚಾತಾರಿಗೋಟ ಕೋಟೆಯಲ್ಲಿರುವ ಜಾತಾಂಗೋತ್ ಮುತ್ತಿಯಲ್ಲಿಗೆ ಹೋದರು. ಅವರು ಅಲ್ಲಿಗೆ ಹೋದಾಗ ಜಾತಾಂಗೋಟ್ ಮುತ್ತಿ ಮೂರು ಕಡ್ಡಿಗಳನ್ನು ಆನಿಸಿ ನಿಲ್ಲಿಸಿ ಮೂರು ಮೊಟ್ಟೆಗಳನ್ನಿರಿಸಿದ್ದಳು. ತಲೆ ಅಡಿಕೆ ಕಾಯಿಯಂತಾಗಿ ಕೈಕಾಲು ಏಡಿಯ ಕೈಕಾಲುಗಳಂತೆ ಸೊಟ್ಟ ಸೊಟ್ಟಾಗಿ ಹೋಗಿ ಕುಂದಿ ಕೃಶಳಾಗಿ ಬಿದ್ದಿದ್ದಳು. ಅವರು ಅವಳನ್ನು, “ಆಕಾಶ ಹಾರುವುದನ್ನು ಭೂಮಿ, ಅದುರುವುದನ್ನು ನಿಲ್ಲಿಸಬೇಕು ಎಂದು ಕೇಳಿಕೊಂಡರು” ಅವಳು ತನ್ನ ಸ್ಥಿತಿ ಹೇಳಿಕೊಂಡು, ನಾನೇ ಹೀಗಿರುವಾಗ ಅಷ್ಟು ಬಲವಾದ ಆಕಾಶ ಭೂಮಿಗಳನ್ನು ಹೇಗೆ ಹಿಡಿತಕ್ಕೆ ತರಲಿ ಎಂದು ಕೇಳಿದಳು.

ಈ ಮಾತು ಕೇಳಿ ನೂರನಾಲ್ಕುದೆಯ್ಯಗಳು, ಬೈನಾಡಪ್ಪ ಒಂದು ಕತ್ತಿ ತೆಗೆದುಕೊಂಡು ಅಲ್ಲಿದ್ದ ಮೂರು ಮೊಟ್ಟೆಗಳಲ್ಲಿ ಒಂದನ್ನು ಒಡೆದರು. ಕೂಡಲೇ ಹುಲ್ಲುಗಾವಲುಗಳು, ಗಿಡಮರಗಳು ಕಾಣಿಸಿಕೊಂಡವು. ಎರದನೆಯ ಮೊಟ್ಟೆ ಒಡೆದಾಗ ನಾಲ್ಕು ಜಾತಿ, ನಲುವತ್ತೆಂಟು ಕುಲ, ತೆವಳುವ ಹಾವು, ಹಾರುವ ಹಕ್ಕಿ ಎಲ್ಲ ತೋರಿ ಬಂದವು. ಕೊನೆಯ ಮೊಟ್ಟೆ ಒಡೆದಾಗ ಜಾತಾಂಗೋಟ್ಟು ಮುತ್ತಿಯು ಉದಯ ಸೂರ್ಯನಂತೆ ಮೇಲೆದ್ದು ಹಾರುತ್ತ ಜಾತಾಂಗೋಟ್ಟು ಶಿಖರದಲ್ಲಿ ಕುಳಿತು ನಾಲ್ಕು ದಿಕ್ಕಿಗೂ ನಾಲ್ಕು ಬಾರಿ ಕುಟುಕಿ ನಾಲ್ಕು ಸುತ್ತು ಕುಣಿದು ಬಂದಳು. ಆಕಾಶದ ಹಾರಾಟ ನಿಂತಿತು. ಭೂಮಿಯ ಅದುರಾಟ ನಿಂತಿತು. ಆಮೇಲೆ ಭೂಮಿಗೆ ಒಂದು ಮೂಲೆ ಒಂದು ಕಣ್ಣು ಇರಿಸಿದರು. ಹಾರಾಟ, ಅದುರಾಟ ನಿಂತು ಹೋಯಿತು. (ಶಂಕರ್ನಾರಾಯಣ ರಾವ್ ಎನ್. ಪಿ:೧೯೯೪:೨೧-೨೨)

ಮೇಲಿನ ಕಥೆಗೆ ಅನೇಕ ಆಯಾಮಗಳಿದ್ದರೂ ಮೂರು ಮೊಟ್ಟೆಗಳು ಮೂರು ಭಿನ್ನ ಲೋಕಗಳನ್ನು ಪ್ರತಿನಿಧಿಸುತ್ತವೆ ಎಂಬ ಅಂಶ ನಮಗಿಲ್ಲಿ ಬಹಳ ಮುಖ್ಯವಾದುದು.

ಎರಡು ಮಾದರಿಗಳು:

ಇದುವರೆಗೆ ನಡೆಸಿದ ಚರ್ಚೆಯಲ್ಲಿ ಸ್ಪಷ್ಟವಾಗುವ ವಿಚಾರವೆಂದರೆ ಜನಪದ ಪ್ರಜ್ಞೆಯಲ್ಲಿನ ಭೌತಿಕ ಪರಿಸರದ ಗ್ರಹಿಕೆಯಲ್ಲಿ ಸಸ್ಯ, ಪ್ರಾಣಿ ಮತ್ತು ಮಾನವ ಲೋಕಗಳಿಗೆ ಸಮಾನವಾದ ಸ್ಥಾನವನ್ನು ನೀಡಲಾಗಿದೆ. ಈ ಮೂರು ಲೋಕಗಳನ್ನು ಬೇರೆ ಬೇರೆಯಾಗಿಯೇ ವಿವರಿಸಿದ ಕ್ರಮಗಳೂ ಕೂಡ ನಮ್ಮ ಮುಂದಿವೆ. ಆಕಾಶವನ್ನು ಗಂಡಾಗಿ ಭೂಮಿಯನ್ನು ಹೆಣ್ಣಾಗಿ ಆಕಾಶ ಭೂಮಿಗಳನ್ನು ತಂದೆ ತಾಯಿಗಳಾಗಿ ಗ್ರಹಿಸಿರುವುದೂ ಉಂಟು. ಗಂಡು ಹೆಣ್ಣಿನ ಪ್ರತೀಕವಾಗಿ ಸೂರ್ಯಚಂದ್ರರನ್ನು ಕಾಣಿಸಿದ್ದೂ ಉಂಟು. ಭೂಮಿಯನ್ನು ಹೆಣ್ಣೆಂದು ಭಾವಿಸಿದ್ದರಿಂದ ಹೆಣ್ಣಿನ ಮುಟ್ಟನ್ನು, ಭೂಮಿಗನ್ವಯಿಸಿ ಭೂಮಿಯ ಮುಟ್ಟನ್ನು ಜನರು ಆಚರಿಸುವುದೂ ಇದೆ. ಭೂಮಿಯ ಮೂಲದ್ರವ್ಯ ಮತ್ತು ಆಕಾಶದ ಶುದ್ಧ ಚೈತನ್ಯಗಳೆರಡರ ಸಂಯೋಜನೆಯಲ್ಲಿ ಜೈವಿಕ ಲೋಕ ಮೈದಳೆಯುವುದನ್ನು ಜನಪದ ಕಾವ್ಯಗಳು ವಿವರಿಸುತ್ತದೆ. ಕರಾವಳಿಯಲ್ಲಿ ಜನಪ್ರಿಯವಾಗಿರುವ ಗುಳಿಗೆ ಭೂತದ ಪಾಡ್ಡನದಲ್ಲಿ ತಾಯಿಯ ಬಲದ ಮೊಲೆ ಒಡೆದು ಭೂಮಿಗೆ ಬೀಳುವ ಗುಳಿಗನು ಭೂಮಿಯ ಸ್ಪರ್ಶವಾಗುತ್ತಲೇ ತಾಯಿಯ ಎಡದ ಮೊಲೆಯನ್ನು ತಿನ್ನುವ ಭಯಾನಕವಾದ ಚಿತ್ರವೂ ಇದೆ.

ಎ.ವಿ.ನಾವಡ ಮತ್ತು ಗಾಯತ್ರಿ ನಾವಡರು ಸಂಪಾದಿಸಿದ ‘ಕಾಡ್ಯನಾಟ’ (೧೯೯೨) ಎಂಬ ಹೆಸರಿನ ಸಂಶೋಧನ ಸಂಪುಟದಲ್ಲಿ ಹೊನ್ನಿಯ ಕತೆಯೊಂದು ಬರುತ್ತದೆ. ಆ ಕತೆಯ ಸ್ಥೂಲ ರೂಪ ಇಂತಿದೆ.

“ಮೇದರ ಜಾತಿಗೆ ಸೇರಿದ ಹೊನ್ನಿಯು ಹೆಂಗಸಾಗುತ್ತಾಳೆ. ಬೆಳೆದ ಹೊನ್ನಿಯು ಗಾಳಿಯ ಸಂಗದಿಂದ ಬಸುರಾಗುತ್ತಾಳೆ. ಒಂದೇ ಬಸುರಿಗೆ ಏಳು ಮಂದಿ ಮಕ್ಕಳನ್ನು ಪಡೆಯುತ್ತಾಳೆ ಆದರೆ ಬರಗಾಲ್ ಬಂದು ಆಕೆಯ ಮಕ್ಕಳು ನರಳುತ್ತಾರೆ. ಊರಿನ ಜನರು ಬತ್ತಕೊಟ್ಟರೂ ಅದರಿಂದ ಹೊನ್ನಿಗೆ ಮಕ್ಕಳನ್ನು ಸಾಕಲಾಗುವುದಿಲ್ಲ. ಅಂಗಳದ ಹೊಂಡ ನೆಕ್ಕಿದರೂ ಒಡಲು ತಣಿಯುವುದಿಲ್ಲ. ಅಸಹಾಯಕಳಾದ ಆಕೆ ಕಮ್ಮಾರನಲ್ಲಿಗೆ ಹೋಗುತ್ತಾಳೆ. ನೆಲ ಅಗಿಯುವ, ಮಣ್ಣು ಕಡಿಯುವ ಸಲಕರಣೆಗಳನ್ನು ತರುತ್ತಾಳೆ. ಕಾಡುಗೆಣಸು ಹುಡುಕುತ್ತಾ ಕಾಡಿಗೆ ನಡೆಯುತ್ತಾಳೆ. ಮೂಡಣದ ಕಾಡಿನಲ್ಲಿ ಆಕೆಗೆ ಗೆಣಸು ಕಾಣುತ್ತದೆ. ಕುರುಚಲುಗಳನ್ನು ಬದಿಗೆ ಸರಿಸಿ ನೆಲ ಅಗೆಯುತ್ತಾಳೆ. ಕುದುರೆಯಂಥ ಬೇರು, ಆನೆಯಂಥ ಕಲ್ಲುಗಳನ್ನು ಬದಿಗೆ ಸರಿಸುತ್ತಾರೆ. ಮೂರು ಹಾರೆ ಮಣ್ಣು ತೆಗೆಯುತ್ತಾಳೆ. ಒಂದು ಹಾರೆ ಕಡಿದಾಗ ಚಿನ್ನದ ಕಲಶ ಕಾಣುತ್ತದೆ ಎರಡನೆಯ ಹಾರೆ ಕಡಿದಾಗ ತಾಮ್ರದ ಕಲಶ ಕಾಣಿಸುತ್ತದೆ. ಮೂರನೆಯ ಹಾರೆ ಕಡಿದಾಗ ಮಣ್ಣಿನ ಕಲಶ ಕಾಣಿಸುತ್ತದೆ. ಚಿಕಿತಳಾದ ಹೊನ್ನಿ ಕಾದುಬಿಟ್ಟು ನಾಡಿನತ್ತ ಓಡುತ್ತಾಳೆ. ಒಡೆಯರ ಅಂಗಳದಲ್ಲಿ ನಿಂತು ಕಂಡದ್ದನ್ನು ಹೇಳುತ್ತಾಳೆ. ಅಲ್ಲಿಂದ ಮುಂದೆ ಅಡಿಗರ ಮನೆಗೆ ತೆರಳಿ ಕಂಡಿದ್ದನ್ನು ಹೇಳುತ್ತಾರೆ. ಆಶ್ಚರ್ಯ ಚಕಿತರಾದ ಅಡಿಗರು ಒಡೆಯರ ಹೊನ್ನಿಯೊಂದಿಗೆ ಕಾಡಿಗೆ ತೆರಳುತ್ತಾರೆ. ಹೊನ್ನಿ ಅವರಿಗೆ ಹಾದಿತೋರಿಸುತ್ತಾಳೆ. ಕಾದಿನಲ್ಲಿದ್ದ ಚಿನ್ನದ ಕಳಶವನ್ನು ಅಡಿಗರು ತೆಗೆದುಕೊಳ್ಳುತ್ತಾರೆ. ತಾಮ್ರದ ಕಲಶವನ್ನು ಒಡೆಯರು ತೆಗೆದುಕೊಳ್ಳುತ್ತಾರೆ. ಹೊನ್ನಿಯು ಮಣ್ಣಿನ ಕಲಶವನ್ನು ಇರಿಸಿಕೊಳ್ಳುತ್ತಾಳೆ. ಮುಂದೆ ಚಿನ್ನದ ಕಲಶವನ್ನು ಊರಿನ ಮಧ್ಯ ಭಾಗದಲ್ಲಿಯೂ, ತಾಮ್ರದ ಕಳಶವನ್ನು ಗದ್ದೆಯಂಚಿನಲ್ಲಿಯೂ, ಮಣ್ಣಿನ ಕಳಶವನ್ನು ಕಾಡಿನಲ್ಲಿಯೂ ಪ್ರತಿಷ್ಠಾಪಿಸಲಾಗುತ್ತದೆ.

ತುಂಬ ಸಾಮಾನ್ಯ ಎಂಬ ಹಾಗೆ ತೋರುವ ಈ ಕತೆಯಲ್ಲಿ ಜನಪದರ ಭೌತಿಕ ಪರಿಸರದ ಗ್ರಹಿಕೆಯ ಕೆಲವು ಸೂಕ್ಷಮಗಳು ಪ್ರತೀತಗೊಂಡಿವೆ. ಮುಖ್ಯವಾಗಿ ಈ ಕತೆಯಲ್ಲಿ ಊರು, ಗದ್ದೆ ಮತ್ತು ಕಾಡುಗಳೆಂಬ ಮೂರು ಲೋಕಗಳಿವೆ. ಈ ಮೂರು ಲೋಕಗಳು ಸ್ವತಂತ್ರವಾಗಿದ್ದು ಪರಸ್ಪರ ಪೂರಕವಾದ ಸಂಬಂಧಗಳನ್ನು ಹೊಂದಿವೆ. ಇದರ ಜೊತೆಗೆ ಬ್ರಾಹ್ಮಣ, ಒಡೆಯ ಮತ್ತು ದಲಿತ ವರ್ಗಕ್ಕೆ ಸೇರಿದ ಮೂರು ಜನವರ್ಗವು ಕಂಡುಬರುತ್ತದೆ. ಊರಿನೊಂದಿಗೆ ಬ್ರಾಹ್ಮಣರು ಗದ್ದೆಯೊಂದಿಗೆ ಒಡೆಯರು ಮತ್ತು ಕಾಡಿನೊಂದಿಗೆ ದಲಿತರು ಸೇರಿಕೊಂಡಿದ್ದಾರೆ. ಚಿನ್ನವು ಊರು ಮತ್ತು ಬ್ರಾಹ್ಮಣರೊಂದಿಗೆ ತಾಮ್ರವು ಗದ್ದೆ ಮತ್ತು ಒಡೆಯರೊಂದಿಗೆ ಮಣ್ಣು ಕಾಡು ಮತ್ತು ದಲಿತರೊಂದಿಗೆ ಸೇರಿಕೊಂಡಿದೆ. ಕುಂಭ, ಎಲೆ ಮತ್ತು ತೆಂಗಿನಕಾಯಿಗಳೀರುವ ಕಲಶವು ಮೂರು ವಿಭಿನ್ನ ಘಟಕಗಳನ್ನು ಹೊಂದಿದ್ದು ಈ ಹಿಂದೆ ಹೇಳಿದ ಮೂರು ಘಟಕಗಳೊಂದಿಗೆ ಸಂಯೋಜನೆಗೊಳ್ಳುತ್ತದೆ. ಹೀಗೆ ಈ ಕಥೆಯು ಭೌತಿಕ ಜಗತ್ತನ್ನು ಬ್ರಾಹ್ಮಣ, ಶೂದ್ರ ಮತ್ತು ದಲಿತ ಎಂಬ ಘಟಕಗಳಲ್ಲಿ ಊರು, ಗದ್ದೆ ಮತ್ತು ಕಾದು ಎಂಬ ಘಟಕಗಳಲ್ಲಿ ವಿಭಜಿಸಿ ಅಭಿವ್ಯಕ್ತಿಸುತ್ತದೆ. ಅನೇಕ ಜನಪದ ಕಥೆಗಳಲ್ಲಿ ಈ ಬಗೆಯ ಚಿತ್ರಣಗಳೀರುವುದನ್ನು ನಾವು ಕಾಣಬಹುದು.

ಜನಪದ ವೈದ್ಯ ವಿಧಾನದಲ್ಲಿ ಮಾತ್ರ ಸಂಸ್ಕೃತಿಯ ನಿರ್ಮಾತೃವಾದ ಮನುಷ್ಯನು ಪ್ರಕೃತಿಗೆ ಪೂರ್ತಿ ಸಹ್ರಣಾಗುವ ವಿವರಣೆಗಳು ಲಭಿಸುತ್ತವೆ. ಆಷಾಢ ಮಾಸದಲ್ಲಿ ಕೆಲವು ಮರಗಳಲ್ಲಿ ಆವಾಹನೆಗೊಳ್ಳುವ ಔಷಧವನ್ನು ಮನುಷ್ಯ ಸ್ವೀಕರಿಸಬೇಕಾದರೆ ಬೆತ್ತಲೆಯಾಗಿಯೇ ಅದರ ಬಳಿಗೆ ಹೋಗಬೇಕೆಂಬ ನಂಬುಗೆಯೊಂದಿದೆ. ಆಮರದಿಂದ ಔಷಧವನ್ನು ತೆಗೆಯುವಾಗ ಯಾವುದೇ ಸಲಕರಣೆಗಳನ್ನು ಬಳಸುವಂತಿಲ್ಲ. ಹೆಚ್ಚೆಂದರೆ ಕಲ್ಲಿನಲ್ಲಿ ಗುದ್ದಿ ತೆಗೆಯಬಹುದು. ಇಲ್ಲವೇ ಬಾಯಲ್ಲಿ ಕಚ್ಚಿ ತೆಗೆಯಬಹುದು. ಸಲಕರಣೆಗಳ ಬಳಕೆ ಇಲ್ಲದಿರುವುದು ಮತ್ತು ಬೆತ್ತಲೆಯಾಗಿರುವುದು ಮಾನವನು ಪ್ರಕೃತಿಗೆ ಪೂರ್ತಿ ಶರಣಾಗುವ ಪರಿಕ್ರಮವನ್ನೇ ಸಂಕೇತಿಸುತ್ತದೆ. ಈ ಔಷಧ ಸ್ವೀಕರಣಾ ಕಾರ್ಯಕ್ರಮವು ಮುಂಜಾವದಲ್ಲಿ ನಡೆಯಬೇಕೆನ್ನುವ ನಿರ್ಣಯಗಳನ್ನು ನೋಡಿದಾಗ ರಾತ್ರಿ ಹಗಲುಗಳ ವ್ಯತ್ಯಾಸವನ್ನು ತೊಡೆದು ಹಾಕಿದಂತೆ ಭಾಸವಾಗುತ್ತದೆ. ಹೀಗೆ ಜನಪದ ವೈದ್ಯ ವಿಧಾನದಲ್ಲಿ ಪ್ರಾಕೃತಿಕ ಪರಿಸರಕ್ಕೆ ಸಂಸ್ಕೃತಿಯು ಶರಣಾಗುವ ಅಭೂತಪೂರ್ವ ಚಿತ್ರವಿದೆ.

ಸಾಮಾಜಿಕ ಸಂಪ್ರದಾಯಗ್ಗಳಲ್ಲಿ ಭೌತಿಕ ಪರಿಸರವನ್ನು ಸಂಸ್ಕೃತಿಗೆ ಒಗ್ಗಿಸಲು ಮಂಗಳ ವಾದ್ಯಗಳನ್ನು ಬಳಸಲಾಗುವುದು. ಡೋಲಿನ ನಿಯತವಾದ ಶಬ್ದ, ಗಾಳಿವಾದ್ಯಗಳ ಮಂಗಳ ಧ್ವನಿ ಮತ್ತಿತರ ವಾದ್ಯಗಳು ಪ್ರಕೃತಿಯ ಅಸ್ತವ್ಯಸ್ತತೆಯನ್ನು ಗುರುತಿಸಿ ಅವನ್ನು ವ್ಯವಸ್ಥಿತಗೊಳಿಸಿವ ಕೆಲಸವನ್ನು ಮಾಡುತ್ತವೆ. ಭೌತಿಕ ಪರಿಸರದಲ್ಲಿ ಸಾವು ಉಂಟು ಮಾಡುವ ಅಸ್ತವ್ಯಸ್ತತೆಯನ್ನು ಪರಿಹರಿಸಲು ಹದಿನಾರು ದಿನಗಳ ಕಾಲ ಮಧ್ಯಂತರ ಜಗತ್ತೊಂದನ್ನು ಸೃಷ್ಟಿಸಿ ಬಗೆಬಗೆಯ ಕಾರ್ಯಗಳನ್ನು ನಿರ್ವಹಿಸಲಾಗುವುದು. ಇಲ್ಲಿ ಮರುಹುಟ್ಟುವ ಕಲ್ಪನೆ ಇಲ್ಲದ್ದರಿಂದ ವ್ಯಕ್ತಿಯನ್ನು ಭೌತಿಕ ಪರಿಸರದಿಂದ ಕಳುಹಿಸಿಕೊಡುವ ಕೆಲಸವನ್ನು ಮಾಡಲಾಗುವುದು.

ಪ್ರದರ್ಶನ ಕಲೆಗಳಲ್ಲಿ ಕಂಡುಬರುವ ಭೌತಿಕ ಪರಿಸರದ ಚಿತ್ರಣವು ಬಹುಮಟ್ಟಿಗೆ ಕೃಷಿಯಾಧಾರಿತ ಸಮಾಜ ವ್ಯವಸ್ಥೆಯನ್ನು ಪ್ರೀತಿಸುವಂತೆ ತೋರುತ್ತದೆ. ದೊಡ್ಡಾಟ ಮೂಡಲ ಪಾಯ, ಯಕ್ಷಗಾನಗಳಲ್ಲಿ ಕಂಡುಬರುವ ಬೇಟೆ ಮತ್ತು ಬೇಟವು ಕೃಷಿ ಭೂಮಿಯ ಸಂರಕ್ಷಣೆ, ಫಲವಂತಿಕೆಗೆ ಸಂಬಂಧಿಸಿದೆ. ಡಪ್ಪಿನಾಟಕಗಳ ಅನೇಕವು ವ್ಯಭಿಚಾರದ ಕತೆಗಳಾಗಿವೆ. ಅನೇಕ ಕ್ರೀಡೆಗಳಲ್ಲಿ ಮಾನವನು ಸಸ್ಯವಾಗುವ, ಪ್ರಾಣಿಗಳಾಗುವ ಪ್ರಕ್ರಿಯೆ ಕಂಡುಬರುತ್ತದೆ. ಭೌತಿಕ ಪರಿಸರವನ್ನು ಪ್ರದರ್ಶನ ಕಲೆಗಳಲ್ಲಿ ಪುನರ್ ಸೃಷ್ಟಿಸುವ ಬಗೆ ರೋಮಾಂಚನಕಾರಿಯಾಗಿದೆ.

ಸಮಾರೋಪ:

ಒಟ್ಟಿನಲ್ಲಿ ಜನಪದ ಪ್ರಜ್ಞೆಯಲ್ಲಿನ ಭೌತಿಕ ಪರಿಸರದ ಗ್ರಹಿಕೆ ಮತ್ತು ಅಭಿವ್ಯಕ್ತಿ ವಿಧಾನಗಳು ತುಂಬ ಸಂಕೀರ್ಣವಾಗಿವೆ. ಕಾಲ, ದೇಶ ಮತ್ತು ವ್ಯಕ್ತಿಗಳನ್ನು ಅವಲಂಬಿಸಿ ಅವು ಬೇರೆ ಬೇರೆಯಾಗಿ ರೂಪುದಳೆದಿವೆ. ಜಾನಪದದ ವಿವಿಧ ಪ್ರಕಾರಗಳಲ್ಲಿ ಕೂಡಾ ಅವು ಬಹುರೂಪ ಧಾರಣೆ ಮಾಡಿವೆ. ಸಸ್ಯವರ್ಗ, ಪ್ರಾಣಿವರ್ಗ ಮತ್ತು ಮಾನವನ ವರ್ಗಗಳ ನಡುವಿನ ವಿವಿಧ ಬಗೆಯ ಹೊಂದಾಣಿಕೆಗಳನ್ನು ನಾವಿಲ್ಲಿ ಕಾಣಬಹುದಾಗಿದೆ.

* * *