ಭೂಮಿ, ಆಕಾಶ, ಅಗ್ನಿ, ನೀರು ಮತ್ತು ಗಾಳಿಯನ್ನು ನಾವು ಹಿಂದಿನಿಂದಲೂ ಪಂಚಭೂತಗಳೆಂದು ಗುರುತಿಸುತ್ತಾ ಬಂದಿದ್ದೇವೆ. ಇವು ತುಂಬ ಹಳೆಯವೂ, ವೈವಿಧ್ಯಮಯವೂ, ವ್ಯಾಪಕವೂ ಆಗಿದ್ದ, ಮನುಕುಲವನ್ನು ನಿರಂತರವಾಗಿ ಪ್ರಭಾವಿಸುತ್ತ ಬಂದಿವೆ. ಸಾಂಖ್ಯರು, ಚಾರ್ವಾಕರು, ನ್ಯಾಯಿಕರು ಮತ್ತು ವೈಶೇಷಿಕರು ಪಂಚಭೂತಗಳನ್ನು ಆಧರಿಸಿಯೇ ತಮ್ಮ ‘ದರ್ಶನ’ಗಳನ್ನು ಪ್ರಸ್ತುತಪಡಿಸಿದರು. ದರ್ಶನಗಳು ಭಾವನಾವಾದಕ್ಕೆ ವಿರುದ್ಧವಾಗಿ ‘ಭೌತವಾದ’ವನ್ನು ನಿಲ್ಲಿಸುವ ಪ್ರಯತ್ನಗಳಾಗಿದ್ದವು. ಪಂಚೇಂದ್ರಿಯಗಳಾದ ಕಣ್ಣು, ನಾಲಿಗೆ, ಕಿವಿ, ಮೂಗು, ಚರ್ಮಗಳಲ್ಲಿ ಯಾವುದಾದರೂ ಒಂದರ ಸಹಾಯದಿಂದ ತಿಳಿಯಲು ಸಾಧ್ಯವಿರುವುದನ್ನು ಮಾತ್ರ ಅವರೆಲ್ಲ ‘ಪಂಚಭೂತ’ಗಳಲ್ಲಿ ಸೇರಿಸಿದರು. ಆದರೆ ಲೋಕಾಯತಿಕರಲ್ಲಿ ಕೆಲವರು ನಾಲ್ಕು ಧಾತುಗಳನ್ನು ಮಾತ್ರ ಅಂಗೀಕರಿಸಿದ್ದಾರೆ. ಉದಾಹರಣೆಗೆ ಅತ್ಯಂತ ಪ್ರಾಚೀನ ಭೌತವಾದಿಗಳಲ್ಲಿ ಒಬ್ಬನಾದ ಅಜಿತಕೇಶ ಕಂಬಳಿಯ ವಾದವನ್ನು ಪ್ರಾಚೀನ ಬೌದ್ಧಮೂಲವೊಂದು ಹೀಗೆ ಮಂಡಿಸುತ್ತದೆ.

“ಮನುಷ್ಯಜೀವಿಯು ನಾಲ್ಕು ಧಾತುಗಳಿಂದ ನಿರ್ಮಿಸಲ್ಪಟ್ಟಿದ್ದಾನೆ. ಅವನು ಸತ್ತಾಗ ಅವನೊಳಗಿನ ಪೃಥ್ವಿಯು ಪೃಥ್ವಿಗೆ ಹಿಂದಿರುಗಿ ಸೇರುತ್ತದೆ. ದ್ರವ್ಯಗಳು ನೀರನ್ನು ಸೇರುತ್ತವೆ, ಶಾಖವು ಬೆಂಕಿಯನ್ನು ಸೇರುತ್ತವೆ. ವಾಯುವು ಗಾಳಿಯನ್ನು ಸೇರುತ್ತದೆ, ಅವನ ದೈತನ್ಯವು ಆಕಾಶವನ್ನು ಸೇರುತ್ತದೆ.” (ಉದ್ಧೃತ, ಕಕ್ಕಿಲ್ಲಾಯ ಬಿ. ವಿ. ೧೯೯೪”೨೭೯)

ಹೀಗೆ ಐದು ಧಾತುಗಳನ್ನು ಮಾನವನ ಮೂಲಕ ವಿವರಿಸುವ ಲೋಕಾಯುತರ ಗುಂಪೊಂದು ಕ್ರಿಯಾಶೀಲವಾಗಿರುವ ಹೊತ್ತಿನಲ್ಲಿಯೇ ಇನ್ನು ಕೆಲವು ದಾರ್ಶನಿಕರು ಪಂಚಭೂತಗಳಲ್ಲಿ ಪಂಚೇಂದ್ರಿಯಗಳನ್ನು ಐಕ್ಯಗೊಳಿಸುವ ವಾದವನ್ನು ಮುಂದಿಡುತ್ತಿದ್ದರು. ಆ ಪ್ರಕಾರ ಪೃಥ್ವಿಯಲ್ಲಿ ವಾಸನೆ, ರುಚಿ, ವರ್ಣ ಮತ್ತು ಸ್ಪರ್ಶ (ಮೂಗು, ನಾಲಿಕೆ, ಕಣ್ಣು ಮತ್ತು ಚರ್ಮಗಳು) ಐಕ್ಯವಾಗುತ್ತವೆ. ಅಗ್ನಿಯಲ್ಲಿ ವರ್ಣ ಮತ್ತು ಸ್ಪರ್ಶವಿದ್ದರೆ, (ಕಣ್ಣು ಮತ್ತು ಚರ್ಮ) ವಾಯುವಿನಲ್ಲಿ ಸ್ಪರ್ಶ (ಚರ್ಮ) ಮಾತ್ರ ಸೇರ್ಪಡೆ ಆಗುತ್ತದೆ. ಕೊನೆಯದಾದ ‘ಆಕಾಶ’ ದಲ್ಲಿ ಶಬ್ದ (ಕಿವಿ) ಮಾತ್ರ ಇರುತ್ತದೆ. ಈ ಪಂಚಭೂತಗಳಲ್ಲಿ ‘ಆಕಾಶ’ ಮಾತ್ರ ಅವಿಭಾಜ್ಯವಾಗಿದ್ದು, ಪೃಥ್ವಿ, ನೀರು, ಬೆಂಕಿ ಮತ್ತು ಗಾಳಿಗಳಲ್ಲಿ ನಿತ್ಯ ಮತ್ತು ಅನಿತ್ಯ ಎಂಬ ಎರಡು ಒಳಪ್ರಭೇದಗಳನ್ನು ಕಲ್ಪಿಸಲಾಗಿದೆ.

ಹೀಗೆ ನ್ಯಾಯಿಕರು, ವೈಶೇಷಿಕರು ಮತ್ತು ಲೋಕಾಯುತರು, ಮೂಲತಃ ಭೌತವಾದಿಗಳಾದ್ದರಿಂದ, ಪಂಚಭೂತಗಳನ್ನು ಸೂಕ್ಷ್ಮವಾಗಿ ವರ್ಗೀಕರಿಸುವ ಮತ್ತು ವಿಶ್ಲೇಷಿಸುವ ಸಾಹಸಕ್ಕೆ ಇಳಿದಿದ್ದಾರೆ. ಶಂಕರಾಚಾರ್ಯರೇ ಮೊದಲಾದ ಭಾವನಾವಾದಿಗಳು ವಾಸ್ತವಿಕ ಜಗತ್ತನ್ನು ಅವಾಸ್ತವಿಕ, ಮಾಯೆ ಎಂದು ಕರೆದಿರುವುದರಿಂದ ಅವರಿಗೆ ಪಂಚಭೂತಗಳನ್ನು ವಿಶ್ಲೇಷಿಸುವ ಅಗತ್ಯ ಕಂಡುಬರಲಿಲ್ಲ.

ಈ ಅರಿವಿನಲ್ಲಿ ನಾವು ಜಾನಪದವನ್ನು, ಅಲ್ಲಿರುವ ಸಂಪ್ರದಾಯಗಳನ್ನು ಸೂಕ್ಷ್ಮವಾಗಿ ನೋಡಿದಾಗ, ಪಂಚಭೂತಗಳ ಪೂರ್ಣತತ್ವವನ್ನು ಪ್ರತಿಬಿಂಬಿಸುವ ರೂಪುವೊಂದರ ಗೈರು ಹಾಜರಿಯೇ ಅಲ್ಲಿ ಎದ್ದು ಕಾಣುತ್ತದೆ. ಈ ಅರ್ಥದಲ್ಲಿ ಅದು ನಮ್ಮ ಸಂಪ್ರದಾಯಕ ಚಿಂತನ ಕ್ರಮಕ್ಕಿಂತ ತುಂಬ ಭಿನ್ನವಾದ ನಿಲುವನ್ನು ಪ್ರಕಟಿಸುತ್ತದೆ ಎಂದು ತೋರುತ್ತದೆ. ಭೂಮಿ, ಆಕಾಶ, ಬೆಂಕಿ, ನೀರು ಮತ್ತು ಗಾಳಿಗಳು ಜಾನಪದ ಜಗತ್ತಿನ ಒಂದೊಂದೇ ಅಂಶವನ್ನು ಪ್ರತ್ಯೇಕವಾಗಿ ಪ್ರತಿನಿಧಿಸುವಂತೆ ಭಾಸವಾಗುತ್ತದೆ. ಇವು ಬೇರೇನನ್ನೋ ಉಪದೇಶಿಸುವಂತೆ ತೋರುವುದಿಲ್ಲ. ಪರತತ್ತ್ವವನ್ನು ಪ್ರತಿಮಿಸುವುದಿಲ್ಲ. ಬದಲು ಒಟ್ಟು ವಿಶ್ವತತ್ತ್ವದ ಒಂದೊಂದಂಶವನ್ನು ಮಾತ್ರ ಬಲಿಷ್ಠವಾಗಿಸುವಂತೆ ಕಾಣುತ್ತದೆ.೧ ಇಂಥ ತತ್ತ್ವ ಪ್ರಕಟನೆಯ ಸಂಬಂಧದಲ್ಲಿ ಅವು ಪ್ರತ್ಯೇಕವಾಗಿಯೇ ಅನೇಕ ಬಗೆಯ ದೈವಗಳನ್ನು, ಪುರಾಣಗಳನ್ನು, ನಂಬಿಕೆಗಳನ್ನು ಆಚರಣೆಗಳನ್ನು ಸೃಷ್ಟಿಸಿಕೊಂಡಿವೆ. ಹೀಗಿರುವುದರಿಂದಾಗಿ ಜಾನಪದದ ಮಟ್ಟಿಗೆ ನಾವು ಪಂಚಭೂತಗಳನ್ನು ಬಿಡಿಬಿಡಿಯಾಗಿಯೇ ನೋಡುವುದು ಹೆಚ್ಚು ಔಚಿತ್ಯಪೂರ್ಣವಾಗಿದೆ.

ಗುಣಸ್ವಭಾವಗಳ ದೃಷ್ಟಿಯಿಂದ ಆಕಾಶ ಮತ್ತು ಭೂಮಿಯನ್ನು ಪರಸ್ಪರ ವಿರೋಧವೂ ಪೂರಕವೂ ಆಗಿರುವ ವಿರೋಧದ್ವಂದ್ವ ಘಟಕವೊಂದು ಕರೆಯಬಹುದು. ಹಾಗೆಯೇ ಬೆಂಕಿ ಮತ್ತು ನೀರನ್ನು ಕೂಡಾ ಇಲ್ಲಿಯೂ ‘ಗಾಳಿ’ ಪ್ರತ್ಯೇಕವಾಗಿ ಉಳಿಯುತ್ತದೆ. ಜನಪದ ಸಂಪ್ರದಾಯಗಳಲ್ಲಿ ಇಂಥ ವಿರೋಧ ದ್ವಂದ್ವ ಘಟಕಗಳ ಬಗೆಗೆ ಮಾಹಿತಿಗಳು ಲಭಿಸುತ್ತವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ.

ಲಭ್ಯ ಇರುವ ಒಂದು ಜನಪದ ಕತೆಯ ಪ್ರಕಾರ ಭೂಮಿಗೆ ಆಕಾಶವು ತಾಗಿಕೊಂಡಂತೆ ಬಿದ್ದಿತ್ತು. ಇದರಿಂದಾಗಿ ಕಸಗುಡಿಸುವ ಅಜ್ಜಿಯ ಬೆನ್ನಿಗೆ ಅದು ತಾಗುತ್ತಿತ್ತು. ಅದನ್ನು ಕಂಡು ಚಿಕ್ಕಮಕ್ಕಳು ತಮಾಷೆ ಮಾಡಿದಾಗ ಸಿಟ್ಟಿಗೆದ್ದ ಅಜ್ಜಿಯು ಕಸಪೊರಕೆಯಿಂದ ಆಕಾಶಕ್ಕೆ ಹೊಡೆಯುತ್ತಾಳೆ. ಆಗ ಆಕಾಶ ಸರ್ರನೆ ಮೇಲೆ ಓಡಿ ಹೋಗುತ್ತದೆ. ಅದು ತೀರ ದೂರ ಓಡುವುದನ್ನು ಕಂಡು ಮತ್ತೆ ಅಜ್ಜಿ ಅದಕ್ಕೆ ನಿಲ್ಲುವಂತೆ ಆಜ್ಞೆ ಮಾಡುತ್ತಾಳೆ. ಆಗ ನಿಂತ ಆಕಾಶವು ಈಗಲೂ ಹಾಗೆಯೇ ಇದೆ. …… (ಬಿರಾದಾರ ಮ. ಗು. ೧೯೮೭. ೫೮) ಈ ಕಥೆಯನ್ನೇ ಸ್ವಲ್ಪ ಹೋಲುವ ಆದರೆ ಇದಕ್ಕಿಂತ ಅದ್ಭುತವಾಗಿರುವ ಕತೆಯೊಂದನ್ನು ಎಸ್. ಪಿ. ಶಂಕರನಾರಾಯಣರಾವ್ ಅವರು ಸಂಗ್ರಹಿಸಿಕೊಟ್ಟಿದ್ದಾರೆ. (೧೯೯೪) ಈ ಕತೆಯು ಕೊಡಗಿನ ‘ಘಣಿಎರವ’ ಎಂಬ ಹೆಸರಿನ ಬುಡಕಟ್ಟಿನ ಜನರಲ್ಲಿ ಪ್ರಚಲಿತದಲ್ಲಿದ್ದು, ಅವರು ಸಾವಿಗೆ ಸಂಬಂಧಿಸಿದ ಆಚರಣೆಗಳಲ್ಲಿ ಇದನ್ನು ಹಾಡುತ್ತಾರೆ. ಚಿತ್ತವಂಡಪಾಟ್ ಎಂದೇ ಪ್ರಖ್ಯಾತವಾಗಿರುವ ಈ ಕಥನಕಾವ್ಯದ ಆರಂಭದ ಭಾಗದಲ್ಲಿ ಆಕಶಭೂಮಿಯ ಬಗೆಗೆ ಉಲ್ಲೇಖ ಬರುತ್ತದೆ. ಆ ಹಾಡಿನ ಗದ್ಯರೂಪ ಇಂತಿದೆ.

“ಬಾ, ಬಾ, ಬಲನಾಡಿಗೆ ಬಾ, ಆಕಾಶಗಂಡಾಗಿ, ಭೂಮಿ ಹೆಣ್ಣಾಗಿ ಬಿದ್ದಿದೆ. ಇದನ್ನು ನೋಡಿ ನೂರನಾಲ್ಕು ದೆಯ್ಯಗಳು, ಬೈನಾಡಪ್ಪ ಏನು ಮಾಡುವುದೆಂದು ಯೋಚಿಸಿದರು. ಚಿನ್ನದ ಹಾರೆ ಮಾಡಿಕೊಂಡು ಗುಂಪುಗೂಡಿಸಿ ಜೋರಾಗಿ ಹೊಡೆದು ಭೂಮಿ ಆಕಾಶಗಳನ್ನು ಬೇರ್ಪಡಿಸಿದರು. ಆಕಾಶ ಅರ್ಧಗಾವುದ ಮೇಲೇರಿನಿಂತಿತು. ಭೂಮಿ ನಿಂತಲ್ಲೇ ನಿಂತಿತು. ಎರಡನೇ ಬಾಗಿ ಗುದ್ದಿದಾಗ ಆಕಾಶ ಹಾರಿ ಹೋಯಿತು. ಭೂಮಿ ಅದುರ ತೊಡಗಿತು. ಆಕಾಶಕ್ಕೆ ಹಾರಿ ಹೋಗದೆ ಇರಲು, ಭೂಮಿಗೆ ಅದುರದೇ ಇರಲು ಅಪ್ಪಣೆ ಮಾಡಬೇಕು, ಕೆಲವು ಕಲ್ಲುಗಳನ್ನು ನೋಡಿದರು, ಅವು ಹುಳುಕು, ಒಡಕು, ಉಮ್ಮರ ಮಿಚ್ಚ ಎಂಬಲ್ಲಿ ಹಾಸುಗಲ್ಲು ಕಂಡು ಒಪ್ಪಿಗೆಯಾಯಿತು. ಅಲ್ಲಿಗೆ ನೂರೊಂದು ಕಲ್ಲು ಕುಟಿಗರನ್ನು ಕೂಡಿಸಿದರು, ಹೂವು ಹಣ್ಣು, ವೀಳ್ಯೆದೆಲೆ, ಕಾಯಿ, ಅಕ್ಕಿ ಇಟ್ಟು ಪೂಜಿಸಿ ದೀಪ ಬೆಳಗಿಸಿದರು. ಅಯಿಶೆ, ತೋಯಿಶೆ ನೀಡಿದರು. ಸುರಂಗಿ ಹೊಡೆದು ಮದ್ದು ಇಟ್ಟು ಕಲ್ಲು ಸಿಡಿಸಿದರು. ಭೂಮಿ ಆಕಾಶಗಳು ತತ್ತರಿಸುವಂತೆ ಕಲ್ಲುಗಳು ಒಡೆದುಕೊಂಡವು.

ಆಕಾಶಕ್ಕೆ ಆರು ಶಾಸನ, ಭೂಮಿಗೆ ಮೂರು ಶಾಸನ ಒಟ್ಟು ಒಂಬತ್ತು ಶಾಸನ ಕೆತ್ತುವ ಕಾರ್ಯಕೈಗೊಂಡರು. ಆಗಲೂ ಪೂಜೆ ಸಲ್ಲಿಸಿ ಹಾರಿ ಹೋಗಬೇಡವೆಂದು ಆಕಾಶಕ್ಕೂ, ಅದುರ ಬೇಡವೆಂದು ಭೂಮಿಗೂ ಅಪ್ಪಣೆ ಮಾಡಿದ ಶಾಸನ ಕೆತ್ತಿದರು. ಆದರೆ ಆಕಾಶ ಹಾರಿಹೋಗುವುದು ನಿಲ್ಲಲಿಲ್ಲ. ಭೂಮಿ ಅದುರುವುದು ನಿಲ್ಲಲಿಲ್ಲ.

ಆಗ ನೂರನಾಲ್ಕು ದೆಯ್ಯಗಳು, ಬೈನಾಡಪ್ಪ ಯೋಚಿಸಿ, ಜಾತ್ತಾಂಗೋಟ್ಟು, ಕೋಟೆಯಲ್ಲಿರುವ ಚಾತ್ತಾಂಗೋಟ್ಟು ಮುತ್ತಿಯಲ್ಲಿಗೆ ಹೋದರು. ಅವರು ಅಲ್ಲಿಗೆ ಹೋದಾಗ ಚಾತ್ತಂಗೋಟ್ಟು ಮುತ್ತಿ ಮೂರು ಕಡ್ಡಿಗಳನ್ನು ಅನಿಸಿ ನಿಲ್ಲಿಸಿ ಮೂರು ಮೊಟ್ಟೆಗಳನ್ನಿರಿಸಿದ್ದಳು. ತಲೆ ಅಡಕೆ ಕಾಯಿನಂತಾಗಿ, ಕೈಕಾಲು ಏಡಿಯ ಕೈಕಾಲುಗಳಂತೆ ಸೊಟ್ಟ ಸೊಟ್ಟಾಗಿ ಹೋಗಿ ಕುಂದಿ ಕೃಶಳಾಗಿ ಬಿದ್ದಿದ್ದಳು. ಅವರು ಅವಳನ್ನು ಆಕಾಶ ಹಾರುವುದನ್ನು ಭೂಮಿ ಅದುರುವುದನ್ನು ನಿಲ್ಲಿಸಬೇಕು” ಎಂದು ಕೇಳಿಕೊಂಡರು. ಅವಳು ತನ್ನ ಸ್ಥಿತಿ ಹೇಳಿ ಕೊಂಡು “ನಾನೇ ಹೀಗಿರುವಾಗ, ನಾನು ಹೇಗೆ ಅಷ್ಟು ಬಲವಾದ ಆಕಾಶ ಭೂಮಿಗಳನ್ನು ಹಿಡಿತಕ್ಕೆ ತರಲಿ” ಎಂದು ಕೇಳಿದಳು.

ಈ ಮಾತು ಕೇಳಿ ನೂರನಾಲ್ಕು ದೆಯ್ಯಗಳು, ಬೈನಾಡಪ್ಪ ಒಂದು ಕತ್ತಿ ತೆಗೆದುಕೊಂಡು ಅಲ್ಲಿದ್ದ ಮೂರು ಮೊಟ್ಟೆಗಳಲ್ಲಿ ಒಂದನ್ನು ಒಡೆದರು. ಕೂಡಲೇ ಹುಲ್ಲುಗಾವಲುಗಳು, ಗಿಡಮರಗಳು ಎಲ್ಲ ಕಾಣಿಸಿತೊಡಗಿದವು. ಎರಡನೆಯ ಮೊಟ್ಟೆ ಒಡೆದಾಗ ನಾಲ್ಕು ಜಾತಿ, ನಲವತ್ತೆಂಟು ಕುಲ, ತೆವಳುವ ಹಾವು, ಹಾರುವ ಹಕ್ಕಿ ಎಲ್ಲ ತೋರಿಬಂದವು. ಕೊನೆಯ ಮೊಟ್ಟೆ ಒಡೆದಾಗ ಚಾತ್ತಾಂಗೋಟ್ಟು ಮುತ್ತಿಯು ಉದಯ ಸೂರ್ಯನಂತೆ ಮೇಲೆದ್ದು ಹಾರುತ್ತಾ ಚಾತ್ತಾಂಗೋಟ್ಟು ಶಿಖರದಲ್ಲಿ ಕುಳಿತು ನಾಲ್ಕು ದಿಕ್ಕಿಗೂ ನಾಲ್ಕು ಬಾರಿ ಕುಟುಕಿ, ನಾಲ್ಕು ಸುತ್ತು ಕುಣಿದು ಬಂದಳು. ಆಕಾಶದ ಹಾರಾಟ ನಿಂತಿತು. ಭೂಮಿಯು ಅದುರುವುದು ನಿಂತಿತು. ಅನಂತರ ಭೂಮಿಗೆ ಒಂದು ಮೊಲೆ, ಒಂದು ಕಣ್ಣು ಇರಿಸಿದರು. ಹಾರಾಟ, ಅದರಾಟ ನಿಂತೇ ಹೋಯಿತು. (ಶಂಕರನಾರಾಯಣರಾವ್ ಎನ್. ಪಿ. ೧೯೯೪ : ೨೧-೨೨)

ಮೇಲೆ ಹೇಳಿದ ಎರಡೂ ಕತೆಗಳು ತುಂಬ ಸಂಕೀರ್ಣವಾದ ಪ್ರತಿಮೆಗಳನ್ನು ಹೊಂದಿದ್ದು ಅರ್ಥವಿಸಲು ಅಸಾಧ್ಯವಾದ ಸ್ಥಿತಿಯೊಂದನ್ನು ನಿರ್ಮಿಸಿವೆ. ಮೇಲ್ನೋಟಕ್ಕೆ ಸ್ಪಷ್ಟವಾಗುವ ಎರಡು ಅಂಶಗಳೆಂದರೆ ಈ ಕತೆಗಳಲ್ಲಿ ಆಕಾಶವನ್ನು ಗಂಡಾಗಿಯೂ, ಭೂಮಿಯನ್ನು ಹೆಣ್ಣಾಗಿಯೂ ಕಲ್ಪಿಸಲಾಗಿದೆ. ಮುದುಕಿಯೊಬ್ಬಳು ಅಂಟಿಕೊಂಡು ಬಿದ್ದಿರುವ ಭೂಮ್ಯಾಕಾಶಗಳನ್ನು ಬೇರ್ಪಡಿಸುತ್ತಾಳೆ. ಈ ಕಲ್ಪನೆಯ ಮೊದಲರ್ಧವು ಅಂದರೆ ಭೂಮಿ ಮತ್ತು ಆಕಾಶಗಳನ್ನು ಹೆಣ್ಣು ಮತ್ತು ಗಂಡಾಗಿ ಗ್ರಹಿಸುವ ವಿಧಾನವು ಋಗ್ವೇದಗಳಲ್ಲಿ ಪ್ರಕಟವಾಗಿರುವ ‘ದ್ಯಾವಾ ಪೃಥಿವೀ’ ಕಲ್ಪನೆಗಿಂತ ಬೇರೆಯದಲ್ಲ. ಅಲ್ಲಿ ಆಕಾಶ ಭೂಮಿಗಳನ್ನು ತಂದೆ ತಾಯಿಗಳಾಗಿ ಗ್ರಹಿಸಲಾಗಿದೆ. ಕನ್ನಡ ಜನಪದ ಕತೆಗಳಲ್ಲಿಯೂ ಆಕಾಶ ತಂದೆ ಮತ್ತು ಭೂಮಿತಾಯಾಗಿರುವ ಕಲ್ಪನೆಗಳು ದಟ್ಟವಾಗಿ ಹರಡಿಕೊಂಡಿವೆ. ಆಕಾಶವು ಒಂದು ಶೂನ್ಯವಾಗಿ, ಬಯಲಾಗಿ, ವೈವಿಧ್ಯಮಯವಾದ ನಕ್ಷತ್ರಗಳ ಹಾಸಿಗೆಯಾಗಿ, ಜನಪದರ ಕುತೂಹಲವನ್ನು ಮತ್ತೆ ಮತ್ತೆ ಕೆಣಕುತ್ತಾ ಬಂದಿದೆ. ಅದರ ಬದಲಾಗುವ ಬಣ್ಣ, ಅಲ್ಲಿ ಸಂಭವಿಸುತ್ತದೆ ಎಂದು ಭಾವಿಸಲಾಗುವ ಗ್ರಹಣ, ಅಲ್ಲಿ ಓಡಾಡುತ್ತಿದೆ ಎನ್ನಲಾಗುತ್ತಿರುವ ಧೂಮಕೇತು, ಹಗಲು ರಾತ್ರಿಗಳನ್ನು ಉಂಟು ಮಾಡುತ್ತಿರುವ ಸೂರ್ಯ-ಚಂದ್ರರು ಮತ್ತು ಆಕಾಶದ ನಿರಂತರತೆ ಜನಪದರ ಬದುಕು ಮತ್ತು ಚಿಂತನೆಯ ಮೇಲೆ ಗಾಢ ಪರಿಣಾಮ ಬೀರಿದೆ. ಇವು ಅನೇಕ ಬಗೆಯ ಪುರಾಣಗಳನ್ನು ವಿಧಿಯಾಚರಣೆಗಳನ್ನು ಮತ್ತು ಕಲಾಕೃತಿಗಳ ಸೃಷ್ಟಿಗೆ ಕಾರಣವಾಗಿದೆ. ಜನಪದರ ಮದುವೆಯಲ್ಲಿ ಗಂಡು-ಹೆಣ್ಣಿನ ಪ್ರತೀಕವಾಗಿ ಸೂರ್ಯ-ಚಂದ್ರರು ಕಾಣಿಸಿಕೊಂಡರೆ ಸಾವಿನ ಆಚರಣೆಗಳಲ್ಲಿ ಆಕಾಶದಾಚೆಗಿರುವ ಸ್ವರ್ಗವನ್ನೂ, ಭೂಮಿಯ ಕೆಳಗಿರುವ ನರಕವನ್ನು ಕಲ್ಪಿಸಿಕೊಳ್ಳಲಾಗಿದೆ.

ಇಂಥ ಆಕಾಶವನ್ನು ಗಂಡಾಗಿಯೂ, ಅದಕ್ಕೆ ವಿರುದ್ಧವಾಗಿ ತಳಭಾಗದಲ್ಲಿರುವ ಭೂಮಿಯನ್ನು ಹೆಣ್ಣಾಗಿಯೂ, ಕೃಷಿಕ ಸಮಾಜ ಪರಿಭಾವಿಸಿಕೊಂಡಿದೆ.

ಈ ಗಂಡು ಹೆಣ್ಣಿನ ಕಲ್ಪನೆಯನ್ನು ಜನಪದ ಸಂಪ್ರದಾಯಗಳು ಬಲಿಷ್ಠವಾದ ರೂಪಕಗಳಲ್ಲಿ ದಾಖಲಿಸಿವೆ. ಬಹುಮಟ್ಟಿಗೆ ಇದು ಫಲವಂತಿಕೆಯ ಆಚರಣೆಗಳೆಲ್ಲೆಲ್ಲ ಪ್ರಕಟವಾಗುತ್ತದೆ. ‘ಭೂಮಿ’ ಎಂಬ ಹೆಣ್ಣು ಮುಟ್ಟಾದಳೆಂದು ಭಾವಿಸಿಕೊಂಡು ಆಕೆಗೆ ತಿಂಡಿ ಕೊಟ್ಟು, ಎಣ್ಣೆ ಕೊಟ್ಟು ಸ್ನಾನ ಮಾಡಿಸಿ, ಮೂರು ದಿನ ‘ಮೈಲಿಗೆ’ ಆಚರಿಸುವ ಸಂಪ್ರದಾಯವು ಕರಾವಳಿ ಕರ್ನಾಟಕದಲ್ಲಿ ‘ಕೆಡ್ಡಾಸ’ ಎಂಬ ಹೆಸರಿನಿಂದ ಜನಪ್ರಿಯವಾಗಿದೆ. ಕರ್ನಾಟಕದ ಇತರೆಡೆಗಳಲ್ಲಿಯೂ ಲೈಂಗಿಕ ಕ್ರಿಯೆ ಸಂತಾನಾಭಿವೃದ್ಧಿಗೂ, ಕೃಷಿಗೂ ಗಾಢವಾದ ಸಂಬಂಧ ಕಲ್ಪಿಸಲಾಗಿದೆ. ಕೊಂತಿಪೂಜೆ, ಗೌರಿಪೂಜೆ, ಬಲೀಂದ್ರಪೂಜೆ ಮೊದಲಾದವು ಮೂಲತಃ ಕೃಷಿ ಭೂಮಿಯ ಆರಾಧನ ಕ್ರಮಗಳೇ ಆಗಿವೆ. ಸದ್ಯ ನಮಗೆ ಲಭ್ಯ ಇರುವ ಜಾನಪದ ಮಾಹಿತಿಗಳನ್ನು ನೋಡಿದರೆ, ಭೂಮಿಯು ಜನಪದರನ್ನು ಅತ್ಯಂತ ಆಳವಾಗಿ ಆಕರ್ಷಿಸಿರುವುದು ಸ್ಪಷ್ಟವಾಗುತ್ತದೆ. ಅಕ್ಕಿ, ಭತ್ತ, ರಾಗಿ, ಜೋಳ ಮೊದಲಾದ ಆಹಾರ ಧಾನ್ಯಗಳನ್ನು ಬೆಳೆಸಬಲ್ಲಂಥ ಭೂಮಿಯ ಬಗೆಗೆ ಜನರಲ್ಲಿ ಆರಾಧನ ಮನೋಭಾವ ಇರುವಂತೆ;

ಉದಾ : “ಬೆಳಗಾಗಿ ನಾನೆದ್ದು ಯಾರ್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯೋಳ ಭೂಮ್ತಾಯ
ಎದ್ದೊಂದು ಗಳಿಗೆ ನೆನೆದೇನ”

ಸತ್ತ ಅನಂತರ ಭೌತಿಕ ದೇಹವನ್ನು ತನ್ನೊಳಗೆ ಸೆಳೆದುಕೊಳ್ಳುವ ಭೂಮಿಯ ಬಗೆಗೆ ಆಳದಲ್ಲಿ ಒಂದು ಬಗೆಯ ಭಯವೂ ಸೇರಿಕೊಂಡಂತಿದೆ. ಭೂಮಿಯು ಮೂಲದ್ರವ್ಯದ ಸಂಕೇತ ಹಾಗೆ ಆಕಾಶವು ಶುದ್ಧ ಚೈತನ್ಯದ ಸಂಕೇತ. ಇವೆರಡರ ಸಂಯೋಜನೆಯಲ್ಲಿ ಜೈವಿಕ ಲೋಕ ಮೈದಳೆವುದನ್ನು ಜನಪದರು ಸೂಕ್ಷ್ಮವಾಗಿ ತಮ್ಮ ಸಂಪ್ರದಾಯಗಳಲ್ಲಿ ದಾಖಲಿಸಿದ್ದಾರೆ.

ಭೂಮಿಯು, ಭೂಮಿತಾಯಾಗಿ, ದೈವಾಗಿ ಆರಾಧನೆಗೆ ಒಳಪಟ್ಟದ್ದು ಸ್ಪಷ್ಟವೇ ಇದೆ. ಸಂಪತ್ತನ್ನು ಕೊಡುವ ಆಕೆ ಸಸ್ಯ ಹಾಗೂ ಪ್ರಾಣಿ ವರ್ಗಕ್ಕೂ ಆಶ್ರಯದಾತಳಾಗಿದ್ದಾಳೆ. ‘ರಕ್ಷಕ ತತ್ತ್ವದ ಸಂಕೇತ ಆಕೆ’ (ನಾಗರಾಜ ಡಿ. ಆರ್. ೧೯೮೭ : ೧೩) ಆದರೆ ಬಿರುಗಾಳಿ, ನೆರೆ, ಭೂಕಂಪಗಳಲ್ಲಿ ಆಕೆ ಮನುಕುಲವನ್ನು ನುಂಗಿನೊಣಿಯಬಲ್ಲಳು, ಹಿಂಸೆಯ ಉರಿಯಲ್ಲಿ ನರರನ್ನು ಬೇಯಿಸಬಲ್ಲಳು. ಈ ಅರ್ಥದಲ್ಲಿ ಭೂಮಿಯು ವಿನಾಶ ಮತ್ತು ಸಾವಿನ ಸಂಕೇತವೂ ಹೌದು. ನಮ್ಮ ಅನೇಕ ಮಹಾಕಾವ್ಯಗಳಲ್ಲಿ, ಜನಪದ ಕತೆಗಳಲ್ಲಿ ಭೂಮಿಯ ಇಂಥ ಬೀಭತ್ಸ ಮುಖದ ಚಿತ್ರವೂ ಇದೆ. ‘ಗುಳಿಗ’ ಭೂತಕ್ಕೆ ಸಂಬಂಧಿಸಿದ ಪಾಡ್ದನವೊಂದರಲ್ಲಿ ತಾಯಿಯ ಬಲದ ಮೊಲೆ ಒಡೆದು ಭೂಮಿಗೆ ಬೀಳುವ ಗುಳಿಗನು ಭೂಮಿಯ ಸ್ಪರ್ಶ ಆಗುತ್ತಲೇ ದೈತ್ಯಾಕಾರವಾಗಿ ಬೆಳೆದು, ತಾಯಿಯ ಎಡದ ಮೊಲೆಯನ್ನು ತಿನ್ನುವ ಭಯಾನಕ ಚಿತ್ರವಿದೆ. ಜನಪದರು ಭೂಮಿಯನ್ನು ಪೂನಿಸುವ ಕೆಲಸದ ಹಿಂದೆ ಭೂಮಿಯ ಬಗೆಗೆ ಇದ್ದ ಪ್ರೀತಿ ಮತ್ತು ಭಯ ಸಮನಾಗಿ ಪ್ರಕಟವಾಗುತ್ತಿದೆ.

ಆಕಾಶ ಮತ್ತು ಭೂಮಿಯನ್ನು ಒಂದುಗೂಡಿಸುವ ಶಕ್ತಿ ಇರುವುದು ಮಳೆಗೆ. ಇಳೆಯಿಂದ ಆಕಾಶಕ್ಕೇರುವ ನೀರು ಮತ್ತೆ ಮಳೆಯಾಗಿ ಭೂಮಿಗೇ ಹಿಂದಿರುಗುತ್ತದೆ. ಈ ಅರ್ಥದಲ್ಲಿ ನೀರು, ಆಕಾಶ ಮತ್ತು ಭೂಮಿಗೆ ಸಮಾನವಾಗಿದೆ. ಭೂಮಿಯಲ್ಲಿ ಬೆಳೆಯುವ ಆಹಾರಕ್ಕೆ ಮತ್ತು ಮಾನವನ ಉಳಿವಿಗೆ ನೀರು ಅಗತ್ಯವಾಗಿರುವುದರಿಂದ ಅದಕ್ಕೆ ಪಾವಿತ್ರ್ಯದ ಆವರಣ ಪ್ರಾಪ್ತಿಸಿದೆ.

ಜನಪದ ಪುರಾಣಗಳು ಸೃಷ್ಟಿಯ ಮೊದಲಲ್ಲಿ ಕೇವಲ ನೀರು ಮಾತ್ರ ಇತ್ತು ಎಂಬುದನ್ನು ಮತ್ತೆ ಮತ್ತೆ ಪುನರುಚ್ಚರಿಸಿವೆ. ಹೀಗೆ ನೋಡಿದಾಗ ನೀರು ಭೂಮಿ ಮತ್ತು ಆಕಾಶಕ್ಕೂ ಪ್ರಾಚೀನವಾದುದು ಎಂಬುದು ಸ್ಪಷ್ಟವಾಗುತ್ತದೆ. ಜನಕಲ್ಪನೆಯಲ್ಲಿ ಭೂಮ್ಯಾಕಾಶಗಳನ್ನು ಆವರಿಸಿಕೊಂಡ ನೀರು ಮುಂದೆ ಕಡಲಾಗಿ, ನದಿಯಾಗಿ, ತೊರೆಯಾಗಿ, ಕೆರೆ ಭಾವಿಗಳಾಗಿ ಪುನರ್ ಸೃಷ್ಟಿಹೊಂದಿ ಜನರ ಕಲ್ಪನೆಯನ್ನು ಬಗೆಬಗೆಯಾಗಿ ಕೆದಕಿದೆ. ನೀರು ಹಿತವಾದಾಗ ‘ನೀರಕನ್ನಿಕೆ’ ಯರನ್ನು ಸೃಷ್ಟಿಸಿದರೆ, ಭಯಾನಕವಾದಾಗ ನೀರು ದೆವ್ವಗಳನ್ನು ಸೃಜಿಸಿದೆ. ಈ ನಿಟ್ಟಿನಲ್ಲಿ ಆಕಾಶ ಮತ್ತು ಭೂಮಿಗಳು ಹೇಗೆ ಪರಸ್ಪರ ವಿರೋಧವಾದ ಎರಡು ಗುಣಗಳನ್ನು ಮೈಗೂಡಿಸಿಕೊಂಡಿವೆ ಎಂದು ಜನರು ಭಾವಿಸುತ್ತಾರೋ ಅದೇ ರೀತಿ ನೀರಿಗೂ ಕೂಡಾ ಪರಸ್ಪರ ವಿರೋಧವಾದ ಎರಡು ಗುಣಗಳನ್ನು ಜನಪದರು ಆರೋಪಿಸಿದ್ದಾರೆ.

ಜನಪದ ಸಂಪ್ರದಾಯಗಳಲ್ಲಿ ನೀರು ‘ಕೂಡಿಸುವ’ ಮತ್ತು ಬೇರ್ಪಡಿಸುವ ಸಂಕೇತವಾಗಿಯೂ ಬಳಕೆಯಲ್ಲಿದೆ. ಮೈಲಿಗೆಯನ್ನು ಕಳೆದು ಮಡಿಯಾಗಲು ಕೂಡಾ ನೀರೇ ಬೇಕು. ಮದುವೆಯಲ್ಲಿ ಮದುಮಗ ಮತ್ತು ಮದುಮಗಳ ಜೋಡಿಸಿದ ಕೈಗೆ ಧಾರೆಯ ನೀರು ಬಿದ್ದಾಗಲೇ ಅದು ಅಬೇಧ್ಯವಾಗುತ್ತದೆ. ನದಿಯ ಎರಡು ದಂಡೆಗಳನ್ನು ನೀರು ಸೇರಿಸಿದ ಹಾಗೆ, ಇಲ್ಲಿ ಗಂಡು-ಹೆಣ್ಣುಗಳನ್ನು ನೀರು ಸೇರಿಸುತ್ತದೆ. ಹಾಗೆ ಬಂಧುತ್ತ್ವವನ್ನು ವಿಭಜಿಸಲು ಕೂಡಾ ನೀರೇ ಬೇಕು. ಹರಿಯುವ ಹೊಳೆಯಲ್ಲಿ ನಿಂತ ಇಬ್ಬರು ತಮ್ಮ ಉಡುದಾರಗಳನ್ನು ತುಂಡು ಮಾಡಿಕೊಂಡರೆ, ಇಬ್ಬರ ನಡುವಿನ ಸಂಬಂಧಗಳು ಹರಿದುಹೋಗುತ್ತವೆ.

ಜೀವನಾವರ್ತನದ ಆಚರಣೆಗಳಲ್ಲಾಗಲೀ, ವಾರ್ಷಿಕಾವರ್ತನದ ಆಚರಣೆಗಳಲ್ಲಾಗಲೀ ನೀರು, ವಿಶೇಷವಾದ ಆರಾಧನೆಗೆ ಒಳಪಡುತ್ತದೆ. ‘ಗಂಗಾಪೂಜೆ’ ಇಲ್ಲದೆ ಯಾವ ದೈವಗಳಿಗೂ ಜಾತ್ರೆ ನಡೆಯಲಾರದು. ನೀರಿಗೆ ಎಲ್ಲ ಬಗೆಯ ಮೈಲಿಗೆಗಳನ್ನು ಕಳೆಯುವ ಶಕ್ತಿ ಇದೆ. ಹಾಗಾಗಿ ಸ್ನಾನವಿಲ್ಲದೆ ಯಾವುದೇ ಜನಪದ ಆಚರಣೆಗಳಿಲ್ಲ.

ನೀರಿಗೆ ತೀರ ವಿರೋಧವಾಗಿರುವ ಅಗ್ನಿಯು ನೀರಿನೊಳಗೇ ಅವಿತಿದ್ದು ವಡಬಾಗ್ನಿ ಎಂಬ ಹೆಸರನ್ನು ಧರಿಸಿಕೊಂಡಿದೆ. ಅಗ್ನಿಗೆ ಕರಗಿಸುವ, ಪರಿಷ್ಕರಿಸುವ ಮತ್ತು ಶುದ್ಧೀಕರಿಸುವ ಗುಣವನ್ನು ಜನಪದ ಸಂಪ್ರದಾಯಗಳಲ್ಲಿ ಆರೋಪಿಸಲಾಗಿದೆ. ಚರಿತ್ರೆಯನ್ನು ವಿದ್ವಾಂಸರು ಅಗ್ನಿಪೂರ್ವ ಮತ್ತು ಅಗ್ನಿ ಅನಂತರ ಎಂದು ಎರಡು ರೀತಿಯಿಂದ ವಿಭಜಿಸಿರುವುದು ಹೌದಾದರೂ ಇಂದು ಅಗ್ನಿಪೂರ್ವಕಾಲದ ಆಚರಣೆಗಳು ಕ್ವಚಿತ್ತಾಗಿ ಮಾತ್ರ ನಮಗೆ ಲಭಿಸುತ್ತಿವೆ. ಕೊರಗತನಿಯನಂಥ ಕೆಲವು ವಿಶಿಷ್ಟ ದೈವಗಳು ಮಾತ್ರ ಇಂದಿಗೂ ಅಗ್ನಿಯನ್ನು ನಿರಾಕರಿಸಿವೆ. ಉಳಿದಂತೆ ಅಗ್ನಿಯ ಅಸ್ತಿತ್ವವಿಲ್ಲದೆ ಮುಖ್ಯ ಕಾರ್ಯಕ್ರಮಗಳ್ಯಾವವೂ ನಡೆಯವು. ಮದುವೆಗೆ ಅಗ್ನಿಯೇ ಸಾಕ್ಷಿಯಾದರೆ, ಸಾವಿನಲ್ಲಿ ಹೆಣದ ಮುಂದುಗಡೆಗೆ ಅಗ್ನಿಯೇ ಸಾಗಬೇಕು. ದೈವಗಳ ಆಚರಣೆಯಲ್ಲಿ ದೀಪ ಬೆಳಗುವುದಲ್ಲದೆ ಕೊಂಡದಲ್ಲಿರುವ ಅಗ್ನಿಯನ್ನು ತುಳಿದು ಪೂಜಾರಿಗಳು ಪವಾಡ ಮೆರೆಯುತ್ತಾರೆ.

ಅಗ್ನಿಯ ಕಾರ್ಯ ಸುಡುವುದು, ಸುಡುವುದು ನಾಶಕ್ಕೂ ಆಗಬಹುದು, ಶುದ್ಧೀಕರಣಕ್ಕೂ ಆಗಬಹುದು. ನಾಲಿಗೆಯನ್ನು ಸುಡುವುದು, ಚರ್ಮವನ್ನು ಸುಡುವುದು, ಸುಡುವ ಗುಡಿಸಲಿನೊಳಗೆ ಓಡಿಸಿ ‘ಸುಡು ಸುದ್ದ’ ಮಾಡುವುದು ಇವೆಲ್ಲ ಶುದ್ಧೀಕರಣ ಪ್ರಕ್ರಿಯೆಗಳು. ಜಾತಿ ಸಮಾಜವು ತನ್ನ ಜಾತಿಯ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಅಗ್ನಿಯನ್ನು ಬಳಸುತ್ತದೆ. ಅಗ್ನಿ ಪ್ರವೇಶವೇ ಇದರ ಅಂತಿಮ ರೂಪವಾಗಿದೆ. ಶಾಶ್ವತವೆಂದು ಭಾವಿಸಲಾದ, ಛಲವಂತಿಕೆಗೆ ಆಧಾರವಾದ, ನಿರಂತರವಾಗಿ ಜವ್ವನಿಗನಂತೆ ಸೀಳು ನಾಲಿಗೆ ಚಾಚುವ, ಜೀವದಾತೃವಾದ ಅಗ್ನಿಯನ್ನು ಮಾನವ ಜೀವನದೊಂದಿಗೂ ಅಭೇದ್ಯಗೊಳಿಸಲಾಗಿದೆ. ಮತ್ತು ಮಾನವನ ಸಾವಿನಲ್ಲಿ ಜೀವದೊಳಗಿನ ಅಗ್ನಿಯನ್ನು ಪರಿತ್ಯಜಿಸಲಾಗುತ್ತಿದೆ. ಹೀಗೆ ಅಗ್ನಿಯು ಕೂಡಾ ಹಿಂದೆ ವಿವರಿಸಿದ ಆಕಾಶ, ಭೂಮಿ, ನೀರಿನಂತೆ ಪರಸ್ಪರ ವಿರೋಧವಾದ ಗುಣಗಳನ್ನು ಮೈಗೂಡಿಸಿಕೊಂಡು ಜನಪದ ಸಂಪ್ರದಾಯಗಳಲ್ಲಿ ಗಮನಾರ್ಹ ಸ್ಥಾನ ಪಡೆದಿದೆ.

ವಾಸ್ತವವಾಗಿ ಆಕಾಶಕ್ಕೆ ಇದಿರಾಗಿ ಭೂಮಿ, ಅವೆರಡನ್ನು ಬೆಸೆಯುವ ಶಕ್ತಿಯಾಗಿ ನೀರು, ನೀರಿಗೆ ವಿರುದ್ಧವಾಗಿ ಅಗ್ನಿ ಇದ್ದಂತೆ ವಾಯುವಿಗೆ ವಿರೋಧವಾಗಿರುವ ಇನ್ನೊಂದು ದ್ರವ್ಯ ಅಥವಾ ಚೈತನ್ಯ ಜನಪದ ಕಲ್ಪನೆಯಲ್ಲಿ ಇದ್ದಂತಿಲ್ಲ. ವಾಯು ಉಸಿರಾಟಕ್ಕೆ ಅಗತ್ಯವಾಗಿರುವುದರಿಂದ ಅದನ್ನು ‘ಪ್ರಾಣ’ ಎಂದು ಕರೆಯಲಾಗಿದೆ. ಮಹಾನ್ ಶಕ್ತಿಶಾಲಿಯಾದ ವಾಯುವನ್ನು ರೋಗಗಳನ್ನು ಉಪಶಮನ ಮಾಡುವ ದೈವವಾಗಿ ವೈದಿಕ ಪರಂಪರೆ ಕಂಡಿದೆ. ಜನಪದ ಪರಂಪರೆಯಲ್ಲಿ ಗಾಳಿಗೆ ವೈದ್ಯಕೀಯ ಗುಣವೂ ಇದ್ದಂತಿಲ್ಲ. ಗಾಳಿಗೆ ಆಕಾರವೂ ಇಲ್ಲದ್ದರಿಂದ ಅದಕ್ಕೆ ಬಗೆಬಗೆಯ ಗುಡಿಗಳನ್ನಾಗಲೀ ಶಿಲ್ಪಗಳನ್ನಾಗಲೀ ಜನರು ಕಂಡರಿಸಿಲ್ಲ. ಬಹಳ ಜನಪ್ರಿಯವಾಗಿರುವ ‘ಗಾಳೆಮ್ಮ’ ಎಂಬ ಜನಪದ ದೈವವು ‘ಶಕ್ತಿ’ಯಾಗಿದ್ದು, ಅದು ಗಾಳಿಯನ್ನೇ ಪ್ರತಿನಿಧಿಸುತ್ತದೆಯೋ ಸ್ಪಷ್ಟವಿಲ್ಲ. ಒಂದೇ ವೇಳೆ ‘ಗಾಳೆಮ್ಮ’ ದೈವವು ‘ಗಾಳಿ’ಯ ಮೂರ್ತರೂಪವೇ ಆಗಿರುವುದು ಹೌದಾದರೆ ವೈದಿಕ ಸಂಪ್ರದಾಯದಲ್ಲಿ ಗುಂಡಾಗಿ ಪೂಜೆಗೊಳ್ಳುತ್ತಿದ್ದ ಆತ ಇಲ್ಲಿ ಸ್ತ್ರೀಯಾಗಿ ಆರಾಧಿಸಲ್ಪಡುತ್ತಿದ್ದಾಳೆ ಎಂದು ಹೇಳಬಹುದು.

ಗಾಳಿ ದುರುಗವ್ವ, ಗಾಳಿಮರೆವ್ವ, ಮೊದಲಾದ ಹೆಸರುಗಳಲ್ಲಿ ಆಯಾ ದೈವಗಳು ಗಾಳಿಯ ರೂಪದಲ್ಲಿ ಇರುವಂತಹ ಕಲ್ಪನೆಯಿದೆ. ರಣ, ಕಲೆ, ಪಿಶಾಚಿ ಮೊದಲಾದ ಕ್ಷುದ್ರ ಶಕ್ತಿಗಳು ಗಾಳಿಯ ರೂಪದಲ್ಲಿದ್ದುಕೊಂಡು ಸಮಯನೋಡಿ ಮಾನವನನ್ನು ಹಿಂಸಿಸುತ್ತವೆ ಎಂದು ಜನಪದರು ಭಾವಿಸುತ್ತಾರೆ. ಇಂಥ ಕಡೆ ‘ಗಾಳಿ’ಯ ನಿವಾರಣೆಗೆ ಮಂತ್ರ ಮಾಟಗಳ ಸಹಾಯಬೇಕಾಗುತ್ತದೆ. ‘ಗಾಳಿಚೇಷ್ಟೆ’ಯ ನಿವಾರಣೆಯೇ ಬಗೆಬಗೆಯ ಸಂಪ್ರದಾಯಗಳನ್ನು ಹುಟ್ಟುಹಾಕಿದೆ. ಸತ್ತವರು ಬದುಕಿದ್ದವರ ಮೈಯಲ್ಲಿ ಗಾಳಿ ರೂಪದಲ್ಲಿ ಹೊಕ್ಕು ಪೀಡಿಸಿದ್ದರ ಬಗ್ಗೆ ಬಗೆ ಬಗೆಯ ಕತೆಗಳಿವೆ. ಇಂಥ ಪೀಡೆಗಳ ನಿವಾರಣೆಗಾಗಿ ಬಗೆ ಬಗೆಯ ಮಾಟ ಮಂತ್ರಗಳನ್ನು ಕಂಡು ಹಿಡಿಯಲಾಗಿದೆ. ಹೀಗೆ ನೋಡಿದಾಗ ‘ಗಾಳಿ’ ರಕ್ಷಕ ದೈವವಾಗಿ ಜನಪ್ರಿಯವಾಗಿರುವುದಕ್ಕಿಂತ ಹೆಚ್ಚಾಗಿ ‘ಶಿಕ್ಷಕ’ ದೈವವಾಗಿ ಹೆಚ್ಚು ಜನಪ್ರಿಯವಾಗಿದೆ.

ಕೃಷಿಕ ಸಮಾಜವು ಗಾಳಿಯ ಚಲನೆಗೆ ಕೃಷಿಕೇಂದ್ರಿತ ಅರ್ಥಗಳನ್ನು ಕಟ್ಟಿಕೊಂಡಿವೆ. ‘ತೆಂಕಣಗಾಳಿ ಮಳೆ ತರುತ್ತದೆ’ ಮೂಡಗಾಳಿ ಬೀಸಿದರೆ ಫಸಲು ಚೆನ್ನಾಗಿ ಬರುತ್ತದೆ. ಪಡುಗಾಳಿ ಬೀಸಿದರೆ ಹಣ್ಣುಗಳು ಯಥೇಚ್ಛವಾಗಿ ಬೆಳೆಯುತ್ತವೆ. ಆಷಾಢದಲ್ಲಿ ಗಾಳಿ ಬೀಸಿದರೆ ಹೇಸಿಗೆ ಆಗುತ್ತದೆ, ಹಸಿವು ಹೆಚ್ಚುತ್ತದೆ ಎಂಬಂಥ ಗಾದೆ – ನಂಬಿಕೆಗಳು ಮೂಲತಃ ಕೃಷಿಗೆ ಸಂಬಂಧಿಸಿದವುಗಳಾಗಿವೆ. ಇವಲ್ಲದೆ ಹರಿಶ್ಚಂದ್ರ ಗಾಳಿ, ಕುಂಬಾರ ಗಾಳಿ, ಹನುಮನಗಾಳಿ, ಸುಂಟರಗಾಳಿ, ದೆವ್ವಗಾಳಿ, ಬಿರುಗಾಳಿ ಮೊದಲಾದ ಭಿನ್ನ ರೀತಿಯ ಗಾಳಿಸ್ವರೂಪವನ್ನು ಜನಪದರು ಗ್ರಹಿಸಿದ್ದಾರೆ.

ಸಮಾರೋಪ :

ಹೀಗೆ ಪಂಚಭೂತಗಳನ್ನು ಒಟ್ಟಾಗಿಯೇ ನೋಡಿದಾಗ ಅವೆಲ್ಲವನ್ನು ಏಕ ಸೂತ್ರದಲ್ಲಿ ಬಂಧಿಸುವ ತತ್ತ್ವಚಿಂತನೆಯೊಂದರ ಗೈರುಹಾಜರಿಯೇ ಜನಪದ ಸಂಪ್ರದಾಯಗಳಲ್ಲಿ ಎದ್ದು ಕಾಣುತ್ತದೆ. ಈ ಪ್ರಬಂಧದ ಆರಂಭದಲ್ಲಿ ಸೂಚಿಸಿದ ಹಾಗೆ, ವೈದಿಕರಿಗೆ-ಸಾಂಖ್ಯರಿಗೆ-ನ್ಯಾಯಿಕರಿಗೆ, ಲೋಕಾಯತರಿಗೆ ಪಂಚಭೂತಗಳನ್ನು ಜಗತ್ತಿನ ಮೂಲಭೂತ ಘಟಕಗಳೆಂದು ಕರೆಯಲು ಸಾಧ್ಯವಾಗಿದೆ. ಮಾನವನ ಅಸ್ತಿತ್ವ ಮತ್ತು ಜಗತ್ತಿನ ಅಸ್ತಿತ್ವದಲ್ಲಿರುವ ಕನಿಷ್ಟತಮ ಘಟಕಗಳೇ ಪಂಚಭೂತಗಳೆಂದು ಅವರು ಸಾರಿದರು. ಇತರ ಎಲ್ಲ ವಸ್ತು-ದ್ರವ್ಯಗಳ ಬೆಳವಣಿಗೆಗೂ ಇವೇ ಮೂಲಭೂತವೆಂದು ಅವರು ಸಾರಿದರು.

ಆದರೆ ಜನಪದ ಸಂಪ್ರದಾಯಗಳಲ್ಲಿ ಇಂಥ ಕೇಂದ್ರೀಕೃತ ಚಿಂತನೆಯಿಲ್ಲ. ಅವು ಐದು ಘಟಕಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿಯೇ ಸ್ಥಾಪಿಸಿಕೊಂಡಿವೆ. ಚಾರಿತ್ರಿಕ ಮತ್ತು ಸಮಕಾಲೀನ ಸಂದರ್ಭಕ್ಕೆ ಅನುಗುಣವಾಗಿ ಪಂಚಭೂತಗಳ ಬಗ್ಗೆ ತಮ್ಮ ಧೋರಣೆಗಳನ್ನು ರೂಪಿಸಿಕೊಂಡಿವೆ. ಆಕಾಶ-ಭೂಮಿ, ಬೆಂಕಿ-ನೀರುಗಳ ಪರಸ್ಪರ ವಿರೋಧ ಗುಣಗಳನ್ನು ಗುರುತಿಸುತ್ತಲೇ ಅವು ಪರಸ್ಪರ ಪೂರಕವಾಗಿರುತ್ತ ಒಟ್ಟು ಬದುಕಿಗೆ ಅಗತ್ಯವಾಗಿರುವುದನ್ನು ಪ್ರತಿಪಾದಿಸುತ್ತವೆ. ಹಾಗೆಯೇ ಪ್ರತಿಯೊಂದು ಘಟಕಗಳಲ್ಲಿರುವ ವಿರೋಧ ದ್ವಂದ್ವವನ್ನು ಅವರು ಗುರುತಿಸಿದ್ದಾರೆ. ಭೂಮಿಯು ಸೃಷ್ಟಿಶೀಲವಾಗಿರುವಂತೆ, ಹೆಣವನ್ನು ಧರಿಸುತ್ತದೆ. ಅಗ್ನಿಯು ಶುದ್ಧೀಕರಿಸುವಂತೆ, ಸುಟ್ಟು ನಾಶವನ್ನೂ ಮಾಡುತ್ತದೆ. ನೀರು ಮೈಲಿಗೆಯನ್ನು ನಾಶ ಮಾಡಿ ‘ಮಡಿ’ ಮಾಡುವಂತೆ, ನೀರ ದೆವ್ವಗಳು ಪ್ರಾಣ ಹೀರಬಲ್ಲುವು. ‘ಗಾಳಿ ಪ್ರಾಣವಾಯು’ ವಾದಂತೆ ಪ್ರಾಣಹೀರುವ ಗಾಳಿದೆವ್ವವೂ ಆಗುತ್ತದೆ.

ಬಹುಶಃ ಪಂಚಭೂತಗಳ ಕಲ್ಪನೆಯೇ ಶಿಷ್ಟ ಸಂಪ್ರದಾಯದ್ದೆಂದು ತೋರುತ್ತದೆ. ಜನಪದ ಸಂಪ್ರದಾಯಗಳಲ್ಲಿ ಪಂಚಭೂತಗಳನ್ನು ಏಕೀಭವಿಸುವ ಕಲ್ಪನೆ ಇದ್ದಂತಿಲ್ಲ. ಹಾಗಾಗಿ ಶಿಷ್ಟ ಸಂಪ್ರದಾಯದ ಕಲ್ಪನೆಯ ನೆಲೆಯಿಂದ ಜನಪದ ಸಂಪ್ರದಾಯದತ್ತ ನೋಡಿದಾಗ, ಸಾಕಷ್ಟು ಬಿಕ್ಕಟ್ಟುಗಳು ಉಂಟಾಗುತ್ತವೆ. ಈ ಪ್ರಬಂಧಕ್ಕೆ ಬಲವಾದ ಒಂದು ತಾತ್ತ್ವಿಕ ಚೌಕಟ್ಟು ಇಲ್ಲವೆಂದಾದರೆ ಅದಕ್ಕೆ ಜನಪದ ಸಂಪ್ರದಾಯಗಳಲ್ಲಿ ಅದಿಲ್ಲದಿರುವುದೇ ಮುಖ್ಯ ಕಾರಣವಾಗಿದೆ.

ಹೀಗಾಗಿ ಇವೆಲ್ಲವನ್ನು ಒಟ್ಟಾಗಿ ನೋಡಿ ನಿರ್ವಚಿಸಲು ಪ್ರಯತ್ನಿಸುವುದಕ್ಕಿಂತ ಬೇರೆ ಬೇರೆಯಾಗಿ ನೋಡಿ ವಿವರಿಸಿಕೊಳ್ಳುವುದೇ ಹೆಚ್ಚು ಉಪಯುಕ್ತ. 

ಕೊನೆ ಟಿಪ್ಪಣಿಗಳು

೧. ಈ ಬಗೆಯ ಚರ್ಚೆಯನ್ನು ಋಗ್ವೇದದ ಕುರಿತಾಗಿ ನಡೆಸಲಾಗಿದೆ. ಇದು ಹೌದಾದರೆ ಋಗ್ವೇದದ ಸ್ವರೂಪ ಮತ್ತು ಜಾನಪದ ಸ್ವರೂಪದಲ್ಲಿ ಸಾಮ್ಯ ಇದೆಯೆಂದು ಹೇಳಬಹುದು. ವಿವರಗಳಿಗೆ ನೋಡಿ ಚಕ್ರವರ್ತಿ ಜಿ. ಎಸ್. ೧೯೯೫. 

ಗ್ರಂಥ ಋಣ

೧. ಕಕ್ಕಿಲ್ಲಾಯ ಬಿ. ವಿ. (ಅನು) ೧೯೯೪, ಭಾರತೀಯ ದರ್ಶನಗಳು (ಮೂಲ : ಡಾ. ದೇವಿಪ್ರಸಾದ ಚಟ್ಟೋಪಾಧ್ಯಾಯ) ನವಕರ್ನಾಟಕ ಪ್ರಕಾಶನ, ಬೆಂಗಳೂರು

೨. ಖಂಡೋಬ ಪಿ. ಕೆ. ೧೯೯೪, ಚಂದ್ರ, (ಇದರಲ್ಲಿ ಜಾನಪದ ಸಾಹಿತ್ಯದರ್ಶನ-೧೨ (ಸಂ.) ಕಲಬುರ್ಗಿ ಎಂ. ಎಂ.) ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

೩. ಚಕ್ರವರ್ತಿ ಜಿ. ಎನ್. ೧೯೯೫, ಋಗ್ವೇದದಲ್ಲಿ, ವಿಶ್ವಸಾಮರಸ್ಯ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

೪. ನಾಗರಾಜ್ ಡಿ. ಆರ್. ೧೯೮೭, ಶಕ್ತಿ ಶಾರದೆಯ ಮೇಳ, : ಅಕ್ಷರ ಪ್ರಕಾಶನ, ಸಾಗರ

೫. ನಾವಲಗಿ ಸಿ. ಕೆ. ೧೯೯೪ ಗಾಳಿ, (ಇವರಲ್ಲಿ : ಜಾನಪದ ಸಾಹಿತ್ಯದರ್ಶನ ಭಾಗ-೧೨ (ಸಂ) ಕಲಬುರ್ಗಿ ಎಂ. ಎಂ.) ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

೬. ಬಿರಾದಾರ ಮ. ಗು. ೧೯೮೭, ಜಾನಪದ ಜೀವಾಳ, ಕಲಬುರ್ಗಿ ಪುಸ್ತಕ ಆಕಾಡೆಮಿ

೭. ವಿವೇಕ ರೈ ಬಿ. ಎ. ೧೯೮೫, ಅನ್ವಯಿಕ ಜಾನಪದ, ಮಂಗಳಗಂಗೋತ್ರಿ

೮. ಶಂಕರನಾರಾಯಣ ತೀ. ನಂ. ೧೯೮೯ ಕೊಂಡ ಹಾಯುವ ಸಂಪ್ರದಾಯ, ಉಡುಪಿ, ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ

೯. ಶಂಕರನಾರಾಯಣರಾವ್ ಎಸ್. ಪಿ. ೧೯೯೪, ಘಣಿಯರವರ ಸಮಾಜ ಮತ್ತು ಜಾನಪದ ಇತಿಹಾಸ, ಸಾಗರ, ಅಕ್ಷರ ಪ್ರಕಾಶನ

೧೦. ಹಿರಿಯಣ್ಣ ಅಂಬಳಿಕೆ ೧೯೯೪ ಸೂರ್ಯ (ಇದರಲ್ಲಿ : ಜಾನಪದ ಸಾಹಿತ್ಯದರ್ಶನ-೧೨. (ಸಂ.) ಕಲಬುರ್ಗಿ ಎಂ. ಎಂ): ಪ್ರಸಾರಾಂಗ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

* * *