೧. ಪೀಠಿಕೆ

ವಿಜಾಪುರ ನಗರವು ಒಂದು ಐತಿಹಾಸಿಕ ಕೇಂದ್ರವಾಗಿದ್ದು ಅನೇಕ ರಾಜ ಮನೆತನದವರು, ತಮ್ಮ ಶಕ್ತಿ ಸಾಮರ್ಥ್ಯಗಳಿಂದ ಆಳಿ ತಮ್ಮದೇ ಆದ ಶೈಲಿಯಲ್ಲಿ, ಅತ್ಯಮೂಲ್ಯವಾದ ಶಿಲ್ಪ ಕಲಾಕೃತಿಯಿಂದ ಸಂಪದ್ಭರಿತವಾದ ಗುಡಿ, ಗೋಪುರ, ಬೃಹದಾಕಾರದ ಗುಹಾಂತರ ದೇವಾಲಯ ಮತ್ತು ವಿಶ್ವವಿಖ್ಯಾತ ಗೋಲಗುಮ್ಮಟ, ಕೋಟೆ, ಕೊತ್ತಲಗಳನ್ನು ನಿರ್ಮಿಸಿ, ಕರ್ನಾಟಕದ ಇತಿಹಾಸದಲ್ಲಿ ವಿಜಾಪುರ ಜಿಲ್ಲೆಯ ಚರಿತ್ರೆಯನ್ನು ಸುವರ್ಣಾಕ್ಷರಗಳಿಂದ ಬರೆದಿಟ್ಟಿದ್ದಾರೆ. ಜಾತಿ ಪದ್ಧತಿಗಳಲ್ಲಿ ಮೇಲು – ಕೀಳು ಎಂಬ ಭೂತವನ್ನು ಕಿತ್ತೊಗೆಯಲು, ಧರ್ಮದ ಸಂದೇಶವನ್ನು ಬೀರಿ ಮಾನವರಲ್ಲಿ ಪ್ರೀತಿ ವಿಶ್ವಾಸ ಹುಟ್ಟಿಸಿದ ಭಕ್ತಿ ಭಂಡಾರಿ, ಬಸವಣ್ಣನಂತಹ ಮಹಾನ್ ಶರಣರು ಜನಿಸಿದ ಜಿಲ್ಲೆಯಿದು. ವಿಜಾಪುರದಲ್ಲಿ ಮಹಮ್ಮದ್ ಆದಿಲ್ ಶಹನು ಕಟ್ಟಿಸಿದ ಗೋಲಗುಮ್ಮಟವು ಜಗತ್ ಪ್ರಸಿದ್ಧವಾಗಿದೆ. ಆದಿಲ್ ಶಾಹಿ ಸುಲ್ತಾನರ ಕಾಲದ ಜುಮ್ಮಾ ಮಸೀದೆ, ಉಪ್ಪಲಿ ಬುರಜ, ತಾಜಬಾವಡಿ, ಚಂದಾ ಬಾವಡಿ, ಹತ್ತಿರದಲ್ಲೇ ಇರುವ ನವರಸಪುರ ಮೊದಲಾದ ಕಟ್ಟಡಗಳು ಮತ್ತು ಸುಂದರವಾದ ತೋಟಗಳು ದೇಶ ವಿದೇಶ ಪ್ರವಾಸಿಗರ ಮನಸ್ಸನ್ನು ಸೂರೆಗೊಳಿಸಿವೆ. ಆಳ ಅರಸರ ಕಲಾಸತ್ತಿಗೆ ಸಂಕೇತವಾಗಿವೆ.

೨. ಜಿಲ್ಲೆಯ ಒಳನೋಟ

ಪಂಚನದಿಗಳ ನಾಡು, ಬಿಳಿಜೋಳ, ಗೋಧಿ, ಕುಸುಬಿ, ಹತ್ತಿಗಳ ಪೆರ್ನಾಡು, ವಿಭಿನ್ನ ಸಂಸ್ಕೃತಿಗಳ ಬೀಡು ಎಂದೆಲ್ಲಾ ಖ್ಯಾತಿ ಪಡೆದಿರುವ ವಿಜಾಪುರ ಜಿಲ್ಲೆಯು ೧೮೮೫ರಲ್ಲಿ ಜಿಲ್ಲಾ ಕೇಂದ್ರವಾಗುವುದಕ್ಕೆ ಮೊದಲು, ಎಂಟು ತಾಲೂಕುಗಳನ್ನೊಳಗೊಂಡ ಕಲಾದಗಿ ಜಿಲ್ಲೆಯು, ೧೮೬೪ರಿಂದಲೇ ಅಸ್ತಿತ್ವದಲ್ಲಿದ್ದು, ೧೯೪೭ರ ನಂತರ ಬೀಳಗಿ, ಮುಧೋಳ ಹಾಗೂ ಜಮಖಂಡಿಗಳ ಸೇರ್ಪಡೆಯಿಂದಾಗಿ ತಾಲೂಕುಗಳ ಸಂಖ್ಯೆ ಹನ್ನೊಂದಾಗಿ, ಭೌಗೋಳಿಕವಾಗಿ ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆ ಎಂಬ ಹೆಗ್ಗಳಿಕೆ ಪಡೆಯಿತು. ಆದರೆ ೧೯೯೭ರ ಜಿಲ್ಲಾ ವಿಭಜನೆಯಿಂದಾಗಿ ಆ ಹೆಗ್ಗಳಿಕೆ ಇಲ್ಲವಾಯಿತು. ವಿಜಾಪುರ ಜಿಲ್ಲೆಯ ಉತ್ತರ ಮತ್ತು ವಾಯವ್ಯ ದಿಕ್ಕುಗಳಲ್ಲಿ ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಯ ಗಡಿ ಪ್ರದೇಶಗಳಿವೆ. ಉಳಿದ ಭಾಗ ಕರ್ನಾಟಕ ರಾಜ್ಯದ ಉಳಿದ ಜಿಲ್ಲೆಗಳಿಂದ ಸುತ್ತುವರೆಯಲ್ಪಟ್ಟಿದ್ದು ಪೂರ್ವದಲ್ಲಿ ಗುಲಬರ್ಗಾ ಜಿಲ್ಲೆ, ಆಗ್ನೇಯದಲ್ಲಿ ಮತ್ತು ದಕ್ಷಿಣದಲ್ಲಿ ರಾಯಚೂರು ಜಿಲ್ಲೆ ಮತ್ತು ಪಶ್ಚಿಮದಲ್ಲಿ ಬೆಳಗಾಂವಿ ಜಿಲ್ಲೆಯ ಗಡಿ ಪ್ರದೇಶವನ್ನು ಹೊಂದಿದೆ. ಭೌಗೋಳಿಕವಾಗಿ ಒಣ ಹವೆಯನ್ನು ಹೊಂದಿರುವ ಈ ಜಿಲ್ಲೆಯು ಬಯಲು ಸೀಮೆಯ ನಾಡಾಗಿದೆ. (ಡಾ|| ಮುನಿಸ್ವಾಮಿ ೧೯೯೯).

೩. ಹೆಸರಿನ ಮೂಲ

ವಿಜಾಪುರದ ಇತಿಹಾಸವು ಬಹು ಪ್ರಾಚೀನವಾದುದು. ಜಿಲ್ಲೆ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ರಾಮಾಯಣ ಕಾಲದ ದಂಡಕಾರಣ್ಯದ ಒಂದು ಭಾಗವಾಗಿತ್ತೆಂದೂ ಹೇಳುತ್ತಾರೆ. ಆದರೆ ಈ ಭಾಗದ ಐತಿಹಾಸಿಕ ದಾಖಲೆಗಳು ಎರಡನೆಯ ಶತಮಾನದ ಈಜಿಪ್ಟಿನ ಖ್ಯಾತ ಭೂಗೋಳ ಶಾಸ್ತ್ರಜ್ಞ ಟಾಲೆಮಿಯ ಉಲ್ಲೇಖಗಳಲ್ಲಿ ದೊರೆಯುತ್ತವೆ. ಜಿಲ್ಲೆಯ ಸಿಂದಗಿ ತಾಲೂಕಿನ ದೇವೂರಿನಲ್ಲಿ ದೊರೆತಿರುವ ಎರಡನೇ ಜಯಸಿಂಹನ ೧೦೨೯ರ ಶಾಸನದಲ್ಲಿ (ಎಸ್. ಐ. ಐ. ಸಂ. ೨೦ ಸಂ. ೨೩) ವಿಜಾಪುರವನ್ನು ವಿಜಯಾಪುರವೆಂದು ಉಲ್ಲೇಖಿಸಲಾಗಿದೆ. ಇದರ ತರುವಾಯ ವಿವಿಧ ಶಾಸನಗಳಲ್ಲಿ ರಾಜಧಾನಿ ವಿಜಯಾಪುರ (ಎಸ್. ಐ. ಐ. ಸಂ. ೧೮ ವರ್ಷ ೧೯೮೪ ಸಂಖ್ಯೆ ೧೬೫ ಅದೇ ಸಂಪುಟ ವರ್ಷ ೧೧೫೧ ಸಂಖ್ಯೆ ೧೫೬ ಮತ್ತು ಅದೇ ಸಂಪುಟ ವರ್ಷ ೧೧೫೩, ಸಂಖ್ಯೆ ೧೫೮) ಎಂಬ ಉಲ್ಲೇಖವು ಕಂಡುಬರುತ್ತದೆ. ಇನ್ನೊಂದು ಹೇಳಿಕೆಯಂತೆ ಬಿಜ್ಜನಹಳ್ಳಿಯು ಮಾಂಡಲೀಕನೊಬ್ಬನ ರಾಜಧಾನಿಯಾಗಿ ಬಿಜ್ಜಪುರವಾಗಿ ಅದೇ ವಿದ್ಯಾಪುರವಾಗಿರಬಹುದು. ಹೀಗೆ ಅನೇಕ ವಿವಾದಗಳು ವಿಜಾಪುರ ಎಂಬ ಹೆಸರಿನ ಬಗ್ಗೆ ಕಂಡು ಬರುತ್ತದೆ. “ಆದಿಲ್‌ಶಾಹಿ ಅರಸರ ಆಳ್ವಿಕೆಯ ಕಾಲದಲ್ಲಿ ಎರಡನೆಯ ಇಬ್ರಾಹಿಂ ರಾಜನು ವಿಜಾಪುರದ ಹೆಸರನ್ನು ಬದ್ಯಾಪುರವೆಂದು ಹಾಗೂ ಸುಲ್ತಾನ ಮಹಮ್ಮದನು ಮಹಮ್ಮದಪುರವೆಂದು ಬದಲಾಯಿಸಿದನು. ಇಬ್ರಾಹಿಂ ರೋಜಾದ ಬಾಗಿಲಿನಲ್ಲಿ ಕೆತ್ತಲಾಗಿರುವ ಪರ್ಷಿಯನ್ ಶಾಸನವು ವಿಜಾಪುರವನ್ನು ವಿದ್ಯಾಪುರ (ಅಧ್ಯಯನ ಕೇಂದ್ರ) ವೆಂದು ಉಲ್ಲೇಖಿಸುತ್ತದೆ. ಈಗ ವಿಜಾಪುರ ಎಂಬ ಹೆಸರು ಹೆಚ್ಚು ಪ್ರಚಲಿತದಲ್ಲಿದೆ. ಬಹುಶಃ ಆಂಗ್ಲರ ಪ್ರಭಾವದಿಂದ ವಿಜಾಪುರವು, ಬಿಜಾಪುರವೆಂದು ರೂಢಿಗೆ ಬಂದಿರಬೇಕು. ಬಹುಮನಿ ರಾಜ್ಯವು ಸ್ಥಾಪನೆಯಾದಾಗ ವಿಜಾಪುರವು ಗುಲಬರ್ಗಾ ಪ್ರಾಂತಕ್ಕೆ ಸೇರಿತ್ತು. ಆದಿಲ್ ಶಾಹಿ ರಾಜ್ಯ ಸ್ಥಾಪನೆಯಾದಾಗ ವಿಜಾಪುರವು ಅದರ ರಾಜಧಾನಿಯಾಯಿತು. (ಡಾ|| ಮುನಿಸ್ವಾಮಿ ೧-೪-೧೯೯೯).

ಇಷ್ಟಾದರೂ ಇಲ್ಲಿಯ ಜನ ಮಾತ್ರ ತಾಂಡಾ ಸಂಸ್ಕೃತಿ ಮತ್ತು ವಿವಿಧ ಜನಪದ ಗುಂಪುಗಳ ಹಿನ್ನೆಲೆಯಲ್ಲಿ ಮೌಖಿಕ ಪರಂಪರೆಯನ್ನು ಬೆಳೆಸಿಕೊಂಡು ಬಂದರು. ಕೆಲವು ತಾಂಡಾಗಳಲ್ಲಿ ಲಂಬಾಣಿ ಭಾಷೆ, ಸೇವಾಲಾಲ ಸ್ತುತಿ ಮೊದಲಾದವುಗಳು ಕಂಡು ಬಂದರೂ ಕನ್ನಡವನ್ನು ಸಂಪರ್ಕ ಭಾಷೆಯಾಗಿ ಬಳಸುವುದು ಇಂದಿಗೂ ಕಂಡುಬರುತ್ತದೆ. ಈ ಪ್ರದೇಶದ ಲಾವಣಿ

[1] ಗೀಗೀ ಪರಂಪರೆಗಳು ಆದಿಲ್ ಶಾಹಿಗಳ ಷಾಹಿರಗಾಣಿಯ ಪ್ರಭಾವಕ್ಕೊಳಗಾಗಿದ್ದರೂ, ಮಹಾರಾಷ್ಟ್ರದ ಪೊವಾಡಾ[2] ಮೊದಲಾದವುಗಳ ಪರಿಣಾಮವನ್ನು ಹೀರಿಕೊಂಡಿದ್ದರೂ, ತಮ್ಮ ಕನ್ನಡದ ಮೂಲಸತ್ವಗಳನ್ನು ಎಂದೂ ಕಳೆದುಕೊಳ್ಳಲಿಲ್ಲ. ಅಷ್ಟೇ ಅಲ್ಲ ಎಷ್ಟೋ ಸಲ ‘ಖವಾಲಿ’ ಗೀತೆಗಳ ಮಾದರಿಯೂ ಕೂಡ ಇವರ ಹಾಡುಗಳ ಅನುಕರಣಿಗೆ ಆಧಾರವಾಯಿತು. ‘ಡಫ್‌’ ಎನ್ನುವ ಮೂಲ ಪಾರ್ಸಿ ಶಬ್ದ ಕನ್ನಡಕ್ಕೆ ಬಂದು ‘ಡಪ್ಪ’ ಆಯಿತು. ಡಪ್ಪಿನ ಗತ್ತು, ಡಪ್ಪಿನ ಗತಿಯಾಯಿತು. ಅದರ ತಾಳಮೇಳಗಳು ಅದರ ಡೌಲಿನ ತಾಳ ಮೇಳಗಳನ್ನು ಇಂದಿಗೂ ಲಾವಣಿ ಮೇಳಗಳಲ್ಲಿ ಕಾಣಬಹುದಾಗಿದೆ. ಹೀಗಾಗಿ ಬೀಬೀ ಇಂಗಳಗಿಯ ಖಾಸೀಮ, ಇಮಾಮಶಾ, ಹೆದರಿ ಬಡೇಸಾ, ಹಲಸಂಗಿ ಸಂಗುರಾಯಪ್ಪ ಜನವಾಡ ನಾನಾಸಾಹೇಬ, ವಡ್ಡೋಡಗಿಯ ಇಬ್ರಾಹಿಮಶಾ ಮುಂತಾದವರು ಪ್ರಸಿದ್ಧಿ ಪಡೆದರು. ಇಂದಿಗೂ ಈ ಭಾಗಗಳಲ್ಲಿ ಇಂಥ ಮೇಳಗಳು ಇನ್ನೂ ಸಾಕಷ್ಟು ಪ್ರಚಾರದಲ್ಲಿರುವುದನ್ನು ನೋಡಬಹುದು.

೪. ಜಾನಪದ ಹಿನ್ನೋಟ

ಕನ್ನಡ ಜನಪದ ಗೀತೆ ಲಾವಣಿ, ಸಂಗ್ರಹಣೆ ಹಾಗೂ ವಿಶ್ಲೇಷಣೆಯ ದೃಷ್ಟಿಯಿಂದ ಪ್ರಥಮ ನಡೆಸಿದ ಜೆ.ಎಫ್.ಪ್ಲೀಟ್ ಅವರು “A Selection of Kanarese Ballads” ಎಂಬ ಲೇಖನ ಮಾಲೆಯನ್ನು ೧೮೮೫ರ “Indian Antiquary” ಯಲ್ಲಿ ಆರಂಭಿಸಿ ೧೮೯೦ರ ವರೆಗಿನ ಐದು ಸಂಪುಟದಲ್ಲಿ ಮುಗಿಸಿದರು. ಈ ಲಾವಣಿಗಳು ಅನೇಕ ಕನ್ನಡ ವಿದ್ವಾಂಸರ ಗಮನ ಸೆಳೆದವು. ತಮ್ಮ ಮೊದಲ ಲೇಖನದಲ್ಲಿ ಫ್ಲೀಟರು ಇತ್ತೀಚೆಗೆ ಭಾರತದಲ್ಲಿ ಜಾನಪದಾಧ್ಯಯನ ವೈಜ್ಞಾನಿಕವಾಗಿ ನಡೆದು ಬಂದ ಸಂತೋಷದ ಸಂಗತಿ ತಿಳಿಸಿದ್ದಾರೆ. ನವೋದಯ ಕಾಲ ಬಂದಾಗ ಸಹಜವಾಗಿ ಇಂಗ್ಲೀಷ ಭಾಷೆಯ ಪರಿಣಾಮವಾಗಿ ಅನೇಕ ವಿದ್ವಾಂಸರ ಲಕ್ಷ್ಯ (ಉದಾ: ತೀನಂಶ್ರೀ ಮುಂತಾದವರು) ಜನಪದ ಸಾಹಿತ್ಯದ ಕಡೆಗೆ ಹೊರಳಿತು. ದೇವುಡು, ಮಾಸ್ತಿ, ಬೇಂದ್ರೆ, ಮಧುರ ಚೆನ್ನ, ಪಂಚಮುಖಿ ಮೊದಲಾದವರು ಅದರಲ್ಲೂ ತೀ.ನಂ.ಶ್ರೀ. ಅವರ “ಕೆರೆಗೆ ಹಾರ” ವಿಮರ್ಶೆಯಂತೂ ಅನೇಕ ವಿಮರ್ಶಕರ ಕಣ್ಣು ತೆರೆಯಿತು. ಗೋಸ್ವಾಮಿ, ಶಂಕರಸೇನ ಗುಪ್ತಾ, ಶ್ರೀಮತಿ ದುರ್ಗಾ ಭಾಗವತ ಮುಂತಾದ ವಿದ್ವಾಂಸರು ಕನ್ನಡ ಜನಪದವನ್ನು ಕುರಿತು ಆಲೋಚಿಸುವಂತಾಯಿತು.

ಕರ್ನಲ್ ಮೆಕಂಝಿ ಅವರು ೧೮೭೪ರಲ್ಲಿ “The Village Feast” ಎಂಬ ಶೀರ್ಷಿಕೆಯಡಿ ಗ್ರಾಮದೇವತೆಯ ಹಬ್ಬದ ಕುರಿತು, ಬೆಂಗಳೂರು ನಗರದ ಸೆರಗಿನಲ್ಲಿದ್ದ ಅಕ್ಕೀ ತಿಮ್ಮನ ಹಳ್ಳಿಯ ಜಾತ್ರೆಯ ಬಗ್ಗೆ ವಿಶೇಷ ಲೇಖನ ಬರೆದರು.

ಜಾನ್ ಎಫ್‌. ಫ್ಲೀಟ್ ಅವರು ಕನ್ನಡ ನಾಡು ನುಡಿಗೆ ಸಲ್ಲಿಸಿದ ಸೇವೆ ಅವಿಸ್ಮರಣೀಯ. ಅವರು ೧೮೮೫ರಲ್ಲಿ ‘ಐದು ಐತಿಹಾಸಿಕ ಲಾವಣಿಗಳು’ ಎಂಬ ಹೆಸರಿನಲ್ಲಿ ಸಂಗ್ರಹಿಸಿದರು. ಗೋವರ ಅವರು ಮಾಡಿದ ತಪ್ಪನ್ನು ಜಾನ್ ಫ್ಲೀಟರು ಮಾಡಲಿಲ್ಲ. ಲಾವಣಿಗಳ ಸಂಗ್ರಹದ ಸಂದರ್ಭದಲ್ಲಿ ಲಾವಣಿಗಳ ಪಲ್ಲವಿ, ಧಾಟಿ, ಹಿನ್ನೆಲೆ ಮತ್ತು ಇಂಗ್ಲೀಷ ಭಾಷಾಂತರದೊಡನೆ ವಿವರಗಳನ್ನು ನೀಡಿದ್ದಾರೆ. ಇವರು ಸಂಗ್ರಹಿಸಿದ ಐದು ಐತಿಹಾಸಿಕ ಲಾವಣಿಗಳು ಹೀಗಿವೆ. ೧) ಸಂಗೊಳ್ಳಿ ರಾಯಣ್ಣನ ದಂಗೆ ೨) ಆದಾಯ ತೆರಿಗೆ ೩) ಹಲಗಲಿಯ ಬೇಡರು) ೪) ಸಂಗ್ಯಾನ ಅಪರಾಧ ಮತ್ತು ಸಾವು ೫) ಕಿತ್ತೂರ ಚೆನ್ನವ್ವನ ಸೊಸೆ ಹೀಗೆ. ಫ್ಲೀಟರು ಸಂಗ್ರಹಿಸಿದ ಎಂಟು ಕನ್ನಡದ ಲಾವಣಿಗಳಲ್ಲಿ ಐದು ಲಾವಣಿಗಳು ‘ಇಂಡಿಯನ್ ಅಂಟಿಕ್ವರಿ’ ಪತ್ರಿಕೆಯಲ್ಲಿ ವ್ಯಾಖ್ಯಾನ ಸಹಿತ ಪ್ರಕಟವಾದವು. ಅಪ್ರಕಟಿತವಾಗಿದ್ದ ಹಾಡುಗಳು ಜಾನಪದ ಅಭ್ಯಾಸಿಗಳಿಗೆ ಅತ್ಯಂತ ಉಪಯುಕ್ತವಾದವುಗಳು. ಆ ಲಾವಣಿಗಳನ್ನು ‘ಇಂಡಿಯನ್ ಅಂಟಿಕ್ವರಿ’ ಯಿಂದ ಸಂಗ್ರಹಿಸಿ ಶ್ರೀ ಕ್ಯಾತನಹಳ್ಳಿ ರಾಮಣ್ಣನವರು ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ೧೯೭೨ರಲ್ಲಿ ಪ್ರಕಟಿಸಿದ್ದಾರೆ. ಜಾನ್ ಫ್ಲೀಟರು ಸಂಗ್ರಹಿಸಿದ ಲಾವಣಿಗಳ ಸಂಗ್ರಹದ ಅಂತರ್ಗತ ಖಚಿತ ವಿಷಯಗಳನ್ನು ಅವಲೋಕಿಸಿದರೆ ವಿಜಾಪುರ ಜಿಲ್ಲೆಯಲ್ಲಿ ೧೮೭೪ರ ಪೂರ್ವದಲ್ಲಿಯೇ ಜನಪದ ಸಾಹಿತ್ಯ ಸಂಗ್ರಹ ಕಾರ್ಯ ಆರಂಭವಾಗಿತ್ತು ಎಂಬುದು ಸ್ಪಷ್ಟವಾಗುತ್ತದೆ.

ಜಾನ್ ಫ್ಲೀಟರು ೧೮೮೫ರ ಮೊದಲೇ ಸಂಗ್ರಹಿಸಿದ ಈ ಲಾವಣಿ ಹಾಡುಗಳು ವಿಜಾಪುರ, ಧಾರವಾಡ ಮತ್ತು ಬೆಳಗಾಂ ಜಿಲ್ಲೆಗೆ ಸೇರಿದವುಗಳೆಂಬುದಂತೂ ನಿಜ. (ಅಂದಿನ ಮುಂಬೈ ಪ್ರಾಂತ್ಯದಲ್ಲಿ) ಮುಂಬೈ ಕರ್ನಾಟಕದಲ್ಲಿ ಹಲವಾರು ಅಧಿಕಾರದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ಅವರು ವಿದ್ಯಾಧಿಕಾರಿಗಳಾದಾಗ ಈ ಸಾಹಿತ್ಯ ಶಾಸನಗಳ ಸಂಗ್ರಹ ಕಾರ್ಯವನ್ನು ಕೈಗೊಂಡಿರುವ ಸಾಧ್ಯತೆ ಇದೆ. ಫ್ಲೀಟರು ಸಂಗ್ರಹಿಸಿದ ಈ ಲಾವಣಿಗಳಲ್ಲಿ ವಿಜಾಪುರ ಜಿಲ್ಲೆಯ ಹಲಗಲಿ, ಗಲಗಲಿ, ಬಾದಾಮಿ ಮತ್ತು ತೇರದಾಳಕ್ಕೆ ಸಂಬಂಧಪಟ್ಟ ವಿಷಯವನ್ನೊಳಗೊಂಡ ಎಂಟು ಹತ್ತು ಲಾವಣಿ ಹಾಡುಗಳಿವೆ.

೧೮೭೪ರ ಜನೇವರಿ ೨೯ ಮತ್ತು ೩೦ ರಂದು ಗುಳೇದಗುಡ್ಡದ ‘ಬಾಳಿ ಇಂಟೆ’ ಅನ್ನುವವರು ಸಂಗ್ರಹಿಸಿದ ಐದು ಹಾಡುಗಳನ್ನು ಫ್ಲೀಟರಿಗೆ ಕೊಟ್ಟಿದ್ದು; ಅದರಂತೆ ಬಾದಾಮಿಯ[3] ಪರಯ್ಯಬಿನ್ ವೀರಭದ್ರಯ್ಯಾ ಗಣಾಚಾರಿ ಅವರು ೧೮೭೪ರ ಫೆಬ್ರವರಿ ೪, ೫ ಮತ್ತು ೬ ರಂದು ಆರು ಹಾಡುಗಳನ್ನು ಕೊಟ್ಟಿದ್ದ ಕುರಿತು ಸಹಿತ ಉಲ್ಲೇಖಗಳಿವೆ ಎಂದು ಡಾ. ಮ. ಗು. ಬಿರಾದಾರ ಅವರು “ವಿಜಾಪುರ ಜಿಲ್ಲೆ ದರ್ಶನ” ೬೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಉಲ್ಲೇಖಿಸಿದ್ದಾರೆ. ವಿಜಾಪುರ ಜಿಲ್ಲೆಯಲ್ಲಿ ಜನಪದ ಸಾಹಿತ್ಯ ಸಂಗ್ರಹದ ಕೆಲಸ ಹಲಸಂಗಿ ಗೆಳೆಯರಿಗಿಂತ ೫೦ ವರ್ಷ ಮೊದಲೇ ಆರಂಭವಾಗಿತ್ತು ಎನ್ನುವುದು ಸ್ಪಷ್ಟ. ಹಲಸಂಗಿ ಗೆಳೆಯರ ಕೆಲಸದ ಹಿರಿಮೆಯನ್ನು ಯಾವುದೇ ರೀತಿಯಿಂದ ಕಡಿಮೆ ಮಾಡುವುದು ಇಲ್ಲಿಯ ಉದ್ದೇಶವಲ್ಲ. ಆದರೆ ವಾಸ್ತವ ಸಂಗತಿಯನ್ನು ಮಾತ್ರ ಗಮನಿಸಲಾಗಿದೆ.

ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರು ಬರೆದ “ಕನ್ನಡ ನಾಡಿನ ಲಾವಣಿ ಸಾಂಗತ್ಯ” ಎಂಬ ವಿದ್ವತ್ ಪೂರ್ಣ ಲೇಖನವು ೧೯೨೫ರ ಜನೇವರಿ ಸಾಹಿತ್ಯ ಪರಿಷತ್ ಪತ್ರಿಕೆಯಲ್ಲಿ ಪ್ರಕಟವಾಯಿತು. ಶ್ರೀ ಪ್ರಹ್ಲಾದ ನರೇಗಲ್ಲ ಅವರು ‘ತ್ರಿಪದಿ’ ಎಂಬ ಲೇಖನವನ್ನು ೧೯೨೮ರ ಜಯಕರ್ನಾಟಕ ಮಾಸ ಪತ್ರಿಕೆಯಲ್ಲಿ ಪ್ರಕಟಿಸಿದರು. ಹಿರಿಯರಾದ ಶ್ರೀ ಬೇಟಗೇರಿ ಕೃಷ್ಣಶರ್ಮ ಅವರು ೧೯೩೦ರಲ್ಲಿ ಪ್ರಕಟಿಸಿದ ‘ಹಳ್ಳಿಯ ಹಾಡುಗಳು’ ಎಂಬ ಲೇಖನ, ಮಹತ್ವದ ದಾಖಲೆಯಾಯಿತು.

“ಕರ್ನಾಟಕ ಸಾಹಿತ್ಯ ಪರಿಷತ್ತಿನ ಕಾರ್ಯನಿರ್ವಾಹಕ ಮಂಡಳಿಯ ಪ್ರಥಮ ವರ್ಷದ ೩ನೇ ಸಭೆ (೨೦ ಸಪ್ಟೆಂಬರ ೧೯೧೫) ಯು ಕರ್ಣಾಟಕ ದೇಶಕ್ಕೆ ಸಂಬಂಧಪಟ್ಟ ಚರಿತ್ರಾಂಶಗಳನ್ನು ಒಳಗೊಂಡಿರುವ ಲಾವಣಿ ಹಾಡುಗಳನ್ನು ಸಂಗ್ರಹಿಸತಕ್ಕದ್ದು. ಕಾರ್ಯನಿರ್ವಾಹಕ ಮಂಡಳಿಯ ಮೆಂಬರುಗಳಾದ ವಿಜಾಪುರದ ಮ. ರಾ. ಪಿ. ಜಿ. ಹಳಕಟ್ಟಿಯವರು ತಮ್ಮ ಪ್ರಾಂತ್ಯದಲ್ಲಿ ದೊರೆತ ಒಂದು ಲಾವಣಿಯ ಪ್ರತಿಯನ್ನು ಕಳುಹಿಸಿಕೊಟ್ಟರು. (ಡಾ. ಕಲಬುರ್ಗಿ ಮಾರ್ಗ ಸಂ. ೨, ಪುಟ ೪೮೪, ೪೮೫)” ಇದರಿಂದ ಸ್ಪಷ್ಟವಾಗುವುದೇನೆಂದರೆ ಜಾನಪದ ಸಾಹಿತ್ಯದ ಸಂಗ್ರಹದ ಕಾರ್ಯ ೧೯೧೫ರಷ್ಟು ಪೂರ್ವದಲ್ಲಿಯೇ ವಿಜಾಪುರ ಜಿಲ್ಲೆಯಲ್ಲಿ ಆರಂಭವಾಗಿತ್ತು ಎಂಬುದು. ಹಲಸಂಗಿ ಗೆಳೆಯರು ೧೯೩೧ರಲ್ಲಿ ‘ಗರತಿಯ ಹಾಡು’ ಎಂಬ ಕನ್ನಡದ ಪ್ರಪ್ರಥಮ ಜಾನಪದ ಕಾವ್ಯ ಸಂಕಲನ ಹೊರತಂದರು. ೧೯೩೩ ರಲ್ಲಿ ಪಿ. ಧೂಲಾಸಾಹೇಬರು ಮತ್ತು ಸಿಂಪಿ ಲಿಂಗಣ್ಣನವರು ಜೊತೆಯಾಗಿ ‘ಜೀವನ ಸಂಗೀತ’ವನ್ನು ಪ್ರಕಟಿಸಿದರು. ಕಾಪಸೆ ರೇವಪ್ಪನವರು ಸಂಗ್ರಹಿಸಿದ ಹೆಣ್ಣು ಮಕ್ಕಳ ಹಾಡುಗಳ ಸಂಗ್ರಹ ‘ಮಲ್ಲಿಗೆ ದಂಡೆ’ ೧೯೩೫ರಲ್ಲಿ ಪ್ರಕಟವಾಯಿತು. ಮಲ್ಲಿಗೆ ದಂಡೆ ಸಂಗ್ರಹದ ಮೂಲಕ ಅವರಿಗೆ ಕನ್ನಡ ಸಾಹಿತ್ಯೇತಿಹಾಸದಲ್ಲಿ ಒಂದು ಮಹತ್ವದ ಸ್ಥಾನ ಮೀಸಲಾಗಿದೆ. (ಹಲಸಂಗಿ ಗೆಳೆಯರು ಸಂಪಾದಿಸಿದ ಜನಪದ ಕೃತಿಗಳ ಬಗ್ಗೆ ಸಂದರ್ಭ ಅನುಸಾರ ವಿವರಿಸಲಾಗಿದೆ).

ಕನ್ನಡ ಜಾನಪದ ಅಧ್ಯಯನದ ಆರಂಭದ ಘಟ್ಟವನ್ನು ಗಮನಿಸಿದರೆ ಆರಂಭದ ಕಾಲ ಲಾವಣಿ ಸಾಹಿತ್ಯ ದೃಷ್ಟಿಕೋನದಿಂದ ಪ್ರೇರಿತವಾಗಿತ್ತೆಂದು ಕಂಡು ಬರುತ್ತದೆ.

೧೯೩೦ರ ಕಾಲಾವಧಿಗೆ ಕಾಲಿರಿಸುವ ಮೊದಲು ಕನ್ನಡದಲ್ಲಿ ಅಲ್ಲಲ್ಲಿ ಪ್ರಕಟವಾದ ಜನಪದ ಸಾಹಿತ್ಯ ಕೃತಿಗಳ ಒಂದು ಪಟ್ಟಿ ಹೀಗಿದೆ.

ಕ್ರ.ಸಂ. ಪ್ರಕಟವಾದ ವರ್ಷ ಕೃತಿಗಳ ಶೀರ್ಷಿಕೆ ಸ್ಥಳ
೧. ೧೮೯೧ ಲಾವಣಿ ಪದ ಸಂಗ್ರಹ ಮದರಾಸು
೨. ೧೮೯೬ ಅರ್ಜುನ ಜೋಗಿ ಹಾಡು ಮೈಸೂರು
೩. ೧೯೦೨ ತುರಾ ಲಾವಣಿ ಜವಾಬುಗಳು ಮೈಸೂರು
೪. ೧೯೦೬ ಸಾಮತಿ ಸಂಗ್ರಹ ಬೆಳಗಾಂವಿ
೫. ೧೯೧೨ ಎ ಹ್ಯಾಂಡ ಬುಕ್ ಆಫ್ ಕ್ಯಾನರೀಜ ಪ್ರಾವ್ಹರ್ಬ್ಸ ಮಂಗಳೂರು
೬. ೧೯೧೨ ೨ ಲಾವಣಿ ಪದಗಳು ಬಳ್ಳಾರಿ
೭. ೧೯೧೫ ಲಾವಣಿ ಪದಗಳು ಬಳ್ಳಾರಿ
೮. ೧೯೧೮ ಯುರೋಪ್ ಖಂಡದ ಮಹಾಯುದ್ಧದ ಲಾವಣಿ ಪದ ಮಾಲಿಕೆ ಬೆಳಗಾಂವಿ
೯. ೧೯೧೯ ಕನ್ನಡ ನಾಣ್ಣುಡಿಗಳಲ್ಲಿ ಅರ್ಧ ಗಂಟೆಯ ಕಲಾಕ್ಷೇಪ ಬೆಂಗಳೂರು
೧೦. ೧೯೨೭ ಸಾವಿರ ಮಾತಿನ ಸರದಾರ ಹಳ್ಳೀಗುಡಿ (ಗದಗ)
೧೧. ೧೯೨೯ ತುರಾ ಲಾವಣಿ ಮೈಸೂರು

ಮೇಲೆ ಹೇಳಿರುವ ಕೆಲವು ಕೃತಿಗಳನ್ನು ನೋಡಿದಾಗ, ಅಂದಿನ ಜಾನಪದ ಸಂಗ್ರಹಕಾರರು ಜನಪದ ಸಾಹಿತ್ಯದ ಲಾವಣಿ ಪ್ರಚಲಿತಕ್ಕೆ ಹೆಚ್ಚಿನ ಮಹತ್ವ ಕೊಟ್ಟಿರುವುದು ಕಂಡು ಬರುತ್ತದೆ. ಪ್ರಮುಖ ಲಾವಣಿಗಳ ಜೊತೆಗೆ ಗಾದೆ, ನಾಣ್ಣುಡಿ, ಒಗಟು ಮುಂತಾದ ವಿಷಯಗಳ ಕಡೆಗೂ ಗಮನ ಹರಿಸಿದ್ದಾರೆ ಎನ್ನುವುದು ಬಹುಮುಖ್ಯವಾದ ಸಂಗತಿ. ಮೇಲೆ ಹೇಳಿರುವ ಕೃತಿಗಳ ಬಗ್ಗೆ ಡಾ. ಹಾ. ಮಾ. ನಾಯಕರು ೧೯೭೪ರಲ್ಲಿ ರಚಿತವಾದ ‘ಕನ್ನಡ ಜಾನಪದ ಗ್ರಂಥಸೂಚಿ’ ಯಲ್ಲಿ ದಾಖಲಿಸಿದ್ದಾರೆ.

೧೯೩೧ ರಿಂದ ೧೯೫೦ರ ಕಾಲಾವಧಿಯಲ್ಲಿ ಅದೆಷ್ಟೋ ಹಿರಿಯ ಸಾಹಿತಿಗಳು ಜಾನಪದಾಧ್ಯಯನದಲ್ಲಿ ತೊಡಗಿಕೊಂಡರು. ೧೯೩೧ರಲ್ಲಿ ಹಲಸಂಗಿ ಗೆಳೆಯರ ಗುಂಪಿನ ಸಾಮೂಹಿಕ ಶ್ರದ್ಧೆಯಲ್ಲಿ ವಿಜಾಪುರ ಜಿಲ್ಲೆಯ ಹಿರಿಮೆ ಎದ್ದು ಕಾಣುವಂತದ್ದು.

ಕನ್ನಡದ ಕಣ್ವ ಆಚಾರ್ಯ ಬಿ. ಎಂ. ಶ್ರೀ ಅವರು ಶಾಸ್ತ್ರೋಕ್ತವಾಗಿ ಕನ್ನಡ ಜನಪದ ಗೀತ ಸಾಹಿತ್ಯ ಕ್ಷೇತ್ರೋತ್ಸವ ನಡೆಸಿದ ನಂತರ ನಾಡಿನ ಉದ್ದಗಲಕ್ಕೂ ಜಾನಪದದ ಕೃಷಿಯ ಪರಿಮಳವು ಬೀಸತೊಡಗಿತು. ಅರ್ಚಕ ಬಿ. ರಂಗಸ್ವಾಮಿ ಅವರ ‘ಹುಟ್ಟಿದ ಹಳ್ಳಿಯ ಹಾಡು’ ೧೯೩೩ರಲ್ಲಿ ಪ್ರಕಟವಾಯಿತು. ಕೃಷ್ಣರಾಜಪೇಟೆ ತಾಲೂಕಿನ ಬಂಡಿಹೊಳೆ ಗ್ರಾಮವನ್ನು ತಮ್ಮ ಜೀವನದ ಕಾರ್ಯಕ್ಷೇತ್ರವಾಗಿರಿಸಿಕೊಂಡು ಜನಪದದ ನೋವು ನಲಿವುಗಳ ಬಗ್ಗೆ ಪ್ರಕಟಿಸಿದರು.

‘ಜೀವನ ಸಂಗೀತ’ ಲಾವಣಿ ಸಂಗ್ರಹವನ್ನು ಶ್ರೀ ಸಿಂಪಿ ಲಿಂಗಣ್ಣ ಮತ್ತು ಶ್ರೀ ಪಿ. ಧೂಲಾ ವರು ೧೯೩೩ರಲ್ಲಿ ಪ್ರಕಟಿಸಿದರು. ಶ್ರೀ ವಿಠೋಬ ವೆಂಕಟನಾಯಕ ತೊರ್ಕೆ ಅವರು ೧೯೩೩ರಲ್ಲಿ “ಹಳ್ಳಿಯ ಹಾಡುಗಳು” ಎಂಬ ಕಾರವಾರ ಜಿಲ್ಲೆಯ ತ್ರಿಪದಿಗಳ ಸಂಗ್ರಹವನ್ನೊಳಗೊಂಡ ಚಿಕ್ಕ ಕೃತಿಯನ್ನು ಹೊರತಂದರು. ಶ್ರೀ ಮ. ಗ. ಶೆಟ್ಟಿ ಅವರು ೧೯೩೮ರಲ್ಲಿ ‘ಒಕ್ಕಲಿಗರ ಹಾಡು’ ಎಂಬ ಪುಸ್ತಕ ಪ್ರಕಟಿಸಿದರು. ೧೯೪೬ರಲ್ಲಿ ಶ್ರೀಯುತರು ಶಂ. ಬಾ. ಜೋಷಿಯವರೊಡನೆ ಕೂಡಿ ‘ಒಡಪುಗಳು’ ಎಂಬ ಸಣ್ಣ ಪುಸ್ತಕ ಹೊರತಂದರು. ‘ಕರ್ನಾಟಕ ಸಂಸ್ಕೃತಿ’ ಕೃತಿಯನ್ನು ೧೯೩೫ ರಲ್ಲಿ ಶ್ರೀ ದೇವುಡು ನರಸಿಂಹ ಶಾಸ್ತ್ರೀಯವರು ಪ್ರಕಟಿಸಿದರು. ೧೯೩೮ ರಲ್ಲಿ ‘ಹಳ್ಳಿಯ ಹಾಡುಗಳು’ ಎಂಬ ಕನ್ನಡ ಜನಪದ ಕೃತಿಯನ್ನು ಹಿರಿಯರಾದ ಶ್ರೀ ಗೋರೂರು ರಾಮಸ್ವಾಮಿ ಅಯ್ಯಂಗಾರ ಅವರು ಪ್ರಕಟಿಸಿದರು. ೧೯೩೯ ರಲ್ಲಿ ‘ಕರ್ಣಾಟಕ ಜನಜೀವನ’ ಕೃತಿಯನ್ನು ಬೆಟಗೇರಿ ಕೃಷ್ಣಶರ್ಮ ಅವರು ರಚಿಸಿದರು. ಶ್ರೀ ಎನ್. ಅನಂತ ರಂಗಾಚಾರ ಅವರು ೧೯೪೦ ರಲ್ಲಿ “ಮಾನೌಮಿಯ ಚೌಪದ” ಎಂಬ ಗ್ರಂಥ ಪ್ರಕಟಿಸಿದರು.

೧೯೪೦ ರಲ್ಲಿ ಶ್ರೀ ಬಿ. ಎನ್. ರಂಗಸ್ವಾಮಿ ಅವರು ತಾವು ಬೇರೆ ಬೇರೆ ಕಡೆಗಳಲ್ಲಿ ಸಂಗ್ರಹಿಸಿದ್ದ ಆಯ್ದ ಜನಪದ ಗೀತೆಗಳನ್ನು “ಹಳ್ಳಿಯ ಪದಗಳು” ಎಂಬ ಗ್ರಂಥ ರೂಪದಲ್ಲಿ ಪ್ರಕಟಿಸಿದರು. ಎಚ್. ಎಸ್. ಅಚ್ಚಪ್ಪನವರ “ಕನ್ನಡ ಗಾದೆಗಳು” ೧೯೪೪ ಇದು ಶುದ್ಧಾಂಗವಾಗಿ ಜನಪದ ಗಾದೆಗಳನ್ನೇ ಒಳಗೊಂಡ ಸಂಗ್ರಹವಲ್ಲ. ಆದರೆ ನೂರಾರು ಗಾದೆಗಳು ಇದರಲ್ಲಿ ದಾಖಲಾಗಿವೆ. ಆದ್ದರಿಂದ ಇದೊಂದು ಅಮೂಲ್ಯ ಕೃತಿ ಎಂದು ಹೇಳಬಹುದು. ಈ ಕೆಲವು ಸಂಗತಿಗಳು ವಿಜಾಪುರ ಜಿಲ್ಲೆಗೆ ನೇರವಾಗಿ ಸಂಬಂಧಪಟ್ಟಿಲ್ಲವಾದರೂ ಅನುಷಂಗಿಕವಾಗಿ ಅವುಗಳನ್ನು ಇಲ್ಲಿ ವಿವರಿಸಲಾಗಿದೆ.

೧೯೫೧ ರಿಂದ ೨೦೦೧ರ ಈ ೫೧ ವರ್ಷಗಳಲ್ಲಿ ಕನ್ನಡ ಜನಪದ ಸಾಹಿತ್ಯ ಕ್ಷೇತ್ರವನ್ನು ಸಮೃದ್ಧ ಸುಗ್ಗಿಯ ಕಾಲವೆಂದು ಹೇಳಬಹುದು. ಈ ಅರ್ಧ ಶತಮಾನದಲ್ಲಿ ಅದೆಷ್ಟೋ ಜನ ಹಿರಿಯ ಮತ್ತು ತರುಣ ವಿದ್ವಾಂಸರು, ಜಾನಪದವನ್ನು ಕುರಿತು ಸ್ವತಂತ್ರ ಮತ್ತು ವೈಜ್ಞಾನಿಕವಾಗಿ ಆಲೋಚನೆ ಮಾಡುವಂತ, ಹೊಸ ಪರಂಪರೆಯೆಂದು ಜಾನಪದ ಕ್ಷೇತ್ರಕ್ಕೆ ನವೀನ ಕ್ಷಿತೀಜವನ್ನು ತೆರೆದು ತೋರಿಸಿದರು.

೫. ಹಲಸಂಗಿ ಗೆಳೆಯರ ಕೊಡುಗೆ

ಹಲಸಂಗಿ ವಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ ಒಂದು ಗ್ರಾಮ. ಕರ್ನಾಟಕದ ‘ಫಿನ್‌ಲ್ಯಾಂಡ್’ ಎಂದೇ ಪ್ರಸಿದ್ಧವಾದ ಹಲಸಂಗಿಯಲ್ಲಿ ‘ಗೆಳೆಯರ ಗುಂಪು’ ರೂಪಗೊಂಡದ್ದು ೧೯೨೨ ರಲ್ಲಿ. ಮಧುರಚೆನ್ನ, ಕಾಪಸೆ ರೇವಪ್ಪ, ಸಿಂಪಿ ಲಿಂಗಣ್ಣ ಹಾಗೂ ಪಿ. ಧೂಲಾ ಅವರು ನಾಡಿನಾದ್ಯಂತ ಪ್ರಸಿದ್ಧಿ ಪಡೆದ ಗೆಳೆಯರು. ಕರ್ನಾಟಕದಲ್ಲಿ ಜಾನಪದ ಪ್ರಜ್ಞೆಯನ್ನು ಮೂಡಿಸಿದವರೇ ಹಲಸಂಗಿ ಗೆಳೆಯರು.

ಜಾನಪದ ಕ್ಷೇತ್ರಕ್ಕೆ ಹಲಸಂಗಿ ಗೆಳೆಯರು ನೀಡಿದ ಕಾಣಿಕೆ ಈಗಾಗಲೇ ನಾಡಿನಾದ್ಯಂತ ಪ್ರಚಾರಗೊಂಡಿದೆ. ಜಾನಪದ ಸಾಹಿತ್ಯಾಧ್ಯಯನ ನಡೆಸಿದವರಲ್ಲಿ ಪಾಶ್ಚಾತ್ಯ ವಿದ್ವಾಂಸರೇ ಮೊದಲಿಗರು. ಆದರೆ ಕನ್ನಡದಲ್ಲಿ ಮೊದಲಿಗರಾರು ಎಂಬುದರ ಬಗೆಗೆ ಸಾಕಷ್ಟು ಚರ್ಚೆ ನಡೆದಿದೆ. ಪಂಪನಿಗಿಂತಲೂ ಹಿಂದೆ ಕನ್ನಡದಲ್ಲಿ ಸಾಹಿತ್ಯ ಸೃಷ್ಟಿ ನಡೆದಿದೆಯಾದರೂ ಪಂಪನೇ ನಮಗೆ ಲಿಖಿತ ಪರಂಪರೆಯ ಆದಿಕವಿ. ಹಾಗೆಯೇ ಹಲಸಂಗಿ ಗೆಳೆಯರಿಗಿಂತಲೂ ಮೊದಲಿಗೆ ಕನ್ನಡದಲ್ಲಿ ಜಾನಪದ ಅಧ್ಯಯನ ಆರಂಭಿಸಿದವರು ಇರಬಹುದಾದರೂ, ಹಲಸಂಗಿ ಗೆಳೆಯರೇ ಮೌಖಿಕ ಪರಂಪರೆಗಳಲ್ಲಿದ್ದ ಸಾವಿರಾರು ಹಾಡುಗಳನ್ನು ಅಧಿಕೃತಗೊಳಿಸಿ ಸಂಗ್ರಹಿಸಿದವರು ಎಂದು ಹೇಳಲು ಯಾವ ಸಂದೇಹವೂ ಇಲ್ಲ. (ಹೊರಕೇರಿ ೩೪ – ೧೯೯೭).

ಗೆಳೆಯರ ಗುಂಪು ಆರಂಭದಲ್ಲಿ ‘ಮೊಗ್ಗೆ’ ಎಂಬ ಸಾಪ್ತಾಹಿಕವನ್ನು ಕೈಬರಹದಲ್ಲಿ ಹೊರ ತರಹತ್ತಿದರು. ತಮ್ಮ ತಮ್ಮ ಲೇಖನಗಳಿಗೆ ಒಂದು ಚಾಲನೆ ಎಂದುಕೊಂಡರು. ೧೯೨೩ರಲ್ಲಿ ಧಾರವಾಡದಲ್ಲಿ ಆರಂಭವಾದ ಗೆಳೆಯರ ಗುಂಪಿನೊಂದಿಗೆ ತಮ್ಮ ಸಂಪರ್ಕ ಸೇತುವೆಯನ್ನು ಬೆಳೆಸಿಕೊಂಡರು. ಬೇಂದ್ರೆಯವರು ಧಾರವಾಡದ ಎಲ್ಲ ಗೆಳೆಯರಲ್ಲಿ ಮುಂಚೂಣಿಯಲ್ಲಿದ್ದರು. ಸಾಹಿತ್ಯ ಚಟುವಟಿಕೆಗಳ ಬಗ್ಗೆ ಆಗಾಗ ಬೇಂದ್ರೆಯವರ ಮತ್ತು ಮಧುರಚೆನ್ನರ ಮಧ್ಯ ಪತ್ರ ವ್ಯವಹಾರ ನಡೆಯುತ್ತಿತ್ತು. ಹಲಸಂಗಿ ಗೆಳೆಯರಿಗೆ ಕೆಲವು ಸೌಕರ್ಯಗಳ ಕೊರತೆಯಿದ್ದರೂ, ತಮ್ಮದೇ ಆದ ಒಂದು ಇತಿ ಮಿತಿಯಲ್ಲಿ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡರು. ಡಾ. ಶಿವರಾಮ ಕಾರಂತರಂಥ ಹಿರಿಯ ಸಾಹಿತಿಗಳು ಕೂಡ ಹಲಸಂಗಿಗೆ ಬಂದು ಹೋದ ವಿಷಯ ತಿಳಿದು ಬರುತ್ತದೆ.

ಶಾರದಾ ವಾಚನಾಲಯ : ಹಲಸಂಗಿಯಲ್ಲಿ ೧೯೨೨ರಲ್ಲಿ ಗೆಳೆಯರ ಗುಂಪಿನ ಪ್ರಥಮ ಚಟುವಟಿಕೆಯಾಗಿ ಶಾರದಾ ವಾಚನಾಲಯ ಆರಂಭಿಸಿದರು. ಒಂದು ವರ್ಷದಲ್ಲಿ ೫೯೧ ಪುಸ್ತಕಗಳು ಸಂಗ್ರಹಿಸಿದ್ದ ಈ ವಾಚನಾಲಯಕ್ಕೆ ‘ಕವಿ ಚರಿತ್ರೆ’ ಗಳಂತಹ ಮಹತ್ವದ ಗ್ರಂಥಗಳು ಮತ್ತು ‘ಸಾಹಿತ್ಯ ಪರಿಷತ್ ಪತ್ರಿಕೆ’ ಗಳಂಥ ನಿಯತ ಕಾಲಿಕೆಗಳು ಬಂದವು ಎಂಬುದು ಸಂತೋಷದ ವಿಷಯ.

ನಾಡಹಬ್ಬದ ಆಚರಣೆ : ಕನ್ನಡಿಗರನ್ನು ಒಂದುಗೂಡಿಸುವ ಕಾರಣದಿಂದ ನಾಡಿನಾದ್ಯಂತ ನಾಡಹಬ್ಬದ ಆಚರಣೆ ಕೆಲವು ಕಡೆಗಳಲ್ಲಿ ಆರಂಭಿಸಿದರು. ಆಲೂರು ವೆಂಕಟರಾಯರು, ಎಸ್. ನಿಜಲಿಂಗಪ್ಪ, ಕುವೆಂಪು, ಬೇಂದ್ರೆ ಮೊದಲಾದ ಕವಿಗಳು, ಕನ್ನಡ ನಾಡು – ನುಡಿಗಳನ್ನೇ ಕುರಿತು ಕವನಗಳನ್ನು ಬರೆದು ಜನರನ್ನು ಜಾಗೃತರನ್ನಾಗಿ ಮಾಡಿದರು.

ಹಲಸಂಗಿ ಗೆಳೆಯರು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ನಾಡಹಬ್ಬವನ್ನು ಆಚರಿಸಿದರು. ಕಾಪಸೆ ರೇವಪ್ಪನವರು ತೆಗೆದ ಭುವನೇಶ್ವರಿಯ ಭಾವಚಿತ್ರವನ್ನು ನವರಾತ್ರಿಯ ದಿನ ತಮ್ಮ ಊರಿನ ಮಹಾದೇವ ಗುಡಿಯಲ್ಲಿ ಸ್ಥಾಪಿಸುವುದು, ದಿನಾಲೂ ನಾಡದೇವಿ ಧ್ವಜ ಮೆರೆಸುವುದು, ಸ್ನಾನ ಮಾಡಿ ಧ್ವಜಕ್ಕೆ ಆರತಿ ಬೆಳಗಿ ಮಾಲಾರ್ಪಣೆ ಮಾಡುವುದು; ವಿದ್ಯಾರ್ಥಿಗಳಿಂದ ಭಾಷಣ, ಜನಪದ ಗೀತೆ, ಗಾಯನ ಸ್ಪರ್ಧೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರು.

ಗಣೇಶೋತ್ಸವ : ಸಿಂಪಿ ಲಿಂಗಣ್ಣನವರು ೧೯೨೫ರಲ್ಲಿ ಭತಗುಣಕಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಭತಗುಣಕಿಯಿಂದ ೧೯೩೩ರಲ್ಲಿ ಹಲಸಂಗಿ ಶಾಲೆಗೆ ಮುಖ್ಯಾಧ್ಯಾಪಕರಾಗಿ ವರ್ಗವಾಗಿ ಬಂದರು. ಈ ಕಾರ್ಯಕ್ರಮವನ್ನು ಶಾಲೆಯಲ್ಲಿಯೇ ಆಚರಿಸುತ್ತಿದ್ದರೂ ಹಲಸಂಗಿ ಗೆಳೆಯರೆಲ್ಲರೂ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದರು. ಸಾಂಸ್ಕೃತಿಕ ಚಟುವಟಿಕೆಗಳನ್ನು ಆರಂಭಿಸುತ್ತಿದ್ದರು. ಗಣೇಶೋತ್ಸವದ ಸಂದರ್ಭದಲ್ಲಿ ಹಲಸಂಗಿ ಗೆಳೆಯರು ನಾಟಕಗಳನ್ನು ಮಾಡುತ್ತಿದ್ದರು.

ಶ್ರೀ ರಾಮಕೃಷ್ಣ ಪರಮಹಂಸರ ಶತಸವಂತ್ಸರಿಕೋತ್ಸವ, ವಿಜಯನಗರದ ಸ್ಮಾರಕೋತ್ಸವ, ಶ್ರೀ ಅರವಿಂದ ಮಂಡಳ ಸ್ಥಾಪನೆ ಹೀಗೆ ಹಲವಾರು ಮಹತ್ವದ ಕಾರ್ಯಕ್ರಮಗಳನ್ನು ಹಲಸಂಗಿ ಗೆಳೆಯರು ಮಾಡಿದರು. ಗೆಳೆಯರ ಗುಂಪಿನ ಸಾಧನೆ ಕನ್ನಡ ನಾಡಿನ ತುಂಬ ಸುದ್ಧಿಯಾಗಿ ತಲುಪಲು ಬಹಳ ದಿನಗಳು ಹಿಡಿಯಲಿಲ್ಲ.

ಅ. ಗರತಿಯ ಹಾಡು (೧೯೩೧)

ಕನ್ನಡ ಜನಪದ ಸಾಹಿತ್ಯಕ್ಕೆ ಶ್ರೀಕಾರ ಹಾಕಿದ ಹಲಸಂಗಿ ಗೆಳೆಯರ ಗುಂಪಿನ ಹಿರಿಯರಾದ ಚನ್ನಮಲ್ಲಪ್ಪ (ಮಧುರಚೆನ್ನ), ಕಾಪಸೆ ರೇವಪ್ಪ, ಸಿಂಪಿ ಲಿಂಗಣ್ಣ ಮೊದಲಾದ ಗೆಳೆಯರು ಸಂಗ್ರಹಿಸಿದ ೮೦೦ ತ್ರಿಪದಿಗಳನ್ನುಳ್ಳ ಜಾನಪದ ಹಾಡುಗಳ ಸಂಕಲನ ‘ಗರತಿಯ ಹಾಡು’ ಈ ಕಾವ್ಯ ಸಂಕಲನ ಗುಣದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಸ್ತ್ರೀ ಜೀವನದ ಹಲವಾರು ಮುಖಗಳನ್ನು ಪರಿಚಯಿಸುವಲ್ಲಿ ಸಾರ್ಥಕತೆ ಪಡೆದುಕೊಂಡಿದೆ. ಉದಾ: ತವರು ಮನೆ, ತಾಯ್ತಂದೆ, ಅಣ್ಣ ತಮ್ಮ, ಅಕ್ಕ-ತಂಗಿ, ಅತ್ತಿಗೆ-ನಾದಿನಿ, ಗೆಳತಿ, ಅತ್ತೆಯ ಮನೆಯ ಕಷ್ಟ, ಮನಸ್ತಾಪ, ಸಂವಾದ, ಸತಿ-ಪತಿ, ಬಸುರೆ-ಬಾಣಂತಿ, ಹರಕೆ, ಬಂಜೆ, ಹಾಸ್ಯ, ವರ್ಣನೆ ಈ ಮೊದಲಾದ ವಸ್ತು ವೈವಿಧ್ಯ, ಸಾಹಿತ್ಯಾಂಶ ಗೇಯಗುಣ ಸಮ್ಮಿಳಿತ ವಾದಗಳನ್ನು ಒಳಗೊಂಡಂಥ ತ್ರಿಪದಿಗಳು ಸಹಜವಾಗಿಯೇ ರಸಿಕ ಜನಮನವನ್ನು ರಂಜಿಸುವಲ್ಲಿ ಪ್ರಾಮುಖ್ಯತೆ ಪಡೆದಿದೆ.

ಆಚಾರ್ಯ ಬಿ. ಎಂ. ಶ್ರೀಯವರು ಈ ಗ್ರಂಥಕ್ಕೆ ಪ್ರಸ್ತಾವನೆಯನ್ನು ಬರೆದಿದ್ದಾರೆ. ಅವರು ಹೇಳುವಂತೆ “ಮೊದಲು ಹುಟ್ಟಿದುದು ಜನವಾಣಿ, ಅದು ಬೆಳೆದು, ಪರಿಷ್ಕೃತವಾಗಿ ವೃದ್ಧಿಯಾದುದು ಕವಿವಾಣಿ, ಜನವಾಣಿ ಬೇರು: ಕವಿವಾಣಿ ಹೂವು, ಕಾಡು ಜನರೂ, ಒಕ್ಕಲಿಗರೂ, ಹೆಂಗಸರೂ, ಮಕ್ಕಳೂ ಶಾಸ್ತ್ರ ಕಾವ್ಯಗಳ ಪರಿಚಯವೇ ಇಲ್ಲದೆ ಜನಸಾಮಾನ್ಯರೆಲ್ಲರೂ ಹಾಡಿನ ಮಟ್ಟವನ್ನು ಎಂದರೆ ಅಕ್ಷರ ಮಟ್ಟಕ್ಕೆ ಛಂದಸ್ಸನ್ನು ಬಲ್ಲರು. ಹಿಂದಿನಿಂದ ಬಂದ ಹಾಡನ್ನು ಎಲೆಮರೆಯಾಗಿ ಕಲಿತು ಹೇಳುವುದಲ್ಲದೆ, ಹೊಸ ಹಾಡನ್ನು ಕಟ್ಟಬಲ್ಲರು. “ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳಾ ನಾಡವರ್” ಎಂದು ಕವಿರಾಜ ಮಾರ್ಗಕಾರ ಹೇಳಿರುವುದು ಕೂಡ ಇದೇ ಅರ್ಥದಲ್ಲಿ. ಬಿ. ಎಂ. ಶ್ರೀ ಅವರು ಈ ಕೃತಿಗೆ ಬರೆದ ಪ್ರಸ್ತಾವನೆ ಈ ಕೃತಿಗೆ ತುರಾಯಿಗಿಟ್ಟ ಮತ್ತೊಂದು ಗರಿ.

ವರಕವಿ ದ. ರಾ. ಬೇಂದ್ರೆಯವರು ಈ ಕೃತಿಗೆ ಹನ್ನೊಂದು ಪುಟಗಳ ಪರಿಚಯವನ್ನು ಬರೆದಿದ್ದಾರೆ. “ಬೀದರ, ಹೈದ್ರಾಬಾದಗಳು ಉತ್ತರದ ತುದಿಯಿಂದ ನೀಲಗಿರಿ ಕೊಯಿಮುತ್ತೂರಿನ ದಕ್ಷಿಣದ ತುದಿಯವರೆಗೆ ಹಬ್ಬಿರುವ ಕರ್ನಾಟಕವು ಒಂದೆಂಬುದಕ್ಕೆ ಒಂದು ನಿದರ್ಶನವು ಈ ಹಾಡುಗಳಲ್ಲಿದೆ. ಅಲ್ಪ – ಸ್ವಲ್ಪ ಪಾಠ ಭೇದದಿಂದ ಇವುಗಳಲ್ಲಿ ಅರ್ಧಕ್ಕರ್ಧ ಹಾಡುಗಳು ಎಲ್ಲ ಕನ್ನಡ ಮನೆಗಳಲ್ಲಿ ಹರಡಿಕೊಂಡಿರಲೂ ಸಾಕು. ಈ ಜನಪದ ವೇದವೇ ಎಲ್ಲ ಕನ್ನಡಿಗರಿಗೂ ಸಾಮಾನ್ಯವಾದ ತಾಯ ಮೊಲೆಹಾಲು ಎಂಬುದು ಇದನ್ನೋದಿದವರ ಅನುಭವಕ್ಕೆ ಬಾರದೆ ಇರದು” ಎಂದು ವರಕವಿ ದ. ರಾ. ಬೇಂದ್ರೆಯವರು ಗರತಿಯ ಹಾಡಿನ ಕೆಲವು ಜನಪದ ಗೀತೆಗಳ ಸ್ವಾರಸ್ಯವನ್ನು ವಿವರಿಸಿದ್ದಾರೆ.

ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರು, ‘ಆಶಿರ್ವಾದ’ ರೂಪದಲ್ಲಿ ಬರೆಯುತ್ತ “ಈ ಪದಗಳ ಸಮುಚ್ಚಯವು ಕನ್ನಡ ಜನಪದ ವಿನಯದ ಚಿತ್ರ, ಕನ್ನಡ ನುಡಿಯ ಗೆಲುವಿನ ಕಳೆ, ಕನ್ನಡದ ಹೊಸ ಕವಿತೆಯ ಪೈರಿಗೆ ರಸ” ಎಂದು ಉದ್ಗರಿಸಿದ್ದಾರೆ.

“ಗರತಿಯ ಹಾಡು” ಜಾನಪದ ತ್ರಿಪದಿಯಲ್ಲಿ ಬರುವ ಕೆಲವು ಹಾಡುಗಳನ್ನು ಇಲ್ಲಿ ಕೊಡಲಾಗಿದೆ.

ಶಿವ ಶಿವನೆಂದರೆ ಸಿಡಿಲೆಲ್ಲ ಬಯಲಾಗಿ
ಕಲ್ಲ ಬಂದೆರಗಿ ಕಡೆಗಾಗಿ | ಎಲೆ ಮನವೆ |
ಶಿವನೆಂಬ ಶಬುದ ಬಿಡಬೇಡ ||

ಎನ್ನುವಲ್ಲಿಯೂ ದೈವ ಶ್ರದ್ಧೆಯನ್ನು ಸ್ಪಷ್ಟವಾಗಿ ಕಾಣಬಹುದು.

ಹಾಲುಂಡ ತವರೀಗಿ ಏನೆಂದು ಹಾಡಲೆ
ಹೊಳೆದಂಡಿಲಿರುವ ಕರಕೀಯ | ಕುಡಿಯಂಗ |
ಹಬ್ಬಲೀ ಅವರ ರಸಬಳ್ಳಿ ||

ಈ ತ್ರಿಪದಿಯಲ್ಲಿ ಮಗಳು ತಾಯಿ ಮನೆ ನಿತ್ಯ ಚಿಗುರಿರಲಿ, ಸಮೃದ್ಧವಾಗಿರಲಿ ಎಂದು ಹರಕೆ ಸಲ್ಲಿಸುತ್ತಾಳೆ. ಇದು ಹೆಣ್ಣಿನ ಹೃದಯದ ಪ್ರೀತಿ ವಾತ್ಸಲ್ಯಗಳಿಗೆ ಸಾಕ್ಷಿ.

ತಾಯಿ ಕಟ್ಟಿದ ಬುತ್ತಿ ತರತರದ ಯಾಲಕ್ಕಿ
ಜರತರದ ಜಾಣಿ ಹಡೆದವ್ವ | ನಿನ ಬುತ್ತಿ |
ಬಿಚ್ಚುಂಡ ಭೀಮಾರತಿ ಮ್ಯಾಲ ||

ತಾಯಿಯ ಬುತ್ತಿಯನ್ನು ಬಿಚ್ಚಿ ಎಷ್ಟೂ ಉಂಡಿದರೂ, ಯಾವಾಗ ಉಂಡರೂ ಸವಿಯೇ.

ಬಾಲಕರಿಲ್ಲದ ಬಾಲಿದ್ಯಾತರ ಜನ್ಮ
ಬಾಡಿಗೆ ಎತ್ತು ದುಡಿದಂಗ | ಬೆಳೆಲೆಯ |
ಹಾಸುಂಡು ಬೀಸಿ ಒಗೆದಂಗ ||

ತಾಯ್ತನ ಹೆಣ್ಣಿಗೆ ಒಂದು ವರ. ಅದು ಇಲ್ಲದಿದ್ದರೆ ಹೆಣ್ಣು ಪರಿಪೂರ್ಣ ಆಗಲಾರಳು. ಆ ಮಾತಿಗೆ ಈ ಹಾಡು ನಿದರ್ಶನ.

ಗರತಿಯ ಹಾಡುಗಳನ್ನು ಕುರಿತು ಡಾ. ದೇವೇಂದ್ರ ಕುಮಾರ ಹಕಾರಿಯವರು “ಗರತಿಯ ಹಾಡುಗಳಲ್ಲಿ ಕೌಟುಂಬಿಕ ಜೀವನ ಚಿತ್ರಣ” (೧೯೭೫ ಕ. ವಿ. ವಿ. ಪ್ರಸಾರಾಂಗ ಉಪನ್ಯಾಸ ಗ್ರಂಥ)ವನ್ನು ಅನೇಕ ವರ್ಷಗಳ ಹಿಂದೆ ಈ ಜನಪದ ತ್ರಿಪದಿಗಳ ಸಾಹಿತ್ಯಿಕ ಸೌಂದರ್ಯ ಮಾನವೀಯ ಸಂಬಂಧಗಳನ್ನು ಕುರಿತು ತುಂಬ ರೋಚಕವಾಗಿ ವಿವೇಚಿಸಿರುವುದನ್ನು ಕಾಣಬಹುದು. ಅವರ ಈ ವಿವೇಚನೆಗೆ ಆ ನಂತರ ಬಂದ ಅನೇಕರು ಇದಕ್ಕೆ ಋಣಿಯಾಗಿದ್ದಾರೆ ಎಂದರೆ ಉತ್ಪ್ರೇಕ್ಷೆ ಆಗಲಿಕ್ಕಿಲ್ಲ.

 

[1]ಲಾವಣಿಯಲ್ಲಿ ಶೃಂಗಾರ ಸ್ಥಾಯಿಯಾಗಿದ್ದರೂ ಭಕ್ತಿ ವೇದಾಂತಗಳು ಪೂರಕವಾಗಿ ಬೆಳೆದು ಬಂದವು. ಹಾಡುಗಾರಿಕೆ ಒಂದು ಶಿವ-ಶಕ್ತಿ, ಗಂಡು-ಹೆಣ್ಣು, ಪ್ರಕೃತಿ-ಪುರಷ ಇವರ ಮಧ್ಯೆ ಕಲ್ಪಿತ ಶ್ರೇಷ್ಠತಾ ಪ್ರತಿಪಾದನೆ ಬೆಳೆದು ಬಂದಿತು. ನೀರಸವೆನಿಸಬಹುದಾಗಿದ್ದ ಈ ತಾತ್ವಿಕ ಚರ್ಚೆ ಲವಲವಿಕೆಯ ಪ್ರಸಂಗವಾಗಲು ಲಾವಣಿಕಾರರ ಜಾಣ್ಮೆಯೇ ಕಾರಣ. ತರ್ಕ ಕುತೂಹಲಗಳ ಮೂಲಕ ವಾದಿ-ಪ್ರತಿವಾದಿ ರೂಪದಲ್ಲಿ ನಡೆಯುವ ಹಾಡಿನ ಸ್ಪರ್ಧೆ ರಸವತ್ತಾಗಿರುತ್ತದೆ. ಒಂದು ಪಕ್ಷದವರು ಒಂದು ಒಗಟಿನ ರೂಪದ ಹಾಡು ಹಾಡಿದರೆ ಎದುರು ಪಕ್ಷದವರು ಹಾಡಿನಲ್ಲಿಯೆ ಆ ಒಗಟಿಗೆ ಸವಾಲ್-ಜವಾಬ್ ಗೋಷ್ಠಿಯಾಗಿರುತ್ತದೆ. ಈ ಗೋಷ್ಠಿಯ ಮೇಳಗಳಿಗೆ ಕಲಗಿ-ತುರಾ ಅಥವಾ ಹರದೇಸಿ-ನಾಗೇಶಿ ಎಂದು ಹೆಸರು. (ಸ್ವತಂತ್ರ್ಯ ಹೋರಾಟ ಮತ್ತು ಲಾವಣಿ ಸಾಹಿತ್ಯ, ಡಾ. ಬಸವರಾಜ ಮಲಶೆಟ್ಟಿ, ೧೯೯೮: ೨-೩)

[2]ಮೊದಲು ವೀರಕಾವ್ಯ ‘ಪೊವಾಡಾ’ರಚಿಸುತ್ತಿದ್ದ ಮಧ್ಯಮ ವರ್ಗದ ಕವಿಗಳು ಪರಿಸ್ಥಿತಿಯ ಒತ್ತಡಕ್ಕೆ ತಲೆಬಾಗಿ ‘ತಮಾಶಾ’ತಂಡಗಳಿಗೆ ಲಾವಣಿಗಳನ್ನು ಬರೆದು ಕೊಡಲಾರಂಭಿಸಿದರು. (ವಿವರಣೆಗೆ ನೋಡಿ: “ಸ್ವಾತಂತ್ರ ಹೋರಾಟ ಮತ್ತು ಲಾವಣಿ ಸಾಹಿತ್ಯ”ಡಾ. ಬಸವಾರಜ ಮಲಶೆಟ್ಟಿ).

[3]೧೯೯೭ರ ಜಿಲ್ಲಾ ವಿಭಜನೆಯಿಂದಾಗಿ ಬಾದಾಮಿ, ಬಾಗಲಕೋಟೆ ಜಿಲ್ಲೆಯಲ್ಲಿ ಸೇರ್ಪಡೆಯಾಗಿದೆ.