ಆ. ಜೀವನ ಸಂಗೀತ (೧೯೩೩)

ಸಿಂಪಿ ಲಿಂಗಣ್ಣ ಮತ್ತು ಪಿ. ಧೂಲಾ ಅವರು ಸೇರಿ ಪ್ರಕಟಿಸಿರುವ ‘ಜೀವನ ಸಂಗೀತ’ ಇದು ಸಂಗೀತ ಲಾವಣಿಗಳುಳ್ಳ ಪುಟ್ಟ ಗ್ರಂಥ. ಸಿಂಪಿಯವರು ಹೇಳುವಂತೆ ಪ್ರಸಿದ್ಧರಾದ ‘ಏಳು ಮಂದಿ ಲಾವಣಿಕಾರರ ಮಿಗಿಲಾದ ಹನ್ನೆರಡು ಲಾವಣಿಗಳನ್ನು ನಾಡಿಗರ ಇದಿರಿಗೆ ಇಟ್ಟಿದ್ದೇವೆ. ಅಲ್ಲದೆ ಎರಡು ಚಿಕ್ಕ ಉಪಲಾವಣಿಗಳುಂಟು. ಅವುಗಳನ್ನು ಇಡಿಯ ಸಂಗ್ರಹದ ಮೊದಲಿಗೊಂದು, ಕೊನೆಗೊಂದು ಸೇರಿಸಿದ್ದೇವೆ. ಯಾಕೆಂದರೆ ಹಾಡುಗಾರರು ಪ್ರತಿಯೊಂದು ಲಾವಣಿಯನ್ನು ಹಾಡುವಾಗ ಮೊದಲಿಗೊಂದು ಉಪೋದ್ಘಾತ ಸ್ವರೂಪದ ಚಿಕ್ಕ ಹಾಡನ್ನೂ, ಕೊನೆಗೊಂದು ಉಪಸಂಹಾರ ಸ್ವರೂಪದ ಹಾಡನ್ನೂ ಹಾಡುವ ವಾಡಿಕೆಯುಂಟು. ಮೊದಲಿಗೆ ಸೂಚನಾ ಪಲ್ಲವಿಯಂತೆ ಹೇಳುವುದಕ್ಕೆ “ಸಖಿ” ಎಂದೂ, ಕೊನೆಯದಕ್ಕೆ ‘ಖ್ಯಾಲಿ’ ಎಂದೂ ಅಂದಿನ ಪರಂಪರೆಯನ್ನು ಗಮನಿಸಿ ಅವರು ಹೆಸರಿಸಿದ್ದಾರೆ. ಈ ಸಂಗ್ರಹದಲ್ಲಿ ಬರುವ ಏಳು ಲಾವಣಿಕಾರರೆಂದರೆ ಶ್ರೀ ಕುಬ್ಬಣ್ಣನವರು, ಶ್ರೀ ಗೋಪಾಳ ದುರದುಂಡಿ, ನಾನಾ ಸಾಹೇಬ ನ್ಯಾಮಣ್ಣ, ಖಾಜಾಭಾಯಿ, ಸಿದ್ದು ಶಿವಲಿಂಗ ಹಾಗೂ ಸಂಗುರಾಯಪ್ಪ.

‘ಜೀವನ ಸಂಗೀತ’ದಲ್ಲಿ ಬರುವ ಲಾವಣಿಗಳಲ್ಲಿ ಶೃಂಗಾರ ಪೂರ್ಣ ಲಾವಣಿಗಳು ಹೆಚ್ಚಾಗಿ ಕಂಡು ಬರುತ್ತವೆ. ಅಲ್ಲದೆ ಸಮಾಜದ ವಿಡಂಬನೆ, ಹಾಸ್ಯ, ಅಧ್ಯಾತ್ಮ, ಕುರಿತಾದ ಲಾವಣಿಗಳುಂಟು. ಲಾವಣಿಕಾರರಲ್ಲಿ ‘ಹರದೇಶಿ’ ಮತ್ತು ‘ನಾಗೇಶಿ’ ಎಂಬೆರಡು ವರ್ಗಗಳುಂಟು. ‘ತುರಾಯಿ’ ಮತ್ತು ‘ಕಲ್ಗಿ’ ಎಂತಲೂ ಇವಕ್ಕೆ ಎನ್ನುವುದುಂಟು. ಇವೆರಡೂ ವರ್ಗದ ಲಾವಣಿಕಾರರು ಒಬ್ಬರಿಗೊಬ್ಬರು ಸವಾಲು – ಜವಾಬ ರೂಪದಲ್ಲಿ ಹಾಡುತ್ತಿರುತ್ತಾರೆ. ‘ಹರದೇಶಿ’ ಗಂಡಿನ ಪಕ್ಷ ‘ನಾಗೇಶಿ’ ಹೆಣ್ಣಿನ ಪಕ್ಷ, ಅವರವರು ತಮ್ಮ ಪಕ್ಷವನ್ನು ಎತ್ತಿ ಹಿಡಿದು ಹಾಡುವದುಂಟು.

ಸಿಂಪಿ ಲಿಂಗಣ್ಣನವರು ಹೇಳುವಂತೆ ಕೈಗೆ ಸಿಕ್ಕ ವೇದಾಂತ ಪುಸ್ತಕಗಳನ್ನೋದಿ ಬೈರಾಗಿಯಾದವರಿಗಿಂತ ವಿವಿಧ ಪೋಷಣೆಗಳಲ್ಲಿ ಬೆಳೆದು ಲಾವಣೀ ಕವಿಗಳ ವೃದ್ಧಾಪ್ಯ ಜೀವನವು ಬಹಳೇ ಪ್ರಶಾಂತ ರಮಣೀಯವಾಗಿರುವುದುಂಟು. ಅದಕ್ಕೆಂತಲೇ ನಾವು ಈ ಸಂಗ್ರಹಕ್ಕೆ “ಜೀವನ ಸಂಗೀತ” ವೆಂದು ಹೆಸರನ್ನಿಟ್ಟಿದ್ದೇವೆ. ವಿವಿಧ ಸ್ವರಗಳನ್ನು ಉಚಿತವಾಗಿ ಬಳಸಿಕೊಂಡರೆ ಅದು ಸಂಗೀತ, ವಿವಿಧ ರಸಗಳನ್ನು ಉಚಿತವಾಗಿ ಉಪಯೋಗಿಸಿಕೊಂಡರೆ ಅದು ಜೀವನ; ಅಂತೇ ಇದು ‘ಜೀವನ ಸಂಗೀತ’.

‘ಜೀವನ ಸಂಗೀತ’ ಲಾವಣಿ ಸಂಗ್ರಹದಲ್ಲಿ ಬರುವಂಥ ‘ಅಸಲಜಾತ ಹೆಣ್ಣು’ ಅದರ ೧ನೇ ಚೌಕ

ಹೆಣ್ಣಸಲಜಾತ ಪದ್ಮಿನೀ | ಸುರತ ಚಂದ್ರುಣೀ |
ಹೊಂಟೆ ನಾಗೀಣೀ | ನೋಡ ತಿರುಗೀ |
ಮರಿಗುದರಿ ಕುಣಿಸಿದಂಗ ನಾಜೂಕ ನಿನ್ನ ನಡಿಗೀ |
ಹೊಳೆನೀರ ಥೆರಿಯ ಹೊಡಿದಂಗ ಒದುತೆ ನಿರಗೀ |
ತ್ರಿಲೋಕ ತಿರುಗಿ ಬಂದೆ ಹಾಡಿ | ಇಲ್ಲ ನಿನ್ನ ಜೋಡಿ |
ರಂಬಿ ನಿನ್ನ ನೋಡಿ | ನಾಚ್ಯಾಳ ಕಡಗೀ ||

ಗರಗರಾ ತಿರವತೇ ಕಣ್ಣ | ಕೆಂಪ ಮೈ ಬಣ್ಣ |
ಬೇತಲ ಸಣ್ಣ | ಕತ್ತಿಧಾರಿ |
ನಿನ್ನ ಕಂಡು ಪಕ್ಷಿಗಳು ನಿಂತುs ಹೌವ್ವಹಾರಿ |
ನಿನ್ನ ನಡಿಗೆ ನೋಡಿ ನವಿಲ ಕುಣಿವುದ ಮರೆತಿತರಿ |
ನಿನ್ನ ಶಬ್ದ ಕೇಳಿ ಆಗಿ ಲುಬ್ದ | ಕೋಗಿಲೆ ನಾಚಿ ಕದ್ದ
ವನಾ ಬಿಟ್ಟು ಎದ್ದ | ಹೋಯ್ತ ಹಾರಿ ||

‘ಅಸಲಜಾತ ಹೆಣ್ಣು’ ಪದ್ಯದ ಕೆಲವು ಚರಣಗಳನ್ನು ಗಮನಿಸಿದಾಗ ಸ್ಪಷ್ಟವಾಗುವುದೇನೆಂದರೆ ಲಾವಣಿಕಾರರು ಅನಕ್ಷರಸ್ಥರಿದ್ದರೂ ಅವರು ಬಳಸುವಂಥ ಉಪಮೆ, ಭಾಷೆ, ಶೈಲಿ ಮುಂತಾದವುಗಳು ಕವಿ ಕಲ್ಪನೆಯ ಅಗಾಧ ವೈಖರಿ ಎಂದು ಹೇಳಬೇಕು. ಏಕೆಂದರೆ ಈ ಲಾವಣಿಗಳನ್ನು ಓದಿದಾಗ ಅವರ ಪ್ರತಿಭೆಯನ್ನು ಕಾಣಬಹುದು.

ಶ್ರೀ ನಾನಾ ಸಾಹೇಬ ಹಾಗೂ ಶ್ರೀ ನ್ಯಾಮಣ್ಣನವರು ‘ಜೀವನ ಸಂಗೀತ’ದಲ್ಲಿ ಇಬ್ಬರೂ ಇದಿರು ಬದಿರು ತೋಡಿಗೆ ತೋಡಿ (ಸವಾಲ – ಜವಾಬ) ಹಾಡಿದ “ಬಸರಿದ್ದೀನ್ಹೆಸರಿನ್ನೇ ನಿಡೂನ” ಅನ್ನುವಂಥ ಲಾವಣಿ ಚಮತ್ಕಾರಿಕತೆಯಿಂದ ಕೂಡಿದೆ.

ಉದಾಹರಣೆಗೆ :

೧ನೆಯ ಚೌಕ –

ಸತಿಪತಿ ಕೂಡಿ ಜೋಡಿ | ಹಿತದಿಂದ ಮಲಗಿದಾಗ
ಗೊತ್ತಮಾಡಿ ಹೇಳ್ಗಂಡಾ ಹ್ಯಾಂಗ್ಮಾಡೂನ ?
ನಿನ್ಮುಂದ ಮಾತೊಂದು | ಬಿಚ್ಚಿ ಮುಚ್ಚಿ ಹೇಳ್ತೀನು
ಬಸರಿದ್ದೀನ್ಹೆಸರಿನ್ನ ಏನಿಡೂನ ? ||

ಗಂಡ ಹಿಗ್ಗಿ ನಕ್ಕ ನಗಿ | ಸುಳ್ಳ ತಗಿ ಗಾಳಿಮಾತ
ನನ್ಮುಂದ ಹೇಳಬ್ಯಾಡ ಇಂಥಾ ಹೊಯ್ಕ |
ಔ ಶಿವನೆ ಎಂಥಾ ಮಾತ | ತಿಂಗಳ ಮ್ಯಾಲ ಒಂದಿನ ಆಯ್ತ
ಮಂದೀ ಹಾಂಗ ಹೇಳಕ್ಕೆಲ್ಲ ನಾ ಸುಮಕ ||

ಕುರುಬರಂಥ ಅರಬರಂಡಿ | ಜರಬದಿಂದ ಬೇದ್ಹೆಳ್ತೀನು
ಅರಬೀ ಸಾಹಿತ ಮಾಡ ಕೂಸೀಗಿ ಮೆತ್ತಗ್ಹಾಸುದಕ ||

ಚಮತ್ಕಾರಿಕವಾದಂಥ ಲಾವಣಿ ಇದು. ಸತಿಪತಿ ಇಬ್ಬರೂ ಜೊತೆಗೂಡಿ ‘ಮಗು ಹುಟ್ಟುವ ಮುಂಚೆ ಕುಲಾಯಿ ಹೊಲಿಸಿದರು’ ಎನ್ನುವಂತೆ ಮುಂದೆ ನಡೆಯಬೇಕಾದ ಸಂಗತಿಗಳನ್ನು ಇಂದೇ ಅಭಿಲಕ್ಷಿಸಿ ನಗೆಗೀಡಾಗುವುದನ್ನು ಈ ಲಾವಣಿಯಲ್ಲಿ ಸುಂದರವಾಗಿ ವರ್ಣಿಸಿದ್ದಾರೆ. ಇಂಥ ಹಲವಾರು ಮೋಜಿನಿಂದ ಕೂಡಿದ ಲಾವಣಿಗಳು “ಜೀವನ ಸಂಗೀತ”ದಲ್ಲಿ ಕಾಣಬಹುದು.

ಒಟ್ಟಾರೆ ಈ ಚಿಕ್ಕ ಕೃತಿಯು ಅಖಂಡ ಕರ್ನಾಟಕದಲ್ಲಿ ಪ್ರಥಮ ದರ್ಜೆಯಲ್ಲಿ ಪ್ರಕಟವಾದ ‘ಜಾನಪದ ಲಾವಣಿ ಸಂಗ್ರಹ’ ಗ್ರಂಥ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇ. ಮಲ್ಲಿಗೆ ದಂಡೆ (೧೯೩೫)

ಹಲಸಂಗಿ ಗೆಳೆಯರ ಗುಂಪಿನ ಕಾಪಸೆ ರೇವಪ್ಪನವರು ‘ಮಲ್ಲಿಗೆ ದಂಡೆ’ (೧೯೩೫) ಎಂಬ ಸಂಗ್ರಹವನ್ನು ಹೊರತಂದರು. ‘ಬಾಲ ಕವಿ’ ಎಂಬ ಕಾವ್ಯನಾಮವನ್ನು ಬಳಸಿದರು. ಅವರು ಜನಪದ ಹಾಡುಗಳ ಸಂಗ್ರಹದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಮಧುರಚೆನ್ನರು ಈ ಗ್ರಂಥಕ್ಕೆ ಮುನ್ನುಡಿಯನ್ನು ಬರೆಯುತ್ತ ಇನ್ನು ಈ ಹಾಡುಗಳ ಭಾಷೆ, ಕೇವಲ ಇದ್ದಕ್ಕಿದ್ದಂತೆ ಗ್ರಾಮ್ಯವಾಗಿಯೇ ಅದನ್ನು ಇಡಬೇಕೆಂದು ಕೆಲವರ ಅಭಿಪ್ರಾಯ. ತುಸುಮಟ್ಟಿಗೆ ಸಂಸ್ಕರಿಸಿ ಗ್ರಾಂತಿಕ ಸ್ವರೂಪಕ್ಕೆ ತರಬೇಕೆಂದು ಇನ್ನು ಕೆಲವರ ಅಭಿಪ್ರಾಯ. ಆದರೆ ಇವೆರಡೂ ಮಾತುಗಳು ಈ ಪುಸ್ತಕದಲ್ಲಿ ಸರಿಯಾಗಿ ಸಾಧಿಸಲಿಲ್ಲ. ಕೆಲವು ಹಾಡುಗಳು ಹಾಗೂ ಇವೆ. ಇನ್ನು ಕೆಲವು ಹೀಗೂ ಇಡಲ್ಪಟ್ಟಿವೆ. ಮುಂದಿನವರು ಈ ಕೆಲವನ್ನು ತಕ್ಕಂತೆ ಸರಿಪಡಿಸಿಕೊಳ್ಳಲಿ ಎಂದು ಹೇಳಿರುವದು ಗಮನಾರ್ಹ.

ಆದರೆ ಜನಪದ ಸಂಸ್ಕೃತಿಯ ವೈವಿಧ್ಯವೇ ಅದರ ಜೀವಾಳ. ಮುಂದೆ ಬಂದವರು ಸರಿಪಡಿಸುವ ಅಗತ್ಯ ಕಾಣುವುದಿಲ್ಲ. ಈ ಗ್ರಂಥದಲ್ಲಿ ದೇವತಾ ಸ್ತುತಿ, ಪ್ರಣಯಾಂತರ, ಭಾವಗೀತೆಗಳು, ಕಥೆಯ ಹಾಡುಗಳು, ಮದುವೆಯ ಹಾಡು, ಸೋಬಾನದ ಹಾಡುಗಳು, ಇತರ ವಿಧಾನಗಳು, ಅತ್ತೆ ಮನೆಯ ಕಾಟ, ಹಾಸ್ಯದ ಹಾಡುಗಳು ಈ ರೀತಿ ಹಾಡುಗಳನ್ನು ವಿಂಗಡಿಸಿಕೊಂಡಿದ್ದಾರೆ. ‘ಮಲ್ಲಿಗೆ ದಂಡೆ’ ಜಾನಪದ ಗೀತ ಸಂಗ್ರಹದಲ್ಲಿ ಬರುವ ಕೊರವಂಜೀ ಹಾಡಿನಲ್ಲಿ ಮಗನೊಬ್ಬನು ತನ್ನ ಹೆಂಡತಿಯನ್ನು ಬಿಟ್ಟು ವೇಶ್ಯೆಯೊಡನೆ ಸಂಪರ್ಕ ಬೆಳೆಸುವದರಲ್ಲಿರುತ್ತಾನೆ. ಅದರಲ್ಲಿಯ ಕೆಲವು ಪದ್ಯಗಳು ಈ ಕೆಳಗಿನಂತಿವೆ.

ಕೊರವಂಜೀ ಹಾಡು

ಬಾಳಿsಯ ಬನದಾಗ ಬಾಲ ಚೆಂಡಾಡ್ಯಾನ
ಬಾ ನನ್ನ ಮಗನs ಅಬರಂಗ ಧೊರಿಯs
ಬಾಳಕಿಂತಾ ಛೆಲವ್ಯೋs | ನನ ಸೊಸಿ |
ಬಂದೊಮ್ಮೆ ಮಕದೋರೆ || ೧ ||

ಬಾಳಿಕಿಂತ ಛೆಲಿವ್ಯಾದ್ರ ಭಾಂಯಾಗ ನುಗಸವ್ವಾ
ಉಟ್ಟೀದs ಕಟ್ಟಿದ ಕಳಕೋರ್ಹಡದವ್ವಾ
ಬಿಟ್ಟಚ್ಚ ತವರ್ಮನೀಗೆ | ನಾ ನನ್ನ |
ಬಲ್ಲಂತ ಸುಳಿಗಾರನs || ೨ ||

ನಿಂಬಿsಯ ಬನದಾಗ ಕಂದ ಚೆಂಡಾಡ್ಯಾನ
ಬಾ ನನ್ನ ಮಗನs ಅಬರಂಗ ಧೋರಿಯs
ನಿಂಬಿಕಿಂತಾ ಛೆಲಿವ್ಯೋ ನನ ಸೋಸಿ |
ಬಂದೊಮ್ಮೆ ಮಕದೋರೊ || ೩ ||

ನಿಂಬಿಕಿಂತ ಛೆಲಿವ್ಯಾದ್ರ ಭಾಂಯಾಗ ನುಗಸವ್ವಾ
ಕಟ್ಟೀದ ಕರಮಣಿs ಹರಕೋರ್ಹಡದವ್ವಾ
ಬಿಟ್ಟಚ್ಚ ತವರ್ಮನೀಗೆ | ನಾ ನನ್ನ |
ಬಲ್ಲಂತ ಸುಳಿಗಾರನs || ೪ ||

ಮಗನೊಬ್ಬ ವೇಶ್ಯೆಯ ಬಲೆಗೆ ಬೀಳಬಾರದೆಂದು ಸೊಸೆಯ ಬಗ್ಗೆ ಗುಣಗಾನ ಮಾಡಿ ಹೇಳುತ್ತಾಳೆ. ಇಲ್ಲಿ ತಾಯಿ ಮಗನ ಮಧ್ಯ ಹಾಡಿನ ಮುಖಾಂತರ ಸಂವಾದ ನಡೆಯುತ್ತದೆ. ತನ್ನ ಸೊಸೆಯ ರೂಪವನ್ನು ವರ್ಣಿಸಿ ಮಗನಿಗೆ ಅವಳೊಡನೆ ಇರುವುದಕ್ಕೆ ಮನವೊಲಿಸಲು ಪ್ರಯತ್ನಿಸುತ್ತಾಳೆ. ಕೊನೆಗೆ ಮಗ ಸೊಸೆಯ ಜೊತೆ ಇರಲು ಒಪ್ಪದಿದ್ದಾಗ ಅವಳನ್ನು ತವರೂರಿಗೆ ಹೋಗಲು ಹೇಳುತ್ತಾಳೆ. ಜನಪದ ಸಂಗ್ರಹದ ದೃಷ್ಠಿಯಿಂದ ‘ಮಲ್ಲಿಗೆ ದಂಡೆ’ ಉತ್ತಮ ಕೃತಿಯಾಗಿ ಹೊರ ಹೊಮ್ಮಿದೆ ಎಂದು ಹೇಳಬಹುದು.

೬. ಹಲಸಂಗಿ ಗೆಳೆಯರ ವೈಯಕ್ತಿಕ ಸಾಧನೆ

ಅ. ಮಧುರಚೆನ್ನ (೧೯೦೩ – ೧೯೫೩)

ಮಧುರಚೆನ್ನರು ಜನ್ಮ ತಳೆದದ್ದು ೩೧ ಜುಲೈ ೧೯೦೩ರಂದು. ಅಂದು ಶ್ರಾವಣದ ಸಿರಿಯಾಳ ಷಷ್ಠಿ, ಮಧುರ ಚೆನ್ನ ಎಂಬ ಕಾವ್ಯನಾಮದಿಂದ ಪ್ರಸಿದ್ಧವಾಗಿರುವ ಚೆನ್ನಮಲ್ಲಪ್ಪ ಸಿದ್ದಲಿಂಗಪ್ಪ ಗಲಗಲಿಯವರು ಹಲಸಂಗಿ ಗೆಳೆಯರ ಗುಂಪಿನ ಹಿರಿಯರು. ಕನ್ನಡ ಜಾನಪದ ಸಾಹಿತ್ಯದ ಪ್ರಜ್ಞೆ ನಾಡಿನ ಜನತೆಯಲ್ಲಿ ಬರುವಂತೆ ಮಾಡಿದವರಲ್ಲಿ ಪ್ರಮುಖರು. ಕಳೆದ ಎಂಬತ್ತು ವರ್ಷಗಳ ಹಿಂದೆ ಜಿಲ್ಲೆಯ ಉತ್ತರದ (ಮಹಾರಾಷ್ಟ್ರದ) ಗಡಿಯಲ್ಲಿರುವ ಹಳ್ಳಿಯೊಂದರಲ್ಲಿ ಇದ್ದುಕೊಂಡು, ಗೆಳೆಯರ ಗುಂಪನ್ನು ಹುಟ್ಟುಹಾಕಿ, ಅದರ ಮುಖಾಂತರ ಗ್ರಾಮೀಣ ಪ್ರದೇಶದಲ್ಲಿ ಸಮೃದ್ಧಿಯಾಗಿದ್ದ ಜನಪದ ಸಾಹಿತ್ಯದ ಕೃಷಿ ಮಾಡಿಸುವಲ್ಲಿ ಸಫಲರಾದರು. ಗೆಳೆಯರ ಗುಂಪಿನವರಿಂದಲೇ ಗರತಿಯ ಹಾಡು, ಜೀವನ ಸಂಗೀತ, ಮಲ್ಲಿಗೆ ದಂಡೆ ಇಂಥ ಮೇರುಕೃತಿಗಳು ಹೊರ ಬರುವಲ್ಲಿ ಅವರ ಪ್ರಯತ್ನ ಸಾಕಷ್ಟಿದೆ. ಅವರು ಜಾನಪದ ಸಾಹಿತ್ಯಕ್ಕೆ ಚಾಲನೆ ಕೊಟ್ಟರು. ಜಾನಪದ ಸಾಹಿತ್ಯದ ಬಗ್ಗೆ ಕೆಲವೇ ಲೇಖನಗಳನ್ನು ಬರೆದಿದ್ದರೂ ಅವು ಕರ್ನಾಟಕ ಜಾನಪದ ಅಧ್ಯಯನದ ಮೊದಲಿನ ಹಂತದಲ್ಲಿ ಮಹತ್ವ ಪಡೆದವುಗಳು ಎಂದು ಹೇಳಬಹುದು.

ಗರತಿಯ ಹಾಡು ಸಂಗ್ರಹಕಾರರಲ್ಲಿ ಅವರು ಪ್ರಮುಖರು. ಇದಕ್ಕೆ ಪೂರ್ವಭಾವಿಯಾಗಿ ೧೯೨೩ರ ನವಂಬರ ತಿಂಗಳಲ್ಲಿ ವಿಜಾಪುರದಲ್ಲಿ ಜರುಗಿದ ೯ನೇ ಕರ್ಣಾಟಕ ಸಾಹಿತ್ಯ ಸಮ್ಮೇಳನದಲ್ಲಿ ಮಧುರಚೆನ್ನರು ‘ಹಳ್ಳಿಯ ಹಾಡುಗಳು’ ಎಂಬ ವಿದ್ವತ್ ಪೂರ್ಣವಾದ ಪ್ರಬಂಧವನ್ನು ಮಂಡಿಸಿ ಜನರಲ್ಲಿ ಜನಪದ ಸಾಹಿತ್ಯದ ಬಗ್ಗೆ ಹೆಚ್ಚು ಆಸಕ್ತಿಯನ್ನು ಕೆರಳಿಸಿದರು.

ಮಧುರಚೆನ್ನರು ತಮ್ಮ ಲೇಖನ ಓದುತ್ತ “ಇದುವರೆಗೆ ಎಲ್ಲರಿಂದಲೂ ತಿರಸ್ಕೃತವಾಗಿರುವ ಹಳ್ಳಿಗಳ ಸರ್ವೋದ್ದಾರ ತೀವ್ರಗತಿಯಲ್ಲಿ ಆಗಬೇಕಾಗಿದೆ; ಎಂದು ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ. ವಿಶೇಷವಾಗಿ ಜನಪದ ಸಾಹಿತ್ಯ ಸಂಸ್ಕೃತಿಗಳ ಪುನರುದ್ಧಾರದ ಬಗೆಗೆ ಕನ್ನಡ ನಾಡಿನ ಹಳ್ಳಿಯ ಸಾಹಿತ್ಯ ಎಂಬ ಶೀರ್ಷಿಕೆಯಲ್ಲಿ ಹೀಗೆ ಅಭಿಪ್ರಾಯ ಪಟ್ಟಿದ್ದಾರೆ. “ಮಹಾರಾಷ್ಟ್ರದಲ್ಲಿ ಅನಂತಫಂದಿ ಮೊದಲಾದ ಲಾವಣಿಗಳು ಅಚ್ಚಾಗಿ ಎಷ್ಟೋ ದಿನಗಳಾದವು. ಬಂಗಾಳ (ಈಗಿನ ಬಾಂಗ್ಲಾದೇಶ)ದ ಢಾಕಾ ಸಾಹಿತ್ಯ ಪರಿಷತ್ತು ಈ ಕೆಲಸವನ್ನು ಚೆನ್ನಾಗಿ ನೆರವೇರಿಸಿ, ಗ್ರಾಮ ಸಾಹಿತ್ಯವನ್ನು ವೃದ್ಧಿಪಡಿಸಿರುವಂತೆ, ಕನ್ನಡ ನಾಡಿನಲ್ಲಿ ಇಂತಹ ಪುಸ್ತಕಗಳು ಇನ್ನೂ ಹೊರಬೀಳಲಿಲ್ಲ. ಈಗೀಗ ಕೆಲವು ಪ್ರಕಟವಾಗಿದ್ದರೂ ಅವು ಹಳ್ಳಿಯವರ ಕೃತಿಗಳಲ್ಲ, ಸುಶಿಕ್ಷಿತರು ರಚಿಸಿದಂತಿದೆ, ನಿಜವಾದ ಗ್ರಾಮ ಸಾಹಿತ್ಯ ಇನ್ನೂ ಅಚ್ಚಕೂಟವನ್ನು ಕಾಣಲಿಲ್ಲ. ಕನ್ನಡ ವಾಙ್ಮಯದಲ್ಲಿ ಇದೊಂದು ದೊಡ್ಡ ಕೊರತೆಯೇ ಸರಿ” (ನಂ. ತಪಸ್ವೀ ಕುಮಾರ ೧, ೧೯೮೧). ಎಂದು ಕಳಕಳಿಯಿಂದ ಹೇಳಿದರು. ಗೆಳೆಯರ ಗುಂಪಿನವರು ಜನಪದ ಗೀತ ಸಾಹಿತ್ಯ ಸಂಗ್ರಹ ಕಾರ್ಯಕ್ಕೆ ತೊಡಗುವ ಪೂರ್ವದಲ್ಲಿಯೇ ಅವರಿಗೆ ಜನಪದ ಸಾಹಿತ್ಯದ ಪೂರ್ಣ ಅರಿವಿತ್ತು ಎಂಬುದಕ್ಕೆ ಅವರ ಅಂದಿನ ಪ್ರಬಂಧವೇ ಸಾಕ್ಷಿಯಾಗಿದೆ. ಒಟ್ಟಾರೆ ಮಧುರಚೆನ್ನರು ಬದುಕಿನ ಅಲ್ಪಾವಧಿಯಲ್ಲಿ ಕನ್ನಡ ಜಾನಪದ ಸಾಹಿತ್ಯಕ್ಕೆ ಅತ್ಯಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ ಎಂಬುದು ಗಮನಾರ್ಹ. (ಡಾ. ಗುರುಲಿಂಗ ಕಾಪಸೆ ಅವರು ಮಧುರಚೆನ್ನರನ್ನು ಕುರಿತು ಕರ್ನಾಟಕ ವಿಶ್ವವಿಧ್ಯಾಲಯಕ್ಕೆ ಅರ್ಪಿಸಿದ ಮಹಾಪ್ರಬಂಧ ಒಂದು ಮಹತ್ವದ ಕೃತಿ. ಇದು ಕರ್ನಾಟಕ ವಿಶ್ವವಿದ್ಯಾಲಯ ಪ್ರಸಾರಾಂಗದಿಂದ ೧೯೭೬ರಲ್ಲಿ ಪ್ರಕಟವಾಗಿದೆ). ಮಧುರಚೆನ್ನರ ಲೇಖನಗಳ ಸಂಗ್ರಹವೊಂದನ್ನು ಸಂಪಾದಿಸಿ “ಕನ್ನಡ ವಿಶ್ವವಿದ್ಯಾಲಯ ಹಂಪಿ”ಯಿಂದ ಪ್ರಕಟವಾಗಿದೆ. ಇವು ಕೂಡ ವಿಜಾಪುರ ಜಿಲ್ಲೆಯ ಜನಪದ ಸಾಹಿತ್ಯವನ್ನು ಕುರಿತು ಮಹತ್ವದ ಕೃತಿಗಳೆ. ಅದೇ ರೀತಿ ಗೆಳೆಯರ ಗುಂಪಿನ ಇತರರ ಬಗ್ಗೆ ಮಹಾಪ್ರಬಂಧಗಳನ್ನು ರಚಿಸುವ ಅಗತ್ಯವಿದೆ.

ಆ. ಪಿ.ಧೂಲಾ (೧೯೦೧ – ೧೯೪೦)

ಹಲಸಂಗಿ ಗೆಳೆಯರ ಗುಂಪಿನಲ್ಲಿದ್ದುಕೊಂಡು ಕೆಲಸ ಮಾಡಿದವರಲ್ಲಿ ಪಿ. ಧೂಲಾ ಒಬ್ಬರು. ಇವರು ಜನಿಸಿದ್ದು ೧೯೦೧ರಲ್ಲಿ. ಮಧುರಚೆನ್ನರಿಗಿಂತ ಎರಡು ವರ್ಷ ಹಿರಿಯರು. ಇವರ ಪೂರ್ವಜರು ಹಲಸಂಗಿಯ ಗೌಡರಾಗಿದ್ದ ಪಟೇಲರ ಮನೆತನಕ್ಕೆ ಸೇರಿದವರು. ಇವರ ನಿಜವಾದ ಹೆಸರು ಕಾಸೀಮ ಸಾಹೇಬ ಹುಸೇನಖಾನ ಪಟೇಲ. ‘ಧೂಲಾ ಸಾಹೇಬ’ ಎಂಬುದು ಪ್ರೀತಿಯ ಹೆಸರು. ‘ದುಲ್ಹಾ’ ಎಂದರೆ ಪಾರ್ಸಿ ಭಾಷೆಯಲ್ಲಿ ಮದುವಣಿಗ ಎಂದರ್ಥ. ಆದರೆ ಇವರು ಬ್ರಹ್ಮಚಾರಿಗಳಾಗಿದ್ದರಿಂದ ಈ ಹೆಸರು ಬಂದಿರಬೇಕೆಂದು ತೋರುತ್ತದೆ. ಇವರು ಓದಿದ್ದು ಕನ್ನಡ ಮೂರನೆಯ ಇಯತ್ತೆ. ಮುಂದೆ ಮಧುರಚೆನ್ನರ ಸಹವಾಸದಿಂದ ಮುಲ್ಕೀ ಪರೀಕ್ಷೆ ಪಾಸು ಮಾಡಿದರು. ಹಲಸಂಗಿ ಗೆಳೆಯರು ಹೊರಡಿಸುತ್ತಿದ್ದ ಕೈ ಬರಹದ ಮೊಗ್ಗು ಸಾಪ್ತಾಹಿಕಕ್ಕೆ, ಅನಂತರ ಹೊರಡಿಸುತ್ತಿದ್ದ ‘ವಿಶ್ವಾಮಿತ್ರ’ಕ್ಕೆ ಬರಹದ ತ್ರೈ ಮಾಸಿಕಕ್ಕೆ ಕವಿತೆ, ಲೇಖನಗಳನ್ನು ಬರೆಯುತ್ತಿದ್ದರು. ಧಾರವಾಡದಿಂದ ಪ್ರಕಟವಾಗುತ್ತಿದ್ದ ‘ಜಯ ಕರ್ನಾಟಕ’ದಲ್ಲಿಯೂ ಇವರ ಕೆಲವು ಕವಿತೆಗಳು ಜನಪದ ಲೇಖನಗಳು ಪ್ರಕಟಗೊಂಡಿರುವುದು ಕಂಡು ಬರುತ್ತದೆ.

೧೯೨೩ರಲ್ಲಿ ನವಂಬರ ತಿಂಗಳಲ್ಲಿ ವಿಜಾಪುರದಲ್ಲಿ ಜರುಗಿದ ೯ನೇ ಕರ್ಣಾಟಕ ಸಾಹಿತ್ಯ ಸಮ್ಮೇಳನದಲ್ಲಿ, ಪಿ. ಧೂಲಾ ಅವರು ‘ಲಾವಣಿಗಳ ಲಾವಣ್ಯ’ ಎಂಬ ಪ್ರಬಂಧವನ್ನು ಓದಿದರು. ಇವರು ಸಿಂಪಿ ಲಿಂಗಣ್ಣನವರೊಂದಿಗೆ ‘ಜೀವನ ಸಂಗೀತ’ ಲಾವಣಿಗಳ ಸಂಗ್ರಹವನ್ನು ಹೊರತಂದಿದ್ದಾರೆ. ‘ಜೀವನ ಸಂಗೀತ’ ಲಾವಣಿ ಸಂಗ್ರಹದಲ್ಲಿ ‘ಪ್ರಾರ್ಥನೆ’ ಮತ್ತು ‘ನಿನ್ನ ಹೊರತು ದೇವರೇ ಇಲ್ಲ’ ಇವೆರಡನ್ನು ಬಿಟ್ಟರೆ ಉಳಿದುದೆಲ್ಲ ಶೃಂಗಾರ ಲಾವಣಿಗಳು. ಸಂಗ್ರಹಕಾರರು ಹೇಳುವಂತೆ “ಶೃಂಗಾರ ಲಾವಣಿ” ಗಳಲ್ಲಿ ಬರುವ ಗ್ರಾಮ್ಯ ರೀತಿಯ ಕೆಲವು ಸಂಗತಿಗಳು ಸುಶಿಕ್ಷಿತರಿಗೆ ಅಶ್ಲೀಲ ಎಂದು ತೋರಬಹುದು. ಆದರೆ ನಾವಿಲ್ಲಿ ಹೇಳುವುದೇನೆಂದರೆ ಅಲ್ಲಲ್ಲಿ ಕಾಣುವ ಕವಿ ಕಲ್ಪನೆಯ ಅಗಾಧ ವೈಖರಿಯನ್ನು ತೋರಿಸಿ ಕೊಡುವುದಿಷ್ಟೇ ನಮ್ಮ ಉದ್ದೇಶ ಎಂದಿದ್ದಾರೆ. ಶ್ರೀ ಖಾಜಾಬಾಯಿಯವರ ‘ಕರೀ ಹುಡುಗಿ’ ಲಾವಣಿ, ಶ್ರೀ ಸಂಗೂ ಅವರ ‘ಗೋಕುಲಾಷ್ಟಮಿ,’ ಶ್ರೀ ಕುಬ್ಬಣ್ಣನವರ ‘ವತ್ಸಲಾಹರಣ’, ಸಿದ್ದು ಶಿವಲಿಂಗ ಅವರ ‘ಭೀಷ್ಮಪರ್ವ’, ಗೋಪಾಳ ದುರದುಂಡಿಯವರ ‘ಅಷ್ಟೂರ ಮಾತಿದು’, ನಾನಾ ಮತ್ತು ನ್ಯಾಮಣ್ಣ ಅವರೂ ಇದಿರು ಬದಿರು ತೋಡಿಗೆ ತೋಡಿ ಹಾಡಿದ ಹಾಡುಗಳ ಚಮತ್ಕಾರವು. ‘ನಾನಾ’ ಅವರು ಹಾಡಿರುವ “ಬಸರಿದ್ದೀನ್ಹೆಸರಿನ್ನೇನಿಡೂನ” ಎಂಬ ಲಾವಣಿ ಮುಂತಾದವುಗಳು ತುಂಬಾ ಆಕರ್ಷಕವಾಗಿದೆ.

ವಸ್ತು ಸ್ಥಿತಿ ಹಾಗಿದ್ದರೂ ಹೊಸಗನ್ನಡ ಸಾಹಿತ್ಯದ ಪ್ರಥಮ ಮಹಮ್ಮದೀಯ ಕವಿಗಳು ಅವರು. ಧಾರವಾಡದ ಗೆಳೆಯರ ಗುಂಪಿನವರು ಪ್ರಕಟಿಸಿದ ಪ್ರಾತಿನಿಧಿಕ ಕವನ ಸಂಕಲನವಾದ ‘ಹಕ್ಕಿ ಹಾರುತಿದೆ’ ಎಂಬ ಸಂಗ್ರಹದಲ್ಲಿ ಅವರಿಗೂ ಒಂದು ಸ್ಥಾನವಿರುವದು ಗಮನಿಸತಕ್ಕ ಸಂಗತಿಯಾಗಿದೆ. ಸುಮಾರು ನಾಲ್ಕು ದಶಕಗಳ ಕಾಲ ಬಾಳಿದ ಇವರು ಭಾರತ ಸ್ವಾತಂತ್ರ್ಯ ಸಿದ್ಧಿಯ ವೃತ ಧರಿಸಿಯೂ, ಆ ಸಿದ್ಧಿಯನ್ನು ಕಾಣದೆ ಹೋಗಿದ್ದು ಮಾತ್ರ ವಿಷಾದದ ಸಂಗತಿಯಾಗಿದೆ. ಅವರು ಆಕಸ್ಮಿಕವಾಗಿ ಪ್ಲೇಗ್ ಬೇನೆಯಿಂದ ದಿನಾಂಕ ೨೫.೦೧.೧೯೪೦ ರಂದು, ನಿಧನರಾದಾಗ ಅಪ್ಪಟ ದೇಶ ಭಕ್ತ, ಬ್ರಹ್ಮಚಾರಿ, ಕವಿ, ಗೆಳೆಯರ ಬಳಗದ ಧೀರೋದಾತ್ತ ವ್ಯಕ್ತಿಯನ್ನು ಕಳೆದುಕೊಂಡು ಹಲಸಂಗಿ ಗೆಳೆಯರು ಅಂದು ಬಹು ದೊಡ್ಡ ಆಘಾತವನ್ನು ಅನುಭವಿಸಿದರು. (ಡಾ. ಕಾಪಸೆ ‘ಹಲಸಂಗಿ ಗೆಳೆಯರು’ ೨೨. ೧೯೯೮)

ಇ. ಕಾಪಸೆ ರೇವಪ್ಪ (೧೯೦೭ – ೧೯೪೩)

ಇವರು ಜನಿಸಿದ್ದು ೧೯೦೭ರಲ್ಲಿ ನಿಧನ ಹೊಂದಿದ್ದು ೧೯೪೩ರಲ್ಲಿ. ಮೂರುವರೆ ದಶಕಗಳ ಕಾಲ ಅವರು ಸಾಧಿಸಿದ್ದು ಅಮೂಲ್ಯ ಮತ್ತು ಅನುಪಮ. ಚಿಕ್ಕ ವಯಸ್ಸಿನಲ್ಲಿಯೇ ಕವಿತೆಗಳನ್ನು ಬರೆಯಲು ಆರಂಭಿಸಿದ ಕಾಪಸೆ ರೇವಪ್ಪನವರು ಹಲಸಂಗಿ ಗೆಳೆಯರಲ್ಲಿ ಎಲ್ಲರಿಗಿಂತಲೂ ಚಿಕ್ಕವರು. ‘ಮೊಗ್ಗು’ ಕೈ ಬರಹದ ಸಾಪ್ತಾಹಿಕದಲ್ಲಿ ಕವಿತೆ, ಚಿತ್ರಗಳನ್ನು ಬರೆಯುತ್ತಿದ್ದರು. ಜಯ ಕರ್ನಾಟಕ ಮತ್ತು ಜೀವನ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. ‘ನಂದನವನ’ ವೆಂಬ ಕಥಾ ಸಂಕಲನ, ಸನ್ಯಾಸಿಯೆಂಬ ಕಾದಂಬರಿಯನ್ನು ಬರೆದಿದ್ದಾರೆ. ೧೯೨೪ರಲ್ಲಿ ಬೆಳಗಾಂವಿಯಲ್ಲಿ ಜರುಗಿದ ರಾಷ್ಟ್ರೀಯ ಕಾಂಗ್ರೇಸ ಅಧಿವೇಶನದಲ್ಲಿ ಪಿ. ಧೂಲಾ ಅವರೊಂದಿಗೆ ಸ್ವಯಂ ಸೇವಕರಾಗಿ ಕಾರ್ಯ ಮಾಡಿದ್ದಾರೆ.

‘ಗರತಿಯ ಹಾಡಿ’ನ ಸಂಗ್ರಹಕಾರರಲ್ಲಿ ರೇವಪ್ಪನವರು ಒಬ್ಬರು. ಇವರು ಸಂಗ್ರಹಿಸಿದ ಸ್ವತಂತ್ರ ಕೃತಿ ‘ಮಲ್ಲಿಗೆ ದಂಡೆ’ ಇದು ೧೯೩೫ ರಲ್ಲಿ ಪ್ರಕಟವಾಯಿತು. ಈ ಜಾನಪದ ಗೀತೆ ಸಂಗ್ರಹದಲ್ಲಿ ಕೊರವಂಜೀ ಹಾಡು, ಕೂಸಿನ ಹಾಡು, ಆಕಳ ಹಾಡು, ದ್ರೌಪದಿಯ ಹಾಡು, ಬೀಗರ ಹಾಡು, ಕೂಸ ಒಪ್ಪಿಸುವ ಹಾಡು, ಉಡಿ ತುಂಬುವ ಹಾಡು, ನೋಲೋಲ್ಲ್ಯಾಕ ಚೆನ್ನೀ ಮುಂತಾದ ಹಾಡುಗಳು ಬಹು ಪ್ರಸಿದ್ಧವಾಗಿವೆ.

ಕಾಪಸೆ ರೇವಪ್ಪನವರ ಬಗೆಗೆ ಲೇಖನವೊಂದನ್ನು ಬರೆದಿರುವ ಡಾ. ಗುರುಲಿಂಗ ಕಾಪಸೆಯವರು ಇವರು ಹಾಡುಗಳನ್ನು ಸಂಗ್ರಹಿಸುತ್ತಿದ್ದ ರೀತಿಯನ್ನು ದಾಖಲಿಸಿದ್ದಾರೆ. ರೇವಪ್ಪನವರು ಜನಪದ ಹಾಡುಗಳನ್ನು ಹೆಣ್ಣು ಮಕ್ಕಳಿಂದ ಸಂಗ್ರಹಿಸುತ್ತಿದ್ದುದು ಸಾಮಾನ್ಯವಾಗಿ ರಾತ್ರಿ ವೇಳೆಯಲ್ಲಿ, ಹಳ್ಳಿಗರು ತಮ್ಮೆಲ್ಲ ಕೆಲಸ ಮುಗಿಸಿ ಊಟ ಮಾಡಿ ವಿಶ್ರಾಂತಿ ತೆಗೆದುಕೊಳ್ಳುವ ಹೊತ್ತಿಗೆ ಇವರು ಕಂದೀಲು ಹಿಡಿದುಕೊಂಡು ಅವರ ಮನೆಗಳಿಗೆ ಹೋಗಿ ಬೇಸರಿಲ್ಲದೆ ಬರೆದುಕೊಳ್ಳುತ್ತಿದ್ದರು. (ಜಾನಪದ ಕೈಪಿಡಿ ೪೪೪, ೧೯೯೭) ವಸ್ತು ವೈವಿಧ್ಯ, ವಿವಿಧ ಛಂದೋಬಂಧದಿಂದ ‘ಮಲ್ಲಿಗೆ ದಂಡೆ’ ಮಹತ್ವ ಪೂರ್ಣ ಜಾನಪದ ಸಂಕಲನವಾಗಿದೆ.

ಈ. ಸಿಂಪಿ ಲಿಂಗಣ್ಣ (೧೯೦೫ – ೧೯೯೩)

ಇಂಡಿ ತಾಲೂಕಿನ ಚಡಚಣದಲ್ಲಿ ೧೯೦೫ ರಲ್ಲಿ ಜನಿಸಿದ ಸಿಂಪಿ ಲಿಂಗಣ್ಣನವರು ೭ನೇ ವಯಸ್ಸಿನಿಂದಲೇ ಮಧುರಚೆನ್ನರ ಸ್ನೇಹಿತರಾಗಿ ೪೧ ವರ್ಷ ಅವರ ಒಡನಾಡಿಯಾಗಿದ್ದರು. ಗ್ರಾಮೀಣ ಪ್ರದೇಶದಲ್ಲಿಯೇ ಹುಟ್ಟಿ ಬೆಳೆದುದರಿಂದ ಇವರಿಗೆ ಜಾನಪದ ಸಾಹಿತ್ಯ ನೀರು ಕುಡಿದಷ್ಟೇ ಸರಳವಾಗಿತ್ತು. ಕರ್ನಾಟಕದಲ್ಲಿ ಜಾನಪದ ಅಧ್ಯಯನದ ಭದ್ರ ಬುನಾದಿ ಹಾಕಲು ಶ್ರಮಿಸಿದ ಕೆಲವೇ ಗಣ್ಯರಲ್ಲಿ ಸಿಂಪಿ ಲಿಂಗಣ್ಣನವರು ಒಬ್ಬರು. ಉತ್ತರ ಕರ್ನಾಟಕದ ಗ್ರಾಮೀಣ ಜೀವನದಲ್ಲಿ ಹುದುಗಿಕೊಂಡಿದ್ದ ಅದೆಷ್ಟೋ ಸಾಹಿತ್ಯ ಭಂಡಾರವನ್ನು ಇವರು ಹೆಕ್ಕಿ ತೆಗೆದರು. ಅನೇಕ ಬಗೆಯ ಸಂಗ್ರಹ ಕಾರ್ಯವನ್ನು ಪೂರೈಸಿದ್ದಲ್ಲದೆ ಅವುಗಳನ್ನು ಕುರಿತಾಗಿ ವಿವರಣಾತ್ಮಕ ವಿಶ್ಲೇಷಣೆ ಮಾಡಿದ್ದಾರೆ. ಗೆಳೆಯರ ಗುಂಪಿನವರೊಂದಿಗೆ ಕೂಡಿಕೊಂಡು ಜನಪದ ಸಾಹಿತ್ಯದ ಅಳಿವು ಉಳಿವಿನ ಬಗ್ಗೆ ಪ್ರಯತ್ನಿಸಿದರು. ಅವರ ಜೊತೆಗೂಡಿ ಹಲವಾರು ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸಿ ಕ್ಷೇತ್ರಾಧ್ಯಯನ ಮಾಡಿ ವಿಷಯ ಸಂಗ್ರಹಿಸಿದರು.

ಗರತಿಯ ಹಾಡು (೧೯೩೧) ಮಧುರಚೆನ್ನ ರೇವಪ್ಪ ಮೊದಲಾದ ಗೆಳೆಯರು ಸಂಗ್ರಹಿಸಿದ ಕೃತಿ. ಜೀವನ ಸಂಗೀತ (೧೯೩೩ ಪಿ. ಧೂಲಾ ಅವರೊಂದಿಗೆ) ಉತ್ತರ ಕರ್ನಾಟಕದ ಜನಪದ ಕಥೆಗಳು (೧೯೮೦) ಗರತಿಯ ಬಾಳು (೧೯೫೪) ಜನಾಂಗದ ಜೀವಾಳ (೧೯೫೭) ಜಾನಪದ ಸಾಹಿತ್ಯದ ವಿವಿಧ ಮುಖಗಳ ವಿವೇಚನೆ ಒಳಗೊಂಡ ಕೃತಿಗಳು. ಉತ್ತರ ಕರ್ನಾಟಕದ ಜನಪದ ಗೀತೆಗಳು (೧೯೭೬) ಕನ್ನಡ ಲಾವಣಿಗಳು (೧೯೭೭), ಹೆಡಿಗೆ ಜಾತ್ರೆ (೧೯೮೧ ಶ್ರೀ ಅರವಿಂದ ಗ್ರಂಥಾಲಯ ಚಡಚಣ) ಇಲ್ಲಿ ಜಾನಪದ ವಿಷಯವೇ ಜೀವಾಳವಾಗಿರುವ ೧೭ ಪ್ರಬಂಧಗಳ ಸಂಕಲನವಾಗಿದೆ. ಗರತಿಯ ಬಾಳ ಸಂಹಿತೆ (೧೯೮೭) ಗಾದೆಗಳ ಗಾರುಡಿ (೧೯೮೮) ಜನಪದ ಸಾಹಿತ್ಯದಲ್ಲಿ ಕಿರಿದರೊಳೆ ಪರಿದರ್ಥಕ (೧೯೭೬) ಹೀಗೆ ನೂರಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ.

೧೯೪೪ ರಲ್ಲಿ ರಬಕವಿಯಲ್ಲಿ ಜರುಗಿದ ಕನ್ನಡ ಸಾಹಿತ್ಯ ಸಮ್ಮೇಳನದ ಜನಪದ ಗೋಷ್ಠಿಗೆ ಅಧ್ಯಕ್ಷರಾಗಿಯೂ, ೧೯೬೬ ರಲ್ಲಿ ಮೈಸೂರು ವಿಶ್ವವಿದ್ಯಾಲಯ ಸಂಘಟಿಸಿದ ಕನ್ನಡ ಲೇಖಕರ ಸಮ್ಮೇಳನದಲ್ಲಿ ಜನಪದ ಗೋಷ್ಠಿಯ ಅಧ್ಯಕ್ಷ ಸ್ಥಾನ, ೧೯೬೯ ರಲ್ಲಿ ಮಂಗಳೂರಿನಲ್ಲಿ ನಡೆದ ೨ನೇ ಜಾನಪದ ಸಮ್ಮೇಳನದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ೧೯೭೯ ರಲ್ಲಿ ಇಳಕಲ್ಲಿನಲ್ಲಿ ಜರುಗಿದ ಕರ್ನಾಟಕ ವಿಶ್ವವಿದ್ಯಾಲಯ ಏರ್ಪಡಿಸಿದ ೬ನೇ ಜಾನಪದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಫೆಬ್ರವರಿ ೫, ೬ ಮತ್ತು ೭, ೧೯೯೩ ರಂದು ಕೊಪ್ಪಳದಲ್ಲಿ ಜರುಗಿದ ೬೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅವರು ಕನ್ನಡ ಜಾನಪದ ಸಾಹಿತ್ಯ ಕ್ಷೇತ್ರಕ್ಕೆ ಮಾಡಿದ ಸೇವೆಗಾಗಿ ಸಂದ ಗೌರವ ಹಲವಾರು. ಆದರ್ಶ ಶಿಕ್ಷಕ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಗೌರವ ಸದಸ್ಯತ್ವ, ಗುಲಬರ್ಗಾ ವಿಶ್ವ ವಿದ್ಯಾಲಯದಿಂದ ಪಡೆದ ಗೌರವ ಡಾಕ್ಟರೇಟ ಪದವಿ, ಹೀಗೆ ಹಲವಾರು ಪ್ರಶಸ್ತಿಗಳು ಇವರ ಸಾಧನೆಗೆ ಸಂದ ಗೌರವವೆಂದು ಹೇಳಬಹುದು. ಗೆಳೆಯರ ಗುಂಪು ಮಾಡಿದ ಜಾನಪದ ಕ್ಷೇತ್ರದ ಕಾರ್ಯವಾಯಿತು. ಇದಲ್ಲದೆ ಇನ್ನು ಕೆಲವರು ಜಾನಪದ ಕ್ಷೇತ್ರದಲ್ಲಿ ಕಾರ್ಯ ಮಾಡಿದ್ದಾರೆ. ಇವರಲ್ಲಿ ಕೆಲವು ಪ್ರಮುಖರ ಬಗ್ಗೆ ಮಾತ್ರ ಇಲ್ಲಿ ವಿವರಿಸಲಾಗಿದೆ.