೭. ಜಿಲ್ಲೆಯ ಇತರ ಜಾನಪದ ವಿದ್ವಾಂಸರ ಕೃಷಿ

ಈಶ್ವರ ಚಂದ್ರ ಚಿಂತಾಮಣಿ

ಈಶ್ವರ ಅಮಗೌಡ ಚಿಂತಾಮಣಿ ಅವರು ವಿಜಾಪುರ ತಾಲೂಕ ಬಿಜ್ಜರಗಿಯಲ್ಲಿ ೧೦.೦೫.೧೯೨೬ ರಲ್ಲಿ ಜನಿಸಿದರು. ಇವರ ಕಾವ್ಯನಾಮ “ಪಾರ್ವತೀಶ” ಈಶ್ವರ ಚಂದ್ರ ಚಿಂತಾಮಣಿ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಆಗಿದ್ದಾಗ ತಮ್ಮ ಸ್ವಂತ ಊರಿನಲ್ಲಿ ಸ್ತ್ರೀಯರು ಹಾಡುವ ಸಂಪ್ರದಾಯದ ಹಾಡುಗಳಿಂದ ಆಕರ್ಷಿತರಾದರು. ಆಗಲೇ ಅವರು ಜನಪದ ಹಾಡುಗಳನ್ನು ಸಂಗ್ರಹಿಸುವ ಹವ್ಯಾಸ ಬೆಳೆಸಿಕೊಂಡರು. ೧೯೪೬ ರಿಂದಲೇ ಜನಪದ ಸಾಹಿತ್ಯ ಕುರಿತು ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯಲು ಆರಂಭಿಸಿದರು.

ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಜೀವನ ಆರಂಭಿಸಿದ ಚಿಂತಾಮಣಿಯವರು, ಮಕ್ಕಳ ಸಾಹಿತ್ಯದ ಬಗ್ಗೆಯೂ ಹಲವಾರು ಕೃತಿಗಳನ್ನು ಹೊರ ತಂದಿದ್ದಾರೆ. ೧೯೫೪ ರಲ್ಲಿ ಜಮಖಂಡಿಯ ಕರ್ನಾಟಕ ಸಾಹಿತ್ಯ ಮಂದಿರದಿಂದ ‘ಗರತಿಯರ ಮನೆಯಿಂದ’ ಎಂಬ ಇವರ ಜಾನಪದ ಗ್ರಂಥ ಪ್ರಕಟವಾಯಿತು. ಇದು ಅತ್ಯಂತ ಉಪಯುಕ್ತ ಗ್ರಂಥವಾಗಿದ್ದು, ಜಾನಪದ ಇತರ ಅಂಗಗಳಾದ ಗಾದೆ, ಒಗಟು, ಒಡಪು, ಚುಕ್ಕೋಳ ಆಟಪಾಟ ಇತ್ಯಾದಿ ವಿಷಯಗಳು ಇದರಲ್ಲಿ ದಾಖಲಾಗಿವೆ. ಈ ಗ್ರಂಥಕ್ಕೆ ಜಾನಪದ ಅಕಾಡೆಮಿಯ ಪ್ರಶಸ್ತಿ ಕೂಡ ಬಂದಿದೆ. ಒಡಪುಗಳು (೧೯೭೬, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು) ಜ್ಯೋತಿಯೇ ಆಗು ಜಗಕ್ಕೆಲ್ಲ (೧೯೮೦) ಜನಪದ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಲೇಖನಗಳನ್ನು ಬರೆದಿದ್ದಾರೆ.

ಇವರ ಸೇವೆಯನ್ನು ಗಮನಿಸಿ ಅನೇಕ ಪ್ರಶಸ್ತಿಗಳು ಇವರಿಗೆ ದೊರಕಿವೆ. ಆದರ್ಶ ಶಿಕ್ಷಕ ರಾಷ್ಟ್ರ ಪ್ರಶಸ್ತಿ (೧೯೭೪) ಜಾನಪದ ಅಕಾಡೆಮಿ ಪ್ರಶಸ್ತಿ (೧೯೮೦) ಭಾರತ ಸರ್ಕಾರದಿಂದ ಫೆಲೋಶಿಪ್ (೧೯೯೯) ಸಮೀರವಾಡಿಯಲ್ಲಿ ೧೯೯೭ ರಲ್ಲಿ ಜರುಗಿದ ವಿಜಾಪುರ ಜಿಲ್ಲಾ ೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ, ೧೯೯೮ ರಲ್ಲಿ ವಂದೇ ಮಾತರಂ ಗ್ರಂಥಕ್ಕೆ ಗೋರೂರು ಪ್ರಶಸ್ತಿ, ಮುಂತಾದವುಗಳು ಇವರಿಗೆ ಸಂದ ಗೌರವಗಳು.

ಪ್ರೊ. ಎಚ್. ಟಿ. ಸಾಸನೂರ ಅವರು ವಿಜಾಪುರ ಜಿಲ್ಲೆಯ ಕೆಲವು ಭಾಗಗಳಲ್ಲಿ ಕ್ಷೇತ್ರಾಧ್ಯಯನ ಕೈಗೊಂಡು ಜಾನಪದ ಕಥೆಗಳಲ್ಲಿ ವಿಶೇಷವಾಗಿ ಗುಣಧರ್ಮದ ಕಥೆ (೧೯೭೧) ಎಂಬ ಜನಪದ ಕಥನ ಗೀತವನ್ನು ಸಂಗ್ರಹಿಸಿದರು. ಅವರು ಸಂಪಾದಿಸಿದ ಪ್ರಕಟನೆಗೆ ನೆರವಾದವರು ಪ್ರೊ. ಸುಶೀಲಾ ಪಟ್ಟಣಶೆಟ್ಟಿ. ಜಾನಪದ ಸಾಹಿತ್ಯ ದರ್ಶನ – ೧ (೧೯೭೪) ರಲ್ಲಿ “ಕನ್ನಡ ಜನಪದ ಸಾಹಿತ್ಯದ ಸಂಕಲನ ಕೃಷಿ” ಕುರಿತು ಪ್ರೊ. ಸುಶೀಲಾ ಪಟ್ಟಣಶೆಟ್ಟಿ ಅವರ ಪ್ರಬಂಧ ಪ್ರಕಟವಾಗಿದೆ. ಮಡಿವಾಳಪ್ಪ ಬಿ. ಸಾಸನೂರ ಅವರು ಕಷ್ಟಪಟ್ಟು ಸಂಗ್ರಹಿಸಿದ ಮದುವೆ ಮತ್ತು ಬೀಗರ ಹೊಸ ಪ್ರಕಾರದ ಸಂಪ್ರದಾಯದ ಹಾಡುಗಳನ್ನು ಡಾ. ಎಂ. ಎಸ್. ಸುಂಕಾಪುರ ಅವರು ಜೀವನ ಜೋಕಾಲಿಯಲ್ಲಿ ಪ್ರಕಟಿಸಿರುವುದಾಗಿ ಡಾ. ಮ. ಗು. ಬಿರಾದಾರ ಅವರು (ವಿಜಾಪುರ ಜಿಲ್ಲಾ ದರ್ಶನ ಸಂ. ದುಂ. ನಿಂ. ಬೆಳಗಲಿ ೧೯೯೫) ಪ್ರಸ್ತಾಪಿಸಿದ್ದಾರೆ.

ಇಂಡಿ ತಾಲೂಕಿನ ಶೃಂಗಾರ ಕವಿ ಖಾಜಾಭಾಯಿ, ಹರದೇಶಿ ಲಾವಣಿಕಾರ, ‘ಜೀವನ ಸಂಗೀತ’ ಕೃತಿಯಲ್ಲಿ ಬರುವ ‘ಕರೀ ಹುಡಿಗಿ’ ಲಾವಣಿಯಲ್ಲಿ ಹೀಗೆ ಹೇಳಿದ್ದಾರೆ.

ನೀ ಬಾರ ಕರ‍್ರನ ಕರೀ ಹುಡಿಗೀ | ಕರೀ ಸೀರಿ ಉಡಿಗಿ |
ನವಿಲಿನಾಂಗ ನಡಿಗಿ ನಡುತೆ ಸವನಾ |
ಕರಿ ಕೂದಲ ಬೇತಲಿ ತೀಡಿ ತೆಗೆದ ಸಣ್ಣ |
ಕರಿ ಹುಬ್ಬ ಕೊರೆದಂಗ ಕರಿಕಾಡಿಗಿಗಣ್ಣ |
ಏನ ಹೇಳಲಿ ನಾರಿ ನಿನ್ನ ಕಪ್ಪ | ಎಂಥ ನಿನ್ನ ರೂಪ |
ಆಯತ ನೆಪ್ಪ ನೀರಲದ್ಹಣ್ಣ |

ಖಾಜಾಭಾಯಿ ಹಾಡುತ್ತಿದ್ದ ಲಾವಣಿಯಲ್ಲಿ ಬರುವ ಕನ್ನಡ ದೇಸಿ ಬಳಕೆ ಗಮನಾರ್ಹ. ಅವಳನ್ನು “ಖಂಡೋಬನ ಮುರಳಿ” ಎಂದು ವರ್ಣಿಸಿರುವುದೂ ಗಮನಾರ್ಹ. ಗಂಡು ಹೆಣ್ಣಿನ ಹೆಚ್ಚು ಕಡಿಮೆ ವಾದದ ಹಾಡುಗಳಲ್ಲಿ ಈ ಲಾವಣಿ ಶೃಂಗಾರ ಪೂರ್ವಕವಾಗಿದ್ದು, ಒಳ್ಳೆ ಚಿತ್ರಸ್ಥವಾಗಿ ವರ್ಣಿತವಾಗಿದೆ.

ಸಿದ್ಧು ಶಿವಲಿಂಗ ಕವಿ, ನಾಗೇಶಿ ಲಾವಣಿಕಾರ ಖಾಜಾಭಾಯಿ ಒಂದು ರಾಧಾನಾಟ ಬರೆದಿದ್ದು ಹಲಸಂಗಿ ಭಾಗದಲ್ಲಿ ಅದು ಹಲಸಂಗಿ ರಾಧಾನಾಟ ಎಂದು ಪ್ರಖ್ಯಾತಗೊಂಡಿತು. ಅಲ್ಲದೆ ಚಡಚಣ ಸಮೀಪದಲ್ಲಿ ಬರುವ ಹಾವಿನಾಳದ ಅಬ್ದುಲ್ ಸಾಬ ಅತ್ತಾರ ಅವರು ಕೆಲವು ದೊಡ್ಡಾಟಗಳನ್ನು ಬರೆದಿರುವುದಾಗಿ ವಕ್ತ್ರಗಳಿಂದ ತಿಳಿದು ಬರುತ್ತದೆ.

ಪ್ರೊ. ಬಿ. ಬಿ. ಹೆಂಡಿ

ವಿಜಾಪುರ ಜಿಲ್ಲೆಯ ನಿಡಗುಂದಿಯಲ್ಲಿ ಜನಿಸಿದ ಪ್ರೊ. ಬಿ. ಬಿ. ಹೆಂಡಿಯವರು, ಜಾನಪದ ಪರಿಸರದಲ್ಲಿಯೇ ಹುಟ್ಟಿ ಬೆಳೆದುದರಿಂದ ಜಾನಪದದ ಕಡೆಗೆ ವಿಶೇಷ ಒಲವು, ಬಿ. ವಿ. ವಿ. ಸಂಘ, ಬಾಗಲಕೋಟೆಯಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿದ ಪ್ರೊ. ಹೆಂಡಿ ಅವರು ೧೯೭೨ ರಲ್ಲಿ ಕಲಬುರ್ಗಿಯ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಅವರ ಜಾನಪದ ಬಗೆಗಿನ ಚಟುವಟಿಕೆಗಳು ವ್ಯಾಪಕವಾಗಿ ನಡೆದವು. ಸ್ವತಃ ಜಾನಪದ ವಿದ್ವಾಂಸರೂ ಪ್ರತಿಭಾವಂತ ಕಲಾವಿದರೂ ಆದ ಪ್ರೊ. ಹೆಂಡಿ ಅವರು ಗುಲಬರ್ಗಾ ಭಾಗದಲ್ಲಿ ಜಾನಪದದ ಅರಿವು ಮೂಡಿಸಿದ ಏಕಮೇವ ವ್ಯಕ್ತಿಯಾಗಿ ಕಾಣುತ್ತಾರೆ. ಇವತ್ತು ಎದ್ದು ಕಾಣುವ ಹೈದರಾಬಾದ ಕರ್ನಾಟಕದ ವಿದ್ವಾಂಸರೆಲ್ಲ ಪ್ರೊ. ಹೆಂಡಿ ಅವರ ಪ್ರೋತ್ಸಾಹ, ಪ್ರೇರಣೆ ಮತ್ತು ಮಾರ್ಗದರ್ಶನಗಳ ಫಲವಾಗಿಯೇ ಮುಂದೆ ಬಂದವರು ಎಂಬುದು ಗಮನಾರ್ಹ ಸಂಗತಿ. (ಡಾ. ದಂಡೆ ೧೯ – ೧೯೯೩) ಜಾನಪದದ ಬಗ್ಗೆ ಸಂಶೋಧನ ಲೇಖನಗಳನ್ನು ಬರೆದಿದ್ದಾರೆ. ಅನೇಕ ವಿಚಾರ ಸಂಕೀರಣಗಳಲ್ಲಿ ಪಾಲ್ಗೊಂಡು ಜಾನಪದದ ಬಗ್ಗೆ ಉಪಯುಕ್ತವಾದಂಥ ಪ್ರಬಂಧಗಳನ್ನು ಮಂಡಿಸಿದ್ದಾರೆ. ಜನಪದ ಹಾಡು ಉತ್ತರ ಕರ್ನಾಟಕದ ಗಾದೆಗಳು ಡಾ. ಲಠ್ಠೆಯವರೊಂದಿಗೆ (೧೯೯೦ ಸಮಾಜ ಪುಸ್ತಕಾಲಯ ಧಾರವಾಡ) ವಿಜಾಪುರ, ಗುಲಬರ್ಗಾ, ಬೆಳಗಾಂವಿ ಹಾಗೂ ಧಾರವಾಡ ಭಾಗದ ಜಾನಪದ ಗಾದೆಗಳ ಸಂಗ್ರಹ ಕೃತಿ. “ಆಯ್ದ ಜನಪದ ಕಥನ ಗೀತೆಗಳು” (೧೯೭೮ ಪ್ರಸಾರಾಂಗ ಕ. ವಿ. ವಿ. ಧಾರವಾಡ) ಒಟ್ಟೂ ಮೂರು ಅಧ್ಯಾಯಗಳಿಂದ ಕೂಡಿದೆ. ಇಲ್ಲಿರುವ ಮೂರು ಕಥನ ಗೀತೆಗಳು, ಸ್ತ್ರೀ ಜೀವನದ ಸತ್ವ ಪರೀಕ್ಷೆಯ ವಸ್ತುಗಳನ್ನು ಆಧರಿಸಿದಂತಹವುಗಳಾಗಿವೆ. ಉತ್ತರ ಕರ್ನಾಟಕದ ಜನ ಸಾಮಾನ್ಯರಲ್ಲಿ ಒಂದು ಕಾಲಕ್ಕೆ ಈ ಕಥೆಗಳು ಬಹು ಜನಪ್ರಿಯತೆ ಪಡೆದಿದ್ದವು. ಕನ್ನಡ ಜನಪದ ಕಥನಗಳಲ್ಲಿ ಇದು ತೀರ ಸಹಜವಾದ ಪ್ರಕ್ರಿಯೆ. ಈ ಗೀತವು ಉಳಿದ ಗೀತೆಗಳಂತೆ ಕಥೆಯ ಸ್ವಾರಸ್ಯವನ್ನು ಹೆಚ್ಚಿಸುತ್ತ, ಸತ್ ಕಾಳಿಂಗನ ಪತ್ನಿಯಾದ ಚೆನ್ನಮ್ಮನ ಪ್ರತಿಷ್ಠೆ, ದೈವ ನಿಷ್ಠೆಗಳನ್ನು ಎತ್ತಿ ತೋರಿಸುತ್ತ ಸಾಗುತ್ತದೆ. ಕೇಳುಗರ ಹೃದಯ ಮಿಡಿಯುವಂಥವುಗಳು. ಈ ಕಥನಗಳು ಪರಿಣಾಮದ ದೃಷ್ಠಿಯಿಂದಲೂ ಮಹತ್ವದ್ದು. ಹರದೇಶಿ ನಾಗೇಶಿ (೧೯೮೩ ಕನ್ನಡ ಅಧ್ಯಯನ ವಿಭಾಗ ಗುಲಬರ್ಗಾ ವಿಶ್ವವಿದ್ಯಾಲಯ) ಪದಗಳನ್ನು ಒಳಗೊಂಡಿರುತ್ತವೆ. ಉತ್ತರ ಕರ್ನಾಟಕದ ಬಯಲಾಟಗಳ ವಿಷಯದಲ್ಲಿ ವಿಶೇಷ ಆಸಕ್ತಿ ಜಾನಪದ ಸಾಹಿತ್ಯ ದರ್ಶನ – ೩ (೧೯೭೮) ರಲ್ಲಿ “ದಾಸರಾಟ” ಕುರಿತು ಪ್ರಬಂಧ ಪ್ರಕಟವಾಗಿದೆ. ಇಷ್ಟಿದ್ದರೂ ಇವರು ಕಲಬುರ್ಗಿ ವಿಶ್ವವಿದ್ಯಾಲಯಕ್ಕೆ ಹೋದ ಮೇಲೆ ಕಲಬುರ್ಗಿಯನ್ನು ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು.

ಡಾ. ಎಂ. ಎಂ. ಕಲಬುರ್ಗಿ

ಸಿಂದಗಿ ತಾಲೂಕಿನ ಗುಬ್ಬೇವಾಡದಲ್ಲಿ ೨೮.೧೧.೧೯೩೮ ರಂದು ಜನಿಸಿದರು. ಎಂ. ಎಂ. ಕಲಬುರ್ಗಿಯವರು ಉತ್ತರ ಕರ್ನಾಟಕದ ಜನಪದ ಪದ್ಯ ಸಾಹಿತ್ಯ (೧೯೭೮ ಸಮಾಜ ಪುಸ್ತಕಾಲಯ, ಧಾರವಾಡ) ಇದು ಉತ್ತರ ಕರ್ನಾಟಕದ ಜನಪದ ಪದ್ಯ ಸಾಹಿತ್ಯ ಒಳಗೊಂಡಂತೆ ಗಂಡಸರ ಹಾಡು, ಹೆಂಗಸರ ಹಾಡು, ಮಕ್ಕಳ ಹಾಡು ಎಂಬುದಾಗಿ ವರ್ಗೀಕರಣಗೊಂಡಿದೆ. ಜಾನಪದ ಮಾರ್ಗ (೧೯೯೫ ಲಕ್ಷ್ಮೀ ಪ್ರಿಂಟಿಂಗ್ ಆಂಡ್ ಪಬ್ಲಿಷಿಂಗ್ ಹೌಸ ಮೈಸೂರು) ಕೃತಿ, ಜಾನಪದ ಸಾಹಿತ್ಯ ದರ್ಶನ ಭಾಗ – ೧೧ (೧೯೮೭) ಸವದತ್ತಿ ಎಳುಕೊಳ್ಳದ ಎಲ್ಲಮ್ಮನ ಒಟ್ಟಾರೆ ವಿಷಯಗಳು ಒಳಗೊಂಡಿವೆ. ಇದಕ್ಕೆ ಸಂಬಂಧಿಸಿದಂತೆ ೧೩ ಸಂಶೋಧನಾ ಪ್ರಬಂಧಗಳು ಒಳಗೊಂಡಿವೆ. ಜಾನಪದ ಸಾಹಿತ್ಯ ದರ್ಶನ ಭಾಗ – ೧೨ (೧೯೯೪ ಕನ್ನಡ ಅಧ್ಯಯನ ಪೀಠ ಧಾರವಾಡ) ೩ ಗೋಷ್ಠಿಗಳನ್ನು ಒಳಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಆಕಾಶ ಜಾನಪದಕ್ಕೆ ಸಂಬಂಧಿಸಿದ ವಿಷಯಗಳ ಒಟ್ಟು ೯ ಲೇಖನಗಳಿವೆ. ಇನ್ನೂ ಅನೇಕ ಕೃತಿಗಳನ್ನು ಸಂಪಾದಿಸಿದ್ದಾರೆ. ಮಾರ್ಗ ಸಂಪುಟ ೨ ರಲ್ಲಿ ಜಾನಪದ ಲೇಖನಗಳು ಪ್ರಕಟಗೊಂಡಿವೆ. ಜಾನಪದ ಸಾಹಿತ್ಯ ದರ್ಶನ – ೧ (೧೯೭೪) ರಲ್ಲಿ “ಕನ್ನಡ ಜನಪದ ಸಾಹಿತ್ಯದ ಪ್ರಾಂತ ಭೇದಗಳು” ವಿಷಯ ಕುರಿತು ಪ್ರಬಂಧ ಪ್ರಕಟವಾಗಿದೆ. “ಜಾನಪದ ಸಾಹಿತ್ಯ ದರ್ಶನ – ೩ (೧೯೭೮) ರಲ್ಲಿ “ಪ್ರೇಕ್ಷಕ ವರ್ಗ” ಪ್ರಬಂಧ ಪ್ರಕಟವಾಗಿದೆ. ಕನ್ನಡ ಪ್ರಾಧ್ಯಾಪಕರಾಗಿ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ವಿಶ್ವ ವಿದ್ಯಾಲಯ, ಹಂಪಿಯ ಕುಲಪತಿಗಳಾಗಿದ್ದ ಸಂದರ್ಭದಲ್ಲಿ ಜಾನಪದ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ ಪ್ರಶಸ್ತಿ ೧೯೯೭ ರಲ್ಲಿ ಇವರಿಗೆ ಲಭಿಸಿದೆ. ಇವರ ೭೦ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ.

ಡಾ. ಗುರುಲಿಂಗ ಕಾಪಸೆ

ಹಿರೇಲೋಣಿ ಇಂಡಿ ತಾಲೂಕಿನ ಒಂದು ಹಳ್ಳಿ. ಈ ಹಳ್ಳಿಯಲ್ಲಿ ೩.೪.೧೯೪೮ರಂದು ಗುರುಲಿಂಗಪ್ಪ ಶಂಕರಪ್ಪ ಕಾಪಸೆ ಅವರು ಜನಿಸಿದರು. ಮಧುರಚೆನ್ನರ ಜೀವನ ಹಾಗೂ ಕೃತಿಗಳು ಕುರಿತು ಮಹಾಪ್ರಬಂಧ ಬರೆದಿದ್ದಾರೆ. ‘ಹಲಸಂಗಿ ಗೆಳೆಯರು’ (೧೯೯೮ ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ) ಡಾ. ಕಾಪಸೆ ಅವರು ಸಂಪಾದಿಸಿದ ಮಧುರ ಚೆನ್ನರ ಲೇಖನಗಳಲ್ಲಿ ಆ ಕಾಲದ ಅನೇಕ ಜಾನಪದ ವಿರಳ ಸಂಗತಿಗಳು ದಾಖಲಾಗಿವೆ. ಇದರಲ್ಲಿ ಎತ್ತಿ ಹೇಳಬೇಕೆಂದರೆ ಒಂದು, ಎರಡು ದಿವಸದಿಂದ ಮೂರು ದಿನಗಳವರೆಗೆ ಜನ ಲಾವಣಿಗಳ ಬಗ್ಗೆ ಲಾವಣಿಗಳ ಮೇಲಾಟ ಮತ್ತು ಇನ್ನೂ ಅನೇಕ ಸಂಗತಿಗಳಾಗಿವೆ, ಇದೊಂದು ರೀತಿಯಿಂದ ಕನ್ನಡ ವಿಶ್ವವಿದ್ಯಾಲಯವು “ಜಾನಪದ ಅಧ್ಯಯನ” ಕ್ಕೆ ಕೊಟ್ಟ ವಿಶಿಷ್ಠ ಕೊಡುಗೆ ಎಂದು ಹೇಳಬಹುದು. ಅನೇಕ ಸಮ್ಮೇಳನಗಳಲ್ಲಿಯೂ ಪಾಲ್ಗೊಂಡು ವಿದ್ವತ್ ಪೂರ್ಣ ಲೇಖನಗಳನ್ನು ಮಂಡಿಸಿದ್ದಾರೆ. ಇತ್ತೀಚಿನ ಕೃತಿ ಹಲಸಂಗಿ ಗೆಳೆಯರು, ಉಪಯುಕ್ತವಾದ ಕೃತಿ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಮುಂಬೈ ಕರ್ನಾಟಕ ಸಂಘದ ಭಾಷಾ ಬಾಂಧವ್ಯದ ವರದರಾಜ ಆದ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ೨೦೦೧ ರಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ. ಎಂ. ಎನ್. ವಾಲಿ

ಮಲ್ಲಿಕಾರ್ಜುನ ನಿಂಗಪ್ಪ ವಾಲಿ ಇವರು ಇಂಡಿ ತಾಲೂಕಿನ ಸಾಲೋಟಗಿಯಲ್ಲಿ ೧೦.೦೬.೧೯೩೫ ರಲ್ಲಿ ಜನಿಸಿದರು. ‘ಸಾಹಿತ್ಯ ಕ್ಷೇತ್ರದಲ್ಲಿ ಎಂ. ಎನ್. ವಾಲಿ ಎಂದೇ ಪ್ರಸಿದ್ಧಿ ಪಡೆದವರು. ಜನಪದ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಜನಪದ ಸಾಹಿತ್ಯದಲ್ಲಿ ನೀತಿ (೧೯೭೮) ಜನಪದ ಜೀವನ ತರಂಗಗಳು (೧೯೮೨ ಕನ್ನಡ ಸಾಹಿತ್ಯ ಪರಿಷತ್ ಬೆಂಗಳೂರು) ಜನಪದ ಗೀತೆಗೆ ಸಂಬಂಧಿಸಿದೆ. ಇದು ವಿಜಾಪುರ ಬೆಳಗಾಂವಿ ಜಿಲ್ಲೆಗಳಲ್ಲಿ ಕಲೆ ಹಾಕಿದ ಹಾಡಾಗಿದೆ. ಜನಪದ ಜೀವನದಲ್ಲಿ ಕಂಡು ಬರುವ ಬಂಧು ಬಳಗಗಳ ಸಂಬಂಧ, ಕಾಯಕ ಪಶು ಸಂಪತ್ತು, ಅನುರಾಗ, ಸಂವಾದ, ಚಾತುರ್ಯ ಅನುಭವ, ಹಾಸ್ಯ, ನೀತಿ, ಪುರಾಣ, ಇತಿಹಾಸ ಇತ್ಯಾದಿಗಳ ವಿಚಾರ ಈ ಗೀತೆಗಳಲ್ಲಿದೆ. ಸಿರಿಗನ್ನಡ ಒಡಪು (೧೯೮೫) ಜಾನಪದ ಒಗಟುಗಳು (೧೯೮೯) ಹಬ್ಬಗಳ ಜನಪದ ಹಾಡುಗಳು (೧೯೮೬ ಪ್ರಸಾರಾಂಗ ಕ.ವಿ.ವಿ. ಧಾರವಾಡ) ಹಬ್ಬಗಳಿಗೆ ಸಂಬಂಧಿಸಿದ ಜಾನಪದ ಹಾಡುಗಳನ್ನು ಒಳಗೊಂಡಿದೆ. ಜನಪದ ಸಾಹಿತ್ಯದ ನೀತಿ (೧೯೭೮ ಪ್ರಸಾರಾಂಗ ಕ.ವಿ.ವಿ. ಧಾರವಾಡ) ಉಪನ್ಯಾಸ ಮಾಲೆಯಲ್ಲಿ ಪ್ರಕಟವಾದ ಜನಪದ ಸಾಹಿತ್ಯದಲ್ಲಿ ನೀತಿಯ ಅಂಶಗಳನ್ನು ಒಳಗೊಂಡ ಕೃತಿ. ಲಾವಣಿ ಸಂಗ್ರಹ ಶರಣ ಸ್ಮೃತಿ (೧೯೮೮) ಜಾನಪದ ಜೀವಾಳ (೧೯೯೩) ‘ದುಂಡು ಮಲ್ಲಿಗೆ ಹೂವ ಬುಟ್ಟಿಲಿ ಬಂದಾವ (೧೯೯೫)’ ಸಿಂಪಿ ಲಿಂಗಣ್ಣನವರ ಜೀವನ ಹಾಗೂ ಸಾಹಿತ್ಯ ಕುರಿತು ಮಹಾಪ್ರಬಂಧ ಬರೆದಿದ್ದಾರೆ. (೧೯೯೦ ಭುವನೇಶ್ವರಿ ಪ್ರಕಾಶನ ವಿಜಾಪುರ) ಡಾ. ಸಿಂಪಿ ಲಿಂಗಣ್ಣ ಜೀವನ ಸಾಧನೆ (೧೯೯೪ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು) ಸಿಂಪಿ ಲಿಂಗಣ್ಣ ಅವರ ಜನನ, ಬಾಲ್ಯ, ಅವರ ಬದುಕು, ಸಾಧನೆ ಸಿದ್ಧಿಯನ್ನು ಕುರಿತು ಪುಸ್ತಿಕೆ ‘ದುಂಡು ಮಲ್ಲಿಗೆ ಹೂವ ಬುಟ್ಟಿಲಿ ಬಂದಾವ’ (ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು ೧೯೯೫) ‘ನಮ್ಮ ಒಕ್ಕಲಿಗರ ನಂಬಿಕೆಗಳು’ (ಕ. ವಿ. ವಿ. ಉಪನ್ಯಾಸ ಗ್ರಂಥ ೧೯೯೬) ತಮ್ಮ ಸ್ವಂತ ಭುವನೇಶ್ವರಿ ಪ್ರಕಾಶನದಿಂದ ಇಲ್ಲಿಯವರೆಗೆ ೧೫ ಕೃತಿಗಳನ್ನು ಪ್ರಕಟಿಸಿದ್ದಾರೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಬಂಧಗಳು ಪ್ರಕಟಗೊಂಡಿವೆ. ವಿವಿಧ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ವಿದ್ವತ್ ಪೂರ್ಣವಾದ ಪ್ರಬಂಧಗಳನ್ನು ಮಂಡಿಸಿದ್ದಾರೆ. ಹಲವಾರು ಕಡೆ ಸನ್ಮಾನ ಪ್ರಶಸ್ತಿಗಳು ಬಂದಿವೆ. ೧೯೯೯ ರಲ್ಲಿ ಜಾನಪದ ತಜ್ಞ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.

ಡಾ. ಮ. ಗು. ಬಿರಾದಾರ

ಮಲ್ಲನಗೌಡ ಬಿರಾದಾರ ಇವರು ವಿಜಾಪುರ ಜಿಲ್ಲೆ ಬಬಲೇಶ್ವರದಲ್ಲಿ ೧೫.೩.೧೯೩೩ ರಲ್ಲಿ ಜನಿಸಿದರು. “ಮಗು” ಕಾವ್ಯನಾಮದಿಂದ ಪ್ರಸಿದ್ಧರಾದ ಇವರು ಹಳ್ಳಿಗಾಡಿನ ವಾತಾವರಣದಲ್ಲೇ ಬೆಳೆದುದರಿಂದ ಗ್ರಾಮೀಣ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾದವರು. ಈ ಕಾರಣದಿಂದ ಜಾನಪದ ಕ್ಷೇತ್ರದಲ್ಲಿ ಮಹತ್ತರ ಸೇವೆಯನ್ನು ಮಾಡಿದ್ದಾರೆ. ಪ್ರೊ. ಕುಂದಣಗಾರ ಇವರ ಮಾರ್ಗದರ್ಶನದಲ್ಲಿ “ರತ್ನಾಕರ ವರ್ಣಿ” ವಿಷಯ ಕುರಿತು ಮಹಾಪ್ರಬಂಧವನ್ನು ಬರೆದಿದ್ದಾರೆ. ಜಾನಪದ ಸಮಾಲೋಕನ ಜಾನಪದ ಜೀವಾಳ (೧೯೮೭ ಪುಸ್ತಕ ಅಕಾಡೆಮಿ ಕಲಬುರ್ಗಿ) ಇದರಲ್ಲಿ ಒಟ್ಟು ೧೦ ಸಂಶೋಧನ ಲೇಖನಗಳನ್ನು ಒಳಗೊಂಡಿವೆ. ಸಾಗರ ಸಿಂಪಿ (೧೯೯೦ ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು) ಇದಕ್ಕೆ ಸಂಬಂಧಿಸಿದಂತೆ ಅವರ ಬದುಕು ಬರಹಗಳ ವಿಹಂಗಮ ನೋಟವನ್ನು ನೀಡಬಲ್ಲ ಕೃತಿಯಾಗಿದೆ. ಇದರಲ್ಲಿ ೯ ಅಧ್ಯಾಯಗಳಾಗಿ ವಿಂಗಡಿಸಿದ್ದಾರೆ. ಒಟ್ಟಾರೆ ಅವರ ಸಾಹಿತ್ಯ ಬರಹಗಳ ಬಗ್ಗೆ ನೋಟ ಬೀರಿದ್ದಾರೆ. ಮೆಟ್ನಳ್ಳಿ ಹಸನ ಸಾಹೇಬರ ತತ್ವ ಪದಗಳು ‘ಯಯಾತಿ’ ಡಾ. ಲಠ್ಠೆಯವರೊಂದಿಗೆ (೧೯೯೧ ಪ್ರಸಾರಾಂಗ, ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬುರ್ಗಾ) ಯಕ್ಷಗಾನಕ್ಕೆ ಸಂಬಂಧಿಸಿದ ಪ್ರಕಾರಗಳಲ್ಲಿರುವ ದೊಡ್ಡಾಟಗಳ ಕೃತಿ. ಇವು ಇವರ ಪ್ರಮುಖ ಜಾನಪದ ಕೃತಿಗಳು. ಹರದೇಶಿ ನಾಗೇಶಿ ಮತ್ತು ನೂರೆಂಟು ಕಥೆಗಳು ಇತರರೊಂದಿಗೆ ಸಂಪಾದಿಸಲ್ಪಟ್ಟ ಕೃತಿಗಳು. ಇವರ ೧೧೦ಕ್ಕೂ ಹೆಚ್ಚು ಸಂಶೋಧನ ಲೇಖನಗಳು ಪ್ರಕಟಗೊಂಡಿವೆ. ಅದರಲ್ಲಿ ಜಾನಪದಕ್ಕೆ ಸಂಬಂಧಪಟ್ಟ ಲೇಖನಗಳು ಅಧಿಕವಾಗಿವೆ. ಇತ್ತೀಚೆಗೆ ‘ಹೋಳಿ ಹಾಡು’ಗಳು ಎನ್ನುವ ಇವರ ಕೃತಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಕಟಗೊಂಡಿದೆ.

ಡಾ. ಮ. ಗು. ಬಿರಾದಾರ ಅವರು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕ ಅದರ ಮುಖ್ಯಸ್ಥರಾಗಿ ಮತ್ತು ಪ್ರಸಾರಾಂಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಗೋಕಾಕ ಚಳುವಳಿಯಲ್ಲಿ ಮುಖ್ಯಪಾತ್ರ, ಪುಸ್ತಕ ಅಕಾಡೆಮಿಯ ಅಧ್ಯಕ್ಷ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯ, ಇವರ ಜಾನಪದ ಸೇವೆಯನ್ನು ಗಮನಿಸಿ ೧೯೯೪ ರಲ್ಲಿ ಮುಂಡರಗಿಯಲ್ಲಿ ಜರುಗಿದ ಅಖಿಲ ಕರ್ನಾಟಕ ೨೩ನೇ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು, ಅವರು ಜಾನಪದ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಕೊಡುಗೆಗೆ ಸಂದ ಗೌರವ ಎಂದು ಹೇಳಬಹುದು.

ಎ. ಕೆ. ರಾಮೇಶ್ವರ

ಇವರು ೨.೫.೧೯೩೪ ರಂದು ದದಾಮಹಟ್ಟಿಯಲ್ಲಿ (ವಿಜಾಪುರ ತಾಲೂಕ) ಜನಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಆರಂಭಿಸಿ ನಿವೃತ್ತಿಯಾಗಿದ್ದಾರೆ. ಗ್ರಾಮೀಣ ಪರಿಸರದಲ್ಲಿ ಜನಿಸಿದ ಇವರಿಗೆ ಗ್ರಾಮೀಣ ಸಾಹಿತ್ಯದ ಗೀಳು ಸಹಜವಾಗಿಯೇ ಆಕರ್ಷಿಸಿತ್ತು. ಜನಪದ ಕಲೆ, ಸಾಹಿತ್ಯ ಸಂಪ್ರದಾಯ, ನಂಬಿಕೆ ಮುಂತಾದ ಉತ್ತಮವಾದ ಐದಾರು ಜನಪದ ಕೃತಿಗಳನ್ನು ಪ್ರಕಟಿಸಿದ್ದಾರೆ.

ಹಣಚಿ ಬಟ್ಟಿನ ಕೈ (೧೯೮೪) ಇದರಲ್ಲಿ ಜಾನಪದ ವಿಷಯಕ್ಕೆ ಸಂಬಂಧಿಸಿದ ಎಂಟು ಲೇಖನಗಳಿವೆ. ಅಚ್ಚಮಲ್ಲಿಗೆ ಹೂ (೧೯೯೬) ಇದರಲ್ಲಿ ಗುಲಬರ್ಗಾ ಜಿಲ್ಲೆಯ ಜನಪದ ತ್ರಿಪದಿಗಳಿವೆ, ಕಸವ ಹೊಡೆದ ಕೈ ಕಸ್ತೂರಿ ನಾತಾವ (೧೯೮೮ ಬಸವಂತಪ್ಪ ಪಟ್ಟಣ ಕವಿರಾಜ ಮಾರ್ಗ ಪ್ರಕಾಶನ ಗುಲಬುರ್ಗಾ) ಗೆಜ್ಜೆ ನುಡದಾವ ಗಿಲಿಗಿಲಿ (೧೯೮೯) ಜಾನಪದ ಸಾಹಿತ್ಯ ಕುರಿತು ವಿಚಾರ ಸಂಕಿರಣ ಕುರಿತಾಗಿದ್ದು ಕ್ಷೇತ್ರಕಾರ್ಯಕ್ಕೆ ಸಂಬಂಧಿಸಿದುದಾಗಿದೆ. ಶ್ರೀ ರಾಮೇಶ್ವರ ಅವರು ಜನಪದ ಲೇಖನಗಳನ್ನು ಬರೆದಿದ್ದಾರೆ. ವಿಶೇಷವಾಗಿ ಜಾನಪದ ಕ್ಷೇತ್ರ ಕಾರ್ಯಕ್ಕೆ ಗುಲಬರ್ಗಾ ಜಿಲ್ಲೆ ಆಯ್ಕೆ ಮಾಡಿಕೊಂಡಿದ್ದರು. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸರಳ ಸಜ್ಜನಿಕೆಯ ಶಿಕ್ಷಕರಾಗಿದ್ದರಿಂದ ಇವರಿಗೆ ರಾಜ್ಯಮಟ್ಟ, ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪ್ರೊ. ಬಿ. ಎಂ. ತೆಳಗಡಿಯವರು

ಜ್ಯೋತಿಯೇ ಆಗು ಜಗಕ್ಕೆಲ್ಲ (೧೯೭೯) ಜಾನಪದ ಸಾಹಿತ್ಯ ದರ್ಶನ ಭಾಗ – ೬ ರಲ್ಲಿ ‘ಹೆಳವರು’ ಕುರಿತ ಲೇಖನ ಪ್ರಕಟವಾಗಿದೆ. ಜಾನಪದಕ್ಕೆ ಸಂಬಂಧಿಸಿದ ಅನೇಕ ಸಂಶೋಧನಾತ್ಮಕ ಲೇಖನಗಳನ್ನು ಬರೆದಿದ್ದಾರೆ.

ಡಾ. ಆರ್. ಸಿ. ಮುದ್ದೇಬಿಹಾಳ

ವಿಜಾಪುರದ ಬಿ. ಎಲ್. ಡಿ. ಇ. ಸಂಸ್ಥೆಯ ಹಾಯಸ್ಕೂಲದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಅವರು ಜನಪದ ವೈದ್ಯಕೀಯ ರಂಗಕ್ಕೂ ಕೂಡ ಸೇವೆ ಸಲ್ಲಿಸಿದ್ದಾರೆ. ಜಾನಪದ ವೈದ್ಯ (೧೯೮೭) ಮನೆಯ ಮದ್ದು ಗಿಡ ಬಡವರ ವೈದ್ಯ, ಔಷಧಿ ಜಾನಪದ ಸಂಜೀವಿನಿ, ನಮ್ಮೂರ ವೈದ್ಯ, ಲೇಪನ ಚಿಕಿತ್ಸೆ, ವನೌಷಧಿ, ವೈದ್ಯಬೋಧಕ ಮುಂತಾದ ಆಯುರ್ವೇದಕ್ಕೆ ಸಂಬಂಧಪಟ್ಟಂತೆ ಕೃತಿಗಳನ್ನು ಬರೆದಿದ್ದಾರೆ. ಇತ್ತೀಚೆಗೆ ಸಂಗೊಳ್ಳಿ ರಾಯಣ್ಣನ ಕುರಿತು ಮಹಾಕಾವ್ಯ ಹೊರತಂದಿದ್ದಾರೆ.

ಡಾ. ಅರವಿಂದ ಮಾಲಗತ್ತಿ

ಅರವಿಂದ ಯಲ್ಲಪ್ಪ ಮಾಲಗತ್ತಿ ಇವರು ಮುದ್ದೇಬಿಹಾಳದವರು. ಜನಪದ ಸಾಹಿತ್ಯ ಅಧ್ಯಯನದ ಬಗ್ಗೆ ವಿದ್ಯಾರ್ಥಿ ದೆಸೆಯಿಂದಲೇ ವಿಶೇಷ ಆಸಕ್ತಿ, ಅದಕ್ಕೆ ಅವರ ‘ಅಣೀ ಪೀಣಿ (೧೯೮೨, ಶೈಲ ಪ್ರಕಾಶನ ಮುದ್ದೇಬಿಹಾಳದಿಂದ ಪ್ರಕಟವಾಗಿದೆ) ದೀಪಾವಳಿ ಸಂದರ್ಭದಲ್ಲಿ ದನಕರುಗಳಿಗೆ ದೀಪ ಬೆಳಗುವ ಅಣೀ ಪೀಣಿ ಸಂಪ್ರದಾಯ ಪದಗಳನ್ನು ಒಳಗೊಂಡ ಕೃತಿ. ಗೋಮಾಳದಿಂದ ಗಂಗೋತ್ರಿಗೆ (೧೯೯೩ ಶೈಲ ಪ್ರಕಾಶನ) ಮಂಗಳ ಗಂಗೋತ್ರಿ ವಿ. ವಿ. ದ ಬಗ್ಗೆ ಹಾಗೂ ಕೊಣಾಜೆ ಎಂಬ ಊರಿನ ಐತಿಹಾಸಿಕ ಹಿನ್ನೆಲೆ ಒಳಗೊಂಡಂತೆ ೧೫ ಅಧ್ಯಯನಾತ್ಮಕ ಪ್ರಬಂಧಗಳೊಳಗೊಂಡಿವೆ. ಜಾನಪದ ವ್ಯಾಸಂಗ (೧೮೮೫ ಶೈಲ ಪ್ರಕಾಶನ ಮುದ್ದೇಬಿಹಾಳ) ಜಾನಪದಕ್ಕೆ ಸಂಬಂಧಿಸಿದ ೯ ಅಧ್ಯಯನಗಳ ಕೃತಿ. ಜಾನಪದ ವ್ಯಾಖ್ಯಾನ, ಜಾನಪದ ಶೋಧ, ಉತ್ತರ ಕರ್ನಾಟಕದ ಜನಪದ ಆಟಗಳು (ಮಹಾಪ್ರಬಂಧ) ಜನಪದ ಸೈದ್ಧಾಂತಿಕ ಪ್ರಜ್ಞೆ, ಮತ್ತು ದೇಶಿವಾದ (೧೯೯೮ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಬೆಂಗಳೂರು) ಈ ಕೃತಿಯಲ್ಲಿನ ಲೇಖನಗಳು ವಿಚಾರ ಸಂಕಿರಣದಲ್ಲಿ ಮಂಡಿಸಲಾದ ಲೇಖನಗಳಾಗಿವೆ. ಜಾನಪದ ಸೈದ್ಧಾಂತಿಕ ಪ್ರಜ್ಞೆ, ಜಾನಪದ ಅರ್ಥರೂಪ ದೇಶೀವಾದದ ನೆಲೆಗಳು ಇನ್ನೂ ಮುಂತಾದವುಗಳ ಬಗ್ಗೆ ಚರ್ಚಿಸಿದ್ದಾರೆ. ಪುರಾಣ ಜಾನಪದ ಮತ್ತು ದೇಶೀವಾದ (೧೯೯೯ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು) ಅಖಿಲ ಭಾರತ ೬೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಬಿಡುಗಡೆಯಾದ ಕೃತಿಯಾಗಿದೆ. ಇದರಲ್ಲಿ ೯ ಲೇಖನಗಳಿದ್ದು ಹೆಚ್ಚು ಲೇಖನಗಳು ದೇಶಿವಾದದ ನೆಲೆಯಲ್ಲಿ ರೂಪಗೊಂಡ ಜಾನಪದಕ್ಕೆ ಸಂಬಂಧಪಟ್ಟ ಕೃತಿಗಳಾಗಿವೆ. ಹಲವಾರು ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ವಿದ್ವತ್ ಪೂರ್ಣವಾದ ಪ್ರಬಂಧಗಳನ್ನು ಮಂಡಿಸಿದ್ದಾರೆ. ಸಧ್ಯ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸಾರಾಂಗದ ನಿರ್ದೇಶಕರಾಗಿಯೂ ಕಾರ್ಯ ಮಾಡಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರೂ ಆಗಿದ್ದರು.

ಡಾ. ಬಿ. ಬಿ. ಬಿರಾದಾರ

೧೮.೪.೧೯೪೯ ರಲ್ಲಿ ವಿಜಾಪುರ ತಾಲೂಕಿನ ಕತ್ನಳ್ಳಿಯಲ್ಲಿ ಜನಿಸಿದ ಬಿ. ಬಿ. ಬಿರಾದಾರ ಇವರು ‘ಉತ್ತರ ಕರ್ನಾಟಕದ ಹಂತಿ ಒಂದು ಜಾನಪದ ಅಧ್ಯಯನ’ ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ೧೯೯೨ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ. ಹಾಗೇ ಜನಪದದ ಬಗ್ಗೆ ೮ ಕೃತಿಗಳನ್ನು ಪ್ರಕಟಿಸಿದ್ದಾರೆ. ಬೆತ್ತಲೆ ಗಾದೆಗಳು (೧೯೮೧) ಬೆತ್ತಲೆ ಹೋಳಿ ಹಾಡುಗಳು (೧೯೮೩ ಸಮಾಜ ಪುಸ್ತಕಾಲಯ, ಧಾರವಾಡ) ಆರು ಅಧ್ಯಾಯಗಳನ್ನೊಳಗೊಂಡ ಬೆತ್ತಲೆ ಹೋಳಿ ಹಾಡುಗಳ ಸಂಗ್ರಹ ಇದರಲ್ಲಿವೆ. ಜಾನಪದ ಜಾಣ್ಮೆ (೧೯೮೨) ಜಾನಪದ ನಿಧಿ (೧೯೯೬) ಜಾನಪದ ಸಿರಿ (೧೯೯೭) ‘ಹೋಳಿ’ ಜಾನಪದ ನಾಟಕ, ಶೃಂಗಾರ ಲಾವಣಿಗಳು (೧೯೯೮ ಜ್ಯೋತಿ ಪ್ರಕಾಶನ, ಧಾರವಾಡ) ಇದು ೪೬ ಶೃಂಗಾರ ಲಾವಣಿಗಳನ್ನು ಒಳಗೊಂಡ ಸಂಗ್ರಹ ಕೃತಿ. ಸಹಜ ಶೃಂಗಾರ ಲಾವಣಿಗಳು, ವಿಪ್ರಲಂಭ ಶೃಂಗಾರ ಲಾವಣಿಗಳು, ಸಂಭೋಗ ಶೃಂಗಾರ ಲಾವಣಿಗಳು ಇವೆ. ಜನಪದ ಗಣಿತ (೨೦೦೦) ಅಲ್ಲದೆ ೩೦ಕ್ಕೂ ಹೆಚ್ಚು ಜಾನಪದ ಸಂಶೋಧನ ಲೆಖನಗಳನ್ನು ಹೊರತಂದಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಇಲ್ಲಿಯವರೆಗೆ ೩ ಜನ ಪಿಎಚ್.ಡಿ ಪದವಿ ಹಾಗೂ ೭ ಜನ ಎಂಫಿಲ್ ಪದವಿ ಪಡೆದಿದ್ದಾರೆ. ಈಗ ಕರ್ನಾಟಕ ವಿಶ್ವವಿದ್ಯಾಲಯ ಡಾ. ಆರ್. ಸಿ. ಹಿರೇಮಠ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ. ಹರಿಲಾಲ ಪವಾರ

ಇಂಡಿ ತಾಲೂಕಿನ ಅಥರ್ಗಾ ಸಮೀಪದ ರಾಜನಾಳ ತಾಂಡಾದಲ್ಲಿ ೩.೫.೧೯೬೧ ರಲ್ಲಿ ಜನಿಸಿದ ಹರಿಲಾಲ ಖೀರು ಪವಾರ ಅವರು ತಾಂಡಾ ಸಂಸ್ಕೃತಿಯ ಮಡಿಲಲ್ಲಿ ಬೆಳೆದು ತಮ್ಮ ಜನ ಸಮುದಾಯದ ನೋವು ನಲಿವುಗಳನ್ನು ಕಣ್ಣಾರೆ ಕಂಡು ಚೆನ್ನಾಗಿ ಬಲ್ಲರು. ರಾಜನಾಳ ತಾಂಡಾ, ವಿಜಾಪುರ, ಮುಧೋಳ ಹಾಗೂ ಚಡಚಣದಲ್ಲಿ ಬಿ. ಎ. ವರೆಗೆ ಶಿಕ್ಷಣವನ್ನು ಕಲಿತರು. ಉನ್ನತ ವ್ಯಾಸಂಗಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಬಂದು ಕನ್ನಡ ಅಧ್ಯಯನ ಪೀಠದಲ್ಲಿ ಎಂ. ಎ. ಜನಪದ ಸಾಹಿತ್ಯ ೧೯೮೬ ರಲ್ಲಿ ಗಳಿಸಿದರು. “ಕರ್ನಾಟಕದ ಹೆಳವರು ಒಂದು ಜಾನಪದೀಯ ಅಧ್ಯಯನ” ವಿಷಯ ಕುರಿತು (೧೯೯೧) ಡಾಕ್ಟರೇಟ ಪದವಿಯನ್ನು ಪಡೆದುಕೊಂಡರು. ಈ ಮಹಾಪ್ರಬಂಧದ ವ್ಯಾಪಕವಾದ ಕ್ಷೇತ್ರ ಕಾರ್ಯ ಅನೇಕರ ಮೆಚ್ಚುಗೆ ಪಡೆದುಕೊಂಡಿದೆ. ಈ ಮಹಾಪ್ರಬಂಧವು ೧೯೯೫ ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರದಿಂದ ಪ್ರಕಟವಾಯಿತು. ಹೆಳವರ ಸಂಸ್ಕೃತಿ (೧೯೯೩ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು) ಹೆಳವರ ಹಿನ್ನಲೆ ಆಚರಣೆಗಳು, ಜೀವನ ವಿಧಾನ ಮತ್ತು ಸಾಮಾಜಿಕ ವ್ಯವಸ್ಥೆ, ಭಾಷೆ, ಸಾಹಿತ್ಯ ಕಲೆ ಇತ್ಯಾದಿ ಒಟ್ಟು ೪ ಅಧ್ಯಾಯಗಳಾಗಿ ವಿಂಗಡಿಸಿದ್ದಾರೆ. ಹೆಳವರ ಸಂಸ್ಕೃತಿಯನ್ನು ಕುರಿತು ಒಟ್ಟಾರೆ ಅಭ್ಯಸಿಸುವುದಾಗಿದೆ. ಅನುಬಂಧದಲ್ಲಿ ಒಟ್ಟು ೬ ಹಾಡುಗಳಿವೆ. “ಲಂಬಾಣಿಗರಲ್ಲಿ ಮದುವೆ ಸಂಪ್ರದಾಯಗಳು” (೧೯೯೬ ಪ್ರಸಾರಾಂಗ ಕ.ವಿ.ವಿ. ಧಾರವಾಡ) ಉಪನ್ಯಾಸ ಮಾಲೆಯಲ್ಲಿ ಪ್ರಕಟವಾದ ಪುಸ್ತಿಕೆ. ಈ ಪುಸ್ತಿಕೆಯನ್ನು ಕುರಿತು ಡಾ. ಗಾಯತ್ರಿ ನಾವಡ ಅವರು ಹೇಳಿರುವ ಅಭಿಪ್ರಾಯ ಹೀಗಿದೆ. “ಸಮುದಾಯದ ಒಳಗಿನವರು ನಡೆಸಿದ ಶೋಧನೆಯಲ್ಲಿ ಸಾಮಾನ್ಯವಾಗಿ ದಟ್ಟವಾದ ಮಾಹಿತಿಗಳಿರುವುದು ಸಹಜ ಅಂತೆಯೇ ಈ ಪುಸ್ತಿಕೆಯಲ್ಲಿ ಲಂಬಾಣಿಗರ ಮದುವೆಯ ಒಂದೊಂದು ವಿಧಿ ವಿಧಾನವನ್ನೂ ವಿವರಿಸುವುದರಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಲಂಬಾಣಿ ಭಾಷೆಯ ಹಾಡುಗಳನ್ನು ನೀಡಿ ಕನ್ನಡ ಸಾರಾಂಶ ನೀಡಿರುವುದು ಕುತೂಹಲಕರವಾಗಿದೆ. ನಿಂತ ನೆಲದ ಸಂಸ್ಕೃತಿಗಿಂತ ಭಿನ್ನ ಚಹರೆಯನ್ನು ಸ್ಪಷ್ಟವಾಗಿ ಅವರ ಆಚರಣೆಗಳನ್ನು ಗುರುತಿಸಬಹುದು, ಸಂಸ್ಕೃತಿಯೊಂದು ಬದಲಾವಣೆಗೆ ಗುರಿಯಾಗದೆ ಮೂಲ ರೂಪದಲ್ಲೇ ಉಳಿಯಬೇಕೆನ್ನುವ “ಮೂಲದ ಕೆಲವು ಪಳೆಯುಳಿಕೆಗಳನ್ನು ಬಲು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿರುವುದು ಇವರ ಸಂಸ್ಕೃತಿ ಪೋಷಣೆಗೆ ಒಂದು ನಿದರ್ಶನವಾಗಿದೆ. ಆದರೆ ಇಂದಿನ ಆಧುನಿಕತೆಯ ದಿನಗಳಲ್ಲಿ ಇದು ಎಷ್ಟು ದಿನ ಮುಂದುವರಿಯುವುದೋ ಕಾಲವೇ ಉತ್ತರಿಸಬೇಕು”. ಎನ್ನುವ ಲೇಖಕರ ಧೋರಣೆ ಅವವಿಕಾಸವಾದೀ ಚಿಂತನೆಗೆ ಒಳ್ಳೆಯ ಉದಾಹರಣೆ. ಮಿಕ್ಕಂತೆ ನಿರೂಪಣೆ ಸರಳವಾಗಿದೆ. ನಿರ್ದಿಷ್ಟವಾಗಿದೆ. (ಜಾನಪದ ವರ್ಷ ೧೯೯೬ ಗಾಯತ್ರಿ ನಾವಡ) ಲಂಬಾಣಿಗರಲ್ಲಿ ‘ಹೋಳಿ ಹಬ್ಬ’ (೧೯೯೭ ಶಶಿ ಪ್ರಕಾಶನ ಧಾರವಾಡ) ಉತ್ತರ ಕರ್ನಾಟಕದ ಲಂಬಾಣಿಗರ ಹೋಳಿ ಹಬ್ಬದ ಸಂಕ್ಷಿಪ್ತ ಪರಿಚಯ ಇಲ್ಲಿದೆ. ಅನುಬಂಧದಲ್ಲಿ ಲಂಬಾಣಿಗರ ಹೋಳಿ ಹಬ್ಬದ ಹಾಡುಗಳಿವೆ. ‘ಡಕ್ಕಲಿಗರು’ (೧೯೯೭ ಪ್ರಸಾರಾಂಗ ಕ.ವಿ.ವಿ. ಧಾರವಾಡ) ‘ಸಂತ ಸೇವಾಲಾಲ’ (೧೯೯೮ ಗ್ರಾಮೀಣ ಸಾಹಿತ್ಯ ಮಾಲೆ, ಡಂಬಳ) ಲಂಬಾಣಿಗರ ಆರಾಧ್ಯ ದೈವ ಸೇವಾಲಾಲನನ್ನು ಕುರಿತ ಕೃತಿ. ಪ್ರಸ್ತಾವನೆ ಒಳಗೊಂಡಂತೆ ೫ ಅಧ್ಯಾಯಗಳನ್ನೊಳಗೊಂಡಿದೆ. (ಬಂಜಾರಾ) ಗೋತ್ರಗಳು (ಪ್ರೀತಮ್ ಪ್ರಕಾಶನ ಧಾರವಾಡ ೨೦೦೨) ‘ಗಾತೆ ಜಾವೋ ಬಂಜಾರಾ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಬುಡಕಟ್ಟು ಸಂಸ್ಕೃತಿಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿದ್ದಾರೆ. ಜಾನಪದ ಸಾಹಿತ್ಯ ದರ್ಶನ ಭಾಗ – ೨೧ (೧೯೯೮ ಪ್ರಸಾರಾಂಗ ಕ.ವಿ.ವಿ. ಧಾರವಾಡ) ಇದರಲ್ಲಿ “ಲಂಬಾಣಿಗರ ಉಡುಗೆ ತೊಡುಗೆಗಳು” ಮತ್ತು ಜಾನಪದ ಸಾಹಿತ್ಯ ದರ್ಶನ ಭಾಗ – ೨೩ (೧೯೯೯ ಪ್ರಸಾರಾಂಗ ಕ.ವಿ.ವಿ. ಧಾರವಾಡ) ಇದರಲ್ಲಿ “ಜನಪದ ನಂಬಿಕೆಗಳ ಹಿನ್ನೆಲೆಯಲ್ಲಿ “ಭೂಮಿ” ವಿಷಯ ಕುರಿತು ಪ್ರಬಂಧ ಪ್ರಕಟವಾಗಿದೆ. ಬೇರೆ ಬೇರೆ ನಿಯತಕಾಲಿಕೆ ಮತ್ತು ನಾಡಿನ ವಿದ್ವತ್ ಪತ್ರಿಕೆಗಳಲ್ಲಿ ೩೫ಕ್ಕೂ ಹೆಚ್ಚಿನ ಸಂಶೋಧನ ಲೇಖನಗಳು ಪ್ರಕಟಗೊಂಡಿವೆ. ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಬುಡಕಟ್ಟಿನವರನ್ನು ಕುರಿತು ಹಲವಾರು ಲೇಖನಗಳು ಪ್ರಕಟಗೊಂಡಿವೆ. ರಾಜ್ಯ ಮಟ್ಟದ ಮತ್ತು ಅಂತರ್ ರಾಷ್ಟ್ರ ಮಟ್ಟದ ವಿಚಾರ ಸಂಕಿರಣಗಳಲ್ಲಿ ಪಾಲ್ಗೊಂಡು ವಿದ್ವತ್ ಪೂರ್ಣ ಪ್ರಬಂಧಗಳನ್ನು ಮಂಡಿಸಿದ್ದಾರೆ. ವಿಶ್ವಕೋಶಗಳಲ್ಲಿಯೂ ಲೇಖನಗಳನ್ನು ಬರೆದಿದ್ದಾರೆ. ಕನ್ನಡ ಅಧ್ಯಾಪಕರಾಗಿ ಸೇವೆ ಆರಂಭಿಸಿದ ಇವರು ಸದ್ಯ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಜಗನ್ನಾಥ ಪವಾರ ಅವರ “ಗೊರೂರೊ ಗೀದ” (೧೯೬೯) ಲಂಬಾಣಿ ಭಜನೆಗಳನ್ನು ಒಳಗೊಂಡಂಥ ಕೃತಿ. ಇದರಲ್ಲಿ ೫ ಗುರುಸ್ತುತಿ ಮತ್ತು ೧೦ ಲಂಬಾಣಿ ಹಾಡುಗಳನ್ನು ಒಳಗೊಂಡಿವೆ. ಡಾ. ಶೈಲಜಾ ಹಿರೇಮಠರ ಪಾತರದವರು’ (೧೯೯೯ ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ) ಪಾತರದವರು ಎಂಬ ಜನಾಂಗವನ್ನು ಅಧ್ಯಯನಕ್ಕೆ ಒಳಪಡಿಸಿದ ಕೃತಿ. ಆರು ಅಧ್ಯಾಯಗಳನ್ನು ಒಳಗೊಂಡಿದ್ದು “ಪಾತರದವರ” ಉಗಮ, ವಿಕಾಸ, ಬೆಳವಣಿಗೆ, ಕುಟುಂಬ ಜೀವನ ಸಾಂಸ್ಕೃತಿಕ ಸ್ಥಿತ್ಯಂತರ ಮುಂತಾದವುಗಳ ಬಗ್ಗೆ ಸಂಶೋಧನೆ ಮಾಡಲಾಗಿದೆ. ಶ್ರೀ ಬಾಪುಗೌಡ ಪಾಟೀಲರ ‘ಕಟ್ಟಾಣಿ ಸತಿಯೆಂದು ಕರದೇನ’ (೧೯೮೨ ಕವಿತಾ ಪ್ರಕಾಶನ ತಾಳಿಕೋಟೆ) ಹಳ್ಳಿಯ ಬದುಕಿನ ಪರಿಸರದ ಹಿನ್ನೆಲೆಯಲ್ಲಿ ರಚಿಸಿದ ಸಂಕಲನವಾಗಿದೆ. ಪ್ರಸ್ತುತ ಇದರಲ್ಲಿ ಒಟ್ಟು ೩೫ ಭಾಗಗಳಿಂದ ಆವೃತ್ತವಾಗಿದ್ದು ಇದು ಗಂಡು – ಹೆಣ್ಣಿನ ಪ್ರೇಮವನ್ನು ಚಿತ್ರಿಸುವ ಪ್ರೇಮ ಸಂಕಲನವಾಗಿದೆ. ಇದರಲ್ಲಿ ಒಟ್ಟು ೩೫ ಭಾಗಗಳಿಂದ ಆವೃತ್ತವಾಗಿದೆ. ಶ್ರೀ ಶಂಕರಾನಂದ ಉತ್ಲಾಸರ ಅವರ ಜನಪದ ಒಡಪುಗಳು (೧೯೮೧ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು) ೧೪೦ ಜನಪದ ಒಡಪುಗಳನ್ನು ಒಳಗೊಂಡ ಕೃತಿ. ಡಾ. ಮಲ್ಲಿಕಾರ್ಜುನ ಸಿಂದಗಿಯವರು ಶಿಶುನಾಳ ಶರೀಫ’ ಕುರಿತು ಮಹಾಪ್ರಬಂಧ ಬರೆದು ಪ್ರಕಟಿಸಿದ್ದಾರೆ.

ಡಾ. ಶಂಕರಗೌಡ ಬಿರಾದಾರ ಇವರು ವಿಜಾಪುರ ಜಿಲ್ಲೆ ಇಂಡಿ, ಸಿಂದಗಿ, ಬ. ಬಾಗೇವಾಡಿ, ಜಮಖಂಡಿ ಮುಂತಾದ ತಾಲೂಕುಗಳಲ್ಲಿ ಲಾವಣಿ ಸಾಹಿತ್ಯದ ಬಗ್ಗೆ ಕ್ಷೇತ್ರಾಧ್ಯಯನ ಕೈಗೊಂಡು “ವಿಜಾಪುರ ಜಿಲ್ಲೆಯ ಲಾವಣಿ ಸಾಹಿತ್ಯ” ಕುರಿತು ಬರೆದ ಲೇಖನವು ‘ಜಾನಪದ ಜಗತ್ತು’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ‘ಲೈಂಗಿಕ ನೆಲೆ ಜಾನಪದದಲ್ಲಿ’ (೧೯೯೨) ಹಣೀಬಾರ, ಹಳ್ಳಿಯ ಮದ್ದು ಮುಂತಾದ ಜಾನಪದ ಲೇಖನಗಳನ್ನು ಬರೆದಿದ್ದಾರೆ.

ಡಾ. ಶಾಂತಾ ಇಮ್ರಾಪುರ

ಶಾಂತಾ ಇಮ್ರಾಪುರ ಅವರು ಮುದ್ದೇಬಿಹಾಳದಲ್ಲಿ ೯.೬.೧೯೫೪ ರಲ್ಲಿ ಜನಿಸಿದ್ದಾರೆ. ಕನ್ನಡ ಎಂ. ಎ. ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ. ಅಕ್ಕಮಹಾದೇವಿ ಜೀವನ – ಸಾಹಿತ್ಯ – ವ್ಯಕ್ತಿತ್ವ ಕುರಿತು ಪಿಎಚ್.ಡಿ ಪ್ರಬಂಧ (೨೦೦೧ ರಲ್ಲಿ ಮೂರು ಸಾವಿರ ಮಠ ಹುಬ್ಬಳ್ಳಿಯಿಂದ ಪ್ರಕಟವಾಗಿದೆ). ಜನಪದ ತ್ರಿಪದಿಗಳು (೧೯೭೯), ಜನಪದ ಒಡಪುಗಳು (೧೯೭೯) ಜನಪದ ವೈದ್ಯ (೧೯೮೦) ಈ ಮೂರು ಗ್ರಂಥಗಳು ಚೇತನಾ ಪ್ರಕಾಶನ ಧಾರವಾಡದಿಂದ ಪ್ರಕಟಗೊಂಡಿವೆ. ಮಹಿಳೆ ಸಾಹಿತ್ಯ ಸಂಸ್ಕೃತಿ, ೨೦೦೧ರ ಇತ್ತೀಚಿನ ಕೃತಿ. ಇದರಲ್ಲಿ ಒಟ್ಟು ೧೨ ಲೇಖನಗಳಿವೆ. ಜಾನಪದಕ್ಕೆ ಸಂಬಂಧಪಟ್ಟಂತೆ ಮಹಿಳಾ ಜಾನಪದ, ಕೆರೆಗೆ ಹಾರದ ಆಶಯದ ಸುತ್ತ, ಜನಪದ ನಂಬಿಕೆಗಳು ಮತ್ತು ಮಹಿಳೆ, ಜನಪದ ಸಾಹಿತ್ಯದಲ್ಲಿ ಹೆಣ್ಣು ಮತ್ತು ಮಹಿಳೆ, ಸಾವಿರದ ವರಹ ಕೊಟ್ಟರೂ ಸಿಗಲಾರದ ಸತಿ ನೀನು ಮುಂತಾದ ಲೇಖನಗಳಿವೆ. ಜಾನಪದ ವೈಜ್ಞಾನಿಕ ಅಧ್ಯಯನದಲ್ಲಿ ಸ್ತ್ರೀವಾದಿ ತಾತ್ವಿಕತೆಯ ಹೊಸ ಬೆಳಕು ಸಹಕಾರಿಯಾಗುತ್ತದೆಂಬ ದೃಷ್ಟಿಕೋನ ಪ್ರಧಾನವಾಗಿ ಈ ಲೇಖನಗಳಲ್ಲಿವೆ. ಡಾ. ಶಾಂತಾ ಇಮ್ರಾಪುರ ಅವರ ಒಟ್ಟು ಹನ್ನೊಂದು ಕೃತಿಗಳು ಪ್ರಕಟಗೊಂಡಿವೆ. ಸಧ್ಯ ಇವರು ಕರ್ನಾಟಕ ವಿಶ್ವವಿದ್ಯಾಲಯ, ಕನ್ನಡ ಅಧ್ಯಯನ ಪೀಠದಲ್ಲಿ ಪ್ರವಾಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರೊ. ಚಂದ್ರಗೌಡ ಕುಲಕರ್ಣಿ

ಕಡದಳ್ಳಿಯಲ್ಲಿ ೨೨.೫.೧೯೫೫ ರಲ್ಲಿ ಜನಿಸಿದ ಚಂದ್ರಗೌಡ ಶಿವನಗೌಡ ಕುಲಕರ್ಣಿ ಅವರು ಎಂ.ಎ. ಪದವಿಯನ್ನು ಪಡೆದುಕೊಂಡಿದ್ದಾರೆ. ಚುಟುಕು, ಮಕ್ಕಳ ಕವಿತೆಗಳನ್ನು ಬರೆದಿದ್ದಾರೆ. “ಒಗಟು ಬಿಡಿಸೊ ಜಾಣ” ಇವರ ಜನಪದ ಕೃತಿ. ಅಲ್ಲದೆ ಬೇರೆ ಲೇಖನಗಳನ್ನು ಬರೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೯೦ ರಲ್ಲಿ ಪಡೆದಿದ್ದಾರೆ. ಹಲವಾರು ಸಂಘಟನೆಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಕಾರ್ಯ ಮಾಡುತ್ತಿದ್ದಾರೆ.

ಜಂಬುನಾಥ ಕಂಚ್ಯಾಣಿ

ಶ್ರೀಯುತ ಕಂಚ್ಯಾಣಿ ಅವರು ೧.೬.೧೯೫೩ ರಲ್ಲಿ ಜನಿಸಿದರು. ಸ್ನಾತಕೋತ್ತರ ಪದವೀಧರರಾದ ಇವರು ವೃತ್ತಿಯಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಸಾಹಿತ್ಯ ಕುರಿತು ಹಲವಾರು ಕೃತಿಗಳನ್ನು ಬರೆದಿದ್ದಾರೆ. “ಹಸರಗಿಡಿದ ಮ್ಯಾಲ ಮೊಸರ ಚಲ್ಲೇದ” ಇದು ಜನಪದ ಕೃತಿ. ರಾಜ್ಯಮಟ್ಟದ ದಿ. ಮಹಾದೇವ ಪ್ರಶಸ್ತಿ, ಜಿಲ್ಲಾ ಮಟ್ಟದ ಚಿಕ್ಕೋಡಿ ತಮ್ಮಣ್ಣಪ್ಪ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಡಾ. ಬಿ. ಎಸ್. ಕೋಟ್ಯಾಳರು ಅಡವಿ ಸಂಗಾಪುರದಲ್ಲಿ ೧೦.೫.೧೯೪೯ ರಲ್ಲಿ ಜನಿಸಿದ್ದಾರೆ. ವಿಜಾಪುರದ ಅಂಜುಮನ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿರುವ ಇವರು, ಜಾನಪದ ಸಾಹಿತ್ಯದ ಶೃಂಗಾರ ನಿರೂಪಣೆ (೧೯೮೯ ಪ್ರಸಾರಾಂಗ ಕ.ವಿ.ವಿ. ಧಾರವಾಡ) ಉಪನ್ಯಾಸ ಗ್ರಂಥಮಾಲೆ. ಬೀಬಿ ಇಂಗಳಗಿ ಸಂಪ್ರದಾಯದ ಗೀಗೀ ಪದಗಳು (೧೯೯೪) ಸಂಶೋಧನಾ ಮಹಾಪ್ರಬಂಧ. ಇವರ ಜನಪದ ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಡಾ. ಸಂಗಮೇಶ ಹಂಡಗಿ ತೆಲಗಿಯಲ್ಲಿ ೬.೫.೧೯೩೮ ರಲ್ಲಿ ಜನಿಸಿದರು. ಜನಪದ ಸಾಹಿತ್ಯ ಮತ್ತು ದೈವಿ ಶ್ರದ್ಧೆ (೧೯೮೭) ಜಾನಪದಕ್ಕೆ ಸಂಬಂಧಪಟ್ಟಂತೆ ಲೇಖನಗಳನ್ನು ಬರೆದಿದ್ದಾರೆ. ಶ್ರೀ ಮ. ನಿ. ತೋಳನೂರ ಅವರ “ಹಲಸಂಗಿ ಲಾವಣಿಗಳು” (೧೯೮೮ ಸಿರಿ ಸಂಗಮ ಪ್ರಕಾಶನ) ಪ್ರಕಟಿಸಿದ್ದಾರೆ. ಈ ಲಾವಣಿ ಸಂಗ್ರಹದಲ್ಲಿ ಪ್ರಸಿದ್ಧ ಲಾವಣಿಕಾರರಾದ ಖಾಜಾಭಾಯಿ ಮತ್ತು ಸಿದ್ದು ಶಿವಲಿಂಗ ಅವರ ೩೨ ಶೃಂಗಾರ ಲಾವಣಿಗಳನ್ನು ಸಂಪಾದಿಸಿದ್ದಾರೆ. ಇನ್ನುಳಿದವು ಅನುಭವದ ಮತ್ತು ನೀತಿಯ ಲಾವಣಿಗಳು ಇಲ್ಲಿ ಸಂಗ್ರಹವಾಗಿದೆ.

ಡಾ. ಎಂ. ಎಂ. ಪಡಶೆಟ್ಟಿಯವರು ಸಿಂದಗಿಯ ಪೋರವಾಲ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸಂಗ್ರಹಿಸಿದ “ಹೇಳಿ ಮಾಡ್ಯಾರ ಒಡೆಯರ” (೧೯೯೩ ನೆಲೆ ಪ್ರಕಾಶನ ಸಿಂದಗಿ) ಎಂಬುದು ಕುರುಬ ಜನಾಂಗಕ್ಕೆ ಸಂಬಂಧಿಸಿದ ಮಳೆ ಬೆಳೆ ಬಗ್ಗೆ ಹೇಳುವ ೨೦೫ ಹೇಳಿಕೆಗಳು ಇದರಲ್ಲಿ ದಾಖಲಾಗಿವೆ. ಚರ್ಮವಾದ್ಯಗಳು, ಚೌಡಮ್ಮ ಒಂದು ಗ್ರಾಮ ದೇವತೆ, ವಿಜಾಪುರ ಜಿಲ್ಲೆಯ ಜನಪದ ಸಾಹಿತ್ಯ ಮುಂತಾದ ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ.

ಡಾ. ಎಸ್. ಆರ್. ಶಿಂಗೆಯವರ “ಹೊಲೆಯರು ಒಂದು ಅಧ್ಯಯನ” (ಮಹಾಪ್ರಬಂಧ) ಜಾನಪದ ಸಾಹಿತ್ಯ ದರ್ಶನ – ೧೭ (೧೯೯೩ ಪ್ರಸಾರಾಂಗ ಕ.ವಿ.ವಿ. ಧಾರವಾಡ)ರಲ್ಲಿ ‘ಡಕ್ಕಲಿಗರು’ ಕುರಿತು ಪ್ರಬಂಧ ಪ್ರಕಟವಾಗಿದೆ. ಡಾ. ಅರ್ಜುನ ಗೊಳಸಂಗಿ ಅವರ “ಜನಪದ ಸಾಹಿತ್ಯದಲ್ಲಿ ದಲಿತರ ಬದುಕು” (೧೯೯೪ ಮಹಾಪ್ರಬಂಧ) ‘ಗೊಳಸಂಗಿ ಗ್ರಾಮ ಒಂದು ಸಾಂಸ್ಕೃತಿಕ ಅಧ್ಯಯನ’ (೧೯೯೫ ಮಲ್ಲಿಕಾರ್ಜುನ ಪ್ರಕಾಶನ, ಗೊಳಸಂಗಿ) ಇದು ಸಂಶೋಧನಾತ್ಮಕ ಪ್ರಬಂಧವಾಗಿದೆ. ಇದರಲ್ಲಿ ಗೊಳಸಂಗಿ ಬಗೆಗೆ ಲಭ್ಯವಿರುವ ಇತಿಹಾಸ, ಭೌಗೋಳಿಕ ಮಾಹಿತಿಗಳು, ಸಂಪ್ರದಾಯಗಳು, ದೈವಗಳು, ಜಾತ್ರೆಗಳು, ಉತ್ಸವಗಳು ಮುಂತಾದ ವಿವರಗಳನ್ನು ಇಲ್ಲಿ ಸಮೀಕ್ಷಿಸಲಾಗಿದೆ. ಡೊಳ್ಳಿನ ಪದಗಳು (೧೯೯೮ ಪ್ರಸಾರಾಂಗ ಕ.ವಿ.ವಿ. ಧಾರವಾಡ) ಜಾನಪದಕ್ಕೆ ಸಂಬಂಧಪಟ್ಟಂತೆ ಲೇಖನಗಳನ್ನು ಬರೆದಿದ್ದಾರೆ.

ಡಾ. ನೀಲಮ್ಮ ಕತ್ನಳ್ಳಿ ಅವರ ಹೆಸರಿಸುವಂಥ ಕೃತಿಗಳು ‘ಮದುವೆ ಮತ್ತು ಮಹಿಳೆ’, ಶ್ರೀ ಬಾ. ಇ. ಕುಮಠೆ ಅವರ ‘ಮರಾಠಿ ಕಥೆಗಳು’ (ಅನುವಾದಿತ) ಶಂಕರ ಬೈಚವಾಳ ಅವರ ‘ಜಾನಪದ ಚಿಂತನ’ (೧೯೯೮ ನೆಲೆ ಪ್ರಕಾಶನ ಸಿಂದಗಿ) ೧೫ ಸಂಶೋಧನ ಲೇಖನಗಳನ್ನು ಒಳಗೊಂಡ ಕೃತಿ. ಶ್ರೀಶೈಲ ಮಲ್ಲಪ್ಪ ಜೇವರಗಿ ಅವರ ಶ್ರೀ ಕೃಷ್ಣ ಪಾರಿಜಾತ ಗಾರುಡಿಗ ದಿ: ದೇಶಪಾಂಡೆ” ಡಾ. ಸಂಗಮನಾಥ ಎಂ. ಲೋಕಾಪುರ ಅವರು ಹುನಗುಂದ ತಾಲೂಕಿನ ಮರೋಳದಲ್ಲಿ ೧.೭.೧೯೬೩ ರಲ್ಲಿ ಜನಿಸಿದರು. ‘ಆಧುನಿಕ ಕನ್ನಡ ಕಾವ್ಯದಲ್ಲಿ ಬಂಡಾಯ ಮನೋಧರ್ಮ’ ಇವರ ಮಹಾಪ್ರಬಂಧ. ಮುಳ್ಳು ಬೇಲಿ ಕಥಾ ಸಂಕಲನ, ಅಜ್ಞಾತ ಗೀಗೀ ಪದಕಾರ ಕಡಣಿ ಕಲ್ಲಪ್ಪ ಕೃತಿ ಹೊರ ಬಂದಿದೆ. ಶ್ರೀ ಸಾ. ಮ. ಹುಂಡೇಕಾರ “ವಿಜಾಪುರ ಜಿಲ್ಲೆಯ ಜಾನಪದ ದರ್ಶನ” (ಜಿಲ್ಲಾ ಸಾಹಿತ್ಯ ಸಂಸ್ಕೃತಿ ಸಂಘ, ವಿಜಾಪುರ) ಪರಿಚಯಾತ್ಮಕವಾದಂಥ ಕೃತಿ.

ಶ್ರೀ ದಾನಪ್ಪ ಬಗಲಿ ಅವರು ಜಾನಪದದಲ್ಲಿ ಲಚ್ಯಾಣದ ಸಿದ್ದಲಿಂಗ ಮಹಾರಾಜರು ಎಂಬ ಕೃತಿ ಹೊರತಂದಿದ್ದಾರೆ. ಶ್ರೀ ಚನ್ನಪ್ಪ ಕಟ್ಟಿ ಅವರ “ಕುರುಬ ಜನಪದ” (ರಾ. ಶಿ. ವಾಡೇದ ಜೊತೆ ಸಂಪಾದಿಸಿದ್ದಾರೆ). ಶ್ರೀ ವೀರಸಂಗಪ್ಪ ಹಗರಟಗಿ ಅವರ “ಹಳ್ಳಿಯ ಹಾಡುಗಳು” ಶ್ರೀಮತಿ ರುಕ್ಮೀಣಿಬಾಯಿ ನರಸಾಪುರ “ಶ್ರೀ ಹನುಮನ ದ್ವಿಲಾಸ” (೧೯೯೬ ಉಪೇಂದ್ರ ನರಸಾಪುರ, ವಿಜಾಪುರ) ಯಕ್ಷಗಾನ ಪ್ರಸಂಗ.

೮. ಉಪಸಂಹಾರ

ಈ ಸಮೀಕ್ಷೆಯಲ್ಲಿ ಎಲ್ಲ ಹಿರಿ ಕಿರಿಯ ಜಾನಪದ ಬರಹಗಾರರನ್ನು ಸೇರಿಸಲಾಗಿದೆ. ಇವರಲ್ಲಿ ಕೆಲವರು ಶಿಷ್ಟಪದರಾಗಿಯೂ ಪ್ರಸಿದ್ಧಿಯನ್ನು ಪಡೆದಿರಬಹುದು. ಕೆಲವರು ಜಾನಪದ ವಿದ್ವಾಂಸರಾಗಿಯೂ ಕಾರ್ಯ ಮಾಡಿರಬಹುದು. ಆದರೆ ಅವರೆಲ್ಲ ನಮ್ಮವರೇ, ನಮ್ಮ ವಿಜಾಪುರ ಜಿಲ್ಲೆಯವರೇ. ಜನಪದದಲ್ಲಿ ಕೆಲಸ ಮಾಡಿದ್ದಾರಲ್ಲ ಅನ್ನುವ ದೃಷ್ಠಿಯಿಂದ ಅನೇಕರನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಮೈ ಮರೆವಿನಿಂದ ಇಲ್ಲಿ ಕೆಲವರ ಹೆಸರು ಬಿಟ್ಟು ಹೋಗಿರಬಹುದು. ಅದು ಪ್ರಬಂಧಕಾರನ ಮರವೇ ಎಂದು ಭಾವಿಸಬೇಕು.

ಈಗ ವಿಜಾಪುರ ಜಿಲ್ಲೆ ಇಬ್ಭಾಗವಾಗಿದ್ದರೂ ಇಲ್ಲಿಯ ಸಮೀಕ್ಷೆಯನ್ನು ಈಗಿನ ವಿಜಾಪುರ ಜಿಲ್ಲೆಗೆ ಸೀಮಿತಗೊಳಿಸಲಾಗಿದೆ. ಕಾರಣ ವಿಜಾಪುರ ಜಿಲ್ಲೆ ಎಲ್ಲ ಜಾನಪದರ ರೂಪ ಸ್ವರೂಪಗಳು ಒಂದೇ ಆಗಿವೆ. ಇಂದಿಗೂ ಪ್ರತಿಶತ ೬೫% ಜನ ಮೌಖಿಕ ಪರಂಪರೆಯಲ್ಲಿ ಬದುಕಿದ್ದಾರೆ. ಈ ಕಾರಣದಿಂದ ಇವರ ನುಡಿಗಟ್ಟು, ಆಡುವ ಭಾಷೆ, ಉಡುಗೆ ತೊಡುಗೆ, ಊಟೋಪಚಾರ, ಸಾಮಾಜಿಕ ಆಚರಣೆಗಳು ಮುಂತಾದವುಗಳು ಎಲ್ಲ ಒಂದೇ ರೀತಿ ಆಗಿವೆ. ಪ್ರಾದೇಶಿಕವಾಗಿ ಅಲ್ಲಿ ಇಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಇರಬಹುದು. ಆದರೆ ಇವರ ಕಲಾಸ್ವರೂಪ, ಲಾವಣಿ ಮೇಳ, ಹಂತಿ ಹಾಡುಗಳು, ಕರ್ಬಲ್, ಹಾಡುವ ಕುಣಿತ ಎಲ್ಲ ಒಂದೇ ಆಗಿರುವುದನ್ನು ನಾವು ಗುರುತಿಸಬಹುದು. ಇಲ್ಲಿಯ ಜನ ಕಷ್ಟ ಜೀವಿಗಳು. ಇವರ ಮೇಲೆ ಅನೇಕ ಭಾಷೆಯ ಪ್ರಭಾವಗಳು ಆಗಿದ್ದರೂ ಕೂಡ ಇಂದಿಗೂ ಕನ್ನಡವನ್ನು ಎದೆಗೆ ಹಚ್ಚಿಕೊಂಡವರು ಹಾಡಿದರೆ ಕನ್ನಡ ಹಾಡನ್ನು ಹಾಡುವರು, ಯಾವುದೇ ಹಾಡನ್ನು ಹಾಡಿದರು ಅವರಿಗೆ ಕನ್ನಡವೇ ಇಷ್ಟ. ದೊಡ್ಡಾಟ ಬಯಲಾಟ, ಸಣ್ಣಾಟ, ಲಾವಣಿ ಮೇಳ, ಗೀಗೀ ಮೇಳ ಮುಂತಾದವುಗಳ ಜನಪ್ರಿಯತೆಯನ್ನು ನೋಡಿದರೆ, ಇಂದಿಗೂ ಜಾನಪದ ಪರಂಪರೆ ಅದ್ಭುತವಾಗಿ ಈ ನೆಲದಲ್ಲಿ ವಿಜೃಂಭಿಸುತ್ತಿದೆ ಎಂದು ಹೇಳಬಹುದು. ಕಾರಣ ಇಲ್ಲಿಯ ಜಾನಪದ ಬತ್ತದ ಉಟೆ, ನದಿಗಳೂ ಬತ್ತಿದರೂ ಜನರ ಹೃದಯದಿಂದ ಉಟೆ ಬತ್ತುವುದಿಲ್ಲ. ಆದ್ದರಿಂದಲೇ ಇಂದಿಗೂ ಜನಪದ ಹಾಡು ಈ ಜಿಲ್ಲೆಯ ಉಸಿರಾಗಿದೆ. ಯಾಕೆಂದರೆ ಅವರ ಪಾಡೆ ಹಾಡಾಗಿ ಪುಟಿಯುತ್ತದೆ. ಲಂಬಾಣಿಗರ ಸಾಂಸ್ಕೃತಿಕ ನಾಯಕ ‘ಸೇವಾಲಾಲ’ ನನ್ನು ಕುರಿತು ಒಂದು ಹಾಡನ್ನು ಇಲ್ಲಿ ಉದಾಹರಣೆಗೆ ಕೊಡಲಾಗಿದೆ.

ಅವತಾರ ಕಳೋ ಕೋನಿ ತಾರೋ
ದುನಿಯಾಮಯಿ ನಾಮ ಚಲಾರೋ || ಪ ||

ಪೆಲೋ ಅವತಾರ ಧರಣ ಗಾಮೇಮ
ದತ್ತರಾಜಾ ಗವಳಿ ಘರೇಮ
ಓ ಸತ್ಯವತಿರ ಉದರೇಮ || ೧ ||

ದುಸರೋ ಅವತಾರ ಸಬಜಲಪುರೇಮ
ಸೂರ್ಯವಂಶ ರಾಜಾರ ಘರೇಮ
ಮಾತಾ ದೇವಕಿರ ಉದರೇಮ || ೨ ||

ತಿಸರೋ ಅವತಾರ ಗುತ್ತಿ ಬಲ್ಲಾರಿಮ
ರಾಮಜಿದಾದಾ ರಾಠೋಡ ಕುಳೇಮ
ಭೀಮಾನಾಯಕ ಧರ್ಮಣಿ ಉದರೇಮ || ೩ ||

ಚವತೋ ಅವತಾರ ಲಿಂವೂ ಕೆಗೋ ಹರಿ
ಕರಕಿದೋ ಲೇಖರೇ ತಯ್ಯಾರಿ
ರಾಜುದಾಸೇರಿ ಸಾಮಳೋ ಕಹಾನಿ || ೪ ||

ಸಾರಾಂಶ : ಸೇವಾಲಾಲ ಈ ಲೋಕದಲ್ಲಿ ನಿಮ್ಮ ಹೆಸರು ಪ್ರಸಿದ್ಧವಾಗಿದೆ. ಲಂಬಾಣಿ ಬಂಧುಗಳನ್ನು ಕಷ್ಟದಿಂದ ಪಾರು ಮಾಡು, ಸೇವಾಲಾಲರ ಮೊದಲನೇ ಅವತಾರ ಪಂಜಾಬದ ಧರಣ ಊರಲ್ಲಿ. ತಂದೆ ದತ್ತರಾಜ, ತಾಯಿ ಸತ್ಯದೇವಿ ಗವಳಿ ಮನೆತನ. ಎರಡನೇ ಅವತಾರ ಸಬಜಲಪುರದಲ್ಲಿ ತಂದೆ ಸೂರ್ಯವಂಶ, ತಾಯಿ ದೇವಕಿ, ರಾಜ ಮನೆತನ. ಮೂರನೇ ಅವತಾರ ಕರ್ನಾಟಕದ ರಾಮಜಿ ತಾತ ರಾಠೋಡ ಮನೆತನ, ಬಂಜಾರಾ ಕುಲದಲ್ಲಿ, ತಂದೆ ಭೀಮಾನಾಯಕ ತಾಯಿ ಧರ್ಮಣಿಮಾತೆ. ಸೇವಾಲಾಲರ ನಾಲ್ಕನೇ ಅವತಾರ ಭವಿಷ್ಯವಾಣಿಯಲ್ಲಿ, ಲೋಕದಲ್ಲಿ ಅಲ್ಲೋಲ ಕಲ್ಲೋಲವಾದಾಗ ಜನ್ಮ ತಾಳುವವನಿದ್ದಾನೆ. (ಸಂತ ಸೇವಾಲಾಲ ೩೩. ೩೪. ೧೯೯೮)

ಸೇವಾಲಾಲ ಕೇವಲ ೨೬೨ ವರ್ಷಗಳ ಹಿಂದೆ ಆಗಿ ಹೋಗಿದ್ದರೂ ಇಂದಿಗೂ ಜನ ಅವರನ್ನು ಮರೆತಿಲ್ಲ. ಅವರ ಮಾನವೀಯತೆಯನ್ನು ಕೊಂಡಾಡುತ್ತಾರೆ. ಅವರ ದನಕರುಗಳ ಮೇಲಿನ ವಾತ್ಸಲ್ಯವನ್ನು ಕೊಂಡಾಡುತ್ತಾರೆ. ಏಕೆಂದರೆ ಆ ಮಹಾಸಂತ ಸೇವಾಲಾಲ, ಮಾನವರನ್ನು ಎಷ್ಟು ಪ್ರೀತಿಸಿದನೋ ಅಷ್ಟೇ ದನಕರುಗಳನ್ನು ಪ್ರೀತಿಸಿದನು. ಪ್ರೀತಿಯೇ ಹಾಡಿನ ಮೂಲ ಸೆಲೆ, ಅದಕ್ಕೆ ವಿಜಾಪುರ ಜಿಲ್ಲೆ ಸಾಕ್ಷಿಯಾಗಿದೆ.