ಕನ್ನಡದ ವೇದಗಳು ಜಾನಪದ ಗೀತೆಗಳು :
ಇದನು ಬರೆದವರೆಲ್ಲ ಎಲೆಮರೆಯ ಹೂವುಗಳು.
ಕಾರ್ತಿಕಾಮಿಗಳಲ್ತು ಆ ಕಬ್ಬಿಗರು, ಹೆಸರ
ಬಯಸದೆಯೆ ಹಾಡಿದರು ಅನುಭಾವಗಳ ಉಸಿರ-
ನೊಂದನೆ ಹಿಡಿದು. ರಾಜಾಧಿರಾಜರಾಸ್ಥಾನ-
ದಲಿ ಅವರು ಪಂಪ ರನ್ನರ ತೆರದಿ ಸನ್ಮಾನ
ದಾನಗಳ ಪಡೆದಿಲ್ಲ. ತಾಳೆಯೋಲೆಗಳಲ್ಲಿ
ಬರೆದಿಡಲು ಬಯಸಿಲ್ಲ. ಜನಮನದ ಎದೆಯಲ್ಲಿ
ವರುಷವೆನಿತಾದರೂ ಶ್ರುತಿರೂಪದಲಿ ಹರಿದು
ಬಂದವು ಗಂಗೆಯಂತೆ, ಅವರ ಮನದಲಿ ಕೊರೆದು
ನಿಂದವು ಚಿತ್ರದಂತೆ. ಕನ್ನಡದ ಸಂಸ್ಕೃತಿಯು
ಆರ್ಯ ಸಂಸ್ಕೃತಿಯೆದುರು ತಲೆಬಾಗಬೇಕಿಲ್ಲ,
ನಮ್ಮ ಸಿರಿಗನ್ನಡದ ಕಾವ್ಯರಸವಾರಿಧಿಯು
ನಿಜಕು ರತ್ನಾಕರಂ ! ಕನ್ನಡಕೆ ಸೋಲಿಲ್ಲ !