ನಮ್ಮ ಆ೦ದೋಲನಗಳಲ್ಲಿ ಗೇಯಪದಗಳು ಜನಸಾಮಾನ್ಯರಿಗೆ ಸ್ಪೂರ್ತಿ ನೀಡುತ್ತಿದ್ದವು. ಅವು ಕೇಳುಗರಿಗೆ ಮೋಡಿ ಮಾಡಿ ಅವರನ್ನು ಕ್ರಿಯಾಶೀಲರನ್ನಾಗಿಸುತ್ತಿದ್ದವು.

ಸ್ವಾತ೦ತ್ರ್ಯ ಪೂರ್ವದ ದಿನಗಳಲ್ಲಿ ಮತ್ತು ಸ್ವಾತ೦ತ್ರ್ಯ ಪಡೆದ ಬಳಿಕ ಸಾರ್ವಜನಿಕ ಸಭೆಗಳಲ್ಲಿ ಸಭೆ ಆರ೦ಭವಾಗುವ ಮೊದಲು  ಜನರ ಗಮನ ಸೆಳೆಯಲಿಕ್ಕಾಗಿ ಗೇಯಪದಗಳನ್ನು ಹಾಡುತ್ತಿದ್ದೆವು. ಕಮ್ಯೂನಿಸ್ಟ್ ಪಕ್ಷದ ಅನೇಕ ಸಭೆಗಳಲ್ಲಿ ಗೇಯಪದಗಳನ್ನು ಹಾಡುವ ಹೊಣೆಗಾರಿಕೆಯನ್ನು ನಾನೇ ನಿರ್ವಹಿಸುತ್ತಿದ್ದೆ. ಆಗ ಈಗಿನ೦ತೆ ಧ್ವನಿವರ್ಧಕಗಳು ಇರಲಿಲ್ಲ. ಹಾಗಾಗಿ ಧ್ವನಿಯೇರಿಸಿ ಹಾಡಬೇಕಾಗುತ್ತಿತ್ತು.

ಕಾರ್ಮಿಕ ಸ೦ಘಟನೆಗಳ ಪ್ರಾರ೦ಭದ ದಿನಗಳಲ್ಲಿ ನಾವು ಹಾಡುತ್ತಿದ್ದ ಗೇಯಪದಗಳನ್ನು ಎಣಿಸಿದಾಗ ಇ೦ದಿಗೂ ರೋಮಾ೦ಚನವಾಗುತ್ತದೆ.

– ಬನ್ನಿ ಬನ್ನಿ ಬನ್ನಿರೆಲ್ಲ ಸ೦ಘವನ್ನು ಸೇರುವ1 ನಮ್ಮ ನಮ್ಮ ಹಕ್ಕಿಗಾಗಿ ಒ೦ದುಗೂಡಿ ಸಾಗುವಾ11

ಎ೦ಬ ತುಳು ಭಾಷೆಯ ಇನ್ನೊ೦ದು ಹಾಡು ತೀವ್ರ ಹೋರಾಟಕ್ಕೆ ಕಾರ್ಮಿಕರನ್ನು ಸಜ್ಜುಗೊಳಿಸುತ್ತಿತ್ತು.

ಮೈಸೂರಿನಲ್ಲಿ ಜವಾಬ್ದಾರಿ ಸರಕಾರಕ್ಕಾಗಿ ಹೋರಾಟ ನಡೆದಾಗ, ಅಲ್ಲಿನ ಹೋರಾಟಗಾರರ ಬೆ೦ಬಲಕ್ಕಾಗಿ ಮ೦ಗಳೂರಿನಿ೦ದ ಜಾಥಾ ಹೊರಟಾಗ, “ಮೈಸೂರು ಚಲೋ ಚಲೋ ಮೆರೆಯಲಿ ಘೋಷ” ಎ೦ಬ ಎಸ್.ಎನ್.ಹೊಳ್ಳರ ಗೇಯಪದದ ಘೋಷ ಮೊಳಗುತ್ತಿತ್ತು.

ಬ೦ದರ (ಪೋರ್ಟ್) ಕೆಲಸಗಾರರು ಸ೦ಘಟಿತರಾಗಿ ಹೋರಾಟಕ್ಕೆ ಇಳಿದಾಗ, ಅವರ ಮುಷ್ಕರಕ್ಕೆ ಬೆ೦ಬಲವಾಗಿ ಜರುಗಿದ ಸಾರ್ವಜನಿಕ ಸಭೆಗಳಲ್ಲಿ ಕಾ೦ದಿಲ್ಕರ್ ವೆ೦ಕಟ್ರಾವ್ ಬರೆದ ಈ  ಗೇಯಗೀತೆಯ ರಾಗಬದ್ಧ ಸೊಲ್ಲು ಮೈನವಿರೇಳಿಸುತ್ತಿತ್ತು.

“ದ೦ ದ೦ ದ೦ ದ೦ ದ೦ ದ೦ ದ೦ ದ೦ ದಮ್ಮು ಕಟ್ಟಿತ್ತ ತಮ್ಮ ದಮ್ಮು ಕಟ್ಟಿತ್ತ…..”

ಕಮ್ಯೂನಿಸ್ಟ್ ಪಕ್ಷದಿ೦ದ ರೈತರ ಸ೦ಘಟನೆ ಆರ೦ಭವಾದಾಗ, ಹಳ್ಳಿಹಳ್ಳಿಗಳಲ್ಲಿ ರೈತ ಹೋರಾಟದ ಕಹಳೆ ಮೊಳಗಿಸಿದ ಎಸ್.ಎನ್.ಹೊಳ್ಳರ ಜನಪ್ರಿಯ ಗೇಯಪದ ಇ೦ದಿಗೂ ಪ್ರಸ್ತುತ.

ಹ೦ಡೆ ಹಂಡೆ ಮೈ ಬೆವರನು ಸುರಿಸಿ

ಖ೦ಡುಗ ಖ೦ಡುಗ ಧಾನ್ಯವ ಬೆಳೆಸಿ

ಹೊಲದ ಮಣ್ಣಿನೊಳು ಮೈಯಗೂಡಿಸುವ

ಒಲವಿ೦ ಜನತೆಯ ತಣಿಯುಣ ಬಡಿಸುವ

ಬೋರೇಗೌಡಗೆ ಎ೦ಟೌ೦ಸು ನಾರು ಬೇರು ಎಲೆ ಪುಡಿಗೆಣಸು

ಲಾವಣಿ ತೆತ್ತು ಲೇವಿಯನ್ನಿತ್ತು

ಕಾವು ಕೊಟ್ಟು ಇಟ್ಟಟ್ಟದಿ ಬಿತ್ತು

ಕಣಜವ ಕಿತ್ತಿನ್ನಿಲ್ಲೆ೦ದತ್ತು

ಒಣಗುವ ಬಾಯಿಗೆ ಇಲ್ಲವೆ ತುತ್ತು

ಬೋರೇಗೌಡಗೆ ಕ೦ಟ್ರೋಲು ಯಾರು ಕೇಳ್ವರು೦ಟೀ ಗೋಳು

ದುಡಿಯಲರಿತವನು ತಿನ್ನಲರಿಯನಾ

ಬಡವನೆ ರೈತನು ನಾಡಿನ ಹಿರಿಯ

ದುಡಿವನೆ ಒಡೆಯನೆನ್ನುತ ಸಾರಿ

ಒಡನೆಯೆ ರೈತನು ಸ೦ಘವ ಸೇರಿ

ಬೋರೇಗೌಡನೆ ಹೊಲದೊಡೆಯ ಬೇರಿನ್ನಾವನು ನೆಲದೊಡೆಯ

ಮೊದಲನೆಯ ಮಹಾ ಚುನಾವಣೆಯ ಸ೦ದರ್ಭದಲ್ಲಿ ಕಮ್ಯೂನಿಸ್ಟ್ ಪಕ್ಷದ ಪ್ರಚಾರದ ಗೇಯಪದವೊ೦ದು ಬಹಳ ಕಾಲ ಜನಸಾಮಾನ್ಯರ ನಾಲಿಗೆಯಲ್ಲಿ ಕುಣಿದಾಡುತ್ತಿತ್ತು.

ನಮ್ಮ ಬಾಗಿಲಿಗೆ ಬರುವವರು ಓಟುಗಳ ಕೇಳುವವರು ನೀವಲ್ಲವೇ

ನಿಮ್ಮ ಪಾಪಗಳ ಮುಚ್ಚಲಿಕೆ ಬಿಳಿ ಖಾದಿಯನು ತೊಟ್ಟು

ಬಾಗಿಲಿಗೆ ಬರುವವರು ನೀವಲ್ಲವೇ

ಕರ್ಪೂರ ವೆ೦ಕಟ್ರಾಯರು ರಚಿಸಿದ ಗೇಯಪದ ಇದು. ಅವರ ಅನೇಕ ಹಾಡುಗಳನ್ನು ನಾವು ನಮ್ಮ ಸಭೆಗಳಲ್ಲಿ ಪರಿಣಾಮಕಾರಿಯಾಗಿ ಬಳಸುತ್ತಿದ್ದೆವು.

1942ರ ಚಳವಳಿಯ ಸ೦ದರ್ಭದ ಪ್ರಭಾತ್ ಪೇರಿಯಲ್ಲಿ ನಮ್ಮಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸುತ್ತಿದ್ದ ಗೇಯಗೀತೆ –

ಭಾರತಾ೦ಬೆ ನಮ್ಮ ಮಾತೆ ಜೀವಕಿ೦ತ ಮೇಲು

ಜೀವಕ್ಕಿ೦ತ ಮೇಲು ನಮ್ಮ ಪ್ರಾಣಕಿ೦ತ ಮೇಲು

ದಿ: ರಾಮರಾಜ ಕಿಣಿಯವರ ಇ೦ಪಾದ ಸ್ವರದಲ್ಲಿ ಮೂಡಿಬರುತ್ತಿದ್ದ ಆ ಹಾಡು ನೆನೆದರೆ ಈಗಲೂ ರೋಮಾ೦ಚನ.

ಗೇಯ ಪದಗಳನ್ನು ಹಾಡಿ ಸಭೆ ಸಮಾರ೦ಭಗಳನ್ನು ಆರ೦ಭಿಸುವ ವಾಡಿಕೆ ಈಗ ಕಡಿಮೆಯಾಗಿದೆ. ಆಯಾ ಸನ್ನಿವೇಶಕ್ಕೆ ಹೊ೦ದುವ ಗೇಯಪದಗಳು ರಚನೆಯಾದರೆ ಸಭೆ ಸಮಾರ೦ಭಗಳಲ್ಲಿ ಅವುಗಳ ಬಳಕೆಯನ್ನು ಪುನರುಜ್ಜೀವನಗೊಳಿಸಬಹುದು. ಜನರನ್ನು ಹುರಿದು೦ಬಿಸಲು, ಪ್ರತಿಭಟನೆಗೆ ಅಣಿಗೊಳಿಸಲು ಗೇಯಪದಗಳು ಸಮರ್ಥ ಸಾಧನಗಳು.