ಜನಪರ ಚಳವಳಿ ಎನ್ನುವುದು ಜೀವಂತ ಸಮಾಜದ ನಿರಂತರ ಪ್ರಕ್ರಿಯೆ. ಇಂತಹ ಚಳವಳಿಗಳು ಮನುಷ್ಯರ ಬದುಕಿನೊಂದಿಗೆ ಒಂದಲ್ಲಾ ಒಂದು ವಿಧದಲ್ಲಿ ಬೆಸೆದುಕೊಂಡಿರುತ್ತವೆ. ಒಂದು ಜನಸಮುದಾಯದಲ್ಲಿ ಚಳವಳಿ ಎನ್ನುವುದು ಗುಪ್ತವಾಗಿಯೋ, ಬಹಿರಂಗವಾಗಿಯೋ, ಪ್ರವಹಿಸುತ್ತಲೇ ಇರುತ್ತದೆ. ಈ ಬಗೆಯ ಚಳವಳಿಗಳಿಗೆ ೧೨ನೆಯ ಶತಮಾನದಿಂದಲೂ ಒಂದು ರೀತಿಯ ಸುದೀರ್ಘ ನಡಿಗೆ ಇದೆ. ಆದರೂ ಕ್ರಿ. ಶ. ೧೮ನೆಯ ಶತಮಾನದ ಈಚೆಗೆ ನಡೆದ ಜನಪರ ಚಳವಳಿಗಳು ಮನುಷ್ಯ ಸಮಾಜದಲ್ಲಿ ಅನೇಕ ರೀತಿಯ ಪಲ್ಲಟಗಳನ್ನು ಉಂಟುಮಾಡಿದವು. ಭಾರತದ ಸಂದರ್ಭದಲ್ಲಿ ಸಾಮಾಜಿಕ ವ್ಯವಸ್ಥೆ ಎನ್ನುವುದು ಬಲಾಢ್ಯರ ಇಚ್ಛೆಯಂತೆ ರೂಪುಗೊಂಡಿರುವ ವ್ಯವಸ್ಥೆಯಾಗಿರುವುದರಿಂದ ಬದಲಾವಣೆ ಎನ್ನುವುದು ಅವಶ್ಯಕವಾಗಿರುತ್ತದೆ. ಇಂತಹ ಕಟ್ಟಲ್ಪಟ್ಟ ವ್ಯವಸ್ಥೆಯಲ್ಲಿ ಅಸಮಾನತೆ, ಅನ್ಯಾಯಗಳು ನಿರಂತರವಾಗಿರುವುದರ ಜೊತೆಗೆ ಮಾನವ ಹಕ್ಕುಗಳು ದಮನಕ್ಕೊಳಗಾಗಿರುತ್ತವೆ. ಭಾರತೀಯ ಜಾತಿ ವ್ಯವಸ್ಥೆ ಇಂತಹ ದಮನಗಳ ಮೇಲೆಯೇ ಸ್ಥಿರೀಕೃತವಾಗಿದೆ. ಆದ್ದರಿಂದ ಇಲ್ಲಿ ಸಂಘರ್ಷ ಅನಿವಾರ್ಯವಾಗಿರುತ್ತದೆ. ಈ ಸಾಮಾಜಿಕ ವ್ಯವಸ್ಥೆಯಲ್ಲಿ ಕೆಲವೊಂದು ಸಮುದಾಯಗಳು ಮಾತ್ರ ತಮ್ಮಷ್ಟಕ್ಕೆ ತಾವೆ ಶ್ರೇಷ್ಠತೆಯನ್ನು ಆವಾಹಿಸಿಕೊಂಡು ಮಿಕ್ಕ ಬಹುಸಂಖ್ಯಾತ ಸಮುದಾಯಗಳನ್ನು ದೇವರು, ಧರ್ಮ, ಸಂಸ್ಕೃತಿ, ಆಹಾರ ಹಾಗೂ ಉಡುಗೆ-ತೊಡುಗೆಯ ನೆಪದಲ್ಲಿ ವಿಂಗಡಿಸಿ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಇದು ಸ್ವಾತಂತ್ರ್ಯೋತ್ತರ ಕಾಲದಿಂದಲೂ ನಡೆಯುತ್ತಿದ್ದು ಇದರಿಂದ ಸಂವಿಧಾನದ ಆಶಯಗಳನ್ನು ವ್ಯವಸ್ಥಿತವಾಗಿ ನಿಷ್ಕ್ರಿಯಗೊಳಿಸುವ ಹುನ್ನಾರಗಳು ಗರಿಗೆದರಿದವು. ಇಂತಹ ಸಂದರ್ಭದಲ್ಲಿ ಜನಪರ ಚಳವಳಿಗಳು ಸಂವಿಧಾನದ ಚೌಕಟ್ಟಿನೊಳಗೆ ಜನಹಿತವನ್ನು ಬಯಸಿ ಅನೇಕ ರೀತಿಯ ಹೋರಾಟಗಳನ್ನು ನಡೆಸಲು ಮುಂದಾದವು.

೧೯೧೭ರ ರಷ್ಯಾ ಕ್ರಾಂತಿಯ ನಂತರ ಜಗತ್ತಿನಾದ್ಯಂತ ಅನೇಕ ರೀತಿಯ ಚಳವಳಿಗಳು ಹುಟ್ಟಿಕೊಂಡವು. ಈ ಕಾರಣಕ್ಕಾಗಿಯೇ ೨೦ನೇ ಶತಮಾನವನ್ನು ಚಳವಳಿಗಳ ಶತಮಾನವೆಂದೇ ಕರೆಯಲಾಗುತ್ತದೆ. ಮಹಿಳಾ ಚಳವಳಿಗಳನ್ನು ಒಳಗೊಂಡಂತೆ ದಲಿತ ಚಳವಳಿ, ರೈತ ಚಳವಳಿ, ಆದಿವಾಸಿ ಚಳವಳಿ, ತೆಲಂಗಾಣ ಚಳವಳಿ, ನಕ್ಸಲ್ ಚಳವಳಿ, ಸಮಾಜವಾದಿ ಚಳವಳಿ, ಕಾರ್ಮಿಕ ಚಳವಳಿ, ಹಿಂದುಳಿದ ವರ್ಗಗಳ ಚಳವಳಿ, ದ್ರಾವಿಡ ಚಳವಳಿ ಇಂತಹ ಅನೇಕ ಚಳವಳಿಗಳು ದೇಶಾದ್ಯಂತ ರೂಪುಗೊಂಡವು. ಮುಖ್ಯವಾಗಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ವ್ಯವಸ್ಥಿತವಾಗಿ ಸಂಘಟಿತರಾಗಿ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ತಮ್ಮ ಸ್ಥಾನಮಾನಗಳನ್ನು ಉತ್ತಮಪಡಿಸಿಕೊಳ್ಳಲು ಚಳವಳಿಗಳನ್ನು ರೂಪಿಸಿದರು. ೧೯೬೦ರ ಹೊತ್ತಿಗೆ ಈ ರೀತಿಯ ಚಳವಳಿಗಳು ಜಗತ್ತಿನಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡವು. ಪ್ರತಿಭಟನಾ ಚಳವಳಿಗಳು, ರಾಷ್ಟ್ರೀಯ ಚಳವಳಿಗಳು, ಆರ್ಥಿಕ ಕಲ್ಯಾಣ ಮತ್ತು ಸ್ವಯಂ ನಿರ್ಧಾರಿತ ಚಳವಳಿಗಳು, ಕಮ್ಯುನಿಸ್ಟ್ ಚಳವಳಿಗಳು ಹೀಗೆ ಅಸಂಖ್ಯಾತ ಜನಪರ ಚಳವಳಿಗಳು ಕಾಣಿಸಿಕೊಂಡವು. ಹೀಗಾಗಿ ಜನಪರ ಚಳವಳಿಗಳು ಮನುಷ್ಯರ ಬದುಕಿನಲ್ಲಿ ಅವಿಭಾಜ್ಯ ಅಂಗಗಳಾಗಿ ರೂಪುಗೊಂಡವು ಎನ್ನಬಹುದು.

ಈ ರೀತಿಯ ಜನಪರ ಚಳವಳಿಯನ್ನು ವ್ಯವಸ್ಥಿತವಾಗಿ ನಿರ್ಮಿಸಲು ಸಾಧ್ಯವಿಲ್ಲ. ಅದು ತನ್ನಷ್ಟಕ್ಕೇ ತಾನು ಸಮಾಜದಲ್ಲಿ ಜರುಗುವ ಆಗು-ಹೋಗುಗಳಿಗೆ ಅನುಗುಣವಾಗಿ ರೂಪುಗೊಳ್ಳುತ್ತದೆ. ಇಂತಹ ಚಳವಳಿಗಳ ಹಿಂದೆ ಹತ್ತಾರು ವರ್ಷಗಳ ನೋವು, ಹಿಂಸೆ, ದೌರ್ಜನ್ಯಗಳು ಮಡುಗಟ್ಟಿರುತ್ತವೆ. ಅವಕಾಶ ವಂಚಿತರಾಗಿ ಕಡೆಗಣಿಸಲ್ಪಟ್ಟ ವ್ಯಕ್ತಿ ಮತ್ತು ಸಮುದಾಯಗಳಿಗೆ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎನ್ನುವ ಪ್ರಜ್ಞೆ ಜಾಗ್ರತವಾದಾಗ ಸಾಮಾನ್ಯವಾಗಿ ಚಳವಳಿ ರೂಪುಗೊಳ್ಳುತ್ತದೆ. ಜಡಗೊಂಡ ಸಾಮಾಜಿಕ ವ್ಯವಸ್ಥೆಯಲ್ಲಿ ಘಾಸಿಗೊಳ್ಳುತ್ತಲೇ ಇರುವ ವ್ಯಕ್ತಿ ಮತ್ತು ಸಮುದಾಯಗಳು ತಮ್ಮ ಬಿಡುಗಡೆಗಾಗಿ ಪ್ರತಿಭಟನೆ, ಹೋರಾಟದಂತಹ ಪ್ರತಿರೋಧದ, ಆಕ್ರೋಶದ ಭಾಷೆಯಲ್ಲಿ ಮಾತನಾಡತೊಡಗುತ್ತವೆ. ಇಂತಹ ಸನ್ನಿವೇಶದಲ್ಲಿ ಜನಪರ ಚಳವಳಿಗಳು ದನಿ ಇಲ್ಲದವರ ದನಿಯಾಗುತ್ತವೆ. ಅಂದರೆ ಮನುಷ್ಯ ತನ್ನ ಅಸ್ತಿತ್ವವನ್ನು ಕುರಿತು ಯೋಚಿಸುವಾಗ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮನುಷ್ಯ ಘನತೆಗೆ ಅಡ್ಡಿಯಾದಾಗಲೆಲ್ಲ ಪ್ರತಿಭಟನೆ ಎನ್ನುವುದು ತನ್ನೊಳಗೇ ಗೂಡುಕಟ್ಟುತ್ತದೆ. ಏಕೆಂದರೆ ಸಾಮಾಜಿಕ ಚಳವಳಿ ಎನ್ನುವುದು ಸಮಾಜದ ಬದಲಾವಣೆಗೆ ಸಂಬಂಧಿಸಿದಂತೆ ನಡೆಯುವ ಒಂದು ಜಾಗೃತ ಪ್ರಕ್ರಿಯೆ. ಅದರ ಹಿಂದೆ ಒಂದು ಧ್ಯೇಯ, ಯೋಜನೆ ಹಾಗೂ ಕಾರ್ಯಕ್ರಮ ಇರುತ್ತದೆ.

‘ಚಳವಳಿ ಎನ್ನುವುದು ಬಡವರ ಆಸ್ತಿ. ಚಳವಳಿ ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ದುರ್ಬಲರಿಗೆ, ನಿರ್ಗತಿಕರಿಗೆ ಚಳವಳಿಯೇ ಶ್ರೀಮಂತಿಕೆಯ ಸಾಧನ. ಈ ಚಳವಳಿ ಕೂಡ ಹೊರಟು ಹೋದರೆ ದುರ್ಬಲರನ್ನು ಮನುಷ್ಯರೇ ಅಲ್ಲ ಎನ್ನುವ ಸ್ಥಿತಿಯಲ್ಲಿ ನೋಡುತ್ತಾರೆ’. ಆಧುನಿಕ ಸಂದರ್ಭದಲ್ಲಿ ಸಿದ್ದಲಿಂಗಯ್ಯನವರ ಈ ಮಾತುಗಳು ಸಮರ್ಥವಾಗಿ ಅನ್ವಯವಾಗುತ್ತವೆ. ಹಿಂದೆ ರಾಜ ಮಹಾರಾಜರ ಕಾಲದಲ್ಲಿ ಸರ್ವಾಧಿಕಾರವಿತ್ತು. ಅಲ್ಲಿ ಯಾರೂ ತಮ್ಮ ಪಾಲನ್ನು ರಾಜನೆದುರು ಕೇಳುವಂತಿರಲಿಲ್ಲ. ಕೇವಲ ತೊತ್ತಿನ ಜನರಾಗಿ ಜೀವಿಸಬೇಕಾಗಿತ್ತು. ಆದರೆ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಹೊಂದಿರುವ ಇಂದಿನ ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಸ್ವಾತಂತ್ರ್ಯ ಎನ್ನುವುದು ಅನ್ವಯವಾಗುತ್ತದೆ. ಇಂತಹ ಸಂದರ್ಭದಲ್ಲಿ ಚಳವಳಿಗಳು ಮತ್ತೆ ಮತ್ತೆ ರೂಪುಗೊಳ್ಳುತ್ತಲೇ ಇರುತ್ತವೆ.

ಪ್ರಜಾತಾಂತ್ರಿಕ ವ್ಯವಸ್ಥೆ ಜಾರಿಯಲ್ಲಿರುವ ಈ ಕಾಲದಲ್ಲಿಯೂ ಜನಸಾಮಾನ್ಯರ ಸವಲತ್ತುಗಳು ಕೇಂದ್ರೀಕೃತಗೊಳ್ಳುತ್ತವೆ. ಈ ಕ್ರೇಂದ್ರೀಕೃತ ಪ್ರಕ್ರಿಯೆಯಿಂದ ಸಮಾಜದಲ್ಲಿ ಅಸಮತೋಲನ ಉಂಟಾಗುತ್ತದೆ. ಇಂತಹ ಸಂದರ್ಭದಲ್ಲಿ ಜನಪರ ಚಳವಳಿಗಳು ಕೇಂದ್ರೀಕೃತಗೊಂಡ ಈ ಸವಲತ್ತುಗಳನ್ನು ವಿಕೇಂದ್ರಿಕರಣಗೊಳಿಸುವುದರ ಮೂಲಕ ಜನಸಾಮಾನ್ಯರಿಗೆ ಹಂಚುತ್ತವೆ. ಅಂದರೆ ಈ ರೀತಿಯ ಅಸಮತೋಲನ ಏರ್ಪಟ್ಟಾಗ ಸಾಮಾಜಿಕ ನ್ಯಾಯದ ಆಗ್ರಹಗಳು ಜನರೊಳಗಿನಿಂದಲೇ ಸ್ಪೋಟಗೊಳ್ಳುತ್ತವೆ. ಆ ಮುಖಾಂತರ ಸಮತೋಲನವನ್ನು ಸಾಧಿಸುವ ಆಕಾಂಕ್ಷೆ ಮತ್ತು ಒತ್ತಾಸೆ ಸಮಾನತೆಯ ಕಾರ್ಯಸೂಚಿಯಾಗಿ ಚಳವಳಿಯ ಸ್ವರೂಪವನ್ನು ಪಡೆಯುತ್ತದೆ.

ಹೀಗಾಗಿ ಜನಸಾಮಾನ್ಯರ ಹಕ್ಕುಗಳಿಗೆ ಎಲ್ಲಿಯವರೆಗೆ ಮಾನ್ಯತೆ ಇರುವುದಿಲ್ಲವೋ ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆಗಳಂತಹ ಸಂವಿಧಾನದತ್ತ ಹಕ್ಕುಗಳಿಗೆ ಅವಕಾಶವಿರುವುದಿಲ್ಲವೋ ಅಲ್ಲಿಯವರಗೂ ಚಳವಳಿಗಳ ಸಾಧ್ಯತೆಗಳಿಗೆ ಬಾಗಿಲು ತೆರೆದುಕೊಂಡೇ ಇರುತ್ತದೆ. ಇವೆಲ್ಲ ಜನಸಾಮಾನ್ಯರಿಗೆ ದೊರೆತ ಮೇಲೂ ಚಳವಳಿ ಜರುಗಬಾರದೆಂದೇನೂ ಇಲ್ಲ. ಏಕೆಂದರೆ ಮನುಷ್ಯ ಆಹಾರದಿಂದ ಮಾತ್ರ ಬದುಕುತ್ತಿಲ್ಲ, ಗಾರ್ಕಿ ಹೇಳುವಂತೆ ಮನುಷ್ಯ ಹೊಟ್ಟೆಗಿಂತ ಮೇಲಾಗಿದ್ದಾನೆ. ಮನುಷ್ಯನ ಜೀವಿತದ ಸಮಸ್ಯೆ ದಿನೇ ದಿನೇ ಉಲ್ಬಣಗೊಳ್ಳುತ್ತಿರುವಾಗ ಚಳವಳಿ, ದಂಗೆ, ಪ್ರತಿಭಟನೆಗಳ ಸಾಧ್ಯತೆ ಜ್ವಲಂತವಾಗುತ್ತದೆ. ಹೀಗಾಗಿ ಜನಾಶಯದಿಂದ ಹುಟ್ಟಿದ ಚಳವಳಿಗಳು ಜನಮುಖಿಯಾಗಿ ಸ್ಪಂದಿಸುತ್ತಲೇ ಇರುತ್ತವೆ. ಕಾರ್ಮಿಕರು, ದಲಿತರು, ಹಿಂದುಳಿದವರು, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಆದಿವಾಸಿ ಸಮುದಾಯದಂತಹ ಅನೇಕ ಶೋಷಿತರ ಸಮಸ್ಯೆಗಳಿಗೆ ಜೀವಧಾರೆಯಾಗಿ ಕೆಲಸ ಮಾಡುತ್ತಿವೆ. ಆದ್ದರಿಂದ ಯಾವುದೇ ಚಳವಳಿಗೆ ಇಂತಿಷ್ಟೇ ಎಂಬ ನಿರ್ಧಿಷ್ಟ ಕಾಲಮಾನವಾಗಲಿ, ಪ್ರಾದೇಶಿಕತೆಯಾಗಲಿ ಇರುವುದಿಲ್ಲ. ಅದು ದೇಶ ಕಾಲಗಳ ಹಂಗಿಲ್ಲದೆ ಎಲ್ಲವನ್ನು ಮೀರಿ ಬೆಳೆಯುತ್ತದೆ. ಈ ಚಳವಳಿಗಳ ಬಹುಮುಖ್ಯ ಆಶಯವೇ ಸಂಪೂರ್ಣವಾಗಿ ಹೊಸ ಸಾಮಾಜಿಕ ವ್ಯವಸ್ಥೆಯ ಸಮ ಸಮಾಜವನ್ನು ಕಟ್ಟುವುದೇ ಆಗಿದೆ.

ಜಾಥಾ ಪರಿಕಲ್ಪನಾತ್ಮಕ ಚರ್ಚೆ

ಜಾಥಾ ಎಂದರೆ ಇಂಗ್ಲಿಷಿನಲ್ಲಿ ‘ಪ್ರೊಸೆಷನ್’ ಎಂದರ್ಥ. ಜಾಥಾ ಎಂದರೆ ಮೆರವಣಿಗೆ; ಒಂದು ಖಚಿತ ಸ್ಥಳಕ್ಕೆ ಹೊರಟ ಗುಂಪು, ದೀರ್ಘ ನಡಿಗೆ, ಸಾಮೂಹಿಕ ನಡಿಗೆ ಈ ಅರ್ಥಗಳನ್ನು ಕೂಡ ಒಳಗೊಂಡಿದೆ. ಜಾಥಾ ಎನ್ನುವ ಶಬ್ದ ಮೂಲತಃ ಪ್ರಾಕೃತದಿಂದ ಬಂದದ್ದು. ಇದು ಸಂಸ್ಕೃತಕ್ಕೆ ಬಂದಾಗ ‘ಯಾತ್ರೆ’ ಆಗುತ್ತದೆ. ಅದೇ ಕನ್ನಡಕ್ಕೆ ಬಂದಾಗ ಜಾತ್ರೆ, ಜಾಥಾ ಆಗುತ್ತದೆ.

ಜನಪದರಲ್ಲಿ ಇಂದಿಗೂ ಹರಕೆ, ಮುಡಿಪು, ನಡೆದುಕೊಳ್ಳುವುದು, ಇವುಗಳ ಬಗ್ಗೆ ನಂಬಿಕೆ ಇದೆ. ಈ ನಂಬಿಕೆಯಿಂದ ಹರಕೆ ಹೊತ್ತ ಜನ ತಮ್ಮ ಉದ್ದೇಶ ಸಾಧನೆಗಾಗಿ, ಇಷ್ಟಾರ್ಥ ಸಿದ್ಧಿಗಾಗಿ ನಡೆದುಕೊಂಡು ಹೋಗುತ್ತಾರೆ. ಈ ರೀತಿಯ ನಡಿಗೆಯನ್ನು ಕೂಡ ಜಾಥಾ ಎಂದು ಕರೆಯುತ್ತೇವೆ. ಆದರೆ ಇದಕ್ಕೆ ಧಾರ್ಮಿಕ ಉದ್ದೇಶವಿದ್ದು, ದೈವಕೇಂದ್ರಿತವೂ, ಶ್ರದ್ಧಾಕೇಂದ್ರಿತವೂ ಆಗಿರುತ್ತದೆ. ಈ ರೀತಿಯ ಜಾಥಾಗಳು ಕರ್ನಾಟಕದ ಸಂಸ್ಕೃತಿಯಲ್ಲಿ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿವೆ. ಉತ್ತರ ಕರ್ನಾಟಕದ ಹಂಪಿಯಲ್ಲಿ ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಕರ್ನಾಟಕದ ಬೇರೆ ಬೇರೆ ಸ್ಥಳಗಳಿಂದ ಭಕ್ತರು ಗುಂಪುಗುಂಪಾಗಿ ಬಂದು ಸೇರುತ್ತಾರೆ. ಹಾಗೆಯೇ ಚಿತ್ರದುರ್ಗದ ಬೇಡರು ಆನೆಗೊಂದಿಗೆ ವರ್ಷಕ್ಕೊಮ್ಮೆ ಹೋಗುತ್ತಾರೆ. ಇವರು ಪ್ರತೀ ವರ್ಷ ಎತ್ತಿನ ಗಾಡಿಯಲ್ಲಿ ಆನೆಗೊಂದಿಗೆ ಹೋಗಿ ತಮ್ಮ ಧಾರ್ಮಿಕ ಆಚರಣೆಗಳನ್ನೆಲ್ಲ ಮುಗಿಸಿ ಹಿಂತಿರುಗುತ್ತಾರೆ. ಪಂಡರಾಪುರಕ್ಕೆ ವಿಠ್ಠಲನ ದರ್ಶನಕ್ಕೆ ಇದೇ ರೀತಿಯಲ್ಲಿಯೇ ಸಾವಿರಾರು ಭಕ್ತರು ಹೋಗುತ್ತಾರೆ. ಹಾಗೆಯೇ ದಕ್ಷಿಣಕ್ಕೆ ಬಂದರೆ ಮೈಸೂರು ಪ್ರಾಂತ್ಯದ ಜನಮಾನಸದಲ್ಲಿ ಪ್ರಸಿದ್ಧವಾಗಿರುವ ಮಂಟೇಸ್ವಾಮಿ ಹಾಗೂ ಮಾದೇಶ್ವರ ಜಾತ್ರೆಗಳನ್ನು ಸಹ ಹೆಸರಿಸಬಹುದು. ತಿಂಗಳುಗಟ್ಟಲೆ ನಡೆಯುವ ಈ ರೀತಿಯ ಧಾರ್ಮಿಕ ಆಚರಣೆಗಳಲ್ಲಿ ದೂರದ ಊರುಗಳಿಂದ ಬಂದ ಜನರು ಒಂದು ಕಡೆ ಕಲೆತು ತಮ್ಮ ಆಚರಣೆಗಳನ್ನು ಪೂರೈಸಿ ಹೊರಡುತ್ತಾರೆ. ಬಹುಶಃ ಇದು ಬುದ್ಧನ ಕಾಲದಿಂದಲೇ ಪ್ರಾರಂಭವಾಗಿರಬಹುದು ಎನಿಸುತ್ತದೆ. ಏಕೆಂದರೆ ಕಾಲ್ನಡಿಗೆಯಲ್ಲಿ, ಭಿಕ್ಷೆ ಬೇಡುವ ನೆಪದಲ್ಲಿ ಜನರಿಗೆ ಉಪದೇಶ ಮಾಡುತ್ತಾ ಬಂದು ಧರ್ಮ ಪ್ರಸಾರ ಮತ್ತು ಸ್ಥಾಪನೆಗೆ ಬುದ್ಧ ಕಾರಣನಾದ. ಬುದ್ಧ ಅದಕ್ಕೆ ಅನುಸರಿಸಿದ ಮಾರ್ಗ ಭಿಕ್ಷಾಚರಣೆ. ಈ ನಿಟ್ಟಿನಲ್ಲಿ ಮಂಟೇಸ್ವಾಮಿಯನ್ನು ನೋಡಿದರೆ ಆತ ಉತ್ತರದಿಂದ ದಕ್ಷಿಣಕ್ಕೆ ಬರುವುದನ್ನು ಒಂದು ರೀತಿಯ ಸಾಂಸ್ಕೃತಿಕ ಜಾಥಾ ಎಂದೇ ಕರೆಯಬಹುದು.

ಆದರೆ ಆಧುನಿಕ ಕಾಲಘಟ್ಟದಲ್ಲಿ ಅದೇ ಪದ್ಧತಿಯನ್ನು ಬಳಸಿ ಅದನ್ನು ರಾಜಕೀಯ ಮತ್ತು ಸಾಮಾಜಿಕ ಉದ್ದೇಶಗಳಿಗೆ ಬಳಸಲಾಯಿತು. ಅಂಬೇಡ್ಕರ್, ಗಾಂಧಿ, ಪೆರಿಯಾರ್, ಪುಲೆ, ನಾರಾಯಣ ಗುರು ಮುಂತಾದವರು ಕೂಡ ತಮ್ಮ ಕಾರ್ಯ ಸಾಧನೆಗಾಗಿ ಜಾಥಾವನ್ನು ಆಯ್ಕೆ ಮಾಡಿಕೊಂಡಿದ್ದರು.

ಕರ್ನಾಟಕದ ಸಂದರ್ಭದಲ್ಲಿ ಈ ಜಾಥಾ ಎನ್ನುವ ಪರಿಕಲ್ಪನೆ ಸಮರ್ಥವಾಗಿ ಬಳಕೆಯಾದದ್ದು ೭೦ರ ದಶಕದಲ್ಲಿ ಹುಟ್ಟಿದ ‘ಸಮುದಾಯ ಸಾಂಸ್ಕೃತಿಕ ಸಂಘಟನೆ’ಯ ಮೂಲಕ. ಅಂದರೆ ಈ ಹಿಂದೆ ಜಾಥಾಗಳು ನಡೆದಿರಲಿಲ್ಲವೆಂದು ಅರ್ಥವಲ್ಲ. ಈ ಮೊದಲು ಸಾಕಷ್ಟು ಜಾಥಾಗಳು ನಡೆದಿದ್ದರೂ ಕೂಡ ಚಳವಳಿ ಮಟ್ಟದಲ್ಲಿ ಅಧಿಕೃತವಾಗಿ ಸಾಮಾಜಿಕ ಹೋರಾಟದ ವ್ಯಾಪ್ತಿಯೊಳಗೆ ಪರಿಕಲ್ಪನೆಯಾಗಿ ಸಮರ್ಥವಾಗಿ ಹೊರಹೊಮ್ಮಿದ್ದು ಎಪ್ಪತ್ತರ ದಶಕದ ನಂತರವೇ ಎನ್ನಬಹುದು. ಈ ರೀತಿಯ ಸಾಂಸ್ಕೃತಿಕ ಜಾಥಾಗಳಲ್ಲಿ ನಿರ್ಧಿಷ್ಟವಾದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕವಾದ ಉದ್ದೇಶ ಮತ್ತು ಬದ್ಧತೆ ಇರುತ್ತದೆ. ಸಿ. ಜಿ. ಕೆ. ಈ ರೀತಿಯ ಜಾಥಾವನ್ನು ‘ಸಂಸ್ಕೃತಿಯ ಸರದಾರರ ದಂಡಯಾತ್ರೆ’ ಎನ್ನುತ್ತಾರೆ. ಅಂದರೆ ಊರಿಂದ ಊರಿಗೆ ಸಾಗುತ್ತಾ ಸಾರ್ವಜನಿಕರಿಗೆ ಸಮಸ್ಯೆಯನ್ನು ತಿಳಿ ಹೇಳುತ್ತಾ ಅದನ್ನು ಬಗೆಹರಿಸಲು ಅವರಿಂದ ತಿಳುವಳಿಕೆ ಪಡೆಯುತ್ತಾ ಸಾಗುವುದು.

ಜಾಥಾ ಸಾಮಾನ್ಯವಾಗಿ ಜನರಿಗೆ ಜಾಗೃತಿಯನ್ನು, ಅಚ್ಚರಿಯನ್ನು, ತಿಳಿವಳಿಕೆಯನ್ನು ಉಂಟುಮಾಡುತ್ತದೆ. ಹಾಗೂ ಎಲ್ಲರಿಗೂ ಸಮಾನತೆಯ ಅಂಶ ಮತ್ತು ಸಂಗತಿಗಳ ಬಗ್ಗೆ ಅರಿವನ್ನುಂಟುಮಾಡುವಂತಹ ಒಂದು ಕ್ರಿಯೆ. ಒಂದು ನಿರ್ಧಿಷ್ಟ ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಒಂದು ಸಮಸ್ಯೆಯನ್ನು ಅಥವಾ ಜಾಗೃತಿ ಸಂದೇಶವನ್ನು ಜನರಿಗೆ ತಿಳಿಹೇಳುತ್ತಾ ಪ್ರಚಾರ ಮಾಡಿಕೊಂಡು ಹೋಗುತ್ತದೆ. ಆದರೆ ಯಾತ್ರೆಗೆ ಈ ರೀತಿಯಾದಂತಹ ಜನಮುಖಿ ಉದ್ದೇಶವಿರುವುದಿಲ್ಲ. ಆದರೆ ಜಾಥಾಗೆ ಸಾಮಾಜಿಕ ಆಶಯಗಳ ಜೊತೆಗೆ ಬದ್ಧತೆಯಿರುತ್ತದೆ.

ಜನರನ್ನು ಜಾಗೃತಗೊಳಿಸುವ ಯಾವುದೇ ಮಾಧ್ಯಮವಾಗಿರಬಹುದು ಅದರಲ್ಲಿ ಬದ್ಧತೆ ಮತ್ತು ತತ್ವ ಸ್ಪಷ್ಟವಾಗಿರಬೇಕು. ಏಕೆಂದರೆ ಅದು ಅನ್ಯಾಯದ ವಿರುದ್ಧ ನಿಂತು ಶೋಷಿತರ ಪರವಾಗಿ ಜಾಗೃತಿ ಮೂಡಿಸುವ ಮಾಧ್ಯಮವಾಗಿರುತ್ತದೆ. ಹೀಗಾಗಿ ಜಾಥಾ ಜನಸಂಸ್ಕೃತಿಯಲ್ಲಿ ಪರಿಣಾಮಕಾರಿಯಾಗಿ ಸಾಮಾಜಿಕ ಸಮಸ್ಯೆಗಳಿಗೆ, ಜನಪರ ಹೋರಾಟಗಳಿಗೆ ಚಾಟಿ ಏಟಿನಂತಹ ಸ್ಪಂದನ ನೀಡಬಲ್ಲ ಶಕ್ತಿಯಾಗಿ ಜಾಥಾ ಹೊರಹೊಮ್ಮಿತು. ಜಾಥಾದ ಪರಿಕಲ್ಪನೆಯಲ್ಲಿ ಪ್ರತಿರೋಧ ಯಾವಾಗಲೂ ದೈಹಿಕ ಸಂಘರ್ಷದಿಂದ ಹೊರತಾಗಿರುತ್ತದೆ. ಇಲ್ಲಿ ಬೌತಿಕವಾಗಿ ಯಾರನ್ನು ಅಂದರೆ ಹೊಡೆದಾಟದ ರೀತಿಯಲ್ಲಿ ಮುಖಾಮುಖಿಯಗುವುದಿಲ್ಲ. ವೈರಿಗಳನ್ನು ಎದುರುಬದುರು ನಿಲ್ಲಿಸಿಕೊಳ್ಳುವುದಿಲ್ಲ. ಬದಲಾಗಿ ಎದುರಾಳಿಯ ನಿಲುವುಗಳನ್ನು ಹಾಗೂ ಅವನ ಸಮಾಜ ಘಾತುಕ ಕೆಲಸಗಳನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಲಾಗುತ್ತದೆ.

ಜಾಥಾದ ಸ್ವರೂಪ

ಜಾಥಾ ಮೂಲತಃ ಪ್ರತಿಭಟನಾತ್ಮಕ ಹೋರಾಟದ ಅಸ್ತ್ರ. ಸಾಮಾಜಿಕವಾಗಿ ಜನಪರ ಆಶಯಗಳುಳ್ಳ ಜಾಥಾ ನಿಜಕ್ಕೂ ಸಾಮಾಜಿಕ ಆಕ್ರೋಶದ ದನಿಯಾಗಿರುತ್ತದೆ ಹಾಗೂ ಬಂಡುಕೋರತನದಿಂದ ಕೂಡಿರುತ್ತದೆ. ಕರ್ನಾಟಕದ ಸಂದರ್ಭದಲ್ಲಿ ಜಾಥಾ ಕಾಣಿಸಿಕೊಂಡಿದ್ದು ಈ ಹಿನ್ನೆಲೆಯಲ್ಲಿಯೇ. ಅಂದಿನ ಸರ್ಕಾರಗಳ ಜನವಿರೋಧಿ ಧೋರಣೆಗಳು, ಭ್ರಷ್ಟತೆ, ದೌರ್ಜನ್ಯ ಮುಂತಾದವುಗಳನ್ನು ಜನರಿಗೆ ತಿಳಿ ಹೇಳಲು ಬೇರೆ ಮಾರ್ಗವಿರಲಿಲ್ಲ. ಇದ್ದಂತಹ ಟಿ.ವಿ., ರೇಡಿಯೋ, ವೃತ್ತ ಪತ್ರಿಕೆಗಳಂತಹ ಜನಪ್ರಿಯ ಮಾಧ್ಯಮಗಳು ಉಳ್ಳವರ ಪರವಾಗಿದ್ದವು. ಬಡವರ, ನಿರ್ಗತಿಕರ ಸ್ಥಿತಿಗತಿಗಳನ್ನು ಆಲಿಸಲು ಯಾವೊಂದು ಮಾಧ್ಯಮವೂ ಗಮನ ಹರಿಸಲಿಲ್ಲ. ಅಂತಹ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಸುಲಭವಾಗಿ ದಕ್ಕುವ ಮಾಧ್ಯಮವಾಗಿ, ಬೀದಿ ರಂಗಭೂಮಿಯ ಚಟುವಟಿಕೆಗಳ ಮೂಲಕ ಜಾಥಾ ಚಾಲ್ತಿಗೆ ಬಂತು.

ಜಾಥಾದ ಪರಿಕಲ್ಪನೆಯನ್ನು ಮೊದಲು ಬಳಸಿದವರು ಕೇರಳದ ಎ.ಕೆ. ಗೋಪಾಲನ್. ಮಾರ್ಕ್ಸ್‌ವಾದಿ, ಸಮಾಜವಾದಿ ಚಿಂತಕರಾದ ಇವರು ಕಮ್ಯುನಿಸ್ಟ್ ಪಕ್ಷವನ್ನು ಕಟ್ಟಿದವರಲ್ಲಿ ಪ್ರಮುಖರು. ದೌರ್ಜನ್ಯ ಮತ್ತು ಜನವಿರೋಧಿ ನೀತಿಗಳ ವಿರುದ್ಧ ಹೋರಾಡಿ ಸಮತಾವಾದದ ಆಶಯವನ್ನು ಇಟ್ಟುಕೊಂಡು ಊರೂರುಗಳಲ್ಲಿ ಕಾಲ್ನಡಿಗೆ ಜಾಥಾ ಮಾಡಿದರು. ಈ ರೀತಿಯ ಜನಮುಖಿ ಆಶಯಗಳನ್ನು ಜನತೆಗೆ ಮುಟ್ಟಿಸುವ ಹಿನ್ನೆಲೆಯಲ್ಲಿ ‘ಸಮುದಾಯ’ದಂತಹ ಸಾಂಸ್ಕೃತಿಕ ಸಂಘಟನೆ ಜಾಥಾ ಪ್ರಕಾರವನ್ನು ಸಮರ್ಥವಾಗಿ ಬಳಸಿಕೊಂಡಿತು.

ಜಾಥಾ ಆಧುನಿಕ ಕಾಲಘಟ್ಟದಲ್ಲಿ ಅನೇಕ ವಿನ್ಯಾಸಗಳನ್ನು ಪಡೆದುಕೊಂಡಿದೆ. ಜಾಥಾವನ್ನು ಇಂತಷ್ಟೇ ಜನರು ಮಾಡಬೇಕು ಎನ್ನುವುದಾಗಲಿ, ಹೀಗೆಯೇ ಮಾಡಬೇಕೆನ್ನುವುದಾಗಲಿ ಯಾವುದೇ ನೀತಿ ನಿಯಮಗಳಿಲ್ಲ. ಏಕ ವ್ಯಕ್ತಿಯಿಂದ ಮಾಡಿದ್ದೂ ಜಾಥಾವಾಗುತ್ತದೆ. ಸಾವಿರಾರು ಜನ ಸೇರಿ ಮಾಡಿದ್ದೂ ಜಾಥಾ ಆಗುತ್ತದೆ. ಆದರೆ ಆಶಯದಲ್ಲಿ ಮಾತ್ರ ಭಿನ್ನತೆಯಿರುತ್ತದೆ. ರಾಜಕೀಯ ಜಾಥಾ, ಸಾಮಾಜಿಕ ಜಾಥಾ, ಸಾಂಸ್ಕೃತಿಕ ಜಾಥಾ ಎನ್ನುವ ಬೇರೆ ಬೇರೆ ಹೆಸರಿನಿಂದ ನಡೆಯುತ್ತದೆ. ಜಾಥಾದ ಸ್ವರೂಪ ಅನೇಕ ರೀತಿಯಾಗಿರುತ್ತದೆ. ಇದರ ಮೂಲ ಪಾದಯಾತ್ರೆಯಾದರೂ ಅದರಿಂದ ಹೊರತಾಗಿ ಕೂಡ ಬೇರೆ ಬೇರೆ ರೀತಿಯ ಜಾಥಾಗಳು ನಡೆದಿವೆ. ಸೈಕಲ್ ಜಾಥಾ, ಸ್ಕೂಟರ್ ಜಾಥಾ, ಟ್ರ‍್ಯಾಕ್ಟರ್ ಜಾಥಾ, ಲಾರಿ ಜಾಥಾ, ಬೀದಿ ರಂಗಭೂಮಿಯ ಮೂಲಕ ಜಾಥಾ, ಈ ರೀತಿಯ ಬೇರೆ ಬೇರೆ ಕ್ರಯಾ ಚಟುವಟಿಕೆಗಳ ಮೂಲಕ ಜಾಥಾ ನಡೆಯುತ್ತದೆ. ಇವು ಹೊತ್ತೊಯ್ಯುವ ನಿರ್ದಿಷ್ಟ ವಿಷಯದ ಹೆಸರಿನಲ್ಲಿಯೇ ಜಾಥಾ ನಡೆಯುತ್ತದೆ. ಅಂದರೆ ಅಸ್ಪ್ರಶ್ಯತಾ ವಿರೋಧಿ ಜಾಥಾ, ಕೋಮು ಸೌಹಾರ್ದ ಜಾಥಾ, ಭ್ರಷ್ಟಾಚಾರ ವಿರೋಧಿ ಜಾಥಾ, ಪರಿಸರ ಉಳಿಸಿ ಜಾಥಾ ಹಾಗೆಯೇ ಸಮಾಜದಲ್ಲಿ ಧಮನಿತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಹಲ್ಲೆ, ಹೆಣ್ಣಿನ ಶೋಷಣೆ ಮುಂತಾದ ವಿಷಯಗಳನ್ನು ಮುಂದಿಟ್ಟುಕೊಂಡು ಜಾಥಾಗಳು ನಡೆಯುತ್ತವೆ. ಈ ರೀತಿಯ ಜಾಥಾಗಳಿಗೆ ಒಂದು ನಿರ್ದಿಷ್ಟ ಸಾಮಾಜಿಕ ಬದ್ಧತೆಯಿದ್ದು, ಸಮಾನತೆಯ ತತ್ವದಲ್ಲಿ ಇವು ಹೋರಾಟದ ಪ್ರತೀಕಗಳಾಗಿರುತ್ತವೆ.

ಇನ್ನೂ ಕೆಲವು ಜಾಥಾಗಳು ನಾಗರೀಕ ಸಮಾಜಕ್ಕೆ ಸಂದೇಶವನ್ನು ನೀಡಲು ರೂಪುಗೊಂಡವಾಗಿರುತ್ತವೆ. ಅವುಗಳೆಂದರೆ ಸಾಕ್ಷರತಾ ಆಂದೋಲನಾ ಜಾಥಾ, ಏಡ್ಸ್ ವಿರೋಧಿ ಜಾಥಾ, ಸರ್ವ ಶಿಕ್ಷಣ ಅಭಿಯಾನ ಜಾಥಾ, ಮಧ್ಯಪಾನ ವಿರೋಧಿ ಜಾಥಾ, ಗ್ರಾಮ ನೈರ್ಮಲ್ಯ ಜಾಥಾ, ವರದಕ್ಷಿಣೆ ವಿರೋಧಿ ಜಾಥಾ, ನೆರೆ ಸಂತ್ರಸ್ತರ ಜಾಥಾ, ನೆಲ-ಜಲ ಉಳಿಸುವ ಜಾಥಾ ಹೀಗೆ ಅನೇಕ ರೀತಿಯ ಜಾಥಾಗಳನ್ನು ನೋಡಬಹುದು. ಈ ತರದ ಜಾಥಾಗಳು ಮುಖ್ಯವಾಗಿ ಒಂದು ಸಂದೇಶವನ್ನು ಹೊತ್ತು ಜನರಿಗೆ ತಲುಪಿಸಿ ಬರುವಂಥವಾಗಿರುತ್ತವೆ. ಇಂತಹ ಜಾಥಾಗಳಿಂದ ಹೆಚ್ಚಿನ ಸಾಮಾಜಿಕ ಬದಲಾವಣೆಯನ್ನು ನಿರೀಕ್ಷಿಸಲಾಗುವುದಿಲ್ಲ. ಏಕೆಂದರೆ ಇವು ಬಹುಪಾಲು ಸರ್ಕಾರದ ವತಿಯಿಂದ ಅಥವಾ ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ನಡೆಯುವುದರಿಂದ ಇವುಗಳು ಕೇವಲ ತಮ್ಮ ಕೆಲಸಗಳನ್ನು ಮಾಡಿ ಮುಗಿಸಿಬಿಡುವ ತರಾತುರಿಯಲ್ಲಿರುತ್ತವೆ. ಅಂದರೆ ಇವುಗಳಿಂದ ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲವೆಂದಲ್ಲ. ಇವುಗಳು ನಾಗರೀಕರಿಗೆ ಮಾಹಿತಿಯನ್ನು ನೀಡುತ್ತವೆಯೇ ಹೊರತು ಸಮಾಜದ ಮೇಲಾಗಲಿ, ಸರ್ಕಾರದ ಮೇಲಾಗಲಿ ಒತ್ತಡ ಹೇರುವುದಾಗಲಿ ಅಥವಾ ಬಲವಾದ ಕಾನೂನು ನಿಯಮಗಳನ್ನು ರೂಪಿಸುವುದಾಗಲಿ, ಜಾರಿಗೆ ತರುವುದಾಗಲಿ ಇವುಗಳಿಂದ ಸಾಧ್ಯವಿಲ್ಲ.

ಆದರೆ ೭೦ರ ದಶಕದಲ್ಲಿ ಹುಟ್ಟಿಕೊಂಡ ಜಾಥಾಗಳಿಗೆ ಸಾಮಾಜಿಕ ಕಳಕಳಿ ಇದ್ದು, ಶೋಷಣಾರಹಿತ ಸಮಾಜ ನಿರ್ಮಾಣದಲ್ಲಿ ಆಸಕ್ತಿ ಹಾಗೂ ಜನಪರ ಚಳವಳಿಗೆ ಪೂರಕವಾಗಿ ರಾಜಕೀಯ ಶಕ್ತಿಯನ್ನು ಬೆಂಬಲಿಸುವುದು ಮುಖ್ಯವಾದ ಉದ್ದೇಶವಾಗಿತ್ತು. ಕಾರ್ಮಿಕರಲ್ಲಿ, ದಲಿತರಲ್ಲಿ, ಹಿಂದುಳಿದವರಲ್ಲಿ, ವಿದ್ಯಾರ್ಥಿಗಳಲ್ಲಿ ಒಟ್ಟಾರೆ ಅವಕಾಶ ವಂಚಿತ ಜನರಿಗೆ ಎಚ್ಚರವನ್ನು ಮೂಡಿಸುವುದು, ಜೊತೆಗೆ ದೇಶದ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಜನಪರ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ವಿಶ್ಲೇಷಿಸುವುದರ ಜತೆಗೆ ಕಲೆಯ ಮೂಲಕ ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸುವುದು ಈ ಜಾಥಾಗಳ ಮುಖ್ಯ ಆಶಯವಾಗಿತ್ತು.

ಇತ್ತೀಚೆಗೆ ಜಗತ್ತನ್ನೇ ಕಾಡುತ್ತಿರುವ ಅಂತರಾಷ್ಟ್ರೀಯ ಸಮಸ್ಯೆಯಾದ ಮತೀಯವಾದ, ಜಾಗತೀಕರಣ, ಭಯೋತ್ಪಾದನೆ, ಕೋಮುವಾದ, ಉದಾರೀಕರಣ ಮುಂತಾದವುಗಳು ಮನುಷ್ಯರನ್ನು ಪರಸ್ಪರ ದ್ವೇಷಿಗಳನ್ನಾಗಿ ಪರಿವರ್ತಿಸುತ್ತಿವೆ. ಇಂತಹ ಭಯಾನಕ ಸ್ಥಿತಿಯ ಬಗ್ಗೆ ಅರಿವು ಮೂಡಿಸುವಂತಹ ಪ್ರಯತ್ನವನ್ನು ಕೂಡ ಜಾಥಾಗಳು ಮಾಡುತ್ತಿವೆ.

ಆಧುನಿಕ ಸಂದರ್ಭದಲ್ಲಿ ಬಲಪಂಥೀಯ ಸಂಘಟನೆಗಳೂ ಸಹ ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ರಾಜಕೀಯ ಪ್ರೇರಿತ ಕೋಮುವಾದಿ ಜಾಥಾಗಳನ್ನೂ ಸಹ ನಡೆಸುತ್ತವೆ. ಶೋಭಾಯಾತ್ರೆ, ದತ್ತಮಾಲೆ ಯಾತ್ರೆ, ರಥಯಾತ್ರೆ, ಅಯ್ಯಪ್ಪ ಯಾತ್ರೆ ಈ ರೀತಿಯ ಬಲಪಂಥೀಯ ಧಾರ್ಮಿಕ ಆಶಯಗಳುಳ್ಳ ಜಾಥಾಗಳನ್ನು ಸಹ ನೋಡಬಹುದು. ಜಾಥಾ ಎನ್ನುವುದು ಈ ರೀತಿಯ ಬಗೆ ಬಗೆಯ ಸ್ವರೂಪಗಳನ್ನು ಹೊಂದಿರುತ್ತದೆ. ಆದರೆ ಈ ಸಂದರ್ಭದಲ್ಲಿನ ಮುಖ್ಯ ಕಾಳಜಿ ಇರುವುದು ಸಾಮಾಜಿಕ ಬದಲಾವಣೆಗಾಗಿ, ಸಮಾಜದ ಮುನ್ನಡೆಗಾಗಿ ಜನಪರ ಚಳವಳಿಗಳು ನಡೆಸಿದಂತಹ ಜಾಥಾಗಳು ಹಾಗೂ ಆ ಮೂಲಕ ಹೊಸ ಸಂಸ್ಕೃತಿಯ ಆಶಯಗಳನ್ನು ಹೇಗೆ ಬಿತ್ತಲಾಯಿತು ಎನ್ನುವುದನ್ನು ವಿವರಿಸುವುದೇ ಆಗಿದೆ.

ಸಾಮಾಜಿಕ ಬದಲಾವಣೆಯನ್ನು ಬಯಸಿ ಹುಟ್ಟಿಕೊಂಡ ಜನಪರ ಚಳವಳಿಗಳು ಮತ್ತು ಅವುಗಳು ನಡೆಸಿದ ಜಾಥಾಗಳ ಮುಖ್ಯ ಉದ್ದೇಶಗಳನ್ನು ಜನಪರ ಹೋರಾಟಗಾರರೂ ಹಾಗೂ ಸಂಸ್ಕೃತಿ ಚಿಂತಕರಾದ ಡಾ. ಬಂಜಗೆರೆ ಜಯಪ್ರಕಾಶ್ ಅವರು ಹೀಗೆ ವಿವರಿಸುತ್ತಾರೆ.

೧. ತಾವಿರುವ ಜಾಗದಿಂದ ಅಧಿಕಾರಸ್ಥರ ಕೇಂದ್ರಸ್ಥಾನಕ್ಕೆ ಸಮಸ್ಯೆಯನ್ನು ಕೊಂಡೊಯ್ದು ಮನವರಿಕೆ ಮಾಡಿಕೊಡುವುದು.

೨. ಯಾವುದಾದರೂ ಸಾಂಸ್ಕೃತಿಕ ಸಂದೇಶಗಳನ್ನು ಹೊತ್ತು ಅವುಗಳನ್ನು ಜನಸಮುದಾಯಗಳಲ್ಲಿ ಪ್ರಚುರಪಡಿಸಿ ಎಚ್ಚರ ಉಂಟುಮಾಡುವುದು.

೩. ಸಂಘಟನಾತ್ಮಕವಾಗಿ ಹೊಸ ಹೊಸ ವಿಚಾರಧಾರೆಗಳನ್ನು ಜಾಗೃತಿ ಸಾಧನಗಳಾಗಿ ಬಳಸಿ ಜನಸಾಮಾನ್ಯರಿಗೆ ಅವರ ರಾಜಕೀಯ ಮತ್ತು ಸಾಮಾಜಿಕ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ನಡೆಸುವುದು.

ಆಧುನಿಕ ಸಂದರ್ಭದಲ್ಲಿ ಎಡಪಂಥೀಯ ನಿಲುವುಗಳುಳ್ಳ ಜಾಥಾಗಳು ಬಂಡವಾಳಶಾಹಿ, ಬ್ರಾಹ್ಮಣಶಾಹಿ, ಊಳಿಗಮಾನ್ಯ ವ್ಯವಸ್ಥೆ, ಜಾತೀಯತೆ, ಧರ್ಮಾಂಧತೆ, ಕೋಮುವಾದ ಇವುಗಳಿಂದ ಹುಟ್ಟುವಂತಹ ದೌರ್ಜನ್ಯ, ದಬ್ಬಾಳಿಕೆ ಮುಂತಾದ ಪ್ರಸಕ್ತ ಸಮಸ್ಯೆಗಳನ್ನು ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಪ್ರತಿಭಟನೆಯ ಅಸ್ತ್ರವಾಗಿ ಕೆಲಸ ಮಾಡುತ್ತವೆ. ಈ ಅಧ್ಯಯನದಲ್ಲಿ ಕರ್ನಾಟಕದಲ್ಲಿ ೭೦-೮೦ರ ದಶಕದಲ್ಲಿ ಹುಟ್ಟಿಕೊಂಡ ‘ಸಮುದಾಯ ಸಾಂಸ್ಕೃತಿಕ ಸಂಘಟನೆ’, ‘ದಲಿತ ಚಳವಳಿ’, ‘ರೈತ ಚಳವಳಿ’ ಹಾಗೂ ‘ಕೋಮುವಾದ ವಿರೋಧಿ ಚಳವಳಿ’ಗಳು ನಡೆಸಿದ ಸಾಂಸ್ಕೃತಿಕ ಜಾಥಾಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ಸಮುದಾಯ ಸಾಂಸ್ಕೃತಿಕ ಸಂಘಟನೆ

೧೯೭೦ರ ದಶಕ ಭಾರತದ ಚರಿತ್ರೆಯಲ್ಲಿ ಅತ್ಯಂತ ಮಹತ್ವದ ಕಾಲಘಟ್ಟ. ಇದು ಅನೇಕ ಜನಪರ ಚಳವಳಿಗಳಿಗೆ ಜನ್ಮ ನೀಡಿದ ದಶಕ. ಈ ಚಳವಳಿಗಳ ಹುಟ್ಟಿಗೆ ಅಂದಿನ ಆ ಕಾಲಮಾನದ ವಿಷಮ ಪರಿಸ್ಥಿತಿಯು ಕಾರಣವಾಗಿತ್ತು. ದೇಶದಲ್ಲಿ ಅಸ್ಥಿರತೆ, ಅಸಮಾನತೆ ಎನ್ನುವುದು ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ದರ್ಬಾರು ನಡೆಸುತ್ತಿತ್ತು. ಇಡೀ ಜನತಾಂತ್ರಿಕ ವ್ಯವಸ್ಥೆಯೇ ಕೆಲವು ಪಟ್ಟಭದ್ರರ, ಬಂಡವಾಳಶಾಹಿಗಳ, ಭ್ರಷ್ಟರ ನಡುವೆ ಸಿಲುಕಿತ್ತು. ಪ್ರಜಾಪ್ರಭುತ್ವದ ಮೇಲೆ ಸರ್ವಾಧಿಕಾರದ ಹಲ್ಲೆ ನಿರಂತರವಾಗಿ ನಡೆಯುತ್ತಿತ್ತು. ಇಂದಿರಾಗಾಂಧಿಯವರ ಸರ್ವಾಧಿಕಾರದ ಕರಿ ನೆರಳು ದೇಶವನ್ನು ಆವರಿಸಿಕೊಂಡಿತ್ತು. ಇದರ ಪರಿಣಾಮ ಸ್ವತಂತ್ರ ಭಾರತ ಕಂಡ ಕನಸುಗಳು ನುಚ್ಚು ನೂರಾದವು. ಈಗಾಗಲೇ ನೆಹರೂ ಆಡಳಿತದಿಂದ ರೋಸಿಹೋಗಿದ್ದ ಎಡಪಂಥೀಯ ಚಿಂತಕರು, ಜನಪರ ಹೋರಾಟಗಾರರು ಹಾಗೂ ಬುದ್ಧಿಜೀವಿಗಳಿಗೆ ಇಂದಿರಾ ಗಾಂಧಿಯು ಸರ್ವಾಧಿಕಾರಿ ಧೋರಣೆಯ ಜೊತೆಗೆ ತುರ್ತುಪರಿಸ್ಥಿತಿಯನ್ನು ಹೇರಿದ್ದು ಇನ್ನಷ್ಟು ಸಿಟ್ಟು ಮತ್ತು ಅಸಹನೆಗೆ ಕಾರಣವಾಯಿತು.

ಕರ್ನಾಟಕದ ಪರಿಸ್ಥಿತಿಯು ಇದಕ್ಕಿಂತ ಭಿನ್ನವಾಗಿ ಇರಲಿಲ್ಲ. ಜನತೆ ಹಿಂದೆಂದೂ ಕಾಣದ ಬರಗಾಲಕ್ಕೆ ತುತ್ತಾಗಿತ್ತು. ಇಂತಹ ಪ್ರಾಕೃತಿಕ ವಿಕೋಪವನ್ನು ಎದುರಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿತ್ತು. ಇದೇ ಸಂದರ್ಭದಲ್ಲಿ ಸಾಹಿತಿಗಳು, ಕಲಾವಿದರು, ಬುದ್ಧಿಜೀವಿಗಳು, ವಿದ್ಯಾರ್ಥಿಗಳು ಮುಂತಾದ ಪ್ರಗತಿಪರರೆಲ್ಲ ಒಂದೆಡೆ ಸೇರಿ ದೇಶ ಮತ್ತು ರಾಜ್ಯ ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಗಂಭೀರವಾಗಿ ಚಿಂತಿಸಿ ಹೋರಾಟಕ್ಕೆ ಇಳಿಯುವ ಪರಿಸ್ಥಿತಿ ನಿರ್ಮಾಣವಾಯಿತು. ಈ ರೀತಿಯ ಪ್ರತಿರೋಧಾತ್ಮಕ ಚಳವಳಿಯನ್ನು ರೂಪಿಸಲು ಮೊದಲನೆಯದಾಗಿ ರಂಗಭೂಮಿಯನ್ನು ಆಯ್ಕೆ ಮಾಡಿಕೊಂಡರು. ಹೀಗಾಗಿ ದೇಶದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ತಾಪತ್ರಯಗಳ ನಡುವೆ ‘ಸಮುದಾಯ ಸಾಂಸ್ಕೃತಿಕ ಸಂಘಟನೆ’ ಹುಟ್ಟಿತು.

ಜನದನಿಯಾಗಿ ಸಮುದಾಯ

ಬಿ.ವಿ. ಕಾರಂತರು ಹವ್ಯಾಸಿ ರಂಗಭೂಮಿಯನ್ನು ವೃತ್ತಿರಂಗಭೂಮಿಯಂತೆ ವೈಭವಯುತವಾಗಿ ಕಟ್ಟಬೇಕು ಎನ್ನುವ ದೃಷ್ಟಿಯಿಂದ ಹಲವಾರು ಪ್ರಾಯೋಜಕರಿಂದ ಹಣವನ್ನು ಪಡೆದು ಖರ್ಚು ಮಾಡಲು ಶುರುಮಾಡಿದರು. ಇದು ಆಗ ತಾನೆ ರಂಗಭೂಮಿಗೆ ಕಾಲಿರಿಸಿದ ಕೆ.ವಿ. ನಾರಾಯಣ, ಪ್ರಸನ್ನ, ಆರ್. ನಾಗೇಶ್, ಕೃಷ್ಣಪ್ಪ, ಸಿ.ಜಿ.ಕೆ. ಮುಂತಾದವರ ಅಸಮಾಧಾನಕ್ಕೆ ಕಾರಣವಾಯಿತು. ಈ ರೀತಿ ಹಣ ಉಳ್ಳವರ ಆಶ್ರಯ ಪಡೆದು ನಾಟಕ ಮಾಡುವುದು ಜನವಿರೋಧಿ ನಿಲುವು ಎಂದು ಕಾರಂತರ ರಂಗ ಚಟುವಟಿಕೆಗಳನ್ನು ವಿರೋಧಿಸಿ ಸಂಘಟಿತರಾಗಲು ಮುಂದಾದರು. ಇದರಿಂದ ನಾಟಕ, ಕಲೆ, ಸಾಹಿತ್ಯ ಇಂತಹ ಸಾಂಸ್ಕೃತಿಕ ಚಟುವಟಿಕೆಗಳು ಬೀದಿಗೆ ಬರಲಾರಂಭಿಸಿದವು. ತತ್ಪರಿಣಾಮವಾಗಿ ಸಮುದಾಯ ಸಾಂಸ್ಕೃತಿಕ ಸಂಘಟನೆ ಹುಟ್ಟಿತು. ಆ ಮೂಲಕ ‘ಸಮುದಾಯ’ ಜನಪರವಾದ ಆಶಯಗಳಿಗೆ ಮುಖವಾಣಿಯಾಗಿ ರಂಗ ಚಟುವಟಿಕೆಗಳನ್ನು ಆರಂಭಿಸಿತು. ಹೀಗಾಗಿ ಸಮುದಾಯ ಮೊದಲು ಶುರುವಾದದ್ದು ಥಿಯೇಟರ್ ಮೂಲಕ. ಅದು ಮೊದಲು ತಿರುಗಿ ಬಿದ್ದದ್ದು ಥಿಯೇಟರ್ ಗಳಿಸುತ್ತಿದ್ದ ಅಕ್ರಮ ಹಣದ ವಿರುದ್ಧ.

ಇನ್ನೊಂದು ಮುಖ್ಯವಾದ ಕಾರಣವೆಂದರೆ ಆ ಹೊತ್ತಿನಲ್ಲಿ ಥಿಯೇಟರ್ ಕೇವಲ ಒಂದೆರಡು ಜಾತಿಗಳ ಕೈಯಲ್ಲಿತ್ತು. ದೇವರಾಜ ಅರಸು ರಾಜಕಾರಣದಿಂದಾಗಿ ಮುಧ್ಯಮ ಜಾತಿ ಯುವಕ, ಯುವತಿಯರು ಇಲ್ಲಿಗೆ ಪ್ರವೇಶ ಪಡೆಯಲು ಸಾಧ್ಯವಾಯಿತು. ಅದುವರೆಗೂ ಕೆಳಜಾತಿಗಳು, ಅಸ್ಪೃಶ್ಯರು ಇವರ್ಯಾರೂ ಥಿಯೇಟರ್ ಕಡೆ ತಲೆ ಕೂಡ ಹಾಕಿರಲಿಲ್ಲ. ಆದರೆ ಆ ಕಾಲದಲ್ಲಾದ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪಲ್ಲಟಗಳಿಂದಾಗಿ ಕೆಳಜಾತಿಯ ವಿದ್ಯಾವಂತ ಯುವಕ/ಯುವತಿಯರು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಪ್ರವೇಶಿಕೆಯನ್ನು ಪಡೆದರು.

ಅನಕ್ಷರತೆ ತಾಂಡವವಾಡುತ್ತಿರುವ ಭಾರತದಂತಹ ಜಾತಿನಿಷ್ಟ ಸಮಾಜದಲ್ಲಿ ಜಾತಿ, ಧರ್ಮ, ಭಾಷೆಗಳ ಹೆಸರಿನಲ್ಲಿ ಕೃತಕ ಗೋಡೆಗಳನ್ನು ನಿರ್ಮಿಸಿ ಅದರ ಪ್ರಯೋಜನ ಪಡೆದು ರೂಢಿಗತ ಅಸಮಾನತೆಯನ್ನು ಮುಂದುವರೆಸುವ ಹುನ್ನಾರಗಳನ್ನು ದೃಶ್ಯ ಮಾಧ್ಯಮದ (ಬೀದಿನಾಟಕ) ಮೂಲಕ ಜನರ ಬಳಿಗೆ ತೆಗೆದುಕೊಂಡು ಹೋಗುವುದು ಹಾಗೆಯೇ ವ್ಯವಸ್ಥೆ ಮತ್ತು ಜನರ ನಡುವೆಸಾವಯವ ಸಂಬಂಧವನ್ನು ಏರ್ಪಡಿಸಿ ಆ ಮೂಲಕ ಎಚ್ಚರವನ್ನು ಮೂಡಿಸುವ ಇರಾದೆಯಿಂದಲೂ ಸಮುದಾಯ ರೂಪುಗೊಂಡಿತು.

ಈ ರೀತಿಯ ಅನೇಕ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಘಟನೆಗಳ ಪುನರ್ ರೂಪಿಕೆಗೆ ಒತ್ತಾಸೆಯಾಗಿ ಸಮುದಾಯ ಸಾಂಸ್ಕೃತಿಕ ಸಂಘಟನೆ ಸ್ಥಾಪಿಸಲು ನಾಡಿನ ಪ್ರಗತಿಪರರು, ಸಾಹಿತಿಗಳು, ಕಲಾವಿದರು, ವಿಚಾರವಾದಿಗಳು ಮುಂದಾದರು. ಮುಖ್ಯವಾಗಿ ಸಿ.ಜಿ.ಕೆ., ಕಿ.ರಂ. ನಾಗರಾಜ, ಕೆ. ಮರುಳಸಿದ್ದಪ್ಪ, ಕೆ.ವಿ. ನಾರಾಯಣ, ಕ.ನಂ. ನಾಗರಾಜ, ಪ್ರಸನ್ನ, ಆರ್.ಕೆ. ಹುಡಗಿ, ಲಿಂಗದೇವರು ಹಳೇಮನೆ, ಚಂದ್ರಶೇಖರ ಪಾಟೀಲ, ಬರಗೂರು ರಾಮಚಂದ್ರಪ್ಪ, ಟಿ.ಎನ್. ನರಸಿಂಹನ್ ಮುಂತಾದವರು ಸೇರಿ ಸಮುದಾಯ ಸಾಂಸ್ಕೃತಿಕ ಸಂಘಟನೆಯನ್ನು ರೂಪಿಸಿದರು. ಇವರ ಜೊತೆಗೆ ಯುವ ಬರಹಗಾರರಾಗಿ, ಕಲಾವಿದರಾಗಿ ರೂಪುಗೊಳ್ಳುತ್ತಿದ್ದ ಡಿ.ಆರ್. ನಾಗರಾಜ್, ಸಿದ್ಧಲಿಂಗಯ್ಯ, ಅಗ್ರಹಾರ ಕೃಷ್ಣಮೂರ್ತಿ, ಶೂದ್ರ ಶ್ರೀನಿವಾಸ್, ಸಿ.ಕೆ. ಗುಂಡಣ್ಣ, ಎಂ.ಜಿ. ವೆಂಕಟೇಶ್, ಸಿ.ಆರ್. ಭಟ್, ಸಿ. ಸ್. ಬಾಳೆ, ಪ್ರತಾಪ್ ಸಿಂಗ್ ತಿವಾರಿ ಮುಂತಾದವರೆಲ್ಲರ ತಾತ್ವಿಕ ಚಿಂತನೆಗಳಿಂದ ಹರಳುಗಟ್ಟಿದ ಸಂಘಟನೆಯಾಯಿತು. ಇದಕ್ಕೆ ‘ಸಮುದಾಯ’ ಎಂಬ ಹೆಸರನ್ನು ಸೂಚಿಸಿದವರು ಕಿ.ರಂ. ನಾಗರಾಜ ಅವರು.

ಕೇವಲ ಮನರಂಜನೆಗಾಗಿ ನಾಟಕ ಮಾಡಿ ತೃಪ್ತಿಪಟ್ಟುಕೊಳ್ಳುತ್ತಿದ್ದ ಸಂದರ್ಭದಲ್ಲಿ ‘ಸಮುದಾಯ’ ತನ್ನ ವಿಶಿಷ್ಟ ಆಶಯಗಳಿಂದ ಬೀದಿಗಿಳಿದದ್ದು ಅನೇಕ ಪಲ್ಲಟಗಳಿಗೆ ಕಾರಣವಾಯಿತು. ರಂಗಭೂಮಿ ಜನಸಾಮಾನ್ಯರಿಗೆ ವಿಮುಖವಾಗಿದ್ದ ಕಾಲದಲ್ಲಿ ‘ಸಮುದಾಯ’ ಸಮಾಜಮುಖಿಯಾಗಿ ಜನರ ಆಶೋತ್ತರಗಳಿಗೆ ಸ್ಪಂದಿಸತೊಡಗಿತು. ಇದೇ ಸಂದರ್ಭದಲ್ಲಿ ಸೋವಿಯತ್ ಒಕ್ಕೂಟದ ಮ್ಯಾಕ್ಸಿಂಗಾರ್ಕಿ ಕೆಲವು ಸವಾಲುಗಳನ್ನು ಸಾಂಸ್ಕೃತಿಕ ಕಾರ್ಯಕರ್ತರ ಮುಂದಿಟ್ಟರು. “ಜಗತ್ತಿನ ಸಾಂಸ್ಕೃತಿಕ ಕಾರ್ಯಕರ್ತರೇ ನೀವು ಯಾರ ಪರವಿದ್ದೀರಿ ಸಾಮ್ರಾಜ್ಯಶಾಹಿ ಅಥವಾ ಯುದ್ಧದ ಪರವಿರುವಿರಾ? ಅಥವಾ ಸಮಾಜವಾದ ಮತ್ತು ಶಾಂತಿಯ ಪರವಿರುವಿರಾ?” ಎನ್ನುವ ಗಾರ್ಕಿಯ ಈ ಮಾತುಗಳು ವಿಶ್ವದ ಪ್ರಗತಿಪರರನ್ನು, ಎಡಪಂಥೀಯ ಚಿಂತಕರನ್ನು ಎಚ್ಚರಿಸಿದವು.

ಈ ನಡುವೆ ಕಲೆ ಮತ್ತು ಸಾಹಿತ್ಯ ಕೇವಲ ಕೆಲವೇ ಜನರ ಸ್ವತ್ತಾಗಿ ಜನಸಾಮಾನ್ಯರನ್ನು ನಿರ್ಲಕ್ಷಿಸಿತ್ತು. ‘ಕಲೆಗಾಗಿ ಕಲೆ’ ಎನ್ನುವ ಬೂರ್ಜ್ವಾ ಧೋರಣೆಯನ್ನು ಧಿಕ್ಕರಿಸಿ ‘ಜನರಿಗಾಗಿ ಕಲೆ’, ‘ಬದುಕಿಗಾಗಿ ಕಲೆ’ ಎನ್ನುವ ಜನಮುಖಿ ಪರಿಕಲ್ಪನೆಯನ್ನು ಪ್ರತಿಪಾದಿಸಲಾಯಿತು. ‘ಸಮಾಜದ ಅಭಿವೃದ್ಧಿಗಾಗಿ ಉಪಯೋಗವಾಗದ ಕಲೆ ಅಪ್ರಯೋಜಕ ಕಲೆ. ‘ ‘ಕಲೆ ಎಲ್ಲರಿಗಾಗಿ ಸಮಾಜದ ನೈಜ ವಾರಸುದಾರರ ಉನ್ನತಿಗಾಗಿ’ ಎಂಬ ಧೊರಣೆ ಜಗತ್ತಿನ ಬಹುತೇಕ ಸಾಹಿತ್ಯ ವಲಯದಲ್ಲಿ ಕಾಣಿಸಿಕೊಂಡಿತು. ಮುಂದೆ ಸಮುದಾಯ ‘ಕಲೆಗಾಗಿ ಕಲೆ’ ಎನ್ನುವ ಬೂರ್ಜ್ವಾ ಪರಿಕಲ್ಪನೆಯನ್ನು ಕಿತ್ತೆಸೆದು ‘ಬದುಕಿಗಾಗಿ ಕಲೆ’ ಎನ್ನುವ ತಾತ್ವಿಕತೆಯನ್ನು ಮುಖ್ಯವಾಗಿಟ್ಟುಕೊಂಡು ರಂಗ ಚಳವಳಿಯನ್ನು ಪ್ರಾರಂಭಿಸಿತು. ‘ಸಮುದಾಯ’ ಆ ಮೂಲಕ ದಲಿತರು ಮತ್ತು ಕೆಳಜಾತಿಗಳಲ್ಲಿ ಇದ್ದ ಕೆಲವರನ್ನು ರಂಗಭೂಮಿಗೆ ಸಮರ್ಥವಾಗಿ ತೊಡಗಿಸುವುದರ ಜೋತೆಗೆ ರಂಗಭೂಮಿಯನ್ನು, ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವಲ್ಲಿ ಯಸಸ್ವಿಯಾಯಿತು.

ಸಮುದಾಯದ ಉದ್ದೇಶಗಳು

  • ಕಲೆಯನ್ನು ಒಂದು ಸಾಮೂಹಿಕ ಮಾಧ್ಯಮವನ್ನಾಗಿ ಗುರುತಿಸಿ ಕಲೆಯು ಜನತೆಯ, ದೀನ ದಲಿತರ ಮತ್ತು ಈ ತನಕ ಎಲ್ಲಾ ಸವಲತ್ತುಗಳಿಂದಲೂ ವಂಚಿತರಾಗಿರುವವರ ನೋವು-ನಲಿವುಗಳಿಗೆ ಸ್ಪಂದಿಸುವುದು.
  • ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿರುವ ಅಜ್ಞಾನ, ಮೂಢನಂಬಿಕೆ, ಜಾತೀಯತೆ, ಮತಾಂಧತೆ ಮುಂತಾದ ಜೀವ ವಿರೋಧಿ ಮೌಲ್ಯಗಳನ್ನು ವಿರೋಧಿಸಿ ಜನತೆಯ ಸರ್ವಾಂಗೀಣ ಪ್ರಗತಿಗೆ ಅಗತ್ಯವಾದ ವೈಜ್ಞಾನಿಕ ಮನೋಭಾವವನ್ನು ಬೆಳಸುವುದು.
  • ಮಾನವನಿಂದ ಮಾನವನ ಶೋಷಣೆ ಇಲ್ಲದಂತಹ ಹೊಸ ಸಮಾಜವನ್ನು ನಿರ್ಮಿಸಲು ದುಡಿಯುವ ಎಲ್ಲ ಶಕ್ತಿಗಳನ್ನು ಸಮುದಾಯವು ಬೆಂಬಲಿಸುತ್ತಿದೆ. ಮತ್ತು ಸಾಮಾಜಿಕ ಪರಿವರ್ತನೆಗಾಗಿ ನಡೆಯುವ ಹೋರಾಟಗಳಿಗೆ ಮೂಲಭೂತ ಅವಶ್ಯಕತೆಗಳಾಗಿರುವ ರಾಷ್ಟ್ರೀಯ ಸ್ವಾತಂತ್ರ್ಯ, ಸಮಗ್ರತೆ, ಪ್ರಜಾಪ್ರಭುತ್ವ ಮತ್ತು ವಿಶ್ವಶಾಂತಿಯ ರಕ್ಷಣೆಗಾಗಿ ಶ್ರಮಿಸುವುದು.
  • ‘ಸಮುದಾಯ’ ಕರ್ನಾಟಕ ಜನತೆಯ ಸಾಮಾಜಿಕ ಸಾಂಸ್ಕೃತಿಕ ಚಳವಳಿಯ ಮುಂಚೂಣಿಯಲ್ಲಿರುತ್ತದೆ. ಇದು ನಮ್ಮ ಸಮಾಜದಲ್ಲಿರುವ ಜನರನ್ನು ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಜಾಗೃತಿಗೊಳಿಸಲು ನಾಟಕಗಳು, ಹಾಡುಗಳು, ಜನಪದ ಕಲೆಗಳು, ಚಲನಚಿತ್ರ ಪ್ರದರ್ಶನ, ವಿಚಾರಗೋಷ್ಠಿ, ಪುಸ್ತಕಾಲಯ, ಪ್ರಕಾಶನ ಇತ್ಯಾದಿ ಎಲ್ಲಾ ಪ್ರಕಾರಗಳ ಮೂಲಕ ದುಡಿಯುವುದು.

ಈ ರೀತಿಯ ಉದ್ದೇಶಗಳನ್ನಿಟ್ಟುಕೊಂಡು ಪ್ರಾರಂಭವಾದ ಸಮುದಾಯ ಮೊದಲು ಆಯ್ಕೆ ಮಾಡಿಕೊಂಡಿದ್ದು ಪ್ರೊಸೀನಿಯಂ ರಂಗಭೂಮಿಯನ್ನು ಎನ್ನುವುದು ಗಮನಾರ್ಹ. ಸಮುದಾಯ ತನ್ನ ಪ್ರಾರಂಭದ ದಿನಗಳಲ್ಲಿ ‘ಹುತ್ತವ ಬಡಿದರೆ’, ‘ತಾಯಿ’, ‘ಗೆಲಿಲಿಯೋ’, ‘ಕತ್ತಲೆ ದಾರಿ ದೂರ’, ‘ದಂಗೆಯ ಮುಂಚಿನ ದಿನಗಳು’ ಹೀಗೆ ತನ್ನ ಸಾಂಸ್ಕೃತಿಕ ಬದ್ಧತೆಯನ್ನು ಗಟ್ಟಿಗೊಳಿಸಲು ನಾಟಕಗಳನ್ನು ಪ್ರದರ್ಶಿಸಿತು. ಆ ಮೂಲಕ ಸಮುದಾಯ ರಾಜಕೀಯವಾಗಿ, ಸಾಮಾಜಿಕವಾಗಿ ಸಮಾಜದ ಒಂದು ದರ್ಪಣದ ರೀತಿಯಲ್ಲಿ ಕಾರ್ಯ ನಿರ್ವಹಿಸಿತು.

ಹೀಗೆ ಸಮುದಾಯ ತನ್ನ ಬದ್ಧತೆ ಮತ್ತು ವಿಶಿಷ್ಠತೆಗಳಿಂದ ಸಮರ್ಥವಾದ ಜನಮುಖಿ ನಾಟಕಗಳನ್ನು ಹೊಸ ಪರಿಭಾಷೆಯಲ್ಲಿ ರಂಗಭೂಮಿಯ ಮೂಲಕ ಪ್ರಕಟಿಸಿತು. ಜನಜೀವನದ ಮೌಲ್ಯಗಳನ್ನು ಐತಿಹಾಸಿಕ ಘಟನೆಗಳನ್ನು ಮರುವ್ಯಾಖ್ಯಾನ ಮಾಡಿ ಕಲೆಯ ಮೂಲಕ ತೀವ್ರ ಅನುಭವವನ್ನು ಜನರಿಗೆ ಉಂಟುಮಾಡುವ ಪ್ರಯತ್ನದಲ್ಲಿ ಮುಂದಾಯಿತು. ಆದರೆ ಸಮುದಾಯದ ನಿಜವಾದ ಹೆಗ್ಗಳಿಕೆ ಇರುವುದು ಅದು ಬೀದಿನಾಟಕಕ್ಕೆ ನೀಡಿದ ತಿರುವಿನಿಂದ.

ಸಾಂಸ್ಕೃತಿಕ ಜಾಥಾಗಳು

ಸಮುದಾಯದ ಬಹಳ ದೊಡ್ಡ ಸಾಧನೆ ಎಂದರೆ ಅದು ನಡೆಸಿದ ಜಾಥಾಗಳು. ರಂಗಭೂಮಿ ಸ್ಥಗಿತಗೊಂಡಿದ್ದಾಗ ಅದರಲ್ಲೂ ಕೇವಲ ಕೆಲವೇ ಸಮುದಾಯಗಳಿಗೆ ಮನರಂಜನೆಯ ವಸ್ತುವಾಗಿದ್ದ ಕಾಲದಲ್ಲಿ ಸಮುದಾಯ ರಂಗಭೂಮಿಯನ್ನು ಕಲಾಕ್ಷೇತ್ರದ ಮೆಟ್ಟಲುಗಳಿಂದ ಜನಸಾಮಾನ್ಯರತ್ತ ಕರೆದೊಯ್ದದ್ದು ಮಹತ್ವದ ಸಂಗತಿ. ಬಹುಶಃ ಕರ್ನಾಟಕದ ಮಟ್ಟಿಗೆ ರಂಗಭೂಮಿಯನ್ನು ಜನಸಾಮಾನ್ಯರತ್ತ ತಲುಪಿಸಿದ ಯಶಸ್ಸು ಸಮುದಾಯಕ್ಕೆ ಮಾತ್ರ ಸಲ್ಲುತ್ತದೆ. ಕೇವಲ ನಾಟಕಕ್ಕಾಗಿ ನಾಟಕ ಮಾಡುವುದಲ್ಲ, ಅದು ಹಳ್ಳಿಹಳ್ಳಿಗಳಿಗೆ ತಲುಪಬೇಕು, ಜನಸಾಮಾನ್ಯರನ್ನು ಮುಖಾಮುಖಿಯಾಗಬೇಕು. ಆ ಮೂಲಕ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅನ್ಯಾಯಗಳ ಬಗ್ಗೆ ತಿಳಿ ಹೇಳಬೇಕು ಎನ್ನುವ ಕಾರಣಕ್ಕೆ ರಾಜ್ಯಾದ್ಯಂತ ತಿರುಗಾಟ ಪ್ರಾರಂಭಿಸಿತು. ಜಾಥಾ ಅರಮನೆ-ಗುರುಮನೆಯನ್ನು ದಾಟಿ ಅಲ್ಲಿನ ಹುಳುಕುತನಗಳನ್ನು ಬಿಚ್ಚಿಡಲಾರಂಭಿಸಿತು. ಪರಿಣಾಮವಾಗಿ ಬಂಡವಾಳಶಾಹಿಗಳು, ಪಟ್ಟ ಭದ್ರ ಹಿತಾಸಕ್ತಿಗಳು, ಭ್ರಷ್ಟ ರಾಜಕಾರಣಿಗಳು, ಶೋಷಕ ಭೂ ಮಾಲೀಕರುಗಳಲ್ಲಿ ನಡುಕ ಹುಟ್ಟಿಸಿತು. ಇದರಿಂದ ಅಲ್ಲಿಯವರೆಗೂ ‘ತಮ್ಮ ಹಣೆ ಬರಹವೇ ಇದು’ ಎಂದು ತಮ್ಮ ಪಾಡಿಗೆ ತಾವು ಬದುಕುತ್ತಿದ್ದವರಲ್ಲಿ ಆತ್ಮವಿಶ್ವಾಸವನ್ನು ಮೂಡಿಸಿತು.

ಸರ್ವಾಧಿಕಾರಿ ವಿರೋಧಿ ಸಾಂಸ್ಕೃತಿಕ ಜಾಥಾ : ೧೯೭೮

ತುರ್ತು ಪರಿಸ್ಥಿತಿಯ ಕರಾಳ ಛಾಯೆಯಿಂದ ತತ್ತರಿಸಿದ್ದ ದೇಶ ಇಂದಿರಾಗಾಂಧಿಯ ಸರ್ವಾಧಿಕಾರದ ಧೋರಣೆಗಳಿಂದ ಮತ್ತಷ್ಟು ಕಂಗಾಲಾಯಿತು. ಇದೇ ಸಂದರ್ಭದಲ್ಲಿ ಸಾಹಿತಿ ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದರ ಮೂಲಕ ಪ್ರಜಾಸತ್ತೆಯ ಕೊರಳ ಹಿಚುಕಿತು. ವಂಶಪಾರಂಪರ್ಯ ಆಡಳಿತವೇ ಮುಖ್ಯವಾಗತೊಡಗಿತು. ವ್ಯವಸ್ಥೆಯ ವಿರುದ್ಧ ದನಿ ಎತ್ತಿದವರಿಗೆ ನಿರ್ದಾಕ್ಷಿಣ್ಯವಾಗಿ ಸೆರಮನೆ ದಾರಿ ತೋರಿಸಲಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ರಾಯ್ ಬರೇಲಿಯಿಂದ ಲೋಕಸಭೆಗೆ ಸ್ಪರ್ಧಿಸಿದ್ದ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಸರ್ಕಾರಿ ಯಂತ್ರವನ್ನು ದುರುಪಯೋಗ ಮಾಡಿಕೊಂಡರೆಂಬ ಕಾರಣಕ್ಕೆ ಅಲಹಾಬಾದ್ ಹೈಕೋರ್ಟ್ ಅವರ ಆಯ್ಕೆಯನ್ನು ಅಸಿಂಧುಗೊಳಿಸಿತು. ತಕ್ಷಣವೇ ಚಿಕ್ಕಮಗಳೂರಿನ ಲೋಕಸಭಾ ಉಪಚುನಾವಣೆ ಘೋಷಣೆಯಾಯಿತು. ಈ ಉಪಚುನಾವಣೆಗೆ ಇಂದಿರಾ ಗಾಂಧಿ ನಿಲ್ಲುವುದು ಖಚಿತವಾದ ಮೇಲೆ ಸಮುದಾಯದ ಎಲ್ಲಾ ಸಾಮಾಜಿಕ ಕಾರ್ಯಕರ್ತರು, ನಾಡಿನ ಕಲಾವಿದರು, ಸಾಹಿತಿಗಳು, ಬುದ್ಧಿಜೀವಿಗಳು ಒಂದಾಗಿ ಇಂದಿರಾ ಗಾಂಧಿಯ ವಿರುದ್ಧ ಚುನಾವಣಾ ಪ್ರಚಾರ ಮಾಡಲು ತೀರ್ಮಾನಿಸಿದರು.

ಇಂದಿರಾ ಗಾಂಧಿಯವರ ಸರ್ವಾಧಿಕಾರವನ್ನು ವಿರೋಧಿಸಿ ಅನೇಕ ರಂಗತಂಡಗಳು ನಾಟಕಗಳನ್ನು ಮಾಡಿದವು. ಕುಂದಾಪುರದಿಂದ ಬಂದಿದ್ದ ತಂಡವೊಂದು ಹಾಡುಗಳು ಹಾಗೂ ಗೀತರೂಪಕಗಳ ಮೂಲಕ ಇಂದಿರಾ ಗಾಂಧಿಯವರ ವಿರುದ್ಧ ಪ್ರಚಾರ ಕೈಗೊಂಡಿತು. ಈ ಪ್ರಚಾರ ಕಾರ್ಯದಲ್ಲಿ ಯು.ಆರ್. ಅನಂತಮೂರ್ತಿ, ಸಿದ್ಧಲಿಂಗಯ್ಯ, ಪಿ. ಲಂಕೇಶ್, ಅಡಿಗ, ಶಿವರಾಮ ಕಾರಂತ, ದೇವನೂರು ಮಹಾದೇವ, ಮಹಾತ್ಮಗಾಂಧಿ ಮೊಮ್ಮಗ ರಾಮಚಂದ್ರ ಗಾಂಧಿ ಮೊದಲಾದ ಲೇಖಕರು, ಬುದ್ಧಿ ಜೀವಿಗಳು ಭಾಗವಹಿಸಿದ್ದರು.

ಚಿಕ್ಕಮಗಳೂರಿನ ಪ್ರತಿ ಹಳ್ಳಿಗೆ ತಂಡೋಪತಂಡವಾಗಿ ತೆರಳಿ ಭಾಷಣ, ನಾಟಕ, ಹಾಡುಗಳ ಮೂಲಕ ಜಾಗೃತಿ ಉಂಟು ಮಾಡಲಾಯಿತು. ಅನೇಕ ಸತ್ಯ ಘಟನೆಗಳನ್ನು ಆಧರಿಸಿದ ನಾಟಕಗಳ ಮೂಲಕ ಜನರಿಗೆ ಹಲವು ವಾಸ್ತವ ಸಂಗತಿಗಳನ್ನು ಹೇಳುವ ಪ್ರಯತ್ನ ಮಾಡಲಾಯಿತು. ಸಮುದಾಯದ ೫೦ ಸದಸ್ಯರು ೪೦ ಗುಂಪುಗಳಲ್ಲಿ ಚುನಾವಣಾ ಕ್ಷೇತ್ರದ ವಿವಿಧ ತಾಲ್ಲೂಕುಗಳಿಗೆ ಹೋಗಿ ೩೫೦ಕ್ಕೂ ಹೆಚ್ಚಿನ ಪ್ರದರ್ಶನಗಳನ್ನು ನೀಡಿದರು. ೭ ಲಕ್ಷಕ್ಕೂ ಹೆಚ್ಚಿನ ಜನ ಈ ನಾಟಕಗಳನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಪ್ರದರ್ಶಿಸಿದ ನಾಟಕಗಳೆಂದರೆ ‘ಪತ್ರೆ ಸಂಗಪ್ಪನ ಕೊಲೆ’, ‘ಇಂದಿರಾ ಗಾಂಧಿಯವರ ಸುಳ್ಳು ಪ್ರಮಾಣ ಪತ್ರ’, ಟರ್ಕ್‌ಮನ್ ಗೇಟ್ ಆಧರಿಸಿದ ಕಿರು ನಾಟಕ, ಹಲವಾರು ರೂಪಕಗಳು, ತುರ್ತು ಪರಿಸ್ಥಿತಿಯ ದೌರ್ಜನ್ಯಗಳು, ‘ಛಸನಾಲ’ ಗಣಿ ದುರಂತವನ್ನು ಆಧರಿಸಿದ ರೂಪಕಗಳು, ಆಯಾ ಪ್ರದೇಶದಲ್ಲಿದ್ದಂತೆ ಗೇಣಿ ಸಮಸ್ಯೆ, ಜಾತಿ ಸಮಸ್ಯೆ, ದಲಿತರ ಸಮಸ್ಯೆ ಮುಂತಾದ ವಿಷಯಗಳ ಬಗ್ಗೆ ಮನವರಿಕೆ ಮಾಡಲು ಪ್ರಯತ್ನಿಸಲಾಗುತ್ತಿತ್ತು.

ಹೀಗೆ ‘ಸಮುದಾಯ’ ಚಿಕ್ಕಮಗಳೂರು ಉಪಚುನಾವಣಾ ಸಂದರ್ಭದಲ್ಲಿ ಹಾಡು, ನಾಟಕ, ಭಾಷಣಗಳ ಮೂಲಕ ಪ್ರತಿಹಳ್ಳಿಗೂ ಹೋಗಿ ಜಾಗೃತಿ ಪ್ರಚಾರ ಕೈಗೊಂಡಿತು.