ಹೊಸಮೌಲ್ಯಗಳತ್ತ ಸಾಂಸ್ಕೃತಿಕ ಜಾಥಾ : ೧೯೭೯

ಈ ಜಾಥಾ ಪ್ರಪ್ರಥಮವಾಗಿ ಇಡೀ ಕರ್ನಾಟಕದ ಹಳ್ಳಿಹಳ್ಳಿಗಳನ್ನು ತಲುಪಿದ ಮಹತ್ವಾಕಾಂಕ್ಷೆಯ ಜಾಥಾ. ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಸಂಚಲನ ಉಂಟುಮಾಡಿದ ಈ ಜಾಥಾ ಇಡೀ ಕರ್ನಾಟಕದಾದ್ಯಂತ ಬೃಹತ್ ಹೋರಾಟಕ್ಕೆ ನಾಂದಿಯಾಯಿತು. ರಾಜ್ಯ ಬರಗಾಲದ ದವಡೆಯಿಂದ ಇನ್ನೂ ಬಿಡುಗಡೆ ಹೊಂದಿರಲಿಲ್ಲ. ಎಲ್ಲೆಲ್ಲೂ ಬಡತನ, ಅನಕ್ಷರತೆ, ಅಜ್ಞಾನ ಇವುಗಳ ಉತ್ಪನ್ನಗಳಾದ ಅಸ್ಪ್ರಶ್ಯತೆ ಮತ್ತು ಜಾತೀಯತೆ ತಾಂಡವವಾಡುತ್ತಿದ್ದವು. ಇದೇ ಸಂದರ್ಭದಲ್ಲಿ ಬಿಹಾರದ ಬೆಲ್ಚಿ ಗ್ರಾಮದಲ್ಲಿ ೮ ಜನ ದಲಿತರನ್ನು ಅಲ್ಲಿನ ಜಮೀನುದಾರರು ಬರ್ಬರವಾಗಿ ಸುಟ್ಟರು. ಕಾರಣ ಜಮೀನುದಾರನು ಕೂಲಿಕಾರರಿಗೆ ದಿವೊಂದಕ್ಕೆ ೩ ಸೇರು ಜೋಳ ಕೊಡಲು ಮುಂದಾದನು. ಇದನ್ನು ಪ್ರಶ್ನಿಸಿದ್ದಕ್ಕೆ ಮಾತಿಗೆ ಮಾತು ಬೆಳೆದು ಈ ಅನಾಹುತ ನಡೆದೇ ಹೋಯಿತು. ಸಿ. ಜಿ. ಕೆ. ಜಾಥಾಗೆ ಈ ದುರಂತವೇ ಸೂಕ್ತವಾದ ವಿಷಯವೆಂದು ತಿಳಿದು ನಾಟಕ ರಚನೆ ಮತ್ತು ನಿರ್ದೇಶನ ಎರಡನ್ನೂ ಯಶಸ್ವಿಯಾಗಿ ನಿಭಾಯಿಸಿದರು. ಹೀಗೆಯೇ ಛಸನಾಲ ಗಣಿ ದುರಂತ, ಜಮೀನುದಾರರ ದೌರ್ಜನ್ಯಕ್ಕೆ ಬಲಿಯಾದ ಪತ್ರೆ ಸಂಗಪ್ಪನಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದವು. ಇದೇ ಸಂದರ್ಭವನ್ನು ಬಳಸಿಕೊಂಡು ೧೯೭೯ರಲ್ಲಿ ಅಕ್ಟೋಬರ್ ೧೫ ರಿಂದ ನವೆಂಬರ್ ೧೬ರ ವರೆಗೆ ಒಂದು ತಿಂಗಳ ಬೃಹತ್ ಜಾಥಾವನ್ನು ಸಮುದಾಯ ಆಯೋಜಿಸಿತು. ಈ ಜಾಥಾದಲ್ಲಿ ರಾಜ್ಯದ ಎಲ್ಲಾ ‘ಸಮುದಾಯ’ ಘಟಕದ ಕಾರ್ಯಕರ್ತರು ಎರಡು ತಂಡಗಳಾಗಿ ರೂಪಿಸಿಕೊಂಡು ಕೆ. ಜಿ. ಎಫ್. ನಿಂದ ಒಂದು ತಂಡ, ಬೀದರ್ ನಿಂದ ಮತ್ತೊಂದು ತಂಡ ಹೊರಟು ಎರಡೂ ತಂಡಗಳು ಜಾಥಾ ಮುಗಿಸಿ ಧಾರವಾಡದಲ್ಲಿ ಸಮಾಪ್ತಿಗೊಳ್ಳುವುದೆಂದು ತೀರ್ಮಾನಿಸಲಾಯಿತು.

ಹೀಗೆ ತೀರ್ಮಾನವಾದ ಮೇಲೆ ಬೀದರ್ ತಂಡದ ಉದ್ಘಾಟನೆಗೆ ಎಂ.ಎಸ್. ಸತ್ಯು, ಮಾನಪ್ಪ, ಇಂದೂಧರ ಹೊನ್ನಾಪುರ ಹೊರಟರು. ಈ ತಂಡದ ನಾಯಕತ್ವವನ್ನು ಸಿ. ಜಿ. ಕೆ. ವಹಿಸಿದ್ದರು. ಗಂಗಾಧರ ಸ್ವಾಮಿ ಅವರಿಗೆ ಸಹಾಯ ಮಾಡುವುದು. ಹಾಗೆಯೇ ಕೆ.ಜಿ.ಎಫ್. ತಂಡದ ಉದ್ಘಾಟನೆಗೆ ಹೊರಟವರು ಖಾದ್ರಿ ಶಮಣ್ಣ, ಕಾಳೇಗೌಡ ನಾಗವಾರ, ಸಿದ್ಧಲಿಂಗಯ್ಯ, ಕೆ. ರಾಮಯ್ಯ ಹಾಗೆಯೇ ಈ ತಂಡದಲ್ಲಿದ್ದ ಇನ್ನಿತರ ಕಲಾವಿದರೆಂದರೆ ಗುಂಡಣ್ಣ, ಶಶಿಧರ್ ಅಡಪ, ಮಾಲತಿ, ಪಿಚ್ಚಳ್ಳಿ ಶ್ರೀನಿವಾಸ್, ಲಿಂಗದೇವರು ಹಳೇಮನೆ, ಜನಾರ್ಧನ, ಮುದ್ದಣ್ಣ ಮುಂತಾದವರು. ಜಾಥಾ ಎಷ್ಟು ವ್ಯವಸ್ಥಿತವಾಗಿ ರೂಪುಗೊಂಡಿತ್ತು ಎನ್ನುವುದನ್ನು ಸಿ. ಜಿ. ಕೆ. ಹೀಗೆ ವಿವರಿಸುತ್ತಾರೆ. ಸನತ್, ಸಿ. ಬಸವಲಿಂಗಯ್ಯ ಹಾಡಿನ ತಂಡ ರೂಪಿಸಿದರೆ, ಗಂಗಾಧರಸ್ವಾಮಿ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುವುದು. ಆರ್. ಕೆ. ಹುಡಗಿ, ತಿವಾರಿಯವರು ಜಾಥಾದ ಆರಂಭಕ್ಕೂ ಮುಂಚೆ ಅದರ ಆಶಯವನ್ನು ಹೇಳುವುದು ಇತ್ಯಾದಿ ಸಂಘಟಿಸಿ ಜಾಥಾಗೆ ಬೇಕಾಗಿದ್ದ ಹಲವು ಭಿತ್ತಿ ಪತ್ರಗಳನ್ನು ಬರೆಯತೊಡಗಿದರು. ‘ಹೊಸ ಮೌಲ್ಯಗಳತ್ತ ಸಾಂಸ್ಕೃತಿಕ ಜಾಥಾ’, ‘ಗುಡಿ ಚರ್ಚು ಮಸಜೀಗಳ ಬಿಟ್ಟು ಹೊರಬನ್ನಿ’ ಹೀಗೆ ಭಿತ್ತಿ ಪತ್ರಗಳ ಉಸ್ತುವಾರಿನ್ನು ಕೆ. ಷರೀಫ ನೋಡಿಕೊಂಡರು. ಇಷ್ಟು ಚರ್ಚೆ ಸಿದ್ಧತೆಗಳ ನಡುವೆ ರೂಪಿತಗೊಂಡ ಈ ಜಾಥಾ ಯಶಸ್ವಿಯಾಗಿ ನಡೆದು ಮೊದಲೇ ತೀರ್ಮಾನವಾಗಿದ್ದಂತೆ ೧೫. ೧೧. ೧೯೭೯ರಲ್ಲಿ ಧಾರವಾಡದಲ್ಲಿ ಸಮಾಪ್ತಿಯಾಯಿತು.

ರೈತರೆಡೆಗೆ ಸಮುದಾಯದ ಸಾಂಸ್ಕೃತಿಕ ಜಾಥಾ : ೧೯೮೧

ರಾಜ್ಯ ರೈತ ಸಂಘ ಅಸ್ತಿತ್ವಕ್ಕೆ ಬಂದು ಒಂದೆರಡು ವರ್ಷ ಕಳೆದಿತ್ತು. ರೈತ ಚಳವಳಿಯ ಉಚ್ಛ್ರಾಯ ಸ್ಥಿತಿ ತಲುಪುತ್ತಿದ್ದ ಕಾಲಘಟ್ಟ. ರೈತರ ಸಮಸ್ಯೆಗಳಾದ ಮಾರುಕಟ್ಟೆಯ ಮೋಸಗಳು, ಮಧ್ಯವರ್ತಿಗಳ ಕಪಟತನ, ಸರ್ಕಾರ ರೈತರ ಬಗ್ಗೆ ತಳೆದಿದ್ದ ನಿರ್ಲಕ್ಷ್ಯ, ಸಣ್ಣ ರೈತರ ಸಮಸ್ಯೆ ಹೀಗೆ ಅನೇಕ ಸಮಸ್ಯೆಗಳನ್ನಿಟ್ಟುಕೊಂಡು ಹೋರಾಡುತ್ತಿದ್ದ ಸಂಕ್ರಮಣ ಕಾಲ. ಇಷ್ಟೊತ್ತಿಗಾಗಲೇ ‘ಸಮುದಾಯ’ ಹಲವಾರು ರಾಜಕೀಯ ಮತ್ತು ಸಾಂಸ್ಕೃತಿಕ ಪ್ರಶ್ನೆಗಳನ್ನಿಟ್ಟುಕೊಂಡು ರಾಜ್ಯವ್ಯಾಪಿ ಜಾಥಾ ಕೈಗೊಂಡು ಅದರಲ್ಲಿ ಸಾಕಷ್ಟು ಯಶಸ್ವಿಯೂ ಆಗಿತ್ತು. ಜನಸಾಮಾನ್ಯರ, ರೈತಾಪಿವರ್ಗದವರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರ ನಿಷ್ಕ್ರಿಯವಾಗಿತ್ತು. ಆಡಳಿತ ಯಂತ್ರವು ಜನಸಾಮಾನ್ಯರ ಅಹವಾಲುಗಳಿಗೆ ಸರಿಯಾಗಿ ಸ್ಪಂದಿಸದಿದ್ದರಿಂದ ಸಮುದಾಯ ಮತ್ತೊಮ್ಮೆ ಜನರತ್ತ ನಡೆಯಬೇಕಾಯಿತು.

ಮಲಪ್ರಭ ನೀರು, ನರಗುಂದ, ನವಲಗುಂದ ಭಾಗದ ಕೃಷಿಕರಿಗೆ ಹರಿಯದೆ ಹೋದರೂ ಆ ಪ್ರದೇಶದ ರೈತರು ‘ನೀರಾವರಿ ಕರ’ವನ್ನು ನೀಡಬೇಕೆಂಬ ಹಿನ್ನೆಲೆಯಲ್ಲಿ ಭುಗಿಲೆದ್ದ ‘ಕರ ನಿರಾಕರಣಾ ಚಳವಳಿ’ ಎಲ್ಲರ ನಿರೀಕ್ಷೆಗೂ ಮೀರಿ ರಾಜ್ಯವ್ಯಾಪಿ ಚಳವಳಿಯಾಗಿ ಮಾರ್ಪಟ್ಟಿತ್ತು. ಅದೇ ವೇಳೆಗೆ ಬೆಂಗಳೂರಿನ ಸಾರ್ವಜನಿಕ ಉದ್ದಿಮೆಗಳ ಕಾರ್ಮಿಕರ ಮುಷ್ಕರದಿಂದಾಗಿ ಸತತ ೮೧ ದಿನಗಳವರೆಗೆ ‘ಬಂದ್’ ಆಗಿದ್ದವು. ತುರ್ತು ಪರಿಸ್ಥಿತಿಯ ಮತ್ತಿನಲ್ಲೇ ಇದ್ದ ಗುಂಡೂರಾವ್ ಸರ್ಕಾರ ರೈತ ಕಾರ್ಮಿಕರನ್ನು ಸದೆಬಡಿಯಲು ಗೋಲಿಬಾರ್ ಮಾಡಿ ಅನೇಕ ಜೀವಗಳನ್ನು ಕೊಂದು ಅವರ ಕುಟುಂಬಗಳನ್ನು ಅನಾಥರನ್ನಾಗಿ ಮಾಡಿತ್ತು. ಇದೆಲ್ಲದರ ಪರಿಣಾಮವಾಗಿ ಸಮುದಾಯ ‘ರೈತನೆಡೆಗೆ ಸಮುದಾಯದ ಜಾಥಾ’ವನ್ನು ರಾಜ್ಯ ಮಟ್ಟದಲ್ಲಿ ಆಯೋಜಿಸಿತು. ರಾಜ್ಯದ ಹತ್ತು ಜಿಲ್ಲೆಗಳಲ್ಲಿ ಸ್ಥಳೀಯ ಘಟಕಗಳ ಮೂಲಕ ಏಕಕಾಲದಲ್ಲಿ ೧೯೮೧ರ ಜನವರಿ ೧೫ರಿಂದ ೩೦ರವರೆಗೆ ಅತ್ಯಂತ ಯಶಸ್ವಿಯಾಗಿ ಸಾಂಸ್ಕೃತಿಕ ಜಾಥಾ ನಡೆಯಿತು. ಎಡ ಪ್ರಜಾಪ್ರಭುತ್ವ ಶಕ್ತಿಗಳು ಒಂದಾಗಿ ರೈತನೆಡೆಗೆ ಎಂಬ ಉದ್ಘೋಷದೊಂದಿಗೆ ನಡೆದ ಈ ಜಾಥಾ ‘ಸಮುದಾಯ’ಕ್ಕೆ ಇನ್ನಷ್ಟು ಆತ್ಮವಿಶ್ವಾಸ ಮೂಡಿಸಿತು. ಇದೇ ಸಂದರ್ಭದಲ್ಲಿ ಭಾರತದಲ್ಲಿ ನಡೆದ ಅನೇಕ ರೈತ ಹೋರಾಟಗಳ ಸ್ವರೂಪವನ್ನು ತಿಳಿಸುವ ಕಿರುಪುಸ್ತಕಗಳನ್ನು ಜಾಥಾದ ಉದ್ದಕ್ಕೂ ನಾಡಿನ ಇತರ ಪ್ರಗತಿಪರ ಪುಸ್ತಕ ಪ್ರಕಾಶಕರೊಂದಿಗೆ ಸೇರಿ ವೈಚರಿಕ ಸಾಹಿತ್ಯವನ್ನು ಪ್ರಸಾರ ಮಾಡಲಾಯಿತು. ಈ ಎಲ್ಲದರ ಪರಿಣಾಮವಾಗಿ ೧೯೮೩ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಕಾಂಗ್ರೇಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂತು. ಗೋಕಾಕ್ ಚಳವಳಿ, ರೈತ ಚಳವಳಿಯ ಜೊತೆಗೆ ಸಮುದಾಯದ ಜಾಥಾ ಉಂಟುಮಾಡಿದ್ದ ಸಾಮಾಜಿಕ, ರಾಜಕೀಯ ಅರಿವು ಈ ಸಂದರ್ಭದಲ್ಲಿ ಗಮನಾರ್ಹ ಬದಲಾವಣೆಗೆ ಕಾರಣವಾಯಿತು. ಈ ರೀತಿಯ ಜಾಥಾ ಮತ್ತು ರೈತ ಚಳವಳಿಯ ನೈತಿಕ ಶಕ್ತಿ ರೈತರ ಆತ್ಮವಿಶ್ವಾಸ ಹೆಚ್ಚಿಸಿತು.

ಭೀಕರ ಬರಗಾಲದೆದುರು ಸಮುದಾಯದ ದಶಕದ ಜಾಥಾ

೧೯೮೫ರಲ್ಲಿ ಕರ್ನಾಟಕ ಹಿಂದೆಂದೂ ಕಂಡರಿಯದ ಭೀಕರ ಬರಗಾಲವನ್ನು ಕಂಡಿತು. ಇದು ಪ್ರಗತಿ ಪಥದಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿತು. ಇದೇ ಸಂದರ್ಭದಲ್ಲಿ ರಾಜ್ಯಕ್ಕೆ ಆಗತಾನೆ ಲಗ್ಗೆ ಇಡುತ್ತಿದ್ದ ಬಹುರಾಷ್ಟೀಯ ಕಂಪನಿಗಳು ನೀಲಗಿರಿ ಸಸಿಗಳನ್ನು ಕೊಟ್ಟು ರೈತರ ಹೊಲಗಳಲ್ಲಿ ಬೆಳೆಸಲು ಪ್ರಾರಂಭಿಸಿದರು. ಇದರಿಂದ ಸಮುದಾಯದ ಎಲ್ಲಾ ಕ್ರಿಯಾಶೀಲ ಮನಸ್ಸುಗಳು ಎಚ್ಚೆತ್ತವು. ‘ನೀಲಗಿರಿ’ ಎನ್ನುವುದು ರೈತನ ಶತ್ರು. ಅದು ಭುಮಿಯಲ್ಲಿನ ನೀರಿನ ಅಂಶವನ್ನು ಹೀರಿ ಭೂಮಿಯನ್ನು ಬಂಜರು ಮಾಡುತ್ತದೆ ಎನ್ನುವ ಸತ್ಯವನ್ನು ಅರಿತ ಸಮುದಾಯ ಜಾಥಾ ನಡೆಸಲು ಮುಂದಾಯಿತು.

ಆ ವೇಳೆಗಾಗಲೇ ಸಮುದಾಯಕ್ಕೆ ೧೦ ವರ್ಷಗಳು ತುಂಬಿದ್ದವು. ಇದೇ ಸಂದರ್ಭದಲ್ಲಿ ರಾಜ್ಯಾದ್ಯಂತ ತಲೆ ಎತ್ತಿದ ಭೀಕರ ಬರಗಾಲದೆದುರು ಸಮುದಾಯ ಒಂದು ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿತು. ಬರಗಾಲಕ್ಕೆ ಸಾಮಾಜಿಕ, ರಾಜಕೀಯ ಹಾಗೂ ಪರಿಸರದ ಕಾರಣಗಳನ್ನು ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ‘ಭೀಕರ ಬರಗಾಲದೆದುರು ಸಮುದಾಯದ ದಶಕದ ಜಾಥಾ’ವನ್ನು ರಾಜ್ಯದ ಹಲವಾರು ಪ್ರದೇಶಗಳಲ್ಲಿ ನಡೆಸಿ ಬೆಂಗಳೂರಿನಲ್ಲಿ ಸಮಾರೋಪ ಗೊಳಿಸಲಾಯಿತು. ಕುಂದಾಪುರ, ಬೀದರ್ ನಿಂದ ಹೊರಟ ಈ ಜಾಥಾ ಒಂದು ತಿಂಗಳ ಕಾಲ ರಾಜ್ಯದ ಅನೇಕ ಕಡೆಗಳಲ್ಲಿ ಯಶಸ್ವಿಯಾಗಿ ನಡೆಯಿತು.

ದಲಿತ ಚಳುವಳಿ

ಭಾರತೀಯ ಜಾತಿ ಕೇಂದ್ರಿತ ಸಮಾಜದಲ್ಲಿ ತರತಮಗಳು ಎಲ್ಲಾ ಕಡೆಯೂ ಮೈಚಾಚಿ ನಿಂತಿದೆ. ಒಂದು ಗುಂಪಿನ ಜನರನ್ನು ಕಗ್ಗತ್ತಲೆಯಲ್ಲಿ ಕೂಡಿಟ್ಟು ಅವರ ಬೌದ್ಧಿಕ ಬೆಳವಣಿಗೆಗಳನ್ನೂ ಅನಾದಿ ಕಾಲದಿಂದಲೂ ಹತ್ತಿಕ್ಕುತ್ತ ಹೊಸ ಸಮಾಜವನ್ನು ನೋಡದಂತೆ ಅವರ ದೃಷ್ಟಿಯನ್ನು ಬಂಧನದಲ್ಲಿಟ್ಟು ಅವರ ಬಗ್ಗೆ ಸ್ವತಃ ಅವರೇ ಯೋಚಿಸಲು ಬಿಡದೆ ಎಲ್ಲಾ ರೀತಿಯಿಂದಲೂ ನಿರ್ಬಂಧವನ್ನು ಹೇರಲಾಗಿತ್ತು. ಈ ಸ್ಥತಿ ಸರಿಸುಮಾರು ೨೦ನೇ ಶತಮಾನದವರೆಗೂ ಮುಂದುವರಿದಿತ್ತು. ಈ ಘೋರ ಸ್ಥಿತಿಯ ಸ್ಪಷ್ಟ ಅರಿವಾದದ್ದು ಅಂಬೇಡ್ಕರ್ ಆಗಮನದ ನಂತರವೇ. ಈ ಹಿಂದೆ ಪುಲೆ, ಪೆರಿಯಾರ್ ರಂತಹ ಸಮಾಜ ಸುಧಾರಕರು ತಳಸಮುದಾಯಗಳ ಬಗ್ಗೆ ಹೋರಾಟ ನಡೆಸಿದ್ದರೂ ಅದಕ್ಕೊಂದು ಸ್ಪಷ್ಟತೆ ಸಿಕ್ಕಿದ್ದು ಅಂಬೇಡ್ಕರ್ ರವರು ಚಳವಳಿಗಳನ್ನು ಕೈಗೆತ್ತಿಕೊಂಡ ದಿನಗಳಿಂದಲೇ ಅನ್ನುವುದು ನಿರ್ವಿವಾದ. ಕರ್ನಾಟಕದಲ್ಲಿಯೂ ಸ್ವಾತಂತ್ರ್ಯ ಪೂರ್ವದಲ್ಲಿಯೇ ದಲಿತರ ಪರ ಹೋರಾಟ, ಚಿಂತನೆ ಪ್ರಾರಂಭವಾಗಿದ್ದರೂ ಅದೊಂದು ಚಳವಳಿಯಾಗಿ ರೂಪುಗೊಂಡದ್ದು ೭೦ರ ದಶಕದಲ್ಲಿಯೇ. ಆಧುನಿಕ ಶಿಕ್ಷಣ, ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನಾತ್ಮಕ ಮೀಸಲಾತಿ ಮೊದಲ ತಲೆಮಾರಿನ ದಲಿತ ಸಮುದಾಯಗಳಲ್ಲಿ ಪ್ರಜ್ಞೆ ಮೂಡಿಸಿತು.

ಇದರ ಪರಿಣಾಮವಾಗಿ ಸಾಹಿತ್ಯ ಕ್ಷೇತ್ರದಲ್ಲಿ ದಲಿತ ಜನಾಂಗದ ಸಮರ್ಥ ಪ್ರತಿನಿಧಿಗಳಾಗಿ ದೇವನೂರು ಮಹಾದೇವಯ್ಯ ಮತ್ತು ಸಿದ್ಧಲಿಂಗಯ್ಯ ಕಾಣಿಸಿಕೊಂಡರು. ದೇವನೂರು ಮಹಾದೇವಯ್ಯ ತಮ್ಮ ‘ದ್ಯಾವನೂರು’ ಕಥಾ ಸಂಕಲನದ ಮೂಲಕ ದಲಿತ ಜಗತ್ತಿನ ಹಟ್ಟಿಗಳ ಬದುಕನ್ನು ತೆರೆದಿಟ್ಟರೆ, ಸಿದ್ಧಲಿಂಗಯ್ಯನವರು ‘ಇಕ್ಕರ್ಲಾ ವದೀರ್ಲಾ ಈ ನ್ನ ಮಕ್ಕಳ ಚರ್ಮ ಎಬ್ರಲಾ’ ಎನ್ನುವ ಶಕ್ತಿಶಾಲಿ ಕವನಗಳ ಮೂಲಕ ದಲಿತರ ನೋವಿನ ಆಕ್ರೋಶದ ದನಿಯಾದರು. ಇಂತಹ ಸಾಹಿತ್ಯಿಕ ಬರವಣಿಗೆಯು ಆತ್ಮಸ್ಥೈರ್ಯವನ್ನು ಕಳೆದುಕೊಂಡಿದ್ದ ಶೋಷಿತ ಸಮುದಾಯಗಳಿಗೆ ಹೋರಾಟದ ಪಾಠ ಕಲಿಸುವುದರ ಜೊತೆಗೆ ಪ್ರಶ್ನಿಸುವ ಧೈರ್ಯ ಮತ್ತು ಬಂಡೇಳುವ ಮನೋಭಾವವನ್ನು ಹುಟ್ಟುಹಾಕಿತು.

ಅಲ್ಲಿಯವರೆಗೂ ಏನೇ ದೌರ್ಜನ್ಯ, ಅನ್ಯಾಯ, ಅವಮಾನ, ಅತ್ಯಾಚಾರ ನಡೆದರೂ ಅದು ಸಹಜವೆಂಬಂತೆ ಯಾವ ಪ್ರತಿಭಟನೆಯನ್ನೂ ಮಾಡದೆ ಒಪ್ಪಿಕೊಂಡು ಸುಮ್ಮನಿರುತ್ತಿದ್ದರು. ದಲಿತರನ್ನು ಬೈಯ್ಯುವುದು, ಅವಮಾನ ಮಾಡುವುದು ಇವು ಯಾವುವೂ ಧಮನದ ರೀತಿ ಕಾಣುತ್ತಿರಲಿಲ್ಲ. ಈ ಪ್ರಜ್ಞೆ ಅಕ್ಷರ ಕಲಿತ ಮೊದಲ ತಲೆಮಾರಿನ ಯುವಕರಲ್ಲಿ ತಮ್ಮ ಜನಾಂಗದ ಮೇಲೆ ಆಗುತ್ತಿರುವ ಅನ್ಯಾಯದ ಬಗ್ಗೆ ಎಚ್ಚರ ಮೂಡಿಸಿತು. ಕೊಲೆ, ಸುಲಿಗೆ, ಅತ್ಯಾಚಾರ, ದಬ್ಬಾಳಿಕೆಗಳು ಸ್ಪಷ್ಟವಾಗಿ ಕಣ್ಣಿಗೆ ರಾಚಲು ಶುರುವಾಗಿ ಇದರ ಅನಿವಾರ್ಯತೆಯೇ ನಾವು ಒಂದು ಚಳವಳಿಯನ್ನು ಕಟ್ಟಬೇಕು, ಹೋರಾಟ ಮಾಡಬೇಕು ಎನ್ನುವ ಮನೋಸ್ಥೈರ್ಯವನ್ನು ಹುಟ್ಟುಹಾಕಿತು. ಇಂತಹ ಚಾರಿತ್ರಿಕ ಅನಿವಾರ್ಯತೆಯ ಮೊದಲ ಹೆಜ್ಜೆಯಾಗಿ ಪ್ರೊ. ಬಿ. ಕೃಷ್ಣಪ್ಪನವರು ೧೯೭೪ರಲ್ಲಿ ‘ದಲಿತ ವೇದಿಕೆ’ ಕಟ್ಟಿದರು.

ಇದೇ ಸಂದರ್ಭದಲ್ಲಿ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಿ ಸಮಾಜ ಮುಖಿಯಾಗಿ ಚಿಂತಿಸುತ್ತಿದ್ದ ಒಂದು ಪಡೆ ‘ದಲೇಕ’ ಒಕ್ಕೂಟವನ್ನು ರಚಿಸಿಕೊಂಡು ಹೋರಾಟಕ್ಕೆ ಅಣಿಯಾಗುತ್ತಿದ್ದರು. ಮುಖ್ಯವಾಗಿ ಎಚ್. ಗೋವಿಂದಯ್ಯ, ರಾಮದೇವ ರಾಕೆ, ಕೋಟಿಗಾನಹಳ್ಳಿ ರಾಮಯ್ಯ, ಓ. ಶ್ರೀಧರನ್, ಚಿಂತಾಮಣಿ ವೆಂಕಟೇಶ್, ದೇವಯ್ಯ ಹರವೆ, ಚಂದ್ರಪ್ರಸಾದ್ ತ್ಯಾಗಿ, ಬಂದಕುಂಟೆ ನಾಗರಾಜಯ್ಯ, ರಂಗಸ್ವಾಮಿ ಬೆಲ್ಲದಮಡು, ಇಂದೂಧರ ಹೊನ್ನಾಪುರ ಮುಂತಾದವರಿದ್ದರು. ೧೯೭೪ರ ಡಿಸೆಣಬರ್ ೨೮,೨೯ ಮತ್ತು ೩೦ರಂದು ಭದ್ರಾವತಿಯಲ್ಲಿ ಪ್ರಥಮ ದಲಿತ ಸಮಾವೇಶ ನಡೆಸಲಾಯಿತು. ಇದಕ್ಕೂ ಮುನ್ನ ಬೀಜರೂಪವಾಗಿ ಮೈಸೂರಿನಲ್ಲಿ ನಡೆದ ದಲಿತ ಸಂಘಟನಾ ಸಮಾವೇಶ ನಡೆದಿತ್ತು ಆದರೂ ದಲಿತ ಸಂಘಟನಾ ಸಮಾವೇಶ ಒಂದು ರೂಪಕ್ಕೆ ಬಂದಿದ್ದು ಭದ್ರಾವತಿಯಲ್ಲಿ ನಡೆದ ದಲಿತ ಲೇಖಕರ ಮತ್ತು ಕಲಾವಿದರ ಯುವ ಸಮ್ಮೇಳನದಲ್ಲಿ. ದಸಂಸ ಎಂದು ಹೆಸರು ಬಂದಿದ್ದು ೧೯೭೮ರ ಚಿಕ್ಕಮಗಳೂರಿನಲ್ಲಿ ನಡೆದ ಸಮ್ಮೇಳನದಲ್ಲಿ. ಭದ್ರಾವತಿಯಲ್ಲಿ ಮೊದಲಿನಿಂದಲೂ ಇದ್ದ “ದಲಿತ ಸಂಘರ್ಷ ಸಮಿತಿಯ ಹೆಸರನ್ನೇ ಸಂಘಟನೆ ಧರಿಸಿತು.”

ಹೀಗೆ ರೂಪುಗೊಂಡ ದಸಂಸ ಬಲಿಷ್ಠ ಸಂಘಟನೆಯಾಗಿ ರೂಪುಗೊಂಡು ‘ಕಣ್ಣುಬಿಟ್ಟು ನೋಡಿದಾಗ ಕಂಡದ್ದೇನು ಭಾರತ ಮಾತೆಯ ಮಾಸಿದ ಸೆರಗಾದ ಹಳ್ಳಿಗಾಡಲ್ಲಿ ದಲಿತ ಹೆಣ್ಣು ಮಕ್ಕಳ ಅತ್ಯಾಚಾರ, ಕೊಲೆ, ಸುಲಿಗೆ, ಅಸ್ಪೃಶ್ಯತೆಯ ಜಟಿಲ ಬಲೆಯಲ್ಲಿ ಸಿಕ್ಕಿಬಿದ್ದು ಬಿಡಿಸಿಕೊಳ್ಳಲಾರದ ದಲಿತರು ಈ ಬಲೆ ಕಡಿಯುತ್ತಾ’ ತಮ್ಮ ಮೇಲಾಗುವ ಹಲ್ಲೆ, ದೌರ್ಜನ್ಯಗಳನ್ನೂ ಪ್ರತಿಭಟಿಸುತ್ತ ದಲಿತ ಸಂಘರ್ಷ ಸಮಿತಿ ಬೆಳೆಯಿತು. ಜೊತೆಗೆ ಧರಣಿ, ಪ್ರತಿಭಟನೆ, ಸತ್ಯಾಗ್ರಹ, ಮೆರವಣಿಗೆ ಇತ್ಯಾದಿ ಹೋರಾಟಗಳು ಕಾಣಿಸಿಕೊಂಡವು. ಇದು ಅಲ್ಲಿಯವರೆಗೆ ತುಳಿದು ಶೋಷಿಸುತ್ತಿದ್ದ ಪಟ್ಟಭದ್ರ ಹಿತಾಸಕ್ತಿಗಳಲ್ಲಿ ಅವ್ಯಕ್ತ ಭೀತಿ ಹುಟ್ಟಿಸಿತು. ಈ ಮೂಲಕ ದಲಿತರಲ್ಲಿ ಮೊಟ್ಟಮೊದಲ ಬಾರಿಗೆ ತಮ್ಮ ಅರಿವಿನ ಶಕ್ತಿಯ ಉದಯವಾಯಿತು.

ಹೀಗಾಗಿ ದಲಿತ ಚಳವಳಿ ಮೊದಲು ನಿರ್ಧರಿಸಿದ್ದು ದಲಿತರ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳನ್ನು ವಿರೋಧಿಸಿ ಹೋರಾಟ ಮಾಡುವುದನ್ನು. ಭೂರಹಿತ ದಲಿತರಿಗೆ ಭೂಮಿ ಹಂಚಿಕೆಯ ಬಗ್ಗೆ ಬಹಳ ಶಕ್ತಿಯುತ ಹೋರಾಟಗಳನ್ನು ಮಾಡಿ ಅದರಲ್ಲಿ ಬಹಳಷ್ಟು ಯಶಸ್ಸು ಮತ್ತು ವಿಫಲತೆ ಎರಡನ್ನೂ ಕಂಡಿತು. ಹೀಗೆ ದಲಿತ ಚಳವಳಿ ಈ ರೀತಿಯ ಅನೇಕ ಉದ್ದೇಶಗಳನ್ನಿಟ್ಟುಕೊಂಡು ಅಸ್ಪ್ರಶ್ಯರ ಪರವಾಗಿ ಮಾತ್ರ ನಿಲ್ಲದೆ ಸಮಾಜದ ಎಲ್ಲಾ ತಳಸಮುದಾಯಗಳ ಪರವಾಗಿ ಹೋರಾಟಕ್ಕಿಳಿಯಿತು. ದಲಿತ ಸಂಘರ್ಷ ಸಮಿತಿ ನಡೆಸಿದ ಅಂತಹ ಹೋರಾಟಗಳಲ್ಲಿ ಜಾಥಾಗಳೂ ಸಹ ಪ್ರಧಾನ ಪಾತ್ರ ವಹಿಸಿದ್ದವು.

ದಸಂಸ ಮತ್ತು ಜಾಥಾಗಳು

೧೯೬೦-೭೦ರ ದಶಕದಲ್ಲಿ ಕರ್ನಾಟಕದ ಉದ್ದಗಲಕ್ಕೂ ದಲಿತರ ಮೇಲೆ ದೌರ್ಜನ್ಯಗಳು ವಿಪರೀತವಾಗಿ ನಡೆಯುತ್ತಿದ್ದವು. ಅದಕ್ಕೆ ಕಾರಣ ದಲಿತರಲ್ಲಿ ಉಂಟಾಗುತ್ತಿದ್ದ ಆಧುನಿಕತೆಯ ಹೊಸ ಜ್ಞಾನ, ಸ್ವಾಭಿಮಾನದ ಅರಿವು ಒಂದಾದರೆ, ಸವರ್ಣೀಯರಲ್ಲಿ ಹೆಚ್ಚಾಗುತ್ತಿದ್ದ ಆರ್ಥಿಕ ಸಬಲೀಕರಣ ಹಾಗೂ ಜಾತಿಯ ಮೇಲರಿಮೆ ಇನ್ನೊಂದು ಕಾರಣವಾಗಿತ್ತು. ಬಹುತೇಕ ದೌರ್ಜನ್ಯಗಳೆಲ್ಲವೂ ಮೇಲುಜಾತಿ, ಮೇಲುವರ್ಗದ ಭೂ ಮಾಲೀಕರಿಂದಲೇ ನಡೆಯುತ್ತಿದ್ದವು. ಇಂತಹ ದೌರ್ಜನ್ಯಗಳನ್ನು ವಿರೋಧಿಸಿ ದಸಂಸ ಅನೇಕ ಜಾಥಾಗಳನ್ನು ನಡೆಸಿತು. ಅವುಗಳಲ್ಲಿ ಮುಖ್ಯವಾದ ಜಾಥಾಗಳನ್ನು ಮಾತ್ರ ಇಲ್ಲಿ ಚರ್ಚಿಸಲಾಗಿದೆ.

ಹುಣಸೀ ಕೋಟೆ ಜಾಥಾ

ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಟೇಕಲ್ಲು ಹೋಬಳಿಯ ಹುಣಸೀ ಕೋಟೆ ಒಂದು ಚಿಕ್ಕ ಗ್ರಾಮ. ಶೇಷಗಿರಿಯಪ್ಪ ಎಂಬ ಬಡಕುಂಬಾರ ಮಡಿಕೆ ಕುಡಿಕೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಅದೇ ಊರಿನ ಕೃಷ್ಣೇಗೌಡ ಮಾಲೂರು ತಾಲ್ಲೂಕು ಬೋರ್ಡ್ ಛೇರ‍್ಮನ್ ಅಲ್ಲದೆ ದೊಡ್ಡ ಜಮೀನುದಾರ. ಹುಣಸೀಕೋಟೆಯ ಎಚ್. ಎಂ. ಕೃಷ್ಣಪ್ಪ ತನ್ನ ೨೭ ಗುಂಟೆ ಜಮೀನನ್ನು ಶೇಷಗಿರಿಯಪ್ಪನಿಗೆ ಕೊಡಲು ತೀರ್ಮಾನಿಸಿದ. ಈ ವಿಚಾರದಲ್ಲಿ ಕೃಷ್ಣೇಗೌಡ ಹಾಗೂ ಶೇಷಗಿರಿಯಪ್ಪನಿಗೆ ಮನಸ್ತಾಪ ಉಂಟಾಗಿ ಸಾಕಷ್ಟು ಶ್ರೀಮಂತನೂ ಬಲಿಷ್ಠನೂ ಆಗಿದ್ದ ಕೃಷ್ಣೇಗೌಡ ಶೇಷಗಿರಿಯಪ್ಪನಿಗೆ ಅನೇಕ ರೀತಿಯ ಕಿರುಕುಳಗಳನ್ನು ಕೊಡಲಾರಂಭಿಸಿದನು. ಇವನ ಕಿರುಕುಳಗಳನ್ನು ಸಹಿಸಲಾರದ ಶೇಷಗಿರಿಯಪ್ಪ ತನ್ನ ಅಹವಾಲನ್ನು ಹಿಡಿದು ಪೊಲೀಸು, ಗೃಹಮಂತ್ರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ, ವಿರೋಧ ಪಕ್ಷದ ನಾಯಕರು ಹಾಗೂ ಅಂದಿನ ಮುಖ್ಯಮಂತ್ರಿ ದೇವರಾಜ ಅರಸರಿಗೂ ಅರ್ಜಿಕೊಟ್ಟು ಮನವಿ ಮಾಡಿಕೊಂಡನು. ಆದರೆ ಅವುಗಳಿಂದೇನೂ ಫಲಸಿಗಲಿಲ್ಲ. ಅಂತಿಮವಾಗಿ ಮಾರ್ಚ್ ೧೯೮೦ರಂದು ಶೇಷಗಿರಿಯಪ್ಪನ ಕೊಲೆ ನಡೆಯಿತು. ಆಗಸ್ಟ್ ೬. ೧೯೭೯ರಂದು ಆಕೆಯ ಮಗಳಾದ ಅನಸೂಯಮ್ಮನ ಮೇಲೆ ಅತ್ಯಾಚಾರ ನಡೆಸಲಾಯಿತು.

ಈ ಮೊದಲು ಇಂತಹ ಅನೇಕ ಕೊಲೆಗಳು ನಡೆದಿದ್ದರೂ ಅವೆಲ್ಲವೂ ಮುಚ್ಚಿ ಹೋಗಿದ್ದವು. ದಸಂಸ ಹೋರಾಟದಿಂದ ಇಂತಹ ಕೊಲೆಗಳು ಬೆಳಕಿಗೆ ಬಂದವು. ಅದುವರೆಗೂ ತಮ್ಮ ಪರವಾಗಿ ನ್ಯಾಯ ಕೇಳಲು ಯಾರೂ ಇಲ್ಲವೆಂದು ಸುಮ್ಮನಿದ್ದ ಜನರಿಗೆ ದಸಂಸ ಬೆನ್ನಿಗೆ ನಿಂತದ್ದು ಆನೆ ಬಲ ಬಂದಂತಾಯಿತು. ಇಂತಹ ಅಮಾನವೀಯ ಕೃತ್ಯವನ್ನು ಖಂಡಿಸಿ ಎಲ್ಲಾ ಜಾತಿಯ ಬಡವರು ಮತ್ತು ದಲಿತರ ಮುಂದಾಳತ್ವದಲ್ಲಿ ಹುಣಸೀಕೋಟೆಯಿಂದ ಬೆಂಗಳೂರಿನ ವಿಧಾನಸೌಧದವರೆಗೆ ಜಾಥಾ ನಡೆಸಲು ಮುಂದಾಯಿತು.

ಸಿ.ಎಸ್. ದ್ವಾರಕಾನಾಥ್, ಸಿ.ಎಂ. ಮುನಿಯಪ್ಪ, ಕೋಟಿಗಾನಹಳ್ಳಿ ರಾಮಯ್ಯ, ಎನ್. ವೆಂಕಟೇಶ್, ಹ.ಮ. ರಾಮಚಂದ್ರ, ಬಿ. ಕೃಷ್ಣಪ್ಪ, ಎಚ್. ಗೋವಿಂದಯ್ಯ, ಸಿದ್ಧಲಿಂಗಯ್ಯ, ದೇವನೂರು ಮಹಾದೇವ, ಚಂದ್ರಪ್ರಸಾದ್ ತ್ಯಾಗಿ, ಪಿ. ಲಂಕೇಶ್, ಶಂಕರ ಲಿಂಗೇಗೌಡ, ಎಸ್. ಸೂರ್ಯನಾರಾಯಣ ರಾವ್ ಮುಂತಾದವರ ನೇತೃತ್ವದಲ್ಲಿ ಜೂನ್ ೯. ೧೯೮೦ರಿಂದ ಜೂನ್ ೧೨ರವರೆಗೆ ಜಾಥಾ ನಡೆಸಲಾಯಿತು. ಈ ಸಂದರ್ಭದಲ್ಲಿ ದಸಂಸ ಕಾರ್ಯಕರ್ತರ ಮೇಲೆ ಪೊಲೀಸ್ ಲಾಠಿ ಚಾರ್ಜ್ ನಡೆಸಿತು ಈ ಕೃತ್ಯವನ್ನು ಖಂಡಿಸಿ ರಾಜ್ಯದ ನಾನಾ ಕಡೆ ಪ್ರತಿಭಟನೆಗಳು ನಡೆದವು. ಅಂತಿಮವಾಗಿ ದಸಂಸ ಎಲ್ಲಾ ದೌರ್ಜನ್ಯಗಳನ್ನು ಮೆಟ್ಟಿ ನಿಂತು ನ್ಯಾಯಯುತ ಹೋರಾಟ ನಡೆಸಿತು. ಇವರ ಹೋರಾಟ ಸರ್ಕಾರಕ್ಕೆ ನಾಚಿಕೆ ತರಿಸಿತು. ಅಂತಿಮವಾಗಿ ಸರ್ಕಾರಕ್ಕೆ ತನ್ನ ತಪ್ಪಿನ ಅರಿವಾಗಿ ಕೃಷ್ಣೇಗೌಡ ಮತ್ತು ಅವನ ದುಷ್ಟಕೂಟ ಸೇರಿದಂತೆ ೨೬ ಮಂದಿಗೆ ಜೈಲುಶಿಕ್ಷೆ ನೀಡಿತು.

ಮರಸನಪಲ್ಲಿ ಜಾಥಾ

ಮರಸನಪಲ್ಲಿ ಕರ್ನಾಟಕ-ಆಂಧ್ರ ಗಡಿಯಲ್ಲಿರುವ ಒಂದು ಸಣ್ಣ ಹಳ್ಳಿ. ಯಾವ ನಾಗರೀಕತೆಯ ಸೋಂಕು ತಗುಲದಂತೆ ಯಾತನಾಮಯ ಬದುಕು ಕಂಡ ಊರು. ಇಡೀ ಊರಿನ ಆಡಳಿತ ಬ್ರಾಹ್ಮಣರ ಕೈವಶವಾಯಿತು. ಇವರಲ್ಲಿ ರಾಮಮೂರ್ತಿ ಎಂಬ ನರರಾಕ್ಷಸ ದಲಿತರ ಎಲ್ಲಾ ಆಸ್ತಿಗಳನ್ನು ಅಕ್ರಮವಾಗಿ ವಂಚನೆಯಿಂದ ಕಬಳಿಸಿದ್ದ. ಈತನ ಒಟ್ಟು ಭೂಮಿ ೩೦೦ ಎಕರೆ. ವೃತ್ತಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿದ್ದು ಈತ ರಾಜಕೀಯ ಪುಢಾರಿಯೂ ಆಗಿದ್ದ. ಆದರೆ ಮರಸನಪಲ್ಲಿಯ ದಲಿತರ ಸ್ಥಿತಿ ಮಾತ್ರ ಹೇಳತೀರದು. ಸರ್ಕಾರದ ಯಾವ ಯೋಜನೆಗಳೂ ಈ ನಿರುಪದ್ರವಿ ದಲಿತರನ್ನು ಮೇಲೆತ್ತಲು ಸಹಾಯಕವಾಗಿಲ್ಲ.

ಬೈರಗಾನಪಲ್ಲಿ ಗ್ರೂಪ್ ಪಂಚಾಯ್ತಿಯ ಸದಸ್ಯನೂ ಆಗಿದ್ದ ಈ ರಾಮಮೂರ್ತಿ ಅತ್ಯಂತ ದೀರ್ಘಕಾಲದವರೆಗೆ ಕೋ-ಆಪರೇಟಿವ್ ಸೊಸೈಟಿಯ ಛೇರ‍್ಮನ್ ಕೂಡ ಆಗಿದ್ದನು. ಈ ಅವಧಿಯಲ್ಲಿ ಸೊಸೈಟಿಯ ಮೂಲಕ ದಲಿತರಿಗೆ ಸಾಲ ಕೊಡಿಸಿ ಅದನ್ನು ತನ್ನ ಜೇಬಿಗೆ ಇಳಿಬಿಟ್ಟು ಸಾಲವನ್ನು ಮಾತ್ರ ದಲಿತರ ತಲೆಗೆ ಕಟ್ಟಿದ್ದ. ತನ್ನ ಮನೆಗೆ ಹಾಲು ಬೇಕಾದಾಗ ಗಂಗಪ್ಪನೆಂಬ ದಲಿತನ ಹಸುಗಳನ್ನು ಅಕ್ರಮವಾಗಿ ಹೊಡೆದುಕೊಂಡು ಹೋಗುವುದು, ಎದುರು ಬಿದ್ದಾಗ ಇದೇ ಗಂಗಪ್ಪನನ್ನು ಚಪ್ಪಲಿಯಿಂದ ಹೊಡೆದು ಅವಮಾನಿಸುವುದು ನಡೆದೇ ಇತ್ತು. ಶ್ರೀನಿವಾಸಪುರದ ಬ್ಯಾಂಕಿನಿಂದ ಎತ್ತು, ಗಾಡಿ, ಸಾಲ ಹಾಗೂ ಕೊಳವೇ ಬಾವಿ ಸಾಲವನ್ನು ದಲಿತರಿಗೆ ಕೊಡಿಸಿ ಅದನ್ನೂ ಈತನೇ ಉಪಯೋಗಿಸುತ್ತಿದ್ದನು.

ಇದಿಷ್ಟು ಸಾಲದೆಂಬಂತೆ ತನ್ನ ಜಮೀನಿನಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಬೆವರಿಳಿಸಿ ದುಡಿಯುವ ಜನರಿಗೆ ಕೂಲಿಯೂ ಸಹ ಸರಿಯಾಗಿ ದಕ್ಕುತ್ತಿರಲಿಲ್ಲ. ಆತ ಕೊಟ್ಟರೆ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆಯೇ ಗತಿ. ಕಷ್ಟಪಟ್ಟು ದುಡಿದ ಜನ ಆಸೆಗಣ್ಣಿನಿಂದ ನೋಡುತ್ತಿದ್ದರೆ ಈ ರಾಮಮೂರ್ತಿ ಹಣಕ್ಕೆ ಬದಲಾಗಿ ಸ್ಟಾಂಪುಗಳನ್ನು ಕೊಡುತ್ತಿದ್ದನು. ಈ ಸ್ಟಾಂಪುಗಳನ್ನು ಆತನ ಅಂಗಡಿಗೇ ಕೊಟ್ಟು ಅಲ್ಲಿಯೇ ಸಾಮಾನುಗಳನ್ನು ಕೊಳ್ಳಬೇಕು. ಇಂತಹ ದುಷ್ಟ ಕ್ರಿಮಿಯ ವರ್ತನೆಯನ್ನು ತಡೆದುಕೊಳ್ಳಲಾರದ ಮರಸನಪಲ್ಲಿಯ ದಲಿತರು ಆತ ಮಾಡಿದ ನೂರಾರು ಮೋಸದ ಪ್ರಕರಣಗಳೂ ಸೇರಿದಂತೆ ತಮ್ಮ ನೂರಾರು ಎಕರೆ ಜಮೀನನ್ನು ವಾಪಸ್ಸು ದಕ್ಕಿಸಿಕೊಳ್ಳುವ ನಿಟ್ಟಿನಲ್ಲಿ ದಸಂಸದ ಸಹಕಾರದೊಂದಿಗೆ ಮರಸನಪಲ್ಲಿಯಿಂದ ಕೋಲಾರದ ಡಿ. ಸಿ. ಕಛೇರಿಯವರೆಗೆ ಮೂರು ರಾತ್ರಿ ನಾಲ್ಕು ಹಗಲುಗಳ ಕಾಲ್ನಡಿಗೆಯ ಬೃಹತ್ ಜಾಥಾವನ್ನು ಹಮ್ಮಿಕೊಂಡು ಹೋರಾಟ ಶುರುಮಾಡಿದರು.

ದಸಂಸ ಕಾರ್ಯಕರ್ತರಾದ ಲಕ್ಷ್ಮೀಪತಿ ಕೋಲಾರ, ಸಿ.ಎಂ. ಮುನಿಯಪ್ಪ, ಮುನಿಸ್ವಾಮಿ, ಎನ್. ವೆಂಕಟೇಶ್, ಹ.ಮಾ. ರಾಮಚಂದ್ರ, ಸಿ.ಎಸ್. ದ್ವಾರಕಾನಾಥ್, ಎನ್. ತಿಮ್ಮಯ್ಯ, ದಾಸೇಗೌಡ, ಕರ್ನಲ್ ನಾರಾಯಣಸ್ವಾಮಿ ಮುಂತಾದವರೆಲ್ಲರೂ ಜಾಥಾವನ್ನು ಸಮರ್ಥವಾಗಿ ರೂಪಿಸಿದರು. ನಿಗದಿಪಡಿಸಿದ ದಿನಾಂಕದಂತೆ ೧೯೮೨ ಸೆಪ್ಟಂಬರ್ ೩ರಂದು ಜಾಥಾವನ್ನು ಶ್ರೀ ಯರ‍್ರಪ್ಪ ಎನ್ನುವ ಹಿರಿಯರು ಉದ್ಘಾಟಿಸಿದರು. ಮೂರು ರಾತ್ರಿ ನಾಲ್ಕು ಹಗಲುಗಳ ಈ ಬೃಹತ್ ಜಾಥಾ ಮರಸನಪಲ್ಲಿಯಿಂದ ಹೊರಟು ಗಾನಪಲ್ಲಿ, ಪಾಡಿಗೋಳ, ಬಯ್ಯನಪಲ್ಲಿ, ಶ್ರೀನಿವಾಸಪುರ, ಬಂಗವಾದಿ ಮಾಸ್ತೇನಹಳ್ಳಿ, ಮುದುವಾಡಿ, ವೀರಾಪುರ ಮುರಾಂಡಳ್ಳಿಯ ಮೂಲಕ ಬಂದು ಮಧ್ಯಾಹ್ನ ೩ ಘಂಟೆಯ ಸುಮಾರಿಗೆ ಜಿಲ್ಲಾಧಿಕಾರಿಗಳ ಕಛೇರಿಯನ್ನು ತಲುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಬೆಂಡಗೇರಿ ಮಲ ತಿನ್ನಿಸಿದ ಪ್ರಕರಣ ವಿರೋಧಿಸಿ ಜಾಥಾ

೨.೮.೧೯೮೨ರಲ್ಲಿ ಬೆಳಗಾವಿ ಜಿಲ್ಲೆಯ ಬೆಂಡಗೇರಿಯಲ್ಲಿ ಇಡೀ ಮಾನವ ಕುಲವೇ ತಲೆತಗ್ಗಿಸುವಂತಹ ಹೇಯ ಕೃತ್ಯವೊಂದು ನಡೆದುಹೋಯಿತು. ಸುಭಾಷ್ ಕಲ್ಲಪ್ಪ ಕೋಲ್ಕಾರ್, ಸಾವಂತ ಸದೇಪ್ಪ ಕೋಲ್ಕಾರ್, ಕಲ್ಲಪ್ಪ ದ್ಯಾಮಪ್ಪ ತಳಬಾರ್, ಯಲ್ಲಪ್ಪ ದೊಡ್ಡಪ್ಪ ಕೋಲ್ಕಾರ್ ಮತ್ತು ಮಡಿವಾಳ ಮುದುಕಪ್ಪ ಹೈಬತ್ತಿ ಎನ್ನುವ ದಲಿತರು ಮಾರನೆಯ ದಿನ ದೇವರಿಗೆ ಹೋಗುವ ಕಾರ್ಯಕ್ರಮವಿದ್ದು, ಈ ಸಂಬಂಧ ದನಕರುಗಳಿಗೆ ಈ ದಿನವೇ ಮೇವನ್ನು ಅಣಿಗೊಳಿಸಬೇಕಿತ್ತು. ಆದ್ದರಿಂದ ಈ ನಾಲ್ಕು ಜನ ತಮ್ಮ ಹೊಲಗಳಲ್ಲಿ ಮೇವನ್ನು ತರಲು ಹೋದಾಗ ಮಾರ್ಗ ಮಧ್ಯದಲ್ಲಿ ಧಾರಾಕಾರ ಮಳೆ ಸುರಿಯಲಾರಂಭಿಸಿತು. ಮಳೆ ನಿಲ್ಲುವ ಹೊತ್ತಿಗೆ ತುಂಬ ಕತ್ತಲಾಗಿತ್ತು. ಸಾಲದಕ್ಕೆ ಇವರ ಹೊಲಗಳೂ ದೂರವಿದ್ದುದರಿಂದ ಯಲ್ಲನಗೌಡ ಬಸವಣ್ಣಪ್ಪ ಮೇಳೇದ ಎನ್ನುವವರ ಹೊಲದಲ್ಲಿ ಜೋಳದ ಪೈರನ್ನು ಕೊಯ್ಯುಕೊಂಡು ಬಂದರು. ಮಾರನೆಯ ದಿನ ಪ್ರಾಥಮಿಕ ಶಾಲಾ ಶಿಕ್ಷಕರಾದ ಗುರುಪಾದಪ್ಪ ಗಂಗಪ್ಪ, ಯಲ್ಲನಗೌಡ ಬಸವಣ್ಣಪ್ಪ ಮೇಳೇದ ಅವರ ಮನೆಗೆ ಬಲವಂತವಾಗಿ ಕರೆತಂದು ಅವರಿಗೆ ಬೆದರಿಕೆ ಒಡ್ಡಿದರು. ನೀವು ಪೈರನ್ನು ಕಳುವು ಮಾಡಲು ಯಾರೋ ಹೇಳಿ ಕಳುಹಿಸಿದ್ದಾರೆ ಅವರು ಯಾರೆಂದು ಹೇಳಿ ಎಂದು ಧಮಕಿ ಹಾಕತೊಡಗಿದರು. ಇದಕ್ಕೆ ಬಹು ಮುಖ್ಯ ಕಾರಣ ಹಿಂದಿನ ವಾರ ಮಂಡಳ ಪಂಚಾಯ್ತಿ ಚುನಾವಣೆಯಲ್ಲಿ ತಾವು ಹೇಳಿದ ವ್ಯಕ್ತಿಗೆ ಮತ ಹಾಕಲಿಲ್ಲ ಎಂಬುದೇ ಆಗಿತ್ತು. ಇದನ್ನೇ ನೆಪವಾಗಿಟ್ಟುಕೊಂಡು ಚೆನ್ನಾಗಿ ತಳಿಸಿದರು. ‘ಹೊಲೆಸೂಳೆ ಮಕ್ಕಳಾ ನಿಮಗೆ ಮೇವು ಕೊಯ್ದುಕೊಂಡು ಬರಲು ಯಾರು ಹೇಳಿದರು. ಅವರು ಹೇಲು ತಿನ್ನು ಎನ್ನುತ್ತಾರೆ ತಿನ್ನುತ್ತೀರಾ?’ ಎಂದಾಗ ಮತ್ತೊಬ್ಬ ಅದನ್ನು ಹೇಳುವುದೇನು ಮಾಡಿತೋರಿಸಬೇಕು ಎಂದು ಅವರಿಗೆ ಹೇಲನ್ನು ತಿನ್ನಲು ಬಲಾತ್ಕರಿಸಿದರು. ನೀವು ಇದನ್ನು ತಿನ್ನದಿದ್ದರೆ ಜೀವ ಸಹಿತ ಬಿಡುವುದಿಲ್ಲ ಎಂದು ಸುತ್ತಲೂ ಮಚ್ಚು ಹಿಡಿದುಕೊಂಡು ನಿಂತರು. ಆತ ತಮ್ಮನ್ನು ಕೊಲ್ಲಬಹುದೆಂದು ಹೆದರಿದ ಈ ದಲಿತರು ಕಷ್ಟಪಟ್ಟುಕೊಂಡು ಹೇಲನ್ನು ತಿಂದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ ೨೫, ೧೯೮೮ರಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಕರೆ ನೀಡಿದ್ದ ಬೆಂಗಳೂರಿನ ಜಾಥಾಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಜನಸ್ತೋಮವೇ ಹರಿದುಬಂತು. ಅಂದು ಜಗತ್ತು ಕಂಡರಿಯದ ಅಮಾನವೀಯ ನಡವಳಿಕೆಯ ವಿರುದ್ಧ ಮಾನವಂತರು ದನಿ ಎತ್ತಿದ ಅಪೂರ್ವ ದಿನ. ಬೆಂಡಗೇರಿಯಲ್ಲಿ ದಲಿತರಿಗೆ ಮಲ ತಿನ್ನಿಸಿ ಆರು ತಿಂಗಳು ಕಳೆದಿದ್ದರೂ ಸರ್ಕಾರ ಕಣ್ಣು ಕಿವಿ ಕಳೆದುಕೊಂಡು ಸಂವೇದನೆಗಳೇ ಇಲ್ಲದಂತಾದವು. ಇಂತಹ ಸರ್ಕಾರದ ವಿರುದ್ಧ ಘೋಷಣೆಗಳು ಮೊಳಗಲಾರಂಭಿಸಿದವು. ಚಿಕ್ಕಲಾಲ್ ಬಾಗ್ ನಿಂದ ಬೆಳಿಗ್ಗೆ ೧೧ ಘಂಟೆಗೆ ಹೊರಟ ಈ ಜಾಥಾ ಸುಮಾರು ೩ ಕಿ. ಮೀ. ಉದ್ದವಾಗಿತ್ತು. ಚಿಕ್ಕಲಾಲ್ ಬಾಗ್ ಮಾರ್ಗವಾಗಿ ಸೂಪರ್ ಟಾಕೀಸ್ ರಸ್ತೆಯ ಮೂಲಕ ಸಿಟಿ ಮಾರ್ಕೆಟ್, ಕಾರ್ಪೋರೇಶನ್, ಮೈಸೂರು ಬ್ಯಾಂಕ್, ಕೆ. ಆರ್. ಸರ್ಕಲ್ ಮೂಲಕ ಕಬ್ಬನ್ ಪಾರ್ಕ್ ತಲುಪಿತು. ದಸಂಸ ರಾಜ್ಯ ಸಂಚಾಲಕರಾಗಿದ್ದ ಚಂದ್ರಪ್ರಸಾದ್ ತ್ಯಾಗಿ, ಮುಖಂಡರಾದ ಬಿ. ಕೃಷ್ಣಪ್ಪ, ಕೆ. ಟಿ. ಶಿವಪ್ರಸಾದ್, ಎನ್. ವೆಂಕಟೇಶ್, ದೇವನೂರು ಮಹಾದೇವ, ಸಿದ್ಧಲಿಂಗಯ್ಯ ಮುಂತಾದವರು ಈ ಜಾಥಾವನ್ನು ಮುನ್ನಡೆಸಿದ್ದರು.

ಕಂಬಾಲಪಲ್ಲಿ ದಲಿತರ ಸಜೀವ ದಹನ

ಈ ದೇಶದ ದಲಿತರ ಪಾಲಿಗೆ ೧೧.೩.೨೦೦೦ರಂದು ಮತ್ತೊಂದು ಕರಾಳ ಘಟನೆ ಘಟಿಸಿತು. ಕೋಲಾರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕಂಬಾಲಪಲ್ಲಿ ಎನ್ನುವ ಹಳ್ಳಿಯಲ್ಲಿ ೭ ಜನ ದಲಿತರನ್ನು ಸಜೀವವಾಗಿ ಮನೆಯೊಳಗೆ ಕೂಡಿಟ್ಟು ಸುಟ್ಟು ಬೂದಿ ಮಾಡಿದರು. ಕರ್ನಾಟಕದಲ್ಲೂ ಜಾತಿ ಪೆಡಂಭೂತ ಕೇಕೆ ಹಾಕುತ್ತಿರುವುದನ್ನು ಮತ್ತೆ ಸಾಬೀತು ಪಡಿಸಿತು.

ಈ ದಹನದ ಹಿಂದಿನ ದಿನ ಖಾಯಿಲೆ ಬಿದ್ದಿದ್ದ ತನ್ನ ತಂದೆಯ ಉಪಚಾರಕ್ಕೆಂದು ಎಳನೀರು ತರುತ್ತಿದ್ದ ಶಂಕರಪ್ಪನೆಂಬ ದಲಿತ ಯುವಕನಿಗೆ ರೆಡ್ಡಿ ಹುಡುಗನೊಬ್ಬ ಸೈಕಲ್‌ನಲ್ಲಿ ಡಕ್ಕಿ ಹೊಡೆದ, ನಂತರ ಆದ ಜಗಳದಲ್ಲಿ ಒಕ್ಕಲಿಗ ಯುವ ವೇದಿಕೆಯವರು ದಲಿತ ಕೇರಿಗೆ ನುಗ್ಗಿ ಹಲ್ಲೆ ಮಾಡಿದರು. ಸರ್ಕಲ್‌ಇನ್ಸ್‌ಪೆಕ್ಟರ್ ಗೆ ವಿಚಾರ ತಿಳಿಸಿ ಹಿಂತಿರುಗುವಾಗ ಚುನಾವಣೆಯಲ್ಲಿ ಸೋತ ಅಂಜಿನರೆಡ್ಡಿ ದಲಿತರಿಗೆ ಸಿಕ್ಕಿ, ಪ್ರಚೋದಿಸಿ ಗುಂಪುಕಟ್ಟಿಕೊಂಡು ತನ್ನ ಇನ್ನೊಂದು ರಾಜಕೀಯ ಗುಂಪಿನ ಮೇಲೆ ಹಲ್ಲೆ ಮಾಡಿಸಿದ. ತಾನೂ ಹಲ್ಲೆ ಮಾಡಿ ನೌಕರ ಕೃಷ್ಣಾರೆಡ್ಡಿಯ ಕೊಲೆಗೆ ಕಾರಣನಾದ. ನಂತರ ರೊಚ್ಚಿಗೆದ್ದ ರೆಡ್ಡಿ ಒಕ್ಕಲಿಗರು ಶ್ರೀರಾಮಪ್ಪ ಮತ್ತು ಇತರರು ರಕ್ಷಣೆ ಪಡೆದಿದ್ದ ಮೂರು ಮನೆಗಳಿಗೆ ಬೆಂಕಿ ಹಚ್ಚಿ ನರಮೇಧ ನಡೆಸಿದರು.

ದಸಂಸ ಸೇರಿದಂತೆ ಎಲ್ಲಾ ಪ್ರಗತಿಪರ ಸಂಘಟನೆಗಳು ಈ ಹತ್ಯಾಕಾಂಡವನ್ನು ವಿರೋಧಿಸಿ ಜಾಥಾ, ಧರಣಿ, ಸತ್ಯಾಗ್ರಹಗಳಂತಹ ಅನೇಕ ಪ್ರತಿಭಟನೆಗಳನ್ನು ನಡೆಸಿದವು. ದಲಿತ ಸಂಘರ್ಷ ಸಮಿತಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಾಥಾ ಕೈಗೊಳ್ಳುವುದರ ಮೂಲಕ ಪ್ರತಿಭಟಿಸಿದರು. ಇಷ್ಟೆಲ್ಲಾ ನಡೆದರೂ ಕಂಬಾಲಪಲ್ಲಿಯ ದಲಿತರನ್ನು ಸುಟ್ಟ ಬೂದಿಯಲ್ಲಿ ನ್ಯಾಯ ಚಿಗುರಲಿಲ್ಲ. ಪ್ರತಿಯೊಬ್ಬ ದಲಿತ ಗ್ರಾಮೀಣ ಪ್ರದೇಶದಲ್ಲಿ ಹೇಗೆ ಜೀವಿಸುತ್ತಾನೆ/ಳೆ ಎನ್ನುವುದಕ್ಕೆ ಕಂಬಾಲಪಲ್ಲಿ ಸ್ಪಷ್ಟ ನಿದರ್ಶನ. ಈ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗದೆ ಅನ್ಯಾಯವನ್ನೇ ನ್ಯಾಯ ಎಂದು ಕೋರ್ಟು ತೀರ್ಪು ಕೊಟ್ಟಿರುವುದನ್ನು ನೋಡಿದರೆ ಜನಸಾಮಾನ್ಯರಿಗೆ ಕೋರ್ಟಿನ ಬಗ್ಗೆ ಇದ್ದ ಅಲ್ಪಸ್ವಲ್ಪ ನಂಬಿಕೆಯೂ ಕಳೆದು ಹೋಗುವಂತಾಯಿತು.

ರೈತ ಚಳವಳಿ

ಕರ್ನಾಟಕದಲ್ಲಿ ೧೯೮೦ರ ಪ್ರಾರಂಭದಲ್ಲಿ ಹುಟ್ಟಿದ ರೈತ ಚಳವಳಿ ಕರ್ನಾಟಕದ ರೈತರ ಪಾಲಿಗೆ ಹೊಸ ಸೂರ್ಯ ಉದಯಿಸಿದಂತಾಯಿತು. ನಿಜದ ಅರ್ಥದಲ್ಲಿ ಪ್ರಭುತ್ವದ ದೃಷ್ಟಿಯಲ್ಲಿ ರೈತ ದ್ವಿತೀಯ ದರ್ಜೆಯ ಪ್ರಜೆಯಾಗಿಯೇ ಪರಿಗಣಿತನಾಗಿದ್ದನು. ಶತಮಾನಗಳಿಂದಲೂ ಆಳುವವರ ಕಪಿಮುಷ್ಟಿಗೆ ಸಿಲುಕಿ ತನ್ನ ಶಕ್ತಿಯ ಅರಿವಿಲ್ಲದೇ ಇದು ನಮ್ಮ ಹಣೆ ಬರಹ ಎನ್ನುವ ರೀತಿಯಲ್ಲಿ ಬದುಕುವ ಪರಿಸ್ಥಿತಿ ಉಂಟಾಯಿತು. ಯಾವುದೇ ಕ್ಷೇತ್ರದಲ್ಲಿ ಮಾನ್ಯತೆ ಇಲ್ಲದ ವ್ಯಕ್ತಿಯಾಗಿ ಅವಮಾನಕ್ಕೆ ಈಡಾಗಿದ್ದನು. ಹೊಲದಲ್ಲಿ ನಿತ್ಯ ದುಡಿದು ದೇಶಕ್ಕೆ ಅನ್ನ ಕೊಡುವ ರೈತರನ್ನು ದಡ್ಡರು, ನಿಷ್ಪ್ರಯೋಜಕರು, ಅವಿದ್ಯಾವಂತರು ಎಂದು ಕಡೆಗಣಿಸಲಾಯಿತು. ಊರಿನಲ್ಲಿ ಆತ ಗೌಡನ ರೀತಿ ಇದ್ದರೂ ಅಕ್ಷರಜ್ಞಾನದ ಕೊರತೆ ಹಾಗೂ ಆಡಳಿತಾತ್ನಕ ಕೊರತೆಯಿಂದಾಗಿ ಸರ್ಕಾರಿ ಕಛೇರಿಗಳಲ್ಲಿ ನಗೆಪಾಟಲಿಗೀಡಾಗುವ ಪರಿಸ್ಥಿತಿ ನಿರ್ಮಾಣ ಆಯಿತು. ಇಂತಹ ಪರಿಸ್ಥಿತಿಯಲ್ಲಿ ಗ್ರಾಮೀಣ ಸಮುದಾಯದ ರೈತರಿಗೆ ಈ ರೀತಿಯ ಹೀನಾಯವಾಗಿ ಕಾಣುವ ಪರಿಸ್ಥಿತಿಯನ್ನು ಮೀರಬೇಕು ಎನ್ನುವ ಹಂಬಲ ಹುಟ್ಟತೊಡಗಿತು. ಇದರ ಪರಿಣಾಮವಾಗಿ ತಲತಲಾಂತರದಿಂದಲೂ ಪ್ರಾಣಿಗಳಂತೆಯೇ ಪ್ರಶ್ನೆಗಳನ್ನೇ ಕೇಳದೆ ತಲೆತಗ್ಗಿಸಿ ದುಡಿಯುತ್ತಿದ್ದ ರೈತ ಮೊದಲ ಬಾರಿಗೆ ತಲೆಯೆತ್ತಿ ಮಾತನಾಡಲಾರಂಭಿಸಿದ.

ನರಗುಂದ ನವಲಗುಂದ ರೈತ ಹೋರಾಟ

ರೈತರು ರಾಜ್ಯಾದ್ಯಂತ ಹೋರಾಟಕ್ಕೆ ಸಿದ್ಧವಾಗುತ್ತಿದ್ದ ಸಂದರ್ಭದಲ್ಲಿಯೇ ನರಗುಂದ, ನವಲಗುಂದ ರೈತ ಚಳವಳಿ ಫಲಿಸಿತು. ರೈತ ಹೋರಾಟದ ಪ್ರಾರಂಭದ ಘಟ್ಟವನ್ನು ಈ ಘಟನೆಯಿಂದ ಗುರುತಿಸಬಹುದು. ಇದನ್ನು ‘ಮಲಪ್ರಭಾ ರೈತ ಚಳವಳಿ’ ಎಂತಲೂ ಕರೆಯುತ್ತಾರೆ. ಮಲಪ್ರಭಾ ಅಚ್ಚುಕಟ್ಟು ಪ್ರದೇಶಗಳಾದ ಬೆಳಗಾವಿ, ಬಿಜಾಪುರ ಮತ್ತು ಧಾರವಾಡ ಜಿಲ್ಲೆಯಲ್ಲಿ ಈ ರೈತ ಹೋರಾಟ ಪ್ರಬಲವಾಗಿ ಕಂಡುಬಂದಿತು.

ಬೆಳಗಾವಿ ಜಿಲ್ಲೆಯಲ್ಲಿ ಹುಟ್ಟುವ ಮಲಪ್ರಭ ನದಿ ಧಾರವಾಡದ ಮೂಲಕ ಹಾದು ಬಿಜಾಪುರ ಜಿಲ್ಲೆಯ ಕೂಡಲಸಂಗಮದ ಬಳಿ ಕೃಷ್ಣಾನದಿಯನ್ನು ಕೂಡುತ್ತದೆ. ಈ ನದಿಗೆ ಸವದತ್ತಿ ಬಳಿ ಮುನವಳ್ಳಿ ಎಂಬಲ್ಲಿ ೧೬೨ ಕೋಟಿ ವೆಚ್ಚದಲ್ಲಿ ಆಣೆಕಟ್ಟೆ ಕಟ್ಟಿದರೂ ಅದರ ಉಪಯೋಗ ಮಾತ್ರ ನರಗುಂದ, ನವಲಗುಂದ, ಸವದತ್ತಿ ಮತ್ತು ರಾಮದುರ್ಗ ತಾಲ್ಲೂಕುಗಳ ಕೆಲವು ಹಳ್ಳಿಗಳಿಗೆ ಮಾತ್ರ ಸೀಮಿತವಾಯಿತು. ಈ ಯೋಜನೆಯಿಂದ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡಿದ್ದ ಜನರಿಗೆ ಭ್ರಮನಿರಶನವಾಯಿತು. ಜೊತೆಗೆ ೧೯೭೬ರಲ್ಲಿ ನೀರು ಬಂದರೂ, ಪೂರ್ವಾನ್ವಯವಾಗಿ ೧೯೭೪ರಿಂದ ನೀರು ಬಂದಂತೆ ಲೆಕ್ಕ ಹಿಡಿದು ಸರ್ಕಾರ ಕರಗಳನ್ನು ವಿಧಿಸಿತು. ಸರಿಯಾಗಿ ನೀರು ಬರದ ಸಂಕಟ ಒಂದೆಡೆಯಾದರೆ ಬಾರದೇ ಇರುವ ನೀರಿಗೆ ಕರ ಕೊಡಬೇಕಾದ ಸಂಕಟ ಇನ್ನೊಂದೆಡೆ. ಈ ಭ್ರಷ್ಟಾಚಾರದ ಜೊತೆಗೆ ರೈತರೆಂದರೆ ಕಾಲುಕಸ ಎಂದು ತಿಳಿದಿದ್ದ ಅಧಿಕಾರಶಾಹಿಯ ದರ್ಪವೂ ರೈತರನ್ನು ಕೆರಳುವಂತೆ ಮಾಡಿತು. ಅಲ್ಲದೆ ಸರ್ಕಾರದ ಹೊಸ ನೀತಿಯಿಂದಾಗಿ ವರಲಕ್ಷ್ಮಿ ಹತ್ತಿ ಬೆಲೆಯು ಇದ್ದಕ್ಕಿದ್ದಂತೆ ಕುಸಿಯಿತು. ಹೀಗಾಗಿ ಮೊದಲೇ ಹತಾಶರಾಗಿದ್ದ ರೈತರನ್ನು ಇದು ಮತ್ತಷ್ಟು ದಿವಾಳಿಯಾಗಿಸಿತು. ಇಂತಹ ಸಂಕಷ್ಟದ ಕಾಲದಲ್ಲಿ ನಮ್ಮ ನೀರಿನ ಕರಗಳನ್ನು ಕೆಲವು ವರ್ಷಗಳವರೆಗೆ ಮನ್ನಾ ಮಾಡುವಂತೆ ಕೇಳಿಕೊಂಡರೂ ಸರ್ಕಾರ ಇದ್ಯಾವುದಕ್ಕೂ ಕಿವಿಗೊಡಲಿಲ್ಲ. ಆದ್ದರಿಂದ ಹೋರಾಟ ಅನಿವಾರ್ಯವಾಗಿ ರೈತರು ಬೀದಿಗಿಳಿದರು.

ರೈತ ಚಳವಳಿ ಮತ್ತು ಜಾಥಾ

ಸ್ವಾತಂತ್ರ್ಯ ಪೂರ್ವದಿಂದಲೂ ರೈತರು ತಮಗಾಗುತ್ತಿದ್ದ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರೆ ಕಷ್ಟಪಟ್ಟು ದುಡಿಯುವ ರೈತರ ಬವಣೆ ಮಾತ್ರ ಹೇಳತೀರದಾಗಿತ್ತು. ಸ್ವಾತಂತ್ರ್ಯ ಬಂದ ಮೇಲೆ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟು ಜನ ಇನ್ನಾದರೂ ನಮ್ಮ ಬದುಕು ಹಸನಾಗಬಹುದು ಎಂದು ಕನಸು ಕಂಡಿದ್ದರು. ಆದರೆ ಅಲ್ಲಿಯೂ ರೈತರಿಗೆ ಸಿಕ್ಕಿದ್ದು ಲಾಠಿಯ ಹೊಡೆತ, ತುಪಾಕಿಯ ಗುಂಡೇಟು. ಇಂತಹ ಸಂದರ್ಭದಲ್ಲಿ ರೈತ ಸಂಘದ ಮೂಲಕ ರೈತರು ಜಾಥಾದಂತಹ ಹೋರಾಟಗಳನ್ನು ರೂಪಿಸಿದರು.

ಮಲೆನಾಡ ರೈತರ ಬೃಹತ್ ಜಾಥಾ : ೧೯೮೦

ನರಗುಂದ, ನವಲಗುಂದ ಘಟನೆಯಿಂದ ನೊಂದ ರೈತ ಮುಖಂಡರು ಸರ್ಕಾರಕ್ಕೆ ೧೯ ಬೇಡಿಕೆಗಳನ್ನು ಇಟ್ಟರು. ಆದರೆ ಸರ್ಕಾರ ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡದಿದ್ದಾಗ ಶಿವಮೊಗ್ಗದಲ್ಲಿ ಹೆಚ್.ಎಸ್. ರುದ್ರಪ್ಪ, ಎಂ.ಡಿ. ನಂಜುಂಡಸ್ವಾಮಿ, ಎನ್.ಡಿ. ಸುಂದರೇಶ್ ಅವರ ನೇತೃತ್ವದಲ್ಲಿ ಬೃಹತ್ ಜಾಥಾ ನಡೆಸಲು ತೀರ್ಮಾನಿಸಲಾಯಿತು. ಅಂತೆಯೇ ೧೯೮೦ ಸೆಪ್ಟಂಬರ್ ೧ರಂದು ಬ್ರಹತ್ ಜಾಥಾ ಏರ್ಪಾಡಾಗಿ ವಿಜ್ಞಾನ ಮೈದಾನದಿಂದ ಹೊರಟು ಪುರಸಭೆಯ ಆವರಣದಲ್ಲಿ ಬಂದು ಸೇರುವುದಿತ್ತು. ಈ ಜಾಥಾ ನಿರೀಕ್ಷೆಗಿಂತ ಹೆಚ್ಚಾಗಿಯೇ ಯಶಸ್ವಿಯಾಯಿತು. ಜನರು ಎತ್ತಿನ ಗಾಡಿಯಲ್ಲಿ, ಟ್ರ್ಯಾಕ್ಟರ್ ನಲ್ಲಿ, ಲಾರಿಯಲ್ಲಿ, ಬಸ್ಸುಗಳ ಟಾಪಿನಲ್ಲಿ ಎಂಟೂ ದಿಕ್ಕುಗಳಿಂದ ಬರತೊಡಗಿದರು. ಹಸಿರು ವಸ್ತ್ರ ಸಿಗದವರು ಹಸಿರು ಫೈರು ಹಿಡಿದುಕೊಂಡು ಬಂದದ್ದು ವಿಶೇಷವಾಗಿತ್ತು. ಶಿವಮೊಗ್ಗೆಯ ನಾಗರಿಕರು ಹಿಂದೆಯೂ ಕಂಡರಿಯದಷ್ಟು ಜನಸ್ತೋಮ ಸುಮಾರು ಎರಡು-ಮೂರು ಸಾವಿರ ರೈತರು ಸೇರಬಹುದೆಂದು ಅಂದಾಜಿಸಿದ್ದ ಪೊಲೀಸರ ನಂಬಿಕೆ ಹುಸಿಯಾಯಿತು. ಈ ಜಾಥಾದ ಸಮಾವೇಶದಲ್ಲಿ ತಮಿಳುನಾಡು ರೈತ ಮುಖಂಡರಾದ ನಾರಾಯಣಸ್ವಾಮಿ ನಾಯ್ಡ, ಶಿವಸ್ವಾಮಿ ಮತ್ತಿತರರು ರೈತರನ್ನು ಉದ್ದೇಶಿಸಿ ಮಾತನಾಡಿದರು.

ಚಳವಳಿ ಎರಡನೆಯ ಹಂತವಾಗಿ ಭದ್ರಾವತಿ ಶಿವಮೊಗ್ಗ ತಾಲ್ಲೂಕುಗಳ ಅನೇಕ ಹಳ್ಳಿಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿತು. ರೈತರ ಪ್ರತಿಭಟನೆ ರಸ್ತೆಗಿಳಿದು ತಮ್ಮನ್ನು ಬಂಧಿಸುವವರೆಗೆ ಚಳವಳಿ ಬಿಡುವುದಿಲ್ಲವೆಂದು ನಿರಂತರ ಜಾಥಾ ನಡೆಸಿದರು. ಇದೇ ಸಂದರ್ಭದಲ್ಲಿ ಪಿ. ಲಂಕೇಶ್, ಎಂ.ಡಿ. ನಂಜುಂಡಸ್ವಾಮಿ, ಕೆ. ರಾಮದಾಸ್, ಮಲ್ಲೇಶ್ ಮೊದಲಾದವರು ತಮ್ಮ ಭಾಷಣಗಳ ಮೂಲಕ ಚಳವಳಿ ನಿರತ ರೈತರನ್ನು ಹುರಿದುಂಬಿಸುತ್ತಿದ್ದರು. ಇವರ ಜಾಥಾದ ಶಕ್ತಿ ಎಷ್ಟಿತ್ತೆಂದರೆ ಕರ್ನಾಟಕದ ಎಲ್ಲಾ ಜೈಲುಗಳು ಭರ್ತಿಯಾಗಿ ಇನ್ನು ಯಾವ ಜೈಲಿನಲ್ಲಿ ಇವರನ್ನು ಹಾಕೋದು ಎನ್ನುವ ಮಟ್ಟಕ್ಕೆ ತಲುಪಿತು. ಅಂತಿಮವಾಗಿ ಸರ್ಕಾರ ೧೯ ಬೇಡಿಕೆಗಳಲ್ಲಿ ೧೧ ಬೇಡಿಕೆಗಳನ್ನು ಈಡೇರಿಸುವುದರ ಜೊತೆಗೆ ರೈತ ಚಳವಳಿಯ ಮೊದಲ ಜಾಥಾ ಯಶಸ್ವಿಯಾಯಿತು.