೧೯೮೨ರ ಬೃಹತ್ ಜಾಥಾ ಮತ್ತು ರೈತ ಸಮಾವೇಶ

ಕರ್ನಾಟಕದ ರೈತರು ಎರಡು ವರ್ಷಗಳಿಂದ ಒಗ್ಗಟ್ಟಾಗಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟರೂ ಸರ್ಕಾರ ಯಾವುದೇ ರೀತಿಯಲ್ಲಿ ಇತ್ತ ಗಮನ ಹರಿಸುತ್ತಿರಲಿಲ್ಲ. ಆದ್ದರಿಂದ ಅಕ್ಟೋಬರ್ ೨ ಗಾಂಧಿ ಜಯಂತಿಯಂದು ಬೃಹತ್ ಜಾಥಾ ಮತ್ತು ರೈತ ಸಮಾವೇಶವನ್ನು ಏರ್ಪಡಿಸಿತು.

ನಿಗಧಿಯಾಗಿದ್ದಂತೆ ಅಕ್ಟೋಬರ್ ೨ರಂದು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಬಂದ ರೈತರು ಬೆಳಿಗ್ಗೆ ೧೧ ಘಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜಮಾಯಿಸಿದ್ದರು. ಅಲ್ಲಿದ್ದ ಹಸಿರು ಟವಲ್, ರುಮಾಲು, ಬ್ಯಾಡ್ಜ್ ಹಾಗೂ ಹಸಿರು ತೋಳಪಟ್ಟಿ ಧರಿಸಿದ ರೈತರು ಮೆರವಣಿಗೆಯ ಮೂಲಕ ಜಾಥಾ ಆರಂಭಿಸಿದರು. ಅರಮನೆ ಮೈದಾನದಿಂದ ಪ್ರಾರಂಭವಾದ ಜಾಥಾ ಗುಟ್ಟಳ್ಳಿ ವೃತ್ತ, ಸ್ವಸ್ತಿಕ್, ಆನಂದರಾವ್ ಸರ್ಕಲ್, ಮಹಾರಾಣಿ ಕಾಲೇಜು, ಕೆ. ಆರ್. ಸರ್ಕಲ್ ಮೂಲಕ ಕಬ್ಬನ್ ಪಾರ್ಕ್ ಗೆ ಬಂದು ಸೇರಿತು. ಜಾಥಾದ ಉದ್ದಕ್ಕೂ ರೈತರು ತಂದ ತಮಟೆ, ಡೊಳ್ಳು, ಇತರ ವಾದ್ಯಗಳ ಜೊತೆಗೆ ಘೋಷಣೆಗಳನ್ನು ಮೊಳಗಿಸುತ್ತಿದ್ದರು.

ಸುಮಾರು ಮಧ್ಯಾಹ್ನ ೨ ಘಂಟೆಗೆ ಕಬ್ಬನ್ ಪಾರ್ಕ್ ತಲುಪಿದ ನಂತರ ಸಭೆ ಪ್ರಾರಂಭವಾಯಿತು. ರೈತ ಮುಖಂಡರಾದ ಹೆಚ್.ಎಸ್. ರುದ್ರಪ್ಪ, ಎಂ.ಡಿ. ನಂಜುಂಡಸ್ವಾಮಿ, ಎನ್.ಡಿ. ಸುಂದರೇಶ್ ಸಭೆಯನ್ನು ಕುರಿತು ರೈತರಿಗಾಗುತ್ತಿರುವ ಅನ್ಯಾಯ, ದೌರ್ಜನ್ಯ ಇವುಗಳಿಗೆ ಕಾರಣವೇನು? ಹಾಗೂ ರೈತರ ಮುಂದಿನ ಹೆಜ್ಜೆ ಏನು? ಮುಂತಾದ ವಿಷಯಗಳ ವಿವರವಾಗಿ ಮಾತನಾಡಿದರು. ರೈತರ ಬೇಡಿಕೆಗಳತ್ತ ಸರ್ಕಾರ ಗಮನ ಹರಿಸದೆ ನಿರ್ಲಕ್ಷ್ಯ ತೋರಿದರೆ ರಾಜ್ಯವ್ಯಾಪಿ ಹೋರಾಟ ರೂಪಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆಯನ್ನು ಕೊಡುವುದರ ಮೂಲಕ ಈ ಜಾಥಾ ಮತ್ತು ಬಹಿರಂಗ ಸಮಾವೇಶ ಸಮಾಪ್ತಿಯಾಯಿತು.

ವಿಧಾನಸೌಧಕ್ಕೆ ರೈತರ ಮಹಾಯಾತ್ರೆ

ರೈತರ ನಡುವೆ ವಿಷಬೀಜ ಭಿತ್ತಿ ಒಬ್ಬರನ್ನೊಬ್ಬರ ಎತ್ತಿಕಟ್ಟಿ ಅವರ ಬಾಳನ್ನು ಬೀದಿಪಾಲು ಮಾಡಲಾಗಿತ್ತು. ಹೀಗಾಗಿ ಹಳ್ಳಿಗಳನ್ನು ಒಡೆದು ಛಿದ್ರಗೊಳಿಸಲು ಕರ್ನಾಟಕ ಸಹಕಾರಿ ಸಂಘಗಳ ತಿದ್ದುಪಡಿ ಕಾಯ್ದೆಯ ಸೆಕ್ಷನ್ ೧೦೧ (ಸಿ) ಅನ್ನು ಜಾರಿಗೆ ತಂದಿತು. ಅಂದರೆ ಎಷ್ಟೇ ಕಡಿಮೆ ಸಾಲ ಇದ್ದರೂ ಬಾಕಿದಾರ ರೈತನ ಪೂರ್ತಿ ಜಮೀನನ್ನು ಸರ್ಕಾರದ ಪರವಾಗಿ ಹರಾಜಿನಲ್ಲಿ ಖರೀದಿಸುವ ಅಧಿಕಾರವನ್ನು ಜಿಲ್ಲಾಧಿಕಾರಿ ತಹಶೀಲ್ದಾರ್ ಗಳಿಗೇ ನೀಡಿದ್ದರು. ಇದನ್ನು ಈ ಕೂಡಲೇ ರದ್ದು ಮಾಡಬೇಕೆಂದು ವಿರೋಧಿಸಿ ೧೯೫೦ ಅಕ್ಟೋಬರ್ ೨ ರಿಂದ ನವೆಂಬರ್ ೧ ರವರೆಗೆ ಕರ್ನಾಟಕ ರಾಜ್ಯ ರೈತ ಸಂಘ ‘ವಿಧಾನಸೌಧ ಚಲೋ’ ಎನ್ನುವ ಅಭೂತಪೂರ್ವ ಜಾಥಾವನ್ನು ಆಯೋಜಿಸಿತು. ರೈತ ಸಂಘದ ಅಪ್ಪಣೆಯ ಮೇರೆಗೆ ರೈತರು ಬೆಂಗಳೂರಿಗೆ ವಾರಗಟ್ಟಲೇ ಕಾಲು ನಡಿಗೆಯಲ್ಲಿ ಧಾವಿಸಿದರು.

ಶಿವಮೊಗ್ಗ, ಹಾಸನ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ, ಧಾರವಾಡ, ಬಳ್ಳಾರಿ, ಬೆಳಗಾಂ ಹಾಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದಲೂ ಹರಿದು ಬಂದ ರೈತರು ನವೆಂಬರ್ ೧. ೧೯೮೫ರಂದು ಬೆಂಗಳೂರಿನಲ್ಲಿ ಜಮಾಯಿಸಿದರು. ಬೆಂಗಳೂರು ಹಿಂದೆಂದೂ ಕಂಡರಿಯದ ದಿನ ಅದಾಗಿತ್ತು. ರೈತರು ಅತ್ಯಂತ ಶಿಸ್ತು, ಸಂಯಮದಿಂದ ನಡೆದುಕೊಳ್ಳುತ್ತಿದ್ದರು. ಎಲ್ಲಿಯೂ ಉದ್ರೇಕಕ್ಕೆ ಒಳಗಾಗಿ ತಮ್ಮ ಭೀಮ ಬಲಕ್ಕೆ ಮರುಳಾಗಿ ವರ್ತಿಸಿದ ಒಂದೇ ಒಂದು ಸಣ್ಣ ಘಟನೆಯೂ ನಡೆಯಲಿಲ್ಲ. ಅತ್ಯಂತ ಶಿಸ್ತು, ಸಂಯಮ ಮತ್ತು ಅಪಾರ ಮಾನವ ಪ್ರೀತಿಯನ್ನು ಪ್ರದರ್ಶಿಸಿದ್ದು, ರೈತ ಶಕ್ತಿಯ ಮಹಾನ್ ಅಂತಸತ್ವವನ್ನು ತೋರಿಸಿತು. ಇದರಿಂದ ಬೆಂಗಳೂರಿಗರ ಮನ ಗೆಲ್ಲುವಲ್ಲಿ ರೈತರು ಯಶಸ್ವಿಯಾದರು. ಸಾವಿರಾರು ಸಂಖ್ಯೆಯಲ್ಲಿ ಬರುತ್ತಿದ್ದ ರೈತರನ್ನು ಕಂಡು ಆಶ್ಚರ್ಯಚಕಿತರಾದ ಬೆಂಗಳೂರಿಗರು ರೈತರಿಗೆ ನೀರು, ಮಜ್ಜಿಗೆ, ಪಾನಕ, ಹಣ್ಣು, ಹಂಪಲು ಹೀಗೆ ಕೈಗೆ ಸಿಕ್ಕಿದ್ದು ತಮ್ಮ ಮಿತಿಗೆ ಎಟುಕಿದ್ದನ್ನು ಕೊಟ್ಟು ಸಹಕರಿಸಿದರು. ನಿಜಕ್ಕೂ ಮಾನವೀಯತೆಯಲ್ಲಿ ನಂಬಿಕೆ ಇಟ್ಟ ಅಪೂರ್ವ ಸಂಗಮದಂತೆ ಈ ಜಾಥಾ ಕಂಡು ಬಂದಿತು. ಇದಲ್ಲದೆ ರೈತ ಚಳವಳಿಯು ದೆಹಲಿ ಜಾಥಾ, ಯುರೋಪ್ ಜಾಥಾ, ಜಪ್ತಿ ಮರುಜಪ್ತಿ ಮುಂತಾದ ಚಳವಳಿಗಳನ್ನು, ಜಾಥಾಗಳನ್ನು ನಡೆಸಿರುವುದು ಗಮನಾರ್ಹವಾಗಿದೆ.

ಕೋಮುವಾದ ವಿರೋಧಿ ಚಳವಳಿ

ಭಾರತೀಯ ಸಂದರ್ಭದಲ್ಲಿ ಕೋಮುವಾದ ಎನ್ನುವುದು ಬಹುಮುಖ್ಯ ಸಮಸ್ಯೆಯಾಗಿ ಪರಿಣಮಿಸಿದೆ. ‘ನಾಗರಿಕ ಸಮಾಜ ಹೆಚ್ಚೆಚ್ಚು ಶಿಕ್ಷಿತವಾದಂತೆಲ್ಲಾ ಧರ್ಮಾಂಧತೆ ಗರಿಗೆದರುವುದರ ಜೋತೆಗೆ ಮತ್ತಷ್ಟು ಮೂಲಭೂತವಾದಿಗಳು ಸೃಷ್ಟಿಯಾಗುತ್ತಲೇ ಇದ್ದಾರೆ. ಈ ಮತಾಂಧರು ಅಮಾಯಕ ಜನರನ್ನು ದೇವರು, ಧರ್ಮಗಳ ಹೆಸರಿನಲ್ಲಿ ಎತ್ತಿ ಕಟ್ಟಿ ಪರಸ್ಪರರನ್ನು ವೈರಿಗಳನ್ನಾಗಿ ಮಾಡುತ್ತಲೇ ಒಳಗೊಳಗೇ ಖುಷಿಪಡುತ್ತಾರೆ. ಇತ್ತೀಚೆಗಂತೂ ಈ ಕೋಮುವಾದ ರಾಜಕಾರಣದ ಜೊತೆ ತಳಕು ಹಾಕಿಕೊಂಡು ಮತ್ತಷ್ಟು ವಿಜೃಂಭಿಸುತ್ತಿದೆ. ಇದನ್ನೇ ರಾಜಕೀಯ ಪಕ್ಷಗಳು ಅಧಿಕಾರದ ಗದ್ದುಗೆ ಏರಲು ಉಪಯೋಗಿಸಿಕೊಳ್ಳುತ್ತಲೇ ಈ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತಿವೆ. ಪುರೋಹಿತಶಾಹಿಯ ಉಪಉತ್ಪನ್ನಗಳಂತೆ ಸೃಷ್ಟಿಯಾಗಿರುವ ಈ ಕೋಮುವಾದ, ಮತೀಯವಾದ ಜನಸಾಮಾನ್ಯರನ್ನು ಹಿಂದೂ, ಮುಸ್ಲಿಂ, ಜೈನ, ಪಾರ್ಸಿ, ಬೌದ್ಧ ಎಂದು ಪರಸ್ಪರ ಮಧ್ಯೆ ಗೋಡೆಗಳನ್ನು ನಿರ್ಮಿಸುತ್ತಿದೆ. ಇದರ ರುದ್ರ ನರ್ತನಕ್ಕೆ ದೇಶದ ಲಕ್ಷಾಂತರ ಮಂದಿ ಬಲಿಯಾಗಿತ್ತಿರುವುದು ಮತ್ತೆ ಮತ್ತೆ ಗೋಚರಿಸುತ್ತಲೇ ಇದೆ.

ಭಾರತದಲ್ಲಿ ಕೋಮುವಾದ ಹಾಗೂ ಮೂಲಭೂತವಾದ

ಭಾರತದಲ್ಲಿ ಕೋಮುವಾದ ಮತ್ತು ಮೂಲಭೂತವಾದಗಳು ಪ್ರಬಲವಾದದ್ದು ವಸಾಹತುಶಾಹಿ ಕಾಲಘಟ್ಟದಲ್ಲಿ. ಭಾರತದ ಸಾಂಸ್ಕೃತಿಕ ವಲಯವು ಭಿನ್ನ ಭಿನ್ನ ಜನ, ಜಾತಿ, ಧರ್ಮಗಳಿಂದ ರೂಪುಗೊಂಡದ್ದಾಗಿದೆ. ಆದ್ದರಿಂದಲೇ ಭಾರತ ವಿಶ್ವಬಂಧುತ್ವಕ್ಕೆ ಒಗ್ಗಿಕೊಂಡಿರುವ ಧರ್ಮ ನಿರಪೇಕ್ಷತೆಯ ನೆಲೆಯುಳ್ಳ ದೇಶ ಹಾಗೂ ಉಪಖಂಡ.

ಮೂಲಭೂತವಾದವು ಬಹುಶಃ ಎಲ್ಲಾ ಧರ್ಮಗಳಲ್ಲಿ ಕಂಡುಬರುವ ಸಾಮಾನ್ಯ ಅಂಶವೆನ್ನುವಂತಾಗಿದೆ. ಹಿಂದೂ ಮೂಲಭೂತವಾದಿಗಳಿದ್ದಾರೆ. ಮುಸ್ಲಿಂ ಮೂಲಭೂತವಾದಿಗಳಿದ್ದಾರೆ. ಕ್ರಿಶ್ಚಿಯನ್ ಮೂಲಭೂತವಾದಿಗಳಿದ್ದಾರೆ. ಹೀಗೆ ಸಹಜವಾಗಿ ಧರ್ಮಗಳಿದ್ದೆಡೆಯಲ್ಲೆಲ್ಲಾ ಮೂಲಭೂತವಾದ ನೆಲೆಸಿದೆ. ಒಂದೆಡೆ ಭಾರತೀಯ ಸಮಾಜವು ನಾನಾ ಜಾತಿ, ಧರ್ಮಗಳಿಂದ ರೂಪಿತವಾದ ಸಾಮಾಜಿಕ ವ್ಯವಸ್ಥೆಯಾದರೂ, ಇಲ್ಲಿಯ ಸಾಮಾಜಿಕ ಮತ್ತು ಧಾರ್ಮಿಕ ವೈರುಧ್ಯತೆಗಳಲ್ಲಿ ಭಿನ್ನತೆಗಳಿದ್ದರೂ, ಧರ್ಮನಿರಪೇಕ್ಷತೆ ಹಾಗೂ ವಿಶ್ವಬಂಧುತ್ವದ ಮೌಲ್ಯವಾಗಿಯೇ ವ್ಯಕ್ತವಾಗುತ್ತದೆ. ಮೂಲಭೂತವಾದಿಗಳು ತಮ್ಮ ಧರ್ಮದ ಜನತೆಯನ್ನು ಧಾರ್ಮಿಕ ಹಾಗೂ ಸಾಮಾಜಿಕ ಚೌಕಟ್ಟುಗಳಿಂದ ಎಷ್ಟೇ ಬಂಧಿಸಿದರೂ ಸಾಮಾನ್ಯ ಜನತೆ ಅದರಾಚೆಗೂ ಬದುಕುವ ನಿಲುವುಗಳನ್ನು ಪ್ರಕಟಪಡಿಸುತ್ತಲೇ ಇರುತ್ತಾರೆ. ಅಂದರೆ ಎಲ್ಲಾ ಮೂಲಭೂತವಾದಗಳು ಜನ ವಿರೋಧಿಯಾದವು ಹಾಗೂ ಸಾಮಾಜಿಕ ಪ್ರಗತಿಗೆ ವಿಮುಖವಾಗಿರುವಂಥವು.

ಕೋಮುವಾದ ಮತ್ತು ಮೂಲಭೂತವಾದ ಎರಡೂ ಒಂದೇ ಅಲ್ಲ. ಮೂಲಭೂತವಾದವು ಪುರೋಹಿತಶಾಹಿ ರೂಪಿಸಿದ ಸಂಪ್ರದಾಯ. ಇದು ಸಮಾಜದ ಚಲನೆಗಳನ್ನು ತನ್ನ ಜಡತೆ ಮತ್ತು ಹಠಮಾರಿತನಗಳಿಂದ ನಿಯಂತ್ರಿಸುತ್ತಿರುತ್ತದೆ. ಮೂಲಭೂತವಾದವು ಸಾಮಾಜಿಕವಾಗಿ ಪ್ರತಿಗಾಮಿ ಸ್ವರೂಪಿಯಾಗಿರುತ್ತದೆ. ಜೊತೆಗೆ ಸ್ಥಾಪಿತ ಜನತೆಯ ಹಿತಾಸಕ್ತಿಯನ್ನು ಮಾತ್ರ ಕಾಪಾಡುವಲ್ಲಿ ಸದಾ ಜಾಗೃತವಾಗಿರುತ್ತದೆ. ಮುಖ್ಯವಾಗಿ ಭಾರತೀಯ ಸಮಾಜದ ಮೂಲಭೂತವಾದವು ಶ್ರೇಣಿಕೃತ ಜಾತಿ ವ್ಯವಸ್ಥೆಯನ್ನು ಪ್ರತಿಪಾದಿಸುತ್ತದೆ. ಹಾಗೆಯೇ ಹಿಂದೂ ಮೂಲಭೂತವಾದವು ಜಾತಿಯಲ್ಲಿ ಮೇಲಿರುವ ಪುರೋಹಿತಶಾಹಿಯನ್ನು ಶ್ರೇಷ್ಠೀಕರಿಸುವುದರ ಮೂಲಕ ಮೇಲ್ಜಾತಿಗಳಿಗೆ ಮಾತ್ರ ಮಾನ್ಯತೆ ನೀಡುತ್ತದೆ. ಕೆಳಜಾತಿಗಳನ್ನು ಕೆಳಸ್ಥರದಲ್ಲೇ ಇಡುತ್ತದೆ.

ಇಸ್ಲಾಂ ಮೂಲಭೂತವಾದವೂ ಸಹ ಪ್ರಗತಿ ವಿರೋಧಿಯಾಗಿದ್ದು ಆಧುನಿಕ ಮೌಲ್ಯಗಳನ್ನು ವಿರೋಧಿಸುತ್ತದೆ. ಆದರೆ ಹಿಂದೂ ಮೂಲಭೂತವಾದವು ಇದಕ್ಕಿಂತಲೂ ಭೀನ್ನವಾದ ಆಯಾಮವನ್ನು ಹೊಂದಿದೆ. ಇದು ತಾನೇ ಶ್ರೇಷ್ಠವೆಂಬ ವ್ಯಸನಕ್ಕೆ ಒಳಗಾಗುವುದರ ಜೊತೆಗೆ ರಾಷ್ಟ್ರೀಯತೆಯೂ ಸಹ ಧರ್ಮದ ಮೇಲೆಯೇ ರೂಪಿತವಾಗಬೇಕೆಂದು ಒತ್ತಾಯಿಸುತ್ತದೆ. ಗತಕಾಲದ ಸಾಮ್ರಾಜ್ಯಶಾಹಿ ಪರಂಪರೆಯನ್ನು ಪುನರುಜ್ಜೀವನಗೊಳಿಸುವುದರ ಮೂಲಕ ಒಂದು ಜನಾಂಗದ ಸಾಮರ್ಥ್ಯವನ್ನೇ ರಾಷ್ಟ್ರೀಯತೆಯನ್ನಾಗಿ ಬಿಂಬಿಸುತ್ತಾ ಹೋಗುತ್ತದೆ. ಹಿಂದೂ ಮೂಲಭೂತವಾದವು ಪ್ರತಿಪಾದಿಸುವ ಸಾಂಸ್ಕೃತಿಕ ಏಕತೆಯು ಭಿನ್ನ ಭಿನ್ನ ಸಂಸ್ಕೃತಿಗಳಿಂದ ಕೂಡಿದ ರಾಷ್ಟ್ರೀಯತೆಯನ್ನು ನಿರಾಕರಿಸುತ್ತದೆ ಹಾಗೂ ಸಾಂಸ್ಕೃತಿಕವಾಗಿ ಹಿಂದುತ್ವವೇ ಏಕಮಾನ್ಯ ತತ್ವವಾಗಬೇಕೆಂದು ಆಗ್ರಹಿಸುತ್ತದೆ. ಇಡೀ ಸಾಂಸ್ಕೃತಿಕತೆಯನ್ನು ಏಕೀಕರಿಸಲು ಪ್ರಯತ್ನಿಸುತ್ತಲೇ ಹಿಂದುತ್ವವೇ ‘ರಾಷ್ಟ್ರೀಯ ತತ್ವ’ ಎನ್ನುತ್ತದೆ. ಆ ಮೂಲಕ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ನಿರಾಕರಿಸುತ್ತದೆ.

ಯಾವುದೇ ಮೂಲಭೂತವಾದವು ತನ್ನ ಧರ್ಮದಲ್ಲೇ ಇರುವ ಜನಸಾಮಾನ್ಯರನ್ನೂ ದ್ವಿತೀಯ ದರ್ಜೆಯ ನಾಗರೀಕರನ್ನಾಗಿ ನೋಡುತ್ತಲೇ ಪುರೋಹಿತಶಾಹಿ ವ್ಯವಸ್ಥೆಯು ಯಜಮಾನ್ಯತೆಯನ್ನು ಶ್ರೇಷ್ಠೀಕರಿಸುತ್ತದೆ. ಈ ರೀತಿಯ ಸಾಮಾಜಿಕ ವೈರುಧ್ಯಗಳು ಮತ್ತು ವೈಷಮ್ಯಗಳು ನಿರಂತರವಾಗಿರುವಂತೆ ಜಾಗೃತವಾಗಿರುತ್ತದೆ. ಇಸ್ಲಾಂ ಧರ್ಮದಲ್ಲಿನ ಮೂಲಭೂತವಾದವು ತನ್ನದೇ ಧರ್ಮದ ಪ್ರಗತಿಪರರು ಮತ್ತು ಮಹಿಳೆಯರ ಮೇಲೆ ಹಲ್ಲೆ ಮಾಡುತ್ತಿದೆ. ಶಿಯಾಗಳ ವಿರುದ್ಧ ಸುನ್ನಿಗಳ ಆಕ್ರಮಣ ಮಹಿಳೆಯರ ಮೇಲೆ ತಾಲಿಬಾನರ ಹೇರಿಕೆ, ಪ್ರಗತಿಪರ ಲೇಖಕರು ಚಿಂತಕರ ಬಗ್ಗೆ ಮುಲ್ಲಾಗಳು ಹೊರಡಿಸುವ ಪತ್ವಾ ಇವೆಲ್ಲ ಕೃತ್ಯಗಳನ್ನು ಮೂಲಭೂತವಾದಿಗಳು ನಿರಂತರವಾಗಿ ಧರ್ಮದ ಹೆಸರಿನಲ್ಲಿ ಮಾಡುತ್ತಲೇ ಇರುತ್ತಾರೆ. ಆ ವ್ಯವಸ್ಥೆಯ ಯಜಮಾನಿಕೆ ಹಾಗೂ ಪ್ರಾತಿನಿಧ್ಯ ಇವೆಲ್ಲವೂ ಆಯಾ ಧರ್ಮದ ಬಲಿಷ್ಟ ವರ್ಗದವರ ಬಳಿಯೇ ಇರಬೇಕೆಂಬುದರ ಜೊತೆಗೆ ಈ ವರ್ಗಗಳು ಪ್ರಶ್ನಾತೀತರೆಂಬ ಕಲ್ಪಿತ ಸತ್ಯವನ್ನು ಜನಸಾಮಾನ್ಯರ ಮೇಲೆ ಹೇರಿ ಸಾಮಾಜಿಕ ಹಿಡಿತವನ್ನು ಸಾಧಿಸುತ್ತಾರೆ. ಕೋಮುವಾದವು ಕೇವಲ ಜಾತಿವಾದ ಅಲ್ಲ, ಜಾತಿವಾದವು ಶ್ರೇಣಿಕರಣವನ್ನು ನಂಬುತ್ತದೆ. ತನ್ನನ್ನು ತುಳಿದವರನ್ನೂ ಒಪ್ಪಿಕೊಳ್ಳುವ ಮತ್ತು ತಾನು ಮತ್ತೊಬ್ಬರನ್ನು ತುಳಿಯುವುದನ್ನು ಬಯಸುವ ಹಾಗೂ ಈ ಚೌಕಟ್ಟಿನಲ್ಲಿಯೇ ಒಂದು ಸಾಮರಸ್ಯವನ್ನು ಕಾಪಾಡಿಕೊಳ್ಳುವ ವ್ಯವಸ್ಥೆಯಾಗಿದೆ. ಇದು ಈ ರೀತಿಯ ಧಾರ್ಮಿಕತೆಯ ಆಧಾರದಲ್ಲೇ ಸಮುದಾಯವನ್ನು ಹಿಡಿದಿಟ್ಟುಕೊಳ್ಳಲು ಪ್ರಜ್ಞಾಪೂರ್ವಕವಾಗಿ ಜಾಗೃತವಾಗಿರುತ್ತದೆ.

ಹೀಗಾಗಿ ಕೋಮುವಾದಿಕರಣದಿಂದಾಗಿ ಸಮಾಜದಲ್ಲಿ ಕೋಮುಗಲಭೆಗಳು ಹೆಚ್ಚಾಗಿ ಜಾತ್ಯತೀತ ಹಾಗೂ ಧರ್ಮ ನಿರಪೇಕ್ಷತೆಯ ತತ್ವಗಳು ಕುಸಿಯುತ್ತವೆ. ಧರ್ಮಾಧಾರಿತ ಪ್ರತ್ಯೇಕತಾ ಭಾವನೆಯಿಂದಾಗಿ ಜನಸಾಮಾನ್ಯರ ಜೀವನ ಅಸ್ತವ್ಯಸ್ತಗೊಳ್ಳುತ್ತಾ ಹೋಗುತ್ತದೆ. ರಾಜಕೀಯವಾಗಿ ದ್ರುವೀಕರಣ ಏರ್ಪಟ್ಟು ಮತಾಂಧತೆ ತೀವ್ರವಾಗುತ್ತಾ ಹೋಗುತ್ತದೆ. ಕೋಮುವಾದಿಕರಣದಿಂದಾಗಿ ಸ್ವ ಮತ್ತು ಅನ್ಯತ್ವದ ನೆಲೆಗಳು ಉಂಟಾಗಿ ಭೀಕರವಾದ ಸ್ವರೂಪವನ್ನು ಪಡೆಯುತ್ತವೆ. ಪ್ರಜಾಪ್ರಭುತ್ವಗದಂತಹ ದೇಶಗಳಲ್ಲಿ ಕೋಮುವಾದವು ಭಯಂಕರವಾದ ಹಿಂಸೆಗೆ ಹಾಗೂ ರಾಜಕೀಯ ಅರಾಜಕತೆಗೆ ಕಾರಣವಾಗುತ್ತದೆ.

ಕರ್ನಾಟಕ ಮತ್ತು ಕೋಮುವಾದ

೧೮೬೩ರ ವೇಳೆಗೆ ಉತ್ತರ ಭಾರತದಲ್ಲಿ ಕೋಮುವಾದವು ರೂಪುಗೊಂಡಿತಾದರೂ ಕರ್ನಾಟಕದ ಸಂದರ್ಭದಲ್ಲಿ ತಡವಾಗಿ ಬೆಳೆಯಿತು ಎಂಬ ವಾದವಿದೆ. ಕೋಮುವಾದವು ಆಧುನಿಕತೆಗೆ ಸಂಬಂಧಿಸಿ ರೂಪುಗೊಂಡ ಸಂಗತಿಯೆಂದು ಹಲವು ವಿದ್ವಾಂಸರು ಅಭಿಪ್ರಾಯ ಪಡುತ್ತಾರೆ. ಈ ಅಭಿಪ್ರಾಯದ ಪ್ರಕಾರ ಭಾರತದ ಯಾವ ಯಾವ ರಾಜ್ಯಗಳ ಆಧುನಿಕತೆಯನ್ನು ಯಾವ ಕಾಲಘಟ್ಟದಲ್ಲಿ ಬರಮಾಡಿಕೊಂಡವು ಎಂಬುದರ ಆಧಾರದ ಮೇಲೆ ಕೋಮುವಾದದ ಉಗಮ ಮತ್ತು ವಿಕಾಸವನ್ನು ಗುರುತಿಸಬಹುದು. ಹಾಗೆಯೇ ಆ ಆಧುನಿಕತೆಯಿಂದಾಗಿ ಸಮಾಜದ ಬ್ರಾಹ್ಮಣೇತರ ಜಾತಿಗಳೂ ಹಾಗೂ ಮುಸ್ಲಿಂ ಸಮುದಾಯಗಳು ಶಿಕ್ಷಿತರಾಗಿರುವುದನ್ನು ಆಧುನಿಕ ಇತಿಹಾಸ ತಿಳಿಸುತ್ತದೆ. ಈ ಪ್ರಕ್ರಿಯೆಗಳೊಂದಿಗೆ ಕರ್ನಾಟಕದಲ್ಲಿ ನಡೆದಿರುವ ಹಲವು ಬಗೆಯ ಕೋಮುವಾದದ ವಿವರಗಳನ್ನು ನೋಡುವಾಗ ಆಧುನಿಕತೆಯ ಎಲ್ಲಾ ವರ್ಗಗಳಲ್ಲಿ ಏಕರೂಪತೆಯನ್ನು ತರಲಿಲ್ಲ. ಕೋಮುವಾದ ತಡವಾಗಿ ಬೆಳೆಯುವುದಕ್ಕೆ ಕರ್ನಾಟಕದಲ್ಲಿದ್ದಂತಹ ಮಿಶ್ರ ಸಂಸ್ಕೃತಿಯ ಪ್ರಭಾವ ಬಹು ಮುಖ್ಯ ಕಾರಣವಾಗಿದೆ ಎನ್ನಬಹುದು.

ಭಾರತದ ಮಟ್ಟದಲ್ಲಿ ಕೋಮುವಾದಿ ಕಾಜಕಾರಣಕ್ಕೆ ಅಯೋಧ್ಯೆಯ ರಾಮಜನ್ಮಭೂಮಿ ವಿವಾದವು ಪ್ರಾಮುಖ್ಯತೆ ತಂದುಕೊಟ್ಟಂತೆ ಕರ್ನಾಟಕದಲ್ಲಿ ಬಾಬಾ ಬುಡನ್ ಗಿರಿ ವಿವಾದವು ಪ್ರಾಮುಖ್ಯತೆಯನ್ನು ತಂದುಕೊಟ್ಟಿತು. ರಾಮಜನ್ಮಭೂಮಿಯ ಮೂಲಕ ಕೋಮುವಾದಿಗಳು ಆರಂಭಿಸಿದ ರಾಜಕಾರಣಕ್ಕೂ ಕರ್ನಾಟಕದಲ್ಲಿ ಬಾಬಾಬುಡನ್ ಗಿರಿಯ ಮೂಲಕ ಆರಂಭಿಸಿದ ರಾಜಕಾರಣಕ್ಕೂ ಪ್ರಮುಖವಾದ ವ್ಯತ್ಯಾಸವಿದೆ. ಅಯೋಧ್ಯೆಯಲ್ಲಿನ ಬಾಬರೀ ಮಸೀದಿಯನ್ನು ಬಾಬರ್ ರಾಮ ಮಂದಿರವನ್ನು ನಿರ್ನಾಮಗೊಳಿಸಿ ಸ್ಥಾಪಿಸಿದುದು ಎಂಬ ರಾಜಕೀಯ ಹುನ್ನಾರದ ಚರಿತ್ರೆಯನ್ನು ಕೋಮುವಾದಿಗಳು ಸೃಷ್ಟಿಸಿದರು. ಆದರೆ ಕರ್ನಾಟಕದಲ್ಲಿ ತಮ್ಮ ರಾಜಕಾರಣಕ್ಕಾಗಿ ಬೆಳೆಸಿದ್ದು ಕರ್ನಾಟಕದ ಪ್ರಮುಖ ಸೌಹಾರ್ದ ಕೇಂದ್ರವಾದ ಬಾಬಾಬುಡನ್ ಗಿರಿಯನ್ನು. ಬಾಬಾಬುಡನ್ ಗಿರಿಯು ಕರ್ನಾಟಕದ ಪ್ರಮುಖ ಸೂಫಿಕೇಂದ್ರ. ಇಲ್ಲಿ ಬಾಬಾ ಬುಡನ್ ಸಾಬಿ ಹಾಗೂ ದತ್ತಾತ್ರೇಯರು ಸೂಫಿ ಹಾಗೂ ಅವೈದಿಕ ದತ್ತಪಂತಗಳನ್ನು ಬೆಳೆಸಿದವರು. ಇಂತಹ ಸೌಹಾರ್ದ ಕೇಂದ್ರವನ್ನೇ ಕೋಮುವಾದಿಗಳು ಪ್ರಮುಖ ದಾಳವಾಗಿ ಬೆಳೆಸುತ್ತಾ ಅವೈದಿಕ ಪರಂಪರೆಗೆ ಸೇರಿದ ದತ್ತಾತ್ರೇಯನಿಗೆ ವೈದಿಕತೆಯನ್ನು ಆರೋಪಿಸಿ ಹಲವು ಸಾಂಸ್ಕೃತಿಕ ಮಿಥ್ಯೆಗಳನ್ನು ಸೃಷ್ಟಿಸಿದರು. ಈ ಮೂಲಕ ಆರಂಭವಾದ ಕೋಮುವಾದಿ ರಾಜಕಾರಣ ಇಂದು ಕರಾವಳಿ ಹಾಗೂ ಉತ್ತರ ಕರ್ನಾಟಕದಲ್ಲಿ ದರ್ಗಾಗಳು ಮೂಲದಲ್ಲಿ ದೇವಸ್ಥಾನಗಳಾಗಿದ್ದವು ಎಂದು ಸಾರುವುದರ ಮೂಲಕ ಕೋಮು ದಳ್ಳುರಿಯನ್ನು ಹೊತ್ತಿಸುತ್ತಿವೆ.

ಕೋಮುವಾದ ವಿರೋಧಿ ಜಾಥಾಗಳು

ಕೋಮುವಾದ ವಿರೋಧಿ ಸಾಂಸ್ಕೃತಿಕ ಜಾಥಾಗಳು ಮುಖ್ಯವಾಗಿ ಮನುಷ್ಯರನ್ನು ಮನುಷ್ಯರು ಅರ್ಥಮಾಡಿಕೊಳ್ಳುವಂತಾಗಬೇಕು. ಪರಸ್ಪರರು ಸೇರಬೇಕು. ಮಾನವತೆ ಅಂತಃಕರಣ ಪ್ರೀತಿವಿಶ್ವಾಸಕ್ಕಾಗಿ ಮಡಿಯಬೇಕು. ಸಂಪೂರ್ಣ ಸಹನೆ ಸಹಕಾರ ಹೊಂದಿ ಆತ್ಮೀಯತೆಯಿಂದ ಒಗ್ಗೂಡಿ ಜೀವನ ನಿರ್ವಹಿಸಬೇಕು ಎಂಬ ವಿಚಾರ, ಸಂದೇಶವನ್ನು ಜನರ ಅರಿವಿಗೆ ತರುವ ಪಾತ್ರವನ್ನು ಮಾಡಿದೆ. ದೇಶ ವಿಭಜನೆಯ ಸಂದರ್ಭದಲ್ಲಿ ಗಾಂಧೀಜಿ, ಮುಸ್ಲಿಮರು ಮತ್ತು ಹಿಂದೂಗಳ ಸೌಹಾರ್ದತೆಗಾಗಿ ಬೀದಿ ಬೀದಿಗಳಲ್ಲಿ ಕಾಲ್ನಡಿಗೆ ಜಾಥಾ ಮಾಡಿದ್ದರು. ಅವರ ಸಂದೇಶ “ಈಶ್ವರ ಅಲ್ಲಾ ತೇರೇನಾಮ್” ಎಂಬ ಸೌಹಾರ್ದತೆಯ ಪ್ರತೀಕವಾಗಿತ್ತು. ಧರ್ಮ ಧರ್ಮಗಳು ಪರಸ್ಪರ ಸಹನೆಯಿಂದ ಬದುಕುವ ನೆಲೆಯಲ್ಲಿ ಪ್ರಕಟವಾಗಬೇಕು ಎಂಬುದು ಅವರ ಅಂತರಂಗದ ತುಡಿತವಾಗಿತ್ತು.

ಕೋಮುವಾದಕ್ಕೆ ಸಂಬಂಧಪಟ್ಟ ಜಾಥಾಗಳು ಇತ್ತೀಚಿನ ಕೋಮುಗಲಭೆಗಳಿಗೆ ಪ್ರತಿಕ್ರಿಯೆಯಾಗಿ ಹುಟ್ಟಿಕೊಂಡವು. ಮುಖ್ಯವಾಗಿ ‘ಸಮುದಾಯ’ ತನ್ನ ಬೆಳ್ಳಿ ಹಬ್ಬದ ಪ್ರಯುಕ್ತ ‘ಶಾಂತಿ ಸೌಹಾರ್ದ ಮತ್ತು ನೆಮ್ಮದಿಯ ನಾಳೆಗಳಿಗಾಗಿ ಸಮುದಾಯದ ಬೆಳ್ಳಿ ಹಬ್ಬದ ಜಾಥಾ’ವನ್ನು ೨೦೦೨ ಜನವರಿ ೨೦ರಿಂದ ೩೦ರವರೆಗೆ ಸಂಘಟಿಸಿತು. ಈ ಜಾಥಾ ಬಿಜಾಪುರದಿಂದ ಆರಂಭಗೊಂಡು ಧಾರವಾಡ, ರಾಮದುರ್ಗದ ಮೂಲಕ ಹಾದು ಬಂದರೆ ಶೃಂಗೇರಿಯಿಂದ ಹರಿಹರ, ಶಿಗ್ಗಾವ್, ಹಾವೇರಿ, ಹರಪನಹಳ್ಳಿಯ ಮೂಲಕ ಸಮುದಾಯ ತಂಡಗಳು ಜಾಥಾ ನಡೆಸಿ ಬೆಂಗಳೂರಿನಲ್ಲಿ ಸಮಾವೇಶಗೊಂಡು ಶಾಂತಿ ಸಂದೇಶವನ್ನು ಸಾರಿದವು.

೨೦೦೩-೨೦೦೪ರ ಮೈಸೂರು ಗಲಭೆ ಸಂದರ್ಭದಲ್ಲಿ ಮೈಸೂರಿ ಪ್ರಗತಿಪರರ ಒಕ್ಕೂಟ ‘ದ್ವೇಶ ಬಿಟ್ಟು ದೇಶ ಕಟ್ಟು’ ಎಂಬ ಸಾಂಸ್ಕೃತಿಕ ಜಾಥಾವನ್ನು ಮೈಸೂರಿನ ಗಲಭೆ ಪ್ರದೇಶಗಳಲ್ಲಿ ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಬುದ್ಧಿ ಜೀವಿಗಳಾದ ಪ್ರೊ. ಜಿ. ಎಚ್. ನಾಯಕ್, ಪ್ರೊ. ಎಚ್. ಗೋವಿಂದಯ್ಯ, ದೇವನೂರು ಮಹಾದೇವ ಹಾಗೂ ರಂಗಕರ್ಮಿ ಸಿ. ಬಸವಲಿಂಗಯ್ಯನವರು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಕರ್ನಾಟಕದಲ್ಲಿ ಕೋಮುವಾದ ವಿರೋಧಿ ಸಾಂಸ್ಕೃತಿಕ ಜಾಥಾಗಳು ಪ್ರಾಸಂಗಿಕವಾಗಿ ಅಲ್ಲಲ್ಲಿ ನಡೆದಿವೆ. ಮುಖ್ಯವಾಗಿ ಸಮುದಾಯ ಹಾಗೂ ಅನೇಕ ಜನಪರ ವೇದಿಕೆಗಳು ಈ ದಿಸೆಯಲ್ಲಿ ಪಾಲ್ಗೊಂಡಿವೆ. ಆದರೆ ಸಮಗ್ರವಾಗಿ ಸಮಸ್ತ ಜನತೆಯ ಕೋಮುವಾದದ ಬಗ್ಗೆ ಆಂದೋಲನವನ್ನು ರೂಪಿಸುವಲ್ಲಿ ಪ್ರಯತ್ನಗಳು ಆಗಬೇಕಿದೆ. ಈ ದಿಸೆಯಲ್ಲಿ ಇತ್ತೀಚೆಗೆ ಕೋಮುಸೌಹಾರ್ದ ವೇದಿಕೆ ಹಾಗೂ ಕರ್ನಾಟಕ ಜನಪದ ವೇದಿಕೆಗಳು ತುಂಬಾ ಕ್ರಿಯಾಶೀಲವಾಗುತ್ತಿವೆ.

೧೯೯೯ರಲ್ಲಿ ಶಿವಮೊಗ್ಗದ ವೇದಿಕೆಯಿಂದ ಬಾಬಾಬುಡನ್ ಗಿರಿಯಲ್ಲಿ ಸಂಘ ಪರಿವಾರದ ವಿಧ್ವಂಸಕ ಕೃತ್ಯಗಳನ್ನು ಖಂಡಿಸಿ ಚಿಕ್ಕಮಗಳೂರಿನಲ್ಲಿ ಬೃಹತ್ ಜಾಥಾ ಮತ್ತು ಮಾನವ ಸರಪಳಿ ಮಾಡಿ ಗಿರಿಯನ್ನು ಅಯೋಧ್ಯೆಯನ್ನಾಗಿಸುವ ಹುನ್ನಾರಕ್ಕೆ ಅವಕಾಶ ನೀಡುವುದಿಲ್ಲವೆಂದು ಪಣ ತೊಟ್ಟಿತು. ಪ್ರಬಲವಾಗುತ್ತಿರುವ ಹಿಂದೂ ಸಮಾಜೋತ್ಸವ, ಗೋರಕ್ಷ ಚಳವಳಿ, ಶೋಭಾಯಾತ್ರೆ, ದತ್ತಮಾಲೆ ಹಾಗೆಯೇ ಹಿಂದುತ್ವವೇ ರಾಷ್ಟ್ರತ್ವ, ಮುಸ್ಲಿಮರು ದೇಶದ್ರೋಹಿಗಳು, ಭಯೋತ್ಪಾದಕರು ಹಿಂದೂ ನಾವೆಲ್ಲ ಒಂದು ಎಂದು ಹೇಳುತ್ತಿರುವ ಈ ಪ್ಯಾಸಿಸಂನ ಕರಾಳ ಮುಖಗಳ ಹಿಂದಿರುವ ರಾಜಕಾರಣವನ್ನು ಬಯಲಿಗೆ ಎಳೆಯುವಲ್ಲಿ ವೇದಿಕೆ ಸಾರ್ವಜನಿಕವಾಗಿ ಸಾಂಸ್ಕೃತಿಕ ಜಾಥಾಗಳನ್ನು ಹಾಗೂ ಸಮಾವೇಶಗಳನ್ನು ಹಮ್ಮಿಕೊಳ್ಳುತ್ತಲೇ ಬರುತ್ತಿದೆ.

‘ಹಿಂದೂ ಮುಸ್ಲಿಂ ಕ್ರೈಸ್ತರೆಲ್ಲರೂ ಒಂದಾಗಿರೋಣ ಕೋಮುವಾದಿಗಳನ್ನು ದೂರವಿರಿಸೋಣ’ ಬಾಬಾಬುಡನ್ ಗಿರಿಯಲ್ಲಿ ಜನಪರಂಪರೆಯ ಪಾಲನೆಯಾಗಬೇಕು ಎಂಬ ನಿಲುವುಗಳ ಮುಖಾಂತರ ಕೋಮುವಾದಿ ಕರಣದ ವಿರುದ್ಧ ಸಾಂಸ್ಕೃತಿಕ ಸೌಹಾರ್ದ ಜಾಥಾ ಹಾಗೂ ಸಮಾವೇಶಗಳನ್ನು ನಡೆಸಿದೆ. ಈ ಮುಖಾಂತರ ಕೋಮು ರಾಷ್ಟ್ರೀಯತೆ ಹಾಗೂ ಮತೀಯತೆಯು ಪ್ರತಿಪಾದಿಸುವ ಏಕಮುಖಿ ರಾಷ್ಟ್ರೀಯತೆಗೆ ಪ್ರತಿಯಾಗಿ ಜನಪರಂಪರೆ ರೂಪಿತ ವ್ಯವಸ್ಥೆಯನ್ನು ಕಟ್ಟಬೇಕೆಂಬ ಆಶಯಗಳೊಂದಿಗೆ ಜಾಥಾ ಹಾಗೂ ಎಚ್ಚರಿಕೆ ಸಮಾವೇಶಗಳನ್ನು ರೂಪಿಸುತ್ತಾ ಬರುತ್ತಿವೆ.

ಸಮಾರೋಪ

ಈ ರೀತಿಯ ಜನಪರ ಚಳವಳಿಗಳು ನಿಂತಿದ್ದೇ ಪ್ರಚಾರದ ಮೇಲೆ. ಯಾಕೆಂದರೆ ಓದು-ಬರಹ ಬರದಿದ್ದ ಸಮುದಾಯಗಳಲ್ಲಿ ಮೌಖಿಕವಾದ ವಿಷಯ ಹಂಚಿಕೆಯೂ ಬಹಳ ಸಲ ಈ ತರದ ಜನಸಮುದಾಯಗಳನ್ನು ಪ್ರೇರೇಪಿಸುತ್ತದೆ.

ನಮ್ಮಂತಹ ತೃತೀಯ ಜಗತ್ತು, ಗ್ರಾಮಾಂತರ ಪ್ರದೇಶ, ಹಿಂದುಳಿದ ಸಮಾಜಗಳ ಬಹುಪಾಲು ಜನರು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ಸೀಮಿತವಾಗಿರುತ್ತಾರೆ. ಅವರು ತಮ್ಮ ಬದುಕನ್ನು ಬಿಟ್ಟು ಆಚೆಗೆ ಬರುವುದಾಗಲಿ, ಯೋಚಿಸುವುದಾಗಲಿ ಸಾಧ್ಯವಿಲ್ಲ. ಅವರ ಜಗತ್ತೇ ಅದಾಗಿರುತ್ತದೆ. ಆದ್ದರಿಂದ ಚಳವಳಿಗಳ ಸಂದರ್ಭದಲ್ಲಿ ಜಾಥಾ ಬಹಳ ಮುಖ್ಯವಾದುದೆಂದೇ ಪರಿಗಣಿಸಬಹುದು. ಈ ಚಳವಳಿಗಳ ಆಶೋತ್ತರಗಳನ್ನು ಜನಸಾಮಾನ್ಯರಿಗೆ ತಲುಪಿಸಿದ್ದೇ ಈ ರೀತಿಯ ಜಾಥಾ ಕಾರ್ಯಕ್ರಮಗಳು.

ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ನಡೆಯುತ್ತಿದ್ದ ಅನ್ಯಾಯಗಳನ್ನು ಜನಸಾಮಾನ್ಯರು ಗ್ರಹಿಸಿ ಅವುಗಳ ವಿರುದ್ಧ ಪ್ರತಿಭಟಿಸಿದ ಕಾಲದಲ್ಲಿ, ಜಾಥಾಗಳು ಈ ತರದ ಅನೇಕ ಸಮಸ್ಯೆಗಳನ್ನು ಜನರ ಬಳಿಗೇ ಕೊಂಡೊಯ್ದದ್ದು ಮಹತ್ವದ್ದು. ‘ಸಮುದಾಯ’ದಂತಹ ರಂಗ ಚಟುವಟಿಕೆಯ ವೇದಿಕೆಗಳು ಸಾಂಸ್ಕೃತಿಕ ಜಾಥಾಗಳನ್ನು ಹಮ್ಮಿಕೊಂಡಾಗ ಅವು ಜನಗಳಲ್ಲಿ ಜನಪರ ಆಶಯಗಳನ್ನು ರೂಪಿಸಿದವು. ನಾಟಕ, ಹಾಡು, ಘೋಷಣೆ, ಭಿತ್ತಿಪತ್ರ ಮುಂತಾದ ಸಾಧನಗಳಲ್ಲಿ ಈ ಬಗೆಯ ಜನಪರ ರಾಜಕೀಯ ಆಶಯಗಳನ್ನು ತಲುಪಿಸಲಿಕ್ಕಾಗಿಯೇ ಬಳಕೆಯಾದವು.

ಅದೇ ರೀತಿಯಲ್ಲಿ ದಲಿತ ಚಳವಳಿ ಮತ್ತು ರೈತ ಚಳವಳಿಗಳು ತಮ್ಮ ಸಾಮಾಜಿಕ ಹಾಗೂ ರಾಜಕೀಯ ಬೇಡಿಕೆಗಳಿಗಾಗಿ ಜಾಥಾಗಳನ್ನು ಹಮ್ಮಿಕೊಂಡಾಗ ಅವುಗಳ ಬೇಡಿಕೆಯನ್ನು ಜನರಿಗೆ ಸಾರ್ವಜನಿಕಗೊಳಿಸಿದ್ದು ನಾಟಕ, ಹಾಡು, ಘೋಷಣೆ ಮುಂತಾದ ಸಾಂಸ್ಕೃತಿಕ ಪ್ರಕಾರಗಳೇ. ಜಾಥಾ ಎನ್ನುವುದು ಒಂದು ಯೋಜಿತ ಸಾರ್ವಜನಿಕ ಪ್ರಚಾರದ ಕಾರ್ಯಕ್ರಮ. ಇದಕ್ಕೆ ಕಲಾ ಪ್ರಕಾರಗಳೇ ಮಾಧ್ಯಮ. ಸಾಂಸ್ಕೃತಿಕ ಜಾಥಾಗಳು ರಾಜಕೀಯ ಆಶಯಗಳನ್ನು ಸಾರಲಿಕ್ಕಾಗಿ ನಡೆದರೆ, ಹೋರಾಟದ ಜಾಥಾಗಳು ಬೇಡಿಕೆಗಳನ್ನು ಪ್ರತಿಪಾದಿಸುವುದಕ್ಕಾಗಿ ಬಳಕೆಯಾದವು. ಹಾಗಾಗಿ ಜನಪರ ಚಳವಳಿ ಮತ್ತು ಸಾಂಸ್ಕೃತಿಕ ಜಾಥಾ ಇವುಗಳೆರಡರ ಉದ್ದೇಶ ಪರಸ್ಪರ ಪೂರಕವಾಗಿ ಬಳಕೆಯಾಗಿರುವುದನ್ನು ಕಾಣಬಹುದು.

೧೯೭೦ರ ದಶಕದಿಂದೀಚೆಗೆ ಉಂಟಾದ ಸಾಮಾಜಿಕ ವಾತಾವರಣವು ಬೇರೆ ಬೇರೆ ದಮನಿತ ಜನಸಮುದಾಯಗಳನ್ನು ಕರ್ನಾಟಕದಲ್ಲಿ ಹೋರಾಟದ ಮುನ್ನಲೆಗೆ ತಂದು ಬಿಟ್ಟಿತು. ಅವುಗಳೆಲ್ಲಾ ತಮ್ಮ ತಮ್ಮ ವೇದಿಕೆಗಳ ಅಡಿಯಲ್ಲಿ ಸಂದರ್ಭಾನುಸಾರ ರಾಜ್ಯವ್ಯಾಪಿ, ರಾಷ್ಟ್ರವ್ಯಾಪಿ ಜಾಥಾಗಳನ್ನು ಸಂಘಟಿಸಿದವು. ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ಜಾಥಾಗಳು ಕೂಡ ಅಸಂಖ್ಯವಾಗಿ ನಡೆದವು. ಕಾಲು ನಡಿಗೆಯಲ್ಲಿ, ಮೆರವಣಿಗೆಯಲ್ಲಿ, ವಾಹನಗಳಲ್ಲಿ, ಕಲಾತಂಡಗಳ ಪ್ರವಾಸದಲ್ಲಿ, ಸಾಹಿತ್ಯ ಮಾರಾಟದ ಸಪ್ತಾಹದಲ್ಲಿ ಈ ಜಾಥಾದ ಅಂತಸತ್ವವು ಒಳಗೊಂಡಿತ್ತು. ಕರ್ನಾಟಕದ ವಿವಿಧ ಜನಸಮುದಾಯಗಳು ಈ ಬಗೆಯ ಜಾಥಾಗಳಿಂದ ಹೊಸ ಜಾಗೃತಿಯನ್ನು ಪಡೆದವು. ಜನಪರ ರಾಜಕಾರಣ, ಸಾಮಾಜಿಕ ಚಲನಶೀಲತೆ ಹಾಗೂ ಸಮಾನತೆಯ ಆಶಯಗಳ ಪ್ರತಿಪಾದನೆಗಾಗಿ ನಡೆದ ಈ ಜಾಥಾಗಳ ಪ್ರಭಾವದಿಂದ ೮೦-೯೦ರ ದಶಕದಲ್ಲಿ ತರುಣ-ತರುಣಿಯರ ಒಂದು ಹೊಸ ತಲೆಮಾರು ರೂಪುಗೊಂಡಿತು. ಇವರು ಇಂದು ಕರ್ನಾಟಕದ ಸಾಂಸ್ಕೃತಿಕ, ಸಾಹಿತ್ಯಿಕ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ದನಿಯೆತ್ತುತ್ತಿರುವುದೂ ಅತ್ಯಂತ ಮಹತ್ವದ ಪಾತ್ರವಾಗಿದೆ.

ಆದರೆ ಚಳವಳಿಗಳ ಇಂದಿನ ಪರಿಸ್ಥಿತಿಯ ಬಗ್ಗೆ ಮಾತನಾಡುವುದೆಂದರೆ ಅದು ಅಸಮಾಧಾನದ ಸಂಗತಿಯೇ ಸರಿ. ಇಲ್ಲಿ ಹುಟ್ಟಿದ ಚಳವಳಿಗಳೆಲ್ಲವೂ ಈ ನೆಲದ ಅನಿಷ್ಟಗಳನ್ನು ಸಮರ್ಪಕವಾದ ರೀತಿಯಲ್ಲಿ ಅರ್ಥೈಸಿಕೊಂಡು ಮುನ್ನಡೆಯುವುದರಲ್ಲಿ ಎಡವಿದವು. ಇಲ್ಲಿರುವ ಜಾತಿಪದ್ಧತಿ, ಅಸ್ಪ್ರಶ್ಯತೆ, ಕೋಮುವಾದ, ಧರ್ಮಾಂಧತೆ, ಜಾಗತೀಕರಣ ಇವುಗಳ ನಾಡಿ ಹಿಡಿಯುವ ಕೆಲಸ ಅಷ್ಟಾಗಿ ನಡೆಯಲಿಲ್ಲ. ಇವುಗಳನ್ನು ಸರಿಯಾದ ಕ್ರಮದಲ್ಲಿ ಅರ್ಥೈಸಿಕೊಳ್ಳದಿದ್ದರೆ ಜನಪರ ಚಳವಳಿಗಳಿಂದ ಯಾವ ಪರಿವರ್ತನೆಯನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಇಂದಿನ ಈ ಎಲ್ಲಾ ಚಳವಳಿಗಳನ್ನು ಒಮ್ಮೆ ಅವಲೋಕಿಸಿದರೆ ಅವುಗಳು ತಲುಪಿರುವ ಅಧೋಗತಿ ಸ್ಪಷ್ಟವಾಗುತ್ತದೆ.

ಹೀಗಾಗಿ ಇಂದಿನ ಚಳವಳಿಗಳನ್ನು ಅವಲೋಕಿಸಿದರೆ ಅವುಗಳ ಪರಿಣಾಮ ಮತ್ತು ಪ್ರಭಾವ ಇಳಿಮುಖಗೊಂಡಿದೆ. ಹಾಗಾಗಿ ಪ್ರಭಾವಶಾಲಿ ಜಾಥಾಗಳು ಕೂಡ ಕಂಡುಬರುತ್ತಿಲ್ಲ. ಸಮುದಾಯ ರಂಗ ಚಟುವಟಿಕೆಗಳ ವೇದಿಕೆ, ದಲಿತ ಚಳವಳಿ, ರೈತ ಚಳವಳಿ ಮುಂತಾದ ಚಳವಳಿಗಳಲ್ಲಿ ಮೂಡಿಬಂದಿರುವ ಬಿರುಕುಗಳು ಅದಕ್ಕೆ ಮುಖ್ಯ ಕಾರಣ. ಈ ಚಳವಳಿಗಳ ದುಃಸ್ಥಿತಿಯಿಂದಾಗಿ ಜನಸಮೂಹಗಳನ್ನು ಅದರಲ್ಲೂ ಮುಖ್ಯವಾಗಿ ಅನಕ್ಷರಸ್ತ, ಗ್ರಾಮೀಣ ಸಮುದಾಯಗಳನ್ನು ಪ್ರೇರೇಪಿಸುವ, ಪ್ರಭಾವಿಸುವ ಅಪಾರ ಸಾಮರ್ಥ್ಯ ಹೊಂದಿರುವ ಜಾಥಾಗಳು ಹಿನ್ನೆಲೆಗೆ ಸರಿದಿವೆ. ಒಂದು ಕಾಲಘಟ್ಟದಲ್ಲಿ ಜನಪರ ಚಳವಳಿಗಳ ವಜ್ರಾಯುಧಗಳಂತಿದ್ದ ಜಾಥಾಗಳು ಇಂದು ಸರ್ಕಾರಿ ಇಲಾಖೆಗಳ, ಸರ್ಕಾರೇತರ ಸಂಸ್ಥೆಗಳ ಪ್ರಾಯೋಜನೆಯಿಂದ ನಡೆಯಬೇಕಾಗಿರುವ ದುಃಸ್ಥಿತಿಗೆ ಈಡಾಗಿವೆ. ಇದೆಲ್ಲದರ ಪರಿಣಾಮದಿಂದಲೇ ಇಂದಿನ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ರಂಗದಲ್ಲಿ ಅರಾಜಕೀಯತೆ ಮತ್ತು ಅನೈತಿಕತೆಗಳೇ ಮೌಲ್ಯಗಳಾಗಿ ವಿಜೃಂಭಿಸುತ್ತಿದೆ. ಇದು ಈ ನಾಡಿನ ದುರಂತಗಳಲ್ಲಿ ಒಂದೆಂದು ಹೇಳಬಹುದು.