ನಳನನ್ನು ಮುಂದಿಟ್ಟುಕೊಂಡು ವಾನರರು ಪರ್ವತ ಶಿಖರಗಳಿಂದಲೂ ಹುಲ್ಲು ಕಟ್ಟಿಗೆಗಳಿಂದಲೂ ಸಮುದ್ರದ ನಡುವೆ ಸೇತುವೆ ಕಟ್ಟಿದರು.

ವರುಣನ ಮಾತಿನಂತೆ ದ್ರುಮಕುಲ್ಯವೆಂಬ ಪ್ರದೇಶದಲ್ಲಿ ದಸ್ಯುಗಳಿಲ್ಲದಂತೆ ಮಾಡಿದ ಮೇಲೆ ಶ್ರೀರಾಮನು ಸಮುದ್ರಕ್ಕೆ ಸೇತುವೆಯನ್ನು ಕಟ್ಟುವಂತೆ ವಾನರರಿಗೆ ಅಪ್ಪಣೆ ಮಾಡಿದನು. ಆಗ ವಾನರರು ಲಕ್ಷ ಸಂಖ್ಯೆಯಲ್ಲಿ ಹೊರಟು ನಾನಾ ವೃಕ್ಷಗಳನ್ನೂ ಬೆಟ್ಟಗಳನ್ನೂ ಮುರಿದು ಕಿತ್ತು ತಂದರು. ತಾಳೆ ಮಾವು ಬಿಲ್ವ ಮುಂತಾಗಿ ಅವರು ತಂದ ಮರಗಳನ್ನೂ ದೊಡ್ಡ ಬಂಡೆಗಳನ್ನೂ ಬೆಟ್ಟಗಳನ್ನೂ ಎಣಿಸಲು ಅಸಾಧ್ಯವಾಗಿತ್ತು. ಕೆಲವರು ನೂರು ಗಾವುದಗಳವರೆಗೂ ದಾರವನ್ನು ಹಿಡಿದರು. ಮತ್ತೆ ಕೆಲವರು ಕಲ್ಲುಗಳನ್ನು ಪರೀಕ್ಷಿಸಿದರು. ಆಗ ನಳನನ್ನು ಮುಂದಿಟ್ಟುಕೊಂಡು ಪರ್ವತ ಶಿಖರಗಳಿಂದಲೂ ಹುಲ್ಲುಕಟ್ಟಿಗೆಗಳಿಂದಲೂ ಸಮುದ್ರದ ನಡುವೆ ಸೇತುವೆಯನ್ನು ಕಟ್ಟಿದರು. ಮೊದಲನೆಯ ದಿನ ಹದಿನಾಲ್ಕು ಗಾವುದ, ಎರಡನೆಯ ದಿನ ಇಪ್ಪತ್ತು ಗಾವುದ, ಮೂರನೆಯ ದಿನ ಇಪ್ಪತ್ತೊಂದು ಯೋಜನ, ನಾಲ್ಕನೆಯ ದಿನ ಇಪ್ಪತ್ತೆರಡು, ಐದನೆಯ ದಿನ ಇಪ್ಪತ್ತುಮೂರು ಹೀಗೆ ಐದು ದಿನಗಳಲ್ಲಿ ಸೀತೆಯನ್ನು ನೋಡಲು ಕಾತರರಾದ ವಾನರರಿಂದ ಸೇತುವೆ ಸಿದ್ಧವಾಯಿತು. ಈ ಅದ್ಭುತವಾದ ಸೇತುವೆ ನಿರ್ಮಾಣವನ್ನು ಕಂಡು ದೇವತೆಗಳೂ ಋಷಿಗಳೂ ಆಶ್ಚರ್ಯಗೊಂಡರು. ಕಪಿಗಳು ಸಂತೋಷದಿಂದ ನೀರಿನಲ್ಲಿ ತೇಲಾಟವಾಡಿದರು. ಕಡಲಿನ ಬೈತಲೆಯಂತೆ ಹೊಳೆಯುತ್ತಿದ್ದ ಸೇತುವೆಯ ಬಳಿ ವಿಭೀಷಣನು ತನ್ನ ಮಂತ್ರಿಗಳೊಡನೆ ಬಂದು ನಿಂತನು. ಆಗ ಸುಗ್ರೀವನು ರಾಮನಿಗೆ “ರಾಮಚಂದ್ರ, ನೀನು ಹನುಮಂತನ ಹೆಗಲನ್ನು ಏರು. ಲಕ್ಷ್ಮಣನು ಅಂಗದನ ಹೆಗಲನ್ನು ಏರಲಿ. ಆಕಾಶದಲ್ಲಿ ಹೋಗಲು ಸಾಮರ್ಥ್ಯವುಳ್ಳ ಇವರು, ನಿಮ್ಮನ್ನು ಈ ವಿಶಾಲವಾದ ಸಾಗರದಿಂದ ದಾಟಿಸುವರು” ಎಂದನು.

ಆಗ ಶ್ರೀರಾಮನು ಲಕ್ಷ್ಮಣನೊಡಗೂಡಿ, ಸುಗ್ರೀವನಿಂದ ಕೂಡಿ ಸೈನ್ಯದ ಮುಂಭಾಗದಲ್ಲಿ ನಡೆದನು. ಸಮುದ್ರವನ್ನು ದಾಟುವಾಗ ವಾನರರ ಉತ್ಸಾಹವನ್ನಂತೂ ಹೇಳತೀರದು. ಕೆಲವರು ಸೇತುವೆಯ ನಡುವೆ ನಡೆದರು. ಕೆಲವರು ಪಕ್ಕದಲ್ಲಿ ಹೋದರು. ಕೆಲವರಿಗೆ ಹೋಗಲು ದಾರಿ ಸಿಗದೆ ನೀರನಲ್ಲಿ ಬಿದ್ದರು. ಕೆಲವರು ಗರುಡನಂತೆ ಆಕಾಶದಲ್ಲಿ ಹಾರಾಡಿದರು. ಹೆಚ್ಚೇನು? ಲಂಕೆಯನ್ನು ಕುರಿತು ತೆರಳುತ್ತಿದ್ದ ವಾನರ ಸೈನ್ಯದಲ್ಲಿ ಉತ್ಸಾಹದಿಂದ ಉಂಟಾದ ಧ್ವನಿ ಸಮುದ್ರಘೋಷವನ್ನೇ ಆಡಗಿಸಿತು. ಹೀಗೆ ಹೊರಟ ಸೈನ್ಯ ಸಮುದ್ರವನ್ನು ದಾಟಿ ನೀರು ನೆರಳು ಹಣ್ಣುಗಳಿಂದ ಸಮೃದ್ಧವಾದ ದಕ್ಷಿಣ ತೀರದಲ್ಲಿ ಬೀಡುಬಿಟ್ಟಿತು. ತಕ್ಷಣವೆ ಶ್ರೀರಾಮನು ಆಗ ಆದ ಶಕುನಗಳನ್ನು ಕಂಡು ವಿಭೀಷಣ ಸುಗ್ರೀವರೊಡನೆ ಬೀಡುಬಿಟ್ಟೊಡನೆಯೆ, ಸೈನ್ಯವನ್ನು ವ್ಯೂಹದ ರೀತಿಯಲ್ಲಿ ನಿಲ್ಲಿಸಲು ಅಪ್ಪಣೆ ಮಾಡಿದನು. “ಅಂಗದನು ತನ್ನ ಬಲವನ್ನು ತೆಗೆದುಕೊಂಡು ನೀಲನೊಡನೆ ವಾನರ ಸೈನ್ಯದ ಮಧ್ಯೆ ನಿಲ್ಲಲಿ. ಋಷಭನು ಬಲಭಾಗದಲ್ಲಿ ನಿಲ್ಲಲಿ. ಗಂಧಮಾದನನು ಎಡಭಾಗದಲ್ಲಿ ನಿಲ್ಲಲಿ. ನಾನೂ ಮತ್ತು ಲಕ್ಷ್ಮಣನೂ ವಾನರ ಸೈನ್ಯದ ಅಗ್ರಭಾಗದಲ್ಲಿ ನಿಲ್ಲುತ್ತೇವೆ. ಜಾಂಬವಂತ, ಸುಷೇಣ, ವೇಗದರ್ಶಿ ಈ ಮೂವರು ಸೈನ್ಯದ ಮಧ್ಯಭಾಗವನ್ನು ಕಾಪಾಡಲಿ.” ಹೀಗೆಂದು ವಾನರ ಸೈನ್ಯವನ್ನು ಗರುಡವ್ಯೂಹದ ಆಕಾರದಲ್ಲಿ ನಿಲ್ಲಿಸಿದನು. ವಾನರರು ಬೆಟ್ಟ ಗುಡ್ಡವನ್ನು ಹಿಡಿದು, ರಾಕ್ಷಸರನ್ನು ಕೊಂದು ಲಂಕೆಯನ್ನು ಮುತ್ತಲು ಉತ್ಸಾಹಕೂಡಿ, ರಾಮನ ಅಪ್ಪಣೆಗಾಗಿ ಕಾಯುತ್ತಿದ್ದರು.

ಶ್ರೀರಾಮನು ವಾನರರಿಂದ ಕೂಡಿ, ಸಮುದ್ರವನ್ನು ದಾಟಿದನೆಂಬ ವರ್ತಮಾನ ರಾವಣನಿಗೆ ತಿಳಿಯಿತು. ಆಗ ಅವನು ಮಂತ್ರಿಗಳಾದ ಶುಕಸಾರಣರನ್ನು ತನ್ನಲ್ಲಿಗೆ ಕರೆಸಿಕೊಂಡು ಅವರಿಗೆ ಈ ರೀತಿ ನುಡಿದನು: “ರಾಮನು ಸಾಗರಕ್ಕೆ ಸೇತುವೆಯನ್ನು ಕಟ್ಟಿ, ಅದನ್ನು ದಾಟಿ ಲಂಕೆಯ ಬಳಿಗೆ ಬಂದನು. ಸಾಗರಕ್ಕೆ ಸೇತುಬಂಧನವೆಂಬ ಮಾತನ್ನೆ ನಾನು ನಂಬಲಾರೆ. ಆದರೂ ಈಗ ನಾನು ಶತ್ರುಬಲವೆಷ್ಟೆಂಬುದನ್ನು ತಿಳಿಯಬೇಕು. ಆದ್ದರಿಂದ ಗುಟ್ಟಾಗಿ ನೀವು ವಾನರಸೈನ್ಯವನ್ನು ಹೊಕ್ಕು, ವಾನರಸೈನ್ಯದ ಸಂಖ್ಯಾಬಲ, ರಾಮನಿಗೂ ಸುಗ್ರೀವನಿಗೂ ಬೇಕಾದ ಮಂತ್ರಿಗಳು, ಕಪಿಗಳ ಬೀಡಾರದ ವಿವರ, ರಾಮಲಕ್ಷ್ಮಣರ ಬಲಪರಾಕ್ರಮ, ಕಪಿಗಳಲ್ಲಿ ಪ್ರಧಾನರು ಮತ್ತು ಕಪಿಸೇನೆಯ ಸೇನಾಪತಿ – ಈ ವಿವರಗಳನ್ನು ಬೇಗ ತಿಳಿದು ಬನ್ನಿ” ಎಂದು ಅಪ್ಪಣೆ ಮಾಡಿದನು.

ರಾವಣನಿಂದ ಬೀಳ್ಕೊಂಡ ಶುಕಸಾರಣರು ವಾನರ ರೂಪವನ್ನು ಧರಿಸಿ ಕಪಿಸೈನ್ಯವನ್ನು ಹೊಕ್ಕರು. ಬೆಟ್ಟದ ತುದಿಯಲ್ಲಿ, ವನಗಳಲ್ಲಿ ಸಮುದ್ರದ ತೀರದಲ್ಲಿ ಹಬ್ಬಿ ಹರಡಿ ಬೀಡುಬಿಟ್ಟಿದ್ದ ವಾನರಸೈನ್ಯವನ್ನೂ ಸೇತುವೆಯನ್ನು ಆಗತಾನೆ ದಾಟಿದ ಮತ್ತು ಇನ್ನೂ ದಾಟುತ್ತಿದ್ದ ಸೈನ್ಯ ಭಾಗಗಳನ್ನೂ ಕಂಡು ಶುಕಸಾರಣರಿಗೆ ಅದನ್ನು ಎಣಿಸುವುದಕ್ಕೆ ಸಾಧ್ಯವಾಗಲಿಲ್ಲ. ಆಗ ವಿಭೀಷಣನು ಮಾಯಾರೂಪವನ್ನು ಧರಿಸಿದ ಅವರನ್ನು ಹಿಡಿದು, ರಾಮನ ಮುಂದೆ ತಂದು ನಿಲ್ಲಿಸಿ ಹೇಳಿದನು – “ಎಲೈ ಶತ್ರು ಸಂಹಾರಕನೆ, ರಾವಣನ ಮಂತ್ರಿಗಳಾದ ಈ ಶುಕಸಾರಣರು ಲಂಕೆಯಿಂದ ಬಂದಿದ್ದಾರೆ.”

ಅವರಿಬ್ಬರೂ ರಾಮನನ್ನು ನೋಡಿ ಕೈಮುಗಿದು, ವಾನರಸೈನ್ಯವನ್ನು ನೋಡಿಕೊಂಡು ಬರಲು ರಾವಣನಿಂದ ಕಳುಹಿಸಲ್ಪಟ್ಟವರು ತಾವೆಂದು ಒಪ್ಪಿಕೊಂಡರು. ದಯಾವಂತ ರಾಮನು ಅವರ ಮಾತನ್ನು ಕೇಳಿ ನಕ್ಕು ನುಡಿದನು. “ಅಯ್ಯಾ, ನೀವು ನಮ್ಮ ಸೈನ್ಯವನ್ನು ಚೆನ್ನಾಗಿ ಪರೀಕ್ಷಿಸಿದುದು ಮುಗಿದಿದ್ದರೆ ಇನ್ನು ಹೊರಡಬಹುದು. ಹಾಗೆ ಅದು ಮುಗಿಯದಿದ್ದರೆ, ವಿಭೀಷಣನು ನಿಮಗೆ ಎಲ್ಲವನ್ನು ಚೆನ್ನಾಗಿ ತೋರಿಸಿ ವಿವರಿಸುತ್ತಾನೆ. ನೀವು ನಿಮ್ಮ ಪ್ರಾಣಕ್ಕಾಗಿ ಹೆದರಬೇಡಿ. ಭಯಪಟ್ಟವರನ್ನೂ ಆಯುಧರಹಿತರನ್ನೂ ದೂತರನ್ನೂ ಬಂಧನಕ್ಕೊಳಗಾದವರನ್ನೂ ಕೊಲ್ಲುವುದು ಧರ್ಮವಲ್ಲ” ಎಂದು ವಿಭೀಷಣನ ಕಡೆ ತಿರುಗಿ “ವಿಭೀಷಣ, ಇವರು ಶತ್ರುಪಕ್ಷದ ಚಾರರಾದರೂ ನಮ್ಮಲ್ಲಿ ದಯೆಗಾಗಿ ಬೇಡುತ್ತಿರುವುದರಿಂದ ಇವರನ್ನು ಬಿಟ್ಟುಬಿಡು. “ಅಯ್ಯಾ ಚಾರರೆ, ಕುಬೇರನ ತಮ್ಮನಾದ ರಾವಣನಿಗೆ ಈ ನನ್ನ ಮಾತುಗಳನ್ನು ತಿಳಿಸತಕ್ಕದ್ದು. ‘ನಿನ್ನ ದೇಹಬಲವನ್ನೂ ಸೇನಾಬಲವನ್ನೂ ನಂಬಿ ಸೀತೆಯನ್ನು ಕದ್ದೊಯ್ದೆಯಲ್ಲವೆ? ಈಗ ಆ ಬಲವನ್ನು ತೋರಿಸಲು ತಕ್ಕಕಾಲವಾಗಿದೆ. ನಾಳೆ ಬೆಳಗ್ಗೆ ನನ್ನ ಬಾಣಗಳು ರಾಕ್ಷಸ ಬಲವನ್ನು ನಾಶಪಡಿಸುವುದನ್ನು ನೀನೆ ಕಣ್ಣಾರೆ ನೋಡುವೆ. ಆದ್ದರಿಂದ ನನ್ನ ಕೋಪವನ್ನು ಸಹಿಸಲು ನಿನ್ನ ಬಲದೊಡನೆ ಸಿದ್ಧನಾಗಿರು'” ಹೀಗೆ ರಾಮನಿಂದ ಬಿಡುಗಡೆ ಹೊಂದಿದ ಅವರು ಲಂಕೆಗೆ ತಿರುಗಿ ಬಂದು ರಾವಣನನ್ನು ಕಂಡರು.

ರಾವಣನನ್ನು ಕುರಿತು ಅವರಿಬ್ಬರೂ “ರಾಕ್ಷಸೇಂದ್ರ, ಮಾಯಾ ರೂಪವನ್ನು ಧರಿಸಿದ ನಮ್ಮನ್ನು ವಿಭೀಷಣನು ರಾಮನಲ್ಲಿಗೆ ಹಿಡಿದುಕೊಂಡು ಹೋದನು. ಧರ್ಮಾತ್ಮನಾದ ರಾಮನು ನಮ್ಮನ್ನು ಕೊಲ್ಲದೆ ಬಿಟ್ಟುಬಿಟ್ಟನು. ಪರಾಕ್ರಮಿಯಾದ ರಾಮ, ಕಾಂತಿಯುಕ್ತನಾದ ಲಕ್ಷ್ಮಣ, ವಿಭೀಷಣ ಮತ್ತು ಇಂದ್ರನಿಗೆ ಸಮಾನನಾದ ಸುಗ್ರೀವ ಈ ನಾಲ್ವರು ಐಕ್ಯಮತ್ಯದಿಂದಿದ್ದಾರೆ. ಈ ನಾಲ್ವರೆ ವಾನರಸೈನ್ಯವಿಲ್ಲದೆ ಲಂಕೆಯನ್ನು ನಾಶಮಾಡಲು ಸಾಕು. ಹೆಚ್ಚೇನು? ರಾಮನೊಬ್ಬನೆ ಈ ಕೆಲಸಕ್ಕೆ ಸಮರ್ಥನಾಗಿದ್ದಾನೆ. ಸುಗ್ರೀವನಿಂದ ರಕ್ಷಿತವಾಗಿರುವ ಆ ಸೈನ್ಯವನ್ನು ಇದಿರಿಸಲು ದೇವದಾನವರಿಂದಲೂ ಅಸಾಧ್ಯ. ಆದಕಾರಣ ಶ್ರೀರಾಮನೊಡನೆ ದ್ವೇಷಬಿಟ್ಟು, ಸೀತೆಯನ್ನು ಅವನಿಗೆ ಕೊಟ್ಟು ಸಂಧಿಮಾಡಿಕೊ” ಎಂದರು.

ಮಂತ್ರಿಗಳ ಮಾತನ್ನು ಕೇಳಿ, ಅವರು ರಾಮನಿಗೆ ಅಂಜಿ ಹಾಗೆ ನುಡಿಯುತ್ತಿರುವರೆಂದೂ, ತನ್ನನ್ನು ಜಯಿಸಲು ಯಾರಿಗೂ ಸಾಧ್ಯವಿಲ್ಲವೆಂದೂ, ಆದಕಾರಣ ಸೀತೆಯನ್ನು ರಾಮನಿಗೆ ಎಂದಿಗೂ ಒಪ್ಪಿಸೆನೆಂದೂ ನುಡಿದು, ವಾನರ ಸೈನ್ಯವನ್ನು ನೋಡುವ ಬಯಕೆಯಿಂದ ಹಿಮವತ್ ಪರ್ವತದಂತೆ ಉನ್ನತವೂ ಶುಭ್ರವೂ ಆದ ಉಪ್ಪರಿಗೆಯನ್ನು ಏರಿದನು. ಕೋಪದಿಂದ ಕೆರಳಿದ ರಾವಣನು ಸಮುದ್ರದ ತೀರದಲ್ಲಿ ಪರ್ವತಗಳಲ್ಲಿ, ಕಾಡುಗಳಲ್ಲಿ ಬೀಡು ಬಿಟ್ಟಿದ್ದ ಅಪಾರವಾದ ವಾನರಸೇನೆಯನ್ನು ಕಂಡು ಬೆರಗಾದನು. ಆ ಬಳಿಕ ಶುಕಸಾರಣರನ್ನು ಕುರಿತು, ವಾನರ ಪ್ರಮುಖರನ್ನೂ ಸುಗ್ರೀವ ರಾಮಲಕ್ಷ್ಮಣರನ್ನೂ ತನಗೆ ತೋರಿಸುವಂತೆ ಅಪ್ಪಣೆಮಾಡಿದನು. ಅವರು ಕ್ರಮವಾಗಿ ಸೇನೆಯ ಮುಂದಿದ್ದ ನೀಲ, ಪರಾಕ್ರಮಿಯಾದ ಅಂಗದ, ಅವನ ಹಿಂದೆ ಕಾಳಗಕ್ಕಾಗಿ ಆತುರದಿಂದ ನಿಂತಿದ್ದ ನಳ, ಶರಭ, ಕುಮುದ, ಮಹಾ ತೇಜಸ್ವಿಯಾದ ಗವಯ, ಧೂಮ್ರ, ಋಕ್ಷವಂತ, ಕರಡಿಗಳಿಗೆ ಒಡೆಯನಾದ ಜಾಂಬವಂತ, ಹನುಮಂತನ ತಂದೆಯಾದ ಕೇಸರಿ, ಗವಾಕ್ಷ, ಶತಬಲಿ ಇವರೇ ಮೊದಲಾದ ವಾನರವೀರರನ್ನೂ ಅವನ ಸೈನ್ಯಗಳನ್ನೂ ತೋರಿದರು. ಆ ಬಳಿಕ ಶುಕನು ವಾನರರನ್ನು ಬೆಟ್ಟಿಟ್ಟು ತೋರಿಸುತ್ತ ರಾವಣನನ್ನು ಕುರಿತು ನುಡಿದನು: “ರಾಕ್ಷಸೇಂದ್ರ, ಗಂಗಾತೀರದ ಆಲದ ಮರಗಳಂತೆ, ಹಿಮವತ್‌ಪರ್ವತದಲ್ಲಿ ಹುಟ್ಟಿದ ಸಾಲವೃಕ್ಷಗಳಂತೆ ನಿಂತಿರುವ ಈ ವಾನರರನ್ನು ನೋಡು. ಇವರು ಮಹಾ ಬಲಶಾಲಿಗಳು ಮತ್ತು ಕಾಮರೂಪಿಗಳು. ನಾವು ಮೇಲೆ ಹೇಳಿದ ವಾನರರಲ್ಲದೆ, ದೂರದಲ್ಲಿ ಆನೆಯಂತೆ ನಿಂತಿರುವ ಹನುಮಂತನನ್ನು ನೋಡು. ಹುಟ್ಟಿದೊಡನೆಯೆ ಸೂರ್ಯನನ್ನು ಹಣ್ಣೆಂದು ತಿನ್ನಬಯಸಿದ, ಸಾಗರವನ್ನು ದಾಟಿ ಸೀತೆಯನ್ನು ನೋಡಿ ಹೋದ ವೀರನೆ ಅವನು. ನಮ್ಮ ಈ ಲಂಕೆಯನ್ನು ನಾಶಮಾಡಲು ಇವನೊಬ್ಬನೆ ಸಾಕು. ಹನುಮಂತನ ಸಮೀಪದಲ್ಲಿ ನೀಲಮೇಘದ ಬಣ್ಣವುಳ್ಳವನೂ ತಾವರೆಯಂತೆ ಕಣ್ಣುಳ್ಳವನೂ ಆದ ದಿವ್ಯಪುರುಷನೊಬ್ಬನು ನಿಂತಿರುವನು. ಆತನೇ ಧರ್ಮಾತ್ಮನೂ ಪರಾಕ್ರಮಿಯೂ ಆದ ಶ್ರೀರಾಮಚಂದ್ರ. ಇಂದ್ರನಂತೆ ಬಲಶಾಲಿಯಾದ ಈತನು ನಿನ್ನೊಡನೆ ಯುದ್ಧಮಾಡಲು ತವಕಗೊಳ್ಳುತ್ತಿದ್ದಾನೆ. ಇವನ ಬಲಭಾಗದಲ್ಲಿ ಹೊಂಬಣ್ಣದಂತೆ ಹೊಳೆಯುತ್ತಿರುವನೆ ಯುದ್ಧದಲ್ಲಿ ಕುಶಲನಾದ ಅವನ ತಮ್ಮ ಲಕ್ಷ್ಮಣ. ಅಣ್ಣನಿಗೆ ಬಲಭುಜದಂತಿರುವ ಇವನನ್ನು ಗೆಲ್ಲುವುದು ಅಸಾಧ್ಯ. ರಾಮನ ಎಡಭಾಗದಲ್ಲಿರುವವನೆ ನಿನ್ನ ತಮ್ಮ ವಿಭೀಷಣ. ಲಂಕಾರಾಜ್ಯವನ್ನು ಇವನಿಗೆ ಕೊಡಿಸುವುದಾಗಿ ಶ್ರೀರಾಮನು ಭಾಷೆಕೊಟ್ಟಿದ್ದಾನೆ. ರಾಮ ವಿಭೀಷಣರ ನಡುವೆ ಬೆಟ್ಟದಂತೆ ನಿಂತಿರುವವನೆ ವಾನರಾಧಿಪತಿಯಾದ ಸುಗ್ರೀವ. ಮಹಾಬಲದಿಂದ ಸುತ್ತುವರಿದ ಇವರನ್ನು ಜಯಿಸುವುದಕ್ಕೆ ಪ್ರಯತ್ನಿಸು. ನಮಗೆ ಪರಾಜಯವಾಗುವಂತೆ ನೋಡಿಕೊ. ”

ಶುಕನು ತೋರಿಸಿದ ರಾಮಲಕ್ಷ್ಮಣರನ್ನೂ ಅವರ ಬಳಿ ನಿಂತಿದ್ದ ತನ್ನ ತಮ್ಮನನ್ನೂ ಮತ್ತು ವಾನರವೀರರನ್ನೂ ಕಂಡು ರಾವಣನಿಗೆ ಭಯವೂ ಕೋಪವೂ ಏಕಕಾಲದಲ್ಲಿ ಉಂಟಾದುವು. ತನ್ನ ಎದುರಿಗೇ ಶತ್ರುಗಳನ್ನು ಹೊಗಳುತ್ತಿರುವ ಅವರು ಅಯೋಗ್ಯರಾದ ಮಂತ್ರಿಗಳೆಂದೂ, ಕಾಡುಕಿಚ್ಚಿನೆದುರಿಗೆ ಗಿಡಗಳು ನಿಲ್ಲಲಾರದಂತೆ ತನ್ನ ಮುಂದೆ ಶತ್ರುಗಳು ನಿಲ್ಲರೆಂದೂ, ಹಿಂದೆ ಅವರು ಮಾಡಿರುವ ಉಪಕಾರಕ್ಕಾಗಿ ಅವರನ್ನು ತಾನು ಕೊಲ್ಲುದಿಲ್ಲವೆಂದೂ, ಕೃತಘ್ನರಾದ ಅವರು ಅಲ್ಲಿಂದ ತೊಲಗಿಹೋಗಬೇಕೆಂದೂ ಗದರಿಸಿದನು. ಶುಕಸಾರಣರು ಹೊರಟುಹೋದ ಮೇಲೆ ರಾವಣನು ನೀತಿವಿಶಾರದರಾದ ಚಾರರನ್ನು ತನ್ನಲ್ಲಿಗೆ ಕರೆಯಿಸಿಕೊಂಡು ರಾಮನಲ್ಲಿಗೆ ಹೋಗಿ ಅವನ ಬಲಪರಾಕ್ರಮಗಳನ್ನು ಮತ್ತೊಮ್ಮೆ ತಿಳಿದುಬರುವಂತೆ ಅಪ್ಪಣೆಮಾಡಿದನು. ಶಾರ್ದೂಲನೆಂಬ ಚಾರನನ್ನು ಮುಂದುಮಾಡಿಕೊಂಡು ಹೊರಟ ಅವರು, ರಾವಣನಿಗೆ ಪ್ರದಕ್ಷಿಣೆಮಾಡಿ ನಮಸ್ಕರಿಸಿ, ವೇಷ ಮರೆಯಿಸಿಕೊಂಡು ಸುವೇಲಪರ್ವತದ ಬಳಿ ಬೀಡುಬಿಟ್ಟಿದ್ದ ಶ್ರೀರಾಮನಲ್ಲಿಗೆ ಬಂದರು. ಶುಕಸಾರಣರಿಗುಂಟಾದ ಗತಿಯೆ ಅವರಿಗುಂಟಾಯಿತು. ಆದರೆ ಶ್ರೀರಾಮನ ದಯೆಯಿಂದ ವಾನರರ ಹೊಡೆತವನ್ನು ತಪ್ಪಿಸಿಕೊಂಡು ಬರುವುದರೊಳಗಾಗಿ ಅವರಿಗೆ ಸಾಕುಸಾಕಾಯಿತು. ರಾವಣನಲ್ಲಿಗೆ ಶಾರ್ದೂಲನು ಬಂದು ಶ್ರೀರಾಮನ ಬಲಪರಾಕ್ರಮಗಳನ್ನೂ ವಾನರ ಸೈನ್ಯಸಂಪತ್ತಿಯನ್ನೂ ಅವನಿಗೆ ವರ್ಣಿಸಿ ಹೇಳಿದನು. “ಶ್ರೀರಾಮನು ಗರುಡವ್ಯೂಹವನ್ನು ರಚಿಸಿ ಲಂಕೆಯನ್ನು ಮುತ್ತಲು ಬರುತ್ತಿರುವನು. ಗುದ್ದುತ್ತಿದ್ದ ವಾನರಿಂದ ನನ್ನನ್ನು ಬಿಡಿಸಿದನು. ಈಗ ನೀನು ಮಹಾತ್ಮನಾದ ಆತನಿಗೆ ಸೀತೆಯನ್ನಾದರೂ ಕೊಡು. ಇಲ್ಲವಾದರೆ ಯುದ್ಧವನ್ನಾದರೂ ಮಾಡು.” ಶಾರ್ದೂಲನ ಮಾತನ್ನು ಕೇಳಿ ರಾವಣನು ದೇವದಾನವರೆಲ್ಲರೂ ಒಟ್ಟಾಗಿ ತನ್ನೊಡನೆ ಯುದ್ಧಕ್ಕೆ ಬಂದರೂ ಸೀತೆಯನ್ನು ರಾಮನಿಗೆ ಒಪ್ಪಿಸೆನೆಂದು ಹೇಳಿ ಶಾರ್ದೂಲನನ್ನು ಕಳುಹಿಸಿ ಕೊಟ್ಟನು.