ಅಕ್ಷಕುಮಾರನ ಮರಣವಾರ್ತೆಯನ್ನು ಕೇಳಿ ರಾವಣನಿಗೆ ಬಹು ದುಃಖವಾಯಿತು. ಆದರೂ ಅದನ್ನು ನುಂಗಿಕೊಂಡು ತನ್ನ ಹಿರಿಯ ಮಗನಾದ ಇಂದ್ರಜಿತ್ತನ್ನು ಕರೆದು “ಮಗು, ನೀನು ಅಸ್ತ್ರವಿದ್ಯೆಯಲ್ಲಿ ನಿಪುಣನಾದವನು. ಶಸ್ತ್ರವಿದ್ಯೆಯಲ್ಲಿಯೂ ನಿನಗೆ ಸಮಾನರಾರೂ ಇಲ್ಲ. ನಿನ್ನನ್ನು ಕಂಡರೆ ದೇವಾಸುರರೆಲ್ಲರೂ ತಲ್ಲಣಿಸುವರು. ಸ್ವತಃ ದೇವೇಂದ್ರನನ್ನೆ ನೀನು ಗೆದ್ದವನು. ಅಲ್ಲದೆ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ಅನೇಕ ಅಮೋಘವಾದ ದಿವ್ಯಾಸ್ತ್ರಗಳನ್ನು ಪಡೆದಿರುವೆ. ಮಹಾಬುದ್ಧಿಶಾಲಿಯಾದ ನಿನಗೆ ಯುದ್ಧ ಕಾರ್ಯದಲ್ಲಿ ಅಸಾಧ್ಯವೆಂಬುದೆ ಇಲ್ಲ. ಆದ್ದರಿಂದ ನನಗೆ ಯುದ್ಧ ವಿಷಯವಾದ ಯಾವುದಾದರೂ ಸಂಕಟ ಪ್ರಾಪ್ತವಾದಾಗ ನಿನ್ನನ್ನು ಸ್ಮರಿಸಿಕೊಂಡರೇ ನನಗೆ ಎಷ್ಟೋ ಸಮಾಧಾನವಾಗುತ್ತದೆ. ವತ್ಸ, ನನಗೆ ಈಗ ಅಂತಹ ಸಂಕಟ ಒದಗಿದೆ. ಮಹಾ ಪರಾಕ್ರಮಿಗಳಾದ ಕಿಂಕರರು ಮಡಿದರು; ಜಂಬುಮಾಲಿ ಹತನಾದ; ಏಳುಮಂದಿ ಮಂತ್ರಿಪುತ್ರರೂ ಸಂಹೃತರಾದರು; ಸೇನಾಪತಿಗಳೈವರೂ ಸತ್ತರು; ಅಸಂಖ್ಯಾತ ಸೇನೆ ನಾಶವಾಯಿತು. ಎಲ್ಲಕ್ಕಿಂತಲೂ ಹೆಚ್ಚಾಗಿ, ನಿನ್ನ ಪ್ರಿಯಸೋದರನಾದ ಅಕ್ಷಕುಮಾರನು ಹತನಾದನು. ಇವರೆಲ್ಲರ ಸಾವಿಗೂ ನನ್ನ ದುರಂತ ದುಃಖಕ್ಕೂ ಆ ಮಹಾ ಬಲಶಾಲಿಯಾದ ವಾನರನು ಕಾರಣನಾದನು. ನೀನು ಚತುರೋಪಾಯಗಳನ್ನೂ ಪ್ರಯೋಗಿಸಿ ಆ ವಾನರನನ್ನು ಸಂಹರಿಸಬೇಕು. ಅವನು ಸಾಮಾನ್ಯನಲ್ಲವೆಂಬುದು ವಿದಿತವಾಗಿಯೆ ಇದೆ. ಆದ್ದರಿಂದ ಜಾಗರೂಕನಾಗಿರಬೇಕಾದುದು ಅತ್ಯಗತ್ಯ. ಬಾಲಕನಾದ ನಿನ್ನನ್ನು ಯುದ್ಧಕ್ಕೆ ಕಳುಹಿಸಲು ಮನಸ್ಸು ಹಿಂಜರಿಯುತ್ತಿರುವುದಾದರೂ ರಾಜಧರ್ಮವನ್ನು ಅನುಸರಿಸಿ ನಾನು ಈ ಕಾರ್ಯವನ್ನು ನಿನಗೆ ವಹಿಸಲೇಬೇಕಾಗಿದೆ. ನಿನಗೆ ಸಮಾನನಾದ ವೀರನು ಈ ಲಂಕೆಯಲ್ಲಿ ಮತ್ತಾರೂ ಇಲ್ಲ. ನೀನು ಅವಶ್ಯವಾಗಿ ಯುದ್ಧಕ್ಕೆ ಹೋಗಲೇಬೇಕು; ಯಾವ ವಿಧದಿಂದಲಾದರೂ ವಿಜಯಿಯಾಗಿ ಬರಲೇಬೇಕು. ಇಷ್ಟಸಿದ್ಧಿಗಾಗಿ ನೀನು ಸಮಸ್ತ ಮಂತ್ರಾಸ್ತ್ರಗಳನ್ನೂ ಪ್ರಯೋಗಿಸಬೇಕು” ಎಂದು ಹೇಳಿದನು.

ತಂದೆಯ ಅಪ್ಪಣೆಯಾದೊಡನೆಯೆ ಇಂದ್ರಜಿತು ಆತನಿಗೆ ಪ್ರದಕ್ಷಿಣ ನಮಸ್ಕಾರಮಾಡಿ ಪ್ರಯಾಣ ಸನ್ನದ್ಧನಾದನು. ಆತನ ಇಷ್ಟಮಿತ್ರರೆಲ್ಲರೂ ಆತನನ್ನು ಸ್ತುತಿಸುತ್ತಿರಲು, ಕಮಲಪತ್ರದಂತೆ ನೇತ್ರವುಳ್ಳ ಆ ರಾಜಕುಮಾರನು ರಣಲೀಲಾ ಉತ್ಸಾಹದಿಂದ ರಥವನ್ನೇರಿ ಯುದ್ಧಕ್ಕೆ ಹೊರಟನು. ಬಿಳಿಯ ಕೋರೆದಾಡೆಗಳುಳ್ಳ ನಾಲ್ಕು ಹುಲಿಗಳು ಆ ರಥವನ್ನು ಎಳೆದುಕೊಂಡು ಹೊರಟವು. ಆತನ ರಥಧ್ವನಿಯೂ ಧನುಷ್ಟಂಕಾರವೂ ದಿಕ್ಕುಗಳಲ್ಲಿ ಪ್ರತಿಧ್ವನಿತವಾಗುತ್ತಿರಲು, ಅದನ್ನು ಕೇಳಿದ ಹನುಮಂತನು ಮತ್ತೊಮ್ಮೆ ಯುದ್ಧವಾಗುವುದೆಂದು ಅರಿತು ಸಂತಸಗೊಂಡನು. ಇಂದ್ರಜಿತ್ತು ತನ್ನ ಬಿಲ್ಲುಬಾಣಗಳನ್ನು ಸಜ್ಜುಗೊಳಿಸುತ್ತಾ ಬರುತ್ತಿರಲು ದಶದಿಶೆಗಳಲ್ಲಿಯೂ ಕತ್ತಲು ಮುಸುಕಿತು; ಕ್ರೂರ ಮೃಗಗಳು ವಿಕಟಧ್ವನಿಯಲ್ಲಿ ಕಿರಿಚಿಕೊಂಡುವು; ಆಕಾಶಗಾಮಿಗಳಾದ ಯಕ್ಷಪನ್ನಗಾದಿಗಳು ಇಂದ್ರಜಿತುವಿನ ಯುದ್ಧಕೌಶಲವನ್ನು ನೋಡುವುದಕ್ಕಾಗಿ ಆಕಾಶದಲ್ಲಿ ನೆರೆದರು; ಆಕಾಶದಲ್ಲಿ ಪಕ್ಷಿಗಳು ಹಿಂಡುಹಿಂಡಾಗಿ ಸೇರಿ ಹರುಷದಿಂದ ಕುಕಿಲಿಟ್ಟುವು. ಇಂದ್ರಜಿತ್ತು ಚಿತ್ರಮಯವಾದ ಬಿಲ್ಲನ್ನು ಕೈಲಿ ಹಿಡಿದು ಸಿಡಿಲು ಹೊಡೆದಂತೆ ಅದನ್ನು ಮಿಡಿಯುತ್ತಾ ಅಶೋಕವನದ ಬಾಗಿಲಿಗೆ ಬಂದನು. ಇಂದ್ರಜಿತ್ತನ್ನು ಕಂಡೊಡನೆಯೆ ಹನುಮಂತನು ಸಿಂಹನಾದವನ್ನು ಮಾಡಿ ಬೆಳೆಯಲು ತೊಡಗಿದನು. ಇಬ್ಬರೂ ಕದನಕ್ಕಾಗಿ ಪರಸ್ಪರ ಇದಿರಾದರು. ಇಬ್ಬರೂ ಪ್ರಚಂಡ ವೇಗವುಳ್ಳವರು; ಇಬ್ಬರೂ ಮಹಾ ಪರಾಕ್ರಮಿಗಳು. ಇಬ್ಬರೂ ಸಂಧಿಸಿ, ದೇವೇಂದ್ರನೂ ದಾನವೇಂದ್ರನೂ ಪರಸ್ಪರ ಯುದ್ಧಕ್ಕೆ ನಿಂತಂತೆ ಒಬ್ಬರನ್ನೊಬ್ಬರು ಇದಿರಿಸಿ ನಿಂತರು.

ಇಂದ್ರಜಿತ್ತು ತನ್ನ ಶಸ್ತ್ರಾಸ್ತ್ರಗಳ ಕಲೆಯನ್ನು ಮೆರೆಯತೊಡಗಿದನು. ಹನುಮಂತನು ಆಕಾಶದಲ್ಲಿ ಚಿತ್ರಗತಿಯಿಂದ ತಿರುಗುತ್ತಾ ಆ ಬಾಣಗಳ ಪೆಟ್ಟಿನಿಂದ ತಪ್ಪಿಸಿಕೊಳ್ಳುತ್ತಿದ್ದನು. ಇಂದ್ರಜಿತ್ತು ಗುರಿಹಿಡಿದು ಹೊಡೆಯುವುದರಲ್ಲಿ ಕುಶಲಿ. ಹನುಮಂತನು ತನ್ನ ಗತಿಚಾತುರ್ಯದಿಂದ ಅವುಗಳನ್ನು ವ್ಯರ್ಥ ಮಾಡುವುದರಲ್ಲಿ ನಿಪುಣ. ಹಾರಿಬರುತ್ತಿದ್ದ ಕೆಲವು ಬಾಣಗಳನ್ನು ಹನುಮಂತನು ಕೈಯಿಂದ ಹಿಡಿದು ಅತ್ತ ಒಗೆಯುತ್ತಿದ್ದನು. ಇವನನ್ನು ನಿಗ್ರಹಿಸುವ ಉಪಾವೇನೆಂದು ಇಂದ್ರಜಿತ್ತಿಗೆ ಹೊಳೆಯಲಿಲ್ಲ. ಇಂದ್ರಜಿತ್ತನ್ನು ನಿಗ್ರಹಿಸುವುದಕ್ಕೆ ಹನುಮಂತನಿಗೂ ಅವಕಾಶ ದೊರೆಯಲೊಲ್ಲದು. ಇಬ್ಬರೂ ತಂತಮ್ಮ ಸಂರಕ್ಷಣೆಯ ಕರ್ತವ್ಯದಲ್ಲಿಯೆ ತೊಡಗಿರಬೇಕಾಗಿದ್ದುದರಿಂದ ಪರಸ್ಪರ ಘಾತಿಸಲು ಅವಕಾಶವೆ ಸಿಕ್ಕದು. ಬಹುಕಾಲ ಹೀಗೆಯೇ ಯುದ್ಧ ನಡೆಯಿತು. ಕಡೆಗೆ ಇಂದ್ರಜಿತು ಹನುಮಂತನನ್ನು ಬಾಣದಿಂದ ಹೊಡೆದು ಕೊಲ್ಲುವುದು ಅಸಾಧ್ಯವೆಂಬುದನ್ನು ಮನಗಂಡನು. ಕೊನೆಗೆ ಆ ಕೋತಿಯನ್ನು ಹಿಡಿದು ಕಟ್ಟುವುದಕ್ಕಾದರೂ ಉಪಾಯ ದೊರೆತರೆ ಸಾಕೆಂದು ಚಿಂತಿಸಿದನು. ಆತನಿಗೆ ಒಂದು ಉಪಾಯ ಹೊಳೆಯಿತು. ಬ್ರಹ್ಮಾಸ್ತ್ರವನ್ನು ಅನುಸಂಧಾನಮಾಡಿ ಅದನ್ನು ಹನುಮಂತನ ಮೇಲೆ ಪ್ರಯೋಗಿಸಿದನು. ಇದರಿಂದ ಇಂದ್ರಜಿತುವಿನ ಅಭೀಷ್ಟ ನೆರವೇರಿತು. ಹನುಮಂತನು ಬ್ರಹ್ಮಾಸ್ತ್ರಕ್ಕೆ ಕಟ್ಟುಬಿದ್ದು ನೆಲಕ್ಕುರುಳಿದನು. ಆದರೂ ಮನಸ್ಸಿನಲ್ಲಿ “ಹಿಂದೆ ಬ್ರಹ್ಮದೇವನು ನನಗೆ ವರವನ್ನು ಕೊಟ್ಟಿದ್ದಾನೆ; ಒಂದು ಮುಹೂರ್ತ ಕಾಲವಾದರೆ ಇದರಿಂದ ನಾನು ಮುಕ್ತನಾಗಬಲ್ಲೆ; ಮಹಾತ್ಮನಾದ ಬ್ರಹ್ಮನಿಗೆ ಸಂಬಂಧಪಟ್ಟ ಈ ಅಸ್ತ್ರಕ್ಕೆ ಗೌರವ ಕೊಡಬೇಕಾದುದು ನನ್ನ ಕರ್ತವ್ಯ. ಇದಕ್ಕೆ ಕಟ್ಟುಬಿದ್ದಿರುವ ನನ್ನನ್ನು ಈ ರಾಕ್ಷಸರು ಇಲ್ಲಿಂದ ರಾವಣನ ಬಳಿಗೆ ಹಿಡಿದುಕೊಂಡು ಹೋಗಬಹುದು. ಅದೂ ಒಂದು ಗುಣವೇ. ರಾಕ್ಷಸೇಶ್ವರನಾದ ರಾವಣನೊಡನೆ ಸ್ವಲ್ಪ ಮಾತನಾಡುವ ಅವಕಾಶ ದೊರೆಯುತ್ತದೆ ನನಗೆ” ಎಂದುಕೊಂಡು ಕೈಕಾಲು ಉಡುಗಿದವನಂತೆ ನಿಶ್ಚೇಷ್ಟಿತನಾಗಿದ್ದನು.

ಮಾರುತಿ ಬಿದ್ದುದನ್ನು ಕಾಣುತ್ತಲೆ ರಾಕ್ಷಸರೆಲ್ಲರೂ ಅವನನ್ನು ಸುತ್ತಿಮುತ್ತಿದ್ದರು. ಆತನನ್ನು ಪರಿಪರಿಯಾಗಿ ಗದರಿಸಿ ಬೈಯುತ್ತಾ ಅವರು ಬಲವಾದ ಹಗ್ಗಗಳನ್ನು ತಂದು ಆ ಘೋರರೂಪಿಯ ಕೈಕಾಲುಗಳನ್ನು ಬಲವಾಗಿ ಬಿಗಿದು ಕಟ್ಟಿದರು. ಈ ವೇಳೆಗೆ ಬ್ರಹ್ಮಾಸ್ತ್ರದ ಕಟ್ಟು ಬಿಟ್ಟುಹೋಯಿತು. ಇದು ಹನುಮಂತನಿಗೆ ಗೊತ್ತಾಗದಿದ್ದರೂ ಇಂದ್ರಜಿತುವಿಗೆ ಕಾಣಿಸಿತು. ಬ್ರಹ್ಮಾಸ್ತ್ರದಿಂದ ಬಿಗಿದವನನ್ನು ಬೇರೆಯ ಕಟ್ಟುಗಳಿಂದ ಬಿಗಿದರೆ ಅದು ಬಿಟ್ಟುಹೋಗುವುದು. ಇದನ್ನರಿಯದೆ ಅವಿವೇಕಿಗಳಾದ ರಾಕ್ಷಸರು ಮಾಡಿದ ಅಕಾರ್ಯವನ್ನು ಕಂಡು ಇಂದ್ರಜಿತು ಮನಸ್ಸಿನಲ್ಲಿಯೆ ಮಿಡುಕಿಕೊಂಡನು. ಆದರೆ ಕಾರ್ಯ ಮಿಂಚಿಹೋಗಿತ್ತು. ಆದ್ದರಿಂದ ಹಗ್ಗಗಳಿಂದ ಕಟ್ಟಿಹಾಕಿದ ಹನುಮಂತನನ್ನು ರಾಕ್ಷಸರಿಂದ ಎಳಸಿಕೊಂಡು ಹೊರಟನು. ಅವರು ಅವನನ್ನು ದೊಣ್ಣೆಗಳಿಂದ ಹೊಡೆಯುತ್ತಾ ಸಭೆಯಲ್ಲಿ ಕುಳಿತಿದ್ದ ರಾವಣನ ಬಳಿಗೆ ಎಳೆದೊಯ್ದರು. ಇಂದ್ರಜಿತು ಅವನನ್ನು ರಾವಣನ ಇದಿರಿಗೆ ನಿಲ್ಲಿಸಿ “ಇಗೋ ಇವನೇ ಅ ವಾನರ!” ಎಂದನು. ಸಭೆಯಲ್ಲಿದ್ದ ರಾಕ್ಷಸರೆಲ್ಲರೂ ಆ ಮಹಾಕಪಿಯನ್ನು ಕಂಡು, “ಇವನು ಯಾರೋ? ಯಾರ ಸಂಬಂಧಿಯೊ? ಇಲ್ಲಿಗೇಕೆ ಬಂದನೊ? ಯಾವ ಕೆಲಸಕ್ಕಾಗಿ ಯಾವನು ಕಳುಹಿಸಿದ್ದಾನೊ?” ಎಂದು ತಮ್ಮತಮ್ಮಲ್ಲಿಯೆ ಮಾತನಾಡಿಕೊಳ್ಳುತ್ತಿದ್ದರು. ಮತ್ತೆ ಕೆಲವರು “ಇವನನ್ನು ಈಗಲೆ ಕೊಂದುಬಿಡಿರಿ; ಜೀವಸಹಿತ ಸುಟ್ಟುಹಾಕಿಬಿಡಿ; ಕೊಂದು ತಿಂದುಹಾಕಿಬಿಡಿರಿ” ಎಂದು ಕೂಗಿಕೊಂಡರು.

ಮಧ್ಯಾಹ್ನದ ಸೂರ್ಯನಂತೆ ತೇಜೋಮೂರ್ತಿಯಾಗಿ ಬೆಳಗುತ್ತಿದ್ದ ರಾವಣನನ್ನೂ ಆತನ ಪಾದಮೂಲದಲ್ಲಿ ನಿಂತಿದ್ದ ಮಂತ್ರಿ ಮಹತ್ತರನ್ನೂ ಅನರ್ಘ್ಯರತ್ನಗಳಿಂದ ಅಲಂಕೃತವಾದ ಆ ರಾಜಸಭೆಯನ್ನೂ ಹನುಮಂತನು ಒಮ್ಮೆ ದೃಷ್ಟಿಸಿ ನೋಡಿದನು. ಅಷ್ಟರಲ್ಲಿ ರಾವಣನು ಆ ಘೋರ ವಾನರನನ್ನು ಒಮ್ಮೆ ಕಿಡಿಗಾರುವ ಕಣ್ಣುಗಳಿಂದ ನೋಡಿ, ಅವನ ಸಂಗತಿಯನ್ನು ವಿಚಾರಿಸುವಂತೆ ತನ್ನ ಪ್ರಧಾನಮಂತ್ರಿಗಳಿಗೆ ತಿಳಿಸಿದನು. ಅವರು ಹನುಮಂತನನ್ನು ಕುರಿತು “ನೀನು ಯಾರು? ಇಲ್ಲಿಗೇಕೆ ಬಂದೆ? ನಿನ್ನನ್ನು ಕಳುಹಿಸಿದವರು ಯಾರು?” ಎಂದು ಕೇಳಿದರು. ಆತನು ನೇರವಾಗಿ ಉತ್ತರಕೊಟ್ಟನು – “ನಾನು ವಾನರೇಶ್ವರನಾದ ಸುಗ್ರೀವನ ದೂತ. ಆತನ ಆಜ್ಞೆಯಂತೆ ಇಲ್ಲಿಗೆ ಬಂದಿದ್ದೇನೆ” ಇಷ್ಟು ಹೇಳಿ, ಹನುಮಂತನು ಮತ್ತೊಮ್ಮೆ ರಾವಣನನ್ನು ಅಪಾದಮಸ್ತಕವೂ ನಿಟ್ಟಿಸಿ ನೋಡಿದನು. ಆ ರಾಕ್ಷಸರಾಜನು ಸ್ವಭಾವದಿಂದಲೆ ತೇಜಸ್ವಿಯಾದನು. ಆತನ ತಲೆಯ ಮೇಲೆ ಮುತ್ತಿನ ಕಿರೀಟವೂ ಮೈಯಲ್ಲಿ ಧರಿಸಿದ್ದ ವಜ್ರಖಚಿತವಾದ ಸ್ವರ್ಣಾಭರಣಗಳೂ ಆತನ ತೇಜಸ್ಸನ್ನು ಮತ್ತಷ್ಟು ಹೆಚ್ಚಿಸುತ್ತಿದ್ದುವು. ಉಟ್ಟಿದ್ದ ಪಟ್ಟೆಮಡಿಯೂ ಮೈಗೆಲ್ಲಾ ಲೇಪಿಸಿಕೊಂಡಿದ್ದ ರಕ್ತಚಂದನ ಕಸ್ತೂರಿಗಳೂ ಆತನ ಆಕಾರಕ್ಕೆ ಕಳೆಗೊಡುವಂತಿದ್ದುವು. ಆತನ ಈ ಹತ್ತು ತಲೆಗಳೂ ಕಿರೀಟಾದಿ ಆಭರಣಗಳಿಂದ ಅಲಂಕೃತವಾಗಿವೆ. ನೀಲಪರ್ವತದಂತೆ ಬೆಳಗುತ್ತಿರುವ ಆತನ ವಿಸ್ತಾರವಾದ ಎದೆಯಲ್ಲಿ ಪೂರ್ಣಚಂದ್ರನಂತೆ ಬೆಳಗುತ್ತಿರುವ ಪದಕದಿಂದ ಕೂಡಿದ ಮುತ್ತಿನ ಹಾರ, ತೋಳ್ಬಳೆಗಳಿಂದಲೂ ಕಡಗಗಳಿಂದಲೂ ಅಲಂಕೃತವಾಗಿರುವ ಇಪ್ಪತ್ತು ತೋಳುಗಳು, ಆ ಕೆಂಪೇರಿದ ಕಣ್ಣುಗಳು, ಅರೆತೆರೆದ ಬಾಯಿಗಳು, ಪ್ರಜ್ವಲಿಸುತ್ತಿರುವ ಕೋರೆದಾಡೆಗಳು, ಜೋಲಾಡುವ ತುಟಿಗಳು – ನೋಡಿದೊಡನೆಯೆ ಎಂತಹವರಲ್ಲಿಯೂ ಭಯವನ್ನು ಕೆರಳಿಸುವ ಭಯಂಕರ ರೂಪವದು. ಆ ರಾಕ್ಷಸರಾಜನು ದಿವ್ಯವಾದ ರತ್ನಗಂಬಳಿಯನ್ನು ಹಾಸಿರುವ ಸ್ಫಟಿಕದ ಸಿಂಹಾಸನದ ಮೇಲೆ ಕುಳಿತಿದ್ದನು. ಸರ್ವಾಲಂಕಾರ ಭೂಷಿತೆಯರಾದ ರಮಣಿಯರು ಆತನಿಗೆ ಚಾಮರಸೇವೆ ಸಲ್ಲಿಸುತ್ತಿದ್ದರು. ಮಂತ್ರಾಲೋಚನೆಯಲ್ಲಿ ಪ್ರವೀಣರಾದ ಪ್ರಹಸ್ತ, ಮಹಾಪಾರ್ಶ್ವ ಮೊದಲಾದ ಮಂತ್ರಿಗಳು ಆತನ ಬಳಿಯಲ್ಲಿಯೆ ಆಸನಾಸೀನರಾಗಿದ್ದರು. ಮಂದರಗಿರಿ ಶಿಖರದ ಮೇಲೆ ಮಂಡಿಸಿರುವ ಮಹಾಮೇಘದಂತೆ ಉನ್ನತಾಸನದಲ್ಲಿ ಬೆಳಗುತ್ತಿದ್ದ ಆ ರಾವಣನ ಅಸಮಾನ ತೇಜಸ್ಸನ್ನೂ ವೈಭವವನ್ನೂ ಕಂಡು ಹನುಮಂತನು “ಅಯ್ಯೋ! ಇವನ ರೂಪವೇನು, ಧೈರ್ಯವೇನು, ಸತ್ವವೆಂತಹುದು, ದಿವ್ಯಕಾಂತಿ ಹೇಗಿದೆ! ಇವನಲ್ಲಿ ಅಧರ್ಮ ಬುದ್ಧಿಯೊಂದು ಪ್ರಬಲಿಸದೆ ಇದ್ದಿದ್ದರೆ ಈತನು ದೇವಲೋಕವನ್ನೇ ಆಳಲು ಅರ್ಹನಾಗುತ್ತಿದ್ದನಲ್ಲಾ! ಏನು ಮಾಡುವುದು? ಕ್ರೂರನಾದ ಈ ನೃಶಂಸನ ನಿಂದಿತ ಕಾರ್ಯಗಳನ್ನು ಕಂಡು ಲೋಕವೆಲ್ಲವೂ ಹೆದರಿ ತತ್ತರಗುಟ್ಟುತ್ತಿದೆ. ಈ ಪಾಪಿಯೋ ಕ್ರುದ್ಧನಾದರೆ ಈ ಪ್ರಪಂಚವನ್ನೇ ಏಕಾರ್ಣವವನ್ನಾಗಿ ಮಾಡಬಲ್ಲ ಶಕ್ತನಾಗಿದ್ದಾನೆ” ಎಂದುಕೊಂಡನು.