ಈ ನೀಚ ಕೋತಿಯನ್ನು ವಧಿಸಿಬಿಡಿ ಎಂದು ರಾವಣನ ಅಬ್ಬರಿಸಿದನು.

ಕಡ್ಡಿಮುರಿದು ಕೈಗೆ ಕೊಟ್ಟಂತೆ ಸ್ಪಷ್ಟವಾದ ಮಾತುಗಳಿಂದ ತನ್ನ ಅಭಿಪ್ರಾಯವನ್ನು ಸೂಚಿಸಿದ ಹನುಮಂತನ ಮಾತುಗಳನ್ನು ಕೇಳಿ ರಾವಣನ ಕೋಪ ಕಡುಗಿಚ್ಚಾಯಿತು; ಹೃದಯ ಕುದಿಯಿತು; ಕಣ್ಣು ಕೆಂಡದುಂಡೆಯಾಯಿತು. “ಈ ನೀಚ ಕೋತಿಯನ್ನು ವಧಿಸಿಬಿಡಿ!” ಎಂದು ಆತನು ಅಬ್ಬರಿಸಿದನು. ಅಲ್ಲಿಯೆ ಸಭೆಯಲ್ಲಿ ಕುಳಿತಿದ್ದ ಆತನ ತಮ್ಮ ವಿಭೀಷಣನು ಆ ಅಪ್ಪಣೆಯನ್ನು ವಿರೋಧಿಸಿದನು. ವಿಭೀಷಣನು ರಾಕ್ಷಸನಾದರೂ ಉಚಿತಾನುಚಿತಗಳನ್ನೂ ಧರ್ಮಾಧರ್ಮಗಳನ್ನೂ ಅರಿತವನು. ಆದ್ದರಿಂದ ರಾವಣನನ್ನು ಕುರಿತು “ಅಣ್ಣಾ, ಪ್ರಸನ್ನನಾಗು, ದೂತನಾದವನಿಗೆ ಮರಣದಂಡನೆಯನ್ನು ವಿಧಿಸುವುದು ಸೂಕ್ತವಲ್ಲ. ಅದು ರಾಜಧರ್ಮಕ್ಕೆ ವಿರುದ್ಧ. ನಿನ್ನಂತಹ ಜ್ಞಾನಿಯೂ ಮಹಾತ್ಮನೂ ಕೋಪಕ್ಕೆ ವಶನಾಗಿ ಇಂತಹ ಅಕಾರ್ಯಕ್ಕೆ ಮನಕೊಡಬಾರದು. ಯುಕ್ತಾಯುಕ್ತಗಳನ್ನು ಆಲೋಚಿಸಿ, ದೂತನಾದ ಇವನಿಗೆ ಯೋಗ್ಯವಾದ ಶಿಕ್ಷೆಯನ್ನು ವಿಧಿಸು” ಎಂದನು.

ಕೋಪದಿಂದ ಮೈಮರೆತಿದ್ದ ರಾವಣೇಶ್ವನಿಗೆ ತಮ್ಮನ ಮಾತು ಹಿಡಿಸಲಿಲ್ಲ. “ಅಯ್ಯಾ ವಿಭೀಷಣ, ಪಾಪಚಾರಿಗಳನ್ನು ವಧಿಸುವುದು ಪಾಪವಲ್ಲ. ಆದ್ದರಿಂದ ಈ ಪಾಪಿಯಾದ ವಾನರನನ್ನು ವಧಿಸುವುದೇ ಸರಿ” ಎಂದನು. ಅದನ್ನು ಕೇಳಿ ವಿಭೀಷಣನು “ಅಣ್ಣಾ ಲಂಕೇಶ್ವರ, ಪ್ರಸನ್ನನಾಗು. ಎಲ್ಲಿಯೆ ಆಗಲಿ, ಯಾವಾಗಲೆ ಆಗಲಿ ದೂತವಧೆಯೆಂಬುದು ನಿಷಿದ್ಧವೆಂದು ಹಿರಿಯರು ಹೇಳುತ್ತಾರೆ. ಈ ವಾನರ ನಮಗೆ ಶತ್ರು; ಅಕ್ಷಕುಮಾರನೇ ಮೊದಲಾದ ನಮ್ಮ ಬಂಧುಗಳನ್ನು ಸಂಹರಿಸಿ ನಮಗೆ ಅಪಕಾರಮಾಡಿದ್ದಾನೆ. ಆದರೂ ದೂತನಾದ ಇವನು ಅವಧ್ಯನೆ. ದಂಡನೀತಿ ಶಾಸ್ತ್ರದಲ್ಲಿ ದೂತರಿಗೆ ಅನೇಕ ದಂಡನೆಗಳನ್ನು ವಿಧಿಸಿದೆ. ವಿರೂಪಗೊಳಿಸಬಹುದು, ಕೊರಡೆಯಿಂದ ಹೊಡೆಯಬಹುದು. ತಲೆ ಬೋಳಿಸಬಹುದು. ಶಾಶ್ವತವಾದ ಗುರುತಿರುವಂತೆ ಮುದ್ರೆಯೊತ್ತಬಹುದು. ಆದರೆ ವಧೆಯನ್ನು ಮಾತ್ರ ವಿಧಿಸಲಿಲ್ಲ. ದೂತವಧೆಯೆಂಬುದನ್ನು ಇದುವರೆಗೆ ನಾವು ಎಲ್ಲಿಯೂ ಕಂಡಿಲ್ಲ, ಕೇಳಿಲ್ಲ. ಆದ್ದರಿಂದ ಈ ವಾನರನನ್ನು ಕೊಲ್ಲುವುದು ಸರ್ವಥಾ ಆಗಬಾರದು ಕೆಲಸ. ಇವನ್ನು ಕಿಡುನುಡಿಗಳನ್ನು ಆಡಿದ್ದರೆ ಆ ತಪ್ಪು ಇವನನ್ನು ಕಳುಹಿಸಿದವರದು; ಅವರನ್ನು ಶಿಕ್ಷಿಸಬೇಕು, ಅಷ್ಟೆ. ದೂತರಿಗೆ ಸ್ವಂತ ಮಾತೆಲ್ಲಿ ಬಂತು? ನೀನು ಇವನನ್ನು ಕೊಂದುಹಾಕಿದರೆ ರಾಮಲಕ್ಷ್ಮಣರಿಗೆ ಇಲ್ಲಿಂದ ಸುದ್ದಿಯನ್ನು ಕೊಂಡೊಯ್ಯುವವರು ಯಾರು? ಸುದ್ದಿಯನ್ನು ಕೊಂಡೊಯ್ಯದ ಮೇಲೆ ಅವರು ಇಲ್ಲಿಗೆ ಬರುವುದೆಂತು? ಅವರು ಬರದಮೇಲೆ ನೀನು ನಿನ್ನ ಶತ್ರುಗಳನ್ನು ಸಂಹರಿಸುವುದು ಹೇಗೆ? ನೀನು ಯುದ್ಧಪ್ರಿಯ; ಶೂರರಾದ ರಾಮಲಕ್ಷ್ಮಣರೊಡನೆ ಯುದ್ಧಮಾಡುವ ಸದವಕಾಶವನ್ನು ಕಳೆದುಕೊಳ್ಳುವೆಯಾ?”

ವಿಭೀಷನ ನುಡಿಗಳು ರಾವಣನ ಆತ್ಮಗೌರವವನ್ನು ಎಚ್ಚರಿಸಿದುವು. ಆತನು ಕ್ಷಣಕಾಲ ಮೌನವಾಗಿದ್ದು, ಅನಂತರ “ತಮ್ಮಾ ವಿಭೀಷಣ, ನಿನ್ನ ಮಾತು ನಿಜ. ಇವನನ್ನು ಸಂಹರಿಸುವುದು ಬೇಡ. ಇವನಿಗೆ ಯಾವುದಾದರೂ ಒಂದು ಶಿಕ್ಷೆಯನ್ನು ವಿಧಿಸೋಣ. ಕಪಿಗಳಿಗೆ ಬಾಲವೇ ಪರಮಭೂಷಣವಾದ ಅಂಗ. ಅದನ್ನು ಸುಟ್ಟು ಇವನನ್ನು ವಿರೂಪಗೊಳಿಸಿಬಿಡಲಿ. ಸುಟ್ಟ ಬಾಲದೊಡನೆ ಈ ಕೋತಿ ತನ್ನ ಪ್ರಭುವಾದ ಸುಗ್ರೀವನಲ್ಲಿಗೆ ಹೋಗಲಿ!” ಎಂದು ಹೇಳಿ ತನ್ನ ಭಟರನ್ನು ಕುರಿತು “ಎಲೈ ಭಟರೆ, ಈ ಕೋತಿಯ ಬಾಲಕ್ಕೆ ಬೆಂಕಿ ಹಚ್ಚಿ, ನಮ್ಮ ಪಟ್ಟಣದ ಚೌಕಗಳಲ್ಲಿಯೂ ರಾಜಮಾರ್ಗಗಳಲ್ಲಿಯೂ ಮೆರವಣಿಗೆ ಮಾಡಿ ಆಮೇಲೆ ಓಡಿಸಿಬಿಡಿ!” ಎಂದು ಅಪ್ಪಣೆಮಾಡಿದನು. ರಾಜನ ಅಪ್ಪಣೆಯಾದುದೆ ತಡ, ರಾಕ್ಷಸರು ನಾನು ತಾನೆಂದು ಮುಂದೆ ಬಂದು ಹಳೆಯ ಬಟ್ಟೆಯ ಚಿಂದಿಗಳನ್ನು ಹನುಮಂತನ ಬಾಲಕ್ಕೆ ಸುತ್ತಿದರು. ಅನಂತರ ಅದಕ್ಕೆ ಎಣ್ಣೆಯನ್ನು ಹೊಯ್ದು ಬೆಂಕಿಯನ್ನು ಹೊತ್ತಿಸಿದರು. ಅದನ್ನು ಕಂಡು ಹನುಮಂತನ ಕೆಂಪಗಿದ್ದ ಮುಖ ಕೋಪದಿಂದ ಮತ್ತೂ ಕೆಂಪಾಯಿತು. ಬಾಲಸೂರ್ಯನಂತೆ ಪ್ರಕಾಶಿಸುತ್ತಿದ್ದ ಆತನು ಉರಿಯುವ ಬಾಲದಿಂದ ಸುತ್ತುಮುತ್ತಲಿದ್ದ ರಾಕ್ಷಸರನ್ನೆಲ್ಲಾ ಸದೆಬಡಿದನು. ಅಷ್ಟು ಹೊತ್ತಿಗೆ ಊರಿನವರೆಲ್ಲರೂ ಒಟ್ಟಾಗಿ ಸೇರಿಕೊಂಡು ಬಂದರು – ಆ ಘೋರ ವಾನರನ ಬಾಲ ಸುಡುವುದನ್ನು ನೋಡುವುದಕ್ಕೆಂದು. ಹೀಗೆ ಗುಂಪು ಸೇರಿದ್ದ ಜನ ಮತ್ತೆ ಹನುಮಂತನನ್ನು ಹಿಡಿದು ಬಂಧಿಸಿದರು. ಹನುಮಂತನು ಅವರೆಲ್ಲರನ್ನೂ ಸದೆಬಡಿಯಬಲ್ಲವನಾಗಿದ್ದರೂ ತಾನಾಗಿಯೆ ಅವರ ವಶನಾದನು. ಅವರು ಆಡುತ್ತಿದ್ದ ಮೂದಲೆಯ ಮಾತುಗಳನ್ನೂ ಆಗಾಗ ಕೊಡುತ್ತಿದ್ದ ಕಿರುಕುಳಗಳನ್ನೂ ಸಹಿಸುತ್ತಾ ಅವರು ಎಳೆದತ್ತ ಹೊರಟನು. ತಾನು ಲಂಕಾಪಟ್ಟಣವನ್ನು ನೋಡಿದ್ದುದು ರಾತ್ರಿಯ ಹೊತ್ತಿನಲ್ಲಿ. ಈಗ ಮತ್ತೊಮ್ಮೆ ಹಚ್ಚ ಹಗಲಿನಲ್ಲಿ ಊರಲೆಲ್ಲಾ ಸುತ್ತುತ್ತಾ ದುರ್ಗರಹಸ್ಯಾದಿಗಳನ್ನು ಅರಿತುಕೊಳ್ಳಲು ಸುಸಂದರ್ಭ ದೊರೆತಿರುವಾಗ ಆ ಜಾಣ ಅದನ್ನು ನಿವಾರಿಸಿಯಾನೆ? ಅವರು ಕೊಡುತ್ತಿದ್ದ ಹಿಂಸೆಗಳೊಂದೂ ಆತನ ಲಕ್ಷ್ಯಕ್ಕೆ ಸುಳಿಯಲೂ ಇಲ್ಲ.

ಹೊತ್ತಿ ಉರಿಯುತ್ತಿದ್ದ ಬಾಲವನ್ನು ನೋಡಿ ಚಪ್ಪಾಳೆ ತಟ್ಟಿಕೊಂಡು ಕುಣಿಯುತ್ತಾ ಶಂಖ ಭೇರಿ ಮೊದಲಾದ ವಾದ್ಯಗಳನ್ನು ಬಾರಿಸುತ್ತಾ ಲಂಕಾ ನಗರದ ಬೀದಿಬೀದಿಯಲ್ಲಿಯೂ ಹನುಮಂತನನ್ನು ಕರೆದುಕೊಂಡು ಮೆರವಣಿಗೆ ಹೊರಟರು, ಆ ರಾಕ್ಷಸರು. ಹನುಮಂತನು ದುರ್ಗಪ್ರದೇಶವನೆಲ್ಲಾ ಸೂಕ್ಷ್ಮವಾಗಿ ನೋಡುತ್ತಾ ಹೊರಟನು. ಅವನನ್ನು ಕರೆದುಕೊಂಡು ಹೋಗುತ್ತಿದ್ದವರು ಅಲ್ಲಲ್ಲಿಯೆ ಅವನನ್ನು ನಿಲ್ಲಿಸಿ “ಇಗೋ ಇವನೆ ಆ ರಾಮದೂತ!” ಎಂದು ಕೂಗಿ ಹೇಳುತ್ತಿದ್ದರು. ಅದನ್ನು ಕೇಳಿದೊಡನೆಯೆ ಮನೆಯೊಳಗಿದ್ದ ಹೆಂಗಸರು ಮಕ್ಕಳೆಲ್ಲಾ ಸಂಭ್ರಮದಿಂದ ಹೊರಗೆ ಬಂದು ಅವನನ್ನು ನೋಡಿ ನಲಿಯುವರು. ಅವರಲ್ಲಿ ಕೆಲವರು ಸೀತೆಯ ಬಳಿಗೆ ಓಡಿಹೋಗಿ, “ಎಲೆ ಸೀತೆ, ನಿನ್ನೊಡನೆ ಮಾತನಾಡಿ ಹೋಯಿತಂತಲ್ಲಾ ಆ ಕೆಂಪುಮೂತಿಯ ಕೋತಿ, ಅದರ ಬಾಲಕ್ಕೆ ಬೆಂಕಿ ಹಚ್ಚಿ ಊರಲ್ಲೆಲ್ಲಾ ಮೆರವಣಿಗೆ ಮಾಡುತ್ತಿದ್ದಾರೆ” ಎಂದು ಹೇಳಿದರು. ಆ ಕ್ರೂರವಾಕ್ಯಗಳನ್ನು ಕೇಳುತ್ತಲೆ ಸೀತಾದೇವಿ ಮಹಾ ದುಃಖಿತೆಯಾಗಿ ಯಜ್ಞೇಶ್ವರನಲ್ಲಿ ಪ್ರಾರ್ಥನೆ ಸಲ್ಲಿಸಿದಳು. “ಹೇ ದೇವ, ಯಜ್ಞೇಶ್ವರಾ, ನಾನು ಪತಿವ್ರತೆಯಾಗಿ ಪತಿ ಶುಶ್ರೂಷೆಯನ್ನು ಕಾಯಾ ವಾಚಾ ಮನಸಾ ಮಾಡಿದುದಕ್ಕೆ ಫಲವೇನಾದರೂ ಇದ್ದರೆ ಅದರ ಫಲವಾಗಿ ನೀನು ಈ ಮಾರುತಿಯನ್ನು ಸಂರಕ್ಷಿಸು; ಆತನ ವಿಷಯದಲ್ಲಿ ನೀನು ಶಾಂತನಾಗು. ನಾನು ಈ ನಾಯಕ ನರಕದಿಂದ ಉದ್ಧಾರವಾಗುವುದೆ ಸತ್ಯವಾದಲ್ಲಿ ನೀನು ಶಾಂತನಾಗು!”

ಸೀತಾದೇವಿಯ ಪ್ರಾರ್ಥನೆ ಸಫಲವಾಯಿತು. ಹನುಮಂತನ ಬಾಲ ಹೊರಗಡೆ ಹೊತ್ತಿ ಉರಿಯುತ್ತಿದ್ದರೂ ಸ್ವಲ್ಪವೂ ಸುಡುತ್ತಿರಲಿಲ್ಲ. ಜ್ವಾಲೆಗಳು ಧಗಧಗನೆ ಉರಿಯುತ್ತಿವೆ; ಬಾಧೆಯೇನೂ ಇಲ್ಲ. “ಹೀಗೆ ಅಗ್ನಿ ಶೀತಳವಾಗಿರುವುದು ಶ್ರೀರಾಮಚಂದ್ರಮೂರ್ತಿಯ ಪ್ರಭಾವದಿಂದಲೆ ಸರಿ” ಎಂದುಕೊಂಡ ಹನುಮಂತ. ರಾಕ್ಷಸರು ನೋಡುನೋಡುತ್ತಿರುವಂತೆಯೆ “ಜಯ ರಘುವೀರ ಸಮರ್ಥ” ಎಂದು ಆಕಾಶಕ್ಕೆ ಹಾರಿ ಪುರದ್ವಾರದ ಮೇಲೆ ಕುಳಿತನು. ಅಲ್ಲಿ ದೇಹವನ್ನು ಕುಗ್ಗಿಸಿದೊಡನೆಯೆ ಕಟ್ಟಿದ್ದ ಹಗ್ಗಗಳೆಲ್ಲವೂ ಸಡಿಲಿ ಕಳಚಿಬಿದ್ದುವು. ಪುನಃ ದೇಹವನ್ನು ಬೆಳಸಿಕೊಂಡು ದ್ವಾರದಲ್ಲಿದ್ದ ಕಬ್ಬಿಣದ ದೊಡ್ಡ ಅಗುಳಿಯನ್ನು ಕೈಗೆ ತೆಗೆದುಕೊಂಡನು. ಅವನ ಹಿಂದೆ ಮುಂದೆ ಮುತ್ತಿಕೊಂಡು ಬಂದಿದ್ದ ರಾಕ್ಷಸರಿಗೆಲ್ಲಾ ಅಗುಳಿಯೆ ಯಮದಂಡವಾಯಿತು. ಪಿಳ್ಳೆ ಹೆಸರಿಲ್ಲದಾದರು.