ಹನುಮಂತನನ್ನು ನೋಡಿ ರಾವಣನ ಮನಸ್ಸಿನಲ್ಲಿ ಏನೇನೋ ಭಾವನೆಗಳು ಉದಿಸಿದುವು. “ಪೂರ್ವದಲ್ಲಿ ನಾನು ಕೈಲಾಸಪರ್ವತವನ್ನು ಕದಲಿಸಿದಾಗ ಕ್ರುದ್ಧನಾಗಿ ಶಪಿಸಿದ ನಂದಿಕೇಶ್ವರನೆ ಈ ವಾನರ ರೂಪದಿಂದ ಬಂದಿರಬಹುದೆ? ಅಥವಾ ರಾಕ್ಷಸಾಗ್ರೇಸರ ಚಕ್ರವರ್ತಿಯಾದ ಬಾಣಾಸುರನು ಈ ಕೋತಿಯ ವೇಷವನ್ನು ಧರಿಸಿ ಬಂದಿರಬಹುದೊ! ಇದೇನು ಭಯಂಕರ ರೂಪು” ಎನ್ನಿಸಿತು ಆತನಿಗೆ. ಆದರೂ ಆ ಘೋರವಾನರನು ಮಾಡಿದ್ದ ಹಾವಳಿಯನ್ನು ನೆನಸಿಕೊಂಡೊಡನೆಯೆ ಆತನಿಗೆ ಬಹುಕೋಪ ಬಂದಿತು. ಹಲ್ಲುಗಳನ್ನು ಕಟಕಟ ಕಡಿಯುತ್ತಾ ಪ್ರಹಸ್ತನನ್ನು ಕುರಿತು “ಎಲೈ ಮಂತ್ರಿಯೆ, ಈ ವಾನರನಾರು? ಎಲ್ಲಿಂದ ಬಂದನು? ಏಕೆ ಬಂದನು? ಎಲ್ಲವನ್ನೂ ವಿಸ್ತಾರವಾಗಿ ವಿಚಾರಿಸು” ಎಂದನು. ಪ್ರಹಸ್ತನು ಹನುಮಂತನನ್ನು ಕೇಳಿದನು – “ಎಲೈ ವಾನರನೆ, ನಿನಗೆ ಮಂಗಳವಾಗಲಿ! ನೀನು ಸ್ವಲ್ಪವೂ ಭಯಪಡದೆ ಸಮಾಧಾನದಿಂದ ನನ್ನ ಪ್ರಶ್ನೆಗಳಿಗೆ ಉತ್ತರವನ್ನು ಕೊಡು. ನೀನಾರು? ನಿನ್ನನ್ನು ಇಲ್ಲಿಗೆ ಕಳುಹಿಸಿದವರಾರು? ಏನು ದೇವೇಂದ್ರನೆ? ಅಥವಾ ಕುಬೇರನೆ? ಅಥವಾ ಮಹಾ ವಿಷ್ಣುವೆ? ನಿನ್ನನ್ನು ಈ ರೂಪದಿಂದ ಇಲ್ಲಿಗೆ ಕಳುಹಿಸಿರುವನೊ? ಇದ್ದುದನ್ನು ಇದ್ದಂತೆ ಹೇಳಿದರೆ ನಿನ್ನನ್ನು ಬಿಡುಗಡೆ ಮಾಡುತ್ತೇವೆ. ನೋಡುವುದಕ್ಕೆ ನೀನು ವಾನರನಂತೆ ಕಂಡರೂ ನಿಜವಾಗಿಯೂ ನೀನು ವಾನರನಲ್ಲ. ನಿಜವನ್ನು ಹೇಳಿಬಿಡು. ಸುಳ್ಳನ್ನು ಏನಾದರೂ ಆಡಿದೆಯೊ ನಿನ್ನ ಪ್ರಾಣ ಉಳಿಯುವುದಿಲ್ಲ. ಈ ನಗರಕ್ಕೆ ಏತಕ್ಕಗಿ ಬಂದೆ? ಯಾರೂ ಕಳುಹಿಸದೆ ನೀನಾಗಿಯೆ ಬಂದಿದ್ದರೆ ಬಂದುದಕ್ಕೆ ಏನಾದರೂ ಕಾರಣವಿದ್ದಿರಬೇಕಲ್ಲವೆ? ಎಲ್ಲಿ. ಎಲ್ಲವನ್ನೂ ವಿಸ್ತಾರವಾಗಿ ಹೇಳು” ಎಂದನು.

ಹನುಮಂತನಿಗೆ ರಾವಣನೊಡನೆಯೆ ನೇರವಾಗಿ ಮಾತನಾಡಬೇಕೆಂದು ಆಸೆ. ಆದ್ದರಿಂದ ಪ್ರಹಸ್ತನಿಗೆ ಪ್ರತ್ಯುತ್ತರ ಕೊಡದೆ ರಾವಣನನ್ನೇ ಕುರಿತು “ಅಯ್ಯಾ ರಾಕ್ಷಸಾಧಿಪತಿ, ನನ್ನನ್ನು ಇಂದ್ರ, ಯಮ, ವರುಣ, ಕುಬೇರ ಯಾರೂ ಕಳುಹಿಸಲಿಲ್ಲ. ವಿಷ್ಣು ಕಳಿಸಿದ್ದರಿಂದ ಈ ವೇಷಹಾಕಿಕೊಂಡು ಬಂದಿರಬೇಕೆಂಬ ನಿನ್ನ ತರ್ಕವೂ ತಪ್ಪು. ಈ ವಾನರ ರೂಪ ನನಗೆ ಸ್ವಭಾವಸಿದ್ಧವಾದುದು; ವೇಷವಲ್ಲ. ನಾನು ಜಾತ್ಯಾ ವಾನರನೆ. ರಾಕ್ಷಸೇಶ್ವರನಾದ ನಿನ್ನ ದರ್ಶನ ಸುಲಭಸಾಧ್ಯವಲ್ಲವಾದುದರಿಂದ ಅಸಾಧ್ಯ ಕಾರ್ಯಕ್ಕೆ ಕೈಯಿಡಬೇಕಾಯಿತು. ನಿನ್ನ ಸಂದರ್ಶನಾಪೇಕ್ಷೆಯಿಂದಲೆ ಅಶೋಕವನವನ್ನು ನಾಶಮಾಡಿದುದು. ಆಗ ರಾಕ್ಷಸರು ನನ್ನಮೇಲೆ ಯುದ್ಧಕ್ಕೆ ಬಂದರು. ನಾನು ಆತ್ಮಸಂರಕ್ಷಣಾರ್ಥವಾಗಿ ಅವರನ್ನು ಕೊಂದೆ. ಯಾವ ಅಸ್ತ್ರವಾಗಲಿ ಯಾವ ಪಾಶವಾಗಲಿ ನನ್ನನ್ನು ಏನೂ ಮಾಡಲಾರದು. ದೇವದಾನವರಲ್ಲಿ ಯಾರೂ ನನ್ನನ್ನು ಘಾತಿಸಲಾರರು. ನಿನ್ನನ್ನು ನೋಡುವ ಉದ್ದೇಶದಿಂದಲೆ ಇಂದ್ರಜಿತುವಿನ ಬ್ರಹ್ಮಾಸ್ತ್ರಕ್ಕೆ ನಾನು ವಶನಾದೆ. ನನ್ನನ್ನು ರಾಕ್ಷಸರು ಹಗ್ಗದಿಂದ ಬಿಗಿದಾಗಲೆ ಬ್ರಹ್ಮಾಸ್ತ್ರದ ಕಟ್ಟು ಕಳಚಿಹೋಯಿತು. ಆದರೂ ನಾನು ಈ ರಾಕ್ಷಸರ ವಶವಾಗಿ ಬಂದುದು ನಿನ್ನನ್ನು ಕಾಣುವುದಕ್ಕಾಗಿಯೆ. ನಾನು ನಿನ್ನ ಬಳಿಗೆ ಒಂದು ರಾಜಕಾರ್ಯಕ್ಕಾಗಿ ಬಂದಿರುತ್ತೇನೆ. ಅದನ್ನು ವಿಸ್ತಾರವಾಗಿ ತಿಳಿಸುವೆನು. ಸಾವಧಾನದಿಂದ ಕೇಳು” ಎಂದು ತಾನು ಬಂದ ಸಮಾಚಾರವನ್ನೆಲ್ಲಾ ವಿಸ್ತಾರವಾಗಿ ತಿಳಿಸುವೆನು.

“ರಾಕ್ಷಸ ಸಾರ್ವಭೌಮ, ಸುಗ್ರೀವ ಮಹಾರಾಜನ ಆಜ್ಞೆಯಂತೆ ನಾನು ಇಲ್ಲಿಗೆ ಬಂದಿದ್ದೇನೆ. ನಿನ್ನ ಸೋದರ ಸಮಾನನಾದ ಆತನು ನಿನ್ನ ಕುಶಲವನ್ನು ಕೇಳಿ, ಈ ಮುಂದೆ ಹೇಳುವ ವಿಚಾರವನ್ನು ನಿನಗೆ ತಿಳಿಸುವಂತೆ ನನಗೆ ಅಪ್ಪಣೆಮಾಡಿದ್ದಾನೆ – ಸಮಸ್ತಲೋಕಕ್ಕೂ ತಂದೆಯಿಂತಿರುವ ದಶರಥನೆಂಬ ಮಹಾರಾಜನಿದ್ದನು. ಆತನ ಹಿರಿಯಮಗನೆ ಲೋಕಾನಂದಕರನಾದ ಶ್ರೀರಾಮಚಂದ್ರ. ಆತನು ತನ್ನ ತಂದೆಯ ಸತ್ಯಪ್ರತಿಜ್ಞೆಗಾಗಿ ಮಡದಿಯಾದ ಜಾನಕಿಯನ್ನೂ ತಮ್ಮನಾದ ಲಕ್ಷ್ಮಣನನ್ನೂ ಕರೆದುಕೊಂಡು ವನವಾಸವನ್ನು ಕೈಕೊಂಡನು. ಅವನು ದಂಡಕಾರಣ್ಯದಲ್ಲಿರುವಾಗ ಜಾನಕಿಯ ಅಪಹಾರವಾಯಿತು. ಅರಿಭಯಂಕರರಾದ ರಾಮಲಕ್ಷ್ಮಣರು ಆಕೆಯನ್ನು ಅರಸುತ್ತಾ ಋಷ್ಯಮೂಕಪರ್ವತಕ್ಕೆ ಬರಲು ಅಲ್ಲಿ ಸುಗ್ರೀವ ಮಹಾರಾಜನೊಡನೆ ಅವರಿಗೆ ಸ್ನೇಹವಾಯಿತು. ಶ್ರೀರಾಮನು ಸುಗ್ರೀವನನ್ನು ವಾನರ ರಾಜ್ಯಕ್ಕೆ ದೊರೆಯಾಗಿ ಮಾಡುವುದಾಗಿಯೂ ಅದಕ್ಕೆ ಪ್ರತಿಯಾಗಿ ಆತನು ಸೀತಾದೇವಿಯನ್ನು ಹುಡುಕಿಕೊಡುವುದಾಗಿಯೂ ಪರಸ್ಪರ ಪ್ರತಿಜ್ಞೆ ಮಾಡಿದರು. ಅದರಂತೆ ಶ್ರೀರಾಮನು ಸುಗ್ರೀವನ ಅಣ್ಣನಾದ ವಾಲಿಯನ್ನು ಸಂಹರಿಸಿ ಆತನಿಗೆ ವಾನರ ರಾಜ್ಯದ ಪಟ್ಟವನ್ನು ಕಟ್ಟಿದನು. ಎಲೈ ರಾಕ್ಷಸೇಶ್ವರ, ನಿನಗೆ ವಾಲಿಯ ಪರಿಚಯವಿದೆ. ಆ ಮಹಾಪರಾಕ್ರಮಿಯನ್ನು ಶ್ರೀರಾಮನು ಒಂದೇ ಬಾಣದಿಂದ ಸಂಹಾರಮಾಡಿದನು. ಅನಂತರ ಸುಗ್ರೀವ ಮಹಾರಾಜನು ಜಾನಕಿಯನ್ನು ಹುಡುಕುವುದಕ್ಕಾಗಿ ಸಮರ್ಥರಾದ ವಾನರರನ್ನು ದಶದಿಕ್ಕುಗಳಿಗೂ ಅಟ್ಟಿದನು. ಆ ವಾನರರು ಸಾಮಾನ್ಯರಲ್ಲ. ಕೆಲವರು ಗರುಡನಿಗೆ ಸಮಾನರಾದವರು; ಮತ್ತೆ ಕೆಲವರು ವಾಯು ವೇಗವುಳ್ಳವರು. ಅಂತಹ ವಾನರರಲ್ಲಿ ನಾನೂ ಒಬ್ಬನು. ಶತಯೋಜನ ವಿಸ್ತೀರ್ಣವುಳ್ಳ ಸಾಗರವನ್ನು ದಾಟಿ ಇಲ್ಲಿಗೆ ಬಂದಿದ್ದೇನೆ. ವಾಯುದೇವನ ಔರಸಪುತ್ರನಾದ ನನ್ನ ಹೆಸರು ಹನುಮಂತನೆಂದು. ನಾನು ಈ ಲಂಕೆಯಲ್ಲಿ ಸೀತಾಮಾತೆಯನ್ನು ಅರಸುತ್ತಿರಲು ಆಕೆ ನಿನ್ನ ಮನೆಯಲ್ಲಿ ಕಾಣಿಸಿದಳು. ಮಹಾರಾಜ, ನನ್ನ ಹಿತೋಕ್ತಿಗಳಿಗೆ ಕಿವಿಗೊಡು. ನೀನು ಸಕಲ ಧರ್ಮಾಧರ್ಮಗಳನ್ನೂ ಬಲ್ಲವನು. ಮಹತ್ತಾದ ತಪಸ್ಸನ್ನೆ ಮಾಡಿ ಮಹಾಮಹಿಮನಾಗಿರುವವನು. ಪ್ರಾಜ್ಞನಾದ ನೀನು ಪರಸ್ತ್ರೀಯನ್ನು ಎಳೆತಂದು ಹೀಗೆ ನಿರ್ಬಂಧದಲ್ಲಿ ಇಡುವುದು ಸರ್ವಾತ್ಮನಾ ಸರಿಯಲ್ಲ. ಪರದಾರಾಪಹರಣವು ಮಹಾಪಾತಕವೆಂಬುದೂ ಸರ್ವನಾಶಕ್ಕೂ ಕಾರಣವಾಗುವುದೆಂಬುದೂ ನಿನಗೆ ತಿಳಿಯದ ವಿಷಯವಲ್ಲ. ರಾಕ್ಷಸ ಸಾರ್ವಭೌಮ, ನಿನ್ನ ಮಹಾ ಪರಾಕ್ರಮವನ್ನು ನಂಬಿ ಅಧರ್ಮದಲ್ಲಿ ಪ್ರವರ್ತಿಸಬೇಡ. ಶ್ರೀರಾಮಲಕ್ಷ್ಮಣರ ಎದುರಿಗೆ ನಿಂತು ಯುದ್ಧಮಾಡಬಲ್ಲ ವೀರರು ಮೂರು ಲೋಕಗಳಲ್ಲಿಯೂ ಯಾರೂ ಇಲ್ಲ. ಆದ್ದರಿಂದ ನಮ್ಮ ರಾಜನಾದ ಸುಗ್ರೀವನು ನಿನ್ನನ್ನು ಕುರಿತು “ಜಾನಕಿಯನ್ನು ಶ್ರೀರಾಮನಿಗೆ ತಂದೊಪ್ಪಿಸು”ವಂತೆ ತಿಳಿಸಿರುತ್ತಾನೆ. ಹಾಗೆ ಮಾಡುವುದು ನಿನಗೂ ಶ್ರೇಯಸ್ಕರ. ಪತಿವ್ರತೆಯಾದ ಸೀತಾದೇವಿ ಪಂಚಾಸ್ಯ ಪನ್ನಗಿಯಿದ್ದಂತೆ. ಆಕೆಯನ್ನು ಕೆಣಕಿ ನಿನ್ನ ಪ್ರಾಣಗಳನ್ನು ಕಳೆದುಕೊಳ್ಳಬೇಡ. ನೀನು ಗಳಿಸಿರುವ ಪುಣ್ಯವೆಲ್ಲವೂ ಈ ಪರಸ್ತ್ರೀಮೋಹದಿಂದ ನಾಶವಾಗಿ ಹೋಗುತ್ತದೆ. ಬ್ರಹ್ಮನು ನಿನಗೆ ಸರ್ವಾವಧ್ಯತ್ವವನ್ನು ಕರುಣಿಸಿರುವನಾದರೂ ಈ ಪಾಪವು ಆ ವರದ ಬೇರನ್ನು ಕೊಯ್ದುಹಾಕಿಬಿಡುತ್ತದೆ. ಶ್ರೀರಾಮನು ಸಾಮಾನ್ಯ ಮಾನವನಲ್ಲವೆಂಬುದು ನಿನಗೆ ವಿದಿತವಾಗಿಯೆ ಇದೆ. ಜನಸ್ಥಾನದಲ್ಲಿ ಆತನನ್ನು ಇದಿರಿಸಿದ ಖರ ದೂಷಣಾದಿ ಹದಿನಾಲ್ಕು ಸಹಸ್ರ ರಕ್ಕಸರನ್ನೂ ಒಬ್ಬನೆ ಕೊಂದನೆಂದರೆ ಅದು ಸಾಮಾನ್ಯ ಮನುಷ್ಯನಿಂದ ಸಾಧ್ಯವಾದ ಕಾರ್ಯವೆ? ನಿನ್ನಂತಹ ಶೂರರನ್ನು ಸಪ್ತಸಮುದ್ರಗಳಲ್ಲಿಯೂ ಅದ್ದಿತಂದ ವಾಲಿಯನ್ನು ಶ್ರೀರಾಮನ ಒಂದೇ ಬಾಣ ಆಹುತಿ ತೆಗೆದುಕೊಂಡಿತೆಂದರೆ ಅದು ಸಾಮಾನ್ಯ ಬಲವೆ? ಆದ್ದರಿಂದ ಬಲವದ್ವಿರೋಧ ಬೇಡ. ನಿನ್ನ ಶಕ್ತಿ ಸಾಮರ್ಥ್ಯಗಳು ನನ್ನಂತಹ ಮುಂದೆ ಸಹ ನಡೆಯಲಾರದು. ನಾನು ಮನಸ್ಸು ಮಾಡಿದರೆ ನಿನ್ನೊಡನೆ ಈ ಸಮಸ್ತ ಲಂಕೆಯನ್ನೂ ಭಸ್ಮಮಾಡಿಬಿಡಬಲ್ಲೆ. ಆದರೆ ಸೀತೆಯ ಚೋರನನ್ನು ತಾನೇ ಸಂಹರಿಸುವುದಾಗಿ ಶ್ರೀರಾಮನು ಪ್ರತಿಜ್ಞೆ ಮಾಡಿರುವುದರಿಂದ ನಾನು ಆ ಕಾರ್ಯಕ್ಕೆ ಕೈಹಾಕುವಂತಿಲ್ಲ. ರಾಕ್ಷಸ ರಾಜೇಂದ್ರ, ಸಮಸ್ತ ಭೋಗಭಾಗ್ಯಗಳಿಗೂ ನೆಲೆಮನೆಯಂತಿರುವ ಈ ಲಂಕೆಯನ್ನು ನರಕಕ್ಕೆ ತಳ್ಳಬೇಡ. ಶ್ರೀರಾಮನೊಡನೆ ದ್ವೇಷವನ್ನು ಕಟ್ಟಿಕೊಳ್ಳಬೇಡ. ಇಹಪರಗಳೆರಡನ್ನೂ ನಾಶಮಾಡಿಕೊಳ್ಳುವುದು ವಿವೇಕವಲ್ಲ. “