ರಾಕ್ಷಸರ ಮನೆಗಳ ಮೇಲೆಲ್ಲಾ ಕುಪ್ಪಳಿಸಿ ಬೆಂಕಿ ಹೊತ್ತಿಸಿದ್ದಾಯ್ತು.

ರಾಕ್ಷಸ ವಧಾನಂತರ ಹನುಮಂತನು ಅಲ್ಲಿಯೆ ಕ್ಷಣಕಾಲ ನಿಂತು ಲಂಕಾನಗರವನ್ನೆಲ್ಲಾ ಒಮ್ಮೆ ಕಣ್ತುಂಬ ನೋಡಿದನು. ಬಾಲದಲ್ಲಿ ಅಗ್ನಿ ಹೊಳೆಯಿತು. “ಈ ಯಜ್ಞೇಶ್ವರ ಇಷ್ಟು ತಂಪಾಗಿದ್ದುಕೊಂಡು ನನಗೆ ಮಹೋಪಕಾರ ಮಾಡಿದ್ದಾನೆ. ನಾನೇಕೆ ಈತನಿಗೆ ಈ ಊರನ್ನೆಲ್ಲಾ ಆಹುತಿಯಾಗಿ ಕೊಡಬಾರದು? ನನಗೆ ಮಹದುಪಕಾರ ಮಾಡಿದ ಈತನನ್ನು ಸಂತೋಷಪಡಿಸುವುದು ನನ್ನ ಕರ್ತವ್ಯವಲ್ಲವೆ?” ಹೀಗೆಂದುಕೊಂಡು ಹನುಮಂತನು ನಿಂತಲ್ಲಿಂದ ಒಮ್ಮೆ ಗಗನಕ್ಕೆ ಕುಪ್ಪಳಿಸಿ ಅಲ್ಲಿಂದ ಪ್ರಹಸ್ತನ ಮನೆಯ ಮೇಲೆ ಇಳಿದನು. ರಾವಣನ ಮುಖ್ಯಮಂತ್ರಿಯ ಮನೆಗೇ ಮೊದಲು ಅಗ್ನಿಪ್ರವೇಶವಾಯಿತು. ಆ ಬಳಿಕ ಆತನು ಮಹಾಪಾರ್ಶ್ವನ ಮನೆಗೆ ಹಾರಿ ಅದಕ್ಕೆ ಬೆಂಕಿಯಿಟ್ಟನು. ತರುವಾಯ ಕ್ರಮವಾಗಿ ವಜ್ರ ದಂಷ್ಟ್ರ, ಶುಕಸಾರಣರು, ರಾಜಕುಮಾರನಾದ ಇಂದ್ರಜಿತು, ಜಂಬುಮಾಲಿ, ಸುಮಾಲಿ, ರಶ್ಮಿಕೇತು, ಸೂರ್ಯಶತ್ರು, ಯುದ್ಧೋನ್ಮತ್ತ, ಧ್ವಜಗ್ರೀವ, ಕುಂಭಕರ್ಣ, ಬ್ರಹ್ಮಶತ್ರು, ವರಾಂತಕ ಇತ್ಯಾದಿ ರಾಕ್ಷಸರ ಮನೆಗಳ ಮೇಲೆಲ್ಲಾ ಕುಪ್ಪಳಿಸಿ ಕುಪ್ಪಳಿಸಿ ಬೆಂಕಿ ಹೊತ್ತಿಸಿದ್ದಾಯಿತು. ವಿಭೀಷಣನ ಮನೆಯೊಂದನ್ನು ಬಿಟ್ಟು ಉಳಿದ ರಾಕ್ಷಸಗೃಹಗಳೆಲ್ಲಾ ಯಜ್ಞೇಶ್ವನಿಗೆ ಆಹುತಿಯಾಗಿಹೋದುವು. ಸುಡುವ ಸರದಿಯಲ್ಲಿ ರಾವಣನದೇ ಕಡೆಯ ಮನೆ. ಅದುವರೆಗೂ ರಾವಣನಿಗೆ ಹೆದರಿ ಹಿಮ್ಮೆಟ್ಟಿದ ಗಾಳಿ ಬೆಂಕಿಗಳಿಗೆ ಹನುಮಂತನ ದಯೆಯಿಂದ ಈಗ ಧೈರ್ಯ ಬಂದಿತೆಂದು ತೋರುತ್ತದೆ. ಎರಡೂ ಒಟ್ಟಿಗೆ ಸೇರಿ ರಾವಣನ ಮೇಲೆ ಸೇಡು ತೀರಿಸಿಕೊಳ್ಳುವಂತೆ ತೋರುತ್ತಿತ್ತು. ಆ ಅರಮನೆ ಹೊತ್ತಿ ಉರಿಯುತ್ತಿದ್ದರೆ, ಬಂಗಾರದ ಕಿಟಕಿಗಳೂ ಮುತ್ತಿನ ಕುಸುರಿಗೆಲಸಗಳೂ ಕಲಾನೈಪುಣ್ಯಗಳೂ ಸುಟ್ಟು ಸುಟ್ಟು ಭಸ್ಮವಾಗಿ ಹೋದುವು. ಪುಣ್ಯವು ಕ್ಷಯಿಸದ ಮೇಲೆ ಭೂಮಿಗುರುಳುವ ಸಿದ್ಧಪುರುಷರ ವಿಮಾನಗಳಂತೆ ಅರಮನೆಗಳ ಉಪ್ಪರಿಗೆಗಳೆಲ್ಲವೂ ಕಳಚಿ ಬಿದ್ದುಹೋದುವು. ರಾಕ್ಷಸರೆಲ್ಲರೂ ಜೀವವನ್ನು ಉಳಿಸಿಕೊಳ್ಳುವುದಕ್ಕಾಗಿ ದಿಕ್ಕಾಪಾಲಾಗಿ ಓಡುತ್ತಿದ್ದರು. ಜನ “ಅಯ್ಯೊ ಇವನು ಕಪಿಯಲ್ಲ; ಸಾಕ್ಷಾತ್ ಅಗ್ನಿಯೆ ಕಪಿರೂಪದಿಂದ ಈ ಲಂಕೆಗೆ ಬಂದಿದ್ದಾನೆ” ಎಂದು ಮೊರೆಯಿಟ್ಟರು.

ಊರೆಲ್ಲವೂ ಹೊತ್ತಿ ಧಗಧಗ ಉರಿಯುತ್ತಿದ್ದರೆ ಹನುಮಂತನ ಕಣ್ಣಿಗೆ ಅದೊಂದು ವಿನೋದ. ಆದರೆ ಊರಲ್ಲಿ ಎಂತಹ ಹಾಹಾಕಾರ! ಹಾಲು ಕುಡಿಯುವ ಎಳೆಯ ಮಕ್ಕಳನ್ನು ಎತ್ತಿಕೊಂಡಿದ್ದ ರಾಕ್ಷಸಾಂಗನೆಯರು ಅವುಗಳನ್ನು ಎತ್ತಿಕೊಂಡಿದ್ದಂತೆಯೆ ಬಿರಿಹೊಯ್ದ ಕೂದಲುಗಳೊಡನೆ ಓಡಿಬರುತ್ತಾ ಬೆಂಕಿಗೆ ಸಿಕ್ಕಿ ಬೆಂದುಹೋಗುತ್ತಿದ್ದರು. ಕೆಲವರು ಹೆಂಗಸರು ಬೆಂಕಿಯ ಜ್ವಾಲೆಯನ್ನು ಸಹಿಸಲಾರದೆ ಉಪ್ಪರಿಗೆಯ ಮೇಲಿನ ಕಿಟಕಿಗಳಿಂದ ಕೆಳಕ್ಕೆ ಹಾರಿ, ಮೇಘದಿಂದ ಬೀಳುವ ಮಿಂಚಿನಂತೆ ಅಲ್ಪಾಯುಗಳಾಗಿ ಹೋದರು. ರತ್ನಖಚಿತವಾದ ಬಂಗಾರದ ಕಿಟಕಿಗಳೆಲ್ಲವೂ ಕರಗಿ ಕೆಳಗಿಳಿಯುತ್ತಿದ್ದುವು. ಎಷ್ಟು ಜನ ರಾಕ್ಷಸರು ಆ ಬೆಂಕಿಯಲ್ಲಿ ಪತನವಾಗಿ ಹೋದರೊ ಯಾರು ಬಲ್ಲರು? ಜ್ವಾಲೆಗಳು ಮೇಘವನ್ನು ಮುಟ್ಟುತ್ತಿವೆ. ಗುಡುಗಿನಂತಹ ಧ್ವನಿಹುಟ್ಟಿ ಬ್ರಹ್ಮಾಂಡವೆ ಸಿಡಿದುಹೋಗುವುದೊ ಎಂಬಂತೆ ಭಾಸವಾಗುತ್ತಿದೆ. ಬೆಂಕಿಯ ಬೇಗೆಯಲ್ಲಿ ಸಿಕ್ಕಿ ರೋದಿಸುತ್ತಿರುವ ಪ್ರಾಣಿ ಮಾತ್ರಗಳ ಧ್ವನಿಯಿಂದ ಲಂಕೆಯೆ ‘ಗೋಳೋ’ ಎಂದು ಅಳುವಂತೆ ಕೇಳಿಸುತ್ತಿದೆ – “ಹಾ, ಅಪ್ಪಾ! ಹಾ, ಅಮ್ಮಾ! ಅಯ್ಯೋ ಮಗನೆ! ಅಕಟಾ! ಪ್ರಾಣಕಾಂತ! ಹಾ ಜೀವದ ಗೆಳೆಯ! ಅಯ್ಯೋ ಜೀವ ಹೋಗುತ್ತಿದೆ – ಏನುಮಾಡಲಿ? ಎಲ್ಲಿ ಹೋಗಲಿ? ಯಾರೂ ಕಾಯುವರಿಲ್ಲವೆ? ಅಯ್ಯೋ ಅಯ್ಯೋ!” ಎಲ್ಲೆಲ್ಲಿಯೂ ಆಕ್ರಂದನ.

ಹನುಮಂತನು ತನ್ನ ಪ್ರಚಂಡ ಸಾಹಸದ ಫಲವನ್ನು ಕಣ್ದಣಿಯ ನೋಡಿದನು. ಬಂದ ಕಾರ್ಯ ಸಫಲವಾಯಿತೆಂದುಕೊಂಡನು. “ಅಶೋಕವನವನ್ನು ಧ್ವಂಸಮಾಡಿದೆ, ರಾಕ್ಷಸರನ್ನು ಸಂಹರಿಸಿದೆ, ಲಂಕಾನಗರಿಯನ್ನು ಬೂದಿಮಾಡಿದೆ; ಇನ್ನು ಹಿಂತಿರುಗಬೇಕು” ಎಂದು ಆತನು ನಿಶ್ಚಯಿಸಿದನು. ಅಷ್ಟರಲ್ಲಿ ಆತನ ಮನಸ್ಸಿನಲ್ಲಿ ಇನ್ನೊಂದು ದಿಗಿಲು ಹುಟ್ಟಿತು. “ಎಲಾ! ಎಂತಹ ಪ್ರಮಾದವಾಯಿತು! ಸ್ವಲ್ಪವೂ ಹಿಂದುಮುಂದನ್ನು ಆಲೋಚಿಸದೆ ಈ ಲಂಕಾಪಟ್ಟಣವನ್ನೆಲ್ಲಾ ಸುಟ್ಟುಹಾಕಿದೆನಲ್ಲಾ! ಶ್ರೀರಾಮ ಪತ್ನಿಯಾದ ಸೀತಾದೇವಿ ಇಲ್ಲಿಯೆ ಇರುವಳೆಂಬ ಪ್ರಜ್ಞೆಯಾದರೂ ನನಗೆ ಬೇಡವೆ? ನಾನು ಎಂತಹ ನೀಚಕಾರ್ಯ ಮಾಡಿದೆ? ಸೀತಾಮಾತೆಯೇನಾದರೂ ಅಗ್ನಿಗೆ ಆಹುತಿಯಾಗಿಹೋಗಿದ್ದರೆ! ಮತಿಗೇಡಿಯಾಗಿ ಸ್ವಾಮಿಕಾರ್ಯವನ್ನು ವ್ಯರ್ಥಗೊಳಿಸಿದಂತಾಗುವುದಿಲ್ಲವೆ? ನಾನು ಪಟ್ಟ ಕಷ್ಟವೆಲ್ಲವೂ ನಿರರ್ಥಕವಾದಂತಾಗುವುದಿಲ್ಲವೆ? ಎಷ್ಟೋ ಪ್ರಯಾಸದಿಂದ ಸಾಧಿಸಿದ ಮಹಾಕಾರ್ಯವನ್ನು ಸ್ವಲ್ಪ ಅಜಾಗರೂಕತೆಯಿಂದ ಅನ್ಯಾಯವಾಗಿ ಹಾಳು ಮಾಡಿಬಿಟ್ಟೆನಲ್ಲಾ! ಈ ಲಂಕಾನಗರವೆಲ್ಲವೂ ಭಸ್ಮವಾಗಿ ಹೋಗಿರುವಾಗ ಸೀತಾದೇವಿಯೊಬ್ಬಳು ಮಾತ್ರ ಉಳಿಯಲು ಸಾಧ್ಯವೆ? ಆಕೆ ಹತಳಾಗಿರುವುದೆ ನಿಜ. ಈಗೇನು ಮಾಡಲಿ? ಬೆಂಕಿಯಲ್ಲಿ ಬಿದ್ದು ಪ್ರಾಣವನ್ನು ನೀಗಲೆ? ಸಮುದ್ರದಲ್ಲಿ ಬಿದ್ದು ಜಲಚರಗಳಿಗೆ ಆಹಾರವಾಗಲೆ? ಕೆಲಸವನ್ನು ಕೆಡಿಸಿ ಹಾಳುಮಾಡಿ ಇನ್ನು ಶ್ರೀರಾಮನಿಗೆ ಮುಖ ತೋರುವುದು ಹೇಗೆ? ಕಪಿಬುದ್ಧಿ ಬಹಳ ಚಪಲವೆಂಬಮಾತು ನನ್ನಿಂದ ಸಾರ್ಥಕವಾಯಿತು. ಸೀತಾದೇವಿ ಸತ್ತುಹೋದಳೆಂಬ ಸುದ್ದಿಯನ್ನು ಕೇಳಿದರೆ ಶ್ರೀರಾಮನು ಜೀವವನ್ನಿಟ್ಟುಕೊಂಡಾನೆ? ಲಕ್ಷ್ಮಣನು ಬದುಕಿಯಾನೆ? ಅವರಿಬ್ಬರೂ ಉಳಿಯದ ಮೇಲೆ ಸುಗ್ರೀವನು ಜೀವಿಸಿಯಾನೆ? ಬಂಧುಮಿತ್ರರೊಡನೆ ಆತನೂ ಸತ್ತುಹೋಗುತ್ತಾನೆ. ಆ ಕಡೆ, ಈ ಸುದ್ದಿಯನ್ನು ಕೇಳಿ ಅಯೋಧ್ಯೆಯಲ್ಲಿರುವ ಭರತ ಶತ್ರುಘ್ನರೂ ಬಂಧುಬಾಂಧವರೊಡನೆ ಪ್ರಾಣತ್ಯಾಗ ಮಾಡುತ್ತಾರೆ. ಅತ್ತ ಇಕ್ಷ್ವಾಕುವಂಶ, ಇತ್ತ ವಾನರ ವಂಶ – ಎರಡೂ ನಾಶವಾಗಲು ನಾನು ಕಾರಣನಾದೆ. ”

ಹನುಮಂತನು ಹೀಗೆ ಒಳಗುದಿಯಿಂದ ಅಸಹ್ಯ ವೇದನೆಗೆ ಒಳಗಾಗಿರಲು ಆತನ ಬಲಗಣ್ಣು ಬಲಭುಜಗಳು ಹಾರಿದುವು. ಈ ಶುಭನಿಮಿತ್ತವನ್ನು ಕಂಡು ಆತನ ಮನಸ್ಸಿಗೆ ಸ್ವಲ್ಪ ಸಮಾಧಾನವಾಯಿತು. “ಸೀತಾದೇವಿ ಹೇಗೆ ಸತ್ತಾಳು! ಆಕೆ ಅಗ್ನಿಯಂತೆ ನಿರ್ಮಲಳಾದ ಪತಿವ್ರತೆ. ಅಗ್ನಿ ತಾನೆ ಆಕೆಯನ್ನು ಹೇಗೆ ಮುಟ್ಟಿಯಾನು? ಮಹಾತ್ಮನಾದ ಶ್ರೀರಾಮನ ಭಾರ್ಯೆಗೆ ಅಮಂಗಳವುಂಟೆ? ಶ್ರೀರಾಮನ ದಯೆಗೆ ಪಾತ್ರನಾದ ನನ್ನನ್ನೆ ಅಗ್ನಿ ಸುಡಲಿಲ್ಲ. ಇನ್ನು ಸೀತಾಮಾತೆಯನ್ನು ಸೋಕುವುದೆಂದರೇನು? ಆಕೆ ಖಂಡಿತವಾಗಿಯೂ ದಗ್ಧಳಾಗಿಲ್ಲ” ಎಂದು ಆತನು ತನಗೆ ತಾನೆ ಸಮಾಧಾನ ಹೇಳಿಕೊಂಡನು. ಅಷ್ಟರಲ್ಲೆ ಮೇಲ್ಗಡೆ ಆಕಾಶದಲ್ಲಿ ಚಾರಣರು ಪರಸ್ಪರ ಮಾತನಾಡಿಕೊಳ್ಳುತ್ತಿದ್ದುದು ಹನುಮಂತನಿಗೆ ಕೇಳಿಸಿತು. ಅವರು ಹನುಮಂತನನ್ನು ಹೊಗಳುತ್ತಾ “ಆಹಾ! ಆಂಜನೇಯನು ರಾಕ್ಷಸ ಗೃಹಗಳನ್ನೆಲ್ಲಾ ಸುಟ್ಟು ಬೂದಿಮಾಡಿದನು. ಎಂತಹ ಅಸಾಧ್ಯವಾದ ಕಾರ್ಯವನ್ನು ಆತನು ಸಾಧಿಸಿದನು! ಸ್ತ್ರೀಬಾಲವೃದ್ಧರಾದಿಯಾಗಿ ರಾಕ್ಷಸರೆಲ್ಲರೂ ಓಡಿಹೋಗುತ್ತಾ ಗೋಳಾಡುವ ಧ್ವನಿ ಪರ್ವತಕಂದರಗಳಲ್ಲೆಲ್ಲಾ ತುಂಬಿಹೋಗಿದೆ. ಇಂತಹ ಕ್ಷೋಭೆಯಲ್ಲಿಯೂ ಸೀತಾದೇವಿ ಕೂದಲೂ ಕೊಂಕದೆ ಸುಖವಾಗಿರುವಳಲ್ಲವೆ? ಇಂತಹ ಆಶ್ಚರ್ಯವನ್ನು ನಾವು ಹಿಂದೆ ಎಂದೂ ಕಂಡಿರಲಿಲ್ಲ” ಎಂದು ಮಾತನಾಡುತ್ತಿದ್ದರು. ಅವರ ಮಾತುಗಳನ್ನು ಕೇಳಿದ ಮೇಲಂತೂ ಹನುಮಂತನಿಗೆ ಸಂಪೂರ್ಣ ಧೈರ್ಯ ಬಂದಂತಾಯಿತು. ಆತನು ತಾನು ಹೊರಡುವ ಮುನ್ನ ಒಮ್ಮೆ ದೇವಿಯನ್ನು ಕಣ್ಣಾರೆ ಕಂಡೆ ಹೋಗಬೇಕೆಂದು ನಿಶ್ಚಯಿಸಿಕೊಂಡನು.