ಹನುಮಂತನು ತನ್ನ ನಿಶ್ಚಯದಂತೆ ಸೀತಾಮಾತೆಯ ಬಳಿಗೆ ಹೋಗಿ ಆಕೆಗೆ ನಮಸ್ಕರಿಸಿ “ಅಮ್ಮಾ, ಅಪಾಯ ಮಧ್ಯದಲ್ಲಿಯೂ ನೀನು ಕ್ಷೇಮದಿಂದಿರುವುದು ನನ್ನ ಪರಮಭಾಗ್ಯವೆ ಸರಿ” ಎಂದನು. ಪ್ರಯಾಣಸನ್ನದ್ಧನಾಗಿರುವ ಆತನನ್ನು ಕುರಿತು ಜಾನಕಿ “ಮಗು, ಮಾರುತಿ, ನೀನೆಂತಹ ಸಮರ್ಥನು! ನೀನು ಇಲ್ಲಿ ನಡೆಸಿದ ಅದ್ಭುತ ಕಾರ್ಯಗಳು ನಿನ್ನ ಪರಾಕ್ರಮಕ್ಕೆ ಕಳಶವಿಟ್ಟಂತಿವೆ! ಇಲ್ಲಿರುವ ರಾಕ್ಷಸರನ್ನೆಲ್ಲಾ ಸಂಹರಿಸಿ, ನನ್ನನ್ನು ಶ್ರೀರಾಮನ ಬಳಿಗೆ ಕರೆದೊಯ್ಯಲು ನೀನೊಬ್ಬನೆ ಸಾಕು. ನೀನು ಅಂತಹ ಸಮರ್ಥನೆ ಸರಿ. ನೀನೀಗ ಶ್ರೀರಾಮನನ್ನು ಕರೆತಂದು ಅವನಿಂದ ಈ ಶತ್ರು ಸೈನ್ಯವನ್ನೆಲ್ಲಾ ನಾಶಗೊಳಿಸಿ ನನ್ನನ್ನು ಉದ್ಧಾರಮಾಡಬೇಕು” ಎಂದಳು. ಹನುಮಂತನು “ಅಮ್ಮಾ, ನಿನ್ನ ದುಃಖವನ್ನು ಹೋಗಲಾಡಿಸಲು ಶ್ರೀರಾಮಚಂದ್ರಮೂರ್ತಿ ಮಹಾವಾನರ ಸೈನ್ಯದೊಡನೆ ಶೀಘ್ರವಾಗಿಯೆ ಪ್ರತ್ಯಕ್ಷನಾಗುತ್ತಾನೆ. ನೀನು ಚಿಂತಿಸಬೇಡ” ಎಂದು ಆಕೆಗೆ ಸಮಾಧಾನ ಹೇಳಿ ಆಕೆಯಿಂದ ಆಶೀರ್ವಾದ ಪೂರ್ವಕವಾಗಿ ಬೀಳ್ಕೊಂಡು ಹಿಂದಕ್ಕೆ ಹೊರಡಲು ಸಿದ್ಧನಾದನು.

ಪ್ರಯಾಣೋನ್ಮುಖನಾದ ಹನುಮಂತನು ಲಂಕಾದ್ವೀಪದಲ್ಲಿದ್ದ ‘ಅರಿಷ್ಟ’ವೆಂಬ ಪರ್ವತವನ್ನು ಹತ್ತಿನಿಂತು ಒಮ್ಮೆ ಸಮುದ್ರರಾಜನಿಗೆ ಸ್ತೋತ್ರವನ್ನು ಸಲ್ಲಿಸಿ, ದೇಹವನ್ನು ಮತ್ತಷ್ಟು ಎತ್ತರವಾಗಿ ಬೆಳಸಿಕೊಂಡನು. ಅನಂತರ ಒಮ್ಮೆ ಉಸಿರನ್ನು ಒಳಕ್ಕೆಳೆದುಕೊಂಡು ಆಕಾಶಕ್ಕೆ ಚಿಮ್ಮಿದನು. ಆ ರಭಸಕ್ಕೆ ಬೆಟ್ಟ ಅಲ್ಲಾಡಿಹೋಯಿತು. ಆಕಾಶವೆಂಬ ಸಮುದ್ರದಲ್ಲಿ ಯಾನಮಾಡುತ್ತಿರುವ ಹಡಗಿನಂತೆ ಆತನು ಗಗನಮಾರ್ಗದಲ್ಲಿ ಪ್ರಯಾಣ ಹೊರಟನು. ಮೇಘಗಳೆಲ್ಲವೂ ಅವನ ದೇಹಕಾಂತಿಯಿಂದ ಬಗೆಬಗೆಯ ಬಣ್ಣಗಳನ್ನು ತಾಳುತ್ತಿದ್ದವು. ಒಮ್ಮೆ ಆತನು ಮೇಘಮಾರ್ಗದಲ್ಲಿ ಮರೆಯಾಗುವನು, ಮತ್ತೊಮ್ಮೆ ಪ್ರಕಾಶಮಾನವಾದ ಚಂದ್ರನಂತೆ ಮೇಘಗಳಿಂದ ಹೊರಗೆಬರುವನು. ಹೀಗೆ ಹಾರಿಹೋಗುತ್ತಿರುವಾಗ ದಾರಿಯಲ್ಲಿ ಮೈನಾಕಪರ್ವತ ಸಮುದ್ರದಿಂದ ಮೇಲಕ್ಕೆದ್ದು ನಿಂತಿರುವುದು ಕಾಣಿಸಿತು. ಅದನ್ನು ಸನ್ಮಾನ ಮಾಡುವುದಕೋಸ್ಕರ ಒಮ್ಮೆ ಅದನ್ನು ಅಲ್ಲೆ ಸವರಿ, ಮತ್ತೆ ಬಿಲ್ಲಿನಿಂದ ಹಾರುವ ಅಂಬಿನಂತೆ ಮುಂದೆ ಹೋದನು. ಆ ಪರ್ವತವನ್ನು ಕಾಣುತ್ತಲೆ ಆತನು ಉತ್ಸಾಹ ಇಮ್ಮಡಿಸಿತ್ತು. ಈಗ ಮುಂದೆ ಮಹೇಂದ್ರಪರ್ವತ ಕಾಣಿಸಲು ಆತನ ಆನಂದ ಮತ್ತಷ್ಟು ವೃದ್ಧಿಯಾಗಿ ಒಮ್ಮೆ ಸಿಂಹನಾದಮಾಡಿದನು. ದಶದಿಕ್ಕುಗಳಲ್ಲಿಯೂ ಪ್ರತಿಧ್ವನಿತವಾಗಿ ಆ ಧ್ವನಿ ಸಮುದ್ರದ ಉತ್ತರದಂಡೆಯಲ್ಲಿ ತನಗಾಗಿ ಕಾದುಕುಳಿತಿದ್ದ ವಾನರವೀರರಿಗೆ ಕೇಳಿಸಿತು.

ಸುಗ್ರೀವನು ಕೊಟ್ಟ ಅವಧಿ ಮುಗಿದುಹೋಗಿತ್ತು. ಆದುದರಿಂದ ಅಂಗದ ಜಾಂಬವಾದಿಗಳು ಚಿಂತಿಸಿ ಚಿಂತಿಸಿ ದೀನರಾಗಿಹೋಗಿದ್ದರು. ಹನುಮಂತನ ಸಿಂಹಘರ್ಜನೆಯನ್ನು ಕೇಳಿದೊಡನೆ ಅವರಲ್ಲಿ ನೂತನ ಉತ್ಸಾಹವೊಂದು ಸಂಚರಿಸಿದಂತಾಯಿತು. ಅದು ಹನುಮಂತನ ಧ್ವನಿಯೆ ನಿಜ! ಜಾಂಬವನು ವಾನರರನ್ನೆಲ್ಲಾ ಕರೆದು, “ಎಲೈ ವೀರರೆ, ಹನುಮಂತನು ನಿಜವಾಗಿಯೂ ಕೃತಕಾರ್ಯನಾಗಿಯೆ ಬರುತ್ತಿರುವನು. ಆತನ ಕಂಠಧ್ವನಿಯೆ ಆತನ ವಿಜಯವನ್ನು ಸೂಚಿಸುತ್ತಿದೆ. ಇದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ” ಎಂದು ಹೇಳಿದನು. ಅದನ್ನು ಕೇಳಿ ವಾನರರು ಕುಳಿತಲ್ಲಿಯೆ ನೆಗೆಯಲಾರಂಭಿಸಿದರು. ಹನುಮಂತನನ್ನು ಕಾಣುವೆವೆಂಬ ಸಂತೋಷದಿಂದ ಗಿಡದಿಂದ ಗಿಡಕ್ಕೆ, ಬಂಡೆಯಿಂದ ಬಂಡೆಗೆ ಹಾರಿ ಹಾರಿ ಕುಣಿದಾಡಿದರು. ಅದೋ ಗರುಡನಂತೆ ಹಾರಿಬರುತ್ತಿರುವ ಹನುಮಂತ! “ಜಯ ಹನುಮಂತನಿಗೆ, ಜಯ ಆಂಜನೇಯನಿಗೆ, ಜಯ ಮಾರುತ ಪುತ್ರನಿಗೆ” ಎಂದು ಎಲ್ಲರೂ ಮೇಲಕ್ಕೆ ಕೈಯೆತ್ತಿ ನಮಸ್ಕರಿಸುತ್ತಾ ಹನುಮಂತನನ್ನು ಪುರಸ್ಕರಿಸಿದರು. ಹಾರಿಬರುತ್ತಿದ್ದ ಆಂಜನೇಯನು ಆ ಪರ್ವತದ ಮಧ್ಯದಲ್ಲಿದ್ದ ಝರಿಯಲ್ಲಿ ದೊಡ್ಡ ಬೆಟ್ಟದಂತೆ ಧುಮ್ಮಿಕ್ಕಿದನು. ಕಪಿನಾಯಕರೆಲ್ಲರೂ ಆತನ ಸುತ್ತಲೂ ಮುತ್ತಿಕೊಂಡರು. ಹನುಮಂತನು ನೀರಿನಿಂದ ಮೇಲಕ್ಕೆದ್ದು ಹಿರಿಯನಾದ ಜಾಂಬವನಿಗೂ ಯುವರಾಜನಾದ ಅಂಗದನಿಗೂ ನಮಸ್ಕರಿಸಿದನು. ಆ ವೇಳೆಗೆ ಉಳಿದ ವಾನರರು ದಣಿದು ಬಂದಿದ್ದ ಆತನಿಗೆ ಫಲಾಹಾರಕ್ಕಾಗಿ ತಂದಿಕ್ಕಿದರು. “ಸೀತಾದೇವಿಯನ್ನು ಕಂಡೆ” ಎಂದು ಸಂಕ್ಷೇಪವಾಗಿ ಸೂಚಿಸಿ, ಆತನು ಒಂದು ರಮಣೀಯವಾದ ಪ್ರದೇಶದಲ್ಲಿ ವಿಶ್ರಮಿಸುತ್ತಾ ಕುಳಿತುಕೊಂಡನು.

ವಿಶ್ರಾಂತಿ ಫಲಾಹಾರಗಳಾದಮೇಲೆ ಹನುಮಂತನು ತಾನು ಹೋಗಿ ಬಂದ ಸಮಾಚಾರವನ್ನೆಲ್ಲಾ ವಿಸ್ತಾರವಾಗಿ ಅಂಗದಾದಿಗಳಿಗೆ ವಿವರಿಸಿ ಹೇಳಿದನು. “ಎಲೆ ವಾನರೋತ್ತಮರಿರಾ, ನಾನು ಲಂಕೆಯನ್ನು ಸೇರಿ ರಾವಣಾಸುರನ ಅಶೋಕವನದಲ್ಲಿದ್ದ ಸೀತಾದೇವಿಯನ್ನು ಕಂಡೆ. ಭಯಂಕರಾಕಾರದ ರಾಕ್ಷಸಿಯರು ಆಕೆಯನ್ನು ಅಹೋರಾತ್ರಿಯೂ ಕಾಯುತ್ತಿದ್ದಾರೆ. ಪಾಪ! ಆಕೆ ಪತಿವಿರಹದಿಂದ ಬಹು ದುಃಖಿತೆಯಾಗಿದ್ದಾಳೆ. ತಲೆಗೂದಲೆಲ್ಲವೂ ಜಡೆಗಟ್ಟಿಹೋಗಿದೆ; ಉಪವಾಸದಿಂದ ಮೈಯೆಲ್ಲಾ ಸೊರಗಿ ಹೋಗಿದೆ; ದೇಹವೆಲ್ಲವೂ ಮಲಿನವಾಗಿಹೋಗಿದೆ. ನಿರಂತರವೂ ಶ್ರೀರಾಮಚಂದ್ರನ ಧ್ಯಾನದಲ್ಲಿಯೆ ತಲ್ಲೀನಳಾಗಿದ್ದಾಳೆ” ಎಂದನು. “ಸೀತೆಯನ್ನು ಕಂಡೆ!” ಎಂಬ ಅಮೃತಸದೃಶವಾದ ಮಾತುಗಳನ್ನು ಕೇಳಿ ವಾನರರ ಆನಂದಕ್ಕೆ ಪಾರವೇ ಇಲ್ಲ. ಕೆಲವರು ಅದನ್ನು ಕೇಳುತ್ತಲೇ ಸಿಂಹನಾದಮಾಡಿದರು, ಮತ್ತೆ ಕೆಲವರು ಸಿಳ್ಳು ಹೊಡೆದರು! ಇನ್ನು ಕೆಲವರು ಗೂಳಿಯಂತೆ ಗುಟುರುಹಾಕಿದರು. ಹಲವರು ತಮ್ಮ ಜಾತಿಗೆ ಸಹಜವಾದ ಕಿಲಕಿಲ ಧ್ವನಿಯನ್ನು ಮಾಡಿದರು! ಕೆಲವು ವಾನರರು ಸಂತೋಷದಿಂದ ತಮ್ಮ ಬಾಲಗಳನ್ನು ನೆಲದಮೇಲೆ ಬಡಿದರು. ಇನ್ನು ಕೆಲವರು ಸಂತೋಷವನ್ನು ತಡೆಯಲಾರದೆ ಓಡಿ ಬಂದು ಹನುಮಂತನನ್ನು ಆಲಿಂಗಿಸಿದರು. ಎಲ್ಲೆಲ್ಲಿಯೂ ಸಂತೋಷ, ಸಂಭ್ರಮ! ಅಂಗದನು ಹನುಮಂತನನ್ನು ಕುರಿತು “ಮಾರುತಿ, ನೀನು ಈ ಮಹಾವಿಸ್ತಾರವಾದ ಸಾಗರವನ್ನು ದಾಟಿ ಹೋಗಿ ಪುನಃ ಹಿಂದಿರುಗಿದೆ. ನಿನ್ನ ಪರಾಕ್ರಮಕ್ಕೆ ಎಣೆಯುಂಟೆ? ನಿನ್ನ ಸ್ವಾಮಿಭಕ್ತಿಯಂತೂ ಅಸದೃಶವಾದುದು. ರಾಮಪತ್ನಿಯನ್ನು ಕಂಡುದು ಪರಮ ಭಾಗ್ಯವೆ ಸರಿ” ಎಂದನು. ಹನುಮಂತನು ತಾನು ನೋಡಿದ ದೃಶ್ಯಗಳು, ಮಾಡಿದ ಕಾರ್ಯಗಳು ಎಲ್ಲವನ್ನೂ ವಿಸ್ತಾರವಾಗಿ ತಿಳಿಸುತ್ತಾ ಹೋದನು. ವಾನರ ವೀರರೆಲ್ಲರೂ ಕೈಜೋಡಿಸಿಕೊಂಡು ಆತನು ಹೇಳುವುದನ್ನೆ ಕೇಳುತ್ತಾ ಕುಳಿತಿದ್ದರು. ಎಲ್ಲರ ಮುಖದಲ್ಲಿಯೂ ತಾಂಡವಾಡುತ್ತಿದ್ದುದು ಆನಂದ, ಸಂಭ್ರಮ!