ಹನುಮಂತನು ಹೇಳಿದ ಸ್ಥೂಲ ವಿಚಾರದಿಂದ ವಾನರರಿಗೆ ತೃಪ್ತಿಯಾಗಲಿಲ್ಲ. ಅವರ ಪರವಾಗಿ ಜಾಂಬವಂತನು ವಾಯುಪುತ್ರನಿಗೆ ಪ್ರಾರ್ಥನೆ ಸಲ್ಲಿಸಿದನು. “ವತ್ಸ ಆಂಜನೇಯ! ನೀನು ಲಂಕೆಗೆ ಹೋಗಿಬಂದ ವೃತ್ತಾಂತವನ್ನು ಇನ್ನೂ ವಿವರವಾಗಿ ತಿಳಿಸು. ಸೀತಾದೇವಿಯನ್ನು ನೀನು ಹೇಗೆ ನೋಡಿದೆ? ಆಕೆ ಯಾವ ಸ್ಥಿತಿಯಲ್ಲಿದ್ದಾಳೆ? ಕ್ರೂರಕರ್ಮಿಯಾದ ರಾವಣ ಅ ಸಾಧ್ವಿಯ ವಿಚಾರದಲ್ಲಿ ಹೇಗೆ ನಡೆದುಕೊಳ್ಳುತ್ತಾನೆ? ಇದೆಲ್ಲವನ್ನೂ ಕೇಳಿದಮೇಲೆ ಶ್ರೀರಾಮಸನ್ನಿಧಿಯಲ್ಲಿ ಎಷ್ಟನ್ನು ಹೇಳಬಹುದು, ಯಾವುದನ್ನು ಹೇಳಬಾರದು, ಎಂಬುದನ್ನು ಈಗಲೆ ನಿರ್ಧರಿಸೋಣ” ಎಂದನು. ಸೀತಾದೇವಿಯ ವೃತ್ತಾಂತವನ್ನು ತಿಳಿಸುವುದೆಂದರೆ ಹನುಮಂತನಿಗೆ ಬಹು ಸಂತೋಷ. ಆಕೆಯನ್ನು ನೆನೆದರೆ ಆತನ ಮೈ ಭಕ್ತಿಯಿಂದ ರೋಮಾಂಚನಗೊಳ್ಳುತ್ತಿತ್ತು. ಆತನು ಮನಸ್ಸಿನಲ್ಲಿಯೆ ಆ ಸತೀಮಣಿಗೆ ನಮಸ್ಕರಿಸಿ, ತಾನು ಪ್ರಯಾಣಮಾಡಿ ಬಂದ ಸಮಾಚಾರವನ್ನು ವಿಸ್ತಾರವಾಗಿ ತಿಳಿಸಲು ಮೊದಲು ಮಾಡಿದನು.

“ಮಿತ್ರರೆ, ನಾನು ಇಲ್ಲಿಂದ ದಕ್ಷಿಣ ತೀರದಲ್ಲಿ ಸೇರುವುದಕ್ಕಾಗಿ ಗಗನಕ್ಕೆ ಹಾರಿದೆನಷ್ಟೆ? ನಾನು ಆಕಾಶಮಾರ್ಗದಲ್ಲಿ ಹಾರಿಹೋಗುತ್ತಿರುವಾಗ ಸುವರ್ಣಮಯವಾದ ಒಂದು ಪರ್ವತ ನನ್ನ ಗಮನಕ್ಕೆ ವಿಘ್ನವನ್ನಾಚರಿಸುವಂತೆ ಸಮುದ್ರದಿಂದ ಮೇಲಕ್ಕೆದ್ದಿತು. ನಾನು ಅದನ್ನು ನಿವಾರಿಸುವುದಕ್ಕಾಗಿ ಬಾಲದಿಂದ ಅಪ್ಪಳಿಸಿದೆ. ಅದರಿಂದ ಆ ಪರ್ವತದ ಶಿಖರ ಪುಡಿಪುಡಿಯಾಯಿತು. ಆಗ ಆ ಪರ್ವತವು ಮೃದುಮಧುರ ದ್ವನಿಯಲ್ಲಿ ‘ಮಗು! ಹನುಮಂತ! ನಾನು ನಿನ್ನ ತಂದೆಯಾದ ವಾಯುದೇವನ ಪರಮಮಿತ್ರ. ಹಿಂದೆ ದೇವೇಂದ್ರನು ಪರ್ವತಗಳ ರೆಕ್ಕೆಗಳನ್ನೆಲ್ಲಾ ಕತ್ತರಿಸುತ್ತಿರಲು ಭಯದಿಂದ ತತ್ತರಿಸುತ್ತಿದ್ದ ನಾನು ನಿನ್ನ ತಂದೆಯ ಸಹಾಯದಿಂದ ಇಲ್ಲಿಗೆ ಹಾರಿಬಂದೆ. ಹೀಗೆ ಉಪಕೃತನಾದ ನಾನು ಈ ಸಮುದ್ರದಲ್ಲಿಯೆ ಬಚ್ಚಿಟ್ಟುಕೊಂಡಿದ್ದೇನೆ. ನನ್ನ ಹೆಸರು ಮೈನಾಕ. ನೀನು ಹೋಗುತ್ತಿರುವ ಶ್ರೀರಾಮ ಕಾರ್ಯಕ್ಕೆ ಸಹಾಯ ಮಾಡುವುದು ನನ್ನ ಕರ್ತವ್ಯ. ಮಹಾ ಧರ್ಮಾತ್ಮನಾದ ಆ ಶ್ರೀರಾಮಚಂದ್ರನು ದೇವೇಂದ್ರಸದೃಶನು. ಇಂತಹ ಶ್ರೀರಾಮನಿಗೆ ನೀನು ದೂತ; ಅಲ್ಲದೆ ವಾಯುಪುತ್ರ. ಈ ಎರಡು ಕಾರಣಗಳಿಂದಲೂ ನಿನಗೆ ಸಹಾಯ ಮಾಡಬೇಕಾದುದು ನನ್ನ ಧರ್ಮ” ಎಂದು ಹೇಳಿತು. ನಾನು ನನ್ನ ಕಾರ್ಯಗೌರವವನ್ನಾತನಿಗೆ ತಿಳಿಸಿ, ಆತನ ಅಪ್ಪಣೆಯನ್ನು ಪಡೆದು ಒಡನೆಯೆ ಮುಂದಕ್ಕೆ ಪ್ರಯಾಣಮಾಡಿದೆ. ಮಾರ್ಗಮಧ್ಯದಲ್ಲಿ ನಾಗಮಾತೆಯಾದ ಸುರಸೆ ನನ್ನನ್ನು ಕಂಡಳು. ಆಕೆ ನನ್ನನ್ನು ಕುರಿತು “ಎಲೈ ಕಪಿವೀರ! ದೇವತೆಗಳು ನಿನ್ನನ್ನು ನನ್ನ ಆಹಾರಕ್ಕಾಗಿಯೇ ನಿಯೋಗಿಸಿರುವರು; ನಿನಗಾಗಿ ನಾನು ಬಹುಕಾಲದಿಂದಲೂ ಕಾಯುತ್ತಿದ್ದೆ. ಈಗ ಬಾ. ನಾನು ನಿನ್ನನ್ನು ತಿನ್ನಬೇಕಾಗಿದೆ” ಎಂದಳು. ನಾನು ಹೋಗುತ್ತಿರುವ ಕಾರ್ಯಗೌರವವನ್ನು ಅವಳಿಗೆ ತಿಳಿಸಿದೆ; ಆಕೆಯೂ ಶ್ರೀರಾಮನ ರಾಜ್ಯಾಧಿಪತ್ಯಕ್ಕೆ ಒಳಪಟ್ಟಿರುವುದರಿಂದ ರಾಮದೌತ್ಯಕ್ಕಾಗಿ ಹೊರಟ ನನಗೆ ಸಹಾಯಮಾಡಬೇಕಾದುದು ಅಗತ್ಯವೆಂದು ತಿಳಿಸಿದೆ; ಕೊನೆಗೆ ಸೀತಾಮಾತೆಯನ್ನು ಕಂಡುಬಂದು ಶ್ರೀರಾಮನಿಗೆ ಸುದ್ದಿಕೊಟ್ಟು ಬರುವವರೆಗಾದರೂ ಕಾಲಾವಕಾಶ ಕೊಡುವಂತೆ ಬೇಡಿಕೊಂಡೆ. ಆದರೂ ಆಕೆ ಹಟವನ್ನು ಬಿಡದೆ ಆ ಕ್ಷಣವೆ ನನ್ನನ್ನು ಭಕ್ಷಿಸಬೇಕೆಂದು ನಿಂತಳು. ಆಕೆಯಿಂದ ತಪ್ಪಿಸಿಕೊಳ್ಳಬೇಕೆಂದು ನಾನು ಹತ್ತು ಯೋಜನ ವಿಸ್ತಾರವಾಗಿದ್ದ ನನ್ನ ದೇಹವನ್ನು ಮತ್ತೂ ದೊಡ್ಡದಾಗಿ ಬೆಳೆಸಿದೆನು. ಆದರೇನು? ಆಕೆಯ ಬಾಯಿ ಅದಕ್ಕೂ ದೊಡ್ಡದಾಗಿ ಅರಳಿತು. ಇದು ಪ್ರಯೋಜನವಿಲ್ಲ ಎಂದುಕೊಂಡು ಅಣುಪ್ರಮಾಣಕ್ಕೆ ನನ್ನ ದೇಹವನ್ನು ಕುಗ್ಗಿಸಿಕೊಂಡು ಕ್ಷಣಮಾತ್ರದಲ್ಲಿ ಆಕೆಯ ಬಾಯನ್ನು ಹೊಕ್ಕು ಹೊರಕ್ಕೆ ಬಂದೆ. ಆಗ ಸುರಸಾದೇವಿ ಸುಪ್ರೀತಳಾಗಿ ನನ್ನನ್ನು ಹರಸಿ ಬೀಳ್ಕೊಟ್ಟಳು. ಅಲ್ಲಿಂದ ಸ್ವಲ್ಪದೂರ ಪ್ರಯಾಣ ಸಾಗುವಷ್ಟರಲ್ಲಿ ಮತ್ತೊಂದು ದೊಡ್ಡ ಕಂಟಕ ಬಂದಿತು. ಅಂತರಿಕ್ಷದಲ್ಲಿ ಹೋಗುತ್ತಿದ್ದ ನನ್ನ ಪ್ರಯಾಣವೆ ಜಗ್ಗನೆ ನಿಂತಿತು. ಕೆಳಗೆ ನೋಡುತ್ತೇನೆ: ಸಮುದ್ರದಲ್ಲಿ ಭಯಂಕರ ರಾಕ್ಷಸಿ ನನ್ನ ನೆರಳನ್ನು ಹಿಡಿದು ನನ್ನ ಗಮನವನ್ನು ತಡೆದಿದ್ದಾಳೆ! ನನ್ನನ್ನು ಹಿಡಿದು ಭಕ್ಷಿಸಲು ತವಕಪಡುತ್ತಿದ್ದ ಅವಳಲ್ಲಿ ಒಳ್ಳೆಯ ಮಾತುಗಳೇನೂ ನಡೆಯುವಂತಿರಲಿಲ್ಲ. ನಾನು ಅಣುರೂಪದಿಂದ ಆ ರಾಕ್ಷಸಿಯ ಹೊಟ್ಟೆಯನ್ನು ಪ್ರವೇಶಿಸಿ ಅಲ್ಲಿ ಪರ್ವತಾಕಾರವಾಗಿ ಬೆಳೆದು ಅಲ್ಲಿ ಅವಳ ಪಕ್ಕೆಲುಬುಗಳನ್ನು ಸೀಳಿಕೊಂಡು ಹೊರಕ್ಕೆ ಬಂದೆ. ಈ ವಿಘ್ನಗಳನ್ನೆಲ್ಲಾ ನಿವಾರಿಸಿಕೊಂಡು ಅಂತೂ ದಕ್ಷಿಣ ಸಮುದ್ರ ತೀರವನ್ನು ಸೇರಿದೆ. ದೂರದಲ್ಲಿ ಲಂಕಾಪಟ್ಟಣ ಕಾಣುತ್ತಿತ್ತು.

“ರಾತ್ರಿ ಕತ್ತಲಾಗುವವರೆಗೂ ಸಮುದ್ರದ ಅಂಚಿನಲ್ಲಿ ಕಾಲಕಳೆದು ಆಮೇಲೆ ಯಾರಿಗೂ ಕಾಣದಂತೆ ಲಂಕಾಪಟ್ಟಣವನ್ನು ಪ್ರವೇಶಿಸಬೇಕೆಂದು ಹೊರಟೆ. ಆದರೆ, ಅಷ್ಟರಲ್ಲಿ ಘೋರರಾಕ್ಷಸಿಯೊಬ್ಬಳು ನನಗೆ ಇದಿರಾಗಿ ನನ್ನನ್ನು ಕೊಲ್ಲುವುದಕ್ಕೆಂದು ಮುಂದೆ ಬಂದಳು. ಆದರೆ ಒಮ್ಮೆ ಎಡಗೈಯಿಂದ ಗುದ್ದಿದೆನೊ ಇಲ್ಲವೊ ಅವಳು ನನಗೆ ಶರಣಾಗತಳಾಗಿ “ಎಲೈ ವೀರನೆ ನಾನೇ ಲಂಕಾಧಿದೇವತೆ. ನನ್ನನ್ನೆ ಸೋಲಿಸಿದ ನೀನು ಇದರಲ್ಲಿರುವ ರಾಕ್ಷಸರನ್ನೆಲ್ಲಾ ಸೋಲಿಸುವುದರಲ್ಲಿ ಸಂದೇಹವಿಲ್ಲ” ಎಂದು ಹೇಳಿ, ನನ್ನನ್ನು ಮುಂದಕ್ಕೆ ಬಿಟ್ಟಳು. ನಾನು ಊರನ್ನು ಪ್ರವೇಶಿಸಿ ರಾತ್ರಿಯೆಲ್ಲಾ ಸೀತಾದೇವಿಗಾಗಿ ಅಲೆದೆ. ರಾವಣನ ಅಂತಃಪುರಕ್ಕೂ ಹೋದೆ. ಆಕೆ ಎಲ್ಲಿಯೂ ಕಾಣಬರಲಿಲ್ಲ. ನಾನು ಚಿಂತೆಯಲ್ಲಿ ಮುಳುಗಿರುವಾಗ ರಾವಣನ ಗೃಹೋದ್ಯಾನ ಕಣ್ಣಿಗೆ ಬಿತ್ತು. ಆ ಸುಂದರವಾದ ವನವನ್ನು ಪ್ರವೇಶಿಸಿ ಒಂದು ದೊಡ್ಡ ಶಿಂಶುಪವೃಕ್ಷವನ್ನು ಹತ್ತಿ ಸುತ್ತಲೂ ನೋಡುವಾಗ ಹತ್ತಿರದಲ್ಲೆ ಒಂದು ಬಾಳೆಯ ತೋಟ ಕಣ್ಣಿಗೆ ಬಿತ್ತು. ನಾನು ಕುಳಿತಿದ್ದ ವೃಕ್ಷಕ್ಕೆ ಸ್ವಲ್ಪದೂರದಲ್ಲಿಯೆ ಕಮಲಮುಖಿಯಾದ ಸೀತಾದೇವಿ ಕಾಣಬಂದಳು. ಮುಖ ಬಾಡಿದೆ; ಮೈಯೆಲ್ಲಾ ಮಲಿನವಾಗಿದೆ; ಉಟ್ಟ ವಸ್ತ್ರ ಕೊಳಕಾಗಿದೆ. ತಲೆಯ ಕೂದಲೆಲ್ಲವೂ ಜಡೆಗಟ್ಟಿಹೋಗಿದೆ; ದುಃಖದಿಂದ ಆಕೆಯ ದೇಹ ಕೃಶವಾಗಿಹೋಗಿದೆ. ಆಕೆಯ ಸುತ್ತಲೂ ವಿಕೃತಾಕಾರದ ರಾಕ್ಷಸಿಯರು ಬೇರೆ. ಹೆಣ್ಣು ಜಿಂಕೆಯನ್ನು ಮುತ್ತಿದ ಹುಲಿಗಳ ತಂಡದಂತೆ ಆ ರಾಕ್ಷಸಿಯರು ಆಕೆಯನ್ನು ಮೇಲಿಂದ ಮೇಲೆ ಹೆದರಿಸುತ್ತಿದ್ದರು. ಇದನ್ನು ತಡೆಯಲಾರದ ಆಕೆ ಆತ್ಮಹತ್ಯೆಮಾಡಿಕೊಳ್ಳಬೇಕೆಂದು ನಿಶ್ಚಯಸಿದ್ದಳು. ದೈವವಶದಿಂದ ನಾನು ಆ ವೇಳೆಗೆ ಅಲ್ಲಿಗೆ ಹೋಗಿದ್ದೆ. ಆಕೆಯ ದುರ್ದಶೆಯನ್ನು ಕಂಡು ಸಂಕಟಪಡುತ್ತಾ ಮರದಲ್ಲಿಯೆ ಅಡಗಿಕೊಂಡಿದ್ದೆ. ಅಷ್ಟರಲ್ಲಿ ಆ ಹತ್ತು ತಲೆಯ ರಾಕ್ಷಸ ತನ್ನ ಸ್ತ್ರೀಪರಿವಾರದೊಡನೆ ಬಹು ಠೀವಿಯಿಂದ ಆಕೆಯ ಬಳಿಗೆ ಬಂದ. ಆ ರಾಕ್ಷಸನನ್ನು ಕಾಣುತ್ತಲೆ, ಪಾಪ, ಸೀತಾಮಾತೆ ತನ್ನ ತೊಡೆಗಳನ್ನು ಉಡುಗಿಸಿಕೊಂಡು, ಉಬ್ಬಿದ ಎದೆಗಳನ್ನು ತೋಳಿನಿಂದ ಅವುಚಿಕೊಳ್ಳುತ್ತಾ ಸಂಕುಚಿತಗಾತ್ರೆಯಾಗಿ ಕುಳಿತಳು. ಆ ಪಾಪಿ ರಾವಣನಿಗೆ ಅವಳ ಸಂಕಟವೇನು ಗೊತ್ತು? ಕಾಮದಿಂದ ಕಂಗೆಟ್ಟಿದ್ದ ಅವನು ಮೊದಲು ಆಕೆಯನ್ನು ದೀನನಂತೆ ಪ್ರಾರ್ಥಿಸುತ್ತಿದ್ದವನು ಕಡೆಗೆ, “ಎಲೆ, ಗರ್ವಿಷ್ಠೆ, ಎಷ್ಟು ಹೇಳಿದರೂ ನೀನು ನನ್ನ ಮಾತುಗಳನ್ನು ಧಿಕ್ಕರಿಸುತ್ತಿರುವೆಯಲ್ಲವೆ? ಇರಲಿ, ನಿನಗೆ ಕೊಟ್ಟಿರುವ ಅವಧಿಯಲ್ಲಿ ಇನ್ನು ಎರಡು ತಿಂಗಳು ಮಾತ್ರ ಉಳಿದಿದೆ. ಅಷ್ಟರಲ್ಲಿ ನೀನು ನನ್ನ ವಶಳಾಗದಿದ್ದರೆ ನಿನ್ನನ್ನು ತಿಂದುಬಿಡುವೆನು” ಎಂದು ಹೆದರಿಸಿದನು. ಅವನ ಹೆದರಿಕೆಗೆ ಜಾನಕಿದೇವಿ ಹೆದರಿಯಾಳೆ? ಆಕೆ “ಛೀ, ನೀಚ! ಧರ್ಮಾತ್ಮಳಾದ ಶ್ರೀರಾಮನ ಪತ್ನಿ ನಾನು. ನನ್ನಲ್ಲಿ ಅವಾಚ್ಯಗಳನ್ನಾಡುವ ನಿನ್ನ ನಾಲಿಗೆ ಸೀಳಬಾರದೆ? ನನ್ನ ಪತಿಯನ್ನು ವಂಚಿಸಿ ನನ್ನನ್ನು ಕದ್ದುತಂದ ಹೇಡಿ! ಆತನ ಇದಿರಿನಲ್ಲಿ ನಿಲ್ಲುವ ಯೋಗ್ಯತೆ ನಿನಗುಂಟೆ?” ಎಂದು ಬೈದಳು. ಇದರಿಂದ ಕುಪಿತನಾದ ಆ ರಾಕ್ಷಸನು ಮುಷ್ಠಿ ಎತ್ತಿಕೊಂಡು ದೇವಿಯನ್ನು ಕೊಲ್ಲುವುದಕ್ಕೆಂದೆ ಹೊರಟನು. ಆದರೆ ಅಷ್ಟರಲ್ಲಿ ಆತನ ರಾಣಿಯಾದ ಮಂಡೋದರಿ.

[1] ಅವನನ್ನು ತಡೆದು ಬುದ್ಧಿ ಹೇಳಿ ಕರೆದೊಯ್ದಳು.

“ರಾವಣ ಅತ್ತ ಹೊರಟುಹೋಗುತ್ತಲೆ ಇತ್ತ ರಾಕ್ಷಸಿಯರು ಸೀತಾದೇವಿಯನ್ನು ನಿರ್ಬಂಧಿಸಲು ಮೊದಲುಮಾಡಿದರು. ಅವರ ಹೆದರಿಕೆಯನ್ನೂ ನಿರ್ಬಂಧವನ್ನೂ ಆಕೆ ಲಕ್ಷಿಸಿಯಾಳೆ! ಕೊನೆಗೆ ಅವರು ಸೀತೆಯನ್ನು ತಿಂದೇಬಿಡಬೇಕೆಂದು ಕೂಗಾಡುತ್ತಿದ್ದರು. ಆ ನೀಚರು ಬಾಯಿಂದ ಆಡಿದಂತೆಯೆ ಮಾಡಿಬಿಡುತ್ತಿದ್ದರೊ ಏನೊ! ಆದರೆ ಅವರ ಮಧ್ಯದಲ್ಲಿದ್ದ ತ್ರಿಜಟೆ ಎಂಬುವಳು ಅವರ ನೀಚಕಾರ್ಯವನ್ನು ತಡೆದು ನಿಲ್ಲಿಸಿದಳು. ಶ್ರೀರಾಮನ ವಿಜಯವನ್ನೂ ರಾಕ್ಷಸ ವಿನಾಶವನ್ನೂ ಸೂಚಿಸುತ್ತಿದ್ದ ತನ್ನ ಕನಸನ್ನು ಆ ರಾಕ್ಷಸಿಯರಿಗೆ ಹೇಳಿ ‘ರಾಮನಿಂದ ನಾವು ಉಳಿದುಕೊಳ್ಳಬೇಕಾದರೆ ಸೀತಾದೇವಿಯನ್ನೆ ಮರೆಹೋಗಬೇಕು’ ಎಂದಳು. ಈ ಮಾತನ್ನು ಕೇಳಿದ ಸೀತಾದೇವಿ ಅವರಿಗೆ ರಕ್ಷಣೆ ನೀಡುವುದಾಗಿ ಭರವಸೆಯಿತ್ತಳು. ಆದರೂ ಆಕೆ ಮನಸ್ಸಿನಲ್ಲಿ ಅನುಭವಿಸುತ್ತಿದ್ದ ಮೂಕವೇದನೆ ನನಗೆ ಗೋಚರವಾಯಿತು. ಆಕೆಯ ದುಃಸ್ಥಿತಿಯನ್ನು ಕಂಡು ಕರುಳು ಮರುಗಿ ಹೋಯಿತು. ನಾನು ಅಲ್ಪಸ್ವಲ್ಪಕ್ಕೆ ಎದೆಗುಂದುವವನಲ್ಲ. ಆದರೂ ಆಕೆಯನ್ನು ಕಂಡಾಗ ಮನಸ್ಸಿಗೆ ನೆಮ್ಮದಿ ತಂದುಕೊಳ್ಳಲಾಗಲಿಲ್ಲ. ಆಕೆಯನ್ನು ಮಾತನಾಡಿಸಿ ಸಮಾಧಾನ ಮಾಡಬೇಕೆಂದುಕೊಂಡು ಅದಕ್ಕೆ ಪೂರ್ವಭಾವಿಯಾಗಿ ಇಕ್ಷ್ವಾಕುವಂಶದವರ ಚರಿತ್ರೆಯನ್ನೂ ಶ್ರೀರಾಮನ ಗುಣಕಥನವನ್ನೂ ಹೇಳುವುದಕ್ಕೆ ತೊಡಗಿದೆ. ಅದನ್ನು ಕೇಳಿದೊಡನೆಯೆ ಆಕೆಯ ಕಣ್ಣುಗಳಲ್ಲಿ ಧಾರಾಕಾರವಾಗಿ ಕಣ್ಣೀರು ಹರಿಯಿತು. ಆಕೆ ನನ್ನನ್ನು ನೋಡಿ ‘ನೀನು ಯಾರು? ಇಲ್ಲಿಗೆ ಏಕೆ ಬಂದೆ? ಹೇಗೆ ಬಂದೆ? ರಾಮನೊಡನೆ ನಿನಗೆ ಸ್ನೇಹವಾದುದು ಹೇಗೆ? ಎಂದು ಮುಂತಾಗಿ ಪ್ರಶ್ನಿಸಿದಳು. ಆಗ ನಾನು ‘ತಾಯಿ, ನಾನು ರಾಮದೂತ. ನನ್ನ ಹೆಸರು ಹನುಮಂತ. ನಿನ್ನನ್ನು ಅರಸುವುದಕ್ಕಾಗಿ ಆತನು ನನ್ನನ್ನು ಕಳುಹಿರುವನು. ಇಗೋ ಈ ಉಂಗುರವನ್ನು ಗುರುತಿಗಾಗಿ ನಿನ್ನಲ್ಲಿಗೆ ಕಳುಹಿಸಿದ್ದಾನೆ. ಈಗ ನಿನ್ನ ಅಪ್ಪಣೆಯಾದಂತೆ ನಡೆಯುತ್ತೇನೆ. ಈಗಲೆ ನಿನ್ನನ್ನು ಕೊಂಡೊಯ್ದು ರಾಮಲಕ್ಷ್ಮಣರ ಬಳಿ ನಿನ್ನನ್ನು ಸೇರಿಸುವುದಕ್ಕೂ ನಾನು ಸಿದ್ಧ’ ಎಂದೆ. ಆಕೆ ‘ಶ್ರೀರಾಮನೆ ಇಲ್ಲಿಗೆ ಬಂದು ರಾವಣನನ್ನು ಕೊಂದು ನನ್ನನ್ನು ಕರೆದೊಯ್ಯಲಿ’ ಎಂದಳು. ಆಗ ನಾನು ಆಕೆಗೆ ನಮಸ್ಕರಿಸಿ, ‘ತಾಯಿ, ನಿನ್ನನ್ನು ಕಂಡೆನೆಂಬುದು ನಂಬುಗೆಯಾಗುವಂತೆ ಶ್ರೀರಾಮನಿಗೆ ಒಂದು ಗುರುತನ್ನು ಕೊಡು ಎಂದು ಕೇಳಿದೆ. ಆಕೆ ಈ ಚೂಡಾಮಣಿಯನ್ನು ನನಗೆ ಕೊಟ್ಟು, ಶ್ರೀರಾಮನಿಗೆ ಮಾತ್ರವೇ ಗೊತ್ತಿರುವ ಕೆಲವು ಏಕಾಂತ ವೃತ್ತಾಂತಗಳನ್ನೂ ನನ್ನ ಕೈಲಿ ಹೇಳಿ ಕಳುಹಿಸಿದ್ದಾಳೆ. ನಾನು ಹೊರಡಲು ಸಿದ್ಧನಾಗುತ್ತಲೆ ಆಕೆ ಕಣ್ಣೀರುಗರೆಯುತ್ತಾ ಮೇಲಿಂದ ಮೇಲೆ ‘ಇಲ್ಲಿನ ವೃತ್ತಾಂತವೆಲ್ಲವನ್ನೂ ಶ್ರೀರಾಮಚಂದ್ರನಿಗೆ ತಿಳಿಸು. ಆತನು ಲಕ್ಷ್ಮಣ ಸುಗ್ರೀವರೊಡನೆ ಶೀಘ್ರವಾಗಿ ಇಲ್ಲಿಗೆ ಬರುವಂತೆ ತಿಳಿಸು. ಇನ್ನೆರಡು ತಿಂಗಳೆ ನನಗೆ ಅವಧಿ. ಅಷ್ಟರೊಳಗೆ ಬಂದರೆ ಸರಿ, ಇಲ್ಲವಾದರೆ ಬಂದರೂ ವ್ಯರ್ಥವಾಗುವುದು’ ಎಂದಳು.

“ಸೀತಾದೇವಿಯ ಸಂಕಟಕರವಾದ ಮಾತುಗಳನ್ನು ಕೇಳಿ ನನಗೆ ರಾಕ್ಷಸರ ಮೇಲೆ ಅಗಾಧವಾದ ಕೋಪ ಹುಟ್ಟಿತು. ಅವರಿಗೆ ಒಂದು ಕೈ ತೋರಿಸಿದ ಮೇಲೆಯೆ ಹಿಂದಿರುಗಬೇಕೆಂದು ನಿಶ್ಚಯಿಸಿಕೊಂಡು ರಾವಣನಿಗೆ ಪರಮ ಪ್ರಿಯವಾದ ಅಶೋಕವನವೆಲ್ಲವನ್ನೂ ತೊತ್ತಳದುಳಿದು ನಾಶ ಮಾಡಿದೆ. ಅದನ್ನು ಕಂಡು ವನಪಾಲಕರು ಓಡಿಹೋಗಿ ತಮ್ಮ ದೊರೆಯಾದ ರಾವಣನಿಗೆ ಈ ವಿಚಾರವನ್ನು ತಿಳಿಸಿದರು. ಆತನು ಕೋಪಗೊಂಡು ‘ಕಿಂಕರ’ ರೆಂಬ ರಾಕ್ಷಸರನ್ನು ನನ್ನ ಮೇಲೆ ಯುದ್ಧಕ್ಕೆ ಕಳುಹಿಸಿದ. ನಾನು ಆ ತೋಟದ ಹೆಬ್ಬಾಗಿಲು ಅಗುಳಿಯನ್ನೇ ಕೈಗೆತ್ತಿಕೊಂಡು ಯುದ್ಧಕ್ಕೆ ಬಂದ ‘ಕಿಂಕರ’ರನ್ನೆಲ್ಲಾ ಸಮೂಲವಾಗಿ ನಾಶಮಾಡಿದೆ. ಅನಂತರ ಆ ತೋಟದ ಮಧ್ಯದಲ್ಲಿದ್ದ ಚೈತ್ಯಾಲಯದ ಒಂದು ಕಂಭವನ್ನು ಕಿತ್ತುಕೊಂಡು ವನಸಂರಕ್ಷಕರಾದ ನೂರ್ವರು ಘೋರರಾಕ್ಷಸರನ್ನು ಬಡಿದುಹಾಕಿದೆ. ಈ ಸುದ್ದಿ ರಾವಣನಿಗೆ ತಿಳಿದು ಆತನು ಪ್ರಹಸ್ತಪುತ್ರನಾದ ಜಂಬುಮಾಲಿ ಎಂಬುವನನ್ನು ನನ್ನ ಮೇಲೆ ಯುದ್ಧಕ್ಕೆ ಕಳುಹಿಸಿದನು. ಕ್ಷಣಮಾತ್ರದಲ್ಲಿ ಅವನೂ ಅವನೊಡನಿದ್ದ ಸೈನ್ಯವೂ ಯಮರಾಯನ ಅತಿಥಿಗಳಾದರು. ಅವನಾದ ಮೇಲೆ ಏಳು ಜನ ಮಂತ್ರಿ ಪುತ್ರರು ಬಂದರು. ಅವರಿಗೂ ಅದೇ ಗತಿಯಾಯಿತು. ರಾವಣನ ಪ್ರಮುಖ ಸೇನಾನಿಗಳಲ್ಲಿ ಐವರು ತಮ್ಮ ಸೈನ್ಯದೊಡನೆ ನನ್ನ ಮೇಲೆ ಏರಿಬಂದರು. ಅವರು ಯಮಲೋಕಕ್ಕೆ ಯಾತ್ರೆ ಹೊರಡಬೇಕಾಯಿತು. ಆಗ ರಾವಣನು ಬಲಶಾಲಿಗಳಲ್ಲಿ ಬಲಶಾಲಿಯೆಂದು ಹೆಸರಾದ ತನ್ನ ಮಗ ಅಕ್ಷಕುಮಾರನನ್ನೆ ನನ್ನ ಮೇಲೆ ಯುದ್ಧಕ್ಕೆ ಕಳುಹಿಸಿದನು. ಅವನು ರಾವಣನ ಪಟ್ಟಮಹಿಷಿಯಾದ ಮಂಡೋದರಿಯ ಪುತ್ರ. ಮಹಾಶೂರನೆಂದು ಪ್ರಸಿದ್ಧನಾದವನು. ನಾನು ಸ್ವಲ್ಪಹೊತ್ತು ಅವನೊಡನೆ ಹೆಣಗಾಡಿ ಕೊನೆಗೆ ಅವನ ಕಾಲುಗಳೆರಡನ್ನೂ ಹಿಡಿದು ಅಂತರಾಳದಲ್ಲಿ ಗಿರಗಿರನೆ ತಿರುಗಿಸಿ ನೆಲಕ್ಕೆ ಬಿಡದೆ. ಅವನ ದೇಹವೆಲ್ಲಾ ಮಾಂಸದ ಮುದ್ದೆಯಾಗಿ ಹೋಯಿತು. ಇದನ್ನು ಕೇಳಿ ರಾವಣನ ಕೋಪ ಮಿತಿಮೀರಿತು. ಆತನು ನನ್ನನ್ನು ಹಿಡಿದುಕೊಂಡು ಬರುವುದಕ್ಕಾಗಿ ‘ಇಂದ್ರಜಿತು’ ವೆಂಬ ತನ್ನ ಹಿರಿಯ ಮಗನನ್ನು ಕಳುಹಿಸಿದನು. ಅವನಿಗೂ ನನ್ನನ್ನು ಜಯಿಸುವುದು ಸಾಧ್ಯವಿರಲಿಲ್ಲ. ಆದ್ದರಿಂದ ನನ್ನನ್ನು ಬಂಧಿಸುವುದಕ್ಕಾಗಿ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದನು. ಬ್ರಹ್ಮದೇವರ ಮೇಲಿನ ಗೌರವದಿಂದ ನಾನು ಅದಕ್ಕೆ ಒಳಗಾಗಿರುವಾಗ ರಾಕ್ಷಸರು ನನ್ನನ್ನು ಹಗ್ಗಗಳಿಂದ ಬಿಗಿದು ರಾವಣನ ಬಳಿಗೆ ಕೊಂಡೊಯ್ದರು.

“ರಾವಣನು ನನ್ನನ್ನು ಕಾಣುತ್ತಲೆ ಕಣ್ಣುಗಳಿಂದ ಕೆಂಡವನ್ನು ಸುರಿಸುತ್ತಾ ನಾನು ಲಂಕೆಗೆ ಹೋದುದಕ್ಕೂ ರಾಕ್ಷಸರನ್ನು ಕೊಂದುದಕ್ಕೂ ಕಾರಣವನ್ನು ಕೇಳಿದನು. ನಾನು ಸ್ಪಷ್ಟವಾಗಿಯೆ ಪ್ರತ್ಯುತ್ತರ ಕೊಟ್ಟೆ. ‘ಅಯ್ಯಾ ರಾಕ್ಷಸರಾಜ, ನಾನು ಸೀತಾದೇವಿಯನ್ನು ಕಾಣುವುದಕ್ಕಾಗಿ ಬಂದ ಶ್ರೀರಾಮದೂತನು ನಾನು. ನನ್ನ ಹೆಸರು ಹನುಮಂತ. ನಾನು ಸುಗ್ರೀವನ ಮಂತ್ರಿ. ನಮ್ಮ ರಾಜನು ನಿನಗೆ ನನ್ನ ಮೂಲಕ ಬುದ್ಧಿವಾದವನ್ನು ಹೇಳಿ ಕಳುಹಿಸಿದ್ದಾನೆ. ನೀನು, ಜೀವದ ಮೇಲೆ ಆಶೆಯಿದ್ದರೆ, ಸೀತಾದೇವಿಯನ್ನು ಹಿಂದಕ್ಕೆ ತಂದು ಶ್ರೀರಾಮನಿಗೆ ಒಪ್ಪಿಸಿ ಆತನಿಗೆ ಶರಣಾಗತನಾಗು. ನೀಚಕಾರ್ಯ ರಾಜನಿಗೆ ಸಲ್ಲ’ ಎಂದು. ಇದನ್ನು ಕೇಳಿ ರಾವಣನಿಗೆ ಕೋಪದಿಂದ ಪ್ರಜ್ಞೆ ತಪ್ಪಿ ನನ್ನನ್ನು ಹಿಡಿದು ಕೊಲ್ಲುವಂತೆ ತನ್ನ ದೂತನಿಗೆ ಆಜ್ಞೆ ಮಾಡಿದನು. ಆದರೆ ಆತನ ತಮ್ಮನಾದ ವಿಭೀಷಣನು ದೂತವಧೆ ನಿಷಿದ್ಧವೆಂದು ಹೇಳಿದ್ದರಿಂದ ನನ್ನ ಬಾಲಕ್ಕೆ ಬೆಂಕಿಯನ್ನು ಹಚ್ಚಿ, ವಿರೂಪಗೊಳಿಸಿ ಓಡಿಸಿಬಿಡುವಂತೆ ಆತನು ಆಜ್ಞಾಪಿಸಿದ. ಸುತ್ತಲಿದ್ದ ರಾಕ್ಷಸರು ನನ್ನ ಬಾಲಕ್ಕೆ ಚಿಂದಿ ಬಟ್ಟೆಗಳನ್ನು ಸುತ್ತಿ, ಎಣ್ಣೆಹೊಯ್ದು ಬೆಂಕಿಯಿಟ್ಟರು. ಇಷ್ಟೇ ಸಾಲದೆ, ದೊಣ್ಣೆಗಳಿಂದ ನನ್ನನ್ನು ಪ್ರಹರಿಸುತ್ತಾ ಪರಿಪರಿಯಾಗಿ ನಿಂದಿಸುತ್ತಾ, ಲಂಕಾ ಪಟ್ಟಣದ ಬೀದಿಗಳಲ್ಲಿ ಮೆರವಣಿಗೆ ಮಾಡಹೊರಟರು. ಊರನ್ನು ನೋಡಬೇಕೆಂಬ ಉತ್ಸಾಹದಲ್ಲಿ ನನಗೆ ಅದಾವುದೂ ಲಕ್ಷ್ಯವಿರಲಿಲ್ಲ. ಮೆರವಣಿಗೆ ಊರಬಾಗಿಲಿಗೆ ಬರುತ್ತಲೆ ನಾನು ದೇಹವನ್ನು ಕುಗ್ಗಿಸಿಕೊಂಡು ಕಟ್ಟುಗಳನ್ನೆಲ್ಲಾ ಕಳಚಿಕೊಂಡೆ. ಪುನಃ ದೊಡ್ಡ ಆಕಾರವನ್ನು ತಾಳಿ ಹೆಬ್ಬಾಗಿಲಿಗೆ ಹಾಕಿದ್ದ ಭಾರಿ ಅಗುಳಿಯನ್ನು ಕಿತ್ತುಕೊಂಡು ಸುತ್ತಲಿದ್ದ ರಾಕ್ಷಸರನ್ನೆಲ್ಲಾ ಸಂಹಾರಮಾಡಿದೆ. ಅಷ್ಟು ಸಾಲದೆಂದುಕೊಂಡು ನನ್ನ ಬಾಲದಲ್ಲಿ ಉರಿಯುತ್ತಿದ್ದ ಬೆಂಕಿಯಿಂದ ಲಂಕಾಪಟ್ಟಣವನ್ನು ಹೊತ್ತಿಸಿ ಬೂದಿಮಾಡಿಹಾಕಿದೆ. ಊರೆಲ್ಲವೂ ಸುಟ್ಟಮೇಲೆ ಸೀತೆ ಏನಾಗಿರುವಳೊ ಎಂಬ ಭಯ ಮನಸ್ಸಿಗೆ ಬಂತು. ಆದರೆ ಆಕೆ ಕ್ಷೇಮವಾಗಿರುವಳೆಂದು ಆಕಾಶದಲ್ಲಿ ಚಾರಣರು ಆಡುತ್ತಿದ್ದ ಮಾತುಗಳಿಂದ ಸಮಾಧಾನ ಹೊಂದಿ, ಮತ್ತೊಮ್ಮೆ ಆಕೆಯನ್ನು ಸಂದರ್ಶಿಸಿದೆ. ಆಮೇಲೆ ಆಕೆಯಿಂದ ಅನುಜ್ಞೆ ಪಡೆದು ಅಲ್ಲಿಂದ ಹಾರಿ ನಿಮ್ಮ ಬಳಿಗೆ ಹೊರಟುಬಂದೆ.[1]       ಧಾನ್ಯಮಾಲಿನಿ ಎಂದು ಹಿಂದೆ ಹೇಳಿದೆ. ಬಹುಶಃ ಅವಳನ್ನೆ ಮಂಡೋದರಿ ಎಂದು ತಿಳಿದನಂತೆ ತೋರುತ್ತದೆ.